ಬೈಬಲಿನ ದೃಷ್ಟಿಕೋನ
ಲಂಪಟ ವಿಷಯ ವರ್ಣನೆ ಅಪಾಯಕರವಾಗಿರುವುದಕ್ಕೆ ಕಾರಣ
ಲಂಪಟ ವಿಷಯ ವರ್ಣನೆ ಈಗ ಅಶ್ಲೀಲ ಪುಸ್ತಕದಂಗಡಿಗಳಿಗೆ ಮತ್ತು ಕಾಮರಂಜನೆ ನಡೆಯುವ ಸ್ಥಳಗಳಿಗೆ ಸೀಮಿತವಲ್ಲ. ಇದು ಜನಸಾಮಾನ್ಯರಿಗೂ ದೊರೆಯುತ್ತಿದೆ. ಪತ್ರಿಕೆ, ವೃತ್ತಪತ್ರ, ಪುಸ್ತಕ, ಟೀವೀ ಕಾರ್ಯಕ್ರಮ, ಚಲನಚಿತ್ರ, ಮತ್ತು ವಿಡಿಯೋಗಳಲ್ಲಿ, ದೇಶ ದೇಶಗಳಲ್ಲಿ ಇದನ್ನು ಜನಸಾಮಾನ್ಯರ ಕಣ್ಣಮುಂದೆ ಪ್ರದರ್ಶಿಸಲಾಗುತ್ತದೆ. ಇಷ್ಟು ವ್ಯಾಪಕವಾದ ಒಂದು ಸಂಗತಿ ನಿಜವಾಗಿಯೂ ಅಷ್ಟೊಂದು ಅಪಾಯಕರವಾಗಿರಬಲ್ಲದೆ?
ಆದರೆ ಲಂಪಟತನವೆಂದರೇನು? ಇದನ್ನು, “ಕಾಮೋದ್ರೇಕವನ್ನುಂಟುಮಾಡಲು (ಚಿತ್ರ, ಲೇಖನಗಳಂತೆ) ಕಾಮಸಂಬಂಧವಾದ ನಡತೆಯ ವರ್ಣನೆ” ಎಂದು ನಿರೂಪಿಸಲಾಗಿದೆ. ಈ ನಿರೂಪಣೆಯೇನೊ ಸ್ಪಷ್ಟ. ಆದರೆ ಕಾಮೋದ್ರೇಕವನ್ನು ಯಾವುದು ಎಬ್ಬಿಸುತ್ತದೆ, ಯಾವುದು ಎಬ್ಬಿಸುವುದಿಲ್ಲ ಎಂಬುದನ್ನು ನಿರ್ಧರಿಸುವ ವಿಷಯದಲ್ಲಿ ವಿವಾದವೇಳುತ್ತದೆ. ನಿಜ, ಸ್ವಲ್ಪ ಮಟ್ಟಿಗೆ, ಲಂಪಟತನದಲ್ಲಿ ಏನು ಸೇರಿದೆಯೆಂಬುದು ವ್ಯಕ್ತಿಪರವಾದ ವೀಕ್ಷಣದ ಮೇಲೆ ಹೊಂದಿಕೊಂಡಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಒಬ್ಬನನ್ನು ಕಾಮೋದ್ರೇಕಿಸುವ ಸಂಗತಿ ಇನ್ನೊಬ್ಬನನ್ನು ಉದ್ರೇಕಿಸಲಿಕ್ಕಿಲ್ಲ. ಆದರೂ, ಜರ್ಮನಿಯಲ್ಲಿ 5,000 ವ್ಯಕ್ತಿಗಳ ಇತ್ತೀಚಿನ ಒಂದು ಸಮೀಕ್ಷೆ, ಯಾವುದಾದರೂ ಒಂದು ಹಂತದಲ್ಲಿ, ಕಾಮಸಂಬಂಧವಾದ ವಿಷಯಗಳು, ಹೆಚ್ಚು ಕಡಮೆ ಪ್ರತಿಯೊಬ್ಬ ಪುರುಷ, ಸ್ತ್ರೀಯ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ತೋರಿಸಿತು.
