ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸಿರಿ!
“ನೀವು ನಂಬಿಕೆಯಲ್ಲಿ ಸ್ಥಿರರಾಗಿದ್ದು, . . . ಅವನನ್ನು [ಸೈತಾನನನ್ನು] ಎದುರಿಸಿರಿ.”—1 ಪೇತ್ರ 5:9.
1. (ಎ) ನಾವು ಸೈತಾನನ ವಿರುದ್ಧ ಹೋರಾಡುವುದು ವಿಶೇಷವಾಗಿ ಇಂದು ಏಕೆ ಪ್ರಾಮುಖ್ಯವಾಗಿದೆ? (ಬಿ) ಈ ಹೋರಾಟದಲ್ಲಿ ಜಯ ಗಳಿಸಬಲ್ಲೆವೆಂದು ನಮಗೆ ಹೇಗೆ ಗೊತ್ತು?
ಸೈತಾನನು ಭೂಮಿಯಲ್ಲಿ ಉಳಿದಿರುವ ಅಭಿಷಿಕ್ತರ ಮೇಲೆ ಹಾಗೂ “ಬೇರೆ ಕುರಿ”ಗಳ ಮೇಲೆ ಯುದ್ಧ ಮಾಡುತ್ತಾ ಇದ್ದಾನೆ. (ಯೋಹಾ. 10:16) ಅವನಿಗೆ ಇನ್ನೇನೂ ಸ್ವಲ್ಪ ಸಮಯ ಉಳಿದಿದೆ. ಆ ಸಮಯದಲ್ಲಿ ಯೆಹೋವನ ಸೇವಕರಲ್ಲಿ ಆದಷ್ಟು ಹೆಚ್ಚಿನವರ ನಂಬಿಕೆಯನ್ನು ಕೆಡಿಸಬೇಕೆನ್ನುವುದೇ ಅವನ ಆಸೆ. (ಪ್ರಕಟನೆ 12:9, 12 ಓದಿ.) ಆದರೆ ಸೈತಾನನ ವಿರುದ್ಧದ ಈ ಹೋರಾಟದಲ್ಲಿ ನಮಗೆ ಖಂಡಿತ ಜಯ ಸಿಗಬಲ್ಲದು! “ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು” ಎನ್ನುತ್ತದೆ ಬೈಬಲ್.—ಯಾಕೋ. 4:7.
2, 3. (ಎ) ತಾನು ಅಸ್ತಿತ್ವದಲ್ಲಿದ್ದೇನೆ ಎಂಬುದನ್ನು ಜನರು ನಂಬಬಾರದೆಂದು ಸೈತಾನ ಏಕೆ ಬಯಸುತ್ತಾನೆ? (ಬಿ) ಸೈತಾನನೊಬ್ಬ ನೈಜ ವ್ಯಕ್ತಿಯೆಂದು ನಿಮಗೆ ಹೇಗೆ ಗೊತ್ತು?
2 ಸೈತಾನ ಎಂಬವನು ನಿಜವಾಗಿ ಇದ್ದಾನೆ ಎಂದು ಹೇಳಿದರೆ ತುಂಬ ಜನರು ನಗಾಡುತ್ತಾರೆ, ಅದನ್ನು ನಂಬುವುದಿಲ್ಲ. ಸೈತಾನನು, ದೆವ್ವಗಳು ಇವೆಲ್ಲ ಬರೀ ಕಥೆ ಪುಸ್ತಕಗಳಲ್ಲಿ, ಭೂತಪ್ರೇತದ ಸಿನೆಮಾಗಳಲ್ಲಿ, ವಿಡಿಯೊ ಗೇಮ್ಗಳಲ್ಲಿ ಇರುತ್ತದೆಂದು ನೆನಸುತ್ತಾರೆ. ಸೈತಾನ, ದೆವ್ವ ಇವುಗಳನ್ನೆಲ್ಲ ಬುದ್ಧಿವಂತರು ನಂಬುವುದಿಲ್ಲ ಎನ್ನುವುದು ಅವರ ಎಣಿಕೆ. ಜನರು ನಂಬುವುದಿಲ್ಲವಲ್ಲ ಎಂದು ಸೈತಾನನಿಗೆ ಏನಾದರೂ ಚಿಂತೆ ಇದೆಯಾ? ಇಲ್ಲವೇ ಇಲ್ಲ! ಅವರು ಹಾಗೇ ಅಂದುಕೊಂಡರೆ ಅವರನ್ನು ಮೋಸಗೊಳಿಸುವುದು ಅವನಿಗೆ ಹೆಚ್ಚು ಸುಲಭವಾಗುತ್ತದಲ್ಲಾ! (2 ಕೊರಿಂ. 4:4) ನಿಜವೇನೆಂದರೆ ಇಂಥ ವಿಚಾರಗಳನ್ನು ಅವನೇ ಹಬ್ಬಿಸಿ, ಜನರ ದಾರಿತಪ್ಪಿಸುತ್ತಾನೆ.
3 ಯೆಹೋವನ ಸೇವಕರಾದ ನಾವಾದರೊ ಮೋಸಹೋಗುವುದಿಲ್ಲ. ಸೈತಾನನು ಅಸ್ತಿತ್ವದಲ್ಲಿದ್ದಾನೆ, ಒಬ್ಬ ನೈಜ ವ್ಯಕ್ತಿಯೆಂದು ನಮಗೆ ಗೊತ್ತು. ಹೇಗೆ? ಅವನು ಒಂದು ಸರ್ಪದ ಮೂಲಕ ಹವ್ವಳೊಟ್ಟಿಗೆ ಮಾತಾಡಿದನೆಂದು ಬೈಬಲ್ ಹೇಳುತ್ತದೆ. (ಆದಿ. 3:1-5) ಯೋಬನು ದೇವರ ಸೇವೆ ಮಾಡುತ್ತಿರುವುದರ ಉದ್ದೇಶದ ಬಗ್ಗೆ ಸವಾಲೆಬ್ಬಿಸುತ್ತಾ ಸೈತಾನನು ಯೆಹೋವನೊಟ್ಟಿಗೂ ಮಾತಾಡಿದನು. (ಯೋಬ 1:9-12) ಸೈತಾನನು ಯೇಸುವಿಗೆ ಆಸೆ ತೋರಿಸಿ ಮರುಳುಮಾಡಲು ಪ್ರಯತ್ನಿಸಿದನು. (ಮತ್ತಾ. 4:1-10) ಯೇಸು 1914ರಲ್ಲಿ ರಾಜನಾದ ಬಳಿಕ ಸೈತಾನನು ಭೂಮಿಯಲ್ಲಿ ಉಳಿದಿರುವ ಅಭಿಷಿಕ್ತರೊಂದಿಗೆ “ಯುದ್ಧಮಾಡುವುದಕ್ಕೆ” ಆರಂಭಿಸಿದನು. (ಪ್ರಕ. 12:17) ಈ ಯುದ್ಧ ಈಗಲೂ ನಡೆಯುತ್ತಾ ಇದೆ. ಅಭಿಷಿಕ್ತರ ಮತ್ತು ಬೇರೆ ಕುರಿಗಳ ನಂಬಿಕೆಯನ್ನು ಕೆಡಿಸಲು ಪಿಶಾಚನು ಪ್ರಯತ್ನಿಸುತ್ತಾ ಇದ್ದಾನೆ. ಈ ಯುದ್ಧದಲ್ಲಿ ಜಯ ಗಳಿಸಲು ನಾವು ಸೈತಾನನ ವಿರುದ್ಧ ಹೋರಾಡಬೇಕು, ನಮ್ಮ ನಂಬಿಕೆಯನ್ನು ಬಲವಾಗಿರಿಸಬೇಕು. ಇದನ್ನು ಮಾಡುವ ಮೂರು ವಿಧಗಳನ್ನು ಈ ಲೇಖನ ಚರ್ಚಿಸುತ್ತದೆ.
