ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಸೆಪ್ಟೆಂಬರ್ 2-8
ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 7-8
“ಮೆಲ್ಕಿಜೆದೇಕನ ತರ ಸದಾಕಾಲಕ್ಕೂ ಇರುವ ಯಾಜಕ”
(ಇಬ್ರಿಯ 7:1, 2) ಸಾಲೇಮಿನ ಅರಸನೂ ಮಹೋನ್ನತ ದೇವರ ಯಾಜಕನೂ ಆಗಿದ್ದ ಈ ಮೆಲ್ಕಿಜೆದೇಕನು ಅರಸರನ್ನು ಸಂಹರಿಸಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು. 2 ಇವನಿಗೆ ಅಬ್ರಹಾಮನು ಎಲ್ಲವುಗಳಲ್ಲಿ ಹತ್ತನೇ ಒಂದು ಭಾಗವನ್ನು ಕೊಟ್ಟನು; ಭಾಷಾಂತರಿಸಿದಾಗ ಮೊದಲನೆಯದಾಗಿ ಅವನ ಹೆಸರಿನ ಅರ್ಥ, “ನೀತಿಯ ಅರಸನು” ಎಂದೂ ತರುವಾಯ ಸಾಲೇಮಿನ ಅರಸನು, ಅಂದರೆ “ಶಾಂತಿಯ ಅರಸನು” ಎಂದೂ ಆಗಿದೆ.
it-2 ಪುಟ 366
ಮೆಲ್ಕಿಚೆದೇಕ
ಮೆಲ್ಕಿಚೆದೇಕ ಸಾಲೇಮಿನ ಅರಸನು ಮತ್ತು ‘ಪರಾತ್ಪರನಾದ ಯೆಹೋವ ದೇವರ ಯಾಜಕನಾಗಿದ್ದನು.’ (ಆದಿ 14:18, 22) ಅವನು ಬೈಬಲ್ ನಲ್ಲಿ ತಿಳಿಸಲಾದ ಮೊದಲನೇ ಯಾಜಕ ಮತ್ತು ಅವನು ಕ್ರಿ. ಪೂ. 1933ಕ್ಕಿಂತ ಮುಂಚಿನ ಸಮಯದಲ್ಲಿ ಯಾಜಕನಾಗಿದ್ದನು. ಮೆಲ್ಕಿಚೆದೇಕ “ಶಾಂತಿ” ಎಂಬ ಅರ್ಥ ಇರುವ ಸಾಲೇಮಿನ ಅರಸನಾಗಿದ್ದ ಕಾರಣ, ಪೌಲ ಅವನನ್ನು “ಶಾಂತಿಯ ಅರಸ” ಎಂದು ಕರೆದನು. ಅಷ್ಟೇ ಅಲ್ಲ ಅವನನ್ನು “ನೀತಿಯ ಅರಸ” ಎಂದು ಸಹ ಕರೆದನು. ಯಾಕೆಂದರೆ ಮೆಲ್ಕಿಚೆದೇಕನ ಹೆಸರಿನ ಅರ್ಥ ಅದೇ ಆಗಿತ್ತು. (ಇಬ್ರಿ 7:1, 2) ಪ್ರಾಚೀನ ಸಾಲೇಮ್, ಯೆರೂಸಲೇಮ್ ಪಟ್ಟಣದ ಮಧ್ಯದಲ್ಲಿ ಇತ್ತು ಅಂತ ಹೇಳಲಾಗುತ್ತೆ. ಹಾಗಾಗಿ, ಸಾಲೇಮ್ ಎಂಬ ಹೆಸರನ್ನು ಯೆರೂಸಲೇಮ್ ಎಂಬ ಹೆಸರಿನಲ್ಲಿ ಸೇರಿಸಲಾಯಿತು. ಅಷ್ಟೇ ಅಲ್ಲ, ಯೆರೂಸಲೇಮನ್ನು ಕೆಲವೊಮ್ಮೆ “ಸಾಲೇಮ್” ಎಂದು ಸಹ ಕರೆಯಲಾಗಿದೆ.—ಕೀರ್ತ 76:2.
ಅಬ್ರಾಮ (ಅಬ್ರಹಾಮ) ಕೆದೊರ್ಲಗೋಮರನನ್ನು ಮತ್ತು ಅವನೊಂದಿಗೆ ಇದ್ದ ರಾಜರನ್ನು ಸೋಲಿಸಿದ ಮೇಲೆ “ಅರಸನ ತಗ್ಗು” ಅಥವಾ ಶಾವೆ ಎಂಬ ಕಣಿವೆಗೆ ಬಂದನು. ಅಲ್ಲಿ ಮೆಲ್ಕಿಚೆದೇಕನು ಬಂದು ಅವನಿಗೆ ರೊಟ್ಟಿಯನ್ನೂ ದ್ರಾಕ್ಷಾಮದ್ಯವನ್ನೂ ಕೊಟ್ಟನು. ನಂತರ ಅಬ್ರಹಾಮನನ್ನು ಆಶೀರ್ವದಿಸುತ್ತಾ “ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ; ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಇದನ್ನು ಕೇಳಿ, ಅಬ್ರಹಾಮ ಯುದ್ಧದಲ್ಲಿ “ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ” ಅಥವಾ “ತನ್ನ ಮುಖ್ಯ ಸೂರೆಗಳಲ್ಲಿ ಹತ್ತನೆಯ ಒಂದು ಭಾಗವನ್ನು” ಮೆಲ್ಕಿಚೆದೇಕನಿಗೆ ಕೊಟ್ಟನು. —ಆದಿ 14:17-20; ಇಬ್ರಿ 7:4.
(ಇಬ್ರಿಯ 7:3) ತಂದೆಯಿಲ್ಲದವನೂ ತಾಯಿಯಿಲ್ಲದವನೂ ವಂಶಾವಳಿಯಿಲ್ಲದವನೂ ದಿನಗಳ ಆರಂಭವಾಗಲಿ ಜೀವನದ ಅಂತ್ಯವಾಗಲಿ ಇಲ್ಲದವನೂ ಆಗಿರುವ ಇವನು ದೇವರ ಮಗನಿಗೆ ಸಮಾನನಾಗಿ ಮಾಡಲ್ಪಟ್ಟಿರುವುದರಿಂದ ನಿರಂತರವಾಗಿ ಯಾಜಕನಾಗಿ ಉಳಿಯುವನು.
it-2 ಪುಟ 367 ಪ್ಯಾರ 4
ಮೆಲ್ಕಿಚೆದೇಕ
ಮೆಲ್ಕಿಚೆದೇಕ “ದಿನಗಳ ಆರಂಭವಾಗಲಿ ಜೀವನದ ಅಂತ್ಯವಾಗಲಿ ಇಲ್ಲದವನು” ಎಂಬ ಮಾತು ಹೇಗೆ ನಿಜವಾಯಿತು?
“ತಂದೆಯಿಲ್ಲದವನೂ ತಾಯಿಯಿಲ್ಲದವನೂ ವಂಶಾವಳಿಯಿಲ್ಲದವನೂ ದಿನಗಳ ಆರಂಭವಾಗಲಿ ಜೀವನದ ಅಂತ್ಯವಾಗಲಿ ಇಲ್ಲದವನೂ ಆಗಿರುವ ಇವನು ದೇವರ ಮಗನಿಗೆ ಸಮಾನನಾಗಿ ಮಾಡಲ್ಪಟ್ಟಿರುವುದರಿಂದ ನಿರಂತರವಾಗಿ ಯಾಜಕನಾಗಿ ಉಳಿಯುವನು” ಅಂತ ಹೇಳುವ ಮೂಲಕ ಪೌಲ, ಮೆಲ್ಕಿಚೆದೇಕನ ಬಗ್ಗೆ ಒಂದು ಪ್ರಾಮುಖ್ಯವಾದ ವಿಷಯವನ್ನು ತಿಳಿಸಿದನು. (ಇಬ್ರಿ 7:3) ಬೇರೆ ಎಲ್ಲಾ ಮಾನವರ ಹಾಗೆ ಮೆಲ್ಕಿಚೆದೇಕ ಒಂದಿನ ಹುಟ್ಟಿ ಸತ್ತನು. ಆದರೆ ಬೈಬಲಿನಲ್ಲಿ, ಆತನ ತಂದೆತಾಯಿಯ ಹೆಸರುಗಳ ಬಗ್ಗೆ, ಆತನ ವಂಶಾವಳಿಯ ಬಗ್ಗೆ ತಿಳಿಸಲಾಗಿಲ್ಲ. ಆತನ ಜೀವನದ ಆರಂಭದ ದಿನಗಳ ಬಗ್ಗೆ ಆಗಲಿ ಅಥವಾ ಕೊನೆಯ ದಿನಗಳ ಬಗ್ಗೆ ಆಗಲಿ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮೆಲ್ಕಿಚೆದೇಕ ಸದಾಕಾಲಕ್ಕೂ ಯಾಜಕನಾಗಿ ಉಳಿಯುವ ಯೇಸುವನ್ನು ಸೂಕ್ತವಾಗಿ ಪ್ರತಿನಿಧಿಸಿದನು. ಯಾಕೆಂದರೆ ಮೆಲ್ಕಿಚೆದೇಕನ ಪೂರ್ವಜರಲ್ಲಿ ಅಥವಾ ಅವನ ಸಂತತಿಯಲ್ಲಿ ಯಾರೂ ಯಾಜಕರಾಗಿರಲಿಲ್ಲ. ಹಾಗೆಯೇ ಯೇಸುವಿನ ಮುಂಚೆ ಅವನ ತರ ಯಾವ ಮಹಾ ಯಾಜಕನೂ ಇರಲಿಲ್ಲ, ಅವನ ನಂತರ ಸಹ ಇರಲ್ಲ. ಅಷ್ಟೇ ಅಲ್ಲ, ಯೇಸು ಹುಟ್ಟಿದ್ದು ಯೆಹೂದ ಕುಲದಲ್ಲಿ ಮತ್ತು ಅರಸನಾದ ದಾವೀದನ ವಂಶಾವಳಿಯಲ್ಲೇ ಹೊರತು ಯಾಜಕರ ವಂಶಾವಳಿಯಲ್ಲಿ ಅಲ್ಲ. ಹಾಗಾಗಿ ಯೇಸು ಒಬ್ಬ ಯಾಜಕನಾಗಲು ಸಾಧ್ಯವಿರಲಿಲ್ಲ. ಯೇಸುವಿಗೆ ಒಬ್ಬ ಯಾಜಕನಾಗಿ ಮತ್ತು ಅರಸನಾಗಿ ನೇಮಕ ಸಿಕ್ಕಿದ್ದು ತನ್ನ ವಂಶಾವಳಿಯ ಕಾರಣದಿಂದಲ್ಲ. ಬದಲಿಗೆ, ಯೆಹೋವನು ಆತನ ಬಗ್ಗೆ ಕೊಟ್ಟ ಭಾಷೆ ಅಥವಾ ಪ್ರಮಾಣದಿಂದಲೇ ಸಾಧ್ಯವಾಯಿತು.
(ಇಬ್ರಿಯ 7:17) ಅವನ ವಿಷಯದಲ್ಲಿ, “ನೀನು ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿದ್ದೀ” ಎಂದು ಸಾಕ್ಷಿಹೇಳಲ್ಪಟ್ಟಿದೆ.
it-2 ಪುಟ 366
ಮೆಲ್ಕಿಚೆದೇಕ
ಕ್ರಿಸ್ತನ ಯಾಜಕತ್ವದ ಮುನ್ಸೂಚನೆ. ಮೆಸ್ಸೀಯನ ಕುರಿತಾದ ಒಂದು ಪ್ರವಾದನೆಯಲ್ಲಿ ಯೆಹೋವನು ದಾವೀದನ “ಕರ್ತನ” ಬಗ್ಗೆ ಹೀಗೆ ಆಣೆಯಿಟ್ಟು ನುಡಿದನು: “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು.” (ಕೀರ್ತ 110:1, 4) ದೇವರಿಂದ ಪ್ರೇರಿತವಾದ ಈ ಮಾತುಗಳು, ವಾಗ್ದತ್ತ ಮೆಸ್ಸೀಯನು ಒಬ್ಬ ಯಾಜಕನಾಗಿ ಮತ್ತು ಅರಸನಾಗಿ ಕೆಲಸ ಮಾಡುತ್ತಾನೆ ಎಂದು ನಂಬಲು ಇಬ್ರಿಯರಿಗೆ ಒಂದು ಬಲವಾದ ಕಾರಣ ಕೊಟ್ಟಿತು. ಯೇಸುವೇ “ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಮಹಾ ಯಾಜಕನಾಗಿದ್ದಾನೆ” ಅಂತ ಅಪೊಸ್ತಲ ಪೌಲ, ಇಬ್ರಿಯರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದನು.—ಇಬ್ರಿ 6:20; 5:10.
it-1 ಪುಟ 1113 ಪ್ಯಾರ 4-5
ಆರೋನನ ಯಾಜಕತ್ವಕ್ಕಿಂತ ಯೇಸುವಿನ ಯಾಜಕತ್ವ ಹೇಗೆ ಶ್ರೇಷ್ಠವಾಗಿದೆ?
ಯೇಸು ಕ್ರಿಸ್ತನ ಮಹಾ ಯಾಜಕತ್ವ. ಯೇಸು ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋದ ಸಮಯದಿಂದ “ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಮಹಾ ಯಾಜಕನಾಗಿದ್ದಾನೆ” ಅಂತ ಇಬ್ರಿಯ ಪುಸ್ತಕ ತಿಳಿಸುತ್ತೆ. (ಇಬ್ರಿ 6:20; 7:17, 21) ಯೇಸುವಿನ ಯಾಜಕತ್ವ ಯಾವ ವಿಧದಲ್ಲಿ ಆರೋನನ ಯಾಜಕತ್ವಕ್ಕಿಂತ ಶ್ರೇಷ್ಠವಾಗಿತ್ತು? ಮೆಲ್ಕಿಜೆದೇಕನ ತರ ಯೇಸು ಸಹ ಒಬ್ಬ ಯಾಜಕನಾಗಿ ಮತ್ತು ಅರಸನಾಗಿ ಕೆಲಸ ಮಾಡಿದನು. ಆದರೆ ಅವನು ಆ ನೇಮಕವನ್ನು ಅಥವಾ ಸುಯೋಗವನ್ನು ತನ್ನ ವಂಶಾವಳಿಯ ಕಾರಣದಿಂದ ಪಡೆಯಲಿಲ್ಲ. ಯೆಹೋವ ದೇವರೇ ಅವನಿಗೆ ಆ ನೇಮಕ ಕೊಟ್ಟನು. ಯೇಸು ಆರೋನನ ವಂಶಾವಳಿಯಲ್ಲಿ ಹುಟ್ಟಿ ಯಾಜಕನಾಗಲಿಲ್ಲ. ಯಾಕೆಂದರೆ ಲೇವಿಯ ಕುಲದವರು ಮಾತ್ರ ಯಾಜಕರಾಗಬಹುದಿತ್ತು. ಆದರೆ ಯೇಸು ಲೇವಿಯ ಕುಲದಲ್ಲಿ ಅಲ್ಲ ಬದಲಿಗೆ ಯೆಹೂದ ಕುಲದಲ್ಲಿ ಮತ್ತು ದಾವೀದನ ವಂಶಾವಳಿಯಲ್ಲಿ ಹುಟ್ಟಿದ್ದನು. ಮೆಲ್ಕಿಜೆದೇಕನ ತರ ದೇವರೇ ಯೇಸುವನ್ನು ನೇರವಾಗಿ ಮಹಾಯಾಜಕನಾಗಿ ನೇಮಿಸಿದನು. (ಇಬ್ರಿ 5:10) “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ (ಪಶ್ಚಾತ್ತಾಪಪಡುವದಿಲ್ಲ)” ಎಂದು ಕೀರ್ತನೆ 110:4ರಲ್ಲಿ ಯೆಹೋವನು ಕೊಟ್ಟ ಮಾತಿನಂತೆ ಯೇಸು ಒಬ್ಬ ಸ್ವರ್ಗೀಯ ಅರಸ ಮತ್ತು ಯಾಜಕನಾದನು. ಅದಲ್ಲದೆ ಯೇಸು ದಾವೀದನ ವಂಶಾವಳಿಯಲ್ಲಿ ಹುಟ್ಟಿದ ಕಾರಣದಿಂದ ಸಹ ಆತನಿಗೆ ರಾಜ್ಯದ ಅಧಿಕಾರ ಸಿಕ್ಕಿತು. ಯೆಹೋವನು ದಾವೀದನ ಜೊತೆ ಮಾಡಿದ ಒಡಂಬಡಿಕೆಯ ಪ್ರಕಾರ ಅವನ ಸಂತತಿಗೆ ರಾಜ್ಯದ ಅಧಿಕಾರ ಸಿಗಬೇಕಿತ್ತು. ಹಾಗೆಯೇ ಆಯಿತು. (2 ಸಮು 7:11-16) ಯೇಸು ದಾವೀದನ ಸಂತತಿ ಆಗಿದ್ದ ಕಾರಣ ಅಥವಾ ಅವನ ವಂಶಾವಳಿಯಲ್ಲಿ ಹುಟ್ಟಿದ ಕಾರಣ ಅರಸನಾದನು. ಈ ರೀತಿಯಲ್ಲಿ ಯೇಸು ಮೆಲ್ಕಿಜೆದೇಕನ ತರ ಒಬ್ಬ ಅರಸನಾಗಿ ಮತ್ತು ಯಾಜಕನಾದನು.
