ಅಧ್ಯಾಯ 17
‘ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ ಇರಿ’
“ನೀವಾದರೋ ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ . . . ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.”—ಯೂದ 20, 21.
1, 2. ನಾವು ಶಾರೀರಿಕವಾಗಿ ಗಟ್ಟಿಮುಟ್ಟಾಗಿರಲು ಮತ್ತು ಆರೋಗ್ಯವಂತರಾಗಿರಲು ಏನು ಮಾಡಸಾಧ್ಯವಿದೆ ಮತ್ತು ಇದು ಪ್ರಾಮುಖ್ಯವಾಗಿದೆ ಏಕೆ?
ನಾವೆಲ್ಲರೂ ಗಟ್ಟಿಮುಟ್ಟಾಗಿರಲು ಮತ್ತು ಆರೋಗ್ಯವಂತರಾಗಿರಲು ಬಯಸುತ್ತೇವೆ. ಆದರೆ ನಾವು ಶಾರೀರಿಕವಾಗಿ ಗಟ್ಟಿಮುಟ್ಟಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಬೇಕಾದರೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು, ಸಾಕಷ್ಟು ವ್ಯಾಯಾಮ ಮಾಡಬೇಕು ಮತ್ತು ಯಾವಾಗಲೂ ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದು ನಮ್ಮಿಂದ ಪ್ರಯತ್ನವನ್ನು ಅಗತ್ಯಪಡಿಸುತ್ತದಾದರೂ ಇದು ನಮ್ಮ ಜೀವನ ಹಾಗೂ ಭವಿಷ್ಯತ್ತಿನ ಮೇಲೆ ಪ್ರಭಾವ ಬೀರುವುದರಿಂದ ನಾವು ಪ್ರಯತ್ನವನ್ನು ಬಿಟ್ಟುಬಿಡುವುದಿಲ್ಲ. ನಾವು ಗಮನಹರಿಸಬೇಕಾಗಿರುವ ಇನ್ನೊಂದು ರೀತಿಯ ಬೆಳವಣಿಗೆಯೂ ಇದೆ. ಅದು ಯಾವುದು?
2 “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂದು ಶಿಷ್ಯನಾದ ಯೂದನು ಕ್ರೈಸ್ತರನ್ನು ಪ್ರೋತ್ಸಾಹಿಸಿದಾಗ ಅವನು ಇದರ ಕುರಿತು ಮಾತಾಡಿದನು. ಅಷ್ಟುಮಾತ್ರವಲ್ಲ ಅದೇ ವಚನಭಾಗದಲ್ಲಿ ಅವನು ಇದನ್ನು ಹೇಗೆ ಮಾಡುವುದೆಂಬುದನ್ನೂ ತಿಳಿಯಪಡಿಸುತ್ತಾ, ‘ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ’ ಎಂದು ಪ್ರೋತ್ಸಾಹಿಸಿದನು. (ಯೂದ 20, 21) ನೀವು ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಿಮ್ಮ ನಂಬಿಕೆಯು ಹೆಚ್ಚು ಬಲಗೊಳ್ಳುವಂತೆ ನೀವು ಏನು ಮಾಡಸಾಧ್ಯವಿದೆ? ನಮ್ಮ ಗಮನವನ್ನು ಅಗತ್ಯಪಡಿಸುವ ಮೂರು ಕ್ಷೇತ್ರಗಳ ಮೇಲೆ ನಾವೀಗ ಮನಸ್ಸನ್ನು ಕೇಂದ್ರೀಕರಿಸೋಣ.
ಯೆಹೋವನ ನೀತಿಯ ಆವಶ್ಯಕತೆಗಳಲ್ಲಿ ನಂಬಿಕೆಯನ್ನು ಕಟ್ಟುತ್ತಾ ಇರಿ
3-5. (ಎ) ಸೈತಾನನು ಯೆಹೋವನ ಆವಶ್ಯಕತೆಗಳ ವಿಷಯದಲ್ಲಿ ಯಾವ ನೋಟವುಳ್ಳವರಾಗುವಂತೆ ಮಾಡಿ ನಿಮ್ಮನ್ನು ದಾರಿತಪ್ಪಿಸಲು ಬಯಸುತ್ತಾನೆ? (ಬಿ) ದೇವರ ಆವಶ್ಯಕತೆಗಳ ವಿಷಯದಲ್ಲಿ ನಮಗೆ ಯಾವ ದೃಷ್ಟಿಕೋನವಿರಬೇಕು ಮತ್ತು ಇದು ನಮ್ಮ ಅನಿಸಿಕೆಯ ಮೇಲೆ ಯಾವ ಪರಿಣಾಮವನ್ನು ಬೀರಬೇಕು? ದೃಷ್ಟಾಂತಿಸಿರಿ.
3 ಪ್ರಥಮವಾಗಿ, ನಾವು ದೇವರ ನಿಯಮಗಳಲ್ಲಿ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ನೀವು ಈ ಪುಸ್ತಕವನ್ನು ಅಧ್ಯಯನ ಮಾಡುವಾಗ ನಡತೆಯ ವಿಷಯದಲ್ಲಿ ಯೆಹೋವನ ನೀತಿಯ ಆವಶ್ಯಕತೆಗಳಲ್ಲಿ ಹೆಚ್ಚಿನವುಗಳನ್ನು ಪರಿಗಣಿಸಿದ್ದೀರಿ. ಇವುಗಳ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು? ಯೆಹೋವನ ನಿಯಮಗಳು, ಮೂಲತತ್ತ್ವಗಳು ಮತ್ತು ಮಟ್ಟಗಳು ನಿರ್ಬಂಧಕವಾಗಿವೆ ಮತ್ತು ಕಠೋರವೂ ಆಗಿವೆ ಎಂದು ನೀವು ನೆನಸುವಂತೆ ಮಾಡುವ ಮೂಲಕ ಸೈತಾನನು ನಿಮ್ಮನ್ನು ದಾರಿತಪ್ಪಿಸಲು ಬಯಸುತ್ತಾನೆ. ಈ ತಂತ್ರವು ಬಹಳ ಹಿಂದೆ ಏದೆನ್ ತೋಟದಲ್ಲಿ ತುಂಬ ಕಾರ್ಯಸಾಧಕವಾಗಿ ರುಜುವಾದಂದಿನಿಂದ ಅವನು ಇದನ್ನು ಉಪಯೋಗಿಸುತ್ತಾ ಬಂದಿದ್ದಾನೆ. (ಆದಿಕಾಂಡ 3:1-6) ಅವನ ತಂತ್ರವು ನಿಮ್ಮನ್ನು ದಾರಿತಪ್ಪಿಸುವುದೊ? ನೀವು ವಿಷಯಗಳನ್ನು ಹೇಗೆ ವೀಕ್ಷಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನದ್ದು ಅವಲಂಬಿಸಿರುವುದು.
