ದೇವರ ವಾಕ್ಯಕ್ಕೆ ತಕ್ಕಂತೆ ಸಂಘಟಿತರು
“ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.”—ಜ್ಞಾನೋ. 3:19.
1, 2. (ಎ) ಸಂಘಟನೆಯ ಭಾಗವಾಗಿರುವುದರ ಬಗ್ಗೆ ಕೆಲವರು ಏನು ಹೇಳುತ್ತಾರೆ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
“ನಮ್ಮನ್ನು ಮಾರ್ಗದರ್ಶಿಸಲು ಸಂಘಟನೆ ಏನೂ ಬೇಕಾಗಿಲ್ಲ. ಬೇಕಾಗಿರೋದು ದೇವರ ಜೊತೆ ಸಂಬಂಧ ಅಷ್ಟೇ” ಎಂದು ಕೆಲವರು ಹೇಳುತ್ತಾರೆ. ನಮಗೆ ಸಂಘಟನೆ ಬೇಕಾಗಿಲ್ವಾ? ಪುರಾವೆಗಳು ಏನು ತೋರಿಸುತ್ತವೆ?
2 ಯೆಹೋವನು ವ್ಯವಸ್ಥಿತವಾಗಿ ಕೆಲಸಗಳನ್ನು ಮಾಡುತ್ತಾನೆ ಮತ್ತು ತನ್ನ ಜನರನ್ನು ಸಂಘಟಿಸುತ್ತಾನೆ. ಅದು ಹೇಗೆ ಎಂದು ಈ ಲೇಖನದಲ್ಲಿ ನಾವು ಕಲಿಯಲಿದ್ದೇವೆ. ಯೆಹೋವನ ಸಂಘಟನೆ ಮಾರ್ಗದರ್ಶನ ಕೊಡುವಾಗ ನಾವೇನು ಮಾಡಬೇಕು ಎಂದು ಕೂಡ ಕಲಿಯಲಿದ್ದೇವೆ. (1 ಕೊರಿಂ. 14:33, 40) ಒಂದನೇ ಶತಮಾನದಲ್ಲಿ ಯೆಹೋವನ ಜನರು ದೇವರು ಕೊಟ್ಟ ಮಾರ್ಗದರ್ಶನಕ್ಕೆ ತಕ್ಕಂತೆ ನಡೆದರು. ಇದರಿಂದಾಗಿ ಅವರಿಗೆ ಅನೇಕ ಸ್ಥಳಗಳಲ್ಲಿ ಸುವಾರ್ತೆ ಸಾರಲು ಸಾಧ್ಯವಾಯಿತು. ಇವತ್ತು ನಾವು ಸಹ ಬೈಬಲ್ ಕೊಡುವ ಮಾರ್ಗದರ್ಶನಕ್ಕೆ ತಕ್ಕಂತೆ ನಡೆಯುತ್ತೇವೆ. ದೇವರ ಸಂಘಟನೆ ಕೊಡುವ ಸಲಹೆಗಳನ್ನು ಪಾಲಿಸುತ್ತೇವೆ. ಇದರಿಂದ ಇಡೀ ಲೋಕದಲ್ಲಿ ಸುವಾರ್ತೆ ಸಾರಲು ಸಾಧ್ಯವಾಗುತ್ತಿದೆ. ಸಭೆಯ ಶುದ್ಧತೆ, ಶಾಂತಿ ಮತ್ತು ಒಗ್ಗಟ್ಟನ್ನು ಕೂಡ ಕಾಪಾಡಿಕೊಳ್ಳುತ್ತಿದ್ದೇವೆ.
ಯೆಹೋವನು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ದೇವರು
3. ಯೆಹೋವನು ಎಲ್ಲವನ್ನೂ ವ್ಯವಸ್ಥಿತವಾಗಿ ಇಟ್ಟಿದ್ದಾನೆ ಎಂದು ನಿಮಗೆ ಹೇಗೆ ಗೊತ್ತು?
3 ಯೆಹೋವನು ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುತ್ತಾನೆ ಎನ್ನುವುದನ್ನು ಆತನ ಸೃಷ್ಟಿಯನ್ನು ನೋಡಿದಾಗ ಗೊತ್ತಾಗುತ್ತದೆ. ಆತನು “ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.” (ಜ್ಞಾನೋ. 3:19) ಆತನ ಸೃಷ್ಟಿಯ ಬಗ್ಗೆ ನಾವು ತಿಳಿದುಕೊಳ್ಳಲು ಬೇಕಾದಷ್ಟಿದೆ. “ಆತನನ್ನು ಕುರಿತು ಸ್ವಲ್ಪ ಮಾತ್ರ ಕೇಳಿದ್ದೇವೆ” ಎನ್ನುತ್ತದೆ ಬೈಬಲ್. (ಯೋಬ 26:14, ಪವಿತ್ರ ಗ್ರಂಥ ಭಾಷಾಂತರ) ಆದರೂ ನಮಗೆ ತಿಳಿದಿರುವ ಅಷ್ಟೋ ಇಷ್ಟೋ ವಿಷಯಗಳಿಂದಲೇ ದೇವರು ವಿಶ್ವವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ. (ಕೀರ್ತ. 8:3, 4) ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳಿದ್ದರೂ ಅವೆಲ್ಲವೂ ವ್ಯವಸ್ಥಿತವಾಗಿ ಚಲಿಸುತ್ತವೆ. ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳನ್ನೇ ನೋಡಿ. ಇಂಥ ಸುವ್ಯವಸ್ಥೆ ಹೇಗೆ ಬಂತು? ಯೆಹೋವನು ಗ್ರಹಗಳನ್ನು ಮತ್ತು ನಕ್ಷತ್ರಗಳನ್ನು ವ್ಯವಸ್ಥಿತವಾಗಿ ಚಲಿಸುವಂತೆ ಮಾಡಿರುವುದೇ ಇದಕ್ಕೆ ಕಾರಣ. ದೇವರು ಭೂಮಿಯನ್ನು ಮತ್ತು “ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ.” ಇದು ನಾವು ಆತನನ್ನು ಸ್ತುತಿಸುವಂತೆ, ಆರಾಧಿಸುವಂತೆ ಮತ್ತು ಆತನಿಗೆ ನಿಷ್ಠೆ ತೋರಿಸುವಂತೆ ಪ್ರೇರಿಸುತ್ತದೆ.—ಕೀರ್ತ. 136:1, 5-9.
