-
ಕಲಿತಂಥ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿಕಾವಲಿನಬುರುಜು—2002 | ಸೆಪ್ಟೆಂಬರ್ 15
-
-
“ಕಲ್ಪನಾಕಥೆಗಳನ್ನು” ತಿರಸ್ಕರಿಸಿರಿ
8. (ಎ) ಸೈತಾನನು ಇಂದು ನಮ್ಮ ನಂಬಿಕೆಯನ್ನು ನಾಶಗೊಳಿಸಲು ಪ್ರಯತ್ನಿಸುವುದು ಹೇಗೆ? (ಬಿ) ಪೌಲನ ಯಾವ ಎಚ್ಚರಿಕೆಯನ್ನು 2 ತಿಮೊಥೆಯ 4:3, 4ರಲ್ಲಿ ಕಂಡುಕೊಳ್ಳಸಾಧ್ಯವಿದೆ?
8 ನಾವೇನನ್ನು ಕಲಿತಿದ್ದೇವೊ ಅದರ ಬಗ್ಗೆ ಸಂದೇಹದ ಬೀಜಗಳನ್ನು ಬಿತ್ತುವ ಮೂಲಕ ಸೈತಾನನು ನಮ್ಮ ಸಮಗ್ರತೆಯನ್ನು ಮುರಿದುಹಾಕಲು ಪ್ರಯತ್ನಿಸುತ್ತಾನೆ. ಪ್ರಥಮ ಶತಮಾನದಂತೆಯೇ ಇಂದು ಕೂಡ, ಧರ್ಮಭ್ರಷ್ಟರು ಮತ್ತು ಇತರರು, ಮುಗ್ಧರ ನಂಬಿಕೆಯನ್ನು ನಾಶಪಡಿಸಲು ಪ್ರಯತ್ನಿಸುತ್ತಾರೆ. (ಗಲಾತ್ಯ 2:4; 5:7, 8) ಕೆಲವೊಮ್ಮೆ ಅವರು, ತಿರುಚಲ್ಪಟ್ಟಿರುವ ಮಾಹಿತಿಯನ್ನು ಅಥವಾ ಯೆಹೋವನ ಜನರ ವಿಧಾನಗಳು ಮತ್ತು ಉದ್ದೇಶಗಳ ಕುರಿತಾಗಿ ಶುದ್ಧ ಸುಳ್ಳುಗಳನ್ನೂ ಹಬ್ಬಿಸಲಿಕ್ಕಾಗಿ ವಾರ್ತಾಮಾಧ್ಯಮವನ್ನು ಉಪಯೋಗಿಸುತ್ತಾರೆ. ಕೆಲವರು ಸತ್ಯದಿಂದ ತಿರುಗಿಹೋಗುವರೆಂದು ಪೌಲನು ಎಚ್ಚರಿಸಿದನು. ಅವನು ಬರೆದುದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.”—2 ತಿಮೊಥೆಯ 4:3, 4.
9. “ಕಲ್ಪನಾಕಥೆ”ಗಳೆಂದು ಹೇಳುವಾಗ ಪೌಲನ ಮನಸ್ಸಿನಲ್ಲಿ ಏನಿದ್ದಿರಬಹುದು?
