ಅಧ್ಯಯನ ಲೇಖನ 1
“ಯೆಹೋವನನ್ನ ಹುಡುಕೋರಿಗೆ ಒಳ್ಳೇ ವಿಷ್ಯಗಳ ಕೊರತೆನೇ ಇರಲ್ಲ”
2022ರ ವರ್ಷವಚನ: ‘ಯೆಹೋವನನ್ನ ಹುಡುಕೋರಿಗೆ ಯಾವ ಕೊರತೆನೂ ಇರಲ್ಲ.’—ಕೀರ್ತ. 34:10.
ಗೀತೆ 22 “ಯೆಹೋವ ನನಗೆ ಕುರುಬನು”
ಕಿರುನೋಟa
1. ದಾವೀದ ಯಾವ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ?
ಇಸ್ರಾಯೇಲಿನ ರಾಜ ಸೌಲ, ದಾವೀದನನ್ನ ಕೊಲ್ಲೋಕೆ ಪ್ರಯತ್ನಿಸುತ್ತಿದ್ದ. ಆಗ ದಾವೀದ ತನ್ನ ಪ್ರಾಣ ಕಾಪಾಡಿಕೊಳ್ಳೋಕೆ ಅಲ್ಲಿಂದ ಓಡಿಹೋದ. ಅವನಿಗೆ ಹಸಿವಾದಾಗ ನೋಬ್ ನಗರದ ಒಬ್ಬ ಪುರೋಹಿತನ ಹತ್ರ ಐದು ರೊಟ್ಟಿಗಳನ್ನ ಬೇಡಿಕೊಂಡ. (1 ಸಮು. 21:1, 3) ಆಮೇಲೆ ಅವನು ಮತ್ತು ಅವನ ಕಡೆಯವರು ಒಂದು ಗವಿಯಲ್ಲಿ ಬಚ್ಚಿಟ್ಟುಕೊಂಡರು. (1 ಸಮು. 22:1) ದಾವೀದನಿಗೆ ಯಾಕೆ ಈ ಸ್ಥಿತಿ ಬಂತು?
2. ಸೌಲ ಹೇಗೆ ತನ್ನ ಗುಂಡಿನ ತಾನೇ ತೋಡಿಕೊಳ್ತಿದ್ದ? (1 ಸಮುವೇಲ 23:16, 17)
2 ದಾವೀದ ತುಂಬ ಯುದ್ಧಗಳಲ್ಲಿ ಗೆದ್ದಿದ್ದ. ಹಾಗಾಗಿ ಜನ ಅವನನ್ನ ತುಂಬ ಹೊಗಳಿದ್ರು. ಇದನ್ನ ನೋಡಿದಾಗ ದಾವೀದನ ಮೇಲೆ ಸೌಲನಿಗೆ ಹೊಟ್ಟೆಕಿಚ್ಚಾಯ್ತು. ಸೌಲ ಯೆಹೋವನ ಮಾತು ಕೇಳದೇ ಇದ್ದಿದ್ದಕ್ಕೇ ದೇವರು ಅವನನ್ನ ರಾಜನ ಸ್ಥಾನದಿಂದ ತೆಗೆದುಹಾಕಿದ್ದಾನೆ ಮತ್ತು ದಾವೀದನನ್ನ ಹೊಸ ರಾಜನಾಗಿ ಆರಿಸಿಕೊಂಡಿದ್ದಾನೆ ಅಂತ ಸೌಲನಿಗೆ ಚೆನ್ನಾಗಿ ಗೊತ್ತಿತ್ತು. (1 ಸಮುವೇಲ 23:16, 17 ಓದಿ.) ಆದ್ರೆ ಸೌಲನಿಗೆ ಇನ್ನೂ ಅಧಿಕಾರ ಇತ್ತು, ಅವನಿನ್ನೂ ಇಸ್ರಾಯೇಲಿನ ರಾಜನಾಗಿದ್ದ. ಅವನ ಹಿಂದೆ ದೊಡ್ಡ ಸೈನ್ಯನೂ ಇತ್ತು. ಅದಕ್ಕೆ ತನ್ನ ದಾರಿಗೆ ಅಡ್ಡ ಬರೋ ದಾವೀದನನ್ನ ಮುಗಿಸಬೇಕು ಅಂದುಕೊಂಡ. ಹೀಗೆ ಮಾಡೋದ್ರಿಂದ ಯೆಹೋವನಿಗೆ ದಾವೀದನನ್ನ ರಾಜನಾಗಿ ಮಾಡೋಕೆ ಅಗಲ್ಲ ಅಂತ ಅಂದುಕೊಂಡನಾ? (ಯೆಶಾ. 55:11) ಅದರ ಬಗ್ಗೆ ಬೈಬಲ್ ಏನೂ ಹೇಳಿಲ್ಲ. ಆದ್ರೆ ಸೌಲ ತನ್ನ ಗುಂಡಿನ ತಾನೇ ತೋಡಿಕೊಳ್ತಿದ್ದ ಅನ್ನೋದಂತೂ ಗ್ಯಾರಂಟಿ. ಯಾಕಂದ್ರೆ ಯೆಹೋವನ ವಿರುದ್ಧ ಯುದ್ಧ ಮಾಡಿದವರು ಗೆದ್ದಿರೋ ಚರಿತ್ರೆನೇ ಇಲ್ಲ!
3. ಕಷ್ಟದ ಪರಿಸ್ಥಿತಿಯಲ್ಲಿ ದಾವೀದ ಏನು ಮಾಡಿದ? ಏನು ಮಾಡಿಲ್ಲ?
