ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು ನಮಗೆ ಯಾವುದು ಸಹಾಯಮಾಡಬಲ್ಲದು?
ಒಂದು ವಾರ್ತಾಪತ್ರಿಕೆಯ ನಾಟಕ ವಿಮರ್ಶಕನು ಒಮ್ಮೆ ನಾಟಕವೊಂದನ್ನು ನೋಡಲು ಹೋದನು. ಅವನಿಗೆ ಅದು ಇಷ್ಟವಾಗಲಿಲ್ಲ. ಆದುದರಿಂದ ಅವನು ಹೀಗೆ ಬರೆದನು: “ನೀವು ಕ್ಷುಲ್ಲಕವಾದದ್ದೇನನ್ನಾದರೂ ನೋಡಲು ಬಯಸುವಲ್ಲಿ, ನೀವು ಈ ನಾಟಕವನ್ನು ನೋಡಲು ಹೋಗಲೇಬೇಕು.” ತದನಂತರ ಈ ನಾಟಕದ ವ್ಯವಸ್ಥಾಪಕರು, ಈ ವಿಮರ್ಶಕನ ಪುನರ್ವಿಮರ್ಶೆಯಿಂದ ತೆಗೆದಂಥ ಒಂದು ವಾಕ್ಯವುಳ್ಳ ಜಾಹೀರಾತನ್ನು ಪ್ರಕಾಶಿಸಿದರು. ಆ ಉಲ್ಲೇಖವು ಇದಾಗಿತ್ತು: “ನೀವು ಈ ನಾಟಕವನ್ನು ನೋಡಲು ಹೋಗಲೇಬೇಕು”! ಈ ಜಾಹೀರಾತು ಆ ವಿಮರ್ಶಕನ ಮಾತುಗಳನ್ನು ಚಾಚೂತಪ್ಪದೆ ಉಲ್ಲೇಖಿಸಿತ್ತು ನಿಜ, ಆದರೆ ಅವುಗಳ ಪೂರ್ವಾಪರವನ್ನು ಲೆಕ್ಕಿಸದೆ ಹಾಗೆ ಮಾಡಿತ್ತು. ಮತ್ತು ಇದು ಆ ವಿಮರ್ಶಕನ ದೃಷ್ಟಿಕೋನವನ್ನು ಘನವಾದ ರೀತಿಯಲ್ಲಿ ತಪ್ಪಾಗಿ ನಿರೂಪಿಸಿತ್ತು.
ಈ ಉದಾಹರಣೆಯು, ಒಂದು ಹೇಳಿಕೆಯ ಪೂರ್ವಾಪರವು ಎಷ್ಟು ಪ್ರಾಮುಖ್ಯವಾಗಿರಬಲ್ಲದು ಎಂಬದನ್ನು ದೃಷ್ಟಾಂತಿಸುತ್ತದೆ. ಪೂರ್ವಾಪರವನ್ನು ಪರಿಗಣಿಸದೇ ಮಾತುಗಳನ್ನು ಬಳಸುವುದು ಅವುಗಳ ಅರ್ಥವನ್ನೇ ತಿರುಚಬಲ್ಲದು. ಯೇಸುವನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಾ ಸೈತಾನನು ಶಾಸ್ತ್ರವಚನದ ಅರ್ಥವನ್ನು ತಿರುಚಿದಾಗ, ಅವನು ಇದನ್ನೇ ಮಾಡಿದನು. (ಮತ್ತಾಯ 4:1-11) ಇನ್ನೊಂದು ಬದಿಯಲ್ಲಿ, ಒಂದು ಹೇಳಿಕೆಯ ಪೂರ್ವಾಪರವನ್ನು ಪರಿಗಣಿಸುವುದು, ಆ ಹೇಳಿಕೆಯ ಅರ್ಥವನ್ನು ಹೆಚ್ಚು ನಿಷ್ಕೃಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡುವುದು. ಈ ಕಾರಣಕ್ಕಾಗಿಯೇ ನಾವು ಒಂದು ಬೈಬಲ್ ವಚನವನ್ನು ಅಧ್ಯಯನ ಮಾಡುವಾಗ, ಆ ಬರಹಗಾರನು ಯಾವುದರ ಬಗ್ಗೆ ಮಾತಾಡುತ್ತಿದ್ದನೆಂಬದನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಯಾವಾಗಲೂ ಅದರ ಪೂರ್ವಾಪರವನ್ನು ನೋಡುವುದು ವಿವೇಕದ ಸಂಗತಿಯಾಗಿದೆ.