ಯೇಸುವಿನ ಮಹಾ ಯಾಜಕತ್ವ ಇನ್ನೊಂದು ವಿಧದಲ್ಲೂ ಶ್ರೇಷ್ಠವಾಗಿತ್ತು. ಅದು ಹೇಗೆ? ಅಬ್ರಹಾಮನು ಸಾಲೇಮಿನ ಅರಸನೂ ಯಾಜಕನೂ ಆಗಿದ್ದ ಮೆಲ್ಕಿಜೆದೇಕನಿಗೆ ದಶಮಾಂಶವನ್ನು ಕೊಟ್ಟಿದ್ದನು. ಅಬ್ರಹಾಮನು ಯೆಹೂದಿ ಯಾಜಕತ್ವದ ಮೂಲನಾದ ಲೇವಿಯ ಪೂರ್ವಜನಾಗಿದ್ದ ಕಾರಣ, ಲೇವಿಯೇ ಆ ದಶಮಾಂಶ ಕೊಟ್ಟಂತೆ ಇತ್ತು. ಅಷ್ಟೇ ಅಲ್ಲ, ಆ ಸಮಯದಲ್ಲಿ ಮೆಲ್ಕಿಜೆದೇಕನು ಅಬ್ರಹಾಮನನ್ನು ಆಶೀರ್ವದಿಸಿದನು ಸಹ. ಹಾಗಾಗಿ ಲೇವಿಯನನ್ನು ಕೂಡ ಮೆಲ್ಕಿಜೆದೇಕನು ಆಶೀರ್ವದಿಸಿದನು ಅಂತ ಹೇಳಬಹುದು. ಆಶೀರ್ವಾದ ಪಡೆಯುವವನಿಗಿಂತ ಆಶೀರ್ವಾದ ಕೊಡುವವನು ದೊಡ್ಡವನಾಗಿದ್ದ ಕಾರಣ ಲೇವಿಯಿಂದ ಆರಂಭವಾದ ಯಾಜಕತ್ವಕ್ಕಿಂತ ಮೆಲ್ಕಿಜೆದೇಕನ ಯಾಜಕತ್ವ ಶ್ರೇಷ್ಠವಾದದ್ದು ಅಂತ ಹೇಳಬಹುದು. ಹೀಗೆ ಮೆಲ್ಕಿಜೆದೇಕನ ತರ ಯೇಸುವಿನ ಯಾಜಕತ್ವ ಸಹ ಶ್ರೇಷ್ಠವಾಗಿತ್ತು ಎಂದು ಸ್ಪಷ್ಟವಾಗುತ್ತೆ. (ಇಬ್ರಿ 7:4-10) ಮೆಲ್ಕಿಜೆದೇಕನು ‘ತಂದೆಯಿಲ್ಲದವನೂ ತಾಯಿಯಿಲ್ಲದವನೂ ವಂಶಾವಳಿಯಿಲ್ಲದವನೂ ದಿನಗಳ ಆರಂಭವಾಗಲಿ ಜೀವನದ ಅಂತ್ಯವಾಗಲಿ ಇಲ್ಲದವನೂ ಆಗಿದ್ದನು’ ಅಂತ ಅಪೊಸ್ತಲ ಹೇಳಿದ. ಈ ಮಾತುಗಳು, ಯೇಸು ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋದಾಗ, ಅವನು ನಾಶವಾಗದ ಜೀವನವನ್ನು ಪಡೆದು ಸದಾ ಕಾಲಕ್ಕೂ ಯಾಜಕನಾಗಿ ಕೆಲಸ ಮಾಡುತ್ತಾನೆ ಅಂತ ತೋರಿಸಿದವು.—ಇಬ್ರಿ 7:3, 15-17.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಇಬ್ರಿಯ 8:3) ಪ್ರತಿಯೊಬ್ಬ ಮಹಾ ಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಲು ನೇಮಿಸಲ್ಪಡುತ್ತಾನೆ; ಆದುದರಿಂದ ಅರ್ಪಿಸುವುದಕ್ಕೆ ಇವನಿಗೆ ಸಹ ಏನಾದರೂ ಬೇಕಾಗಿತ್ತು.
w00 8/15 ಪುಟ 14 ಪ್ಯಾರ 11
ದೇವರನ್ನು ಸಂತೋಷಗೊಳಿಸಿದಂತಹ ಯಜ್ಞಗಳು
“ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರುತ್ತಾನಷ್ಟೆ” ಎಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿಯ 8:3) ಪ್ರಾಚೀನ ಇಸ್ರಾಯೇಲಿನಲ್ಲಿದ್ದ ಮಹಾ ಯಾಜಕನ ನೈವೇದ್ಯಗಳನ್ನು ಪೌಲನು ಎರಡು ವರ್ಗಗಳಾಗಿ ವಿಂಗಡಿಸುತ್ತಾನೆಂಬುದನ್ನು ಗಮನಿಸಿರಿ. ಅವು, ‘ಕಾಣಿಕೆಗಳು’ ಮತ್ತು ‘ಯಜ್ಞಗಳು,’ ಅಥವಾ ‘ಪಾಪನಿವಾರಣಕ್ಕಾಗಿ ಯಜ್ಞಗಳು’ ಎಂದಾಗಿದ್ದವು. (ಇಬ್ರಿಯ 5:1) ಸಾಮಾನ್ಯವಾಗಿ ಜನರು ತಮ್ಮ ಪ್ರೀತಿ ಮತ್ತು ಗಣ್ಯತೆಯನ್ನು ವ್ಯಕ್ತಪಡಿಸಲು ಹಾಗೂ ಸ್ನೇಹವನ್ನು ಬೆಳೆಸಿಕೊಳ್ಳಲು, ಅನುಗ್ರಹವನ್ನು ಅಥವಾ ಸ್ವೀಕೃತಿಯನ್ನು ಪಡೆಯಲು ಕಾಣಿಕೆಗಳನ್ನು ಅಥವಾ ಕೊಡುಗೆಗಳನ್ನು ಕೊಡುತ್ತಾರೆ. (ಆದಿಕಾಂಡ 32:20; ಜ್ಞಾನೋಕ್ತಿ 18:16) ಅಂತೆಯೇ, ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿರುವ ಅನೇಕ ನೈವೇದ್ಯಗಳು, ದೇವರ ಅನುಗ್ರಹ ಮತ್ತು ಅಂಗೀಕಾರವನ್ನು ಪಡೆಯಲು ಆತನಿಗೆ ಕೊಡಲ್ಪಡುವ ‘ಕಾಣಿಕೆಗಳಾಗಿ’ ವೀಕ್ಷಿಸಲ್ಪಡಬಹುದು. ಧರ್ಮಶಾಸ್ತ್ರದ ವಿರುದ್ಧ ನಡೆಸಲ್ಪಟ್ಟ ಅಪರಾಧಗಳಿಗಾಗಿ ನಷ್ಟಭರ್ತಿಮಾಡಬೇಕಾಗುತ್ತಿತ್ತು ಮತ್ತು ಕ್ಷಮಾಪಣೆಯನ್ನು ಪಡೆಯಲಿಕ್ಕಾಗಿ ‘ಪಾಪನಿವಾರಣ ಯಜ್ಞಗಳನ್ನು’ ಅರ್ಪಿಸಬೇಕಾಗುತ್ತಿತ್ತು. ಪೆಂಟಟ್ಯೂಕ್, ವಿಶೇಷವಾಗಿ ವಿಮೋಚನಕಾಂಡ, ಯಾಜಕಕಾಂಡ, ಮತ್ತು ಅರಣ್ಯಕಾಂಡ ಪುಸ್ತಕಗಳು ವಿಭಿನ್ನ ರೀತಿಯ ಯಜ್ಞಗಳು ಮತ್ತು ನೈವೇದ್ಯಗಳ ಕುರಿತು ಬಹಳಷ್ಟು ಮಾಹಿತಿಯನ್ನು ಕೊಡುತ್ತವೆ. ಅವುಗಳಲ್ಲಿರುವ ಪ್ರತಿಯೊಂದು ಚಿಕ್ಕಪುಟ್ಟ ವಿವರಗಳನ್ನು ಓದಿ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟಕರವಾಗಿರುವುದಾದರೂ, ಆ ವಿಭಿನ್ನ ಯಜ್ಞಗಳ ಕುರಿತಾದ ಕೆಲವೊಂದು ಮುಖ್ಯ ವಿಷಯಗಳಿಗೆ ನಾವು ಗಮನವನ್ನು ಕೊಡಬಹುದು.
(ಇಬ್ರಿಯ 8:13) “ಒಂದು ಹೊಸ ಒಡಂಬಡಿಕೆ” ಎಂದು ಆತನು ಹೇಳುವಾಗ ಮೊದಲಿದ್ದದ್ದನ್ನು ಹಳೇದಾಗಿ ಮಾಡಿದ್ದಾನೆ. ಹಳೇದಾಗಿ ಮಾಡಲ್ಪಟ್ಟು ಮುದಿಯಾಗುತ್ತಾ ಇರುವಂಥದ್ದು ಈಗ ಇನ್ನೇನು ಅಳಿದುಹೋಗಲಿಕ್ಕಿದೆ.
it-1 ಪುಟ 523 ಪ್ಯಾರ 5
ಒಡಂಬಡಿಕೆ
ಧರ್ಮಶಾಸ್ತ್ರದ ಒಡಂಬಡಿಕೆ ಹೇಗೆ “ಹಳೇದಾಗಿ” ಹೋಯಿತು?
ಯೆಹೋವ ದೇವರು ಯೆರೆಮೀಯನ ಮೂಲಕ ಒಂದು ಹೊಸ ಒಡಂಬಡಿಕೆಯ ಬಗ್ಗೆ ಮುಂತಿಳಿಸಿದಾಗಲೇ, ಧರ್ಮಶಾಸ್ತ್ರದ ಒಡಂಬಡಿಕೆಯು ಒಂದರ್ಥದಲ್ಲಿ “ಹಳೇದಾಗಿ” ಹೋಯಿತು. (ಯೆರೆ 31:31-34; ಇಬ್ರಿ 8:13) ಕ್ರಿ. ಶ. 33ರಲ್ಲಿ ಕ್ರಿಸ್ತನ ಮರಣದ ಆಧಾರದ ಮೇಲೆ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ರದ್ದು ಮಾಡಲಾಯಿತು. (ಕೊಲೊ 2:14) ಅದರ ಬದಲು ಹೊಸ ಒಡಂಬಡಿಕೆ ಜಾರಿಗೆ ಬಂತು.—ಇಬ್ರಿ 7:12; 9:15; ಅ.ಕಾ. 2:1-4.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
it-1 ಪುಟ 524 ಪ್ಯಾರ 3-5
ಒಡಂಬಡಿಕೆ
ಹೊಸ ಒಡಂಬಡಿಕೆ ಅಂದರೇನು?
ಹೊಸ ಒಡಂಬಡಿಕೆ. ಯೆಹೋವನು ಕ್ರಿ.ಪೂ ಏಳನೆಯ ಶತಮಾನದಲ್ಲಿ, ಪ್ರವಾದಿ ಯೆರೆಮೀಯನ ಮೂಲಕ ಒಂದು ಹೊಸ ಒಡಂಬಡಿಕೆಯ ಬಗ್ಗೆ ಮುಂತಿಳಿಸಿದನು. ಈ ಹೊಸ ಒಡಂಬಡಿಕೆ, ಇಸ್ರಾಯೇಲ್ಯರು ಮುರಿದ ಧರ್ಮಶಾಸ್ತ್ರದ ಒಡಂಬಡಿಕೆಯಂತೆ ಇರೋದಿಲ್ಲ ಎಂದು ಹೇಳಿದನು. (ಯೆರೆ 31:31-34) ಯೇಸು ಕ್ರಿಸ್ತ, ತಾನು ಸಾಯುವ ಹಿಂದಿನ ರಾತ್ರಿ (ಕ್ರಿ.ಶ 33, ನೈಸಾನ್ 14) ನಡೆಸಿದ ಸಂಧ್ಯಾ ಭೋಜನದಲ್ಲಿ ಹೊಸ ಒಡಂಬಡಿಕೆಯ ಬಗ್ಗೆ ಹೇಳಿದನು. ತನ್ನ ಯಜ್ಞದ ಆಧಾರದ ಮೇಲೆ ಈ ಒಡಂಬಡಿಕೆ ಸ್ಥಾಪಿಸಲ್ಪಡುವುದು ಎಂದು ಸಹ ತಿಳಿಸಿದನು. (ಲೂಕ 22:20) ಯೇಸು ಪುನರುತ್ಥಾನ ಹೊಂದಿ ಸ್ವರ್ಗದಲ್ಲಿ ಇರುವ ತನ್ನ ತಂದೆಯ ಹತ್ತಿರ ಹೋಗಿ 10 ದಿನಗಳಾದ ಮೇಲೆ , ಯೆರೂಸಲೇಮಿನ ಮೇಲಂತಸ್ತಿನ ಕೋಣೆಯಲ್ಲಿ ಕೂಡಿ ಬಂದಿದ್ದ ತನ್ನ ಶಿಷ್ಯರ ಮೇಲೆ ಯೇಸು, ಪವಿತ್ರಾತ್ಮ ಸುರಿಸಿದನು.— ಅ.ಕಾ 2:1-4,17, 33; 2ಕೊರಿಂ 3:6, 8, 9; ಇಬ್ರಿ 2:3, 4.
