ಅಧ್ಯಾಯ ಹತ್ತೊಂಬತ್ತು
ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ
ದೇವರನ್ನು ಪ್ರೀತಿಸುವುದರ ಅರ್ಥವೇನು?
ನಾವು ದೇವರ ಪ್ರೀತಿಯಲ್ಲಿ ಹೇಗೆ ನೆಲೆಗೊಳ್ಳಬಲ್ಲೆವು?
ತನ್ನ ಪ್ರೀತಿಯಲ್ಲಿ ನೆಲೆಗೊಳ್ಳುವವರಿಗೆ ಯೆಹೋವನು ಹೇಗೆ ಪ್ರತಿಫಲ ಕೊಡುವನು?
1, 2. ನಾವು ಇಂದು ಸುರಕ್ಷಿತ ಆಶ್ರಯ ಸ್ಥಾನವೊಂದನ್ನು ಎಲ್ಲಿ ಕಂಡುಕೊಳ್ಳಬಲ್ಲೆವು?
ಬಿರುಗಾಳಿಯ ಒಂದು ದಿನ ನೀವು ರಸ್ತೆಯಲ್ಲಿ ನಡೆಯುತ್ತ ಹೋಗುತ್ತಿದ್ದೀರೆಂದು ಭಾವಿಸಿರಿ. ಆಕಾಶದಲ್ಲಿ ಕತ್ತಲೆಗವಿಯುತ್ತಾ ಇದೆ. ಗುಡುಗುಮಿಂಚು ಆರಂಭವಾಗುತ್ತದೆ, ಅನಂತರ ಮಳೆಯು ಧಾರಾಕಾರವಾಗಿ ಸುರಿಯುತ್ತದೆ. ನೀವು ಆಶ್ರಯವನ್ನು ಹುಡುಕುತ್ತ ಧಾವಿಸತೊಡಗುತ್ತೀರಿ. ಅಲ್ಲಿ ರಸ್ತೆಯ ಮಗ್ಗುಲಲ್ಲಿ ಒಂದು ಆಶ್ರಯವನ್ನು ನೋಡುತ್ತೀರಿ. ಅದು ಸುಭದ್ರವಾದ, ಶುಷ್ಕವಾದ ಸ್ಥಳವಾಗಿದ್ದು ನಿಮ್ಮನ್ನು ಕೈಬೀಸಿ ಕರೆಯುವಂತಿದೆ. ಆ ಸುರಕ್ಷಿತ ತಾಣವು ನಿಮಗೆಷ್ಟು ಮಹತ್ತ್ವದ್ದಾಗಿರುತ್ತದೆ!
2 ನಾವು ಪ್ರಕ್ಷುಬ್ಧವಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. ಲೋಕದ ಪರಿಸ್ಥಿತಿಗಳು ಹೆಚ್ಚೆಚ್ಚು ಕೆಡುತ್ತಾ ಹೋಗುತ್ತಿವೆ. ಆದರೆ ಕಾಯಂ ಹಾನಿಯಿಂದ ನಮ್ಮನ್ನು ಸುರಕ್ಷಿತವಾಗಿಡುವ ಒಂದು ಭದ್ರವಾದ ಆಶ್ರಯವಿದೆ. ಅದು ಯಾವುದು? ಬೈಬಲ್ ಏನು ಬೋಧಿಸುತ್ತದೊ ಅದಕ್ಕೆ ಗಮನಕೊಡಿರಿ: “ನಾನು ಯೆಹೋವನಿಗೆ—ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.”—ಕೀರ್ತನೆ 91:2.
3. ನಾವು ಯೆಹೋವನನ್ನು ನಮ್ಮ ಆಶ್ರಯಸ್ಥಾನವಾಗಿ ಹೇಗೆ ಮಾಡಿಕೊಳ್ಳಬಲ್ಲೆವು?
3 ಇದನ್ನು ಊಹಿಸಬಲ್ಲಿರೊ? ಈ ವಿಶ್ವದ ಸೃಷ್ಟಿಕರ್ತನೂ ಪರಮಾಧಿಕಾರಿಯೂ ಆದ ಯೆಹೋವನು ನಮ್ಮನ್ನು ಸಂರಕ್ಷಿಸುವ ಆಶ್ರಯ ಸ್ಥಾನವಾಗಿರಬಲ್ಲನು. ಆತನು ನಮ್ಮನ್ನು ಸುರಕ್ಷಿತವಾಗಿಡಬಲ್ಲನು, ಏಕೆಂದರೆ ನಮಗೆ ವಿರೋಧವಾಗಿ ಬರುವ ಯಾವನಿಗಿಂತಲೂ ಅಥವಾ ಯಾವುದಕ್ಕಿಂತಲೂ ಆತನು ಎಷ್ಟೋ ಹೆಚ್ಚು ಬಲಿಷ್ಠನಾಗಿದ್ದಾನೆ. ಒಂದುವೇಳೆ ನಮಗೆ ಹಾನಿಯಾದರೂ, ಯೆಹೋವನು ಅದೆಲ್ಲವನ್ನೂ ಸರಿಪಡಿಸಬಲ್ಲನು. ಆದರೆ ನಾವು ಯೆಹೋವನನ್ನು ನಮ್ಮ ಆಶ್ರಯಸ್ಥಾನವಾಗಿ ಹೇಗೆ ಮಾಡಿಕೊಳ್ಳಬಲ್ಲೆವು? ನಾವು ಆತನಲ್ಲಿ ಭರವಸೆಯಿಡುವುದು ಅಗತ್ಯ. ಇದಲ್ಲದೆ, ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುವುದು: “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 21) ಹೌದು, ನಮ್ಮ ಸ್ವರ್ಗೀಯ ಪಿತನೊಂದಿಗೆ ಒಂದು ಪ್ರೀತಿಯ ಬಂಧವನ್ನು ಕಾಪಾಡಿಕೊಳ್ಳುತ್ತಾ, ನಾವು ದೇವರ ಪ್ರೀತಿಯಲ್ಲಿ ನೆಲೆಗೊಳ್ಳಬೇಕು. ಆಗ ಆತನು ನಮ್ಮ ಆಶ್ರಯಸ್ಥಾನವಾಗಿರುವುದು ಖಂಡಿತ. ಆದರೆ ಅಂತಹ ಬಂಧವನ್ನು ನಾವು ಹೇಗೆ ಬೆಸೆಯಬಲ್ಲೆವು?
ದೇವರ ಪ್ರೀತಿಯನ್ನು ಗುರುತಿಸಿ, ಅದಕ್ಕೆ ಸ್ಪಂದಿಸಿರಿ
4, 5. ಯೆಹೋವನು ನಮಗಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವ ವಿಧಗಳಲ್ಲಿ ಕೆಲವು ಯಾವುವು?
