ಅಧ್ಯಯನ ಲೇಖನ 45
ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸೋದು ದೊಡ್ಡ ಆಶೀರ್ವಾದ!
“ದೇವರನ್ನ ಆರಾಧಿಸಿ. ಯಾಕಂದ್ರೆ ಆಕಾಶ, ಭೂಮಿ . . . ಸೃಷ್ಟಿಮಾಡಿದ್ದು ಆತನೇ.”—ಪ್ರಕ. 14:7.
ಗೀತೆ 20 ನಮ್ಮ ಕೂಟವನ್ನು ಹರಸು
ಈ ಲೇಖನದಲ್ಲಿ ಏನಿದೆ?a
1. (ಎ) ಒಬ್ಬ ದೇವದೂತ ಏನು ಹೇಳ್ತಿದ್ದಾನೆ? (ಬಿ) ಅದನ್ನ ಕೇಳಿದಾಗ ನಿಮಗೆ ಏನು ಮಾಡಬೇಕು ಅನಿಸ್ತಿದೆ?
ಒಬ್ಬ ದೇವದೂತ ನಿಮ್ಮ ಹತ್ರ ಮಾತಾಡ್ತಿದ್ದಾನೆ ಅಂದ್ಕೊಳ್ಳಿ. ಆಗ ಅವನು ಹೇಳೋದನ್ನ ನೀವು ಗಮನ ಕೊಟ್ಟು ಕೇಳಿಸ್ಕೊಳ್ತೀರ ಅಲ್ವಾ? ಇವತ್ತೂ ಒಬ್ಬ ದೇವದೂತ “ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ” ಒಂದು ವಿಷ್ಯ ಹೇಳ್ತಿದ್ದಾನೆ. ಅದೇನು? “ದೇವರಿಗೆ ಭಯಪಡಿ ಆತನಿಗೆ ಗೌರವ ಕೊಡಿ . . . ದೇವರನ್ನ ಆರಾಧಿಸಿ. ಯಾಕಂದ್ರೆ ಆಕಾಶ, ಭೂಮಿ . . . ಸೃಷ್ಟಿಮಾಡಿದ್ದು ಆತನೇ.” (ಪ್ರಕ. 14:6, 7) ಅವನು ಹೇಳ್ತಿರೋದು ನೂರಕ್ಕೆ ನೂರು ಸತ್ಯ. ಯೆಹೋವನೇ ನಿಜವಾದ ದೇವರು. ಆತನನ್ನೇ ನಾವೆಲ್ರೂ ಆರಾಧಿಸಬೇಕು. ಆತನ ಮಹಾ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸೋಕೆ ಅವಕಾಶ ಕೊಟ್ಟಿದ್ದಕ್ಕೆ ಯೆಹೋವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.
2. ಯೆಹೋವನ ಆಧ್ಯಾತ್ಮಿಕ ಆಲಯ ಅಂದ್ರೇನು? (“ಆಧ್ಯಾತ್ಮಿಕ ಆಲಯ ಅಂದ್ರೆ ಏನಲ್ಲ?” ಅನ್ನೋ ಚೌಕನೂ ನೋಡಿ.)
2 ಆಧ್ಯಾತ್ಮಿಕ ಆಲಯ ಅಂದ್ರೇನು? ಅದ್ರ ಬಗ್ಗೆ ನಾವು ಎಲ್ಲಿ ತಿಳ್ಕೊಬಹುದು? ಆಧ್ಯಾತ್ಮಿಕ ಆಲಯ ಅಂದ್ರೆ ಅದು ಒಂದು ನಿಜವಾದ ಕಟ್ಟಡ ಅಲ್ಲ. ಯೆಹೋವ ದೇವರು ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು ಜನ್ರು ತನ್ನನ್ನ ಆರಾಧಿಸೋಕೆ ಮಾಡಿರೋ ಏರ್ಪಾಡು. ಅದಕ್ಕೋಸ್ಕರ ಯೆಹೋವ ತನ್ನ ಮಗನನ್ನೇ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಾನೆ. ಈ ಏರ್ಪಾಡಿನ ಬಗ್ಗೆ ಅಪೊಸ್ತಲ ಪೌಲ ಒಂದನೇ ಶತಮಾನದಲ್ಲಿದ್ದ ಯೂದಾಯದ ಕ್ರೈಸ್ತರಿಗೆ ವಿವರಿಸಿದ. ಅದು ಇಬ್ರಿಯರಿಗೆ ಬರೆದ ಪತ್ರದಲ್ಲಿದೆ.b
3-4. ಪೌಲ ಇಬ್ರಿಯ ಕ್ರೈಸ್ತರಿಗೆ ಯಾಕೆ ಪತ್ರ ಬರೆದ?
3 ಪೌಲ ಇಬ್ರಿಯ ಕ್ರೈಸ್ತರಿಗೆ ಯಾಕೆ ಪತ್ರ ಬರೆದ? ಅದಕ್ಕೆ ಎರಡು ಕಾರಣಗಳು ಇರಬಹುದು. ಒಂದು, ಅವ್ರಿಗೆ ಧೈರ್ಯ ತುಂಬೋಕೆ. ಅಲ್ಲಿದ್ದ ಕ್ರೈಸ್ತರಲ್ಲಿ ತುಂಬ ಜನ ಯೆಹೂದಿ ಧರ್ಮದಿಂದ ಬಂದಿದ್ರು. ಅವರು ಕ್ರೈಸ್ತರಾದ್ಮೇಲೆ ಯೆಹೂದಿ ಧರ್ಮಗುರುಗಳು ಅವರನ್ನ ಹೀಯಾಳಿಸಿರಬಹುದು. ಯಾಕಂದ್ರೆ ಆ ಕ್ರೈಸ್ತರಿಗೆ ಆರಾಧನೆ ಮಾಡೋಕೆ ಆಲಯ ಇರ್ಲಿಲ್ಲ, ಬಲಿ ಕೊಡೋಕೆ ಬಲಿಪೀಠ ಇರ್ಲಿಲ್ಲ, ಪುರೋಹಿತರೂ ಇರ್ಲಿಲ್ಲ. ಇದ್ರಿಂದ ಕ್ರೈಸ್ತರಿಗೆ ಬೇಜಾರಾಗೋ ಸಾಧ್ಯತೆ ಇತ್ತು ಅಥವಾ ಅವರ ನಂಬಿಕೆ ಕಮ್ಮಿ ಆಗೋ ಪರಿಸ್ಥಿತಿನೂ ಬರಬಹುದಿತ್ತು. (ಇಬ್ರಿ. 2:1; 3:12, 14) ಇನ್ನೂ ಕೆಲವ್ರಿಗೆ ವಾಪಸ್ ಯೆಹೂದಿ ಧರ್ಮಕ್ಕೆ ಹೋಗಿಬಿಡೋಣ ಅಂತನೂ ಅನಿಸಿಬಿಡಬಹುದಿತ್ತು.