4. ಅನೇಕ ಪ್ರಾಮುಖ್ಯ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಉತ್ತರ ಕೊಡಲು ಆಗುತ್ತಿಲ್ಲ ಯಾಕೆ?
4 ವಿಜ್ಞಾನಿಗಳು ಭೂಮಿ ಬಗ್ಗೆ ಮತ್ತು ಇಡೀ ವಿಶ್ವದ ಬಗ್ಗೆ ಸಂಶೋಧನೆ ಮಾಡಿ ಎಷ್ಟೋ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅದರಿಂದ ನಮಗೆ ಪ್ರಯೋಜನ ಕೂಡ ಆಗಿದೆ. ಆದರೆ, ‘ಇಡೀ ಪ್ರಪಂಚ ಹೇಗೆ ಬಂತು? ಭೂಮಿ ಮೇಲೆ ಮಾನವರು ಹೇಗೆ ಬಂದರು? ಪ್ರಾಣಿಗಳು, ಗಿಡಮರಗಳು ಹೇಗೆ ಬಂದವು? ಮನುಷ್ಯರಿಗೆ ಸದಾ ಬದುಕಬೇಕೆಂಬ ಆಸೆ ಇರಲು ಕಾರಣವೇನು?’ ಎನ್ನುವಂಥ ಪ್ರಶ್ನೆಗಳಿಗೆ ಅವರಿಂದ ಉತ್ತರ ಕೊಡಲು ಆಗುತ್ತಿಲ್ಲ. (ಪ್ರಸಂ. 3:11) ಯಾಕೆಂದರೆ ಅವರಿಗೆ ದೇವರಲ್ಲಿ ನಂಬಿಕೆ ಇಲ್ಲ. ಎಲ್ಲವೂ ವಿಕಾಸವಾಗಿ ಬಂತೆಂದು ವಾದಿಸುತ್ತಾರೆ. ಆದರೆ ಮೇಲಿನ ಎಲ್ಲ ಪ್ರಶ್ನೆಗಳಿಗೂ ಬೈಬಲಲ್ಲಿ ಉತ್ತರ ಇದೆ.
5. ಮಾನವರು ಪ್ರಕೃತಿ ನಿಯಮಗಳ ಮೇಲೆ ಹೇಗೆ ಹೊಂದಿಕೊಂಡಿದ್ದಾರೆ?
5 ಯೆಹೋವ ದೇವರು ಪ್ರಕೃತಿಯಲ್ಲಿ ಹಲವಾರು ನಿಯಮಗಳನ್ನು ಇಟ್ಟಿದ್ದಾನೆ. ಈ ನಿಯಮಗಳು ಯಾವತ್ತೂ ಬದಲಾಗಲ್ಲ. ಎಲೆಕ್ಟ್ರಿಷನ್, ಪ್ಲಂಬರ್, ಇಂಜಿನೀಯರ್, ವಿಮಾನ ಚಾಲಕ, ಡಾಕ್ಟರ್ ಎಲ್ಲರೂ ಈ ನಿಯಮಗಳ ಮೇಲೆ ಹೊಂದಿಕೊಂಡು ತಮ್ಮ ಕೆಲಸ ಮಾಡುತ್ತಾರೆ. ಒಬ್ಬ ಡಾಕ್ಟರು ಆಪರೇಷನ್ ಮಾಡುವಾಗ ಹೃದಯ ಎಲ್ಲಿದೆ ಎಂದು ಹುಡುಕಬೇಕಾಗಿಲ್ಲ, ಮಾನವ ದೇಹದಲ್ಲಿ ಹೃದಯ ಎಲ್ಲಿದೆ ಅಂತ ಅವರಿಗೆ ಚೆನ್ನಾಗಿ ಗೊತ್ತು. ಒಬ್ಬ ವ್ಯಕ್ತಿ ಎತ್ತರವಾದ ಸ್ಥಳದಿಂದ ಧುಮುಕಿದರೆ ಗುರುತ್ವಾಕರ್ಷಣಾ ಶಕ್ತಿಯಿಂದಾಗಿ ಕೆಳಗೆ ಬಿದ್ದು ಸಾಯುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ನಾವೆಲ್ಲರೂ ಪ್ರಕೃತಿಯ ನಿಯಮಗಳನ್ನು ಪಾಲಿಸುತ್ತೇವೆ.
ದೇವರು ತನ್ನ ಜನರನ್ನು ಸಂಘಟಿಸುವ ವಿಧ
6. ತನ್ನ ಜನರು ವ್ಯವಸ್ಥಿತ ರೀತಿಯಲ್ಲಿ ತನ್ನನ್ನು ಆರಾಧಿಸಬೇಕೆಂದು ಯೆಹೋವನು ಇಷ್ಟಪಡುತ್ತಾನೆಂದು ನಾವು ಹೇಗೆ ಹೇಳಬಹುದು?