3 ದಾವೀದ ದೀನ ವ್ಯಕ್ತಿಯಾಗಿದ್ದ. ಅವನು ಇಸ್ರಾಯೇಲಿನ ರಾಜನಾಗಬೇಕು ಅಂತ ಕನಸು-ಮನಸ್ಸಲ್ಲೂ ನೆನಸಿರಲಿಲ್ಲ. ಆದ್ರೆ ಯೆಹೋವ ದೇವರೇ ಅವನನ್ನ ರಾಜನಾಗಿ ಆಯ್ಕೆ ಮಾಡಿದ್ದನು. (1 ಸಮು. 16:1, 12, 13) ಸೌಲ ದಾವೀದನನ್ನ ಅಜಾತ ಶತ್ರು ತರ ನೋಡಿದ. ಇದ್ರಿಂದ ದಾವೀದ ಗವಿಯಲ್ಲಿ ಇರಬೇಕಾಯ್ತು, ಅವನಿಗೆ ತಿನ್ನೋಕೆ, ಕುಡಿಯೋಕೆ ಅಷ್ಟೇನು ಇರಲಿಲ್ಲ. ಈ ಕಷ್ಟಗಳಿಗೆಲ್ಲ ಯೆಹೋವನೇ ಕಾರಣ ಅಂತ ಅವನು ಯಾವತ್ತೂ ಹೇಳಲಿಲ್ಲ. ಬದಲಿಗೆ ಯೆಹೋವನನ್ನು ಹೊಗಳುತ್ತಾ ಒಂದು ಸುಂದರ ಹಾಡನ್ನ ರಚಿಸಿದ. ಆ ಹಾಡಿನಿಂದಾನೇ ನಾವು ಈ ವರ್ಷದ ವಚನವನ್ನ ಆರಿಸಿಕೊಂಡಿದ್ದೀವಿ. ಅದು ಹೇಳೋದು: ‘ಯೆಹೋವನನ್ನ ಹುಡುಕೋರಿಗೆ ಯಾವ ಕೊರತೆನೂ ಇರಲ್ಲ.’—ಕೀರ್ತ. 34:10.
4. ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ ಮತ್ತು ಯಾಕೆ?
4 ಇವತ್ತು ಯೆಹೋವನ ಸೇವಕರಲ್ಲಿ ತುಂಬ ಜನಕ್ಕೆ ಊಟಕ್ಕೆ ಮತ್ತು ಬೇರೆ ವಿಷಯಗಳಿಗೆ ತೊಂದ್ರೆ ಇದೆ.b ಅದ್ರಲ್ಲೂ ಈ ಕೊರೋನ ಕಾಯಿಲೆಯಿಂದ ನಮ್ಮ ಸಹೋದರ ಸಹೋದರಿಯರು ತುಂಬ ಕಷ್ಟ ಅನುಭವಿಸುತ್ತಿದ್ದಾರೆ. “ಮಹಾ ಸಂಕಟ” ಶುರುವಾದ್ರೆ ಈ ಕಷ್ಟ ಇನ್ನೂ ಜಾಸ್ತಿಯಾಗುತ್ತೆ. (ಮತ್ತಾ. 24:21) ಹಾಗಾಗಿ ನಾವು ಈ ನಾಲ್ಕು ವಿಷಯಗಳಿಗೆ ಈಗ ಉತ್ತರ ತಿಳಿದುಕೊಳ್ಳೋಣ. (1) ದಾವೀದ ‘ಯಾವ ಕೊರತೆನೂ ಇಲ್ಲ’ ಅಂತ ಯಾಕೆ ಹೇಳಿದ? (2) ನಮ್ಮ ಹತ್ರ ಇರೋದ್ರಲ್ಲೇ ನಾವು ಯಾಕೆ ತೃಪ್ತಿಯಾಗಿರಬೇಕು? (3) ಯೆಹೋವ ದೇವರು ನಮ್ಮನ್ನ ನೋಡಿಕೊಳ್ತಾನೆ ಅಂತ ಹೇಗೆ ಹೇಳಬಹುದು? (4) ಮುಂದೆ ಬರೋ ಕಷ್ಟಗಳಿಗೆ ನಾವು ಈಗಿಂದಲೇ ಹೇಗೆ ತಯಾರಾಗಬಹುದು?
‘ನನಗೆ ಯಾವ ಕೊರತೆನೂ ಇಲ್ಲ’
5-6. ದೇವರ ಸೇವಕರಿಗೆ “ಯಾವ ಕೊರತೆನೂ ಇರಲ್ಲ” ಅಂತ ದಾವೀದ ಹೇಳಿದ ಮಾತಿನ ಅರ್ಥ ಏನು? (ಕೀರ್ತನೆ 23:1-6)
5 ಯೆಹೋವನ ಸೇವಕರಿಗೆ ‘ಯಾವ ಕೊರತೆನೂ ಇರಲ್ಲ’ ಅಂತ ದಾವೀದ ಯಾಕೆ ಹೇಳಿದ? ಅದನ್ನ ತಿಳಿದುಕೊಳ್ಳೋಕೆ 23ನೇ ಕೀರ್ತನೆ ನೋಡಿ. ಅಲ್ಲೂ ದಾವೀದ ಇದೇ ತರ ಬರೆದಿದ್ದಾನೆ. (ಕೀರ್ತನೆ 23:1-6 ಓದಿ.) ಈ ಕೀರ್ತನೆ, “ಯೆಹೋವ ನನ್ನ ಕುರುಬ. ನನಗೆ ಯಾವ ಕೊರತೆನೂ ಇರಲ್ಲ” ಅಂತ ಶುರು ಆಗುತ್ತೆ. ಈ ಕೀರ್ತನೆಯ ಉಳಿದ ಭಾಗದಲ್ಲಿ ಮುಖ್ಯವಾಗಿರೋ ವಿಷಯಗಳ ಬಗ್ಗೆ ದಾವೀದ ಹೇಳ್ತಿದ್ದಾನೆ. ಯೆಹೋವ ದೇವರನ್ನ ನಮ್ಮ ಕುರುಬನಾಗಿ ಮಾಡಿಕೊಂಡ್ರೆ ನಮಗೆ ತುಂಬ ಆಶೀರ್ವಾದಗಳು ಸಿಗುತ್ತೆ ಅಂತ ಹೇಳಿದ. ಯೆಹೋವ ತನ್ನನ್ನ ‘ಒಳ್ಳೇ ದಾರಿಯಲ್ಲಿ ನಡಿಸ್ತಾ,’ ಕಷ್ಟದಲ್ಲೂ ಸುಖದಲ್ಲೂ ತನ್ನ ಜೊತೆನೇ ಇದ್ದ ಅಂತ ಹೇಳಿದ. ಆದ್ರೆ “ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ” ತನ್ನನ್ನ ಮಲಗಿಸ್ತಾನೆ ಅಂತ ಹೇಳಿದಾಗ, ಅದರ ಅರ್ಥ ತನ್ನ ಜೀವನದಲ್ಲಿ ಯಾವತ್ತೂ ಕಷ್ಟನೇ ಬರಲಿಲ್ಲ ಅಂತ ಅಲ್ಲ. ಕೆಲವೊಮ್ಮೆ ಅವನು ‘ಕತ್ತಲ ಕಣಿವೆಯಲ್ಲೂ’ ನಡಿಬೇಕಾಯ್ತು. ಅಂದ್ರೆ, ಅವನು ಕುಗ್ಗಿಹೋಗುತ್ತಿದ್ದ ಮತ್ತು ಶತ್ರುಗಳು ಅವನಿಗೆ ಕಾಟ ಕೊಡುತ್ತಿದ್ರು. ಆದರೂ ಅವನಿಗೆ “ಹಾನಿ ಆಗುತ್ತೆ ಅನ್ನೋ ಭಯ” ಇರಲಿಲ್ಲ. ಯಾಕಂದ್ರೆ ಅವನ ಕುರುಬನಾದ ಯೆಹೋವ ಯಾವಾಗಲೂ ಅವನ ಜೊತೆನೇ ಇದ್ದನು.
