ಹಣದ ಕುರಿತು ಸಮತೂಕದ ಅಭಿಪ್ರಾಯವನ್ನು ಹೇಗೆ ಇಡಬಲ್ಲಿರಿ?
ಹಣದಾಸೆ ಮತ್ತು ಸ್ವತ್ತುಗಳನ್ನು ಶೇಖರಿಸಿಡುವ ಆಶೆಯು ಹೊಸ ಸಂಗತಿಗಳಲ್ಲ. ಬೈಬಲ್ ಸಹ ಅವುಗಳ ವಿಷಯದಲ್ಲಿ ಮೌನವಾಗಿಲ್ಲ, ಏಕೆಂದರೆ ಅವು ಇತ್ತೀಚೆಗೆ ಶುರುವಾಗಿರುವ ವಿಷಯಗಳಲ್ಲ. ಅವು ತೀರ ಹಳೆಯ ಸಂಗತಿಗಳಾಗಿವೆ. ಧರ್ಮಶಾಸ್ತ್ರದಲ್ಲಿ ದೇವರು ಇಸ್ರಾಯೇಲ್ಯರಿಗೆ ಸೂಚನೆ ಕೊಟ್ಟದ್ದು: “ಮತ್ತೊಬ್ಬನ ಮನೆಯನ್ನು ಆಶಿಸಬಾರದು; ಮತ್ತೊಬ್ಬನ . . . ಯಾವದನ್ನೂ ಆಶಿಸಬಾರದು.”—ವಿಮೋಚನಕಾಂಡ 20:17.
ಯೇಸುವಿನ ದಿನದಲ್ಲಿ ಹಣ ಮತ್ತು ಸ್ವತ್ತುಗಳ ಆಸೆಯು ಸರ್ವಸಾಮಾನ್ಯವಾಗಿತ್ತು. “ಬಹಳ ಐಶ್ವರ್ಯವಂತನಾಗಿದ್ದ” ಒಬ್ಬ ಯುವಕನು ಮತ್ತು ಯೇಸುವಿನ ನಡುವೆ ನಡೆದ ಸಂಭಾಷಣೆಯ ಕುರಿತಾದ ಈ ವರದಿಯನ್ನು ಸ್ವಲ್ಪ ಪರಿಗಣಿಸಿರಿ. “ಯೇಸು . . . ಅವನಿಗೆ—ಇನ್ನೂ ನಿನಗೆ ಒಂದು ಕಡಿಮೆಯಾಗಿದೆ; ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ವ್ಯಸನಗೊಂಡನು.”—ಲೂಕ 18:18-23.
ಹಣದ ಕುರಿತು ಸರಿಯಾದ ಅಭಿಪ್ರಾಯ
ಆದರೆ ಬೈಬಲ್, ಹಣವನ್ನೇ ಅಥವಾ ಅದರ ಮೂಲಭೂತ ಉಪಯೋಗಗಳನ್ನೇ ಖಂಡಿಸುತ್ತದೆಂದು ನೆನಸುವುದು ತಪ್ಪು. ಏಕೆಂದರೆ, ಬಡತನ ಮತ್ತು ಅದರೊಂದಿಗೆ ಬರುವ ತಾಪತ್ರಯಗಳ ವಿರುದ್ಧ ಹಣ ಒಂದು ವ್ಯಾವಹಾರಿಕ ರಕ್ಷಣೆಯಾಗಿದ್ದು, ಜನರು ದಿನನಿತ್ಯದ ಆವಶ್ಯಕ ವಸ್ತುಗಳನ್ನು ಪಡೆದುಕೊಳ್ಳುವಂತೆ ಶಕ್ತಗೊಳಿಸುತ್ತದೆಂದು ಬೈಬಲ್ ತೋರಿಸುತ್ತದೆ. ರಾಜ ಸೊಲೊಮೋನನು ಬರೆದುದು: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ.” ಮತ್ತು “ನಗುವಿಗಾಗಿ ಔತಣವು, ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು; ಧನವು ಎಲ್ಲವನ್ನೂ ಒದಗಿಸಿಕೊಡುವದು.”—ಪ್ರಸಂಗಿ 7:12; 10:19.
ಹಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದನ್ನು ದೇವರು ಸಮ್ಮತಿಸುತ್ತಾನೆ. ಉದಾಹರಣೆಗಾಗಿ, ಯೇಸು ಹೇಳಿದ್ದು: “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ.” (ಲೂಕ 16:9) ಇದರಲ್ಲಿ, ದೇವರ ಸತ್ಯಾರಾಧನೆಯ ಅಭಿವೃದ್ಧಿಗಾಗಿ ಕಾಣಿಕೆಗಳನ್ನು ಕೊಡುವುದೂ ಸೇರಿರುತ್ತದೆ. ಏಕೆಂದರೆ ನಾವು ಖಂಡಿತವಾಗಿಯೂ ದೇವರನ್ನು ನಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಲು ಬಯಸುತ್ತೇವೆ. ಸ್ವತಃ ಸೊಲೊಮೋನನೇ ತನ್ನ ತಂದೆಯಾದ ದಾವೀದನ ಮಾದರಿಯನ್ನು ಅನುಕರಿಸುತ್ತಾ, ಯೆಹೋವನ ಆಲಯವನ್ನು ಕಟ್ಟುವುದಕ್ಕಾಗಿ ದೊಡ್ಡ ಮೊತ್ತದಲ್ಲಿ ಹಣ ಮತ್ತು ಅಮೂಲ್ಯ ವಸ್ತುಗಳನ್ನು ಕಾಣಿಕೆಯಾಗಿ ಕೊಟ್ಟನು. ಇನ್ನೊಂದು ಕ್ರಿಸ್ತೀಯ ಆಜ್ಞೆಯು, ಅಗತ್ಯದಲ್ಲಿರುವವರಿಗೆ ಭೌತಿಕ ಸಹಾಯವನ್ನು ಕೊಡುವುದೇ ಆಗಿದೆ. “ದೇವಜನರಿಗೆ ಕೊರತೆಬಂದಾಗ ಸಹಾಯ ಮಾಡಿರಿ” ಎಂದು ಅಪೊಸ್ತಲ ಪೌಲನು ಹೇಳಿದನು. ಇದಕ್ಕೆ ಕೂಡಿಸುತ್ತಾ, “ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ” ಎಂದು ಅವನು ಹೇಳಿದನು. (ರೋಮಾಪುರ 12:13) ಇದಕ್ಕಾಗಿ ಸ್ವಲ್ಪ ಹಣವನ್ನು ಖಂಡಿತವಾಗಿಯೂ ಖರ್ಚುಮಾಡಬೇಕಾಗುತ್ತದೆ. ಆದರೆ, ಹಣದಾಸೆಯ ಕುರಿತಾಗಿ ಏನು?