4 ಒಂದು ದೃಷ್ಟಾಂತವನ್ನು ಪರಿಗಣಿಸೋಣ. ನೀವು ಸುಂದರವಾದ ಒಂದು ಪಾರ್ಕಿನಲ್ಲಿ ನಡೆದಾಡುತ್ತಿರುವಾಗ ಅದರ ಒಂದು ಭಾಗಕ್ಕೆ ಪ್ರವೇಶವನ್ನು ನಿಷೇಧಿಸುವಂಥ ರೀತಿಯಲ್ಲಿ ಬಲವಾದ ಎತ್ತರ ಬೇಲಿಯನ್ನು ಹಾಕಿರುವುದು ನಿಮ್ಮ ಕಣ್ಣಿಗೆ ಬೀಳುತ್ತದೆ. ಆ ಬೇಲಿಯ ಆಚೆಗಿರುವ ಭೂದೃಶ್ಯವು ಕೈಬೀಸಿ ಕರೆಯುವಂತಿರುತ್ತದೆ. ಆರಂಭದಲ್ಲಿ ನೀವು ಆ ಬೇಲಿಯನ್ನು ನಿಮ್ಮ ಸ್ವಾತಂತ್ರ್ಯಕ್ಕಿರುವ ಅನಗತ್ಯ ನಿರ್ಬಂಧವಾಗಿ ಪರಿಗಣಿಸಬಹುದು. ಆದರೆ ಆ ಬೇಲಿಯ ಮೂಲಕ ನೋಡುವಾಗ ಆಚೆ ಬದಿಯಲ್ಲಿ ಕ್ರೂರವಾದ ಒಂದು ಸಿಂಹವು ಬೇಟೆಪ್ರಾಣಿಯನ್ನು ಹಿಡಿಯಲಿಕ್ಕಾಗಿ ಮರೆಯಲ್ಲಿ ಕದ್ದು ಹೆಜ್ಜೆಹಾಕುತ್ತಿರುವುದು ನಿಮಗೆ ಕಾಣುತ್ತದೆ! ಈ ಬೇಲಿಯು ನಿಜವಾಗಿಯೂ ಒಂದು ರಕ್ಷಣೆಯಾಗಿದೆ ಎಂಬುದು ಈಗ ನಿಮಗೆ ಮನವರಿಕೆಯಾಗುತ್ತದೆ. ಅಪಾಯಕರವಾದ ಒಂದು ಪರಭಕ್ಷಕ ಪ್ರಾಣಿಯು ಈಗಲೇ ನಿಮ್ಮನ್ನು ಹಿಡಿಯಲಿಕ್ಕಾಗಿ ಕದ್ದು ಹೆಜ್ಜೆಹಾಕುತ್ತಿದೆಯೊ? ದೇವರ ವಾಕ್ಯವು ನಮಗೆ, “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಎಂದು ಎಚ್ಚರಿಸುತ್ತದೆ.—1 ಪೇತ್ರ 5:8.
5 ಸೈತಾನನು ಉಗ್ರವಾದ ಪರಭಕ್ಷಕ ಪ್ರಾಣಿಯಾಗಿದ್ದಾನೆ. ನಾವು ಸೈತಾನನಿಗೆ ಬೇಟೆಪ್ರಾಣಿಯಾಗುವುದು ಯೆಹೋವನಿಗೆ ಇಷ್ಟವಿಲ್ಲದಿರುವುದರಿಂದ, ಆ ದುಷ್ಟನ ಅನೇಕ ‘ತಂತ್ರೋಪಾಯಗಳಿಂದ’ ನಮ್ಮನ್ನು ಸಂರಕ್ಷಿಸಲಿಕ್ಕಾಗಿ ಆತನು ನಿಯಮಗಳನ್ನು ಸ್ಥಾಪಿಸಿದ್ದಾನೆ. (ಎಫೆಸ 6:11) ಆದುದರಿಂದ ನಾವು ದೇವರ ನಿಯಮಗಳ ಕುರಿತು ಮನನಮಾಡುವಾಗೆಲ್ಲ ಅವುಗಳಲ್ಲಿ ನಮ್ಮ ಸ್ವರ್ಗೀಯ ತಂದೆಯ ಪ್ರೀತಿಯನ್ನು ಕಾಣಬೇಕು. ನಾವು ದೇವರ ನಿಯಮಗಳನ್ನು ಹೀಗೆ ಪರಿಗಣಿಸುವಾಗ ದೇವರ ನಿಯಮಗಳು ನಮಗೆ ಭದ್ರತೆ ಹಾಗೂ ಆನಂದದ ಮೂಲವಾಗಿರುತ್ತವೆ. ಶಿಷ್ಯನಾದ ಯಾಕೋಬನು ಬರೆದುದು: “ವಿಮೋಚನೆಗೆ ಸೇರಿರುವ ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡಿ, ಅದರಲ್ಲಿ ಪಟ್ಟುಹಿಡಿಯುವವನು . . . ಅದನ್ನು ಮಾಡುವುದರಲ್ಲಿ ಸಂತೋಷಿತನಾಗಿರುವನು.”—ಯಾಕೋಬ 1:25.
6. ದೇವರ ನೀತಿಯ ನಿಯಮಗಳಲ್ಲಿ ಮತ್ತು ಮೂಲತತ್ತ್ವಗಳಲ್ಲಿ ನಂಬಿಕೆಯನ್ನು ಬಲಪಡಿಸಲು ಯಾವುದು ಅತ್ಯುತ್ತಮ ಮಾರ್ಗವಾಗಿದೆ? ಒಂದು ಉದಾಹರಣೆಯನ್ನು ಕೊಡಿ.
6 ದೇವರ ಆಜ್ಞೆಗಳಿಗನುಸಾರ ಜೀವಿಸುವುದು, ನಿಯಮದಾತನಲ್ಲಿ ಮತ್ತು ಆತನ ನಿಯಮಗಳಲ್ಲಿ ಒಳಗೂಡಿರುವ ವಿವೇಕದಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಲು ಅತ್ಯುತ್ತಮ ಮಾರ್ಗವಾಗಿದೆ. ಉದಾಹರಣೆಗೆ, ‘ಕ್ರಿಸ್ತನ ನಿಯಮದಲ್ಲಿ’ ‘[ಯೇಸು] ಆಜ್ಞಾಪಿಸಿದ ಎಲ್ಲ ವಿಷಯಗಳನ್ನು’ ಇತರರಿಗೆ ಕಲಿಸುವಂತೆ ಅವನು ಕೊಟ್ಟ ಆಜ್ಞೆಯೂ ಒಳಗೂಡಿದೆ. (ಗಲಾತ್ಯ 6:2; ಮತ್ತಾಯ 28:19, 20) ಆರಾಧನೆಗಾಗಿ ಮತ್ತು ಭಕ್ತಿವೃದ್ಧಿಮಾಡುವ ಸಹವಾಸಕ್ಕಾಗಿ ಕೂಟವಾಗಿ ಕೂಡಿಬರುತ್ತಾ ಇರುವಂತೆ ಕೊಡಲ್ಪಟ್ಟಿರುವ ಆಜ್ಞೆಯನ್ನೂ ಕ್ರೈಸ್ತರು ಗಂಭೀರವಾಗಿ ಪರಿಗಣಿಸುತ್ತಾರೆ. (ಇಬ್ರಿಯ 10:24, 25) ಯೆಹೋವನಿಗೆ ಕ್ರಮವಾಗಿ ಮತ್ತು ಅನೇಕಾವರ್ತಿ ಹಾಗೂ ಹೃದಯದಾಳದಿಂದ ಪ್ರಾರ್ಥಿಸುವಂತೆ ಕೊಡಲ್ಪಟ್ಟಿರುವ ಉತ್ತೇಜನವೂ ದೇವರ ಆಜ್ಞೆಗಳಲ್ಲಿ ಸೇರಿದೆ. (ಮತ್ತಾಯ 6:5-8; 1 ಥೆಸಲೊನೀಕ 5:17) ನಾವು ಇಂಥ ಆಜ್ಞೆಗಳಿಗನುಸಾರ ಜೀವಿಸುವುದರಿಂದ ಇವು ನಿಜವಾಗಿಯೂ ಪ್ರೀತಿಭರಿತ ಮಾರ್ಗದರ್ಶನವನ್ನು ಒದಗಿಸುತ್ತವೆ ಎಂಬುದನ್ನು ಸುಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತೇವೆ. ಇವುಗಳಿಗೆ ವಿಧೇಯರಾಗುವುದು ಈ ತೊಂದರೆ ತುಂಬಿದ ಲೋಕದಲ್ಲಿ ನಾವು ಬೇರೆಲ್ಲಿಯೂ ಎಂದಿಗೂ ಕಂಡುಕೊಳ್ಳಸಾಧ್ಯವಿಲ್ಲದಂಥ ರೀತಿಯ ಆನಂದ ಮತ್ತು ಸಂತೃಪ್ತಿಯನ್ನು ತರುತ್ತದೆ. ದೇವರ ನಿಯಮಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ನೀವು ಹೇಗೆ ವೈಯಕ್ತಿಕವಾಗಿ ಪ್ರಯೋಜನ ಹೊಂದಿದ್ದೀರಿ ಎಂಬುದರ ಕುರಿತು ಮನನಮಾಡುವಾಗ, ಅವುಗಳಲ್ಲಿ ನಿಮಗಿರುವ ನಂಬಿಕೆಯು ಇನ್ನಷ್ಟು ಬಲಗೊಳ್ಳುವುದಿಲ್ಲವೆ?
