ಪಾಪವು ಇನ್ನಿಲ್ಲದಿರುವಾಗ
“ನಾವು ಹುಟ್ಟುಪಾಪಿಗಳೊ?” ಈ ಪ್ರಶ್ನೆಯು ಅಮೆರಿಕದಲ್ಲಿ ಪದವಿಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು, ಅವನು ಬೈಬಲನ್ನು ಅಭ್ಯಸಿಸತೊಡಗಿದ ಸ್ವಲ್ಪದರಲ್ಲಿ ಗಲಿಬಿಲಿಗೊಳಿಸಿತು. ಅವನ ಹಿಂದೂ ಹಿನ್ನೆಲೆಯ ಕಾರಣ, ಪಿತ್ರಾರ್ಜಿತ ಪಾಪದ ವಿಚಾರವು ಅವನಿಗೆ ಅಪರಿಚಿತವಾಗಿತ್ತು. ಆದರೆ ಪಾಪವು ನಿಶ್ಚಯವಾಗಿ ಪಿತ್ರಾರ್ಜಿತವಾಗಿದ್ದರೆ, ಅದರ ನಿಜತ್ವವನ್ನು ಅಲ್ಲಗಳೆಯುವುದಾಗಲಿ ಅಲಕ್ಷಿಸುವುದಾಗಲಿ ನಿರರ್ಥಕವೆಂದು ಅವನು ತರ್ಕಿಸಿದನು. ಈ ಪ್ರಶ್ನೆಗೆ ಒಬ್ಬನು ಉತ್ತರವನ್ನು ಹೇಗೆ ಕಂಡುಹಿಡಿಯಬಲ್ಲನು?
ಪಿತ್ರಾರ್ಜಿತವಾಗಿದ್ದರೆ, ಪಾಪಕ್ಕೆ ಒಂದು ಆರಂಭವಿದ್ದಿರಬೇಕು. ಪ್ರಥಮ ಪುರುಷನು ತನ್ನ ಮಕ್ಕಳಿಗೆ ದುರ್ಗುಣಗಳನ್ನು ದಾಟಿಸಲಿಕ್ಕಾಗಿ, ಅವನು ದುಷ್ಟನಾಗಿ ಸೃಷ್ಟಿಸಲ್ಪಟ್ಟನೊ? ಇಲ್ಲವೆ ಈ ದೋಷವು ತದನಂತರ ವಿಕಾಸಗೊಂಡಿತೊ? ಪಾಪವು ನಿಷ್ಕೃಷ್ಟವಾಗಿ ಯಾವಾಗ ಪ್ರಾರಂಭಗೊಂಡಿತು? ಇನ್ನೊಂದು ಕಡೆಯಲ್ಲಿ, ಪಾಪವು ಕೇವಲ ಒಂದು ಬಾಹ್ಯವಾದ, ಕೆಡುಕು ಪದಾರ್ಥ ಅಥವಾ ಸೂತ್ರವಾಗಿದ್ದರೆ, ನಾವು ಅದರಿಂದ ಎಂದಾದರೂ ವಿಮುಕ್ತರಾಗಲು ನಿರೀಕ್ಷಿಸಬಲ್ಲೆವೊ?
ಹಿಂದೂ ನಂಬಿಕೆಗನುಸಾರ, ಕಷ್ಟಾನುಭವವೂ ಕೆಡುಕೂ ಸೃಷ್ಟಿಯಲ್ಲಿ ಜೊತೆಯಾಗಿ ಹೋಗುವ ವಿಷಯಗಳಾಗಿವೆ. ಒಬ್ಬ ಹಿಂದೂ ವಿದ್ವಾಂಸನು ಗಮನಿಸುವುದು: “ಅಸ್ಥಿಗತ ಸಂಧಿವಾತದಂತೆ, ಕಷ್ಟಾನುಭವವು [ಅಥವಾ ಕೆಡುಕು] ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುತ್ತದೆಯೇ ಹೊರತು ಪೂರ್ತಿಯಾಗಿ ನಿರ್ಮೂಲವಾಗದು.” ದಾಖಲಿತ ಇತಿಹಾಸದಲ್ಲೆಲ್ಲ, ಕೆಡುಕು ಮಾನವ ಜಗತ್ತಿನ ಭಾಗವಾಗಿ ನಿಶ್ಚಯವಾಗಿಯೂ ಇತ್ತು. ಮನುಷ್ಯನ ಐತಿಹಾಸಿಕ ದಾಖಲೆಗಳಿಗೆ ಮುಂಚಿತವಾಗಿ ಅದು ಇದ್ದಿದ್ದರೆ, ಅದರ ಮೂಲದ ಕುರಿತ ವಿಶ್ವಾಸಾರ್ಹ ಉತ್ತರಗಳು ಮಾನವನಿಗಿಂತ ಅತ್ಯುನ್ನತವಾದ ಒಂದು ಮೂಲದಿಂದ ಬರುವುದು ಆವಶ್ಯಕ. ಆ ಉತ್ತರಗಳು ದೇವರಿಂದಲೇ ಬರಬೇಕು.—ಕೀರ್ತನೆ 36:9.
