ಒನೇಸಿಫೊರ ಒಬ್ಬ ಧೀರ ಸಾಂತ್ವನದಾತ
“ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ಭಾವಿಸಿಕೊಂಡು ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ನಿಮಗೂ ಅನ್ಯಾಯಸಂಭವಿಸೀತೆಂದು ತಿಳಿದು ಅನ್ಯಾಯಅನುಭವಿಸುವವರನ್ನು ನೆನಸಿರಿ.” (ಇಬ್ರಿಯ 13:3) ಸುಮಾರು ಸಾ.ಶ. 61ರಲ್ಲಿ ಅಪೊಸ್ತಲ ಪೌಲನು ಈ ಮಾತುಗಳನ್ನು ಬರೆದಾಗ, ಒಂದಕ್ಕಿಂತ ಹೆಚ್ಚಿನ ಸಂದರ್ಭಗಳಲ್ಲಿ ಅವನು ಆ ಮೊದಲೇ ಸೆರೆವಾಸವನ್ನು ಅನುಭವಿಸಿದ್ದನು ಹಾಗೂ ಹುತಾತ್ಮನಾಗಿ ತಾನು ಸಾಯುವ ಮುಂಚೆ ಪುನಃ ಸೆರೆಮನೆಗೆ ಹೋಗಲಿದ್ದನು. (ಅ. ಕೃತ್ಯಗಳು 16:23, 24; 22:24; 23:35; 24:27; 2 ಕೊರಿಂಥ 6:5; 2 ತಿಮೊಥೆಯ 2:9; ಫಿಲೆಮೋನ 1) ತಮ್ಮ ನಂಬಿಕೆಯ ಪರೀಕ್ಷೆಗಳನ್ನು ಅನುಭವಿಸುತ್ತಿರುವ ಜೊತೆವಿಶ್ವಾಸಿಗಳ ಪರಾಮರಿಕೆಯನ್ನು ಮಾಡುವ ಜರೂರಿಯು ಈಗಿನ ಸಭೆಗಳಿಗಿರುವಂತೆಯೇ ಆಗಲೂ ಇತ್ತು.
ಆ ಅಗತ್ಯಕ್ಕೆ ವಿಶೇಷವಾಗಿ ಗಮನಕೊಟ್ಟ ಪ್ರಥಮ ಶತಮಾನದ ಒಬ್ಬ ಶಿಷ್ಯನು ಒನೇಸಿಫೊರನಾಗಿದ್ದನು. ಪೌಲನು ರೋಮಿನಲ್ಲಿ ತನ್ನ ಎರಡನೆಯ ಸೆರೆವಾಸವನ್ನು ಅನುಭವಿಸುತ್ತಿದ್ದ ಸಮಯದಲ್ಲಿ ಅವನು ಭೇಟಿಮಾಡಿದನು. ಅವನ ಸಂಬಂಧದಲ್ಲಿ ಅಪೊಸ್ತಲನು ಬರೆದುದು: “ಒನೇಸಿಫೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ; ಅವನು ಅನೇಕಾವರ್ತಿ ನನ್ನನ್ನು ಆದರಿಸಿದನು; ನನ್ನ ಬೇಡಿಗಳಿಗೆ ನಾಚಿಕೆಪಡದೆ ರೋಮಾಪುರಕ್ಕೆ ಬಂದ ಕೂಡಲೆ ಬಹು ವಿಚಾರಣೆಯಿಂದ ನನ್ನನ್ನು ಹುಡುಕಿ ಕಂಡುಕೊಂಡನು.” (2 ತಿಮೊಥೆಯ 1:16, 17) ಆ ಕೆಲವು ಮಾತುಗಳು ನಿಜವಾಗಿಯೂ ಏನನ್ನು ಅರ್ಥೈಸುತ್ತವೆಂಬುದರ ಕುರಿತು ಚಿಂತನೆಮಾಡಲು ನೀವು ಎಂದಾದರೂ ಸಮಯವನ್ನು ತೆಗೆದುಕೊಂಡಿದ್ದೀರೋ? ಹಾಗೆ ಮಾಡುವುದು ಬಹುಶಃ ಒನೇಸಿಫೊರನಿಗಾಗಿರುವ ನಿಮ್ಮ ಗಣ್ಯತೆಯನ್ನು ಹೆಚ್ಚಿಸುವುದು. ಅವನು ಒಬ್ಬ ಧೀರ ಸಾಂತ್ವನದಾತನಾಗಿದ್ದನೆಂಬುದನ್ನು ನೀವು ನೋಡುವಿರಿ.
