ಹೆತ್ತವರೇ, ನಿಮ್ಮ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸಿರಿ
‘ಯಾವನಾದರೂ ಸ್ವಂತ ಜನರನ್ನು ಸಂರಕ್ಷಿಸದೆ ಹೋದರೆ [‘ತನ್ನ ಸ್ವಂತದವರಿಗೆ ಅಗತ್ಯವಿರುವುದನ್ನು ಒದಗಿಸದೆ ಹೋದರೆ,’ Nw] ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನು ಆಗಿದ್ದಾನೆ.’—1 ತಿಮೊಥೆಯ 5:8.
ಒಂದು ಕೂಟ ಶುರುವಾಗುವುದಕ್ಕೆ ಮೊದಲು ನೀವು ಕ್ರೈಸ್ತ ಸಭೆಯಲ್ಲಿ ಸುತ್ತಲೂ ದೃಷ್ಟಿ ಹಾಯಿಸುವಲ್ಲಿ, ಸ್ವಚ್ಛ ಹಾಗೂ ಚೆನ್ನಾಗಿ ಉಡಿಗೆ ತೊಟ್ಟ ಮಕ್ಕಳು ತಮ್ಮ ತಂದೆತಾಯಿಗಳೊಂದಿಗೆ ಕುಳಿತುಕೊಳ್ಳುವುದನ್ನು ನೀವು ನೋಡುವಿರಿ. ಅಂತಹ ಕುಟುಂಬಗಳಲ್ಲಿ, ಯೆಹೋವನಿಗಾಗಿ ಮತ್ತು ಪರಸ್ಪರರಿಗಾಗಿ ತೋರಿಬರುವ ಪ್ರೀತಿಯನ್ನು ನೋಡುವಾಗ ಸಂತೋಷವಾಗುತ್ತದಲ್ಲವೆ? ಆದರೆ ಕುಟುಂಬವನ್ನು ಸಮಯಕ್ಕೆ ಸರಿಯಾಗಿ ಕೂಟಗಳಿಗೆ ತರುವುದರಲ್ಲಿ ಎಷ್ಟೊಂದು ಪ್ರಯತ್ನವು ಒಳಗೂಡಿದೆ ಎಂಬುದನ್ನು ಮರೆತುಬಿಡುವುದು ಸುಲಭ.
2 ಹೆಚ್ಚಿನ ಸಂದರ್ಭಗಳಲ್ಲಿ ಹೆತ್ತವರು ದಿನವಿಡೀ ತುಂಬ ಕಾರ್ಯನಿರತರಾಗಿರುತ್ತಾರೆ, ಮತ್ತು ಕೂಟಗಳಿರುವ ಸಾಯಂಕಾಲಗಳಂದು ಕುಟುಂಬ ಜೀವನವು ಇನ್ನೂ ಹೆಚ್ಚು ಕಾರ್ಯಮಗ್ನವಾಗುತ್ತದೆ. ಊಟದ ತಯಾರಿ, ಮನೆಯಲ್ಲಿನ ಬೇರೆ ಕೆಲಸಗಳು, ಶಾಲೆಯ ಕೆಲಸ—ಇವೆಲ್ಲವನ್ನೂ ಮಾಡಿ ಮುಗಿಸಬೇಕಾಗುತ್ತದೆ. ಅತಿ ಭಾರವಾದ ಹೊರೆಯನ್ನು ಹೆತ್ತವರು ಹೊರಬೇಕಾಗುತ್ತದೆ; ಎಲ್ಲರೂ ಶುಚಿಯಾಗಿದ್ದಾರೆ, ತಿಂಡಿ ತಿಂದಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಸಿದ್ಧರಾಗಿದ್ದಾರೆ ಎಂದು ಅವರು ನೋಡಿಕೊಳ್ಳಬೇಕಾಗುತ್ತದೆ. ಆದರೆ ಮಕ್ಕಳಿರುವಾಗ ನೆನಸದಂಥ ಗಳಿಗೆಯಲ್ಲಿ ಒಂದಲ್ಲ ಒಂದು ಅನಿರೀಕ್ಷಿತ ವಿಷಯವು ಸಂಭವಿಸಬಲ್ಲದು. ಹಿರಿಯ ಮಗನು ಆಟವಾಡುತ್ತಿರುವಾಗ ತನ್ನ ಪ್ಯಾಂಟನ್ನು ಹರಿದುಹಾಕಬಹುದು, ಅಥವಾ ಚಿಕ್ಕವನು ತನ್ನ ಬಟ್ಟಲಿನಿಂದ ತಿಂಡಿಯನ್ನು ಚೆಲ್ಲಿಬಿಡಬಹುದು, ಅಥವಾ ಮಕ್ಕಳ ಮಧ್ಯೆ ಯಾವುದೊ ವಿಷಯದ ಬಗ್ಗೆ ವಾಗ್ವಾದ ಶುರುವಾಗಬಹುದು. (ಜ್ಞಾನೋಕ್ತಿ 22:15) ಇವೆಲ್ಲವುಗಳ ಫಲಿತಾಂಶ ಏನಾಗಿರುತ್ತದೆ? ಹೆತ್ತವರು ತುಂಬ ಜಾಗರೂಕತೆಯಿಂದ ಮಾಡಿದಂಥ ಯೋಜನೆಗಳೆಲ್ಲವೂ ತಲೆಕೆಳಗಾಗಬಹುದು. ಹಾಗಿದ್ದರೂ, ಕುಟುಂಬವು ಬಹುಮಟ್ಟಿಗೆ ಯಾವಾಗಲೂ ಕೂಟಗಳು ಆರಂಭಿಸುವ ಸಾಕಷ್ಟು ಸಮಯಕ್ಕೆ ಮುಂಚೆಯೇ ರಾಜ್ಯ ಸಭಾಗೃಹದಲ್ಲಿರುತ್ತದೆ. ಅವರು ವಾರವಾರವೂ ವರ್ಷಾನುವರ್ಷವೂ ಅಲ್ಲಿಗೆ ಬರುತ್ತ ಇರುವುದನ್ನು ಮತ್ತು ಮಕ್ಕಳು ಬೆಳೆಯುತ್ತಾ ಯೆಹೋವನ ಸೇವೆಮಾಡುವುದನ್ನು ನೋಡುವುದು ಎಷ್ಟು ಪ್ರೋತ್ಸಾಹಕರವಾಗಿದೆ!
3 ಹೆತ್ತವರಾಗಿ ನೀವು ಮಾಡುವ ಕೆಲಸವು ಕೆಲವೊಮ್ಮೆ ಕಷ್ಟಕರವಾದದ್ದು ಮತ್ತು ಬಳಲಿಸುವಂಥದ್ದು ಆಗಿದ್ದರೂ, ಯೆಹೋವನು ನಿಮ್ಮ ಪ್ರಯತ್ನಗಳಿಗೆ ತುಂಬ ಬೆಲೆಕೊಡುತ್ತಾನೆಂಬ ಆಶ್ವಾಸನೆ ನಿಮಗಿರಲಿ. ಯೆಹೋವನು ಕುಟುಂಬ ಏರ್ಪಾಡಿನ ಮೂಲಕರ್ತನಾಗಿದ್ದಾನೆ. ಈ ಕಾರಣದಿಂದಲೇ ಆತನ ವಾಕ್ಯವು, ಪ್ರತಿಯೊಂದು ಕುಟುಂಬವು ಆತನಿಂದ “ಹೆಸರು ಪಡೆದಿದೆ,” ಅಂದರೆ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳುತ್ತದೆ. (ಎಫೆಸ 3:14, 15, NIBV) ಆದುದರಿಂದ, ಹೆತ್ತವರಾದ ನೀವು ಕುಟುಂಬದಲ್ಲಿ ನಿಮಗಿರುವ ಪಾತ್ರಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಪ್ರಯತ್ನಿಸುವಾಗ, ವಿಶ್ವ ಪರಮಾಧಿಕಾರಿ ಕರ್ತನನ್ನು ಸನ್ಮಾನಿಸುತ್ತೀರಿ. (1 ಕೊರಿಂಥ 10:31) ಇದೊಂದು ವಿಶೇಷ ಗೌರವವಾಗಿದೆಯಲ್ಲವೆ? ಆದಕಾರಣ, ಯೆಹೋವನು ಹೆತ್ತವರಿಗೆ ಇತ್ತಿರುವ ನೇಮಕದ ಕುರಿತು ನಾವು ಪರಿಶೀಲಿಸುವುದು ಸಮಂಜಸವಾಗಿದೆ. ಈ ಲೇಖನದಲ್ಲಿ ನಾವು ಆ ನೇಮಕದ ಬಗ್ಗೆ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸುವುದರ ಸಂಬಂಧದಲ್ಲಿ ಪರಿಗಣಿಸಲಿದ್ದೇವೆ. ಹೆತ್ತವರು ಯಾವ ಮೂರು ವಿಧಗಳಲ್ಲಿ ಅಗತ್ಯವಿರುವುದನ್ನು ಒದಗಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆ ಎಂಬುದನ್ನು ಪುನರ್ವಿಮರ್ಶಿಸೋಣ.