ಮನುಷ್ಯ—ಪಾಪರಹಿತನಾಗಿ ಸೃಷ್ಟಿಸಲ್ಪಟ್ಟನು
ವೇದಗಳಲ್ಲಿ ಕೊಡಲ್ಪಟ್ಟಿರುವ ಮಾನವನ ಸೃಷ್ಟಿಯ ವರ್ಣನೆಗಳು ಸಾಂಕೇತಿಕವೆಂದು ಹಿಂದೂ ತತ್ತ್ವಜ್ಞಾನಿ ನಿಖಿಲಾನಂದರು ಒಪ್ಪಿಕೊಳ್ಳುತ್ತಾರೆ. ತದ್ರೀತಿ, ಪೌರ್ವಾತ್ಯ ಧರ್ಮಗಳಲ್ಲಿ ಹೆಚ್ಚಿನವು ಸೃಷ್ಟಿಯ ಕಾಲ್ಪನಿಕ ವಿವರಣೆಗಳನ್ನು ಮಾತ್ರ ಕೊಡುತ್ತವೆ. ಆದರೂ ಪ್ರಥಮ ಪುರುಷನ ಸೃಷ್ಟಿಯ ಕುರಿತ ಬೈಬಲ್ ವೃತ್ತಾಂತವನ್ನು ನಂಬಲು ತಾರ್ಕಿಕ ಹಾಗೂ ವೈಜ್ಞಾನಿಕ—ಇವೆರಡೂ ಕಾರಣಗಳಿವೆ.a ಅದರ ಪ್ರಥಮ ಅಧ್ಯಾಯವೇ ಹೇಳುವುದು: “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.”—ಆದಿಕಾಂಡ 1:27.
“ದೇವಸ್ವರೂಪದಲ್ಲಿ” ನಿರ್ಮಿಸಲ್ಪಡುವುದು ಎಂದರೇನು? ಕೇವಲ ಇದೇ: ದೇವರ ಹೋಲಿಕೆಯಲ್ಲಿ, ಮೃಗಗಳಿಂದ ಅವನನ್ನು ಪ್ರತ್ಯೇಕಿಸಿದ ಗುಣಗಳಾದ, ನ್ಯಾಯ, ವಿವೇಕ ಮತ್ತು ಪ್ರೀತಿಗಳಂತಹ ದಿವ್ಯ ಗುಣಗಳುಳ್ಳವನಾಗಿ ಮನುಷ್ಯನು ನಿರ್ಮಿಸಲ್ಪಟ್ಟನು. (ಕೊಲೊಸ್ಸೆ 3:9, 10ನ್ನು ಹೋಲಿಸಿ.) ಈ ಗುಣಗಳು ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಆರಿಸಿಕೊಳ್ಳುವ ಸಾಮರ್ಥ್ಯವನ್ನು ಅವನಿಗೆ ಕೊಟ್ಟು, ಅವನನ್ನು ಸ್ವತಂತ್ರ ನೈತಿಕ ಕರ್ತೃವಾಗಿ ಮಾಡಿದವು. ಸೃಷ್ಟಿಸಲ್ಪಟ್ಟಾಗ ಪ್ರಥಮ ಮನುಷ್ಯನಲ್ಲಿ ಪಾಪವಿರಲಿಲ್ಲ, ಅವನ ಜೀವಿತದಲ್ಲಿ ಕೆಡುಕಾಗಲಿ, ಕಷ್ಟಾನುಭವವಾಗಲಿ ಇರಲಿಲ್ಲ.
ಪುರುಷ ಆದಾಮನಿಗೆ ಯೆಹೋವ ದೇವರು ಈ ಆಜ್ಞೆಯನ್ನು ಕೊಟ್ಟನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ವಿಧೇಯರಾಗಲು ಆರಿಸಿಕೊಳ್ಳುವ ಮೂಲಕ, ಆದಾಮನೂ ಅವನ ಹೆಂಡತಿಯಾದ ಹವ್ವಳೂ ತಮ್ಮ ಸೃಷ್ಟಿಕರ್ತನಿಗೆ ಸ್ತುತಿಯನ್ನೂ ಗೌರವವನ್ನೂ ತಂದು, ಪಾಪವಿಲ್ಲದವರಾಗಿ ಇರಸಾಧ್ಯವಿತ್ತು. ಇನ್ನೊಂದು ಕಡೆಯಲ್ಲಿ, ಅವಿಧೇಯತೆಯ ಒಂದು ಕೃತ್ಯವು, ದೇವರ ಪರಿಪೂರ್ಣ ಮಟ್ಟಗಳನ್ನು ಮುಟ್ಟಲು ಅವರು ತಪ್ಪಿಹೋಗುವುದನ್ನು ಸೂಚಿಸುತ್ತ ಅವರನ್ನು ಅಪರಿಪೂರ್ಣರನ್ನಾಗಿ, ಪಾಪಪೂರ್ಣರನ್ನಾಗಿ ಮಾಡುತ್ತಿತ್ತು.