4 ನಾವು ದೇವರ ಪ್ರೀತಿಯಲ್ಲಿ ನೆಲೆಗೊಳ್ಳಬೇಕಾದರೆ, ಯೆಹೋವನು ನಮಗೆ ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆಂಬುದನ್ನು ನಾವು ಗ್ರಹಿಸಬೇಕು. ಈ ಪುಸ್ತಕದ ಸಹಾಯದಿಂದ ನೀವು ಕಲಿತಿರುವ ಕೆಲವು ಬೈಬಲ್ ಬೋಧನೆಗಳ ಬಗ್ಗೆ ಯೋಚಿಸಿರಿ. ಸೃಷ್ಟಿಕರ್ತನಾಗಿರುವ ಆತನು ಈ ಭೂಮಿಯನ್ನು ನಮ್ಮ ಸಂತಸದ ಬೀಡಾಗಿ ನಮಗೆ ದಯಪಾಲಿಸಿದ್ದಾನೆ. ಆತನು ಇದನ್ನು ಪುಷ್ಕಳವಾದ ಆಹಾರ, ಜಲ, ನೈಸರ್ಗಿಕ ಸಂಪನ್ಮೂಲಗಳು, ವಿಸ್ಮಯಕರ ಪ್ರಾಣಿಜೀವಿಗಳು ಮತ್ತು ಸುಂದರವಾದ ಪ್ರಕೃತಿದೃಶ್ಯಗಳಿಂದ ತುಂಬಿಸಿದ್ದಾನೆ. ಬೈಬಲಿನ ಗ್ರಂಥಕರ್ತನಾದ ಆತನು ನಮಗೆ ತನ್ನ ಹೆಸರು ಮತ್ತು ತನ್ನ ಗುಣಗಳನ್ನು ತಿಳಿಯಪಡಿಸಿದ್ದಾನೆ. ಇದಲ್ಲದೆ, ಆತನು ತನ್ನ ಸ್ವಂತ ಪ್ರಿಯ ಕುಮಾರನಾದ ಯೇಸುವನ್ನು ಭೂಮಿಗೆ ಕಳುಹಿಸಿ, ಅವನು ನಮಗಾಗಿ ಕಷ್ಟಪಟ್ಟು ಸಾಯುವಂತೆ ಅನುಮತಿಸಿದನೆಂದು ಆತನ ವಾಕ್ಯವು ತಿಳಿಯಪಡಿಸುತ್ತದೆ. (ಯೋಹಾನ 3:16) ಮತ್ತು ಈ ಉಡುಗೊರೆಯು ನಮಗೆ ಯಾವ ಪ್ರಯೋಜನವನ್ನು ತರುತ್ತದೆ? ಅದು ನಮಗೊಂದು ಅದ್ಭುತಕರವಾದ ಭವಿಷ್ಯತ್ತಿನ ನಿರೀಕ್ಷೆಯನ್ನು ಕೊಡುತ್ತದೆ.
5 ನಮ್ಮ ಭಾವೀ ನಿರೀಕ್ಷೆಯು ದೇವರು ಮಾಡಿರುವ ಇನ್ನೊಂದು ಸಂಗತಿಯ ಮೇಲೆಯೂ ಹೊಂದಿಕೊಂಡಿದೆ. ಯೆಹೋವನು ಒಂದು ಸ್ವರ್ಗೀಯ ಸರಕಾರವನ್ನು, ಮೆಸ್ಸೀಯ ರಾಜ್ಯವನ್ನು ಸ್ಥಾಪಿಸಿದ್ದಾನೆ. ಅದು ಬೇಗನೆ ಸಕಲ ಕಷ್ಟಸಂಕಟಗಳಿಗೆ ಅಂತ್ಯವನ್ನು ತಂದು ಈ ಭೂಮಿಯನ್ನು ಒಂದು ಪರದೈಸ್ ಆಗಿ ಮಾಡಲಿಕ್ಕಿದೆ. ಯೋಚಿಸಿ! ನಾವು ಇಲ್ಲಿ ಶಾಂತಿ ಮತ್ತು ಸಂತಸದಿಂದ ಸದಾಕಾಲ ಜೀವಿಸಬಲ್ಲೆವು. (ಕೀರ್ತನೆ 37:29) ಈ ಮಧ್ಯೆ, ನಾವು ಈಗಲೇ ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ಹೇಗೆ ಜೀವಿಸಸಾಧ್ಯವಿದೆಯೆಂಬ ವಿಷಯದಲ್ಲಿ ದೇವರು ನಮಗೆ ಮಾರ್ಗದರ್ಶನವನ್ನು ನೀಡಿದ್ದಾನೆ. ಆತನು ನಮಗೆ ಪ್ರಾರ್ಥನೆಯೆಂಬ ವರವನ್ನು, ಆತನನ್ನು ಮುಕ್ತವಾಗಿ ಸಂಪರ್ಕಿಸುವ ಮಾರ್ಗವನ್ನು ಒದಗಿಸಿದ್ದಾನೆ. ಇವು, ಯೆಹೋವನು ಮಾನವಕುಲಕ್ಕೆ ಸಾಮಾನ್ಯವಾಗಿ ಮತ್ತು ನಿಮಗೆ ವ್ಯಕ್ತಿಪರವಾಗಿ ಪ್ರೀತಿ ತೋರಿಸಿರುವ ವಿಧಗಳಲ್ಲಿ ಕೆಲವೊಂದಾಗಿವೆಯಷ್ಟೆ.
6. ಯೆಹೋವನು ನಿಮಗೆ ತೋರಿಸಿರುವ ಪ್ರೀತಿಗೆ ನೀವು ಹೇಗೆ ಸ್ಪಂದಿಸಬಹುದು?
6 ನೀವು ಚಿಂತಿಸಬೇಕಾಗಿರುವ ಮಹತ್ವಭರಿತ ಪ್ರಶ್ನೆ ಇದಾಗಿದೆ: ಯೆಹೋವನ ಪ್ರೀತಿಗೆ ನಾನು ಹೇಗೆ ಸ್ಪಂದಿಸುವೆ? ಅನೇಕರು, “ಇದಕ್ಕೆ ಪ್ರತಿಯಾಗಿ ನಾನು ಯೆಹೋವನನ್ನು ಪ್ರೀತಿಸಬೇಕು” ಎಂದು ಹೇಳುವರು. ನಿಮಗೂ ಅದೇ ಅನಿಸಿಕೆಯಿದೆಯೊ? ಅತಿ ದೊಡ್ಡ ಆಜ್ಞೆಯು ಇದೇ ಎಂದು ಯೇಸು ಹೇಳಿದನು: “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW]ನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ಯೆಹೋವ ದೇವರನ್ನು ಪ್ರೀತಿಸಲು ನಿಮಗೆ ಬಹಳಷ್ಟು ಕಾರಣಗಳಿವೆಯೆಂಬುದು ನಿಶ್ಚಯ. ಆದರೆ ಯೆಹೋವನನ್ನು ಪೂರ್ಣಹೃದಯ, ಪೂರ್ಣಪ್ರಾಣ, ಪೂರ್ಣಬುದ್ಧಿಯಿಂದ ಪ್ರೀತಿಸುತ್ತೀರೆಂದು ಹೇಳಲಿಕ್ಕಾಗಿ, ಅಂತಹ ಪ್ರೀತಿಯಿದೆ ಎಂಬ ಅನಿಸಿಕೆ ಇದ್ದರೆ ಸಾಕೇ?
