ನಿಮಗೆ ಯಾವಾಗಲೂ ಒಂದು ಬೈಬಲ್ ಆಜ್ಞೆಯ ಅಗತ್ಯವಿದೆಯೋ?
ನೀವು ಚಿಕ್ಕವರಾಗಿದ್ದಾಗ, ನಿಮ್ಮ ಹೆತ್ತವರು ನಿಮಗೆ ಅನೇಕ ನೀತಿನಿಯಮಗಳನ್ನು ಕೊಟ್ಟಿದ್ದಿರಬಹುದು. ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಹಿತಚಿಂತನೆಯಿತ್ತು ಎಂಬುದು ನೀವು ದೊಡ್ಡವರಾದಂತೆ ನಿಮಗೆ ಮನವರಿಕೆಯಾಯಿತು. ಒಬ್ಬ ಪ್ರಾಯಸ್ಥ ವ್ಯಕ್ತಿಯೋಪಾದಿ, ಈಗ ನೀವು ಅವರ ಅಧಿಕಾರದ ಕೆಳಗಿಲ್ಲವಾದರೂ, ನೀವಿನ್ನೂ ಅವರು ನಿಮ್ಮಲ್ಲಿ ತುಂಬಿಸಿದ ಮೂಲತತ್ತ್ವಗಳಿಗನುಸಾರ ಜೀವಿಸುತ್ತಿರಬಹುದು.
ನಮ್ಮ ಸ್ವರ್ಗೀಯ ತಂದೆಯಾಗಿರುವ ಯೆಹೋವನು, ತನ್ನ ವಾಕ್ಯವಾದ ಬೈಬಲಿನ ಮೂಲಕ ನಮಗೆ ಅನೇಕ ನೇರವಾದ ಆಜ್ಞೆಗಳನ್ನು ಕೊಡುತ್ತಾನೆ. ಉದಾಹರಣೆಗೆ, ವಿಗ್ರಹಾರಾಧನೆ, ಹಾದರ, ವ್ಯಭಿಚಾರ, ಕಳ್ಳತನವನ್ನು ಆತನು ಖಂಡಿಸುತ್ತಾನೆ. (ವಿಮೋಚನಕಾಂಡ 20:1-17; ಅ. ಕೃತ್ಯಗಳು 15:28, 29) ನಾವು ಆತ್ಮಿಕವಾಗಿ ‘ಎಲ್ಲಾ ವಿಷಯಗಳಲ್ಲಿ ಬೆಳೆದಾಗ,’ ಯೆಹೋವನ ಮನಸ್ಸಿನಲ್ಲಿ ನಮ್ಮ ಕುರಿತಾಗಿ ಹಿತಚಿಂತನೆ ಇದೆ ಮತ್ತು ಆತನ ಆಜ್ಞೆಗಳು ವಿಪರೀತ ನಿರ್ಬಂಧಕರವಾಗಿಲ್ಲ ಎಂಬುದನ್ನು ನಾವು ಗಣ್ಯಮಾಡಲಾರಂಭಿಸುತ್ತೇವೆ.—ಎಫೆಸ 4:15; ಯೆಶಾಯ 48:17, 18; 54:13.
ಆದರೂ, ನೇರವಾದ ಆಜ್ಞೆಯೊಂದು ಕೊಡಲ್ಪಟ್ಟಿರದ ಅನೇಕ ಸನ್ನಿವೇಶಗಳಿವೆ. ಆದುದರಿಂದ, ನೇರವಾದ ಒಂದು ಬೈಬಲ್ ನಿಯಮವಿಲ್ಲದಿರುವಾಗ ತಾವು ಮನಬಂದಂತೆ ವರ್ತಿಸಬಹುದು ಎಂದು ಕೆಲವರು ನೆನಸುತ್ತಾರೆ. ದೇವರು ಆವಶ್ಯಕವೆಂದೆಣಿಸಿದ್ದರೆ, ಆತನು ತನ್ನ ಚಿತ್ತವನ್ನು ಒಂದು ನೇರವಾದ ಆಜ್ಞೆಯೋಪಾದಿ ವ್ಯಕ್ತಪಡಿಸುತ್ತಿದ್ದನು ಎಂದು ಅವರು ವಾದಿಸುತ್ತಾರೆ.
ಹೀಗೆ ಯೋಚಿಸುವವರು ಅನೇಕಾವರ್ತಿ ಅವಿವೇಕದ ನಿರ್ಣಯಗಳನ್ನು ಮಾಡುತ್ತಾರೆ ಮತ್ತು ನಂತರ ಹಾಗೆ ಮಾಡಿದ್ದಕ್ಕಾಗಿ ತುಂಬ ವಿಷಾದಿಸುತ್ತಾರೆ. ಬೈಬಲಿನಲ್ಲಿ ಕೇವಲ ಆಜ್ಞೆಗಳು ಮಾತ್ರವಲ್ಲದೆ ದೇವರ ಯೋಚನಾಧಾಟಿಯ ಸೂಚನೆಗಳು ಸಹ ಒಳಗೂಡಿವೆ ಎಂಬುದನ್ನು ಮನಗಾಣಲು ಅವರು ತಪ್ಪಿಹೋಗುತ್ತಾರೆ. ನಾವು ಬೈಬಲನ್ನು ಅಧ್ಯಯನ ಮಾಡಿ ವಿಚಾರಗಳ ಕುರಿತಾದ ಯೆಹೋವನ ದೃಷ್ಟಿಕೋನವನ್ನು ತಿಳಿದುಕೊಳ್ಳುವಾಗ, ನಾವು ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಆತನ ಮಾರ್ಗಗಳನ್ನು ಪ್ರತಿಬಿಂಬಿಸುವಂಥ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯವು ದೊರಕುತ್ತದೆ. ನಾವು ಹೀಗೆ ಮಾಡುವಾಗ, ಆತನ ಮನಸ್ಸನ್ನು ಸಂತೋಷಪಡಿಸುತ್ತೇವೆ ಮತ್ತು ವಿವೇಕಯುತ ನಿರ್ಣಯಗಳನ್ನು ಮಾಡಿದ್ದರಿಂದ ಸಿಗುವ ಫಲಗಳನ್ನು ಕೊಯ್ಯುತ್ತೇವೆ.—ಎಫೆಸ 5:1.