ಪೌಲನ ಎರಡನೆಯ ಸೆರೆವಾಸ
ಪೌಲನು ತನ್ನ ಪ್ರಥಮ ಸೆರೆವಾಸದಿಂದ ಬಿಡುಗಡೆಗೊಳಿಸಲ್ಪಟ್ಟ ಅನಂತರ, ಪುನಃ ರೋಮಿನ ಒಂದು ಸೆರೆಮನೆಯಲ್ಲಿ ಇದ್ದನು, ಆದರೆ ವಿಭಿನ್ನ ಪರಿಸ್ಥಿತಿಗಳ ಕೆಳಗೆ. ಮೊದಲು ಅವನ ಸ್ವಂತ ಬಾಡಿಗೆ ಮನೆಯಲ್ಲಿ ಅವನ ಸ್ನೇಹಿತರಿಗೆ ಅವನನ್ನು ಸಂಧಿಸಸಾಧ್ಯವಿತ್ತು ಮತ್ತು ಅವನು ಬಿಡುಗಡೆಯು ಸನ್ನಿಹಿತವಾಗಿತ್ತು ಎಂಬುದರ ಕುರಿತು ಭರವಸೆಯುಳ್ಳವನಾಗಿ ತೋರಿದನು. ಈಗ ಅಧಿಕಾಂಶ ಜನರಿಂದ ತೊರೆಯಲ್ಪಟ್ಟವನಾಗಿ, ಹುತಾತ್ಮತೆಯು ಅವನ ಎದುರಿನಲ್ಲಿ ಕಾಣಿಸಿಕೊಂಡಿತು.—ಅ. ಕೃತ್ಯಗಳು 28:30; 2 ತಿಮೊಥೆಯ 4:6-8, 16; ಫಿಲೆಮೋನ 22.
ಸುಮಾರು ಸಾ.ಶ. 65ರ ಈ ಸಂದರ್ಭದಲ್ಲಿ ಪೌಲನು ಸೆರೆಮನೆಯಲ್ಲಿದ್ದನು. ಹೆಚ್ಚುಕಡಿಮೆ ಒಂದು ವರ್ಷಕ್ಕೆ ಮುಂಚಿತವಾಗಿ—ಸಾ.ಶ. 64, ಜುಲೈ ತಿಂಗಳಿನಲ್ಲಿ—ಬೆಂಕಿಯು ರೋಮಿನಾದ್ಯಂತ ಹಬ್ಬಿ, ನಗರದ 14 ಪ್ರಾಂತಗಳಲ್ಲಿ 10 ಪ್ರಾಂತಗಳಿಗೆ ವ್ಯಾಪಕ ಹಾನಿಯನ್ನು ಉಂಟುಮಾಡಿತು. ರೋಮನ್ ಇತಿಹಾಸಕಾರನಾದ ಟ್ಯಾಸಿಟಸ್ಗನುಸಾರ, ಸಾಮ್ರಾಟ ನಿರೋ “ದಳ್ಳುರಿಯು ಆಜ್ಞೆಯ ಫಲಿತಾಂಶವಾಗಿತ್ತೆಂಬುದರ ದುರ್ಭಾವನೆಯ ನಂಬಿಕೆಯನ್ನು ತೊಲಗಿಸಲು” ಅಶಕ್ತನಾಗಿದ್ದನು. “ಪರಿಣಾಮವಾಗಿ, ತನ್ನ ಕುರಿತಾದ ಆ ಕೆಟ್ಟ ಪ್ರಚಾರದಿಂದ ತಪ್ಪಿಸಿಕೊಳ್ಳಲು, ಅವರ ಅಸಹ್ಯ ಕಾರ್ಯಗಳಿಗಾಗಿ ದ್ವೇಷಿಸಲ್ಪಟ್ಟ, ಸಾಮಾನ್ಯ ಜನರಿಂದ ಕ್ರೈಸ್ತರೆಂದು ಕರೆಯಲ್ಪಟ್ಟ ಒಂದು ವರ್ಗದ ಮೇಲೆ ನಿರೋ ದೋಷಾರೋಪಣೆಯನ್ನು ಹೊರಿಸಿದನು ಮತ್ತು ಅತ್ಯಂತ ತೀವ್ರ ಚಿತ್ರಹಿಂಸೆಗಳಿಗೆ ಗುರಿಪಡಿಸಿದನು. . . . ಅವರನ್ನು ಹೀನಾಯವಾದ ರೀತಿಯಲ್ಲಿ ಸಾಯಿಸಲಾಗುತ್ತಿತ್ತು. ಮೃಗಗಳ ಚರ್ಮಗಳಿಂದ ಹೊದಿಸಲ್ಪಟ್ಟವರಾಗಿ, ಅವರು ನಾಯಿಗಳಿಂದ ಹರಿದುಹಾಕಲ್ಪಟ್ಟು, ಸತ್ತುಹೋದರು ಇಲ್ಲವೇ ಶಿಲುಬೆಗಳಿಗೆ ಜಡಿಯಲ್ಪಟ್ಟರು ಅಥವಾ ದಿನದ ಬೆಳಕು ಕೊನೆಗೊಂಡಾಗ, ರಾತ್ರಿಯ ಜ್ಯೋತಿಯಾಗಿ ಕಾರ್ಯಮಾಡಲು ಜ್ವಾಲೆಗಳಿಗೆ ತುತ್ತಾಗಿ, ದಹಿಸಲ್ಪಟ್ಟರು.”
