ನಿಷ್ಠೆಯಿಂದ ಯೆಹೋವನೊಂದಿಗೆ ಕೆಲಸ ಮಾಡುವದು
“ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ, ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರ ಪಡಿಸುತ್ತಿದ್ದೇನೆ.”—ಕೀರ್ತನೆ 71:17.
1. ಕೆಲಸವು ಯೆಹೋವನಿಂದ ಒಂದು ವರದಾನವೆಂದು ನಾವು ಯಾಕೆ ಹೇಳಸಾಧ್ಯವಿದೆ?
ದೇವರು ಮನುಷ್ಯನಿಗೆ ಕೊಟ್ಟ ವರದಾನಗಳಲ್ಲಿ ಕೆಲಸ ಒಂದಾಗಿದೆ. ನಮ್ಮ ಮೂಲ ಹೆತ್ತವರಾದ ಆದಾಮ ಮತ್ತು ಹವ್ವರಿಗೆ, ಯೆಹೋವನು ಹೇಳಿದ್ದು: “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” ಅದೊಂದು ಪಂಥಾಹ್ವಾನವುಳ್ಳ ಕೆಲಸದ ನೇಮಕವಾಗಿತ್ತು, ಆದರೆ ಅದು ಅವರ ಸಾಮರ್ಥ್ಯಗಳೊಳಗೆ ಇತ್ತು. ಅವರೊಂದಿಗೆ ಐಹಿಕ ಮನೆಯಲ್ಲಿ ಪಾಲಿಗರಾಗಿದ್ದ ಪ್ರಾಣಿಗಳ ಅನುಭವವನ್ನು ಮೀರುವ, ಜೀವಿತದ ಅವರ ಆನಂದವನ್ನು ಹೆಚ್ಚಿಸಬೇಕಾದರೆ, ದೈಹಿಕ ಮತ್ತು ಮಾನಸಿಕ ಪ್ರಯತ್ನದ ಆವಶ್ಯಕತೆ ಇದೆ.—ಆದಿಕಾಂಡ 1:28.
2, 3. (ಎ) ಅನೇಕರಿಗೆ ಕೆಲಸವು ಏನಾಗಿ ಪರಿಣಮಿಸಿದೆ ಮತ್ತು ಯಾಕೆ? (ಬಿ) ಒಂದು ವಿಶೇಷ ಕಾರ್ಯವನ್ನು ಮಾಡಲು ಇರುವ ಯಾವ ಅವಕಾಶವನ್ನು ನಾವು ಗಮಸಿಸುವ ಅಗತ್ಯವಿದೆ?
2 ನಮ್ಮ ಈ ಅಪರಿಪೂರ್ಣ ಸ್ಥಿತಿಯಲ್ಲೂ, ವಿವೇಕಿ ಮನುಷ್ಯನಾದ ಸೊಲೊಮೋನನು ಬರೆದದ್ದು: “ಪ್ರಯಾಸದ ಕೆಲಸದಿಂದ” ಉಂಟಾಗುವ “ಸುಖವು” “ದೇವರ ವರದಾನವಾಗಿದೆ.” (ಪ್ರಸಂಗಿ 3:13) ಮನುಷ್ಯನು ಇನ್ನೂ ಮನಸ್ಸಿನ ಮತ್ತು ದೈಹಿಕ ಸಾಮರ್ಥ್ಯವನ್ನು ಉಪಯೋಗಿಸುವ ಅಗತ್ಯವಿರುತ್ತದೆ. ಕೆಲಸರಹಿತರಾಗಿರುವದು ಖಿನ್ನತೆಯನ್ನುಂಟುಮಾಡುತ್ತದೆ. ಆದರೂ, ಎಲ್ಲಾ ಕೆಲಸಗಳು ಹಿತಕರ ಇಲ್ಲವೆ ಪ್ರಯೋಜನಕಾರಿಯಾಗಿರುವದಿಲ್ಲ. ಹೆಚ್ಚಿನವರಿಗೆ ಕೆಲಸವು ಗುಲಾಮ ಚಾಕರಿಯಂತಿದ್ದು, ಜೀವನವನ್ನು ದೂಡಲು ಅಗತ್ಯವಿರುವದರಿಂದ ಮಾಡಬೇಕಾಗಿದೆ.
3 ಹಾಗಿದ್ದರೂ, ನಾವೆಲ್ಲರೂ ಭಾಗವಹಿಸುವಂತೆ ಆಮಂತ್ರಿಸಲ್ಪಡುವ, ನಿಜವಾಗಿಯೂ ಪ್ರತಿಫಲದಾಯಕವಾಗಿರುವ ಕೆಲಸವೊಂದು ಇದೆ. ಆದರೆ ಅದರಲ್ಲಿ ಭಾಗವಹಿಸುವವರಿಗೆ ಅನೇಕ ವಿರೋಧಿಗಳಿದ್ದಾರೆ ಮತ್ತು ಜಯಿಸಬೇಕಾದ ಸಮಸ್ಯೆಗಳಿವೆ. ನಾವು ಈ ಕೆಲಸಕ್ಕೆ ಅರ್ಹರಾಗುವದು ಯಾಕೆ ಪ್ರಾಮುಖ್ಯವಾಗಿದೆ? ಇದನ್ನು ನಾವು ಹೇಗೆ ಮಾಡಸಾಧ್ಯವಿದೆ? ಈ ಪ್ರಶ್ನೆಗಳಿಗೆ ಉತ್ತರವನ್ನೀಯುವ ಮುಂಚೆ, ನಾವು ಇದನ್ನು ಮೊದಲು ಪರಿಗಣಿಸೋಣ:
ನಾವು ಯಾರಿಗಾಗಿ ಕೆಲಸ ಮಾಡುತ್ತೇವೆ?
4. ಯೇಸುವಿಗೆ ಯಾವ ವಿಧದ ಕೆಲಸವು ಸಂತೋಷ ಮತ್ತು ಸಂತೃಪ್ತಿಯನ್ನು ತಂದವು?
4 ಯೇಸು ಕ್ರಿಸ್ತನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ, ಅವನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಯೆಹೋವನಿಗೆ ನಿಷ್ಠೆಯಿಂದ ಕೆಲಸ ಮಾಡುವದು ಯೇಸುವಿಗೆ ಬಹಳ ಸಂತೋಷ ಮತ್ತು ತೃಪ್ತಿಯನ್ನು ತಂದಿತ್ತು. ಅದು ಅವನಿಗೆ ಜೀವಿತದಲ್ಲಿ ಒಂದು ಉದ್ದೇಶವನ್ನು ಕೊಟ್ಟಿತ್ತು, ಮತ್ತು ಅವನ ಮೂರುವರೆ ವರ್ಷಗಳ ಶುಶ್ರೂಷೆಯ ಅಂತ್ಯದಲ್ಲಿ ಅವನ ಸ್ವರ್ಗೀಯ ತಂದೆಗೆ ಅವನು ಸತ್ಯತೆಯಿಂದ ಹೀಗೆ ಹೇಳಶಕ್ತನಾಗಿದ್ದನು: “ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆ ಪಡಿಸಿದೆನು.” (ಯೋಹಾನ 17:4) ದೈಹಿಕ ಆಹಾರದಂತೆಯೇ, ಒಂದು ಆತ್ಮಿಕ ಪ್ರಮಾಣದ ಕೆಲಸವೂ ಪುಷ್ಟಿಕರವಾಗಿರುತ್ತದೆ. ಇದನ್ನು ಇನ್ನೊಂದು ಸಂದರ್ಭದಲ್ಲಿ ಒತ್ತಿಹೇಳುತ್ತಾ, ಯೇಸುವು ಹೀಗೆ ಬುದ್ಧಿ ಹೇಳಿದನು: “ದುಡಿಯಿರಿ, ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ, ನಿತ್ಯ ಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯಿರಿ.” (ಯೋಹಾನ 6:27) ಇದಕ್ಕೆ ವ್ಯತಿರಿಕ್ತವಾಗಿ, ಆತ್ಮಿಕವಾಗಿ ಫಲದಾಯಕವಲ್ಲದ ಕೆಲಸವು ಆಶಾಭಂಗ ಮತ್ತು ಮರಣಕ್ಕೆ ನಡಿಸುತ್ತದೆ.