4 ಎರಡನೇದಾಗಿ, ಈ ಇಬ್ರಿಯ ಕ್ರೈಸ್ತರು “ಗಟ್ಟಿ ಆಹಾರ” ತಗೊಳ್ತಿರಲಿಲ್ಲ. ಅಂದ್ರೆ ಬೈಬಲಲ್ಲಿರೋ ಆಳವಾದ ಸತ್ಯಗಳನ್ನ ಅವರು ಚೆನ್ನಾಗಿ ಅರ್ಥ ಮಾಡ್ಕೊಳ್ತಿರಲಿಲ್ಲ. (ಇಬ್ರಿ. 5:11-14) ಅದಕ್ಕೇ ಅವನು ಪತ್ರ ಬರೆದ. ಅಲ್ಲಿ ಕೆಲವರು ಇನ್ನೂ ಮೋಶೆ ನಿಯಮನ ಪಾಲಿಸ್ತಿದ್ರು. ಆದ್ರೆ ಆ ನಿಯಮಗಳಲ್ಲಿದ್ದ ತರ ಬಲಿ ಕೊಡೋದ್ರಿಂದ ಪಾಪಗಳಿಗೆ ಪೂರ್ತಿ ಕ್ಷಮೆ ಸಿಗ್ತಿರ್ಲಿಲ್ಲ. ಅದಕ್ಕೇ ಮೊದಲಿದ್ದ ನಿಯಮಗಳನ್ನ “ತೆಗೆದು ಹಾಕಲಾಯ್ತು” ಅಂತ ಪೌಲ ಅವ್ರಿಗೆ ವಿವರಿಸಿದ. ಅಷ್ಟೇ ಅಲ್ಲ, ಅದಕ್ಕಿಂತ “ಒಳ್ಳೇ ನಿರೀಕ್ಷೆ” ಯೇಸುವಿನ ಬಿಡುಗಡೆ ಬೆಲೆಯಿಂದ ಸಿಗುತ್ತೆ. ಅದ್ರಿಂದ ಯೆಹೋವನಿಗೆ “ಆಪ್ತರಾಗೋಕೆ ಆಗುತ್ತೆ” ಅಂತ ಪೌಲ ಅಲ್ಲಿದ್ದ ಕ್ರೈಸ್ತರಿಗೆ ಹೇಳಿದ.—ಇಬ್ರಿ. 7:18, 19.
5. ನಾವು ಯಾವ ವಿಷ್ಯನ ಅರ್ಥ ಮಾಡ್ಕೊಬೇಕು ಮತ್ತು ಯಾಕೆ?
5 ಯೆಹೂದ್ಯರು ಆರಾಧನೆ ಮಾಡ್ತಿದ್ದ ರೀತಿಗಿಂತ ಕ್ರೈಸ್ತರು ಆರಾಧಿಸೋ ರೀತಿ ಶ್ರೇಷ್ಠವಾಗಿದೆ ಅಂತ ಪೌಲ ಹೇಳಿದ. ಯಾಕಂದ್ರೆ ಯೆಹೂದ್ಯರು ಮಾಡ್ತಿದ್ದ ಆರಾಧನೆ ರೀತಿ “ಮುಂದೆ ಬರಬೇಕಾಗಿದ್ದ ವಿಷ್ಯಗಳ ನೆರಳಷ್ಟೆ, ಆದ್ರೆ ನಿಜವಾದ ವ್ಯಕ್ತಿ ಕ್ರಿಸ್ತ” ಅಂತ ಬೈಬಲ್ ಹೇಳುತ್ತೆ. (ಕೊಲೊ. 2:17) ಒಂದು ವಸ್ತುವಿನ ನೆರಳು ಅದರ ಆಕಾರನ ತೋರಿಸುತ್ತಷ್ಟೇ, ಅದು ನಿಜವಾದ ವಸ್ತು ಆಗಿರಲ್ಲ. ಹಾಗೇ ಹಿಂದಿನ ಕಾಲದಲ್ಲಿ ಯೆಹೋವ ದೇವರನ್ನ ಆರಾಧಿಸ್ತಿದ್ದ ರೀತಿನೂ ಮುಂದೆ ಬರಬೇಕಾಗಿದ್ದ ಆರಾಧನೆ ರೀತಿಯ ನೆರಳಾಗಿತ್ತಷ್ಟೇ. ಹಾಗಾಗಿ ನಮ್ಮ ಪಾಪಗಳಿಗೆ ಕ್ಷಮೆ ಸಿಗೋಕೆ ಮತ್ತು ಆತನಿಗಿಷ್ಟ ಆಗೋ ಹಾಗೆ ಆರಾಧಿಸೋಕೆ ಯೆಹೋವ ಒಂದು ಏರ್ಪಾಡು ಮಾಡಿದ್ದಾನೆ. ಅದನ್ನ ನಾವು ಅರ್ಥ ಮಾಡ್ಕೊಬೇಕು. ಈಗ ನಾವು ‘ನೆರಳನ್ನ’ (ಯೆಹೂದ್ಯರು ಆರಾಧಿಸ್ತಿದ್ದ ರೀತಿಯನ್ನ) ಮತ್ತು “ನಿಜವಾದ” ವಿಷ್ಯವನ್ನ (ಕ್ರೈಸ್ತರು ಆರಾಧಿಸೋ ರೀತಿಯನ್ನ) ಹೋಲಿಸೋಣ. ಆಗ ಆಧ್ಯಾತ್ಮಿಕ ಆಲಯದ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ, ಯೆಹೋವ ದೇವರನ್ನ ಯಾವ ತರ ಆರಾಧಿಸಿದ್ರೆ ಆತನು ಇಷ್ಟಪಡ್ತಾನೆ ಅಂತನೂ ತಿಳ್ಕೊಳ್ಳೋಕೆ ಆಗುತ್ತೆ.