ಈ ರೀತಿಯ ವಾತಾವರಣದಲ್ಲಿ ಹಾಗೂ ತದ್ರೀತಿಯ ಸಂಭವನೀಯತೆಗಳೊಂದಿಗೆ ಪೌಲನು ಪುನಃ ತನ್ನನ್ನು ಸೆರೆಮನೆಯಲ್ಲಿ ಕಂಡುಕೊಂಡನು. ತನ್ನ ಸ್ನೇಹಿತನಾದ ಒನೇಸಿಫೊರನ ಭೇಟಿಗಳಿಗಾಗಿ ಅವನು ಬಹಳಷ್ಟು ಕೃತಜ್ಞತೆಯುಳ್ಳವನಾಗಿದ್ದುದರಲ್ಲಿ ಆಶ್ಚರ್ಯವೇ ಇಲ್ಲ! ಆದರೆ ಅದೇ ಪರಿಸ್ಥಿತಿಯನ್ನು ನಾವು ಒನೇಸಿಫೊರನ ದೃಷ್ಟಿಕೋನದಿಂದ ನೋಡೋಣ.
ಸೆರೆವಾಸಿಯಾದ ಪೌಲನನ್ನು ಭೇಟಿಮಾಡುವುದು
ಸುವ್ಯಕ್ತವಾಗಿ, ಒನೇಸಿಫೊರನ ಕುಟುಂಬವು ಎಫೆಸದಲ್ಲಿ ವಾಸಿಸಿತು. (2 ತಿಮೊಥೆಯ 1:18; 4:19) ಸಾಮ್ರಾಜ್ಯದ ರಾಜಧಾನಿಗೆ ಒನೇಸಿಫೊರನು ತನ್ನ ಸ್ವಂತ ಕೆಲಸಕ್ಕೆ ಬಂದಿದ್ದನೋ ಅಥವಾ ನಿರ್ದಿಷ್ಟವಾಗಿ ಪೌಲನನ್ನು ಭೇಟಿಮಾಡಲು ಬಂದಿದ್ದನೋ ಎಂಬುದು ತಿಳಿಸಲ್ಪಟ್ಟಿಲ್ಲ. ವಿಷಯವು ಏನೇ ಆಗಿರಲಿ, ಅಪೊಸ್ತಲನು ಹೇಳಿದ್ದು: ‘ಒನೇಸಿಫೊರನು ರೋಮಿನಲ್ಲಿದ್ದಾಗಲೆಲ್ಲ, ಅವನು ನನಗೆ ಅನೇಕ ವೇಳೆ ಚೈತನ್ಯವನ್ನು ತಂದನು.’ (2 ತಿಮೊಥೆಯ 1:16, 17, NW) ಎಂಥ ರೀತಿಯ ಚೈತನ್ಯ? ಒನೇಸಿಫೊರನ ನೆರವು ಭೌತಿಕ ಸಹಾಯವನ್ನು ಒಳಗೊಂಡಿದ್ದಿರಬಹುದಾದರೂ, ಅವನ ಉಪಸ್ಥಿತಿಯು ಪೌಲನನ್ನು ಬಲಪಡಿಸಲು ಹಾಗೂ ಉತ್ತೇಜಿಸಲು ಉದ್ದೀಪನವಾಗಿ ಸಹ ಕಾರ್ಯನಡಿಸಿತೆಂಬುದು ಸುವ್ಯಕ್ತ. ವಾಸ್ತವದಲ್ಲಿ, ಕೆಲವು ಭಾಷಾಂತರಗಳು ಹೀಗೆ ಓದುತ್ತವೆ: “ಅವನು ಅನೇಕ ವೇಳೆ ನನ್ನ ಭಾವಗಳನ್ನು ಉಲ್ಲಾಸಗೊಳಿಸಿದ್ದಾನೆ” ಅಥವಾ “ಅವನು ಅನೇಕ ವೇಳೆ ನನ್ನನ್ನು ಸಂತೈಸಿದ್ದಾನೆ.”