ಭೌತಿಕವಾಗಿ ಒದಗಿಸುವುದು
4 “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ” ಎಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 5:8) ಪೌಲನು ಇಲ್ಲಿ “ಯಾವನಾದರೂ” ಎಂದು ಹೇಳಿದಾಗ, ಅವನ ಮನಸ್ಸಿನಲ್ಲಿ ಯಾರಿದ್ದರು? ಸಾಮಾನ್ಯವಾಗಿ ಕುಟುಂಬದ ತಲೆಯಾಗಿರುವ ತಂದೆಯೇ. ದೇವರು ಸ್ತ್ರೀಗೂ, ಆಕೆ ತನ್ನ ಗಂಡನಿಗೆ ಸಹಕಾರಿಯಾಗಿರುವ ಗೌರವಪೂರ್ಣ ಪಾತ್ರವನ್ನು ಕೊಡುತ್ತಾನೆ. (ಆದಿಕಾಂಡ 2:18) ಬೈಬಲ್ ಕಾಲಗಳ ಸ್ತ್ರೀಯರು ಅನೇಕವೇಳೆ ಕುಟುಂಬಗಳಿಗೆ ಅಗತ್ಯವಿದ್ದದನ್ನು ಒದಗಿಸುವ ವಿಷಯದಲ್ಲಿ ತಮ್ಮ ಗಂಡಂದಿರಿಗೆ ಸಹಾಯ ನೀಡುತ್ತಿದ್ದರು. (ಜ್ಞಾನೋಕ್ತಿ 31:13, 14, 16) ಇಂದು ಏಕಹೆತ್ತವರಿರುವ ಕುಟುಂಬಗಳು ಹಿಂದೆಂದಿಗಿಂತಲೂ ಸರ್ವಸಾಮಾನ್ಯವಾಗಿವೆ.a ಅನೇಕ ಕ್ರೈಸ್ತ ಏಕಹೆತ್ತವರು ತಮ್ಮ ಕುಟುಂಬಗಳಿಗೆ ಅಗತ್ಯವಿರುವುದನ್ನು ಒದಗಿಸುವುದರಲ್ಲಿ ಪ್ರಶಂಸಾರ್ಹ ಕೆಲಸವನ್ನು ಮಾಡುತ್ತಿದ್ದಾರೆ. ಆದರೂ ತಂದೆಯು ಮುಂದಾಳತ್ವ ವಹಿಸಿಕೊಳ್ಳುತ್ತಿದ್ದು ಇಬ್ಬರೂ ಹೆತ್ತವರಿರುವುದು ಆದರ್ಶಪ್ರಾಯ.
5 ಒಂದನೇ ತಿಮೊಥೆಯ 5:8ರಲ್ಲಿ, ಒದಗಿಸುವಿಕೆಯ ಕುರಿತು ತಿಳಿಸುತ್ತಿದ್ದಾಗ ಪೌಲನ ಮನಸ್ಸಿನಲ್ಲಿ ಯಾವ ವಿಷಯವಿತ್ತು? ಕುಟುಂಬದ ಭೌತಿಕ ಅಗತ್ಯಗಳ ಕುರಿತು ಅವನು ನೇರವಾಗಿ ಮಾತಾಡುತ್ತಿದ್ದನೆಂದು ಪೂರ್ವಾಪರವು ಸೂಚಿಸುತ್ತದೆ. ಈ ಅಗತ್ಯಗಳನ್ನು ಪೂರೈಸಲು ಇಂದಿನ ಜಗತ್ತಿನಲ್ಲಿ ಕುಟುಂಬದ ತಲೆಯು ಅನೇಕ ಅಡ್ಡಿತಡೆಗಳನ್ನು ಎದುರಿಸುತ್ತಾನೆ. ಇಂದು ಲೋಕವ್ಯಾಪಕವಾಗಿ ಆರ್ಥಿಕ ಬಿಕ್ಕಟ್ಟುಗಳು, ಉದ್ಯೋಗದಿಂದ ತೆಗೆದುಹಾಕಲ್ಪಡುವುದು, ನಿರುದ್ಯೋಗದ ಉನ್ನತ ಪ್ರಮಾಣಗಳು ಮತ್ತು ಗಗನಕ್ಕೇರುತ್ತಿರುವ ಬೆಲೆಗಳು ಸರ್ವಸಾಧಾರಣವಾಗಿವೆ. ಇಂತಹ ಪಂಥಾಹ್ವಾನಗಳ ಎದುರಿನಲ್ಲೂ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸುವ ಒಬ್ಬ ವ್ಯಕ್ತಿಗೆ ಪಟ್ಟುಹಿಡಿದು ಮುಂದುವರಿಯಲು ಯಾವುದು ಸಹಾಯಮಾಡಬಲ್ಲದು?
6 ಯೆಹೋವನು ಕೊಟ್ಟಿರುವ ನೇಮಕವನ್ನು ತಾನು ಪೂರೈಸುತ್ತಿದ್ದೇನೆಂದು ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸುವ ಆ ವ್ಯಕ್ತಿಯು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಆಜ್ಞೆಗೆ ವಿಧೇಯನಾಗಲು ಶಕ್ತನಾಗಿದ್ದರೂ ಹಾಗೆ ಮಾಡಲು ನಿರಾಕರಿಸುವವನು “ನಂಬಿಕೆಯನ್ನು ತಿರಸ್ಕರಿಸಿದ” ವ್ಯಕ್ತಿಗೆ ಸಮಾನನೆಂದು ಪೌಲನ ಪ್ರೇರಿತ ಮಾತುಗಳು ತೋರಿಸುತ್ತವೆ. ದೇವರ ಮುಂದೆ ಇಂಥ ಒಂದು ನಿಲುವನ್ನು ಪಡೆಯದಿರಲು ಒಬ್ಬ ಕ್ರೈಸ್ತನು ತನ್ನಿಂದಾದುದೆಲ್ಲವನ್ನು ಮಾಡುವನು. ಆದರೆ ವಿಷಾದಕರ ಸಂಗತಿಯೇನೆಂದರೆ ಇಂದಿನ ಲೋಕದಲ್ಲಿ ಅನೇಕರು ‘ಮಮತೆಯಿಲ್ಲದವರು’ ಆಗಿದ್ದಾರೆ. (2 ತಿಮೊಥೆಯ 3:1, 3) ಆದುದರಿಂದ ಅಸಂಖ್ಯಾತ ಮಂದಿ ತಂದೆಗಳು ತಮ್ಮ ಈ ಜವಾಬ್ದಾರಿಯನ್ನು ತೊರೆದು, ತಮ್ಮ ಕುಟುಂಬಗಳನ್ನು ಯಾವುದೇ ಆಸರೆಯಿಲ್ಲದೆ ಬಿಟ್ಟುಬಿಡುತ್ತಾರೆ. ಕ್ರೈಸ್ತ ಗಂಡಂದಿರಾದರೊ ತಮ್ಮ ಸ್ವಂತದವರಿಗೆ ಅಗತ್ಯವಿರುವುದನ್ನು ಒದಗಿಸುವ ವಿಷಯದಲ್ಲಿ ಅಂತಹ ಕಠಿನ ಹೃದಯದ, ಹೊಣೆಗಾರಿಕೆಯಿಲ್ಲದ ದೃಷ್ಟಿಕೋನವನ್ನಿಡುವುದಿಲ್ಲ. ತಮ್ಮ ಸಹೋದ್ಯೋಗಿಗಳಲ್ಲಿ ಅನೇಕರಿಗೆ ಅಸದೃಶವಾಗಿ ಕ್ರೈಸ್ತರು, ಕೀಳುಮಟ್ಟದ್ದೆಂದು ಎಣಿಸಲಾಗುವ ಕೆಲಸವನ್ನು ಸಹ ಗೌರವಭರಿತ ಹಾಗೂ ಪ್ರಾಮುಖ್ಯವೆಂದು ಮತ್ತು ಯೆಹೋವ ದೇವರನ್ನು ಸಂತೋಷಪಡಿಸುವ ವಿಧವಾಗಿದೆ ಎಂದು ಪರಿಗಣಿಸುತ್ತಾರೆ. ಏಕೆಂದರೆ ಅದು ತಮ್ಮ ಪ್ರಿಯರಿಗೆ ಅಗತ್ಯವಿರುವುದನ್ನು ಒದಗಿಸಲು ಅವರನ್ನು ಶಕ್ತಗೊಳಿಸುತ್ತದೆ.
