ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಸಂತೃಪ್ತಿ ಪಡೆಯಿರಿ
ಒಂದು ಬೆಕ್ಕು ಮುದುರಿಕೊಂಡು ಮಲಗಿ ಪರ್ಗುಟ್ಟುತ್ತಿರುವುದನ್ನು, ಅಂದರೆ ತೀರ ಸಂತೃಪ್ತಿಯಿಂದ ಮಲಗಿರುವುದನ್ನು ನೀವು ನೋಡಿರುವುದು ನಿಶ್ಚಯ. ಆ ಬೆಕ್ಕಿನಂತೆ ಮುದುರಿಕೊಂಡು ಸಂತೃಪ್ತಿಯನ್ನು ಸವಿಯುವುದು ಅದೆಷ್ಟು ಆಹ್ಲಾದಕರ! ಆದರೆ ಅನೇಕರಿಗೆ ಸಂತೃಪ್ತಿಯನ್ನು ಕಂಡುಕೊಳ್ಳುವುದು ಕಷ್ಟಕರವಾಗಿರುತ್ತದೆ, ಒಂದುವೇಳೆ ಕಂಡುಕೊಂಡರೂ ಅದು ತಾತ್ಕಾಲಿಕವಾಗಿರುತ್ತದೆ. ಹಾಗೇಕೆ?
ನಮ್ಮ ಅಪರಿಪೂರ್ಣತೆಯ ಕಾರಣದಿಂದ ನಾವು ಆಗಾಗ್ಗೆ ತಪ್ಪುಗಳನ್ನು ಮಾಡುತ್ತೇವೆ, ಅಷ್ಟುಮಾತ್ರವಲ್ಲ ನಾವು ಇತರರ ತಪ್ಪುಗಳನ್ನೂ ತಾಳಿಕೊಳ್ಳಬೇಕಾಗುತ್ತದೆ. ಅಷ್ಟುಮಾತ್ರವಲ್ಲ, ಬೈಬಲ್ ಯಾವುದನ್ನು “ಕಡೇ ದಿವಸಗಳು” ಎಂದು ಕರೆಯುತ್ತದೊ ಅಂತಹ “ನಿಭಾಯಿಸಲು ಕಷ್ಟವಾಗಿರುವ ಕಠಿನ ಕಾಲಗಳಲ್ಲಿ” (NW) ನಾವು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1-5) ಬಾಲ್ಯಾವಸ್ಥೆಯಲ್ಲಿ ನಮಗಾಗಿರುವ ಸಂತೃಪ್ತಿಯ ಕೆಲವು ಸುಖಾನುಭವಗಳನ್ನು ನಾವು ಸ್ಮರಿಸಿಕೊಳ್ಳುತ್ತೇವಾದರೂ, ನಮ್ಮಲ್ಲಿ ಹೆಚ್ಚಿನವರು ಈ “ಕಠಿನ ಕಾಲಗಳ” ಕಾರಣ ಒತ್ತಡಕ್ಕೊಳಗಾಗಿದ್ದೇವೆ. ಹಾಗಿದ್ದರೂ, ನಮ್ಮ ದಿನಗಳಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆಯೆ?
ಶಾಸ್ತ್ರವಚನಗಳು, ನಮ್ಮ ದಿನಗಳು ನಿಭಾಯಿಸಲು ಕಷ್ಟಕರವಾಗಿ ಇರುವವು ಎಂದು ಹೇಳುತ್ತವೆಯೇ ಹೊರತು ನಿಭಾಯಿಸಲು ಅಸಾಧ್ಯವಾಗಿ ಇರುವವು ಎಂದು ಹೇಳುವುದಿಲ್ಲ. ನಾವು ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಅವುಗಳನ್ನು ನಿಭಾಯಿಸಬಲ್ಲೆವು. ಇದರ ಅರ್ಥ ನಮ್ಮ ಸಮಸ್ಯೆಗಳನ್ನು ನಾವು ಸದಾ ಬಗೆಹರಿಸಿಬಿಡುವೆವು ಎಂದಲ್ಲ, ಬದಲಿಗೆ ಈ ಮೂಲತತ್ವಗಳ ಸಹಾಯದಿಂದ ನಾವು ಸ್ವಲ್ಪ ಸಂತೃಪ್ತಿಯನ್ನು ಕಂಡುಕೊಳ್ಳುವೆವು. ಇಂತಹ ಮೂರು ಮೂಲತತ್ವಗಳನ್ನು ನಾವೀಗ ಪರಿಶೀಲಿಸೋಣ.
ವಾಸ್ತವವಾದ ನೋಟವನ್ನು ಇಟ್ಟುಕೊಳ್ಳಿ
ಸಂತೃಪ್ತಿಯನ್ನು ಕಂಡುಕೊಳ್ಳಬೇಕಾದರೆ, ನಾವು ನಮ್ಮ ಸ್ವಂತ ಹಾಗೂ ಇತರರ ಇತಿಮಿತಿಗಳ ಬಗ್ಗೆ ವಾಸ್ತವವಾದ ನೋಟವನ್ನು ಇಟ್ಟುಕೊಳ್ಳಬೇಕು. ರೋಮಾಪುರದವರಿಗೆ ಬರೆದ ಪತ್ರದಲ್ಲಿ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 3:23) ಯೆಹೋವನ ಮಹಿಮೆಯ ಅನೇಕ ಅಂಶಗಳು ನಮ್ಮ ಗ್ರಹಿಕೆಗೆ ನಿಲುಕದವುಗಳಾಗಿವೆ. ಇದರ ಒಂದು ಉದಾಹರಣೆಯು, ಆದಿಕಾಂಡ 1:31ರಲ್ಲಿ ತಿಳಿಸಲ್ಪಟ್ಟಿರುವ ಸರಳ ನಿಜತ್ವವಾಗಿದೆ: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” ಯೆಹೋವನು ಗತಕಾಲವನ್ನು ಹಾಗೂ ತಾನು ಮಾಡಿರುವ ಕಾರ್ಯಗಳನ್ನು ಜ್ಞಾಪಿಸಿಕೊಳ್ಳಲು ಬಯಸುವುದಾದರೆ, ಆತನು ಸದಾ “ಅದು ಬಹು ಒಳ್ಳೇದಾಗಿತ್ತು” ಎಂದು ಹೇಳಬಲ್ಲನು. ಆದರೆ ಯಾವ ಮಾನವನೂ ಎಂದಿಗೂ ಹೀಗೆ ಹೇಳಲು ಸಾಧ್ಯವಿಲ್ಲ. ಹಾಗಾದರೆ, ಸಂತೃಪ್ತಿಯನ್ನು ಪಡೆಯಲು ಅಗತ್ಯವಿರುವ ಪ್ರಥಮ ಹೆಜ್ಜೆ ನಮ್ಮ ಇತಿಮಿತಿಗಳನ್ನು ಒಪ್ಪಿಕೊಳ್ಳುವುದೇ ಆಗಿದೆ. ಆದರೆ ಅಷ್ಟೇ ಸಾಕಾಗದು. ಯಾವುದೇ ವಿಷಯದಲ್ಲಿ ನಾವು ಯೆಹೋವನ ದೃಷ್ಟಿಕೋನವನ್ನು ತಿಳಿದುಕೊಂಡು ಅದನ್ನು ಅಂಗೀಕರಿಸುವ ಆವಶ್ಯಕತೆಯೂ ಇದೆ.