ಆ ಸಮಯದಲ್ಲಿ ರೋಮಿನಲ್ಲಿದ್ದ ಒಬ್ಬ ಕ್ರೈಸ್ತ ಸೆರೆವಾಸಿಯನ್ನು ಭೇಟಿಯಾಗುವ ಬಯಕೆಯನ್ನು ಈಡೇರಿಸಿಕೊಳ್ಳುವುದು ಪಂಥಾಹ್ವಾನಗಳನ್ನು ಒಡ್ಡಿತು. ಪೌಲನ ಪ್ರಥಮ ಸೆರೆವಾಸದ ದಿನಗಳ ಸಮಯಕ್ಕೆ ಅಸದೃಶವಾಗಿ, ರೋಮಿನ ಕ್ರೈಸ್ತರು ಅವನೊಂದಿಗಿನ ಸಂಪರ್ಕವನ್ನು ಕಳೆದುಕೊಂಡುಬಿಟ್ಟಿದ್ದರೆಂಬುದು ಸುವ್ಯಕ್ತ. ರೋಮ್ನಂತಹ ದೊಡ್ಡ ನಗರದಲ್ಲಿ, ಬೇರೆ ಬೇರೆ ಅಪರಾಧಗಳಿಗಾಗಿ ಸೆರೆಮನೆಗೆ ಹಾಕಲ್ಪಟ್ಟಿದ್ದಿರಬಹುದಾದ ದೊಡ್ಡ ಸಂಖ್ಯೆಯ ಕೈದಿಗಳ ಮಧ್ಯೆ ಅಪ್ರಸಿದ್ಧ ಸೆರೆವಾಸಿಯೊಬ್ಬನನ್ನು ಕಂಡುಹಿಡಿಯುವುದು ಸುಲಭವಾದ ಕೆಲಸವಾಗಿರಲಿಲ್ಲ. ಆದಕಾರಣ, ಶ್ರದ್ಧಾಪೂರ್ವಕವಾದೊಂದು ಅನ್ವೇಷಣೆಯು ಆವಶ್ಯಕವಾಗಿತ್ತು. ವಿದ್ವಾಂಸ ಜೋವಾನೀ ರಾಸ್ಟಾನ್ಯೋ ವಿಷಯಗಳನ್ನು ಈ ವಿಧದಲ್ಲಿ ವರ್ಣಿಸುತ್ತಾರೆ: “ಕಷ್ಟಗಳು ಭಿನ್ನವಾಗಿದ್ದಿರಬಹುದು. ಎಲ್ಲಕ್ಕಿಂತ ಮಿಗಿಲಾಗಿ, ಅನ್ವೇಷಣೆಯಲ್ಲಿ ಅಸಾಧಾರಣವಾದ ಎಚ್ಚರಿಕೆಯು ಅಗತ್ಯವಿತ್ತು. ಅಲ್ಲಿ ಇಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಾ, ಹಲವಾರು ಅಪರಾಧಗಳಲ್ಲಿ ಸಿಕ್ಕಿಕೊಂಡಿದ್ದ ಮತಭ್ರಾಂತ ವೃದ್ಧ ಸೆರೆವಾಸಿಯನ್ನು ಹಿಡಿದಿಟ್ಟುಕೊಂಡಿದ್ದ ಸೆರೆಮನೆಯನ್ನು ಕಂಡುಹಿಡಿಯಲು ಕಳವಳವುಳ್ಳವರಾಗಿ ತೋರುವುದು, ಅನುಚಿತ ಸಂದೇಹವನ್ನು ಎಬ್ಬಿಸಿದ್ದಿರಬಹುದು.”