6 ನಿಜವಾಗಲೂ ಯೆಹೋವನು ಈ ವಿಶ್ವವನ್ನು ಅದ್ಭುತವಾಗಿ ಸಂಘಟಿಸಿದ್ದಾನೆ. ಹಾಗಾದರೆ ಆತನ ಜನರು ಕೂಡ ವ್ಯವಸ್ಥಿತ ರೀತಿಯಲ್ಲಿ ಆತನನ್ನು ಆರಾಧಿಸಬೇಕೆಂದು ಖಂಡಿತ ಬಯಸುತ್ತಾನೆ. ಅದಕ್ಕಾಗಿ ನಮಗೆ ಬೈಬಲನ್ನು ಕೊಟ್ಟು ತನ್ನನ್ನು ಹೇಗೆ ಆರಾಧಿಸಬೇಕೆಂದು ತಿಳಿಸಿದ್ದಾನೆ. ಹಾಗಾಗಿ ಆತನು ಬೈಬಲ್ ಮತ್ತು ಸಂಘಟನೆಯ ಮೂಲಕ ಕೊಡುವ ಮಾರ್ಗದರ್ಶನವನ್ನು ಪಾಲಿಸಿದರೆ ಮಾತ್ರ ನಾವು ಸಂತೋಷದಿಂದ, ಸಂತೃಪ್ತಿಯಿಂದ ಜೀವನ ನಡೆಸಲು ಸಾಧ್ಯ.
7. ಬೈಬಲನ್ನು ಬರೆಸಿರುವುದು ದೇವರೇ ಎಂದು ಹೇಗೆ ಗೊತ್ತಾಗುತ್ತದೆ?
7 ದೇವರು ನಮಗೆ ಕೊಟ್ಟಿರುವ ಒಂದು ದೊಡ್ಡ ಉಡುಗೊರೆ ಬೈಬಲ್. ಕೆಲವು ಯೆಹೂದ್ಯರು ಮತ್ತು ಕ್ರೈಸ್ತರು ಬರೆದ ಪುಸ್ತಕಗಳನ್ನು ಒಟ್ಟು ಸೇರಿಸಿ ಬೈಬಲ್ ಅಂತ ಮಾಡಿದ್ದಾರೆ ಎಂದು ಕೆಲವು ಪಂಡಿತರು ಹೇಳುತ್ತಾರೆ. ಆದರೆ ಬೈಬಲನ್ನು ಯಾರು ಬರೆಯಬೇಕು, ಯಾವಾಗ ಬರೆಯಬೇಕು, ಅದರಲ್ಲಿ ಏನು ಬರೆಯಬೇಕು ಎಂದು ತೀರ್ಮಾನಿಸಿರುವುದು ದೇವರು. ಆದ್ದರಿಂದಲೇ ಬೈಬಲಿನ ಎಲ್ಲ ಪುಸ್ತಕಗಳು ದೇವರು ಕೊಟ್ಟಿರುವ ಸಂದೇಶವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಬೈಬಲಿನ ಮೊದಲ ಪುಸ್ತಕದಿಂದ ಕೊನೇ ಪುಸ್ತಕದವರೆಗೂ ಇರುವ ಸಂದೇಶ ಒಂದೇ. ಅದೇನೆಂದರೆ, ಒಂದು “ಸಂತಾನ” ಈ ಭೂಮಿಯನ್ನು ಪುನಃ ಪರದೈಸಾಗಿ ಮಾಡಲಿದೆ. ಯೇಸು ಕ್ರಿಸ್ತನೇ ಆ ಸಂತಾನ. ಆತನ ರಾಜ್ಯವು ಇಡೀ ವಿಶ್ವವನ್ನು ಆಳುವ ಹಕ್ಕು ಯೆಹೋವನಿಗಿದೆ ಎಂದು ರುಜುಪಡಿಸುತ್ತದೆ.—ಆದಿಕಾಂಡ 3:15; ಮತ್ತಾಯ 6:10; ಪ್ರಕಟನೆ 11:15 ಓದಿ.
8. ಇಸ್ರಾಯೇಲ್ಯರ ಮಧ್ಯೆ ಸುವ್ಯವಸ್ಥೆ ಇರಲು ಕಾರಣವೇನು?
8 ದೇವರು ಕೊಟ್ಟ ಧರ್ಮಶಾಸ್ತ್ರವನ್ನು ಇಸ್ರಾಯೇಲ್ಯರು ಪಾಲಿಸಿದರು. ಇದರಿಂದಾಗಿ ಅವರ ಮಧ್ಯೆ ಸುವ್ಯವಸ್ಥೆ ಇತ್ತು. ಉದಾಹರಣೆಗೆ, ‘ದೇವದರ್ಶನದ ಗುಡಾರದ ಬಾಗಲಲ್ಲಿ ಸ್ತ್ರೀಯರು ವ್ಯವಸ್ಥಿತವಾಗಿ ಸೇವೆ ಮಾಡುತ್ತಿದ್ದರು.’ (ವಿಮೋ. 38:8) ಇಸ್ರಾಯೇಲ್ಯರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾವ ಕ್ರಮದಲ್ಲಿ ಹೋಗಬೇಕು ಮತ್ತು ದೇವದರ್ಶನ ಗುಡಾರವನ್ನು ಹೇಗೆ ಸಾಗಿಸಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ನಿರ್ದೇಶನಗಳು ಇದ್ದವು. ನಂತರ, ಯಾಜಕರು ಮತ್ತು ಲೇವಿಯರು ಯಾವ್ಯಾವ ಕೆಲಸಗಳನ್ನು ಮಾಡಬೇಕು ಎಂದು ರಾಜ ದಾವೀದನು ಮಾರ್ಗದರ್ಶನ ಕೊಟ್ಟಿದ್ದನು. (1 ಪೂರ್ವ. 23:1-6; 24:1-3) ಇದನ್ನೆಲ್ಲ ಇಸ್ರಾಯೇಲ್ಯರು ಎಷ್ಟರವರೆಗೆ ಪಾಲಿಸಿದರೋ ಅಷ್ಟರವರೆಗೆ ಅವರಲ್ಲಿ ಸುವ್ಯವಸ್ಥೆ, ಶಾಂತಿ, ಒಗ್ಗಟ್ಟು ಇತ್ತು. ಹೀಗೆ ತನಗೆ ವಿಧೇಯರಾದ ಇಸ್ರಾಯೇಲ್ಯರನ್ನು ಯೆಹೋವನು ಆಶೀರ್ವದಿಸಿದನು.—ಧರ್ಮೋ. 11:26, 27; 28:1-14.