7 ಕುಟುಂಬದ ತಲೆಗಳು ಯೇಸುವಿನ ಪರಿಪೂರ್ಣ ಮಾದರಿಯ ಕುರಿತು ಧ್ಯಾನಿಸುವುದನ್ನೂ ಸಹಾಯಕರವಾಗಿ ಕಂಡುಕೊಂಡಾರು. ಬೈಬಲು ಪ್ರವಾದನಾರೂಪವಾಗಿ ಯೇಸುವನ್ನು “ನಿತ್ಯನಾದ ತಂದೆ” ಎಂದು ಕರೆಯುತ್ತದೆಂಬುದನ್ನು ನೆನಪಿನಲ್ಲಿಡಿರಿ. (ಯೆಶಾಯ 9:6, 7) “ಕಡೇ ಆದಾಮ”ನಾಗಿ ಯೇಸು, ತನ್ನಲ್ಲಿ ನಂಬಿಕೆಯಿಡುವ ಮಾನವಕುಲದ ತಂದೆಯಾಗಿ ಕಾರ್ಯಸಾಧಕ ರೀತಿಯಲ್ಲಿ ‘ಮೊದಲನೆಯ ಮನುಷ್ಯನಾದ ಆದಾಮನ’ ಸ್ಥಾನವನ್ನು ತೆಗೆದುಕೊಳ್ಳುತ್ತಾನೆ. (1 ಕೊರಿಂಥ 15:45) ಸ್ವಾರ್ಥಿಯೂ ಸ್ವಹಿತಸಾಧಕನೂ ಎಂದು ಸಾಬೀತಾದ ಆದಾಮನಿಗೆ ವ್ಯತಿರಿಕ್ತವಾಗಿ, ಯೇಸು ಆದರ್ಶ ತಂದೆಯಾಗಿದ್ದಾನೆ. ಅವನ ವಿಷಯವಾಗಿ ಬೈಬಲ್ ಹೀಗನ್ನುತ್ತದೆ: “ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದದೆ.” (1 ಯೋಹಾನ 3:16) ಹೌದು, ಯೇಸು ತನ್ನ ಜೀವವನ್ನು ಸ್ವಇಚ್ಛೆಯಿಂದ ಬೇರೆಯವರಿಗಾಗಿ ಒಪ್ಪಿಸಿಕೊಟ್ಟನು. ಅವನು ಅನುದಿನವೂ ಚಿಕ್ಕ ವಿಷಯಗಳಲ್ಲಿ ಸಹ ಬೇರೆಯವರ ಅಗತ್ಯಗಳನ್ನು ತನ್ನ ಸ್ವಂತ ಅಗತ್ಯಗಳಿಗಿಂತ ಮೊದಲಾಗಿ ಇಟ್ಟನು. ಹೆತ್ತವರಾದ ನೀವು ಈ ಸ್ವತ್ಯಾಗದ ಮನೋಭಾವವನ್ನು ಅನುಕರಿಸಬೇಕು.
8 “ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು” ಎಂದು ದೇವರ ಮೊಂಡರಾಗಿದ್ದ ಜನರಿಗೆ ಯೇಸು ಹೇಳಿದ ಮಾತುಗಳಿಂದ ಹೆತ್ತವರು ನಿಸ್ವಾರ್ಥ ಪ್ರೀತಿಯ ಕುರಿತು ಬಹಳಷ್ಟನ್ನು ಕಲಿಯಬಲ್ಲರು. (ಮತ್ತಾಯ 23:37) ಒಂದು ತಾಯಿಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿಯಲ್ಲಿ ಕೂಡಿಸುವ, ಕಣ್ಣಿಗೆ ಕಟ್ಟುವಂಥ ರೀತಿಯ ಚಿತ್ರಣವನ್ನು ಯೇಸು ಇಲ್ಲಿ ಮೂಡಿಸಿದನು. ಹೌದು, ತನ್ನ ಮರಿಗಳನ್ನು ಹಾನಿಯಿಂದ ತಪ್ಪಿಸಲು ತನ್ನನ್ನೇ ಅಪಾಯಕ್ಕೊಳಪಡಿಸುವ ಒಂದು ತಾಯಿಪಕ್ಷಿಗಿರುವ ಕಾಪಾಡುವ ಸಹಜ ಪ್ರವೃತ್ತಿಯಿಂದ ಹೆತ್ತವರು ಬಹಳಷ್ಟನ್ನು ಕಲಿಯಬಲ್ಲರು. ಈ ತಂದೆ/ತಾಯಿ ಪಕ್ಷಿಗಳು ದಿನದಿನವೂ ಏನು ಮಾಡುತ್ತವೆಯೋ ಅದು ಸಹ ನೋಡಲು ಗಮನಾರ್ಹವಾಗಿದೆ. ಅವು ಆಹಾರವನ್ನು ಹುಡುಕಲಿಕ್ಕಾಗಿ ಎಡೆಬಿಡದೆ ಗೂಡಿನಿಂದ ಹಾರಿಹೋಗುತ್ತಾ ಬರುತ್ತಾ ಇರುತ್ತವೆ. ಅವಕ್ಕೆ ಎಷ್ಟು ದಣಿವಾದರೂ, ತಮ್ಮ ಮರಿಗಳ ತೆರೆದ ಕೊಕ್ಕುಗಳೊಳಗೆ ಆಹಾರವನ್ನು ಹಾಕುತ್ತ ಇರುತ್ತವೆ. ಮರಿಗಳು ಅದನ್ನು ನುಂಗಿ, ಸಾಮಾನ್ಯವಾಗಿ ಇನ್ನೂ ಹೆಚ್ಚು ಆಹಾರಕ್ಕಾಗಿ ಕೂಗಾಡುತ್ತವೆ. ಯೆಹೋವನ ಸೃಷ್ಟಿಜೀವಿಗಳಲ್ಲಿ ಅನೇಕ ಜೀವಿಗಳು, ತಮ್ಮ ಮರಿಗಳ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ “ಸಹಜ ಪ್ರವೃತ್ತಿಯಿಂದ ವಿವೇಕವುಳ್ಳವುಗಳು” ಆಗಿವೆ.—ಜ್ಞಾನೋಕ್ತಿ 30:24, NW.