ಜಾಗ್ರತೆಯಿಂದ ಉಪಯೋಗಿಸಿರಿ
ಪೂರ್ವಾಪರ ಎಂಬ ಪದವನ್ನು ಒಂದು ಶಬ್ದಕೋಶವು, “ಸಾಮಾನ್ಯವಾಗಿ ಅದರ ಅರ್ಥವನ್ನೂ ಪರಿಣಾಮವನ್ನು ಬಾಧಿಸುವಂಥ, ನಿರ್ದಿಷ್ಟ ಪದ ಇಲ್ಲವೆ ವಾಕ್ಯಭಾಗಕ್ಕೆ ಮುಂಚೆ ಅಥವಾ ನಂತರ ಬರುವ ಲಿಖಿತ ಇಲ್ಲವೆ ಬಾಯಿಮಾತಿನ ಹೇಳಿಕೆಯ ಭಾಗಗಳು” ಎಂದು ಅರ್ಥನಿರೂಪಿಸುತ್ತದೆ. ಪೂರ್ವಾಪರವು, “ಒಂದು ನಿರ್ದಿಷ್ಟ ಘಟನೆ, ಸನ್ನಿವೇಶ, ಇತ್ಯಾದಿಯ ಸುತ್ತಮುತ್ತಲಿನ ಪರಿಸ್ಥಿತಿಗಳು ಇಲ್ಲವೆ ವಾಸ್ತವಾಂಶಗಳು” ಸಹ ಆಗಿರಸಾಧ್ಯವಿದೆ. ಈ ಎರಡನೆಯ ಅರ್ಥದಲ್ಲಿ, “ಪೂರ್ವಾಪರ”ದ ಸಮಾನಾರ್ಥಕ ಪದವು “ಹಿನ್ನೆಲೆ” ಆಗಿರುವುದು. “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು” ಎಂದು ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಮಾತುಗಳನ್ನು ಮನಸ್ಸಿನಲ್ಲಿಡುವಾಗ, ಒಂದು ವಚನದ ಪೂರ್ವಾಪರವನ್ನು ಪರಿಗಣಿಸುವುದು ವಿಶೇಷವಾಗಿ ಪ್ರಾಮುಖ್ಯವಾಗಿರುತ್ತದೆ. (2 ತಿಮೊಥೆಯ 2:15) ದೇವರ ವಾಕ್ಯವನ್ನು ಸರಿಯಾಗಿ ಉಪದೇಶಿಸಲಿಕ್ಕಾಗಿ, ನಾವು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ನಂತರ ಅದನ್ನು ಇತರರಿಗೆ ಪ್ರಾಮಾಣಿಕ ರೀತಿಯಲ್ಲಿ ಹಾಗೂ ನಿಷ್ಕೃಷ್ಟವಾಗಿ ವಿವರಿಸಬೇಕು. ಬೈಬಲಿನ ಗ್ರಂಥಕರ್ತನಾದ ಯೆಹೋವನಿಗಾಗಿರುವ ಗಣ್ಯತೆಯು, ನಾವಿದನ್ನು ಮಾಡಲು ಪ್ರಯತ್ನಿಸುವಂತೆ ಪ್ರಚೋದಿಸುತ್ತದೆ ಮತ್ತು ಪೂರ್ವಾಪರವನ್ನು ಪರಿಗಣಿಸುವುದು ತುಂಬ ಮಹತ್ವಪೂರ್ಣವಾದ ಸಹಾಯಕವಾಗಿರುವುದು.
ಎರಡನೆಯ ತಿಮೊಥೆಯ ಪುಸ್ತಕದ ಹಿನ್ನೆಲೆ
ಉದಾಹರಣೆಗಾಗಿ ನಾವು ಎರಡನೆಯ ತಿಮೊಥೆಯ ಎಂಬ ಬೈಬಲ್ ಪುಸ್ತಕವನ್ನು ಪರಿಶೀಲಿಸೋಣ.a ನಮ್ಮ ಪರಿಶೀಲನೆಯನ್ನು ಆರಂಭಿಸಲಿಕ್ಕಾಗಿ ಮೊದಲಾಗಿ ನಾವು ಆ ಪುಸ್ತಕದ ಹಿನ್ನೆಲೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಎರಡನೆಯ ತಿಮೊಥೆಯ ಪುಸ್ತಕವನ್ನು ಬರೆದವನು ಯಾರು? ಯಾವಾಗ? ಯಾವ ಪರಿಸ್ಥಿತಿಗಳ ಕೆಳಗೆ ಬರೆದನು? ಅನಂತರ ನಾವು ಹೀಗೆ ಕೇಳಬಹುದು: ಆ ಪುಸ್ತಕದ ಶೀರ್ಷಿಕೆಯಲ್ಲೇ ಯಾರ ಹೆಸರಿದೆಯೊ ಆ ‘ತಿಮೊಥೆಯನ’ ಸನ್ನಿವೇಶ ಏನಾಗಿತ್ತು? ಆ ಪುಸ್ತಕದಲ್ಲಿರುವ ಮಾಹಿತಿ ಅವನಿಗೆ ಏಕೆ ಅಗತ್ಯವಾಗಿತ್ತು? ಈ ಪ್ರಶ್ನೆಗಳಿಗಾಗಿ ಉತ್ತರಗಳನ್ನು ಕಂಡುಹಿಡಿಯುವುದು, ಆ ಪುಸ್ತಕದ ಕಡೆಗಿನ ನಮ್ಮ ಗಣ್ಯತೆಯನ್ನು ಬಹಳಷ್ಟು ಹೆಚ್ಚಿಸಿ, ನಾವು ಇಂದು ಅದರಿಂದ ಹೇಗೆ ಪ್ರಯೋಜನಪಡೆಯಬಲ್ಲೆವು ಎಂಬದನ್ನು ಮನಗಾಣಲು ನಮಗೆ ಸಹಾಯಮಾಡುವುದು.