9. ಒಂದನೇ ಶತಮಾನದಲ್ಲಿದ್ದ ಸಭೆಗಳಲ್ಲಿ ಸುವ್ಯವಸ್ಥೆ ಇರಲು ಕಾರಣವೇನು?
9 ಒಂದನೇ ಶತಮಾನದಲ್ಲಿದ್ದ ಸಭೆಗಳಲ್ಲಿ ಕೂಡ ಸುವ್ಯವಸ್ಥೆ ಇತ್ತು. ಆಗಿದ್ದ ಆಡಳಿತ ಮಂಡಲಿ ಸಭೆಗಳಿಗೆ ಮಾರ್ಗದರ್ಶನ ಕೊಡುತ್ತಿತ್ತು. ಮೊದಮೊದಲು ಆಡಳಿತ ಮಂಡಲಿಯಲ್ಲಿ ಅಪೊಸ್ತಲರು ಮಾತ್ರ ಇದ್ದರು. ನಂತರ, ಬೇರೆ ಹಿರಿಯರ ಸೇರ್ಪಡೆ ಆಯಿತು. (ಅ. ಕಾ. 6:1-6; 15:6) ಈ ಆಡಳಿತ ಮಂಡಲಿಯ ಸದಸ್ಯರನ್ನು ಮತ್ತು ಅವರಿಗೆ ಸಹಾಯ ಮಾಡುತ್ತಿದ್ದ ಬೇರೆ ಕೆಲವರನ್ನು ಯೆಹೋವನು ಸಭೆಗಳಿಗೆ ಪತ್ರ ಬರೆಯಲು ಪ್ರೇರಿಸಿದನು. ಆ ಪತ್ರಗಳಲ್ಲಿ ಬುದ್ಧಿವಾದ ಮತ್ತು ನಿರ್ದೇಶನಗಳಿದ್ದವು. (1 ತಿಮೊ. 3:1-13; ತೀತ 1:5-9) ಆಡಳಿತ ಮಂಡಲಿ ನೀಡಿದ ನಿರ್ದೇಶನವನ್ನು ಪಾಲಿಸಿದ್ದರಿಂದ ಸಭೆಗಳಿಗೆ ಯಾವ ಪ್ರಯೋಜನ ಸಿಕ್ಕಿತು?
10. ಆಡಳಿತ ಮಂಡಲಿ ನೀಡಿದ ನಿರ್ದೇಶನವನ್ನು ಪಾಲಿಸಿದ್ದರಿಂದ ಸಭೆಗಳಿಗೆ ಯಾವ ಪ್ರಯೋಜನ ಸಿಕ್ಕಿತು? (ಲೇಖನದ ಆರಂಭದ ಚಿತ್ರ ನೋಡಿ.)
10 ಅಪೊಸ್ತಲರ ಕಾರ್ಯಗಳು 16:4, 5 ಓದಿ. ಒಂದನೇ ಶತಮಾನದಲ್ಲಿ ಕೆಲವು ಸಹೋದರರು ಸಭೆಗಳನ್ನು ಭೇಟಿಮಾಡಿ “ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರೀಪುರುಷರೂ ತೀರ್ಮಾನಿಸಿದ ನಿಯಮಗಳನ್ನು ಪಾಲಿಸುವಂತೆ” ತಿಳಿಸಿದರು. ಆಡಳಿತ ಮಂಡಲಿ ನೀಡಿದ ನಿಯಮಗಳನ್ನು ಪಾಲಿಸಿದ್ದರಿಂದ “ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು.” ಇದರಿಂದ ನಾವೇನು ಕಲಿಯಬಹುದು?
ನೀವು ನಿರ್ದೇಶನವನ್ನು ಪಾಲಿಸುತ್ತೀರಾ?
11. ದೇವರ ಸಂಘಟನೆ ನಿರ್ದೇಶನ ಕೊಟ್ಟಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಹೋದರರು ಏನು ಮಾಡಬೇಕು?
11 ದೇವರ ಸಂಘಟನೆ ಕೊಡುವ ನಿರ್ದೇಶನಗಳನ್ನು ಶಾಖಾ ಸಮಿತಿಗಳು, ದೇಶೀಯ ಸಮಿತಿಗಳು, ಸಂಚರಣ ಮೇಲ್ವಿಚಾರಕರು ಮತ್ತು ಹಿರಿಯರು ಪಾಲಿಸುತ್ತಾರೆ. ನಿರ್ದೇಶನಗಳಿಗೆ ನಾವೆಲ್ಲರೂ ಅಧೀನರಾಗಿರಬೇಕು ಎಂದು ಬೈಬಲೇ ಹೇಳುತ್ತದೆ. (ಧರ್ಮೋ. 30:16; ಇಬ್ರಿ. 13:7, 17) ಯೆಹೋವನಿಗೆ ನಿಷ್ಠೆ ತೋರಿಸುವವರು ಸಂಘಟನೆಯ ವಿರುದ್ಧ ದಂಗೆ ಏಳುವುದಿಲ್ಲ ಮತ್ತು ಸಂಘಟನೆ ಕೊಡುವ ನಿರ್ದೇಶನಗಳ ಬಗ್ಗೆ ದೂರುವುದಿಲ್ಲ. ಒಂದನೇ ಶತಮಾನದಲ್ಲಿ ಹಿರಿಯರಿಗೆ ಸ್ವಲ್ಪವೂ ಗೌರವ ತೋರಿಸದ ದಿಯೊತ್ರೇಫನಂತೆ ಆಗಲು ನಾವು ಇಷ್ಟಪಡುವುದಿಲ್ಲ. (3 ಯೋಹಾನ 9, 10 ಓದಿ.) ಸಂಘಟನೆ ಕೊಡುವ ನಿರ್ದೇಶನಗಳನ್ನು ಪಾಲಿಸಿದರೆ ಸಭೆಯಲ್ಲಿ ಶಾಂತಿ, ಒಗ್ಗಟ್ಟಿರುತ್ತದೆ. ನಾವು ಹೀಗೆ ಕೇಳಿಕೊಳ್ಳೋಣ: ‘ಯೆಹೋವನಿಗೆ ನಿಷ್ಠೆ ತೋರಿಸುವಂತೆ ನಾನು ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸುತ್ತೇನಾ? ದೇವರ ಸಂಘಟನೆ ನೀಡುವ ನಿರ್ದೇಶಗಳನ್ನು ಕೂಡಲೇ ಪಾಲಿಸುತ್ತೇನಾ?’