7. ದೇವರನ್ನು ಪ್ರೀತಿಸುವುದರಲ್ಲಿ ಕೇವಲ ಅನಿಸಿಕೆ ಇರುವುದಕ್ಕಿಂತ ಹೆಚ್ಚಿನದ್ದು ಸೇರಿದೆಯೆ? ವಿವರಿಸಿ.
7 ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವಂತೆ, ದೇವರ ಕಡೆಗಿರುವ ಪ್ರೀತಿಯಲ್ಲಿ ಕೇವಲ ಆ ಅನಿಸಿಕೆಗಿಂತ ಎಷ್ಟೋ ಹೆಚ್ಚು ವಿಷಯಗಳು ಸೇರಿವೆ. ವಾಸ್ತವದಲ್ಲಿ, ಯೆಹೋವನ ಕಡೆಗೆ ಪ್ರೀತಿಯ ಅನಿಸಿಕೆಯಿರುವುದು ಅಗತ್ಯವಾಗಿದೆಯಾದರೂ, ಆ ಅನಿಸಿಕೆಯು ಆತನ ಮೇಲಿನ ನಿಜ ಪ್ರೀತಿಯ ಕೇವಲ ಆರಂಭವಾಗಿದೆಯಷ್ಟೇ. ಫಲಬಿಡುವ ಸೇಬಿನ ಮರವೊಂದನ್ನು ಬೆಳೆಸಲಿಕ್ಕಾಗಿ ಸೇಬು ಹಣ್ಣಿನ ಬೀಜ ಅಗತ್ಯ. ಆದರೆ ನಿಮಗೆ ಒಂದು ಸೇಬು ಬೇಕಾಗಿರುವಾಗ, ಯಾವನಾದರೂ ನಿಮಗೆ ಸೇಬಿನ ಬೀಜವನ್ನು ಕೊಡುವಲ್ಲಿ ನೀವು ಅದರಿಂದ ತೃಪ್ತರಾಗುವಿರೊ? ನಿಶ್ಚಯವಾಗಿಯೂ ಆಗುವುದಿಲ್ಲ! ತದ್ರೀತಿ, ಯೆಹೋವ ದೇವರ ಕಡೆಗೆ ಪ್ರೀತಿಯ ಅನಿಸಿಕೆಯನ್ನು ಹೊಂದಿರುವುದು ಕೇವಲ ಆರಂಭವಾಗಿದೆಯಷ್ಟೆ. ಬೈಬಲ್ ಬೋಧಿಸುವುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ದೇವರ ಕಡೆಗಿನ ಪ್ರೀತಿಯು ನಿಜವಾಗಿರುವುದಾದರೆ, ಅದು ಉತ್ತಮ ಫಲವನ್ನು ಬಿಡಬೇಕು. ಅದು ಕ್ರಿಯೆಯಲ್ಲಿ ವ್ಯಕ್ತವಾಗಬೇಕು.—ಮತ್ತಾಯ 7:16-20.
8, 9. ದೇವರ ಕಡೆಗೆ ನಮಗಿರುವ ಪ್ರೀತಿ ಮತ್ತು ಕೃತಜ್ಞತೆಯನ್ನು ನಾವು ಹೇಗೆ ವ್ಯಕ್ತಪಡಿಸಬಲ್ಲೆವು?
8 ನಾವು ದೇವರ ಆಜ್ಞೆಗಳನ್ನು ಪಾಲಿಸಿ ಆತನ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವಾಗ ದೇವರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ. ಹಾಗೆ ಮಾಡುವುದು ತೀರ ಕಷ್ಟಕರವಲ್ಲ. ದೇವರ ನಿಯಮಗಳು ನಮಗೆ ಹೊರೆಯಾಗಿರುವ ಬದಲು ನಾವು ಉತ್ತಮ ಗುಣಮಟ್ಟದ, ಸಂತೋಷಭರಿತವಾದ ಮತ್ತು ಸಂತೃಪ್ತಿಕರವಾದ ಜೀವನವನ್ನು ನಡೆಸುವಂತೆ ಸಹಾಯಮಾಡಲು ರೂಪಿಸಲ್ಪಟ್ಟಿವೆ. (ಯೆಶಾಯ 48:17, 18) ನಾವು ಯೆಹೋವನ ಮಾರ್ಗದರ್ಶನಕ್ಕೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ, ನಮ್ಮ ಸ್ವರ್ಗೀಯ ಪಿತನು ನಮಗಾಗಿ ಮಾಡಿರುವ ಸಕಲವನ್ನೂ ನಿಜವಾಗಿಯೂ ಮಾನ್ಯಮಾಡುತ್ತೇವೆ ಎಂಬುದನ್ನು ತೋರಿಸಿಕೊಡುತ್ತೇವೆ. ಆದರೆ ವಿಷಾದಕರವಾಗಿ, ಇಂದಿನ ಲೋಕದಲ್ಲಿ ಅಂತಹ ಮಾನ್ಯತೆಯನ್ನು ತೋರಿಸುವವರು ವಿರಳ. ಯೇಸು ಭೂಮಿಯಲ್ಲಿದ್ದಾಗ ಜೀವಿಸಿದ್ದ ಕೆಲವರಂತೆ ನಾವು ಕೃತಘ್ನರಾಗಿರಲು ಬಯಸುವುದಿಲ್ಲ. ಯೇಸು ಹತ್ತು ಮಂದಿ ಕುಷ್ಠರೋಗಿಗಳನ್ನು ವಾಸಿಮಾಡಿದರೂ ಅವನಿಗೆ ಉಪಕಾರ ಹೇಳಲು ಹಿಂದಿರುಗಿ ಬಂದವನು ಕೇವಲ ಒಬ್ಬನೇ. (ಲೂಕ 17:12-17) ನಿಶ್ಚಯವಾಗಿಯೂ ನಾವು ಆ ಕೃತಜ್ಞ ವ್ಯಕ್ತಿಯಂತಿರಲು ಬಯಸುತ್ತೇವೆಯೇ ಹೊರತು ಆ ಒಂಬತ್ತು ಮಂದಿ ಕೃತಘ್ನರಂತಲ್ಲ!
9 ಹಾಗಾದರೆ ನಾವು ಪಾಲಿಸಬೇಕಾದ ಯೆಹೋವನ ಆಜ್ಞೆಗಳಾವುವು? ಇವುಗಳಲ್ಲಿ ಅನೇಕ ಆಜ್ಞೆಗಳನ್ನು ಈ ಪುಸ್ತಕದಲ್ಲಿ ಚರ್ಚಿಸಿರುತ್ತೇವಾದರೂ ನಾವು ಕೆಲವನ್ನು ಈಗ ಪುನರ್ವಿಮರ್ಶಿಸೋಣ. ದೇವರಾಜ್ಞೆಗಳನ್ನು ಪಾಲಿಸುವುದು ನಮಗೆ ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವಂತೆ ಸಹಾಯಮಾಡುವುದು.