‘ಬೆಳ್ಳಿಯ ಪ್ರೀತಿ’
ಪೌಲನು, ತನಗಿಂತಲೂ ಚಿಕ್ಕಪ್ರಾಯದವನಾಗಿದ್ದ ಜೊತೆ ಕ್ರೈಸ್ತನಾದ ತಿಮೊಥೆಯನಿಗೆ ಬರೆದಾಗ, ‘ಹಣದಾಸೆ’ ಅಥವಾ ಅಕ್ಷರಾರ್ಥವಾಗಿ ಹೇಳುವುದಾದರೆ ‘ಬೆಳ್ಳಿಯ ಪ್ರೀತಿಯ’ ಕುರಿತು ವಿಸ್ತೃತವಾಗಿ ಚರ್ಚಿಸಿದನು. ಪೌಲನ ಆ ಬುದ್ಧಿವಾದವು 1 ತಿಮೊಥೆಯ 6:6-19ರಲ್ಲಿದೆ. ಭೌತಿಕ ವಿಷಯಗಳ ಕುರಿತಾದ ಅವನ ಬಹುಮುಖ್ಯವಾದ ಚರ್ಚೆಯಲ್ಲಿ ಅವನು ‘ಹಣದಾಸೆಯ’ ಕುರಿತಾಗಿ ಮಾತಾಡಿದನು. ಇಂದಿನ ಸಂಸ್ಕೃತಿಯು ಹಣಕ್ಕೆ ಕೊಡುವ ಮಹತ್ವವನ್ನು ಮನಸ್ಸಿನಲ್ಲಿಟ್ಟು, ಪೌಲನ ಪ್ರೇರಿತ ಹೇಳಿಕೆಗಳನ್ನು ಜಾಗರೂಕತೆಯಿಂದ ಅಭ್ಯಾಸಮಾಡುವುದರಿಂದ ನಮಗೆ ಒಳಿತಾಗುವುದು. ಅಂಥ ಒಂದು ಪರಿಶೀಲನೆಯು ಖಂಡಿತವಾಗಿಯೂ ಉಪಯುಕ್ತವಾಗಿದೆ, ಯಾಕೆಂದರೆ ‘ವಾಸ್ತವವಾದ ಜೀವವನ್ನು ಹೊಂದುವದು’ ಹೇಗೆಂಬುದರ ಗುಟ್ಟನ್ನು ಅದು ಪ್ರಕಟಪಡಿಸುತ್ತದೆ.
ಪೌಲನು ಎಚ್ಚರಿಸುವುದು: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥೆಯ 6:10) ಹಣ ತಾನೇ ಕೆಟ್ಟದ್ದಾಗಿದೆಯೆಂದು ಈ ವಚನವಾಗಲಿ ಬೇರಾವುದೇ ವಚನವಾಗಲಿ ಹೇಳುವುದಿಲ್ಲ. ಇಲ್ಲವೇ, “ಸಕಲವಿಧವಾದ ಕೆಟ್ಟತನಕ್ಕೆ” ಮೂಲಭೂತ ಕಾರಣ ಹಣ ಆಗಿದೆ ಅಥವಾ ಪ್ರತಿಯೊಂದು ಸಮಸ್ಯೆಯ ಕಾರಣ ಕೇವಲ ಹಣ ಆಗಿದೆಯೆಂದೂ ಅಪೊಸ್ತಲನು ಹೇಳುವುದಿಲ್ಲ. ಅದರ ಬದಲು ಹಣದಾಸೆಯು, ಸಕಲವಿಧವಾದ “ಕೆಟ್ಟತನಕ್ಕೆ” ಏಕಮಾತ್ರ ಕಾರಣವಾಗಿರದಿದ್ದರೂ, ಖಂಡಿತವಾಗಿಯೂ ಅದರ ಅನೇಕ ಕಾರಣಗಳಲ್ಲಿ ಒಂದಾಗಿರಬಲ್ಲದು ಎಂದವನು ಹೇಳುತ್ತಿದ್ದನು.