12. ಸಭೆಯಲ್ಲಿ ಹಿರಿಯರನ್ನು ಮತ್ತು ಸಹಾಯಕ ಸೇವಕರನ್ನು ಹೇಗೆ ನೇಮಿಸಲಾಗುತ್ತದೆ?
12 ಇತ್ತೀಚೆಗೆ ಆಡಳಿತ ಮಂಡಲಿ ಸಭೆಗಳಲ್ಲಿ ಹಿರಿಯರನ್ನು ಮತ್ತು ಸಹಾಯಕ ಸೇವಕರನ್ನು ನೇಮಿಸುವ ವಿಧಾನವನ್ನು ಬದಲಾಯಿಸಿತು. ಅದರ ಬಗ್ಗೆ 2014, ನವೆಂಬರ್ 15ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಲೇಖನದಲ್ಲಿದೆ. ಒಂದನೇ ಶತಮಾನದಲ್ಲಿ ಹಿರಿಯರನ್ನು ಮತ್ತು ಸಹಾಯಕ ಸೇವಕರನ್ನು ನೇಮಿಸುವ ಅಧಿಕಾರವನ್ನು ಆಡಳಿತ ಮಂಡಲಿ ಸಂಚರಣ ಮೇಲ್ವಿಚಾರಕರಿಗೆ ನೀಡಿತ್ತು ಎಂದು ಆ ಲೇಖನ ವಿವರಿಸಿತು. 2014ರ ಸೆಪ್ಟೆಂಬರ್ ತಿಂಗಳಿಂದ ಈ ಬದಲಾವಣೆ ಜಾರಿಗೆ ಬಂತು. ಹಿರಿಯರು ಶಿಫಾರಸ್ಸು ಮಾಡಿದ ಸಹೋದರನನ್ನು ನೇಮಕ ಮಾಡುವ ಮುಂಚೆ ಸಂಚರಣ ಮೇಲ್ವಿಚಾರಕ ಆ ಸಹೋದರನ ಬಗ್ಗೆ ಮತ್ತು ಅವನ ಕುಟುಂಬದ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದಕ್ಕಾಗಿ ಅವರು ಆ ಸಹೋದರನ ಜೊತೆ ಸೇವೆಗೆ ಹೋಗಬಹುದು. (1 ತಿಮೊ. 3:4, 5) ನಂತರ ಸಂಚರಣ ಮೇಲ್ವಿಚಾರಕ ಮತ್ತು ಆ ಸಭೆಯ ಹಿರಿಯರು ಒಟ್ಟುಸೇರಿ ಒಬ್ಬ ಹಿರಿಯನಲ್ಲಿ ಅಥವಾ ಸಹಾಯಕ ಸೇವಕನಲ್ಲಿ ಇರಬೇಕಾದ ಗುಣಗಳು ಅವನಲ್ಲಿದೆಯಾ ಎಂದು ಬೈಬಲಿನಿಂದ ಪರೀಕ್ಷಿಸುತ್ತಾರೆ.—1 ತಿಮೊ. 3:1-10, 12, 13; 1 ಪೇತ್ರ 5:1-3.
13. ಹಿರಿಯರು ಸಲಹೆಸೂಚನೆಗಳನ್ನು ಕೊಟ್ಟಾಗ ನಾವೇನು ಮಾಡಬೇಕು?