ಲೇಖಕ ಪಿ. ಎನ್. ಹ್ಯಾರಿಸನ್, ಹೀಗೆ ಹೇಳುತ್ತಾ ಅದೇ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ: “ನಾವು ಪಾದಾಚಾರಿಗಳ ಗುಂಪಿನ ನಡುವೆ ಒಂದು ಸ್ಥಿರ ಸಂಕಲ್ಪದ ಮುಖದ ನಸುನೋಟಗಳನ್ನು ಪಡೆದುಕೊಳ್ಳುವಂತೆ ಹಾಗೂ ಅಪರಿಚಿತವಾದ ರಸ್ತೆಗಳ ತೊಳಸು ಬಳಸು ಮಾರ್ಗಗಳಲ್ಲಿ ದಾರಿಮಾಡಿಕೊಳ್ಳುತ್ತಾ, ಅನೇಕ ಬಾಗಿಲುಗಳನ್ನು ತಟ್ಟುತ್ತಾ, ಪ್ರತಿಯೊಂದು ಸುಳಿವನ್ನು ಪಟ್ಟುಬಿಡದೆ ಅನುಸರಿಸಿಕೊಂಡುಹೋಗುತ್ತಾ, ತೆಗೆದುಕೊಳ್ಳುತ್ತಿರುವ ಅಪಾಯಗಳ ಬಗ್ಗೆ ತನಗೆ ಎಚ್ಚರಿಕೆ ನೀಡಲ್ಪಟ್ಟರೂ, ಯಾವುದೋ ಅಪ್ರಸಿದ್ಧ ಸೆರೆಮನೆಯಲ್ಲಿ ಗೊತ್ತಾದ ಧ್ವನಿಯೊಂದು ತನ್ನನ್ನು ಅಭಿವಂದಿಸುವ ಮತ್ತು ರೋಮನ್ ಸೈನಿಕನಿಗೆ ಕೋಳತೊಡಿಸಲ್ಪಟ್ಟ ಪೌಲನನ್ನು ಕಂಡುಕೊಳ್ಳುವ ವರೆಗೆ ತನ್ನ ಶೋಧನೆಯಿಂದ ವಿಮುಖನಾಗದಿರುವ, ಇಜೀಯನ್ನ ದೂರದ ಕರಾವಳಿಯಿಂದ ಬಂದ ಈ ಆಗಂತುಕನನ್ನು ಕಟ್ಟಾಸಕ್ತಿಯಿಂದ ಹಿಂಬಾಲಿಸಿಕೊಂಡು ಹೋಗುವಂತೆ ತೋರುತ್ತದೆ.” ಆ ಸ್ಥಳವು ರೋಮಿನ ಇತರ ಸೆರೆಮನೆಗಳಂತೆ ಇದ್ದಿದ್ದರೆ, ಅದು ಸರಪಳಿಗಳು ಹಾಗೂ ಎಲ್ಲ ವಿಧದ ವೇದನೆಗಳಿಂದ ತುಂಬಿರುವ ತಣ್ಣನೆಯ, ಕತ್ತಲೆಯ ಹಾಗೂ ಹೊಲಸಾದ ಸ್ಥಳವಾಗಿದ್ದಿರಬಹುದು.
