ಬೈಬಲಿನ ದೃಷ್ಟಿಕೋನ
ಪ್ರೇಮಿಗಳು ವಿವಾಹಪೂರ್ವ ಸಂಭೋಗದಲ್ಲಿ ಒಳಗೂಡುವುದು ಸರಿಯೋ?
ಒಂದು ಸರ್ವೆಯಲ್ಲಿ ಶೇಕಡಾ 90ರಷ್ಟು ಹದಿವಯಸ್ಸಿನವರು, ಪರಸ್ಪರ ಇಬ್ಬರು ವ್ಯಕ್ತಿಗಳು ಪ್ರೀತಿಸುತ್ತಿರುವಲ್ಲಿ ವಿವಾಹಪೂರ್ವ ಸಂಭೋಗ ತಪ್ಪಲ್ಲವೆಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು. ಈ ರೀತಿಯ ಆಲೋಚನೆಯನ್ನು ಮಾಧ್ಯಮಗಳು ಬಣ್ಣಕಟ್ಟಿ ಬಿಂಬಿಸುತ್ತವೆ. ಅಲ್ಲದೆ ಅನೇಕ ಬಾರಿ ಅದನ್ನು ಸಮ್ಮತ್ತಿಸುತ್ತವೆ ಕೂಡಾ. ರೊಮ್ಯಾಂಟಿಕ್ ಪ್ರೀತಿಯಿಂದ ಲೈಂಗಿಕ ನಡತೆಗಳು ಸಹಜ ಎಂದು ಟಿವಿ, ಸಿನೆಮಾಗಳು ಪದೇಪದೇ ಚಿತ್ರಿಸುತ್ತವೆ.
ಆದರೆ ದೇವರನ್ನು ಮೆಚ್ಚಿಸಬಯಸುವವರು ಮಾರ್ಗದರ್ಶನಕ್ಕಾಗಿ ಈ ಲೋಕದ ಕಡೆಗೆ ನೋಡುವುದಿಲ್ಲ ಎಂಬುದಂತೂ ನಿಜ. ಏಕೆಂದರೆ, ಈ ಲೋಕವು ಅದರ ಅಧಿಪತಿಯಾದ ಸೈತಾನನ ಅಲೋಚನೆಯನ್ನು ಪ್ರತಿಬಿಂಬಿಸುತ್ತದೆಂದು ಅವರಿಗೆ ತಿಳಿದಿದೆ. (1 ಯೋಹಾನ 5:19) ಇದಲ್ಲದೆ, ಅವರು ಕೇವಲ ತಮಗೆ ಸರಿತೋಚುವಂಥ ರೀತಿಯಲ್ಲಿ ಮಾತ್ರ ನಡೆಯದಿರಲು ಜಾಗ್ರತೆವಹಿಸುವರು. ಕಾರಣವೇನೆಂದರೆ, “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ” ಎಂಬುದು ಅವರಿಗೆ ಗೊತ್ತಿದೆ. (ಯೆರೆಮೀಯ 17:9) ಆದುದರಿಂದ, ನಿಜವಾಗಿ ವಿವೇಕಿಗಳಾಗಿರುವವರು ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನ ಕಡೆಗೆ ಹಾಗೂ ಆತನ ಪ್ರೇರಿತ ವಾಕ್ಯದ ಕಡೆಗೆ ನೋಡುವರು.—ಜ್ಞಾನೋಕ್ತಿ 3:5, 6; 2 ತಿಮೊಥೆಯ 3:16.