9 ತದ್ರೀತಿಯಲ್ಲಿ, ಲೋಕದಲ್ಲೆಲ್ಲೂ ಇರುವ ಕ್ರೈಸ್ತ ಹೆತ್ತವರು ಪ್ರಶಂಸಾರ್ಹವಾದ ರೀತಿಯಲ್ಲಿ ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ಹೆತ್ತವರಾದ ನೀವು ನಿಮ್ಮ ಮಕ್ಕಳಿಗೆ ಹಾನಿಯಾಗುವ ಬದಲಿಗೆ ಸ್ವತಃ ಹಾನಿಯನ್ನು ಅನುಭವಿಸಲು ಸಿದ್ಧರಾಗಿದ್ದೀರಿ. ಅಲ್ಲದೆ ನೀವು ನಿಮ್ಮ ಸ್ವಂತದವರಿಗೆ ಅಗತ್ಯವಿರುವಂಥದ್ದನ್ನು ಒದಗಿಸಲಿಕ್ಕಾಗಿ ದಿನಾಲೂ ಇಷ್ಟಪೂರ್ವಕವಾಗಿ ತ್ಯಾಗಗಳನ್ನು ಮಾಡುತ್ತೀರಿ. ನಿಮ್ಮಲ್ಲಿ ಅನೇಕರು ಬೆಳಗ್ಗೆ ಬೇಗನೆ ಎದ್ದು, ಬಳಲಿಸುವಂಥ ಅಥವಾ ಬೇಸರಗೊಳಿಸುವಂಥ ಉದ್ಯೋಗಗಳಿಗೆ ಹೋಗಿ ದುಡಿಯುತ್ತೀರಿ. ನಿಮ್ಮ ಕುಟುಂಬಕ್ಕೆ ಪೌಷ್ಟಿಕ ಆಹಾರವನ್ನು ದೊರಕಿಸಲಿಕ್ಕಾಗಿ ನೀವು ಪ್ರಯಾಸಪಡುತ್ತೀರಿ. ನಿಮ್ಮ ಮಕ್ಕಳಿಗೆ ನಿರ್ಮಲವಾದ ಉಡುಪು, ಸೂಕ್ತವಾದ ವಸತಿ, ತಕ್ಕಮಟ್ಟಿಗಿನ ವಿದ್ಯಾಭ್ಯಾಸವು ದೊರಕುವಂತೆ ನೀವು ಹೆಣಗಾಡುತ್ತೀರಿ. ಮತ್ತು ನೀವಿದನ್ನು ದಿನದಿನವೂ, ವರ್ಷವರ್ಷವೂ ಮಾಡುತ್ತಿರುತ್ತೀರಿ. ಇಂತಹ ಸ್ವತ್ಯಾಗ ಮತ್ತು ಸಹನೆ ನಿಶ್ಚಯವಾಗಿಯೂ ಯೆಹೋವನನ್ನು ಮೆಚ್ಚಿಸುತ್ತದೆ! (ಇಬ್ರಿಯ 13:16) ಆದರೆ ಅದೇ ಸಮಯದಲ್ಲಿ, ನಿಮ್ಮ ಸ್ವಂತದವರಿಗೆ ಒದಗಿಸುವ ಹೆಚ್ಚು ಪ್ರಾಮುಖ್ಯವಾದ ವಿಧಗಳಿವೆ ಎಂಬುದನ್ನೂ ನೀವು ನೆನಪಿಸಿಕೊಳ್ಳುತ್ತೀರಿ.
ಆಧ್ಯಾತ್ಮಿಕವಾಗಿ ಒದಗಿಸುವುದು
10 ಭೌತಿಕವಾಗಿ ಒದಗಿಸುವುದಕ್ಕಿಂತಲೂ ಹೆಚ್ಚು ಆವಶ್ಯಕವಾದುದು ಆಧ್ಯಾತ್ಮಿಕ ಒದಗಿಸುವಿಕೆಯಾಗಿದೆ. ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4; 5:3) ಹೆತ್ತವರಾದ ನೀವು ಆಧ್ಯಾತ್ಮಿಕವಾಗಿ ಒದಗಿಸಲು ಏನು ಮಾಡಬಲ್ಲಿರಿ?
11 ಈ ವಿಷಯದ ಕುರಿತು ಮಾತಾಡುವಾಗ, ಪ್ರಾಯಶಃ ಧರ್ಮೋಪದೇಶಕಾಂಡ 6:5-7ರ ಶಾಸ್ತ್ರೀಯ ಭಾಗವು ಅತಿ ಹೆಚ್ಚಾಗಿ ಉದ್ಧರಿಸಲ್ಪಟ್ಟಿರುತ್ತದೆ. ನಿಮ್ಮ ಬೈಬಲನ್ನು ದಯವಿಟ್ಟು ತೆರೆದು ಈ ವಚನಗಳನ್ನು ಓದಿರಿ. ಅಲ್ಲಿ, ಹೆತ್ತವರು ಮೊದಲಾಗಿ ತಮ್ಮ ಸ್ವಂತ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವಂತೆ ಮತ್ತು ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಂಡು ಆತನ ಮಾತುಗಳನ್ನು ಹೃದಯದಲ್ಲಿಟ್ಟುಕೊಳ್ಳುವಂತೆ ಹೇಳಲಾಗಿರುವುದನ್ನು ಗಮನಿಸಿರಿ. ಹೌದು, ಯೆಹೋವನ ಮಾರ್ಗಗಳು, ಮೂಲತತ್ವಗಳು ಮತ್ತು ನಿಯಮಗಳ ಬಗ್ಗೆ ನಿಜವಾದ ತಿಳಿವಳಿಕೆಯನ್ನು ಪಡೆದುಕೊಂಡು ಅವುಗಳನ್ನು ಪ್ರೀತಿಸುವ ಸಲುವಾಗಿ ನೀವು ದೇವರ ವಾಕ್ಯದ ಗಂಭೀರ ವಿದ್ಯಾರ್ಥಿಗಳಾಗಿದ್ದು ಬೈಬಲನ್ನು ಕ್ರಮವಾಗಿ ಓದಿ, ಅದರ ಕುರಿತು ಧ್ಯಾನಿಸಬೇಕು. ಇದರ ಪರಿಣಾಮವಾಗಿ ನಿಮ್ಮ ಹೃದಯವು ಅತ್ಯಾಕರ್ಷಕ ಬೈಬಲ್ ಸತ್ಯಗಳಿಂದ ತುಂಬಿಕೊಳ್ಳುವುದು. ಇದು ನೀವು ಆನಂದಪಡುವಂತೆ ಮಾಡುವುದು, ಮತ್ತು ನಿಮ್ಮಲ್ಲಿ ಯೆಹೋವನಿಗಾಗಿ ಪೂಜ್ಯಭಾವ ಹಾಗೂ ಪ್ರೀತಿಯನ್ನು ಪ್ರಚೋದಿಸುವುದು. ನಿಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳಲು ನಿಮ್ಮ ಬಳಿ ಒಳ್ಳೆಯ ವಿಷಯಗಳ ಬೊಕ್ಕಸವಿರುವುದು.—ಲೂಕ 6:45.
12 ಆಧ್ಯಾತ್ಮಿಕವಾಗಿ ಬಲಶಾಲಿಗಳಾಗಿರುವ ಹೆತ್ತವರು ಧರ್ಮೋಪದೇಶಕಾಂಡ 6:7ರಲ್ಲಿ ಹೇಳಿರುವಂತೆ, ಯೆಹೋವನ ಮಾತುಗಳನ್ನು ತಮ್ಮ ಮಕ್ಕಳಲ್ಲಿ ಪ್ರತಿಯೊಂದು ಸಂದರ್ಭದಲ್ಲಿಯೂ ‘ಅಭ್ಯಾಸಮಾಡಿಸಲು’ ಅಥವಾ ನಾಟಿಸಲು ಸಜ್ಜಿತರಾಗಿರುತ್ತಾರೆ. ‘ನಾಟಿಸುವುದು’ ಎಂದರೆ ಪುನರಾವರ್ತನೆಗಳ ಮೂಲಕ ಕಲಿಸಿ ಅಚ್ಚೊತ್ತುವುದು ಎಂದರ್ಥ. ನಾವೆಲ್ಲರೂ, ಅದರಲ್ಲೂ ವಿಶೇಷವಾಗಿ ಮಕ್ಕಳು, ಕಲಿಯಬೇಕಾದರೆ ಪುನರಾವರ್ತನೆ ಅಗತ್ಯವೆಂಬುದು ಯೆಹೋವನಿಗೆ ಚೆನ್ನಾಗಿ ಗೊತ್ತು. ಆದುದರಿಂದಲೇ ಯೇಸು ತನ್ನ ಶುಶ್ರೂಷೆಯಲ್ಲಿ ಪುನರಾವರ್ತನೆಯನ್ನು ಉಪಯೋಗಿಸಿದನು. ಉದಾಹರಣೆಗೆ, ತನ್ನ ಶಿಷ್ಯರು ದುರಹಂಕಾರಿಗಳೂ ಸ್ಪರ್ಧಾತ್ಮಕರೂ ಆಗಿರುವ ಬದಲಿಗೆ ದೀನರಾಗಿರಬೇಕೆಂದು ಕಲಿಸುವಾಗ, ಆ ಒಂದೇ ಮೂಲತತ್ವವನ್ನು ಪುನರಾವರ್ತಿಸಲು ಅವನು ವಿವಿಧ ವಿಧಾನಗಳನ್ನು ಕಂಡುಹಿಡಿದನು. ತರ್ಕಬದ್ಧವಾಗಿ ಮಾತಾಡುವ ಮೂಲಕ, ದೃಷ್ಟಾಂತಿಸುವ ಮೂಲಕ ಮತ್ತು ಪ್ರತ್ಯಕ್ಷಾಭಿನಯಿಸುವ ಮೂಲಕ ಸಹ ಅವನು ಕಲಿಸಿದನು. (ಮತ್ತಾಯ 18:1-4; 20:25-27; ಯೋಹಾನ 13:12-15) ಆದರೆ ಯೇಸು ಎಂದಿಗೂ ಅಸಹನೆಯನ್ನು ತೋರಿಸದೆ ಇದ್ದದ್ದು ಗಮನಾರ್ಹ. ತದ್ರೀತಿಯಲ್ಲೇ ಹೆತ್ತವರು ತಮ್ಮ ಮಕ್ಕಳಿಗೆ ಮೂಲಭೂತ ಸತ್ಯಗಳನ್ನು ಕಲಿಸಲು, ಮಕ್ಕಳು ಅವನ್ನು ಹೀರಿಕೊಂಡು ಅನ್ವಯಿಸುವ ವರೆಗೆ ಅವನ್ನು ತಾಳ್ಮೆಯಿಂದ ಪುನರಾವರ್ತಿಸಲು ಬೇರೆಬೇರೆ ವಿಧಾನಗಳನ್ನು ಕಂಡುಹಿಡಿಯುವುದು ಆವಶ್ಯಕ.
