ದೆವ್ವಗಳ ಬೋಧನಗಳ ವಿರುದ್ಧ ದೈವಿಕ ಬೋಧನ
“ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರು.”—1 ತಿಮೊಥೆಯ 4:1.
1. ಯಾವ ಹೋರಾಟದ ನಡುವೆ ಕ್ರೈಸ್ತರು ಇದ್ದಾರೆ?
ಒಂದು ಯುದ್ಧ ವಲಯದಲ್ಲಿ ನಿಮ್ಮ ಇಡೀ ಜೀವಿತವನ್ನೇ ಕಳೆಯುವುದನ್ನು ಭಾವಿಸಿ. ಮಲಗಲು ಹೋಗುವಾಗ ಬಂದೂಕಿನ ಸದ್ದನ್ನು ಕೇಳಿ, ಫಿರಂಗಿಯ ಶಬ್ದವನ್ನು ಕೇಳುತ್ತಾ ಎದ್ದೇಳುವುದು ಹೇಗಿದ್ದೀತು? ಅಸಂತೋಷಕರವಾಗಿ, ಲೋಕದ ಕೆಲವು ಭಾಗಗಳಲ್ಲಿ, ಜನರು ಹೀಗೆಯೇ ಜೀವಿಸುತ್ತಾರೆ. ಆದರೆ ಆತ್ಮಿಕಾರ್ಥದಲ್ಲಿ, ಸಕಲ ಕ್ರೈಸ್ತರು ಇದೇ ರೀತಿ ಜೀವಿಸುತ್ತಾರೆ. ಅವರು ಸುಮಾರು 6,000 ವರ್ಷಗಳಿಂದ ರಭಸವಾಗುತ್ತಿರುವ ಮತ್ತು ನಮ್ಮ ದಿನಗಳಲ್ಲಿ ತೀಕ್ಷೈವಾಗಿರುವ ಒಂದು ಮಹಾ ಕದನದ ಮಧ್ಯದಲ್ಲಿ ಜೀವಿಸುತ್ತಿದ್ದಾರೆ. ಈ ಯುಗದೀರ್ಘ ಯುದ್ಧವು ಯಾವುದು? ಅದು ಸುಳ್ಳುಗಳ ವಿರುದ್ಧ ಸತ್ಯದ, ದೆವ್ವಗಳ ಬೋಧನೆಗಳ ವಿರುದ್ಧ ದೈವಿಕ ಬೋಧನೆಯ ಹೋರಾಟವಾಗಿರುತ್ತದೆ. ಇದನ್ನು ಮಾನವ ಇತಿಹಾಸದಲ್ಲಿಯೆ ಅತಿ ಕರುಣಾರಹಿತ ಮತ್ತು ಅತಿ ಮಾರಕ ಹೋರಾಟವೆಂದು—ವಿರುದ್ಧ ಪಕ್ಷಗಳಲ್ಲೊಂದರ ಕಾರ್ಯಗಳ ವಿಷಯದಲ್ಲಿಯಾದರೂ—ಕರೆಯುವುದು ಅತಿಶಯೋಕ್ತಿಯಲ್ಲ.
2. (ಎ) ಪೌಲನಿಗನುಸಾರ, ಯಾವ ಎರಡು ಪಕ್ಷಗಳು ಒಂದಕ್ಕೊಂದು ವಿರುದ್ಧವಾಗಿವೆ? (ಬಿ) “ನಂಬಿಕೆ” ಎಂಬುದರ ಬಗ್ಗೆ ಪೌಲನ ಅರ್ಥ ಏನಾಗಿತ್ತು?
2 ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದಾಗ ಈ ಹೋರಾಟದ ಎರಡು ಪಕ್ಷಗಳನ್ನು ತಿಳಿಸುತ್ತಾನೆ: “ಆದರೂ ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿಗಿ ಹೇಳುತ್ತಾನೆ.” (1 ತಿಮೊಥೆಯ 4:1) “ಮುಂದಣ ದಿನಗಳಲ್ಲಿ” ದೆವ್ವಗಳ ಬೋಧನೆಗಳು ವಿಶೇಷವಾಗಿ ಪ್ರಭಾವಶಾಲಿಯಾಗಿರುವವು ಎಂಬುದನ್ನು ಗಮನಿಸಿರಿ. ಪೌಲನ ದಿನದಿಂದ ವೀಕ್ಷಿಸುವಾಗ, ನಾವು ಅಂಥ ಸಮಯದಲ್ಲಿ ಜೀವಿಸುತ್ತಿದ್ದೇವೆ. “ನಂಬಿಕೆ” ಎಂದು ಕರೆಯಲ್ಪಡುವಂಥದ್ದು ದೆವ್ವಗಳ ಬೋಧನೆಗಳಿಗೆ ವಿರೋಧವಾಗಿರುವುದನ್ನೂ ಗಮನಿಸಿ. ಇಲ್ಲಿ, “ನಂಬಿಕೆ”ಯು, ಬೈಬಲ್ನಲ್ಲಿರುವ ದೇವರ ದೈವಿಕವಾಗಿ ಪ್ರೇರಿತ ನುಡಿಗಳ ಮೇಲೆ ಆಧಾರಿತ, ದೈವಿಕ ಬೋಧನೆಯನ್ನು ಪ್ರತಿನಿಧೀಕರಿಸುತ್ತದೆ. ಅಂಥ ನಂಬಿಕೆಯು ಜೀವದಾಯಕವಾದದ್ದಾಗಿದೆ. ಅದು ಒಬ್ಬ ಕ್ರೈಸ್ತನಿಗೆ ದೇವರ ಚಿತ್ತವನ್ನು ಮಾಡಲು ಬೋಧಿಸುತ್ತದೆ. ಅದು ನಿತ್ಯ ಜೀವಕ್ಕೆ ನಡಿಸುವ ಸತ್ಯವಾಗಿದೆ.—ಯೋಹಾನ 3:16; 6:40.
3. (ಎ) ಸತ್ಯ ಮತ್ತು ಸುಳ್ಳುಗಳ ನಡುವಿನ ಯುದ್ಧದಲ್ಲಿ ಆಹುತಿಗಳಿಗೆ ಏನಾಗುತ್ತದೆ? (ಬಿ) ದೆವ್ವಗಳ ಬೋಧನೆಗಳ ಹಿಂದೆ ಯಾರಿದ್ದಾನೆ?