ಒಣಹೆಮ್ಮೆಯಿಂದ ದೂರವಿರಿ
4. ಸೈತಾನನು ಅಹಂಕಾರದ ಸಾಕಾರಮೂರ್ತಿ ಎಂದೇಕೆ ಹೇಳಬಹುದು?
4 ಸೈತಾನನಿಗಿರುವಷ್ಟು ಅಹಂಕಾರ ಬೇರಾರಿಗೂ ಇಲ್ಲ. ಈ ದುಷ್ಟ ದೂತನು ದೇವರಿಗಿರುವ ಆಳುವ ಹಕ್ಕನ್ನು ಪ್ರಶ್ನಿಸುವಷ್ಟು ಭಂಡ ಧೈರ್ಯ ತೋರಿಸಿದನು. ಬೇರೆಯವರು ಯೆಹೋವನನ್ನು ಬಿಟ್ಟು ತನ್ನನ್ನು ಆರಾಧಿಸುವಂತೆ ಮಾಡುವ ಪ್ರಯತ್ನಕ್ಕೂ ಕೈಹಾಕಿದನು. ಅದಕ್ಕೆ ಅವನನ್ನು ಹೆಮ್ಮೆ ಮತ್ತು ಅಹಂಕಾರದ ಸಾಕಾರಮೂರ್ತಿಯೆಂದೇ ಹೇಳಬಹುದು. ಹಾಗಾಗಿ ನಾವು ಅವನ ವಿರುದ್ಧ ಹೋರಾಡುವ ಒಂದು ವಿಧವೇನೆಂದರೆ, ಹೆಮ್ಮೆಯನ್ನು ದೂರಮಾಡಿ ದೀನರಾಗಿರುವುದೇ. (1 ಪೇತ್ರ 5:5 ಓದಿ.) ಆದರೆ ಹೆಮ್ಮೆ ಅಂದರೇನು? ಎಲ್ಲ ವಿಧದ ಹೆಮ್ಮೆ ಕೆಟ್ಟದಾ?
5, 6. (ಎ) ಎಲ್ಲ ವಿಧದ ಹೆಮ್ಮೆ ಕೆಟ್ಟದಾ? ವಿವರಿಸಿ. (ಬಿ) ಯಾವ ವಿಧದ ಹೆಮ್ಮೆ ಅಪಾಯಕಾರಿ? (ಸಿ) ಇದಕ್ಕೆ ಕೆಲವು ಬೈಬಲ್ ಉದಾಹರಣೆಗಳಾವವು?
5 ಒಂದು ಶಬ್ದಕೋಶಕ್ಕನುಸಾರ ಹೆಮ್ಮೆ ಎನ್ನುವುದು ಸ್ವತಃ ನಮ್ಮ ಬಗ್ಗೆ ನಮಗೇ ಇರುವ ಆತ್ಮವಿಶ್ವಾಸ ಹಾಗೂ ಗೌರವ. ಅದು “ನೀವು ಅಥವಾ ನಿಮ್ಮ ಆಪ್ತರು ಮಾಡಿರುವ ಒಳ್ಳೇ ಕೆಲಸದ ಬಗ್ಗೆ ಇಲ್ಲವೆ ನಿಮ್ಮ ಬಳಿಯೊ ಅವರ ಬಳಿಯೊ ಇರುವ ಒಳ್ಳೇ ವಿಷಯದ ಬಗ್ಗೆಗಿನ ತೃಪ್ತಿ” ಸಹ ಆಗಿರುತ್ತದೆ. ಈ ರೀತಿಯ ಭಾವನೆಯಲ್ಲಿ ತಪ್ಪೇನಿಲ್ಲ. ಅಪೊಸ್ತಲ ಪೌಲನೇ ಥೆಸಲೊನೀಕದಲ್ಲಿದ್ದ ಸಹೋದರರಿಗೆ ಹೀಗಂದನು: “ನೀವು ಸಹಿಸಿಕೊಳ್ಳುತ್ತಿರುವ ಎಲ್ಲ ಹಿಂಸೆಗಳು ಮತ್ತು ಸಂಕಟಗಳ ನಡುವೆಯೂ ನಿಮಗಿರುವ ತಾಳ್ಮೆ ಹಾಗೂ ನಂಬಿಕೆಯ ಕಾರಣದಿಂದ ನಾವು ದೇವರ ಸಭೆಗಳ ಮಧ್ಯೆ ನಿಮ್ಮ ನಿಮಿತ್ತ ಹೆಚ್ಚಳಪಡುತ್ತೇವೆ” ಅಥವಾ ಹೆಮ್ಮೆಪಡುತ್ತೇವೆ. (2 ಥೆಸ. 1:4) ಹೀಗೆ ಬೇರೆಯವರು ಮಾಡಿರುವ ಒಳ್ಳೇ ಕೆಲಸದ ಬಗ್ಗೆ ಮತ್ತು ಸ್ವತಃ ನಮ್ಮ ಬಗ್ಗೆಯೇ ಸ್ವಲ್ಪ ಹೆಮ್ಮೆಪಡುವುದು ಒಳ್ಳೇದೇ. ನಮ್ಮ ಕುಟುಂಬ, ಸಂಸ್ಕೃತಿ, ಬೆಳೆದು ಬಂದ ಸ್ಥಳ ಇವುಗಳ ಬಗ್ಗೆ ಹೇಳಿಕೊಳ್ಳಲು ನಾಚಿಕೆಪಡಬೇಕಾಗಿಲ್ಲ.—ಅ. ಕಾ. 21:39.