7, 8. ವರ್ಷಗಳು ಕಳೆದಂತೆ ನೀತಿಯ ಮಾರ್ಗಕ್ರಮವನ್ನು ಕಾಪಾಡಿಕೊಳ್ಳಲು ತಮ್ಮಿಂದ ಸಾಧ್ಯವಾಗಲಿಕ್ಕಿಲ್ಲ ಎಂದು ಚಿಂತಿಸುವವರಿಗೆ ದೇವರ ವಾಕ್ಯವು ಹೇಗೆ ಪುನರಾಶ್ವಾಸನೆಯನ್ನು ನೀಡುತ್ತದೆ?
7 ಕೆಲವೊಮ್ಮೆ, ವರ್ಷಗಳು ಕಳೆದಂತೆ ಯೆಹೋವನ ನಿಯಮಗಳಿಗೆ ವಿಧೇಯರಾಗುವುದು ತುಂಬ ಕಷ್ಟಕರವಾಗುತ್ತದೆ ಎಂದು ಕೆಲವರು ಚಿಂತಿಸುತ್ತಾರೆ. ಅವುಗಳನ್ನು ಪಾಲಿಸಲು ತಾವು ಹೇಗಾದರೂ ತಪ್ಪಿಬೀಳಬಹುದು ಎಂದು ಅವರು ಭಯಪಡುತ್ತಾರೆ. ನಿಮಗೆ ಎಂದಾದರೂ ಹಾಗೆ ಅನಿಸುವಲ್ಲಿ ಈ ಮುಂದಿನ ಮಾತುಗಳನ್ನು ಮನಸ್ಸಿನಲ್ಲಿಡಿರಿ: “ನಿನ್ನ [ಪ್ರಯೋಜನಕ್ಕಾಗಿ] ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ ನಾನೇ ನಿನ್ನ ಯೆಹೋವನೂ ನಿನ್ನ ದೇವರೂ ಆಗಿದ್ದೇನೆ. ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು.” (ಯೆಶಾಯ 48:17, 18, NIBV) ಈ ಮಾತುಗಳು ಎಷ್ಟು ಪುನರಾಶ್ವಾಸನೆಯನ್ನು ನೀಡುತ್ತವೆ ಎಂಬುದರ ಕುರಿತು ನೀವು ಎಂದಾದರೂ ತುಸು ನಿಂತು ಆಲೋಚಿಸಿದ್ದೀರೊ?
8 ಯೆಹೋವನಿಗೆ ವಿಧೇಯರಾಗುವ ಮೂಲಕ ನಾವು ಪ್ರಯೋಜನ ಪಡೆಯುತ್ತೇವೆ ಎಂಬುದನ್ನು ಯೆಹೋವನು ಇಲ್ಲಿ ನಮಗೆ ನೆನಪು ಹುಟ್ಟಿಸುತ್ತಾನೆ. ನಾವು ವಿಧೇಯರಾಗುವಲ್ಲಿ ಆತನು ನಮಗೆ ಎರಡು ಆಶೀರ್ವಾದಗಳನ್ನು ವಾಗ್ದಾನಿಸುತ್ತಾನೆ. ಮೊದಲನೆಯದಾಗಿ, ನಮ್ಮ ಸಮಾಧಾನವು ಒಂದು ನದಿಯಂತಿರುವುದು ಅಂದರೆ ಶಾಂತವಾಗಿರುವುದು, ಯಥೇಷ್ಟವಾಗಿರುವುದು ಮತ್ತು ಮುಂದುವರಿಯುತ್ತಿರುವುದು. ಎರಡನೆಯದಾಗಿ, ನಮ್ಮ ನೀತಿಯು ಸಮುದ್ರದ ಅಲೆಗಳಂತಿರುವುದು. ನೀವು ಒಂದು ಸಮುದ್ರ ತೀರದಲ್ಲಿ ನಿಂತುಕೊಂಡು ಒಂದರ ಹಿಂದೆ ಒಂದು ಬಂದು ಅಪ್ಪಳಿಸುವ ಅಲೆಗಳನ್ನು ಗಮನಿಸುವಲ್ಲಿ, ನಿಮಗೆ ನಿತ್ಯತೆಯ ಅನಿಸಿಕೆಯಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಮುಂದಿನ ಅಸಂಖ್ಯಾತ ಯುಗಗಳ ವರೆಗೂ ಆ ಸಮುದ್ರ ತೀರದಲ್ಲಿ ಅಲೆಗಳು ಅಪ್ಪಳಿಸುತ್ತಾ ಇರುತ್ತವೆ ಮತ್ತು ಹಿಂದುರುಳಿ ನೊರೆಯಾಗಿ ಹೋಗುತ್ತಾ ಇರುತ್ತವೆ ಎಂಬುದು ನಿಮಗೆ ತಿಳಿದಿದೆ. ನೀವು ಯೆಹೋವನಿಗೆ ಕಿವಿಗೊಡುವಲ್ಲಿ, ನಿಮ್ಮ ನೀತಿಯು—ಅಂದರೆ ಸರಿಯಾದದ್ದನ್ನು ಮಾಡುವ ನಿಮ್ಮ ಮಾರ್ಗಕ್ರಮವು—ಸಮುದ್ರದ ಅಲೆಗಳಂತೆ ನಿತ್ಯಕ್ಕೂ ಬಾಳಬಲ್ಲದು ಎಂದು ಆತನು ಹೇಳುತ್ತಾನೆ. ಎಷ್ಟರ ತನಕ ನೀವು ಆತನಿಗೆ ನಂಬಿಗಸ್ತರಾಗಿರಲು ಪ್ರಯತ್ನಿಸುತ್ತೀರೋ ಅಷ್ಟರ ತನಕ ಆತನು ಎಂದಿಗೂ ನಿಮ್ಮನ್ನು ವಿಫಲರಾಗಲು ಬಿಡುವುದಿಲ್ಲ. (ಕೀರ್ತನೆ 55:22 ಓದಿ.) ಇಂಥ ಹೃದಯೋತ್ತೇಜಕ ವಾಗ್ದಾನಗಳು ಯೆಹೋವನಲ್ಲಿ ಮತ್ತು ಆತನ ನೀತಿಯುತ ಆವಶ್ಯಕತೆಗಳಲ್ಲಿ ನಿಮಗಿರುವ ನಂಬಿಕೆಯನ್ನು ಬಲಪಡಿಸುವುದಿಲ್ಲವೊ?
‘ಪ್ರೌಢತೆಯ ಕಡೆಗೆ ಮುಂದೊತ್ತುವುದು’
9, 10. (ಎ) ಕ್ರೈಸ್ತರಿಗೆ ಪ್ರೌಢತೆಯು ಅದ್ಭುತಕರವಾದ ಗುರಿಯಾಗಿದೆ ಏಕೆ? (ಬಿ) ಆಧ್ಯಾತ್ಮಿಕ ಹೊರನೋಟವು ಆನಂದವನ್ನು ಅನುಭವಿಸುವಂತೆ ನಮಗೆ ಹೇಗೆ ಸಹಾಯಮಾಡುತ್ತದೆ?
9 ಎರಡನೆಯದಾಗಿ, “ಪ್ರೌಢತೆಯ ಕಡೆಗೆ ಮುಂದೊತ್ತೋಣ” ಎಂಬ ಪ್ರೇರಿತ ಮಾತುಗಳನ್ನು ನಾವು ಅನುಸರಿಸುವ ಅಗತ್ಯವಿದೆ. (ಇಬ್ರಿಯ 6:1) ಪ್ರೌಢತೆಯು ಕ್ರೈಸ್ತರಿಗೆ ಅದ್ಭುತಕರವಾದ ಒಂದು ಗುರಿಯಾಗಿದೆ. ಸದ್ಯಕ್ಕೆ ಮಾನವರು ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ, ಆದರೆ ಪ್ರೌಢತೆಯು ಮಾನವರು ಸಾಧಿಸಸಾಧ್ಯವಿರುವ ಒಂದು ಗುರಿಯಾಗಿದೆ. ಅಷ್ಟುಮಾತ್ರವಲ್ಲ, ಕ್ರೈಸ್ತರು ಪ್ರೌಢರಾಗುತ್ತಾ ಹೋದಂತೆ ಯೆಹೋವನ ಸೇವೆಮಾಡುವುದರಲ್ಲಿ ಹೆಚ್ಚೆಚ್ಚು ಆನಂದವನ್ನು ಕಂಡುಕೊಳ್ಳುತ್ತಾರೆ. ಹಾಗೇಕೆ?