3 ನಂಬಿಕೆಯಿಂದ ಬಿದ್ದು ಹೋಗುವ ಯಾರೂ ಕೂಡ ನಿತ್ಯಜೀವವನ್ನು ಕಳೆದುಕೊಳ್ಳುತ್ತಾರೆ. ಅವರು ಯುದ್ಧದಲ್ಲಿ ಅನಾಹುತಕ್ಕೀಡಾದವರಾಗಿರುತ್ತಾರೆ. ದೆವ್ವಗಳ ಬೋಧನೆಗಳ ಮೂಲಕ ತಾನು ವಂಚಿಸಲ್ಪಡುವಂತೆ ಬಿಟ್ಟದ್ದಕ್ಕೆ ಎಂತಹ ದುರಂತಮಯ ಪರಿಣಾಮ! (ಮತ್ತಾಯ 24:24) ನಾವು ವೈಯಕ್ತಿಕವಾಗಿ ಅನಾಹುತಕ್ಕೊಳಗಾಗುವುದನ್ನು ಹೇಗೆ ತಡೆಯಬಲ್ಲೆವು? “ದೆವ್ವಗಳ ಒಡೆಯ,” ಪಿಶಾಚನಾದ ಸೈತಾನನ ಉದ್ದೇಶವನ್ನು ಮಾತ್ರ ನೆರವೇರಿಸುವ, ಇಂಥ ಸುಳ್ಳಿನ ಬೋಧನೆಗಳನ್ನು ಪೂರ್ಣವಾಗಿ ತಿರಸ್ಕರಿಸುವುದರ ಮೂಲಕವೆ. (ಮತ್ತಾಯ 12:24) ಮುನ್ನಿರೀಕ್ಷಿಸಬಹುದಾಗುವಂತೆ, “ಸುಳ್ಳಿಗೆ ಮೂಲಪುರುಷನು” ಸೈತಾನನಾಗಿರುವುದರಿಂದ, ಸೈತಾನನ ಬೋಧನೆಗಳು ಸುಳ್ಳಾಗಿವೆ. (ಯೋಹಾನ 8:44) ನಮ್ಮ ಮೊದಲ ಹೆತ್ತವರನ್ನು ವಂಚಿಸಲು ಅವನು ಸುಳ್ಳುಗಳನ್ನು ಜಾಣತನದಿಂದ ಹೇಗೆ ಬಳಸಿದನೆಂದು ಗಮನಿಸಿರಿ.
ದೆವ್ವಗಳ ಬೋಧನೆಗಳು ಪ್ರಕಟಿಸಲ್ಪಟ್ಟದ್ದು
4, 5. ಸೈತಾನನು ಹವ್ವಳಿಗೆ ಯಾವ ಸುಳ್ಳನ್ನು ಹೇಳಿದನು, ಮತ್ತು ಅದು ಅಷ್ಟೊಂದು ಕೆಟ್ಟದ್ದಾಗಿತ್ತು ಯಾಕೆ?
4 ಈ ಘಟನೆಗಳು ಬೈಬಲಿನಲ್ಲಿ ಆದಿಕಾಂಡ 3:1-5 ರಲ್ಲಿ ದಾಖಲಿಸಲ್ಪಟ್ಟಿವೆ. ಒಂದು ಸರ್ಪವನ್ನು ಬಳಸುತ್ತಾ, ಸೈತಾನನು ಹವ್ವಳನ್ನು ಸಮೀಪಿಸಿ ಕೇಳಿದ್ದು: “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?” ಆ ಪ್ರಶ್ನೆಯು ಹಾನಿಕರವಲ್ಲದಂತೆ ತೋರುತ್ತದೆ, ಆದರೆ ಅದರ ಕಡೆಗೆ ಮತ್ತೊಮ್ಮೆ ನೋಡಿರಿ. “ನಿಜವೋ?” ‘ದೇವರು ಅಂಥ ಒಂದು ವಿಷಯವನ್ನು ಯಾಕೆ ಹೇಳಾನು?’ ಎಂದು ಬೆರಗುಗೊಂಡು ಹೇಳುವವನಂತೆ ಸೈತಾನನು ಕಾಣಿಸಿಕೊಳ್ಳುತ್ತಾನೆ.
5 ಅವಳ ನಿರಪರಾಧಿತ್ವದಲ್ಲಿ, ಹಾಗಿರುವುದು ನಿಜವೆಂದು ಹವ್ವಳು ಸೂಚಿಸುತ್ತಾಳೆ. ಈ ವಿಷಯದ ಮೇಲೆ, ಒಳ್ಳೇದು ಮತ್ತು ಕೆಟ್ಟದರ ಜ್ಞಾನದ ಮರದಿಂದ ತಾವು ತಿನ್ನುವಲ್ಲಿ ಸಾಯುವೆವೆಂದು ಆದಾಮನಿಗೆ ದೇವರು ಹೇಳಿರುವ, ದೈವಿಕ ಬೋಧನೆಯನ್ನು ಅವಳು ತಿಳಿದಿದ್ದಳು. (ಆದಿಕಾಂಡ 2:16, 17) ವ್ಯಕ್ತವಾಗಿಯೆ ಸೈತಾನನ ಪ್ರಶ್ನೆಯು ಅವಳ ಅಭಿರುಚಿಯನ್ನು ಕೆರಳಿಸಿತು, ಆದುದರಿಂದ ಅವನು ಚರ್ಚೆಯ ಮುಖ್ಯ ವಿಷಯಕ್ಕೆ ಬಂದಾಗ ಅವಳು ಆಲೈಸಿದಳು: “ಆಗ ಸರ್ಪವು ಸ್ತ್ರೀಗೆ—ನೀವು ಹೇಗೂ ಸಾಯುವುದಿಲ್ಲ,” ಎಂದಿತು. ಹೇಳಲು ಎಂಥ ಒಂದು ದುಷ್ಟ ಸಂಗತಿಯು ಇದಾಗಿತ್ತು! ಸತ್ಯದ ದೇವರಾದ, ಪ್ರೀತಿಯ ದೇವರಾದ, ಸೃಷ್ಟಿಕರ್ತನಾದ ಯೆಹೋವನು ತನ್ನ ಮಾನವ ಮಕ್ಕಳಿಗೆ ಸುಳ್ಳಾಡಿದನೆಂದು ಸೈತಾನನು ಅಪಾದಿಸಿದನು!—ಕೀರ್ತನೆ 31:5; 1 ಯೋಹಾನ 4:16; ಪ್ರಕಟನೆ 4:11.
6. ಯೆಹೋವನ ಒಳ್ಳೇತನವನ್ನು ಮತ್ತು ಸಾರ್ವಭೌಮತೆಯನ್ನು ಸೈತಾನನು ಹೇಗೆ ಆಹ್ವಾನಿಸಿದನು?
6 ಆದರೆ ಸೈತಾನನು ಇನ್ನೂ ಹೆಚ್ಚನ್ನು ಹೇಳಿದನು. ಅವನು ಮುಂದುವರಿಸಿದ್ದು: “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” ಸೈತಾನನಿಗನುಸಾರ, ನಮ್ಮ ಆದಿ ಹೆತ್ತವರಿಗೆ ಹೇರಳವಾಗಿ ಒದಗಿಸಿದ್ದ ಯೆಹೋವ ದೇವರು ಯಾವುದೋ ಅದ್ಭುತವಾದ ವಿಷಯವೊಂದನ್ನು ಅವರಿಂದ ಅಪಹರಿಸಲು ಬಯಸಿದನು. ಅವರು ದೇವರಂತಾಗಿರುವುದನ್ನು ಆತನು ತಡೆಯಬೇಕೆಂದಿದ್ದನು. ಹೀಗೆ, ಸೈತಾನನು ದೇವರ ಒಳ್ಳೇತನವನ್ನು ಆಹ್ವಾನಿಸಿದನು. ಈ ರೀತಿಯಲ್ಲಿ ವರ್ತಿಸುವುದು ಪ್ರಯೋಜನಕಾರಿಯಾಗಿರುವುದೆಂದು ಹೇಳುವ ಮೂಲಕ ಅವನು ಆತ್ಮತೃಪ್ತಿಯನ್ನೂ ಮತ್ತು ದೇವರ ನಿಯಮಗಳ ಉದ್ದೇಶಪೂರ್ವಕ ಕಡೆಗಣಿಸುವಿಕೆಯನ್ನೂ ಉತ್ತೇಜಿಸಿದನು. ಮಾನವನು ಏನು ಮಾಡುತ್ತಾನೋ ಅದರ ಮೇಲೆ ಮಿತಿಗಳನ್ನಿಡಲು ದೇವರಿಗೆ ಹಕ್ಕಿಲ್ಲವೆಂದು ಆರೋಪಿಸುತ್ತಾ, ಕಾರ್ಯತಃ, ಯೆಹೋವನ ಸ್ವಂತ ಸೃಷ್ಟಿಯ ಮೇಲೆ ಆತನ ಸಾರ್ವಭೌಮತೆಯನ್ನು ಸೈತಾನನು ಆಹ್ವಾನಿಸಿದನು.