ಲೈಂಗಿಕತೆ ದೇವರು ನೀಡಿರುವ ಉಡುಗೊರೆ
“ಎಲ್ಲಾ ಒಳ್ಳೇ ದಾನಗಳೂ [ಅಂದರೆ ಉಡುಗೊರೆಗಳೂ] ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ” ಎಂದು ಯಾಕೋಬ 1:17 ತಿಳಿಸುತ್ತದೆ. ವಿವಾಹ ಏರ್ಪಾಡಿನೊಳಗಿನ ಲೈಂಗಿಕ ಆಪ್ತತೆಯು ಸಹ ಆ ಅಮೂಲ್ಯ ಉಡುಗೊರೆಗಳಲ್ಲಿ ಒಂದು. (ರೂತಳು 1:9; 1 ಕೊರಿಂಥ 7:2, 7) ಇದರಿಂದ ಮಾನವರು ಸಂತಾನೋತ್ಪತ್ತಿ ಮಾಡಲು ಶಕ್ತರಾಗಿರುತ್ತಾರೆ. ಪತಿಪತ್ನಿ ಕೋಮಲತೆಯಿಂದ ಆನಂದಿಸುತ್ತಾ ಶಾರೀರಿಕವಾಗಿಯೂ ಭಾವನಾತ್ಮಕವಾಗಿಯೂ ಬೆಸೆದುಕೊಳ್ಳುವಂತೆ ಸಹ ಇದು ಅವರಿಗೆ ಸಹಾಯಮಾಡುತ್ತದೆ. ಪುರಾತನ ಕಾಲದ ಅರಸ ಸೊಲೊಮೋನನು ಬರೆದುದು: “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು . . . ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ.”—ಜ್ಞಾನೋಕ್ತಿ 5:18, 19.
ನಿಜ ಹೇಳಬೇಕೆಂದರೆ, ಯೆಹೋವನು ನೀಡಿರುವ ಉಡುಗೊರೆಗಳಿಂದ ನಾವು ಪ್ರಯೋಜನ ಪಡೆದು ಆನಂದಿಸುವಂತೆ ಆತನು ಬಯಸುತ್ತಾನೆ. ಆ ಉದ್ದೇಶದಿಂದಲೇ ಅತಿ ಶ್ರೇಷ್ಠ ನಿಯಮಗಳನ್ನೂ ಮೂಲತತ್ತ್ವಗಳನ್ನೂ ನಾವು ಪಾಲಿಸಬೇಕೆಂದು ಕೊಟ್ಟಿದ್ದಾನೆ. (ಕೀರ್ತನೆ 19:7, 8) ‘ವೃದ್ಧಿಮಾರ್ಗವನ್ನು ಬೋಧಿಸಿ ನಡೆಯಬೇಕಾದ ದಾರಿಯಲ್ಲಿ ನಡೆಸುವವನು’ ಯೆಹೋವನೇ. (ಯೆಶಾಯ 48:17) ಹೀಗಿರುವಾಗ, ಪ್ರೀತಿಯ ಸಾಕಾರರೂಪವೇ ಆಗಿರುವ ನಮ್ಮ ಸ್ವರ್ಗೀಯ ತಂದೆಯು ನಮಗೆ ಸಂತೋಷತರುವಂಥ ಯಾವ ವಿಷಯವನ್ನಾದರೂ ಮಾಡದಂತೆ ನಮ್ಮನ್ನು ತಡೆಯುವನೋ?—ಕೀರ್ತನೆ 34:10; 37:4; 84:11; 1 ಯೋಹಾನ 4:8.
ವಿವಾಹಪೂರ್ವ ಸಂಭೋಗ ಪ್ರೀತಿರಹಿತ
ಒಂದು ಗಂಡುಹೆಣ್ಣು ದಾಂಪತ್ಯದಲ್ಲಿ ಜೊತೆಗೂಡುವಾಗ ಅವರಿಬ್ಬರು “ಒಂದೇ ಶರೀರ”ದಂತೆ ಆಗುತ್ತಾರೆ. ಇಬ್ಬರು ಅವಿವಾಹಿತ ವ್ಯಕ್ತಿಗಳು ಲೈಂಗಿಕ ಸಂಬಂಧವನ್ನು ಹೊಂದುವಾಗ ಅವರಿಬ್ಬರು ಸಹ “ಒಂದೇ ಶರೀರ”ವಾಗುತ್ತಾರೆ. ಆದರೆ ಇದು ದೇವರ ದೃಷ್ಟಿಯಲ್ಲಿ ಅಶುದ್ಧವಾಗಿದೆ. ಇದು ಜಾರತ್ವವಾಗಿದೆ.a ಅಷ್ಟಲ್ಲದೆ ಇಂಥ ಬಂಧವು ಪ್ರೀತಿರಹಿತ. ಅದು ಹೇಗೆ?—ಮಾರ್ಕ 10:7-9; 1 ಕೊರಿಂಥ 6:9, 10, 16.