10 ಒಬ್ಬ ಪ್ರೌಢ ಕ್ರೈಸ್ತನು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಾನೆ. ಅವನು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡುತ್ತಾನೆ. (ಯೋಹಾನ 4:23) ಪೌಲನು ಬರೆದುದು: “ಶರೀರಭಾವವನ್ನು ಅನುಸರಿಸುವವರು ತಮ್ಮ ಮನಸ್ಸುಗಳನ್ನು ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಾರೆ, ಆದರೆ ಪವಿತ್ರಾತ್ಮವನ್ನು ಅನುಸರಿಸುವವರು ತಮ್ಮ ಮನಸ್ಸುಗಳನ್ನು ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಾರೆ.” (ರೋಮನ್ನರಿಗೆ 8:5) ಶಾರೀರಿಕ ಹೊರನೋಟವು ಹೆಚ್ಚು ಸಂತೋಷವನ್ನು ತರುವುದಿಲ್ಲ, ಏಕೆಂದರೆ ಅದು ಸ್ವಾರ್ಥಮಗ್ನ, ದೂರದೃಷ್ಟಿಯಿಲ್ಲದ ಮತ್ತು ಪ್ರಾಪಂಚಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವ ಪ್ರವೃತ್ತಿಯುಳ್ಳದ್ದಾಗಿರುತ್ತದೆ. ಆಧ್ಯಾತ್ಮಿಕ ಹೊರನೋಟವು ಆನಂದಭರಿತವಾದದ್ದಾಗಿದೆ, ಏಕೆಂದರೆ ಅದು ‘ಸಂತೋಷದ ದೇವರಾಗಿರುವ’ ಯೆಹೋವನ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತದೆ. (1 ತಿಮೊಥೆಯ 1:11) ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ಯೆಹೋವನನ್ನು ಸಂತೋಷಪಡಿಸಲು ಅತ್ಯಾಸಕ್ತನಾಗಿರುತ್ತಾನೆ ಮತ್ತು ಪರೀಕ್ಷೆಗೊಳಗಾಗುವಾಗಲೂ ಉಲ್ಲಾಸಿಸುತ್ತಾನೆ. ಏಕೆ? ಪರೀಕ್ಷೆಗಳು ಸೈತಾನನು ಸುಳ್ಳುಗಾರನಾಗಿದ್ದಾನೆ ಎಂಬುದನ್ನು ರುಜುಪಡಿಸಲು ಮತ್ತು ಸಮಗ್ರತೆಯನ್ನು ಬೆಳೆಸಿಕೊಳ್ಳಲು ನಮಗೆ ಸದವಕಾಶಗಳನ್ನು ನೀಡುತ್ತವೆ; ಇದು ನಮ್ಮ ಸ್ವರ್ಗೀಯ ತಂದೆಗೆ ಸಂತೋಷವನ್ನು ಉಂಟುಮಾಡುತ್ತದೆ. —ಜ್ಞಾನೋಕ್ತಿ 27:11; ಯಾಕೋಬ 1:2, 3 ಓದಿ.
11, 12. (ಎ) ಒಬ್ಬ ಕ್ರೈಸ್ತನ “ಗ್ರಹಣ ಶಕ್ತಿಗಳ” ವಿಷಯದಲ್ಲಿ ಪೌಲನು ಏನು ಹೇಳಿದನು, ಮತ್ತು ‘ತರಬೇತುಗೊಳಿಸಿಕೊಂಡಿರುವ’ ಎಂದು ತರ್ಜುಮೆಮಾಡಿರುವ ಪದದ ಅರ್ಥವೇನು? (ಬಿ) ಪ್ರೌಢತೆಗಾಗಿ ಮತ್ತು ಶಾರೀರಿಕವಾಗಿ ಹೊಂದಾಣಿಕೆಯುಳ್ಳದ್ದಾಗಲಿಕ್ಕಾಗಿ ದೇಹವು ಯಾವ ತರಬೇತಿಯನ್ನು ಪಡೆಯಬೇಕು?
11 ಆಧ್ಯಾತ್ಮಿಕತೆ ಮತ್ತು ಪ್ರೌಢತೆಯನ್ನು ತರಬೇತಿಯ ಮೂಲಕ ಬೆಳೆಸಿಕೊಳ್ಳಲಾಗುತ್ತದೆ. ಈ ವಚನವನ್ನು ಪರಿಗಣಿಸಿರಿ: “ಗಟ್ಟಿಯಾದ ಆಹಾರವು ಪ್ರೌಢರಿಗೆ ಅಂದರೆ ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡವರಿಗೆ ಸೇರಿದ್ದಾಗಿದೆ.” (ಇಬ್ರಿಯ 5:14) ನಮ್ಮ ಗ್ರಹಣ ಶಕ್ತಿಗಳು ‘ತರಬೇತುಗೊಳಿಸಲ್ಪಡುತ್ತಿರುವುದರ’ ಬಗ್ಗೆ ಪೌಲನು ಮಾತಾಡಿದಾಗ, ಪ್ರಥಮ ಶತಮಾನದ ಗ್ರೀಸ್ ದೇಶದಲ್ಲಿನ ವ್ಯಾಯಾಮಶಾಲೆಗಳಲ್ಲಿ ಸಾಮಾನ್ಯ ಉಪಯೋಗದಲ್ಲಿದ್ದಿರಬಹುದಾದ ಒಂದು ಗ್ರೀಕ್ ಪದವನ್ನು ಉಪಯೋಗಿಸಿದನು. ಏಕೆಂದರೆ ಇದನ್ನು ‘ಒಬ್ಬ ಅಂಗಸಾಧಕನಂತೆ ತರಬೇತುಗೊಳಿಸಿಕೊಂಡವನಿಗೆ’ ಎಂದು ತರ್ಜುಮೆಮಾಡಸಾಧ್ಯವಿದೆ. ಈಗ ಇಂಥ ತರಬೇತಿಯಲ್ಲಿ ಏನು ಒಳಗೂಡಿದೆ ಎಂಬುದರ ಕುರಿತು ಆಲೋಚಿಸಿರಿ.