ಎದ್ದುಕಾಣುವ ಬೈಬಲ್ ಮಾದರಿಗಳು
ಪುರಾತನ ಸಮಯದಲ್ಲಿದ್ದ ದೇವರ ಸೇವಕರ ಬೈಬಲ್ ವೃತ್ತಾಂತಗಳನ್ನು ನೋಡುವುದಾದರೆ, ಅವರು ಒಂದು ನೇರವಾದ ಕಟ್ಟಳೆಯ ಕೆಳಗಿರಲಿಲ್ಲವಾದರೂ ಯೆಹೋವನ ಯೋಚನಾಧಾಟಿಯನ್ನು ಅವರು ಲೆಕ್ಕಕ್ಕೆ ತೆಗೆದುಕೊಂಡ ಸನ್ನಿವೇಶಗಳನ್ನು ನಾವು ಕಂಡುಕೊಳ್ಳುತ್ತೇವೆ. ಯೋಸೇಫನ ಉದಾಹರಣೆಯನ್ನು ಪರಿಗಣಿಸಿರಿ. ಪೋಟೀಫರನ ಹೆಂಡತಿಯ ಅನೈತಿಕ ಪ್ರಸ್ತಾಪಗಳನ್ನು ಅವನು ಎದುರಿಸುತ್ತಿದ್ದ ಆ ಸಮಯದಲ್ಲಿ, ವ್ಯಭಿಚಾರದ ವಿರುದ್ಧ ಯಾವುದೇ ದೈವಪ್ರೇರಿತ ಲಿಖಿತ ನಿಯಮವಿರಲಿಲ್ಲ. ಒಂದು ನೇರವಾದ ನಿಯಮವಿರದಿದ್ದರೂ, ವ್ಯಭಿಚಾರವು ಕೇವಲ ತನ್ನ ಮನಸ್ಸಾಕ್ಷಿಯ ವಿರುದ್ಧ ಮಾತ್ರವಲ್ಲದೆ “ದೇವರಿಗೆ ವಿರುದ್ಧ”ವಾಗಿಯೂ ಒಂದು ಪಾಪವಾಗಿದೆ ಎಂದು ಯೋಸೇಫನು ಮನಗಂಡನು. (ಆದಿಕಾಂಡ 39:9) ವಾಸ್ತವದಲ್ಲಿ, ಏದೆನಿನಲ್ಲಿ ವ್ಯಕ್ತಪಡಿಸಲ್ಪಟ್ಟಂತೆ ವ್ಯಭಿಚಾರವು ದೇವರ ಯೋಚನೆ ಮತ್ತು ಚಿತ್ತಕ್ಕೆ ವಿರುದ್ಧವಾದದ್ದಾಗಿದೆ ಎಂದು ಯೋಸೇಫನು ಗ್ರಹಿಸಿದನು.—ಆದಿಕಾಂಡ 2:24.
ಮತ್ತೊಂದು ಉದಾಹರಣೆಯನ್ನು ಪರಿಗಣಿಸಿರಿ. ಅಪೊಸ್ತಲರ ಕೃತ್ಯಗಳು 16:3ರಲ್ಲಿ, ತಿಮೊಥೆಯನನ್ನು ತನ್ನ ಕ್ರೈಸ್ತ ಪಯಣಗಳಲ್ಲಿ ಜೊತೆಗೆ ಕರೆದೊಯ್ಯುವ ಮೊದಲು ಪೌಲನು ತಿಮೊಥೆಯನಿಗೆ ಸುನ್ನತಿಮಾಡಿಸಿದನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಆದರೂ, ಪೌಲ ಮತ್ತು ತಿಮೊಥೆಯರು ತದನಂತರ ಊರೂರುಗಳಲ್ಲಿ ಸಂಚಾರಮಾಡುತ್ತಾ “ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಸಭೆಯ ಹಿರಿಯರೂ ನಿರ್ಣಯಿಸಿದ್ದ ವಿಧಿಗಳನ್ನು” ತಿಳಿಸುತ್ತಾ ಹೋದರು ಎಂದು 4ನೇ ವಚನದಲ್ಲಿ ನಾವು ಓದುತ್ತೇವೆ. ಆ ವಿಧಿಗಳಲ್ಲಿ ಒಂದು, ಕ್ರೈಸ್ತರು ಇನ್ನು ಸುನ್ನತಿಯನ್ನು ಮಾಡಿಸಿಕೊಳ್ಳುವ ನಿರ್ಬಂಧಕ್ಕೊಳಗಾಗಿಲ್ಲ ಎಂಬುದೂ ಒಳಗೂಡಿತ್ತು! (ಅ. ಕೃತ್ಯಗಳು 15:5, 6, 28, 29) ತಿಮೊಥೆಯನಿಗೆ ಸುನ್ನತಿಯಾಗುವುದು ಅಗತ್ಯವೆಂದು ಪೌಲನಿಗೆ ಏಕೆ ತೋಚಿರಬೇಕು? “ಆಯಾ ಸ್ಥಳಗಳಲ್ಲಿದ್ದ ಯೆಹೂದ್ಯರ ನಿಮಿತ್ತವಾಗಿ ಅವನಿಗೆ ಸುನ್ನತಿ ಮಾಡಿಸಿದನು. ಯಾಕಂದರೆ [ತಿಮೊಥೆಯನ] ತಂದೆ ಗ್ರೀಕನೆಂದು ಎಲ್ಲರಿಗೂ ಗೊತ್ತಿತ್ತು.” ಪೌಲನು ಅನಾವಶ್ಯಕವಾದ ತೊಡಕು ಅಥವಾ ಅಡಚಣೆಯನ್ನು ಉಂಟುಮಾಡಲು ಬಯಸಲಿಲ್ಲ. ಕ್ರೈಸ್ತರು “ದೇವರ ದೃಷ್ಟಿಯಲ್ಲಿ ಪ್ರತಿ ಮಾನವ ಮನಸ್ಸಾಕ್ಷಿಗೆ [ತಮ್ಮನ್ನು] ಯೋಗ್ಯರಾಗಿ ಶಿಫಾರಸ್ಸು ಮಾಡಿಕೊಳ್ಳುತ್ತಾ” ಇರುವುದರ ಬಗ್ಗೆ ಅವನು ಚಿಂತಿತನಾಗಿದ್ದನು.—2 ಕೊರಿಂಥ 4:2, NW; 1 ಕೊರಿಂಥ 9:19-23.