6 ಆದರೆ ಇನ್ನೊಂದು ವಿಧದ ಹೆಮ್ಮೆಯೂ ಇದೆ. ಇದು ಸಂಬಂಧಗಳಲ್ಲಿ ಹುಳಿಹಿಂಡುತ್ತದೆ. ಅದರಲ್ಲೂ ಯೆಹೋವನೊಟ್ಟಿಗಿನ ನಮ್ಮ ಸ್ನೇಹವನ್ನು ಕೆಡಿಸುತ್ತದೆ. ಈ ಹೆಮ್ಮೆ ನಮ್ಮಲ್ಲಿದ್ದರೆ, ಬೇರೆಯವರು ನಮಗೆ ಬುದ್ಧಿವಾದದ ಮಾತುಗಳನ್ನು ಹೇಳುವಾಗ ಸಿಟ್ಟುಮಾಡಿಕೊಳ್ಳುತ್ತೇವೆ. ಆ ಬುದ್ಧಿವಾದವನ್ನು ದೀನತೆಯಿಂದ ಸ್ವೀಕರಿಸುವ ಬದಲು ಅದನ್ನು ತಳ್ಳಿಬಿಡುತ್ತೇವೆ. (ಕೀರ್ತ. 141:5) ಈ ರೀತಿಯ ಹೆಮ್ಮೆಯನ್ನು ‘ವಿಪರೀತವಾದ ಸ್ವಾಭಿಮಾನ’ ಅಥವಾ “ತಾವು ಇತರರಿಗಿಂತ ಮೇಲು ಎಂದು ಹೆಚ್ಚಾಗಿ ಕಾರಣವಿಲ್ಲದೆ ನೆನಸುವ ಜನರು ತೋರಿಸುವ ಅಹಂಕಾರ” ಎಂದು ವರ್ಣಿಸಲಾಗಿದೆ. ಇಂಥ ಒಣಹೆಮ್ಮೆಯನ್ನು ಯೆಹೋವನು ದ್ವೇಷಿಸುತ್ತಾನೆ. (ಕೀರ್ತ. 101:5; ಜ್ಞಾನೋ. 6:16, 17) ಆದರೆ ಮಾನವರು ತಮ್ಮ ಬಗ್ಗೆಯೇ ಜಂಬ ಕೊಚ್ಚಿಕೊಳ್ಳುವ ಮೂಲಕ ಹೆಮ್ಮೆ ತೋರಿಸುವಾಗ ಸೈತಾನನಿಗೆ ತುಂಬ ಖುಷಿ. ಏಕೆಂದರೆ ಹೀಗೆ ಅವರು ಅವನ ಅಹಂಕಾರವನ್ನು ಅನುಕರಿಸುತ್ತಿದ್ದಾರೆ. ನಿಮ್ರೋದ, ಫರೋಹ, ಅಬ್ಷಾಲೋಮ ತಮ್ಮ ಬಗ್ಗೆ ಕೊಚ್ಚಿಕೊಂಡಾಗ ಸೈತಾನನಿಗೆಷ್ಟು ಆನಂದ ಆಗಿರಬೇಕೆಂದು ಸ್ವಲ್ಪ ಊಹಿಸಿ! (ಆದಿ. 10:8, 9; ವಿಮೋ. 5:1, 2; 2 ಸಮು. 15:4-6) ಕಾಯಿನನು ದೇವರೊಟ್ಟಿಗಿನ ಸಂಬಂಧವನ್ನು ಕಳೆದುಕೊಳ್ಳಲು ಕಾರಣ ಹೆಮ್ಮೆಯೇ. ಯೆಹೋವನೇ ಅವನಿಗೆ ಬುದ್ಧಿಮಾತನ್ನು ಹೇಳಿದರೂ ಅದಕ್ಕೆ ಕಿವಿಗೊಡಲಿಲ್ಲ. ಅಷ್ಟು ಅಹಂಕಾರ ಅವನಿಗೆ! ಹಠದಿಂದ ದೇವರ ಎಚ್ಚರಿಕೆಯನ್ನು ಅಲಕ್ಷಿಸಿದ. ಯಾವುದೇ ಅಂಜಿಕೆಯಿಲ್ಲದೆ ಯೆಹೋವನ ವಿರುದ್ಧ ಪಾಪವನ್ನೂ ಮಾಡಿದ.—ಆದಿ. 4:6-8.
7, 8. (ಎ) ಜಾತೀವಾದ ಎಂದರೇನು? (ಬಿ) ಅದಕ್ಕೂ ಹೆಮ್ಮೆಗೂ ಏನು ಸಂಬಂಧ? (ಸಿ) ಒಣಹೆಮ್ಮೆ ಸಭೆಯ ಶಾಂತಿಯನ್ನು ಹೇಗೆ ಹಾಳುಮಾಡುತ್ತದೆಂದು ವಿವರಿಸಿ.
7 ಇಂದು ಜನರು ಹೆಮ್ಮೆಯನ್ನು ಅನೇಕ ಹಾನಿಕರ ವಿಧಗಳಲ್ಲಿ ತೋರಿಸುತ್ತಾರೆ. ಒಂದು ವಿಧ ಜಾತೀವಾದ ಆಗಿದೆ. ಒಂದು ಶಬ್ದಕೋಶಕ್ಕನುಸಾರ ಜಾತೀವಾದ ಎನ್ನುವುದು ಬೇರೆ ಜಾತಿ, ಬಣ್ಣ, ಭಾಷೆಯವರಿಗೆ ಸೇರಿದ ಜನರ ವಿರುದ್ಧ ಮನಸ್ಸಲ್ಲೇ ಕೆಟ್ಟ ಅಭಿಪ್ರಾಯ ಇಟ್ಟುಕೊಳ್ಳುವುದು ಆಗಿದೆ. “ಬೇರೆಬೇರೆ ಜಾತಿಯ ಜನರಲ್ಲಿ ಭಿನ್ನಭಿನ್ನ ಗುಣಗಳಿವೆ, ಸಾಮರ್ಥ್ಯಗಳಿವೆ ಮತ್ತು ಕೆಲವೊಂದು ಜಾತಿಗಳು ಸಹಜವಾಗಿಯೇ ಮೇಲು ಇಲ್ಲವೇ ಕೀಳು ಆಗಿವೆ ಎಂಬ ನಂಬಿಕೆ” ಸಹ ಜಾತೀವಾದ ಆಗಿದೆ ಎನ್ನುತ್ತದೆ ಆ ಶಬ್ದಕೋಶ. ಈ ಜಾತೀವಾದದಿಂದ ಜಗಳ-ಹೊಡೆದಾಟಗಳು, ಯುದ್ಧಗಳು, ಸಾಮೂಹಿಕ ಹತ್ಯೆಗಳೂ ನಡೆದಿವೆ.