ಪವಿತ್ರ ಡೇರೆ
6. ಇಸ್ರಾಯೇಲ್ಯರು ಹೇಗೆ ಆರಾಧನೆ ಮಾಡ್ತಿದ್ರು?
6 ಯೆಹೂದ್ಯರು ಆರಾಧಿಸ್ತಿದ್ದ ರೀತಿ. ಪೌಲ ಆಧ್ಯಾತ್ಮಿಕ ಆಲಯದ ಬಗ್ಗೆ ವಿವರಿಸುವಾಗ ಕ್ರಿಸ್ತ ಪೂರ್ವ 1512ರಲ್ಲಿ ಮೋಶೆ ಕಟ್ಟಿದ ಪವಿತ್ರ ಡೇರೆ ಬಗ್ಗೆ ಹೇಳಿದ. (“ಯೆಹೂದ್ಯರು ಆರಾಧಿಸ್ತಿದ್ದ ರೀತಿ—ಕ್ರೈಸ್ತರು ಆರಾಧಿಸೋ ರೀತಿ” ಅನ್ನೋ ಚಾರ್ಟ್ ನೋಡಿ.) ಇಸ್ರಾಯೇಲ್ಯರು ಹೋಗ್ತಿದ್ದಲ್ಲೆಲ್ಲ ಆ ಡೇರೆನ ತಗೊಂಡು ಹೋಗ್ತಿದ್ರು. ಯೆರೂಸಲೇಮಲ್ಲಿ ಆಲಯ ಕಟ್ಟೋ ತನಕ ಅಂದ್ರೆ ಹತ್ತತ್ರ 500 ವರ್ಷಗಳ ತನಕ ಅದ್ರಲ್ಲೇ ಆರಾಧನೆ ಮಾಡ್ತಿದ್ರು. (ವಿಮೋ. 25:8, 9; ಅರ. 9:22) ಹೀಗೆ ಇಸ್ರಾಯೇಲ್ಯರು ಯೆಹೋವನನ್ನ ಆರಾಧಿಸೋಕೂ ಬಲಿಗಳನ್ನ ಅರ್ಪಿಸೋಕೂ ‘ದೇವದರ್ಶನ ಡೇರೆಗೆ’ ಬರ್ತಿದ್ರು. (ವಿಮೋ. 29:43-46) ಆದ್ರೆ ಈ ಡೇರೆ ಮುಂದೆ ಕ್ರೈಸ್ತರಿಗೆ ಸಿಗೋ ಆಧ್ಯಾತ್ಮಿಕ ಆಲಯದ ನೆರಳಾಗಿತ್ತಷ್ಟೇ.
7. ಆಧ್ಯಾತ್ಮಿಕ ಆಲಯ ಯಾವಾಗ ಅಸ್ತಿತ್ವಕ್ಕೆ ಬಂತು?
7 ಕ್ರೈಸ್ತರು ಆರಾಧಿಸೋ ರೀತಿ. ಹಿಂದಿನ ಕಾಲದಲ್ಲಿದ್ದ ದೇವದರ್ಶನ ಡೇರೆ ‘ಸ್ವರ್ಗದಲ್ಲಿರೋ ವಿಷ್ಯಗಳ ನೆರಳಾಗಿತ್ತು.’ ಅದು ಯೆಹೋವನ ಮಹಾ ಆಧ್ಯಾತ್ಮಿಕ ಆಲಯನ ಸೂಚಿಸ್ತಿತ್ತು. ಪೌಲ, “ಆ ಡೇರೆ ನಮ್ಮ ಸಮಯಕ್ಕೆ ಒಂದು ಗುರುತಾಗಿದೆ” ಅಂತ ಹೇಳಿದ. (ಇಬ್ರಿ. 8:5; 9:9) ಅಂದ್ರೆ ಅವನು ಇಬ್ರಿಯರಿಗೆ ಈ ಪತ್ರನ ಬರೆಯೋಷ್ಟರಲ್ಲಿ ಈಗಾಗ್ಲೇ ಆಧ್ಯಾತ್ಮಿಕ ಆಲಯ ಅಸ್ತಿತ್ವದಲ್ಲಿತ್ತು. ಅದು ಕ್ರಿಸ್ತ ಶಕ 29ರಲ್ಲಿ ಶುರುವಾಯ್ತು. ಆ ವರ್ಷದಲ್ಲಿ ಯೇಸು ದೀಕ್ಷಾಸ್ನಾನ ಪಡ್ಕೊಂಡನು, ಪವಿತ್ರ ಶಕ್ತಿಯಿಂದ ಆತನಿಗೆ ಅಭಿಷೇಕ ಆಯ್ತು. ಅಷ್ಟೇ ಅಲ್ಲ, ಆಧ್ಯಾತ್ಮಿಕ ಆಲಯದಲ್ಲಿ ‘ಶ್ರೇಷ್ಠ ಮಹಾ ಪುರೋಹಿತನಾಗಿ’ ಸೇವೆ ಮಾಡೋಕೆ ಯೇಸು ಶುರುಮಾಡಿದನು.c—ಇಬ್ರಿ. 4:14; ಅ. ಕಾ. 10:37, 38.
