‘ಕೇಡನ್ನು ಸಹಿಸಿಕೊಳ್ಳುವವರಾಗಿರಿ’
‘ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಕೇಡನ್ನು ಸಹಿಸಿಕೊಳ್ಳುವವನೂ ಆಗಿರಬೇಕು.’—2 ತಿಮೊಥೆಯ 2:24.
ನಿಮ್ಮ ಕಡೆಗೆ ಮತ್ತು ನೀವು ಏನನ್ನು ಪ್ರತಿನಿಧಿಸುತ್ತೀರೊ ಅದರ ಕಡೆಗೆ ಒಳ್ಳೇ ಮನೋಭಾವವನ್ನು ತೋರಿಸದಿರುವಂಥವರನ್ನು ಎದುರಿಸುವಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಕಡೇ ದಿವಸಗಳ ಕುರಿತಾದ ತನ್ನ ವರ್ಣನೆಯಲ್ಲಿ ಅಪೊಸ್ತಲ ಪೌಲನು, ಜನರು ‘ದೂಷಕರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ’ ಆಗಿರುವರೆಂದು ಮುಂತಿಳಿಸಿದನು. (2 ತಿಮೊಥೆಯ 3:1-5, 12) ನಿಮ್ಮ ಶುಶ್ರೂಷೆಯಲ್ಲಿ ಅಥವಾ ಬೇರೆ ಚಟುವಟಿಕೆಗಳಲ್ಲಿ ಇಂಥ ವ್ಯಕ್ತಿಗಳು ನಿಮಗೆ ಎದುರಾಗಬಹುದು.
2 ನಿಂದಾತ್ಮಕವಾದ ಮಾತುಗಳನ್ನಾಡುವ ಪ್ರತಿಯೊಬ್ಬರೂ ಯಾವುದು ಸರಿಯಾಗಿದೆಯೋ ಅದರಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ ಎಂದು ಅರ್ಥವಲ್ಲ. ವಿಪರೀತ ಕಷ್ಟತೊಂದರೆಗಳು ಅಥವಾ ಆಶಾಭಂಗವು, ಜನರು ತಮ್ಮ ಸುತ್ತಲೂ ಇರುವವರಿಗೆ ಕೋಪದಿಂದ ಮಾತಾಡಿಬಿಡುವಂತೆ ಮಾಡಬಹುದು. (ಪ್ರಸಂಗಿ 7:7) ಅನೇಕರು ಹೀಗೆ ವರ್ತಿಸಲು ಕಾರಣವೇನೆಂದರೆ, ಒರಟಾಗಿ ಮಾತಾಡುವುದು ಸರ್ವಸಾಮಾನ್ಯವಾಗಿರುವಂಥ ಒಂದು ಪರಿಸರದಲ್ಲಿ ಅವರು ವಾಸಿಸುತ್ತಿರುತ್ತಾರೆ ಮತ್ತು ಕೆಲಸಮಾಡುತ್ತಿರುತ್ತಾರೆ. ಇದು ಕ್ರೈಸ್ತರಾದ ನಮಗೆ ಇಂಥ ಮಾತುಗಳನ್ನು ಸ್ವೀಕರಣೀಯವಾಗಿ ಮಾಡುವುದಿಲ್ಲವಾದರೂ, ಬೇರೆಯವರು ಈ ರೀತಿಯ ಮಾತುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ನಿರ್ದಯವಾದ ಮಾತುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? ಜ್ಞಾನೋಕ್ತಿ 19:11 ಹೀಗೆ ತಿಳಿಸುತ್ತದೆ: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ.” ಮತ್ತು ರೋಮಾಪುರ 12:17, 18 ನಮಗೆ ಬುದ್ಧಿಹೇಳುವುದು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.”
3 ಒಂದುವೇಳೆ ನಾವು ನಿಜವಾಗಿಯೂ ಸಮಾಧಾನಪ್ರಿಯರಾಗಿರುವಲ್ಲಿ, ಅದು ನಾವು ತೋರಿಸುವ ಮನೋಭಾವದಲ್ಲಿ ಸುವ್ಯಕ್ತವಾಗುವುದು. ಅದು ನಮ್ಮ ನಡೆನುಡಿಗಳಲ್ಲಿ ಪ್ರತಿಬಿಂಬಿಸಲ್ಪಡುವುದು ಮಾತ್ರವಲ್ಲ ನಮ್ಮ ಮುಖಭಾವದಲ್ಲಿ ಹಾಗೂ ಸ್ವರದಲ್ಲಿಯೂ ವ್ಯಕ್ತಪಡಿಸಲ್ಪಡುವುದು. (ಜ್ಞಾನೋಕ್ತಿ 17:27) ಯೇಸು ತನ್ನ ಅಪೊಸ್ತಲರನ್ನು ಸಾರಲು ಕಳುಹಿಸುತ್ತಿರುವಾಗ ಅವರಿಗೆ ಹೀಗೆ ಸಲಹೆ ನೀಡಿದನು: “ಆ ಮನೆಯೊಳಕ್ಕೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ; ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ನಿಮಗೆ ಹಿಂದಕ್ಕೆ ಬರಲಿ.” (ಮತ್ತಾಯ 10:12, 13) ನಮ್ಮ ಬಳಿಯಿರುವ ಸಂದೇಶವು ಸುವಾರ್ತೆಯಾಗಿದೆ. ಬೈಬಲ್ ಅದನ್ನು “ಸಮಾಧಾನದ ವಿಷಯವಾದ ಸುವಾರ್ತೆ,” “ದೇವರ ಕೃಪೆಯ ವಿಷಯವಾದ ಸುವಾರ್ತೆ” ಮತ್ತು “ಪರಲೋಕ ರಾಜ್ಯದ ಈ ಸುವಾರ್ತೆ” ಎಂದು ಕರೆಯುತ್ತದೆ. (ಎಫೆಸ 6:15; ಅ. ಕೃತ್ಯಗಳು 20:24; ಮತ್ತಾಯ 24:14) ನಮ್ಮ ಉದ್ದೇಶವು ಇನ್ನೊಬ್ಬ ವ್ಯಕ್ತಿಯ ನಂಬಿಕೆಗಳನ್ನು ಟೀಕಿಸುವುದೊ ಅಥವಾ ಅವನ ದೃಷ್ಟಿಕೋನಗಳ ಬಗ್ಗೆ ಅವನೊಂದಿಗೆ ವಾದಿಸುವುದೊ ಅಲ್ಲ, ಬದಲಾಗಿ ದೇವರ ವಾಕ್ಯದ ಸುವಾರ್ತೆಯನ್ನು ಅವನಿಗೆ ತಿಳಿಯಪಡಿಸುವುದೇ ಆಗಿದೆ.