5. ಯೇಸುವು ಮಾಡಿದ ಒಳ್ಳೇ ಕೆಲಸವನ್ನು ಯಾರು ವಿರೋಧಿಸಿದರು, ಮತ್ತು ಯಾಕೆ?
5 “ನನ್ನ ತಂದೆಯು ಇಂದಿನ ವರೆಗೂ ಕೆಲಸ ಮಾಡುತ್ತಾನೆ, ನಾನೂ ಕೆಲಸ ಮಾಡುತ್ತೇನೆ.” 38 ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ಮನುಷ್ಯನನ್ನು ಸಬ್ಬತ್ ದಿನದಲ್ಲಿ ಗುಣಪಡಿಸಿದ್ದಕ್ಕಾಗಿ ಅವನನ್ನು ಠೀಕಿಸುತ್ತಿದ್ದ ಯೆಹೂದ್ಯರನ್ನು ಉದ್ದೇಶಿಸಿ ಯೇಸುವು ಈ ಮೇಲಿನ ಹೇಳಿಕೆಯನ್ನು ನುಡಿದನು. (ಯೋಹಾನ 5:5-17) ಯೇಸು ಯೆಹೋವನ ಕೆಲಸವನ್ನು ಮಾಡುತ್ತಿದ್ದನಾದರೂ, ಧಾರ್ಮಿಕ ವಿರೋಧಿಗಳು ಈ ನಿಜಾಂಶವನ್ನು ಒಪ್ಪಲು ನಿರಾಕರಿಸಿದರು ಮತ್ತು ಅವನನ್ನು ನಿಲ್ಲಿಸಲು ಅವರಿಂದ ಮಾಡಲಿಕ್ಕೆ ಸಾಧ್ಯವಿರುವದನ್ನೆಲ್ಲಾ ಮಾಡಿದರು. ಯಾಕೆ? ಯಾಕಂದರೆ ಅವರು ಯೆಹೋವನ ಕೆಲಸವನ್ನು ಯಾವಾಗಲೂ ವಿರೋಧಿಸುತ್ತಿರುವ ಅವರ ತಂದೆಯಾಗಿದ್ದ, ಪಿಶಾಚನಾದ ಸೈತಾನನಿಂದ ಬಂದವರಾಗಿದ್ದರು. (ಯೋಹಾನ 8:44) “ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯಗಳನ್ನು” ಉಪಯೋಗಿಸಿ, ಸೈತಾನನು ‘ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳಲು’ ಶಕ್ತನಾಗಿರುವದರಿಂದ, ಅವನ ಕೆಲಸಗಳು ಹೇಗಿರುತ್ತವೆ ಎಂಬುದನ್ನು ಗುರುತಿಸಲು ನಮಗೆ ಆತ್ಮಿಕ ವಿವೇಚನೆ ಮತ್ತು ಸ್ಪಷ್ಟ ಆಲೋಚನಾಶಕ್ತಿಯ ಅಗತ್ಯವಿದೆ. ಇಲ್ಲದಿದ್ದಲ್ಲಿ, ನಾವು ಯೆಹೋವನಿಗೆ ವಿರೋಧವಾಗಿ ನಡೆಯುತ್ತಿರುವವರಾಗಿ ಕಂಡುಕೊಳ್ಳಬಹುದು.—2 ಕೊರಿಂಥ 11:14; 2 ಥೆಸಲೊನೀಕ 2:9, 10.
ವಿರೋಧಿಗಳು ಕೆಲಸದಲ್ಲಿದ್ದಾರೆ
6. ಧರ್ಮಭೃಷ್ಟರು “ಮೋಸದ ಕೆಲಸಗಾರರು” ಆಗಿದ್ದಾರೆ ಯಾಕೆ? ಉದಾಹರಿಸಿರಿ.
6 ಇಂದಿನ ಕೆಲವು ಧರ್ಮಭೃಷ್ಟರಂತೆ, ಕೆಲವರು ಕ್ರೈಸ್ತ ಸಭೆಯೊಂದಿಗೆ ಹೊಸತಾಗಿ ಸಹವಾಸ ಮಾಡುತ್ತಿರುವ ಸದಸ್ಯರ ನಂಬಿಕೆಯನ್ನು ಕೆಡವಲು ಸೈತಾನನ ಕಾರ್ಯಭಾರಿಗಳೋಪಾದಿ ದ್ರೋಹದಿಂದ ಕಾರ್ಯವೆಸಗುತ್ತಾ ಇದ್ದಾರೆ. (2 ಕೊರಿಂಥ 11:13) ಸತ್ಯದ ಬೋಧನೆಗಳಿಗಾಗಿ ಆಧಾರವಾಗಿ ಕೇವಲ ಬೈಬಲನ್ನು ಬಳಸುವ ಬದಲಾಗಿ, ಯೆಹೋವನು ಸಾಕ್ಷಿಗಳು ಆಧಾರಕ್ಕಾಗಿ ಪೂರ್ತಿಯಾಗಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಬೈಬಲಿನ ಮೇಲೆ ಆತುಕೊಂಡಿದ್ದಾರೋ ಎಂಬಂತೆ, ಅದನ್ನು ಅಪಖ್ಯಾತಿಗೊಳಪಡಿಸುವ ಪ್ರಯತ್ನದ ಮೇಲೆ ಅವರು ಕೇಂದ್ರಿಕರಿಸುತ್ತಾ ಇದ್ದಾರೆ. ಒಂದು ಶತಮಾನದ ಅತಿ ಹೆಚ್ಚಿನ ಸಮಯದಲ್ಲಿ, ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತು ಸತ್ಯವನ್ನು ಕಲಿಯಲು, ಯೆಹೋವನ ಸಾಕ್ಷಿಗಳು ಮುಖ್ಯವಾಗಿ ಕಿಂಗ್ ಜೇಮ್ಸ್ ವರ್ಷನ್, ಇಲ್ಲವೇ ರೋಮನ್ ಕ್ಯಾಥಲಿಕ್ರ ಡುಯೇ ವರ್ಷನ್ ಇಲ್ಲವೇ ಅವರ ಭಾಷೆಗಳಲ್ಲಿ ದೊರಕುವ ಯಾವುದೇ ತರ್ಜುಮೆಯನ್ನು ಬಳಸಿದರು. ಸತ್ತವರ ಸ್ಥಿತಿಯ ಕುರಿತಾದ ಸತ್ಯವನ್ನು, ದೇವರ ಮತ್ತು ಅವನ ಮಗನ ನಡುವಿನ ಸಂಬಂಧವನ್ನು ಮತ್ತು ಸ್ವರ್ಗಕ್ಕೆ ಕೇವಲ ಒಂದು ಚಿಕ್ಕ ಮಂದೆ ಹೋಗಲಿರುವ ಕಾರಣವನ್ನು ಪ್ರಚುರಿಸಲು ಅವರು ಈ ಹಳೆಯ ತರ್ಜುಮೆಗಳನ್ನು ಉಪಯೋಗಿಸಿದರು. ಅವರ ಲೋಕವ್ಯಾಪಕ ಸುವಾರ್ತೆ ಸಾರುವ ಕಾರ್ಯದಲ್ಲಿ ಯೆಹೋವನ ಸಾಕ್ಷಿಗಳು ಬೈಬಲಿನ ಹಲವು ತರ್ಜುಮೆಗಳನ್ನು ಉಪಯೋಗಿಸುವದನ್ನು ಮುಂದುವರಿಸುತ್ತಾ ಇದ್ದಾರೆ ಎಂದು ವಿಷಯದ ಪರಿಜ್ಞಾನವುಳ್ಳ ಜನರು ತಿಳಿದಿರುತ್ತಾರೆ. ಆದಾಗ್ಯೂ, ಇದರೊಟ್ಟಿಗೆ 1961ರಿಂದ, ಅದರ ಇಂದಿನ ತನಕ ನಾವಿನ್ಯತೆ, ನಿಖರತೆಯ ಸ್ಪಷ್ಟ ತರ್ಜುಮೆ ಮತ್ತು ಉತ್ತಮ ವಾಚನ ಗುಣಕ್ಕಾಗಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಉಪಯೋಗಿಸುವದರಲ್ಲಿ ಆನಂದಿಸುತ್ತಾರೆ.