ಈ ಹೊಸ ಒಡಂಬಡಿಕೆಯನ್ನು ಯೆಹೋವನು, ತನ್ನ ಮತ್ತು ಅಭಿಷಿಕ್ತ ಕ್ರೈಸ್ತರ (“ದೇವರ ಇಸ್ರಾಯೇಲ್”) ಮಧ್ಯೆ ಮಾಡಿಕೊಂಡನು. (ಇಬ್ರಿ 8:10; 12:22-24; ಗಲಾ 6:15, 16; 3:26-28; ರೋಮ 2:28,29) ಯೇಸು ತನ್ನ ರಕ್ತ ಸುರಿಸಿ (ತನ್ನ ಜೀವ ಕೊಟ್ಟು) ಸ್ವರ್ಗದಲ್ಲಿರುವ ತಂದೆಯ ಬಳಿ ಹೋಗಿ ತನ್ನ ಯಜ್ಞದ ಮೌಲ್ಯವನ್ನು ಅರ್ಪಿಸಿದಾಗ ಈ ಒಡಂಬಡಿಕೆಯು ಜಾರಿಗೆ ಬಂತು. (ಮತ್ತಾ 26:28) ಯೆಹೋವನು ಒಬ್ಬನನ್ನು ಅಭಿಷಿಕ್ತನಾಗಿ ಆರಿಸಿಕೊಂಡಾಗ, ಅವನು ಈ ಒಡಂಬಡಿಕೆಯ ಭಾಗವಾಗುತ್ತಾನೆ. (ಇಬ್ರಿ 3:1; ಕೀರ್ತ 50:5; ಇಬ್ರಿ 9:14, 15, 26) ಯೇಸು ಕ್ರಿಸ್ತನು ಇವರಿಬ್ಬರ ನಡುವೆ ಮಧ್ಯವರ್ತಿಯೂ ಮತ್ತು ಅದೇ ಸಮಯದಲ್ಲಿ ಅಬ್ರಹಾಮನ ಸಂತತಿಯ ಪ್ರಧಾನ ಭಾಗವೂ ಆಗಿದ್ದಾನೆ. (ಇಬ್ರಿ 8:6, 9:15; ಗಲಾ 3:16) ಯೇಸು ಕ್ರಿಸ್ತನನ್ನು ಒಡಂಬಡಿಕೆಯ ಮಧ್ಯಸ್ತನನ್ನಾಗಿ ಇಟ್ಟುಕೊಂಡು, ಅಭಿಷಿಕ್ತರನ್ನು ನೀತಿವಂತರೆಂದು ಪರಿಗಣಿಸುತ್ತಾನೆ. (ರೋಮ 5:1, 2; 8:33; ಇಬ್ರಿ 10:16, 17) ಹೀಗೆ, ಅಬ್ರಹಾಮನ ನಿಜ ಸಂತತಿಯ ಭಾಗವಾಗಲು ಅವರಿಗೆ ಸಹಾಯ ಮಾಡುತ್ತಾನೆ.— ಇಬ್ರಿ 2:16; ಗಲಾ 3:29.
ಈ ಅಭಿಷಿಕ್ತರು, ಮಹಾ ಯಾಜಕನ ಕೆಳಗೆ ಉಪಯಾಜಕರಾಗಿ ಕೆಲಸ ಮಾಡುತ್ತಾರೆ. ಹಾಗಾಗಿ, ‘ರಾಜವಂಶಸ್ಥರಾದ ಯಾಜಕರ’ ಗುಂಪಿನ ಭಾಗವಾಗಿದ್ದಾರೆ. (1ಪೇತ್ರ 2:9; ಪ್ರಕ 5:9, 10; 20:6) ಇವರು ಯಾಜಕರಾಗಿ “ಸಾರ್ವಜನಿಕ ಸೇವೆ” ಮಾಡುತ್ತಾರೆ. (ಫಿಲಿ 2:17) ಇವರನ್ನು “ಹೊಸ ಒಡಂಬಡಿಕೆಯ ಶುಶ್ರೂಷಕರು” ಎಂದು ಸಹ ಕರೆಯಲಾಗುತ್ತೆ. (2ಕೊರಿಂ 3:6) ಇವರು ಕ್ರಿಸ್ತನ ಹೆಜ್ಜೆಯನ್ನು ನಿಕಟವಾಗಿ ಅನುಕರಿಸಬೇಕು, ನಂಬಿಗಸ್ತರಾಗಿ ಇರಬೇಕು, ಸಾಯುವ ತನಕ ತಮ್ಮ ನಂಬಿಗಸ್ತಿಕೆಯನ್ನು ಬಿಟ್ಟುಕೊಡಬಾರದು. ಆಗ ಮಾತ್ರ ಯೆಹೋವನು ಅವರನ್ನು ಯಾಜಕರನ್ನಾಗಿ ಮಾಡುತ್ತಾನೆ. ತನ್ನಂತೆ ಆತ್ಮ ಜೀವಿಗಳನ್ನಾಗಿ ಮಾಡುತ್ತಾನೆ. ಜೊತೆಗೆ ಅಮರವಾದ, ನಾಶವಾಗದ ಜೀವನವನ್ನು ಬಹುಮಾನವಾಗಿ ಕೊಡುತ್ತಾನೆ. ಅಷ್ಟೇ ಅಲ್ಲ, ಸ್ವರ್ಗದಲ್ಲಿ ಯೇಸು ಕ್ರಿಸ್ತನೊಂದಿಗೆ ರಾಜರಾಗಿ ಆಳುವ ಸುಯೋಗವನ್ನು ಸಹ ಯೆಹೋವನು ಅಭಿಷಿಕ್ತರಿಗೆ ಕೊಡುತ್ತಾನೆ. (1ಪೇತ್ರ 2:21; ರೋಮ 6:3, 4; 1ಕೊರಿಂ 15:53; 1ಪೇತ್ರ 1:4; 2ಪೇತ್ರ 1:4) ಯೆಹೋವನ ಜನರಲ್ಲಿ ಕೆಲವರನ್ನು ‘ಅಬ್ರಹಾಮನ ಸಂತತಿಯ’ ಭಾಗವನ್ನಾಗಿ ಮಾಡುವುದೇ ಈ ಒಡಂಬಡಿಕೆಯ ಉದ್ದೇಶ. (ಅ.ಕಾ 15:14) ಇವರು ಯೇಸುವಿನ “ವಧು” ಆಗುವರು ಮತ್ತು ತನ್ನೊಂದಿಗೆ ರಾಜ್ಯವನ್ನು ಆಳಲಿಕ್ಕಾಗಿ ಯೇಸು ಅವರೊಂದಿಗೆ ರಾಜ್ಯದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾನೆ. (ಯೋಹಾ 3:29; 2ಕೊರಿಂ 11:2; ಪ್ರಕ 21:9; ಲೂಕ 22:29; ಪ್ರಕ 1:4-6; 5:9, 10; 20:6) ಎಲ್ಲಾ ಅಭಿಷಿಕ್ತ ಕ್ರೈಸ್ತರು ಪುನರುತ್ಥಾನ ಹೊಂದಿ ಸ್ವರ್ಗದಲ್ಲಿ ಅಮರತ್ವ ಪಡೆಯುವವರೆಗೂ ಈ ಒಡಂಬಡಿಕೆ ಜಾರಿಯಲ್ಲಿ ಇರುತ್ತದೆ. ಈ ಒಡಂಬಡಿಕೆಯ ಉದ್ದೇಶ ನೆರವೇರಿದ ಮೇಲೆ ಸಿಗುವ ಪ್ರಯೋಜನಗಳು ಎಂದಿಗೂ ಮುಗಿಯುವುದೇ ಇಲ್ಲ. ಹಾಗಾಗಿ ಇದನ್ನು “ನಿತ್ಯವಾದ ಒಡಂಬಡಿಕೆ” ಎಂದು ಕರೆಯಬಹುದು.—ಇಬ್ರಿ 13:20.
ಸೆಪ್ಟೆಂಬರ್ 9-15
ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 9-10
“ಬರಲಿರುವ ಒಳ್ಳೇ ವಿಷಯಗಳ ಛಾಯೆ”
(ಇಬ್ರಿಯ 9:12-14) ಆಡುಗಳ ಮತ್ತು ಹೋರಿಕರುಗಳ ರಕ್ತದೊಂದಿಗಲ್ಲ, ತನ್ನ ಸ್ವಂತ ರಕ್ತದೊಂದಿಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸಿ ನಮಗೋಸ್ಕರ ನಿತ್ಯಬಿಡುಗಡೆಯನ್ನು ಪಡೆದುಕೊಂಡನು. 13 ಆಡುಗಳ ಮತ್ತು ಹೋರಿಗಳ ರಕ್ತವೂ ಮಲಿನರಾದವರ ಮೇಲೆ ಪ್ರೋಕ್ಷಿಸಲ್ಪಡುವ ಕಡಸಿನ ಬೂದಿಯೂ ಶರೀರವನ್ನು ಶುದ್ಧಗೊಳಿಸುವಷ್ಟರ ಮಟ್ಟಿಗೆ ಪವಿತ್ರೀಕರಿಸುವುದಾದರೆ, 14 ನಿತ್ಯವಾಗಿ ಕ್ರಿಯೆಗೈಯುವ ಆತ್ಮದ ಮೂಲಕ ಯಾವುದೇ ದೋಷವಿಲ್ಲದೆ ತನ್ನನ್ನು ತಾನೇ ದೇವರಿಗೆ ಅರ್ಪಿಸಿಕೊಂಡ ಕ್ರಿಸ್ತನ ರಕ್ತವು ಜೀವವುಳ್ಳ ದೇವರಿಗೆ ನಾವು ಪವಿತ್ರ ಸೇವೆಯನ್ನು ಸಲ್ಲಿಸಸಾಧ್ಯವಾಗುವಂತೆ ನಮ್ಮ ಮನಸ್ಸಾಕ್ಷಿಗಳನ್ನು ನಿರ್ಜೀವ ಕಾರ್ಯಗಳಿಂದ ಎಷ್ಟೋ ಹೆಚ್ಚಾಗಿ ಶುದ್ಧೀಕರಿಸುತ್ತದಲ್ಲವೆ?
it-1 ಪುಟ 862 ಪ್ಯಾರ 1
ಕ್ಷಮಾಪಣೆ
ಇಸ್ರಾಯೇಲ್ ಜನಾಂಗಕ್ಕೆ ದೇವರು ಕೊಟ್ಟ ಆಜ್ಞೆಯ ಪ್ರಕಾರ, ಒಬ್ಬ ವ್ಯಕ್ತಿ ದೇವರ ಅಥವಾ ಬೇರೆಯವರ ವಿರುದ್ಧ ಪಾಪ ಮಾಡಿದರೆ, ತನ್ನ ಪಾಪಗಳ ಕ್ಷಮಾಪಣೆಗಾಗಿ ಏನು ಮಾಡಬೇಕಿತ್ತು? ಅವನು ಮೊದಲು, ಧರ್ಮಶಾಸ್ತ್ರದಲ್ಲಿ ತಿಳಿಸಿದಂಥ ಹೆಜ್ಜೆಗಳನ್ನು ಪಾಲಿಸುತ್ತಾ ತಾನು ಮಾಡಿದ ತಪ್ಪನ್ನು ತಿದ್ದುಕೊಳ್ಳಬೇಕಿತ್ತು. ನಂತರ, ಅನೇಕ ಸಂದರ್ಭಗಳಲ್ಲಿ, ಪ್ರಾಣಿಗಳ ರಕ್ತವನ್ನು ಯೆಹೋವನಿಗೆ ಯಜ್ಞವಾಗಿ ಅರ್ಪಿಸಬೇಕಿತ್ತು. (ಯಾಜ 5:5–6:7) ಈ ವಿಷಯ, “ಧರ್ಮಶಾಸ್ತ್ರಕ್ಕನುಸಾರ ರಕ್ತದ ಮೂಲಕ ಬಹುಮಟ್ಟಿಗೆ ಎಲ್ಲವೂ ಶುದ್ಧೀಕರಿಸಲ್ಪಡುತ್ತದೆ ಮತ್ತು ರಕ್ತವು ಸುರಿಸಲ್ಪಡದೆ ಕ್ಷಮಾಪಣೆಯು ಉಂಟಾಗುವುದಿಲ್ಲ” ಎಂದು ಪೌಲ ತಿಳಿಸಿದ ತತ್ವದ ಹೊಂದಿಕೆಯಲ್ಲಿ ಇತ್ತು. (ಇಬ್ರಿ 9:22) ಆದರೆ ಪ್ರಾಣಿಗಳ ರಕ್ತಕ್ಕೆ, ನಮ್ಮ ಪಾಪಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ನಮಗೊಂದು ಶುದ್ಧ ಮನಸ್ಸಾಕ್ಷಿ ಕೊಡಲು ಸಾಧ್ಯವಿಲ್ಲ. (ಇಬ್ರಿ 10:1-4; 9:9, 13,14) ಹಾಗಾದರೆ ನಮ್ಮ ಪಾಪಗಳಿಗೆ ನಿಜವಾದ ಕ್ಷಮಾಪಣೆನೇ ಸಿಗಲ್ವಾ? ಸಿಗುತ್ತೆ, ಅನೇಕ ವರ್ಷಗಳ ಹಿಂದೆ ಮುಂತಿಳಿಸಲಾದ ಹೊಸ ಒಡಂಬಡಿಕೆಯಿಂದ ಅದು ಸಾಧ್ಯ. ಹೌದು, ಕ್ರಿಸ್ತನ ವಿಮೋಚನಾ ಮೌಲ್ಯದ ಆಧಾರದ ಮೇಲೆ ನಮ್ಮ ಪಾಪಗಳಿಗೆ ನಿಜವಾದ ಕ್ಷಮಾಪಣೆ ಸಿಗುತ್ತೆ. (ಯೆರೆ 31:33, 34; ಮತ್ತಾ 26:28; 1 ಕೊರಿಂ 11:25; ಎಫೆ 1:7) ಯೇಸು ಭೂಮಿಯಲ್ಲಿ ಇದ್ದಾಗ ಸಹ, ಒಬ್ಬ ಪಾರ್ಶ್ವವಾಯು ರೋಗಿಯನ್ನು ವಾಸಿ ಮಾಡುವ ಮೂಲಕ ಪಾಪಗಳನ್ನು ಕ್ಷಮಿಸುವಂಥ ಅಧಿಕಾರ ತನಗೆ ಇದೆ ಅಂತ ತೋರಿಸಿದ.—ಮತ್ತಾ 9:2-7.
(ಇಬ್ರಿಯ 9:24-26) ಕ್ರಿಸ್ತನು ನಿಜತ್ವದ ನಕಲಾಗಿರುವ ಕೈಗಳಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ ನಮಗೋಸ್ಕರ ದೇವರ ಸಮ್ಮುಖದಲ್ಲಿ ಕಾಣಿಸಿಕೊಳ್ಳಲು ಸ್ವರ್ಗವನ್ನೇ ಪ್ರವೇಶಿಸಿದನು. 25 ಇದಲ್ಲದೆ ಮಹಾ ಯಾಜಕನು ತನ್ನ ಸ್ವಂತದ್ದಲ್ಲದ ರಕ್ತವನ್ನು ತೆಗೆದುಕೊಂಡು ಪ್ರತಿ ವರ್ಷ ಪವಿತ್ರ ಸ್ಥಳವನ್ನು ಪ್ರವೇಶಿಸುವಂತೆ ಕ್ರಿಸ್ತನು ತನ್ನನ್ನು ಅನೇಕ ಬಾರಿ ಅರ್ಪಿಸುವುದಕ್ಕೆ ಸ್ವರ್ಗವನ್ನು ಪ್ರವೇಶಿಸಲಿಲ್ಲ. 26 ಹಾಗಿದ್ದರೆ ಅವನು ಲೋಕದ ಆದಿಯಿಂದ ಅನೇಕ ಬಾರಿ ಕಷ್ಟಾನುಭವಿಸಬೇಕಾಗಿತ್ತು. ಆದರೆ ಈಗ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಅವನು ವಿಷಯಗಳ ವ್ಯವಸ್ಥೆಗಳ ಸಮಾಪ್ತಿಯಲ್ಲಿ ಪಾಪವನ್ನು ತೆಗೆದುಹಾಕುವುದಕ್ಕಾಗಿ ತನ್ನನ್ನು ಯಜ್ಞವಾಗಿ ಅರ್ಪಿಸಿಕೊಳ್ಳುವವನಾಗಿ ಪ್ರತ್ಯಕ್ಷನಾದನು.