4 ಒಬ್ಬ ಮನೆಯವನು ನಾವು ಏನು ಹೇಳುತ್ತೇವೋ ಅದಕ್ಕೆ ಸರಿಯಾಗಿ ಕಿವಿಗೊಡದೆ, “ನನಗೆ ಆಸಕ್ತಿಯಿಲ್ಲ” ಎಂದು ಥಟ್ಟನೆ ಹೇಳಿಬಿಡಬಹುದು. ಇಂಥ ಸಂದರ್ಭಗಳಲ್ಲಿ, “ನಾನು ಬೈಬಲಿನಿಂದ ಕೇವಲ ಒಂದು ಸಂಕ್ಷಿಪ್ತ ವಚನವನ್ನು ನಿಮಗೆ ಓದಿಹೇಳಲು ಇಷ್ಟಪಡುತ್ತೇನೆ” ಎಂದು ನೀವು ಹೇಳಸಾಧ್ಯವಿದೆ. ಇದನ್ನು ಅವನು ಆಕ್ಷೇಪಿಸದಿರಬಹುದು. ಬೇರೆ ಸಂದರ್ಭಗಳಲ್ಲಿ, “ಯಾವುದೇ ಅನ್ಯಾಯವು ಇರದಂಥ ಹಾಗೂ ಎಲ್ಲ ಜನರು ಪರಸ್ಪರ ಪ್ರೀತಿಸಲು ಕಲಿಯುವಂಥ ಒಂದು ಸಮಯದ ಕುರಿತು ನಾನು ನಿಮಗೆ ಹೇಳಬಯಸಿದ್ದೆ” ಎಂದು ಹೇಳುವುದು ಸೂಕ್ತವಾಗಿರಬಹುದು. ಒಂದುವೇಳೆ ಮನೆಯವನು ಆಗ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸದಿರುವಲ್ಲಿ, ನೀವು ಹೀಗೆ ಹೇಳಬಹುದು: “ಆದರೆ ಇದು ನಿಮಗೆ ಅನುಕೂಲಕರವಾದ ಸಮಯ ಅಲ್ಲವೆಂದು ತೋರುತ್ತದೆ.” ಆಗಲೂ ಮನೆಯವನ ಪ್ರತಿಕ್ರಿಯೆಯು ಸಮಾಧಾನಕರವಾಗಿ ಇಲ್ಲದಿರುವಲ್ಲಿ, ಅವನು ‘ಯೋಗ್ಯನಲ್ಲ’ ಎಂಬ ತೀರ್ಮಾನಕ್ಕೆ ನಾವು ಬರಬೇಕೊ? ಜನರ ಪ್ರತಿಕ್ರಿಯೆ ಏನೇ ಆಗಿರಲಿ, ‘ಎಲ್ಲರ ವಿಷಯದಲ್ಲಿ ಸಾಧುವೂ ಕೇಡನ್ನು ಸಹಿಸಿಕೊಳ್ಳುವವರೂ’ ಆಗಿರಿ ಎಂಬ ಬೈಬಲ್ ಸಲಹೆಯನ್ನು ಎಂದಿಗೂ ಮರೆಯದಿರಿ.—2 ತಿಮೊಥೆಯ 2:24.
ಮತಾಂಧನು, ಆದರೆ ದಾರಿತಪ್ಪಿದ್ದವನು
5 ಮೊದಲನೇ ಶತಮಾನದಲ್ಲಿ, ಸೌಲನೆಂಬ ಹೆಸರಿನ ಒಬ್ಬ ವ್ಯಕ್ತಿಯು ಅವನ ಅಗೌರವಯುತವಾದ ಮಾತು ಮತ್ತು ಹಿಂಸಾತ್ಮಕ ವರ್ತನೆಗೆ ಖ್ಯಾತನಾಗಿದ್ದನು. ಅವನು “ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ” ಇದ್ದನೆಂದು ಬೈಬಲ್ ಹೇಳುತ್ತದೆ. (ಅ. ಕೃತ್ಯಗಳು 9:1, 2) ತಾನು ‘ದೂಷಕನೂ ಹಿಂಸಕನೂ ಬಲಾತ್ಕಾರಿಯೂ [ಮತಾಂಧನೂ] ಆಗಿದ್ದೆನೆಂದು’ ಸಮಯಾನಂತರ ಅವನು ಒಪ್ಪಿಕೊಂಡನು. (1 ತಿಮೊಥೆಯ 1:12) ಅಷ್ಟರಲ್ಲಾಗಲೇ ಅವನ ಸಂಬಂಧಿಕರಲ್ಲಿ ಕೆಲವರು ಕ್ರೈಸ್ತರಾಗಿ ಪರಿಣಮಿಸಿದ್ದಿರಬಹುದಾದರೂ, ಕ್ರಿಸ್ತನ ಹಿಂಬಾಲಕರ ಕಡೆಗೆ ತನಗಿದ್ದ ಮನೋಭಾವದ ಕುರಿತು ಅವನು ಹೀಗಂದನು: “ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಪರಪಟ್ಟಣಗಳ ತನಕ ಅವರನ್ನು ಹಿಂಸೆಪಡಿಸಿದೆನು.” (ಅ. ಕೃತ್ಯಗಳು 23:16; 26:11; ರೋಮಾಪುರ 16:7, 11) ಸೌಲನು ಈ ರೀತಿ ವರ್ತಿಸುತ್ತಿದ್ದಾಗ ಶಿಷ್ಯರು ಅವನನ್ನು ಸಾರ್ವಜನಿಕ ವಾಗ್ವಾದಗಳಲ್ಲಿ ಒಳಗೂಡಿಸಲು ಪ್ರಯತ್ನಿಸಿದರು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ.
6 ಸೌಲನು ಹೀಗೇಕೆ ವರ್ತಿಸಿದನು? ವರ್ಷಗಳಾನಂತರ ಅವನು ಬರೆದುದು: ‘ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದೆನು.’ (1 ತಿಮೊಥೆಯ 1:12) ಅವನು “ಪಿತೃಗಳ ಧರ್ಮಶಾಸ್ತ್ರದಲ್ಲಿ” ಪೂರ್ಣ ಶಿಕ್ಷಿತನಾಗಿದ್ದ ಒಬ್ಬ ಫರಿಸಾಯನಾಗಿದ್ದನು. (ಅ. ಕೃತ್ಯಗಳು 22:3) ಸೌಲನ ಶಿಕ್ಷಕನಾಗಿದ್ದ ಗಮಲಿಯೇಲನು ಸ್ವಲ್ಪಮಟ್ಟಿಗೆ ವಿಶಾಲ ಮನೋಭಾವದವನು ಆಗಿದ್ದನೆಂಬುದು ಸುವ್ಯಕ್ತವಾಗಿದ್ದರೂ, ತದನಂತರ ಸೌಲನು ಯಾರೊಂದಿಗೆ ಸಹವಾಸಮಾಡಲು ಆರಂಭಿಸಿದನೋ ಆ ಮಹಾಯಾಜಕನಾದ ಕಾಯಫನು ಮತಾಂಧನಾಗಿ ರುಜುವಾದನು. ಮತ್ತು ಅವನು ಯೇಸು ಕ್ರಿಸ್ತನ ವಧೆಗೆ ಮುನ್ನಡಿಸಿದಂಥ ಒಳಸಂಚಿನಲ್ಲಿ ನಾಯಕತ್ವ ವಹಿಸಿದವನಾಗಿದ್ದನು. (ಮತ್ತಾಯ 26:3, 4, 63-66; ಅ. ಕೃತ್ಯಗಳು 5:34-39) ಈ ಕೃತ್ಯದ ಬಳಿಕ ಕಾಯಫನು ಯೇಸುವಿನ ಅಪೊಸ್ತಲರಿಗೆ ಹೊಡೆಸಿದನು, ಮತ್ತು ಯೇಸುವಿನ ಹೆಸರಿನಲ್ಲಿ ಸಾರುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಾಗಿ ಆಜ್ಞಾಪಿಸಿದನು. ಮತ್ತು ನ್ಯಾಯಸ್ಥಾನವು ಭಾವನಾತ್ಮಕ ಉದ್ವೇಗಕ್ಕೆ ಒಳಗಾಗಿ ಸ್ತೆಫನನನ್ನು ಕಲ್ಲೆಸೆದು ಕೊಲ್ಲಲಿಕ್ಕಾಗಿ ಕರೆದೊಯ್ದಾಗ ಕಾಯಫನೇ ಹಿರೀಸಭೆಯ ಮೇಲ್ವಿಚಾರಣೆ ನಡೆಸಿದನು. (ಅ. ಕೃತ್ಯಗಳು 5:27, 28, 40; 7:1-60) ಸ್ತೆಫನನು ಕಲ್ಲೆಸೆದು ಕೊಲ್ಲಲ್ಪಡುತ್ತಿರುವುದನ್ನು ಸೌಲನು ಕಣ್ಣಾರೆ ನೋಡಿದನು, ಮತ್ತು ದಮಸ್ಕದಲ್ಲಿರುವ ಯೇಸುವಿನ ಹಿಂಬಾಲಕರನ್ನು ಬಂಧಿಸುವ ಮೂಲಕ ಅವರನ್ನು ನಿಗ್ರಹಿಸುವ ಪ್ರಯತ್ನವನ್ನು ಇನ್ನೂ ತೀವ್ರಗೊಳಿಸುವಂತೆ ಕಾಯಫನು ಅವನಿಗೆ ಅಧಿಕಾರ ನೀಡಿದನು. (ಅ. ಕೃತ್ಯಗಳು 8:1; 9:1, 2) ಕಾಯಫನ ಪ್ರಭಾವದಿಂದ ಸೌಲನು, ತನ್ನ ವರ್ತನೆಯು ದೇವರ ಕಡೆಗೆ ತನಗೆ ಅಭಿಮಾನವಿದೆ ಎಂಬುದಕ್ಕೆ ಪುರಾವೆಯನ್ನು ಕೊಡುತ್ತದೆಂದು ನೆನಸಿದ್ದನು, ಆದರೆ ವಾಸ್ತವದಲ್ಲಿ ಸೌಲನಿಗೆ ನಿಜವಾದ ನಂಬಿಕೆಯ ಕೊರತೆಯಿತ್ತು. (ಅ. ಕೃತ್ಯಗಳು 22:3-5) ಇದರ ಫಲಿತಾಂಶವಾಗಿ, ಯೇಸುವೇ ನಿಜವಾದ ಮೆಸ್ಸೀಯನು ಎಂಬುದನ್ನು ಸೌಲನು ಗ್ರಹಿಸಲು ತಪ್ಪಿಹೋದನು. ಆದರೆ ಪುನರುತ್ಥಿತ ಯೇಸುವು ದಮಸ್ಕದ ಮಾರ್ಗದಲ್ಲಿ ಅವನೊಂದಿಗೆ ಅದ್ಭುತಕರವಾದ ರೀತಿಯಲ್ಲಿ ಮಾತಾಡಿದಾಗ ಅವನಿಗೆ ತನ್ನ ಅಪಾಯಕರ ನಡತೆಯು ಅರಿವಿಗೆ ಬಂತು.—ಅ. ಕೃತ್ಯಗಳು 9:3-6.