“ಪಾಪ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಗುರಿತಪ್ಪುವುದು ಎಂಬರ್ಥವಿರುವ ಮೂಲ ಪದದಿಂದ ಬಂದದ್ದಾಗಿದೆ. ಅದನ್ನು ಹೀಗೆ ದೃಷ್ಟಾಂತಿಸಬಹುದು: ಸರಿಯಾಗಿ ಗುರಿಗೆ ಬಾಣ ಹೊಡೆಯುವ ಮೂಲಕ ಇನಾಮನ್ನು ಗೆಲ್ಲಲು ಬಯಸುವ ಒಬ್ಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಿ. ಅವನಿಗೆ ಮೂರು ಬಾಣಗಳು ಕೊಡಲ್ಪಟ್ಟಿವೆ. ಅವನು ಒಂದನೆಯ ಬಾಣವನ್ನು ಹೊಡೆದಾಗ ಅದು ಒಂದು ಮೀಟರ್ನಷ್ಟು ಗುರಿತಪ್ಪುತ್ತದೆ. ಅವನು ಈಗ ಸರಿಯಾಗಿ ಗುರಿಯಿಟ್ಟರೂ, ಎರಡನೆಯ ಬಾಣ 30 ಸೆಂಟಿಮೀಟರ್ನಷ್ಟು ಗುರಿತಪ್ಪುತ್ತದೆ. ಈಗ ಅವನು ಸರಿಯಾಗಿ ಗಮನವನ್ನು ಕೇಂದ್ರೀಕರಿಸುತ್ತಾ ಕೊನೆಯ ಬಾಣವನ್ನು ಹೊಡೆದಾಗ ಅದು ಕೇವಲ ಎರಡು ಸೆಂಟಿಮೀಟರ್ನಷ್ಟು ಗುರಿತಪ್ಪುತ್ತದೆ. ಅದು ಸ್ವಲ್ಪವೇ ಗುರಿತಪ್ಪಿದರೂ, ಸೋಲು ಸೋಲೇ.
ನಾವೆಲ್ಲರೂ ನಿರಾಶೆಗೊಂಡ ಆ ಬಿಲ್ಲುಗಾರನಂತಿದ್ದೇವೆ. ಕೆಲವು ಬಾರಿ ನಾವು ದೊಡ್ಡ ರೀತಿಯಲ್ಲಿ ಗುರಿತಪ್ಪುತ್ತೇವೆ. ಇನ್ನು ಕೆಲವು ಬಾರಿ ನಾವು ಗುರಿಯ ಹತ್ತಿರ ಬರುತ್ತೇವಾದರೂ, ಸರಿಯಾದ ಕಡೆ ಬಾಣವನ್ನು ಹೊಡೆಯಲು ತಪ್ಪುತ್ತೇವೆ. ನಾವು ಅಷ್ಟು ಪ್ರಯತ್ನ ಮಾಡಿಯೂ ಗೆಲ್ಲದ ಕಾರಣ ತುಂಬ ಹತಾಶರಾಗುತ್ತೇವೆ. ಈಗ, ಬಿಲ್ಲುಗಾರನ ದೃಷ್ಟಾಂತವನ್ನು ಇನ್ನೊಮ್ಮೆ ಪರಿಗಣಿಸೋಣ.
ತಾನು ಇನಾಮು ಪಡೆಯಬೇಕೆಂಬ ಕಡುಬಯಕೆ ಆ ಬಿಲ್ಲುಗಾರನಿಗಿತ್ತಾದರೂ, ಅದು ಸಿಗದೆ ಹೋದುದರಿಂದ ಅವನು ನಿರಾಶೆಯಿಂದ ನಿಧಾನವಾಗಿ ಹಿಂದೆ ಹೋಗುತ್ತಿದ್ದಾನೆ. ಆದರೆ ಥಟ್ಟನೆ, ಆ ಸ್ಪರ್ಧೆಯ ಅಧಿಕಾರಿಯು ಆ ಬಿಲ್ಲುಗಾರನನ್ನು ಹಿಂದಕ್ಕೆ ಕರೆದು ಬಹುಮಾನವನ್ನು ಅವನ ಕೈಗೆ ಕೊಡುತ್ತಾನೆ. ಮತ್ತು “ಇದನ್ನು ನಿನಗೆ ಕೊಡಲು ಸಂತೋಷಪಡುತ್ತೇನೆ, ಏಕೆಂದರೆ ನಾನು ನಿನ್ನನ್ನು ಮೆಚ್ಚುತ್ತೇನೆ, ಮತ್ತು ನೀನು ಎಷ್ಟು ಕಠಿನ ಪ್ರಯತ್ನವನ್ನು ಮಾಡಿದಿ ಎಂಬುದನ್ನು ಕಣ್ಣಾರೆ ನೋಡಿದ್ದೇನೆ” ಎಂದು ಹೇಳುತ್ತಾನೆ. ಇದನ್ನು ಕೇಳಿದಾಗ ಆ ಬಿಲ್ಲುಗಾರನಿಗೆ ಎಲ್ಲಿಲ್ಲದ ಆನಂದವಾಗುತ್ತದೆ!