6 ತನಗೆ ‘ಯಾವ ಕೊರತೆನೂ ಇರಲ್ಲ’ ಅಂತ ದಾವೀದ ಯಾಕೆ ಹೇಳಿದ ಅಂತ ನಿಮಗೆ ಈಗ ಗೊತ್ತಾಯ್ತಾ? ಯಾಕಂದ್ರೆ ಯೆಹೋವನ ಜೊತೆ ಅವನ ಸ್ನೇಹ ತುಂಬ ಗಟ್ಟಿಯಾಗಿತ್ತು. ಅವನ ಹತ್ರ ಏನೂ ಇಲ್ಲ ಅಂದ್ರೂ ಅವನು ಖುಷಿಯಾಗಿ ಇರುತ್ತಿದ್ದ. ಯೆಹೋವ ಏನು ಕೊಡುತ್ತಾನೋ ಅದರಲ್ಲಿ ಅವನು ತೃಪ್ತಿಯಾಗಿ ಇರುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ತನ್ನನ್ನ ಆಶೀರ್ವದಿಸ್ತಿದ್ದಾನೆ, ಚೆನ್ನಾಗಿ ನೋಡಿಕೊಳ್ತಿದ್ದಾನೆ ಅನ್ನೋದೇ ಅವನಿಗೆ ದೊಡ್ಡ ವಿಷಯ ಆಗಿತ್ತು.
7. ಯೂದಾಯದಲ್ಲಿದ್ದ ಕ್ರೈಸ್ತರಿಗೆ ಯಾವ ಕಷ್ಟ ಬಂತು? (ಲೂಕ 21:20-24)
7 ಹಣ, ಆಸ್ತಿ, ಸಿರಿ-ಸಂಪತ್ತೇ ನಮ್ಮ ಜೀವನದಲ್ಲಿ ಯಾವಾಗಲೂ ಮುಖ್ಯ ಆಗಿರಬಾರದು ಅಂತ ದಾವೀದನ ಮಾತಿನಿಂದ ಕಲಿಬಹುದು. ಕೆಲವೊಮ್ಮೆ ಅದ್ರಿಂದ ಖುಷಿ ಸಿಗಬಹುದು, ಆದ್ರೆ ಅದೇ ನಮಗೆ ಮುಖ್ಯ ಆಗಿರಬಾರದು. ಇದನ್ನ ಒಂದನೇ ಶತಮಾನದಲ್ಲಿದ್ದ ಯೂದಾಯದ ಕ್ರೈಸ್ತರು ಚೆನ್ನಾಗಿ ಅರ್ಥ ಮಾಡಿಕೊಂಡರು. (ಲೂಕ 21:20-24 ಓದಿ.) ಯೆರೂಸಲೇಮನ್ನ “ಶತ್ರು ಸೈನ್ಯ ಮುತ್ತಿಗೆ” ಹಾಕೋ ಸಮಯ ಬರುತ್ತೆ ಅಂತ ಯೇಸು ಈಗಾಗಲೇ ಹೇಳಿದ್ದನು. ಆ ಸಮಯದಲ್ಲಿ ಅಲ್ಲಿದ್ದವರು “ಬೆಟ್ಟಗಳಿಗೆ ಓಡಿಹೋಗಬೇಕು” ಅಂತಾನೂ ಹೇಳಿದ್ದನು. ಜೀವ ಉಳಿಸಿಕೊಳ್ಳೋಕೆ ಅವರ ಹತ್ರ ಇರೋದನ್ನೆಲ್ಲ ಬಿಟ್ಟು ಅವರು ಓಡಿಹೋಗಬೇಕಿತ್ತು. ಕೆಲವು ವರ್ಷಗಳ ಹಿಂದೆ ಒಂದು ಕಾವಲಿನಬುರುಜುವಿನಲ್ಲಿ ಹೀಗಿತ್ತು: “ಅವರು ತಮ್ಮ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನೂ ತೆಗೆದುಕೊಳ್ಳದೆ, ಹೊಲಗಳನ್ನು ಮತ್ತು ಮನೆಗಳನ್ನು ಬಿಟ್ಟುಬಂದರು. ಯೆಹೋವನ ಸಂರಕ್ಷಣೆ ಹಾಗೂ ಬೆಂಬಲದಲ್ಲಿ ಪೂರ್ಣ ಭರವಸೆಯುಳ್ಳವರಾಗಿದ್ದ ಅವರು, ಪ್ರಾಮುಖ್ಯವೆಂದು ತೋರಬಹುದಾದ ಬೇರೆಲ್ಲ ವಿಷಯಗಳಿಗಿಂತಲೂ ಆತನ ಆರಾಧನೆಯನ್ನು ಪ್ರಥಮವಾಗಿಟ್ಟರು.”
8. ಯೂದಾಯದ ಕ್ರೈಸ್ತರಿಂದ ನಾವೇನು ಕಲಿಬಹುದು?