ಆದಾಮಹವ್ವರು ದೈವಿಕ ಪ್ರಕೃತಿಯುಳ್ಳವರಾಗಿ ನಿರ್ಮಿಸಲ್ಪಡಲಿಲ್ಲ. ಆದರೂ, ಅವರಲ್ಲಿ ಸ್ವಲ್ಪಮಟ್ಟಿಗಿನ ದೈವಿಕ ಗುಣಲಕ್ಷಣಗಳೂ ನೈತಿಕ ನಿರ್ಣಯಗಳನ್ನು ಮಾಡುವ ಸಾಮರ್ಥ್ಯವು ನಿಶ್ಚಯವಾಗಿ ಇತ್ತು. ದೇವರ ಸೃಷ್ಟಿಯಾಗಿದ್ದುದರಿಂದ ಅವರು ಪಾಪರಹಿತರು ಅಥವಾ ಪರಿಪೂರ್ಣರು ಆಗಿದ್ದರು. (ಆದಿಕಾಂಡ 1:31; ಧರ್ಮೋಪದೇಶಕಾಂಡ 32:4) ಅವರನ್ನು ಅಸ್ತಿತ್ವಕ್ಕೆ ತಂದದ್ದು, ಯುಗಾಂತರಗಳಿಂದ ಅಂದಿನ ವರೆಗೆ ದೇವರ ಮತ್ತು ವಿಶ್ವದ ಮಧ್ಯೆ ಇದ್ದ ಹೊಂದಿಕೆಯನ್ನು ಭಂಗಗೊಳಿಸಲಿಲ್ಲ. ಹಾಗಾದರೆ, ಪಾಪವು ಹೇಗೆ ಆರಂಭಗೊಂಡಿತು?
ಪಾಪದ ಮೂಲ
ಪಾಪವು ಪ್ರಥಮವಾಗಿ ಸಂಭವಿಸಿದ್ದು ಆತ್ಮ ಲೋಕದಲ್ಲಿ. ಭೂಮಿ ಹಾಗೂ ಮಾನವ ಸೃಷ್ಟಿಗೆ ಮುಂಚಿತವಾಗಿ, ದೇವರು ಬುದ್ಧಿಶಕ್ತಿಯ ಆತ್ಮಜೀವಿಗಳನ್ನು, ದೇವದೂತರನ್ನು ಸೃಷ್ಟಿಸಿದ್ದನು. (ಯೋಬ 1:6; 2:1; 38:4-7; ಕೊಲೊಸ್ಸೆ 1:15-17) ಈ ದೇವದೂತರಲ್ಲಿ ಒಬ್ಬನು ತನ್ನ ಸ್ವಂತ ಸೌಂದರ್ಯ ಮತ್ತು ಬುದ್ಧಿಶಕ್ತಿಯನ್ನು ಉಚ್ಚವೆಂದು ಪರಿಗಣಿಸಿದನು. (ಯೆಹೆಜ್ಕೇಲ 28:13-15ನ್ನು ಹೋಲಿಸಿ.) ಆದಾಮಹವ್ವರು ಮಕ್ಕಳನ್ನು ಹುಟ್ಟಿಸುವಂತೆ ದೇವರು ಅವರಿಗೆ ಕೊಟ್ಟ ಆದೇಶದಿಂದ, ಬೇಗನೆ ಭೂಮಿಯು ನೀತಿವಂತರಿಂದ ತುಂಬಿ, ಅವರೆಲ್ಲರೂ ದೇವರನ್ನು ಆರಾಧಿಸುವರೆಂಬುದನ್ನು ಈ ದೇವದೂತನು ನೋಡಸಾಧ್ಯವಿತ್ತು. (ಆದಿಕಾಂಡ 1:27, 28) ಅವರ ಆರಾಧನೆಯು ತನಗೆ ದೊರೆಯುವಂತೆ ಈ ಆತ್ಮಜೀವಿಯು ಬಯಸಿದನು. (ಮತ್ತಾಯ 4:9, 10) ಈ ಬಯಕೆಯ ಮೇಲೆ ಲಕ್ಷ್ಯವಿಡುವಿಕೆಯು ಅವನನ್ನು ತಪ್ಪಾದ ಮಾರ್ಗವನ್ನು ಅವಲಂಬಿಸುವಂತೆ ಮಾಡಿತು.—ಯಾಕೋಬ 1:14, 15.