13 ಸಭೆ ಚೆನ್ನಾಗಿ ನಡೆಯಬೇಕು, ಅದಕ್ಕೆ ಯಾವುದೇ ಹಾನಿಯಾಗಬಾರದು ಎಂದು ಹಿರಿಯರು ಬಯಸುತ್ತಾರೆ. ಹಾಗಾಗಿ ಅವರು ಬೈಬಲಿನಿಂದ ಸಲಹೆಸೂಚನೆಗಳನ್ನು ಕೊಡುತ್ತಾರೆ. ಅವುಗಳನ್ನು ನಾವು ಪಾಲಿಸಬೇಕು. ಪಾಲಿಸಿದರೆ ನಮಗೆ ಪ್ರಯೋಜನವಾಗುತ್ತದೆ. (1 ತಿಮೊ. 6:3) ಒಂದನೇ ಶತಮಾನದಲ್ಲಿ ಕೆಲವರು “ಅಕ್ರಮವಾಗಿ” ನಡೆದುಕೊಳ್ಳುತ್ತಿದ್ದರು. ಅವರು ಮಾಡಬೇಕಾದ ಕೆಲಸಗಳನ್ನು ಬಿಟ್ಟು ಬೇರೆಯವರ ವಿಷಯದಲ್ಲಿ ತಲೆಹಾಕುತ್ತಿದ್ದರು. ಹಿರಿಯರು ಅವರಿಗೆ ಬುದ್ಧಿಹೇಳಿದರೂ ಅವರು ಬದಲಾಗಲಿಲ್ಲ. ಇಂಥವರನ್ನು ‘ಗುರುತಿಸಿ ಅವರೊಂದಿಗೆ ಸಹವಾಸಮಾಡುವುದನ್ನು ನಿಲ್ಲಿಸಿರಿ’ ಎಂದು ಪೌಲ ಹೇಳಿದನು. ಹಾಗಂತ ಅವರನ್ನು ಶತ್ರುಗಳಂತೆ ನೋಡಬಾರದಿತ್ತು. (2 ಥೆಸ. 3:11-15) ಇದೇ ರೀತಿ ಇಂದು ಸಭೆಯಲ್ಲಿ ಯಾರಾದರೂ ದೇವರ ನಿಯಮ ಮುರಿದರೆ ಉದಾಹರಣೆಗೆ, ಸಾಕ್ಷಿಯಲ್ಲದ ವ್ಯಕ್ತಿಯ ಜೊತೆ ಪ್ರೀತಿಪ್ರೇಮ ಶುರುಮಾಡಿಕೊಂಡರೆ ಅಂಥವರನ್ನು ತಿದ್ದಲು ಹಿರಿಯರು ಪ್ರಯತ್ನಿಸುತ್ತಾರೆ. (1 ಕೊರಿಂ. 7:39) ಅವರು ಹಿರಿಯರ ಮಾತು ಕೇಳದೇ ಹೋದರೆ ಇಂಥ ನಡತೆ ಸಭೆಯ ಹೆಸರನ್ನು ಹೇಗೆ ಹಾಳುಮಾಡುತ್ತದೆ ಎನ್ನುವುದರ ಬಗ್ಗೆ ಹಿರಿಯರು ಸಭೆಗೆ ಭಾಷಣ ಕೊಡಬಹುದು. ಒಂದುವೇಳೆ ಅಂಥ ವ್ಯಕ್ತಿ ನಿಮ್ಮ ಸಭೆಯಲ್ಲೇ ಇದ್ದರೆ, ಅವರು ಯಾರು ಅಂತನೂ ನಿಮಗೆ ಗೊತ್ತಿದ್ದರೆ ಅವರ ಜೊತೆ ಹೇಗೆ ನಡೆದುಕೊಳ್ಳುತ್ತೀರಿ? ಆಧ್ಯಾತ್ಮಿಕ ಚಟುವಟಿಕೆಗಳನ್ನು ಬಿಟ್ಟು ಅವರ ಜೊತೆ ಬೇರೆ ಸಮಯದಲ್ಲಿ ಸಹವಾಸ ಮಾಡದಿದ್ದರೆ ಅವರಿಗೆ ತಪ್ಪಿನ ಅರಿವಾಗುತ್ತದೆ ಮತ್ತು ತಮ್ಮಿಂದ ಯೆಹೋವನಿಗೆ ನೋವಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ತಮ್ಮ ನಡತೆಯನ್ನು ಬದಲಾಯಿಸಿಕೊಳ್ಳುತ್ತಾರೆ.[1]—ಟಿಪ್ಪಣಿ ನೋಡಿ.
ಸಭೆಯ ಶುದ್ಧತೆ, ಶಾಂತಿ, ಒಗ್ಗಟ್ಟನ್ನು ಕಾಪಾಡಿ
14. ಸಭೆಯ ಶುದ್ಧತೆಯನ್ನು ಕಾಪಾಡಲು ನಾವು ಹೇಗೆ ಸಹಾಯ ಮಾಡಬಹುದು?
14 ಸಭೆಯ ಶುದ್ಧತೆಯನ್ನು ಕಾಪಾಡಲು ನಾವು ಏನು ಮಾಡಬೇಕು ಎಂದು ದೇವರ ವಾಕ್ಯ ಹೇಳುತ್ತದೆ. ಕೊರಿಂಥ ಸಭೆಯಲ್ಲಿ ಏನಾಯಿತೆಂದು ನೋಡಿ. ಅಲ್ಲಿನ ಸಹೋದರ ಸಹೋದರಿಯರ ಮೇಲೆ ಪೌಲನಿಗೆ ತುಂಬ ಪ್ರೀತಿ ಇತ್ತು. ಅವರಲ್ಲಿ ಹೆಚ್ಚಿನವರು ಸತ್ಯ ಕಲಿಯಲು ಪೌಲ ಸಹಾಯ ಮಾಡಿದ್ದನು. (1 ಕೊರಿಂ. 1:1, 2) ಅವರಲ್ಲಿ ಒಬ್ಬ ಸಹೋದರ ಅನೈತಿಕ ಜೀವನ ನಡೆಸುತ್ತಿದ್ದಾನೆ ಮತ್ತು ಸಹೋದರರು ಅವನ ಜೊತೆ ಸಹವಾಸ ಮಾಡುತ್ತಿದ್ದಾರೆ ಎಂದು ಪೌಲನಿಗೆ ಗೊತ್ತಾದಾಗ ಅವನಿಗೆ ಎಷ್ಟು ಬೇಜಾರಾಗಿರಬೇಕು! ಅವನನ್ನು “ಸೈತಾನನ ವಶಕ್ಕೆ ಒಪ್ಪಿಸಿಕೊಡಿರಿ” ಎಂದು ಪೌಲ ಆ ಸಭೆಯ ಹಿರಿಯರಿಗೆ ಹೇಳಿದನು. ಅಂದರೆ ಆ ವ್ಯಕ್ತಿಯನ್ನು ಸಭೆಯಿಂದ ಹೊರಗೆ ಹಾಕಬೇಕಿತ್ತು. (1 ಕೊರಿಂ. 5:1, 5-7, 12) ಇಂದು ಕೂಡ ಗಂಭೀರ ತಪ್ಪು ಮಾಡಿ ತಿದ್ದಿಕೊಳ್ಳದವರನ್ನು ಹಿರಿಯರು ಸಭೆಯಿಂದ ಬಹಿಷ್ಕಾರ ಮಾಡುತ್ತಾರೆ. ಆಗ ಅಂಥ ವ್ಯಕ್ತಿಯ ಜೊತೆ ಹೇಗಿರಬೇಕೆಂದು ಬೈಬಲ್ ಹೇಳುತ್ತದೋ ಹಾಗೇ ನಡೆದುಕೊಳ್ಳುತ್ತೇವಾ? ಹಾಗೆ ನಡಕೊಂಡರೆ ನಾವು ಸಭೆಯ ಶುದ್ಧತೆಯನ್ನು ಕಾಪಾಡಲು ಸಹಾಯ ಮಾಡುತ್ತೇವೆ. ಅಷ್ಟೇ ಅಲ್ಲ ಇದರಿಂದ ಆ ವ್ಯಕ್ತಿಗೂ ತನ್ನ ತಪ್ಪಿನ ಅರಿವಾಗಿ ತಿದ್ದಿಕೊಳ್ಳಲು ಮತ್ತು ಯೆಹೋವನ ಕ್ಷಮೆ ಬೇಡಲು ಸಹಾಯ ಆಗುತ್ತದೆ.