7. ದೆವ್ವಗಳ ಬೋಧನೆಗಳು ಪ್ರಥಮವಾಗಿ ಕೇಳಲ್ಪಟ್ಟದ್ದು ಎಂದು, ಮತ್ತು ಅವು ಇಂದು ಹೇಗೆ ತತ್ಸಮಾನವಾಗಿವೆ?
7 ಸೈತಾನನ ಆ ಮಾತುಗಳೊಂದಿಗೆ, ದೆವ್ವಗಳ ಬೋಧನೆಗಳು ಕೇಳಲಾರಂಭಿಸಿದವು. ಇಂಥ ದುಷ್ಟ ಬೋಧನೆಗಳು ತದ್ರೀತಿಯ ದೇವಭಕ್ತಿ ರಹಿತ ಸೂತ್ರಗಳನ್ನು ಇನ್ನೂ ಉತ್ತೇಜಿಸುತ್ತವೆ. ತಾನು ಏದೆನ್ ತೋಟದಲ್ಲಿ ಮಾಡಿದಂತೆಯೇ ಈಗ ದಂಗೆಖೋರ ಆತ್ಮಗಳಿಂದ ಜೊತೆಗೂಡಿದವನಾದ ಸೈತಾನನು, ವರ್ತನೆಯ ಮಟ್ಟಗಳನ್ನಿಡುವ ದೇವರ ಹಕ್ಕನ್ನು ಇನ್ನೂ ಆಹ್ವಾನಿಸುತ್ತಾನೆ. ಅವನು ಇನ್ನೂ ಯೆಹೋವನ ಸಾರ್ವಭೌಮತೆಯನ್ನು ಪ್ರತಿಭಟಿಸುತ್ತಾನೆ ಮತ್ತು ಮಾನವರು ತಮ್ಮ ಸ್ವರ್ಗೀಯ ತಂದೆಗೆ ಅವಿಧೇಯರಾಗುವಂತೆ ಪ್ರಭಾವಿಸಲು ಪ್ರಯತ್ನಿಸುತ್ತಾನೆ.—1 ಯೋಹಾನ 3:8, 10.
8. ಏದೆನಿನಲ್ಲಿ ಆದಾಮ ಹವ್ವರು ಏನನ್ನು ಕಳೆದುಕೊಂಡರು, ಆದರೆ ಯೆಹೋವನು ಹೇಗೆ ಸತ್ಯವಂತನಾಗಿ ಪರಿಣಮಿಸಿದನು?
8 ದೆವ್ವಗಳ ಬೋಧನೆಗಳ ಮತ್ತು ದೈವಿಕ ಬೋಧನೆಗಳ ನಡುವಿನ ಹೋರಾಟದಲ್ಲಿನ ಆ ಪ್ರಥಮ ಅಲ್ಪ ಕದನದಲ್ಲಿ, ಆದಾಮ ಮತ್ತು ಹವ್ವ ತಪ್ಪಾದ ನಿರ್ಣಯವನ್ನು ಮಾಡಿದರು ಮತ್ತು ಅವರ ನಿತ್ಯ ಜೀವದ ನಿರೀಕ್ಷೆಯನ್ನು ಕಳೆದುಕೊಂಡರು. (ಆದಿಕಾಂಡ 3:19) ಸಮಯವು ಗತಿಸಿದಂತೆ ಮತ್ತು ಅವರ ದೇಹಗಳು ಕ್ಷಯಿಸಲಾರಂಭಿಸಿದಂತೆ, ಏದೆನಿನಲ್ಲಿ ಯಾರು ಸುಳ್ಳನ್ನು ಹೇಳಿದ್ದನು ಮತ್ತು ಯಾರು ಸತ್ಯವನ್ನು ಹೇಳಿದ್ದನು ಎಂದು ಅವರಿಗೆ ಯಥೇಷ್ಟವಾಗಿ ದೃಢೀಕರಿಸಲ್ಪಟ್ಟಿತು. ಆದಾಗ್ಯೂ, ಅವರು ದೈಹಿಕ ಅರ್ಥದಲ್ಲಿ ಸಾಯುವ ನೂರಾರು ವರುಷಗಳ ಮುಂಚೆ, ಜೀವದ ಉಗಮನಾದ, ಅವರ ಸೃಷ್ಟಿಕರ್ತನಿಂದ ಅವರು ಜೀವಿಸಲು ಅನರ್ಹರೆಂದು ತೀರ್ಪು ಮಾಡಲ್ಪಟ್ಟಾಗ, ಸತ್ಯ ಮತ್ತು ಸುಳ್ಳುಗಳ ನಡುವಿನ ಹೋರಾಟದಲ್ಲಿ ಅವರು ಮೊದಲನೆಯದಾಗಿ ಅನಾಹುತಕ್ಕೀಡಾದವರಾದರು. ಆತ್ಮಿಕ ಅರ್ಥದಲ್ಲಿ ಅವರು ಸತ್ತದ್ದು ಆಗಲೇ.—ಕೀರ್ತನೆ 36:9; ಹೋಲಿಸಿ ಎಫೆಸ 2:1.
ಇಂದು ದೆವ್ವಗಳ ಬೋಧನೆಗಳು
9. ಶತಮಾನಗಳಲ್ಲಿ ದೆವ್ವಗಳ ಬೋಧನೆಗಳು ಎಷ್ಟು ಪರಿಣಾಮಕಾರಿಯಾಗಿವೆ?