ಲೋಭದ ವಿರುದ್ಧ ಎಚ್ಚರಿಕೆಯಿಂದಿರಿ
ಶಾಸ್ತ್ರವಚನಗಳಲ್ಲಿ ಸ್ವತಃ ಹಣವನ್ನೇ ಖಂಡಿಸಲಾಗಿಲ್ಲ ಎಂಬ ವಾಸ್ತವಾಂಶವು, ಪೌಲನ ಎಚ್ಚರಿಕೆಯ ತೀಕ್ಷ್ಣತೆಯನ್ನು ಕುಗ್ಗಿಸಬಾರದು. ಹಣಕ್ಕಾಗಿ ಆಸೆಪಡಲು ಆರಂಭಿಸುವ ಕ್ರೈಸ್ತರು ಎಲ್ಲ ರೀತಿಯ ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಮತ್ತು ಇವುಗಳಲ್ಲಿ ಅತಿ ಕೆಟ್ಟದ್ದು, ನಂಬಿಕೆಯಿಂದ ದೂರ ಸರಿಯುವ ಸಮಸ್ಯೆಯೇ. ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಪೌಲನು ಹೇಳಿದ ಮಾತುಗಳಿಂದ ಈ ಸತ್ಯವು ದೃಢೀಕರಿಸಲ್ಪಡುತ್ತದೆ: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. . . . ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊಸ್ಸೆ 3:5) ಆದರೆ ದುರಾಶೆ, ಲೋಭ ಅಥವಾ “ಹಣದಾಸೆಯು” ಹೇಗೆ ವಿಗ್ರಹಾರಾಧನೆಗೆ ಸಮವಾಗಿರುತ್ತವೆ? ಇದರರ್ಥ, ಒಂದು ದೊಡ್ಡ ಮನೆ, ನವೀನ ಮಾದರಿಯ ಕಾರ್, ಹೆಚ್ಚು ಸಂಬಳ ಸಿಗುವ ಒಂದು ಉದ್ಯೋಗವನ್ನು ಬಯಸುವುದು ತಪ್ಪೆಂದೊ? ಖಂಡಿತವಾಗಿಯೂ ಅಲ್ಲ. ಈ ವಿಷಯಗಳೇ ತಪ್ಪು ಎಂದೇನಿಲ್ಲ. ಪ್ರಶ್ನೆಯೇನೆಂದರೆ, ಈ ವಿಷಯಗಳನ್ನು ಬಯಸುವಂತೆ ಮಾಡುವ ಮನೋಭಾವವು ಯಾವುದು, ಮತ್ತು ಇವೆಲ್ಲ ನಿಜವಾಗಿಯೂ ಅತ್ಯಾವಶ್ಯಕವೊ?
ಸಹಜವಾದ ಆಸೆ ಮತ್ತು ಲೋಭದ ನಡುವಿನ ವ್ಯತ್ಯಾಸವನ್ನು, ಅಡಿಗೆಮಾಡಲು ಉಪಯೋಗಿಸಲಾಗುವ ಒಲೆಯ ಬೆಂಕಿ ಮತ್ತು ಇಡೀ ಕಾಡನ್ನೇ ನಾಶಮಾಡುವ ಧಗಧಗನೆ ಉರಿಯುವ ಕಾಡ್ಗಿಚ್ಚಿನ ನಡುವಿನ ವ್ಯತ್ಯಾಸಕ್ಕೆ ಹೋಲಿಸಬಹುದು. ಹಿತಕರವಾದ ಮತ್ತು ಯಥೋಚಿತವಾದ ಆಸೆಗಳು ಸಹಾಯಕಾರಿಯಾಗಿರುತ್ತವೆ. ನಾವು ದುಡಿದು, ಹೆಚ್ಚು ಫಲದಾಯಕವಾಗಿರುವಂತೆ ಮಾಡಲು, ಬೇಕಾದ ಚಾಲಕಶಕ್ತಿಯನ್ನು ಅವು ಕೊಡುತ್ತವೆ. ಜ್ಞಾನೋಕ್ತಿ 16:26 ಹೇಳುವುದು: “ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವದು; ಅವನನ್ನು [ದುಡಿಯಲಿಕ್ಕೆ] ಅವನ ಬಾಯೇ ಒತ್ತಾಯ ಮಾಡುವದು.” ಆದರೆ ಅತ್ಯಾಸೆಯು ಅಪಾಯಕಾರಿಯಾಗಿದೆ ಮಾತ್ರವಲ್ಲ ವಿನಾಶಕಾರಿಯೂ ಆಗಿದೆ. ಅದು ನಿಯಂತ್ರಣವಿಲ್ಲದ ಒಂದು ಆಸೆಯಾಗಿದೆ.
ನಿಯಂತ್ರಣ—ಅದೇ ಒಂದು ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ನಾವು ಸಂಗ್ರಹಿಸುವ ಹಣ ಅಥವಾ ಬಯಸುವಂಥ ಭೌತಿಕ ವಸ್ತುಗಳು ನಮ್ಮ ಅಗತ್ಯಗಳನ್ನು ಪೂರೈಸಲಿಕ್ಕಾಗಿ ನಮ್ಮ ಗುಲಾಮರಾಗುತ್ತವೊ, ಅಥವಾ ನಮ್ಮ ಅಗತ್ಯಗಳು ನಮ್ಮನ್ನೇ ಹಣದ ಗುಲಾಮರನ್ನಾಗಿ ಮಾಡುತ್ತವೊ? ಆದುದರಿಂದಲೇ ಪೌಲನು ‘ವಿಗ್ರಹಾರಾಧಕರಂತಿರುವ ಲೋಭಿಗಳ’ ಕುರಿತಾಗಿ ಹೇಳಿದನು. (ಎಫೆಸ 5:5) ಯಾವುದೋ ವಿಷಯಕ್ಕಾಗಿ ಅತ್ಯಾಸೆಪಡುವುದರ ಅರ್ಥವೇನೆಂದರೆ, ನಾವು ವಾಸ್ತವದಲ್ಲಿ ಅದಕ್ಕೆ ಶರಣಾಗುತ್ತೇವೆ. ಕಾರ್ಯತಃ ನಾವು ಅದನ್ನು ನಮ್ಮ ಧಣಿಯನ್ನಾಗಿ, ನಮ್ಮ ದೇವರನ್ನಾಗಿ, ನಾವು ಸೇವೆಸಲ್ಲಿಸುವ ವಿಷಯವನ್ನಾಗಿ ಮಾಡುತ್ತೇವೆ. ಇದಕ್ಕೆ ವಿರುದ್ಧವಾಗಿ, ದೇವರು ಒತ್ತಿಹೇಳುವುದು: “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.”—ವಿಮೋಚನಕಾಂಡ 20:3.