7. (ಎ) ತನ್ನಲ್ಲಿ ನಂಬಿಕೆಯನ್ನಿಟ್ಟ ಅನೇಕರನ್ನು ಯೇಸುವು ತೊರೆಯುವದು ಯಾಕೆ? (ಬಿ) 1 ಯೋಹಾನ 4:1ರ ಬುದ್ಧಿವಾದಕ್ಕೆ ಕಿವಿಗೊಡುವದು ಯಾಕೆ ಪ್ರಾಮುಖ್ಯವಾಗಿದೆ?
7 ತನ್ನಲ್ಲಿ ನಂಬಿಕೆ ಇದೆ ಎಂದು ಹೇಳಿಕೊಳ್ಳುವ ಅನೇಕರನ್ನು ತಾನು ತೊರೆಯುವೆನು ಎಂದು ಯೇಸು ಹೇಳಿದ್ದಾನೆ. ಅವರು ಅವನ ಹೆಸರಿನಲ್ಲಿ ಪ್ರವಾದನೆ ಮಾಡಬಹುದು, ದೆವ್ವಗಳನ್ನು ಬಿಡಿಸಬಹುದು ಮತ್ತು “ಅನೇಕ ಮಹತ್ಕಾರ್ಯಗಳನ್ನು ಮಾಡಬಹುದು.” ಆದರೂ, ಅವನು ಅವುಗಳನ್ನು “ನಿಯಮರಾಹಿತ್ಯತೆಯ” ಕೆಲಸಗಳೆಂದು ಗುರುತಿಸುವನು. (ಮತ್ತಾಯ 7:21-23) ಯಾಕೆ? ಯಾಕಂದರೆ ಅವರು ಅವನ ಪರಲೋಕದ ತಂದೆಯ ಚಿತ್ತವನ್ನು ಮಾಡುವದಿಲ್ಲ ಮತ್ತು ಯೆಹೋವ ದೇವರ ಎಣಿಕೆಯಲ್ಲಿ ಇವೆಲ್ಲಾ ಏನೂ ಬೆಲೆಯಿಲ್ಲದವುಗಳಾಗಿವೆ. ಅಸಾಧಾರಣ, ಹಾಗೂ ಅದ್ಭುತಗಳೆಂದು ತೋರುವದಾದರೂ, ಇಂಥ ಕೆಲಸಗಳು, ಇಂದು ಕೂಡ ಮಹಾ ಮೋಸಗಾರನಾದ ಸೈತಾನನಿಂದಲೂ ಉಗಮಗೊಳ್ಳಸಾಧ್ಯವಿದೆ. ಯೇಸುವಿನ ಮರಣ ಮತ್ತು ಪುನರುತ್ಥಾನದ ಸುಮಾರು 60 ವರ್ಷಗಳ ನಂತರ ಅಪೊಸ್ತಲ ಯೋಹಾನನು ಬರೆದ ಅವನ ಮೊದಲ ಸಾಮಾನ್ಯ ಪತ್ರದಲ್ಲಿ ಹೀಗೆ ಬುದ್ಧಿವಾದವನ್ನು ನೀಡಿರುತ್ತಾನೆ, ಏನಂದರೆ ಕ್ರೈಸ್ತರು “ಎಲ್ಲಾ ಪ್ರೇರಿತ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” ನಾವು ಹಾಗೆಯೇ ಮಾಡುವ ಜರೂರಿಯಿದೆ.—1 ಯೋಹಾನ 4:1.
ಪ್ರತಿಫಲದಾಯಕವಲ್ಲದ ಕಾರ್ಯಗಳು
8. ಮಾಂಸಿಕ ಕೆಲಸಗಳ ಬಗ್ಗೆ ನಮ್ಮ ಭಾವನೆ ಏನಾಗಿರತಕ್ಕದ್ದು?
8 ಆತ್ಮಿಕವಾಗಿ ಫಲದಾಯಕವಲ್ಲದ ಕಾರ್ಯದಲ್ಲಿ ನಾವು ತೊಡಗದಿದ್ದರೂ, ಪಾಪಪೂರ್ಣ ಮಾಂಸದ ಆಶೆಗಳಿಗೆ ಉಣಿಸುತ್ತಾ ಹೋದರೆ, ನಮ್ಮ ಶ್ರಮವು ನಿಷ್ಪ್ರಯೋಜಕವಾಗುತ್ತದೆ. ಅಪೊಸ್ತಲ ಪೇತ್ರನು ಹೇಳಿದ್ದೇನಂದರೆ ನಾವು “ಬಂಡುತನ, ದುರಾಶೆ, ಕುಡಿಕತನ, ದುಂದೌತಣ, ಮದ್ಯಪಾನಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ . . . ಅನ್ಯ ಜನರಿಗೆ ಇಷ್ಟವಾದದ್ದನ್ನು” ಮಾಡುವದರಲ್ಲಿ ಬಹಳಷ್ಟು ಸಮಯವನ್ನು ನಾವು ವ್ಯಯಿಸಿದ್ದೇವೆ. (1 ಪೇತ್ರ 4:3, 4) ಈಗ ಸಮರ್ಪಿತರಾಗಿರುವ ಎಲ್ಲಾ ಕ್ರೈಸ್ತರು ಇಂಥ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಖಂಡಿತವಾಗಿಯೂ ಇದರ ಅರ್ಥವಲ್ಲ, ಆದರೆ ಇದನ್ನು ಮಾಡುತ್ತಿದ್ದವರ ಮನೋಭಾವವು, ಅವರ ಆತ್ಮಿಕ ನೋಟವು ಬೆಳೆಯುತ್ತಿದ್ದಂತೆ ತೀವ್ರತಮವಾಗಿ ಪರಿವರ್ತನೆಗೊಂಡಿತು. ಅವರ ಈ ಪರಿವರ್ತನೆಯ ಕಾರಣ ಅವರ ಕುರಿತು ಲೋಕವು ದೂಷಣೀಯ ರೀತಿಯಲ್ಲಿ ಮಾತಾಡುವರು; ಮತ್ತು ಇದನ್ನು ನಿರೀಕ್ಷಿಸತಕ್ಕದ್ದು. ಆದರೂ, ಯೆಹೋವನ ಸೇವೆಯಲ್ಲಿ ಅವರು ನಿಷ್ಠಾವಂತ ಕೆಲಸಗಾರರಾಗಬೇಕಾದರೆ, ಅವರು ಬದಲಾವಣೆ ಮಾಡಲೇಬೇಕಾಗಿದೆ.—1 ಕೊರಿಂಥ 6:9-11.
9. ಸಂಗೀತಮಯ ನಾಟಕದ ಗಾಯಕಿಯಾಗಿ ತರಬೇತು ಪಡೆಯಲು ಆರಂಭಿಸಿದ ಒಬ್ಬಳು ಸಾಕ್ಷಿಯ ಅನುಭವದಿಂದ ನಾವೇನನ್ನು ಕಲಿಯಬಹುದು?