ಎಷ್ಟು ಸಂತೋಷದ ಸಂಗತಿ! ಪರಿಪೂರ್ಣತೆಯಲ್ಲಿ ನಿತ್ಯಜೀವದ “ಉಚಿತಾರ್ಥ ವರ”ವನ್ನು ಪಡೆಯುವ ಪ್ರತಿಯೊಬ್ಬನೂ ಹೀಗೆಯೇ ಹಿಗ್ಗುವನು. (ರೋಮಾಪುರ 6:23) ಆ ಬಳಿಕ, ಅವರು ಮಾಡುವ ಪ್ರತಿಯೊಂದು ಕಾರ್ಯವೂ ಪರಿಪೂರ್ಣವಾಗಿರುವುದರಿಂದ ಅವರು ಇನ್ನು ಮೇಲೆ ಎಂದಿಗೂ ಗುರಿತಪ್ಪರು. ಅವರು ಪರಿಪೂರ್ಣ ಸಂತೃಪ್ತಿಯನ್ನು ಪಡೆಯುವರು. ಈ ಮಧ್ಯೆ, ನಾವು ಈ ದೃಷ್ಟಿಕೋನವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವಲ್ಲಿ, ನಮಗೆ ನಮ್ಮ ವಿಷಯದಲ್ಲಿಯೂ ನಮ್ಮ ಸುತ್ತಲಿರುವವರ ವಿಷಯದಲ್ಲಿಯೂ ಹೆಚ್ಚು ಹಿತಕರವಾದ ಭಾವನೆಯುಂಟಾಗುವುದು.
ಎಲ್ಲದಕ್ಕೂ ಸಮಯ ಹಿಡಿಯುತ್ತದೆ ಎಂಬುದನ್ನು ಒಪ್ಪಿಕೊಳ್ಳಿ
ಪ್ರತಿಯೊಂದು ವಿಷಯವನ್ನು ಮಾಡಲು ಸಮಯ ಹಿಡಿಯುತ್ತದೆಂಬುದು ವಾಸ್ತವ. ಆದರೆ, ನೀವು ಯಾವುದಕ್ಕಾಗಿ ಕಾಯುತ್ತಿದ್ದೀರೋ ಅದು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ದೀರ್ಘಕಾಲವನ್ನು ತೆಗೆದುಕೊಳ್ಳುತ್ತಿರುವಂತೆ ಅಥವಾ ಅಹಿತಕರವಾದ ಸನ್ನಿವೇಶವೊಂದು ನೀವು ಕಾಯುತ್ತಿರುವುದಕ್ಕಿಂತಲೂ ಹೆಚ್ಚು ಕಾಲ ಮುಂದುವರಿಯುತ್ತಿರುವಂತೆ ಕಂಡುಬರುವಾಗ, ಸಂತೃಪ್ತಿಯುಳ್ಳವರಾಗಿ ಉಳಿಯುವುದು ಎಷ್ಟು ಕಷ್ಟಕರವೆಂಬುದನ್ನು ನೀವು ಮನಗಂಡಿದ್ದೀರೊ? ಇಂಥ ಸನ್ನಿವೇಶಗಳಲ್ಲಿಯೂ ಕೆಲವರು ಸಂತೃಪ್ತಿಯನ್ನು ಕಾಪಾಡಿಕೊಂಡಿದ್ದಾರೆ. ಯೇಸುವಿನ ಉದಾಹರಣೆಯನ್ನು ಪರಿಗಣಿಸಿರಿ.
ಯೇಸು ಭೂಮಿಗೆ ಬರುವುದಕ್ಕಿಂತ ಮುಂಚೆ ಸ್ವರ್ಗದಲ್ಲಿ ವಿಧೇಯತೆಯ ಅತ್ಯುತ್ತಮ ಮಾದರಿಯಾಗಿದ್ದನು. ಆದರೂ, ಅವನು ‘ವಿಧೇಯತೆಯನ್ನು ಕಲಿತುಕೊಂಡದ್ದು’ ಭೂಮಿಯಲ್ಲಿದ್ದಾಗಲೇ. ಅದು ಹೇಗೆ? ಅವನು “ಅನುಭವಿಸಿದ ಬಾಧೆ”ಗಳಿಂದಲೇ. ಈ ಹಿಂದೆ ಅವನು ಬಾಧೆಗಳನ್ನು ಗಮನಿಸಿದ್ದನಾದರೂ ತಾನಾಗಿಯೇ ಅವುಗಳನ್ನು ಎಂದೂ ಅನುಭವಿಸಿರಲಿಲ್ಲ. ಆದರೆ ಭೂಮಿಯ ಮೇಲಿದ್ದಾಗ, ವಿಶೇಷವಾಗಿ ಯೊರ್ದನಿನಲ್ಲಿ ಅವನ ದೀಕ್ಷಾಸ್ನಾನ ಮೊದಲ್ಗೊಂಡು ಗೊಲ್ಗೊಥಾದಲ್ಲಿ ಸಾಯುವ ತನಕ ಅವನು ಅನೇಕ ಪರೀಕ್ಷಾತ್ಮಕ ಸನ್ನಿವೇಶಗಳನ್ನು ಎದುರಿಸಿದನು. ಈ ವಿಷಯದಲ್ಲಿ ಅವನು “ಸಿದ್ಧಿಗೆ” ಇಲ್ಲವೆ ಪರಿಪೂರ್ಣತೆಗೆ ತರಲ್ಪಟ್ಟದ್ದು ಹೇಗೆಂಬುದರ ಬಗ್ಗೆ ನಮಗೆ ಸಕಲ ವಿವರಗಳು ತಿಳಿದಿಲ್ಲವಾದರೂ, ಈ ಕಲಿಕೆಯ ಕಾರ್ಯವಿಧಾನಕ್ಕೆ ಸಮಯ ಹಿಡಿಯಿತೆಂಬುದು ನಮಗೆ ತಿಳಿದಿದೆ.—ಇಬ್ರಿಯ 5:8, 9.