13 ಇಂತಹ ಬೋಧಿಸುವಿಕೆಗೆ ಕುಟುಂಬ ಅಧ್ಯಯನ ವೇಳೆಗಳು ಅತ್ಯುತ್ತಮ ಸಂದರ್ಭಗಳಾಗಿವೆ. ಹೌದು ಕ್ರಮಬದ್ಧವಾದ, ಭಕ್ತಿವರ್ಧಕವಾದ, ಸಂತೋಷಭರಿತ ಕುಟುಂಬ ಬೈಬಲ್ ಅಧ್ಯಯನವು ಕೌಟುಂಬಿಕ ಆಧ್ಯಾತ್ಮಿಕತೆಯ ಕೀಲಿ ಕೈಯಾಗಿರುತ್ತದೆ. ಲೋಕಾದ್ಯಂತ ಕ್ರೈಸ್ತ ಕುಟುಂಬಗಳು, ಅಂಥ ಅಧ್ಯಯನಗಳನ್ನು ಮಾಡುವುದರಲ್ಲಿ ಸಂತೋಷಿಸುತ್ತವೆ. ಯೆಹೋವನ ಸಂಘಟನೆಯ ಮೂಲಕ ಒದಗಿಸಲ್ಪಟ್ಟಿರುವ ಸಾಹಿತ್ಯಗಳನ್ನು ಅವರು ಉಪಯೋಗಿಸುತ್ತಾರೆ ಮತ್ತು ತಮ್ಮ ಮಕ್ಕಳ ಅಗತ್ಯಗಳಿಗನುಸಾರ ಅಧ್ಯಯನವನ್ನು ಹೊಂದಿಸಿಕೊಳ್ಳುತ್ತಾರೆ. ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್) ಹಾಗೂ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕಗಳು ಈ ಸಂಬಂಧದಲ್ಲಿ ಗಮನಾರ್ಹವಾದ ಉಡುಗೊರೆಗಳಾಗಿವೆ.b ಆದರೆ, ಕುಟುಂಬ ಅಧ್ಯಯನವು ಮಕ್ಕಳಿಗೆ ಕಲಿಸಲಿಕ್ಕಾಗಿರುವಂಥ ಒಂದೇ ಒಂದು ಸಮಯವಲ್ಲ.
14 ಧರ್ಮೋಪದೇಶಕಾಂಡ 6:7 ತೋರಿಸುವಂತೆ, ಹೆತ್ತವರಾದ ನೀವು ನಿಮ್ಮ ಮಕ್ಕಳೊಂದಿಗೆ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುವ ಸಂದರ್ಭಗಳು ಬಹಳಷ್ಟು ಇವೆ. ಕೂಡಿ ಪ್ರಯಾಣಿಸುವಾಗ, ಕೆಲಸಮಾಡುವಾಗ ಮತ್ತು ಕೂಡಿ ವಿಶ್ರಮಿಸುತ್ತಿರುವಾಗ ನಿಮ್ಮ ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ನಿಮಗೆ ಅವಕಾಶಗಳು ದೊರೆಯಬಹುದು. ಆದರೆ ನೀವು ನಿರಂತರವೂ ಬೈಬಲ್ ಸತ್ಯಗಳ ಕುರಿತು ನಿಮ್ಮ ಮಕ್ಕಳಿಗೆ “ಭಾಷಣ ಬಿಗಿಯುವ” ಅಗತ್ಯವಿಲ್ಲ. ಬದಲಿಗೆ, ಕುಟುಂಬದ ಸಂಭಾಷಣೆಯನ್ನು ಭಕ್ತಿವೃದ್ಧಿಮಾಡುವ ಆಧ್ಯಾತ್ಮಿಕ ಮಟ್ಟದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿರಿ. ಉದಾಹರಣೆಗೆ, ಎಚ್ಚರ! ಪತ್ರಿಕೆಯಲ್ಲಿ ವಿವಿಧ ವಿಷಯಗಳ ಕುರಿತು ಅನೇಕ ಲೇಖನಗಳು ಬರುತ್ತವೆ. ಇಂತಹ ಲೇಖನಗಳು ಯೆಹೋವನ ಪ್ರಾಣಿಸೃಷ್ಟಿಯ ಕುರಿತು, ಲೋಕದ ಸುತ್ತಲೂ ಪ್ರಾಕೃತಿಕ ಸೌಂದರ್ಯವಿರುವ ಸ್ಥಳಗಳ ಕುರಿತು ಮತ್ತು ಮಾನವ ಸಂಸ್ಕೃತಿಗಳು ಹಾಗೂ ಜೀವನರೀತಿಗಳ ಕುರಿತಾದ ಸಂಭಾಷಣೆಗಳಿಗೆ ಆಧಾರವಾಗಿರಬಹುದು. ಇಂತಹ ಸಂಭಾಷಣೆಗಳಿಂದಾಗಿ ಮಕ್ಕಳು, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ಒದಗಿಸುವ ಸಾಹಿತ್ಯಗಳನ್ನು ಹೆಚ್ಚು ಓದುವಂತೆ ಪ್ರಚೋದಿಸಲ್ಪಡಬಹುದು.—ಮತ್ತಾಯ 24:45-47.
15 ಮಕ್ಕಳೊಂದಿಗೆ ಭಕ್ತಿವರ್ಧಕ ಸಂಭಾಷಣೆಗಳಲ್ಲಿ ತೊಡಗುವುದು ಇನ್ನೊಂದು ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲು ನಿಮಗೆ ಸಹಾಯಮಾಡುವುದು. ಕ್ರೈಸ್ತ ಮಕ್ಕಳು ತಮ್ಮ ನಂಬಿಕೆಯನ್ನು ಇತರರೊಂದಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಹಂಚಿಕೊಳ್ಳಲು ಕಲಿಯುವುದು ಆವಶ್ಯಕ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಬಂದಿರುವ ಯಾವುದಾದರೊಂದು ಆಸಕ್ತಿಕರ ವಿಷಯದ ಕುರಿತು ಮಾತಾಡುವಾಗ ಆ ವಿಷಯವನ್ನು ಶುಶ್ರೂಷೆಗೆ ಅನ್ವಯಿಸುವ ಅವಕಾಶಗಳಿಗಾಗಿ ನೀವು ಹುಡುಕಬಹುದು. ದೃಷ್ಟಾಂತಕ್ಕೆ, ನೀವು ಹೀಗೆ ಕೇಳಬಹುದು: “ಯೆಹೋವನ ಕುರಿತಾದ ಈ ವಿಷಯವನ್ನು ಇನ್ನೂ ಹೆಚ್ಚು ಜನರು ತಿಳಿಯುವಲ್ಲಿ ಎಷ್ಟು ಉತ್ತಮವಾಗಿರುವುದಲ್ಲವೆ? ಈ ವಿಷಯದಲ್ಲಿ ಒಬ್ಬ ವ್ಯಕ್ತಿಯ ಆಸಕ್ತಿಯನ್ನು ಹೇಗೆ ಕೆರಳಿಸಬಹುದೆಂದು ನೆನಸುತ್ತೀ?” ಇಂತಹ ಚರ್ಚೆಗಳು, ಎಳೆಯರಿಗೆ ತಾವು ಕಲಿಯುತ್ತಿರುವ ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಬಹುದು. ಬಳಿಕ, ನಿಮ್ಮ ಮಕ್ಕಳು ಶುಶ್ರೂಷೆಯಲ್ಲಿ ನಿಮ್ಮೊಂದಿಗಿರುವಾಗ, ಅಂತಹ ಸಂಭಾಷಣೆಗಳನ್ನು ಕಾರ್ಯರೂಪಕ್ಕೆ ಹಾಕುವ ನಿಜ ಮಾದರಿಯನ್ನು ನಿಮ್ಮಲ್ಲಿ ನೋಡುವರು. ಶುಶ್ರೂಷೆಯು ಮಹಾ ತೃಪ್ತಿ ಮತ್ತು ಹರ್ಷವನ್ನು ತರುವಂಥ ಆಸಕ್ತಿಭರಿತ ಹಾಗೂ ಸಂತೋಷದ ಕೆಲಸವಾಗಿದೆ ಎಂಬುದನ್ನೂ ಅವರು ಕಲಿತುಕೊಳ್ಳಬಹುದು.—ಅ. ಕೃತ್ಯಗಳು 20:35.