8 ಯೂದಾಯದ ಕ್ರೈಸ್ತರಿಂದ ನಾವೇನು ಕಲಿಬಹುದು? ಒಂದು ಕಾವಲಿನಬುರುಜು ಹೀಗೆ ಹೇಳುತ್ತೆ: “ನಾವು ಭೌತಿಕ ವಸ್ತುಗಳನ್ನು ಹೇಗೆ ವೀಕ್ಷಿಸುತ್ತೇವೆ ಎಂಬ ವಿಷಯವಾಗಿ ಭವಿಷ್ಯತ್ತಿನಲ್ಲಿ ಪರೀಕ್ಷೆಗಳೇಳಬಹುದು. ಭೌತಿಕ ವಸ್ತುಗಳು ಅತ್ಯಂತ ಪ್ರಾಮುಖ್ಯವಾದ ವಿಷಯಗಳಾಗಿವೆಯೊ ಇಲ್ಲವೆ ದೇವರ ಪಕ್ಷದಲ್ಲಿರುವವರೆಲ್ಲರಿಗೆ ಬರುವಂತಹ ರಕ್ಷಣೆಯು ಹೆಚ್ಚು ಪ್ರಾಮುಖ್ಯವಾಗಿದೆಯೊ? ಹೌದು, ನಮ್ಮ ಪಲಾಯನದಲ್ಲಿ ಕೆಲವೊಂದು ಕಷ್ಟತೊಂದರೆಗಳು ಮತ್ತು ನಷ್ಟಗಳು ಸೇರಿರಬಹುದು. ಯೂದಾಯದಿಂದ ಯೊರ್ದಾನಿನ ಆಚೆಗಿದ್ದ ಪೆರಿಯ ಕ್ಷೇತ್ರಕ್ಕೆ ಓಡಿಹೋದ ಪ್ರಥಮ ಶತಮಾನದ ಕ್ರೈಸ್ತರಂತೆಯೇ, ಅಗತ್ಯವಿರುವುದೆಲ್ಲವನ್ನು ಮಾಡಲು ನಾವು ಸಿದ್ಧರಾಗಿರಬೇಕು.”c
9. ಪೌಲ ಇಬ್ರಿಯ ಕ್ರೈಸ್ತರಿಗೆ ಕೊಟ್ಟ ಬುದ್ಧಿವಾದದಿಂದ ನೀವೇನು ಕಲಿತ್ರಿ?
9 ಆ ಕ್ರೈಸ್ತರಿಗೆ ಎಲ್ಲವನ್ನೂ ಬಿಟ್ಟು ತಮಗೆ ಗೊತ್ತಿಲ್ಲದ ಜಾಗಕ್ಕೆ ಹೋಗಿ ಜೀವಿಸೋದು ಎಷ್ಟು ಕಷ್ಟ ಆಗಿರಬೇಕು ಅಂತ ಸ್ವಲ್ಪ ಊಹಿಸಿ. ತಮಗೆ ಬೇಕಾಗಿರೋದನ್ನೆಲ್ಲಾ ಯೆಹೋವ ಕೊಟ್ಟೇ ಕೊಡ್ತಾನೆ ಅಂತ ಅವರು ನಂಬಬೇಕಿತ್ತು. ಹೀಗೆ ನಂಬೋಕೆ ಅವರಿಗೆ ಯಾವುದು ಸಹಾಯ ಮಾಡುತ್ತಿತ್ತು? ಯೆರೂಸಲೇಮನ್ನ ರೋಮನ್ನರು ಮುತ್ತಿಗೆ ಹಾಕೋಕೆ ಐದು ವರ್ಷಗಳ ಮುಂಚೆನೇ ಪೌಲ ಇಬ್ರಿಯ ಕ್ರೈಸ್ತರಿಗೆ ಕೆಲವು ಬುದ್ಧಿವಾದ ಕೊಟ್ಟ. “ಹಣದಾಸೆ ಇಲ್ಲದೆ ಜೀವನ ಮಾಡಿ. ಇರೋದ್ರಲ್ಲೇ ತೃಪ್ತಿಪಡಿ. ಯಾಕಂದ್ರೆ ‘ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ’ ಅಂತ ದೇವರು ಹೇಳಿದ್ದಾನೆ. ಹಾಗಾಗಿ ‘ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?’ ಅಂತ ನಾವು ಧೈರ್ಯವಾಗಿ ಹೇಳ್ತೀವಿ.” (ಇಬ್ರಿ. 13:5, 6) ಯಾರೆಲ್ಲ ಪೌಲನ ಬುದ್ಧಿವಾದನ ಮನಸ್ಸಿಗೆ ತಗೊಂಡರೋ ಅವರೆಲ್ಲ ಬೇರೆ ಜಾಗದಲ್ಲಿ ತಮ್ಮ ಹತ್ರ ಇರೋದ್ರಲ್ಲಿ ತೃಪ್ತಿಯಾಗಿ ಜೀವನ ಮಾಡೋಕೆ ಆಗಿರುತ್ತೆ. ಯಾಕಂದ್ರೆ ಯೆಹೋವ ಅವರಿಗೆ ಬೇಕಾಗಿರೋದನ್ನೆಲ್ಲಾ ಕೊಟ್ಟು ಚೆನ್ನಾಗಿ ನೋಡಿಕೊಳ್ತಾನೆ ಅನ್ನೋ ನಂಬಿಕೆ ಅವರಿಗಿತ್ತು. ಪೌಲನ ಈ ಮಾತುಗಳು ಯೆಹೋವ ನಮ್ಮನ್ನೂ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋ ಭರವಸೆಯನ್ನ ತುಂಬುತ್ತೆ.
‘ನಾವು ಇರೋದ್ರಲ್ಲೇ ತೃಪ್ತಿ ಪಡಬೇಕು’
10. ಪೌಲ ಹೇಳಿದ “ಗುಟ್ಟು” ಏನು?