9 ಪ್ರಕಟನೆಯ ಪುಸ್ತಕದಲ್ಲಿ ದಾಖಲಿಸಲ್ಪಟ್ಟಂತೆ, ಅಪೊಸ್ತಲ ಯೋಹಾನನು 1914 ರಲ್ಲಿ ಆರಂಭವಾದ “ಕರ್ತನ ದಿನ”ಕ್ಕೆ ಪ್ರೇರಣೆಯ ಮೂಲಕ ಕೊಂಡೊಯ್ಯಲ್ಪಟ್ಟನು. (ಪ್ರಕಟನೆ 1:10) ಆ ಸಮಯದಲ್ಲಿ ಸೈತಾನನು ಮತ್ತು ಅವನ ದೆವ್ವಗಳು ಸ್ವರ್ಗದಿಂದ ಭೂಮಿಯ ನೆರೆಹೊರೆಗೆ ದೊಬ್ಬಲ್ಪಟ್ಟಿದ್ದರು. ನಮ್ಮ ಮಹಾನ್ ಸೃಷ್ಟಿಕರ್ತನ ಈ ವಿರೋಧಿಗೆ ಇದೊಂದು ಮಹಾ ಪ್ರಗತಿತಡೆಯಾಗಿತ್ತು. ಯೆಹೋವನ ಸೇವಕರ ವಿರುದ್ಧ ಸತತವಾಗಿ ಅಪವಾದಿಸುವ ಅವನ ಸರ್ವವು ಸ್ವರ್ಗದಲ್ಲಿ ಇನ್ನು ಮುಂದೆ ಕೇಳಿಬರಲಿಲ್ಲ. (ಪ್ರಕಟನೆ 12:10) ಅದಾಗ್ಯೂ, ದೆವ್ವಗಳ ಬೋಧನೆಗಳು ಏದೆನಿನಿಂದಾರಂಭಿಸಿ ಭೂಮಿಯ ಮೇಲೆ ಯಾವ ಅಭಿವೃದ್ಧಿಯನ್ನು ಮಾಡಿದ್ದವು? ದಾಖಲೆಯು ಹೇಳುವುದು: “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು.” (ಪ್ರಕಟನೆ 12:9) ಇಡೀ ಲೋಕವು ಸೈತಾನನ ಸುಳ್ಳುಗಳಿಗೆ ಆಹುತಿಯಾಗಿತ್ತು! “ಇಹಲೋಕಾಧಿಪತಿ” ಎಂದು ಸೈತಾನನು ಕರೆಯಲ್ಪಡುವುದು ಆಶ್ಚರ್ಯವಲ್ಲ!—ಯೋಹಾನ 12:31; 16:11.
10, 11. ಇಂದು ಸೈತಾನನು ಮತ್ತು ಅವನ ದೆವ್ವಗಳು ಯಾವ ವಿಧಗಳಲ್ಲಿ ಸಕ್ರಿಯರಾಗಿದ್ದಾರೆ?
10 ಸ್ವರ್ಗದಿಂದ ಹೊರದೂಡಲ್ಪಟ್ಟ ಅನಂತರ ಸೈತಾನನು ಸೋಲನ್ನೊಪ್ಪಿಕೊಂಡನೋ? ನಿಶ್ಚಯವಾಗಿಯೂ ಇಲ್ಲ! ಅವನು ದೈವಿಕ ಬೋಧನೆ ಮತ್ತು ಅದಕ್ಕೆ ಅಂಟಿಕೊಳ್ಳುವವರ ವಿರುದ್ಧ ಹೋರಾಡುತ್ತಿರಲು ನಿಶ್ಚಯಿಸಿಕೊಂಡಿದ್ದಾನೆ. ಸ್ವರ್ಗದಿಂದ ಅವನನ್ನು ಹೊರದೂಡಿದ್ದನ್ನನುಸರಿಸಿ, ಸೈತಾನನು ತನ್ನ ಯುದ್ಧವನ್ನು ಮುಂದುವರಿಸಿದ್ದಾನೆ: “ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧಮಾಡುವದಕ್ಕೆ” ಹೊರಟನು.—ಪ್ರಕಟನೆ 12:17.
11 ದೇವರ ಸೇವಕರ ವಿರುದ್ಧ ಹೋರಾಡುವುದಕ್ಕೆ ಕೂಡಿಸಿ, ಸೈತಾನನು ಅವನ ಪ್ರಚಾರಕಾರ್ಯದಿಂದ ಲೋಕವನ್ನು ಮುಳುಗಿಸುತ್ತಾ, ಮಾನವಕುಲದ ಮೇಲೆ ತನ್ನ ಹಿಡಿತವನ್ನು ಇಟ್ಟುಕೊಳ್ಳಲು ಶ್ರಮಿಸುತ್ತಿದ್ದಾನೆ. ಕರ್ತನ ದಿನದ ಪ್ರಕಟನೆಯ ದರ್ಶನಗಳೊಂದರಲ್ಲಿ ಅಪೊಸ್ತಲ ಯೋಹಾನನು ಸೈತಾನನನ್ನು, ಅವನ ಭೂಮಿಯ ರಾಜಕೀಯ ಸಂಘಟನೆಯನ್ನು, ಮತ್ತು ನಮ್ಮ ದಿನಗಳ ಪ್ರಧಾನ ಲೋಕ ಶಕ್ತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದ ಮೂರು ಕಾಡುಪ್ರಾಣಿಗಳನ್ನು ನೋಡಿದನು. ಈ ಮೂರು ಪ್ರಾಣಿಗಳ ಬಾಯಿಗಳಿಂದ, ಕಪ್ಪೆಗಳು ಹೊರಬಂದವು. ಇವುಗಳು ಏನನ್ನು ಸೂಚಿಸುತ್ತವೆ? ಯೋಹಾನನು ಬರೆಯುವುದು: “ಇವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳು; ಭೂಲೋಕದಲ್ಲೆಲಿಯೂ ಇರುವ ರಾಜರ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಅವರನ್ನು ಕೂಡಿಸುವವು.” (ಪ್ರಕಟನೆ 16:14) ಸ್ಪಷ್ಟವಾಗಿಗಿ, ಭೂಮಿಯ ಮೇಲೆ ದೆವ್ವಗಳ ಬೋಧನೆಗಳು ಅತಿ ಕ್ರಿಯಾಶೀಲವಾಗಿ ಇವೆ. ಸೈತಾನನು ಮತ್ತು ಅವನ ದೆವ್ವಗಳು ದೈವಿಕ ಬೋಧನೆಗಳ ವಿರುದ್ಧ ಇನ್ನೂ ಹೋರಾಡುತ್ತಾ ಇವೆ, ಮತ್ತು ಮೆಸ್ಸೀಯ ಸಂಬಂಧಿತ ರಾಜ, ಯೇಸು ಕ್ರಿಸ್ತನ ಮೂಲಕ ಅವುಗಳನ್ನು ಬಲವಂತವಾಗಿ ನಿಲ್ಲಿಸುವ ವರೆಗೆ ಅವುಗಳು ಹಾಗೆಯೆ ಮಾಡುತ್ತಾ ಮುಂದುವರಿಯುವವು.—ಪ್ರಕಟನೆ 20:2.
ದೆವ್ವಗಳ ಬೋಧನೆಗಳನ್ನು ಗುರುತಿಸುವುದು
12. (ಎ) ದೆವ್ವಗಳ ಬೋಧನೆಗಳನ್ನು ತಡೆಯಲು ಸಾಧ್ಯವಿದೆ ಯಾಕೆ? (ಬಿ) ದೇವರ ಸೇವಕರೊಂದಿಗೆ ತನ್ನ ಉದ್ದೇಶಗಳನ್ನು ಪೂರೈಸಲು ಸೈತಾನನು ಹೇಗೆ ಪ್ರಯತ್ನಿಸುತ್ತಾನೆ?