12 ನಾವು ಹುಟ್ಟಿದಾಗ ನಮ್ಮ ದೇಹವು ಯಾವುದೇ ತರಬೇತಿ ಇಲ್ಲದ್ದಾಗಿತ್ತು. ಉದಾಹರಣೆಗೆ, ಒಂದು ಶಿಶುವಿಗೆ ತನ್ನ ಪುಟ್ಟ ಕೈಗಳು ಮತ್ತು ಕಾಲುಗಳೊಂದಿಗೆ ಏನು ಮಾಡುವುದು ಎಂಬುದು ತಿಳಿದಿರುವುದಿಲ್ಲ. ಆದುದರಿಂದ ಒಂದು ಶಿಶುವು ತನ್ನ ಕೈಗಳನ್ನು ಯದ್ವಾತದ್ವಾ ಬೀಸುತ್ತಿರುತ್ತದೆ, ಕೆಲವೊಮ್ಮೆ ತನ್ನ ಮುಖಕ್ಕೇ ಹೊಡೆದುಕೊಳ್ಳುತ್ತದೆ; ಇದು ಆ ಮಗುವಿಗೆ ಕಿರಿಕಿರಿಯನ್ನು ಅದೇ ಸಮಯದಲ್ಲಿ ಆಶ್ಚರ್ಯವನ್ನೂ ಉಂಟುಮಾಡುತ್ತದೆ. ಕಾಲಕ್ರಮೇಣ ಉಪಯೋಗದ ಮೂಲಕ ದೇಹವು ತರಬೇತಿಯನ್ನು ಹೊಂದುತ್ತದೆ. ಪುಟ್ಟ ಶಿಶು ಅಂಬೆಗಾಲಿಡುತ್ತದೆ, ಸ್ವಲ್ಪ ಬೆಳೆದ ಮೇಲೆ ನಡೆಯತೊಡಗುತ್ತದೆ, ಸಮಯಾನಂತರ ಓಡತೊಡಗುತ್ತದೆ.a ಹಾಗಾದರೆ ಒಬ್ಬ ಅಂಗಸಾಧಕನ ಕುರಿತಾಗಿ ಏನು? ಅಂಥ ಒಬ್ಬ ಕ್ರೀಡಾಪಟು ಅತ್ಯಂತ ಸೊಗಸಾದ ರೀತಿಯಲ್ಲಿ ಮತ್ತು ಕರಾರುವಾಕ್ಕಾಗಿ ಗಾಳಿಯಲ್ಲಿ ಜಿಗಿದು ಹಾರುತ್ತಿರುವುದನ್ನು ಮತ್ತು ತಿರುಗುತ್ತಿರುವುದನ್ನು ನೋಡುವಾಗ, ಅವನ ದೇಹವು ಸಲೀಸಾಗಿ ನಡೆಯುವಂತೆ ಕ್ರಮಪಡಿಸಲ್ಪಟ್ಟಿರುವ ಒಂದು ಯಂತ್ರದಂತಿದೆ ಎಂಬುದನ್ನು ನೀವು ಮನಸಾರೆ ಒಪ್ಪಿಕೊಳ್ಳುತ್ತೀರಿ ಎಂಬುದರಲ್ಲಿ ಸಂಶಯವಿಲ್ಲ. ಒಬ್ಬ ಅಂಗಸಾಧಕನಿಗೆ ಇಂಥ ಕೈಚಳಕವು ಆಕಸ್ಮಿಕವಾಗಿ ಬರಲಿಲ್ಲ. ಇದಕ್ಕೆ ಅನೇಕ ತಾಸುಗಳ ತರಬೇತಿಯ ಆವಶ್ಯಕತೆಯಿದೆ. ಇಂಥ ದೈಹಿಕ ತರಬೇತಿಯು “ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ” ಎಂದು ಬೈಬಲು ಒಪ್ಪಿಕೊಳ್ಳುತ್ತದೆ. ಹಾಗಾದರೆ ನಮ್ಮ ಆಧ್ಯಾತ್ಮಿಕ ಗ್ರಹಣ ಶಕ್ತಿಗಳ ತರಬೇತಿಯು ಇನ್ನೂ ಎಷ್ಟು ಅಮೂಲ್ಯವಾದದ್ದಾಗಿದೆ!—1 ತಿಮೊಥೆಯ 4:8.
13. ನಮ್ಮ ಗ್ರಹಣ ಶಕ್ತಿಗಳನ್ನು ನಾವು ಹೇಗೆ ತರಬೇತುಗೊಳಿಸಬಲ್ಲೆವು?
13 ಈ ಪುಸ್ತಕದಲ್ಲಿ, ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ ನೀವು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಸಾಧ್ಯವಾಗುವಂತೆ ನಿಮ್ಮ ಗ್ರಹಣ ಶಕ್ತಿಗಳನ್ನು ತರಬೇತಿಗೊಳಿಸಲು ನಿಮಗೆ ಸಹಾಯಮಾಡುವಂಥ ಹೆಚ್ಚಿನ ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ನಿಮ್ಮ ದೈನಂದಿನ ಜೀವನದಲ್ಲಿ ನಿರ್ಣಯಗಳನ್ನು ಮಾಡುವಾಗ ದೇವರ ಮೂಲತತ್ತ್ವಗಳು ಮತ್ತು ನಿಯಮಗಳನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿರಿ. ನೀವು ಪ್ರತಿಯೊಂದು ನಿರ್ಣಯವನ್ನು ಮಾಡುವಾಗಲೂ ಸ್ವತಃ ಹೀಗೆ ಕೇಳಿಕೊಳ್ಳಿ: ‘ಬೈಬಲಿನ ಯಾವ ನಿಯಮಗಳು ಅಥವಾ ಮೂಲತತ್ತ್ವಗಳು ಈ ವಿಷಯಕ್ಕೆ ಅನ್ವಯಿಸುತ್ತವೆ? ನಾನು ಅವುಗಳನ್ನು ಹೇಗೆ ಅನ್ವಯಿಸಬಲ್ಲೆ? ಯಾವ ಮಾರ್ಗಕ್ರಮವು ನನ್ನ ಸ್ವರ್ಗೀಯ ತಂದೆಗೆ ಸಂತೋಷವನ್ನು ಉಂಟುಮಾಡುವುದು?’ (ಜ್ಞಾನೋಕ್ತಿ 3:5, 6; ಯಾಕೋಬ 1:5 ಓದಿ.) ಈ ರೀತಿಯಲ್ಲಿ ನೀವು ಮಾಡುವ ಪ್ರತಿಯೊಂದು ನಿರ್ಣಯವು ನಿಮ್ಮ ಗ್ರಹಣ ಶಕ್ತಿಗಳನ್ನು ಇನ್ನಷ್ಟು ತರಬೇತುಗೊಳಿಸುವುದು. ಇಂಥ ತರಬೇತಿಯು ನೀವು ನಿಜವಾಗಿಯೂ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗುವಂತೆ ಮತ್ತು ಹಾಗೆಯೇ ಉಳಿಯುವಂತೆ ನಿಮಗೆ ಸಹಾಯಮಾಡುವುದು.
14. ಆಧ್ಯಾತ್ಮಿಕವಾಗಿ ಬೆಳೆಯಲಿಕ್ಕಾಗಿ ನಾವು ಯಾವ ಹಸಿವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ, ಆದರೆ ಯಾವ ಎಚ್ಚರಿಕೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
14 ಒಬ್ಬನು ಪ್ರೌಢತೆಯನ್ನು ಸಾಧಿಸಸಾಧ್ಯವಿದೆಯಾದರೂ ಆಧ್ಯಾತ್ಮಿಕ ಬೆಳವಣಿಗೆಯು ಸದಾ ಮುಂದುವರಿಯುವಂಥ ಒಂದು ಕಾರ್ಯವಿಧಾನವಾಗಿದೆ. ಬೆಳವಣಿಗೆಯು ಆಹಾರದ ಮೇಲೆ ಅವಲಂಬಿಸಿರುತ್ತದೆ. ಆದುದರಿಂದ ಪೌಲನು, “ಗಟ್ಟಿಯಾದ ಆಹಾರವು ಪ್ರೌಢರಿಗೆ . . . ಸೇರಿದ್ದಾಗಿದೆ” ಎಂದು ಹೇಳಿದನು. ನಿಮ್ಮ ನಂಬಿಕೆಯನ್ನು ಬಲಪಡಿಸುತ್ತಾ ಇರುವುದಕ್ಕೆ ಒಂದು ಕೀಲಿ ಕೈ, ಗಟ್ಟಿಯಾದ ಆಧ್ಯಾತ್ಮಿಕ ಆಹಾರವನ್ನು ಸೇವಿಸುತ್ತಾ ಇರುವುದೇ ಆಗಿದೆ. ನೀವು ಕಲಿತಂಥ ವಿಷಯವನ್ನು ಸೂಕ್ತವಾಗಿ ಅನ್ವಯಿಸುವಾಗ ಅದೇ ವಿವೇಕವಾಗಿದೆ ಮತ್ತು “ವಿವೇಕವು ಪ್ರಮುಖವಾದದ್ದು” (NW) ಎಂದು ಬೈಬಲು ತಿಳಿಸುತ್ತದೆ. ಹೀಗೆ ನಮ್ಮ ತಂದೆಯು ಕೊಡುವಂಥ ಅಮೂಲ್ಯ ಸತ್ಯಗಳಿಗಾಗಿ ನಾವು ನಿಜವಾದ ಹಸಿವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. (ಜ್ಞಾನೋಕ್ತಿ 4:5-7; 1 ಪೇತ್ರ 2:2) ಜ್ಞಾನವನ್ನು ಮತ್ತು ದೈವಿಕ ವಿವೇಕವನ್ನು ಪಡೆದುಕೊಳ್ಳುವುದು ಸ್ವಸಂತುಷ್ಟರಾಗಲು ಅಥವಾ ಜಂಬವುಳ್ಳವರಾಗಲು ಯಾವುದೇ ಕಾರಣವನ್ನು ಕೊಡುವುದಿಲ್ಲ ಎಂಬುದಂತೂ ನಿಶ್ಚಯ. ನಾವು ನಮ್ಮನ್ನು ಕ್ರಮವಾಗಿ ಪರೀಕ್ಷಿಸಿಕೊಳ್ಳುವ ಅಗತ್ಯವಿದೆ, ಇಲ್ಲದಿದ್ದರೆ ಅಹಂಕಾರ ಅಥವಾ ಬೇರೊಂದು ದೌರ್ಬಲ್ಯವು ನಮ್ಮ ಹೃದಯದಲ್ಲಿ ಬೇರೂರುತ್ತದೆ ಮತ್ತು ಬೆಳೆಯುತ್ತದೆ. ಪೌಲನು ಬರೆದುದು: “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ, ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ.”—2 ಕೊರಿಂಥ 13:5.