ಇದಕ್ಕಿರುವ ಒಂದು ಕಾರಣ, ಜಾರತ್ವವು ಯಥಾರ್ಥ ಬದ್ಧತೆಯನ್ನು ಮಾಡಿಕೊಂಡಿರದವರ ಮಧ್ಯೆಯಿರುವ ಲೈಂಗಿಕತೆಯಾಗಿದೆ. ಇದು ಸ್ವಗೌರವವನ್ನು ಹಾಳುಮಾಡುತ್ತದೆ. ಮಾತ್ರವಲ್ಲ ರೋಗ, ಅನಪೇಕ್ಷಿತ ಗರ್ಭಧಾರಣೆ ಹಾಗೂ ಭಾವನಾತ್ಮಕ ವೇದನೆಯನ್ನು ಉಂಟುಮಾಡಬಲ್ಲದು. ಮಿಗಿಲಾಗಿ, ಇದು ದೇವರ ನೀತಿಯ ಮಟ್ಟಗಳನ್ನು ತುಚ್ಛೀಕರಿಸುವುದು. ಆದುದರಿಂದ ಜಾರತ್ವವು ಇನ್ನೊಬ್ಬ ವ್ಯಕ್ತಿಯ ಈಗಿನ ಮತ್ತು ಭವಿಷ್ಯತ್ತಿನ ಹಿತಕ್ಷೇಮ ಹಾಗೂ ಸಂತೋಷಕ್ಕೆ ಕಿಂಚಿತ್ತೂ ಗೌರವವನ್ನು ತೋರಿಸದ ವಿಷಯವಾಗಿದೆ.
ಕ್ರೈಸ್ತ ವ್ಯಕ್ತಿಗೆ ಜಾರತ್ವವು ಅವನ ಅಥವಾ ಅವಳ ಆಧ್ಯಾತ್ಮಿಕ ಸಹೋದರ ಸಹೋದರಿಯ ಹಕ್ಕನ್ನು ಅತಿಕ್ರಮಿಸುವ ವಿಷಯವೂ ಆಗಿದೆ. (1 ಥೆಸಲೊನೀಕ 4:3-6) ಉದಾಹರಣೆಗೆ, ದೇವರ ಸೇವಕರೆಂದು ಸೋಗುಹಾಕಿಕೊಳ್ಳುವವರು ವಿವಾಹದ ಹೊರಗೆ ಲೈಂಗಿಕತೆಯಲ್ಲಿ ತೃಪ್ತಿಕಾಣುವ ಮೂಲಕ ಕ್ರೈಸ್ತ ಸಭೆಯೊಳಗೆ ಅಶುದ್ಧತೆಯನ್ನು ತರುತ್ತಾರೆ. (ಇಬ್ರಿಯ 12:15, 16) ಇದಲ್ಲದೆ, ಅವರು ಜಾರತ್ವ ನಡೆಸಿದ ಆ ವ್ಯಕ್ತಿಯ ಶುದ್ಧ ನೈತಿಕ ನಿಲುವನ್ನು ಕೆಡಿಸುವರು. ಮಾತ್ರವಲ್ಲ ಒಂದುವೇಳೆ ಆ ವ್ಯಕ್ತಿ ಅವಿವಾಹಿತನಾಗಿರುವಲ್ಲಿ ಮುಂದಕ್ಕೆ ವಿವಾಹವಾಗುವಾಗ ಶೀಲವಂತನಾಗಿರುವುದಕ್ಕೂ ಧಕ್ಕೆ ತರುವರು. ಅವರು ತಮ್ಮ ಕುಟುಂಬದ ಸತ್ಕೀರ್ತಿಗೂ ತಮ್ಮೊಂದಿಗೆ ಲೈಂಗಿಕತೆಯಲ್ಲಿ ಒಳಗೂಡಿದ ವ್ಯಕ್ತಿಯ ಕುಟುಂಬದ ಸತ್ಕೀರ್ತಿಗೂ ಮಸಿಬಳಿಯುವರು. ದೇವರಿಗೂ ನಿಂದೆ ತರುವರು. ಆತನ ನೀತಿಯ ಮೂಲತತ್ತ್ವಗಳ ಮತ್ತು ನಿಯಮಗಳ ಚೌಕಟ್ಟನ್ನು ಮೀರುವ ಮೂಲಕ ಆತನ ಮನಸ್ಸಿಗೆ ವೇದನೆಯನ್ನುಂಟುಮಾಡುವರು. (ಕೀರ್ತನೆ 78:40, 41) ಯೆಹೋವನು ಪಶ್ಚತ್ತಾಪಪಡದ ವ್ಯಕ್ತಿಗಳ ಇಂಥ ಎಲ್ಲ ನಡವಳಿಕೆಗೂ ‘ಮುಯ್ಯಿ ತೀರಿಸುವನು.’ (1 ಥೆಸಲೊನೀಕ 4:6) ಈ ಕಾರಣಗಳಿಂದಲೇ “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಬೈಬಲ್ ನಮಗೆ ಹೇಳುವುದು ಆಶ್ಚರ್ಯವಲ್ಲ.—1 ಕೊರಿಂಥ 6:18.