10 ಪೌಲ ಇದೇ ತರದ ಬುದ್ಧಿವಾದನ ತಿಮೊತಿಗೂ ಕೊಟ್ಟ. ಅವನು ಹೇಳಿದ್ದು: “ಹಾಗಾಗಿ ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.” (1 ತಿಮೊ. 6:8) ಪೌಲ ಇದನ್ನ ನಮಗೂ ಸೇರಿಸಿ ಹೇಳ್ತಿದ್ದಾನೆ. ಇದರ ಅರ್ಥ ನಾವು ರುಚಿರುಚಿಯಾದ ಊಟ ತಿನ್ನಬಾರದು, ಒಳ್ಳೇ ಮನೆಯಲ್ಲಿ ಇರಬಾರದು ಮತ್ತು ಹೊಸ ಬಟ್ಟೆಗಳನ್ನ ತಗೊಬಾರದು ಅಂತಾನಾ? ಇಲ್ಲ, ನಮ್ಮ ಹತ್ರ ಇರೋದ್ರಲ್ಲೇ ತೃಪ್ತಿ ಪಡಬೇಕು ಅಂತ ಪೌಲ ಹೇಳ್ತಿದ್ದಾನೆ. (ಫಿಲಿ. 4:12) ಅವನ ಜೀವನದ “ಗುಟ್ಟು” ಇದೇ ಆಗಿತ್ತು. ಇದರಿಂದ ನಮಗೆ ಗೊತ್ತಾಗೋ ವಿಷಯ ಏನಂದ್ರೆ ಯೆಹೋವನ ಜೊತೆ ನಮಗಿರೋ ಸಂಬಂಧನೇ ನಮ್ಮ ಆಸ್ತಿ, ನಮ್ಮ ಹತ್ರ ಇರೋ ವಸ್ತುಗಳಲ್ಲ.—ಹಬ. 3:17, 18.
11. ಇಸ್ರಾಯೇಲ್ಯರಿಗೆ ಮೋಶೆ ಹೇಳಿದ ಮಾತಿನಿಂದ ನಾವೇನು ಕಲಿತೀವಿ?
11 ನಮಗೆ ಏನು ಬೇಕು ಅನ್ನೋದರ ಬಗ್ಗೆ ಯೆಹೋವ ಯೋಚಿಸೋದಕ್ಕೂ ನಾವು ಯೋಚಿಸೋದಕ್ಕೂ ತುಂಬ ವ್ಯತ್ಯಾಸ ಇದೆ. ಕಾಡಲ್ಲಿ 40 ವರ್ಷ ಅಲೆದಾಡಿದ ಇಸ್ರಾಯೇಲ್ಯರಿಗೆ ಮೋಶೆ ಏನು ಹೇಳಿದ ನೋಡಿ: “ನೀವು ಇಲ್ಲಿ ತನಕ ಮಾಡಿದ ಎಲ್ಲ ಕೆಲಸಗಳನ್ನ ನಿಮ್ಮ ದೇವರಾದ ಯೆಹೋವ ಆಶೀರ್ವದಿಸಿದ್ದಾನೆ. ಇಷ್ಟು ದೊಡ್ಡ ಕಾಡಲ್ಲಿ ನಡೀತಾ ಒಂದೊಂದು ಸಲನೂ ಮಾಡಿದ ಪ್ರಯಾಣದ ಬಗ್ಗೆ ಆತನಿಗೆ ಚೆನ್ನಾಗಿ ಗೊತ್ತು. ಈ 40 ವರ್ಷನೂ ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆನೇ ಇದ್ದನು. ಆಗ ನಿಮಗೆ ಯಾವುದಕ್ಕೂ ಕೊರತೆ ಇರಲಿಲ್ಲ.” (ಧರ್ಮೋ. 2:7) ಆ 40 ವರ್ಷ ಯೆಹೋವ ದೇವರು ಇಸ್ರಾಯೇಲ್ಯರಿಗೆ ತಿನ್ನೋಕೆ ಮನ್ನ ಕೊಟ್ಟನು. ಅವರು ಈಜಿಪ್ಟ್ನಿಂದ ಹಾಕೊಂಡು ಬಂದ ಬಟ್ಟೆ ಹರಿದು ಹೋಗದೇ ಇರೋ ತರ ನೋಡಿಕೊಂಡನು. (ಧರ್ಮೋ. 8:3, 4) ಇಸ್ರಾಯೇಲ್ಯರಲ್ಲಿ ಕೆಲವರಿಗೆ ಇದು ಸಾಕಾಗಲ್ಲ ಅಂತ ಅನಿಸಿರಬೇಕು. ಆದ್ರೆ ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳು ನಮ್ಮ ಹತ್ರ ಇದೆ ಅಂತ ಮೋಶೆ ಅವರಿಗೆ ಹೇಳಿದ. ಯೆಹೋವ ದೇವರು ನಮಗೆ ಕೊಡೋ ಚಿಕ್ಕ ಪುಟ್ಟ ವಿಷಯಗಳಿಗೂ ನಾವು ಕೃತಜ್ಞರಾಗಿರಬೇಕು, ಋಣಿಗಳಾಗಿರಬೇಕು ಅಂತ ಬಯಸುತ್ತಾನೆ. ನಮ್ಮ ಹತ್ರ ಇರೋದ್ರಲ್ಲೇ ತೃಪ್ತಿಯಾಗಿರೋಕೆ ನಾವು ಕಲಿತರೆ ಆತನಿಗೆ ತುಂಬ ಖುಷಿಯಾಗುತ್ತೆ.
ಯೆಹೋವ ನಿಮ್ಮನ್ನ ನೋಡಿಕೊಳ್ತಾನೆ ಅನ್ನೋ ನಂಬಿಕೆ ಇರಲಿ
12. ದಾವೀದ ತನ್ನ ಮೇಲಲ್ಲ, ಯೆಹೋವನ ಮೇಲೆ ಪೂರ್ತಿ ನಂಬಿಕೆ ಇಟ್ಟ ಅಂತ ಹೇಗೆ ಗೊತ್ತಾಗುತ್ತೆ?