7 ಇದಾದ ಬಳಿಕ ಶಿಷ್ಯನಾದ ಅನನೀಯನು ಸೌಲನಿಗೆ ಸಾಕ್ಷಿ ನೀಡಲಿಕ್ಕಾಗಿ ಕಳುಹಿಸಲ್ಪಟ್ಟನು. ಒಂದುವೇಳೆ ಅನನೀಯನ ಸ್ಥಾನದಲ್ಲಿ ನೀವಿರುತ್ತಿದ್ದಲ್ಲಿ, ಸೌಲನ ಬಳಿಗೆ ಹೋಗಿ ಸಾಕ್ಷಿ ನೀಡಲು ನೀವು ಆತುರರಾಗಿರುತ್ತಿದ್ದಿರೊ? ಅನನೀಯನು ಭಯಗೊಂಡಿದ್ದನು, ಆದರೂ ಅವನು ಸೌಲನೊಂದಿಗೆ ದಯಾಭಾವದಿಂದ ಮಾತಾಡಿದನು. ದಮಸ್ಕಕ್ಕೆ ಹೋಗುವ ಮಾರ್ಗದಲ್ಲಿ ಯೇಸುವನ್ನು ಅದ್ಭುತಕರವಾಗಿ ಸಂಧಿಸಿದ್ದರ ಫಲಿತಾಂಶವಾಗಿ ಸೌಲನ ಮನೋಭಾವವು ಬದಲಾಗಿತ್ತು. (ಅ. ಕೃತ್ಯಗಳು 9:10-22) ಸಮಯಾನಂತರ ಅವನು ಹುರುಪಿನ ಕ್ರೈಸ್ತ ಮಿಷನೆರಿಯಾಗಿ, ಅಪೊಸ್ತಲ ಪೌಲನೆಂಬ ಹೆಸರಿನಿಂದ ಪ್ರಸಿದ್ಧನಾದನು.
ಮೃದುಸ್ವಭಾವದವನು ಆದರೆ ಧೈರ್ಯಶಾಲಿ
8 ಯೇಸುವು ಮೃದುಸ್ವಭಾವದವನಾಗಿದ್ದ ಒಬ್ಬ ಹುರುಪಿನ ರಾಜ್ಯ ಘೋಷಕನಾಗಿದ್ದನು, ಆದರೆ ಜನರೊಂದಿಗೆ ವ್ಯವಹರಿಸುವುದರಲ್ಲಿ ಅವನು ಧೈರ್ಯಶಾಲಿಯಾಗಿದ್ದನು. (ಮತ್ತಾಯ 11:29) ಅವನು, ದುಷ್ಟರು ತಮ್ಮ ದುರ್ಮಾರ್ಗವನ್ನು ಬಿಟ್ಟುಬರುವಂತೆ ಉತ್ತೇಜಿಸುವ ತನ್ನ ಸ್ವರ್ಗೀಯ ತಂದೆಯ ಮನೋಭಾವವನ್ನು ಪ್ರತಿಬಿಂಬಿಸಿದನು. (ಯೆಶಾಯ 55:6, 7) ಯೇಸು ಪಾಪಿಗಳೊಂದಿಗೆ ವ್ಯವಹರಿಸುವಾಗ ಅಂಥವರಲ್ಲಿ ಬದಲಾವಣೆಯ ಪುರಾವೆಯನ್ನು ಗಮನಿಸುತ್ತಿದ್ದನು ಮತ್ತು ಅಂಥ ವ್ಯಕ್ತಿಗಳನ್ನು ಉತ್ತೇಜಿಸುತ್ತಿದ್ದನು. (ಲೂಕ 7:37-50; 19:2-10) ಇತರರನ್ನು ಹೊರತೋರಿಕೆಯ ಆಧಾರದ ಮೇಲೆ ಅವರ ಬಗ್ಗೆ ತಪ್ಪು ತೀರ್ಮಾನಕ್ಕೆ ಬರುವ ಬದಲು, ಅವರನ್ನು ಪಶ್ಚಾತ್ತಾಪದ ಕಡೆಗೆ ನಡಿಸುವ ನಿರೀಕ್ಷೆಯಿಂದ ಯೇಸು ತನ್ನ ತಂದೆಯ ದಯಾಭಾವವನ್ನು, ತಾಳ್ಮೆಯನ್ನು ಹಾಗೂ ದೀರ್ಘಶಾಂತಿಯನ್ನು ಅನುಕರಿಸಿದನು. (ರೋಮಾಪುರ 2:4) ಎಲ್ಲ ಮನುಷ್ಯರು ಪಶ್ಚಾತ್ತಾಪವನ್ನು ತೋರಿಸಬೇಕು ಮತ್ತು ರಕ್ಷಣೆಯನ್ನು ಪಡೆದುಕೊಳ್ಳಬೇಕು ಎಂಬುದು ಯೆಹೋವನ ಚಿತ್ತವಾಗಿದೆ.—1 ತಿಮೊಥೆಯ 2:3, 4.
9 ಯೇಸು ಕ್ರಿಸ್ತನ ಬಗ್ಗೆ ಯೆಹೋವನಿಗಿದ್ದ ನೋಟವನ್ನು ತಿಳಿಸುತ್ತಾ, ಸುವಾರ್ತಾ ಲೇಖಕನಾದ ಮತ್ತಾಯನು ಈ ಪ್ರವಾದನಾ ಮಾತುಗಳನ್ನು ಉಲ್ಲೇಖಿಸುತ್ತಾನೆ: “ಇಗೋ, ನನ್ನ ಸೇವಕನು; ಈತನನ್ನು ನಾನು ಆರಿಸಿಕೊಂಡೆನು; ಈತನು ನನಗೆ ಇಷ್ಟನು; ನನ್ನ ಪ್ರಾಣ ಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು. ಈತನು ಜಗಳಾಡುವದಿಲ್ಲ, ಕೂಗಾಡುವದಿಲ್ಲ; ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದುಹಾಕದೆಯೂ ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ ನ್ಯಾಯವನ್ನು ದಿಗ್ವಿಜಯಕ್ಕಾಗಿ ಕಳುಹಿಸಿ ಕೊಡುವನು. ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.” (ಮತ್ತಾಯ 12:17-21; ಯೆಶಾಯ 42:1-4) ಈ ಪ್ರವಾದನಾ ಮಾತುಗಳಿಗೆ ಹೊಂದಿಕೆಯಲ್ಲಿ, ಯೇಸು ಗದ್ದಲಭರಿತವಾದ ಯಾವುದೇ ವಾಗ್ವಾದಗಳಲ್ಲಿ ಒಳಗೂಡಲಿಲ್ಲ. ಒತ್ತಡದ ಕೆಳಗಿರುವಾಗಲೂ ಅವನು ಪ್ರಾಮಾಣಿಕ ಹೃದಯದ ಜನರಿಗೆ ಹಿಡಿಸುವಂಥ ರೀತಿಯಲ್ಲಿ ಸತ್ಯವನ್ನು ಮಾತಾಡಿದನು.—ಯೋಹಾನ 7:32, 40, 45, 46.
