ಇವೆಲ್ಲವು ಏನನ್ನು ಸೂಚಿಸುತ್ತವೆ?
ಇತ್ತೀಚಿನ ವರ್ಷಗಳಲ್ಲಿ ನೈತಿಕತೆಯ ಮಟ್ಟಗಳು ಹೇಗಿವೆ ಎಂಬುದನ್ನು ನೀವು ಪರಿಶೀಲಿಸಿದರೆ, ನೀವು ಸ್ಪಷ್ಟವಾದ ಅಂಶವೊಂದನ್ನು ಕಂಡುಕೊಳ್ಳುವಿರಿ. ಅನೇಕ ಜನರ ನಡುವೆ ನೈತಿಕತೆಯ ಮಟ್ಟಗಳು ಹೆಚ್ಚೆಚ್ಚು ಶಿಥಿಲಗೊಳ್ಳುತ್ತಿವೆ. ಇವು ನಿಜವಾಗಿಯೂ ಏನನ್ನು ಸೂಚಿಸುತ್ತವೆ?
ಕೆಲವರು ಹೇಳುವಂತೆ, ಇದು ನಮ್ಮ ಇಡೀ ಸಂಸ್ಕೃತಿ ಮತ್ತು ಮಾನವಕುಲವು ಸರ್ವನಾಶಗೊಳ್ಳುವುದು ಎಂಬ ಅರ್ಥವನ್ನು ಕೊಡುತ್ತದೋ? ಇಲ್ಲವೇ ಇವು ಇತಿಹಾಸದಲ್ಲಿ ಆಗಾಗ ಆಗುವ ಸಾಮಾನ್ಯವಾದ ಏರಿಳಿತಗಳಾಗಿವೆಯೋ?
ಹೆಚ್ಚಿನ ಜನರು ಇದಕ್ಕೆ ಎರಡನೆಯದ್ದು ಕಾರಣವಾಗಿದೆ ಎಂದು ನೆನಸುತ್ತಾರೆ. ನಮ್ಮ ಸಮಯದಲ್ಲಿ ನೈತಿಕ ಮೌಲ್ಯಗಳ ಕುಸಿತವು, ಇತಿಹಾಸದಾದ್ಯಂತ ಬಂದುಹೋಗಿರುವ ಅನೇಕ ಮನೋವೃತ್ತಿಗಳಲ್ಲಿ ಕೇವಲ ಒಂದು ಎಂದು ಅವರು ನೆನಸುತ್ತಾರೆ. ಈ ಪರಿಸ್ಥಿತಿಯು ಗಡಿಯಾರದ ಲೋಲಕದಂತಿದ್ದು, ಅದು ಪುನಃ ಹಿಂದಿನ ಸ್ಥಾನಕ್ಕೆ ಮರಳಿ, ನೈತಿಕತೆಯ ಅತ್ಯುಚ್ಚ ಮಟ್ಟಗಳನ್ನು ಅನುಸರಿಸುವುದು ಎಂದು ಇವರು ನಿರೀಕ್ಷಿಸುತ್ತಾರೆ. ಆದರೆ ಇವರ ಅಭಿಪ್ರಾಯವು ಸರಿಯಾಗಿದೆಯೋ?