ಅಭಿಲಾಷೆಗಳನ್ನು ಉದ್ರೇಕಿಸುವುದು ತಪ್ಪೆ?
ನ್ಯಾಯವಾದ ಅಭಿಲಾಷೆಯನ್ನು—ಅದು ಯಾವುದೇ ಪ್ರಕೃತಿಯದಿರ್ದಲಿ—ಉದ್ರೇಕಿಸುವುದು, ಅದನ್ನು ಯೋಗ್ಯವಾಗಿ ತೃಪ್ತಿಗೊಳಿಸುವ ಸಾಧ್ಯತೆ ಇಲ್ಲದಿರುವಲ್ಲಿ, ಅವಿವೇಕ. ದೃಷ್ಟಾಂತಕ್ಕೆ, ನಿಮಗೆ ಇಷ್ಟವಾದ ಆಹಾರ ದೊರೆಯದಿರುವಲ್ಲಿ, ನೀವು ಪುಸ್ತಕ, ಪತ್ರಿಕೆಗಳಲ್ಲಿ ಅದರ ಚಿತ್ರವನ್ನು ಪದೇ ಪದೇ ನೋಡುತ್ತಿರುವುದರಿಂದ ನಿಮಗೆ ಪ್ರಾಯಶಃ ತೃಪ್ತಿಯಾಗಲಿಕ್ಕಿಲ್ಲ. ಇನ್ನೊಂದು ಪಕ್ಕದಲ್ಲಿ, ಪ್ರಾಯಶಃ ಆರೋಗ್ಯ ದೃಷ್ಟಿಯಿಂದ, ನಿಮಗೆ ಅದನ್ನು ತಿನ್ನುವ ಅನುಮತಿಯಿಲ್ಲಿದಿದ್ದರೆ, ಅದರ ವಿಷಯ ಯೋಚಿಸುತ್ತಾ ಇರುವುದು ಅಪಾಯಕರವಾದ ಉಲ್ಲಂಘನೆಗಳಿಗೆ ನಡೆಸುವುದು ಸಂಭಾವ್ಯ. ತದ್ರೀತಿ, ಧೂಮಪಾನವನ್ನು ಬಿಡಲು ಪ್ರಯತ್ನಿಸುವ ಒಬ್ಬನು, ಇತರರು ಸೇದುವುದನ್ನು ಆಸೆಯಿಂದ ನೋಡುತ್ತಾ ಸಮಯ ಕಳೆಯುವುದು ಅವನು ಅದನ್ನು ಬಿಟ್ಟು ಬಿಡುವ ಸಂಭವನೀಯತೆಯನ್ನು ಹೆಚ್ಚಿಸುವುದಿಲ್ಲ.
ಲೈಂಗಿಕಾಪೇಕ್ಷೆಯ ವಿಷಯದಲ್ಲಿ, ಬೈಬಲಿನ ದೃಷ್ಟಿಕೋನವೇನಂದರೆ, ಪ್ರೀತಿಯ ವಿವಾಹ ಬಂಧದೊಳಗೆ ಅದನ್ನು ತೃಪ್ತಿಗೊಳಿಸುವಲ್ಲಿ ಮಾತ್ರ ಸಂತೋಷ ಪರಿಣಮಿಸುತ್ತದೆ. (1 ಕೊರಿಂಥ 7:2-5; ಇಬ್ರಿಯ 13:4) ಹಾಗಾದರೆ ತೃಪ್ತಿಗೊಳಿಸಲಾಗದ ಅಪೇಕ್ಷೆಯನ್ನು ಅವಿವಾಹಿತನೊಬ್ಬನು ಉದ್ರೇಕಿಸುವುದು ಎಷ್ಟು ಅವಿವೇಕ! ಇದು ಕೇವಲ ಹತಾಶೆಗೆ ಯಾ, ಇನ್ನೂ ಕೆಟ್ಟದ್ದಾಗಿ, ಮುಷ್ಟಿಮೈಥುನ ಯಾ ಜಾರತ್ವದ ಮೂಲಕ ಅದನ್ನು ತೃಪ್ತಿಗೊಳಿಸುವಂತೆ ನಡೆಸಿ, ಹೀಗೆ, ದೈವಿಕ ನಿಯಮ ಮತ್ತು ಮೂಲಸೂತ್ರಗಳನ್ನು ಉಲ್ಲಂಘಿಸುವಂತಾಗುತ್ತದೆ.—1 ಥೆಸಲೊನೀಕ 4:3-7.