ಯೆಹೋವನಿಗೆ ಸದಾ ಹೆಚ್ಚು ಸಮೀಪವಾಗುತ್ತ ಇರಿ
10. ಯೆಹೋವ ದೇವರ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದು ಪ್ರಾಮುಖ್ಯವೇಕೆಂದು ವಿವರಿಸಿರಿ.
10 ಯೆಹೋವನ ಹೆಚ್ಚು ಸಮೀಪಕ್ಕೆ ಬರುವುದರಲ್ಲಿ ಆತನ ಕುರಿತು ಕಲಿಯುವುದು ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಪ್ರಕ್ರಿಯೆಯು ಎಂದಿಗೂ ನಿಂತುಹೋಗದೆ ನಿರಂತರವಾಗಿ ಮುಂದುವರಿಯಬೇಕು. ಅತಿ ಶೀತಲವಾದ ರಾತ್ರಿಯಲ್ಲಿ ನೀವು ಹೊರಗಿದ್ದು ಬೆಂಕಿಯ ಮುಂದೆ ಚಳಿ ಕಾಯಿಸಿಕೊಳ್ಳುತ್ತಿರುವಾಗ, ಆ ಜ್ವಾಲೆಗಳು ಕಡಿಮೆಯಾಗುತ್ತಾ ಬಳಿಕ ಆರಿಹೋಗುವಂತೆ ಬಿಡುವಿರಾ? ಇಲ್ಲ. ಆ ಬೆಂಕಿ ಚೆನ್ನಾಗಿ ಜ್ವಲಿಸುತ್ತಾ ಇಲ್ಲವೆ ಉರಿಯುತ್ತಾ ಇರುವಂತೆ ಅದಕ್ಕೆ ಬೇಕಾದ ಸೌದೆಯನ್ನು ನೀವು ಸೇರಿಸುತ್ತಾ ಇರುತ್ತೀರಿ. ಏಕೆಂದರೆ ಅದು ನಿಮ್ಮ ಜೀವದ ಪ್ರಶ್ನೆಯಾಗಿರಬಹುದು! ಆ ಸೌದೆಯು ಬೆಂಕಿ ಜ್ವಲಿಸುತ್ತಾ ಇರುವಂತೆ ಮಾಡುವ ಹಾಗೆ, ‘ದೇವಜ್ಞಾನವು’ ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಬಲವಾಗಿರಿಸುವುದು.—ಜ್ಞಾನೋಕ್ತಿ 2:1-5.
11. ಯೇಸುವಿನ ಬೋಧನೆಯು ಅವನ ಶಿಷ್ಯರ ಮೇಲೆ ಯಾವ ಪರಿಣಾಮವನ್ನು ಬೀರಿತು?
11 ತನ್ನ ಹಿಂಬಾಲಕರು, ಯೆಹೋವನಿಗಾಗಿರುವ ಮತ್ತು ಆತನ ಅಮೂಲ್ಯವಾದ ಸತ್ಯದ ವಾಕ್ಯಕ್ಕಾಗಿರುವ ತಮ್ಮ ಪ್ರೀತಿಯನ್ನು ಜೀವಂತವಾಗಿರಿಸಬೇಕು ಹಾಗೂ ಚೆನ್ನಾಗಿ ಜ್ವಲಿಸುತ್ತಾ ಇರಬೇಕೆಂದು ಯೇಸು ಬಯಸಿದನು. ಯೇಸು ತನ್ನ ಪುನರುತ್ಥಾನದ ಅನಂತರ, ತನ್ನಲ್ಲಿ ನೆರವೇರಿದ ಹೀಬ್ರು ಶಾಸ್ತ್ರದ ಕೆಲವು ಪ್ರವಾದನೆಗಳ ಕುರಿತು ತನ್ನ ಶಿಷ್ಯರಲ್ಲಿ ಇಬ್ಬರಿಗೆ ಕಲಿಸಿದನು. ಇದರ ಪರಿಣಾಮವೇನಾಗಿತ್ತು? ಅವರು ಅನಂತರ ಹೇಳಿದ್ದು: “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ [“ಜ್ವಲಿಸಲಿಲ್ಲವೊ,” NW].”—ಲೂಕ 24:32.
12, 13. (ಎ) ಇಂದಿನ ಮಾನವಕುಲದ ಹೆಚ್ಚಿನ ಜನರ ನಡುವೆ ದೇವರ ಮೇಲಿರುವ ಮತ್ತು ಬೈಬಲಿನ ಮೇಲಿರುವ ಪ್ರೀತಿಗೆ ಏನು ಸಂಭವಿಸಿದೆ? (ಬಿ) ನಮ್ಮ ಪ್ರೀತಿಯು ತಣ್ಣಗಾಗದಂತೆ ನಾವು ಹೇಗೆ ತಡೆಯಬಲ್ಲೆವು?
12 ಬೈಬಲ್ ನಿಜವಾಗಿಯೂ ಏನು ಬೋಧಿಸುತ್ತದೆಂದು ನೀವು ಮೊದಲಾಗಿ ತಿಳಿದಾಗ, ನಿಮ್ಮ ಹೃದಯವು ಹರ್ಷ, ಹುರುಪು ಮತ್ತು ದೇವರ ಮೇಲಿನ ಪ್ರೀತಿಯಿಂದ ಜ್ವಲಿಸಲಿಲ್ಲವೊ? ನಿಶ್ಚಯವಾಗಿ ಜ್ವಲಿಸುತ್ತಿತ್ತು. ಅನೇಕರಿಗೆ ಹೀಗೆಯೇ ಆಗಿದೆ. ಆದರೆ ಈಗ ಏಳುವ ಪಂಥಾಹ್ವಾನವು ಆ ತೀಕ್ಷ್ಣ ಪ್ರೀತಿಯನ್ನು ಸಜೀವವಾಗಿ ಇಟ್ಟುಕೊಂಡು ಅದು ಬೆಳೆಯುವಂತೆ ಸಹಾಯಮಾಡುವುದೇ. ಇಂದಿನ ಲೋಕದ ಪ್ರವೃತ್ತಿಯನ್ನು ನಾವು ಹಿಂಬಾಲಿಸಬಯಸುವುದಿಲ್ಲ. ಈ ವಿಷಯದಲ್ಲಿ ಯೇಸು ಮುಂತಿಳಿಸಿದ್ದು: “ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು.” (ಮತ್ತಾಯ 24:12) ಹಾಗಾದರೆ, ಯೆಹೋವನಿಗಾಗಿ ಮತ್ತು ಬೈಬಲ್ ಸತ್ಯಗಳಿಗಾಗಿ ನಿಮಗಿರುವ ಪ್ರೀತಿಯು ತಣ್ಣಗಾಗಿ ಹೋಗುವುದನ್ನು ನೀವು ಹೇಗೆ ತಡೆಯಬಲ್ಲಿರಿ?