ಮಹಾ ಪುರೋಹಿತ
8-9. ಇಸ್ರಾಯೇಲ್ಯರ ಮಹಾ ಪುರೋಹಿತರಿಗೂ ನಮ್ಮ ಶ್ರೇಷ್ಠ ಮಹಾ ಪುರೋಹಿತನಾದ ಯೇಸು ಕ್ರಿಸ್ತನಿಗೂ ಏನ್ ವ್ಯತ್ಯಾಸ? (ಇಬ್ರಿಯ 7:23-27)
8 ಯೆಹೂದ್ಯರು ಆರಾಧಿಸ್ತಿದ್ದ ರೀತಿ. ಎಲ್ಲ ಜನ್ರಿಗೋಸ್ಕರ ದೇವರ ಹತ್ರ ಬೇಡ್ಕೊಳ್ಳೋ ಜವಾಬ್ದಾರಿ ಮಹಾ ಪುರೋಹಿತನಿಗಿತ್ತು. ಪವಿತ್ರ ಡೇರೆ ಏರ್ಪಾಡು ಶುರು ಆದಾಗ ಯೆಹೋವ ದೇವರು ಆರೋನನನ್ನ ಇಸ್ರಾಯೇಲ್ಯರ ಮೊದಲನೇ ಮಹಾ ಪುರೋಹಿತನಾಗಿ ನೇಮಿಸಿದನು. ಆದ್ರೆ ಇಸ್ರಾಯೇಲ್ಯರ ಮಹಾ ಪುರೋಹಿತರಿಗೂ ನಮ್ಮ ಶ್ರೇಷ್ಠ ಮಹಾ ಪುರೋಹಿತನಾದ ಯೇಸು ಕ್ರಿಸ್ತನಿಗೂ ತುಂಬ ವ್ಯತ್ಯಾಸ ಇದೆ. ಇಸ್ರಾಯೇಲ್ಯರ ಮಹಾ ಪುರೋಹಿತರಿಗೆ “ಮರಣ ಇದ್ದಿದ್ರಿಂದ . . . ತಮ್ಮ ಸೇವೆ ಮುಂದುವರಿಸ್ಕೊಂಡು ಹೋಗೋಕೆ ಆಗ್ತಿರಲಿಲ್ಲ. ಅದಕ್ಕೇ ಒಬ್ರಾದ ಮೇಲೆ ಒಬ್ರು ಅಂತ ತುಂಬ ಪುರೋಹಿತರು ಆಗಬೇಕಾಯ್ತು.”d (ಇಬ್ರಿಯ 7:23-27 ಓದಿ.) ಅಷ್ಟೇ ಅಲ್ಲ, ಈ ಪುರೋಹಿತರು ಅಪರಿಪೂರ್ಣರಾಗಿದ್ರಿಂದ ತಮ್ಮ ಪಾಪಗಳಿಗೆ ಬಲಿ ಅರ್ಪಿಸಬೇಕಿತ್ತು.
9 ಕ್ರೈಸ್ತರು ಆರಾಧಿಸೋ ರೀತಿ. ನಮ್ಮ ಮಹಾ ಪುರೋಹಿತನಾಗಿರೋ ಯೇಸು ಕ್ರಿಸ್ತ, “ನಿಜವಾದ ಡೇರೆಯಲ್ಲಿ ಸೇವಕನಾಗಿದ್ದಾನೆ. ಆ ಡೇರೆ ಹಾಕಿರೋದು ಮನುಷ್ಯನಲ್ಲ ಯೆಹೋವ” ಅಂತ ಪೌಲ ಹೇಳಿದ. (ಇಬ್ರಿ. 8:1, 2) ಅವನು ಯಾಕೆ ಹಾಗೆ ಹೇಳಿದ? ಯಾಕಂದ್ರೆ ಯೇಸು “ಯಾವಾಗ್ಲೂ ಜೀವಂತವಾಗಿ ಇರೋದ್ರಿಂದ ಆತನಾದ್ಮೇಲೆ ಬೇರೆಯವರು ಪುರೋಹಿತರಾಗಬೇಕಿಲ್ಲ.” ಅಷ್ಟೇ ಅಲ್ಲ, ಆತನು “ಕಳಂಕ ಇಲ್ಲದ, ಪಾಪಿಗಳ ತರ ಇಲ್ಲದ” ವ್ಯಕ್ತಿ. “ಬೇರೆ ಮಹಾ ಪುರೋಹಿತರ ಹಾಗೆ ಆತನು . . . ತನ್ನ ಪಾಪಗಳಿಗಾಗಿ . . . ಬಲಿಗಳನ್ನ ಪ್ರತಿದಿನ ಕೊಡಬೇಕಾಗಿಲ್ಲ.” ಈಗ ನಾವು ಬಲಿಪೀಠಗಳ ಮತ್ತು ಬಲಿಗಳ ಬಗ್ಗೆ ನೋಡೋಣ.
ಬಲಿಪೀಠಗಳು ಮತ್ತು ಬಲಿಗಳು
10. ಇಸ್ರಾಯೇಲ್ಯರು ತಾಮ್ರದ ಯಜ್ಞವೇದಿಯಲ್ಲಿ ಕೊಡ್ತಿದ್ದ ಬಲಿಗಳು ಏನನ್ನ ಸೂಚಿಸ್ತಿತ್ತು?
10 ಯೆಹೂದ್ಯರು ಆರಾಧಿಸ್ತಿದ್ದ ರೀತಿ. ಪವಿತ್ರ ಡೇರೆಯ ಬಾಗಿಲ ಹತ್ರ ಒಂದು ತಾಮ್ರದ ಯಜ್ಞವೇದಿ ಇತ್ತು. ಅಲ್ಲಿ ಯೆಹೋವನಿಗೋಸ್ಕರ ಪ್ರಾಣಿಗಳ ಬಲಿಯನ್ನ ಕೊಡ್ತಿದ್ರು. (ವಿಮೋ. 27:1, 2; 40:29) ಆದ್ರೆ ಅವರು ಅರ್ಪಿಸ್ತಿದ್ದ ಬಲಿಗಳಿಂದ ಮನುಷ್ಯರ ಪಾಪಗಳಿಗೆ ಪೂರ್ತಿ ಕ್ಷಮೆ ಸಿಗ್ತಿರಲಿಲ್ಲ. (ಇಬ್ರಿ. 10:1-4) ಆ ಕಾಲದಲ್ಲಿ ಅವರು ತುಂಬ ಬಲಿಗಳನ್ನ ಕೊಡಬೇಕಿತ್ತು. ಆದ್ರೆ ಇದು, ಮುಂದೆ ಎಲ್ಲಾ ಪಾಪಗಳಿಗೂ ಒಂದೇ ಸಲ ಕೊಡೋ ಬಲಿಯನ್ನ ಸೂಚಿಸ್ತು.