10 ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಅವನು ಅನೇಕ ಫರಿಸಾಯರೊಂದಿಗೆ ಮಾತಾಡಿದನು. ಅವರಲ್ಲಿ ಕೆಲವರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಹಾಕಲು ಪ್ರಯತ್ನಿಸಿದರಾದರೂ, ಅವರೆಲ್ಲರಿಗೂ ತಪ್ಪಾದ ಹೇತುಗಳಿದ್ದವು ಎಂಬ ತೀರ್ಮಾನಕ್ಕೆ ಅವನು ಬರಲಿಲ್ಲ. ಸ್ವಲ್ಪಮಟ್ಟಿಗೆ ಟೀಕಾತ್ಮಕ ಮನೋಭಾವದವನಾಗಿದ್ದ ಸೀಮೋನನೆಂಬ ಫರಿಸಾಯನು ಯೇಸುವನ್ನು ನಿಕಟವಾಗಿ ಗಮನಿಸಲು ಬಯಸಿದನು ಮತ್ತು ಅವನನ್ನು ಒಂದು ಊಟಕ್ಕಾಗಿ ತನ್ನ ಮನೆಗೆ ಆಮಂತ್ರಿಸಿದನು. ಯೇಸು ಆ ಆಮಂತ್ರಣವನ್ನು ಸ್ವೀಕರಿಸಿದನು ಮತ್ತು ಅಲ್ಲಿ ಹಾಜರಿದ್ದವರಿಗೆ ಸಾಕ್ಷಿಯನ್ನು ನೀಡಿದನು. (ಲೂಕ 7:36-50) ಇನ್ನೊಂದು ಸಂದರ್ಭದಲ್ಲಿ, ನಿಕೋದೇಮನೆಂಬ ಹೆಸರಿನ ಅಗ್ರಗಣ್ಯ ಫರಿಸಾಯನೊಬ್ಬನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದನು. ಅವನು ಕತ್ತಲಾಗುವ ವರೆಗೆ ಕಾದು ತದನಂತರ ಬಂದದ್ದಕ್ಕಾಗಿ ಯೇಸು ಅವನನ್ನು ತೆಗಳಲಿಲ್ಲ. ಅದಕ್ಕೆ ಬದಲಾಗಿ, ಅವನು ನಿಕೋದೇಮನಿಗೆ, ನಂಬಿಕೆಯನ್ನು ತೋರಿಸುವವರಿಗೆ ರಕ್ಷಣೆಯ ಮಾರ್ಗವನ್ನು ತೆರೆಯಲಿಕ್ಕಾಗಿ ದೇವರು ತನ್ನ ಪುತ್ರನನ್ನು ಕಳುಹಿಸುವ ಮೂಲಕ ವ್ಯಕ್ತಪಡಿಸಿದ ಪ್ರೀತಿಯ ಕುರಿತು ಸಾಕ್ಷಿ ನೀಡಿದನು. ದೇವರ ಏರ್ಪಾಡಿಗೆ ವಿಧೇಯತೆ ತೋರಿಸುವುದರ ಪ್ರಮುಖತೆಯನ್ನು ಸಹ ಯೇಸು ದಯಾಭಾವದಿಂದ ವಿವರಿಸಿದನು. (ಯೋಹಾನ 3:1-21) ಸಮಯಾನಂತರ, ಯೇಸುವಿನ ಕುರಿತಾದ ಒಂದು ಸಕಾರಾತ್ಮಕ ವರದಿಯನ್ನು ಇತರ ಫರಿಸಾಯರು ಹೀನೈಸಿದಾಗ ನಿಕೋದೇಮನು ಯೇಸುವಿನ ಪರವಾಗಿ ಮಾತಾಡಿದನು.—ಯೋಹಾನ 7:46-51.
11 ತನ್ನನ್ನು ಸಿಕ್ಕಿಸಿ ಹಾಕಲು ಪ್ರಯತ್ನಿಸುತ್ತಿದ್ದವರ ಕಪಟಭಾವವನ್ನು ಯೇಸು ಅರಿಯದವನಾಗಿರಲಿಲ್ಲ. ಆದರೆ ಎದುರಾಳಿಗಳು ತನ್ನನ್ನು ನಿಷ್ಪ್ರಯೋಜಕವಾದ ವಾದವಿವಾದಗಳಲ್ಲಿ ಒಳಗೂಡಿಸುವಂತೆ ಅವನು ಅನುಮತಿಸಲಿಲ್ಲ. ಆದರೂ, ಸೂಕ್ತವಾದ ಸಂದರ್ಭಗಳಲ್ಲಿ ಅವನು ಒಂದು ಮೂಲತತ್ತ್ವವನ್ನು ತಿಳಿಸುವ ಮೂಲಕ, ದೃಷ್ಟಾಂತವನ್ನು ಉಪಯೋಗಿಸುವ ಮೂಲಕ ಅಥವಾ ಒಂದು ಶಾಸ್ತ್ರವಚನವನ್ನು ಎತ್ತಿಹೇಳುವ ಮೂಲಕ ಸಂಕ್ಷಿಪ್ತವಾದ ಹಾಗೂ ಪ್ರಬಲವಾದ ಉತ್ತರಗಳನ್ನು ಕೊಟ್ಟನು. (ಮತ್ತಾಯ 12:38-42; 15:1-9; 16:1-4) ಇನ್ನಿತರ ಸಮಯಗಳಲ್ಲಿ, ಉತ್ತರ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸುವ್ಯಕ್ತವಾದಾಗ ಯೇಸು ಯಾವ ಉತ್ತರವನ್ನೂ ಕೊಡಲಿಲ್ಲ.—ಮಾರ್ಕ 15:2-5; ಲೂಕ 22:67-70.
12 ಕೆಲವೊಮ್ಮೆ ದುರಾತ್ಮಗಳ ನಿಯಂತ್ರಣದ ಕೆಳಗಿದ್ದ ಜನರು ಯೇಸುವಿನ ಮೇಲೆ ರೇಗಾಡಿದರು. ಹೀಗೆ ಸಂಭವಿಸಿದಾಗ, ಅವನು ಸಂಯಮವನ್ನು ತೋರಿಸಿದನು ಮತ್ತು ಅವರಿಗೆ ಬಿಡುಗಡೆ ನೀಡಲಿಕ್ಕಾಗಿ ತನ್ನ ದೇವದತ್ತ ಶಕ್ತಿಯನ್ನು ಸಹ ಉಪಯೋಗಿಸಿದನು. (ಮಾರ್ಕ 1:23-28; 5:2-8, 15) ನಾವು ಶುಶ್ರೂಷೆಯಲ್ಲಿ ಒಳಗೂಡಿರುವಾಗ ಕೆಲವರು ನಮ್ಮ ಮೇಲೆ ಕೋಪಗೊಂಡು ರೇಗಾಡುವುದಾದರೆ, ಯೇಸುವಿನಂತೆಯೇ ನಾವು ಸಂಯಮವನ್ನು ತೋರಿಸುವ ಅಗತ್ಯವಿದೆ ಮತ್ತು ಅಂಥ ಸನ್ನಿವೇಶವನ್ನು ನಾವು ದಯಾಭಾವದಿಂದ ಹಾಗೂ ಜಾಣ್ಮೆಯಿಂದ ನಿಭಾಯಿಸಲು ಪ್ರಯತ್ನಿಸಬೇಕು.—ಕೊಲೊಸ್ಸೆ 4:6.