‘ನನ್ನನ್ನು ಹಿಂಬಾಲಿಸುತ್ತಾ ಇರಿ’
4 ಸ್ವರ್ಗಕ್ಕೆ ಯೇಸುವಿನ ಆಗಮನ, ಅವನಿಗೆ ದೊರೆತ ಸ್ವಾಗತ ಹಾಗೂ ತಂದೆಯೊಂದಿಗೆ ಅವನ ಪುನರ್ಮಿಲನ ಈ ಬಗ್ಗೆ ಬೈಬಲ್ ಏನನ್ನೂ ತಿಳಿಸದೇ ಮೌನವಹಿಸುತ್ತದೆ. ಆದರೆ ಯೇಸು ಸ್ವರ್ಗಕ್ಕೆ ಹಿಂದಿರುಗಿದ ಕೂಡಲೇ ಏನು ಸಂಭವಿಸುವುದೆಂದು ಬೈಬಲ್ ಮುಂಚೆಯೇ ತಿಳಿಸಿತ್ತು. ಸುಮಾರು 15 ಶತಮಾನಗಳಿಗೂ ಹೆಚ್ಚು ಸಮಯದಿಂದ ಯೆಹೂದ್ಯರು ಕ್ರಮವಾಗಿ ಒಂದು ಪವಿತ್ರ ಆಚರಣೆಯನ್ನು ನಡೆಸುತ್ತಿದ್ದರು. ವರ್ಷ ವರ್ಷವೂ ನಿರ್ದಿಷ್ಟವಾದ ಒಂದು ದಿನದಂದು ಮಹಾ ಯಾಜಕನು ದೇವಾಲಯದ ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಿದ್ದನು. ಅಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ದೋಷಪರಿಹಾರಕ ಯಜ್ಞದ ರಕ್ತವನ್ನು ಚಿಮಿಕಿಸುತ್ತಿದ್ದನು. ಆ ದಿನದಂದು ಮಹಾ ಯಾಜಕನು ಮೆಸ್ಸೀಯನನ್ನು ಮುನ್ಚಿತ್ರಿಸುತ್ತಿದ್ದನು. ಸ್ವರ್ಗಕ್ಕೆ ಹಿಂದಿರುಗಿದ ಬಳಿಕ ಯೇಸು ಆ ಆಚರಣೆಯ ಪ್ರವಾದನಾತ್ಮಕ ಅರ್ಥವನ್ನು ಎಲ್ಲ ಕಾಲಕ್ಕಾಗಿ ಒಂದೇ ಸಾರಿ ನೆರವೇರಿಸಿದನು. ಅವನು ಯೆಹೋವನ ಭವ್ಯ ಸಮ್ಮುಖಕ್ಕೆ ಅಂದರೆ ವಿಶ್ವದಲ್ಲೇ ಅತಿ ಪರಿಶುದ್ಧವಾದ ಸ್ಥಳಕ್ಕೆ ಬಂದು ತನ್ನ ವಿಮೋಚನಾ ಯಜ್ಞದ ಮೌಲ್ಯವನ್ನು ತಂದೆಗೆ ಒಪ್ಪಿಸಿದನು. (ಇಬ್ರಿಯ 9:11, 12, 24) ಯೆಹೋವನದನ್ನು ಸ್ವೀಕರಿಸಿದನೋ?
(ಇಬ್ರಿಯ 10:1-4) ಧರ್ಮಶಾಸ್ತ್ರವು ಬರಲಿರುವ ಒಳ್ಳೆಯ ವಿಷಯಗಳ ಛಾಯೆಯಾಗಿದೆಯೇ ಹೊರತು ಅವುಗಳ ನಿಜರೂಪವಲ್ಲವಾದ್ದರಿಂದ ನಿರಂತರವಾಗಿ ಪ್ರತಿ ವರ್ಷ ಅರ್ಪಿಸುವ ಒಂದೇ ವಿಧವಾದ ಯಜ್ಞಗಳ ಮೂಲಕ ದೇವರ ಸಮೀಪಕ್ಕೆ ಬರುವವರನ್ನು ಮನುಷ್ಯರು ಎಂದಿಗೂ ಪರಿಪೂರ್ಣಗೊಳಿಸಲಾರರು. 2 ಪರಿಪೂರ್ಣಗೊಳಿಸುತ್ತಿದ್ದ ಪಕ್ಷದಲ್ಲಿ ಯಜ್ಞಾರ್ಪಣೆಗಳು ನಿಂತುಹೋಗುತ್ತಿದ್ದವಲ್ಲವೆ? ಏಕೆಂದರೆ ಪವಿತ್ರ ಸೇವೆಯನ್ನು ಸಲ್ಲಿಸುವವರು ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ ಅವರಿಗೆ ಮುಂದೆಂದೂ ಪಾಪಗಳ ಪ್ರಜ್ಞೆಯಿರುತ್ತಿರಲಿಲ್ಲ, ಅಲ್ಲವೆ? 3 ಇದಕ್ಕೆ ವ್ಯತಿರಿಕ್ತವಾಗಿ ಈ ಯಜ್ಞಗಳ ಮೂಲಕ ಪ್ರತಿ ವರ್ಷ ಪಾಪಗಳ ಜ್ಞಾಪಕ ಉಂಟಾಗುತ್ತದೆ; 4 ಏಕೆಂದರೆ ಹೋರಿಗಳ ಮತ್ತು ಆಡುಗಳ ರಕ್ತದಿಂದ ಪಾಪಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ.
it-2 ಪುಟ 602-603
ಪರಿಪೂರ್ಣತೆ
ಧರ್ಮಶಾಸ್ತ್ರದ ಪರಿಪೂರ್ಣತೆ. ದೇವರು ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಅನೇಕ ಏರ್ಪಾಡುಗಳು ಇದ್ದವು. ಅದರಲ್ಲಿ ಯಾಜಕತ್ವದ ಸ್ಥಾಪನೆ ಮತ್ತು ಪ್ರಾಣಿ ಯಜ್ಞಗಳನ್ನು ಅರ್ಪಿಸುವುದು ಸಹ ಸೇರಿತ್ತು. ಆ ಧರ್ಮಶಾಸ್ತ್ರ ದೇವರಿಂದ ಬಂದ ಕಾರಣ ಪರಿಪೂರ್ಣವಾಗಿತ್ತು. ಆದರೆ ಧರ್ಮಶಾಸ್ತ್ರ ಆಗಲಿ, ಅದರ ಯಾಜಕತ್ವ ಆಗಲಿ ಅಥವಾ ಪ್ರಾಣಿ ಯಜ್ಞಗಳಾಗಲಿ ಯಾವುದೂ ಧರ್ಮಶಾಸ್ತ್ರದ ಕೆಳಗಿದ್ದ ಜನರಿಗೆ ಪರಿಪೂರ್ಣತೆ ತರಲಿಲ್ಲ ಅಂತ ಬೈಬಲ್ ಹೇಳುತ್ತೆ. (ಇಬ್ರಿ 7:11,19; 10:1) ಆ ಧರ್ಮಶಾಸ್ತ್ರ, ಜನರನ್ನು ಪಾಪ ಮತ್ತು ಮರಣದಿಂದ ಬಿಡಿಸುವ ಬದಲು ಅವರು ಯಾವೆಲ್ಲ ವಿಧಗಳಲ್ಲಿ ಪಾಪ ಮಾಡುತ್ತಿದ್ದಾರೆ ಅನ್ನೋದನ್ನು ಎತ್ತಿ ತೋರಿಸುತ್ತಿತ್ತು. (ರೋಮ 3:20; 7:7-13) ಆದರೂ ಈ ಧರ್ಮಶಾಸ್ತ್ರ ಜನರನ್ನು ಕ್ರಿಸ್ತನ ಬಳಿಗೆ ನಡಿಸುವ “ಪಾಲಕನಾಗಿ” ಕೆಲಸಮಾಡಿತು. ಹೀಗೆ ಅದು, ‘ಬರಲಿರುವ ಒಳ್ಳೆಯ ವಿಷಯಗಳ ಛಾಯೆಯಾಗಿತ್ತು.’ (ಗಲಾ 3:19-25; ಇಬ್ರಿ 10:1) ಪೌಲ, ‘ಶರೀರಭಾವದಿಂದ ಬಲಹೀನವಾಗಿದ್ದ ಧರ್ಮಶಾಸ್ತ್ರಕ್ಕೆ ಮಾಡಲು ಸಾಧ್ಯವಾಗದ’ ವಿಷಯದ ಬಗ್ಗೆ ಮಾತಾಡುವಾಗ ಶಾರೀರಿಕ ಯೆಹೂದಿ ಮಹಾ ಯಾಜಕನಿಗೆ ಮಾಡಲು ಸಾಧ್ಯವಾಗದ ವಿಷಯವನ್ನು ಸೂಚಿಸಿ ಮಾತಾಡುತ್ತಿದ್ದನು (ಈ ಯಾಜಕ ಯಜ್ಞದ ಏರ್ಪಾಡುಗಳನ್ನು ನೋಡಿಕೊಳ್ಳುವಂತೆ ಧರ್ಮಶಾಸ್ತ್ರದಿಂದ ನೇಮಿಸಲ್ಪಟ್ಟಿದ್ದನು ಮತ್ತು ದೋಷಪರಿಹಾರಕ ದಿನದಂದು ಯಜ್ಞದ ರಕ್ತವನ್ನು ಅತಿ ಪವಿತ್ರ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದನು). (ರೋಮ 8:3) ಆ ಮಹಾ ಯಾಜಕನಿಗೆ, ತಾನು ಯಾರಿಗೆ ಸೇವೆ ಸಲ್ಲಿಸುತ್ತಿದ್ದನೋ ಅವರನ್ನೇ ‘ಸಂಪೂರ್ಣವಾಗಿ ರಕ್ಷಿಸಲು’ ಸಾಧ್ಯವಾಗಲಿಲ್ಲ ಅಂತ ಇಬ್ರಿಯ 7:11, 18-28 ವಿವರಿಸುತ್ತೆ. ಆ ಯಾಜಕತ್ವದ ಮೂಲಕ ಅರ್ಪಿಸುವಂಥ ಯಜ್ಞಗಳು ದೇವರ ಮುಂದೆ ಒಂದು ಒಳ್ಳೆಯ ನಿಲುವನ್ನು ಕಾಪಾಡಿಕೊಳ್ಳಲು ಜನರಿಗೆ ಸಹಾಯ ಮಾಡುತ್ತಿದ್ದವು ನಿಜ. ಆದರೆ ಅವರು ಪಾಪಿಗಳು ಅಂತ ಈ ಯಜ್ಞಗಳು ಪದೇ ಪದೇ ನೆನಪಿಸುತ್ತಿದ್ದವು. ಇದರ ಬಗ್ಗೆ ಮಾತಾಡುತ್ತಾ ಪೌಲ, ಯಜ್ಞಗಳು ‘ದೇವರ ಸಮೀಪಕ್ಕೆ ಬರುವವರನ್ನು (ಅಂದರೆ ಅವರ ಮನಸ್ಸಾಕ್ಷಿಗಳನ್ನು) ಎಂದಿಗೂ ಪರಿಪೂರ್ಣಗೊಳಿಸಲಾರವು’ ಅಂತ ಹೇಳಿದನು. (ಇಬ್ರಿ 10:1-4; 9:9ಅನ್ನು ಹೋಲಿಸಿ.) ಮಹಾ ಯಾಜಕನಿಗೆ, ಜನರನ್ನು ಪಾಪದಿಂದ ಬಿಡಿಸಲು ಬೇಕಾದ ವಿಮೋಚನಾ ಮೌಲ್ಯ ಒದಗಿಸಲು ಆಗಲಿಲ್ಲ. ಕ್ರಿಸ್ತನ ಶಾಶ್ವತ ಯಾಜಕತ್ವ ಮತ್ತು ಆತನು ಅರ್ಪಿಸಿದ ಯಜ್ಞದಿಂದ ಮಾತ್ರ ಇದು ಸಾಧ್ಯ.—ಇಬ್ರಿ 9:14; 10:12-22.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಇಬ್ರಿಯ 9:16, 17) ಒಡಂಬಡಿಕೆಯು ಇರಬೇಕಾಗಿರುವಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡಂಥ ಮಾನವನ ಮರಣದ ನಿದರ್ಶನೆಯು ಒದಗಿಸಲ್ಪಡಬೇಕು. 17 ಬಲಿಯನ್ನು ಅರ್ಪಿಸಿದಾಗಲೇ ಒಂದು ಒಡಂಬಡಿಕೆಯು ವಿಧಿಬದ್ಧವಾಗುತ್ತದೆ, ಏಕೆಂದರೆ ಒಡಂಬಡಿಕೆಯನ್ನು ಮಾಡಿದವನು ಜೀವದಿಂದಿರುವ ವರೆಗೆ ಅದು ಜಾರಿಗೆ ಬರುವುದಿಲ್ಲ.
w92 6/1 ಪುಟ 31 ಪ್ಯಾರ 4-6
ವಾಚಕರಿಂದ ಪ್ರಶ್ನೆಗಳು
ದೇವರ ಮತ್ತು ಮನುಷ್ಯರ ನಡುವಣ ಒಡಂಬಡಿಕೆಗಳನ್ನು ಸ್ಥಿರೀಕರಿಸಲು ಒಂದು ಮರಣದ ಅಗತ್ಯವಿತ್ತೆಂದು ಪೌಲನು ತಿಳಿಸಿದ್ದಾನೆ. ನಿಯಮದೊಡಂಬಡಿಕೆಯು ಒಂದು ಮಾದರಿಯಾಗಿದೆ. ಮೋಶೆಯು ಅದರ ಮಧ್ಯಸ್ಥನು, ದೇವರ ಮತ್ತು ಮಾಂಸಿಕ ಇಸ್ರಾಯೇಲ್ಯರ ನಡುವಣ ಈ ಒಪ್ಪಂದವನ್ನು ಪೂರೈಸಿದವನು. ಮೋಶೆಯು ಹೀಗೆ ನಿರ್ಣಾಯಕ ಪಾತ್ರವನ್ನು ವಹಿಸಿದನು ಮತ್ತು ಇಸ್ರಾಯೇಲ್ಯರು ಒಡಂಬಡಿಕೆಯೊಳಗೆ ಬರುವಾಗ ಅವರೊಂದಿಗೆ ವ್ಯವಹಾರ ಮಾಡಿದ್ದ ಮನುಷ್ಯನು ಅವನು. ಹೀಗೆ ಯೆಹೋವನು ಮಾಡಿದ್ದ ನಿಯಮದೊಡಂಬಡಿಕೆಗೆ ಮೋಶೆಯನ್ನು ಮಾನವ ಒಡಂಬಡಿಕೆಗಾರನಾಗಿ ನೋಡ ಸಾಧ್ಯವಿದೆ. ಆದರೆ ಆ ನಿಯಮದೊಡಂಬಡಿಕೆಯು ಜಾರಿಗೆ ಬರಬೇಕಾದರೆ ಮೋಶೆಗೆ ತನ್ನ ಜೀವರಕ್ತವನ್ನು ಸುರಿಸಬೇಕಿತ್ತೋ? ಇಲ್ಲ. ಅದಕ್ಕೆ ಬದಲಿಗೆ ಪಶುಗಳು ನೀಡಲ್ಪಟ್ಟವು, ಅವುಗಳ ರಕ್ತವು ಮೋಶೆಯ ರಕ್ತಕ್ಕೆ ಬದಲಿಯಾಗಿ ನಿಂತವು.—ಇಬ್ರಿಯ 9:18-22.