ಎರಡನೆಯ ತಿಮೊಥೆಯ ಪುಸ್ತಕದ ಆರಂಭದ ವಚನಗಳು, ಈ ಪುಸ್ತಕವು ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಒಂದು ಪತ್ರವಾಗಿತ್ತೆಂಬದನ್ನು ಸೂಚಿಸುತ್ತವೆ. ಪೌಲನು ಅದನ್ನು ಬರೆದಾಗ, ಅವನು ಸುವಾರ್ತೆಯ ನಿಮಿತ್ತ ಬಂದಿವಾಸದಲ್ಲಿದ್ದನು ಎಂಬದನ್ನು ಇತರ ವಚನಗಳು ತೋರಿಸುತ್ತವೆ. ಅನೇಕರಿಂದ ತ್ಯಜಿಸಲ್ಪಟ್ಟವನಾಗಿದ್ದ ಪೌಲನಿಗೆ, ತನ್ನ ಅವಸಾನವು ಹತ್ತಿರವಿದೆಯೆಂದು ಅನಿಸುತ್ತಿತ್ತು. (2 ತಿಮೊಥೆಯ 1:15, 16; 2:8-10; 4:6-8) ಹೀಗಿರುವುದರಿಂದ, ಅವನು ಆ ಪುಸ್ತಕವನ್ನು ಸಾ.ಶ. 65ರಷ್ಟಕ್ಕೆ, ರೋಮ್ನಲ್ಲಿ ತನ್ನ ಎರಡನೆಯ ಸೆರೆವಾಸದ ಸಮಯದಲ್ಲಿ ಬರೆದಿದ್ದಿರಬೇಕು. ಅದಾದ ನಂತರ ಸ್ವಲ್ಪದರಲ್ಲೇ ನೀರೊ ಅವನಿಗೆ ಮರಣಶಿಕ್ಷೆಯನ್ನು ವಿಧಿಸಿದನೆಂದು ವ್ಯಕ್ತವಾಗುತ್ತದೆ.
ಇದು ಎರಡನೆಯ ತಿಮೊಥೆಯ ಪುಸ್ತಕದ ಹಿನ್ನೆಲೆಯಾಗಿದೆ. ಹಾಗಿದ್ದರೂ ಪೌಲನು, ತನ್ನ ಸ್ವಂತ ಸಮಸ್ಯೆಗಳ ಬಗ್ಗೆ ದೂರಲಿಕ್ಕಾಗಿ ತಿಮೊಥೆಯನಿಗೆ ಈ ಪತ್ರವನ್ನು ಬರೆಯಲಿಲ್ಲವೆಂಬುದು ಗಮನಾರ್ಹವಾದ ಸಂಗತಿಯಾಗಿದೆ. ಅದರ ಬದಲು ಅವನು ತಿಮೊಥೆಯನ ಮುಂದೆ ಇದ್ದ ಕಷ್ಟಕರ ಸಮಯಗಳ ಬಗ್ಗೆ ಎಚ್ಚರಿಸಿದನು, ಮತ್ತು ತನ್ನ ಸ್ನೇಹಿತನಿಗೆ ಅಪಕರ್ಷಣೆಗಳಿಂದ ದೂರವಿರುವಂತೆ, ‘ಬಲಹೊಂದುತ್ತಾ’ ಇರುವಂತೆ, ಮತ್ತು ತನ್ನ ಉಪದೇಶವನ್ನು ಇತರರಿಗೂ ದಾಟಿಸುವಂತೆ ಉತ್ತೇಜಿಸಿದನು. ಪ್ರತಿಯಾಗಿ, ಇವರು ಸಹ ಇನ್ನಿತರರಿಗೆ ಸಹಾಯಮಾಡಲು ಸಮರ್ಪಕವಾಗಿ ಸಿದ್ಧರಾಗಸಾಧ್ಯವಿತ್ತು. (2 ತಿಮೊಥೆಯ 2:1-7) ಕಷ್ಟಕರ ಪರಿಸ್ಥಿತಿಗಳಲ್ಲಿರುವಾಗಲೂ ಇತರರಿಗಾಗಿ ನಿಸ್ವಾರ್ಥ ಚಿಂತೆಯನ್ನು ವ್ಯಕ್ತಪಡಿಸುವ ವಿಷಯದಲ್ಲಿ ಎಂಥ ಅತ್ಯುತ್ಕೃಷ್ಟ ಮಾದರಿ! ಮತ್ತು ನಮಗಿಂದು ಎಷ್ಟು ಉತ್ತಮವಾದ ಸಲಹೆ!
ಪೌಲನು ತಿಮೊಥೆಯನನ್ನು ‘ಪ್ರಿಯ ಕುಮಾರನು’ ಎಂದು ಕರೆಯುತ್ತಾನೆ. (2 ತಿಮೊಥೆಯ 1:2) ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಅನೇಕ ಬಾರಿ ಈ ಯುವಕನನ್ನು ಪೌಲನ ನಂಬಿಗಸ್ತ ಸಂಗಡಿಗನೆಂದು ತಿಳಿಸಲಾಗಿದೆ. (ಅ. ಕೃತ್ಯಗಳು 16:1-5; ರೋಮಾಪುರ 16:21; 1 ಕೊರಿಂಥ 4:17) ಪೌಲನು ಈ ಪತ್ರವನ್ನು ಅವನಿಗೆ ಬರೆದಾಗ, ತಿಮೊಥೆಯನು ಇನ್ನೂ 30ಗಳ ಪ್ರಾಯದಲ್ಲಿ ಇದ್ದನೆಂದು ತೋರುತ್ತದೆ. ಈ ಪ್ರಾಯವನ್ನು ಆಗಲೂ ಯೌವನಭರಿತವೆಂದು ದೃಷ್ಟಿಸಲಾಗುತ್ತಿತ್ತು. (1 ತಿಮೊಥೆಯ 4:12) ಆದರೆ ಆಗಲೇ ಅವನ ಬಳಿ ನಂಬಿಗಸ್ತಿಕೆಯ ಒಂದು ಅತ್ಯುತ್ಕೃಷ್ಟ ದಾಖಲೆಯಿತ್ತು. ಪ್ರಾಯಶಃ 14 ವರ್ಷಗಳ ವರೆಗೆ ಅವನು ‘ಪೌಲನ ಜೊತೆಯಲ್ಲಿ ಕಷ್ಟಪಟ್ಟು ಕೆಲಸನಡಿಸಿದನು.’ (ಫಿಲಿಪ್ಪಿ 2:19-22) ತಿಮೊಥೆಯನು ಸಂಬಂಧಸೂಚಕವಾಗಿ ಹರೆಯದವನಾಗಿದ್ದರೂ, ಇತರ ಹಿರಿಯರು ‘ವಾಗ್ವಾದಗಳನ್ನು ಮಾಡದೆ,’ ನಂಬಿಕೆ ಮತ್ತು ತಾಳ್ಮೆಯಂಥ ಪ್ರಾಮುಖ್ಯ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಸಲಹೆ ಕೊಡುವ ಜವಾಬ್ದಾರಿಯನ್ನು ಪೌಲನು ಅವನಿಗೆ ಕೊಟ್ಟನು. (2 ತಿಮೊಥೆಯ 2:14) ಸಭಾ ಮೇಲ್ವಿಚಾರಕರ ಮತ್ತು ಶುಶ್ರೂಷಾ ಸೇವಕರ ನೇಮಕಮಾಡುವ ಕೆಲಸವನ್ನೂ ನಿರ್ವಹಿಸಲು ತಿಮೊಥೆಯನು ಅಧಿಕಾರವನ್ನು ಪಡೆದಿದ್ದನು. (1 ತಿಮೊಥೆಯ 5:22) ಆದರೆ ಅವನು ತನ್ನ ಅಧಿಕಾರವನ್ನು ಉಪಯೋಗಿಸುವ ವಿಷಯದಲ್ಲಿ, ಆತ್ಮವಿಶ್ವಾಸದ ಕೊರತೆಯುಳ್ಳವನಾಗಿದ್ದಿರಬಹುದು.—2 ತಿಮೊಥೆಯ 1:6, 7.
ಆ ಯುವ ಹಿರಿಯನ ಮುಂದೆ ಕೆಲವೊಂದು ಗಂಭೀರ ಪಂಥಾಹ್ವಾನಗಳಿದ್ದವು. ಅವುಗಳಲ್ಲೊಂದು ಏನೆಂದರೆ, ಹುಮೆನಾಯ ಮತ್ತು ಪಿಲೇತರೆಂಬ ಇಬ್ಬರು ವ್ಯಕ್ತಿಗಳು, ‘ಪುನರುತ್ಥಾನವು ಆಗಿಹೋಯಿತೆಂದು’ ಕಲಿಸುತ್ತಾ ‘ಕೆಲವರ ನಂಬಿಕೆಯನ್ನು ಕೆಡಿಸುತ್ತಿದ್ದರು.’ (2 ತಿಮೊಥೆಯ 2:17, 18) ಇರುವ ಒಂದೇ ಒಂದು ಪುನರುತ್ಥಾನವು ಆತ್ಮಿಕ ರೀತಿಯದ್ದಾಗಿದೆ ಮತ್ತು ಇದು ಈಗಾಗಲೇ ಕ್ರೈಸ್ತರಿಗೆ ಸಂಭವಿಸಿತ್ತೆಂದು ಅವರು ನಂಬಿರುವಂತೆ ತೋರುತ್ತದೆ. ಪ್ರಾಯಶಃ ಇವರು, ಪಾಪಗಳ ದೆಸೆಯಿಂದ ಸತ್ತವರಾಗಿದ್ದ ಕ್ರೈಸ್ತರು ದೇವರಾತ್ಮದಿಂದ ಬದುಕಿಸಲ್ಪಟ್ಟಿದ್ದಾರೆಂಬ ಪೌಲನ ಹೇಳಿಕೆಯನ್ನು, ಅದರ ಪೂರ್ವಾಪರವನ್ನು ಪರಿಗಣಿಸದೇ ಉಲ್ಲೇಖಿಸುತ್ತಿದ್ದಿರಬಹುದು. (ಎಫೆಸ 2:1-6) ಇಂಥ ಧರ್ಮಭ್ರಷ್ಟ ಪ್ರಭಾವವು ಹೆಚ್ಚುತ್ತಾ ಹೋಗುವುದೆಂದು ಪೌಲನು ಎಚ್ಚರಿಸಿದನು. ಅವನು ಬರೆದುದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; . . . ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.” (2 ತಿಮೊಥೆಯ 4:3, 4) ಪೌಲನ ಮುನ್ನೆಚ್ಚರಿಕೆಯು, ತಿಮೊಥೆಯನು ಅಪೊಸ್ತಲನ ಸಲಹೆಯನ್ನು ಪಾಲಿಸುವುದು ತುರ್ತಿನದ್ದಾಗಿತ್ತು ಎಂಬದನ್ನು ತೋರಿಸಿತು.