ಈ ರೀತಿಯ ಯೋಚನಾಧಾಟಿಯು ಪೌಲ ಮತ್ತು ತಿಮೊಥೆಯರ ಗುಣಲಕ್ಷಣವಾಗಿತ್ತು. ರೋಮಾಪುರ 14:15, 20, 21 ಮತ್ತು 1 ಕೊರಿಂಥ 8:9-13; 10:23-33ರಲ್ಲಿರುವಂಥ ವಚನಭಾಗಗಳನ್ನು ಓದಿನೋಡಿರಿ, ಮತ್ತು ಪೌಲನು ಇತರರ ಆತ್ಮಿಕ ಕ್ಷೇಮದ ಕುರಿತು, ಅದರಲ್ಲೂ ವಿಶೇಷವಾಗಿ ವಾಸ್ತವದಲ್ಲಿ ತಪ್ಪಾಗಿರದಂಥ ಒಂದು ವಿಷಯದಿಂದ ಎಡವಿ ಬೀಳಲು ಸಾಧ್ಯವಿದ್ದವರ ಆತ್ಮಿಕ ಕ್ಷೇಮದ ಕುರಿತು ಎಷ್ಟು ಚಿಂತಿತನಾಗಿದ್ದನು ಎಂಬುದನ್ನು ನೋಡಿರಿ. ಮತ್ತು ಪೌಲನು ತಿಮೊಥೆಯನಿಗೆ ಬರೆದದ್ದು: “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ. ತಿಮೊಥೆಯನ ಗುಣವನ್ನು ನೀವು ನೋಡಿ ತಿಳಿದುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬದು ನಿಮಗೆ ಗೊತ್ತುಂಟು.” (ಫಿಲಿಪ್ಪಿ 2:20-22) ಈ ಇಬ್ಬರೂ ಕ್ರೈಸ್ತ ಪುರುಷರು ಇಂದು ನಮಗೋಸ್ಕರ ಎಂತಹ ಉತ್ತಮ ಮಾದರಿಯಾಗಿದ್ದಾರೆ! ಯಾವುದೇ ನಿರ್ದಿಷ್ಟ ದೈವಿಕ ಆಜ್ಞೆಯ ಕೆಳಗಿಲ್ಲದಿದ್ದಾಗ ತಮ್ಮ ವೈಯಕ್ತಿಕ ಅನುಕೂಲ ಅಥವಾ ಆಯ್ಕೆಗೆ ಪ್ರಾಧಾನ್ಯತೆ ನೀಡುವ ಬದಲು, ತಮ್ಮ ವೈಯಕ್ತಿಕ ನಿರ್ಣಯಗಳು ಇತರರನ್ನು ಆತ್ಮಿಕವಾಗಿ ಹೇಗೆ ಬಾಧಿಸಬಲ್ಲವು ಎಂಬುದನ್ನು ಪರಿಗಣಿಸುತ್ತಾ ಅವರು ಯೆಹೋವನ ಮತ್ತು ಆತನ ಕುಮಾರನ ಪ್ರೀತಿಯನ್ನು ಅನುಕರಿಸಿದರು.