ಯೆಹೋವ ಮತ್ತು ಆತ್ಮಿಕ ಇಸ್ರಾಯೇಲ್ ಜನಾಂಗದ ನಡುವೆ ಮಾಡಲ್ಪಟ್ಟ ಹೊಸ ಒಡಂಬಡಿಕೆಯ ಕುರಿತೇನು? ಆತ್ಮಿಕ ಇಸ್ರಾಯೇಲ್ಯರ ಮತ್ತು ಯೆಹೋವನ ನಡುವೆ ಮಧ್ಯಸ್ಥಗಾರನಾಗಿ, ಮಧ್ಯಸಿಕ್ಥೆ ಮಾಡುವ ಮಹತ್ತಾದ ಪಾತ್ರವು ಕ್ರಿಸ್ತ ಯೇಸುವಿದ್ದಾಗಿತ್ತು. ಯೆಹೋವ ದೇವರು ಈ ಒಡಂಬಡಿಕೆಯ ಮೂಲಕರ್ತನಾಗಿದ್ದರೂ, ಅದು ಕ್ರಿಸ್ತನ ಮೇಲೆ ಆಧಾರಿಸಿತ್ತು. ಯೇಸು ಅದರ ಮಧ್ಯಸ್ಥನು ಮಾತ್ರವಲ್ಲದೆ, ಯಾರು ಈ ಒಡಂಬಡಿಕೆಯೊಳಗೆ ಪ್ರಥಮವಾಗಿ ತಕ್ಕೊಳ್ಳಲ್ಪಡಲಿದ್ದರೋ ಅವರೊಂದಿಗೆ ಆತನು ದೈಹಿಕವಾಗಿ ನೇರ ವ್ಯವಹಾರವನ್ನು ಮಾಡಿದ್ದನು. (ಲೂಕ 22:20, 28, 29) ಅದಲ್ಲದೆ ಆ ಒಡಂಬಡಿಕೆಯನ್ನು ಸ್ಥಿರೀಕರಿಸಲು ಬೇಕಾದ ಯಜ್ಞವನ್ನು ಒದಗಿಸಲಿಕ್ಕೆ ಅವನು ಯೋಗ್ಯತೆ ಪಡೆದಿದ್ದನು. ಈ ಯಜ್ಞವು ಕೇವಲ ಪಶುಗಳದ್ದಲ್ಲ, ಬದಲಿಗೆ ಒಂದು ಪರಿಪೂರ್ಣ ಮಾನವ ಜೀವದ್ದಾಗಿದೆ. ಆದ್ದರಿಂದ ಪೌಲನು ಕ್ರಿಸ್ತನಿಗೆ ಹೊಸ ಒಡಂಬಡಿಕೆಯ ಮಾನವ ಒಡಂಬಡಿಕೆಗಾರನೆಂಬದಾಗಿ ಸೂಚಿಸ ಸಾಧ್ಯವಾಯಿತು. “ಕ್ರಿಸ್ತನು. . . ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವುದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದಾಗ” ಆ ಹೊಸ ಒಡಂಬಡಿಕೆಯು ಸ್ಥಿರೀಕರಿಸಲ್ಪಟ್ಟಿತು.—ಇಬ್ರಿಯ 9:12-14, 24.
ಮೋಶೆ ಮತ್ತು ಯೇಸುವನ್ನು ಮಾನವ ಒಡಂಬಡಿಕೆಗಾರರೆಂದು ಹೇಳುವಲ್ಲಿ, ಅವರಲ್ಲಿ ಯಾರಾದರೂ ಅವರವರ ಒಡಂಬಡಿಕೆಗಳ ಮೂಲಕರ್ತರಾಗಿದ್ದರೆಂದು ಪೌಲನು ಸೂಚಿಸುವುದಿಲ್ಲ. ಕಾರ್ಯತಃ ದೇವರು ಅವುಗಳ ಮೂಲಕರ್ತನು. ಬದಲಿಗೆ ಆ ಇಬ್ಬರು ಮಾನವರು ಅವರವರ ಒಡಂಬಡಿಕೆಗಳನ್ನು ಪೂರೈಸುವುದರಲ್ಲಿ ಮಧ್ಯಸ್ಥರಾಗಿ ಅದರಲ್ಲಿ ನಿಕಟವಾಗಿ ಒಳಗೂಡಿದ್ದರು. ಮತ್ತು ಪ್ರತಿ ಸಂದರ್ಭದಲ್ಲಿ, ಒಂದು ಮರಣದ ಅಗತ್ಯವಿತ್ತು—ಮೋಶೆಗಾಗಿ ಪಶುಗಳು ಬದಲಿಯಾಗಿದ್ದವು, ಮತ್ತು ಯೇಸು ಹೊಸ ಒಡಂಬಡಿಕೆಯಲ್ಲಿರುವವರಿಗಾಗಿ ತನ್ನ ಸ್ವಂತ ಜೀವರಕ್ತವನ್ನು ನೀಡಿದ್ದನು.
(ಇಬ್ರಿಯ 10:5-7) ಆದುದರಿಂದ ಅವನು ಲೋಕಕ್ಕೆ ಬರುವಾಗ ಹೀಗೆ ಹೇಳುತ್ತಾನೆ: “‘ಯಜ್ಞಗಳನ್ನೂ ಕಾಣಿಕೆಗಳನ್ನೂ ನೀನು ಬಯಸಲಿಲ್ಲ, ಆದರೆ ನೀನು ನನಗಾಗಿ ದೇಹವನ್ನು ಸಿದ್ಧಮಾಡಿದಿ. 6 ನೀನು ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ಅಂಗೀಕರಿಸಲಿಲ್ಲ.’ 7 ಆಗ ನಾನು, ‘ಇಗೋ ದೇವರೇ, ನಾನು (ಗ್ರಂಥದ ಸುರುಳಿಯಲ್ಲಿ ನನ್ನ ಕುರಿತು ಬರೆಯಲಾಗಿದೆ) ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ’ ಎಂದು ಹೇಳಿದೆನು.”
it-1 ಪುಟ 249-250
ದೀಕ್ಷಾಸ್ನಾನ
ಯೇಸು ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಪ್ರಾರ್ಥಿಸುತ್ತಿದ್ದನು ಅಂತ ಲೂಕ ಹೇಳಿದ. (ಲೂಕ 3:21) ಇಬ್ರಿಯ ಪುಸ್ತಕದಲ್ಲಿ, ಯೇಸು ಕ್ರಿಸ್ತನು “ಲೋಕಕ್ಕೆ” ಬಂದಾಗ ಕೀರ್ತನೆ 40:6- 8ರಲ್ಲಿ ಇರುವ ಮಾತುಗಳನ್ನು ಹೇಳಿದನು ಅಂತ ಪೌಲ ತಿಳಿಸಿದ. (“ಲೋಕಕ್ಕೆ ಬಂದಾಗ” ಎಂಬ ಪದ ಯೇಸು ದೀಕ್ಷಾಸ್ನಾನದ ಸಮಯದಲ್ಲಿ ತನ್ನನ್ನು ದೇವರಿಗೆ ಅರ್ಪಿಸಿ ಸೇವೆಯನ್ನು ಆರಂಭಿಸಿದ ಸಮಯಕ್ಕೆ ಸೂಚಿಸುತ್ತೆ. ಬದಲಿಗೆ ಯೇಸು ಹುಟ್ಟಿದ ಸಮಯಕ್ಕೆ ಸೂಚಿಸುವುದಿಲ್ಲ. ಯಾಕೆಂದರೆ ಯೇಸುವಿಗೆ ಆ ಸಮಯದಲ್ಲಿ ಓದಿ ಹೇಳಲು ಬರುತ್ತಿರಲಿಲ್ಲ). ಯೇಸು, “ಯಜ್ಞಗಳನ್ನೂ ಕಾಣಿಕೆಗಳನ್ನೂ ನೀನು ಬಯಸಲಿಲ್ಲ, ಆದರೆ ನೀನು ನನಗಾಗಿ ದೇಹವನ್ನು ಸಿದ್ಧಮಾಡಿದಿ . . . ಇಗೋ ದೇವರೇ, ನಾನು (ಗ್ರಂಥದ ಸುರುಳಿಯಲ್ಲಿ ನನ್ನ ಕುರಿತು ಬರೆಯಲಾಗಿದೆ) ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ” ಅಂತ ಹೇಳಿದ. (ಇಬ್ರಿ 10:5-9) ಯೇಸು ಹುಟ್ಟಿನಿಂದಲೇ ಯೆಹೂದಿ ಜನಾಂಗದ ಸದಸ್ಯನಾಗಿದ್ದನು. ಆ ಜನಾಂಗ ದೇವರೊಂದಿಗೆ ಒಂದು ಒಡಂಬಡಿಕೆ (ಧರ್ಮಶಾಸ್ತ್ರದ ಒಡಂಬಡಿಕೆ) ಮಾಡಿಕೊಂಡಿತ್ತು. (ವಿಮೋ 19:5-8; ಗಲಾ 4:4) ಹಾಗಾಗಿ ಯೇಸು ಸಹ ಯೆಹೋವನೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿ ಈಗಾಗಲೇ ಇದ್ದನು. ಆದರೆ ದೀಕ್ಷಾಸ್ನಾನದ ಸಮಯದಲ್ಲಿ ಯೇಸು ಧರ್ಮಶಾಸ್ತ್ರ ಅವನಿಂದ ಏನು ಕೇಳಿಕೊಂಡಿತೋ ಅದಕ್ಕಿಂತ ಹೆಚ್ಚಿನದ್ದನ್ನು ಮಾಡಿದನು. ಅವನು ತನ್ನ ತಂದೆಯಾದ ಯೆಹೋವನ “ಚಿತ್ತವನ್ನು” ಮಾಡಲು ತನ್ನನ್ನು ತಾನೆ ಅರ್ಪಿಸಿದನು. ಹೇಗೆ? ಎರಡು ರೀತಿಯಲ್ಲಿ. ಮೊದಲನೇದಾಗಿ ಯೇಸು, ಧರ್ಮಶಾಸ್ತ್ರಕ್ಕನುಸಾರ ಪ್ರಾಣಿ ಯಜ್ಞಗಳನ್ನು ಅರ್ಪಿಸುವ ಅವಶ್ಯಕತೆಯನ್ನು ತೆಗೆದು ಹಾಕಲು, ಯೆಹೋವನು ‘ಸಿದ್ಧಮಾಡಿದ’ ತನ್ನ ಸ್ವಂತ ದೇಹವನ್ನು ಅರ್ಪಿಸಿದನು. ಇದರ ಕುರಿತು “ಮುಂತಿಳಿಸಲ್ಪಟ್ಟಿರುವ ಆ ‘ಚಿತ್ತದಿಂದಾಗಿ’ ಯೇಸು ಕ್ರಿಸ್ತನ ದೇಹವನ್ನು ಅರ್ಪಿಸುವ ಮೂಲಕ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ನಾವು ಪವಿತ್ರೀಕರಿಸಲ್ಪಟ್ಟಿದ್ದೇವೆ” ಅಂತ ಪೌಲ ಹೇಳಿದ. (ಇಬ್ರಿ 10:10) ಎರಡನೇದಾಗಿ, ದೇವರ ಸೇವೆ ಮಾಡಲು, ಆತನ ರಾಜ್ಯದ ಸುವಾರ್ತೆ ಸಾರಲು ತನ್ನನ್ನು ತಾನೆ ಅರ್ಪಿಸಿದ. (ಲೂಕ 4:43; 17:20,21) ಯೆಹೋವನು ತನ್ನ ಮಗನ ಆ ಅರ್ಪಣೆಯನ್ನು ಸ್ವೀಕರಿಸಿ, ಅವನನ್ನು ಪವಿತ್ರಾತ್ಮದಿಂದ ಅಭಿಷೇಕಿಸುತ್ತಾ “ನೀನು ಪ್ರಿಯನಾಗಿರುವ ನನ್ನ ಮಗನು; ನಾನು ನಿನ್ನನ್ನು ಮೆಚ್ಚಿದ್ದೇನೆ” ಅಂತ ಹೇಳಿದನು.—ಮಾರ್ಕ 1:9-11; ಲೂಕ 3:21-23; ಮತ್ತಾ 3:13-17.
ಸೆಪ್ಟೆಂಬರ್ 16-22
ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 11
“ನಂಬಿಕೆಯ ಪ್ರಾಮುಖ್ಯತೆ”
(ಇಬ್ರಿಯ 11:1) ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯೂ ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ.
ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
6 ನಂಬಿಕೆಯ ಅರ್ಥವನ್ನು ಇಬ್ರಿಯ 11:1 (ಓದಿ) ಎರಡು ವಿಧಗಳಲ್ಲಿ ವಿವರಿಸುತ್ತದೆ. (1) ನಂಬಿಕೆಯು “ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಆಗಿದೆ. ಭವಿಷ್ಯದಲ್ಲಿ ನೆರವೇರುವ ದೇವರ ವಾಗ್ದಾನಗಳು ನಾವು “ನಿರೀಕ್ಷಿಸುವ” ವಿಷಯಗಳಲ್ಲಿ ಸೇರಿವೆ. ಉದಾಹರಣೆಗೆ, ಕೆಟ್ಟ ಸಂಗತಿಗಳು ಕೊನೆಯಾಗುತ್ತವೆಂದು ಮತ್ತು ಹೊಸ ಲೋಕ ಬಂದೇ ಬರುತ್ತದೆಂದು ನಮಗೆ ಗೊತ್ತು. (2) ನಂಬಿಕೆಯು “ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನ” ಅಂದರೆ ಮನಗಾಣಿಸುವ ರುಜುವಾತಾಗಿದೆ. ಯೆಹೋವ ದೇವರನ್ನು, ಯೇಸು ಕ್ರಿಸ್ತನನ್ನು, ದೇವದೂತರನ್ನು, ಪರಲೋಕರಾಜ್ಯವನ್ನು ನಾವು ನೋಡಿಲ್ಲ. ಆದರೂ ನಂಬುತ್ತೇವೆ. (ಇಬ್ರಿ. 11:3) ದೇವರ ವಾಗ್ದಾನಗಳಲ್ಲಿ ಮತ್ತು ಕಾಣದಿರುವ ವಿಷಯಗಳಲ್ಲಿ ನಮಗೆ ನಿಜವಾಗಲೂ ನಂಬಿಕೆ ಇದೆ ಎಂದು ಹೇಗೆ ತೋರಿಸಬಹುದು? ನಮ್ಮ ಜೀವನ ರೀತಿಯಿಂದ ಮತ್ತು ನಮ್ಮ ನಡೆ-ನುಡಿಯಿಂದ ನಾವಿದನ್ನು ತೋರಿಸಬಹುದು.
(ಇಬ್ರಿಯ 11:6) ಇದಲ್ಲದೆ, ನಂಬಿಕೆಯಿಲ್ಲದೆ ಆತನನ್ನು ಮೆಚ್ಚಿಸುವುದು ಅಸಾಧ್ಯ; ಏಕೆಂದರೆ ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ ಎಂದೂ ನಂಬಬೇಕು.
w13 E 11/1 ಪುಟ 11 ಪ್ಯಾರ 2-5
‘ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವಾತನು’
ಯೆಹೋವನನ್ನು ಹೇಗೆ ಮೆಚ್ಚಿಸಬಹುದು? “ನಂಬಿಕೆಯಿಲ್ಲದೆ ಆತನನ್ನು (ದೇವರನ್ನು) ಮೆಚ್ಚಿಸುವುದು ಅಸಾಧ್ಯ” ಅಂತ ಪೌಲ ಬರೆದ. ಇಲ್ಲಿ ಪೌಲ, ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಕಷ್ಟ ಅಂತ ಹೇಳುತ್ತಿಲ್ಲ. ಬದಲಿಗೆ ಅದು ಅಸಾಧ್ಯ ಅಂತ ಹೇಳುತ್ತಿದ್ದಾನೆ. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ದೇವರ ಮೆಚ್ಚಿಗೆ ಪಡೆಯಲು ನಂಬಿಕೆ ತುಂಬಾ ಪ್ರಾಮುಖ್ಯ.