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರೋ? ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದೀರೋ? ಹೌದಾದರೆ, ಪ್ರೀತಿಸುತ್ತಿರುವ ಈ ಸಮಯದಲ್ಲಿಯೇ ಪರಸ್ಪರ ನಂಬಿಕೆ ಮತ್ತು ಗೌರವಕ್ಕಾಗಿ ಬಲವಾದ ಅಸ್ತಿವಾರವನ್ನು ಹಾಕಬಾರದೇಕೆ? ಕೆಳಗಿನ ಪ್ರಶ್ನೆಗಳ ಬಗ್ಗೆ ತುಸು ಆಲೋಚಿಸಿರಿ: ತನ್ನನ್ನು ನಿಯಂತ್ರಿಸಿಕೊಳ್ಳಲಾಗದ ಪುರಷನನ್ನು ಸ್ತ್ರೀಯೊಬ್ಬಳು ಹೇಗೆ ತಾನೇ ಪೂರ್ಣವಾಗಿ ನಂಬಸಾಧ್ಯ? ಬರೀ ತನ್ನ ರೋಮ್ಯಾಂಟಿಕ್ ಭಾವನೆಗಳನ್ನು ತಣಿಸಲಿಕ್ಕಾಗಿಯೊ ಇಲ್ಲವೆ ಕೇವಲ ಪುರುಷನೊಬ್ಬನನ್ನು ಮೆಚ್ಚಿಸಲಿಕ್ಕಾಗಿಯೊ ದೇವರ ನಿಯಮಗಳನ್ನು ಮುರಿಯುವ ಸ್ತ್ರೀಯನ್ನು ಪ್ರೀತಿಸಿ ಗೌರವಿಸಲು ಪುರುಷನೊಬ್ಬನು ಸುಲಭವಾಗಿ ಮನಸ್ಸುಮಾಡುವನೊ?
ದೇವರ ಪ್ರೀತಿಯ ಮಟ್ಟಗಳನ್ನು ತಿರಸ್ಕರಿಸುವವರು ತಾವು ಬಿತ್ತುವುದನ್ನೇ ಕೊಯ್ಯುವರು ಎಂಬುದನ್ನು ನೆನಪಿನಲ್ಲಿಡಿರಿ. (ಗಲಾತ್ಯ 6:7) “ಜಾರತ್ವಮಾಡುವವನು ತನ್ನ ದೇಹಕ್ಕೆ ಹಾನಿಕರವಾದ ಪಾಪವನ್ನು ಮಾಡುತ್ತಾನೆ” ಎಂದು ಬೈಬಲ್ ಹೇಳುತ್ತದೆ. (1 ಕೊರಿಂಥ 6:18; ಜ್ಞಾನೋಕ್ತಿ 7:5-27) ಮದುವೆಗೆ ಮೊದಲು ಸಂಭೋಗದಲ್ಲಿ ಒಳಗೂಡಿದ ಜೋಡಿಗಳು ನಿಜವಾಗಿಯೂ ಪಶ್ಚಾತ್ತಾಪಪಟ್ಟು ದೇವರೊಂದಿಗಿನ ಸಂಬಂಧವನ್ನು ಪುನಃಸ್ಥಾಪಿಸಿ ಪರಸ್ಪರ ನಿಷ್ಠೆಯನ್ನು ಬಲಪಡಿಸುವಾಗ ನಕರಾತ್ಮಕ ಭಾವನೆಗಳು ಕ್ರಮೇಣ ಮಾಯವಾಗಬಹುದೇನೊ ನಿಜ. ಆದರೆ ಸಾಮಾನ್ಯವಾಗಿ ಅವರ ಹಿಂದಿನ ನಡತೆಯು ಗಾಯದ ಮಾಸದ ಕಲೆಯನ್ನು ಬಿಟ್ಟುಹೋಗುವುದು. ಒಂದು ಯುವ ದಂಪತಿಯು ಈಗ ವಿವಾಹವಾಗಿರುವುದಾದರೂ, ಜಾರತ್ವದಲ್ಲಿ ಒಳಗೂಡಿದ್ದಕ್ಕಾಗಿ ಮನಮರುಗಿ ವಿಷಾದಿಸುತ್ತಿದ್ದಾರೆ. ‘ನಮ್ಮ ಬಾಂಧವ್ಯವು ಅಶುದ್ಧವಾದ ಅಸ್ತಿವಾರದಿಂದ ಆರಂಭವಾದುದಕ್ಕೆ ನಮಗೆ ವೈವಾಹಿಕ ಸಮಸ್ಯೆಗಳು ಬರುತ್ತಿವೆಯೇನೋ?’ ಎಂಬುದಾಗಿ ಗಂಡನು ಕೆಲವೊಮ್ಮೆ ಕೇಳಿಕೊಳ್ಳುತ್ತಿರುತ್ತಾನೆ.