ನಮ್ಮ ಪ್ರಧಾನ ಮಾದರಿಯಾಗಿರುವ ಯೇಸು ಕ್ರಿಸ್ತನನ್ನು ಪರಿಗಣಿಸಿರಿ. ಅವನು ತನ್ನ ಪರ್ವತ ಪ್ರಸಂಗದಲ್ಲಿ, ದೇವರ ನಿಯಮಗಳ ಹಿಂದಿರುವ ಪ್ರೇರಕಭಾವವನ್ನು ಗ್ರಹಿಸುವವನು ಅದರಲ್ಲಿ ನಿರ್ದಿಷ್ಟವಾಗಿ ಆಜ್ಞಾಪಿಸಲ್ಪಟ್ಟಿರುವ ಅಥವಾ ನಿಷೇಧಿಸಲ್ಪಟ್ಟಿರುವುದಕ್ಕಿಂತಲೂ ಹೆಚ್ಚಿನ ವಿಷಯಗಳಲ್ಲಿ ವಿಧೇಯತೆಯನ್ನು ತೋರಿಸುವನೆಂದು ಸ್ಪಷ್ಟವಾಗಿ ವಿವರಿಸಿದನು. (ಮತ್ತಾಯ 5:21, 22, 27, 28) ಯೇಸು, ಪೌಲ, ತಿಮೊಥೆಯ, ಅಥವಾ ಯೋಸೇಫರು ಒಂದು ನಿರ್ದಿಷ್ಟ ದೈವಿಕ ನಿಯಮವಿಲ್ಲದಿದ್ದರೆ ತಮ್ಮ ಮನಬಂದಂತೆ ವರ್ತಿಸಬಹುದು ಎಂದು ತರ್ಕಿಸಲಿಲ್ಲ. ದೇವರ ಯೋಚನಾಧಾಟಿಗೆ ಹೊಂದಿಕೊಳ್ಳುತ್ತಾ, ಯೇಸು ಯಾವ ಆಜ್ಞೆಗಳನ್ನು ಮುಖ್ಯವಾದವುಗಳೆಂದು ಹೇಳಿದನೋ—ದೇವರನ್ನು ಪ್ರೀತಿಸಬೇಕು ಮತ್ತು ನೆರೆಯವನನ್ನು ಪ್ರೀತಿಸಬೇಕು—ಆ ಆಜ್ಞೆಗಳಿಗೆ ತಕ್ಕ ಹಾಗೆ ಈ ಪುರುಷರು ಜೀವಿಸಿದರು.—ಮತ್ತಾಯ 22:36-40.
ಇಂದಿನ ಕ್ರೈಸ್ತರ ಕುರಿತಾಗಿ ಏನು?
ಪ್ರತಿಯೊಂದು ನಿರ್ಬಂಧವೂ ಶಾಸನಗ್ರಂಥದಂತೆ ಬಿಡಿ ಅಕ್ಷರಗಳಲ್ಲಿ ವಿವರಿಸಲ್ಪಟ್ಟಿರಬೇಕು ಎಂಬ ದೃಷ್ಟಿಕೋನದಿಂದ ಒಬ್ಬನು ಬೈಬಲನ್ನು ವೀಕ್ಷಿಸಬಾರದು. ನಮ್ಮ ವರ್ತನೆಗಳನ್ನು ನಿರ್ಣಯಿಸುವಂತಹ ಒಂದು ನಿರ್ದಿಷ್ಟ ನಿಯಮವಿಲ್ಲದಿರುವುದಾದರೂ, ನಾವು ಯೆಹೋವನ ಯೋಚನಾಧಾಟಿಯನ್ನು ಪ್ರತಿಬಿಂಬಿಸುವಂಥ ನಿರ್ಣಯವನ್ನು ಮಾಡುವಾಗ ಆತನ ಮನಸ್ಸಿಗೆ ಮಹದಾನಂದವನ್ನು ತರುತ್ತೇವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಏನನ್ನು ಮಾಡಬೇಕೆಂದು ದೇವರು ಬಯಸುತ್ತಾನೆ ಎಂದು ಯಾವಾಗಲೂ ಹೇಳಲ್ಪಡುವ ಬದಲು, ‘ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸ’ಸಾಧ್ಯವಿದೆ. (ಎಫೆಸ 5:17, NW; ರೋಮಾಪುರ 12:2) ಇದು ಏಕೆ ಯೆಹೋವನನ್ನು ಸಂತೋಷಪಡಿಸುತ್ತದೆ? ಏಕೆಂದರೆ ನಾವು ನಮ್ಮ ವೈಯಕ್ತಿಕ ಆಯ್ಕೆಗಳು ಮತ್ತು ಹಕ್ಕುಗಳ ವಿಷಯದಲ್ಲಿ ಹೆಚ್ಚು ಚಿಂತಿತರಾಗಿರದೆ ಆತನನ್ನು ಮೆಚ್ಚಿಸುವುದರ ಕುರಿತು ಚಿಂತಿತರಾಗಿದ್ದೇವೆ ಎಂದು ಇದು ತೋರಿಸುವುದು. ಮಾತ್ರವಲ್ಲದೆ ನಾವು ದೇವರ ಪ್ರೀತಿಯನ್ನು ಅನುಕರಿಸುವಷ್ಟರ ಮಟ್ಟಿಗೆ ಆತನ ಪ್ರೀತಿಯನ್ನು ಗಣ್ಯಮಾಡುತ್ತೇವೆ ಎಂಬುದನ್ನು ಇದು ತೋರಿಸುವುದು, ಮತ್ತು ಇಂತಹ ಪ್ರೀತಿಯು ನಮ್ಮನ್ನು ಪ್ರಚೋದಿಸುವ ಶಕ್ತಿಯಾಗಿ ಪರಿಣಮಿಸುವುದು. (ಜ್ಞಾನೋಕ್ತಿ 23:15; 27:11) ಜೊತೆಗೆ, ಶಾಸ್ತ್ರಗಳಲ್ಲಿ ಸೂಚಿಸಲ್ಪಟ್ಟಿರುವುದಕ್ಕೆ ಹೊಂದಿಕೆಯಲ್ಲಿರುವ ವರ್ತನೆಯು ಆತ್ಮಿಕ ಮತ್ತು ಅನೇಕವೇಳೆ ಶಾರೀರಿಕ ಸ್ವಸ್ಥತೆಗೆ ಸಹಾಯಮಾಡುತ್ತದೆ.
ಈ ಮೂಲತತ್ತ್ವವನ್ನು ವೈಯಕ್ತಿಕ ವಿಚಾರಗಳಲ್ಲಿ ಹೇಗೆ ಅನ್ವಯಿಸಸಾಧ್ಯವಿದೆ ಎಂದು ನಾವು ನೋಡೋಣ.