ಕುಟುಂಬದಲ್ಲಿ
13 ಯೇಸುವಿನ ಹಿಂಬಾಲಕರು ಸಂಯಮವನ್ನು ತೋರಿಸುವ ಆವಶ್ಯಕತೆಯು ಅನೇಕವೇಳೆ ಕುಟುಂಬದಲ್ಲಿಯೇ ಸುವ್ಯಕ್ತವಾಗುತ್ತದೆ. ಬೈಬಲ್ ಸತ್ಯದಿಂದ ಆಳವಾಗಿ ಪ್ರಭಾವಿತನಾಗಿರುವ ಒಬ್ಬ ವ್ಯಕ್ತಿಯು ತನ್ನ ಕುಟುಂಬವು ಸಹ ಬೈಬಲ್ ಸತ್ಯಕ್ಕೆ ತನ್ನಂತೆಯೇ ಪ್ರತಿಕ್ರಿಯಿಸಬೇಕೆಂದು ಹಂಬಲಿಸುತ್ತಾನೆ. ಆದರೆ ಯೇಸು ಹೇಳಿದಂತೆ, ಕೆಲವೊಮ್ಮೆ ಕುಟುಂಬದ ಸದಸ್ಯರೇ ವಿರೋಧವನ್ನು ತೋರಿಸಬಹುದು. (ಮತ್ತಾಯ 10:32-37; ಯೋಹಾನ 15:20, 21) ಇದಕ್ಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ಬೈಬಲ್ ಬೋಧನೆಗಳು ನಮಗೆ ಪ್ರಾಮಾಣಿಕರಾಗಲು, ಜವಾಬ್ದಾರಿಯುತರಾಗಲು ಮತ್ತು ಗೌರವದಿಂದ ವರ್ತಿಸಲು ಸಹಾಯಮಾಡುವ ಅದೇ ಸಮಯದಲ್ಲಿ, ಯಾವುದೇ ಸನ್ನಿವೇಶದಲ್ಲಿ ನಾವು ನಮ್ಮ ಸೃಷ್ಟಿಕರ್ತನಿಗೆ ಹೆಚ್ಚು ಜವಾಬ್ದಾರರಾಗಿದ್ದೇವೆ ಎಂಬುದನ್ನು ಸಹ ಶಾಸ್ತ್ರವಚನಗಳು ಕಲಿಸುತ್ತವೆ. (ಪ್ರಸಂಗಿ 12:1, 13; ಅ. ಕೃತ್ಯಗಳು 5:29) ಯೆಹೋವನಿಗೆ ನಾವು ನಿಷ್ಠರಾಗಿರುವ ಕಾರಣ, ಕುಟುಂಬದ ಮೇಲಿನ ತನ್ನ ಅಧಿಕಾರವು ಕಡಿಮೆಯಾಗುತ್ತಿದೆ ಎಂದು ನೆನಸುವ ಕುಟುಂಬದ ಸದಸ್ಯನೊಬ್ಬನು ಕೋಪಗೊಳ್ಳಬಹುದು. ಇಂಥ ಸನ್ನಿವೇಶದೊಂದಿಗೆ ವ್ಯವಹರಿಸುವಾಗ, ಸಂಯಮವನ್ನು ತೋರಿಸುವ ವಿಷಯಲ್ಲಿ ಯೇಸುವಿನ ಮಾದರಿಯನ್ನು ನಾವು ಅನುಸರಿಸುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ!—1 ಪೇತ್ರ 2:21-23; 3:1, 2.
14 ಇಂದು ಯೆಹೋವನ ಸೇವೆಮಾಡುತ್ತಿರುವವರಲ್ಲಿ ಕೆಲವರು, ಬೈಬಲ್ ಅಧ್ಯಯನ ಮಾಡತೊಡಗಿದಾಗ ಅವರು ಮಾಡುತ್ತಿದ್ದ ಬದಲಾವಣೆಗಳನ್ನು ವಿರೋಧಿಸುತ್ತಿದ್ದಂಥ ಒಬ್ಬ ವಿವಾಹ ಸಂಗಾತಿಯನ್ನು ಅಥವಾ ಇತರ ಕುಟುಂಬ ಸದಸ್ಯರನ್ನು ಹೊಂದಿದ್ದರು. ಈ ವಿರೋಧಿಗಳು ಯೆಹೋವನ ಸಾಕ್ಷಿಗಳ ಕುರಿತು ನಕಾರಾತ್ಮಕವಾದ ಹೇಳಿಕೆಗಳನ್ನು ಕೇಳಿಸಿಕೊಂಡಿರಬಹುದು, ಮತ್ತು ಸಾಕ್ಷಿಗಳೊಂದಿಗೆ ಸಹವಾಸಿಸುವುದು ತಮ್ಮ ಮನೆವಾರ್ತೆಯ ಮೇಲೆ ಅನಪೇಕ್ಷಿತ ಪ್ರಭಾವವನ್ನು ಬೀರಸಾಧ್ಯವಿದೆ ಎಂದು ಅವರು ಹೆದರಿರಬಹುದು. ಆದರೆ ಅವರು ತಮ್ಮ ಮನೋಭಾವವನ್ನು ಬದಲಾಯಿಸಲು ಯಾವುದು ಕಾರಣವಾಯಿತು? ಅನೇಕ ಸಂದರ್ಭಗಳಲ್ಲಿ, ಒಳ್ಳೇ ಮಾದರಿಯು ಗಮನಾರ್ಹವಾದ ಪರಿಣಾಮವನ್ನು ಬೀರಿದೆ. ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು, ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವುದು, ಅದೇ ಸಮಯದಲ್ಲಿ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದು ಮತ್ತು ಯಾವುದೇ ವಾಗ್ದಾಳಿಯ ಎದುರಿನಲ್ಲಿಯೂ ಸಂಯಮವನ್ನು ತೋರಿಸುವುದರಂಥ ಬೈಬಲ್ ಸಲಹೆಯನ್ನು ವಿಶ್ವಾಸಿಯು ದೃಢನಿಷ್ಠೆಯಿಂದ ಅನ್ವಯಿಸಿದ ಕಾರಣ, ಕೆಲವೊಮ್ಮೆ ಕುಟುಂಬದ ವಿರೋಧವು ಕಡಿಮೆಗೊಳಿಸಲ್ಪಟ್ಟಿದೆ.—1 ಪೇತ್ರ 2:12.