8 ಇವೆಲ್ಲ ಕ್ರೈಸ್ತ ಸಭೆಯಲ್ಲಂತೂ ನಡೆಯಲೇಬಾರದು. ಹಾಗಿದ್ದರೂ ಒಣಹೆಮ್ಮೆಯಿಂದಾಗಿ ಸಹೋದರ ಸಹೋದರಿಯರ ನಡುವೆ ಮನಸ್ತಾಪಗಳು ಹುಟ್ಟಿ, ಕೈಮೀರಿ ಹೋಗಬಹುದು. ಆರಂಭದ ಕ್ರೈಸ್ತರ ಮಧ್ಯೆಯೂ ಹೀಗಾಯಿತು. ಆದ್ದರಿಂದಲೇ ಯಾಕೋಬನು ಅವರಿಗೆ ಮನಸ್ಸಿಗೆ ನಾಟುವ ಈ ಪ್ರಶ್ನೆಯನ್ನು ಕೇಳಿದನು: “ನಿಮ್ಮಲ್ಲಿ ಕಾದಾಟಗಳು ಮತ್ತು ಜಗಳಗಳು ಯಾವ ಮೂಲದಿಂದ ಉಂಟಾಗುತ್ತವೆ?” (ಯಾಕೋ. 4:1) ಬೇರೆಯವರ ಮೇಲೆ ನಮಗೆ ದ್ವೇಷ ಇದ್ದು, ನಾವು ಅವರಿಗಿಂತ ಮೇಲು ಎಂದನಿಸಿದರೆ ಅವರ ಮನನೋಯಿಸುವ ಹಾಗೆ ಏನಾದರೂ ಮಾಡುತ್ತೇವೆ ಅಥವಾ ಹೇಳುತ್ತೇವೆ. (ಜ್ಞಾನೋ. 12:18) ಹೀಗೆ ಒಣಹೆಮ್ಮೆ ಸಭೆಯ ಶಾಂತಿಯನ್ನು ಹಾಳುಮಾಡುತ್ತದೆ.
9. ಜಾತೀವಾದ ಹಾಗೂ ಅಯೋಗ್ಯ ರೀತಿಯ ಬೇರೆ ಹೆಮ್ಮೆಯ ವಿರುದ್ಧ ಹೋರಾಡುವಂತೆ ಬೈಬಲ್ ಹೇಗೆ ನಮಗೆ ಸಹಾಯಮಾಡುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)
9 ಬೇರೆಯವರಿಗಿಂತ ನಾವೇ ಮೇಲು ಎಂಬ ಭಾವನೆ ನಮಗಿದ್ದರೆ ಈ ಮಾತನ್ನು ನೆನಪಿಡಬೇಕು: “ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬ”ನನ್ನು ಯೆಹೋವನು ದ್ವೇಷಿಸುತ್ತಾನೆ. (ಜ್ಞಾನೋ. 16:5, ಪವಿತ್ರ ಗ್ರಂಥ ಭಾಷಾಂತರ) ನಮ್ಮ ಹೃದಯವನ್ನು ಪರೀಕ್ಷಿಸಿ ಹೀಗೆ ಕೇಳಿಕೊಳ್ಳಬೇಕು: ‘ಬೇರೆ ಜಾತಿ, ದೇಶ, ಸಂಸ್ಕೃತಿಯ ಜನರಿಗಿಂತ ನಾನೇ ಮೇಲು ಎಂದು ನನಗನಿಸುತ್ತದಾ?’ ಹೌದಾದರೆ, ದೇವರು “ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿ”ದನೆಂಬ ಮಾತನ್ನು ನಾವು ಮರೆತಿದ್ದೇವೆಂದು ಅರ್ಥ. (ಅ. ಕಾ. 17:26) ಎಲ್ಲ ಮಾನವರು ಆದಾಮನಿಂದಲೇ ಬಂದಿರುವುದರಿಂದ ನಾವೆಲ್ಲರೂ ಒಂದೇ ಜಾತಿಯವರೆಂದು ಹೇಳಬಹುದು. ಕೆಲವು ಜಾತಿಗಳನ್ನು ಮೇಲು, ಕೆಲವು ಜಾತಿಗಳನ್ನು ಕೀಳು ಆಗಿ ಸೃಷ್ಟಿಸಿದ್ದು ದೇವರೇ ಎಂದು ನಂಬುವುದು ಶುದ್ಧ ಮೂರ್ಖತನ. ಹೀಗೆ ಜಾತಿಗಳ ಬಗ್ಗೆ ಮೇಲು-ಕೀಳು ಎಂದು ನಾವು ಯೋಚಿಸುತ್ತಿರುವಲ್ಲಿ ನಮ್ಮ ಕ್ರೈಸ್ತ ಪ್ರೀತಿ, ಐಕ್ಯವನ್ನು ಭಂಗಮಾಡಲು ಸೈತಾನನಿಗೆ ದಾರಿಮಾಡಿಕೊಡುತ್ತಿದ್ದೇವೆ. (ಯೋಹಾ. 13:35) ಸೈತಾನನ ವಿರುದ್ಧ ಹೋರಾಡಿ, ಜಯ ಗಳಿಸಬೇಕಾದರೆ ಇಂಥ ಎಲ್ಲ ಅಯೋಗ್ಯ ವಿಧದ ಹೆಮ್ಮೆಯಿಂದ ನಾವು ದೂರವಿರಬೇಕು.—ಜ್ಞಾನೋ. 16:18.
ವಸ್ತುಗಳ ಮೇಲಿನ ಆಸೆ, ಲೋಕದ ಮೇಲಿನ ಪ್ರೀತಿಯನ್ನು ದೂರವಿಡಿ
10, 11. (ಎ) ಲೋಕವನ್ನು ಪ್ರೀತಿಸುವುದು ಏಕೆ ಸುಲಭ ಆಗಿರಬಹುದು? (ಬಿ) ದೇಮನಿಗೆ ಲೋಕದ ಮೇಲಿದ್ದ ಪ್ರೀತಿಯ ಫಲಿತಾಂಶವಾಗಿ ಏನಾಯಿತು?