11. ಯೇಸು ಯಾವ ಯಜ್ಞವೇದಿ ಮೇಲೆ ತನ್ನನ್ನ ಅರ್ಪಿಸ್ಕೊಂಡನು? (ಇಬ್ರಿಯ 10:5-7, 10)
11 ಕ್ರೈಸ್ತರು ಆರಾಧಿಸೋ ರೀತಿ. ಮನುಷ್ಯರಿಗೋಸ್ಕರ ತನ್ನ ಪ್ರಾಣನ ಬಲಿಯಾಗಿ ಕೊಡೋಕೆ ಯೆಹೋವ ತನ್ನನ್ನ ಕಳಿಸಿದ್ದಾನೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. (ಮತ್ತಾ. 20:28) ಅದಕ್ಕೇ ಯೇಸು ದೀಕ್ಷಾಸ್ನಾನ ತಗೊಂಡು ಯೆಹೋವನಿಗೆ ಏನಿಷ್ಟನೋ ಅದನ್ನ ಮಾಡೋಕೆ ಮುಂದೆ ಬಂದ. (ಯೋಹಾ. 6:38; ಗಲಾ. 1:4) ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನ ತ್ಯಾಗ ಮಾಡಬೇಕು ಅನ್ನೋದು ಯೆಹೋವ ದೇವರ “ಇಷ್ಟ” ಆಗಿತ್ತು. ಅದಕ್ಕೇ ಅವನು ದೇವರ “ಇಷ್ಟ” ಅನ್ನೋ ಸಾಂಕೇತಿಕ ಬಲಿಪೀಠದ ಮೇಲೆ ತನ್ನನ್ನ ಅರ್ಪಿಸ್ಕೊಂಡನು. ಇದನ್ನ ಆತನು “ಎಲ್ಲ ಕಾಲಕ್ಕೂ ಒಂದೇ ಸಲ” ಕೊಟ್ಟನು. ಇದ್ರಿಂದಾಗಿ ಯಾರೆಲ್ಲ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡ್ತಾರೋ ಅವ್ರ ಪಾಪಗಳಿಗೆ ಪೂರ್ತಿ ಕ್ಷಮೆ ಸಿಗುತ್ತೆ. (ಇಬ್ರಿಯ 10:5-7, 10 ಓದಿ.) ನಾವೀಗ ಡೇರೆಯ ಒಳಗಿದ್ದ ಕೋಣೆಗಳು ಏನನ್ನ ಸೂಚಿಸ್ತಿತ್ತು ಅಂತ ನೋಡೋಣ.
ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳ
12. ಪವಿತ್ರ ಡೇರೆಯ ಎರಡು ಕೋಣೆಗಳಿಗೆ ಯಾರು ಮಾತ್ರ ಹೋಗಬೇಕಿತ್ತು?
12 ಯೆಹೂದ್ಯರು ಆರಾಧಿಸ್ತಿದ್ದ ರೀತಿ. ದೇವದರ್ಶನ ಡೇರೆಯಲ್ಲಿ “ಪವಿತ್ರ ಸ್ಥಳ” ಮತ್ತು “ಅತಿ ಪವಿತ್ರ ಸ್ಥಳ” ಅನ್ನೋ ಎರಡು ಕೋಣೆಗಳಿದ್ವು. ಅದ್ರ ಮಧ್ಯ ಕಸೂತಿ ಹಾಕಿದ ಒಂದು ಪರದೆ ಇತ್ತು. ಯೆರೂಸಲೇಮಲ್ಲಿ ಕಟ್ಟಿದ ಆಲಯದಲ್ಲೂ ಹೀಗೇ ಇತ್ತು. (ಇಬ್ರಿ. 9:2-5; ವಿಮೋ. 26:31-33) ಪವಿತ್ರ ಸ್ಥಳದಲ್ಲಿ ಚಿನ್ನದ ದೀಪಸ್ತಂಭ, ಧೂಪವೇದಿ ಮತ್ತು ಅರ್ಪಣೆಯ ರೊಟ್ಟಿಗಳನ್ನ ಇಡೋ ಮೇಜಿತ್ತು. ‘ಪುರೋಹಿತರಾಗಿ ಸೇವೆ ಮಾಡೋಕೆ ಅಭಿಷೇಕ ಪಡ್ಕೊಂಡವರು’ ಮಾತ್ರ ಈ ಪವಿತ್ರ ಸ್ಥಳದೊಳಗೆ ಹೋಗಬೇಕಿತ್ತು. (ಅರ. 3:3, 7, 10) ಅತಿ ಪವಿತ್ರ ಸ್ಥಳದಲ್ಲಿ ಚಿನ್ನದಿಂದ ಮಾಡಿದ ಒಪ್ಪಂದದ ಮಂಜೂಷ ಇತ್ತು. ಆ ಮಂಜೂಷದಿಂದನೇ ಯೆಹೋವ ಮಾತಾಡ್ತಿದ್ದನು. (ವಿಮೋ. 25:21, 22) ವರ್ಷಕ್ಕೆ ಒಂದು ಸಲ ಮಾಡ್ತಿದ್ದ ಪ್ರಾಯಶ್ಚಿತ್ತ ದಿನದಲ್ಲಿ ಮಹಾ ಪುರೋಹಿತ ಮಾತ್ರ ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. (ಯಾಜ. 16:2, 17) ಹೀಗೆ ಪ್ರತೀ ವರ್ಷ ಅವನು ತನ್ನ ಪಾಪಗಳಿಗೆ ಮತ್ತು ಜನ್ರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡೋಕೆ ಪ್ರಾಣಿಗಳ ರಕ್ತ ತಗೊಂಡು ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. ಈ ಎರಡೂ ಸ್ಥಳಗಳು ಮುಂದೆ ಏನನ್ನ ಸೂಚಿಸ್ತಿತ್ತು ಅನ್ನೋದನ್ನ ಯೆಹೋವ ಪವಿತ್ರಶಕ್ತಿಯಿಂದ ತನ್ನ ಜನ್ರಿಗೆ ಅರ್ಥ ಮಾಡಿಸಿದನು.—ಇಬ್ರಿ. 9:6-8.e
13. ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳ ಏನನ್ನ ಸೂಚಿಸುತ್ತೆ?