ನಾವು ಲೋಭಿಗಳಾಗಿದ್ದರೆ, ನಮಗೆ ಏನು ಅಗತ್ಯವಿದೆಯೊ ಅದನ್ನು ಕೊಡುವೆನೆಂದು ದೇವರು ಕೊಟ್ಟಿರುವ ಮಾತನ್ನು ಆತನು ಪೂರೈಸುವನೆಂಬ ಭರವಸೆ ನಮಗಿಲ್ಲವೆಂದು ಅದು ತೋರಿಸುತ್ತದೆ. (ಮತ್ತಾಯ 6:33) ಹೀಗೆ, ಲೋಭವು ದೇವರಿಂದ ದೂರಹೋಗುವುದಕ್ಕೆ ಸಮಾನವಾಗಿದೆ. ಈ ಅರ್ಥದಲ್ಲೂ, ಅದು ‘ವಿಗ್ರಹಾರಾಧನೆ’ ಆಗುತ್ತದೆ. ಅದರ ವಿರುದ್ಧ ಪೌಲನು ಇಷ್ಟು ಸ್ಪಷ್ಟವಾದ ಎಚ್ಚರಿಕೆಯನ್ನು ಕೊಟ್ಟಿರುವುದರಲ್ಲಿ ಆಶ್ಚರ್ಯವೇನಿಲ್ಲ!
ಯೇಸು ಕೂಡ, ಲೋಭದ ವಿರುದ್ಧ ನೇರವಾದ ಎಚ್ಚರಿಕೆಯನ್ನು ಕೊಟ್ಟನು. ನಮ್ಮ ಬಳಿ ಇಲ್ಲದಿರುವ ವಿಷಯಕ್ಕಾಗಿ ಹಾತೊರೆಯುವುದರ ವಿರುದ್ಧ ಅವನು ಆಜ್ಞೆಯನ್ನು ಕೊಟ್ಟನು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ಈ ವಚನ ಮತ್ತು ಯೇಸು ಮುಂದೆ ಕೊಟ್ಟಂಥ ದೃಷ್ಟಾಂತಕ್ಕನುಸಾರ, ಒಬ್ಬನ ಬಳಿ ಎಷ್ಟಿದೆಯೊ ಅದು ತಾನೇ ಜೀವನದಲ್ಲಿ ಅತಿ ಪ್ರಾಮುಖ್ಯ ಸಂಗತಿಯಾಗಿದೆ ಎಂಬ ಮೂರ್ಖ ನಂಬಿಕೆಯ ಮೇಲೆ ಲೋಭವು ಆಧಾರಿತವಾಗಿದೆ. ಅದು ಹಣ, ಅಂತಸ್ತು, ಅಧಿಕಾರ ಅಥವಾ ಸಂಬಂಧಿತ ಸಂಗತಿಗಳಾಗಿರಬಹುದು. ಒಬ್ಬ ವ್ಯಕ್ತಿಯು ಪಡೆದುಕೊಳ್ಳಲು ಸಾಧ್ಯವಿರುವ ಯಾವುದೇ ವಿಷಯಕ್ಕಾಗಿ ಅತ್ಯಾಸೆಪಡಸಾಧ್ಯವಿದೆ. ನಮ್ಮ ಬಳಿ ಆ ವಸ್ತು ಇರುವಲ್ಲಿ ನಾವು ಸಂತೃಪ್ತರಾಗಿರುವೆವು ಎಂದು ನಾವು ನೆನಸಬಹುದು. ಆದರೆ ಬೈಬಲ್ ಮತ್ತು ಮನುಷ್ಯರ ಅನುಭವಕ್ಕನುಸಾರ, ಯೇಸು ತನ್ನ ಹಿಂಬಾಲಕರೊಂದಿಗೆ ತರ್ಕಿಸಿದಂತೆ ಕೇವಲ ದೇವರೊಬ್ಬನೇ ನಮ್ಮ ನಿಜವಾದ ಅಗತ್ಯಗಳನ್ನು ಪೂರೈಸಬಲ್ಲನು ಮತ್ತು ಪೂರೈಸುವನು.—ಲೂಕ 12:22-31.