‘ಕಡೇ ದಿವಸಗಳು’
ದೇವರ ವಾಕ್ಯವಾದ ಬೈಬಲಿನ ಬೆಳಕಿನಲ್ಲಿ ನಾವು ಈ ಅಂಶಗಳನ್ನು ಪರಿಶೀಲಿಸೋಣ. ಇದು ಅನೇಕ ಶತಮಾನಗಳಿಂದಲೂ ನೈತಿಕ ಮೌಲ್ಯಗಳ ಸಂಬಂಧದಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿರುವ ಪ್ರಮಾಣಗ್ರಂಥವಾಗಿದೆ. ಮಾನವ ಇತಿಹಾಸದಲ್ಲಿಯೇ ಅತ್ಯಂತ ನಿರ್ಣಾಯಕ ಯುಗದ ಕುರಿತು ಬೈಬಲು ನೀಡುವ ಪ್ರವಾದನಾತ್ಮಕ ವರ್ಣನೆಯೊಂದಿಗೆ ನಮ್ಮ ಈಗಿನ ಲೋಕವನ್ನು ಹೋಲಿಸಿ ನೋಡುವುದು ನಿಜವಾಗಿಯೂ ಜ್ಞಾನೋದಯವನ್ನು ಉಂಟುಮಾಡುತ್ತದೆ. ಈಗಿರುವ ಸಮಯವನ್ನು ಬೈಬಲು ‘ಕಡೇ ದಿವಸಗಳು’ ಇಲ್ಲವೇ “ಯುಗದ ಸಮಾಪ್ತಿ” ಎಂದು ಕರೆಯುತ್ತದೆ. (2 ತಿಮೊಥೆಯ 3:1; ಮತ್ತಾಯ 24:3) ಈ ಅಭಿವ್ಯಕ್ತಿಗಳು ತಿಳಿಸುವಂತೆ, ಈ ಅವಧಿಯು, ಅಂದರೆ ಈ ಯುಗವು ಖಂಡಿತವಾಗಿಯೂ ಕೊನೆಗೊಳ್ಳುತ್ತದೆ ಮತ್ತು ಹೊಸ ಯುಗವೊಂದು ಆರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಕಡೇ ದಿವಸಗಳಲ್ಲಿ ‘ಕಠಿನ ಕಾಲಗಳು’ ಬರುವವೆಂಬುದನ್ನು ದೇವರ ವಾಕ್ಯವು ಮೊದಲೇ ಹೇಳಿತ್ತು. ಯಾವಾಗಲೂ ಎಚ್ಚರದಿಂದಿದ್ದು ಗಮನಿಸುತ್ತಿರುವವರಿಗೆ, ಈ ಕಡೇ ದಿವಸಗಳನ್ನು ಗುರುತಿಸಲು ಸಹಾಯಮಾಡಲಿಕ್ಕಾಗಿ, ಬೈಬಲು ಹಲವಾರು ವಿವರಗಳನ್ನು ಕೊಡುತ್ತದೆ. ಈ ವಿವರಗಳು, ಈ ಅಸಾಧಾರಣ ಸಮಯಾವಧಿಯ ಸ್ಪಷ್ಟವಾದ ಚಿತ್ರಣವನ್ನು ಅಥವಾ ಸಂಘಟಿತ ಸೂಚನೆಯನ್ನು ನೀಡುತ್ತವೆ.
ಜನರು ತೋರಿಸುವ ಅವಗುಣಗಳು
“ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡ” ಎಂದು ಹೇಳುವ ಜನರಿರುತ್ತಾರೆ ಎಂದು ಬೈಬಲು ಹೇಳುತ್ತದೆ. ಇದು ಸೂಚನೆಯ ಮುಖ್ಯ ಭಾಗವಾಗಿರುತ್ತದೆ. ಇದನ್ನು ಇಂದು ನಾವು ಎಲ್ಲೆಲ್ಲೂ ಕಾಣಬಹುದು. (2 ತಿಮೊಥೆಯ 3:2, 5) ಇತಿಹಾಸದ ಇನ್ಯಾವ ಸಮಯದಲ್ಲೂ ಜನರು ಇಷ್ಟೊಂದು ಪ್ರಾಪಂಚಿಕತೆಯುಳ್ಳವರಾಗಿರಲಿಲ್ಲ. ಕೇವಲ ದೇವರಿಗೆ ಮಾತ್ರ ಅಧಿಕಾರವಿದೆ ಎಂಬುದನ್ನು ವ್ಯಾಪಕವಾಗಿ ತಿರಸ್ಕರಿಸಲಾಗಿದೆ ಮತ್ತು ಸತ್ಯದ ಏಕಮಾತ್ರ ಮೂಲವು ಬೈಬಲಾಗಿದೆ ಎಂದು ಹೆಚ್ಚಿನ ಜನರು ಅಂಗೀಕರಿಸುವುದಿಲ್ಲ. ಧರ್ಮಗಳು ಇನ್ನೂ ಅಸ್ತಿತ್ವದಲ್ಲಿವೆಯಾದರೂ ಅನೇಕ ಧರ್ಮಗಳು ಜನರ ಮೇಲೆ ಅಷ್ಟೇನೂ ಪ್ರಭಾವವನ್ನು ಬೀರುತ್ತಿಲ್ಲ. ಅವು ಕೇವಲ ಹುಸಿ ತೋರ್ಕೆಗಳಾಗಿವೆ.