9 ಸ್ವಸ್ಥ ಬೋಧನಾವಾಕ್ಯಗಳ ಮಾದರಿಗೆ ಅಂಟಿಕೊಳ್ಳುವ ಬದಲಿಗೆ, ಕೆಲವರು “ಕಲ್ಪನಾಕಥೆ”ಗಳಿಂದ ಸೆಳೆಯಲ್ಪಟ್ಟಿದ್ದರು. ಈ ಕಲ್ಪನಾಕಥೆಗಳು ಏನಾಗಿದ್ದವು? ಪ್ರಾಯಶಃ ಪೌಲನ ಮನಸ್ಸಿನಲ್ಲಿ, ಟೊಬಿತ್ ಎಂಬ ಸಂದೇಹಾಸ್ಪದ ಪುಸ್ತಕದಲ್ಲಿರುವಂಥ ಊಹಾತ್ಮಕ ಕಥೆಗಳು ಇದ್ದಿರಬಹುದು.a ಆ ಕಲ್ಪನಾಕಥೆಗಳಲ್ಲಿ, ಕೌತುಕಕಾರಿ ಮತ್ತು ಊಹಾಪೋಹದ ಗಾಳಿಸುದ್ದಿಗಳೂ ಒಳಗೂಡಿದ್ದಿರಬಹುದು. ಅಲ್ಲದೆ, ಕೆಲವರು ‘ತಮ್ಮ ದುರಾಶೆಗಳಿಗೆ ಅನುಕೂಲಕರವಾಗಿ,’ ದೇವರ ಮಟ್ಟಗಳ ಬಗ್ಗೆ ಸ್ವಚ್ಛಂದ ದೃಷ್ಟಿಕೋನವನ್ನಿಟ್ಟಿದ್ದ ಇಲ್ಲವೆ ಸಭೆಯಲ್ಲಿ ಮುಂದಾಳುತನ ವಹಿಸುತ್ತಿದ್ದವರ ಬಗ್ಗೆ ಟೀಕಾತ್ಮಕರಾಗಿದ್ದವರಿಂದ ವೈಚಾರಿಕವಾಗಿ ಮೋಸಗೊಳಿಸಲ್ಪಟ್ಟಿರಬಹುದು. (3 ಯೋಹಾನ 9, 10; ಯೂದ 4) ಅಡ್ಡಿಯನ್ನುಂಟುಮಾಡುತ್ತಿದ್ದ ಯಾವುದೇ ತಡೆಗಳು ಉಪಯೋಗಿಸಲ್ಪಟ್ಟಿರಲಿ, ಕೆಲವರಂತೂ ದೇವರ ವಾಕ್ಯದ ಸತ್ಯಗಳಿಗಿಂತಲೂ ಸುಳ್ಳುಗಳನ್ನೇ ಇಷ್ಟಪಟ್ಟರೆಂದು ವ್ಯಕ್ತವಾಗುತ್ತದೆ. ಸ್ವಲ್ಪ ಸಮಯದೊಳಗೆ ಅವರು ತಾವು ಕಲಿತಂಥ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವುದನ್ನು ನಿಲ್ಲಿಸಿದರು, ಮತ್ತು ಇದು ಸ್ವತಃ ಅವರಿಗೆ ಆತ್ಮಿಕ ಹಾನಿಯನ್ನು ತಂದಿತು.—2 ಪೇತ್ರ 3:15, 16.
10. ಸದ್ಯದ ದಿನದ ಕೆಲವು ಕಲ್ಪನಾಕಥೆಗಳು ಯಾವುವು, ಮತ್ತು ಎಚ್ಚರದಿಂದಿರುವ ಅಗತ್ಯವನ್ನು ಯೋಹಾನನು ಹೇಗೆ ಎತ್ತಿಹೇಳಿದನು?
10 ನಾವು ಯಾವುದಕ್ಕೆ ಕಿವಿಗೊಡುತ್ತೇವೊ ಮತ್ತು ಏನನ್ನು ಓದುತ್ತೇವೊ ಅದನ್ನು ಪರೀಕ್ಷಿಸಿ ಆಯ್ಕೆಮಾಡುವವರಾಗಿರುವುದಾದರೆ, ನಾವು ಇಂದು ಕಲ್ಪನಾಕಥೆಗಳಿಂದ ಆಕರ್ಷಿಸಲ್ಪಡುವುದನ್ನು ತಪ್ಪಿಸಬಲ್ಲೆವು. ಉದಾಹರಣೆಗಾಗಿ, ವಾರ್ತಾಮಾಧ್ಯಮವು ಅನೈತಿಕತೆಯನ್ನು ಅನೇಕವೇಳೆ ಪ್ರವರ್ಧಿಸುತ್ತದೆ. ಅನೇಕ ಜನರು ಅಜ್ಞೇಯತಾವಾದವನ್ನು ಇಲ್ಲವೆ ಮುಚ್ಚುಮರೆಯಿಲ್ಲದೆ ನಾಸ್ತಿಕವಾದವನ್ನು ಉತ್ತೇಜಿಸುತ್ತಾರೆ. ಉಚ್ಚ ವಿಮರ್ಶಕರು, ಬೈಬಲ್ ದೇವರ ವಾಕ್ಯವಾಗಿರುವುದಾಗಿ ಅದು ಮಾಡುವ ದಾವೆಯನ್ನು ಅಪಹಾಸ್ಯಮಾಡುತ್ತಾರೆ. ಮತ್ತು ಆಧುನಿಕ ದಿನದ ಧರ್ಮಭ್ರಷ್ಟರು, ಕ್ರೈಸ್ತರ ನಂಬಿಕೆಯನ್ನು