16 ಹೆತ್ತವರು ಪ್ರಾರ್ಥಿಸುವಾಗಲೂ ತಮ್ಮ ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಾರೆ. ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧವನ್ನು ಕಲಿಸಿದ್ದಲ್ಲದೆ ಅನೇಕ ಸಂದರ್ಭಗಳಲ್ಲಿ ಅವರೊಂದಿಗೆ ಪ್ರಾರ್ಥಿಸಿದನು ಸಹ. (ಲೂಕ 11:1-13) ಯೆಹೋವನ ಸ್ವಂತ ಕುಮಾರನೊಂದಿಗೆ ಪ್ರಾರ್ಥನೆಯಲ್ಲಿ ಜೊತೆಗೂಡಿದ್ದರಿಂದ ಅವರು ಅದೆಷ್ಟು ಸಂಗತಿಗಳನ್ನು ಕಲಿತಿರಬೇಕೆಂಬುದನ್ನು ತುಸು ಯೋಚಿಸಿರಿ! ಅದೇ ರೀತಿಯಲ್ಲಿ, ನಿಮ್ಮ ಮಕ್ಕಳೂ ನಿಮ್ಮ ಪ್ರಾರ್ಥನೆಗಳಿಂದ ಬಹಳಷ್ಟನ್ನು ಕಲಿಯಬಲ್ಲರು. ಉದಾಹರಣೆಗೆ, ನಮಗೆ ಯಾವುದೇ ಸಮಸ್ಯೆಗಳು ಇರಬಹುದಾದರೂ ನಾವು ಹೃದಯದಾಳದಿಂದ ಮುಕ್ತವಾಗಿ ಮಾತಾಡುವಂತೆ ಯೆಹೋವನು ಬಯಸುತ್ತಾನೆಂದು ಅವರು ಕಲಿಯಬಹುದು. ಹೌದು, ನಿಮ್ಮ ಪ್ರಾರ್ಥನೆಗಳು ನಿಮ್ಮ ಮಕ್ಕಳು ಒಂದು ಮಹತ್ವಪೂರ್ಣ ಆಧ್ಯಾತ್ಮಿಕ ಸತ್ಯವನ್ನು ಕಲಿತುಕೊಳ್ಳುವಂತೆ ಸಹಾಯಮಾಡಬಲ್ಲವು. ಆ ಸತ್ಯವೇನೆಂದರೆ, ತಮ್ಮ ಸ್ವರ್ಗೀಯ ಪಿತನೊಂದಿಗೆ ಅವರು ಒಂದು ಸಂಬಂಧವನ್ನು ಬೆಳೆಸಿಕೊಳ್ಳಬಲ್ಲರು ಎಂಬುದೇ.—1 ಪೇತ್ರ 5:7.
ಭಾವಾತ್ಮಕವಾಗಿ ಒದಗಿಸುವುದು
17 ಮಕ್ಕಳಿಗೆ ಮಹತ್ವಪೂರ್ಣವಾದ ಭಾವಾತ್ಮಕ ಅಗತ್ಯಗಳೂ ಇರುತ್ತವೆ. ಈ ಸಂಬಂಧದಲ್ಲಿ ಒದಗಿಸಬೇಕಾಗಿರುವ ವಿಷಯಗಳು ಎಷ್ಟು ಪ್ರಾಮುಖ್ಯವೆಂಬುದನ್ನು ದೇವರ ವಾಕ್ಯವು ಹೆತ್ತವರಿಗೆ ತಿಳಿಸುತ್ತದೆ. ದೃಷ್ಟಾಂತಕ್ಕೆ, ಪ್ರಾಯದ ಸ್ತ್ರೀಯರಿಗೆ ತಮ್ಮ ‘ಮಕ್ಕಳನ್ನು ಪ್ರೀತಿಸುವಂತೆ’ ಹೇಳಲಾಗಿದೆ. ಹಾಗೆ ಮಾಡುವುದು, ಯುವ ತಾಯಂದಿರು ಬುದ್ಧಿಕಲಿಯುವುದಕ್ಕೆ ಸಂಬಂಧಿಸಲ್ಪಟ್ಟಿದೆ. (ತೀತ 2:4, 5) ಒಂದು ಮಗುವಿಗೆ ಪ್ರೀತಿ ತೋರಿಸುವುದು ನಿಶ್ಚಯವಾಗಿಯೂ ಬುದ್ಧಿವಂತಿಕೆಯ ಕೆಲಸವಾಗಿದೆ. ಇದು ಮಗುವಿಗೆ ಪ್ರೀತಿಸಲು ಕಲಿಸುತ್ತದೆ ಮತ್ತು ಜೀವನಪರ್ಯಂತದ ಪ್ರಯೋಜನಗಳನ್ನು ತರುತ್ತದೆ. ಇನ್ನೊಂದು ಪಕ್ಕದಲ್ಲಿ, ಮಗುವಿಗೆ ಪ್ರೀತಿ ತೋರಿಸಲು ತಪ್ಪುವುದು ಬುದ್ಧಿಹೀನ ಕೆಲಸವೇ ಸರಿ. ಏಕೆಂದರೆ, ಇದರಿಂದ ವಿಪರೀತ ವೇದನೆಯುಂಟಾಗುವುದು ಮಾತ್ರವಲ್ಲ, ನಮಗೆ ಅಪರಿಪೂರ್ಣತೆಗಳಿದ್ದರೂ ಅತ್ಯಧಿಕ ಪ್ರೀತಿಯನ್ನು ತೋರಿಸುವ ಯೆಹೋವನನ್ನು ಅನುಕರಿಸುವುದರಲ್ಲಿ ನಾವು ತಪ್ಪಿಬಿದ್ದಿದ್ದೇವೆ ಎಂಬುದನ್ನೂ ಅದು ತೋರಿಸುತ್ತದೆ.—ಕೀರ್ತನೆ 103:8-14.
18 ಯೆಹೋವನು ತನ್ನ ಭೂಮಕ್ಕಳನ್ನು ಪ್ರೀತಿಸುವುದರಲ್ಲಿ ಆರಂಭದ ಹೆಜ್ಜೆಯನ್ನೂ ತೆಗೆದುಕೊಳ್ಳುತ್ತಾನೆ. ‘ದೇವರು ಮೊದಲು ನಮ್ಮನ್ನು ಪ್ರೀತಿಸಿದನು’ ಎನ್ನುತ್ತದೆ 1 ಯೋಹಾನ 4:19. ತಂದೆಗಳೇ ವಿಶೇಷವಾಗಿ ನೀವು ಮಕ್ಕಳೊಂದಿಗೆ ಪ್ರೀತಿಯ ಬಂಧವನ್ನು ಬೆಸೆಯಲು ಆರಂಭದ ಹೆಜ್ಜೆಯನ್ನು ತೆಗೆದುಕೊಂಡು, ಯೆಹೋವನನ್ನು ಅನುಕರಿಸಬೇಕು. ಮಕ್ಕಳು ‘ಮನಗುಂದದಂತೆ,’ ಅವರನ್ನು ಕೆಣಕುವುದನ್ನು ತಂದೆಗಳು ಬಿಟ್ಟುಬಿಡಬೇಕೆಂದು ಬೈಬಲು ಪ್ರೋತ್ಸಾಹಿಸುತ್ತದೆ. (ಕೊಲೊಸ್ಸೆ 3:21) ತಮ್ಮ ತಂದೆ/ತಾಯಿ ತಮ್ಮನ್ನು ಪ್ರೀತಿಸುವುದಿಲ್ಲ ಇಲ್ಲವೆ ತಾವು ಯಾವುದೇ ಬೆಲೆಯಿಲ್ಲದವರೂ ಎಂಬ ಅಭಿಪ್ರಾಯವು ಮಕ್ಕಳಲ್ಲಿ ಮೂಡುವುದಾದರೆ, ಅವರನ್ನು ಅದಕ್ಕಿಂತ ಹೆಚ್ಚು ಕೆಣಕುವಂಥ ಬೇರಾವುದೇ ವಿಷಯ ಇರಲಿಕ್ಕಿಲ್ಲ. ತಮ್ಮ ಭಾವನೆಗಳನ್ನು ತೋರ್ಪಡಿಸಲು ಹಿಂಜರಿಯುವ ತಂದೆಗಳು ಯೆಹೋವನ ಮಾದರಿಯನ್ನು ಜ್ಞಾಪಿಸಿಕೊಳ್ಳಬೇಕು. ಯೆಹೋವನು ತನ್ನ ಮಗನಿಗೆ ಒಪ್ಪಿಗೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಸ್ವರ್ಗದಿಂದಲೇ ಮಾತಾಡಿದನು. (ಮತ್ತಾಯ 3:17; 17:5) ಇದು ಯೇಸುವಿಗೆ ಎಷ್ಟು ಪ್ರೋತ್ಸಾಹದಾಯಕವಾಗಿ ಇದ್ದಿರಬೇಕು! ಅದೇ ರೀತಿ, ಹೆತ್ತವರ ಪ್ರೀತಿ ಮತ್ತು ಒಪ್ಪಿಗೆಯ ಪ್ರಾಮಾಣಿಕ ಅಭಿವ್ಯಕ್ತಿಗಳಿಂದ, ಮಕ್ಕಳು ತುಂಬ ಬಲ ಮತ್ತು ಧೈರ್ಯವನ್ನು ಪಡೆದುಕೊಳ್ಳುತ್ತಾರೆ.