ಯೇಸು ಇದರಲ್ಲಿ ಜಯಶೀಲನಾಗಲು ಕಾರಣವೇನೆಂದರೆ, ಅವನು “ತನ್ನ ಮುಂದೆ ಇಟ್ಟಿದ್ದ ಸಂತೋಷ”ದ ಕುರಿತು ಮನನಮಾಡಿದನು. (ಇಬ್ರಿಯ 12:2) ಆದರೂ, ಅವನು ಆಗಿಂದಾಗ್ಗೆ “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು” ಮಾಡಿದನು. (ಇಬ್ರಿಯ 5:7) ನಾವು ಸಹ ಕೆಲವೊಮ್ಮೆ ಅದೇ ರೀತಿಯಲ್ಲಿ ಪ್ರಾರ್ಥಿಸುತ್ತಿರಬಹುದು. ಇದನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? ಅದೇ ವಚನವು ತೋರಿಸುವಂತೆ, ಯೆಹೋವನು ಯೇಸುವಿನ ಪ್ರಾರ್ಥನೆಗೆ ಕಿವಿಗೊಟ್ಟನು. ದೇವರು ನಮಗೂ ಹಾಗೆಯೇ ಮಾಡುವನು. ಏಕೆ?
ಯೆಹೋವನಿಗೆ ನಮ್ಮ ಇತಿಮಿತಿಗಳ ಬಗ್ಗೆ ಗೊತ್ತಿರುವುದರಿಂದ ಆತನು ನಮ್ಮ ಸಹಾಯಕ್ಕೆ ಬರುತ್ತಾನೆ. ಪ್ರತಿಯೊಬ್ಬನಿಗೂ ತಾಳ್ಮೆಯ ಸಂಬಂಧದಲ್ಲಿ ಮಿತಿ ಇರುತ್ತದೆ. ಆಫ್ರಿಕದ ಬೆನೀನ್ ದೇಶದ ಜನರಲ್ಲಿ ಒಂದು ನಾಣ್ಣುಡಿಯಿದೆ: “ತುಂಬ ನೀರಿನಲ್ಲಿ ಕಪ್ಪೆಗಳೂ ಕ್ರಮೇಣ ಮುಳುಗಿ ಸಾಯುತ್ತವೆ.” ನಮ್ಮ ಇತಿಮಿತಿ ಎಷ್ಟಿದೆ ಎಂಬುದರ ಬಗ್ಗೆ ನಮಗಿಂತ ಯೆಹೋವನಿಗೆ ಹೆಚ್ಚು ತಿಳಿದಿದೆ. ಆತನು ಪ್ರೀತಿಯಿಂದ, “ನಾವು ಕರುಣೆಯನ್ನು ಹೊಂದುವಂತೆಯೂ . . . ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ” ಏರ್ಪಾಡನ್ನು ಮಾಡುತ್ತಾನೆ. (ಇಬ್ರಿಯ 4:16) ಆತನು ಯೇಸುವಿಗೆ ಹೀಗೆ ಸಹಾಯಮಾಡಿದ್ದಾನೆ ಮಾತ್ರವಲ್ಲ, ಇತರ ಅಸಂಖ್ಯಾತ ಜನರಿಗೂ ಮಾಡಿರುತ್ತಾನೆ. ಮಾನಿಕ ಎಂಬಾಕೆಗೆ ಆದ ಅನುಭವವನ್ನು ಪರಿಗಣಿಸಿರಿ.
ಮಾನಿಕಳು ನಿಶ್ಚಿಂತೆಯಿಂದ ಬೆಳೆದ, ಲವಲವಿಕೆ ಮತ್ತು ಉಲ್ಲಾಸ ಮನೋಭಾವದ ಹುಡುಗಿ. ಆದರೆ 1968ರಲ್ಲಿ, ಅವಳ ಇಪ್ಪತ್ತುಗಳ ಆರಂಭದ ವರುಷಗಳಲ್ಲಿ, ಸಾಮಾನ್ಯವಾಗಿ ಪಾರ್ಶ್ವವಾಯುವನ್ನು ಉಂಟುಮಾಡುವಂಥ ಮಲ್ಟಿಪ್ಲ್ ಸ್ಕ್ಲಿರೋಸಿಸ್ (ನರಜಡ್ಡು ರೋಗ) ಎಂಬ ರೋಗ ತನಗಿದೆಯೆಂದು ತಿಳಿದಾಗ ಅವಳು ಆಘಾತಗೊಂಡಳು. ಇದು ಅವಳ ಜೀವನವನ್ನು ಪೂರ್ಣವಾಗಿ ಬದಲಾಯಿಸಿಬಿಟ್ಟಿತು ಮತ್ತು ತನ್ನ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಅವಳು ದೊಡ್ಡ ಹೊಂದಾಣಿಕೆಗಳನ್ನು ಮಾಡಬೇಕಾಯಿತು. ಇದು ದೀರ್ಘಕಾಲಿಕ ರೋಗವೆಂದು ಮಾನಿಕಳು ಅರಿತುಕೊಂಡಳು. ಹದಿನಾರು ವರ್ಷಗಳ ಬಳಿಕ ಅವಳು ಹೇಳಿದ್ದು: “ನನ್ನ ರೋಗಾವಸ್ಥೆ ಇನ್ನೂ ಗುಣವಾಗಿಲ್ಲ ಮತ್ತು ನೂತನ ವ್ಯವಸ್ಥೆಯು ಬಂದು ಸಕಲವನ್ನೂ ನೂತನ ಮಾಡುವ ತನಕ ಇದು ವಾಸಿಯಾಗದೇ ಇರಬಹುದು.” ಇದನ್ನು ಸಹಿಸಿಕೊಳ್ಳುವುದು ಸುಲಭವಾಗಿರಲಿಲ್ಲ ಎಂದು ಅವಳು ಒಪ್ಪಿಕೊಳ್ಳುತ್ತಾಳೆ: “ನಾನು ನನ್ನ ಉಲ್ಲಾಸಚಿತ್ತವನ್ನು ಕಾಪಾಡಿಕೊಂಡಿದ್ದೇನೆಂದು ಮತ್ತು ಹಿಂದಿನಂತೆಯೇ ಹರ್ಷಚಿತ್ತಳಾಗಿದ್ದೇನೆಂದು ನನ್ನ ಮಿತ್ರರು ಹೇಳುತ್ತಾರಾದರೂ . . . ಕೆಲವೊಮ್ಮೆ ನಾನು ಕಣ್ಣೀರ ಕೋಡಿಯನ್ನೇ ಹರಿಸುತ್ತೇನೆ ಎಂಬುದನ್ನು ನನ್ನ ಆಪ್ತಮಿತ್ರರು ಬಲ್ಲರು.”
