ತುಖಿಕ—ಒಬ್ಬ ಭರವಸಾರ್ಹ ಜೊತೆ ಸೇವಕ
ಬೇರೆ ಬೇರೆ ಸಂದರ್ಭಗಳಲ್ಲಿ, ತುಖಿಕನು ಅಪೊಸ್ತಲ ಪೌಲನೊಂದಿಗೆ ಪ್ರಯಾಣಿಸಿದನು ಹಾಗೂ ಅವನ ಸಂದೇಶವಾಹಕನೋಪಾದಿ ಕಾರ್ಯನಡಿಸಿದನು. ಹಣದ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಗಳನ್ನು ಅವನ ವಶಕ್ಕೆ ಒಪ್ಪಿಸಸಾಧ್ಯವಿದ್ದ ಒಬ್ಬ ಪ್ರತಿನಿಧಿಯು ಅವನಾಗಿದ್ದನು. ಶಾಸ್ತ್ರವಚನಗಳು ಅವನ ಭರವಸಾರ್ಹತೆಯನ್ನು—ಎಲ್ಲ ಕ್ರೈಸ್ತರಿಗೆ ಅಗತ್ಯವಾಗಿರುವ ಒಂದು ಗುಣವನ್ನು—ಎತ್ತಿ ತೋರಿಸುವುದರಿಂದ, ಪ್ರಾಯಶಃ ನೀವು ಅವನ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಬಯಸುವಿರಿ.
ಪೌಲನು ತುಖಿಕನನ್ನು “ಪ್ರಿಯ ಸಹೋದರನೂ ನಂಬಿಗಸ್ತನಾದ ಸೇವಕನೂ ಕರ್ತನಲ್ಲಿ ಜೊತೆಯ ದಾಸ”ನು ಎಂದು ವರ್ಣಿಸಿದನು. (ಕೊಲೊಸ್ಸೆ 4:7) ಅಪೊಸ್ತಲ ಪೌಲನು ಅವನನ್ನು ಏಕೆ ಆ ರೀತಿಯಲ್ಲಿ ದೃಷ್ಟಿಸಿದನು?
ಯೆರೂಸಲೇಮಿನ ಪರಿಹಾರ ಕಾರ್ಯಾಚರಣೆ
ಸುಮಾರು ಸಾ.ಶ. 55ರಲ್ಲಿ, ಯೂದಾಯದಲ್ಲಿನ ಕ್ರೈಸ್ತರ ನಡುವೆ ಒಂದು ಭೌತಿಕ ಅಗತ್ಯವು ಉಂಟಾಯಿತು. ಅವರಿಗೆ ನೆರವು ನೀಡಲಿಕ್ಕಾಗಿ ಪೌಲನು, ಯೂರೋಪ್ ಹಾಗೂ ಏಷ್ಯಾ ಮೈನರ್ನಲ್ಲಿರುವ ಸಭೆಗಳ ಸಹಾಯದಿಂದ, ಹಣವನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದನು. ಏಷ್ಯಾ ಜಿಲ್ಲೆಯಿಂದ ಬಂದವನಾಗಿದ್ದ ತುಖಿಕನು, ಈ ಪರಿಹಾರ ಕಾರ್ಯಾಚರಣೆಯಲ್ಲಿ ಒಂದು ಪಾತ್ರವನ್ನು ವಹಿಸಿದನು.
ಈ ಕಾಣಿಕೆಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಉಪದೇಶಗಳನ್ನು ಕೊಟ್ಟಾದ ಬಳಿಕ, ಸಂಗ್ರಹಿಸಲ್ಪಟ್ಟ ಹಣವನ್ನು ಕೊಂಡೊಯ್ಯಲಿಕ್ಕಾಗಿ ಭರವಸಾರ್ಹ ಪುರುಷರನ್ನು ಯೆರೂಸಲೇಮಿಗೆ ಕಳುಹಿಸಬೇಕು ಅಥವಾ ತನ್ನೊಂದಿಗೆ ಅಲ್ಲಿಗೆ ಬರಬೇಕು ಎಂದು ಪೌಲನು ಸೂಚಿಸಿದನು. (1 ಕೊರಿಂಥ 16:1-4) ಅವನು ಗ್ರೀಸ್ನಿಂದ ಯೆರೂಸಲೇಮಿಗೆ ಹೋಗುವ ದೀರ್ಘ ಪ್ರಯಾಣವನ್ನು ಆರಂಭಿಸಿದಾಗ, ಅವನೊಂದಿಗೆ ಅನೇಕ ಪುರುಷರು ಹೋದರು. ಅವರಲ್ಲಿ ತುಖಿಕನೂ ಒಬ್ಬನಾಗಿದ್ದನು ಎಂಬುದು ಸುವ್ಯಕ್ತ. (ಅ. ಕೃತ್ಯಗಳು 20:4) ಅಂತಹ ದೊಡ್ಡ ಗುಂಪಿನ ಆವಶ್ಯಕತೆ ಇದ್ದಿರಬಹುದು, ಏಕೆಂದರೆ ಅನೇಕ ಸಭೆಗಳಿಂದ ಅವರ ವಶಕ್ಕೆ ಒಪ್ಪಿಸಲ್ಪಟ್ಟಿದ್ದ ಹಣವನ್ನು ಅವರು ಕೊಂಡೊಯ್ಯುತ್ತಿದ್ದರು. ಸುರಕ್ಷೆಯ ಅಗತ್ಯವು ತುಂಬ ಗಮನಾರ್ಹವಾದದ್ದಾಗಿರಬಹುದು, ಏಕೆಂದರೆ ದಾರಿಗಳ್ಳರು ಅಲ್ಲಿನ ಸುರಕ್ಷಿತ ಪ್ರಯಾಣಕ್ಕೆ ಬೆದರಿಕೆಯನ್ನು ಒಡ್ಡಿದರು.—2 ಕೊರಿಂಥ 11:26.
ಅರಿಸ್ತಾರ್ಕನು ಹಾಗೂ ತ್ರೊಫಿಮನು ಪೌಲನೊಂದಿಗೆ ಯೆರೂಸಲೇಮಿಗೆ ಹೋಗಿದ್ದರಿಂದ, ತುಖಿಕನು ಮತ್ತು ಇನ್ನಿತರರು ಸಹ ಹೋದರೆಂದು ಕೆಲವರು ಅಭಿಪ್ರಯಿಸುತ್ತಾರೆ. (ಅ. ಕೃತ್ಯಗಳು 21:29; 24:17; 27:1, 2) ತುಖಿಕನು ಈ ಪರಿಹಾರ ಕಾರ್ಯಯೋಜನೆಯಲ್ಲಿ ಒಳಗೂಡಿದ್ದರಿಂದ, ಗ್ರೀಸ್ನಲ್ಲಿ ಸಂಗ್ರಹಿತ ಹಣವನ್ನು ವಿತರಿಸುವುದರಲ್ಲಿ ತೀತನೊಂದಿಗೆ ಕೆಲಸ ಮಾಡಿದ “ಸಹೋದರ”ರು ಎಂದು ಸೂಚಿಸಲ್ಪಟ್ಟ ಅನೇಕರಲ್ಲಿ ಇವನು ಒಬ್ಬನಾಗಿದ್ದಾನೆ. ಮತ್ತು ಇವನು “ಈ ದಯಾಪೂರ್ಣವಾದ ಕೊಡುಗೆಯ ಸಂಬಂಧದಲ್ಲಿ [ಪೌಲನ] ಸಂಚರಣ ಸಂಗಾತಿಯಾಗಿರುವಂತೆ ಸಭೆಗಳಿಂದ ನೇಮಿಸಲ್ಪಟ್ಟಿದ್ದನು” (NW). (2 ಕೊರಿಂಥ 8:18, 19; 12:18) ತುಖಿಕನಿಂದ ಪೂರೈಸಲ್ಪಟ್ಟ ಮೊದಲನೆಯ ನೇಮಕವು ಜವಾಬ್ದಾರಿಯುತವಾದದ್ದಾಗಿ ಇದ್ದಲ್ಲಿ, ಅವನ ಎರಡನೆಯ ನೇಮಕವು ಇನ್ನೂ ಹೆಚ್ಚು ಜವಾಬ್ದಾರಿಯುತವಾದದ್ದಾಗಿತ್ತು.
