ನಂಬಿಕೆಯನ್ನೂ, ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೋ
ಮೊದಲನೆಯ ತಿಮೊಥೆಯ ಪತ್ರದಿಂದ ಅತ್ಯುಜ್ವಲ ಭಾಗಗಳು
ಅಪೊಸ್ತಲ ಪೌಲನು ಸುಮಾರು ಸಾ.ಶ.56 ರಲ್ಲಿ ಎಫೆಸದ ಹಿರಿಯರಿಗೆ, ಅವರಲ್ಲಿ “ಕ್ರೂರವಾದ ತೋಳಗಳು” ಏಳುವವೆಂದೂ ಮತ್ತು “ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು” ಎಂದು ಎಚ್ಚರಿಸಿದ್ದನು. (ಅ.ಕೃತ್ಯಗಳು 20:29, 30) ಕೆಲವೇ ವರ್ಷಗಳಲ್ಲಿ ಧರ್ಮಭೃಷ್ಟತೆಯ ಕಲಿಸುವಿಕೆಯು ಎಷ್ಟೊಂದು ಗಂಭೀರವಾಗಿತ್ತೆಂದರೆ, ಸಭೆಯ ಶುದ್ಧತ್ವವನ್ನು ಕಾಪಾಡಲು ಮತ್ತು ನಂಬಿಕೆಯಲ್ಲಿ ಇರಲು ಜತೆ ವಿಶ್ವಾಸಿಗಳಿಗೆ ಸಹಾಯ ಮಾಡಲು, ಸಭೆಯಲ್ಲಿಯೇ ಆತ್ಮೀಕ ಯುದ್ಧವನ್ನು ಹೋರಾಡುವಂತೆ ಪೌಲನು ತಿಮೊಥೆಯನಿಗೆ ಒತ್ತಾಯಿಸುತ್ತಾನೆ. ಸಾ.ಶ. 64 ರ ಸುಮಾರಿಗೆ ಮಕೆದೋನ್ಯದಿಂದ ತಿಮೊಥೆಯನಿಗೆ ತನ್ನ ಮೊದಲನೆಯ ಪತ್ರವನ್ನು ಪೌಲನು ಬರೆಯಲು ಮುಖ್ಯ ಕಾರಣವಾಗಿತ್ತು.
ಹಿರಿಯರುಗಳ ಕರ್ತವ್ಯಗಳ, ದೇವ-ನೇಮಿತ ಸ್ತ್ರೀಯರ ಸ್ಥಾನಗಳ, ಹಿರಿಯರುಗಳ ಮತ್ತು ಶುಶ್ರೂಷೆ ಸೇವಕರ ಅರ್ಹತೆಗಳ ಮತ್ತು ಇನ್ನಿತರ ವಿಚಾರಗಳ ಕುರಿತು ತಿಮೊಥೆಯನಿಗೆ ಉಪದೇಶಿಸಲಾಯಿತು. ಅಂತಹ ಉಪದೇಶವು ಇಂದು ಕೂಡಾ ಪ್ರಯೋಜನಕರವಾಗಿದೆ.