ಪೌಲನಂತಹ ಸೆರೆವಾಸಿಯ ಮಿತ್ರನಾಗಿ ಗುರುತಿಸಲ್ಪಡುವುದು ಅಪಾಯಕರವಾಗಿತ್ತು. ಅವನನ್ನು ಭೇಟಿಮಾಡುತ್ತಾ ಇರುವುದು ಇನ್ನೂ ಹೆಚ್ಚು ಅಪಾಯಕರವಾಗಿತ್ತು. ಒಬ್ಬ ಕ್ರೈಸ್ತನಾಗಿ ತನ್ನನ್ನೇ ಬಹಿರಂಗವಾಗಿ ಗುರುತಿಸಿಕೊಳ್ಳುವುದು ಬಂಧನ ಹಾಗೂ ಚಿತ್ರಹಿಂಸೆಯಿಂದಾಗಿ ಸಾಯುವ ಅಪಾಯವನ್ನು ತಂದುಕೊಳ್ಳುವಂತಿತ್ತು. ಆದರೆ ಒನೇಸಿಫೊರನು ಕೇವಲ ಒಂದೆರಡು ಸಲ ಭೇಟಿ ಮಾಡುವುದರಲ್ಲೇ ತೃಪ್ತನಾಗಿರಲಿಲ್ಲ. “ಅನೇಕ ವೇಳೆ” ಹಾಗೆ ಮಾಡಲು ಅವನು ಲಜ್ಜಿತನು ಇಲ್ಲವೇ ಭಯಭೀತನು ಆಗಿರಲಿಲ್ಲ. ಅಪಾಯಗಳ ಎದುರಿನಲ್ಲಿಯೂ ಧೈರ್ಯವಂತ ಹಾಗೂ ಪ್ರೀತಿಪರ ನೆರವನ್ನು ನೀಡುತ್ತಾ, ಒನೇಸಿಫೊರನು “ಫಲಪ್ರದ ಧಾರಕ” ಎಂಬ ತನ್ನ ಹೆಸರಿನ ಅರ್ಥಕ್ಕನುಸಾರ ನಿಜವಾಗಿಯೂ ಜೀವಿಸಿದನು.
ಒನೇಸಿಫೊರನು ಇವೆಲ್ಲವನ್ನು ಏಕೆ ಮಾಡಿದನು? ಬ್ರೈಯನ್ ರಪ್ಸೆಕೀ ಗಮನಿಸಿದ್ದು: “ಸೆರೆಮನೆಯು, ಶಾರೀರಿಕ ಕಷ್ಟಾನುಭವದ ಸ್ಥಳ ಮಾತ್ರವೇ ಆಗಿರಲಿಲ್ಲ ಬದಲಾಗಿ ಸೆರೆವಾಸಿಗೆ ತಂದ ಒತ್ತಡಗಳಿಗೆ ಅದು ಅಗಾಧವಾದ ಕಳವಳದ ಒಂದು ಸ್ಥಳವಾಗಿತ್ತು. ಅಂಥ ಒಂದು ವಾತಾವರಣದಲ್ಲಿ, ನೆರವಿಗರ ಶಾರೀರಿಕ ಉಪಸ್ಥಿತಿ ಹಾಗೂ ಮೌಖಿಕ ಉತ್ತೇಜನಗಳು ಸೆರೆವಾಸಿಗೆ ಭಾವನಾತ್ಮಕವಾಗಿ ಒಂದು ಮಹತ್ತಾದ ಪ್ರೋತ್ಸಾಹನೆಯಾಗಿರಸಾಧ್ಯವಿತ್ತು.” ಒನೇಸಿಫೊರನು ಅದನ್ನು ಸುವ್ಯಕ್ತವಾಗಿ ಗ್ರಹಿಸಿದನು ಹಾಗೂ ತನ್ನ ಮಿತ್ರನನ್ನು ನಿಷ್ಠಾವಂತನಾಗಿ ಬೆಂಬಲಿಸಿದನು. ಪೌಲನು ಅಂಥ ಸಹಾಯವನ್ನು ಎಷ್ಟೊಂದು ಗಣ್ಯಮಾಡಿದ್ದಿರಬಹುದು!
ಒನೇಸಿಫೊರನಿಗೆ ಏನಾಯಿತು?