ಈ ಸೂಚನೆಯ ಮತ್ತೊಂದು ಭಾಗವನ್ನು ಬೈಬಲು ಉಲ್ಲೇಖಿಸುತ್ತದೆ: “ಮನುಷ್ಯರು . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ” ಆಗಿರುವರು ಮತ್ತು “ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು.” (2 ತಿಮೊಥೆಯ 3:2, 3; ಮತ್ತಾಯ 24:12) “ಉಗ್ರತೆ” ಎಂಬ ಗ್ರೀಕ್ ಪದದ ಅರ್ಥ, ಇತರ ಸಂಗತಿಗಳನ್ನು ಸೇರಿಸಿ, “ಮಾನವ ಸಹಾನುಭೂತಿ ಮತ್ತು ಭಾವನೆಗಳ ಕೊರತೆ” ಆಗಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ಎಳೆಯ ಮಕ್ಕಳು ಸಹ ‘ಉಗ್ರತೆಯನ್ನು’ ತೋರಿಸುತ್ತಿದ್ದಾರೆ ಮತ್ತು ಹೆಚ್ಚೆಚ್ಚು ಹಿಂಸಾಕೃತ್ಯಗಳನ್ನು ನಡೆಸುತ್ತಿದ್ದಾರೆ.
ಅಷ್ಟುಮಾತ್ರವಲ್ಲದೆ, ಕ್ಷಿಪ್ರಗತಿಯ ತಾಂತ್ರಿಕ ಹಾಗೂ ಆರ್ಥಿಕ ಬೆಳವಣಿಗೆಗಳು ಮತ್ತು ಇವುಗಳಿಂದಾಗಿ ಹುಟ್ಟಿರುವ ಲೋಭ, ಇವೆಲ್ಲವು ಜನರು ಹಳೆಯ ಮೌಲ್ಯಗಳನ್ನು ಕಿತ್ತೆಸೆಯುವಂತೆ ಮಾಡಿವೆ. ಬೇರೆಯವರ ಬಗ್ಗೆ ಸ್ವಲ್ಪವೂ ಯೋಚಿಸದೆ, ಯಾವುದೇ ರೀತಿಯಲ್ಲಾದರೂ ಮೋಸದಿಂದಾದರೂ ಸರಿ, ತಮ್ಮ ಸ್ವಾರ್ಥ ಅಭಿಲಾಷೆಗಳನ್ನು ತಣಿಸಿಕೊಳ್ಳಲಿಕ್ಕಾಗಿ ತಮ್ಮ ಕೈಗೆ ಸಿಕ್ಕಿದಷ್ಟು ಬಾಚಿಕೊಳ್ಳಲು ನೋಡುತ್ತಾರೆ. ಸ್ವಾರ್ಥದ ಇನ್ನೊಂದು ಪುರಾವೆಯು ಜೂಜಾಟದಲ್ಲಿನ ಏರಿಕೆಯಾಗಿದೆ. ಮತ್ತು ಕಳೆದ ಕೆಲವು ದಶಕಗಳ ಅಪರಾಧದ ಅಂಕಿಸಂಖ್ಯೆಗಳು ಇದರ ಕುರಿತಾಗಿ ಹೆಚ್ಚು ಬಲವಾಗಿಯೂ ಸ್ಪಷ್ಟವಾಗಿಯೂ ಪುರಾವೆಗಳನ್ನು ಒದಗಿಸುತ್ತವೆ.
ವಿಶೇಷವಾಗಿ ನಮ್ಮ ಸಮಯದಲ್ಲಿ ವ್ಯಾಪಕವಾಗಿರುವ ಒಂದು ಅಂಶವು, ‘ಮನುಷ್ಯರು . . . ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವಂತಹದ್ದು’ ಆಗಿದೆ. (2 ತಿಮೊಥೆಯ 3:2-5) ಒಂದು ಉದಾಹರಣೆಯು, ಜನರು ಶರೀರದ ಆಸೆಯನ್ನು ತಣಿಸಿಕೊಳ್ಳಲು ಬಯಸುತ್ತಾರೆ. ಆದರೆ ಜೀವನಪೂರ್ತಿ ಒಬ್ಬ ವಿವಾಹ ಸಂಗಾತಿಯೊಡನೆ ಬಾಳ್ವೆ ನಡೆಸಲು ಅವರು ಇಷ್ಟಪಡುವುದಿಲ್ಲ. ಇದರಿಂದಾಗಿ ಕುಟುಂಬ ಸಂಬಂಧಗಳು ಮುರಿದುಹೋಗಿವೆ, ಅಸಂತುಷ್ಟವಾಗಿರುವ ಹಾಗೂ ತಮ್ಮ ಕುಟುಂಬದವರೊಂದಿಗೆ ವಾತ್ಸಲ್ಯವನ್ನು ಹೊಂದಿರದ ಮಕ್ಕಳು, ಏಕಹೆತ್ತವರು, ಮತ್ತು ರತಿ ರವಾನಿತ ರೋಗಗಳು ಹೆಚ್ಚಾಗಿವೆ.