12 ದೇವ-ಭಯವಿರುವ ಮಾನವರು ದೆವ್ವಗಳ ಬೋಧನೆಗಳನ್ನು ಎದುರಿಸಬಲ್ಲರೋ? ಎರಡು ಕಾರಣಗಳಿಗಾಗಿ ಅವರು ಕಾರ್ಯತಃ ಹಾಗೆ ಮಾಡಶಕ್ತರು. ಮೊದಲನೆಯದಾಗಿ, ದೈವಿಕ ಬೋಧನೆಯು ಹೆಚ್ಚು ಶಕ್ತಿಶಾಲಿಯಾಗಿರುವ ಕಾರಣ; ಮತ್ತು ಎರಡನೆಯದಾಗಿ, ನಾವು ಅವುಗಳನ್ನು ಎದುರಿಸಶಕ್ತರಾಗುವಂತೆ ಯೆಹೋವನು ಸೈತಾನನ ಯುದ್ಧೋಪಾಯಗಳನ್ನು ಬಯಲುಗೊಳಿಸಿರುವ ಕಾರಣ. ಅಪೊಸ್ತಲ ಪೌಲನು ಅಂದಂತೆ, “ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ.” (2 ಕೊರಿಂಥ 2:11) ಸೈತಾನನು ತನ್ನ ಉದ್ದೇಶವನ್ನು ಪೂರೈಸಲು ಹಿಂಸೆಯನ್ನು ಒಂದು ಮಾಧ್ಯಮವಾಗಿ ಬಳಸುತ್ತಾನೆಂದು ನಮಗೆ ತಿಳಿದಿದೆ. (2 ತಿಮೊಥೆಯ 3:12) ಆದರೂ, ಎಷ್ಟೋ ಹೆಚ್ಚು ಕುತಂತ್ರದಿಂದ ಅವನು ದೇವರನ್ನು ಸೇವಿಸುವವರ ಮನಸ್ಸನ್ನು ಮತ್ತು ಹೃದಯಗಳನ್ನು ಪ್ರಭಾವಿಸಲು ಪ್ರಯತ್ನಿಸುತ್ತಾನೆ. ಅವನು ಹವ್ವಳನ್ನು ವಂಚಿಸಿದನು ಮತ್ತು ಅವಳ ಹೃದಯದಲ್ಲಿ ತಪ್ಪು ಆಶೆಗಳನ್ನು ಹಾಕಿದನು. ಅವನು ಅದೇ ವಿಷಯಗಳನ್ನು ಇಂದು ಪ್ರಯತ್ನಿಸುತ್ತಾನೆ. ಪೌಲನು ಕೊರಿಂಥದವರಿಗೆ ಬರೆದದ್ದು: “ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.” (2 ಕೊರಿಂಥ 11:3) ಸಾಮಾನ್ಯವಾಗಿ ಮಾನವಕುಲದ ಆಲೋಚನೆಯನ್ನು ಅವನು ಹೇಗೆ ಭ್ರಷ್ಟಗೊಳಿಸಿರುವನೆಂದು ಗಮನಿಸಿ.
13. ಸೈತಾನನು ಮಾನವಕುಲಕ್ಕೆ ಏದೆನಿನಿಂದ ಹಿಡಿದು ಯಾವ ಸುಳ್ಳುಗಳನ್ನು ಹೇಳಿದ್ದಾನೆ?
13 ಹವ್ವಳಿಗೆ, ಯೆಹೋವನ ಸುಳ್ಳಾಡುವಿಕೆಯ ಕುರಿತು ಸೈತಾನನು ಆಪಾದಿಸಿದನು ಮತ್ತು ತಮ್ಮ ಸೃಷ್ಟಿಕರ್ತನಿಗೆ ಅವಿಧೇಯರಾದರೆ ಮಾನವರು ದೇವರಂತಾಗಬಲ್ಲರು ಎಂದು ಹೇಳಿದನು. ಮಾನವನ ಇಂದಿನ ಪತಿತ ಸ್ಥಿತಿಯು, ಯೆಹೋವನಲ್ಲ, ಬದಲಾಗಿ ಸೈತಾನನು ಸುಳ್ಳುಗಾರನೆಂದು ರುಜುಪಡಿಸುತ್ತದೆ. ಮಾನವರು ಇಂದು ದೇವರುಗಳಲ್ಲ! ಆದಾಗ್ಯೂ, ಸೈತಾನನು ಆ ಮೊದಲ ಸುಳ್ಳಿಗೆ ತದ್ರೀತಿಯ ಬೇರೆ ಸುಳ್ಳುಗಳನ್ನು ಕೂಡಿಸಿದನು. ಮಾನವನ ಆತ್ಮ ಅಮರವಾದದ್ದು, ಸಾವಿಲ್ಲದ್ದು ಎಂಬ ವಿಚಾರವನ್ನು ಅವನು ಪರಿಚಯಿಸಿದನು. ಅವನು ಹೀಗೆ ದೇವರುಗಳಂತೆ ಆಗುವ ಸಾಧ್ಯತೆಯನ್ನು ಮಾನವಕುಲದ ಮುಂದೆ ಇನ್ನೊಂದು ವಿಧಾನದಲ್ಲಿ ಮನಸೆಳೆಯುವಂತೆ ತೂಗಾಡಿಸಿದನು. ಅನಂತರ, ಆ ಸುಳ್ಳು ತತ್ವದ ಮೇಲೆ ಆಧಾರಿಸಿ, ನರಕಾಗ್ನಿ, ಶುದ್ಧಿ ಲೋಕ, ಪ್ರೇತವಾದ, ಮತ್ತು ಪೂರ್ವಜರ ಆರಾಧನೆಯ ಬೋಧನೆಗಳನ್ನು ಪ್ರವರ್ತಿಸಿದನು. ಇಂಥ ಸುಳ್ಳುಗಳು ಇನ್ನೂ ಕೋಟಿಗಟ್ಟಲೆ ಜನರನ್ನು ದಾಸ್ಯದಲ್ಲಿಟ್ಟಿವೆ.—ಧರ್ಮೋಪದೇಶಕಾಂಡ 18:9-13.
14, 15. ಮರಣ ಮತ್ತು ಭವಿಷ್ಯತ್ತಿಗೆ ಮಾನವನ ನಿರೀಕ್ಷೆಯ ಕುರಿತು ಸತ್ಯಾಂಶವೇನು?