ಒಂದು ಸರ್ಪದ ಮೂಲಕ ಹವ್ವಳೊಂದಿಗೆ ಮಾತಾಡುತ್ತ, ಒಳ್ಳೆಯದರ ಮತ್ತು ಕೆಟ್ಟದ್ದರ ಜ್ಞಾನದ ಮರದಿಂದ ಹಣ್ಣನ್ನು ತಿನ್ನುವುದನ್ನು ನಿಷೇಧಿಸುವ ಮೂಲಕ, ಆಕೆಗೆ ಇರಬೇಕಾದ ಜ್ಞಾನವನ್ನು ದೇವರು ತಡೆದು ಹಿಡಿದಿದ್ದಾನೆಂದು ಈ ಪ್ರತಿಭಟಕ ದೂತನು ಹೇಳಿದನು. (ಆದಿಕಾಂಡ 3:1-5) ಅದನ್ನು ಹೇಳಿದ್ದು ದ್ವೇಷಭರಿತ ಸುಳ್ಳಾಗಿತ್ತು—ಒಂದು ಪಾಪಕೃತ್ಯವಾಗಿತ್ತು. ಈ ಸುಳ್ಳನ್ನು ಹೇಳುವ ಮೂಲಕ, ಈ ದೇವದೂತನು ತನ್ನನ್ನು ಪಾಪಿಯಾಗಿ ಮಾಡಿಕೊಂಡನು. ಅದರ ಫಲಿತಾಂಶವಾಗಿ, ಅವನು ಪಿಶಾಚನು, ಒಬ್ಬ ಮಿಥ್ಯಾಪವಾದಿ ಮತ್ತು ಸೈತಾನನು, ದೇವರ ವಿರೋಧಿ ಎಂದು ಕರೆಯಲ್ಪಟ್ಟನು.—ಪ್ರಕಟನೆ 12:9.
ಸೈತಾನನ ಪ್ರೇರಕಗೊಳಿಸುವ ವಾದವು ಹವ್ವಳಲ್ಲಿ ಪ್ರತಿಕೂಲ ಪರಿಣಾಮವನ್ನುಂಟುಮಾಡಿತು. ದುಷ್ಪ್ರೇರಕನ ಮಾತುಗಳಲ್ಲಿ ಭರವಸೆಯಿಟ್ಟ ಆಕೆ, ತನ್ನನ್ನು ವಂಚನೆಗೆ ಒಪ್ಪಿಸಿಕೊಟ್ಟು, ಆ ನಿಷಿದ್ಧ ಮರದ ಫಲದಲ್ಲಿ ಸ್ವಲ್ಪವನ್ನು ತಿಂದಳು. ಆಕೆಯ ಗಂಡನಾದ ಆದಾಮನು ಹಣ್ಣನ್ನು ತಿನ್ನುವುದರಲ್ಲಿ ಆಕೆಯ ಜತೆಗೂಡಿದನು; ಹೀಗೆ ಅವರಿಬ್ಬರೂ ಪಾಪಿಗಳಾಗಿ ಪರಿಣಮಿಸಿದರು. (ಆದಿಕಾಂಡ 3:6; 1 ತಿಮೊಥೆಯ 2:14) ಸ್ಪಷ್ಟವಾಗಿ, ದೇವರಿಗೆ ಅವಿಧೇಯರಾಗಲು ಆರಿಸಿಕೊಳ್ಳುವ ಮೂಲಕ, ನಮ್ಮ ಪ್ರಥಮ ಹೆತ್ತವರು ಪರಿಪೂರ್ಣತೆಯ ಗುರಿಯನ್ನು ತಪ್ಪಿ, ತಮ್ಮನ್ನು ಪಾಪಿಗಳನ್ನಾಗಿ ಮಾಡಿಕೊಂಡರು.
ಆದಾಮಹವ್ವರ ಸಂತತಿಯ ಕುರಿತಾಗಿ ಏನು? ಬೈಬಲು ವಿವರಿಸುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಆನುವಂಶಿಕತೆಯ ನಿಯಮವು ಆಗಲೆ ಜಾರಿಯಲ್ಲಿತ್ತು. ಆದಾಮನಲ್ಲಿ ಇಲ್ಲದಿದ್ದುದನ್ನು ಅವನು ತನ್ನ ಮಕ್ಕಳಿಗೆ ದಾಟಿಸಶಕ್ತನಾಗಿರಲಿಲ್ಲ. (ಯೋಬ 14:4) ಪರಿಪೂರ್ಣತೆಯನ್ನು ಕಳೆದುಕೊಂಡಿದ್ದು, ಅವರ ಮಕ್ಕಳು ಗರ್ಭದಲ್ಲಿ ರೂಪುಗೊಂಡಾಗ ಆ ಪ್ರಥಮ ದಂಪತಿಗಳು ಪಾಪಿಗಳಾಗಿದ್ದರು. ಪರಿಣಾಮವಾಗಿ, ನಾವೆಲ್ಲರು ವಿನಾಯಿತಿಯೇ ಇಲ್ಲದೆ ಪಾಪವನ್ನು ಪಿತ್ರಾರ್ಜಿತವಾಗಿ ಹೊಂದಿರುತ್ತೇವೆ. (ಕೀರ್ತನೆ 51:5; ರೋಮಾಪುರ 3:23) ಸರದಿಯಾಗಿ, ಪಾಪವು ಕೆಡುಕು ಮತ್ತು ಕಷ್ಟಾನುಭವವನ್ನಲ್ಲದೆ ಇನ್ನಾವುದನ್ನೂ ಉತ್ಪಾದಿಸಿರುವುದಿಲ್ಲ. ಅಲ್ಲದೆ, ಈ ಕಾರಣದಿಂದಾಗಿಯೇ, ನಾವೆಲ್ಲರು ವೃದ್ಧರಾಗಿ ಸಾಯುತ್ತೇವೆ, ಏಕೆಂದರೆ, “ಪಾಪವು ಕೊಡುವ ಸಂಬಳ ಮರಣ.”—ರೋಮಾಪುರ 6:23.