15 ಪೂರ್ವಕಲ್ಪಿತ ಅಭಿಪ್ರಾಯ ಅಥವಾ ಅಹಂಭಾವದ ಕಾರಣದಿಂದಲೂ ಒಬ್ಬ ಎದುರಾಳಿಯು ಬೈಬಲಿನ ಯಾವುದೇ ವಿವರಣೆಗೆ ಕಿವಿಗೊಡಲು ನಿರಾಕರಿಸಿರಬಹುದು. ಯುನೈಟೆಡ್ ಸ್ಟೇಟ್ಸ್ನಲ್ಲಿರುವ ಒಬ್ಬ ವ್ಯಕ್ತಿಯ ವಿಷಯದಲ್ಲಿ ಇದು ನಿಜವಾಗಿತ್ತು. ಅವನು ತಾನು ತುಂಬ ದೇಶಪ್ರೇಮಿಯೆಂದು ಹೇಳಿಕೊಳ್ಳುತ್ತಿದ್ದನು. ಒಮ್ಮೆ ಅವನ ಪತ್ನಿಯು ಒಂದು ಅಧಿವೇಶನಕ್ಕೆ ಹೋಗಿದ್ದಾಗ, ಅವನು ತನ್ನೆಲ್ಲಾ ಬಟ್ಟೆಬರೆಗಳನ್ನು ತೆಗೆದುಕೊಂಡು ಮನೆಯನ್ನು ಬಿಟ್ಟುಹೋದನು. ಇನ್ನೊಂದು ಸಲ, ಮನೆಯಿಂದ ಒಂದು ಬಂದೂಕನ್ನು ತೆಗೆದುಕೊಂಡು ಹೋಗಿ, ತನ್ನನ್ನು ಕೊಂದುಕೊಳ್ಳುತ್ತೇನೆಂಬ ಬೆದರಿಕೆಯನ್ನು ಹಾಕಿದನು. ತನ್ನ ಎಲ್ಲ ವಿಚಾರಹೀನ ವರ್ತನೆಗೆ ತನ್ನ ಹೆಂಡತಿಯ ಧರ್ಮದ ಮೇಲೆ ಅವನು ದೋಷಾರೋಪ ಹೊರಿಸಿದನು. ಆದರೆ ಅವನ ಪತ್ನಿಯು ಬೈಬಲ್ ಸಲಹೆಯನ್ನು ಅನ್ವಯಿಸುತ್ತಾ ಮುಂದುವರಿಯಲು ಪ್ರಯತ್ನಿಸಿದಳು. ಅವಳು ಒಬ್ಬ ಯೆಹೋವನ ಸಾಕ್ಷಿಯಾಗಿ 20 ವರ್ಷಗಳು ಕಳೆದ ಬಳಿಕ ಅವನೂ ಒಬ್ಬ ಸಾಕ್ಷಿಯಾದನು. ಅಲ್ಬೇನಿಯದ ಸ್ತ್ರೀಯೊಬ್ಬಳು, ತನ್ನ ಮಗಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಮಾಡಿ ದೀಕ್ಷಾಸ್ನಾನ ಪಡೆದುಕೊಂಡದ್ದಕ್ಕಾಗಿ ತುಂಬ ಕೋಪಗೊಂಡಳು. ಆ ತಾಯಿಯು 12 ಸಲ ತನ್ನ ಮಗಳ ಬೈಬಲಿನ ಪ್ರತಿಯನ್ನು ನಾಶಮಾಡಿದ್ದಳು. ತದನಂತರ ಒಂದು ದಿನ ತನ್ನ ಮಗಳು ಮೇಜಿನ ಮೇಲೆ ಬಿಟ್ಟುಹೋಗಿದ್ದ ಒಂದು ಹೊಸ ಬೈಬಲನ್ನು ಅವಳು ತೆರೆದಳು. ಆಕಸ್ಮಿಕವಾಗಿ, ಅದು ಮತ್ತಾಯ 10:36ನೇ ವಚನಕ್ಕೇ ತೆರೆದುಕೊಂಡಿತು, ಮತ್ತು ಅಲ್ಲಿ ಏನು ಹೇಳಲ್ಪಟ್ಟಿತ್ತೋ ಅದು ತನಗೇ ಅನ್ವಯವಾಗುತ್ತದೆ ಎಂಬುದು ತಾಯಿಗೆ ಮನವರಿಕೆಯಾಯಿತು. ಆದರೂ, ಮಗಳ ಹಿತಕ್ಷೇಮದ ಬಗ್ಗೆ ಚಿಂತಿತಳಾಗಿದ್ದ ತಾಯಿಯು, ಇಟಲಿಯಲ್ಲಿ ನಡೆಯಲಿದ್ದ ಅಧಿವೇಶನಕ್ಕೆ ಇತರ ಸಾಕ್ಷಿಗಳೊಂದಿಗೆ ಹೋಗಲಿದ್ದ ಮಗಳನ್ನು ಹಡಗಿನ ತನಕ ಬಿಡಲಿಕ್ಕಾಗಿ ಹೋದಳು. ಆ ಗುಂಪಿನ ಪ್ರೀತಿ, ಆಲಿಂಗನ ಮತ್ತು ನಸುನಗೆಯನ್ನು ನೋಡಿ, ಅವರ ಸಂತೋಷಭರಿತ ನಗುವನ್ನು ಕೇಳಿಸಿಕೊಂಡಾಗ ಆ ತಾಯಿಯ ಅನಿಸಿಕೆಗಳು ಬದಲಾಗತೊಡಗಿದವು. ಇದಾದ ಬಳಿಕ ಸ್ವಲ್ಪದರಲ್ಲೇ ಅವಳು ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಳು. ಈಗ ಅವಳು, ಆರಂಭದಲ್ಲಿ ವಿರೋಧವನ್ನು ತೋರಿಸುವಂಥ ಇತರರಿಗೆ ಸಹಾಯಮಾಡಲು ಪ್ರಯತ್ನಿಸುತ್ತಿದ್ದಾಳೆ.
16 ಒಂದು ಸಂದರ್ಭದಲ್ಲಿ, ತನ್ನೊಂದಿಗೆ ಕತ್ತಿಯನ್ನು ತಂದಿದ್ದ ಒಬ್ಬ ಗಂಡನು, ತನ್ನ ಹೆಂಡತಿಯು ರಾಜ್ಯ ಸಭಾಗೃಹದ ಸಮೀಪಕ್ಕೆ ಬಂದಾಗ ಅವಳ ಎದುರಿಗೆ ಬಂದು ಖಂಡನಾತ್ಮಕ ಮಾತುಗಳಿಂದ ಅವಳನ್ನು ನಿಂದಿಸತೊಡಗಿದನು. ಆಗ ಅವಳು ಮೃದುವಾಗಿ ಉತ್ತರಿಸಿದ್ದು: “ರಾಜ್ಯ ಸಭಾಗೃಹಕ್ಕೆ ಬನ್ನಿ ಮತ್ತು ಅಲ್ಲಿ ಏನಾಗುತ್ತದೆಂಬುದನ್ನು ನೀವೇ ನೋಡಿ.” ಅವನು ಹೋದನು, ಮತ್ತು ಸಕಾಲದಲ್ಲಿ ಒಬ್ಬ ಕ್ರೈಸ್ತ ಹಿರಿಯನಾದನು.
17 ನಿಮ್ಮ ಮನೆವಾರ್ತೆಯಲ್ಲಿರುವ ಎಲ್ಲರೂ ಕ್ರೈಸ್ತರಾಗಿರುವುದಾದರೂ, ಮಾನವ ಅಪರಿಪೂರ್ಣತೆಯ ಕಾರಣ ಕೆಲವೊಮ್ಮೆ ಕುಟುಂಬದ ಸನ್ನಿವೇಶವು ಉದ್ವೇಗಕ್ಕೆ ಒಳಗಾಗಬಹುದು ಮತ್ತು ನಿರ್ದಯವಾದ ಮಾತುಗಳು ಆಡಲ್ಪಡಬಹುದು. ಆದುದರಿಂದಲೇ ಪುರಾತನ ಎಫೆಸದ ಕ್ರೈಸ್ತರಿಗೆ ಹೀಗೆ ಸಲಹೆ ನೀಡಲ್ಪಟ್ಟದ್ದು ಗಮನಾರ್ಹವಾಗಿದೆ: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.” (ಎಫೆಸ 4:31) ಎಫೆಸದಲ್ಲಿ ಕ್ರೈಸ್ತರ ಸುತ್ತಲೂ ಇದ್ದ ವಾತಾವರಣ, ಅವರ ಸ್ವಂತ ಅಪರಿಪೂರ್ಣತೆ, ಮತ್ತು ಕೆಲವು ಸಂದರ್ಭಗಳಲ್ಲಿ ಅವರ ಹಿಂದಣ ಜೀವನ ರೀತಿಯು ಅವರ ಮೇಲೆ ಪ್ರಭಾವವನ್ನು ಬೀರಿತ್ತು ಎಂಬುದು ಸುವ್ಯಕ್ತ. ಬದಲಾಗಲು ಅವರಿಗೆ ಯಾವುದು ಸಹಾಯಮಾಡಲಿತ್ತು? ಅವರು “[ತಮ್ಮ] ಮನಸ್ಸಿನ ಮನೋಭಾವನೆಯನ್ನು ನವೀಕರಿಸಿ”ಕೊಳ್ಳುವ ಅಗತ್ಯವಿತ್ತು. (ಎಫೆಸ 4:23, NIBV) ಅವರು ದೇವರ ವಾಕ್ಯವನ್ನು ಅಧ್ಯಯನಮಾಡಿ, ಅದು ಅವರ ಜೀವಿತಗಳ ಮೇಲೆ ಹೇಗೆ ಪ್ರಭಾವ ಬೀರಬೇಕು ಎಂಬುದರ ಕುರಿತು ಧ್ಯಾನಿಸಿ, ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡಿ, ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವಾಗ, ದೇವರಾತ್ಮದ ಫಲವು ಅವರ ಜೀವಿತಗಳಲ್ಲಿ ಹೆಚ್ಚು ಪೂರ್ಣವಾಗಿ ವ್ಯಕ್ತವಾಗಸಾಧ್ಯವಿತ್ತು. ಅವರು “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ” ಇರಲು ಕಲಿಯಸಾಧ್ಯವಿತ್ತು. (ಎಫೆಸ 4:32) ಇತರರು ಏನೇ ಮಾಡಲಿ, ನಾವು ಸಂಯಮವನ್ನು ತೋರಿಸುವ, ದಯಾಭಾವದವರಾಗಿರುವ, ಸಹಾನುಭೂತಿಯುಳ್ಳವರಾಗಿರುವ ಹಾಗೂ ಕ್ಷಮಿಸುವವರಾಗಿರುವ ಅಗತ್ಯವಿದೆ. ಅಷ್ಟುಮಾತ್ರವಲ್ಲ, ನಾವು ‘ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬಾರದು.’ (ರೋಮಾಪುರ 12:17, 18, NIBV) ದೇವರನ್ನು ಅನುಕರಿಸುತ್ತಾ ನಿಜವಾದ ಪ್ರೀತಿಯನ್ನು ತೋರಿಸುವುದು ಯಾವಾಗಲೂ ತಕ್ಕದಾದ ವಿಷಯವಾಗಿದೆ.—1 ಯೋಹಾನ 4:8.