ತಿಮೊಥೆಯನಿಗೆ ಬರೆದ ತನ್ನ ಎರಡನೆಯ ಪತ್ರದಲ್ಲಿ, ಪೌಲನು ಒನೇಸಿಫೊರನ ಮನೆಯವರಿಗೆ ಅಭಿವಂದನೆಗಳನ್ನು ಕಳುಹಿಸಿದನು ಹಾಗೂ ಅವನ ಬಗ್ಗೆ ಹೇಳಿದ್ದು: “ಅವನು ಆ ದಿನದಲ್ಲಿ ಕರ್ತನಿಂದ [“ಯೆಹೋವನಿಂದ,” NW] ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ದಯಪಾಲಿಸಲಿ.” (2 ತಿಮೊಥೆಯ 1:18; 4:19) “ಆ ದಿನದಲ್ಲಿ” ಎಂಬ ಮಾತುಗಳು, ದೇವರ ನ್ಯಾಯತೀರ್ಪಿನ ದೇವರ ದಿನವನ್ನು ಸೂಚಿಸುತ್ತವೆ ಎಂದು ಅನೇಕರು ನೆನಸುತ್ತಾರೆ ಮತ್ತು ಹೀಗೆ ಒನೇಸಿಫೊರನು ಸತ್ತುಹೋಗಿದ್ದನು ಎಂಬ ತೀರ್ಮಾನಕ್ಕೆ ಬರುತ್ತಾರೆ. ವಿಷಯವು ಹಾಗಿದ್ದಲ್ಲಿ, “ಒನೇಸಿಫೊರನು ಈ ಅಪಾಯಕಾರಿ ಪ್ರದೇಶದೊಳಕ್ಕೆ ಪ್ರವೇಶಿಸಲು ಪುನಃ ಒಮ್ಮೆ ಸಾಹಸಮಾಡಿ, ತನ್ನ ಜೀವವನ್ನು . . . ತೆತ್ತಿದ್ದಿರಬೇಕು” ಎಂದು ಪಿ. ಎನ್. ಹ್ಯಾರಿಸನ್ ಉಲ್ಲೇಖಿಸುತ್ತಾನೆ. ಪತ್ರವು ಬಂದು ತಲಪಿದಾಗ ಒನೇಸಿಫೊರನು ಮನೆಯಿಂದ ಕೇವಲ ಹೊರಗಿದ್ದಿರಬಹುದಷ್ಟೇ, ಇಲ್ಲವೇ ಅವನ ಇಡೀ ಮನೆಯವರಿಗೆ ಕಳುಹಿಸಿದ ಅಭಿವಂದನೆಗಳಲ್ಲಿ ಪೌಲನು ಅವನನ್ನು ಸೇರಿಸಿದ್ದಿರಬಹುದು ಎಂಬುದು ನಿಸ್ಸಂದೇಹ.
“ಅವನು ಆ ದಿನದಲ್ಲಿ ಕರ್ತನಿಂದ [“ಯೆಹೋವನಿಂದ,” NW] ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ದಯಪಾಲಿಸಲಿ” ಎಂಬ ಈ ಹೇಳಿಕೆಯಲ್ಲಿ, ವಿಶೇಷವಾದ ಅರ್ಥಗರ್ಭಿತತೆಯು ಇದೆ ಎಂದು ಕೆಲವರು ನಂಬುತ್ತಾರೆ. ಈ ಮಾತುಗಳು, ಜೀವಿಸುತ್ತಿರುವ ಮೃತ ಪ್ರಾಣಗಳ ಹಾಗೂ ಯಾವುದೋ ಆತ್ಮಿಕ ಕ್ಷೇತ್ರದಲ್ಲಿ ಕಷ್ಟಾನುಭವಿಸುತ್ತಿರಬಹುದಾದವರ ಪರವಾಗಿ ಪ್ರಾರ್ಥನೆಗಳನ್ನು ಮಾಡುವುದನ್ನು ಸಮರ್ಥಿಸುತ್ತವೆ ಎಂಬುದು ಅವರ ಅನಿಸಿಕೆ. ಆದರೂ ಅಂಥ ಒಂದು ವಿಚಾರವು, ಮೃತರಿಗೆ ಯಾವುದೇ ವಿಷಯದ ಪ್ರಜ್ಞೆಯಿರುವುದಿಲ್ಲ ಎಂಬ ಶಾಸ್ತ್ರೀಯ ಬೋಧನೆಯನ್ನು ವಿರೋಧಿಸುತ್ತದೆ. (ಪ್ರಸಂಗಿ 9:5, 10) ಒನೇಸಿಫೊರನು ಮೃತನಾಗಿದ್ದರು ಕೂಡ ಪೌಲನು, ತನ್ನ ಮಿತ್ರನು ದೇವರಿಂದ ಕರುಣೆಯನ್ನು ಕಂಡುಕೊಳ್ಳಲಿ ಎಂಬ ಹಾರೈಕೆಯನ್ನು ವ್ಯಕ್ತಪಡಿಸುತ್ತಿದ್ದನಷ್ಟೇ. “ಆ ಹಾರೈಕೆಯನ್ನು ಎಲ್ಲರಿಗೂ ವ್ಯಕ್ತಪಡಿಸಲು ನಮಗೆ ಹಕ್ಕಿದೆ” ಎಂದು ಆರ್. ಎಫ್. ಹಾರ್ಟನ್ ಹೇಳುತ್ತಾರೆ. “ಆದರೆ ಮೃತರಿಗೆ ಪ್ರಾರ್ಥನೆಯನ್ನು ಮಾಡುವುದು ಮತ್ತು ಅವರಿಗಾಗಿ ಸಂಸ್ಕಾರಗಳನ್ನು ಮಾಡುವ ವಿಚಾರವು [ಅಪೊಸ್ತಲನ] ಮನಸ್ಸಿನಲ್ಲಿರಲಿಲ್ಲ.”