ಮನಸ್ಸಾಕ್ಷಿ ‘ತಪ್ಪುಹೊರಿಸುತ್ತದೆ’ ಅಥವಾ ‘ಮನ್ನಿಸುತ್ತದೆ’
ಪ್ರಥಮ ಮಾನವ ಜೊತೆಯ ನಡವಳಿಕೆಯ ಮೇಲೆ ಪಾಪವು ಮಾಡಿದ ಪರಿಣಾಮವನ್ನೂ ಪರಿಗಣಿಸಿರಿ. ಅವರು ತಮ್ಮ ಶರೀರಗಳ ಭಾಗಗಳನ್ನು ಮುಚ್ಚಿಕೊಂಡು ದೇವರಿಂದ ತಮ್ಮನ್ನು ಅಡಗಿಸಿಟ್ಟುಕೊಳ್ಳಲು ಪ್ರಯತ್ನಿಸಿದರು. (ಆದಿಕಾಂಡ 3:7, 8) ಹೀಗೆ ಪಾಪವು ಅವರಲ್ಲಿ ದೋಷಿ ಮನೋಭಾವ, ವ್ಯಾಕುಲತೆ ಮತ್ತು ಲಜ್ಜೆಯನ್ನು ಹುಟ್ಟಿಸಿತು. ಮಾನವಕುಲಕ್ಕೆ ಇಂದು ಈ ಭಾವಾವೇಶಗಳೊ ತೀರ ಪರಿಚಿತವಾಗಿವೆ.
ಅಗತ್ಯವಿರುವ ಒಬ್ಬನಿಗೆ ದಯೆ ತೋರಿಸದಿದ್ದ ಕಾರಣ ಅಹಿತಕರವಾದ ಅನಿಸಿಕೆಗಳ ಅನುಭವವನ್ನು ಯಾರು ತಾನೇ ಪಡೆದಿರುವುದಿಲ್ಲ ಅಥವಾ ಹೇಳಲೇಬಾರದಾಗಿದ್ದ ಮಾತುಗಳನ್ನಾಡಿದುದಕ್ಕಾಗಿ ಯಾರು ತಾನೇ ಪರಿತಪಿಸಿಲ್ಲ? (ಯಾಕೋಬ 4:17) ಅಂತಹ ತೊಂದರೆದಾಯಕ ಅನಿಸಿಕೆಗಳು ನಮಗಾಗುವುದೇಕೆ? ‘ನಿಯಮವು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿದೆ’ ಎಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. ನಮ್ಮ ಮನಸ್ಸಾಕ್ಷಿಯು ಕಠಿನವಾಗದೆ ಇರುವಲ್ಲಿ, ಆ ನಿಯಮದ ಯಾವುದೇ ಉಲ್ಲಂಘನೆಯು ನಮ್ಮಲ್ಲಿ ಒಂದು ಆಂತರಿಕ ಉತ್ಪ್ಲವನವನ್ನು ಉತ್ಪಾದಿಸುತ್ತದೆ. ಹೀಗೆ ಮನಸ್ಸಾಕ್ಷಿಯ ಆ ಸ್ವರವು ನಮ್ಮ ಮೇಲೆ ‘ತಪ್ಪುಹೊರಿಸುತ್ತದೆ’ ಅಥವಾ ನಮ್ಮನ್ನು ‘ಮನ್ನಿಸುತ್ತದೆ.’ (ರೋಮಾಪುರ 2:15; 1 ತಿಮೊಥೆಯ 4:2; ತೀತ 1:15) ನಾವು ಗ್ರಹಿಸಲಿ, ಗ್ರಹಿಸದಿರಲಿ, ನಮಗೆ ತಪ್ಪಿನ, ಪಾಪದ ಆಂತರಿಕ ಪ್ರಜ್ಞೆಯಿದೆ!
ಪೌಲನು ತನ್ನ ಪಾಪಪೂರ್ಣ ಪ್ರವೃತ್ತಿಗಳ ಕುರಿತು ಚೆನ್ನಾಗಿ ಅರಿತವನಾಗಿದ್ದನು. “ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆಯೆಂಬ ನಿಯಮ ನನಗೆ ಕಾಣಬರುತ್ತದೆ,” ಎಂದು ಅವನು ಒಪ್ಪಿಕೊಂಡನು. “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.” ಆದಕಾರಣ ಪೌಲನು ಕೇಳಿದ್ದು: “ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?”—ರೋಮಾಪುರ 7:21-24.