13 ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುತ್ತ ಹೋಗಿರಿ. (ಯೋಹಾನ 17:3) ದೇವರ ವಾಕ್ಯದಿಂದ ನೀವು ಏನು ಕಲಿಯುತ್ತೀರೊ ಅದರ ಕುರಿತು ಧ್ಯಾನಿಸುತ್ತಾ ಇಲ್ಲವೆ ಗಾಢವಾಗಿ ಯೋಚಿಸುತ್ತಾ, ಹೀಗೆ ಪ್ರಶ್ನಿಸಿಕೊಳ್ಳಿ: ‘ಇದು ಯೆಹೋವ ದೇವರ ಕುರಿತು ನನಗೆ ಏನನ್ನು ಕಲಿಸುತ್ತದೆ? ಆತನನ್ನು ನನ್ನ ಪೂರ್ಣಹೃದಯ, ಪೂರ್ಣಬುದ್ಧಿ ಮತ್ತು ಪೂರ್ಣಪ್ರಾಣದಿಂದ ಪ್ರೀತಿಸುವಂತೆ ಇದು ನನಗೆ ಇನ್ನೂ ಯಾವ ಹೆಚ್ಚಿನ ಕಾರಣವನ್ನು ಕೊಡುತ್ತದೆ?’ (1 ತಿಮೊಥೆಯ 4:15) ಈ ರೀತಿಯ ಧ್ಯಾನವು, ಯೆಹೋವನ ಮೇಲೆ ನಿಮಗಿರುವ ಪ್ರೀತಿಯು ತೀಕ್ಷ್ಣವಾಗಿ ಜ್ವಲಿಸುತ್ತಾ ಇರುವಂತೆ ಮಾಡುವುದು.
14. ಯೆಹೋವನ ಮೇಲಿನ ನಮ್ಮ ಪ್ರೀತಿಯನ್ನು ಪ್ರಾರ್ಥನೆಯು ಹೇಗೆ ಜೀವಂತವಾಗಿಡಬಲ್ಲದು?
14 ಯೆಹೋವನ ಮೇಲೆ ನಿಮಗಿರುವ ಪ್ರೀತಿಯು ತೀಕ್ಷ್ಣವಾಗಿ ಜ್ವಲಿಸುತ್ತಿರುವಂತೆ ಮಾಡುವ ಇನ್ನೊಂದು ಮಾರ್ಗವು, ಕ್ರಮವಾಗಿ ಪ್ರಾರ್ಥಿಸುವುದೇ ಆಗಿದೆ. (1 ಥೆಸಲೊನೀಕ 5:17) ಪ್ರಾರ್ಥನೆಯು ದೇವರಿಂದ ದೊರೆತಿರುವ ಅಮೂಲ್ಯ ವರವೆಂದು ನಾವು ಈ ಪುಸ್ತಕದ ಅಧ್ಯಾಯ 17ರಲ್ಲಿ ಕಲಿತುಕೊಂಡೆವು. ಕ್ರಮವಾದ, ಮುಕ್ತ ಸಂವಾದದಿಂದ ಮಾನವ ಸಂಬಂಧಗಳು ಬೆಳೆಯುವಂತೆಯೇ, ನಾವು ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸುವಾಗ ಆತನೊಂದಿಗೆ ನಮಗಿರುವ ಸಂಬಂಧವು ಬೆಚ್ಚಗೆ ಮತ್ತು ಜೀವಂತವಾಗಿ ಉಳಿಯುತ್ತದೆ. ನಮ್ಮ ಪ್ರಾರ್ಥನೆಗಳು ಎಂದಿಗೂ ಯಾಂತ್ರಿಕವಾಗದಿರುವಂತೆ ಅಂದರೆ ಭಾವಶೂನ್ಯವಾದ ಮತ್ತು ಅರ್ಥರಹಿತವಾದ ಒಂದೇ ಪ್ರಕಾರದ ಮಾತುಗಳ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಅತ್ಯಾವಶ್ಯಕ. ಒಂದು ಮಗು ತನ್ನ ಪ್ರಿಯ ತಂದೆಯೊಂದಿಗೆ ಮಾತಾಡುವ ಪ್ರಕಾರವೇ ನಾವು ಯೆಹೋವನೊಂದಿಗೆ ಮಾತಾಡುವುದು ಅಗತ್ಯ. ನಾವು ಗೌರವದಿಂದ ಮಾತಾಡಬೇಕೆಂಬುದು ನಿಶ್ಚಯವಾದರೂ, ಮನಬಿಚ್ಚಿ, ಪ್ರಾಮಾಣಿಕತೆಯಿಂದ, ಮತ್ತು ಹೃದಯದಾಳದಿಂದಲೂ ಮಾತಾಡಬಯಸಬೇಕು. (ಕೀರ್ತನೆ 62:8) ಹೌದು, ವೈಯಕ್ತಿಕ ಬೈಬಲ್ ಅಧ್ಯಯನ ಮತ್ತು ಹೃತ್ಪೂರ್ವಕವಾದ ಪ್ರಾರ್ಥನೆಯು ನಮ್ಮ ಆರಾಧನೆಯ ಅತಿ ಮಹತ್ವದ ಅಂಶಗಳಾಗಿದ್ದು, ನಾವು ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವಂತೆ ನಮಗೆ ಸಹಾಯಮಾಡುತ್ತವೆ.
ನಿಮ್ಮ ಆರಾಧನೆಯಲ್ಲಿ ಆನಂದವನ್ನು ಕಂಡುಕೊಳ್ಳಿರಿ
15, 16. ರಾಜ್ಯದ ಕುರಿತು ಸಾರುವ ಕೆಲಸವನ್ನು ನಾವು ಯೋಗ್ಯವಾಗಿಯೇ ಒಂದು ಸದವಕಾಶ ಮತ್ತು ನಿಕ್ಷೇಪವಾಗಿ ಏಕೆ ವೀಕ್ಷಿಸಬಹುದು?
15 ವೈಯಕ್ತಿಕ ಬೈಬಲ್ ಅಧ್ಯಯನ ಮತ್ತು ಪ್ರಾರ್ಥನೆಯು ನಾವು ಖಾಸಗಿಯಾಗಿ ನಡೆಸಬಹುದಾದ ಆರಾಧನಾಕೃತ್ಯಗಳಾಗಿವೆ. ಆದರೆ ಈಗ, ನಾವು ಬಹಿರಂಗವಾಗಿ ಮಾಡುವ ಒಂದು ಆರಾಧನಾ ಅಂಶವನ್ನು, ಅಂದರೆ ನಮ್ಮ ನಂಬಿಕೆಗಳ ಕುರಿತು ಬೇರೆಯವರೊಂದಿಗೆ ಮಾತಾಡುವುದನ್ನು ಪರಿಗಣಿಸೋಣ. ನೀವು ಈಗಾಗಲೇ ಕೆಲವೊಂದು ಬೈಬಲ್ ಸತ್ಯಗಳನ್ನು ಇತರರಿಗೆ ತಿಳಿಸಿರುತ್ತೀರೊ? ಹಾಗೆ ಮಾಡಿರುವಲ್ಲಿ, ನಿಮಗೊಂದು ಆಶ್ಚರ್ಯಕರವಾದ ಸದವಕಾಶವು ಸಿಕ್ಕಿರುವುದು ಖಂಡಿತ. (ಲೂಕ 1:74) ನಾವು ಯೆಹೋವ ದೇವರ ಕುರಿತು ಕಲಿತಿರುವ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ, ಸಕಲ ಸತ್ಕ್ರೈಸ್ತರಿಗೆ ಕೊಡಲ್ಪಟ್ಟಿರುವ ಒಂದು ಅತಿ ಪ್ರಾಮುಖ್ಯ ನೇಮಕವನ್ನು ಪೂರೈಸುತ್ತಿದ್ದೇವೆ. ಅದು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ.—ಮತ್ತಾಯ 24:14; 28:19, 20.