14 ನಿಶ್ಚಯವಾಗಿಯೂ, ಯೆಹೋವನು ಆದಾಮನಿಗೆ ಏನಂದನೋ ಅದು ಸತ್ಯವಾಗಿತ್ತು. ಆದಾಮನು ಯಾವಾಗ ದೇವರ ವಿರುದ್ಧ ಪಾಪ ಮಾಡಿದನೋ ಅಗಲೇ ಸತ್ತನು. (ಆದಿಕಾಂಡ 5:5) ಆದಾಮ ಮತ್ತು ಅವನ ವಂಶಜರು ಸತ್ತಾಗ, ಅವರು ಪ್ರಜ್ಞಾಹೀನ ಮತ್ತು ಚಟುವಟಿಕೆಹೀನರಾದ ಸತ್ತ ಆತ್ಮಗಳಾದರು. (ಆದಿಕಾಂಡ 2:7; ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಆದಾಮನಿಂದ ಪಾಪವನ್ನು ಅನುವಂಶಿಕವಾಗಿ ಪಡೆದುದರಿಂದ, ಎಲ್ಲಾ ಮಾನವ ಆತ್ಮಗಳು ಸಾಯುತ್ತವೆ. (ರೋಮಾಪುರ 5:12) ಆದಾಗ್ಯೂ, ಏದೆನಿನಲ್ಲಿ, ಪಿಶಾಚನ ಕೆಲಸಗಳ ವಿರುದ್ಧ ಕಾದಾಡಬಲ್ಲ ಒಂದು ಸಂತಾನವು ಬರುವುದೆಂದು ಯೆಹೋವನು ವಾಗ್ದಾನಿಸಿದನು. (ಆದಿಕಾಂಡ 3:15) ಆ ಸಂತಾನವು, ದೇವರ ಸ್ವಂತ ಏಕಜಾತ ಮಗನಾದ ಯೇಸು ಕ್ರಿಸ್ತನಾಗಿದ್ದನು. ಯೇಸುವು ಪಾಪರಹಿತನಾಗಿ ಮರಣಹೊಂದಿದನು, ಮತ್ತು ಅವನ ಯಜ್ಞಾರ್ಪಿತ ಜೀವವು, ಮಾನವಕುಲವನ್ನು ಅವರ ಸಾಯುವ ಸ್ಥಿತಿಯಿಂದ ಕೊಂಡುಕೊಳ್ಳಲು ಪ್ರಾಯಶ್ಚಿತವ್ತಾಯಿತು. ಯಾರು ವಿಧೇಯತೆಯಿಂದ ಯೇಸುವಿನಲ್ಲಿ ನಂಬಿಕೆಯನ್ನು ನಿರ್ವಹಿಸುತ್ತಾರೋ ಅವರು ಆದಾಮನು ಕಳೆದುಕೊಂಡ ನಿತ್ಯ ಜೀವವನ್ನು ಪಡೆದುಕೊಳ್ಳುವ ಸಂದರ್ಭವನ್ನು ಹೊಂದುತ್ತಾರೆ.—ಯೋಹಾನ 3:36; ರೋಮಾಪುರ 6:23; 1 ತಿಮೊಥೆಯ 2:5, 6.
15 ಈ ಪ್ರಾಯಶ್ಚಿತ್ತ—ಒಂದು ಆತ್ಮವು ಮರಣವನ್ನು ಪಾರುಗುತ್ತದೆಂಬ ವಿಚಾರವಲ್ಲ—ಮಾನವ ಕುಲಕ್ಕಾಗಿರುವ ನಿಜ ನಿರೀಕ್ಷೆಯಾಗಿದೆ. ಇದು ದೈವಿಕ ಬೋಧನೆ. ಇದು ಸತ್ಯ. ಇದು ಯೆಹೋವನ ಪ್ರೀತಿ ಮತ್ತು ವಿವೇಕದ ಆಶ್ಚರ್ಯಕರ ಅಭಿವ್ಯಕ್ತಿ ಕೂಡ ಆಗಿದೆ. (ಯೋಹಾನ 3:16) ಈ ಸತ್ಯವನ್ನು ಕಲಿತುಕೊಂಡದ್ದಕ್ಕಾಗಿ ಮತ್ತು ಈ ವಿಷಯಗಳಲ್ಲಿ ದೆವ್ವಗಳ ಬೋಧನೆಗಳಿಂದ ಬಿಡುಗಡೆ ಹೊಂದಿದ್ದಕ್ಕಾಗಿ ನಾವೆಷ್ಟು ಅಭಾರಿಗಳಾಗಿರಬೇಕು!—ಯೋಹಾನ 8:32.
16. ಮಾನವರು ತಮ್ಮ ಸ್ವಂತ ವಿವೇಕವನ್ನು ಅನುಸರಿಸಿದಾಗ ದೀರ್ಘಾವಧಿಯ ಫಲಿತಾಂಶಗಳೇನು?
16 ಏದೆನ್ ತೋಟದಲ್ಲಿನ ಅವನ ಸುಳ್ಳಿನಿಂದಾಗಿ, ಸೈತಾನನು ಆದಾಮ ಹವ್ವರನ್ನು ದೇವರಿಂದ ಸ್ವತಂತ್ರರಾಗಲು ಮತ್ತು ಅವರ ಸ್ವಂತ ವಿವೇಕದ ಮೇಲೆ ಆತುಕೊಳ್ಳಲು ಹಾರೈಸುವಂತೆ ಉತ್ತೇಜಿಸಿದನು. ಇಂದು, ಅಪರಾಧ, ಆರ್ಥಿಕ ಸಂಕಷ್ಟಗಳು, ಯುದ್ಧಗಳು, ಮತ್ತು ಲೋಕದಲ್ಲಿ ಇಂದು ಆಸ್ತಿತ್ವದಲ್ಲಿರುವ ಇದರ ಮಹತ್ತರ ಅಸಮಾನತೆಯಲ್ಲಿ ದೀರ್ಘಾವಧಿಯ ಫಲಿತಾಂಶಗಳನ್ನು ನಾವು ನೋಡುತ್ತೇವೆ. “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ,” ಎಂದು ಬೈಬಲು ಹೇಳುವುದರಲ್ಲಿ ಆಶ್ಚರ್ಯವಿಲ್ಲ! (1 ಕೊರಿಂಥ 3:19) ಆದರೂ, ಹೆಚ್ಚಿನ ಮಾನವರು ಯೆಹೋವನ ಬೋಧನೆಗಳಿಗೆ ಕಿವಿಗೊಡುವುದರ ಬದಲಿಗೆ ಕಷ್ಟಾನುಭವಿಸಲು ಮೂರ್ಖತನದಿಂದ ಆಯ್ದುಕೊಳ್ಳುತ್ತಾರೆ. (ಕೀರ್ತನೆ 14:1-3; 107:17) ದೈವಿಕ ಬೋಧನೆಯನ್ನು ಸ್ವೀಕರಿಸಿರುವ ಕ್ರೈಸ್ತರು, ಆ ಪಾಶದಲ್ಲಿ ಬೀಳುವುದನ್ನು ತಪ್ಪಿಸುತ್ತಾರೆ.
17. “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ” ಯಾವುದನ್ನು ಸೈತಾನನು ಪ್ರವರ್ತಿಸಿದ್ದಾನೆ, ಮತ್ತು ಅದರ ಫಲಗಳೇನು?