10 ಸೈತಾನನು “ಈ ಲೋಕದ ಅಧಿಪತಿ.” ಅವನೇ ಈ ಲೋಕವನ್ನು ನಿಯಂತ್ರಿಸುತ್ತಿದ್ದಾನೆ. (ಯೋಹಾ. 12:31; 1 ಯೋಹಾ. 5:19) ಆದ್ದರಿಂದಲೇ ಈ ಲೋಕ ಉತ್ತೇಜಿಸುವಂಥ ಅನೇಕ ಸಂಗತಿಗಳು ಬೈಬಲಿನ ಮಟ್ಟಗಳಿಗೆ ವಿರುದ್ಧವಾಗಿವೆ. ಲೋಕದಲ್ಲಿ ಇರುವುದೆಲ್ಲಾ ಕೆಟ್ಟದ್ದೆಂದು ಇದರರ್ಥವಲ್ಲ. ಆದರೆ ಒಂದಂತೂ ನಿಶ್ಚಿತ, ಸೈತಾನನು ತನ್ನ ಲೋಕವನ್ನು ಬಳಸಿ ನಮಗಿರುವ ಆಸೆಗಳ ದುರ್ಬಳಕೆ ಮಾಡಿ, ನಾವು ಪಾಪಮಾಡುವ ಹಾಗೆ ಮಾಡುವನು. ಅಥವಾ ನಾವೇ ಈ ಲೋಕವನ್ನು ಪ್ರೀತಿಸಿ, ಯೆಹೋವನ ಆರಾಧನೆಯನ್ನು ನಿರ್ಲಕ್ಷಿಸುವ ಹಾಗೆ ಮಾಡುವನು.—1 ಯೋಹಾನ 2:15, 16 ಓದಿ.
11 ಆರಂಭದ ಕ್ರೈಸ್ತರಲ್ಲಿ ಕೆಲವರು ಲೋಕವನ್ನು ಪ್ರೀತಿಸಿದರು. ಇಂಥವರಲ್ಲಿ ಒಬ್ಬನ ಬಗ್ಗೆ ಪೌಲನು ಬರೆದದ್ದು: ‘ದೇಮನು ಸದ್ಯದ ವಿಷಯಗಳ ವ್ಯವಸ್ಥೆಯನ್ನು ಪ್ರೀತಿಸಿದ್ದರಿಂದ ನನ್ನನ್ನು ಬಿಟ್ಟು ಹೋದನು.’ (2 ತಿಮೊ. 4:10) ಈ ಲೋಕದ ಯಾವ ಅಂಶವನ್ನು ದೇಮನು ಪ್ರೀತಿಸಿ ಪೌಲನನ್ನು ಬಿಟ್ಟುಹೋದನೆಂದು ಬೈಬಲ್ ನಿರ್ದಿಷ್ಟವಾಗಿ ಹೇಳುವುದಿಲ್ಲ. ಬಹುಶಃ ಯೆಹೋವನ ಸೇವೆಗಿಂತಲೂ ಅವನಿಗೆ ಭೌತಿಕ ವಸ್ತುಗಳ ಮೇಲಿನ ಪ್ರೀತಿ ಹೆಚ್ಚಾಗಿರಬೇಕು. ಈ ಮಾತು ನಿಜವಾಗಿದ್ದರೆ, ಅವನು ದೇವರ ಸೇವೆಯಲ್ಲಿ ಅದ್ಭುತ ಸುಯೋಗಗಳನ್ನು ಪಡೆಯುವ ಅವಕಾಶವನ್ನು ಕಳೆದುಕೊಂಡನು. ಅದು ಸಾರ್ಥಕವಾಗಿತ್ತಾ? ಇಲ್ಲ. ಈ ಲೋಕವು ಕೊಡುವ ಯಾವುದೇ ಸಂಗತಿ ಯೆಹೋವನು ಕೊಡುವ ವಿಷಯಗಳಿಗಿಂತ ಉತ್ತಮವಾಗಿರಲು ಸಾಧ್ಯವೇ ಇಲ್ಲ! ಆದ್ದರಿಂದ ದೇಮನು ಪೌಲನ ಸಹಾಯಕನಾಗಿಯೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು!—ಜ್ಞಾನೋ. 10:22.
12. “ಐಶ್ವರ್ಯದ ಮೋಸಕರವಾದ ಪ್ರಭಾವ”ವನ್ನು ಬಳಸಿ ಸೈತಾನನು ಹೇಗೆ ನಮ್ಮ ಆಸೆಗಳ ದುರ್ಬಳಕೆ ಮಾಡಬಹುದು?