16 ಅಪೊಸ್ತಲ ಪೌಲನು ತನ್ನ ಶುಶ್ರೂಷೆಯನ್ನು ಅಮೂಲ್ಯವಾಗಿ ವೀಕ್ಷಿಸಿ, ಅದನ್ನು ನಿಕ್ಷೇಪವೆಂದು ಕರೆದನು. (2 ಕೊರಿಂಥ 4:7) ಯೆಹೋವ ದೇವರ ಮತ್ತು ಆತನ ಉದ್ದೇಶಗಳ ಕುರಿತು ಜನರೊಂದಿಗೆ ಮಾತಾಡುವುದು ನೀವು ಮಾಡಸಾಧ್ಯವಿರುವ ಅತ್ಯುತ್ತಮ ಕೆಲಸವಾಗಿದೆ. ಇದು ಸರ್ವೋತ್ತಮನಾದ ಯಜಮಾನನಿಗೆ ಮಾಡುವ ಸೇವೆಯಾಗಿದೆ ಮತ್ತು ಸರ್ವೋತ್ತಮವಾದ ಪ್ರತಿಫಲವನ್ನು ತರುವಂಥದ್ದಾಗಿದೆ. ನೀವು ಈ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ, ಪ್ರಾಮಾಣಿಕ ಹೃದಯದ ಜನರು ನಮ್ಮ ಸ್ವರ್ಗೀಯ ಪಿತನ ಸಮೀಪಕ್ಕೆ ಬಂದು ನಿತ್ಯಜೀವದ ಮಾರ್ಗದಲ್ಲಿ ನಡೆಯುವಂತೆ ನೀವು ಅವರಿಗೆ ಸಹಾಯಮಾಡುತ್ತಿದ್ದೀರಿ! ಇನ್ನಾವ ಕೆಲಸವು ಇದಕ್ಕಿಂತ ಹೆಚ್ಚು ತೃಪ್ತಿಕರವಾಗಿದ್ದೀತು? ಅಲ್ಲದೆ, ಯೆಹೋವನ ಮತ್ತು ಆತನ ವಾಕ್ಯದ ಕುರಿತು ಸಾಕ್ಷಿ ನೀಡುವುದು ನಿಮ್ಮ ಸ್ವಂತ ನಂಬಿಕೆಯನ್ನು ವರ್ಧಿಸಿ ಆತನ ಮೇಲೆ ನಿಮಗಿರುವ ಪ್ರೀತಿಯನ್ನು ಬಲಪಡಿಸುತ್ತದೆ. ಮತ್ತು ಯೆಹೋವನು ನಿಮ್ಮ ಪ್ರಯತ್ನಗಳನ್ನು ಅತಿ ಅತ್ಯಮೂಲ್ಯವಾಗಿ ಪರಿಗಣಿಸುತ್ತಾನೆ. (ಇಬ್ರಿಯ 6:10) ಇಂತಹ ಕೆಲಸದಲ್ಲಿ ಕಾರ್ಯಮಗ್ನರಾಗಿರುವುದು ನೀವು ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವಂತೆ ನಿಮಗೆ ಸಹಾಯಮಾಡುತ್ತದೆ.—1 ಕೊರಿಂಥ 15:58.
17. ಕ್ರೈಸ್ತ ಶುಶ್ರೂಷೆಯು ಇಂದು ತುರ್ತಿನದ್ದಾಗಿದೆ ಏಕೆ?
17 ರಾಜ್ಯದ ಕುರಿತು ಸಾರುವ ಕೆಲಸವು ತುರ್ತಿನದ್ದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಪ್ರಾಮುಖ್ಯ. “ದೇವರ ವಾಕ್ಯವನ್ನು ಸಾರು. . . ಅದರಲ್ಲಿ ಆಸಕ್ತನಾಗಿರು” ಎನ್ನುತ್ತದೆ ಬೈಬಲು. (2 ತಿಮೊಥೆಯ 4:2) ಇದನ್ನು ಮಾಡುವುದು ಇಂದು ಇಷ್ಟು ತುರ್ತಿನದ್ದಾಗಿರುವುದೇಕೆ? ದೇವರ ವಾಕ್ಯವು ನಮಗನ್ನುವುದು: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” (ಚೆಫನ್ಯ 1:14) ಹೌದು, ಯೆಹೋವನು ಈ ಇಡೀ ವಿಷಯಗಳ ವ್ಯವಸ್ಥೆಯನ್ನು ಅಂತ್ಯಗೊಳಿಸುವ ಸಮಯವು ತ್ವರೆಯಾಗಿ ಬರುತ್ತಿದೆ. ಆದುದರಿಂದ ಜನರನ್ನು ಎಚ್ಚರಿಸಬೇಕಾಗಿದೆ! ಯೆಹೋವನನ್ನು ತಮ್ಮ ಪರಮಾಧಿಕಾರಿಯಾಗಿ ಆಯ್ಕೆಮಾಡುವ ಸಮಯವು ಇದೇ ಎಂದು ಅವರು ತಿಳಿಯುವುದು ಆವಶ್ಯಕ. ಅಂತ್ಯವು “ತಾಮಸವಾಗದು.”—ಹಬಕ್ಕೂಕ 2:3.
18. ನಿಜ ಕ್ರೈಸ್ತರ ಜೊತೆಯಲ್ಲಿ ನಾವು ಯೆಹೋವನನ್ನು ಬಹಿರಂಗವಾಗಿ ಏಕೆ ಆರಾಧಿಸಬೇಕು?
18 ನಾವು ನಿಜ ಕ್ರೈಸ್ತರ ಜೊತೆಯಲ್ಲಿ ಆತನನ್ನು ಬಹಿರಂಗವಾಗಿ ಆರಾಧಿಸಬೇಕೆಂಬುದು ಯೆಹೋವನ ಬಯಕೆಯಾಗಿದೆ. ಆದುದರಿಂದಲೇ ಆತನ ವಾಕ್ಯವು ಹೇಳುವುದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ನಾವು ಕ್ರೈಸ್ತ ಕೂಟಗಳಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಕೂಡಿಬರುವಾಗ, ನಮ್ಮ ಪ್ರಿಯ ದೇವರನ್ನು ಸ್ತುತಿಸುತ್ತ ಆರಾಧಿಸಲು ನಮಗೊಂದು ಅದ್ಭುತ ಅವಕಾಶವಿದೆ. ಮಾತ್ರವಲ್ಲದೆ ನಾವು ಪರಸ್ಪರ ಭಕ್ತಿಯನ್ನು ವರ್ಧಿಸುತ್ತೇವೆ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ.