ಮನೋರಂಜನೆಯ ಆಯ್ಕೆ
ಒಂದು ನಿರ್ದಿಷ್ಟ ಮ್ಯೂಸಿಕ್ ಆಲ್ಬಮನ್ನು ಖರೀದಿಸಲು ಬಯಸುವ ಒಬ್ಬ ಯುವಕನ ಸನ್ನಿವೇಶವನ್ನು ಪರಿಗಣಿಸಿರಿ. ಅವನು ಆಲ್ಬಮ್ನಿಂದ ಕೇಳಿಸಿಕೊಂಡಿರುವುದು ತುಂಬ ರಂಜಿಸುವಂಥದ್ದಾಗಿದೆ, ಆದರೆ ಅದರ ಕವರ್ನ ಹಿಂಭಾಗದಲ್ಲಿ ಸೂಚಿಸುವಂತೆ ಗೀತೆಯ ಪದಗಳು ಲೈಂಗಿಕವಾಗಿ ವಿವರಣಾತ್ಮಕವಾಗಿಯೂ ಅಶ್ಲೀಲವಾಗಿಯೂ ಇವೆಯೆಂದು ಸೂಚಿಸುವುದರಿಂದ ಅವನು ಚಿಂತಿತನಾಗುತ್ತಾನೆ. ಮತ್ತು ಕಲಾವಿದನ ರೆಕಾರ್ಡಿಂಗ್ಗಳ ಅಧಿಕಾಂಶ ಭಾಗವು ಕೋಪ ಹಾಗೂ ಆಕ್ರಮಣ ಪ್ರವೃತ್ತಿಯದ್ದಾಗಿದೆ ಎಂಬುದನ್ನು ಸಹ ಅವನು ಬಲ್ಲವನಾಗಿದ್ದಾನೆ. ಈ ಯುವಕನು ಯೆಹೋವನನ್ನು ಪ್ರೀತಿಸುವವನೋಪಾದಿ, ಈ ವಿಚಾರದಲ್ಲಿ ಯೆಹೋವನಿಗಿರುವ ಆಲೋಚನೆಗಳನ್ನೂ ಭಾವನೆಗಳನ್ನೂ ತಿಳಿದುಕೊಳ್ಳಲು ಆಸಕ್ತನಾಗಿದ್ದಾನೆ. ಇದರ ಸಂಬಂಧದಲ್ಲಿ ದೇವರ ಚಿತ್ತವೇನಾಗಿದೆ ಎಂಬುದನ್ನು ಅವನು ಹೇಗೆ ಗ್ರಹಿಸಸಾಧ್ಯವಿದೆ?
ಅಪೊಸ್ತಲ ಪೌಲನು ಗಲಾತ್ಯದವರಿಗೆ ಬರೆದ ತನ್ನ ಪತ್ರದಲ್ಲಿ, ಶರೀರಭಾವದ ಕರ್ಮಗಳು ಮತ್ತು ದೇವರಾತ್ಮದ ಫಲಗಳನ್ನು ಪಟ್ಟಿಮಾಡುತ್ತಾನೆ. ದೇವರಾತ್ಮದ ಫಲದಲ್ಲಿ ಏನು ಒಳಗೂಡಿದೆ ಎಂಬುದು ನಿಮಗೆ ಪ್ರಾಯಶಃ ತಿಳಿದಿದೆ: ಅವು ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆಗಳೇ. ಆದರೆ ಶರೀರಭಾವದ ಕರ್ಮಗಳಲ್ಲಿ ಯಾವುದು ಸೇರಿದೆ? ಪೌಲನು ಬರೆಯುವುದು: “ಶರೀರಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವಂದರೆ—ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡುಕತನ ದುಂದೌತನ ಇಂಥವುಗಳೇ. ಇವುಗಳ ವಿಷಯದಲ್ಲಿ—ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಾನು ಹಿಂದೆ ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.”—ಗಲಾತ್ಯ 5:19-23.
ಆ ಪಟ್ಟಿಯಲ್ಲಿರುವ ಕೊನೆಯ ಅಭಿವ್ಯಕ್ತಿಯನ್ನು ಗಮನಿಸಿರಿ—“ಇಂಥವುಗಳೇ.” ಪೌಲನು ಶರೀರಭಾವದ ಕರ್ಮವೆಂದು ಪರಿಗಣಿಸಲ್ಪಡುವ ಪ್ರತಿಯೊಂದು ವಿಷಯದ ಒಂದು ಸಂಪೂರ್ಣ ಪಟ್ಟಿಯನ್ನು ಒದಗಿಸಲಿಲ್ಲ. ‘ಶರೀರಭಾವದ ಕರ್ಮಗಳಲ್ಲಿ ಪೌಲನು ಪಟ್ಟಿಮಾಡಿರದಂಥ ಯಾವುದೇ ಚಟುವಟಿಕೆಯಲ್ಲಿ ಒಳಗೂಡಲು ನನಗೆ ಶಾಸ್ತ್ರೀಯವಾಗಿ ಅನುಮತಿ ಇದೆ’ ಎಂದು ಒಬ್ಬ ವ್ಯಕ್ತಿಯು ತರ್ಕಿಸಬಹುದೆಂದು ಅದು ಅರ್ಥೈಸುವುದಿಲ್ಲ. ಬದಲಿಗೆ, ಪಟ್ಟಿಯಲ್ಲಿ ಕೊಡಲ್ಪಟ್ಟಿರದ ಆದರೆ ‘ಇಂಥವುಗಳು’ ಎಂಬ ಪಟ್ಟಿಗೆ ಸೇರಸಾಧ್ಯತೆಯಿರುವ ವಿಷಯಗಳನ್ನು ಗುರುತಿಸಲು ಓದುಗರು ತಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸಬೇಕಾಗಿದೆ. ಸೂಚಿಸಲ್ಪಟ್ಟಿರದ ಆದರೆ ‘ಇಂಥವುಗಳು’ ಎಂಬ ಪಟ್ಟಿಗೆ ಸೇರಸಾಧ್ಯತೆಯಿರುವ ವಿಷಯಗಳಲ್ಲಿ ಪಶ್ಚಾತ್ತಾಪಪಡದೆ ಮುಂದುವರಿಯುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