ಹಾಗಿದ್ದರೂ ಅವಳು ಹೇಳಿದ್ದು: “ನಾನು ತಾಳ್ಮೆಯನ್ನು ಕಲಿತುಕೊಂಡಿದ್ದೇನೆ ಮತ್ತು ನನ್ನ ಆರೋಗ್ಯದಲ್ಲಿ ಸ್ವಲ್ಪ ಪ್ರಗತಿಯನ್ನು ಮಾಡಿರುವ ತೀರ ಚಿಕ್ಕ ಸೂಚನೆ ತೋರಿಬರುವಾಗ ಹರ್ಷಿಸುತ್ತೇನೆ. ರೋಗದ ವಿರುದ್ಧ ಮನುಷ್ಯನು ಮಾಡುವ ಹೋರಾಟದಲ್ಲಿ ಅವನು ಎಷ್ಟು ನಿಸ್ಸಹಾಯಕನೆಂಬುದನ್ನು ನಾನು ಗ್ರಹಿಸಿರುವುದು, ಯೆಹೋವನೊಂದಿಗಿನ ನನ್ನ ವೈಯಕ್ತಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ. ಯೆಹೋವನು ಮಾತ್ರ ಪೂರ್ಣ ಸ್ವಸ್ಥತೆಯನ್ನು ತರಬಲ್ಲನು.” ಯೆಹೋವನ ಸಹಾಯದಿಂದ ಮಾನಿಕ ತನ್ನ ಸಂತೃಪ್ತಿಯನ್ನು ಕಾಪಾಡಿಕೊಂಡಿದ್ದು, ಈಗ ತನ್ನ 40ಕ್ಕಿಂತಲೂ ಹೆಚ್ಚು ವರುಷಗಳ ಪೂರ್ಣ ಸಮಯದ ಸೇವೆಯ ಕುರಿತು ಪರ್ಯಾಲೋಚಿಸಬಲ್ಲಳು.
ಮಾನಿಕಳು ಎದುರಿಸಿದಂಥ ಸನ್ನಿವೇಶಗಳನ್ನು ಎದುರಿಸುವುದು ಸುಲಭವೇನಲ್ಲ ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಆದರೆ ಕೆಲವು ಸನ್ನಿವೇಶಗಳು ನೀವು ನೆನಸುವುದಕ್ಕಿಂತ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ನೀವು ಒಪ್ಪುವಲ್ಲಿ, ನಿಮಗೆ ಹೆಚ್ಚು ಸಂತೃಪ್ತಿ ಸಿಗುವುದು ಖಂಡಿತ. ಮಾನಿಕಳಂತೆ, ನಿಮಗೂ ಯೆಹೋವನಿಂದ ‘ಸಮಯೋಚಿತ ಸಹಾಯ’ ದೊರೆಯುವುದು ನಿಶ್ಚಯ.
ಪರಸ್ಪರ ಹೋಲಿಸಿ ನೋಡಬೇಡಿ—ನ್ಯಾಯಸಮ್ಮತವಾದ ಗುರಿಗಳನ್ನಿಡಿರಿ
ನೀವು ಅಸದೃಶರಾಗಿದ್ದೀರಿ. ನಿರ್ದಿಷ್ಟವಾಗಿ ನಿಮ್ಮನ್ನು ಹೋಲುವ ಇನ್ನೊಬ್ಬರು ಇರುವುದಿಲ್ಲ. ಆಫ್ರಿಕದ ಗೂನ್ ಭಾಷೆಯಲ್ಲಿ ಈ ನಿಜತ್ವವನ್ನು ಈ ಹೇಳಿಕೆಯಲ್ಲಿ ವರ್ಣಿಸಲಾಗುತ್ತದೆ: “ಎಲ್ಲ ಬೆರಳುಗಳು ಒಂದೇ ಸಮ ಇರುವುದಿಲ್ಲ.” ಒಂದು ಬೆರಳನ್ನು ಇನ್ನೊಂದಕ್ಕೆ ಹೋಲಿಸುವುದು ಮೂರ್ಖತನವೇ ಸರಿ. ಯೆಹೋವನು ನಿಮ್ಮನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಲಿಸುವುದು ನಿಮಗೆ ಇಷ್ಟವಾಗಲಿಕ್ಕಿಲ್ಲ. ಮತ್ತು ಆತನು ಹಾಗೆ ಎಂದಿಗೂ ಮಾಡನು. ಆದರೂ, ಮನುಷ್ಯರ ನಡುವೆ ಹೋಲಿಸಿನೋಡುವ ಪ್ರವೃತ್ತಿ ವ್ಯಾಪಕವಾಗಿದೆ ಮತ್ತು ಇದು ಜನರ ಸಂತೃಪ್ತಿಯನ್ನು ಹಾಳುಮಾಡಬಲ್ಲದು. ನಾವು ಮತ್ತಾಯ 20:1-16ನ್ನು ಓದುವಾಗ, ಯೇಸು ಇದನ್ನು ಎಷ್ಟು ವಿಷದವಾಗಿ ದೃಷ್ಟಾಂತಿಸಿದನು ಎಂಬುದನ್ನು ಗಮನಿಸಿರಿ.