ಇಂದು ಆ ಪುಸ್ತಕದ ಮೌಲ್ಯ
ಈ ವರೆಗೂ ನಾವು ನೋಡಿದ ವಿಷಯದಿಂದ, ಪೌಲನು ಎರಡನೆಯ ತಿಮೊಥೆಯ ಎಂಬ ಪುಸ್ತಕವನ್ನು ಕಡಿಮೆಪಕ್ಷ ಈ ಕಾರಣಗಳಿಗಾಗಿ ಬರೆದಿರಬೇಕೆಂಬದನ್ನು ನಾವು ನೋಡಬಲ್ಲೆವು: (1) ತನ್ನ ಅವಸಾನವು ಹತ್ತಿರವಿದೆ ಎಂಬದು ಅವನಿಗೆ ತಿಳಿದಿತ್ತು, ಮತ್ತು ಈ ಕಾರಣದಿಂದ ತಿಮೊಥೆಯನನ್ನು ಬೆಂಬಲಿಸಲು ತಾನಿಲ್ಲದಿರುವಂಥ ಸಮಯಕ್ಕಾಗಿ ಅವನು ತಿಮೊಥೆಯನನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದನು. (2) ತಿಮೊಥೆಯನು ತನ್ನ ಮೇಲ್ವಿಚಾರಣೆಯ ಕೆಳಗಿರುವ ಸಭೆಗಳನ್ನು, ಧರ್ಮಭ್ರಷ್ಟತೆ ಹಾಗೂ ಇತರ ಹಾನಿಕರ ಪ್ರಭಾವಗಳಿಂದ ಸಂರಕ್ಷಿಸಲಿಕ್ಕೋಸ್ಕರ ಪೌಲನು ಅವನನ್ನು ಸಿದ್ಧಪಡಿಸಲು ಬಯಸಿದನು. (3) ಯೆಹೋವನ ಸೇವೆಯಲ್ಲಿ ಕಾರ್ಯಮಗ್ನನಾಗಿರುವಂತೆ ಮತ್ತು ಸುಳ್ಳು ಬೋಧನೆಗಳ ವಿರುದ್ಧ ಅವನು ತೆಗೆದುಕೊಳ್ಳುವ ನಿಲುವಿಗಾಗಿ ಪ್ರೇರಿತ ಶಾಸ್ತ್ರಗಳ ನಿಷ್ಕೃಷ್ಟ ಜ್ಞಾನದ ಮೇಲೆ ಆತುಕೊಳ್ಳುವಂತೆ ಅವನು ತಿಮೊಥೆಯನನ್ನು ಉತ್ತೇಜಿಸಲು ಬಯಸಿದನು.
ಈ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು, ಎರಡನೆಯ ತಿಮೊಥೆಯ ಎಂಬ ಪುಸ್ತಕವನ್ನು ನಮಗೆ ಹೆಚ್ಚು ಅರ್ಥಪೂರ್ಣವಾದದ್ದಾಗಿ ಮಾಡುತ್ತದೆ. ಇಂದು ಕೂಡ ಹುಮೆನಾಯ ಮತ್ತು ಪಿಲೇತರಂಥ ಕೆಲವು ಧರ್ಮಭ್ರಷ್ಟರು ಇದ್ದಾರೆ ಮತ್ತು ಅವರು ತಮ್ಮ ಸ್ವಂತ ವಿಚಾರಗಳನ್ನು ಪ್ರವರ್ಧಿಸಿ, ನಮ್ಮ ನಂಬಿಕೆಯನ್ನು ಭ್ರಷ್ಟಗೊಳಿಸಲು ಬಯಸುತ್ತಾರೆ. ಅಷ್ಟುಮಾತ್ರವಲ್ಲದೆ, ಪೌಲನು ಪ್ರವಾದಿಸಿದಂಥ ‘ಕಠಿನಕಾಲಗಳಿರುವ ಕಡೇ ದಿವಸಗಳು’ ಆರಂಭವಾಗಿವೆ. ಅನೇಕರು ಪೌಲನ ಎಚ್ಚರಿಕೆಯ ಸತ್ಯತೆಯನ್ನು ಅನುಭವಿಸಿದ್ದಾರೆ: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:1, 12) ನಾವು ಹೇಗೆ ದೃಢರಾಗಿ ನಿಲ್ಲಬಲ್ಲೆವು? ತಿಮೊಥೆಯನಂತೆ, ನಾವು ಕೂಡ ಅನೇಕ ವರ್ಷಗಳಿಂದ ಯೆಹೋವನ ಸೇವೆಮಾಡಿರುವವರ ಸಲಹೆಯನ್ನು ಪಾಲಿಸಬೇಕು. ಮತ್ತು ವೈಯಕ್ತಿಕ ಅಧ್ಯಯನ, ಪ್ರಾರ್ಥನೆ ಹಾಗೂ ಕ್ರೈಸ್ತ ಸಹವಾಸದ ಮೂಲಕ, ನಾವು ಯೆಹೋವನ ಅಪಾತ್ರ ದಯೆಯ ಮುಖಾಂತರ ‘ಬಲಹೊಂದುತ್ತಾ’ ಇರಬಲ್ಲೆವು. ಅಷ್ಟುಮಾತ್ರವಲ್ಲದೆ, ನಿಷ್ಕೃಷ್ಟ ಜ್ಞಾನಕ್ಕಿರುವ ಶಕ್ತಿಯಲ್ಲಿನ ಭರವಸೆಯೊಂದಿಗೆ ನಾವು ಪೌಲನ ಈ ಬುದ್ಧಿವಾದಕ್ಕೆ ಕಿವಿಗೊಡಬಹುದು: “ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು.”—2 ತಿಮೊಥೆಯ 1:13.