ಪಾಪದಿಂದ ಬಿಡುಗಡೆ—ಹೇಗೆ?
ಒಬ್ಬ ವಿದ್ವಾಂಸರು ಹೇಳುವುದು: “ಹಿಂದೂ ಸಂಪ್ರದಾಯದಲ್ಲಿ, ಬಿಡುಗಡೆಯೆಂದರೆ, ಪುನರಾವೃತ್ತಿಸುವ ಜನನ ಮರಣಗಳಿಂದ ಬರುವ ಬಂಧದಿಂದ ಬಿಡುಗಡೆಯಾಗಿದೆ.” ಪರಿಹಾರವಾಗಿ, ಬೌದ್ಧ ಧರ್ಮವು ಅದೇ ರೀತಿ ನಿರ್ವಾಣ—ಬಾಹ್ಯ ವಾಸ್ತವ್ಯವನ್ನು ಮರೆತಿರುವ ಸ್ಥಿತಿ—ಕ್ಕೆ ಸೂಚಿಸುತ್ತದೆ. ಪಿತ್ರಾರ್ಜಿತ ಪಾಪದ ಭಾವರೂಪವನ್ನು ಗ್ರಹಿಸದ ಕಾರಣ ಹಿಂದೂಮತವು ಕೇವಲ ಅಸ್ತಿತ್ವದಿಂದ ಪಲಾಯನವನ್ನು ವಾಗ್ದಾನಿಸುತ್ತದೆ.
ಇನ್ನೊಂದು ಕಡೆಯಲ್ಲಿ, ಬೈಬಲಿನ ವಿಮುಕ್ತಿಯ ಮಾಧ್ಯಮವು, ಪಾಪಪೂರ್ಣ ಸ್ಥಿತಿಯ ನಿಜವಾದ ತೆಗೆದುಹಾಕುವಿಕೆಯಲ್ಲಿ ಪರಿಣಮಿಸುತ್ತದೆ. ತನಗೆ ಪಾಪದಿಂದ ರಕ್ಷಣೆಯು ಹೇಗೆ ದೊರೆಯಬಲ್ಲದೆಂದು ಕೇಳಿದ ಬಳಿಕ, ಅಪೊಸ್ತಲ ಪೌಲನು, “ನಮ್ಮ ಕರ್ತನಾದ ಯೇಸುಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ” ಎಂದು ಉತ್ತರಿಸುತ್ತಾನೆ. (ರೋಮಾಪುರ 7:25) ಹೌದು, ರಕ್ಷಣೆಯು ದೇವರಿಂದ ಯೇಸು ಕ್ರಿಸ್ತನ ಮೂಲಕ ಬರುತ್ತದೆ.
ಮತ್ತಾಯನ ಸುವಾರ್ತೆಗನುಸಾರ, ‘ಮನುಷ್ಯಕುಮಾರ’ನಾದ ಯೇಸು ಕ್ರಿಸ್ತನು, “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ” ಬಂದನು. (ಮತ್ತಾಯ 20:28) 1 ತಿಮೊಥೆಯ 2:6 (NW)ರಲ್ಲಿ ದಾಖಲೆಯಾಗಿರುವಂತೆ, ಯೇಸು “ತನ್ನನ್ನು ಎಲ್ಲರಿಗೋಸ್ಕರ ಒಂದು ಅನುರೂಪವಾದ ಪ್ರಾಯಶ್ಚಿತ್ತವಾಗಿ ಒಪ್ಪಿಸಿಕೊಟ್ಟನು,” ಎಂದು ಪೌಲನು ಬರೆದನು. “ಪ್ರಾಯಶ್ಚಿತ್ತ” ಎಂಬ ಪದವು ಬಂದಿಗಳ ವಿಮೋಚನೆಗಾಗಿ ಮೌಲ್ಯವನ್ನು ತೆರುವುದನ್ನು ಸೂಚಿಸುತ್ತದೆ. ಅದು ಅನುರೂಪವಾದ ಪ್ರಾಯಶ್ಚಿತ್ತವಾಗಿರುವ ನಿಜತ್ವವು, ನ್ಯಾಯದ ತಕ್ಕಡಿಯ ಸರಿದೂಗುವಿಕೆಯಲ್ಲಿ ಆ ಮೌಲ್ಯದ ಪರಿಣಾಮಕಾರಿತ್ವವನ್ನು ಒತ್ತಿಹೇಳುತ್ತದೆ. ಆದರೆ ಒಬ್ಬ ಮನುಷ್ಯನ ಮರಣವು “ಎಲ್ಲರಿಗೋಸ್ಕರ ಒಂದು ಅನುರೂಪವಾದ ಪ್ರಾಯಶ್ಚಿತ್ತ”ವಾಗಿ ಹೇಗೆ ಪರಿಗಣಿಸಲ್ಪಡಸಾಧ್ಯವಿದೆ?