ತಪ್ಪುದಾರಿಗೆಳೆಯಲು, ಸಂದೇಹದ ಬೀಜಗಳನ್ನು ಬಿತ್ತಲು ಪ್ರಯತ್ನಿಸುತ್ತಾ ಇದ್ದಾರೆ. ಪ್ರಥಮ ಶತಮಾನದಲ್ಲಿ, ಸುಳ್ಳುಪ್ರವಾದಿಗಳಿಂದ ಒಡ್ಡಲ್ಪಟ್ಟಿದ್ದ ಇದಕ್ಕೆ ಹೋಲುವ ಅಪಾಯದ ಕುರಿತಾಗಿ ಅಪೊಸ್ತಲ ಯೋಹಾನನು ಎಚ್ಚರಿಸಿದ್ದು: “ಪ್ರಿಯರೇ, ಅನೇಕ ಮಂದಿ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” (1 ಯೋಹಾನ 4:1) ಆದುದರಿಂದ ನಾವು ಜಾಗರೂಕರಾಗಿರುವ ಅಗತ್ಯವಿದೆ.
11. ನಾವು ನಂಬಿಕೆಯಲ್ಲಿ ಇದ್ದೇವೊ ಇಲ್ಲವೊ ಎಂಬುದನ್ನು ಪರೀಕ್ಷಿಸಿ ನೋಡುವ ಒಂದು ವಿಧ ಯಾವುದು?
11 ಈ ವಿಷಯದಲ್ಲಿ ಪೌಲನು ಬರೆದುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ.” (2 ಕೊರಿಂಥ 13:5) ನಾವು ಕ್ರೈಸ್ತ ನಂಬಿಕೆಗಳೆಲ್ಲವುಗಳಿಗೆ ಅಂಟಿಕೊಳ್ಳುತ್ತಿದ್ದೇವೊ ಇಲ್ಲವೊ ಎಂಬ ವಿಷಯದಲ್ಲಿ ನಮ್ಮನ್ನೇ ಪರೀಕ್ಷಿಸಿಕೊಳ್ಳುವಂತೆ ಅಪೊಸ್ತಲನು ನಮ್ಮನ್ನು ಪ್ರೇರೇಪಿಸಿದನು. ದುಮ್ಮಾನದ ವ್ಯಕ್ತಿಗಳ ಮಾತುಗಳಿಗೆ ಕಿವಿಗೊಡುವ ಪ್ರವೃತ್ತಿ ನಮಗಿರುವಲ್ಲಿ, ನಾವು ನಮ್ಮನ್ನೇ ಪ್ರಾರ್ಥನಾಪೂರ್ವಕವಾಗಿ ವಿಶ್ಲೇಷಿಸಿಕೊಳ್ಳುವ ಅಗತ್ಯವಿದೆ. (ಕೀರ್ತನೆ 139:23, 24) ಯೆಹೋವನ ಜನರ ದೋಷಗಳನ್ನು ಹುಡುಕುತ್ತಾ ಇರುವ ಪ್ರವೃತ್ತಿ ನಮಗಿದೆಯೊ? ಇರುವಲ್ಲಿ, ಅದೇಕೆ ಇದೆ? ಯಾರೋ ಹೇಳಿದ ಮಾತುಗಳು ಅಥವಾ ಅವರ ಕಾರ್ಯಗಳಿಂದ ನಮ್ಮ ಮನಸ್ಸು ನೋಯಿಸಲ್ಪಟ್ಟಿದೆಯೊ? ಹಾಗಿರುವುದಾದರೆ ನಾವು ಸರಿಯಾದ ದೃಷ್ಟಿಕೋನದಿಂದ ವಿಷಯಗಳನ್ನು ದೃಷ್ಟಿಸುತ್ತಿದ್ದೇವೊ? ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಎದುರಿಸಬಹುದಾದ ಯಾವುದೇ ಸಂಕಟವು ತಾತ್ಕಾಲಿಕವಾಗಿದೆ. (2 ಕೊರಿಂಥ 4:17) ಸಭೆಯಲ್ಲಿ ನಾವು ಯಾವುದೇ ಪರೀಕ್ಷೆಯನ್ನು ಅನುಭವಿಸಿದರೂ, ನಾವು ದೇವರ ಸೇವೆಮಾಡುವುದನ್ನು ಏಕೆ ನಿಲ್ಲಿಸಬೇಕು? ನಮಗೆ ಯಾವುದೊ ವಿಷಯದ ಕುರಿತಾಗಿ ಬೇಸರವಾಗಿರುವಲ್ಲಿ, ಆ ವಿಷಯವನ್ನು ಬಗೆಹರಿಸಲು ನಮ್ಮಿಂದ ಸಾಧ್ಯವಿರುವಷ್ಟನ್ನು ಮಾಡಿ ಅನಂತರ ಅದನ್ನು ಯೆಹೋವನ ಕೈಗಳಲ್ಲಿ ಬಿಟ್ಟುಬಿಡುವುದು ಹೆಚ್ಚು ಉತ್ತಮವಲ್ಲವೊ?—ಕೀರ್ತನೆ 4:4; ಜ್ಞಾನೋಕ್ತಿ 3:5, 6; ಎಫೆಸ 4:26.