ಎಲ್ಲ ಕ್ರೈಸ್ತರಿಗಾಗಿ ಸಲಹೆ
18 ‘ಕೇಡನ್ನು ಸಹಿಸಿಕೊಳ್ಳಬೇಕೆಂಬ’ ಸಲಹೆಯು ಎಲ್ಲ ಕ್ರೈಸ್ತರಿಗೆ ಅನ್ವಯವಾಗುತ್ತದೆ. (2 ತಿಮೊಥೆಯ 2:24) ಆದರೆ ಆ ಸಲಹೆಯು ಮೊದಲು ತಿಮೊಥೆಯನಿಗೆ ಕೊಡಲ್ಪಟ್ಟಿತು; ಅವನು ಎಫೆಸದಲ್ಲಿ ಒಬ್ಬ ಹಿರಿಯನಾಗಿ ಸೇವೆಸಲ್ಲಿಸಲಿದ್ದಾಗ ಇದು ಅಗತ್ಯವಾಗಿತ್ತು. ಏಕೆಂದರೆ ಆ ಸಭೆಯಲ್ಲಿದ್ದ ಕೆಲವರು ತಮ್ಮ ದೃಷ್ಟಿಕೋನಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳಿಬಿಡುವವರಾಗಿದ್ದರು ಮತ್ತು ತಪ್ಪಾದ ಸಿದ್ಧಾಂತಗಳನ್ನು ಕಲಿಸುತ್ತಿದ್ದರು. ಅವರು ಮೋಶೆಯ ಧರ್ಮಶಾಸ್ತ್ರದ ಉದ್ದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದ ಕಾರಣ, ನಂಬಿಕೆ, ಪ್ರೀತಿ ಮತ್ತು ಒಳ್ಳೇ ಮನಸ್ಸಾಕ್ಷಿಯ ಪ್ರಮುಖತೆಯನ್ನು ಗಣ್ಯಮಾಡಲು ವಿಫಲರಾದರು. ಅವರು ಕುತರ್ಕ ವಾಗ್ವಾದಗಳಲ್ಲಿ ಒಳಗೂಡಿರುವಾಗ ಅಹಂಕಾರವು ಜಗಳವನ್ನು ಉಂಟುಮಾಡಿತು ಮತ್ತು ಅವರು ಕ್ರಿಸ್ತನ ಬೋಧನೆಗಳ ಹಾಗೂ ದೇವರಿಗೆ ಸಲ್ಲಿಸುವ ಭಕ್ತಿಯ ಪ್ರಮುಖತೆಯನ್ನು ಗ್ರಹಿಸಲು ತಪ್ಪಿಹೋದರು. ಈ ಸನ್ನಿವೇಶವನ್ನು ನಿರ್ವಹಿಸಬೇಕಾದರೆ, ತಿಮೊಥೆಯನು ಶಾಸ್ತ್ರೀಯ ಸತ್ಯವನ್ನು ಎತ್ತಿಹಿಡಿಯಬೇಕಾಗಿತ್ತು ಮತ್ತು ಅದೇ ಸಮಯದಲ್ಲಿ ತನ್ನ ಸಹೋದರರೊಂದಿಗೆ ಸೌಮ್ಯವಾಗಿ ವ್ಯವಹರಿಸಬೇಕಾಗಿತ್ತು. ಪ್ರಚಲಿತ ದಿನದ ಹಿರಿಯರಂತೆ, ತಿಮೊಥೆಯನಿಗೂ ಮಂದೆಯು ತನಗೆ ಸೇರಿದ್ದಲ್ಲ ಮತ್ತು ತಾನು ಕ್ರೈಸ್ತ ಪ್ರೀತಿ ಹಾಗೂ ಐಕ್ಯಭಾವವು ಹುರಿದುಂಬಿಸಲ್ಪಡುವಂಥ ರೀತಿಯಲ್ಲಿ ಇತರರೊಂದಿಗೆ ವ್ಯವಹರಿಸಬೇಕು ಎಂಬುದು ತಿಳಿದಿತ್ತು.—ಎಫೆಸ 4:1-3; 1 ತಿಮೊಥೆಯ 1:3-11; 5:1, 2; 6:3-5.
19 “ದೈನ್ಯವನ್ನು” ಹುಡುಕುವಂತೆ ದೇವರು ತನ್ನ ಜನರನ್ನು ಉತ್ತೇಜಿಸುತ್ತಾನೆ. (ಚೆಫನ್ಯ 2:3) “ದೈನ್ಯ” ಎಂಬ ಪದಕ್ಕಾಗಿರುವ ಹೀಬ್ರು ಅಭಿವ್ಯಕ್ತಿಯು, ನೋವನ್ನು ತಾಳ್ಮೆಯಿಂದಲೂ ಕೋಪಿಸಿಕೊಳ್ಳದೆಯೂ ಪ್ರತೀಕಾರ ಮನೋಭಾವವಿಲ್ಲದೆಯೂ ಸಹಿಸಿಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಶಕ್ತಗೊಳಿಸುವ ಮನೋಧರ್ಮವನ್ನು ಸೂಚಿಸುತ್ತದೆ. ಕಷ್ಟಕರ ಸನ್ನಿವೇಶಗಳ ಕೆಳಗೂ ಸಂಯಮವನ್ನು ತೋರಿಸಲು ಮತ್ತು ಯೆಹೋವನನ್ನು ಯೋಗ್ಯ ರೀತಿಯಲ್ಲಿ ಪ್ರತಿನಿಧಿಸಲು ಸಾಧ್ಯವಾಗುವಂತೆ ಆತನ ಸಹಾಯಕ್ಕಾಗಿ ನಾವು ಕಟ್ಟಾಸಕ್ತಿಯಿಂದ ಪ್ರಾರ್ಥಿಸೋಣ.
ನೀವು ಏನನ್ನು ಕಲಿತುಕೊಂಡಿರಿ?
• ಯಾರಾದರೂ ನಿಮಗೆ ಒರಟಾದ ಮಾತುಗಳನ್ನಾಡುವಾಗ ಯಾವ ಶಾಸ್ತ್ರವಚನಗಳು ನಿಮಗೆ ಸಹಾಯಮಾಡಬಲ್ಲವು?