13 ಕ್ರೈಸ್ತರು ಆರಾಧಿಸೋ ರೀತಿ. ಯೇಸುವಿನ ಶಿಷ್ಯರಲ್ಲಿ 1,44,000 ಜನ ಮಾತ್ರ ಪವಿತ್ರ ಶಕ್ತಿಯಿಂದ ಅಭಿಷೇಕ ಆಗಿದ್ದಾರೆ. ಅವ್ರಿಗೆ ಯೆಹೋವನ ಜೊತೆ ವಿಶೇಷವಾದ ಸಂಬಂಧ ಇದೆ. ಅವರು ಮುಂದೆ ಯೇಸು ಜೊತೆ ಸ್ವರ್ಗದಲ್ಲಿ ಪುರೋಹಿತರಾಗಿ ಸೇವೆ ಮಾಡ್ತಾರೆ. (ಪ್ರಕ. 1:6; 14:1) ಅವರು ಭೂಮಿಯಲ್ಲಿ ಇರುವಾಗಲೇ ಯೆಹೋವ ಅವ್ರನ್ನ ತನ್ನ ಮಕ್ಕಳಾಗಿ ದತ್ತು ತಗೊಂಡಾಗ ಅವರು ಪವಿತ್ರ ಸ್ಥಳಕ್ಕೆ ಹೋದ ಹಾಗಿರುತ್ತೆ. (ರೋಮ. 8:15-17) ಅತಿ ಪವಿತ್ರ ಸ್ಥಳ ಅಂದ್ರೆ ಅದು ಯೆಹೋವ ಇರೋ ಜಾಗ. ಅದು ಸ್ವರ್ಗ. ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳದ ಮಧ್ಯ ಇದ್ದ “ಪರದೆ” ಯೇಸುವಿನ ದೇಹನ ಸೂಚಿಸುತ್ತೆ. ಯೆಹೋವನ ಆಧ್ಯಾತ್ಮಿಕ ಆಲಯದ ಶ್ರೇಷ್ಠ ಮಹಾ ಪುರೋಹಿತನಾಗಿ ಯೇಸು ಸ್ವರ್ಗಕ್ಕೆ ಹೋಗಬೇಕಾದ್ರೆ ಪರದೆ ತರ ಇದ್ದ ತನ್ನ ಮಾನವ ದೇಹವನ್ನ ತ್ಯಾಗ ಮಾಡಬೇಕಿತ್ತು. ತನ್ನ ಮಾನವ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ರಿಂದ ಅಭಿಷಿಕ್ತ ಕ್ರೈಸ್ತರಿಗೆಲ್ಲ ಸ್ವರ್ಗಕ್ಕೆ ಹೋಗೋಕೆ ಅವಕಾಶ ಮಾಡ್ಕೊಟ್ಟನು. ಅಭಿಷಿಕ್ತರು ಸ್ವರ್ಗಕ್ಕೆ ಹೋಗಬೇಕಂದ್ರೆ ಅವರು ಕೂಡ ಯೇಸು ತರ ಮಾನವ ಶರೀರನ ಬಿಟ್ಟುಹೋಗಬೇಕು. (ಇಬ್ರಿ. 10:19, 20; 1 ಕೊರಿಂ. 15:50) ಯೇಸು ಮತ್ತೆ ಜೀವ ಪಡ್ಕೊಂಡ ಮೇಲೆ ಆತನು ಆಧ್ಯಾತ್ಮಿಕ ಆಲಯದ ಅತಿ ಪವಿತ್ರ ಸ್ಥಳಕ್ಕೆ ಹೋದನು. ಇನ್ನು ಸ್ವಲ್ಪ ಸಮಯದಲ್ಲೇ ಎಲ್ಲಾ ಅಭಿಷಿಕ್ತ ಕ್ರೈಸ್ತರು ಅಲ್ಲಿಗೆ ಹೋಗ್ತಾರೆ.
14. ಯೆಹೋವ ಮಾಡಿರೋ ಆಧ್ಯಾತ್ಮಿಕ ಆಲಯದ ಏರ್ಪಾಡು ಯಾಕೆ ತುಂಬ ಶ್ರೇಷ್ಠವಾಗಿದೆ? (ಇಬ್ರಿಯ 9:12, 24-26)
14 ಯೇಸು ಕ್ರಿಸ್ತನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು ಆತನನ್ನ ಪುರೋಹಿತನಾಗಿ ಮಾಡಿ ಯೆಹೋವ ದೇವರು ಒಂದು ಆರಾಧನೆಯ ಏರ್ಪಾಡನ್ನ ಮಾಡಿದನು. ಇದು ಜನ್ರು ಹಿಂದೆ ಆರಾಧಿಸ್ತಿದ್ದ ರೀತಿಗಿಂತ ತುಂಬ ಶ್ರೇಷ್ಠವಾಗಿದೆ. ಯಾಕಂದ್ರೆ ಆಗ ಮಹಾ ಪುರೋಹಿತ ಪ್ರಾಣಿಗಳ ರಕ್ತ ತಗೊಂಡು ಮನುಷ್ಯರು ಕಟ್ಟಿದ್ದ ಅತಿ ಪವಿತ್ರ ಸ್ಥಳಕ್ಕೆ ಹೋಗ್ತಿದ್ದ. ಆದ್ರೆ ಯೇಸು ಅದಕ್ಕಿಂತ ಪವಿತ್ರವಾಗಿರೋ “ಸ್ವರ್ಗಕ್ಕೆ ಹೋದ.” ಅಲ್ಲಿ ಆತನು ಯೆಹೋವನ ಮುಂದೆ ನಮ್ಮೆಲ್ಲರ ಪರವಾಗಿ ತನ್ನ ಪರಿಪೂರ್ಣ ಜೀವದ ಬೆಲೆಯನ್ನ ಕೊಟ್ಟನು. ಹೀಗೆ ‘ಪಾಪವನ್ನ ತೆಗೆದುಹಾಕೋಕೆ ತನ್ನನ್ನೇ ಬಲಿಯಾಗಿ ಅರ್ಪಿಸಿದನು.’ (ಇಬ್ರಿಯ 9:12, 24-26 ಓದಿ.) ಯೇಸು ಕೊಟ್ಟ ಈ ಬಲಿ ನಮ್ಮ ಪಾಪಗಳನ್ನ ಶಾಶ್ವತವಾಗಿ ತೆಗೆದುಹಾಕುತ್ತೆ. ಈಗ ಅಂಗಳಗಳ ಬಗ್ಗೆ ನೋಡೋಣ. ನಾವು ಅಭಿಷಿಕ್ತರಾಗಿದ್ರೂ ಪರದೈಸಲ್ಲಿ ಜೀವಿಸುವವರಾಗಿದ್ರೂ ಆಧ್ಯಾತ್ಮಿಕ ಆಲಯದಲ್ಲಿ ಯೆಹೋವನನ್ನ ಹೇಗೆ ಆರಾಧಿಸೋಕೆ ಆಗುತ್ತೆ ಅಂತ ತಿಳ್ಕೊಳ್ಳೋಣ.
ಅಂಗಳಗಳು
15. ಪವಿತ್ರ ಡೇರೆಯ ಅಂಗಳದಲ್ಲಿ ಯಾರು ಕೆಲಸ ಮಾಡ್ತಿದ್ರು?