19. ನಾವು ಕ್ರೈಸ್ತ ಸಭೆಯಲ್ಲಿ ಪ್ರೀತಿಯ ಬಂಧಗಳನ್ನು ಬಲಪಡಿಸಲು ಹೇಗೆ ಕಾರ್ಯನಡೆಸಬಲ್ಲೆವು?
19 ನಾವು ಯೆಹೋವನ ಇತರ ಆರಾಧಕರೊಂದಿಗೆ ಜೊತೆಗೂಡುವಾಗ, ಸಭೆಯಲ್ಲಿ ಪ್ರೀತಿ ಮತ್ತು ಸ್ನೇಹದ ಬಂಧಗಳನ್ನು ಬಲಪಡಿಸುತ್ತೇವೆ. ಯೆಹೋವನು ನಮ್ಮಲ್ಲಿ ಒಳ್ಳೆಯದನ್ನು ಹುಡುಕುವಂತೆಯೇ ನಾವು ಪರಸ್ಪರರಲ್ಲಿ ಒಳ್ಳೇದನ್ನು ಹುಡುಕುವುದು ಪ್ರಾಮುಖ್ಯ. ನಿಮ್ಮ ಜೊತೆವಿಶ್ವಾಸಿಗಳಿಂದ ಪರಿಪೂರ್ಣತೆಯನ್ನು ನಿರೀಕ್ಷಿಸಬೇಡಿ. ನಾವೆಲ್ಲರೂ ಆಧ್ಯಾತ್ಮಿಕ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಇದ್ದೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತೇವೆ ಎಂಬುದು ನೆನಪಿರಲಿ. (ಕೊಲೊಸ್ಸೆ 3:13) ಯೆಹೋವನನ್ನು ಅತ್ಯಾಸಕ್ತಿಯಿಂದ ಪ್ರೀತಿಸುವವರೊಂದಿಗೆ ನಿಕಟವಾದ ಮಿತ್ರತ್ವವನ್ನು ಬೆಳೆಸಲು ಪ್ರಯತ್ನಿಸಿರಿ. ಆಗ ನೀವು ಆಧ್ಯಾತ್ಮಿಕವಾಗಿ ಬೆಳೆಯುತ್ತಿರುವುದನ್ನು ನೋಡುವಿರಿ. ಹೌದು, ನಿಮ್ಮ ಆಧ್ಯಾತ್ಮಿಕ ಸೋದರಸೋದರಿಯರ ಜೊತೆಯಲ್ಲಿ ಯೆಹೋವನನ್ನು ಆರಾಧಿಸುವುದರಿಂದ ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವಂತೆ ನಿಮಗೆ ಸಹಾಯ ದೊರೆಯುವುದು. ಆದರೆ ತನ್ನನ್ನು ನಂಬಿಗಸ್ತಿಕೆಯಿಂದ ಆರಾಧಿಸುತ್ತ, ಹೀಗೆ ತನ್ನ ಪ್ರೀತಿಯಲ್ಲಿ ನೆಲೆಗೊಳ್ಳುವವರಿಗೆ ಯೆಹೋವನು ಹೇಗೆ ಪ್ರತಿಫಲ ಕೊಡುತ್ತಾನೆ?
“ವಾಸ್ತವವಾದ ಜೀವ”ಕ್ಕಾಗಿ ಎಟುಕಿಸಿಕೊಳ್ಳಿರಿ
20, 21. “ವಾಸ್ತವವಾದ ಜೀವ” ಏನಾಗಿದೆ, ಮತ್ತು ಅದು ಅದ್ಭುತಕರವಾದ ನಿರೀಕ್ಷೆಯಾಗಿದೆ ಏಕೆ?
20 ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಜೀವದ ಬಹುಮಾನವನ್ನು ಕೊಡುತ್ತಾನೆ ನಿಜ, ಆದರೆ ಎಂತಹ ಜೀವವದು? ನೀವು ಈಗ ನಿಜವಾಗಿಯೂ ಜೀವಿಸುತ್ತಿದ್ದೀರಾ? ನಮ್ಮಲ್ಲಿ ಅನೇಕರು ಹೌದು, ಜೀವಿಸುತ್ತಿದ್ದೇವೆಂದು ಹೇಳಬಹುದು. ಏಕೆಂದರೆ ನಾವು ಉಸಿರಾಡುತ್ತೇವೆ, ತಿನ್ನುತ್ತೇವೆ, ಕುಡಿಯುತ್ತೇವೆ. ಆದುದರಿಂದ ನಾವು ಜೀವಿಸುತ್ತಿರುವುದು ಖಂಡಿತ. ಮತ್ತು ನಮಗೆ ತುಂಬ ಸಂತೋಷವಾಗುವ ಸಮಯಗಳಲ್ಲಿ, “ಹಾ ಇದೇ ನಿಜವಾದ ಜೀವನ!” ಎಂದೂ ಹೇಳಬಹುದು. ಆದರೂ, ಒಂದು ಪ್ರಮುಖಾರ್ಥದಲ್ಲಿ ಯಾವನೇ ಮಾನವನು ನಿಜವಾಗಿಯೂ ಜೀವಿಸುತ್ತಿಲ್ಲವೆಂದು ಬೈಬಲು ಸೂಚಿಸುತ್ತದೆ.
21 ನಾವು ‘ವಾಸ್ತವವಾದ ಜೀವವನ್ನು ಹೊಂದುವಂತೆ’ ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ. (1 ತಿಮೊಥೆಯ 6:18) ಹೀಗೆ, ‘ವಾಸ್ತವವಾದ ಜೀವವು’ ನಾವು ಭವಿಷ್ಯತ್ತಿನಲ್ಲಿ ಪಡೆಯಲು ನಿರೀಕ್ಷಿಸುವ ಸಂಗತಿಯಾಗಿದೆ ಎಂದು ಆ ಮಾತುಗಳು ಸೂಚಿಸುತ್ತವೆ. ಹೌದು, ನಾವು ಪರಿಪೂರ್ಣರಾಗುವಾಗ ಪೂರ್ಣಾರ್ಥದಲ್ಲಿ ಜೀವಿಸುವೆವು. ಏಕೆಂದರೆ ಆಗ ನಾವು ದೇವರು ಆದಿಯಲ್ಲಿ ನಾವು ಹೇಗೆ ಜೀವಿಸುವಂತೆ ಉದ್ದೇಶಿಸಿದ್ದನೋ ಅದೇ ರೀತಿಯಲ್ಲಿ ಜೀವಿಸುತ್ತಿರುವೆವು. ನಾವು ಪರದೈಸಾಗಲಿರುವ ಭೂಮಿಯ ಮೇಲೆ ಪೂರ್ಣ ಆರೋಗ್ಯ, ಶಾಂತಿ ಮತ್ತು ಸಂತೋಷದಿಂದ ಜೀವಿಸುತ್ತಿರುವಾಗ, ಅಂತಿಮವಾಗಿ “ವಾಸ್ತವವಾದ ಜೀವ”ವನ್ನು, ಅಂದರೆ ಅನಂತ ಜೀವನವನ್ನು ಅನುಭವಿಸುವೆವು. (1 ತಿಮೊಥೆಯ 6:12) ಅದೊಂದು ಅದ್ಭುತಕರವಾದ ನಿರೀಕ್ಷೆಯಾಗಿದೆಯಲ್ಲವೆ?