ಯೆಹೋವನನ್ನು ಮೆಚ್ಚಿಸಲು ಎಂಥ ನಂಬಿಕೆ ಬೇಕು? ನಮ್ಮ ನಂಬಿಕೆಯಲ್ಲಿ ಎರಡು ಅಂಶಗಳು ಸೇರಿರಬೇಕು. ಮೊದಲನೇದಾಗಿ, ‘ಆತನು ಇದ್ದಾನೆ ಎಂದು ನಂಬಬೇಕು.’ ದೇವರು ಇದ್ದಾನೋ ಇಲ್ವೋ ಅಂತ ಸಂಶಯಪಟ್ಟರೆ, ಆತನನ್ನು ಹೇಗೆ ತಾನೆ ಮೆಚ್ಚಿಸಲು ಸಾಧ್ಯ? ನಂಬಿಕೆ ತೋರಿಸುವುದರಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ. ಯಾಕೆಂದರೆ ದೆವ್ವಗಳು ಸಹ ಯೆಹೋವ ದೇವರು ಇದ್ದಾನೆ ಎಂದು ನಂಬುತ್ತವೆ. (ಯಾಕೋಬ 2:19) ಹಾಗಾಗಿ, ದೇವರು ಒಬ್ಬ ನೈಜ್ಯ ವ್ಯಕ್ತಿ ಎಂದು ನಂಬಿದರೆ ಮಾತ್ರ ಸಾಕಾಗಲ್ಲ, ನಮ್ಮ ಕ್ರಿಯೆಯಲ್ಲೂ ತೋರಿಸಬೇಕು. ಅಂದರೆ, ದೇವರು ಮೆಚ್ಚುವಂಥ ರೀತಿಯಲ್ಲಿ ಜೀವಿಸುವ ಮೂಲಕ ನಮಗೆ ನಂಬಿಕೆ ಇದೆ ಅಂತ ತೋರಿಸಬೇಕು.—ಯಾಕೋಬ 2:20, 26.
ಎರಡನೇದಾಗಿ, ದೇವರು ‘ಪ್ರತಿಫಲಕೊಡುವವನಾಗಿದ್ದಾನೆ ಎಂದು ನಂಬಬೇಕು’. ನಿಜ ನಂಬಿಕೆ ಇರುವ ವ್ಯಕ್ತಿ, ದೇವರು ಮೆಚ್ಚುವಂಥ ರೀತಿಯಲ್ಲಿ ಜೀವಿಸಲು ತಾನು ಹಾಕುವ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ ಅಂತ ಅರ್ಥಮಾಡಿಕೊಳ್ಳುತ್ತಾನೆ. (1 ಕೊರಿಂಥ 15:58) ನಮಗೆ ಪ್ರತಿಫಲ ಕೊಡಲು ದೇವರಿಗೆ ಇರುವ ಸಾಮರ್ಥ್ಯ ಅಥವಾ ಬಯಕೆಯ ಬಗ್ಗೆ ಸಂಶಯಪಟ್ಟರೆ ನಾವು ಆತನನ್ನು ಮೆಚ್ಚಿಸಲು ಸಾಧ್ಯನಾ? (ಯಾಕೋಬ 1:17; 1 ಪೇತ್ರ 5:7) ದೇವರಲ್ಲಿ ಕಾಳಜಿ, ಗಣ್ಯತೆ ಮತ್ತು ಉದಾರತೆ ತೋರಿಸುವ ಗುಣಗಳು ಇಲ್ಲ ಅಂತ ಹೇಳುವ ವ್ಯಕ್ತಿಗೆ ದೇವರ ಬಗ್ಗೆ ಗೊತ್ತೇ ಇರಲ್ಲ.
ಯೆಹೋವನು ಯಾರಿಗೆ ಪ್ರತಿಫಲ ಕೊಡುತ್ತಾನೆ? “ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ” ಅಂತ ಪೌಲ ಹೇಳುತ್ತಾನೆ. ಬೈಬಲ್ ಭಾಷಾಂತರ ಮಾಡುವವರಿಗಾಗಿ ಇರುವ ಒಂದು ಪುಸ್ತಕದ ಪ್ರಕಾರ, “ಶ್ರದ್ಧಾಪೂರ್ವಕವಾಗಿ ಹುಡುಕುವುದು” ಎಂಬುದಕ್ಕೆ ಇರುವ ಗ್ರೀಕ್ ಪದದ ಅರ್ಥ “ಹುಡುಕಲು ಹೋಗುವುದು” ಅಂತಲ್ಲ. ಬದಲಿಗೆ, ದೇವರನ್ನು ಆರಾಧಿಸುತ್ತಾ ಆತನ ಬಗ್ಗೆ ತಿಳಿಯುವುದೇ ಆಗಿದೆ ಅಂತ ಆ ಪುಸ್ತಕ ಹೇಳುತ್ತೆ. ಈ ಗ್ರೀಕ್ ಕ್ರಿಯಾಪದ, ತೀವ್ರತೆ ಮತ್ತು ಶ್ರಮಪಟ್ಟು ಕೆಲಸ ಮಾಡುವುದನ್ನು ಸೂಚಿಸುತ್ತೆ. ಹೌದು, ಯಾರೆಲ್ಲಾ ಯೆಹೋವನನ್ನು ನಂಬಿಕೆಯಿಂದ, ಪೂರ್ಣ ಹೃದಯದ ಪ್ರೀತಿಯಿಂದ ಮತ್ತು ಹುರುಪಿನಿಂದ ಪ್ರೀತಿಸುತ್ತಾರೋ ಅವರಿಗೆಲ್ಲ ಆತನು ಖಂಡಿತ ಪ್ರತಿಫಲ ಕೊಡುತ್ತಾನೆ. —ಮತ್ತಾಯ 22:37.
(ಇಬ್ರಿಯ 11:33-38) ನಂಬಿಕೆಯ ಮೂಲಕ ಅವರು ಹೋರಾಟದಲ್ಲಿ ರಾಜ್ಯಗಳನ್ನು ಸೋಲಿಸಿದರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿಯನ್ನು ಮುಚ್ಚಿದರು, 34 ಬೆಂಕಿಯ ಬಲವನ್ನು ಆರಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ನಿರ್ಬಲ ಸ್ಥಿತಿಯಿಂದ ಬಲಿಷ್ಠರಾಗಿ ಮಾಡಲ್ಪಟ್ಟರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಅನ್ಯದೇಶದವರ ಸೈನ್ಯಗಳನ್ನು ಸದೆಬಡಿದರು. 35 ಮೃತರಾಗಿದ್ದ ತಮ್ಮವರನ್ನು ಸ್ತ್ರೀಯರು ಪುನರುತ್ಥಾನದ ಮೂಲಕ ಪುನಃ ಪಡೆದುಕೊಂಡರು; ಇತರ ಪುರುಷರು ಉತ್ತಮವಾದ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ ಯಾವುದೇ ರೀತಿಯ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಸ್ವೀಕರಿಸದೇ ಹೋದದ್ದಕ್ಕಾಗಿ ಯಾತನೆಯನ್ನು ಅನುಭವಿಸಿದರು. 36 ಇತರರು ಅಪಹಾಸ್ಯ ಮತ್ತು ಕೊರಡೆಯ ಏಟುಗಳಿಂದಲೂ, ಅದಕ್ಕಿಂತಲೂ ಹೆಚ್ಚಾಗಿ ಬೇಡಿ ಹಾಗೂ ಸೆರೆಮನೆಗಳ ಮೂಲಕವೂ ಪರೀಕ್ಷೆಯನ್ನು ಅನುಭವಿಸಿದರು. 37 ಕೆಲವರು ಕಲ್ಲೆಸೆದು ಕೊಲ್ಲಲ್ಪಟ್ಟರು, ಕೆಲವರು ಪರೀಕ್ಷಿಸಲ್ಪಟ್ಟರು, ಕೆಲವರು ಗರಗಸದಿಂದ ಇಬ್ಭಾಗವಾಗಿ ಕೊಯ್ಯಲ್ಪಟ್ಟರು, ಕೆಲವರು ಕತ್ತಿಯಿಂದ ಕ್ರೂರವಾಗಿ ಹತಿಸಲ್ಪಟ್ಟರು, ಕೆಲವರು ಕೊರತೆ, ಸಂಕಟ ಮತ್ತು ದುರುಪಚಾರವನ್ನು ಅನುಭವಿಸುತ್ತಿದ್ದಾಗ ಕುರಿಗಳ ಮತ್ತು ಆಡುಗಳ ಚರ್ಮಗಳನ್ನು ಧರಿಸಿಕೊಂಡವರಾಗಿ ತಿರುಗಾಡಿದರು. 38 ಇಂಥವರನ್ನು ಹೊಂದಿರಲು ಈ ಲೋಕವು ಯೋಗ್ಯವಾಗಿರಲಿಲ್ಲ. ಅವರು ಈ ಭೂಮಿಯ ಅರಣ್ಯಗಳಲ್ಲಿ, ಬೆಟ್ಟಗಳಲ್ಲಿ, ಗವಿಗಳಲ್ಲಿ ಮತ್ತು ಕುಣಿಗಳಲ್ಲಿ ಅಲೆದಾಡಿದರು.
ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ
10 ಇಬ್ರಿಯ 11ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು ಹೀಗೆ ಹೇಳಿದನು: “ಮೃತರಾಗಿದ್ದ ತಮ್ಮವರನ್ನು ಸ್ತ್ರೀಯರು ಪುನರುತ್ಥಾನದ ಮೂಲಕ ಪುನಃ ಪಡೆದುಕೊಂಡರು; ಇತರ ಪುರುಷರು ಉತ್ತಮವಾದ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ ಯಾವುದೇ ರೀತಿಯ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಸ್ವೀಕರಿಸದೇ ಹೋದದ್ದಕ್ಕಾಗಿ ಯಾತನೆಯನ್ನು ಅನುಭವಿಸಿದರು.” (ಇಬ್ರಿ. 11:35) ಅನೇಕರು ವಿರೋಧವನ್ನು ತಾಳಿಕೊಂಡರು ಮತ್ತು ಯೆಹೋವನಿಗೆ ನಿಷ್ಠರಾಗಿ ಉಳಿದರು. ಏಕೆಂದರೆ ದೇವರು ಮಾತುಕೊಟ್ಟ ಪುನರುತ್ಥಾನದಲ್ಲಿ ಅವರಿಗೆ ಸಂಪೂರ್ಣ ನಂಬಿಕೆಯಿತ್ತು. ಭವಿಷ್ಯತ್ತಿನಲ್ಲಿ ಯೆಹೋವನು ತಮಗೆ ಪುನಃ ಜೀವಕೊಟ್ಟು ಇದೇ ಭೂಮಿಯ ಮೇಲೆ ನಿತ್ಯಜೀವವನ್ನು ಕೊಡಲಿದ್ದಾನೆಂದು ಅವರಿಗೆ ಗೊತ್ತಿತ್ತು. ನಾಬೋತ ಮತ್ತು ಜೆಕರ್ಯನ ಬಗ್ಗೆ ಯೋಚಿಸಿ. ದೇವರಿಗೆ ವಿಧೇಯತೆ ತೋರಿಸಿದ್ದಕ್ಕಾಗಿ ಅವರನ್ನು ಕಲ್ಲೆಸೆದು ಕೊಲ್ಲಲಾಯಿತು. (1 ಅರ. 21:3, 15; 2 ಪೂರ್ವ. 24:20, 21) ದಾನಿಯೇಲನನ್ನು ಹಸಿದ ಸಿಂಹಗಳಿರುವ ಗವಿಗೆ ಬಿಸಾಡಲಾಯಿತು. ಅವನ ಸ್ನೇಹಿತರನ್ನು ಧಗಧಗನೆ ಉರಿಯುವ ಬೆಂಕಿಗೆ ಹಾಕಲಾಯಿತು. ಯೆಹೋವನಿಗೆ ನಿಷ್ಠೆ ತೋರಿಸದೆ ಇರುವುದಕ್ಕಿಂತ ಸಾವೇ ಲೇಸೆಂದು ಇವರೆಲ್ಲರೂ ಅಂದುಕೊಂಡರು. ಯೆಹೋವ ದೇವರು ಖಂಡಿತ ಪವಿತ್ರಾತ್ಮದ ಮೂಲಕ ಸಹಾಯ ಮಾಡುತ್ತಾನೆ, ತಮ್ಮನ್ನು ಕಷ್ಟಗಳಿಂದ ಬಿಡಿಸುತ್ತಾನೆ ಎನ್ನುವ ಸಂಪೂರ್ಣ ನಂಬಿಕೆ ಅವರಿಗಿತ್ತು.—ದಾನಿ. 3:16-18, 20, 28; 6:13, 16, 21-23; ಇಬ್ರಿ. 11:33, 34.
11 ಮೀಕಾಯೇಹು ಮತ್ತು ಯೆರೆಮೀಯರಂಥ ಅನೇಕ ಪ್ರವಾದಿಗಳನ್ನು ಗೇಲಿಮಾಡಿ ಸೆರೆಮನೆಗೆ ಹಾಕಲಾಯಿತು. ಎಲೀಯನಂಥ ಇತರ ಪ್ರವಾದಿಗಳು “ಈ ಭೂಮಿಯ ಅರಣ್ಯಗಳಲ್ಲಿ, ಬೆಟ್ಟಗಳಲ್ಲಿ, ಗವಿಗಳಲ್ಲಿ ಮತ್ತು ಕುಣಿಗಳಲ್ಲಿ ಅಲೆದಾಡಿದರು.” ಅವರೆಲ್ಲರೂ ಕಷ್ಟಗಳನ್ನು ತಾಳಿಕೊಂಡರು. ದೇವರಿಗೆ ನಿಷ್ಠರಾಗಿದ್ದರು. ಯಾಕೆಂದರೆ “ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಅವರಿಗಿತ್ತು.—ಇಬ್ರಿ. 11:1, 36-38; 1 ಅರ. 18:13; 22:24-27; ಯೆರೆ. 20:1, 2; 28:10, 11; 32:2.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಇಬ್ರಿಯ 11:4) ನಂಬಿಕೆಯಿಂದಲೇ ಹೇಬೆಲನು ಕಾಯಿನನು ನೀಡಿದ್ದಕ್ಕಿಂತ ಹೆಚ್ಚಿನ ಮೌಲ್ಯದ ಯಜ್ಞವನ್ನು ದೇವರಿಗೆ ಅರ್ಪಿಸಿದನು. ಆ ನಂಬಿಕೆಯ ಮೂಲಕವೇ ಅವನು ನೀತಿವಂತನೆಂದು ಸಾಕ್ಷಿಹೊಂದಿದನು; ದೇವರು ಅವನ ಕಾಣಿಕೆಗಳ ವಿಷಯದಲ್ಲಿ ಸಾಕ್ಷಿಕೊಟ್ಟನು. ಅವನು ಸತ್ತುಹೋದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತಾಡುತ್ತಾನೆ.