ವಿವಾಹಿತನಾಗಿರುವಲ್ಲಿ ಲಂಪಟತನ ಅಪಾಯಕರವಲ್ಲವೆಂದು ಇದರ ಅರ್ಥವೆ? ಅಲ್ಲ, ಆ ಶಾಸ್ತ್ರೀಯ ವರ್ತನಾ ನಿಯಮಗಳು ವಿವಾಹಿತರಿಗೂ ಅನ್ವಯಿಸುತ್ತವೆ. ಇದಲ್ಲದೆ, ಲಂಪಟ ವಿಷಯ ವರ್ಣನೆ ಸ್ವಾರ್ಥದ ಕಾಮೋದ್ರೇಕಗಳಿಗೆ ಹಿಡಿಸಿ, ವೈಯಕ್ತಿಕ ಆಸೆಯನ್ನು ತೃಪ್ತಿಪಡಿಸುವುದಕ್ಕೆ ಸಹಾಯ ನೀಡುತ್ತದೆ, ಆದರೆ ಪ್ರೀತಿ ಒಬ್ಬನ ಜೊತೆಯ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ದೃಷ್ಟಿ ಇಡುತ್ತದೆ. ಲಂಪಟ ವಿಷಯ ವರ್ಣನೆ ಪರಚಿಂತೆರಹಿತ ಮತ್ತು ಸ್ವವಿಚಾರಾಸಕ್ತಿಯ ಕಾಮಕ್ಕೆ ನಡೆಸುತ್ತದೆ. ಇದು ವಿವಾಹ ಬಂಧದೊಳಗೂ ಹೀನಾಯವಾಗಿಯೂ ಪ್ರೀತಿರಹಿತವಾಗಿಯೂ ಇರುತ್ತದೆ.—1 ಕೊರಿಂಥ 13:5.
ವೈವಾಹಿಕ ಪ್ರೀತಿಯನ್ನು ಬಲಪಡಿಸುವ ಬದಲು ಲಂಪಟ ವಿಷಯ ವರ್ಣನೆ ಅದನ್ನು ಹೀನೈಸುವುದರ, ಕೊಂಕಿಸುವುದರ ಮೂಲಕ ಕೊಲ್ಲುತ್ತದೆ. ಲಂಪಟ ವರ್ಣನೆಯಲ್ಲಿ ಚಿತ್ರಿಸಲ್ಪಡುವ ಲೈಂಗಿಕ ಸಂಬಂಧಗಳು ಅತಿ ಕೆಟ್ಟ ರೀತಿಯ ಭ್ರಾಂತಿಯೇ ಸರಿ, ಏಕೆಂದರೆ ಅದು ವೈವಾಹಿಕ ಗಾಢ ಪರಿಚಯ ಕುರಿತು ಸರಿಯಲ್ಲದ ಮತ್ತು ಹಾನಿಕರವಾದ ಮಾಹಿತಿಯನ್ನು ಕೊಡುತ್ತದೆ. ಇದಲ್ಲದೆ, ವಾಸ್ತವ ಜೀವನ ಸಂಬಂಧದಲ್ಲಿ ಲೈಂಗಿಕತೆಗಿಂತ ಎಷ್ಟೋ ಹೆಚ್ಚಿನ ವಿಷಯಗಳು ಸೇರಿವೆ; ಅವು ಕೋಮಲತೆ, ಪರಿಹಾಸ ಶೀಲತೆ, ಮಾತುಕತೆ, ಮತ್ತು ಚಿಂತನಾ ಭಾವ—ಇವುಗಳ ಮೇಲೆ ಕಟ್ಟಲ್ಪಡುತ್ತವೆ. ಇದಕ್ಕೆ ವ್ಯತ್ಯಾಸವಾಗಿ, ಲಂಪಟತೆ ವೈವಾಹಿತ ಜೊತೆಯ ಮಧ್ಯೆ ಒಂದು ಬೆಣೆಯೂ ಆಗಬಲ್ಲದು.