• ಸೌಲನು ಮತಾಂಧನಾಗಿ ವರ್ತಿಸುತ್ತಿದ್ದನೇಕೆ?
• ಎಲ್ಲ ರೀತಿಯ ಜನರೊಂದಿಗೆ ಸೂಕ್ತವಾಗಿ ವ್ಯವಹರಿಸಲು ಯೇಸುವಿನ ಮಾದರಿಯು ನಮಗೆ ಹೇಗೆ ಸಹಾಯಮಾಡುತ್ತದೆ?
• ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾತಿನಲ್ಲಿ ಸಂಯಮವನ್ನು ತೋರಿಸುವಾಗ ಯಾವ ಪ್ರಯೋಜನಗಳು ಸಿಗುತ್ತವೆ?
[ಅಧ್ಯಯನ ಪ್ರಶ್ನೆಗಳು]
1. ಕ್ರೈಸ್ತ ಚಟುವಟಿಕೆಯಲ್ಲಿ ಒಳಗೂಡಿರುವಾಗ, ಕೆಲವೊಮ್ಮೆ ನಿರ್ದಯವಾಗಿ ಮಾತಾಡುವಂಥ ಜನರು ನಮಗೆ ಏಕೆ ಎದುರಾಗುತ್ತಾರೆ?
2. ನಮ್ಮೊಂದಿಗೆ ನಿರ್ದಯವಾಗಿ ಮಾತಾಡುವಂಥ ಜನರೊಂದಿಗೆ ವಿವೇಕಯುತವಾಗಿ ವ್ಯವಹರಿಸಲು ಯಾವ ಶಾಸ್ತ್ರವಚನಗಳು ನಮಗೆ ಸಹಾಯಮಾಡಬಲ್ಲವು?
3. ನಾವು ಸಾರುವ ಸಂದೇಶದಲ್ಲಿ ಸಮಾಧಾನದ ಗುಣವು ಹೇಗೆ ಒಳಗೂಡಿದೆ?
4. ನೀವು ಭೇಟಿ ನೀಡುತ್ತಿರುವುದರ ಕಾರಣವನ್ನು ತಿಳಿಸುವ ಅವಕಾಶವು ನಿಮಗೆ ಕೊಡಲ್ಪಡುವುದಕ್ಕೂ ಮುಂಚೆ “ನನಗೆ ಆಸಕ್ತಿಯಿಲ್ಲ” ಎಂದು ಜನರು ಹೇಳುವಾಗ ನೀವು ಏನೆಂದು ಉತ್ತರಿಸಬಹುದು?
5, 6. ಸೌಲನು ಯೇಸುವಿನ ಹಿಂಬಾಲಕರೊಂದಿಗೆ ಹೇಗೆ ವ್ಯವಹರಿಸಿದನು, ಮತ್ತು ಅವನು ಹಾಗೆ ಏಕೆ ವರ್ತಿಸಿದನು?
7. ದಮಸ್ಕಕ್ಕೆ ಹೋಗುವ ಮಾರ್ಗದಲ್ಲಿ ಯೇಸುವನ್ನು ಸಂಧಿಸಿದ್ದರ ಫಲಿತಾಂಶವಾಗಿ ಸೌಲನಿಗೆ ಏನು ಸಂಭವಿಸಿತು?
8. ಕೆಟ್ಟ ಕೆಲಸಗಳನ್ನು ಮಾಡಿದಂಥ ಜನರ ವಿಷಯದಲ್ಲಿ ಯೇಸು ತನ್ನ ತಂದೆಯ ಮನೋಭಾವವನ್ನು ಹೇಗೆ ಪ್ರತಿಬಿಂಬಿಸಿದನು?
9. ಯೆಶಾಯ 42:1-4 ಯೇಸುವಿನಲ್ಲಿ ನೆರವೇರಿದ ರೀತಿಯಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
10, 11. (ಎ) ಯೇಸುವನ್ನು ನೇರವಾಗಿ ಖಂಡಿಸಿದಂಥ ವಿರೋಧಿಗಳಲ್ಲಿ ಫರಿಸಾಯರು ಸೇರಿದ್ದರಾದರೂ, ಅವರಲ್ಲಿ ಕೆಲವರಿಗೆ ಅವನು ಏಕೆ ಸಾಕ್ಷಿ ನೀಡಿದನು? (ಬಿ) ಕೆಲವೊಮ್ಮೆ ಯೇಸು ತನ್ನ ಎದುರಾಳಿಗಳಿಗೆ ಯಾವ ರೀತಿಯ ಉತ್ತರಗಳನ್ನು ಕೊಟ್ಟನು, ಆದರೆ ಅವನು ಏನು ಮಾಡಲಿಲ್ಲ?
12. ಯೇಸುವಿನ ಮೇಲೆ ಜನರು ರೇಗಾಡಿದಾಗಲೂ ಅವನು ಅವರಿಗೆ ಹೇಗೆ ಸಹಾಯಮಾಡಲು ಶಕ್ತನಾದನು?
13. ಕೆಲವೊಮ್ಮೆ ಜನರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸುವ ಒಬ್ಬ ಕುಟುಂಬ ಸದಸ್ಯನನ್ನು ಏಕೆ ವಿರೋಧಿಸುತ್ತಾರೆ?
14-16. ಈ ಮುಂಚೆ ತಮ್ಮ ಕುಟುಂಬದ ಸದಸ್ಯರನ್ನು ವಿರೋಧಿಸುತ್ತಿದ್ದ ಕೆಲವರಲ್ಲಿ ಯಾವುದು ಬದಲಾವಣೆಗಳನ್ನು ತಂದಿತು?
17. ಒಂದು ಕ್ರೈಸ್ತ ಮನೆಯಲ್ಲಿ ಕೆಲವೊಮ್ಮೆ ಸನ್ನಿವೇಶವು ಉದ್ವೇಗಕ್ಕೆ ಒಳಗಾಗುವಲ್ಲಿ ಯಾವ ಶಾಸ್ತ್ರೀಯ ಸಲಹೆಯು ಸಹಾಯಮಾಡಬಲ್ಲದು?
18. ಪುರಾತನ ಎಫೆಸದಲ್ಲಿನ ಒಬ್ಬ ಹಿರಿಯನಿಗೆ 2 ತಿಮೊಥೆಯ 2:24ರಲ್ಲಿ ಕಂಡುಬರುವ ಸಲಹೆಯು ಏಕೆ ಸೂಕ್ತವಾದದ್ದಾಗಿತ್ತು, ಮತ್ತು ಅದು ಎಲ್ಲ ಕ್ರೈಸ್ತರಿಗೆ ಹೇಗೆ ಪ್ರಯೋಜನಕರವಾಗಿರಸಾಧ್ಯವಿದೆ?
19. ನಾವೆಲ್ಲರೂ “ದೈನ್ಯವನ್ನು” ಹುಡುಕುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?
[ಪುಟ 26ರಲ್ಲಿರುವ ಚಿತ್ರ]
ಸೌಲನು ಕುಖ್ಯಾತನಾಗಿದ್ದರೂ ಅನನೀಯನು ಅವನನ್ನು ದಯಾಭಾವದಿಂದ ಉಪಚರಿಸಿದನು
[ಪುಟ 29ರಲ್ಲಿರುವ ಚಿತ್ರ]
ಒಬ್ಬ ಕ್ರೈಸ್ತ ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ನಂಬಿಗಸ್ತಿಕೆಯಿಂದ ಪೂರೈಸುವುದು ಕುಟುಂಬದ ವಿರೋಧವನ್ನು ತಗ್ಗಿಸಬಲ್ಲದು
[ಪುಟ 30ರಲ್ಲಿರುವ ಚಿತ್ರ]
ಕ್ರೈಸ್ತರು ಪ್ರೀತಿ ಮತ್ತು ಐಕ್ಯಭಾವವನ್ನು ಉತ್ತೇಜಿಸುತ್ತಾರೆ