15. ಆಧ್ಯಾತ್ಮಿಕ ಬೆಳವಣಿಗೆಗೆ ಪ್ರೀತಿಯು ಅತ್ಯಾವಶ್ಯಕವಾಗಿದೆ ಏಕೆ?
15 ಒಬ್ಬನು ಗಟ್ಟಿಮುಟ್ಟಾಗಿ ಮತ್ತು ಆರೋಗ್ಯವಂತನಾಗಿ ಇರಬಹುದು; ಆದರೆ ಅವನು ಕ್ರಮವಾಗಿ ಊಟಮಾಡುವುದನ್ನು ಮತ್ತು ತನ್ನ ಆರೋಗ್ಯದ ಕಾಳಜಿ ವಹಿಸುವುದನ್ನು ಮುಂದುವರಿಸುವ ಅಗತ್ಯವಿದೆ. ಪ್ರೌಢರಾಗಲು ಮತ್ತು ನಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಲು ನಮಗೆ ಯಾವುದರ ಆವಶ್ಯಕತೆಯಿದೆ? ಮುಖ್ಯವಾಗಿ ಪ್ರೀತಿಯೇ. ಯೆಹೋವನಿಗಾಗಿ ಮತ್ತು ನಮ್ಮ ಜೊತೆ ವಿಶ್ವಾಸಿಗಳಿಗಾಗಿ ನಾವು ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾ ಇರುವ ಅಗತ್ಯವಿದೆ. ನಮ್ಮಲ್ಲಿ ಪ್ರೀತಿಯಿಲ್ಲದಿರುವುದಾದರೆ ನಮ್ಮ ಎಲ್ಲ ಜ್ಞಾನವೂ ನಾವು ಮಾಡುವ ಎಲ್ಲ ಕಾರ್ಯಗಳೂ ನಿಷ್ಪ್ರಯೋಜಕವಾಗುತ್ತವೆ. ಅವೆಲ್ಲ ಅರ್ಥಹೀನವಾಗಿರುತ್ತವೆ. (1 ಕೊರಿಂಥ 13:1-3) ಪ್ರೀತಿಯ ಸಹಾಯದಿಂದ ನಾವು ಕ್ರೈಸ್ತ ಪ್ರೌಢತೆಯನ್ನು ಸಾಧಿಸಸಾಧ್ಯವಿದೆ ಮತ್ತು ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಸಾಧ್ಯವಿದೆ.
ಯೆಹೋವನು ಒದಗಿಸುವಂಥ ನಿರೀಕ್ಷೆಯ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿರಿ
16. ಸೈತಾನನು ಎಂಥ ಆಲೋಚನಾ ರೀತಿಯನ್ನು ಉತ್ತೇಜಿಸುತ್ತಾನೆ ಮತ್ತು ಯೆಹೋವನು ಯಾವ ರಕ್ಷಣೆಯನ್ನು ಒದಗಿಸಿದ್ದಾನೆ?
16 ಮೂರನೆಯದಾಗಿ ಯೆಹೋವನು ಒದಗಿಸುವಂಥ ನಿರೀಕ್ಷೆಯ ಮೇಲೆ ನಾವು ಮನಸ್ಸನ್ನು ಕೇಂದ್ರೀಕರಿಸಬೇಕು. ಇದನ್ನು ಮಾಡಬೇಕಾದರೆ ನಮ್ಮ ಆಲೋಚನಾ ರೀತಿಯನ್ನು ನಾವು ಕಾಪಾಡಿಕೊಳ್ಳುವ ಅಗತ್ಯವಿದೆ. ಇಹಲೋಕಾಧಿಪತಿಯಾಗಿರುವ ಸೈತಾನನು ಜನರು ನಕಾರಾತ್ಮಕ ಆಲೋಚನೆ, ಹತಾಶೆ, ಅಪನಂಬಿಕೆ ಮತ್ತು ನಿರಾಶೆಗೆ ಬಲಿಯಾಗುವಂತೆ ಮಾಡುವುದರಲ್ಲಿ ತುಂಬ ಚತುರನಾಗಿದ್ದಾನೆ. (ಎಫೆಸ 2:2) ಮರದ ಕಟ್ಟಡಕ್ಕೆ ಸುರುಬು ಹಿಡಿಯುವಿಕೆಯು ಹೇಗೆ ಅಪಾಯಕರವಾಗಿದೆಯೋ ಹಾಗೆಯೇ ಇಂಥ ಆಲೋಚನೆಯು ಒಬ್ಬ ಕ್ರೈಸ್ತನಿಗೆ ಅಪಾಯಕರವಾಗಿದೆ. ಸಂತೋಷಕರವಾಗಿಯೇ, ಯೆಹೋವನು ನಮ್ಮ ರಕ್ಷಣೆಗಾಗಿ ಅತ್ಯಾವಶ್ಯಕವಾಗಿರುವ ಒಂದು ಸಾಧನವನ್ನು ಅಂದರೆ ನಿರೀಕ್ಷೆಯನ್ನು ಒದಗಿಸುತ್ತಾನೆ.
17. ದೇವರ ವಾಕ್ಯವು ನಿರೀಕ್ಷೆಯ ಪ್ರಮುಖತೆಯನ್ನು ಹೇಗೆ ದೃಷ್ಟಾಂತಿಸುತ್ತದೆ?
17 ಸೈತಾನನ ಮತ್ತು ಈ ಲೋಕದ ವಿರುದ್ಧ ನಾವು ನಡೆಸುವ ಹೋರಾಟದಲ್ಲಿ ನಮಗೆ ಅಗತ್ಯವಾಗಿರುವ ಆಧ್ಯಾತ್ಮಿಕ ರಕ್ಷಾಕವಚದ ವಿವಿಧ ಭಾಗಗಳನ್ನು ಬೈಬಲು ಪಟ್ಟಿಮಾಡುತ್ತದೆ. ರಕ್ಷಾಕವಚದ ಪ್ರಮುಖ ಭಾಗವು ಶಿರಸ್ತ್ರಾಣವಾಗಿದೆ ಅಂದರೆ “ರಕ್ಷಣೆಯ ನಿರೀಕ್ಷೆ” ಆಗಿದೆ. (1 ಥೆಸಲೊನೀಕ 5:8) ಬೈಬಲಿನ ಸಮಯಗಳಲ್ಲಿ, ಶಿರಸ್ತ್ರಾಣವನ್ನು ಧರಿಸದೇ ಕದನಕ್ಕೆ ಹೋಗುವುದಾದರೆ ತಾನು ಬದುಕಿಉಳಿಯಲಾರೆನು ಎಂಬುದು ಒಬ್ಬ ಸೈನಿಕನಿಗೆ ತಿಳಿದಿತ್ತು. ಹೆಚ್ಚಾಗಿ ಲೋಹದಿಂದ ಮಾಡಲ್ಪಟ್ಟಿದ್ದು ಅದರ ಒಳಗೆ ಫೆಲ್ಟ್ ಬಟ್ಟೆಯ ಅಥವಾ ಚರ್ಮದ ಟೋಪಿ ಇರುತ್ತಿದ್ದ ಶಿರಸ್ತ್ರಾಣವು, ತಲೆಗೆ ಗುರಿಯಿಟ್ಟು ಕೊಡಲ್ಪಡುತ್ತಿದ್ದ ಹೊಡೆತಗಳು ಹೆಚ್ಚಿನ ಹಾನಿಯನ್ನು ಮಾಡದೆ ಕೇವಲ ಸವರಿಕೊಂಡು ಹೋಗುವಂತೆ ಮಾಡುತ್ತಿತ್ತು. ಶಿರಸ್ತ್ರಾಣವು ತಲೆಯನ್ನು ಸಂರಕ್ಷಿಸುವಂತೆಯೇ ನಿರೀಕ್ಷೆಯು ನಿಮ್ಮ ಮನಸ್ಸನ್ನು, ನಿಮ್ಮ ಆಲೋಚನೆಯನ್ನು ಸಂರಕ್ಷಿಸಬಲ್ಲದು.