ಈ ಸೂಚನೆಯ ಮತ್ತೊಂದು ಅಂಶವು, “ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ” ಆಗಿರುವರು ಎಂಬುದೇ ಆಗಿದೆ. (2 ತಿಮೊಥೆಯ 3:2) ಡೀ ಟ್ಸೀಟ್ ಎಂಬ ಜರ್ಮನ್ ಪತ್ರಿಕೆಗನುಸಾರ, “[ಇಂದಿನ ಆರ್ಥಿಕ] ಸ್ಥಿತಿಯ ಚಾಲಕ ಶಕ್ತಿಯು ಸ್ವಾರ್ಥವೇ ಆಗಿದೆ.” ಹಿಂದೆಂದಿಗಿಂತಲೂ ಹೆಚ್ಚಾಗಿ, ಅನೇಕರ ಜೀವನದಲ್ಲಿ ಹಣವೇ ಸರ್ವಸ್ವವಾಗಿದೆ. ಈ ಸ್ವಾರ್ಥದ ಹುಚ್ಚು ಬೆನ್ನಟ್ಟುವಿಕೆಯಲ್ಲಿ ಇತರ ಮೌಲ್ಯಗಳಿಗೆ ಏನೇನೂ ಬೆಲೆಯಿಲ್ಲ.
ಲೋಕ ಘಟನೆಗಳು
ಬೈಬಲು ಮಾನವ ಮೌಲ್ಯಗಳ ಕುಸಿತವನ್ನು ವರ್ಣಿಸಿತ್ತಲ್ಲದೆ, ಮಾನವ ಕುಟುಂಬವನ್ನೇ ಬಾಧಿಸುವ ಅಸಾಧಾರಣವಾದ ಅವ್ಯವಸ್ಥತೆಯು ಕಡೇ ದಿವಸಗಳಲ್ಲಿ ಇರುವುದು ಎಂಬುದನ್ನು ಸಹ ತಿಳಿಸಿತ್ತು. ಉದಾಹರಣೆಗೆ, ಅದು ಹೇಳುವುದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ” ಉಂಟಾಗುವುವು.—ಲೂಕ 21:10, 11.
ಕೇವಲ 20ನೇ ಶತಮಾನದಲ್ಲಿ, ಇಷ್ಟೊಂದು ಕಡಿಮೆ ಸಮಯದಲ್ಲಿ ಲೋಕವನ್ನೇ ನಡುಗಿಸುವಂತಹ ಅನೇಕ ಮಹಾ ವಿಪತ್ತುಗಳಾಗಿವೆ ಹಾಗೂ ಅನೇಕ ಜನರು ಇದಕ್ಕೆ ಆಹುತಿಯಾಗಿದ್ದಾರೆ. ಇಂತಹ ಘಟನೆಗಳು ಇತಿಹಾಸದ ಇನ್ಯಾವುದೇ ಸಮಯದಲ್ಲಿ ಆಗಿಲ್ಲ. ಉದಾಹರಣೆಗೆ, 20ನೇ ಶತಮಾನದಲ್ಲಿ, ಸುಮಾರು 10 ಕೋಟಿಗಿಂತಲೂ ಹೆಚ್ಚಿನ ಜನರು ಯುದ್ಧಗಳಲ್ಲಿ ಮಡಿದಿದ್ದಾರೆ. ಕಳೆದ ಹಲವಾರು ಶತಮಾನಗಳಲ್ಲಿ ಆದ ಯುದ್ಧಗಳಲ್ಲಿ ಸತ್ತವರ ಸಂಖ್ಯೆಯನ್ನು ಮೊತ್ತಹಾಕಿದರೆ, ಅದಕ್ಕಿಂತಲೂ ತೀರ ಹೆಚ್ಚಿನ ಸಂಖ್ಯೆಯು ಇದಾಗಿರುತ್ತದೆ. ಹಿಂದಿನ ಯಾವುದೇ ಯುದ್ಧಕ್ಕಿಂತಲೂ ಭಿನ್ನವಾದ ಎರಡು ಯುದ್ಧಗಳು 20ನೇ ಶತಮಾನದಲ್ಲಾದವು. ಆದುದರಿಂದಲೇ ಇವುಗಳನ್ನು ವಿಶ್ವ ಯುದ್ಧಗಳು ಎಂದು ಕರೆಯುತ್ತಾರೆ. ಇಂತಹ ಭೌಗೋಲಿಕ ಹೋರಾಟಗಳು ಹಿಂದೆಂದೂ ನಡೆದಿರಲಿಲ್ಲ.