9 ನಮ್ಮ ಸಂತೋಷಕ್ಕಾಗಿ ಯೆಹೋವನು ಹಲವಾರು ವರದಾನಗಳನ್ನು ಕೊಟ್ಟಿರುತ್ತಾನೆ, ಸಂಗೀತವು ಅವುಗಳಲ್ಲೊಂದು. ಹಾಗಿದ್ದರೂ “ಇಡೀ ಲೋಕವು ಕೆಡುಕನ” ಅಂದರೆ ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿರುವದರಿಂದ,” ಇದರಲ್ಲಿ ಸಂಗೀತದ ಜಗತ್ತೂ ಸೇರಿರುವದಿಲ್ಲವೇ? (1 ಯೋಹಾನ 5:19) ಹೌದು, ಸಿಲಾನ್ವಳು ಕಂಡುಕೊಂಡಂತೆ, ಸಂಗೀತವು ಒಂದು ನವಿರಾದ ಪಾಶವಾಗಿರಬಲ್ಲದು. ಒಂದು ಸಂಗೀತಮಯ ನಾಟಕದ ಗಾಯಕಳಾಗಿ ಫ್ರಾನ್ಸಿನಲ್ಲಿ ತರಬೇತಿ ಪಡೆಯಲು ಅವಳಿಗೆ ಒಂದು ಅವಕಾಶವಿತ್ತು. “ಆಗ ಇನ್ನೂ ಯೆಹೋವನನ್ನು ಸೇವಿಸುವ ಬಲವಾದ ಆಶೆ ಇತ್ತು,” ಅವಳು ವಿವರಿಸುತ್ತಾಳೆ. “ನಾನು ಸಹಾಯಕ ಪಯನೀಯರಿಂಗ್ನಲ್ಲಿ ಆನಂದಿಸುತ್ತಿದ್ದೆನು ಮತ್ತು ನನ್ನ ಜೀವಿತದಲ್ಲಿ ಈ ಎರಡು ವಿಷಯಗಳನ್ನು ಜೋಡಿಸಲು ನಿರೀಕ್ಷಿಸುತ್ತಿದ್ದೆನು. ಆದರೆ ನನ್ನ ಜೀವನೋದ್ಯೋಗವನ್ನು ಬೆನ್ನಟ್ಟುತ್ತಿರುವಾಗ, ನಾನು ಎದುರಿಸಬೇಕಾದ ಮೊದಲ ಸಮಸ್ಯೆ ಅನೈತಿಕತೆಯಾಗಿತ್ತು. ನಾನು ಅವರ ಅನೈತಿಕ ಮಾತುಕತೆ ಮತ್ತು ಮಾದರಿಯಂತೆ ಅವರೊಂದಿಗೆ ಹೋಗದಿದ್ದಾಗ, ಆರಂಭದಲ್ಲಿ ಮಗುವಿನಂತೆ ನಿಷ್ಕಪಟಳು ಎಂದು ನನ್ನ ಸಹವಾಸಿಗಳು ದೃಷ್ಟಿಸುತ್ತಿದ್ದರು. ಅನಂತರ, ಆ ಹೊಲಸು ವಾತಾವರಣವು ನನ್ನ ಸೂಕ್ಷ್ಮಸಂವೇದನೆಯನ್ನು ನಾಶಗೊಳಿಸಲು ಆರಂಭಿಸಿತು. ಯೆಹೋವನು ದ್ವೇಷಿಸುವ ವಿಷಯಗಳನ್ನು ಸಹಿಸಿಕೊಳ್ಳುವಂತೆ ನನ್ನನ್ನು ಮಾಡಿತು. ನನ್ನ ಅಧ್ಯಾಪಕರಲ್ಲೊಬ್ಬರು ನನ್ನ ಸಂಗೀತದ ಧರ್ಮವೊಂದನ್ನು ಮಾಡಲು ಒತ್ತಾಯಿಸುತ್ತಾ ಇದ್ದರು ಮತ್ತು ವೇದಿಕೆಯಲ್ಲಿರುವಾಗ ಇತರರನ್ನು ಕೆಣಕುವ ಪ್ರವೃತ್ತಿಯುಳ್ಳವಳಾಗುವಂತೆ ಮತ್ತು ಬೇರೆಲ್ಲರಿಗಿಂತ ನಾನು ಶ್ರೇಷ್ಠಳು ಎಂದು ಯೋಚಿಸುವಂತೆ ಕಲಿಸಲ್ಪಟ್ಟಿದ್ದೆನು. ಇದೆಲ್ಲವೂ ನನ್ನನ್ನು ಚಿಂತಾಭರಿತಳನ್ನಾಗಿ ಮಾಡಿತ್ತು. ಕಟ್ಟಕಡೆಗೆ, ನಾನೊಂದು ವಿಶೇಷ ಪರೀಕ್ಷಾರ್ಥವಾದ ಗಾಯನಕ್ಕೆ ಸಿದ್ಧಳಾಗಬೇಕಾಯಿತು. ನಾನು ಯಾವ ಮಾರ್ಗದಲ್ಲಿ ಹೋಗಬೇಕು ಎಂದು ನನಗೆ ಸ್ಪಷ್ಟ ಮಾಡಿಕೊಡಲು ನಾನು ಯೆಹೋವನಿಗೆ ಪ್ರಾರ್ಥಿಸಿದೆನು. ನಾನು ಚೆನ್ನಾಗಿ ಹಾಡಿದರೂ ಮತ್ತು ನನಗೆ ಭರವಸೆಯಿದ್ದರೂ, ಆರಿಸಲ್ಪಟ್ಟವರಲ್ಲಿ ನಾನು ಇರಲಿಲ್ಲ. ತರುವಾಯ, ಅದು ಹೀಗೆ ಏಕೆ ಎಂದು ತಿಳಿದೆನು—ಸ್ಪರ್ಧೆಯ ತುಂಬಾ ಮೊದಲೇ ಫಲಿತಾಂಶಗಳನ್ನು ನಿರ್ಣಯಿಸಲಾಗಿತ್ತು. ಆದರೆ ನನ್ನ ಪ್ರಾರ್ಥನೆಗೆ ಒಂದು ಸ್ಪಷ್ಟ ಉತ್ತರವು ದೊರೆಯಿತು ಮತ್ತು ಮನೆಯಲ್ಲಿಯೇ ಸಂಗೀತವನ್ನು ಕಲಿಸುವದಕ್ಕಾಗಿ, ಸಂಗೀತ ನಾಟಕರಂಗವನ್ನು ಬಿಡಲು ನಿರ್ಧರಿಸಿದೆನು.” ತದನಂತರ ಈ ಸಹೋದರಿಯು ಕ್ರೈಸ್ತ ಸಭೆಯ ಒಬ್ಬ ಹಿರಿಯನನ್ನು ಮದುವೆಯಾದಳು ಮತ್ತು ಈಗ ಇಬ್ಬರೂ ಅಲ್ಲಿ ರಾಜ್ಯದ ಅಭಿರುಚಿಗಳನ್ನು ಮುಂದುವರಿಸುವದರಲ್ಲಿ ನಿಷ್ಠೆಯಿಂದ ಸೇವಿಸುತ್ತಾ ಇದ್ದಾರೆ.
10. ಯೋಹಾನ 3:19-21ರ ಯೇಸುವಿನ ಮಾತುಗಳಿಂದ ನೀವು ಯಾವ ತೀರ್ಮಾನಕ್ಕೆ ಬರುವಿರಿ?
10 ಯೇಸು ಹೇಳಿದ್ದು: “ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ; ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ.” ಇನ್ನೊಂದು ಕಡೆ, “ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.” (ಯೋಹಾನ 3:19, 21) ಯೆಹೋವನ ಚಿತ್ತ ಮತ್ತು ಉದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡುವದು ಎಂಥಾ ಒಂದು ಆಶೀರ್ವಾದವಾಗಿದೆ! ಆದರೆ ಅದನ್ನು ಯಶಸ್ವಿಯಾಗಿ ಮಾಡಲು, ನಾವು ಯಾವಾಗಲೂ ನಮ್ಮ ಕೆಲಸಗಳನ್ನು ದೇವರ ವಾಕ್ಯದ ಬೆಳಕಿನಲ್ಲಿ ಪರಿಶೋಧಿಸಲ್ಪಡುವಂತೆ ಬಿಡಬೇಕು. ನಮ್ಮ ಜೀವನದ ಮಾರ್ಗವನ್ನು ಬದಲಿಸಲು ಮತ್ತು ಯೆಹೋವನ ಬಹುಮೂಲ್ಯ ಸೇವೆಯನ್ನು ಮಾಡುವ ಆಮಂತ್ರಣವನ್ನು ಸ್ವೀಕರಿಸಲು ನಾವು ತುಂಬಾ ಮುದುಕರಾಗಿರುವದಿಲ್ಲ ಮತ್ತು ನಮಗೆಂದೂ ತುಂಬಾ ವೇಳೆ ಮೀರಿರುವದಿಲ್ಲ.