ನಾವು ನಿಷ್ಠಾವಂತ ಸಾಂತ್ವನದಾತರಾಗಿರೋಣ
ಪೌಲನಿಗೆ ನೆರವನ್ನೀಯುವಾಗ ಒನೇಸಿಫೊರನು ನಿಜವಾಗಿಯೂ ತನ್ನ ಜೀವವನ್ನು ಕಳೆದುಕೊಂಡನೋ ಇಲ್ಲವೋ, ಅವನು ಅಪೊಸ್ತಲನನ್ನು ಕಂಡುಹಿಡಿಯಲು ಹಾಗೂ ಅವನನ್ನು ಸೆರೆಮನೆಯಲ್ಲಿ ಭೇಟಿಮಾಡಲು ಅದನ್ನು ಗಂಡಾಂತರಕ್ಕೆ ಈಡುಮಾಡಿಕೊಂಡನೆಂಬುದು ನಿಶ್ಚಯ. ಮತ್ತು ಪೌಲನು, ಒನೇಸಿಫೊರನಿಂದ ತಾನು ಪಡೆದುಕೊಂಡ, ಹೆಚ್ಚು ಅಗತ್ಯವಿದ್ದ ಬೆಂಬಲ ಹಾಗೂ ಉತ್ತೇಜನವನ್ನು ಗಣ್ಯಮಾಡಿದನೆಂಬುದರಲ್ಲಿ ಸಂದೇಹವೇ ಇರಸಾಧ್ಯವಿಲ್ಲ.
ಜೊತೆ ಕ್ರೈಸ್ತರು, ಪರೀಕ್ಷೆ, ಹಿಂಸೆ, ಅಥವಾ ಸೆರೆವಾಸವನ್ನು ಅನುಭವಿಸುವಾಗ, ನಾವು ಅವರನ್ನು ಸಂತೈಸುವ ಹಾಗೂ ಉತ್ತೇಜಿಸುವ ಸ್ಥಿತಿಯಲ್ಲಿರಬಹುದು. ಆದುದರಿಂದ ನಾವು ಅವರ ಪರವಾಗಿ ಪ್ರಾರ್ಥಿಸುತ್ತಾ, ಅವರಿಗೆ ಸಹಾಯಮಾಡಲಿಕ್ಕೆ ನಮ್ಮಿಂದಾದುದೆಲ್ಲವನ್ನು ಪ್ರೀತಿಪರವಾಗಿ ಮಾಡುವಂತಾಗಲಿ. (ಯೋಹಾನ 13:35; 1 ಥೆಸಲೊನೀಕ 5:25) ಒನೇಸಿಫೊರನಂತೆ, ನಾವು ಧೀರ ಸಾಂತ್ವನದಾತರಾಗಿರೋಣ.
[ಪುಟ 31 ರಲ್ಲಿರುವ ಚಿತ್ರ]
ಸೆರೆಮನೆಗೆ ಹಾಕಲ್ಪಟ್ಟಿದ್ದ ಅಪೊಸ್ತಲ ಪೌಲನನ್ನು ಒನೇಸಿಫೊರನು ದಿಟ್ಟತನದಿಂದ ಸಂತೈಸಿದನು