22. ನೀವು ಹೇಗೆ ‘ವಾಸ್ತವವಾದ ಜೀವವನ್ನು ಹೊಂದ’ಬಲ್ಲಿರಿ?
22 ನಾವು ಹೇಗೆ ‘ವಾಸ್ತವವಾದ ಜೀವವನ್ನು ಹೊಂದಬಲ್ಲೆವು’? ಅದೇ ವಚನದ ಪೂರ್ವಾಪರದಲ್ಲಿ ಪೌಲನು ಕ್ರೈಸ್ತರನ್ನು, ಅವರು “ಒಳ್ಳೇದನ್ನು ಮಾಡುವವರೂ . . . ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ” ಆಗಿರಬೇಕೆಂದು ಪ್ರೋತ್ಸಾಹಿಸುತ್ತಾನೆ. (1 ತಿಮೊಥೆಯ 6:18) ಹಾಗಾದರೆ, ನಾವು ಬೈಬಲಿನಿಂದ ಕಲಿತ ಸತ್ಯಗಳನ್ನು ಹೇಗೆ ಅನ್ವಯಿಸಿಕೊಳ್ಳುತ್ತೇವೆಂಬುದರ ಮೇಲೆ ಬಹಳಷ್ಟು ಹೊಂದಿಕೊಂಡಿದೆ ಎಂಬುದು ಸ್ಪಷ್ಟ. ಆದರೆ ಒಳ್ಳೇ ಕೆಲಸಗಳನ್ನು ಮಾಡುವ ಮೂಲಕ ನಾವು “ವಾಸ್ತವವಾದ ಜೀವ”ವನ್ನು ಸಂಪಾದಿಸುತ್ತೇವೆ ಎಂಬುದು ಪೌಲನ ಮಾತುಗಳ ಅರ್ಥವಾಗಿತ್ತೊ? ಇಲ್ಲ, ಏಕೆಂದರೆ ಅಂತಹ ಆಶ್ಚರ್ಯಕರವಾದ ಪ್ರತೀಕ್ಷೆಗಳು ನಿಜವಾಗಿಯೂ ನಾವು ದೇವರ ‘ಅಪಾತ್ರ ಕೃಪೆಯನ್ನು’ ಪಡೆಯುವುದರ ಮೇಲೆ ಹೊಂದಿಕೊಂಡಿವೆ. (ರೋಮಾಪುರ 5:15) ಆದರೂ ನಂಬಿಗಸ್ತಿಕೆಯಿಂದ ತನ್ನ ಸೇವೆಮಾಡುವವರಿಗೆ ಪ್ರತಿಫಲವನ್ನು ಕೊಡಲು ಯೆಹೋವನು ಹರ್ಷಿಸುತ್ತಾನೆ. ನೀವು “ವಾಸ್ತವವಾದ ಜೀವ”ವನ್ನು ಅನುಭವಿಸುವುದನ್ನು ನೋಡಲು ಆತನು ಬಯಸುತ್ತಾನೆ. ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವವರಿಗೆ ಇಂತಹ ಸಂತೋಷಕರವೂ ಶಾಂತಿಭರಿತವೂ ಆದ ಅನಂತ ಜೀವನವು ಕಾದಿದೆ.
23. ದೇವರ ಪ್ರೀತಿಯಲ್ಲಿ ನೆಲೆಗೊಂಡಿರುವುದು ಪ್ರಾಮುಖ್ಯವೇಕೆ?
23 ನಮ್ಮಲ್ಲಿ ಪ್ರತಿಯೊಬ್ಬನು, ‘ದೇವರು ಬೈಬಲಿನಲ್ಲಿ ತಿಳಿಸಿರುವಂತೆ ನಾನು ಆತನನ್ನು ಆರಾಧಿಸುತ್ತಿದ್ದೇನೊ?’ ಎಂದು ಕೇಳಿಕೊಳ್ಳಬೇಕು. ನಾವು ಅನುದಿನವೂ ದೇವರನ್ನು ಈ ರೀತಿಯಲ್ಲೇ ಆರಾಧಿಸುತ್ತಿದ್ದೇವೆಂಬುದನ್ನು ಖಚಿತಪಡಿಸಿಕೊಂಡರೆ, ನಾವು ಸರಿಯಾದ ಮಾರ್ಗದಲ್ಲಿದ್ದೇವೆಂದು ಅರ್ಥ. ಯೆಹೋವನು ನಮ್ಮ ಆಶ್ರಯಸ್ಥಾನವೆಂಬ ಭರವಸೆ ನಮಗಿರಬಲ್ಲದು. ಆತನು ತನ್ನ ನಂಬಿಗಸ್ತರನ್ನು ಈ ಹಳೆಯ ವಿಷಯಗಳ ವ್ಯವಸ್ಥೆಯ ಕ್ಲೇಶಕರ ದಿನಗಳಲ್ಲಿ ಸುರಕ್ಷಿತವಾಗಿಡುವನು. ಈಗ ನಿಕಟವಾಗಿರುವ ಮಹಿಮಾಭರಿತವಾದ ನೂತನ ವಿಷಯಗಳ ವ್ಯವಸ್ಥೆಯೊಳಗೂ ಯೆಹೋವನು ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವನು. ನಾವು ಆ ಸಮಯವನ್ನು ಅನುಭವಿಸುವಾಗ ಎಷ್ಟು ರೋಮಾಂಚನಗೊಳ್ಳುವೆವು! ಮತ್ತು ಈ ಕಡೇ ದಿವಸಗಳಲ್ಲಿ ನಾವು ಮಾಡಿರುವ ಯೋಗ್ಯವಾದ ಆಯ್ಕೆಗಳಿಗಾಗಿ ನಾವೆಷ್ಟು ಹರ್ಷಗೊಳ್ಳುವೆವು! ನೀವು ಈಗ ಇಂತಹ ಆಯ್ಕೆಗಳನ್ನು ಮಾಡುವಲ್ಲಿ, ಯೆಹೋವ ದೇವರು ಉದ್ದೇಶಿಸಿದಂತಹ “ವಾಸ್ತವವಾದ ಜೀವ”ವನ್ನು ಶಾಶ್ವತವಾಗಿ ಅನುಭವಿಸುವಿರಿ!