12 ಯೆಹೋವ ದೇವರು ತನ್ನ ಸೇವಕರನ್ನ ತುಂಬ ಚೆನ್ನಾಗಿ ನೋಡಿಕೊಳ್ತಾನೆ, ಯಾವತ್ತೂ ಅವರ ಕೈಬಿಡಲ್ಲ ಅಂತ ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. ಅವನ ಪ್ರಾಣ ಅಪಾಯದಲ್ಲಿದ್ದಾಗ 34ನೇ ಕೀರ್ತನೆಯನ್ನ ರಚಿಸಿದ. ಅವನಿಗೆ ಯೆಹೋವನ ಮೇಲೆ ಎಷ್ಟು ನಂಬಿಕೆ ಇತ್ತಂದ್ರೆ ತನ್ನ “ಸುತ್ತ ಯೆಹೋವನ ದೂತ ಪಾಳೆಯ ಹಾಕಿದ್ದಾನೆ” ಅಂತ ಅವನಿಗೆ ಅನಿಸಿತು. (ಕೀರ್ತ. 34:7) ಯೆಹೋವನ ದೂತನನ್ನ ಕಾವಲು ಕಾಯೋ ಸೈನಿಕನಿಗೆ ದಾವೀದ ಹೋಲಿಸಿದ. ದಾವೀದ ಒಬ್ಬ ಯುದ್ಧವೀರನಾಗಿದ್ದ, ಅವನಿಗೆ ಕತ್ತಿ ಬಳಸೋಕೆ ಚೆನ್ನಾಗಿ ಗೊತ್ತಿತ್ತು, ಕವಣೆ ಬೀಸೋದನ್ನೂ ಚೆನ್ನಾಗಿ ಕಲಿತಿದ್ದ. ಅಷ್ಟೇ ಅಲ್ಲ, ಅವನನ್ನ ರಾಜನಾಗಿ ಮಾಡುತ್ತೀನಿ ಅಂತ ಯೆಹೋವ ಅವನಿಗೆ ಮಾತು ಕೊಟ್ಟಿದ್ದನು. ಇಷ್ಟೆಲ್ಲಾ ಶಕ್ತಿ ಸಾಮರ್ಥ್ಯ ಇದ್ರೂ ತನ್ನನ್ನ ತಾನೇ ಕಾಪಾಡಿಕೊಳ್ತೀನಿ ಅಂತ ಅವನು ನೆನಸಲಿಲ್ಲ. (1 ಸಮು. 16:13; 24:12) ಯೆಹೋವ ತನ್ನ ದೂತನನ್ನ ಕಳಿಸಿ ‘ದೇವ್ರಿಗೆ ಭಯಪಡೋ ತನ್ನ ಸೇವಕರನ್ನ ಕಾಪಾಡ್ತಾನೆ’ ಅಂತ ನಂಬಿದ. ಇವತ್ತು ಯೆಹೋವ ನಮ್ಮನ್ನ ಅದ್ಭುತವಾಗಿ ಕಾಪಾಡ್ತಾನೆ ಅಂತ ನಾವು ಅಂದುಕೊಳ್ಳಲ್ಲ. ಆದ್ರೆ ನಾವು ಸತ್ತುಹೋದ್ರೂ ಮುಂದೆ ಆತನು ಪುನಃ ನಮಗೆ ಜೀವ ಕೊಟ್ಟೇ ಕೊಡ್ತಾನೆ ಅಂತ ನಮಗೆ ಗೊತ್ತು.
13. (ಎ) ಮಾಗೋಗಿನ ಗೋಗ ನಮ್ಮ ಮೇಲೆ ಆಕ್ರಮಣ ಮಾಡಿದಾಗ ನಮ್ಮ ಬಗ್ಗೆ ಅವನಿಗೆ ಏನು ಅನಿಸುತ್ತೆ? (ಬಿ) ಆದ್ರೆ ನಾವು ಯಾಕೆ ಹೆದರಬಾರದು? (ಮುಖಪುಟ ಚಿತ್ರ ನೋಡಿ.)
13 ಆದಷ್ಟು ಬೇಗ ಮಾಗೋಗಿನ ಗೋಗ, ಅಂದ್ರೆ ಜನಾಂಗಗಳ ಗುಂಪು ನಮ್ಮ ಮೇಲೆ ಆಕ್ರಮಣ ಮಾಡುತ್ತೆ. ಆಗ ನಮ್ಮ ನಂಬಿಕೆಗೆ ಪರೀಕ್ಷೆ ಬರುತ್ತೆ. ಅವರು ನಮ್ಮನ್ನ ಸಾಯಿಸಿಬಿಡ್ತಾರೆ ಅಂತ ನಮಗೆ ಅನಿಸಬಹುದು. ಆದ್ರೆ ಯೆಹೋವ ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆ, ಭರವಸೆ ನಮಗೆ ಇರಬೇಕು. ಆ ಸಮಯದಲ್ಲಿ ನಮ್ಮ ವಿರೋಧಿಗಳು ‘ಇವರನ್ನ ಕಾಪಾಡೋಕೆ ಯಾರು ಇಲ್ಲ’ ಅಂದುಕೊಳ್ತಾರೆ. (ಯೆಹೆ. 38:10-12) ನಮ್ಮ ಹತ್ರ ಯಾವ ಆಯುಧಗಳೂ ಇಲ್ಲದೇ ಇರೋದ್ರಿಂದ, ನಮಗೆ ಯುದ್ಧ ಮಾಡೋಕೆ ಗೊತ್ತಿಲ್ಲದೆ ಇರೋದ್ರಿಂದ ನಮ್ಮನ್ನ ಸುಲಭವಾಗಿ ಸೋಲಿಸಬಹುದು ಅಂತನೂ ಅವರು ಅಂದ್ಕೊಳ್ತಾರೆ. ಆದ್ರೆ ನಮ್ಮನ್ನ ಕಾಪಾಡೋಕೆ ದೇವದೂತರು ನಮ್ಮ ಸುತ್ತ ಪಾಳೆಯ ಹಾಕಿದ್ದಾರೆ ಅನ್ನೋದು ಅವರಿಗೆ ಗೊತ್ತಾಗಲ್ಲ. ಆದ್ರೆ ನಮಗೆ ಇದು ಚೆನ್ನಾಗಿ ಗೊತ್ತು. ಯಾಕಂದ್ರೆ ಯೆಹೋವ ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ನಮಗಿದೆ. ನಮ್ಮನ್ನ ಕಾಪಾಡೋಕೆ ದೇವದೂತರು ಬಂದಾಗ ನಮ್ಮ ಶತ್ರುಗಳು ದಂಗಾಗಿ ನಿಲ್ಲುತ್ತಾರೆ!—ಪ್ರಕ. 19:11, 14, 15.
ಈಗಲೇ ತಯಾರಾಗಿ
14. ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ನಾವು ಈಗಿಂದಲೇ ಏನು ಮಾಡಬೇಕು?