15 ಯೆಹೂದ್ಯರು ಆರಾಧಿಸ್ತಿದ್ದ ರೀತಿ. ಪವಿತ್ರ ಡೇರೆಯ ಮುಂದೆ ಒಂದು ದೊಡ್ಡ ಅಂಗಳ ಇತ್ತು. ಅದಕ್ಕೆ ಬೇಲಿ ಹಾಕಿದ್ರು. ಆ ಅಂಗಳದಲ್ಲಿ ತಾಮ್ರದ ಬಲಿಪೀಠ ಇತ್ತು. ಅಲ್ಲಿ ಪುರೋಹಿತರು ಪ್ರಾಣಿಗಳನ್ನ ಅರ್ಪಿಸ್ತಿದ್ರು. ಅಲ್ಲಿ ಒಂದು ತಾಮ್ರದ ಬೋಗುಣಿ ಇತ್ತು. ಅದ್ರಲ್ಲಿ ನೀರು ತುಂಬಿತ್ತು. ಪುರೋಹಿತರು ಸೇವೆ ಮಾಡೋ ಮುಂಚೆ ಅದ್ರಲ್ಲಿ ಕೈಕಾಲುಗಳನ್ನ ತೊಳಿತಿದ್ರು. (ವಿಮೋ. 30:17-20; 40:6-8) ಮುಂದೆ ದೇವಾಲಯ ಕಟ್ಟಿದಾಗ ಅಲ್ಲೂ ಹೀಗೇ ಇತ್ತು. ಆದ್ರೆ ಅದಕ್ಕೆ ಹೊರಗಿನ ಅಂಗಳ ಇತ್ತು. ಅಲ್ಲಿ ಪುರೋಹಿತರಷ್ಟೇ ಅಲ್ಲ, ಜನ್ರೂ ನಿಂತ್ಕೊಂಡು ದೇವರನ್ನ ಆರಾಧಿಸಬಹುದಿತ್ತು.
16. ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ಯಾರು ಯಾವ ಅಂಗಳದಲ್ಲಿ ಸೇವೆ ಮಾಡ್ತಿದ್ದಾರೆ?
16 ಕ್ರೈಸ್ತರು ಆರಾಧಿಸೋ ರೀತಿ. ಉಳಿದರೋ ಅಭಿಷಿಕ್ತರು ಸ್ವರ್ಗಕ್ಕೆ ಹೋಗಿ ಯೇಸುವಿನ ಜೊತೆ ಪುರೋಹಿತರಾಗಿ ಸೇವೆ ಮಾಡ್ತಾರೆ. ಆದ್ರೆ ಅಲ್ಲಿಗೆ ಹೋಗೋ ತನಕ ಅವರು ಇದೇ ಭೂಮಿಯಲ್ಲಿ ಯೆಹೋವನ ಆಧ್ಯಾತ್ಮಿಕ ಆಲಯದ ಒಳಗಿನ ಅಂಗಳದಲ್ಲಿ ಸೇವೆ ಮಾಡ್ತಿದ್ದಾರೆ. ಅಲ್ಲಿ ನೀರು ತುಂಬಿದ್ದ ದೊಡ್ಡ ಬೋಗುಣಿ ಅಭಿಷಿಕ್ತರಿಗೆ ಮತ್ತು ನಮಗೆ ಒಂದು ವಿಷ್ಯನ ನೆನಪಿಸುತ್ತೆ. ಅದೇನಂದ್ರೆ ನಾವು ಎಲ್ಲಾ ವಿಷ್ಯದಲ್ಲೂ ಶುದ್ಧರಾಗಿರಬೇಕು. ಯೆಹೋವನಿಗೆ ಇಷ್ಟ ಆಗೋ ತರಾನೇ ಜೀವಿಸಬೇಕು ಮತ್ತು ಆರಾಧಿಸಬೇಕು. ಆದ್ರೆ ಈ ಅಭಿಷಿಕ್ತರ ಜೊತೆ ಕೈಜೋಡಿಸಿ ಕೆಲಸ ಮಾಡ್ತಿರೋ ‘ದೊಡ್ಡ ಗುಂಪಿನ’ ಜನ್ರು ಎಲ್ಲಿ ನಿಂತು ಸೇವೆ ಮಾಡ್ತಿದ್ದಾರೆ? ಅವರು “ದೇವರ ಸಿಂಹಾಸನದ ಮುಂದೆ ಇದ್ದಾರೆ” ಅಂತ ಅಪೊಸ್ತಲ ಯೋಹಾನ ಹೇಳಿದ. ಅಂದ್ರೆ ಅವರು ಹೊರಗಿನ ಅಂಗಳದಲ್ಲಿ “ಹಗಲೂರಾತ್ರಿ [ದೇವರ] ಪವಿತ್ರ ಸೇವೆ ಮಾಡ್ತಿದ್ದಾರೆ.” (ಪ್ರಕ. 7:9, 13-15) ತನ್ನ ಆಧ್ಯಾತ್ಮಿಕ ಆಲಯದಲ್ಲಿ ನಮಗೂ ಒಂದು ಜಾಗ ಕೊಟ್ಟಿದ್ದಕ್ಕೆ ಯೆಹೋವನಿಗೆ ಎಷ್ಟು ಥ್ಯಾಂಕ್ಸ್ ಹೇಳಬೇಕಲ್ವಾ?
ಯೆಹೋವನನ್ನ ಆರಾಧಿಸೋದು ಒಂದು ದೊಡ್ಡ ಆಶೀರ್ವಾದ!
17. ಯೆಹೋವನ ಸೇವೆನ ನಾವು ಹೇಗೆಲ್ಲ ಮಾಡಬಹುದು?
17 ಯೆಹೋವ ದೇವರು ತನ್ನನ್ನ ಆರಾಧಿಸೋಕೆ ನಮ್ಮೆಲ್ರಿಗೂ ಒಂದು ಅವಕಾಶ ಕೊಟ್ಟಿದ್ದಾನೆ. ಹಾಗಾಗಿ ಆತನ ಸೇವೆ ಮಾಡೋಕೆ ನಮ್ಮ ಸಮಯ, ಶಕ್ತಿ ಮತ್ತು ವಸ್ತುಗಳನ್ನ ಬಳಸೋಣ. ಅಷ್ಟೇ ಅಲ್ಲ, ಅಪೊಸ್ತಲ ಪೌಲ ಇಬ್ರಿಯ ಕ್ರೈಸ್ತರಿಗೆ ಹೇಳಿದ ಹಾಗೆ “ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ. ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ ನಮ್ಮ ತುಟಿಗಳನ್ನ ಬಳಸೋಣ.” (ಇಬ್ರಿ. 13:15) ಯೆಹೋವ ನಮಗೆ ಇಂಥ ಒಂದು ಅವಕಾಶ ಕೊಟ್ಟಿದ್ದಕ್ಕೆ ಆತನ ಸೇವೆ ಮಾಡೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡೋಣ.