15. ನಾವು ಸಭೆಯಲ್ಲಿ ಶಾಂತಿಯನ್ನು ಹೇಗೆ ಕಾಪಾಡಿಕೊಳ್ಳಬಹುದು?
15 ಕೊರಿಂಥ ಸಭೆಯಲ್ಲಿ ಇನ್ನೊಂದು ಸಮಸ್ಯೆಯೂ ಇತ್ತು. ಕೆಲವು ಸಹೋದರರ ಜಗಳ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದನ್ನು ಮಾಡುವುದಕ್ಕಿಂತ “ನೀವೇ ಏಕೆ ಅನ್ಯಾಯವನ್ನು ಸಹಿಸಬಾರದು?” ಎಂದು ಪೌಲ ಅವರನ್ನು ಕೇಳಿದನು. (1 ಕೊರಿಂ. 6:1-8) ಇಂದು ಸಭೆಯಲ್ಲಿರುವ ಕೆಲವರು ಸಹೋದರರ ಜೊತೆ ವ್ಯಾಪಾರ-ವ್ಯವಹಾರ ಮಾಡಿ ನಷ್ಟವಾದ ಮೇಲೆ ‘ನನ್ನ ಹಣ ಹೋಯಿತು, ನನಗೆ ಮೋಸ ಆಗಿದೆ’ ಅಂತ ಸಹೋದರರ ವಿರುದ್ಧನೇ ಕೇಸು ಹಾಕಿದ್ದಾರೆ. ಇದರಿಂದ ಆಗುವ ಪರಿಣಾಮ ಏನು? ಜನರು ಯೆಹೋವನ ಬಗ್ಗೆ, ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಾಗಿ ಮಾತಾಡಬಹುದು. ಸಭೆಯಲ್ಲಿ ಬೇರೆ ಸಮಸ್ಯೆಗಳೂ ಹುಟ್ಟಿಕೊಳ್ಳಬಹುದು. ಆದರೆ ಸಹೋದರರೊಂದಿಗೆ ಶಾಂತಿಯಿಂದ ಇರಿ ಎಂದು ದೇವರ ವಾಕ್ಯ ಹೇಳುತ್ತದೆ. ವ್ಯಾಪಾರದಲ್ಲಿ ನಷ್ಟವಾದರೂ ಈ ನಿಯಮವನ್ನು ನಾವು ಪಾಲಿಸಬೇಕು.[2] (ಟಿಪ್ಪಣಿ ನೋಡಿ.) ಇಂಥ ದೊಡ್ಡ ದೊಡ್ಡ ಸಮಸ್ಯೆಗಳನ್ನೂ ಬಗೆಹರಿಸಲು ಯೇಸು ಕೊಟ್ಟ ಸಲಹೆ ನಮಗೆ ಸಹಾಯಮಾಡುತ್ತದೆ. (ಮತ್ತಾಯ 5:23, 24; 18:15-17 ಓದಿ.) ಆತನ ನಿರ್ದೇಶನವನ್ನು ನಾವು ಪಾಲಿಸಿದರೆ ಸಭೆಯಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಕಾಪಾಡಿಕೊಳ್ಳುತ್ತೇವೆ.
16. ದೇವಜನರು ಒಗ್ಗಟ್ಟಿನಿಂದಿರುವುದಕ್ಕೆ ಕಾರಣವೇನು?
16 “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” ಎಂದು ಬೈಬಲ್ ಹೇಳುತ್ತದೆ. (ಕೀರ್ತ. 133:1) ಇಸ್ರಾಯೇಲ್ಯರು ಯೆಹೋವನ ಮಾತನ್ನು ಪಾಲಿಸಿದಾಗ ಅವರ ಮಧ್ಯೆ ಸುವ್ಯವಸ್ಥೆ, ಒಗ್ಗಟ್ಟು ಇತ್ತು. ದೇವರು ತನ್ನ ಜನರನ್ನು “ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು” ಎಂದು ಮುಂತಿಳಿಸಿದ್ದನು. (ಮೀಕ 2:12) ಜನರು ತನ್ನ ವಾಕ್ಯದಿಂದ ಸತ್ಯ ಕಲಿತು ಐಕ್ಯವಾಗಿ ತನ್ನನ್ನು ಆರಾಧಿಸುತ್ತಾರೆ ಎಂದೂ ಮುಂತಿಳಿಸಿದ್ದನು. “ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು” ಎಂದು ಹೇಳಿದ್ದನು. (ಚೆಫ. 3:9) ನಾವೆಲ್ಲರೂ ಅನ್ಯೋನ್ಯವಾಗಿದ್ದು ಯೆಹೋವನನ್ನು ಆರಾಧಿಸುತ್ತಿರುವುದು ನಮಗಿರುವ ಸದವಕಾಶ ಅಲ್ಲವೇ?