ಇಂದು “ಸತ್ಕಾರ್ಯಗಳನ್ನು” ಮಾಡುವದು
11. “ಸತ್ಕಾರ್ಯಗಳೆಂದು” ಅನೇಕರು ಯಾವುದರ ಬೆನ್ನಟ್ಟುತ್ತಾರೆ, ಮತ್ತು ಅಂಥಾದ್ದು ಯಾಕೆ ನಿರಾಶೆಗೆ ನಡಿಸ ಸಾಧ್ಯವಿದೆ?
11 ಇಂದಿನ ಬಹುಮೂಲ್ಯ ಕೆಲಸವು ನಮ್ಮ ದಿನಗಳ ಜರೂರತೆಯನ್ನು ತೋರಿಸತಕ್ಕದ್ದು. ಸರ್ವ ಸಾಮಾನ್ಯವಾಗಿ ಮಾನವ ಕುಲದ ಪ್ರಯೋಜನಕ್ಕಾಗಿ ಅಥವಾ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ “ಸತ್ಕಾರ್ಯಗಳೆಂದು” ಆಗಾಗ್ಯೆ ವಿವರಿಸಲ್ಪಡುವ ಕೆಲಸಗಳಲ್ಲಿ ಅನೇಕ ಯಥಾರ್ಥವಂತ ಜನರು ಸಹಮತಿಸುತ್ತಾ ತಮ್ಮನ್ನು ಅದರಲ್ಲಿ ಕಾರ್ಯಮಗ್ನರಾಗಿರಿಸುತ್ತಾರೆ. ಆದರೂ, ಇಂಥ ಕೆಲಸವು ಎಷ್ಟೊಂದು ವ್ಯರ್ಥವಾಗಸಾಧ್ಯವಿದೆ! ಬ್ರಿಟನ್ನಲ್ಲಿ, ಕಾಫೊಡ್ (CAFOD—ಪರದೇಶಗಳ ಅಭಿವೃದ್ಧಿಗೆ ಕ್ಯಾಥಲಿಕ್ ನಿಧಿ) ಅದರ ಕ್ಷಾಮ ಪರಿಹಾರದ ಚಳುವಳಿಯ ಕುರಿತು ವರದಿ ಮಾಡಿದ್ದು: “ನಾಲ್ಕು ವರ್ಷಗಳ ಹಿಂದೆ . . . ಪರಿಹಾರ ಸಹಾಯಕ್ಕಾಗಿ ಮಿಲಿಯಗಟ್ಲೆ ಪೌಂಡುಗಳನ್ನು ಶೇಖರಿಸಲಾಗಿತ್ತು. ಸಾವಿರಾರು ಜೀವಗಳನ್ನು ರಕ್ಷಿಸಲಾಯಿತು. ಈಗ ಆ ಜೀವಗಳು ಪುನಃ ಒಮ್ಮೆ ಗಂಡಾಂತರದಲ್ಲಿವೆ. . . . ಆದರೆ ಯಾಕೆ? ಎಲ್ಲಿ ತಪ್ಪು ಸಂಭವಿಸಿತು?” ಅದರ ವರದಿಯನ್ನು ಮುಂದರಿಸುತ್ತಾ, ಕಾಫೊಡ್ ಜರ್ನಲ್ ವಿವರಿಸುವದು, ದೀರ್ಘಾವಧಿಯ ಸಮಸ್ಯೆಗಳನ್ನು ಎಂದೂ ಪರಿಹರಿಸಲಿಲ್ಲ ಮತ್ತು “ಮಾನವನ ಅಭಿವೃದ್ಧಿಗಾಗಿ ವಿಪರೀತ ಅಗತ್ಯವಿರುವ ಶೇಖರಣೆಗಳನ್ನು ಕಾದಾಟಗಳಿಗಾಗಿ [ಆಂತರಿಕ ಯುದ್ಧ] ಬಳಸಲಾಯಿತು.” ನಿಸ್ಸಂದೇಹವಾಗಿ ತದ್ರೀತಿಯ ಅಭಿಪ್ರಾಯಗಳು ಅಂಥಾದ್ದೇ ರೀತಿಯ ದಾನಕಾರ್ಯಗಳಲ್ಲಿ ತೊಡಗಿರುವವರಿಂದ ಪ್ರತಿದ್ವನಿಸಲ್ಪಡುವದನ್ನು ನೀವು ಕೇಳಿದ್ದೀರಿ.
12. ಇಂದು ಲೋಕವು ಎದುರಿಸುತ್ತಿರುವ ಸಮಸ್ಯೆಗಳಿಗೆ ಏಕಮಾತ್ರ ಉತ್ತರವು ಯಾವುದು?
12 ಕ್ಷಾಮವು ಒಂದು ತುರ್ತು ಸಮಸ್ಯೆಯಾಗಿದೆ. ಆದರೆ, ಕ್ಷಾಮ ಮತ್ತು ಯುದ್ಧದ ಇಂದಿನ ಅನಾಹುತಗಳು, ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಸೂಚಿಸುತ್ತಾ, ಯೇಸು ಕ್ರಿಸ್ತನ ಪ್ರವಾದನೆಯನ್ನು ನೆರವೇರಿಸುತ್ತವೆ ಎಂದು ಯಾರು ಗುರುತಿಸುತ್ತಾರೆ? (ಮತ್ತಾಯ 24:3, 7) ಈ ಘಟನೆಗಳನ್ನು ಬೈಬಲಿನ ಪುಸ್ತಕದ ಪ್ರಕಟನೆಯ ಅಧ್ಯಾಯ 6ರಲ್ಲಿ ವೈವಿಧ್ಯಮಯವಾಗಿ ವರ್ಣಿಸಲಾಗಿರುವ ನಾಲ್ಕು ಕುದುರೇಸವಾರಿಯೊಂದಿಗೆ ಜೋಡಿಸುವ ರುಜುವಾತನ್ನು ಯಾರು ಪ್ರಕಾಶಿಸಿರುತ್ತಾರೆ? ಸುಸಂಗತವಾಗಿ, ಯೆಹೋವನ ಸಾಕ್ಷಿಗಳು ಈ ಪತ್ರಿಕೆಯಲ್ಲಿ ನಿಷ್ಠೆಯಿಂದ ಅದನ್ನು ಹಾಗೆ ಮಾಡಿರುತ್ತಾರೆ. ಯಾಕೆ? ಬಾಳುವ ಪರಿಹಾರವನ್ನು ರೂಪಿಸುವದು ಮಾನವನ ಸಾಮರ್ಥ್ಯಕ್ಕೆ ಎಟಕದ್ದು ಎಂದು ತೋರಿಸಲಿಕ್ಕಾಗಿಯೇ. ಲೋಕದ ಸಮಸ್ಯೆಗಳಿಗೆ ಕ್ರೈಸ್ತರು ಉಪೇಕ್ಷೆವುಳ್ಳವರಾಗಿದ್ದಾರೆಂದು ಇದರ ಅರ್ಥವಲ್ಲ. ಎಂದಿಗೂ ಅಲ್ಲ. ಅವರು ಸಹಾನುಭೂತಿಯುಳ್ಳವರಾಗಿದ್ದಾರೆ ಮತ್ತು ಸಂಕಷ್ಟವನ್ನು ಹಗುರಗೊಳಿಸಲು ತಮ್ಮಿಂದಾದೆಲ್ಲವನ್ನು ಮಾಡುವರು. ಆದರೂ, ದೈವಿಕ ಮಧ್ಯಪ್ರವೇಶ ಮಾಡದ ಹೊರತು, ಲೋಕದ ಸಮಸ್ಯೆಗಳು ಎಂದಿಗೂ ಪರಿಹಾರಗೊಳ್ಳುವದಿಲ್ಲ ಎಂಬ ನೈಜತೆಯನ್ನು ಅವರು ವಾಸ್ತವವಾಗಿ ಎದುರಿಸುತ್ತಾರೆ. ಬಡವರು ಇದ್ದಂತೆ, ಈ ಲೋಕದ ಅಧಿಪತಿಯಾಗಿ ಸೈತಾನನನ್ನು ಮುಂದುವರಿಯಲು ಅನುಮತಿಸುವ ತನಕ ಈ ಸಮಸ್ಯೆಗಳು ಇರುವವು.—ಮಾರ್ಕ 14:7; ಯೋಹಾನ 12:31.