18. ಇಬ್ರಿಯ 10:22-25ರಲ್ಲಿ ಹೇಳೋ ಹಾಗೆ ನಾವು ಏನನ್ನ ಮಾಡಲೇಬೇಕು ಮತ್ತು ಏನನ್ನ ಮರಿಬಾರದು?
18 ಇಬ್ರಿಯ 10:22-25 ಓದಿ. ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದ ಕೊನೇಲಿ ಆರಾಧನೆಗೆ ಸಂಬಂಧಪಟ್ಟ ಕೆಲವು ಮುಖ್ಯವಾದ ವಿಷ್ಯಗಳ ಬಗ್ಗೆ ಹೇಳಿದ. ಅದನ್ನ ನಾವು ಮಾಡಲೇಬೇಕು. ಯೆಹೋವನಿಗೆ ಪ್ರಾರ್ಥಿಸಬೇಕು, ಸಿಹಿಸುದ್ದಿ ಸಾರಬೇಕು, ಸಭೆಯಾಗಿ ಸೇರಿಬರಬೇಕು ಮತ್ತು ಎಲ್ರನ್ನೂ ಪ್ರೋತ್ಸಾಹಿಸ್ತಾ ಇರಬೇಕು. “[ಯೆಹೋವನ] ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ” ಮಾಡಬೇಕು. ಅದಕ್ಕೇ ಪ್ರಕಟನೆ ಪುಸ್ತಕದ ಕೊನೇಲಿ ದೇವದೂತ ಎರಡು ಸಲ ‘ದೇವರನ್ನ ಆರಾಧನೆ ಮಾಡಿ!’ ಅಂತ ಹೇಳಿದ. (ಪ್ರಕ. 19:10; 22:9) ಹಾಗಾಗಿ ನಾವು ಈ ಲೇಖನದಲ್ಲಿ ಯೆಹೋವನ ಆಧ್ಯಾತ್ಮಿಕ ಆಲಯದ ಬಗ್ಗೆ ಕಲಿತ ಸತ್ಯನ ಮರೆಯದೇ ಇರೋಣ. ಅಷ್ಟೇ ಅಲ್ಲ, ತನ್ನನ್ನ ಆರಾಧಿಸೋಕೆ ನಮಗೆ ಅವಕಾಶ ಕೊಟ್ಟಿದ್ದಕ್ಕೆ ಯೆಹೋವನಿಗೆ ನಾವು ಋಣಿಗಳಾಗಿರೋಣ.
ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು
a ದೇವರ ವಾಕ್ಯದಲ್ಲಿರೋ ಆಳವಾದ ಸತ್ಯಗಳಲ್ಲಿ ಯೆಹೋವನ ಆಧ್ಯಾತ್ಮಿಕ ಆಲಯನೂ ಒಂದು. ಆ ಆಲಯ ಯಾವುದು? ಅದ್ರ ಬಗ್ಗೆ ತಿಳ್ಕೊಳ್ಳೋಕೆ ಇಬ್ರಿಯ ಪುಸ್ತಕ ಸಹಾಯ ಮಾಡುತ್ತೆ. ಅದನ್ನ ನಾವೀಗ ಕಲಿಯೋಣ. ಇದ್ರ ಬಗ್ಗೆ ಕಲಿಯುವಾಗ ಆತನ ಮೇಲಿರೋ ಗೌರವ ಜಾಸ್ತಿಯಾಗುತ್ತೆ. ತನ್ನನ್ನ ಆರಾಧಿಸೋಕೆ ಯೆಹೋವ ನಮಗೆ ಅವಕಾಶ ಕೊಟ್ಟಿದ್ದಕ್ಕೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ ಅಂತ ಗೊತ್ತಾಗುತ್ತೆ.
b ಇಬ್ರಿಯ ಪುಸ್ತಕದಲ್ಲಿ ಏನೆಲ್ಲಾ ಇದೆ ಅಂತ ತಿಳ್ಕೊಳ್ಳೋಕೆ jw.orgನಲ್ಲಿ ಇಬ್ರಿಯ ಪತ್ರದ ಪರಿಚಯ ಅನ್ನೋ ವಿಡಿಯೋ ನೋಡಿ.
c ಇಬ್ರಿಯ ಪುಸ್ತಕದಲ್ಲಿ ಮಾತ್ರ ಯೇಸುನ ಮಹಾ ಪುರೋಹಿತ ಅಂತ ಕರೆಯಲಾಗಿದೆ.
d ಕ್ರಿಸ್ತ ಶಕ 70ರಲ್ಲಿ ಯೆರೂಸಲೇಮಿನ ದೇವಾಲಯ ನಾಶ ಆಗುವಾಗ 84 ಮಹಾ ಪುರೋಹಿತರು ಅಲ್ಲಿ ಇದ್ದಿರಬಹುದು ಅಂತ ಒಂದು ರೆಫರೆನ್ಸ್ ಹೇಳುತ್ತೆ.
e ಪ್ರಾಯಶ್ಚಿತ್ತ ದಿನದಲ್ಲಿ ಒಬ್ಬ ಮಹಾ ಪುರೋಹಿತ ಏನೇನೆಲ್ಲ ಮಾಡ್ತಿದ್ದ ಅಂತ ತಿಳ್ಕೊಳ್ಳೋಕೆ jw.orgನಲ್ಲಿ ಪವಿತ್ರ ಡೇರೆ ಅನ್ನೋ ವಿಡಿಯೋ ನೋಡಿ.
g ಜುಲೈ 15, 2010ರ ಕಾವಲಿನಬುರುಜುವಿನ ಪುಟ 22ರಲ್ಲಿ “ಆಧ್ಯಾತ್ಮಿಕ ಆಲಯದ ಅರ್ಥವನ್ನು ಪವಿತ್ರಾತ್ಮ ಪ್ರಕಟಪಡಿಸಿದ ವಿಧ” ಅನ್ನೋ ಚೌಕ ನೋಡಿ.