ತನ್ನ ದ್ರಾಕ್ಷೇತೋಟಕ್ಕೆ ಕೆಲಸಗಾರರ ಅಗತ್ಯವಿದ್ದ ಒಬ್ಬ “ಯಜಮಾನನ” ಕುರಿತು ಯೇಸು ಮಾತಾಡಿದನು. ಅವನು ಕೆಲಸವಿದ್ದಿಲ್ಲದ ಕೆಲವು ಪುರುಷರನ್ನು ಕರೆದು “ಬೆಳಿಗ್ಗೆ” ಅಂದರೆ ಪ್ರಾಯಶಃ 6 ಗಂಟೆಗೆ ಕೂಲಿಗೆ ಹಿಡಿದನು. ಅವರು ಅಂದು ಸರ್ವಸಾಮಾನ್ಯವಾಗಿದ್ದ ದಿನಗೂಲಿಗೆ ಅಂದರೆ 12 ಗಂಟೆಯ ಕೆಲಸಕ್ಕೆ ಸಿಗುತ್ತಿದ್ದ ಒಂದು “ಪಾವಲಿ” ಕೂಲಿಗೆ ಒಪ್ಪಿಕೊಂಡರು. ತಮಗೆ ಕೆಲಸ ಸಿಕ್ಕಿದ್ದಕ್ಕೆ, ಅದರಲ್ಲೂ ವಾಡಿಕೆಯ ಕೂಲಿಗೆ ಕೆಲಸ ಸಿಕ್ಕಿದ್ದಕ್ಕೆ ಅವರು ಸಂತೋಷಪಟ್ಟರೆಂಬುದು ನಿಶ್ಚಯ. ತರುವಾಯ, ಕೆಲಸವಿದ್ದಿಲ್ಲದ ಇನ್ನೂ ಕೆಲವು ಕೆಲಸಗಾರರನ್ನು ನೋಡಿ, ಅವರನ್ನು ಬೆಳಗ್ಗೆ 9 ಗಂಟೆಗೆ, ಮಧ್ಯಾಹ್ನ 12 ಗಂಟೆಗೆ, ಅಪರಾಹ್ಣ 3 ಗಂಟೆಗೆ, ಮತ್ತು ಸಾಯಂಕಾಲ 5 ಗಂಟೆಯಷ್ಟು ತಡವಾಗಿಯೂ ಕೆಲಸಕ್ಕೆ ಹಿಡಿದನು. ಇವರಲ್ಲಿ ಯಾರೂ ಇಡೀ ದಿವಸ ಕೆಲಸಮಾಡಬೇಕೆಂದಿರಲಿಲ್ಲ. ಕೂಲಿಯ ವಿಷಯದಲ್ಲಿ ಯಜಮಾನನು “ಸರಿಯಾದ ಕೂಲಿಯನ್ನು” ಕೊಡುತ್ತೇನೆ ಎಂದು ಹೇಳಲಾಗಿ ಆ ಕೆಲಸಗಾರರು ಒಪ್ಪಿಕೊಂಡರು.
ದಿನಾಂತ್ಯದಲ್ಲಿ, ಆಳುಗಳಿಗೆ ಕೂಲಿಯನ್ನು ಕೊಡುವಂತೆ ಯಜಮಾನನು ಪಾರುಪತ್ಯಗಾರನಿಗೆ ಅಪ್ಪಣೆ ನೀಡಿದನು. ಕೆಲಸಗಾರರನ್ನು ಕರೆದು, ತಡವಾಗಿ ಕೆಲಸಕ್ಕೆ ಬಂದವರಿಗೆ ಪ್ರಥಮವಾಗಿ ಕೂಲಿಯನ್ನು ಕೊಡುವಂತೆ ಹೇಳಿದನು. ಅವರು ಒಂದೇ ತಾಸು ಕೆಲಸ ಮಾಡಿದ್ದರೂ, ಆಶ್ಚರ್ಯಕರವಾಗಿ ಅವರಿಗೆ ಇಡೀ ದಿನದ ಸಂಬಳವು ಕೊಡಲ್ಪಟ್ಟಿತು. ಅಲ್ಲಿ ಆಗ ನಡೆದ ಬಿರುಸಾದ ಚರ್ಚೆಯನ್ನು ನಾವು ಊಹಿಸಿಕೊಳ್ಳಬಲ್ಲೆವು. ಪೂರ್ತಿ ಹನ್ನೆರಡು ತಾಸು ಕೆಲಸಮಾಡಿದ ಕೆಲಸಗಾರರು ತಮಗೆ ಹೆಚ್ಚು ಕೂಲಿ ದೊರೆಯುವುದೆಂದು ನೆನಸಿದ್ದರು. ಆದರೆ, ಅವರಿಗೂ ಅಷ್ಟೇ ಕೂಲಿಯು ಕೊಡಲ್ಪಟ್ಟಿತು.
ಅವರ ಪ್ರತಿಕ್ರಿಯೆ ಏನಾಗಿತ್ತು? “ಅದನ್ನು ತೆಗೆದುಕೊಂಡು ಮನೆಯ ಯಜಮಾನನ ಮೇಲೆ ಗುಣುಗುಟ್ಟಿ, ಕಡೆಗೆ ಬಂದ ಇವರು ಒಂದು ತಾಸು ಹೊತ್ತು ಮಾತ್ರ ಕೆಲಸ ಮಾಡಿದ್ದಾರೆ; ನಾವು ದಿನವೆಲ್ಲಾ ಬಿಸಲಿನಲ್ಲಿ ಕೆಲಸ ಮಾಡಿ ಕಷ್ಟಪಟ್ಟಿದ್ದೇವೆ; ಇವರನ್ನು ನಮಗೆ ಸಮಮಾಡಿದ್ದೀಯೆ ಅಂದರು.”