ಬಳಕೆದಾರನಿಗೆ ಪ್ರಾಶಸ್ತ್ಯವನ್ನು ಕೊಡುವ ಇಂದಿನ ಸಂಸ್ಕೃತಿಯು, ಲೋಭ ಎಂಬ ಬೆಂಕಿಗೆ ಗಾಳಿ ಹಾಕುವುದರಲ್ಲಿ ನಿಸ್ಸೀಮ. ತುಂಬ ಪ್ರಬಲವಾದರೂ ನವಿರಾದ ವಿಧಾನಗಳ ಪ್ರಭಾವಕ್ಕೆ ತುತ್ತಾಗಿ, ತಮ್ಮ ಬಳಿ ಈಗಾಗಲೇ ಏನಿದೆಯೊ ಅದು ಸಾಕಾಗುವುದಿಲ್ಲ ಎಂದು ಅನೇಕರು ನಂಬಲಾರಂಭಿಸುತ್ತಾರೆ. ಅವರಿಗೆ ಇನ್ನೂ ಹೆಚ್ಚು, ಇನ್ನೂ ದೊಡ್ಡದಾದ, ಮತ್ತು ಇನ್ನೂ ಉತ್ತಮವಾದ ವಸ್ತುಗಳು ಬೇಕಾಗುತ್ತವೆ. ನಮ್ಮ ಸುತ್ತಲಿನ ಜಗತ್ತನ್ನು ನಾವು ಬದಲಾಯಿಸಲಾರೆವು. ಆದರೆ ನಾವು ವೈಯಕ್ತಿಕವಾಗಿ ಈ ಪ್ರವೃತ್ತಿಯನ್ನು ಹೇಗೆ ಪ್ರತಿರೋಧಿಸಬಲ್ಲೆವು?
ಸಂತೃಪ್ತಿಗೆ ಎದುರಾಗಿ ಲೋಭ
ಲೋಭದ ಬದಲಿ ದಾರಿಯನ್ನು ಪೌಲನು ತೋರಿಸುತ್ತಾನೆ. ಅದು ಸಂತೃಪ್ತಿಯೇ. ಅವನು ಹೇಳುವುದು: “ಆದುದರಿಂದ ಊಟ ಬಟ್ಟೆ ವಸತಿಗಳಿದ್ದರೆ ಸಾಕು, ಇವುಗಳೊಂದಿಗೆ ನಾವು ಸಂತೃಪ್ತರಾಗಿರುವೆವು.” (1 ತಿಮೊಥೆಯ 6:8, NW) ನಮಗೆ ನಿಜವಾಗಿಯೂ ಬೇಕಾಗಿರುವಂಥದ್ದು, “ಊಟ ಬಟ್ಟೆ ವಸತಿ”ಗಳಷ್ಟೇ ಎಂದು ಇಲ್ಲಿ ತಿಳಿಸಲ್ಪಟ್ಟಿದೆ. ಇದು ಅತಿ ಸರಳವಾದದ್ದಾಗಿ ತೋರಬಹುದು. ಇಂದು ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಅನೇಕ ಜನರು, ಐಷಾರಾಮದ ಮನೆಗಳಲ್ಲಿ ವಾಸಿಸುತ್ತಿರುವ ಹೆಸರಾಂತ ವ್ಯಕ್ತಿಗಳನ್ನು ಭೇಟಿಮಾಡುತ್ತಾರೆ. ಮತ್ತು ಇದು ಖಂಡಿತವಾಗಿಯೂ ಅವರಲ್ಲಿ ಸಂತೃಪ್ತಿಯ ಭಾವನೆಯು ಬೆಳೆಯುವಂತೆ ಸಹಾಯಮಾಡುವುದಿಲ್ಲ.
ದೇವರ ಸೇವಕರು, ಬೇಕು ಬೇಕೆಂದೇ ತಮ್ಮ ಮೇಲೆ ಬರಮಾಡಿಕೊಂಡಿರುವ ಬಡತನದಲ್ಲಿ ಜೀವಿಸಬೇಕೆಂದು ಖಂಡಿತವಾಗಿಯೂ ಅಪೇಕ್ಷಿಸಲಾಗುವುದಿಲ್ಲ. (ಜ್ಞಾನೋಕ್ತಿ 30:8, 9) ನಿಜವಾದ ಬಡತನವೆಂದರೇನು ಎಂಬುದನ್ನು ಪೌಲನು ನಮಗೆ ಜ್ಞಾಪಕಹುಟ್ಟಿಸುತ್ತಾನೆ: ಆಹಾರ, ಬಟ್ಟೆ, ಮತ್ತು ಒಬ್ಬನು ಜೀವಿಸುವ ಕ್ಷೇತ್ರದಲ್ಲಿ ಬದುಕಿ ಉಳಿಯಲು ತಕ್ಕದ್ದಾಗಿರುವ ಮನೆಯ ಕೊರತೆಯೇ. ಆದರೆ ಇನ್ನೊಂದು ಬದಿಯಲ್ಲಿ, ನಮ್ಮ ಬಳಿ ಇವೆಲ್ಲವೂ ಇರುವಲ್ಲಿ, ನಾವು ಸಂತೃಪ್ತರಾಗಿರಲು ಕಾರಣವಿದೆ.