12. ಬೆರೋಯದವರು ನಮಗೋಸ್ಕರ ಒಂದು ಒಳ್ಳೇ ಮಾದರಿಯನ್ನಿಟ್ಟದ್ದು ಹೇಗೆ?
12 ಟೀಕಾತ್ಮಕರಾಗಿರುವ ಬದಲು, ವೈಯಕ್ತಿಕ ಅಧ್ಯಯನ ಹಾಗೂ ಸಭಾ ಕೂಟಗಳ ಮೂಲಕ ಸಿಗುವ ಮಾಹಿತಿಯ ಬಗ್ಗೆ ಆತ್ಮಿಕವಾಗಿ ಸ್ವಸ್ಥಕರವಾದ ದೃಷ್ಟಿಕೋನವನ್ನು ಕಾಪಾಡಿಕೊಳ್ಳೋಣ. (1 ಕೊರಿಂಥ 2:14, 15) ಮತ್ತು ದೇವರ ವಾಕ್ಯವನ್ನು ಪ್ರಶ್ನಿಸುವುದರ ಬದಲಿಗೆ, ಶಾಸ್ತ್ರವಚನಗಳನ್ನು ನಿಕಟವಾಗಿ ಪರೀಕ್ಷಿಸಿದ ಪ್ರಥಮ ಶತಮಾನದ ಬೆರೋಯದವರ ಮನೋಭಾವವುಳ್ಳವರಾಗಿರುವುದು ಎಷ್ಟು ಬುದ್ಧಿವಂತಿಕೆಯ ಸಂಗತಿ! (ಅ. ಕೃತ್ಯಗಳು 17:10, 11) ಹಾಗಾದರೆ, ನಾವೇನನ್ನು ಕಲಿಯುತ್ತೇವೊ ಅದಕ್ಕನುಸಾರ ಕ್ರಿಯೆಗೈದು, ಕಲ್ಪನಾಕಥೆಗಳನ್ನು ತಳ್ಳಿಹಾಕಿ, ಸತ್ಯಕ್ಕೆ ಅಂಟಿಕೊಂಡಿರೋಣ.
13. ನಾವು ಗೊತ್ತಿಲ್ಲದೆ ಕಲ್ಪನಾಕಥೆಗಳನ್ನು ಹಬ್ಬಿಸುತ್ತಿರಬಹುದು ಹೇಗೆ?