12 ನಮಗೂ ಇಂದು ಹಾಗೆಯೇ ಆಗುವ ಸಾಧ್ಯತೆ ಇದೆ. ಕ್ರೈಸ್ತರಾಗಿರುವುದರಿಂದ ನಮ್ಮ ಮತ್ತು ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಬೇಕೆಂದು ನಮಗಿರುವ ಆಸೆ ಸಹಜವೇ. (1 ತಿಮೊ. 5:8) ಯೆಹೋವನು ಆದಾಮಹವ್ವರನ್ನು ಸುಂದರ ಪರದೈಸಲ್ಲಿಟ್ಟಿದ್ದನೆಂಬ ಸಂಗತಿಯಿಂದ ಗೊತ್ತಾಗುವುದೇನೆಂದರೆ ನಾವು ಬದುಕನ್ನು ಆನಂದಿಸಬೇಕೆಂದು ಯೆಹೋವನು ಬಯಸುತ್ತಾನೆ. (ಆದಿ. 2:9) ಆದರೆ ನಮಗಿರುವ ಈ ಆಸೆಗಳನ್ನು ಸೈತಾನನು ದುರ್ಬಳಕೆ ಮಾಡಬಹುದು. ಇದಕ್ಕಾಗಿ “ಐಶ್ವರ್ಯದ ಮೋಸಕರವಾದ ಪ್ರಭಾವ”ವನ್ನು ಬಳಸುತ್ತಾನೆ. (ಮತ್ತಾ. 13:22) ಹಣ, ಭೌತಿಕ ವಸ್ತುಗಳಿದ್ದರೆ ಮಾತ್ರ ಸಂತೋಷವಾಗಿ ಇರಬಲ್ಲೆವು, ಇವೆಲ್ಲಾ ಇದ್ದರೆ ಮಾತ್ರ ಯಶಸ್ವೀ ವ್ಯಕ್ತಿಗಳೆಂದು ಅನಿಸಿಕೊಳ್ಳುತ್ತೇವೆಂದು ಅನೇಕರು ನೆನಸುತ್ತಾರೆ. ನಮ್ಮ ಅಭಿಪ್ರಾಯವೂ ಇದೇ ಆಗಿದ್ದರೆ ನಮ್ಮ ಬಳಿಯಿರುವ ಅತ್ಯಂತ ಅಮೂಲ್ಯವಾದ ಸಂಗತಿಯನ್ನು ಕಳಕೊಳ್ಳುವ ಸಾಧ್ಯತೆ ಇದೆ. ಅದೇನು? ಯೆಹೋವನೊಟ್ಟಿಗಿನ ನಮ್ಮ ಸ್ನೇಹ! ಯೇಸು ಎಚ್ಚರಿಸಿದ್ದು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.” (ಮತ್ತಾ. 6:24) ನಾವು ಬರೀ ಭೌತಿಕ ವಸ್ತುಗಳನ್ನು ಗಳಿಸಲಿಕ್ಕಾಗಿ ದುಡಿಯುತ್ತಿರುವಲ್ಲಿ ಇದರರ್ಥ ನಾವು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿದ್ದೇವೆ. ಸೈತಾನನಿಗೆ ಬೇಕಾಗಿರುವುದು ಇದೇ! ಹಾಗಾಗಿ ಹಣ ಇಲ್ಲವೇ ವಸ್ತುಗಳು ಯೆಹೋವನೊಟ್ಟಿಗಿನ ನಮ್ಮ ಸ್ನೇಹಕ್ಕಿಂತ ಹೆಚ್ಚು ಮುಖ್ಯವಾಗುವಂತೆ ಯಾವತ್ತೂ ಬಿಡದಿರೋಣ. ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸಬೇಕಾದರೆ ಭೌತಿಕ ವಸ್ತುಗಳ ಬಗ್ಗೆ ನಮಗೆ ಸರಿಯಾದ ಮನೋಭಾವವಿರಬೇಕು.—1 ತಿಮೊಥೆಯ 6:6-10 ಓದಿ.
ಲೈಂಗಿಕ ಅನೈತಿಕತೆಯಿಂದ ದೂರವಿರಿ
13. ವಿವಾಹ ಜೀವನ ಮತ್ತು ಲೈಂಗಿಕತೆಯ ಬಗ್ಗೆ ಈ ಲೋಕ ಹೇಗೆ ತಪ್ಪಾದ ನೋಟವನ್ನು ಹಬ್ಬಿಸಿದೆ?
13 ಸೈತಾನನು ಬಳಸುವ ಇನ್ನೊಂದು ಪಾಶ, ಲೈಂಗಿಕ ಅನೈತಿಕತೆ. ಗಂಡ-ಹೆಂಡತಿ ಒಬ್ಬರಿಗೊಬ್ಬರು ನಿಷ್ಠೆ ತೋರಿಸುವುದು, ಅಷ್ಟೇ ಏಕೆ ವಿವಾಹ ಅನ್ನುವುದೇ ಹಳೇ ಕಾಲದ ಸಂಗತಿಗಳು, ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತದೆಂದು ಅನೇಕರು ನೆನಸುತ್ತಾರೆ. ಉದಾಹರಣೆಗೆ ಒಬ್ಬ ನಟಿ, ವಿವಾಹಸಂಗಾತಿಗೆ ನಿಷ್ಠರಾಗಿ ಉಳಿಯುವುದು ಅಸಾಧ್ಯದ ಮಾತು ಎಂದು ಹೇಳಿದಳು. ಅವಳು ಮುಂದೆ ಹೇಳಿದ್ದು: “ಸಂಗಾತಿಗೆ ನಿಷ್ಠರಾಗಿರುವ ಅಥವಾ ಹಾಗಿರಲು ಇಷ್ಟಪಡುವವರು ಇದ್ದಾರೆ ಅಂತ ನನಗನಿಸುವುದಿಲ್ಲ.” ಒಬ್ಬ ನಟ ಹೇಳಿದ್ದು: “ಜೀವನಪೂರ್ತಿ ಒಂದೇ ಸಂಗಾತಿ ಜೊತೆ ಇರಬೇಕೆನ್ನುವುದು ನಿಜವಾಗಲೂ ಪ್ರಕೃತಿ ನಿಯಮನಾ? ನನಗೇನೊ ಸಂಶಯ!” ಹೀಗೆ ದೇವರು ಮಾಡಿರುವ ವಿವಾಹದ ಏರ್ಪಾಡಿನ ಬಗ್ಗೆ ಸುಪ್ರಸಿದ್ಧ ಜನರೇ ಟೀಕಿಸುವಾಗ ಸೈತಾನನಿಗೆ ತುಂಬ, ತುಂಬ ಸಂತೋಷ ಆಗುತ್ತಿರಬೇಕು. ವಿವಾಹದ ಏರ್ಪಾಡನ್ನು ಸೈತಾನನು ಬೆಂಬಲಿಸುವುದಿಲ್ಲ. ವಿವಾಹ ಜೀವನ ಯಶಸ್ಸಾಗುವುದನ್ನು ಅವನು ನೋಡಲೂ ಇಷ್ಟಪಡುವುದಿಲ್ಲ. ಆದ್ದರಿಂದ ನಾವು ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸಬೇಕಾದರೆ ವಿವಾಹದ ಬಗ್ಗೆ ನಮಗೆ ದೇವರ ನೋಟವಿರಬೇಕು.
14, 15. ಲೈಂಗಿಕ ಅನೈತಿಕತೆ ನಡೆಸುವ ಒತ್ತಡ ಬಂದಾಗ ಏನು ಮಾಡುವಿರಿ?