ಸಂತೃಪ್ತಿಯು ಹಾಗಿರುತ್ತದೆಂದು ಪೌಲನು ಪ್ರಾಮಾಣಿಕವಾಗಿ ಹೇಳುತ್ತಿದ್ದನೊ? ಕೇವಲ ಮೂಲಭೂತ ವಿಷಯಗಳು—ಆಹಾರ, ಬಟ್ಟೆ ಮತ್ತು ಮನೆಯಂಥ ವಿಷಯಗಳೊಂದಿಗೆ ಒಬ್ಬನು ತೃಪ್ತನಾಗಿರಬಲ್ಲನೊ? ಇದು ಪೌಲನಿಗೆ ಚೆನ್ನಾಗಿ ಗೊತ್ತಿದ್ದಿರಬೇಕು. ಯಾಕೆಂದರೆ ಅವನು ಸ್ವತಃ ಐಶ್ವರ್ಯ, ಯೆಹೂದಿ ಸಮಾಜದಲ್ಲಿ ಉಚ್ಚ ಪದವಿ ಮತ್ತು ರೋಮನ್ ಪೌರತ್ವದ ರುಚಿಯನ್ನು ಸವಿದಿದ್ದನು. (ಅ. ಕೃತ್ಯಗಳು 22:28; 23:6; ಫಿಲಿಪ್ಪಿ 3:5) ಅಲ್ಲದೆ, ತನ್ನ ಮಿಷನೆರಿ ಚಟುವಟಿಕೆಗಳಲ್ಲಿ ಪೌಲನು ತುಂಬ ಕಷ್ಟಗಳನ್ನೂ ಅನುಭವಿಸಿದನು. (2 ಕೊರಿಂಥ 11:23-28) ಇದೆಲ್ಲದ್ದರ ಮೂಲಕ, ಸಂತೃಪ್ತಿಯನ್ನು ಕಾಪಾಡಿಕೊಂಡು ಹೋಗಲು ಅವನಿಗೆ ಸಹಾಯಮಾಡಿದ ಒಂದು ಗುಟ್ಟನ್ನು ಅವನು ಕಲಿತನು. ಅದೇನು?
“ಅದರ ಗುಟ್ಟು ನನಗೆ ತಿಳಿದಿದೆ”
ಪೌಲನು ತನ್ನ ಪತ್ರಗಳಲ್ಲೊಂದರಲ್ಲಿ ವಿವರಿಸಿದ್ದು: “ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ.” (ಫಿಲಿಪ್ಪಿ 4:12) ಪೌಲನು ಇದನ್ನು ಎಷ್ಟು ಭರವಸೆಯಿಂದ ಹೇಳುತ್ತಾನೆ, ಎಷ್ಟು ಆಶಾವಾದಿಯಾಗಿದ್ದಾನೆ! ಅವನು ಈ ಮಾತುಗಳನ್ನು ಬರೆದಾಗ ಅವನ ಜೀವನವು ಸುಖದ ಸುಪ್ಪತ್ತಿಗೆಯಾಗಿದ್ದಿರಬಹುದು ಎಂದು ನಾವು ಸುಲಭವಾಗಿ ನೆನಸಬಹುದು. ಆದರೆ ಹಾಗಿರಲಿಲ್ಲ. ಅವನು ರೋಮ್ನಲ್ಲಿನ ಒಂದು ಸೆರೆಮನೆಯಲ್ಲಿದ್ದಾಗ ಇದನ್ನು ಬರೆದನು!—ಫಿಲಿಪ್ಪಿ 1:12-14.
ಆ ವಿಚಾರಪ್ರೇರಕ ವಾಸ್ತವಾಂಶವು, ಭೌತಿಕ ಸ್ವತ್ತುಗಳ ಕುರಿತಾಗಿ ಮಾತ್ರವಲ್ಲ ನಮ್ಮ ಪರಿಸ್ಥಿತಿಗಳ ಸಂಬಂಧದಲ್ಲೂ ಸಂತೃಪ್ತರಾಗಿರುವುದರ ಕುರಿತಾಗಿ ಪ್ರಬಲವಾದ ಸಂದೇಶವನ್ನು ಕೊಡುತ್ತದೆ. ಐಶ್ವರ್ಯವು ಅತಿಯಾಗಿರಲಿ, ಇಲ್ಲವೇ ಕಷ್ಟದೆಸೆಯು ಅತಿಯಾಗಿರಲಿ, ಇವೆರಡೂ ನಾವು ಯಾವುದನ್ನು ಆದ್ಯ ಸ್ಥಾನದಲ್ಲಿಟ್ಟಿದ್ದೇವೆ ಎಂಬುದನ್ನು ಪರೀಕ್ಷಿಸಬಲ್ಲದು. ಆರ್ಥಿಕ ಪರಿಸ್ಥಿತಿಗಳು ಹೇಗಿದ್ದರೂ, ಸಂತೃಪ್ತನಾಗಿರಲು ತನ್ನನ್ನು ಶಕ್ತಗೊಳಿಸಿದ ಆತ್ಮಿಕ ಸಂಪನ್ಮೂಲಗಳ ಕುರಿತಾಗಿ ಪೌಲನು ಮಾತಾಡಿದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ತನ್ನ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಪೌಲನು ತನ್ನ ಬಳಿ ಇರುವ ಹೆಚ್ಚು ಅಥವಾ ಕಡಿಮೆ ಸ್ವತ್ತುಗಳು, ಇಲ್ಲವೇ ತಾನು ಇರುವಂಥ ಒಳ್ಳೆಯ ಅಥವಾ ಕೆಟ್ಟ ಪರಿಸ್ಥಿತಿಗಳ ಕಡೆಗಲ್ಲ, ಬದಲಾಗಿ ದೇವರ ಕಡೆಗೆ ನೋಡಿದನು. ಇದರಿಂದಾಗಿ, ಅವನು ಸಂತೃಪ್ತನಾಗಿದ್ದನು.