14 ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ನಾವು ಈಗಲೇ ಹೇಗೆ ತಯಾರಾಗಬಹುದು? ಮೊದಲನೇದಾಗಿ, ನಾವು ಹಣ-ಆಸ್ತಿ ಅಂತ ಅದರ ಮೇಲೆ ತುಂಬ ಆಸೆ ಇಟ್ಟುಕೊಳ್ಳಬಾರದು. ಯಾಕಂದ್ರೆ ಇವತ್ತಲ್ಲ ನಾಳೆ ನಾವು ಅವನ್ನೆಲ್ಲಾ ಬಿಟ್ಟುಹೋಗಬೇಕು. ಎರಡನೇದಾಗಿ, ನಮ್ಮ ಹತ್ರ ಏನು ಇದೆಯೋ ಅದ್ರಲ್ಲೇ ತೃಪ್ತಿ ಪಡಬೇಕು ಮತ್ತು ಯೆಹೋವ ದೇವರು ನಮ್ಮ ಸ್ನೇಹಿತನಾಗಿರೋದೇ ದೊಡ್ಡ ವಿಷಯ, ಅದಕ್ಕೆ ನಾವು ಖುಷಿಪಡಬೇಕು. ಈಗಿಂದಲೇ ನಾವು ಯೆಹೋವನ ಬಗ್ಗೆ ಜಾಸ್ತಿ ತಿಳಿದುಕೊಳ್ತಾ ಹೋದ್ರೆ ಮಾಗೋಗಿನ ಗೋಗ ಆಕ್ರಮಣ ಮಾಡಿದಾಗ ಯೆಹೋವ ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ಜಾಸ್ತಿಯಾಗುತ್ತೆ.
15. ಯೆಹೋವ ತನಗೆ ಸಹಾಯ ಮಾಡ್ತಾನೆ ಅಂತ ದಾವೀದ ಯಾಕೆ ನಂಬಿದ್ದ?
15 ನಾವೀಗ ಪುನಃ ದಾವೀದನ ಬಗ್ಗೆ ನೋಡೋಣ. ಮುಂದೆ ಬರೋ ಕಷ್ಟಗಳಿಗೆ ತಯಾರಾಗೋಕೆ ಇನ್ನೂ ಏನು ಮಾಡಬೇಕು ಅಂತ ಅವನಿಂದ ಕಲಿಯೋಣ. ದಾವೀದ ತನ್ನ ಜೀವ ಕಾಪಾಡಿಕೊಳ್ಳೋಕೆ ಓಡಿಹೋಗ್ತಿದ್ದಾಗ “ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ, ಆತನನ್ನ ಆಶ್ರಯಿಸುವವನು ಭಾಗ್ಯವಂತ” ಅಂದನು. (ಕೀರ್ತ. 34:8) ದಾವೀದ ಯೆಹೋವನ ಮೇಲೆ ಯಾಕೆ ಇಷ್ಟು ಭರವಸೆ ಇಟ್ಟಿದ್ದ ಅಂತ ಈ ವಚನದಿಂದ ಗೊತ್ತಾಗುತ್ತೆ. ಯಾಕಂದ್ರೆ ಈ ಹಿಂದೆ ಎಷ್ಟೋ ಸಲ ಯೆಹೋವ ತನ್ನನ್ನ ಕಾಪಾಡಿದ ಸಂದರ್ಭಗಳು ದಾವೀದನ ಮನಸ್ಸಲ್ಲಿ ಹಚ್ಚಹಸುರಾಗಿತ್ತು. ದಾವೀದ ಯುವಕನಾಗಿದ್ದಾಗ ಗೊಲ್ಯಾತನ ವಿರುದ್ಧ ಹೋರಾಡುತ್ತಾ ಅವನಿಗೆ, “ಇವತ್ತೇ ಯೆಹೋವ ನಿನ್ನನ್ನ ನನ್ನ ಕೈಗೆ ಒಪ್ಪಿಸ್ತಾನೆ” ಅಂತ ಹೇಳಿದ. (1 ಸಮು. 17:46) ಅಷ್ಟೇ ಅಲ್ಲ, ರಾಜ ಸೌಲನ ಆಸ್ಥಾನದಲ್ಲಿ ದಾವೀದ ಕೆಲಸ ಮಾಡುತ್ತಿದ್ದಾಗ ಸೌಲ ಅವನನ್ನ ತುಂಬ ಸಲ ಸಾಯಿಸೋಕೆ ಪ್ರಯತ್ನಿಸಿದ. ಆಗಲೂ ದಾವೀದನಿಗೆ ಏನೂ ಆಗಲಿಲ್ಲ. ಯಾಕಂದ್ರೆ ‘ಯೆಹೋವ ದಾವೀದನ ಜೊತೆ ಇದ್ದನು.’ (1 ಸಮು. 18:12) ಹಾಗಾಗಿ ದಾವೀದನಿಗೆ ಯೆಹೋವನ ಮೇಲೆ ಪೂರ್ತಿ ಭರವಸೆ ಇತ್ತು. ಈಗ ಬಂದಿರೋ ಕಷ್ಟದಲ್ಲೂ ಯೆಹೋವ ತನ್ನನ್ನ ಖಂಡಿತ ಕಾಪಾಡ್ತಾನೆ ಅಂತ ಸಂಪೂರ್ಣವಾಗಿ ನಂಬಿದ.
16. ನಾವು ಹೇಗೆ ಯೆಹೋವನ ಒಳ್ಳೇತನವನ್ನ “ಸವಿದು” ನೋಡಬಹುದು?