13 ನಾವು ಎಚ್ಚರದಿಂದಿರಬೇಕಾದ ಇನ್ನೊಂದು ಕಲ್ಪನಾಕಥೆಯ ರೂಪವಿದೆ. ಬಹಳಷ್ಟು ಕೌತುಕಕಾರಿಯಾದ ದಂತಕಥೆಗಳು, ಅನೇಕವೇಳೆ ಇ-ಮೇಲ್ ಮುಖಾಂತರ ಚಲಾವಣೆಯಾಗುತ್ತವೆ. ಇಂಥ ಕಥೆಗಳ ಬಗ್ಗೆ, ವಿಶೇಷವಾಗಿ ಆ ಮಾಹಿತಿಯ ನಿಜ ಮೂಲ ಯಾವುದೆಂದು ನಮಗೆ ಗೊತ್ತಿಲ್ಲದಿರುವಾಗ ಅದರ ಬಗ್ಗೆ ನಾವು ಎಚ್ಚರವಾಗಿರಬೇಕು. ಒಳ್ಳೇ ಹೆಸರುಳ್ಳ ಒಬ್ಬ ಕ್ರೈಸ್ತನಿಂದ ಒಂದು ಅನುಭವ ಅಥವಾ ಕಥೆ ಕಳುಹಿಸಲ್ಪಟ್ಟರೂ, ಆ ವ್ಯಕ್ತಿಗೆ ವಾಸ್ತವಾಂಶಗಳ ಬಗ್ಗೆ ನೇರವಾದ ಮಾಹಿತಿ ಇರಲಿಕ್ಕಿಲ್ಲ. ಆದುದರಿಂದಲೇ, ಪ್ರಮಾಣೀಕರಿಸಲ್ಪಟ್ಟಿರದ ವೃತ್ತಾಂತಗಳನ್ನು ಇನ್ನೊಬ್ಬರಿಗೆ ಹೇಳುವ ಇಲ್ಲವೆ ಕಂಪ್ಯೂಟರ್ನಲ್ಲಿ ಕಳುಹಿಸುವುದರ ಬಗ್ಗೆ ಜಾಗರೂಕರಾಗಿರುವುದು ಪ್ರಾಮುಖ್ಯವಾಗಿದೆ. ಖಂಡಿತವಾಗಿಯೂ ನಾವು “ಭಕ್ತಿರಹಿತವಾದ ಮಿಥ್ಯೆಗಳು” ಇಲ್ಲವೆ “ಪವಿತ್ರವಾದದ್ದನ್ನು ಉಲ್ಲಂಘಿಸುವ ಸುಳ್ಳು ಕಥೆಗಳನ್ನು” ಪುನರುಚ್ಚರಿಸಲು ಬಯಸುವುದಿಲ್ಲ. (1 ತಿಮೊಥೆಯ 4:7; ನ್ಯೂ ಇಂಟರ್ನ್ಯಾಷನಲ್ ವರ್ಷನ್) ನಾವು ಪರಸ್ಪರರೊಂದಿಗೆ ಸತ್ಯವನ್ನಾಡುವ ಹಂಗುಳ್ಳವರಾಗಿರುವುದರಿಂದಲೂ, ಗೊತ್ತಿಲ್ಲದೆ ಅಸತ್ಯಗಳನ್ನು ಹಬ್ಬಿಸುವಂತೆ ಮಾಡುವ ಯಾವುದೇ ಸಂಗತಿಯನ್ನು ದೂರಮಾಡುವ ಮೂಲಕ ನಾವು ವಿವೇಕಯುತವಾಗಿ ಕ್ರಿಯೆಗೈಯುತ್ತಿರುವೆವು.—ಎಫೆಸ 4:25.
-
-
ಕಲಿತಂಥ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುತ್ತಾ ಇರಿಕಾವಲಿನಬುರುಜು—2002 | ಸೆಪ್ಟೆಂಬರ್ 15
-
-
a ಟೊಬಿತ್ ಎಂಬ ಪುಸ್ತಕವು ಪ್ರಾಯಶಃ ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಬರೆಯಲ್ಪಟ್ಟಿದ್ದಿರಬಹುದು. ಇದರಲ್ಲಿ, ಟೊಬಾಯಸ್ ಎಂಬ ಹೆಸರಿನ ಒಬ್ಬ ಯೆಹೂದಿಯ ಕುರಿತಾದ ಮೂಢನಂಬಿಕೆ ತುಂಬಿರುವ ದಂತಕಥೆಯು ಒಳಗೂಡಿದೆ. ಒಂದು ದೈತ್ಯಾಕಾರದ ಮೀನಿನ ಹೃದಯ, ಪಿತ್ತಕೋಶ ಮತ್ತು ಯಕೃತ್ತನ್ನು ಉಪಯೋಗಿಸುವ ಮೂಲಕ ಅವನಿಗೆ ಗುಣಪಡಿಸುವ ಮತ್ತು ದೆವ್ವಗಳನ್ನು ಬಿಡಿಸುವ ಶಕ್ತಿಯಿತ್ತೆಂದು ಹೇಳಲಾಗುತ್ತಿತ್ತು.
-