ಆದಾಮನು, ನಮ್ಮನ್ನೂ ಸೇರಿಸಿ ಸಕಲ ಮಾನವಕುಲವನ್ನು ಪಾಪ ಮತ್ತು ಮರಣಕ್ಕೆ ಮಾರಿಬಿಟ್ಟನು. ಅವನು ತೆತ್ತ ಬೆಲೆ ಅಥವಾ ದಂಡವು, ಅವನ ಪರಿಪೂರ್ಣ ಮಾನವ ಜೀವವಾಗಿತ್ತು. ಇದನ್ನು ಭರ್ತಿಮಾಡಲು ಇನ್ನೊಂದು ಪರಿಪೂರ್ಣ ಮಾನವಜೀವ—ಅನುರೂಪವಾದ ಪ್ರಾಯಶ್ಚಿತ್ತ—ವನ್ನು ಕೊಡಲೇಬೇಕಾಗಿತ್ತು. (ವಿಮೋಚನಕಾಂಡ 21:23; ಧರ್ಮೋಪದೇಶಕಾಂಡ 19:21; ರೋಮಾಪುರ 5:18, 19) ಯಾವ ಅಪರಿಪೂರ್ಣ ಮನುಷ್ಯನಿಗೂ ಈ ಪ್ರಾಯಶ್ಚಿತ್ತವನ್ನು ಕೊಡಸಾಧ್ಯವಿಲ್ಲದ್ದರಿಂದ, ದೇವರು ತನ್ನ ಅಪರಿಮಿತ ವಿವೇಕದಿಂದ, ಈ ಬಿಕ್ಕಟ್ಟುಗಳಿಂದ ಹೊರಬರುವ ದಾರಿಯನ್ನು ತೆರೆದನು. (ಕೀರ್ತನೆ 49:6, 7) ಆತನು ಸ್ವರ್ಗದಿಂದ ತನ್ನ ಏಕಜಾತ ಪುತ್ರನ ಪರಿಪೂರ್ಣ ಜೀವವನ್ನು ಭೂಮಿಯ ಒಬ್ಬ ಕನ್ನಿಕೆಯ ಗರ್ಭದೊಳಗೆ, ಅವನು ಪರಿಪೂರ್ಣ ಮನುಷ್ಯನಾಗಿ ಜನಿಸುವಂತೆ ಸ್ಥಳಾಂತರಿಸಿದನು.—ಲೂಕ 1:30-38; ಯೋಹಾನ 3:16-18.
ಮಾನವಕುಲವನ್ನು ವಿಮೋಚಿಸುವ ಕೆಲಸವನ್ನು ನೆರವೇರಿಸಲು, ತಾನು ಭೂಮಿಯಲ್ಲಿದ್ದ ಸಮಯದಲ್ಲೆಲ್ಲ ಒಂದು ನಿರ್ಮಲವಾದ ಸಮಗ್ರತೆಯನ್ನು ಯೇಸು ಇಟ್ಟುಕೊಳ್ಳಬೇಕಾಗಿತ್ತು. ಅವನು ಹಾಗೆ ಮಾಡಿದನು. ಬಳಿಕ ಅವನು ಯಜ್ಞಾರ್ಪಿತವಾಗಿ ಮರಣಪಟ್ಟನು. ಈ ವಿಧದಲ್ಲಿ, ಒಂದು ಪರಿಪೂರ್ಣ ಮಾನವ ಜೀವದ—ತನ್ನ ಸ್ವಂತ ಜೀವದ ಮೌಲ್ಯವು ಮಾನವಕುಲವನ್ನು ವಿಮೋಚಿಸಲಿಕ್ಕಾಗಿ ದೊರೆಯುತ್ತದೆಂಬುದನ್ನು ಯೇಸು ಖಚಿತಪಡಿಸಿದನು.—2 ಕೊರಿಂಥ 5:14; 1 ಪೇತ್ರ 1:18, 19.