ಆದರೆ ಯಜಮಾನನು ಸನ್ನಿವೇಶವನ್ನು ಬೇರೆ ರೀತಿಯಲ್ಲಿ ವೀಕ್ಷಿಸಿದನು. ನೀವು ಎಷ್ಟಕ್ಕೆ ಒಪ್ಪಿಕೊಂಡಿದ್ದೀರೊ ಅಷ್ಟೇ ಹೊರತು ಅದಕ್ಕಿಂತ ಕಡಿಮೆ ಕೂಲಿ ನಿಮಗೆ ಸಿಕ್ಕಿರುವುದಿಲ್ಲ ಎಂದು ಅವನು ಹೇಳಿದನು. ಇತರರಿಗಾದರೋ ಅವನು ಇಡೀ ದಿನದ ಕೂಲಿಯನ್ನು ಕೊಟ್ಟನು, ಅದು ಅವರು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಾಗಿತ್ತು ಎಂಬುದಂತೂ ನಿಶ್ಚಯ. ವಾಸ್ತವದಲ್ಲಿ, ಅವರು ಒಪ್ಪಿಕೊಂಡದ್ದಕ್ಕಿಂತ ಕಡಿಮೆ ಕೂಲಿ ಯಾರಿಗೂ ದೊರೆಯಲಿಲ್ಲ. ಅವರಲ್ಲಿ ಅನೇಕರಿಗೆ, ನಿರೀಕ್ಷಿಸಿದುದಕ್ಕಿಂತ ಹೆಚ್ಚೇ ಸಿಕ್ಕಿತ್ತು. ಕೊನೆಯಲ್ಲಿ ಯಜಮಾನನು, “ನನ್ನ ಬದುಕನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೊ?” ಎಂದು ಪ್ರಶ್ನಿಸಿದನು.
ಈಗ ಪಾರುಪತ್ಯಗಾರನು ಮುಂಚೆಯೇ ಬಂದಿದ್ದ ಕೆಲಸಗಾರರ ಗುಂಪಿಗೆ ಮೊದಲು ಹಣವನ್ನು ಪಾವತಿಸಿದ ಕಾರಣ ಅವರು ಆ ಕೂಡಲೆ ಹೋಗಿಬಿಟ್ಟಿದ್ದರೆಂದು ಭಾವಿಸೋಣ. ಆಗ ಅವರು ಸಂತೃಪ್ತರಾಗಿರುತ್ತಿದ್ದರು. ಕಡಿಮೆ ಕೆಲಸಮಾಡಿದ ಇತರರಿಗೆ ತಮ್ಮಷ್ಟೇ ಕೂಲಿಯು ಕೊಡಲ್ಪಟ್ಟದ್ದನ್ನು ಅವರು ನೋಡಿದ ಕಾರಣವೇ ಅವರಲ್ಲಿ ಅತೃಪ್ತಿಯುಂಟಾಯಿತು. ಅವರಿಗೆ ಸಿಟ್ಟುಬರಿಸಿದ್ದು ಇದೇ. ಇದರಿಂದಾಗಿ, ತಮ್ಮನ್ನು ಕೆಲಸಕ್ಕೆ ಹಿಡಿದುದಕ್ಕಾಗಿ ಆರಂಭದಲ್ಲಿ ಯಾರಿಗೆ ಕೃತಜ್ಞರಾಗಿದ್ದರೋ ಆ ಯಜಮಾನನ ವಿರುದ್ಧ ಗುಣುಗುಟ್ಟವ ವರೆಗೂ ಅವರು ಮುಂದುವರಿದರು.
ನಾವು ಹೋಲಿಕೆಯನ್ನು ಮಾಡುವಾಗ ಏನಾಗುತ್ತದೆ ಎಂಬುದನ್ನು ಇದು ಚೆನ್ನಾಗಿ ದೃಷ್ಟಾಂತಿಸುತ್ತದೆ. ನೀವು ಯೆಹೋವನೊಂದಿಗಿನ ನಿಮ್ಮ ವೈಯಕ್ತಿಕ ಸಂಬಂಧದ ಕುರಿತು ಧ್ಯಾನಿಸುವಲ್ಲಿ ಮತ್ತು ಆತನು ನಿಮ್ಮನ್ನು ಹೇಗೆ ಆಶೀರ್ವದಿಸುತ್ತಾನೆ ಎಂಬುದನ್ನು ಗಣ್ಯಮಾಡುವಲ್ಲಿ, ನೀವು ಸಂತೃಪ್ತರಾಗಿರುವಿರಿ. ನಿಮ್ಮ ಸನ್ನಿವೇಶವನ್ನು ಇತರರ ಸನ್ನಿವೇಶದೊಂದಿಗೆ ಹೋಲಿಸಿ ನೋಡಬೇಡಿ. ಇತರರಿಗಾಗಿ ಯೆಹೋವನು ಹೆಚ್ಚಿನ ಒಳಿತನ್ನು ಮಾಡಲು ನಿರ್ಧರಿಸಿರುವಂತೆ ತೋರಿಬರುವುದಾದರೆ, ಅವರ ವಿಷಯದಲ್ಲಿ ಸಂತೋಷಪಡಿರಿ ಮತ್ತು ಅವರೊಂದಿಗೆ ಆನಂದಿಸಿರಿ.