ಶ್ರೇಷ್ಠ ಮೂಲ್ಯತೆಯ ಕಾರ್ಯ
13. ಇಂದು ಅತಿ ತುರ್ತಿನ ಕಾರ್ಯ ಯಾವುದು, ಮತ್ತು ಅದನ್ನು ಯಾರು ಮಾಡುತ್ತಿದ್ದಾರೆ?
13 ಶೀಘ್ರದಲ್ಲಿಯೇ ಎಲ್ಲಾ ಲೌಕಿಕ ಸರಕಾರಗಳನ್ನು ಸ್ಥಾನಪಲ್ಲಟಗೊಳಿಸಲಿರುವ ಮತ್ತು ಯಾವುದಕ್ಕಾಗಿ ದೇವ-ಭಯವುಳ್ಳ ಜನರು ಹಂಬಲಿಸುತ್ತಾರೋ ಆ ಬಿಡುಗಡೆಯನ್ನು ತರಲಿರುವ ಯೆಹೋವ ದೇವರ ರಾಜ್ಯದ ಸುವಾರ್ತೆಯನ್ನು ಸಾರುವದು ಇಂದಿನ ಅತ್ಯಂತ ಜರೂರಿಯ ಅಗತ್ಯತೆಯಾಗಿದೆ. (ದಾನಿಯೇಲ 2:44; ಮತ್ತಾಯ 24:14) ಯೇಸು ಕ್ರಿಸ್ತನ ಸಾರುವಿಕೆಯು ಪ್ಯಾಲೆಸ್ತೀನ್ ದೇಶಕ್ಕೆ ಸೀಮಿತಗೊಂಡಿದ್ದರೂ, ಪರಲೋಕ ರಾಜ್ಯದ ಸಾರುವಿಕೆಯನ್ನು ಅವನು ತನ್ನ ಜೀವಿತದ ಪ್ರಮುಖ ಉದ್ದೇಶವನ್ನಾಗಿ ಮಾಡಿದನು. ಯೇಸುವು ಹೇಳಿದಂತೆ, ಇಂದು ಈ ಸಾರುವ ಕೆಲಸದ ವಿಸ್ತಾರ್ಯವು ಲೋಕವ್ಯಾಪಕವಾಗಿರುತ್ತದೆ. (ಯೋಹಾನ 14:12; ಅ.ಕೃತ್ಯಗಳು 1:8) ದೇವರ ಕೆಲಸದಲ್ಲಿ ಒಂದು ಚಿಕ್ಕ ಪಾಲು ಇದ್ದರೂ ಕೂಡ, ಅದು ಸರಿಸಾಟಿಯಿಲ್ಲದ ಒಂದು ಸುಯೋಗವಾಗಿರುತ್ತದೆ. ಸುವಾರ್ತೆಯ ಪ್ರಚಾರಕರಾಗುವೆವು ಎಂದು ಯಾವುದೇ ಸಮಯದಲ್ಲಿ ಎಂದಿಗೂ ಸ್ವಪ್ನವನ್ನು ಕೂಡ ಕಂಡಿರದ ಗಂಡಸರು ಮತ್ತು ಹೆಂಗಸರು, ವಯೋವೃದ್ಧರು ಮತ್ತು ಬಾಲಕರು ಏಕಪ್ರಕಾರವಾಗಿ, ಇಂದು ಯೆಹೋವನ ಸಾಕ್ಷಿಗಳಿಂದ ಪೂರೈಸಲ್ಪಡುತ್ತಿರುವ ಸುವಾರ್ತೆ ಸಾರುವ ಕಾರ್ಯದ ಮುಂಭಾಗದಲ್ಲಿ ಇದ್ದಾರೆ. ನೋಹನು ಮತ್ತು ಅವನ ಕುಟುಂಬದಂತೆ, ಅವರು ದೇವರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ, ಅದು ಅವನಿಂದ ಪಡೆದ ನಿಯೋಗವಾಗಿದೆ ಮತ್ತು ಅವನ ಶಕ್ತಿಯಿಂದ ಮಾಡುತ್ತಾರೆ, ಇದು ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಒಂದು ಪೂರ್ವಪೀಠಿಕೆಯೋಪಾದಿ ಇದೆ.—ಫಿಲಿಪ್ಪಿಯ 4:13; ಇಬ್ರಿಯ 11:7.
14. ಸಾರುವದು ಜೀವರಕ್ಷಕವೂ, ಮತ್ತು ಅದೇ ಸಮಯದಲ್ಲಿ ಸುರಕ್ಷೆಯೂ ಆಗಿದೆ ಹೇಗೆ?
14 ಯೆಹೋವನ ಸಾಕ್ಷಿಗಳಿಂದ ಈ ಕಡೇ ದಿವಸಗಳಲ್ಲಿ ನಡಿಸಲ್ಪಡುವ ಸಾಕ್ಷಿಯನ್ನೀಯುವ ಕೆಲಸವು, ಆಲಿಸುವವರಿಗೆ ಮತ್ತು ಅವರು ಆಲಿಸುವ ಸುವಾರ್ತೆಗನುಸಾರವಾಗಿ ವರ್ತಿಸುವದಾದರೆ ಜೀವರಕ್ಷಕವಾಗಿದೆ. (ರೋಮಾಪುರ 10:11-15) ಸಾರುವವರಿಗೂ ಅದು ಒಂದು ಸುರಕ್ಷೆಯಾಗಿರುತ್ತದೆ. ನಮ್ಮ ಸಮಸ್ಯೆಗಳಿಗಿಂತಲೂ ಹೆಚ್ಚು ಕಠಿಣ ಸಮಸ್ಯೆಗಳಿರುವ ಜನರಿಗೆ ಸಹಾಯ ಮಾಡುವದರಲ್ಲಿ ಯಥಾರ್ಥವಾಗಿ ಆಸಕ್ತರಿರುವದರಿಂದ, ನಮಗಿರುವ ಸ್ವಂತ ಸಮಸ್ಯೆಗಳ ಕುರಿತು ನಾವು ಅತಿರೇಕವಾಗಿ ವ್ಯಾಕುಲಿತರಾಗೆವು. ಇಳಿಮುಖವಾಗುತ್ತಿರುವ ಮಟ್ಟಗಳಿರುವ ಈ ಲೋಕವು ಅದರ ಮಾರ್ಗಗಳಿಗೆ ನಾವು ಹೊಂದಿಕೊಳ್ಳುವಂತೆ ಪ್ರಯತ್ನಿಸುತ್ತದೆ ಎಂದು ನಾವು ತಿಳಿದಿದ್ದೇವೆ. ಆದುದರಿಂದ ನಮ್ಮ ಸಾರುವ ಸಮಯದಲ್ಲಿ ದೇವರ ಆಲೋಚನೆಗಳಿಂದ ನಮ್ಮ ಮನಸ್ಸನ್ನು ತುಂಬಿಸಿಕೊಳ್ಳುವದರಿಂದ, ಅದು ನಂಬಿಕೆಯನ್ನು ಬಲಪಡಿಸುವದಕ್ಕಿಂತ ಅಧಿಕತಮವಾಗಿದೆ; ಅದು ನಮ್ಮ ಅತ್ಯುತ್ತಮ ಶ್ರೇಯಸ್ಸಿಗಾಗಿ ಇದೆ. ಒಬ್ಬ ಸಾಕ್ಷಿಯು ಅದನ್ನು ಹೀಗೆ ಹೇಳಿದ್ದಾನೆ: “ನಾನು ಭೇಟಿಯಾಗುವ ಜನರನ್ನು ಬದಲಾಯಿಸಲು ನಾನು ಪ್ರಯತ್ನಿಸಿದಿದ್ದರೆ, ಅವರು ನನ್ನನ್ನು ಬದಲಾಯಿಸ ಶಕ್ತರು!”—2 ಪೇತ್ರ 2:7-9 ಹೋಲಿಸಿರಿ.