ಆದುದರಿಂದ, ಯೆಹೋವನಿಗೆ ಯಾವುದು ಮೆಚ್ಚಿಗೆಯಾಗಿಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ ಅಥವಾ ವಿವೇಚಿಸಬೇಕಾಗಿದೆ. ಇದು ಕಷ್ಟಕರವೋ? ನೀವು ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕೆಂದೂ, ಆದರೆ ಕಡುಬು, ಐಸ್-ಕ್ರೀಮ್, ಮತ್ತು ಇಂಥವುಗಳನ್ನು ತಿನ್ನಬಾರದೆಂದು ನಿಮ್ಮ ಡಾಕ್ಟರ್ ನಿಮಗೆ ಹೇಳುತ್ತಾರೆ. ಯಾವ ಪಟ್ಟಿಯಲ್ಲಿ ಕೇಕ್ ಸೇರಿದೆ ಎಂಬುದನ್ನು ಗ್ರಹಿಸುವುದು ನಿಮಗೆ ಕಷ್ಟಕರವಾಗಿರುವುದೋ? ಈಗ ಪುನಃ ಒಮ್ಮೆ ದೇವರಾತ್ಮದ ಫಲಗಳು ಮತ್ತು ಶರೀರಭಾವದ ಕರ್ಮಗಳನ್ನು ನೋಡಿರಿ. ಮೇಲೆ ಸೂಚಿಸಲ್ಪಟ್ಟ ಮ್ಯೂಸಿಕ್ ಆಲ್ಬಮ್ ಯಾವ ಪಟ್ಟಿಗೆ ಸೇರಿಕೊಂಡಿದೆ? ಅದು ಯಾವುದೇ ರೀತಿಯಲ್ಲಿ ಪ್ರೀತಿ, ಉಪಕಾರ, ಶಮೆದಮೆ, ಅಥವಾ ದೇವರಾತ್ಮದ ಫಲಗಳಿಗೆ ಸಂಬಂಧಪಟ್ಟ ಯಾವುದೇ ಗುಣಗಳಿಗೆ ಹೋಲಿಕೆಯಲ್ಲಿರುವುದಿಲ್ಲ. ಈ ರೀತಿಯ ಸಂಗೀತವು ದೇವರ ಯೋಚನಾಧಾಟಿಗೆ ಹೊಂದಾಣಿಕೆಯಲ್ಲಿಲ್ಲ ಎಂಬುದನ್ನು ಗ್ರಹಿಸಲು ಒಬ್ಬನಿಗೆ ನೇರವಾದ ನಿಯಮದ ಅಗತ್ಯವಿರುವುದಿಲ್ಲ. ಇದೇ ಮೂಲತತ್ತ್ವವು ಪುಸ್ತಕಗಳು, ಚಲನಚಿತ್ರಗಳು, ಟೆಲಿವಿಷನ್ ಕಾರ್ಯಕ್ರಮಗಳು, ಕಂಪ್ಯೂಟರ್ ಆಟಗಳು, ವೆಬ್ ಸೈಟ್ಗಳು, ಮತ್ತು ಇತ್ಯಾದಿಗಳಿಗೆ ಅನ್ವಯಿಸುವುದು.
ಸ್ವೀಕಾರಾರ್ಹ ವೈಯಕ್ತಿಕ ತೋರಿಕೆ
ಉಡುಪು ಮತ್ತು ಶೃಂಗಾರದ ಮೇಲೆ ಪ್ರಭಾವ ಬೀರುವ ಮೂಲತತ್ತ್ವಗಳನ್ನು ಸಹ ಬೈಬಲು ಒದಗಿಸುತ್ತದೆ. ಇವು ಯೋಗ್ಯವಾದ ಮತ್ತು ಮನಸ್ಸಿಗೆ ಹಿಡಿಸುವಂಥ ವೈಯಕ್ತಿಕ ತೋರಿಕೆಯನ್ನು ಕಾಪಾಡಿಕೊಳ್ಳುವಂತೆ ಪ್ರತಿಯೊಬ್ಬ ಕ್ರೈಸ್ತನನ್ನು ಶಕ್ತಗೊಳಿಸುತ್ತವೆ. ಈ ವಿಷಯದಲ್ಲೂ, ಯೆಹೋವನನ್ನು ಪ್ರೀತಿಸುವಂಥ ವ್ಯಕ್ತಿಯೊಬ್ಬನು ತನ್ನ ಮನಬಂದಂತೆ ಮಾಡುವುದಕ್ಕೆ ಬದಲಾಗಿ ಈ ಸಂದರ್ಭವನ್ನು ತನ್ನ ಸ್ವರ್ಗೀಯ ತಂದೆಯ ಮನಸ್ಸನ್ನು ಸಂತೋಷಪಡಿಸಲಿಕ್ಕಾಗಿರುವ ಒಂದು ಸದವಕಾಶವಾಗಿ ಪರಿಗಣಿಸುತ್ತಾನೆ. ನಾವು ಈಗಾಗಲೇ ನೋಡಿರುವಂತೆ, ಒಂದು ವಿಚಾರದಲ್ಲಿ ಯೆಹೋವನು ಯಾವುದೇ ನಿರ್ದಿಷ್ಟ ನಿಯಮವನ್ನು ಕೊಡದಿರುವಂಥದ್ದು, ತನ್ನ ಜನರು ಆ ವಿಷಯದಲ್ಲಿ ಏನು ಮಾಡುತ್ತಾರೆಂಬುದರ ಕುರಿತು ಆತನು ಚಿಂತಿತನಾಗಿರುವುದಿಲ್ಲ ಎಂಬುದನ್ನು ಸೂಚಿಸುವುದಿಲ್ಲ. ಸ್ಟೈಲ್ಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾಗುತ್ತವೆ, ಮತ್ತು ಒಂದೇ ಸ್ಥಳದಲ್ಲಿ ಕೂಡ ಆಗಿಂದಾಗ್ಗೆ ಬದಲಾಗುತ್ತಿರುತ್ತವೆ. ಆದರೂ, ಎಲ್ಲಾ ಸಮಯಗಳಲ್ಲೂ ಎಲ್ಲಾ ಸ್ಥಳಗಳಲ್ಲೂ ತನ್ನ ಜನರನ್ನು ಮಾರ್ಗದರ್ಶಿಸುವಂತೆ ದೇವರು ಮೂಲತತ್ತ್ವಗಳನ್ನು ಒದಗಿಸಿದ್ದಾನೆ.