18, 19. ನಿರೀಕ್ಷೆಯನ್ನು ಕಾಪಾಡಿಕೊಳ್ಳುವುದರಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು ಮತ್ತು ನಾವು ಅವನನ್ನು ಹೇಗೆ ಅನುಕರಿಸಸಾಧ್ಯವಿದೆ?
18 ನಿರೀಕ್ಷೆಯನ್ನು ಕಾಪಾಡಿಕೊಳ್ಳುವುದರಲ್ಲಿ ಯೇಸು ಪ್ರಧಾನ ಮಾದರಿಯನ್ನಿಟ್ಟನು. ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ಅವನು ಏನನ್ನು ತಾಳಿಕೊಂಡನೋ ಅದನ್ನು ಜ್ಞಾಪಿಸಿಕೊಳ್ಳಿರಿ. ಒಬ್ಬ ಆಪ್ತ ಸ್ನೇಹಿತನು ಹಣಕ್ಕೋಸ್ಕರ ಅವನಿಗೆ ನಂಬಿಕೆ ದ್ರೋಹಮಾಡಿದನು. ಅವನ ಬಗ್ಗೆ ತಿಳಿದಿದ್ದ ಇನ್ನೊಬ್ಬ ಸ್ನೇಹಿತನು ಅವನನ್ನು ಅಲ್ಲಗಳೆದನು. ಇನ್ನಿತರರು ಅವನನ್ನು ಬಿಟ್ಟು ಓಡಿಹೋದರು. ಅವನ ಸ್ವಂತ ಜನರೇ ಅವನಿಗೆ ಎದುರುಬಿದ್ದು, ಅವನನ್ನು ಯಾತನಾಮಯ ಮರಣಕ್ಕೆ ಒಪ್ಪಿಸುವಂತೆ ರೋಮನ್ ಸೈನಿಕರ ಬಳಿ ತಗಾದೆಮಾಡಿದರು. ನಾವು ಎಂದಾದರೂ ಎದುರಿಸುವುದಕ್ಕಿಂತ ಹೆಚ್ಚು ಕಷ್ಟಕರವಾದ ಪರೀಕ್ಷೆಗಳನ್ನು ಯೇಸು ಎದುರಿಸಿದನು ಎಂಬ ಮಾತನ್ನು ಹೆಚ್ಚಿನವರು ಒಪ್ಪುವರು. ಆದರೆ ಈ ಪರೀಕ್ಷೆಗಳನ್ನು ಎದುರಿಸಲು ಯಾವುದು ಅವನಿಗೆ ಸಹಾಯಮಾಡಿತು? ಇದಕ್ಕೆ ಇಬ್ರಿಯ 12:2 ಉತ್ತರವನ್ನು ಕೊಡುತ್ತಾ, “ಅವನು ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ” ಎಂದು ಹೇಳುತ್ತದೆ. ‘ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದವು’ ಎಂದೂ ಯೇಸುವಿನ ದೃಷ್ಟಿಯಿಂದ ದೂರವಾಗಿರಲಿಲ್ಲ.
19 ಯೇಸುವಿನ ಮುಂದೆ ಯಾವ ಆನಂದವು ಇಡಲ್ಪಟ್ಟಿತ್ತು? ಕಷ್ಟಗಳ ಮಧ್ಯೆಯೂ ತಾಳಿಕೊಳ್ಳುವ ಮೂಲಕ ಯೆಹೋವನ ಪವಿತ್ರ ನಾಮದ ಪವಿತ್ರೀಕರಣದಲ್ಲಿ ತಾನು ಭಾಗಿಯಾಗುತ್ತೇನೆ ಎಂಬುದು ಅವನಿಗೆ ತಿಳಿದಿತ್ತು. ಸೈತಾನನು ಸುಳ್ಳುಗಾರನಾಗಿದ್ದಾನೆ ಎಂಬುದಕ್ಕೆ ಅತಿ ಬಲವತ್ತಾದ ರುಜುವಾತನ್ನು ಅವನು ನೀಡಲಿದ್ದನು. ಬೇರೆ ಯಾವುದೇ ನಿರೀಕ್ಷೆಯು ಯೇಸುವಿಗೆ ಇದಕ್ಕಿಂತ ಹೆಚ್ಚಿನ ಆನಂದವನ್ನು ಕೊಡಸಾಧ್ಯವಿರಲಿಲ್ಲ! ಯೆಹೋವನು ತನ್ನ ನಂಬಿಗಸ್ತ ಮಾರ್ಗಕ್ರಮಕ್ಕೆ ಹೇರಳವಾದ ಪ್ರತಿಫಲವನ್ನು ನೀಡುವನು ಎಂಬುದೂ ಅವನಿಗೆ ತಿಳಿದಿತ್ತು. ಸ್ವಲ್ಪದರಲ್ಲೇ ಅವನು ತನ್ನ ತಂದೆಯೊಂದಿಗೆ ಪುನಃ ಜೊತೆಗೂಡುವ ಅದ್ಭುತಕರ ಸಮಯವು ಅವನ ಮುಂದಿತ್ತು. ಅತ್ಯಂತ ಕಷ್ಟಕರವಾದ ಸಮಯಗಳಾದ್ಯಂತ ಯೇಸು ಇಂಥ ಆನಂದಭರಿತ ನಿರೀಕ್ಷೆಯ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಿದನು. ನಾವು ಕೂಡ ಅದನ್ನೇ ಮಾಡುವ ಅಗತ್ಯವಿದೆ. ನಮ್ಮ ಮುಂದೆಯೂ ಆನಂದವು ಇಡಲ್ಪಟ್ಟಿದೆ. ತನ್ನ ಮಹಾನ್ ಹೆಸರನ್ನು ಪವಿತ್ರೀಕರಿಸಲು ಸಹಾಯಮಾಡುವ ಸುಯೋಗವನ್ನು ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೊಡುವ ಮೂಲಕ ನಮ್ಮನ್ನು ಗೌರವಿಸುತ್ತಾನೆ. ಯೆಹೋವನನ್ನು ನಮ್ಮ ಪರಮಾಧಿಕಾರಿಯಾಗಿ ಆರಿಸಿಕೊಳ್ಳುವ ಮೂಲಕ ಮತ್ತು ನಾವು ಯಾವುದೇ ಪರೀಕ್ಷೆಗಳನ್ನು ಹಾಗೂ ಪ್ರಲೋಭನೆಗಳನ್ನು ಎದುರಿಸಬಹುದಾದರೂ ನಮ್ಮ ತಂದೆಯ ಪ್ರೀತಿಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಮೂಲಕ ಸೈತಾನನನ್ನು ಒಬ್ಬ ಸುಳ್ಳುಗಾರನಾಗಿ ರುಜುಪಡಿಸಸಾಧ್ಯವಿದೆ.
20. ನೀವು ಸಕಾರಾತ್ಮಕವಾಗಿ ಆಲೋಚಿಸಲು ಮತ್ತು ನಿರೀಕ್ಷೆಯುಳ್ಳವರಾಗಿರಲು ಯಾವುದು ನಿಮಗೆ ಸಹಾಯಮಾಡಬಲ್ಲದು?