17 ಪೌಲನು ತಿಮೊಥೆಯನಿಗೆ ಬರೆದದ್ದು: “ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು. ಕೆಲವರು ಆ ಸುಳ್ಳಾದ ಜ್ಞಾನವನ್ನು ಅವಲಂಬಿಸಿ ಕ್ರಿಸ್ತನಂಬಿಕೆಯಿಂದ ಭ್ರಷ್ಟರಾದರು.” (1 ತಿಮೊಥೆಯ 6:20, 21) ಆ “ಜ್ಞಾನವು” ದೆವ್ವಗಳ ಬೋಧನೆಗಳನ್ನು ಕೂಡ ಪ್ರತಿನಿಧಿಸುತ್ತದೆ. ಪೌಲನ ದಿನಗಳಲ್ಲಿ, ಸಭೆಗಳಲ್ಲಿ ಕೆಲವರು ಪ್ರವರ್ತಿಸಿದ ಧರ್ಮಭ್ರಷ್ಟ ವಿಚಾರಗಳನ್ನು ಇದು ಸೂಚಿಸಿದಿರ್ದಬಹುದು. (2 ತಿಮೊಥೆಯ 2:16-18) ಅನಂತರ, ಅಧ್ಯಾತ್ಮ ರಹಸ್ಯಜ್ಞಾನ ವಾದ ಮತ್ತು ಗ್ರೀಕ್ ತತ್ವಜ್ಞಾನಗಳಂಥಹ ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವವುಗಳು ಸಭೆಯನ್ನು ಭ್ರಷ್ಟಗೊಳಿಸಿದವು. ಇಂದು ಲೋಕದಲ್ಲಿ, ನಾಸ್ತಿಕತೆ, ಅಜೇಯ್ಞತವಾದ, ವಿಕಾಸವಾದಗಳು, ಮತ್ತು ಬೈಬಲಿನ ಉಚ್ಚ ಸರ್ತದ ಟೀಕೆಯು, ಅಧುನಿಕ ಧರ್ಮಭ್ರಷ್ಟರ ಮೂಲಕ ಪ್ರವರ್ತಿಸಲಾದ ಅಶಾಸ್ತ್ರೀಯ ವಿಚಾರಗಳಂತೆಯೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವವುಗಳ ಉದಾಹರಣೆಗಳಾಗಿವೆ. ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಈ ಎಲ್ಲ ವಿಷಯಗಳ ಫಲಗಳು ನೈತಿಕ ಅವನತಿ, ವಿಸ್ತಾರವಾಗಿ ಹರಡಿರುವ ಅಧಿಕಾರದ ಅಗೌರವ, ಅಪ್ರಾಮಾಣಿಕತೆ, ಮತ್ತು ಸೈತಾನನ ವಿಷಯ ವ್ಯವಸ್ಥೆಯ ವಿಶೇಷ ಲಕ್ಷಣವಾಗಿರುವ ಸ್ವಾರ್ಥದಲ್ಲಿ ತೋರಿಬರುತ್ತವೆ.
ದೈವಿಕ ಬೋಧನೆಗೆ ಅಂಟಿಕೊಳ್ಳುವುದು
18. ಇಂದು ಯಾರು ದೈವಿಕ ಬೋಧನೆಯನ್ನು ಹುಡುಕುತ್ತಾರೆ?
18 ಏದೆನಿನ ಸಮಯದಿಂದ ಸೈತಾನನು ಭೂಮಿಯನ್ನು ದೆವ್ವಗಳ ಬೋಧನೆಗಳಿಂದ ತುಂಬಿಸುತ್ತಿದ್ದಾನಾದರೂ, ದೈವಿಕ ಬೋಧನೆಯನ್ನು ಹುಡುಕಿದ ಕೆಲವರು ಯಾವಾಗಲೂ ಇದ್ದರು. ಇಂದು ಅಂಥವರು ಅನೇಕ ಲಕ್ಷಗಳ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ, ಯೇಸುವಿನ ಸ್ವರ್ಗ ರಾಜ್ಯದಲ್ಲಿ ಅವನೊಂದಿಗೆ ಆಳುವ ದೃಢ ನಿರೀಕ್ಷೆಯನ್ನು ಹೊಂದಿರುವ ಅಭಿಷಿಕ್ತ ಕ್ರೈಸ್ತರ ಉಳಿಕೆಯವರು ಮತ್ತು ಆ ರಾಜ್ಯದ ಭೂಕ್ಷೇತ್ರವನ್ನು ಸ್ವಾಸ್ತ್ಯವಾಗಿ ಹೊಂದುವ ನಿರೀಕ್ಷೆಯು ಯಾರದ್ದಾಗಿದೆಯೋ ಆ “ಬೇರೆ ಕುರಿಗಳ” ಹೆಚ್ಚುತ್ತಿರುವ ಮಹಾ ಸಮೂಹವು ಸೇರಿದೆ. (ಮತ್ತಾಯ 25:34; ಯೋಹಾನ 10:16; ಪ್ರಕಟನೆ 7:3, 9) ಇಂದು, ಇವರೆಲ್ಲರು, “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು,” ಎಂಬ ಯೆಶಾಯನ ಮಾತುಗಳು ಅನ್ವಯವಾಗುವ ಒಂದೇ ಲೋಕವ್ಯಾಪಕ ಸಂಸ್ಥೆಯೊಳಗೆ ಒಟ್ಟುಗೂಡಿಸಲ್ಪಟ್ಟಿದ್ದಾರೆ.—ಯೆಶಾಯ 54:13.
19. ಯೆಹೋವನಿಂದ ಶಿಕ್ಷಿತರಾಗುವುದರಲ್ಲಿ ಯಾವುದು ಒಳಗೊಂಡಿದೆ?
19 ಯೆಹೋವನಿಂದ ಶಿಕ್ಷಿತರಾಗುವುದು ಸತ್ಯ ತತ್ವವನ್ನು—ಅದು ಪ್ರಾಮುಖ್ಯವಾಗಿದೆಯಾದರೂ—ತಿಳಿಯುವುದಕ್ಕಿಂತ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಯೆಹೋವನು ನಮಗೆ ಹೇಗೆ ಜೀವಿಸುವುದು, ನಮ್ಮ ವೈಯಕ್ತಿಕ ಜೀವನಗಳಿಗೆ ದೈವಿಕ ಬೋಧನೆಗಳನ್ನು ಹೇಗೆ ಅನ್ವಯಿಸುವುದು ಎಂದು ಬೋಧಿಸುತ್ತಾನೆ. ಉದಾಹರಣೆಗಾಗಿ, ನಮ್ಮ ಸುತ್ತಲೂ ಇರುವ ಲೋಕದಲ್ಲಿ ಅಷ್ಟು ಅತಿರೇಕವಾಗಿರುವ ಸ್ವಾರ್ಥ, ಅನೈತಿಕತೆ, ಮತ್ತು ಸ್ವಾತಂತ್ರ್ಯದ ಆತ್ಮವನ್ನು ನಾವು ತಡೆಯುತ್ತೇವೆ. ನಾವು ಈ ಲೋಕದಲ್ಲಿ ಐಶ್ವರ್ಯದ ಕನಿಕರರಹಿತ ಬೆನ್ನಟ್ಟುವಿಕೆಯು ಏನಾಗಿದೆ—ಮರಣದ ವ್ಯವಹಾರ—ಎಂಬುದನ್ನು ಗುರುತಿಸುತ್ತೇವೆ. (ಯಾಕೋಬ 5:1-3) ಅಪೊಸ್ತಲ ಯೋಹಾನನ ಮಾತುಗಳಲ್ಲಿ ನಿರೂಪಿಸಲಾದ ದೈವಿಕ ಬೋಧನೆಯನ್ನು ನಾವೆಂದೂ ಮರೆಯಲಾರೆವು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ.”—1 ಯೋಹಾನ 2:15.
20, 21. (ಎ) ಮಾನವರನ್ನು ಮಂಕು ಮಾಡುವ ತನ್ನ ಪ್ರಯತ್ನಗಳಲ್ಲಿ ಸೈತಾನನು ಏನನ್ನು ಬಳಸುತ್ತಾನೆ? (ಬಿ) ದೈವಿಕ ಬೋಧನೆಗೆ ಅಂಟಿಕೊಳ್ಳುವವರಿಗೆ ಯಾವ ಆಶೀರ್ವಾದಗಳು ಬರುತ್ತವೆ?