ದುಷ್ಟ ಪ್ರಚೋದಕ ಶಕ್ತಿ
ಒಬ್ಬ ಶಕ್ತಿಶಾಲಿ, ದುಷ್ಟಾತ್ಮ ಜೀವಿಯ ಅಸ್ತಿತ್ವದ ಕುರಿತು ಸಹ ಬೈಬಲು ತಿಳಿಸುತ್ತದೆ. “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ” ಇವನು ಜನರನ್ನು ನಿಜವಾದ ಮೌಲ್ಯಗಳಿಂದ ದೂರಸರಿಸಲು ಹಾಗೂ ನೈತಿಕವಾಗಿ ಕೀಳ್ಮಟ್ಟಕ್ಕೆ ಇಳಿಯುವಂತೆ ಮಾಡಲು ಅವರನ್ನು ಮರುಳುಗೊಳಿಸುತ್ತಿದ್ದಾನೆ. ಕಡೇ ದಿವಸಗಳಲ್ಲಿ, ಇವನು “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ” ಈ ಭೂಮಿಯ ಕಡೆಗೆ ಇಳಿದು ಬಂದಿದ್ದಾನೆ ಎಂದು ಬೈಬಲ್ ಹೇಳುತ್ತದೆ.—ಪ್ರಕಟನೆ 12:9, 12.
‘ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿ, ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ’ ಎಂದು ಪಿಶಾಚನನ್ನು ಬೈಬಲು ವರ್ಣಿಸುತ್ತದೆ. (ಎಫೆಸ 2:2) ಅನೇಕ ಜನರ ಮೇಲೆ ಪಿಶಾಚನು ತನ್ನ ಶಕ್ತಿಶಾಲಿ ಪ್ರಭಾವವನ್ನು ಬೀರುತ್ತಾನೆ ಎಂಬುದನ್ನು ಇದು ಸೂಚಿಸುತ್ತದೆ. ಗಾಳಿಯಲ್ಲಿರುವ ಕಣ್ಣಿಗೆ ಕಾಣದ ಮಲಿನಕಾರಿ ವಸ್ತುವನ್ನು ಕೆಲವೊಮ್ಮೆ ನಾವು ಗಮನಿಸದೆ ಇರುವಂತೆಯೇ, ನಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಅವನು ಪ್ರಭಾವವನ್ನು ಬೀರುತ್ತಾನೆ.
ಉದಾಹರಣೆಗೆ, ಅನೇಕ ಆಧುನಿಕ ಸಂಪರ್ಕ ಮಾಧ್ಯಮಗಳಲ್ಲಿ ಸೈತಾನನ ಪ್ರಭಾವವನ್ನು ನಾವು ಕಾಣಬಹುದು. ಅಂದರೆ ಇವು ವಿಡಿಯೋ, ಚಲನಚಿತ್ರಗಳು, ಟೆಲಿವಿಷನ್, ಇಂಟರ್ನೆಟ್, ಜಾಹೀರಾತುಗಳು, ಪುಸ್ತಕಗಳು, ಪತ್ರಿಕೆಗಳು, ಮತ್ತು ನ್ಯೂಸ್ಪೇಪರ್ಗಳಾಗಿರುತ್ತವೆ. ಇದರಲ್ಲಿರುವ ಹೆಚ್ಚಿನ ವಿಷಯಗಳು, ವಿಶೇಷವಾಗಿ ಅಮಾಯಕ ಯುವ ಜನರ ಮೇಲೆ ಕೇಂದ್ರೀಕರಿಸುವ ಮಾಹಿತಿಯು, ವರ್ಣಬೇಧನೀತಿ, ಇಂದ್ರಜಾಲ, ಅನೈತಿಕತೆ, ಮತ್ತು ಹಿಂಸಾನಂದದಿಂದ ತುಂಬಿರುತ್ತವೆ.