ಉದಾಹರಣೆಗೆ, 1 ತಿಮೊಥೆಯ 2:9, 10 ಹೇಳುವುದು: “ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” ಆದುದರಿಂದ, ತಮ್ಮ ಕ್ಷೇತ್ರದಲ್ಲಿರುವ ಜನರು “ದೇವಭಕ್ತೆಯರೆನಿಸಿಕೊಳ್ಳುವ”ವರಿಂದ ಯಾವ ರೀತಿಯ ತೋರಿಕೆಯನ್ನು ನಿರೀಕ್ಷಿಸುತ್ತಾರೆ ಎಂಬುದಕ್ಕೆ ಕ್ರೈಸ್ತ ಸ್ತ್ರೀಯರು—ಮತ್ತು ಪುರುಷರು—ಗಮವನ್ನು ಕೊಡಬೇಕು. ಕ್ರೈಸ್ತನೊಬ್ಬನು ತನ್ನ ತೋರಿಕೆಯು ತಾನು ಕೊಂಡೊಯ್ಯುವ ಬೈಬಲ್ ಸಂದೇಶವನ್ನು ಇತರರು ಹೇಗೆ ವೀಕ್ಷಿಸುವಂತೆ ಮಾಡುವುದು ಎಂಬುದಕ್ಕೆ ಗಮನಕೊಡಬೇಕು. (2 ಕೊರಿಂಥ 6:3) ಒಬ್ಬ ಆದರ್ಶಪ್ರಾಯ ಕ್ರೈಸ್ತನು ತನ್ನ ಸ್ವಂತ ಆಯ್ಕೆಗಳು ಅಥವಾ ಸಂಭಾವ್ಯ ಹಕ್ಕುಗಳ ವಿಷಯದಲ್ಲಿ ಹೆಚ್ಚು ಚಿಂತಿತನಾಗಿರುವ ಬದಲು, ಅಪಕರ್ಷಣೆಯ ಮೂಲವಾಗಿರುವುದರ ಅಥವಾ ಇತರರಿಗೆ ಒಂದು ಅಡ್ಡಿತಡೆಯಾಗುವುದರ ಕುರಿತು ಚಿಂತಿತನಾಗಿರುವನು.—ಮತ್ತಾಯ 18:6; ಫಿಲಿಪ್ಪಿ 1:10.
ವೈಯಕ್ತಿಕ ತೋರಿಕೆಯಲ್ಲಿ ಒಂದು ನಿರ್ದಿಷ್ಟವಾದ ಸ್ಟೈಲ್ ಇತರರನ್ನು ಎಡವಿಸುತ್ತದೆ ಅಥವಾ ಇತರರಿಗೆ ಅಡಚಣೆಯನ್ನು ಉಂಟುಮಾಡುತ್ತದೆಂಬುದನ್ನು ಒಬ್ಬ ಕ್ರೈಸ್ತನು ಕಂಡುಕೊಳ್ಳುವುದಾದರೆ, ತನ್ನ ವೈಯಕ್ತಿಕ ಆಯ್ಕೆಗಳಿಗಿಂತಲೂ ಇತರರ ಆತ್ಮಿಕ ಕ್ಷೇಮಕ್ಕೆ ಆದ್ಯತೆಯನ್ನು ನೀಡುವ ಮೂಲಕ ಅಪೊಸ್ತಲ ಪೌಲನನ್ನು ಅನುಕರಿಸಬಲ್ಲನು. ಪೌಲನು ಹೇಳಿದ್ದು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1) ಮತ್ತು ಯೇಸುವಿನ ಕುರಿತು ಪೌಲನು ಬರೆದದ್ದು: “ಯಾಕಂದರೆ ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ.” ಪೌಲನು ಕ್ರೈಸ್ತರಿಗೆ ಕೊಡುತ್ತಿರುವ ಉಪದೇಶವು ಸ್ಪಷ್ಟವಾಗಿದೆ: “ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ.”—ರೋಮಾಪುರ 15:1-3.