‘ಸ್ವಸ್ಥಬೋಧನಾವಾಕ್ಯಗಳ ಮಾದರಿ’
ಪೌಲನು ಯಾವುದರ ಬಗ್ಗೆ ಮಾತಾಡಿದನೊ ಆ ‘ಸ್ವಸ್ಥಬೋಧನಾವಾಕ್ಯಗಳು’ ಏನಾಗಿವೆ? ಸತ್ಯ ಕ್ರೈಸ್ತ ಬೋಧನೆಯನ್ನು ಸೂಚಿಸಲಿಕ್ಕಾಗಿ ಅವನು ಈ ಅಭಿವ್ಯಕ್ತಿಯನ್ನು ಉಪಯೋಗಿಸುತ್ತಾನೆ. ತಿಮೊಥೆಯನಿಗೆ ಬರೆದಂಥ ತನ್ನ ಮೊದಲನೆಯ ಪತ್ರದಲ್ಲಿ, ಆ ‘ಸ್ವಸ್ಥವಾದ ಮಾತುಗಳು’ ಮೂಲಭೂತವಾಗಿ ‘ನಮ್ಮ ಕರ್ತನಾದ ಯೇಸು ಕ್ರಿಸ್ತನವುಗಳಾಗಿವೆ’ ಎಂದು ಪೌಲನು ವಿವರಿಸಿದನು. (1 ತಿಮೊಥೆಯ 6:3) ಸ್ವಸ್ಥಬೋಧನಾವಾಕ್ಯಗಳ ಮಾದರಿಯನ್ನು ಅನುಕರಿಸುವುದು, ಸ್ವಸ್ಥವಾದ ಮನಸ್ಸನ್ನು ಹೊಂದುವುದು, ಪ್ರೀತಿಪರವಾದ ಮನೋವೃತ್ತಿಯನ್ನು ಪಡೆಯುವುದು ಮತ್ತು ಇತರರಿಗಾಗಿ ಪರಿಗಣನೆಯನ್ನು ತೋರಿಸುವುದರಲ್ಲಿ ಫಲಿಸುತ್ತದೆ. ಯೇಸುವಿನ ಶುಶ್ರೂಷೆ ಮತ್ತು ಬೋಧನೆಗಳು, ಇಡೀ ಬೈಬಲಿನಲ್ಲಿ ಕಂಡುಬರುವ ಬೇರೆಲ್ಲ ಬೋಧನೆಗಳೊಂದಿಗೆ ಹೊಂದಿಕೆಯಲ್ಲಿ ಇರುವುದರಿಂದ, ‘ಸ್ವಸ್ಥವಾದ ಮಾತುಗಳು’ ಅಥವಾ ‘ಸ್ವಸ್ಥಬೋಧನಾವಾಕ್ಯಗಳು’ ಎಂಬ ಅಭಿವ್ಯಕ್ತಿಯು ಎಲ್ಲಾ ಬೈಬಲ್ ಬೋಧನೆಗಳನ್ನು ಸೂಚಿಸಬಲ್ಲದು.
ಎಲ್ಲಾ ಕ್ರೈಸ್ತ ಹಿರಿಯರಂತೆ, ತಿಮೊಥೆಯನಿಗೂ ಸ್ವಸ್ಥಬೋಧನಾವಾಕ್ಯಗಳ ಮಾದರಿಯು ಕಾಪಾಡಿಕೊಳ್ಳಬೇಕಾಗಿದ್ದ ಒಂದು “ಉತ್ತಮ ಜವಾಬ್ದಾರಿ” ಆಗಿತ್ತು. (2 ತಿಮೊಥೆಯ 1:13, 14, NW) ತಿಮೊಥೆಯನು ‘ದೇವರ ವಾಕ್ಯವನ್ನು ಸಾರಬೇಕಿತ್ತು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರಬೇಕಿತ್ತು, ಪೂರ್ಣದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸಿ, ಗದರಿಸಿ, ಎಚ್ಚರಿಸಬೇಕಾಗಿತ್ತು.’ (2 ತಿಮೊಥೆಯ 4:2) ತಿಮೊಥೆಯನ ದಿನಗಳಲ್ಲಿ ಧರ್ಮಭ್ರಷ್ಟ ಬೋಧನೆಗಳು ಹಬ್ಬುತ್ತಾ ಇದ್ದವೆಂಬದನ್ನು ನಾವು ಗ್ರಹಿಸುವಾಗ, ಪೌಲನು ಸ್ವಸ್ಥವಾದ ಮಾತುಗಳನ್ನು ಬೋಧಿಸುವುದರ ತುರ್ತಿಗೆ ಏಕೆ ಒತ್ತುಕೊಟ್ಟನೆಂಬದನ್ನು ನಾವು ಗ್ರಹಿಸಸಾಧ್ಯವಿದೆ. ದೀರ್ಘಶಾಂತಿಯಿಂದ ‘ಖಂಡಿಸಿ, ಗದರಿಸಿ, ಎಚ್ಚರಿಸಿ,’ ಉತ್ತಮ ಬೋಧನಾ ಸಾಮರ್ಥ್ಯವನ್ನು ಬಳಸುವ ಮೂಲಕ ತಿಮೊಥೆಯನು ಏಕೆ ಹಿಂಡನ್ನು ಸಂರಕ್ಷಿಸಬೇಕಾಗುವುದು ಎಂಬದನ್ನು ಸಹ ನಾವು ಅರ್ಥಮಾಡಿಕೊಳ್ಳಬಹುದು.