ಆದರೂ ಯೆಹೋವನು ನಿಮ್ಮಿಂದ ಏನನ್ನೋ ಅಪೇಕ್ಷಿಸುತ್ತಾನೆ. ಅದೇನು? ಗಲಾತ್ಯ 6:4 ತಿಳಿಸುವುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸ್ವತಃ ನಿಮಗಾಗಿ ನ್ಯಾಯಸಮ್ಮತವಾದ ಗುರಿಗಳನ್ನಿಟ್ಟುಕೊಳ್ಳಿರಿ. ನಿಮ್ಮಿಂದ ನಿಜವಾಗಿಯೂ ಏನನ್ನು ಮಾಡಸಾಧ್ಯವಿದೆಯೋ ಅದಕ್ಕಾಗಿ ಯೋಜನೆಯನ್ನು ಮಾಡಿರಿ ಮತ್ತು ಆ ಯೋಜನೆಯನ್ನು ಅನುಸರಿಸಿರಿ. ನಿಮ್ಮ ಗುರಿಯು ನ್ಯಾಯಸಮ್ಮತವಾದುದಾಗಿದ್ದು, ನೀವು ಅದನ್ನು ಸಾಧಿಸುವುದಾದರೆ, ನಿಮಗೆ ‘ಹೆಚ್ಚಳಪಡುವದಕ್ಕೆ ಆಸ್ಪದವಿರುವುದು.’ ನೀವು ಸಂತೃಪ್ತಿಯನ್ನು ಅನುಭವಿಸುವಿರಿ.
ಪ್ರತಿಫಲಗಳು ಸಿಗುವವು
ನಾವು ಪರಿಗಣಿಸಿರುವ ಮೂರು ಮೂಲತತ್ವಗಳು ಏನನ್ನು ತೋರಿಸುತ್ತವೆಂದರೆ, ಬೈಬಲ್ ಮೂಲತತ್ವಗಳನ್ನು ಅನ್ವಯಿಸುವುದು, ಈ ಕಡೇ ದಿವಸಗಳಲ್ಲಿ ಮತ್ತು ಅಪರಿಪೂರ್ಣತೆಯ ಮಧ್ಯೆಯೂ ಸಂತೃಪ್ತಿಯನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ. ನಮ್ಮ ದೈನಂದಿನ ಬೈಬಲ್ ವಾಚನದಲ್ಲಿ, ನೇರವಾಗಿ ತಿಳಿಸಲ್ಪಟ್ಟಿರುವ ಅಥವಾ ವೃತ್ತಾಂತಗಳಲ್ಲಿ ಮತ್ತು ದೃಷ್ಟಾಂತಗಳಲ್ಲಿ ಅಡಗಿರುವ ಇಂಥ ಮೂಲತತ್ವಗಳನ್ನು ಹುಡುಕಿ ನೋಡಬಾರದೇಕೆ?
ನಿಮ್ಮ ಸಂತೃಪ್ತಿಯು ಕಡಿಮೆಯಾಗುತ್ತಿದೆ ಎಂದು ನಿಮಗೆ ಅನಿಸುವುದಾದರೆ, ಅದರ ಹಿಂದಿರುವ ನಿಜ ಕಾರಣವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ತದನಂತರ, ಸನ್ನಿವೇಶವನ್ನು ಸರಿಪಡಿಸಲಿಕ್ಕಾಗಿ ನೀವು ಅನ್ವಯಿಸಸಾಧ್ಯವಿರುವ ಮೂಲತತ್ವಗಳನ್ನು ಹುಡುಕಿ ನೋಡಿ. ಉದಾಹರಣೆಗೆ, “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಇಂಗ್ಲಿಷ್) ಪುಸ್ತಕದ 110-11ನೇ ಪುಟಗಳನ್ನು ನೀವು ಪರಿಶೀಲಿಸಬಹುದು.a ಅಲ್ಲಿ, ಜ್ಞಾನೋಕ್ತಿಗಳ ಪುಸ್ತಕದ ಬಗ್ಗೆ ಚರ್ಚಿಸಲಾಗಿದೆ, ಮತ್ತು 12 ಶೀರ್ಷಿಕೆಗಳ ಕೆಳಗೆ ಮೂಲತತ್ವಗಳು ಹಾಗೂ ಸಲಹೆಯ ಒಂದು ದೊಡ್ಡ ವಿಭಾಗವೇ ಇರುವುದನ್ನು ನೀವು ಕಂಡುಕೊಳ್ಳುವಿರಿ. ವಾಚ್ ಟವರ್ ಪ್ರಕಾಶನಗಳ ವಿಷಯಸೂಚಿ* ಮತ್ತು ಸಿಡಿ-ರಾಮ್ನಲ್ಲಿ ವಾಚ್ಟವರ್ ಲೈಬ್ರರಿ*—ಇವು ಮಾಹಿತಿಯ ಅತ್ಯುತ್ತಮ ಮೂಲವಾಗಿವೆ. ಇವುಗಳನ್ನು ಆಗಿಂದಾಗ್ಗೆ ಉಪಯೋಗಿಸುವ ಮೂಲಕ ಸೂಕ್ತವಾದ ಮೂಲತತ್ವಗಳನ್ನು ಕಂಡುಕೊಳ್ಳುವುದರಲ್ಲಿ ನೀವು ನಿಪುಣರಾಗುವಿರಿ.
ಒಂದು ಪರದೈಸ ಭೂಮಿಯ ಮೇಲೆ ಪರಿಪೂರ್ಣತೆಯಲ್ಲಿ ಅರ್ಹ ವ್ಯಕ್ತಿಗಳಿಗೆ ಯೆಹೋವನು ನಿತ್ಯಜೀವವನ್ನು ದಯಪಾಲಿಸುವ ಸಮಯವು ಆಗಮಿಸುತ್ತಿದೆ. ಆಗ, ಅವರು ತಮ್ಮ ಜೀವನದಲ್ಲಿ ಸಂಪೂರ್ಣ ಸಂತೃಪ್ತಿಯನ್ನು ಅನುಭವಿಸುವರು.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು.
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” —ರೋಮಾಪುರ 3:23
[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ತಾನು ಅನುಭವಿಸಿದ ಬಾಧೆಗಳಿಂದಲೇ ಯೇಸು ವಿಧೇಯತೆಯನ್ನು ಕಲಿತುಕೊಂಡನು.’ —ಇಬ್ರಿಯ 5:8, 9
[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.” —ಗಲಾತ್ಯ 6:4