ರೋಮ್ನಿಂದ ಕೊಲೊಸ್ಸೆಗೆ
ಐದು ಅಥವಾ ಆರು ವರ್ಷಗಳ ಬಳಿಕ (ಸಾ.ಶ. 60-61), ಪೌಲನು ರೋಮ್ನಲ್ಲಿನ ತನ್ನ ಮೊದಲ ಸೆರೆವಾಸದಿಂದ ಬಿಡುಗಡೆಹೊಂದುವ ನಿರೀಕ್ಷೆಯಲ್ಲಿದ್ದನು. ಮನೆಯಿಂದ ನೂರಾರು ಕಿಲೊಮೀಟರುಗಳಷ್ಟು ದೂರದಲ್ಲಿ, ತುಖಿಕನು ಅವನೊಂದಿಗಿದ್ದನು. ಈಗ ತುಖಿಕನು ಏಷ್ಯಾಕ್ಕೆ ಹಿಂದಿರುಗಿ ಹೋಗುತ್ತಿದ್ದನು. ಆ ಕ್ಷೇತ್ರದಲ್ಲಿದ್ದ ಕ್ರೈಸ್ತ ಸಭೆಗಳಿಗೆ ಪತ್ರಗಳನ್ನು ಕಳುಹಿಸಲು, ಮತ್ತು ಫಿಲೆಮೋನನಿಂದ ಓಡಿಹೋಗಿದ್ದ ಓನೆಸೀಮನೆಂಬ ದಾಸನನ್ನು ಕೊಲೊಸ್ಸೆಗೆ ಹಿಂದಿರುಗಿ ಕಳುಹಿಸಲು ಇದು ಪೌಲನಿಗೆ ಅವಕಾಶವನ್ನು ಒದಗಿಸಿತು. ತುಖಿಕನೂ ಓನೆಸೀಮನೂ ಕಡಿಮೆಪಕ್ಷ ಮೂರು ಪತ್ರಗಳನ್ನು ಕೊಂಡೊಯ್ದರು. ಈಗ ಅವು ಬೈಬಲ್ ಕ್ಯಾನನ್ನಲ್ಲಿ ಒಳಗೂಡಿಸಲ್ಪಟ್ಟಿವೆ—ಒಂದು ಎಫೆಸದವರಿಗೆ, ಒಂದು ಕೊಲೊಸ್ಸೆಯವರಿಗೆ, ಮತ್ತು ಒಂದು ಫಿಲೆಮೋನನಿಗೆ. ಕೊಲೊಸ್ಸೆಯಿಂದ ಸುಮಾರು 18 ಕಿಲೊಮೀಟರುಗಳಷ್ಟು ದೂರವಿದ್ದ ಲವೊದಿಕೀಯ ನಗರದಲ್ಲಿದ್ದ ಸಭೆಗೆ ಸಹ ಒಂದು ಪತ್ರವನ್ನು ಕಳುಹಿಸಿದ್ದಿರಬಹುದು.—ಎಫೆಸ 6:21; ಕೊಲೊಸ್ಸೆ 4:7-9, 16; ಫಿಲೆಮೋನ 10-12.
ತುಖಿಕನು ಕೇವಲ ಒಬ್ಬ ಅಂಚೆಗಾರನಾಗಿರಲಿಲ್ಲ. ಅವನು ಒಬ್ಬ ಭರವಸಾರ್ಹ ವೈಯಕ್ತಿಕ ಸಂದೇಶವಾಹಕನಾಗಿದ್ದನು. ಏಕೆಂದರೆ ಪೌಲನು ಬರೆದುದು: “ಪ್ರಿಯ ಸಹೋದರನೂ ನಂಬಿಗಸ್ತನಾದ ಸೇವಕನೂ ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ಸಂಗತಿಗಳನ್ನೆಲ್ಲಾ ನಿಮಗೆ ತಿಳಿಸುವನು. ನೀವು ನನ್ನ ಸಮಾಚಾರವನ್ನು ತಿಳುಕೊಳ್ಳುವ ಹಾಗೆಯೂ ಅವನು ನಿಮ್ಮ ಹೃದಯಗಳನ್ನು ಸಂತೈಸುವ ಹಾಗೆಯೂ ಅವನನ್ನು . . . ಕಳುಹಿಸಿದ್ದೇನೆ.”—ಕೊಲೊಸ್ಸೆ 4:7, 8.