ಕಡೇ ದಿವಸಗಳ ಕುರಿತಾಗಿ ಬೈಬಲು ನೀಡುವ ವರ್ಣನೆಗೂ, ಲೋಕದಲ್ಲಿರುವ ಈಗಿನ ಪರಿಸ್ಥಿತಿಗಳಿಗೂ ಹೊಂದಾಣಿಕೆಗಳಿರುವುದನ್ನು ನೋಡಿ ಅನೇಕ ಸಹೃದಯಿಗಳು ಬೆರಗಾಗಿದ್ದಾರೆ. 20ನೇ ಶತಮಾನಕ್ಕಿಂತ ಹಿಂದೆ ಇತಿಹಾಸದಲ್ಲಿ ನಡೆದ ಕೆಲವು ಘಟನೆಗಳು ಬೈಬಲಿನ ವರ್ಣನೆಗೆ ಸ್ವಲ್ಪಮಟ್ಟಿಗೆ ಹೊಂದಿಕೊಳ್ಳುತ್ತಿರುವಂತೆ ತೋರುತ್ತಿದ್ದವು ಎಂಬುದು ಸತ್ಯ. ಆದರೂ, ಕೇವಲ 20ನೇ ಶತಮಾನ ಹಾಗೂ ಈಗ 21ನೇ ಶತಮಾನದಲ್ಲಿ ಮಾತ್ರ ಆ ಸೂಚನೆಯ ಎಲ್ಲ ಅಂಶಗಳನ್ನು ನಾವು ನೋಡಸಾಧ್ಯವಿದೆ.
ಬರಲಿರುವ ಹೊಸ ಯುಗ
ಮಾನವಕುಲವು ನಾಶವಾಗುವುದು ಎಂದು ಹೇಳುವ ಇಲ್ಲವೇ ಪರಿಸ್ಥಿತಿಗಳು ಹೀಗೆಯೇ ಮುಂದುವರಿದುಕೊಂಡು ಹೋಗುವವು ಎಂದು ಹೇಳುವ ಜನರ ಮಾತುಗಳು ಸರಿಯಾಗಿರುವುದಿಲ್ಲ. ಅದಕ್ಕೆ ಬದಲಾಗಿ, ಈಗ ಭೂಮಿಯಲ್ಲಿರುವ ಮಾನವ ಸಮಾಜವು, ಒಂದು ಹೊಸ ಸಮಾಜದಿಂದ ಸ್ಥಾನಪಲ್ಲಟಗೊಳ್ಳುವುದು ಎಂಬುದನ್ನು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ.
ಕಡೇ ದಿವಸಗಳ ಅನೇಕ ವೈಶಿಷ್ಟ್ಯಗಳನ್ನು ಯೇಸು ಪಟ್ಟಿಮಾಡಿದ ಅನಂತರ ಹೇಳಿದ್ದು: “ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.” (ಲೂಕ 21:31) ಯೇಸುವಿನ ಸಾಕ್ಷಿಕಾರ್ಯದ ಮುಖ್ಯ ವಿಷಯವು ದೇವರ ಸ್ವರ್ಗೀಯ ರಾಜ್ಯವಾಗಿತ್ತು. (ಮತ್ತಾಯ 6:9, 10) ದೇವರು ಅವನನ್ನು ಈ ರಾಜ್ಯದ ರಾಜನನ್ನಾಗಿ ನೇಮಿಸಿದನು. ಮತ್ತು ಈ ರಾಜ್ಯವು ಇಡೀ ಭೂಮಿಯನ್ನು ಆಳಲಿರುವ ಒಂದು ಸರಕಾರವಾಗಿದೆ.—ಲೂಕ 8:1; ಪ್ರಕಟನೆ 11:15; 20:1-6.