ಸಭೆಯೊಂದಿಗೆ ಕೆಲಸ ಮಾಡುವದು
15. ಇಂದು ಉಪಕುರುಬರ ಮೇಲೆ ಯಾವ ಜವಾಬ್ದಾರಿಕೆಗಳು ಇರುತ್ತವೆ ಮತ್ತು 1 ತಿಮೊಥೆಯ 3:1ರ ನೋಟದಲ್ಲಿ ಸಭೆಯ ಪುರುಷ ಸದಸ್ಯರು ಯಾವ ಭಾವನೆ ಹೊಂದಿರತಕ್ಕದ್ದು?
15 ಹೊಸತಾಗಿ ಆಸಕ್ತ ಜನರು ಸಭೆಯೊಳಗೆ ಬರುವಾಗ, ಅವರು ಮಹಾ ಕುರುಬನಾದ ಯೆಹೋವ ದೇವರ ಮತ್ತು ಒಳ್ಳೆಯ ಕುರುಬನಾದ ಯೇಸು ಕ್ರಿಸ್ತನ ಆರೈಕೆಯ ಕೆಳಗೆ ಬರುತ್ತಾರೆ. (ಕೀರ್ತನೆ 23:1; ಯೋಹಾನ 10:11) ಈ ಸ್ವರ್ಗೀಯ ಕುರುಬರುಗಳು, ಮಂದೆಯ ನಿಷ್ಠ ಉಪಕುರುಬರುಗಳಾಗಿ ಸಭೆಯೊಳಗೆ ನೇಮಿತರಾದ ಪುರುಷರುಗಳಿಂದ ಭೂಮಿಯ ಮೇಲೆ ಪ್ರತಿನಿಧಿಸಲ್ಪಡುತ್ತಾ ಇದ್ದಾರೆ. (1 ಪೇತ್ರ 5:2, 3) ಈ ಕಡೇ ದಿವಸಗಳಲ್ಲಿ ಅಂಥ ಒಂದು ಸ್ಥಾನವನ್ನು ಪಡೆದು ಕೊಂಡಿರುವದು ಒಂದು ಬೆಲೆಕಟ್ಟಲಾಗದ ಸುಯೋಗವಾಗಿರುತ್ತದೆ. ಕುರುಬರುಗಳ ಕೆಲಸವು ಜವಾಬ್ದಾರಿಯದ್ದಾಗಿದೆ, ಅದರಲ್ಲಿ ಕೇವಲ ಸಭೆಯಲ್ಲಿ ಕಲಿಸಲು ಮತ್ತು ಸುವಾರ್ತೆ ಸಾರುವ ಕಾರ್ಯದಲ್ಲಿ ಮುಂದಾಳುತನ ವಹಿಸುವದು ಮಾತ್ರವಲ್ಲ, ಆತ್ಮಿಕವಾಗಿ ಕೊಳ್ಳೆಯಾಡಿ ತಿನ್ನುವವರಿಂದ ಮತ್ತು ನಾವು ಜೀವಿಸುವ ಲೋಕದ ಬಿರುಗಾಳಿಯಂಥ ವಾತಾವರಣದ ಅಪ್ಪಳಿಸುವಿಕೆಗಳಿಂದ ಮಂದೆಯನ್ನು ರಕ್ಷಿಸಬೇಕಾಗಿದೆ. ವಿಸ್ತರಿಸುತ್ತಿರುವ ಕ್ರೈಸ್ತ ಸಭೆಯ ಸದಸ್ಯರ ಆತ್ಮಿಕ ಒಳಿತಿನ ಕಡೆಗೆ ಲಕ್ಷ್ಯಕೊಟ್ಟು ಸಹಾಯ ಮಾಡಲು ಸಭೆಯ ಪುರುಷ ಸದಸ್ಯರು ತಲುಪುವದಕ್ಕಿಂತ ಹೆಚ್ಚು ಮೂಲ್ಯತೆಯ ಕೆಲಸ ಬೇರೊಂದಿಲ್ಲ.—1 ತಿಮೊಥೆಯ 3:1; ಯೆಶಾಯ 32:1, 2 ಹೋಲಿಸಿರಿ.
16. ಕ್ರೈಸ್ತ ಕುರುಬರು ಒಬ್ಬರು ಇನ್ನೊಬ್ಬರಿಗೆ ಪೂರಕರಾಗಿರುವದು ಯಾವ ವಿಧಗಳಲ್ಲಿ?
16 ಆದಾಗ್ಯೂ, ನಾವೆಂದಿಗೂ ಮರೆಯಬಾರದೇನಂದರೆ, ಅಂಥಾ ಕುರುಬರು ಮಾನವರಾಗಿದ್ದಾರೆ, ಹಿಂಡಿನ ಇತರರಂತೆ ವಿವಿಧ ಭಿನ್ನ ವ್ಯಕ್ತಿತ್ವಗಳಿದವ್ದರೂ, ಕುಂದುಲೋಪಗಳಿರುವವರೂ ಆಗಿರುತ್ತಾರೆ. ಕುರೀಪಾಲನೆಯ ಒಂದು ನಿರ್ದಿಷ್ಟ ವಿಭಾಗದಲ್ಲಿ ಒಬ್ಬನು ಹೆಚ್ಚು ಪ್ರವೀಣನಾಗಿರುವದಾದರೆ, ಇನ್ನೊಬ್ಬನ ವರದಾನವು ಇನ್ನೊಂದು ಕೋನದಿಂದ ಸಭೆಗೆ ಲಾಭಕರವಾಗುವದು. ಸಭೆಯನ್ನು ಬಲಪಡಿಸುವುದರಲ್ಲಿ ಕ್ರೈಸ್ತ ಹಿರಿಯರೋಪಾದಿ ಅವರ ಕಾರ್ಯಗಳು ಒಬ್ಬರು ಇನ್ನೊಬ್ಬರೊಂದಿಗೆ ಪೂರಕವಾಗಿರುವವು. (1 ಕೊರಿಂಥ 12:4, 5) ಅವರ ನಡುವೆ ಎಂದಿಗೂ ಸ್ಪರ್ಧಾತ್ಮಕ ಭಾವವು ಪ್ರವೇಶಿಸಲೇಕೂಡದು. ರಾಜ್ಯದ ಹಿತಾಸಕ್ತಿಗಳನ್ನು ಸುರಕ್ಷಿತವಾಗಿಡಲು ಮತ್ತು ವರ್ಧಿಸಲು ಅವರು ಒಟ್ಟಿಗೆ ಕೆಲಸ ಮಾಡುವರು, ಅವರ ಎಲ್ಲಾ ಪರ-ಪ್ರತಿ ಚರ್ಚೆಗಳಲ್ಲಿ ಮತ್ತು ತೀರ್ಮಾನಗಳಲ್ಲಿ ಯೆಹೋವನ ಆಶೀರ್ವಾದ ಮತ್ತು ಮಾರ್ಗದರ್ಶನೆಯನ್ನು ಹುಡುಕುತ್ತಾ, ಪ್ರಾರ್ಥನೆಯಲ್ಲಿ ಯೆಹೋವನಿಗೆ “ಭಕ್ತಿ ಪೂರ್ವಕವಾಗಿಯೇ ಕೈಗಳನ್ನೆತ್ತಬೇಕು. [ನಿಷ್ಠೆಯ ಕೈಗಳನ್ನೆತ್ತಬೇಕು, NW]”—1 ತಿಮೊಥೆಯ 2:8.