ತಿಮೊಥೆಯನು ಯಾರಿಗೆ ವಾಕ್ಯವನ್ನು ಸಾರಬೇಕಿತ್ತು? ಒಬ್ಬ ಹಿರಿಯನೋಪಾದಿ ತಿಮೊಥೆಯನು ವಾಕ್ಯವನ್ನು ಕ್ರೈಸ್ತ ಸಭೆಯೊಳಗೆ ಸಾರಬೇಕಿತ್ತೆಂದು ಪೂರ್ವಾಪರವು ಸೂಚಿಸುತ್ತದೆ. ವಿರೋಧಿಗಳು ಒತ್ತಡಗಳನ್ನು ಹೇರುತ್ತಿದ್ದದರಿಂದ, ತಿಮೊಥೆಯನು ತನ್ನ ಆತ್ಮಿಕ ಸಮತೂಕವವನ್ನು ಕಾಪಾಡಿಕೊಂಡು, ಮಾನವ ತತ್ತ್ವಜ್ಞಾನಗಳು, ವೈಯಕ್ತಿಕ ವಿಚಾರಗಳು ಇಲ್ಲವೆ ನಿಷ್ಪ್ರಯೋಜಕ ಊಹಾಪೋಹಗಳನ್ನಲ್ಲ, ಬದಲಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಘೋಷಿಸಬೇಕಿತ್ತು. ತಪ್ಪು ಪ್ರವೃತ್ತಿಗಳಿದ್ದಿರಬಹುದಾದ ಕೆಲವರಿಂದ ಇದು ವಿರೋಧವನ್ನು ತರಸಾಧ್ಯವಿತ್ತು ನಿಜ. (2 ತಿಮೊಥೆಯ 1:6-8; 2:1-3, 23-26; 3:14, 15) ಆದರೆ ಪೌಲನ ಸಲಹೆಯನ್ನು ಅನುಸರಿಸುವ ಮೂಲಕ, ಒಂದು ಸಮಯದಲ್ಲಿ ಸ್ವತಃ ಪೌಲನು ಇದ್ದಂತೆಯೇ, ತಿಮೊಥೆಯನು ಸಹ ಧರ್ಮಭ್ರಷ್ಟತೆಗೆ ಒಂದು ಅಡಚಣೆಯಾಗಿ ಮುಂದುವರಿಯಸಾಧ್ಯವಿತ್ತು.—ಅ. ಕೃತ್ಯಗಳು 20:25-32.
ವಾಕ್ಯವನ್ನು ಸಾರುವುದರ ಕುರಿತಾದ ಪೌಲನ ಮಾತುಗಳು ಸಭೆಯ ಹೊರಗೆ ಮಾಡುವ ಸಾರುವಿಕೆಗೂ ಅನ್ವಯವಾಗುತ್ತವೊ? ಹೌದು, ಪೂರ್ವಾಪರವು ಇದನ್ನು ತೋರಿಸುತ್ತದೆ. ಪೌಲನು ಹೇಳುತ್ತಾ ಮುಂದುವರಿಯುವುದು: “ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.” (2 ತಿಮೊಥೆಯ 4:5) ಅವಿಶ್ವಾಸಿಗಳಿಗೆ ರಕ್ಷಣೆಯ ಸುವಾರ್ತೆಯನ್ನು ಸಾರುವ ಸೌವಾರ್ತಿಕ ಕೆಲಸವು, ಕ್ರೈಸ್ತ ಶುಶ್ರೂಷೆಯ ಕೇಂದ್ರಬಿಂದುವಾಗಿದೆ. (ಮತ್ತಾಯ 24:14; 28:19, 20) ಮತ್ತು ದೇವರ ವಾಕ್ಯವನ್ನು ‘ಅನುಕೂಲವಿಲ್ಲದ ಸಮಯ’ದಲ್ಲೂ ಸಭೆಯಲ್ಲಿ ಸಾರಲಾಗುವಂತೆಯೇ, ಸಭೆಯ ಹೊರಗೆ ಇರುವವರಿಗೂ ಕಷ್ಟಕರ ಪರಿಸ್ಥಿತಿಗಳಲ್ಲಿ ನಾವು ವಾಕ್ಯವನ್ನು ಸಾರುವುದರಲ್ಲಿ ಪಟ್ಟುಹಿಡಿಯುತ್ತೇವೆ.—1 ಥೆಸಲೊನೀಕ 1:6.
ನಮ್ಮ ಎಲ್ಲಾ ಸಾರುವಿಕೆ ಮತ್ತು ಬೋಧಿಸುವಿಕೆಗೆ ಆಧಾರವು, ದೇವರ ಪ್ರೇರಿತ ವಾಕ್ಯವಾಗಿದೆ. ನಮಗೆ ಬೈಬಲಿನಲ್ಲಿ ಪೂರ್ಣವಾದ ಭರವಸೆಯಿದೆ. ಪೌಲನು ತಿಮೊಥೆಯನಿಗೆ ಹೇಳಿದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆಯೆಂಬದನ್ನು ತೋರಿಸಲಿಕ್ಕಾಗಿ ಅನೇಕವೇಳೆ ಈ ಮಾತುಗಳನ್ನು ಯೋಗ್ಯವಾಗಿಯೇ ಉಲ್ಲೇಖಿಸಲಾಗುತ್ತದೆ. ಆದರೆ ಪೌಲನು ಈ ಮಾತುಗಳನ್ನು ಬರೆಯುವ ಉದ್ದೇಶವೇನಾಗಿತ್ತು?