20 ಅವಕ್ಕೆ ಬಲಿಬಿದ್ದವರ ಮೇಲೆ ದೆವ್ವಗಳ ಬೋಧನೆಗಳು ಮಾಡಿದ ಪರಿಣಾಮವು ಪೌಲನು ಕೊರಿಂಥದವರಿಗೆ ಬರೆದ ಮಾತುಗಳಲ್ಲಿ ತೋರಿಬರುತ್ತದೆ: “ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.” (2 ಕೊರಿಂಥ 4:4) ಇದೇ ವಿಧದಲ್ಲಿ ಸೈತಾನನು ನಿಜ ಕ್ರೈಸ್ತರನ್ನೂ ಮಂಕು ಮಾಡಲಿಚ್ಛಿಸುವನು. ಹಿಂದೆ ಏದೆನಿನಲ್ಲಿ, ದೇವರ ಸೇವಕರಲ್ಲೊಬ್ಬಳನ್ನು ವಂಚಿಸಲು ಅವನು ಸರ್ಪವನ್ನು ಬಳಸಿದನು. ಇಂದು, ಅವನು ಹಿಂಸಾತ್ಮಕ ಯಾ ಅನೈತಿಕ ಚಲನ ಚಿತ್ರಗಳನ್ನು ಮತ್ತು ಟೆಲಿವಿಷನ್ ಕಾರ್ಯಕ್ರಮಗಳನ್ನು ಬಳಸುತ್ತಾನೆ. ಅವನು ರೇಡಿಯೊ, ಸಾಹಿತ್ಯ, ಮತ್ತು ಸಂಗೀತವನ್ನು ಸ್ವಪ್ರಯೇಜನಕ್ಕಾಗಿ ಬಳಸುತ್ತಾನೆ. ಆತನ ಕೈಯಲ್ಲಿರುವ ಶಕ್ತಿಯುತ ಶಸ್ತ್ರವು ಕೆಟ್ಟ ಸಹವಾಸವಾಗಿದೆ. (ಜ್ಞಾನೋಕ್ತಿ 4:14; 28:7; 29:3) ಇಂಥ ವಿಷಯಗಳನ್ನು ಸದಾ ಅವುಗಳ ನಿಜರೂಪ—ದೆವ್ವಗಳ ತಂತ್ರ ಮತ್ತು ಬೋಧನೆಗಳು—ಗಳಿಂದ ಗುರುತಿಸಿರಿ.
21 ಏದೆನಿನಲ್ಲಿ ಸೈತಾನನ ನುಡಿಗಳು ಸುಳ್ಳುಗಳಾಗಿದ್ದವು; ಯೆಹೋವನ ನುಡಿಗಳು ಸತ್ಯವೆಂದು ರುಜುವಾದವು ಎಂಬುದನ್ನು ಜ್ಞಾಪಿಸಿರಿ. ಆ ಆರಂಭದ ದಿನಗಳಿಂದ, ವಿಷಯವು ಅದೇ ವಿಧಾನದಲ್ಲಿ ಮುಂದುವರಿಯುತ್ತಾ ಬಂದಿದೆ. ಸೈತಾನನು ಯಾವಾಗಲೂ ಸುಳ್ಳುಗಾರನೆಂದು ರುಜುವಾಗಿದ್ದಾನೆ, ಮತ್ತು ದೈವಿಕ ಬೋಧನೆಯು ತಪ್ಪದೆ ಸತ್ಯವಾಗಿದೆ. (ರೋಮಾಪುರ 3:4) ನಾವು ದೇವರ ವಾಕ್ಯಕ್ಕೆ ಅಂಟಿಕೊಂಡಿರುವಲ್ಲಿ, ಸತ್ಯ ಮತ್ತು ಸುಳ್ಳುಗಳ ಹೋರಾಟದಲ್ಲಿ ನಾವು ಯಾವಾಗಲೂ ಜಯಹೊಂದುವ ಪಕ್ಷದಲ್ಲಿ ಇರುವೆವು. (2 ಕೊರಿಂಥ 10:4, 5) ಆದುದರಿಂದ, ನಾವು ದೆವ್ವಗಳ ಎಲ್ಲಾ ಬೋಧನೆಗಳನ್ನು ತಿರಸ್ಕರಿಸಲು ದೃಢತೆಯುಳ್ಳವರಾಗಿರೋಣ. ಹಾಗಿರುವಲ್ಲಿ ಸತ್ಯ ಮತ್ತು ಸುಳ್ಳಿನ ನಡುವಿನ ಯುದ್ಧವು ಕೊನೆಗೊಳ್ಳುವ ಸಮಯದ ತನಕ ನಾವು ತಾಳಿಕೊಳ್ಳುವೆವು. ಸತ್ಯವು ವಿಜಯಿಯಾಗುವುದು. ಸೈತಾನನು ಇಲ್ಲವಾಗುವನು, ಮತ್ತು ದೈವಿಕ ಬೋಧನೆ ಮಾತ್ರ ಭೂಮಿಯ ಮೇಲೆ ಕೇಳಿಬರುವುದು.—ಯೆಶಾಯ 11:9.
ನೀವು ವಿವರಿಸಬಲ್ಲಿರೋ?
▫ ದೆವ್ವ ಸಂಬಂಧಿತ ಬೋಧನೆಗಳು ಪ್ರಥಮವಾಗಿ ಕೇಳಲ್ಪಟ್ಟದ್ದು ಯಾವಾಗ?
▫ ಸೈತಾನ ಮತ್ತು ಅವನ ದೆವ್ವಗಳ ಮೂಲಕ ಪ್ರವರ್ತಿಸಲ್ಪಟ್ಟ ಕೆಲವು ಸುಳ್ಳುಗಳು ಯಾವುವು?
▫ ಸೈತಾನನು ಇಂದು ಯಾವ ವಿಧಾನಗಳಲ್ಲಿ ಅತ್ಯಂತ ಸಕ್ರಿಯನಾಗಿದ್ದಾನೆ?
▫ ದೆವ್ವಗಳ ಬೋಧನೆಗಳನ್ನು ಪ್ರವರ್ತಿಸಲು ಸೈತಾನನು ಏನನ್ನು ಬಳಸುತ್ತಾನೆ?
▫ ದೈವಿಕ ಬೋಧನೆಗೆ ಅಂಟಿಕೊಳ್ಳುವವರಿಗಾಗುವ ಆಶೀರ್ವಾದಗಳು ಯಾವುವು?
[ಪುಟ 9 ರಲ್ಲಿರುವ ಚಿತ್ರ]
ದೆವ್ವ ಸಂಬಂಧಿತ ಬೋಧನೆಯು ಪ್ರಥಮವಾಗಿ ಏದೆನ್ ತೋಟದಲ್ಲಿ ಕೇಳಿಬಂದಿತ್ತು
[ಪುಟ 10 ರಲ್ಲಿರುವ ಚಿತ್ರ]
ಪ್ರಾಯಶ್ಚಿತ್ತ ಮತ್ತು ರಾಜ್ಯದ ಕುರಿತ ದೈವಿಕ ಬೋಧನೆಯು ಮಾನವಕುಲಕ್ಕಾಗಿರುವ ಒಂದೇ ನಿರೀಕ್ಷೆಯನ್ನು ನೀಡುತ್ತದೆ