ನಿಜ ಪ್ರೀತಿ ಸ್ವಾರ್ಥವಿಲ್ಲದ್ದು
ರೋಮ್ಯಾಂಟಿಕ್ ಭಾವನೆಗಳು ಇರುವಾಗಲೂ ನಿಜ ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ” ಅಥವಾ “ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.” (1 ಕೊರಿಂಥ 13:4, 5) ಬದಲಾಗಿ ಅದು ಇನ್ನೊಬ್ಬ ವ್ಯಕ್ತಿಯ ಹಿತಕ್ಕಾಗಿಯೂ ನಿತ್ಯ ಸಂತೋಷಕ್ಕಾಗಿಯೂ ಶ್ರಮಪಡುತ್ತದೆ. ಅಂಥ ಪ್ರೀತಿಯು ಸ್ತ್ರೀಪುರುಷರಿಬ್ಬರು ಪರಸ್ಪರ ಗೌರವಿಸುವಂತೆ ಉತ್ತೇಜಿಸುತ್ತದೆ. ಅದು ಲೈಂಗಿಕ ಆಪ್ತತೆಯನ್ನು ದೇವರು ಅನುಮತಿಸಿರುವ ಯೋಗ್ಯವಾದ ಏರ್ಪಾಡಿನಲ್ಲಿ ಅಂದರೆ ವಿವಾಹ ಏರ್ಪಾಡಿನೊಳಗೆ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತದೆ.—ಇಬ್ರಿಯ 13:4.
ನಿಜವಾಗಿಯೂ ಸುಮಧುರ ಮದುವೆಗೆ ಬೇಕಾಗುವ ಭರವಸೆ ಮತ್ತು ಸುರಕ್ಷಿತ ಅನಿಸಿಕೆಗಳು ಮಕ್ಕಳು ಹುಟ್ಟುವಾಗ ವಿಶೇಷವಾಗಿ ಪ್ರಾಮುಖ್ಯ. ಏಕೆಂದರೆ, ಮಕ್ಕಳು ಪ್ರೀತಿಯ ಸುದೃಢ ಸುರಕ್ಷಿತ ವಾತಾವರಣದಲ್ಲಿ ಬೆಳೆಯಬೇಕೆಂಬುದು ದೇವರ ಉದ್ದೇಶ. (ಎಫೆಸ 6:1-4) ವಿವಾಹಿತ ಜೀವನದಲ್ಲಿ ಮಾತ್ರವೇ ಇಬ್ಬರು ವ್ಯಕ್ತಿಗಳು ಪರಸ್ಪರ ನಿಜ ಬದ್ಧತೆಯಿಂದಿರಬಲ್ಲರು. ಅವರು ಹೃದಯದಲ್ಲಿ ಮತ್ತು ಅನೇಕವೇಳೆ ಬಾಯಿಮಾತಿನಲ್ಲಿಯೂ ತಾವು ಜೀವನದುದ್ದಕ್ಕೂ ಪರಸ್ಪರ ಸುಖದುಃಖದಲ್ಲಿ ಭಾಗಿಯಾಗಿ ಬೆಂಬಲಿಸುವೆವೆಂದು ಪ್ರತಿಜ್ಞೆಮಾಡುತ್ತಾರೆ.—ರೋಮಾಪುರ 7:2, 3.