ಲಂಪಟತೆ ಮಾನವರನ್ನು ಕೇವಲ ಹುಟ್ಟರಿವಿನ ಕಾರಣ ವರ್ತಿಸುವ ಮೃಗಗಳ ಮಟ್ಟಕ್ಕೆ ದೂಡುತ್ತದೆ. ಅದು ದೇವರಾತ್ಮದ ಫಲವಾದ ಆತ್ಮನಿಯಂತ್ರಣವನ್ನು ಪ್ರೋತ್ಸಾಹಿಸುವುದಿಲ್ಲ. (ಗಲಾತ್ಯ 5:22, 23) ಇದು ವಿಕೃತಕಾಮಕ್ಕೆ ದಾರಿ ಮಾಡಿ ಕೊಟ್ಟೀತು. ಕ್ರೈಸ್ತರು ಲಂಪಟ ವಿಷಯ ವರ್ಣನೆಯನ್ನು ಏಕೆ ತ್ಯಜಿಸಬೇಕೆಂಬುದಕ್ಕೆ ಇರುವ ಕಾರಣಗಳಲ್ಲಿ ಇವು ಕೆಲವು.
ಆದುದರಿಂದ ಬೈಬಲಿನ ವಿವೇಕದ ಬುದ್ಧಿವಾದವು: “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. . . . ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ. [ಅಕ್ಷರಶಃ ಇಲ್ಲವೆ ಲಂಪಟ ವಿಷಯ ವರ್ಣನೆಯ ಮೂಲಕ ಪ್ರತಿನಿಧಿರೂಪದಲ್ಲಿ] ಅನ್ಯಳ ಎದೆಯನ್ನು ತಬ್ಬಿಕೊಳ್ಳುವದೇಕೆ?”—ಜ್ಞಾನೋಕ್ತಿ 5:15-20.
ಆದರೆ, ಒಬ್ಬನು ಲಂಪಟ ವಿಷಯ ವರ್ಣನೆಯ ಹಿಡಿತದಿಂದ ಹೇಗೆ ದೂರವಿರಬಲ್ಲನು ಯಾ ತಪ್ಪಿಸಿಕೊಳ್ಳಬಲ್ಲನು?
ಅದರ ಹಿಡಿತದಿಂದ ತಪ್ಪಿಸಿಕೊಳ್ಳುವ ವಿಧ
ಅಶ್ಲೀಲ ವಿಷಯ ವರ್ಣನೆಯ ಎಳೆತವನ್ನು ನಿಷ್ಫಲಗೊಳಿಸಲು ಬೈಬಲು ಸಲಹೆ ನೀಡುವುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವವನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಶೆ . . . ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊಸ್ಸೆ 3:5) ಇಲ್ಲಿ, “ಸಾಯಿಸಿರಿ” ಎಂಬ ಪದ, ಇಂಥ ದುರಾಚಾರಗಳಲ್ಲಿ ಉಪಯೋಗಿಸಲಾಗುವ ಯಾವ ಅಂಗವನ್ನಾದರೂ ಹೊಡೆದು ಕೊಲ್ಲುವ—ಕೇವಲ ನಿಗ್ರಹಿಸುವುದಲ್ಲ—ವಿಚಾರವನ್ನು ವಿಶದವಾಗಿ ಸೂಚಿಸುತ್ತದೆ.