ವಿದ್ವಾಂಸ ಈ. ರ್ಯಾಂಡಾಲ್ಫ್ ರಿಚರ್ಡ್ಸ್ ಸೂಚಿಸುವುದೇನೆಂದರೆ, ಪತ್ರವಾಹಕನು “ಅನೇಕವೇಳೆ ಲಿಖಿತ ಸಂಪರ್ಕವನ್ನು ಮಾತ್ರವಲ್ಲದೆ, ಬರಹಗಾರನ ಹಾಗೂ ಅದನ್ನು ಪಡೆದುಕೊಳ್ಳುವವನ ನಡುವೆ ಒಂದು ವೈಯಕ್ತಿಕ ಸಂಪರ್ಕವಾಗಿದ್ದನು. . . . ಪತ್ರವನ್ನು ರವಾನಿಸುವುದಕ್ಕೆ ಒಬ್ಬ ಭರವಸಾರ್ಹ ವ್ಯಕ್ತಿಯ ಅಗತ್ಯವಿರುವುದಕ್ಕೆ [ಒಂದು ಕಾರಣ]ವು, ಅವನು ಅನೇಕವೇಳೆ ಹೆಚ್ಚಿನ ಮಾಹಿತಿಯನ್ನು ಕೊಂಡೊಯ್ಯುವುದೇ ಆಗಿತ್ತು. ಅನೇಕಾವರ್ತಿ ಬರಹಗಾರನ ಅಂದಾಜಿನ ಮೇರೆಗೆ, ಒಂದು ಪತ್ರವು ಸನ್ನಿವೇಶವೊಂದನ್ನು ಸಂಕ್ಷಿಪ್ತವಾಗಿ ವಿವರಿಸಬಹುದಾದರೂ, ಪತ್ರವನ್ನು ರವಾನಿಸುವವನು, ಆ ಪತ್ರವನ್ನು ಪಡೆದುಕೊಳ್ಳುವವನಿಗೆ ಎಲ್ಲ ವಿವರಗಳನ್ನು ವಿಸ್ತಾರವಾಗಿ ವಿವರಿಸುವಂತೆ ನಿರೀಕ್ಷಿಸಲಾಗುತ್ತದೆ.” ಒಂದು ಪತ್ರವು ಉಪದೇಶಗಳನ್ನು ಹಾಗೂ ತುರ್ತು ವಿಚಾರಗಳನ್ನು ಒಳಗೊಂಡಿರುವುದಾದರೂ, ಇನ್ನಿತರ ವಿಷಯಗಳು ಒಬ್ಬ ಭರವಸಾರ್ಹ ಸಂದೇಶವಾಹಕನಿಂದ ಬಾಯಿಮಾತಿನ ಮೂಲಕ ತಿಳಿಸಲ್ಪಡುತ್ತವೆ.