20 ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ನೀಡಲು ಇಷ್ಟಪಡುತ್ತಾನೆ ಮಾತ್ರವಲ್ಲ, ಹಾಗೆ ಮಾಡಲು ಆತನು ಹಾತೊರೆಯುತ್ತಾನೆ ಕೂಡ. (ಯೆಶಾಯ 30:18; ಮಲಾಕಿಯ 3:10 ಓದಿ.) ಆತನು ತನ್ನ ಸೇವಕರ ಯೋಗ್ಯವಾದ ಬಯಕೆಗಳನ್ನು ಪೂರೈಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾನೆ. (ಕೀರ್ತನೆ 37:4) ಆದುದರಿಂದ ನಿಮ್ಮ ಮುಂದಿರುವ ನಿರೀಕ್ಷೆಯ ಮೇಲೆ ನಿಮ್ಮ ಮನಸ್ಸನ್ನು ದೃಢವಾಗಿ ಕೇಂದ್ರೀಕರಿಸಿರಿ. ಸೈತಾನನ ಹಳೆಯ ಲೋಕದ ನಕಾರಾತ್ಮಕ, ಹೀನ, ವಕ್ರ ಆಲೋಚನೆಗಳಿಗೆ ಎಂದಿಗೂ ಬಲಿಯಾಗಬೇಡಿ. ಈ ಲೋಕದ ಮನೋಭಾವವು ನಿಮ್ಮ ಹೃದಮನದೊಳಗೆ ನುಸುಳುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರುವಲ್ಲಿ, ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಗಾಗಿ’ ಯೆಹೋವನಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿರಿ. ದೇವರು ಕೊಡುವ ಈ ಶಾಂತಿಯು ನಿಮ್ಮ ಹೃದಯವನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕಾಯುವುದು.—ಫಿಲಿಪ್ಪಿ 4:6, 7.
21, 22. (ಎ) ‘ಮಹಾ ಸಮೂಹದವರು’ ಯಾವ ಅದ್ಭುತಕರ ನಿರೀಕ್ಷೆಯಲ್ಲಿ ಆನಂದಿಸುತ್ತಾರೆ? (ಬಿ) ಕ್ರೈಸ್ತ ನಿರೀಕ್ಷೆಯ ಯಾವ ಅಂಶವು ನಿಮಗೆ ಅತ್ಯಮೂಲ್ಯವಾದದ್ದಾಗಿದೆ ಮತ್ತು ನಿಮ್ಮ ದೃಢನಿರ್ಧಾರವೇನಾಗಿದೆ?
21 ನೀವು ಮನನಮಾಡಲು ಎಷ್ಟು ರೋಮಾಂಚಕವಾದ ನಿರೀಕ್ಷೆ ನಿಮಗಿದೆ! ನೀವು “ಮಹಾ ಸಂಕಟವನ್ನು ಪಾರಾಗಿ ಬರುವ” ‘ಮಹಾ ಸಮೂಹದ’ ಭಾಗವಾಗಿರುವಲ್ಲಿ, ಅತಿ ಬೇಗನೆ ನೀವು ಹೊಂದಲಿರುವ ಜೀವನದ ಕುರಿತು ಆಲೋಚಿಸಿರಿ. (ಪ್ರಕಟನೆ 7:9, 14) ಆಗ ಸೈತಾನನು ಮತ್ತು ಅವನ ದೆವ್ವಗಳು ಅಸ್ತಿತ್ವದಲ್ಲಿ ಇಲ್ಲದೆ ಹೋಗಿರುವುದರಿಂದ, ಈಗ ಗ್ರಹಿಸಲು ಕಷ್ಟಕರವಾಗಿರಬಹುದಾದ ರೀತಿಯ ಬಿಡುಗಡೆಯ ಅನಿಸಿಕೆ ನಿಮಗಾಗುವುದು. ಸೈತಾನನ ಭ್ರಷ್ಟ ಪ್ರಭಾವದ ಒತ್ತಡ ಇಲ್ಲದೆ ಇರುವಂಥ ಜೀವನವನ್ನು ನಮ್ಮಲ್ಲಿ ಯಾರು ಎಂದಾದರೂ ಅನುಭವಿಸಿದ್ದೇವೆ? ಆ ಒತ್ತಡವು ಇಲ್ಲದೇ ಹೋಗಿರುವಾಗ, ಯೇಸುವಿನ ಮತ್ತು 1,44,000 ಮಂದಿ ಸ್ವರ್ಗೀಯ ಜೊತೆರಾಜರ ಮಾರ್ಗದರ್ಶನದ ಕೆಳಗೆ ಈ ಭೂಮಿಯನ್ನು ಪರದೈಸಾಗಿ ಪರಿವರ್ತಿಸುವ ಕೆಲಸವನ್ನು ಮಾಡುವುದು ಎಷ್ಟು ಆನಂದಮಯವಾಗಿರುವುದು! ಎಲ್ಲ ಅಸ್ವಸ್ಥತೆಗಳು ಮತ್ತು ದೇಹದೌರ್ಬಲ್ಯಗಳು ತೆಗೆದುಹಾಕಲ್ಪಟ್ಟಿರುವುದನ್ನು ನೋಡುವ, ನಮ್ಮ ಪ್ರಿಯ ಜನರನ್ನು ಸಮಾಧಿಯಿಂದ ಸ್ವಾಗತಿಸುವ, ನಾವು ಹೇಗೆ ಜೀವಿಸುವಂತೆ ದೇವರು ಬಯಸಿದ್ದನೋ ಹಾಗೆ ಜೀವಿಸುವ ಪ್ರತೀಕ್ಷೆಯು ಎಷ್ಟು ರೋಮಾಂಚನೀಯವಾಗಿದೆ! ನಾವು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತಾ ಹೋದಂತೆ, ಇನ್ನೂ ಶ್ರೇಷ್ಠವಾದ ಪ್ರತಿಫಲವು ನಮಗೆ ಸನ್ನಿಹಿತವಾಗುತ್ತದೆ. ಅದು ರೋಮನ್ನರಿಗೆ 8:21ರಲ್ಲಿ ತಿಳಿಯಪಡಿಸಲ್ಪಟ್ಟಿರುವ “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಹೊಂದುವ ವಾಗ್ದಾನವಾಗಿದೆ.
22 ನೀವು ಎಂದೂ ಊಹಿಸಿಕೊಳ್ಳಲಾರದಷ್ಟು ಹೆಚ್ಚು ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ಆ ಸ್ವಾತಂತ್ರ್ಯಕ್ಕೆ ನಡಿಸುವ ಮಾರ್ಗವು ವಿಧೇಯತೆಯ ಮೇಲೆ ಹೊಂದಿಕೊಂಡಿದೆ. ಪ್ರತಿ ದಿನವೂ ಯೆಹೋವನಿಗೆ ವಿಧೇಯರಾಗಲು ನೀವು ಈಗ ಮಾಡುವ ಪ್ರತಿಯೊಂದು ಪ್ರಯತ್ನವು ಸಾರ್ಥಕವಾಗಿದೆಯಲ್ಲವೆ? ಹಾಗಾದರೆ ನಿತ್ಯತೆಗೂ ದೇವರ ಪ್ರೀತಿಯಲ್ಲಿ ನೀವು ಉಳಿಯಸಾಧ್ಯವಾಗುವಂತೆ ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ ಇರಿ!
a ನಮ್ಮ ದೇಹದಲ್ಲಿ ಕೈಕಾಲುಗಳ ಸ್ಥಾನ ಮತ್ತು ನಿಯೋಜನೆಯ ವಿಷಯದಲ್ಲಿ ನಾವು ವಿಶೇಷ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತೇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಉದಾಹರಣೆಗೆ, ಈ ಪ್ರಜ್ಞೆಯು ನೀವು ಕಣ್ಣುಮುಚ್ಚಿಕೊಂಡು ನಿಮ್ಮ ಕೈಗಳಿಂದ ಚಪ್ಪಾಳೆ ತಟ್ಟುವುದನ್ನು ಸಾಧ್ಯಗೊಳಿಸುತ್ತದೆ. ಈ ರೀತಿಯ ಪ್ರಜ್ಞೆಯನ್ನು ಕಳೆದುಕೊಂಡಿದ್ದರ ಪರಿಣಾಮವಾಗಿ ಒಬ್ಬ ವಯಸ್ಕ ರೋಗಿಯು ನಿಲ್ಲುವ, ನಡೆದಾಡುವ ಅಥವಾ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಸಹ ಕಳೆದುಕೊಂಡಳು.