ಪೌಲನ ಮಾದರಿಯು ವಿಶೇಷವಾಗಿ ತಿಮೊಥೆಯನಿಗೆ ಪ್ರಾಮುಖ್ಯವಾಗಿತ್ತು. ಈ ಯುವಕನು, ದೈವಿಕ ಭಕ್ತಿ ಮತ್ತು ದೇವರೊಂದಿಗಿನ ಸಂಬಂಧವನ್ನು ಐಶ್ವರ್ಯಕ್ಕಿಂತಲೂ ಮುಂದೆ ಇಡುವ ಒಂದು ಜೀವನಶೈಲಿಯನ್ನು ಅನುಸರಿಸುವಂತೆ ಅಪೊಸ್ತಲನು ಪ್ರೇರೇಪಿಸಿದನು. ಪೌಲನು ಹೇಳಿದ್ದು: “ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು; ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು.” (1 ತಿಮೊಥೆಯ 6:11) ಆ ಮಾತುಗಳು ತಿಮೊಥೆಯನಿಗೆ ಸಂಬೋಧಿಸಲ್ಪಟ್ಟಿದ್ದರೂ, ದೇವರನ್ನು ಸನ್ಮಾನಿಸಲು ಮತ್ತು ನಿಜವಾಗಿಯೂ ಸಂತೋಷದ ಜೀವನವನ್ನು ಬಯಸುವ ಯಾವುದೇ ವ್ಯಕ್ತಿಗೆ ಅವು ಅನ್ವಯವಾಗಬಲ್ಲವು.
ಬೇರೆ ಯಾವ ಕ್ರೈಸ್ತನಂತೆಯೇ ತಿಮೊಥೆಯನು ಸಹ ಲೋಭದ ಕುರಿತಾಗಿ ಎಚ್ಚರಿಕೆಯಿಂದಿರಬೇಕಿತ್ತು. ಪೌಲನು ಅವನಿಗೆ ಆ ಪತ್ರವನ್ನು ಬರೆದಾಗ ಅವನು ಎಫೆಸದಲ್ಲಿದ್ದನು ಮತ್ತು ಅಲ್ಲಿರುವ ಸಭೆಯಲ್ಲಿ ಅನೇಕ ಶ್ರೀಮಂತ ವಿಶ್ವಾಸಿಗಳಿದ್ದಿರಬಹುದು. (1 ತಿಮೊಥೆಯ 1:3) ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಸಾರುತ್ತಾ ಪೌಲನು ಈ ಸಂಪದ್ಭರಿತ ವ್ಯಾಪಾರ ಕೇಂದ್ರವನ್ನು ಪ್ರವೇಶಿಸಿ, ಅಲ್ಲಿ ಅನೇಕರನ್ನು ಕ್ರೈಸ್ತರನ್ನಾಗಿ ಮಾಡಿದನು. ನಿಸ್ಸಂದೇಹವಾಗಿ ಇವರಲ್ಲಿ ಅನೇಕರು ಶ್ರೀಮಂತರಾಗಿದ್ದಿರಬಹುದು. ಇದು ಇಂದಿನ ಕ್ರೈಸ್ತ ಸಭೆಯಲ್ಲಿರುವ ಕೆಲವರ ವಿಷಯದಲ್ಲೂ ಸತ್ಯವಾಗಿದೆ.
ಆದುದರಿಂದ 1 ತಿಮೊಥೆಯ 6:6-10ರಲ್ಲಿರುವ ಬೋಧನೆಯ ದೃಷ್ಟಿಯಲ್ಲಿ ಈ ಪ್ರಶ್ನೆಯು ಏಳುತ್ತದೆ: ಸಾಮಾನ್ಯಕ್ಕಿಂತಲೂ ಹೆಚ್ಚು ಹಣವುಳ್ಳವರು, ದೇವರನ್ನು ಸನ್ಮಾನಿಸಲು ಬಯಸುವಲ್ಲಿ ಏನು ಮಾಡಬೇಕು? ಅವರು ಮಾಡಬೇಕಾದ ಮೊದಲನೆಯ ಕೆಲಸ, ತಮ್ಮ ಮನೋಭಾವಗಳನ್ನು ಪರೀಕ್ಷಿಸುವುದೇ ಆಗಿದೆ ಎಂದು ಪೌಲನು ಹೇಳುತ್ತಾನೆ. ಹಣಕ್ಕೆ, ಒಬ್ಬ ವ್ಯಕ್ತಿಯಲ್ಲಿ ಹೆಮ್ಮೆಯ ಭಾವನೆಯನ್ನು ಉಂಟುಮಾಡುವ ಪ್ರವೃತ್ತಿಯಿದೆ. ಪೌಲನು ಹೇಳುವುದು: “ಇಹಲೋಕವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ . . . ಅವರಿಗೆ ಆಜ್ಞಾಪಿಸು.” (1 ತಿಮೊಥೆಯ 6:17) ಶ್ರೀಮಂತರು, ಹಣಕ್ಕಿಂತಲೂ ಹೆಚ್ಚಿನದ್ದನ್ನು ನೋಡಲು ಕಲಿಯಬೇಕು. ಅವರು, ಎಲ್ಲ ಐಶ್ವರ್ಯದ ಮೂಲ ಉಗಮನಾಗಿರುವ ದೇವರ ಕಡೆಗೆ ನೋಡಬೇಕು.
ಆದರೆ ಯಶಸ್ಸಿನ ಹಾದಿಯಲ್ಲಿ, ಸರಿಯಾದ ಮನೋಭಾವವು ಕೇವಲ ಒಂದು ಹೆಜ್ಜೆಯಾಗಿದೆ. ಇಂದೊ ಮುಂದೊ, ಶ್ರೀಮಂತ ಕ್ರೈಸ್ತರು ತಮ್ಮ ಐಶ್ವರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲೇಬೇಕು. ಪೌಲನು ಬುದ್ಧಿವಾದ ನೀಡುವುದು: ‘ದಾನಧರ್ಮಗಳನ್ನು ಮಾಡಿರಿ, ಪರೋಪಕಾರಮಾಡಿರಿ.’—1 ತಿಮೊಥೆಯ 6:18.