ಎಫೆಸದವರಿಗೆ, ಕೊಲೊಸ್ಸೆಯವರಿಗೆ, ಹಾಗೂ ಫಿಲೆಮೋನನಿಗೆ ಬರೆಯಲ್ಪಟ್ಟ ಪತ್ರಗಳು, ಪೌಲನು ಹೇಗಿದ್ದನು ಎಂಬುದರ ಕುರಿತು ಸ್ವಲ್ಪವೇ ವಿಷಯವನ್ನು ತಿಳಿಯಪಡಿಸುತ್ತವೆ. ಆದುದರಿಂದ ತುಖಿಕನು ವೈಯಕ್ತಿಕ ಮಾಹಿತಿಯನ್ನು ನೀಡಬೇಕಿತ್ತು, ರೋಮ್ನಲ್ಲಿನ ಪೌಲನ ಪರಿಸ್ಥಿತಿಗಳನ್ನು ವಿವರಿಸಬೇಕಿತ್ತು, ಸಭೆಗಳಲ್ಲಿರುವ ಸನ್ನಿವೇಶಗಳನ್ನು ಸಾಕಷ್ಟು ಗ್ರಹಿಸಿ, ಉತ್ತೇಜನವನ್ನು ಕೊಡಲು ಶಕ್ತನಾಗಿರಬೇಕಾಗಿತ್ತು. ಈ ರೀತಿಯ ಸಂದೇಶಗಳು ಹಾಗೂ ಜವಾಬ್ದಾರಿಗಳು, ಪತ್ರವನ್ನು ಕಳುಹಿಸುವವನನ್ನು ನಂಬಿಗಸ್ತಿಕೆಯಿಂದ ಪ್ರತಿನಿಧಿಸುವರೆಂದು ಯಾರ ಮೇಲೆ ಅವಲಂಬಿಸಸಾಧ್ಯವಿತ್ತೋ ಅಂತಹವರಿಗೆ ಮಾತ್ರ ಒಪ್ಪಿಸಲ್ಪಡುತ್ತಿದ್ದವು. ತುಖಿಕನು ಅಂತಹ ಒಬ್ಬ ವ್ಯಕ್ತಿಯಾಗಿದ್ದನು.
ದೂರದ ನೇಮಕಗಳಲ್ಲಿ ಮೇಲ್ವಿಚಾರಣೆ
ರೋಮ್ನಲ್ಲಿನ ಗೃಹಬಂಧನದಿಂದ ಬಿಡುಗಡೆಗೊಳಿಸಲ್ಪಟ್ಟ ಬಳಿಕ, ಕ್ರೇತ ದ್ವೀಪದಲ್ಲಿದ್ದ ತೀತನನ್ನು ಜೊತೆಗೂಡಲಿಕ್ಕಾಗಿ, ತುಖಿಕನನ್ನಾಗಲಿ ಅರ್ತೆಮನನ್ನಾಗಲಿ ಕಳುಹಿಸಲು ಪೌಲನು ಆಲೋಚಿಸಿದನು. (ತೀತ 1:5; 3:12) ಪೌಲನ ಎರಡನೆಯ ರೋಮನ್ ಸೆರೆವಾಸದ ಸಮಯದಲ್ಲಿ (ಬಹುಶಃ ಸುಮಾರು ಸಾ.ಶ. 65), ಅಪೊಸ್ತಲನು ತುಖಿಕನನ್ನು ಪುನಃ ಎಫೆಸಕ್ಕೆ ಕಳುಹಿಸಿದನು—ಆಗ ಪೌಲನ ಜೊತೆಗಿರಲಿಕ್ಕಾಗಿ ಪ್ರಯಾಣ ಬೆಳೆಸಲಿದ್ದ ತಿಮೊಥೆಯನ ಸ್ಥಾನವನ್ನು ಭರ್ತಿಮಾಡಲಿಕ್ಕಾಗಿ ಕಳುಹಿಸಿದ್ದಿರಬಹುದು.—2 ತಿಮೊಥೆಯ 4:9, 12.