ಆದರೂ, ಇದನ್ನು ಶಾರೀರಿಕಾರ್ಥದಲ್ಲಿ ಅಲ್ಲ, ರೂಪಕಾರ್ಥದಲ್ಲಿ ಅರ್ಥಮಾಡಿಕೊಳ್ಳಬೇಕು. ಕ್ರೈಸ್ತರು ತಮ್ಮ ಶರೀರವನ್ನು ಕತ್ತರಿಸಿ ಊನ ಮಾಡಬಾರದು. ನಾವು ಅಯೋಗ್ಯ ಲೈಂಗಿಕ ಯೋಚನೆಗಳನ್ನು ನಿರ್ಧಾರಕವಾಗಿ “ಕೊಲ್ಲುವಲ್ಲಿ”, ನಾವು ನಮ್ಮ ಕಣ್ಣುಗಳಂಥ ದೇಹಾಂಗಗಳನ್ನು ಉಪಯೋಗಿಸುತ್ತಾ ಲಂಪಟತೆಯ ಆಕರ್ಷಣೆಗೆ ಎಡೆಗೊಡೆವು. (ಮತ್ತಾಯ 5:29, 30, ಹೋಲಿಸಿ.) ಈ ಕಾರಣದಿಂದ ಬೈಬಲು, ಅಯೋಗ್ಯಾಪೇಕೆಗ್ಷಳನ್ನು “ನ್ಯಾಯವೂ ಶುದ್ಧವೂ” ಆದವುಗಳಿಂದ ಭರ್ತಿ ಮಾಡಿ, “ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ” ತಂದುಕೊಳ್ಳುತ್ತಾ ಇರ್ರಿ, ಎಂದು ಬುದ್ಧಿ ಹೇಳುತ್ತದೆ.—ಫಿಲಿಪ್ಪಿ 4:8.
ಇನ್ನಾವುದು ಸಹಾಯ ಮಾಡಬಲ್ಲದು? ಮನಸ್ಸಿನಲ್ಲಿ ಈ ಕೆಳಗಿನಂಥ ಬೈಬಲ್ ವಚನಗಳನ್ನು—ಬಾಯಿಪಾಠ ಮಾಡಿಯೂ—ಇಟ್ಟುಕೊಳ್ಳಬಹುದು:
“ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು.”—ಕೀರ್ತನೆ 119:37.
“ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ . . . ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.”—1 ಯೋಹಾನ 2:16.
“ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.”—ಯಾಕೋಬ 1:14, 15.
ಸರಪಳಿ ಪ್ರತಿಕ್ರಿಯೆಯನ್ನುಂಟುಮಾಡಿ ಮರಣದಲ್ಲಿ ಅಂತ್ಯವಾಗುವ ಯಾವುದನ್ನೂ ಅಪಾಯಕರವೆಂದು ಯೋಗ್ಯವಾಗಿಯೆ ಹೇಳಸಾಧ್ಯವಿದೆ, ಮತ್ತು ಲಂಪಟತೆ ಈ ವರ್ಣನೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ! “ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.” ಲಂಪಟ ವಿಷಯ ವರ್ಣನೆಯು ನಿಮ್ಮಿಂದ ನಿತ್ಯ ಜೀವವನ್ನು ಕಸಿದುಕೊಳ್ಳಲು ಬಿಡಬೇಡಿ!—ಗಲಾತ್ಯ 6:8. (g91 9/8)
[ಪುಟ 14 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಲಂಪಟತೆ, ವೈವಾಹಿಕ ಪ್ರೀತಿಯನ್ನು ಬಲಪಡಿಸುವ ಬದಲು ಕೀಳಾಗಿಸುವುದರ ಮತ್ತು ಕೊಂಕಿಸುವುದರ ಮೂಲಕ ಅದನ್ನು ಕೊಲ್ಲುತ್ತದೆ