ಪೌಲನು ಒಬ್ಬ ಹಿರಿಯನಿಗೆ ಬರೆಯುತ್ತಾ ಇದ್ದನು. ಮತ್ತು ಇವನಿಗೆ ಸಭೆಯೊಳಗೆ ‘ಉಪದೇಶಮಾಡುವ, ಖಂಡನೆ ಹಾಗೂ ತಿದ್ದುಪಾಟನ್ನು ನೀಡುವ ಮತ್ತು ನೀತಿಶಿಕ್ಷೆಯನ್ನು ಕೊಡುವ’ ಜವಾಬ್ದಾರಿಯಿತ್ತು. ಹೀಗಿರುವುದರಿಂದ, ತಿಮೊಥೆಯನು ಶೈಶವಾವಸ್ಥೆಯಿಂದಲೇ ಎಲ್ಲಿಂದ ಶಿಕ್ಷಣವನ್ನು ಪಡೆದಿದ್ದನೊ ಆ ಪ್ರೇರಿತ ವಾಕ್ಯದ ವಿವೇಕದಲ್ಲಿ ಭರವಸೆಯಿಡುವಂತೆ ಅವನಿಗೆ ಪೌಲನು ಜ್ಞಾಪಕಹುಟ್ಟಿಸುತ್ತಾ ಇದ್ದನು. ತಿಮೊಥೆಯನಂತೆಯೇ ಹಿರಿಯರು ಕೆಲವೊಮ್ಮೆ ತಪ್ಪುಮಾಡುವವರಿಗೆ ಖಂಡನೆ ನೀಡಬೇಕಾಗುತ್ತದೆ. ಇದನ್ನು ಮಾಡುವಾಗ ಅವರು ಯಾವಾಗಲೂ ಬೈಬಲಿನಲ್ಲಿ ಭರವಸೆಯನ್ನು ಹೊಂದಿರಬೇಕು. ಅಷ್ಟುಮಾತ್ರವಲ್ಲದೆ, ಶಾಸ್ತ್ರಗಳು ದೇವರಿಂದ ಪ್ರೇರಿತವಾಗಿರುವುದರಿಂದ, ಅವುಗಳ ಮೇಲೆ ಆಧಾರಿತವಾದ ಎಲ್ಲಾ ಖಂಡನೆಯು ನಿಜವಾಗಿ ದೇವರಿಂದ ಬಂದದ್ದಾಗಿರುತ್ತದೆ. ಬೈಬಲ್ ಆಧಾರಿತ ಖಂಡನೆಗಳನ್ನು ತಿರಸ್ಕರಿಸುವಂಥ ಒಬ್ಬ ವ್ಯಕ್ತಿಯು, ಮಾನವ ವಿಚಾರಗಳನ್ನಲ್ಲ ಬದಲಾಗಿ ಸ್ವತಃ ಯೆಹೋವನಿಂದಲೇ ಬರುವಂಥ ಪ್ರೇರಿತ ಸಲಹೆಯನ್ನು ತಿರಸ್ಕರಿಸುವವನಾಗಿದ್ದಾನೆ.
ಎರಡನೆಯ ತಿಮೊಥೆಯನ ಪುಸ್ತಕದಲ್ಲಿರುವ ದೈವಿಕ ವಿವೇಕವು ಎಷ್ಟು ಸಮೃದ್ಧವಾಗಿದೆ! ಮತ್ತು ನಾವು ಅದರ ಸಲಹೆಯನ್ನು ಅದರ ಪೂರ್ವಾಪರಕ್ಕನುಸಾರ ಪರಿಗಣಿಸುವಾಗ ಅದು ಇನ್ನೆಷ್ಟು ಹೆಚ್ಚು ಅರ್ಥಪೂರ್ಣವಾಗಿರುತ್ತದೆ! ಈ ಲೇಖನದಲ್ಲಿ, ಎರಡನೆಯ ತಿಮೊಥೆಯ ಪುಸ್ತಕದಲ್ಲಿ ಅಡಕವಾಗಿರುವ ಅದ್ಭುತವಾದ, ಪ್ರೇರಿತ ಮಾಹಿತಿಯನ್ನು ನಾವು ಕೇವಲ ಮೇಲಿಂದ ಮೇಲೆ ಪರಿಗಣಿಸಿದ್ದೇವೆ. ಆದರೆ ನಾವು ಬೈಬಲಿನಲ್ಲಿ ಏನನ್ನು ಓದುತ್ತೇವೊ ಅದರ ಪೂರ್ವಾಪರವನ್ನು ಪರಿಗಣಿಸುವುದು ಎಷ್ಟು ಸಹಾಯಕಾರಿಯಾಗಿದೆ ಎಂಬದನ್ನು ತೋರಿಸಲು ಇಷ್ಟೇ ಸಾಕು. ಹಾಗೆ ಮಾಡುವುದು, ನಾವು ನಿಜವಾಗಿಯೂ “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು”ತ್ತಿದ್ದೇವೆ ಎಂಬದನ್ನು ಖಚಿತಪಡಿಸಿಕೊಳ್ಳಲು ನಮಗೆ ಸಹಾಯಮಾಡುವುದು.
[ಪಾದಟಿಪ್ಪಣಿ]
a ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 2, ಪುಟಗಳು 1105-8ನ್ನು ನೋಡಿರಿ.
[ಪುಟ 27ರಲ್ಲಿರುವ ಚಿತ್ರ]
ಸಭೆಗಳನ್ನು ಸಂರಕ್ಷಿಸಲಿಕ್ಕಾಗಿ ಪೌಲನು ತಿಮೊಥೆಯನನ್ನು ಸಿದ್ಧಪಡಿಸಲು ಬಯಸಿದನು
[ಪುಟ 30ರಲ್ಲಿರುವ ಚಿತ್ರ]
ತಿಮೊಥೆಯನು ಪ್ರೇರಿತ ವಾಕ್ಯದ ವಿವೇಕದಲ್ಲಿ ಭರವಸೆಯಿಡುವಂತೆ ಪೌಲನು ಅವನಿಗೆ ನೆನಪುಹುಟ್ಟಿಸಿದನು