ಈ ಕಡೇ ದಿವಸಗಳ ಅಂತ್ಯದಲ್ಲಿ, ದೇವರ ಸ್ವರ್ಗೀಯ ರಾಜ್ಯವು ಕ್ರಿಸ್ತನ ಮೂಲಕ, ತನ್ನ ಎಲ್ಲ ಶತ್ರುಗಳನ್ನು, ಪಿಶಾಚನನ್ನೂ ಅವನನ್ನು ಬೆಂಬಲಿಸುವವರನ್ನೂ ಹೇಳಹೆಸರಿಲ್ಲದಂತೆ ನಾಶಮಾಡಲಿದೆ. ಅಷ್ಟುಮಾತ್ರವಲ್ಲದೆ, ನೈತಿಕವಾಗಿ ದಿವಾಳಿಯಾಗಿರುವ ಈ ಸದ್ಯದ ಸಮಾಜದ ಸ್ಥಾನದಲ್ಲಿ ಅದು ಒಂದು ನೀತಿವಂತ ಹೊಸ ಲೋಕವನ್ನು ತರುವುದು. (ದಾನಿಯೇಲ 2:44) ಈ ಹೊಸ ಲೋಕದಲ್ಲಿ, ಸಹೃದಯದ ಜನರು ಪ್ರಮೋದವನವಾಗಿ ಮಾರ್ಪಟ್ಟ ಭೂಮಿಯ ಮೇಲೆ ಸದಾಕಾಲ ಜೀವಿಸುವುದರಲ್ಲಿ ಆನಂದಿಸುವರು.—ಲೂಕ 23:43; 2 ಪೇತ್ರ 3:13; ಪ್ರಕಟನೆ 21:3, 4.
ಇಂದಿನ ನೈತಿಕ ಮೌಲ್ಯಗಳ ಕುಸಿತವನ್ನು ನೋಡಿ ಹೇಸುವವರಿಗೆ ಮತ್ತು ಕಡೇ ದಿವಸಗಳ ಸಂಘಟಿತ ಸೂಚನೆಯನ್ನು, ಈಗ ಆಗುತ್ತಿರುವ ಘಟನೆಗಳು ನೆರವೇರಿಸುತ್ತಿವೆ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳುವವರಿಗೆ ಮುಂದೆ ಒಳ್ಳೆಯ ಭವಿಷ್ಯತ್ತು ಕಾದಿದೆ. ನಮ್ಮ ಕುರಿತಾಗಿ ಚಿಂತಿಸುವ ಹಾಗೂ ತನ್ನ ಸೃಷ್ಟಿಕ್ರಿಯೆಯಾದ ಭೂಮಿಗಾಗಿ ಒಂದು ಉಜ್ವಲವಾದ ಉದ್ದೇಶವನ್ನಿಟ್ಟಿರುವ ನಮ್ಮ ಸರ್ವಶಕ್ತನಾದ ದೇವರಿಗೆ ನಾವು ಆಭಾರಿಗಳಾಗಿದ್ದೇವೆ.—ಕೀರ್ತನೆ 37:10, 11, 29; 1 ಪೇತ್ರ 5:6, 7.
ನಮ್ಮ ಪ್ರೇಮಮಯ ಸೃಷ್ಟಿಕರ್ತನ ಬಗ್ಗೆ ಹಾಗೂ ನೈತಿಕವಾಗಿ ಶುದ್ಧವಾದ ಲೋಕವೊಂದರಲ್ಲಿ ಜೀವಿಸುವುದರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಆಮಂತ್ರಿಸುತ್ತಾರೆ. ತನ್ನನ್ನು ಹುಡುಕುತ್ತಿರುವವರಿಗೆಲ್ಲ, ನೈತಿಕವಾಗಿ ಶುದ್ಧವಾಗಿರುವ ಲೋಕದಲ್ಲಿ ಜೀವಿಸುವ ಪ್ರತೀಕ್ಷೆಯನ್ನು ದೇವರು ನೀಡುತ್ತಾನೆ. ಬೈಬಲಿನಲ್ಲಿಯೇ ಹೇಳಿರುವಂತೆ, ‘ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವಾಗಿದೆ.’—ಯೋಹಾನ 17:3.
[ಪುಟ 10ರಲ್ಲಿರುವ ಚಿತ್ರ]
ಪ್ರಮೋದವನ ಭೂಮಿಯಲ್ಲಿ ಸಹೃದಯಿಗಳು ಸದಾಕಾಲದ ಜೀವಿತವನ್ನು ಆನಂದಿಸುವರು