19 ಹೆತ್ತವರಿಗಿರುವ ಪ್ರೀತಿಯು ಕೇವಲ ಬಾಯಿಮಾತುಗಳಿಂದ ಮಾತ್ರ ವ್ಯಕ್ತವಾಗುವಂಥದ್ದಲ್ಲ ಎಂಬುದು ನಿಜ. ಪ್ರೀತಿಯು ಪ್ರಧಾನವಾಗಿ ಕ್ರಿಯೆಯಿಂದ ವ್ಯಕ್ತವಾಗುತ್ತದೆ. ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಮಾಡಲ್ಪಡುವ ಒದಗಿಸುವಿಕೆಯು ಹೆತ್ತವರ ಪ್ರೀತಿಯನ್ನು ತೋರಿಸಿಕೊಡಬಲ್ಲದು; ವಿಶೇಷವಾಗಿ ಪ್ರೀತಿಯೇ ಪ್ರಧಾನ ಪ್ರಚೋದಕವೆಂಬ ವಿಧದಲ್ಲಿ ಅವರಿದನ್ನು ಮಾಡುವಲ್ಲಿ ಇದು ಸತ್ಯ. ಅದಲ್ಲದೆ, ಶಿಸ್ತು ಹೆತ್ತವರ ಪ್ರೀತಿಯ ಮಹತ್ವಪೂರ್ಣ ಅಭಿವ್ಯಕ್ತಿಯಾಗಿದೆ. ಯೆಹೋವನು ಸಹ “ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ.” (ಇಬ್ರಿಯ 12:6) ಇನ್ನೊಂದು ಕಡೆಯಲ್ಲಿ, ಶಿಸ್ತು ನೀಡಲು ತಪ್ಪುವುದು ಹೆತ್ತವರು ವಾಸ್ತವದಲ್ಲಿ ಮಕ್ಕಳನ್ನು ದ್ವೇಷಿಸುತ್ತಾರೆ ಎಂಬುದನ್ನು ವ್ಯಕ್ತಪಡಿಸುತ್ತದೆ! (ಜ್ಞಾನೋಕ್ತಿ 13:24) ಈ ವಿಷಯದಲ್ಲಿ, ಯೆಹೋವನು ಯಾವಾಗಲೂ ಸರಿಯಾದ ಸಮತೋಲನವನ್ನು ಕಾಪಾಡಿಕೊಂಡು, ‘ತಕ್ಕ ಪ್ರಮಾಣದಲ್ಲಿ’ ಶಿಕ್ಷಿಸುತ್ತಾನೆಯೇ ಹೊರತು ‘ಮಿತಿಮೀರಿ ಶಿಕ್ಷಿಸುವುದಿಲ್ಲ.’ (ಯೆರೆಮೀಯ 46:28, NW) ಇಂತಹ ಸಮತೋಲನವನ್ನು ಇಡುವುದು ಅಪರಿಪೂರ್ಣ ಹೆತ್ತವರಿಗೆ ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೂ, ಆ ಸಮತೋಲನವನ್ನಿಡಲು ನೀವು ಮಾಡುವ ಪ್ರತಿಯೊಂದು ಪ್ರಯತ್ನವು ಸಾರ್ಥಕ. ದೃಢವಾದ, ಪ್ರೀತಿಭರಿತ ಶಿಸ್ತು, ಒಂದು ಮಗು ದೊಡ್ಡವನಾಗಿ ಸಂತೋಷದ, ಫಲದಾಯಕ ಜೀವನ ನಡೆಸುವಂತೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 22:6) ಪ್ರತಿ ಕ್ರೈಸ್ತ ತಂದೆ/ತಾಯಿ ತನ್ನ ಮಗುವಿಗಾಗಿ ಬಯಸುವುದು ಇದನ್ನೇ, ಅಲ್ಲವೆ?
20 ಯೆಹೋವನು ಹೆತ್ತವರಾದ ನಿಮಗೆ ನೇಮಿಸಿರುವ ಈ ಪ್ರಾಮುಖ್ಯ ಕೆಲಸವನ್ನು ನೀವು ಮಾಡುವಾಗ, ಅಂದರೆ ನಿಮ್ಮ ಮಕ್ಕಳ ಭೌತಿಕ, ಆಧ್ಯಾತ್ಮಿಕ ಹಾಗೂ ಭಾವಾತ್ಮಕ ಅಗತ್ಯಗಳನ್ನು ಒದಗಿಸುವಾಗ ಬರುವ ಪ್ರತಿಫಲಗಳೊ ಅಪಾರ. ಈ ಮೂಲಕ ನೀವು ‘ಜೀವವನ್ನು ಆದುಕೊಳ್ಳುವ’ ಮತ್ತು ಬಳಿಕ “ಬದುಕಿಕೊಳ್ಳುವ” ಅತ್ಯುತ್ತಮ ಅವಕಾಶವನ್ನು ಮಕ್ಕಳ ಮುಂದೆ ಇಡುತ್ತಿದ್ದೀರಿ. (ಧರ್ಮೋಪದೇಶಕಾಂಡ 30:19) ವಯಸ್ಕರಾಗುತ್ತಿರುವಾಗ ಯೆಹೋವನನ್ನು ಸೇವಿಸಲು ಮತ್ತು ಜೀವಕ್ಕೆ ನಡೆಸುವ ಪಥದಲ್ಲೇ ಉಳಿಯಲು ಆರಿಸಿಕೊಳ್ಳುವ ಮಕ್ಕಳು ತಮ್ಮ ಹೆತ್ತವರಿಗೆ ಮಹತ್ತರವಾದ ಆನಂದವನ್ನು ತರುತ್ತಾರೆ. (ಕೀರ್ತನೆ 127:3-5) ಅಂತಹ ಹರ್ಷವು ಸದಾ ಬಾಳುವುದು! ಆದರೆ ಎಳೆಯರು ಈಗ ಯೆಹೋವನನ್ನು ಹೇಗೆ ಸ್ತುತಿಸಬಲ್ಲರು? ಮುಂದಿನ ಲೇಖನವು ಆ ವಿಷಯವನ್ನು ಚರ್ಚಿಸುವುದು.
[ಪಾದಟಿಪ್ಪಣಿಗಳು]
a ಈ ಚರ್ಚೆಯಲ್ಲಿ, ಒದಗಿಸುವವನನ್ನು ಸಾಧಾರಣವಾಗಿ ಪುಲ್ಲಿಂಗದಲ್ಲಿ ಸೂಚಿಸಲಾಗಿದೆ. ಆದರೂ, ಮೂಲತತ್ವಗಳು ಪ್ರಧಾನವಾಗಿ ಒದಗಿಸುವವರಾಗಿರುವ ಕ್ರೈಸ್ತ ಸ್ತ್ರೀಯರಿಗೂ ಅನ್ವಯಿಸುತ್ತವೆ.
b ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.