17. (ಎ) ನಮಗೆ ಯಾವ ಹಂಗು ಇದೆ? (ಬಿ) ನಮ್ಮ ಹಂಗನ್ನು ಸಮರ್ಪಕವಾಗಿ ನಾವು ತೀರಿಸಬೇಕಾದರೆ ಯಾವ ಸಂಗತಿಗಳನ್ನು ನಾವು ಹೋಗಲಾಡಿಸುವ ಅಗತ್ಯವಿದೆ?
17 ಸೈತಾನನ ಸಾಮ್ರಾಜ್ಯದ ಅಂತ್ಯವು ಸಮೀಪಿಸುತ್ತಿರುವಂತೆ, ಸಾರುವ ಕೆಲಸಕ್ಕೆ ಈಗ ಇನ್ನಷ್ಟು ಹೆಚ್ಚು ಕೂಡಿಸಲ್ಪಟ್ಟ ಜರೂರಿ ಬಂದಿದೆ. ಅವನ ಸಾಕ್ಷಿಗಳೋಪಾದಿ, ಯೆಹೋವ ದೇವರ ವಾಕ್ಯದ ಸತ್ಯವು ನಮ್ಮಲ್ಲಿ ಇರುವದರಿಂದ, ಪ್ರತಿಯೊಂದು ಸಂದರ್ಭದಲ್ಲಿ ಸುವಾರ್ತೆಯನ್ನು ಹಬ್ಬಿಸುವ ಒಂದು ಹಂಗು ನಮಗಿರುತ್ತದೆ. ಅಂತ್ಯದ ತನಕ ನಮ್ಮನ್ನು ಕಾರ್ಯಮಗ್ನರಾಗಿರಿಸಲು ಬೇಕಾಗುವದಕ್ಕಿಂತಲೂ ಹೆಚ್ಚು ಕೆಲಸ ನಮ್ಮ ಕೈಯಲ್ಲಿರುತ್ತದೆ. ಸೌಖ್ಯತತ್ವವಿಚಾರಗಳಿಂದ, ಅನೈತಿಕ ಮೋಜಿನ ಹುಡುಕುವಿಕೆಯಿಂದಾಗಲಿ ಅಥವಾ ಪ್ರಾಪಂಚಿಕತೆಯ ಭಾರದಿಂದಾಗಲಿ ದಾರಿ ತಪ್ಪಿಹೋಗಲು ನಮ್ಮನ್ನು ನಾವು ಎಂದಿಗೂ ಬಿಟ್ಟುಕೊಡದಿರೋಣ. ಊಹನಾತ್ಮಕ ಆಲೋಚನೆಗಳಲ್ಲಿ ಒಳಗೂಡಿಸಿಕೊಂಡು, ಶಬ್ದಗಳ ಮೇಲೆ ವಾಗ್ವಾದಮಾಡುತ್ತಾ ನಾವು ಇರಕೂಡದು, ಯಾಕಂದರೆ ಅದು ನಿಷ್ಪ್ರಯೋಜಕವೂ, ಸಮಯವನ್ನು ಹಾಳುಗೆಡವುವಂಥಾದ್ದೂ ಆಗಿದೆ. (2 ತಿಮೊಥೆಯ 2:14; ತೀತ 1:10; 3:9) ಯೇಸುವಿಗೆ ಶಿಷ್ಯರು “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” ಎಂದು ಪ್ರಶ್ನಿಸಿದಾಗ, ಕೈಯಲ್ಲಿರುವ ಪ್ರಾಮುಖ್ಯ ಕೆಲಸದ ಕಡೆಗೆ ಯೇಸುವು ಅವರ ಆಲೋಚನೆಯನ್ನು ತಿರುಗಿಸುತ್ತಾ, ಹೇಳಿದ್ದು: “ಯೆರೂಸಲೇಮಿನಲ್ಲಿಯೂ, ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.” ಈ ನಿಯೋಗವು ಇಂದಿನ ತನಕ ವ್ಯಾಪಿಸಿರುತ್ತದೆ.—ಅ.ಕೃತ್ಯಗಳು 1:6-8.
18. ಯೆಹೋವನೊಂದಿಗೆ ಕೆಲಸ ಮಾಡುವದು ಅಷ್ಟೊಂದು ಪ್ರಯೋಜನಕಾರಿಯಾಗಿದೆ ಯಾಕೆ?
18 ಯೆಹೋವನೊಂದಿಗೆ ಕೆಲಸ ಮಾಡುತ್ತಾ, ಇಂದು ಅವನ ಲೋಕವ್ಯಾಪಕ ಸಭೆಯೊಂದಿಗೆ ಸಾರುವದು, ನಮ್ಮ ಜೀವಿತಗಳಲ್ಲಿ ಆನಂದವನ್ನೂ, ಸಂತೃಪ್ತಿಯನ್ನೂ ಮತ್ತು ನಿಜ ಉದ್ದೇಶವನ್ನು ತರುತ್ತದೆ. ಯೆಹೋವನನ್ನು ಪ್ರೀತಿಸುವ ಪ್ರತಿಯೊಬ್ಬನಿಗೆ ದೇವಭಕ್ತಿ ಮತ್ತು ನಿಷ್ಠೆಯನ್ನು ತೋರಿಸಲು ಇದೊಂದು ಅವಕಾಶವಾಗಿದೆ. ಇದರ ಅನೇಕ ವೈವಿಧ್ಯತೆಗಳಿಂದ ಈ ಕೆಲಸವು ಎಂದಿಗೂ ಪುನರಾವರ್ತಿಸಲ್ಪಡುವದಿಲ್ಲ. ನಿತ್ಯ ಜೀವದ ಪ್ರತೀಕ್ಷೆಯನ್ನು ಸ್ಪಷ್ಟವಾಗಿ ಮುಂದಕ್ಕೆ ಇಟ್ಟು, ಅವನ ಸ್ತುತಿಗಾಗಿಯೂ ಮತ್ತು ನಮ್ಮ ಸ್ವಂತ ರಕ್ಷಣೆಗಾಗಿಯೂ, “ದೇವಭಕ್ತಿಯಿಂದಲೂ, ಭಯದಿಂದಲೂ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವದನ್ನು” ನಾವು ನಿಷ್ಠೆಯಿಂದ ಮುಂದರಿಸುತ್ತಾ ಇರೋಣ.—ಇಬ್ರಿಯ 12:28, NW. (w90 8/15)
ನಿಮ್ಮ ಉತ್ತರವೇನು?
◻ ಯೇಸುವು ಯಾವ ಕೆಲಸದಿಂದ ಸಂತೋಷ ಮತ್ತು ಸಂತೃಪ್ತಿಯನ್ನು ಪಡೆದನು?
◻ ಯೆಹೋವನ ಕೆಲಸವನ್ನು ವಿರೋಧಿಸುವವರು ಯಾರು ಮತ್ತು ಯಾಕೆ?
◻ ಲೌಕಿಕ “ಸತ್ಕಾರ್ಯಗಳು” ಮತ್ತು ದೇವರ ರಾಜ್ಯದ ಸುವಾರ್ತೆಯ ಸಾರುವಿಕೆ ಹೇಗೆ ತುಲನೆಯಾಗುತ್ತದೆ?
[ಪುಟ 24 ರಲ್ಲಿರುವ ಚಿತ್ರ]
ಯೇಸುವು ತನ್ನ ಶಿಷ್ಯರನ್ನು ಸಾರುತ್ತಾ ಹೋಗುವಂತೆ ನಿಯೋಜಿಸುತ್ತಾನೆ