ಈ ಸಮಯಾವಧಿಯಲ್ಲಿ ತುಖಿಕನು ಕ್ರೇತಕ್ಕೆ ಹಾಗೂ ಎಫೆಸಕ್ಕೆ—ಎರಡೂ ಕಡೆ—ಹೋದನೊ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಇವುಗಳಂತಹ ಉಲ್ಲೇಖಗಳು ಸೂಚಿಸುವುದೇನೆಂದರೆ, ಅಪೊಸ್ತಲನ ಶುಶ್ರೂಷೆಯ ಅಂತಿಮ ವರ್ಷಗಳ ವರೆಗೆ, ಅವನು ಪೌಲನ ಆಪ್ತ ಸಹವಾಸಿಗಳಲ್ಲಿ ಒಬ್ಬನಾಗಿ ಉಳಿದಿದ್ದನು. ಜವಾಬ್ದಾರಿಯುತವಾದ ಹಾಗೂ ಬಹುಶಃ ಕಷ್ಟಕರವಾದ ಕೆಲಸಕ್ಕಾಗಿ, ತಿಮೊಥೆಯ ಹಾಗೂ ತೀತರಿಗೆ ಬದಲಾಗಿ ಇವನನ್ನು ಕಳುಹಿಸಲು ಪೌಲನು ಆಲೋಚಿಸುತ್ತಿದ್ದನೆಂದರೆ, ತುಖಿಕನು ಒಬ್ಬ ಪ್ರೌಢ ಕ್ರೈಸ್ತ ಮೇಲ್ವಿಚಾರಕನಾಗಿ ಪರಿಣಮಿಸಿದ್ದನೆಂಬುದು ಇದರಿಂದ ಸುವ್ಯಕ್ತವಾಗುತ್ತದೆ. (ಹೋಲಿಸಿರಿ 1 ತಿಮೊಥೆಯ 1:3; ತೀತ 1:10-13.) ಸಂಚರಣ ಕೆಲಸಕ್ಕಾಗಿ ಹಾಗೂ ದೂರದ ನೇಮಕಗಳಲ್ಲಿ ಉಪಯೋಗಿಸಲ್ಪಡಲಿಕ್ಕಾಗಿ ಅವನು ತೋರಿಸಿದ ಸಿದ್ಧಮನಸ್ಸು, ಪೌಲನಿಗೆ ಹಾಗೂ ಇಡೀ ಕ್ರೈಸ್ತ ಸಭೆಗೆ ಅವನನ್ನು ಪ್ರಯೋಜನಾರ್ಹನನ್ನಾಗಿ ಮಾಡಿತು.
ಇಂದು, ಸ್ವತ್ಯಾಗ ಮನೋಭಾವವುಳ್ಳ ಕ್ರೈಸ್ತರು, ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಗಳಲ್ಲಿ ಸಿದ್ಧಮನಸ್ಸಿನಿಂದ ದೇವರ ಸೇವೆಮಾಡುತ್ತಾರೆ ಅಥವಾ ಇನ್ನೆಲ್ಲಿಯಾದರೂ ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ತಮ್ಮನ್ನು ದೊರಕಿಸಿಕೊಳ್ಳುತ್ತಾರೆ. ಸಾವಿರಾರು ಮಂದಿ, ಮಿಷನೆರಿಗಳೋಪಾದಿ, ಸಂಚರಣ ಮೇಲ್ವಿಚಾರಕರೋಪಾದಿ, ನಿರ್ಮಾಣ ಯೋಜನೆಗಳಲ್ಲಿ ಅಂತಾರಾಷ್ಟ್ರೀಯ ಸೇವಕರೋಪಾದಿ, ವಾಚ್ ಟವರ್ ಸೊಸೈಟಿಯ ಜಾಗತಿಕ ಮುಖ್ಯ ಕಾರ್ಯಾಲಯದಲ್ಲಿ, ಅಥವಾ ಅದರ ಬ್ರಾಂಚ್ಗಳಲ್ಲಿ ಒಂದರಲ್ಲಿನ ನೇಮಕಗಳನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ತುಖಿಕನಂತೆ, ಅಪ್ರಮುಖರಾದರೂ, ಅವರು ಕಷ್ಟಪಟ್ಟು ಕೆಲಸಮಾಡುವವರಾಗಿದ್ದಾರೆ, ಅವರು ದೇವರಿಗೆ ಆತ್ಮೀಯರಾಗಿರುವ ‘ನಂಬಿಗಸ್ತ ಸೇವಕರಾಗಿದ್ದಾರೆ’ ಮತ್ತು ಇತರ ಕ್ರೈಸ್ತರಿಂದ ‘ಕರ್ತನ’ ಭರವಸಾರ್ಹ ‘ಜೊತೆ ದಾಸ’ರಾಗಿ ಪ್ರೀತಿಸಲ್ಪಡುತ್ತಾರೆ.