ನೀವು ಹೇಗೆ ಉತ್ತರಿಸುವಿರಿ?
ಹೆತ್ತವರು ತಮ್ಮ ಮಕ್ಕಳಿಗೆ,
• ಭೌತಿಕವಾಗಿ
• ಆಧ್ಯಾತ್ಮಿಕವಾಗಿ
• ಭಾವಾತ್ಮಕವಾಗಿ
ಒದಗಿಸಲು ಏನು ಮಾಡಬಲ್ಲರು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಕುಟುಂಬಗಳು ಒಟ್ಟಿಗೆ ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ನೋಡುವುದು ಪ್ರೋತ್ಸಾಹದಾಯಕವಾಗಿದೆ ಏಕೆ? (ಬಿ) ಸಮಯಕ್ಕೆ ಸರಿಯಾಗಿ ಕೂಟಗಳಿಗೆ ಬರುವ ವಿಷಯದಲ್ಲಿ ಕುಟುಂಬಗಳು ಎದುರಿಸುವ ಕೆಲವು ಪಂಥಾಹ್ವಾನಗಳಾವುವು?
3. ಯೆಹೋವನು ಕುಟುಂಬಗಳಿಗೆ ತುಂಬ ಬೆಲೆಕೊಡುತ್ತಾನೆಂದು ನಮಗೆ ಹೇಗೆ ತಿಳಿದದೆ?
4. ಕುಟುಂಬದಲ್ಲಿ, ಮಕ್ಕಳಿಗೆ ಅಗತ್ಯವಿರುವುದನ್ನು ಒದಗಿಸುವ ವಿಷಯದಲ್ಲಿ ಯೆಹೋವನು ಯಾವ ಏರ್ಪಾಡುಗಳನ್ನು ಮಾಡಿದ್ದಾನೆ?
5, 6. (ಎ) ತಮ್ಮ ಸ್ವಂತದವರಿಗೆ ಭೌತಿಕವಾಗಿ ಒದಗಿಸಲು ಪ್ರಯತ್ನಿಸುವವರು ಎದುರಿಸುವ ಕೆಲವು ಪಂಥಾಹ್ವಾನಗಳಾವುವು? (ಬಿ) ಐಹಿಕ ಕೆಲಸದ ಕಡೆಗೆ ಯಾವ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸುವ ಕ್ರೈಸ್ತರಿಗೆ ಪಟ್ಟುಹಿಡಿದು ಮುಂದುವರಿಯುವಂತೆ ಸಹಾಯಮಾಡುವುದು?
7. ಯೇಸುವಿನ ಮಾದರಿಯ ಕುರಿತು ಹೆತ್ತವರು ಧ್ಯಾನಿಸುವುದು ಸೂಕ್ತವೇಕೆ?
8, 9. (ಎ) ಪಕ್ಷಿಗಳು ತಮ್ಮ ಮರಿಗಳಿಗೆ ಅಗತ್ಯವಿರುವುದನ್ನು ನಿಸ್ವಾರ್ಥ ರೀತಿಯಲ್ಲಿ ಒದಗಿಸುತ್ತಿರುವ ವಿಷಯದಿಂದ ಹೆತ್ತವರು ಏನನ್ನು ಕಲಿಯಬಹುದು? (ಬಿ) ಅನೇಕ ಮಂದಿ ಕ್ರೈಸ್ತ ಹೆತ್ತವರು ಸ್ವತ್ಯಾಗದ ಮನೋಭಾವವನ್ನು ಹೇಗೆ ತೋರಿಸುತ್ತಿದ್ದಾರೆ?
10, 11. ಮಾನವರ ಅಗತ್ಯಗಳಲ್ಲಿ ಅತಿ ಪ್ರಾಮುಖ್ಯವಾದ ಅಗತ್ಯವು ಯಾವುದು, ಮತ್ತು ಮಕ್ಕಳಲ್ಲಿರುವ ಈ ಅಗತ್ಯವನ್ನು ಪೂರೈಸಲು ಮೊದಲಾಗಿ ಕ್ರೈಸ್ತ ಹೆತ್ತವರು ಏನು ಮಾಡತಕ್ಕದ್ದು?
12. ತಮ್ಮ ಮಕ್ಕಳಲ್ಲಿ ಬೈಬಲ್ ಸತ್ಯಗಳನ್ನು ನಾಟಿಸುವ ವಿಷಯದಲ್ಲಿ ಹೆತ್ತವರು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು?
13, 14. ಹೆತ್ತವರು ತಮ್ಮ ಮಕ್ಕಳಲ್ಲಿ ಬೈಬಲ್ ಸತ್ಯಗಳನ್ನು ನಾಟಿಸಸಾಧ್ಯವಿರುವ ಕೆಲವು ಸಂದರ್ಭಗಳಾವುವು, ಮತ್ತು ಯಾವ ಸಹಾಯಕಗಳ ಮೂಲಕ ಇದನ್ನು ಮಾಡಬಹುದು?
15. ಕ್ರೈಸ್ತ ಶುಶ್ರೂಷೆ ಆಸಕ್ತಿಭರಿತವೂ ಪ್ರತಿಫಲದಾಯಕವೂ ಆಗಿದೆಯೆಂದು ಮಕ್ಕಳು ವೀಕ್ಷಿಸುವಂತೆ ಹೆತ್ತವರು ಹೇಗೆ ಸಹಾಯಮಾಡಬಹುದು?
16. ತಮ್ಮ ಹೆತ್ತವರ ಪ್ರಾರ್ಥನೆಗಳನ್ನು ಆಲಿಸುವುದರಿಂದ ಮಕ್ಕಳು ಏನನ್ನು ಕಲಿಯಬಹುದು?
17, 18. (ಎ) ಮಕ್ಕಳಿಗೆ ಪ್ರೀತಿ ತೋರಿಸುವ ಪ್ರಮುಖತೆಯನ್ನು ಬೈಬಲು ಹೇಗೆ ತಿಳಿಯಪಡಿಸುತ್ತದೆ? (ಬಿ) ತಮ್ಮ ಮಕ್ಕಳಿಗೆ ಪ್ರೀತಿಯನ್ನು ತೋರ್ಪಡಿಸುವ ವಿಷಯದಲ್ಲಿ ತಂದೆಗಳು ಯೆಹೋವನನ್ನು ಹೇಗೆ ಅನುಕರಿಸಬೇಕು?
19. ಶಿಸ್ತು ಪ್ರಾಮುಖ್ಯವೇಕೆ, ಮತ್ತು ಕ್ರೈಸ್ತ ಹೆತ್ತವರು ಯಾವ ಸಮತೋಲನವನ್ನು ಇಡಲು ಪ್ರಯತ್ನಿಸುತ್ತಾರೆ?
20. ಹೆತ್ತವರು ತಮ್ಮ ಮಕ್ಕಳಿಗೆ ‘ಜೀವವನ್ನು ಆದುಕೊಳ್ಳಲು’ ಅತ್ಯುತ್ತಮ ಅವಕಾಶವನ್ನು ಹೇಗೆ ಕೊಡಬಲ್ಲರು?
[ಪುಟ 18ರಲ್ಲಿರುವ ಚಿತ್ರ]
ಅನೇಕ ಪಕ್ಷಿಗಳು ತಮ್ಮ ಮರಿಗಳಿಗೆ ಉಣಿಸಲು ಅವಿರತವಾಗಿ ಪ್ರಯಾಸಪಡುತ್ತವೆ
[ಪುಟ 20ರಲ್ಲಿರುವ ಚಿತ್ರ]
ಹೆತ್ತವರು ಮೊದಲಾಗಿ ತಮ್ಮ ಸ್ವಂತ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕು
[ಪುಟ 20, 21ರಲ್ಲಿರುವ ಚಿತ್ರಗಳು]
ಹೆತ್ತವರು ತಮ್ಮ ಮಕ್ಕಳಿಗೆ ಸೃಷ್ಟಿಕರ್ತನ ಕುರಿತು ಕಲಿಸಲು ಅನೇಕ ಸಂದರ್ಭಗಳನ್ನು ಕಂಡುಕೊಳ್ಳಬಲ್ಲರು
[ಪುಟ 22ರಲ್ಲಿರುವ ಚಿತ್ರ]
ಹೆತ್ತವರ ಒಪ್ಪಿಗೆಯಿಂದ ಮಕ್ಕಳು ಬಲ ಮತ್ತು ಧೈರ್ಯವನ್ನು ಪಡೆದುಕೊಳ್ಳುತ್ತಾರೆ