ನಂಬಿಕೆಯಲ್ಲಿರುವಂತೆ ಎಚ್ಚರಿಕೆ
ನಂಬಿಕೆ ಮತ್ತು ಒಳ್ಳೇ ಮನಸ್ಸಾಕ್ಷಿ ಬಿಡದೆ ಹಿಡುಕೊಳ್ಳುವ ಬುದ್ಧಿವಾದದೊಂದಿಗೆ ಪೌಲನು ಆರಂಭಿಸುತ್ತಾನೆ. (1 ತಿಮೊ. 1:1-20) ಎಫೆಸದಲ್ಲಿಯೇ ಇರುವಂತೆ ಮತ್ತು “ಕೆಲವರಿಗೆ—ನೀವು ಬೇರೆ ಉಪದೇಶವನ್ನು ಮಾಡಬಾರದೆಂದು ಆಜ್ಞಾಪಿಸಲು” ತಿಮೊಥೆಯನನ್ನು ಉತ್ತೇಜಿಸುತ್ತಾನೆ. ಅವನು ಯೇಸುವಿನ ಅನುಯಾಯಿಗಳನ್ನು ಹಿಂಸಿಸುತ್ತಿರುವಾಗ, ತಾನು ಅಜ್ಞಾನಿಯಾಗಿಯೂ, ನಂಬಿಕೆಯ ಕೊರತೆಯಿಂದಲೂ ವರ್ತಿಸಿದೆನು ಎಂದು ಅಂಗೀಕಾರ ಮಾಡುತ್ತಾ, ಅವನ ವಶಕ್ಕೆ ಒಪ್ಪಿಸಿದ ಶುಶ್ರೂಷೆಗಾಗಿ ಪೌಲನು ಅಭಾರಿಯಾಗಿದ್ದನು. ಆತ್ಮೀಕ ಯುದ್ಧವನ್ನು ಹೋರಾಡುತ್ತಾ ಮುಂದುವರಿಯಲು, “ನಂಬಿಕೆಯನ್ನೂ, ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೊಳ್ಳಲು” ಮತ್ತು “ತಮ್ಮ ನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಟ್ಟವರಂತೆ” ಆಗದಿರಲು ತಿಮೊಥೆಯನಿಗೆ ವಿಧಿಸುತ್ತಾನೆ.
ಆರಾಧನೆಯ ಕುರಿತು ಬುದ್ಧಿವಾದ
ನಂತರ, “ಅನ್ಯ ಜನರಿಗೆ ನಂಬಿಕೆಯ ಮತ್ತು ಸತ್ಯದ ವಿಷಯದಲ್ಲಿ ಬೋಧಕನೋಪಾದಿ” ಅವನು ಬುದ್ಧಿವಾದವನ್ನು ಕೊಡುತ್ತಾನೆ. (2:1-15) ಕ್ರೈಸ್ತರು ಸಮಾಧಾನದಿಂದ ಕಾಲಕ್ಷೇಪಮಾಡಲಾಗುವಂತೆ ಉನ್ನತ ಸ್ಥಾನದಲ್ಲಿರುವವರಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಬೇಕಿತ್ತು. ದೇವರ ಚಿತ್ತವೇನಂದರೆ ಎಲ್ಲಾ ಜನರು ರಕ್ಷಣೆ ಪಡೆಯಬೇಕೆಂದೇ ಮತ್ತು ಕ್ರಿಸ್ತನು “ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಕೊಟ್ಟನು” ಎಂಬ ಬೋಧನೆಯು ಅತ್ಯಾವಶ್ಯಕವಾಗಿದೆ. ಸ್ತ್ರೀಯರು ಮರ್ಯಾದೆಗೆ ತಕ್ಕ ಹಾಗೆ ತಮ್ಮನ್ನು ಉಟ್ಟುಕೊಳ್ಳಬೇಕೆಂತಲೂ, ಪುರುಷನೊಬ್ಬನ ಮೇಲೆ ಅಧಿಕಾರ ನಡಿಸಬಾರದೆಂತಲೂ ಪೌಲನು ತೋರಿಸಿದನು.
ಸಭೆಯು ಯೋಗ್ಯ ರೀತಿಯಲ್ಲಿ ಸಂಸ್ಥಾಪಿಸಲ್ಪಡಬೇಕು. (3:1-16) ಆದುದರಿಂದ ಪೌಲನು ಮೇಲ್ವಿಚಾರಕರಿಗೆ ಮತ್ತು ಶುಶ್ರೂಷಾ ಸೇವಕರಿಗೆ ಇರಬೇಕಾದ ಅರ್ಹತೆಗಳನ್ನು ನಿರ್ದೇಶಿಸಿದನು. ಅಪೊಸ್ತಲನು ಬರೆದ ರೀತಿಯಿಂದ, “ಸತ್ಯಕ್ಕೆ ಸ್ತಂಭವೂ, ಆಧಾರವೂ ಆಗಿರುವ” ಸಭೆಯಲ್ಲಿ ತಿಮೊಥೆಯನು ಸ್ವತಹ ತನ್ನನ್ನು ಹೇಗೆ ನಡಿಸಿಕೊಳ್ಳಬೇಕು ಎಂದು ತಿಳಿದುಕೊಂಡಿರಬೇಕು.