ನಮ್ಮ ಗ್ರಹಣಶಕ್ತಿಗಳನ್ನು ಚುರುಕುಗೊಳಿಸುವುದು
ಒಂದು ವಿಚಾರದಲ್ಲಿ ಯೆಹೋವನು ನಿರ್ದಿಷ್ಟವಾದ ಯಾವುದೇ ಮಾರ್ಗದರ್ಶನವನ್ನು ಕೊಡದಿರುವುದಾದರೂ ಆತನನ್ನು ಹೇಗೆ ಮೆಚ್ಚಿಸಸಾಧ್ಯವಿದೆ ಎಂಬುದನ್ನು ತಿಳಿಯಲಿಕ್ಕಾಗಿ ನಾವು ನಮ್ಮ ಗ್ರಹಣಶಕ್ತಿಗಳನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? ನಾವು ಆತನ ವಾಕ್ಯವನ್ನು ದಿನಾಲೂ ಓದುವುದಾದರೆ, ಅದನ್ನು ಕ್ರಮವಾಗಿ ಅಧ್ಯಯನ ಮಾಡುವುದಾದರೆ, ಮತ್ತು ನಾವು ಓದುವಂಥದನ್ನು ಮನನ ಮಾಡುವುದಾದರೆ, ನಾವು ನಮ್ಮ ಗ್ರಹಣಶಕ್ತಿಗಳಲ್ಲಿ ಬೆಳವಣಿಗೆಯನ್ನು ಕಂಡುಕೊಳ್ಳಬಲ್ಲೆವು. ಈ ರೀತಿಯ ಪ್ರಗತಿಯು ಇದ್ದಕ್ಕಿದ್ದಂತೆ ತೋರಿಬರುವುದಿಲ್ಲ. ಒಂದು ಮಗುವಿನ ಶಾರೀರಿಕ ಬೆಳವಣಿಗೆಯಂತೆಯೇ, ಆತ್ಮಿಕ ಪ್ರಗತಿಯೂ ಕ್ರಮವಾಗಿ ನಡೆಯುತ್ತದೆ ಮತ್ತು ಅದನ್ನು ತತ್ಕ್ಷಣವೇ ಗ್ರಹಿಸಲಾಗುವುದಿಲ್ಲ. ಆದುದರಿಂದ ತಾಳ್ಮೆಯ ಅಗತ್ಯವಿದೆ, ಮತ್ತು ನಾವು ತತ್ಕ್ಷಣದ ಪ್ರಗತಿಯನ್ನು ಕಂಡುಕೊಳ್ಳದಿರುವಲ್ಲಿ ಜಿಗುಪ್ಸೆಗೊಳ್ಳಬಾರದು. ಇನ್ನೊಂದು ಬದಿಯಲ್ಲಿ, ಕೇವಲ ಹೆಚ್ಚಿನ ಸಮಯವು ಗತಿಸುವುದರಿಂದಲೇ ನಮ್ಮ ಗ್ರಹಣಶಕ್ತಿಗಳು ಚುರುಕುಗೊಳ್ಳುವುದಿಲ್ಲ. ಈ ರೀತಿಯ ಸಮಯವು, ಮೇಲೆ ಸೂಚಿಸಲ್ಪಟ್ಟಂತೆ ದೇವರ ವಾಕ್ಯದ ಕ್ರಮವಾದ ಪರಿಗಣನೆಯೊಂದಿಗೆ ತುಂಬಿರಬೇಕು, ಮತ್ತು ನಮ್ಮಿಂದ ಸಾಧ್ಯವಾಗುವಷ್ಟು ನಾವು ಆ ವಾಕ್ಯವನ್ನು ಅನ್ವಯಿಸಿಕೊಳ್ಳಬೇಕು.—ಇಬ್ರಿಯ 5:14.
ದೇವರ ನಿಯಮಗಳು ನಮ್ಮ ವಿಧೇಯತೆಯನ್ನು ಪರೀಕ್ಷಿಸುವಾಗ, ಆತನ ಮೂಲತತ್ತ್ವಗಳು ನಮ್ಮ ಆತ್ಮಿಕತೆಯ ಗಾಢತೆಯನ್ನು ಮತ್ತು ಆತನನ್ನು ಮೆಚ್ಚಿಸಲು ನಮಗಿರುವ ಬಯಕೆಯನ್ನು ಪರೀಕ್ಷಿಸುತ್ತವೆ ಎಂದು ಹೇಳಬಹುದು. ನಾವು ಆತ್ಮಿಕವಾಗಿ ಬೆಳೆದಂತೆ, ಯೆಹೋವನನ್ನು ಮತ್ತು ಆತನ ಮಗನನ್ನು ಅನುಕರಿಸುವುದಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಬಲ್ಲೆವು. ನಾವು ನಮ್ಮ ನಿರ್ಣಯಗಳನ್ನು ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿರುವಂತೆ ದೇವರ ಯೋಚನಾಧಾಟಿಯ ಮೇಲೆ ಕೇಂದ್ರೀಕರಿಸಲು ಮನಸ್ಸುಳ್ಳವರಾಗಿರುವೆವು. ನಾವು ಮಾಡುವ ಎಲ್ಲದರಲ್ಲಿಯೂ ನಮ್ಮ ಸ್ವರ್ಗೀಯ ತಂದೆಯನ್ನು ಮೆಚ್ಚಿಸುವಾಗ, ನಮ್ಮ ಸಂತೋಷವು ಸಹ ಹೆಚ್ಚಾಗುತ್ತಿರುವುದನ್ನು ನಾವು ಕಂಡುಕೊಳ್ಳುವೆವು.
[ಪುಟ 23ರಲ್ಲಿರುವ ಚಿತ್ರಗಳು]
ಉಡುಗೆಯ ಸ್ಟೈಲ್ಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ, ಆದರೆ ಬೈಬಲ್ ಮೂಲತತ್ತ್ವಗಳು ನಮ್ಮ ಆಯ್ಕೆಗಳನ್ನು ಮಾರ್ಗದರ್ಶಿಸಬೇಕು