14 ವಿವಾಹಿತರಾಗಿರಲಿ, ಅವಿವಾಹಿತರಾಗಿರಲಿ ಎಲ್ಲ ವಿಧದ ಲೈಂಗಿಕ ಅನೈತಿಕತೆಯ ವಿರುದ್ಧ ಹೋರಾಡಲು ನಾವು ವಿಶೇಷ ಪ್ರಯತ್ನ ಮಾಡಬೇಕು. ಇದು ಸುಲಭವೇ? ಖಂಡಿತ ಇಲ್ಲ! ನೀವೊಬ್ಬ ಯುವ ವ್ಯಕ್ತಿಯಾಗಿದ್ದರೆ ನಿಮ್ಮ ಸಹಪಾಠಿಗಳು ತಮಗೆ ಇಷ್ಟಬಂದವರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರ ಬಗ್ಗೆ ಕೊಚ್ಚಿಕೊಳ್ಳುವುದನ್ನು ನೀವು ಕೇಳಿರಬಹುದು. ಸೆಕ್ಸ್ಟಿಂಗ್ ಮಾಡುವುದರ ಬಗ್ಗೆ ಅಂದರೆ ಮೊಬೈಲ್ ಮೂಲಕ ಕಾಮಪ್ರಚೋದಕ ಸಂದೇಶಗಳನ್ನು, ಚಿತ್ರಗಳನ್ನು ಕಳುಹಿಸುತ್ತಿರುವುದರ ಬಗ್ಗೆಯೂ ಅವರು ಕೊಚ್ಚಿಕೊಳ್ಳಬಹುದು. ಕೆಲವು ದೇಶಗಳಲ್ಲಿನ ಕಾನೂನು ಸೆಕ್ಸ್ಟಿಂಗನ್ನು ಮಕ್ಕಳ ಅಶ್ಲೀಲ ಚಿತ್ರಗಳನ್ನು ಕಳುಹಿಸುವುದಕ್ಕೆ ಸಮವೆಂದು ಪರಿಗಣಿಸುತ್ತದೆ. ಲೈಂಗಿಕ ಅನೈತಿಕತೆ ಅಥವಾ “ಜಾರತ್ವವನ್ನು ರೂಢಿಮಾಡಿಕೊಂಡಿರುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪಮಾಡುವವನಾಗಿದ್ದಾನೆ” ಎನ್ನುತ್ತದೆ ಬೈಬಲ್. (1 ಕೊರಿಂ. 6:18) ಲೈಂಗಿಕ ಸಂಪರ್ಕದಿಂದಾಗಿ ಹರಡುವ ರೋಗಗಳಿಂದಾಗಿ ತುಂಬ ನರಳಬೇಕಾಗುತ್ತದೆ, ಸಾವೂ ಬರುತ್ತದೆ. ಮದುವೆ ಮುಂಚೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಹೆಚ್ಚಿನ ಯುವ ಜನರು ಹಾಗೆ ಮಾಡಿದಕ್ಕೆ ವಿಷಾದಿಸುತ್ತಾರೆ. ದೇವರ ನಿಯಮಗಳನ್ನು ಮುರಿದರೆ ಕೆಟ್ಟ ಪರಿಣಾಮಗಳೇನೂ ಇಲ್ಲ ಎಂದು ನಂಬುವಂತೆ ಮಾಡುತ್ತದೆ ಮನೋರಂಜನಾ ಜಗತ್ತು. ನಾವು ಅಂಥ ಸುಳ್ಳುಗಳನ್ನು ನಂಬಿದರೆ, “ಪಾಪದ ಮೋಸಕರವಾದ ಪ್ರಭಾವ”ದಿಂದ ದಾರಿತಪ್ಪುವೆವು.—ಇಬ್ರಿ. 3:13.
15 ಲೈಂಗಿಕ ಅನೈತಿಕತೆ ನಡೆಸುವ ಒತ್ತಡ ಬಂದರೆ ಏನು ಮಾಡುವಿರಿ? ಮೊದಲಾಗಿ ಈ ವಿಷಯದಲ್ಲಿ ನಿಮಗೆ ದೌರ್ಬಲ್ಯವಿದೆಯೆಂದು ಒಪ್ಪಿಕೊಳ್ಳಿ. (ರೋಮ. 7:22, 23) ಬಲ ಕೊಡುವಂತೆ ದೇವರನ್ನು ಬೇಡಿಕೊಳ್ಳಿ. (ಫಿಲಿ. 4:6, 7, 13) ಅನೈತಿಕತೆಗೆ ತಳ್ಳುವಂಥ ಸನ್ನಿವೇಶಗಳಿಂದ ದೂರವಿರಿ. (ಜ್ಞಾನೋ. 22:3) ತಪ್ಪುಮಾಡುವ ಒತ್ತಡ ಬಂದಾಗ ಅದನ್ನು ತಕ್ಷಣ ತಿರಸ್ಕರಿಸಿ.—ಆದಿ. 39:12.
16. (ಎ) ಸೈತಾನನು ಯೇಸುವಿಗೆ ತಪ್ಪುಮಾಡುವ ಒತ್ತಡ ತಂದಾಗ ಯೇಸು ಅವನಿಗೆ ಏನಂದನು? (ಬಿ) ಆ ಉದಾಹರಣೆಯಿಂದ ನಾವೇನು ಕಲಿಯಬಲ್ಲೆವು?
16 ಯೇಸು ನಮಗಾಗಿ ಶ್ರೇಷ್ಠ ಮಾದರಿಯನ್ನಿಟ್ಟಿದ್ದಾನೆ. ಸೈತಾನನು ಕೊಟ್ಟ ವಾಗ್ದಾನಗಳಿಂದ ಅವನು ಮೋಸಹೋಗಲಿಲ್ಲ. ಅದರ ಬಗ್ಗೆ ಅರೆಕ್ಷಣ ಯೋಚಿಸಲೂ ಹೋಗಲಿಲ್ಲ. ಬದಲಿಗೆ ತಕ್ಷಣ ದೇವರ ವಾಕ್ಯಕ್ಕೆ ಸೂಚಿಸಿ ‘ಬರೆದದೆ’ ಎಂದು ಹೇಳಿ ಸೈತಾನನಿಗೆ ಉತ್ತರಕೊಟ್ಟನು. (ಮತ್ತಾಯ 4:4-10 ಓದಿ.) ಯೇಸುವಿಗೆ ದೇವರ ವಾಕ್ಯದ ಒಳ್ಳೇ ಪರಿಚಯವಿತ್ತು. ಹಾಗಾಗಿ ಸೈತಾನನು ಅವನಿಗೆ ತಪ್ಪನ್ನು ಮಾಡಲು ಒತ್ತಡ ಹಾಕಿದಾಗ ತಕ್ಷಣ ವಚನಗಳನ್ನು ಉಲ್ಲೇಖಿಸಿ ಹೇಳಲು ಸಾಧ್ಯವಾಯಿತು. ಸೈತಾನನ ವಿರುದ್ಧ ಹೋರಾಡಿ, ಜಯ ಗಳಿಸಬೇಕಾದರೆ ಲೈಂಗಿಕ ಅನೈತಿಕತೆಯ ಒತ್ತಡಕ್ಕೆ ನಾವು ಮಣಿಯಬಾರದು.—1 ಕೊರಿಂ. 6:9, 10.