16 ನಾವು ಹೇಗೆ ದಾವೀದನ ತರ ‘ಯೆಹೋವ ಒಳ್ಳೆಯವನು ಅಂತ ಸವಿದು ನೋಡಬಹುದು?’ ನಾವು ಯಾವಾಗಲೂ ಯೆಹೋವ ದೇವರ ಸಹಾಯ ಕೇಳುತ್ತಾ ಇರಬೇಕು. ಆಗ ಆತನು ನಮಗೆ ಸಹಾಯ ಮಾಡೋದನ್ನ ನಾವು ಕಣ್ಣಾರೆ ನೋಡ್ತೀವಿ. ಇದ್ರಿಂದ ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೂ ಆತನು ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಜಾಸ್ತಿಯಾಗುತ್ತೆ. ಉದಾಹರಣೆಗೆ, ನಾವು ಸಮ್ಮೇಳನ ಮತ್ತು ಅಧಿವೇಶನಗಳನ್ನ ಹಾಜರಾಗೋಕೆ ಧಣಿ ಹತ್ರ ರಜಾ ಕೇಳಬೇಕಾಗುತ್ತೆ. ಕೂಟಕ್ಕೆ ಮತ್ತು ಸೇವೆಗೆ ಹೋಗೋಕೆ ನಮ್ಮ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿಕೊಡಿ ಅಂತ ಕೇಳಬೇಕಾಗುತ್ತೆ. ಇದನ್ನ ಮಾಡೋಕೆ ನಮಗೆ ತುಂಬ ನಂಬಿಕೆ ಬೇಕು. ಯಾಕಂದ್ರೆ ನೀವು ಹಾಗೆ ಕೇಳಿದಾಗ ಒಂದುವೇಳೆ ನಿಮ್ಮ ಧಣಿ ಅದಕ್ಕೆ ಒಪ್ಪಿಕೊಳ್ಳದೇ ಹೋಗಬಹುದು ಅಥವಾ ನಿಮ್ಮನ್ನ ಕೆಲಸದಿಂದ ತೆಗೆದುಹಾಕಬಹುದು. ಆಗಲೂ ಯೆಹೋವ ನನ್ನ ಕೈಬಿಡಲ್ಲ, ನನಗೆ ಬೇಕಾಗಿರೋದೆಲ್ಲಾ ಕೊಟ್ಟೇ ಕೊಡ್ತಾನೆ ಅಂತ ನೀವು ನಂಬ್ತೀರಾ? (ಇಬ್ರಿ. 13:5) ಪೂರ್ಣ ಸಮಯದ ಸೇವೆ ಮಾಡಿರುವವರ ಹತ್ರ ಯೆಹೋವ ಅವರನ್ನ ಹೇಗೆ ಕಾಪಾಡಿದ್ದಾನೆ, ಅವರಿಗೆ ಬೇಕಾಗಿರೋದನ್ನೆಲ್ಲ ಹೇಗೆ ಕೊಟ್ಟಿದ್ದಾನೆ ಅಂತ ಕೇಳಿ ತಿಳಿದುಕೊಳ್ಳಿ. ಯೆಹೋವ ದೇವರಿಗೆ ತುಂಬ ನಿಯತ್ತಿದೆ, ಯಾವತ್ತೂ ನಮ್ಮ ಕೈಬಿಡಲ್ಲ.
17. (ಎ) 2022ರ ವರ್ಷವಚನ ಯಾವುದು? (ಬಿ) ಈ ವಚನವನ್ನೇ ಯಾಕೆ ಆರಿಸಿಕೊಂಡಿದ್ದಾರೆ?
17 ಯೆಹೋವ ದೇವರು ನಮ್ಮ ಜೊತೆ ಇದ್ದಾನೆ ಅಂದಮೇಲೆ ನಾವು ಯಾಕೆ ಮುಂದೆ ಬರೋ ಕಷ್ಟಗಳಿಗೆ ಹೆದರಬೇಕು? ಯೆಹೋವ ದೇವರೇ ನಮಗೆ ಮುಖ್ಯ ಆಗಿದ್ರೆ ಆತನು ಯಾವತ್ತೂ ನಮ್ಮ ಕೈಬಿಡಲ್ಲ. ಮುಂದೆ ಬರೋ ಕಷ್ಟಗಳಿಗೆ ನಾವು ಈಗಲೇ ತಯಾರಾಗಬೇಕು, ಯೆಹೋವ ದೇವರ ಮೇಲೆ ನಂಬಿಕೆ ಇಡಬೇಕು ಅನ್ನೋದೇ ಆಡಳಿತ ಮಂಡಳಿಯ ಆಸೆ. ಅದಕ್ಕೆ ಅವರು 2022ರ ವರ್ಷವಚನವನ್ನು ಕೀರ್ತನೆ 34:10ರಿಂದ ಆರಿಸಿದ್ದಾರೆ. ಅದು ಹೇಳುತ್ತೆ, ‘ಯೆಹೋವನನ್ನ ಹುಡುಕೋರಿಗೆ ಯಾವ ಕೊರತೆನೂ ಇರಲ್ಲ.’
ಗೀತೆ 60 ಆತನು ನಿನ್ನನ್ನು ಬಲಪಡಿಸುವನು
a 2022ರ ವರ್ಷವಚನ ಕೀರ್ತನೆ 34:10ರಿಂದ ಆರಿಸಲಾಗಿದೆ. ಅಲ್ಲಿ ಹೀಗಿದೆ: “ಯೆಹೋವನನ್ನ ಹುಡುಕೋರಿಗೆ ಒಳ್ಳೇ ವಿಷ್ಯಗಳ ಕೊರತೆನೇ ಇರಲ್ಲ.” ಯೆಹೋವನ ಸೇವಕರಲ್ಲಿ ತುಂಬ ಜನ ಬಡವರಿದ್ದಾರೆ. ಆದ್ರೂ ಅವರಿಗೆ ‘ಯಾವ ಕೊರತೆನೂ ಇರಲ್ಲ’ ಅಂತ ಹೇಗೆ ಹೇಳಬಹುದು ಮತ್ತು ಈ ವಚನವನ್ನ ಅರ್ಥ ಮಾಡಿಕೊಂಡ್ರೆ ಮುಂದೆ ಬರೋ ಕಷ್ಟಗಳನ್ನ ಹೇಗೆ ಎದುರಿಸೋಕಾಗುತ್ತೆ ಅಂತ ಈ ಲೇಖನದಲ್ಲಿ ನೋಡೋಣ.
b 2014ರ ಸೆಪ್ಟೆಂಬರ್ 15ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ನೋಡಿ.
d ಚಿತ್ರ ವಿವರಣೆ: ಸೌಲನಿಂದ ತಪ್ಪಿಸಿಕೊಂಡು ದಾವೀದ ಗವಿಯಲ್ಲಿದ್ದಾಗ ಯೆಹೋವ ಕೊಟ್ಟ ಎಲ್ಲಾ ವಿಷಯಗಳಿಗೆ ಕೃತಜ್ಞನಾಗಿದ್ದ.
e ಚಿತ್ರ ವಿವರಣೆ: ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಮೇಲೆ ಅವರಿಗೆ ತಿನ್ನೋಕೆ ಮನ್ನ ಕೊಟ್ಟನು ಮತ್ತು ಅವರ ಬಟ್ಟೆ ಹರಿದು ಹೋಗದೇ ಇರೋ ತರ ನೋಡಿಕೊಂಡನು.