17. ಸಭೆಯಲ್ಲಿ ಯಾರಾದರೂ ಗಂಭೀರ ತಪ್ಪು ಮಾಡಿದರೆ ಹಿರಿಯರು ಏನು ಮಾಡಬೇಕು?
17 ಸಭೆಯಲ್ಲಿ ಯಾರಾದರೂ ಗಂಭೀರ ಪಾಪ ಮಾಡಿದರೆ ಅವರಿಗೆ ಕೂಡಲೇ ಗಮನಕೊಟ್ಟು ಪ್ರೀತಿಯಿಂದ ಹಿರಿಯರು ತಿದ್ದಬೇಕು. ಹಿರಿಯರು ಸಭೆಯ ಮೇಲೆ ಕೆಟ್ಟ ಪ್ರಭಾವ ಆಗದಂತೆ ನೋಡಿಕೊಳ್ಳಬೇಕು ಮತ್ತು ಸಭೆಯಲ್ಲಿ ಶುದ್ಧತೆ, ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. (ಜ್ಞಾನೋ. 15:3) ಕೊರಿಂಥ ಸಭೆಯ ಸಹೋದರರ ಮೇಲೆ ಪೌಲನಿಗೆ ಪ್ರೀತಿ ಇದ್ದ ಕಾರಣ ಅವರು ತಪ್ಪು ಮಾಡಿದಾಗ ತಿದ್ದಿದನು. ಇದನ್ನು ಅವನು ಕೊರಿಂಥ ಸಭೆಗೆ ಬರೆದ ಮೊದಲನೇ ಪತ್ರದಲ್ಲಿ ಓದುತ್ತೇವೆ. ಆ ಹಿರಿಯರು ಪೌಲನ ನಿರ್ದೇಶನವನ್ನು ಕೂಡಲೇ ಪಾಲಿಸಿದರು. ಇದು ನಮಗೆ ಹೇಗೆ ಗೊತ್ತು? ಕೆಲವು ತಿಂಗಳ ನಂತರ ಪೌಲ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಆ ಹಿರಿಯರನ್ನು ಪ್ರಶಂಸಿಸಿದನು. ಸಹೋದರನೊಬ್ಬ “ತನಗೆ ಅರಿವಿಲ್ಲದೆಯೇ ಯಾವುದೋ ತಪ್ಪುಹೆಜ್ಜೆಯನ್ನು ಇಡುವುದಾದರೆ” ಕೂಡಲೇ ಹಿರಿಯರು ಅವನನ್ನು ಪ್ರೀತಿಯಿಂದ ತಿದ್ದಬೇಕು.—ಗಲಾ. 6:1.
18. (ಎ) ಒಂದನೇ ಶತಮಾನದಲ್ಲಿದ್ದ ಸಭೆಗಳಿಗೆ ದೇವರು ಕೊಟ್ಟ ಮಾರ್ಗದರ್ಶನದಿಂದ ಹೇಗೆ ಸಹಾಯವಾಯಿತು? (ಬಿ) ಮುಂದಿನ ಲೇಖನದಲ್ಲಿ ನಾವು ಏನು ಚರ್ಚಿಸಲಿದ್ದೇವೆ?
18 ಒಂದನೇ ಶತಮಾನದ ಕ್ರೈಸ್ತರು ದೇವರು ಕೊಟ್ಟ ಮಾರ್ಗದರ್ಶನಕ್ಕೆ ಕಿವಿಗೊಟ್ಟದ್ದರಿಂದ ಸಭೆಯ ಶುದ್ಧತೆಯನ್ನು ಕಾಪಾಡಲು ಸಾಧ್ಯವಾಯಿತು ಮತ್ತು ಅವರ ಮಧ್ಯೆ ಶಾಂತಿ, ಒಗ್ಗಟ್ಟು ಇತ್ತು. (1 ಕೊರಿಂ. 1:10; ಎಫೆ. 4:11-13; 1 ಪೇತ್ರ 3:8) ಹಾಗಾಗಿ “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ” ಸುವಾರ್ತೆ ಸಾರಲು ಅವರಿಗೆ ಸಾಧ್ಯವಾಯಿತು. (ಕೊಲೊ. 1:23) ಇಂದು ಸಹ ಯೆಹೋವನ ಜನರು ಒಗ್ಗಟ್ಟಿನಿಂದ ಇದ್ದಾರೆ, ಸಂಘಟಿತರಾಗಿದ್ದಾರೆ. ಇದರಿಂದ ಭೂಮಿಯ ಎಲ್ಲಾ ಕಡೆ ಸುವಾರ್ತೆ ಸಾರಲು ಅವರಿಂದ ಆಗುತ್ತಿದೆ. ಮುಂದಿನ ಲೇಖನದಲ್ಲಿ, ವಿಶ್ವದ ಪರಮಾಧಿಕಾರಿಯಾದ ಯೆಹೋವನಿಗೆ ಮಹಿಮೆ ತರುವುದು ಮತ್ತು ಆತನ ವಾಕ್ಯವಾದ ಬೈಬಲಿನ ಮಾರ್ಗದರ್ಶನಕ್ಕೆ ಕಿವಿಗೊಡುವುದೇ ದೇವಜನರ ಮನದಾಸೆ ಎನ್ನುವುದಕ್ಕೆ ಇನ್ನಷ್ಟು ಪುರಾವೆಗಳನ್ನು ನೋಡಲಿದ್ದೇವೆ.—ಕೀರ್ತ. 71:15, 16.
^ [1] (ಪ್ಯಾರ 13) ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು, ಪುಟ 134-136ನ್ನು ನೋಡಿ.
^ [2] (ಪ್ಯಾರ 15) ಒಬ್ಬ ಸಹೋದರನ ವಿರುದ್ಧ ಯಾವಾಗ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 255ರಲ್ಲಿರುವ ಪಾದಟಿಪ್ಪಣಿ ನೋಡಿ.