ತಾಳಿಕೊಂಡು ಹೋರಾಟದಲ್ಲಿ ಜಯ ಗಳಿಸಿ
17, 18. (ಎ) ಸೈತಾನನು ಇನ್ಯಾವ ಪಾಶಗಳನ್ನು ಬಳಸುತ್ತಾನೆ? (ಬಿ) ಇದನ್ನು ನಾವು ನಿರೀಕ್ಷಿಸುತ್ತೇವೆ ಏಕೆ? (ಸಿ) ಸೈತಾನನಿಗೆ ಏನಾಗಲಿದೆ? (ಡಿ) ಈ ಸಂಗತಿ ತಾಳಿಕೊಳ್ಳುವಂತೆ ನಿಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ?
17 ಒಣಹೆಮ್ಮೆ, ವಸ್ತುಗಳ ಮೇಲಿನ ಆಸೆ, ಲೈಂಗಿಕ ಅನೈತಿಕತೆ—ಇವು ಸೈತಾನನ ಪಾಶಗಳಲ್ಲಿ ಬರೀ ಮೂರು. ಇನ್ನೂ ಹೆಚ್ಚು ಇವೆ. ಉದಾಹರಣೆಗೆ, ಕೆಲವು ಕ್ರೈಸ್ತರ ಕುಟುಂಬ ಸದಸ್ಯರು ಅವರನ್ನು ವಿರೋಧಿಸುತ್ತಾರೆ. ಇಲ್ಲವೇ ಅವರ ಸಹಪಾಠಿಗಳು ಗೇಲಿಮಾಡುತ್ತಾರೆ. ಇನ್ನೂ ಕೆಲವು ಕ್ರೈಸ್ತರು ವಾಸಿಸುವಂಥ ದೇಶಗಳಲ್ಲಿನ ಸರ್ಕಾರಗಳು ಸಾರುವ ಕೆಲಸಕ್ಕೆ ತಡೆ ಹಾಕುತ್ತಿವೆ. ಇಂಥ ಕಷ್ಟಗಳನ್ನು ನಾವು ನಿರೀಕ್ಷಿಸುತ್ತೇವೆ. ಏಕೆಂದರೆ ಯೇಸುವೇ ನಮಗೆ ಈ ಎಚ್ಚರಿಕೆ ಕೊಟ್ಟಿದ್ದಾನೆ: “ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನರ ದ್ವೇಷಕ್ಕೆ ಗುರಿಯಾಗುವಿರಿ; ಆದರೆ ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.”—ಮತ್ತಾ. 10:22.
18 ನಾವು ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸುವುದು ಹೇಗೆ? ಯೇಸು ಹೇಳಿದ್ದು: “ನಿಮ್ಮ ತಾಳ್ಮೆಯ ಮೂಲಕ ನಿಮ್ಮ ಪ್ರಾಣಗಳನ್ನು ಗಳಿಸಿಕೊಳ್ಳುವಿರಿ” ಅಂದರೆ ಉಳಿಸಿಕೊಳ್ಳುವಿರಿ. (ಲೂಕ 21:19) ಮನುಷ್ಯ ನಮಗೆ ಏನೇ ಹಾನಿ ಮಾಡಿದರೂ ಅದು ಶಾಶ್ವತವಲ್ಲ. ದೇವರೊಟ್ಟಿಗಿನ ನಮ್ಮ ಸ್ನೇಹವನ್ನು ಸ್ವತಃ ನಾವು ಬಿಟ್ಟರೆ ಬೇರಾರೂ ಕಡಿದುಹಾಕಸಾಧ್ಯವಿಲ್ಲ. (ರೋಮ. 8:38, 39) ಯೆಹೋವನ ನಂಬಿಗಸ್ತ ಸೇವಕರಲ್ಲಿ ಕೆಲವರು ಸತ್ತರೂ ಅದರರ್ಥ ಸೈತಾನನಿಗೆ ಜಯ ಸಿಕ್ಕಿದೆ ಎಂದಲ್ಲ. ಯೆಹೋವನು ಅವರ ಪುನರುತ್ಥಾನ ಮಾಡುವನು. (ಯೋಹಾ. 5:28, 29) ಸೈತಾನನಿಗೆ ಭವಿಷ್ಯವೇ ಇಲ್ಲ. ಈ ದುಷ್ಟ ಲೋಕ ನಾಶವಾದ ಬಳಿಕ ಅವನನ್ನು 1,000 ವರ್ಷಗಳ ವರೆಗೆ ಅಧೋಲೋಕದಲ್ಲಿ ಬಂಧಿಸಿಡಲಾಗುವುದು. (ಪ್ರಕ. 20:1-3) ಕ್ರಿಸ್ತನ ಆಳ್ವಿಕೆಯ 1,000 ವರ್ಷಗಳ ಕೊನೆಯಲ್ಲಿ ಸೈತಾನನನ್ನು “ಸೆರೆಯಿಂದ ಬಿಡುಗಡೆ” ಮಾಡಲಾಗುವುದು. ಪರಿಪೂರ್ಣ ಮಾನವರನ್ನು ದಾರಿತಪ್ಪಿಸಲು ಆಗ ಅವನಿಗೆ ಒಂದು ಕೊನೆ ಅವಕಾಶ ಕೊಡಲಾಗುವುದು. ನಂತರ ಅವನ ನಾಶನವಾಗುವುದು. (ಪ್ರಕ. 20:7-10) ಪಿಶಾಚನಿಗೆ ಭವಿಷ್ಯವಿಲ್ಲ ನಿಜ. ಆದರೆ ನಿಮ್ಮ ಮುಂದೆ ಒಂದು ಒಳ್ಳೇ ಭವಿಷ್ಯವಿದೆ! ಸೈತಾನನ ವಿರುದ್ಧ ಹೋರಾಡುತ್ತಾ ಇರಿ. ನಿಮ್ಮ ನಂಬಿಕೆಯನ್ನು ಬಲವಾಗಿಡಿ. ಸೈತಾನನ ವಿರುದ್ಧ ಹೋರಾಡಿ, ಜಯ ಗಳಿಸುವುದು ನಿಮ್ಮಿಂದ ಖಂಡಿತ ಸಾಧ್ಯ!