ಸತಿಪತಿಯ ನಡುವಿನ ಲೈಂಗಿಕ ಆಪ್ತತೆಯು ಅವರ ಬಾಂಧವ್ಯದ ಬೆಸುಗೆಯನ್ನು ಬಲಪಡಿಸುತ್ತದೆ. ಸಂತೋಷದ ದಾಂಪತ್ಯದಲ್ಲಿ ಸಂಗಾತಿಗಳು ಲೈಂಗಿಕ ಆಪ್ತತೆಯನ್ನು ಹೆಚ್ಚು ಉಲ್ಲಾಸಕರವಾಗಿಯೂ ಅರ್ಥಭರಿತವಾಗಿಯೂ ಕಂಡುಕೊಳ್ಳತ್ತಾರೆ. ವಿವಾಹ ಸಂಬಂಧದೊಳಗಿನ ಲೈಂಗಿಕತೆಯು ಪವಿತ್ರ ದಾಂಪತ್ಯಕ್ಕೆ ಧಕ್ಕೆತರುವುದಿಲ್ಲ, ಮನಸ್ಸಾಕ್ಷಿ ಚುಚ್ಚುವಂತೆ ಮಾಡುವುದಿಲ್ಲ, ಸೃಷ್ಟಿಕರ್ತನಿಗೆ ಅವಿಧೇಯರಾಗುವಂತೆ ಮಾಡುವುದಿಲ್ಲ. (g 11/06)
ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?
◼ ವಿವಾಹಪೂರ್ವ ಸಂಭೋಗದ ಕುರಿತು ದೇವರ ದೃಷ್ಟಿಕೋನವೇನು?—1 ಕೊರಿಂಥ 6:9, 10.
◼ ಜಾರತ್ವ ಅಪಾಯಕರವೇಕೆ?—1 ಕೊರಿಂಥ 6:18.
◼ ಪ್ರೇಮಿಸುತ್ತಿರುವ ಜೋಡಿಗಳು ಪರಸ್ಪರ ನಿಜ ಪ್ರೀತಿಯನ್ನು ಹೇಗೆ ತೋರಿಸಸಾಧ್ಯವಿದೆ?—1 ಕೊರಿಂಥ 13:4, 5.
[ಪಾದಟಿಪ್ಪಣಿ]
a “ಜಾರತ್ವ” ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್ ಪದವು ವಿವಾಹದ ಹೊರಗಿನ ವ್ಯಕ್ತಿಯೊಂದಿಗಿನ ಎಲ್ಲ ರೀತಿಯ ಲೈಂಗಿಕ ಕೃತ್ಯಗಳನ್ನು ಒಳಗೂಡುತ್ತದೆ. ಇದರಲ್ಲಿ ಜನನೇಂದ್ರಿಯಗಳ ಅಪಪ್ರಯೋಗ ಮತ್ತು ಮೌಖಿಕ ಸಂಭೋಗವು ಸೇರಿದೆ.—ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾಗಿರುವ ಅಕ್ಟೋಬರ್ 8, 2004ರ ಎಚ್ಚರ! ಪತ್ರಿಕೆಯ ಪುಟ 16 ಮತ್ತು ಫೆಬ್ರವರಿ 15, 2004ರ ಕಾವಲಿನಬುರುಜು ಪತ್ರಿಕೆಯ ಪುಟ 13ನ್ನು ನೋಡಿರಿ.