ಕ್ರಿಸ್ತನ ಪ್ರಾಯಶ್ಚಿತ್ತವು ನಮಗಾಗಿ ಮಾಡಬಲ್ಲ ವಿಷಯ
ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ನಮಗೆ ಈಗಲೇ ಪ್ರಯೋಜನವನ್ನು ತರಬಲ್ಲದು. ಅದರಲ್ಲಿ ನಂಬಿಕೆಯನ್ನಿಡುವ ಮೂಲಕ, ದೇವರ ಮುಂದೆ ನಾವು ಒಂದು ಶುದ್ಧ ನಿಲುವನ್ನು ಅನುಭವಿಸಿ, ಯೆಹೋವನ ಪ್ರೀತಿಯ ಮತ್ತು ಕೋಮಲವಾದ ಆರೈಕೆಯೊಳಗೆ ಬರಬಲ್ಲೆವು. (ಅ. ಕೃತ್ಯಗಳು 10:43; ರೋಮಾಪುರ 3:21-24) ನಾವು ಮಾಡಿರಬಹುದಾದ ಪಾಪಗಳಿಗಾಗಿ ದೋಷಿ ಮನೋಭಾವದಿಂದ ಮುಳುಗಿಹೋಗುವ ಬದಲಿಗೆ, ನಾವು ಪ್ರಾಯಶ್ಚಿತ್ತದ ಆಧಾರದ ಮೇಲೆ ದೇವರಿಂದ ಕ್ಷಮೆಯನ್ನು ಮುಕ್ತವಾಗಿ ಯಾಚಿಸಬಲ್ಲೆವು.—ಯೆಶಾಯ 1:18; ಎಫೆಸ 1:7; 1 ಯೋಹಾನ 2:1, 2.
ಭಾವೀ ದಿನಗಳಲ್ಲಿ, ಪಾಪದಿಂದಾಗಿರುವ ಮಾನವಕುಲದ ರೋಗಿಷ್ಟ ಸ್ಥಿತಿಯು ಪೂರ್ತಿಯಾಗಿ ಸ್ವಸ್ಥಗೊಳ್ಳುವಂತೆ ಈ ಪ್ರಾಯಶ್ಚಿತ್ತವು ಸಾಧ್ಯಮಾಡುವುದು. ಬೈಬಲಿನ ಕೊನೆಯ ಪುಸ್ತಕವು ದೇವರ ಸಿಂಹಾಸನದಿಂದ ಹೊರಡುವ “ಜೀವಜಲದ ನದಿಯನ್ನು” ವರ್ಣಿಸುತ್ತದೆ. ಆ ನದೀತೀರದುದ್ದಕ್ಕೂ “ಜನಾಂಗಗಳನ್ನು ವಾಸಿಮಾಡುವದಕ್ಕೆ” ಪ್ರಯೋಜನಕರವಾದ ಎಲೆಗಳಿರುವ ಸಮೃದ್ಧವಾದ ಫಲವೃಕ್ಷಗಳಿವೆ. (ಪ್ರಕಟನೆ 22:1, 2) ಬೈಬಲು ಇಲ್ಲಿ ಸಾಂಕೇತಿಕವಾಗಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಮಾನವಕುಲವನ್ನು ಪಾಪ ಮತ್ತು ಮರಣದಿಂದ ಸದಾ ಬಿಡುಗಡೆಮಾಡುವ ಸೃಷ್ಟಿಕರ್ತನ ಅದ್ಭುತಕರವಾದ ಮುನ್ನೇರ್ಪಾಡಿನ ಕುರಿತು ಮಾತಾಡುತ್ತದೆ.
ಪ್ರಕಟನೆ ಪುಸ್ತಕದ ಪ್ರವಾದನಾತ್ಮಕ ದರ್ಶನಗಳು ಬೇಗನೆ ನೆರವೇರಲಿರುವವು. (ಪ್ರಕಟನೆ 22:6, 7) ಆಗ ಸಹೃದಯದವರೆಲ್ಲ “ನಾಶದ ವಶದಿಂದ ಬಿಡುಗಡೆಯಾಗಿ” ಪರಿಪೂರ್ಣರಾಗುವರು. (ರೋಮಾಪುರ 8:20, 21) ಇದು ಯೆಹೋವನ ಮತ್ತು ಪ್ರಾಯಶ್ಚಿತ್ತವಾಗಿ ಪರಿಣಮಿಸಿದ ಆತನ ನಿಷ್ಠಾವಂತ ಪುತ್ರನಾದ ಯೇಸು ಕ್ರಿಸ್ತನ ಕುರಿತು ಹೆಚ್ಚನ್ನು ಕಲಿಯುವರೆ ನಮ್ಮನ್ನು ಪ್ರಚೋದಿಸಬಾರದೊ?—ಯೋಹಾನ 17:3.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಜೀವ—ಅದು ಇಲ್ಲಿಗೆ ಬಂದದ್ದು ಹೇಗೆ? ವಿಕಾಸದ ಮೂಲಕವೊ ಸೃಷ್ಟಿಯ ಮೂಲಕವೊ? (ಇಂಗ್ಲಿಷ್) ಎಂಬ ಪುಸ್ತಕವನ್ನು ನೋಡಿ.
[ಪುಟ 6 ರಲ್ಲಿರುವ ಚಿತ್ರ]
ಆದಾಮನು ಮಾನವಕುಲದ ಮೇಲೆ ಪಾಪ ಮತ್ತು ಮರಣವನ್ನು ತಂದನು
[ಪುಟ 7 ರಲ್ಲಿರುವ ಚಿತ್ರ]
ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಪಾಪ ಮತ್ತು ಮರಣದಿಂದ ಬಿಡುಗಡೆಯನ್ನು ತರುತ್ತದೆ