ಸುಳ್ಳು ಬೋಧನೆಯ ವಿರುದ್ಧ ತನ್ನನ್ನು ಕಾಪಾಡಿಕೊಳ್ಳಲು, ಅವನಿಗೆ ನೆರವಾಗಲು ಪೌಲನು ತಿಮೊಥೆಯನಿಗೆ ವೈಯಕ್ತಿಕ ಬುದ್ಧಿವಾದವನ್ನು ತಿಳಿಸುತ್ತಾನೆ. (4:1-16) ಮುಂದಣ ದಿನಗಳಲ್ಲಿ ಕೆಲವರು ನಂಬಿಕೆಯಿಂದ ಭ್ರಷ್ಟರಾಗುವರು. ಆದರೆ ಅವನ ವಿಷಯದಲ್ಲೂ, ಅವನ ಉಪದೇಶದ ವಿಷಯದಲ್ಲೂ ಸ್ಥಿರತೆಯಿಂದ ಗಮನ ಕೊಡುವುದರ ಮೂಲಕ, ತಿಮೊಥೆಯನು ‘ಅವನನ್ನೂ, ಅವನ ಉಪದೇಶ ಕೇಳುವವರನ್ನೂ ರಕ್ಷಿಸಿಕೊಳ್ಳುವನು.’
ಎಳೆಯರು, ವಯಸ್ಕರು, ಹೀಗೆ ವ್ಯಕ್ತಿಗಳೊಂದಿಗೆ ವ್ಯವಹರಿಸುವುದರ ಮೇಲೂ ತಿಮೊಥೆಯನು ಸಲಹೆಯನ್ನು ಪಡೆದನು. (5:1-25) ಉದಾಹರಣೆಗೆ, ಸ್ವದರ್ತನೆಯ ಪ್ರಾಯ ಸಂದ ಕ್ರೈಸ್ತ ವಿಧವೆಯರಿಗಾಗಿ ತಕ್ಕದಾದ್ದ ಒದಗಿಸುವಿಕೆಗಳನ್ನು ಮಾಡಬೇಕಾಗಿತ್ತು. ಹರಟೆಮಾತಾಡುವುದರ ಬದಲು, ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಒಳ್ಳೆಯದಾಗಿ ಇರಬೇಕು. ಉತ್ತಮವಾಗಿ ಮೇಲ್ವಿಚಾರವನ್ನು ನಡಿಸುವ ಹಿರಿಯರನ್ನು ಇಮ್ಮಡಿ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.