“ವಾಸ್ತವವಾದ ಜೀವ”
ಪೌಲನ ಸಲಹೆಯ ಮುಖ್ಯ ಗುರಿಯು, ನಾವು ಭೌತಿಕ ವಿಷಯಗಳ ಅಲ್ಪ ಮೌಲ್ಯವನ್ನು ಜ್ಞಾಪಕಕ್ಕೆ ತರುತ್ತಾ ಇರಬೇಕು ಎಂಬುದೇ. ದೇವರ ವಾಕ್ಯವು ಹೇಳುವುದು: “ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದೂ ಎತ್ತರವಾದ ಗೋಡೆಯೆಂದೂ ಭಾವಿಸಿಕೊಳ್ಳುತ್ತಾನೆ.” (ಜ್ಞಾನೋಕ್ತಿ 18:11) ಹೌದು, ಐಶ್ವರ್ಯವು ಒದಗಿಸಬಲ್ಲ ಸುರಕ್ಷೆಯು ಮೂಲಭೂತವಾಗಿ ಕೇವಲ ಒಂದು ಕಲ್ಪನೆಯಾಗಿದೆ ಮತ್ತು ವಾಸ್ತವದಲ್ಲಿ ಮೋಸಕರವಾಗಿದೆ. ಆದುದರಿಂದ ದೇವರ ಮೆಚ್ಚುಗೆಯನ್ನು ಪಡೆಯುವುದರ ಮೇಲೆ ನಮ್ಮ ಜೀವಿತಗಳನ್ನು ಕೇಂದ್ರೀಕರಿಸುವ ಬದಲು ಐಶ್ವರ್ಯದ ಮೇಲೆ ಕೇಂದ್ರೀಕರಿಸುವುದು ತಪ್ಪು.
ಪ್ರಾಪಂಚಿಕ ಐಶ್ವರ್ಯದ ಅನಿಶ್ಚಿತತೆಯಿಂದಾಗಿ, ನಾವು ಅದರ ಮೇಲೆ ನಮ್ಮ ನಿರೀಕ್ಷೆಯನ್ನಿಡಲಾಗದಷ್ಟು ದುರ್ಬಲವಾಗಿದೆ. ನಿಜವಾದ ನಿರೀಕ್ಷೆಯು, ಹೆಚ್ಚು ಬಲವಾದ, ಹೆಚ್ಚು ಅರ್ಥಪೂರ್ಣವಾದ ಮತ್ತು ಬಾಳುವಂಥ ವಿಷಯಕ್ಕೆ ಬಿಗಿಯಲ್ಪಟ್ಟಿರಬೇಕು. ಕ್ರೈಸ್ತ ನಿರೀಕ್ಷೆಯು, ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಮತ್ತು ನಿತ್ಯಜೀವದ ಆತನ ವಾಗ್ದಾನದ ಮೇಲೆ ಸ್ಥಾಪಿಸಲ್ಪಟ್ಟಿದೆ. ಹಣ ಸಂತೋಷವನ್ನು ಖರೀದಿಸಲಾರದೆಂಬುದು ನಿಜ. ಅದೇ ಸಮಯದಲ್ಲಿ ಹಣವು ನಮಗಾಗಿ ರಕ್ಷಣೆಯನ್ನೂ ಖರೀದಿಸಲಾರದೆಂಬುದು ಸಹ ಅಷ್ಟೇ ಸತ್ಯ ಸಂಗತಿ. ದೇವರಲ್ಲಿ ನಮಗಿರುವ ನಂಬಿಕೆಯು ಮಾತ್ರ ಅಂಥ ನಿರೀಕ್ಷೆಯನ್ನು ಕೊಡಬಲ್ಲದು.
ಆದುದರಿಂದ ನಾವು ಶ್ರೀಮಂತರಾಗಿರಲಿ, ಬಡವರಾಗಿರಲಿ, ‘ದೇವರ ವಿಷಯಗಳಲ್ಲಿ ಐಶ್ವರ್ಯವಂತ’ರಾಗುವಂತೆ ಮಾಡುವ ಜೀವನ ಕ್ರಮವನ್ನು ಬೆನ್ನಟ್ಟೋಣ. (ಲೂಕ 12:21) ಸೃಷ್ಟಿಕರ್ತನೊಂದಿಗಿನ ಒಂದು ಮೆಚ್ಚುಗೆಯ ನಿಲುವಿಗಿಂತ ಹೆಚ್ಚು ಅಮೂಲ್ಯವಾದದ್ದೇನೂ ಇಲ್ಲ. ಅದನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಮಾಡುವ ಎಲ್ಲ ಪ್ರಯತ್ನಗಳು, ‘ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ . . . ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಲು’ ಸಹಾಯಮಾಡುವುದು.—1 ತಿಮೊಥೆಯ 6:19.
[ಪುಟ 7ರಲ್ಲಿರುವ ಚಿತ್ರ]
ಪೌಲನು ಸಂತೃಪ್ತಿಯ ಗುಟ್ಟನ್ನು ಕಲಿತುಕೊಂಡನು
[ಪುಟ 8ರಲ್ಲಿರುವ ಚಿತ್ರಗಳು]
ನಮ್ಮ ಬಳಿ ಏನಿದೆಯೊ ಅದರೊಂದಿಗೆ ನಾವು ಸಂತೋಷಿತರೂ ಸಂತೃಪ್ತರೂ ಆಗಿರಬಲ್ಲೆವು