ಸಂತುಷ್ಟಿ ಸಹಿತವಾದ ದಿವ್ಯ ಭಕ್ತಿ
ದಿವ್ಯ ಭಕ್ತಿಯ ಸಲಹೆಯೊಂದಿಗೆ ಪೌಲನ ಪತ್ರವು ಮುಕ್ತಾಯಗೊಳ್ಳುತ್ತದೆ. (6:1-21) “ಸಂತುಷ್ಟಿ ಸಹಿತವಾದ ದಿವ್ಯ ಭಕ್ತಿಯು” ದೊಡ್ಡ ಲಾಭವೇ, ಆದರೆ ಐಶ್ವರ್ಯವಂತರಾಗುವ ದೃಢಮನಸ್ಸು ನಾಶಕ್ಕೆ ಮತ್ತು ಸಂಹಾರವಿನಾಶಕ್ಕೆ ನಡಿಸುವುದು. ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡುವಂತೆ ಮತ್ತು ‘ನಿತ್ಯ ಜೀವದ ಮೇಲೆ ದೃಢವಾದ ಹಿಡಿತವಿಟ್ಟುಕೊಳ್ಳುವಂತೆ’ ಪೌಲನು ತಿಮೊಥೆಯನಿಗೆ ಪ್ರೇರೇಪಿಸುತ್ತಾನೆ. ವಾಸ್ತವವಾದ ಜೀವವನ್ನು ಬಿಡದೆ ಹಿಡುಕೊಳ್ಳಬೇಕಾದರೆ, ಐಶ್ವರ್ಯವಂತರು “ಅವರ ನಿರೀಕ್ಷೆಯನ್ನು ಅಸ್ಥಿರವಾದ ಐಶ್ವರ್ಯದ ಮೇಲೆ ಇಡದೆ, ದೇವರ ಮೇಲೆ ಇಡಬೇಕಾಗಿದೆ.” (w91 1/15)
[ಪುಟ 27 ರಲ್ಲಿರುವ ಚೌಕ/ಚಿತ್ರಗಳು]
ಮಕ್ಕಳನ್ನು ಹೆರುವುದರ ಮೂಲಕ ರಕ್ಷಣೆ ಹೊಂದುವುದು: ನಿತ್ಯಜೀವದ ರಕ್ಷಣೆಯ ಕುರಿತು ಪೌಲನು ಮಾತಾಡದೆ, ಅವನು ಬರೆಯುವಾಗ, ದೇವ ಭಕ್ತಿಯ ಸ್ತ್ರೀಯೊಬ್ಬಳ ಯೋಗ್ಯ ಪಾತ್ರದ ಕುರಿತು ಮಾತಾಡುತ್ತಾನೆ: “ಅವಳು ಮಾನಸ್ಥೆಯರಾಗಿ ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವದರಲ್ಲಿ ರಕ್ಷಣೆ ಹೊಂದುವಳು.” (1 ತಿಮೊಥೆಯನಿಗೆ 2:11—15) ಮಕ್ಕಳನ್ನು ಹೆರುವುದರ ಮೂಲಕ, ಅವಳ ಮಕ್ಕಳ ಪರಿಪಾಲನೆ ಮಾಡುವ ಮೂಲಕ, ಮತ್ತು ಮನೆವಾರ್ತೆಯ ನಿರ್ವಹಣೆ ಮಾಡುವುದರ ಮೂಲಕ, ಸ್ತ್ರೀಯೊಬ್ಬಳು ಕೆಲಸವಿಲ್ಲದೆ ಹರಟೆ ಮಾತಾಡುವವಳೂ, ಇತರ ಜನರ ವ್ಯವಹಾರಗಳಲ್ಲಿ ತಲೇಹಾಕುವವಳೂ ಆಗುವುದರಿಂದ ತಡೆದು “ಭದ್ರತೆಯಲ್ಲಿಡಲ್ಪಡುತ್ತಾಳೆ (ರಕ್ಷಿಸಲ್ಪಡುತ್ತಾಳೆ).” (1 ತಿಮೊಥೆಯನಿಗೆ 5:11—15) ಅವಳ ಗೃಹಕೃತ್ಯಗಳು, ಯೆಹೋವನಿಗೆ ಅವಳು ಸಲ್ಲಿಸುವ ಸೇವೆಗೆ ಪೂರಕವಾಗಿರುವವು. ಎಲ್ಲಾ ಕ್ರೈಸ್ತರು ತಮ್ಮ ನಡತೆಯನ್ನು ಕಾದುಕೊಳ್ಳಬೇಕು ಮತ್ತು ಅವರ ಸಮಯದ ಸದುಪಯೋಗವನ್ನು ಮಾಡ ತಕ್ಕದ್ದು.—ಎಫೆಸದವರಿಗೆ 5:15, 16.