it-1 ಪುಟ 804 ಪ್ಯಾರ 5
ನಂಬಿಕೆ
ಹಿಂದಿನ ಕಾಲದಲ್ಲಿ ನಂಬಿಕೆ ತೋರಿಸಿದವರ ಉದಾಹರಣೆಗಳು. ಪೌಲ, ‘ಸಾಕ್ಷಿಗಳ ದೊಡ್ಡ ಮೇಘದ’ ಬಗ್ಗೆ ತಿಳಿಸಿದನು. ಆ ಗುಂಪಿಗೆ ಸೇರಿದ ಪ್ರತಿಯೊಬ್ಬರಿಗೆ ನಂಬಿಕೆ ಇಡಲು ಬಲವಾದ ಕಾರಣ ಇತ್ತು. (ಇಬ್ರಿ 12:1) ಉದಾಹರಣೆಗೆ ಹೇಬೆಲನಿಗೆ, ಒಂದು “ಸಂತಾನ” “ಸರ್ಪದ” ತಲೆಯನ್ನು ಜಜ್ಜುವುದು ಎಂದು ದೇವರು ಕೊಟ್ಟ ಮಾತಿನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವನ ಹೆತ್ತವರಾದ ಆದಾಮ-ಹವ್ವ ಮಾಡಿದ ಪಾಪಕ್ಕಾಗಿ, ಯೆಹೋವನು ಅವರಿಗೆ ಕೊಟ್ಟ ಶಿಕ್ಷೆಯ ನೆರವೇರಿಕೆಯನ್ನೂ ಆತನು ಕಣ್ಣಾರೆ ನೋಡಿದನು. ಏದೆನ್ ತೋಟದ ಹೊರಗೆ ಆದಾಮ ಮತ್ತು ಅವನ ಕುಟುಂಬ ಆಹಾರಕ್ಕಾಗಿ ಬೆವರು ಸುರಿಸಿ, ಕಷ್ಟಪಟ್ಟು ದುಡಿಯಬೇಕಿತ್ತು. ಯಾಕೆಂದರೆ, ಯೆಹೋವನು ಭೂಮಿಯನ್ನು ಶಪಿಸಿದ್ದನು. ಹಾಗಾಗಿ, ಅದರ ಮೇಲೆ ಮುಳ್ಳುಗಿಡಗಳು ಮತ್ತು ಕಳೆಗಳು ಬೆಳೆದಿದ್ದವು. ಹವ್ವ ತನ್ನ ಗಂಡನ ಪ್ರೀತಿ, ಗಮನ ಪಡೆಯಲು ಅತಿಯಾಗಿ ಆಸೆಪಡುವುದನ್ನು ಮತ್ತು ಆದಾಮ ಅವಳ ಮೇಲೆ ಅಧಿಕಾರ ಚಲಾಯಿಸುವುದನ್ನು ಕೂಡ ಹೇಬೆಲ ನೋಡಿರಬಹುದು. ಹವ್ವ ಗರ್ಭಿಣಿಯಾಗಿರುವಾಗ ಮತ್ತು ಹೆರಿಗೆಯ ಸಮಯದಲ್ಲಿ ತುಂಬ ಕಷ್ಟಪಟ್ಟಿದ್ದನ್ನು, ನೋವು ಅನುಭವಿಸಿದ್ದನ್ನು ಸಹ ಕಂಡನು. ಅಷ್ಟೇ ಅಲ್ಲ, ಏದೆನ್ ತೋಟದಲ್ಲಿ ಯಾರೂ ಕಾಲಿಡದಂತೆ ಅದರ ಪ್ರವೇಶದ್ವಾರವನ್ನು ಕೆರೂಬಿಯರು ಕಾಯುತ್ತಿದ್ದರು. ಜೊತೆಗೆ ಧಗಧಗನೆ ಪ್ರಜ್ವಲಿಸುತ್ತಿರುವ ಕತ್ತಿ ಸಹ ಅಲ್ಲಿ ಇತ್ತು. ಇದನ್ನೂ ಹೇಬೆಲ ನೋಡಿದ. (ಆದಿ 3:14-19, 24) ಈ ಎಲ್ಲಾ ವಿಷಯಗಳು ಹೇಬೆಲನಿಗೆ ಒಂದು ‘ಪ್ರತ್ಯಕ್ಷ ನಿದರ್ಶನವಾಗಿತ್ತು’. ಅದು, ವಾಗ್ದತ್ತ ಸಂತತಿಯ ಮೂಲಕವೇ ಬಿಡುಗಡೆ ಸಿಗುತ್ತೆ ಎಂಬ ಆಶ್ವಾಸನೆ ಅವನಿಗೆ ಕೊಟ್ಟಿತು. ಹಾಗಾಗಿ “ನಂಬಿಕೆಯಿಂದಲೇ ಹೇಬೆಲನು ಕಾಯಿನನು ನೀಡಿದ್ದಕ್ಕಿಂತ ಹೆಚ್ಚಿನ ಮೌಲ್ಯದ ಯಜ್ಞವನ್ನು ದೇವರಿಗೆ ಅರ್ಪಿಸಿದನು.” —ಇಬ್ರಿ 11:1, 4.
(ಇಬ್ರಿಯ 11:5) ನಂಬಿಕೆಯಿಂದಲೇ ಹನೋಕನು ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು; ದೇವರು ಅವನನ್ನು ಸ್ಥಳಾಂತರಿಸಿದ್ದರಿಂದ ಅವನು ಎಲ್ಲಿಯೂ ಸಿಗಲಿಲ್ಲ. ಏಕೆಂದರೆ ಅವನು ಸ್ಥಳಾಂತರಿಸಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.
‘ದೇವರನ್ನು ಮೆಚ್ಚಿಸಿದವನು’
ಹಾಗಾದರೆ, ಹನೋಕನು ‘ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟದ್ದು’ ಹೇಗೆ? ಯೆಹೋವನು ನಿಧಾನವಾಗಿ ಹನೋಕನಿಗೆ ಸಾವಿನ ನೋವು ತಿಳಿಯದಂತೆ ಸಾವನ್ನಪ್ಪುವಂತೆ ಮಾಡಿರಬೇಕು. ಆದರೆ ಅದಕ್ಕೂ ಮುಂಚೆ ಅವನು “ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.” ಹೇಗೆ? ಅವನು ಸಾಯುವುದಕ್ಕೂ ಸ್ವಲ್ಪ ಮುಂಚೆ, ದೇವರು ಅವನಿಗೆ ದರ್ಶನವನ್ನು ತೋರಿಸಿರಬಹುದು. ಸುಂದರ ತೋಟದಂತಿರುವ ಭೂಮಿಯನ್ನು ನೋಡಿರಬಹುದು. ದೇವರು ತನ್ನನ್ನು ಮೆಚ್ಚಿದ್ದಾನೆಂಬ ಗುರುತಾಗಿರುವ ಅದನ್ನು ನೋಡುತ್ತಲೇ ಅವನು ಸಾವನ್ನಪ್ಪಿರಬಹುದು. ಅಪೊಸ್ತಲ ಪೌಲನು ಹನೋಕ ಮತ್ತಿತರ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಹೀಗೆ ಬರೆದನು: ಅವರು “ನಂಬಿಕೆಯುಳ್ಳವರಾಗಿ ಮೃತರಾದರು.” (ಇಬ್ರಿಯ 11:13) ನಂತರ, ಹನೋಕನ ವೈರಿಗಳು ಅವನ ಶವಕ್ಕಾಗಿ ಹುಡುಕಿರಬೇಕು, ಆದರೆ ಅದು ಅವರಿಗೆ “ಎಲ್ಲಿಯೂ ಸಿಗಲಿಲ್ಲ.” ಜನರು ಅದಕ್ಕೆ ಅಗೌರವ ತೋರಿಸದಂತೆ ಅಥವಾ ಅದರ ಮೂಲಕ ಸುಳ್ಳಾರಾಧನೆಯನ್ನು ಆರಂಭಿಸದಂತೆ ತಡೆಯುವ ಉದ್ದೇಶದಿಂದ ಯೆಹೋವನೇ ಅದನ್ನು ಸಮಾಧಿ ಮಾಡಿರಬಹುದು.
ಸೆಪ್ಟೆಂಬರ್ 23-29
ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 12-13
“ಶಿಸ್ತು—ಯೆಹೋವನ ಪ್ರೀತಿಯ ರುಜುವಾತು”
(ಇಬ್ರಿಯ 12:5) ಆದರೆ ನಿಮ್ಮನ್ನು ಪುತ್ರರೆಂದು ಸಂಬೋಧಿಸಿ ಹೇಳಿರುವ ಬುದ್ಧಿವಾದವನ್ನು ನೀವು ಸಂಪೂರ್ಣವಾಗಿ ಮರೆತುಬಿಟ್ಟಿದ್ದೀರಿ. ಅದೇನೆಂದರೆ, “ನನ್ನ ಮಗನೇ, ಯೆಹೋವನಿಂದ ಕೊಡಲ್ಪಡುವ ಶಿಸ್ತನ್ನು ತಾತ್ಸಾರಮಾಡಬೇಡ; ಆತನು ನಿನ್ನನ್ನು ತಿದ್ದುವಾಗ ಬಿದ್ದುಹೋಗಬೇಡ
w12 3/15 ಪುಟ 29 ಪ್ಯಾರ 18
‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ
18 ಗಂಭೀರ ಸಲಹೆ. ಹಿಂದೆ ನಮಗೆ ಸಿಕ್ಕಿದ ಗಂಭೀರ ಸಲಹೆಯ ನೆನಪು ಮನದಲ್ಲಿ ಮರುಕಳಿಸುತ್ತಾ ನಮ್ಮನ್ನು ಇರಿಯುತ್ತಿರುವಲ್ಲಿ ಆಗೇನು? ಇದು ನಮಗೆ ನೋವನ್ನು ಉಂಟುಮಾಡುತ್ತದೆ, ಬಲವನ್ನು ಉಡುಗಿಸಿಬಿಡುತ್ತದೆ. ‘ಬಿದ್ದುಹೋಗುವಂತೆ’ ಸಹ ಮಾಡಬಲ್ಲದು. (ಇಬ್ರಿ. 12:5) ಸಿಕ್ಕಿದ ಸಲಹೆಯನ್ನು ನಾವು ಒಂದುವೇಳೆ “ತಾತ್ಸಾರ” ಮಾಡಿರಲಿ ಅಥವಾ ಮೊದಲು ಸ್ವೀಕರಿಸಿ ನಂತರ ತಳ್ಳಿಬಿಟ್ಟಿರಲಿ ಪರಿಣಾಮ ಒಂದೇ. ಸಲಹೆಯಿಂದ ಪ್ರಯೋಜನ ಹೊಂದಲು ಅಥವಾ ಅದು ನಮ್ಮನ್ನು ಪರಿಷ್ಕರಿಸಲು ನಾವು ಬಿಟ್ಟುಕೊಟ್ಟಿಲ್ಲ. “ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು” ಎಂದನು ಸೊಲೊಮೋನ. ಈ ಹಿತನುಡಿಯನ್ನು ಪಾಲಿಸುವುದು ನಮಗೇ ಹಿತಕರ! (ಜ್ಞಾನೋ. 4:13) ವಾಹನ ಚಾಲಕನು ರೋಡ್ ಸಿಗ್ನಲ್ಗಳಿಗೆ ವಿಧೇಯನಾಗಿ ಹೇಗೆ ಮುಂದೆ ಸಾಗುತ್ತಾ ಇರುತ್ತಾನೋ ಹಾಗೆಯೇ ನಾವು ಸಲಹೆಯನ್ನು ಸ್ವೀಕರಿಸಿ, ಅನ್ವಯಿಸಿ, ಮುಂದೆ ಹೋಗುತ್ತಾ ಇರೋಣ.—ಜ್ಞಾನೋ. 4:26, 27; ಇಬ್ರಿಯ 12:12, 13 ಓದಿ.
(ಇಬ್ರಿಯ 12:6, 7) ಏಕೆಂದರೆ ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತನ್ನು ನೀಡುತ್ತಾನೆ; ವಾಸ್ತವದಲ್ಲಿ, ಆತನು ಮಗನಂತೆ ಸೇರಿಸಿಕೊಳ್ಳುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ.” 7 ಶಿಸ್ತಿಗಾಗಿಯೇ ನೀವು ತಾಳಿಕೊಳ್ಳುತ್ತಿದ್ದೀರಿ. ಪುತ್ರರೊಂದಿಗೆ ವ್ಯವಹರಿಸುವಂಥ ರೀತಿಯಲ್ಲಿ ದೇವರು ನಿಮ್ಮೊಂದಿಗೆ ವ್ಯವಹರಿಸುತ್ತಾನೆ. ತಂದೆಯಿಂದ ಶಿಸ್ತನ್ನು ಹೊಂದದಿರುವ ಮಗನಿದ್ದಾನೊ?
w12 E 7/1 ಪುಟ 21 ಪ್ಯಾರ 3
“ನೀವು ಪ್ರಾರ್ಥನೆಮಾಡುವಾಗ ‘ತಂದೆಯೇ’. . . ಎಂದು ಹೇಳಿರಿ”
ಒಬ್ಬ ಪ್ರೀತಿಯ ತಂದೆ ತನ್ನ ಮಕ್ಕಳಿಗೆ ಶಿಸ್ತು ಕೊಡುತ್ತಾನೆ. ( ಎಫೆಸ 6:4) ಯಾಕೆ? ಯಾಕೆಂದರೆ ಅವರು ಮುಂದೆ ಒಳ್ಳೆಯ ವ್ಯಕ್ತಿಗಳಾಗಬೇಕು ಅನ್ನೋದು ಅವನ ಆಸೆ. ಇಂಥ ತಂದೆ ಕೆಲವೊಮ್ಮೆ ಕಟ್ಟುನಿಟ್ಟು ಮಾಡಬಹುದು. ಆದರೆ ತನ್ನ ಮಕ್ಕಳನ್ನು ತಿದ್ದುವಾಗ ಆತನು ಯಾವತ್ತೂ ಕಠೋರವಾಗಿ ನಡೆದುಕೊಳ್ಳುವುದಿಲ್ಲ. ಅದೇ ರೀತಿ, ನಮ್ಮ ಸ್ವರ್ಗೀಯ ತಂದೆ ಆದ ಯೆಹೋವನೂ ಕೆಲವೊಮ್ಮೆ ನಮಗೆ ಶಿಸ್ತು ನೀಡಬಹುದು. ಆದರೆ ಅವನು ಶಿಸ್ತು ನೀಡುವಾಗ ಅದನ್ನು ಪ್ರೀತಿಯಿಂದ ನೀಡುತ್ತಾನೆ. ಅದನ್ನು ಯಾವತ್ತೂ ತಪ್ಪಾದ ರೀತಿಯಲ್ಲಿ, ನಮಗೆ ನೋವಾಗುವ ಹಾಗೆ ನೀಡುವುದಿಲ್ಲ. ತನ್ನ ತಂದೆಯಂತೆ, ಯೇಸು ಸಹ ಯಾವತ್ತೂ ಕಠೋರವಾಗಿ ನಡೆದುಕೊಳ್ಳಲಿಲ್ಲ. ಅವನ ಶಿಷ್ಯರು ತಕ್ಷಣ ತಿದ್ದುಕೊಳ್ಳಲು ತಪ್ಪಿಹೋದರೂ ಅವರೊಂದಿಗೆ ಪ್ರೀತಿಯಿಂದ ವರ್ತಿಸಿದನು.—ಮತ್ತಾಯ 20:20-28; ಲೂಕ 22:24-30.
(ಇಬ್ರಿಯ 12:11) ನಿಜ, ಯಾವ ಶಿಸ್ತು ಸಹ ತತ್ಕಾಲಕ್ಕೆ ಆನಂದಕರವಾಗಿ ತೋರದೆ ದುಃಖಕರವಾಗಿಯೇ ತೋರುತ್ತದೆ; ಆದರೆ ತರುವಾಯ ಅದರಿಂದ ತರಬೇತಿಹೊಂದಿದವರಿಗೆ ಸಮಾಧಾನಕರವಾದ ಫಲವನ್ನು ಅಂದರೆ ನೀತಿಯನ್ನು ಫಲಿಸುತ್ತದೆ.
“ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗಿ”
18 ನಮಗೆ ಶಿಸ್ತು ಸಿಕ್ಕಿದಾಗ ನೋವಾಗಬಹುದು. ಆದರೆ ಶಿಸ್ತನ್ನು ತಳ್ಳಿಹಾಕುವುದರಿಂದ ಅನುಭವಿಸಬೇಕಾಗಿರುವ ನೋವು ಅದಕ್ಕಿಂತ ಹೆಚ್ಚು. (ಇಬ್ರಿ. 12:11) ಕಾಯಿನ ಮತ್ತು ಚಿದ್ಕೀಯನ ಕೆಟ್ಟ ಉದಾಹರಣೆಯಿಂದ ನಾವು ಪಾಠ ಕಲಿಯಬಹುದು. ಕಾಯಿನ ತನ್ನ ತಮ್ಮನನ್ನು ದ್ವೇಷಿಸುತ್ತಿದ್ದಾನೆ ಮತ್ತು ಕೊಲ್ಲಬೇಕೆಂದಿದ್ದಾನೆ ಎಂದು ದೇವರಿಗೆ ಗೊತ್ತಾದಾಗ, “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು” ಎಂದನು. (ಆದಿ. 4:6, 7) ಯೆಹೋವ ದೇವರು ಕೊಟ್ಟ ಶಿಸ್ತನ್ನು ಕಾಯಿನ ತಳ್ಳಿಹಾಕಿ ತಮ್ಮನನ್ನು ಕೊಂದುಹಾಕಿದನು. ನಂತರ ‘ಮಾಡಿದ್ದುಣ್ಣೋ ಮಾರಾಯ’ ಅನ್ನುವ ರೀತಿ ಅವನ ಜೀವನವಿಡೀ ತೊಂದರೆ ಅನುಭವಿಸಿದನು. (ಆದಿ. 4:11, 12) ಕಾಯಿನ ದೇವರ ಮಾತಿಗೆ ಕಿವಿಗೊಟ್ಟಿದ್ದರೆ ಇಷ್ಟು ನೋವು ತಿನ್ನುವ ಆವಶ್ಯಕತೆ ಇರಲಿಲ್ಲ.
it-1 ಪುಟ 629
ಶಿಸ್ತು
ಯೆಹೋವನು ತನ್ನ ಸೇವಕರ ಮೇಲೆ ಹಿಂಸೆಯನ್ನು ಅನುಮತಿಸುವ ಮೂಲಕ ಸಹ ಕೆಲವೊಮ್ಮೆ ಶಿಸ್ತು ಅಥವಾ ತರಬೇತಿಯನ್ನು ಕೊಡುತ್ತಾನೆ. ಹಿಂಸೆ ಅಥವಾ ಪರೀಕ್ಷೆ ಮುಗಿದ ನಂತರ ಅದು ನಮ್ಮಲ್ಲಿ ನೀತಿ ಎಂಬ ಫಲ ಫಲಿಸುವಂತೆ ಮಾಡುತ್ತೆ. ಅಂದರೆ ನಾವು ಸರಿಯಾದ ಮಾರ್ಗದಲ್ಲಿ ನಡೆಯುತ್ತಾ ಸಮಾಧಾನ ಸಂತೋಷದಿಂದಿರಲು ಸಹಾಯಮಾಡುತ್ತೆ. (ಇಬ್ರಿ 12:4-11) ಯೆಹೋವನು ಯೇಸುವಿಗೆ ಸಹ ಕಷ್ಟಗಳು ಬರುವಂತೆ ಅನುಮತಿಸಿದನು. ಇದು ಮುಂದೆ ಯೇಸು ಒಬ್ಬ ಅನುಕಂಪ, ಸಹಾನುಭೂತಿ ತೋರಿಸುವ ಮಹಾ ಯಾಜಕನಾಗಲು ಸಹಾಯ ಮಾಡಿತು.—ಇಬ್ರಿ 4:15.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಇಬ್ರಿಯ 12:1) ಆದಕಾರಣ ಸಾಕ್ಷಿಗಳ ಇಷ್ಟೊಂದು ದೊಡ್ಡ ಮೇಘವು ನಮ್ಮ ಸುತ್ತಲೂ ಇರುವುದರಿಂದ ನಾವು ಸಹ ಎಲ್ಲ ಭಾರವನ್ನೂ ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ ತೆಗೆದುಹಾಕಿ
w11 9/15 ಪುಟ 17-18 ಪ್ಯಾರ 11
ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ
11 ಪೌಲ ತಿಳಿಸಿದ ಮೇಘದಂಥ ಸಾಕ್ಷಿಗಳು ಕೇವಲ ಓಟದ ಪಂದ್ಯವನ್ನು ವೀಕ್ಷಿಸಲು ಆಗಮಿಸುವ ಅಥವಾ ತಮ್ಮ ಅಚ್ಚುಮೆಚ್ಚಿನ ಕ್ರೀಡಾಪಟುವಾಗಲಿ ತಂಡವಾಗಲಿ ಗೆಲ್ಲುವುದನ್ನು ನೋಡಿ ಸಂತೋಷಪಡುವ ಪ್ರೇಕ್ಷಕರಂತಿರಲಿಲ್ಲ. ಅವರು ಓಟದಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳಾಗಿದ್ದರು. ತಮ್ಮ ಓಟವನ್ನು ಪೂರ್ಣವಾಗಿ ಓಡಿ ಕೊನೆಗೊಳಿಸಿದ್ದರು. ಹೊಸ ಓಟಗಾರರಿಗೆ ಪ್ರೋತ್ಸಾಹ ನೀಡುವ ಅನುಭವಿ ಓಟಗಾರರಂತೆ ಅವರಿದ್ದಾರೆ. ಸ್ವಲ್ಪ ಯೋಚಿಸಿ, ಪಂದ್ಯದಲ್ಲಿ ಓಡುತ್ತಿರುವ ಒಬ್ಬ ಓಟಗಾರನಿಗೆ, ತನ್ನನ್ನು ತುಂಬ ಸಾಧನೆ ಮಾಡಿರುವ ಹಿರಿಯ ಓಟಗಾರರು ಗಮನಿಸುತ್ತಿದ್ದಾರೆ ಎಂದು ತಿಳಿದರೆ ಹೇಗನಿಸುತ್ತದೆ? ಅವನಿನ್ನೂ ಉತ್ಸಾಹದಿಂದ ಶಕ್ತಿಮೀರಿ ಓಡಲು ಪ್ರಯತ್ನಿಸುತ್ತಾನಲ್ಲವೇ? ಕ್ರೈಸ್ತ ಓಟದಲ್ಲಿ ಎಷ್ಟೇ ಕಷ್ಟಬಂದರೂ ಜಯಗಳಿಸಲು ಸಾಧ್ಯ ಎಂದು ಆ ಮೇಘದಂಥ ಸಾಕ್ಷಿಗಳು ತೋರಿಸಿಕೊಟ್ಟಿದ್ದರು. ಹೊಸ ಓಟಗಾರರಂತಿದ್ದ ಒಂದನೇ ಶತಮಾನದ ಇಬ್ರಿಯ ಕ್ರೈಸ್ತರಿಗೆ ಆ “ಸಾಕ್ಷಿಗಳ” ಮಾದರಿಯನ್ನು ಮನಸ್ಸಿನಲ್ಲಿಡುವುದು “ಓಟವನ್ನು ತಾಳ್ಮೆಯಿಂದ” ಓಡಲು ಧೈರ್ಯ ತುಂಬುತ್ತಿತ್ತು. ಇಂದು ನಾವು ಸಹ ಧೈರ್ಯ ಪಡೆದುಕೊಳ್ಳಸಾಧ್ಯವಿದೆ.
(ಇಬ್ರಿಯ 13:9) ನಾನಾ ವಿಧವಾದ ಮತ್ತು ಅನ್ಯಬೋಧನೆಗಳ ಸೆಳೆತಕ್ಕೆ ಸಿಕ್ಕಿ ದಾರಿತಪ್ಪಿದವರಾಗಬೇಡಿ; ಏಕೆಂದರೆ ಅಪಾತ್ರ ದಯೆಯ ಮೂಲಕ ಹೃದಯವನ್ನು ದೃಢಪಡಿಸಿಕೊಳ್ಳುವುದು ಉತ್ತಮ; ಆದರೆ ಭೋಜನಪದಾರ್ಥಗಳಿಂದ ಅದು ಆಗುವುದಿಲ್ಲ. ಅವುಗಳಲ್ಲಿ ನಿರತರಾಗಿರುವವರು ಯಾವ ಪ್ರಯೋಜನವನ್ನೂ ಪಡೆದುಕೊಂಡಿಲ್ಲ.
w90 1/1 ಪುಟ 22 ಪ್ಯಾರ 10
ಯೆಹೋವನು ಮೆಚ್ಚುವ ಯಜ್ಞಗಳನ್ನು ಅರ್ಪಿಸಿರಿ
10 ಆದ್ದರಿಂದ ಯೆಹೂದಿ ಮತದವರ “ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕದಂತೆ” ದೂರವಿರುವ ಅಗತ್ಯವು ಇಬ್ರಿಯ ಕ್ರೈಸ್ತರಿಗಿತ್ತು. (ಗಲಾತ್ಯ 5:1-6) ಸತ್ಯದಲ್ಲಿ ದೃಢರಾಗಿ ನಿಲ್ಲುವದಕ್ಕೆ ಅಂತಹ ಬೋಧನೆಗಳು ಬೇಡ, ಬದಲಾಗಿ “ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸ”ಸಾಧ್ಯವಿತ್ತು. ಕೆಲವರು ಭೋಜನಗಳು ಮತ್ತು ಅರ್ಪಣೆಗಳ ಕುರಿತಾಗಿ ವಾದಿಸಿದ್ದರೆಂಬುದು ವ್ಯಕ್ತ, ಯಾಕೆಂದರೆ ಹೃದಯದ ದೃಢತೆಯು “ಭೋಜನ ಪದಾರ್ಥಗಳಿಂದ ಆಗುವುದಿಲ್ಲ, ಜನ ಪದಾರ್ಥಗಳನ್ನು ವಿಶೇಷಿಸಿ ನಡೆದವರು ಏನೂ ಪ್ರಯೋಜನ ದೊರಕದು.” ದೇವ ಭಕ್ತಿ ಮತ್ತು ವಿಮೋಚನೆಗಾಗಿ ಗಣ್ಯತೆಯಿಂದಲೇ ಹೊರತು ನಿರ್ದಿಷ್ಟ ಆಹಾರ ಪದಾರ್ಥಗಳ ಭಕ್ಷಣೆ ಮತ್ತು ವಿಶಿಷ್ಟ ದಿನಗಳ ಆಚರಣೆಗೆ ಅತಿರೇಕ ಲಕ್ಷಕೊಡುವದರಿಂದಲ್ಲ. (ರೋಮನ್ನರಿಗೆ 14:5-9) ಅದಲ್ಲದೆ, ಯಾಜಕತ್ವದ ಅರ್ಪಣೆಗಳನ್ನು ಕ್ರಿಸ್ತನ ಯಜ್ಞವು ನಿಷ್ಫಲವಾಗಿ ಮಾಡಿತ್ತು.—ಇಬ್ರಿಯ 9:9-14; 10:5-10.
ಸೆಪ್ಟೆಂಬರ್ 30-ಅಕ್ಟೋಬರ್ 6
ಬೈಬಲಿನಲ್ಲಿರುವ ರತ್ನಗಳು | ಯಾಕೋಬ 1-2
“ಪಾಪ ಮತ್ತು ಮರಣಕ್ಕೆ ನಡೆಸುವ ದಾರಿ”
(ಯಾಕೋಬ 1:14) ಆದರೆ ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ.
g17.4 E ಪುಟ 14
ಪ್ರಲೋಭನೆ
ಪ್ರಲೋಭನೆ ಅಂದರೆ ಒಂದು ವಿಷಯದ ಕಡೆಗೆ ಮುಖ್ಯವಾಗಿ ತಪ್ಪಾದ ವಿಷಯದ ಕಡೆಗೆ ಆಕರ್ಷಿಸಲ್ಪಡುವುದೇ ಆಗಿದೆ. ಉದಾಹರಣೆಗೆ, ನೀವು ಅಂಗಡಿಗೆ ಹೋದಾಗ ಅಲ್ಲಿ ನಿಮಗೆ ತುಂಬ ಇಷ್ಟವಾಗುವ, ತುಂಬ ಬೇಕಾದ ಒಂದು ವಸ್ತುವನ್ನು ನೋಡಿದ್ದೀರಿ ಅಂತ ನೆನಸಿ. ನೀವು ಅದನ್ನು ಯಾರಿಗೂ ಗೊತ್ತಾಗದ ಹಾಗೆ ಸುಲಭವಾಗಿ ಕದಿಯಬಹುದು ಎಂಬ ಯೋಚನೆ ನಿಮಗೆ ಬರಬಹುದು. ಆದರೆ ನಿಮ್ಮ ಮನಸ್ಸಾಕ್ಷಿ ಅದನ್ನು ಮಾಡಬಾರದು ಅಂತ ಹೇಳುತ್ತೆ! ಹಾಗಾಗಿ ಆ ಯೋಚನೆಯನ್ನು ಮರೆತು ಅಲ್ಲಿಂದ ಹೋಗುತ್ತೀರಿ. ಅಲ್ಲಿಗೆ ಆ ಪ್ರಲೋಭನೆ ಕೊನೆಗೊಳ್ಳುತ್ತೆ ಮತ್ತು ನೀವು ಅದನ್ನು ಜಯಿಸಿದ್ದೀರಿ.
ಬೈಬಲ್ ಏನು ಹೇಳುತ್ತೆ
ನಿಮಗೆ ಪ್ರಲೋಭನೆ ಬಂದರೆ ಅದರ ಅರ್ಥ ನೀವು ಒಬ್ಬ ಕೆಟ್ಟ ವ್ಯಕ್ತಿ ಅಂತಲ್ಲ. ಬೈಬಲ್ ನಮ್ಮೆಲ್ಲರಿಗೂ ಪ್ರಲೋಭನೆ ಬರುತ್ತೆ ಅಂತ ಹೇಳುತ್ತೆ. (1 ಕೊರಿಂಥ 10:13) ಆದರೆ ನಮಗೆ ಪ್ರಲೋಭನೆ ಬರುವುದು ದೊಡ್ಡ ವಿಷಯ ಅಲ್ಲ. ಬದಲಿಗೆ ಅದು ಬಂದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಅನ್ನೋದು ಮುಖ್ಯ. ಕೆಲವರು ಎಲ್ಲಾ ಸಮಯದಲ್ಲಿ ತಮಗಿರುವ ತಪ್ಪಾದ ಆಸೆ ಬಗ್ಗೆನೇ ಯೋಚಿಸಿ ಒಂದಲ್ಲ ಒಂದು ಸಮಯದಲ್ಲಿ ಅದಕ್ಕೆ ಬಲಿಬೀಳುತ್ತಾರೆ. ಇನ್ನು ಕೆಲವರು ಆ ಆಸೆ ತಪ್ಪು ಅಂತ ನಿರ್ಧರಿಸಿ ಅದನ್ನು ಮರೆತು ಬಿಡುತ್ತಾರೆ.
“ಆದರೆ ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ.”—ಯಾಕೋಬ 1: 14.
(ಯಾಕೋಬ 1:15) ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ; ಅಂತೆಯೇ ಪಾಪವು ಮಾಡಿ ಮುಗಿಸಲ್ಪಟ್ಟಾಗ ಮರಣವನ್ನು ಉಂಟುಮಾಡುತ್ತದೆ.
g17.4 E ಪುಟ 14
ಪ್ರಲೋಭನೆ
ಬೈಬಲ್ ಪಾಪಕ್ಕೆ ನಡೆಸುವ ಹೆಜ್ಜೆಗಳ ಬಗ್ಗೆ ತಿಳಿಸುತ್ತೆ. “ಆಶೆಯು (ತಪ್ಪಾದ ಆಶೆ) ಬಸುರಾದಾಗ ಪಾಪವನ್ನು ಹೆರುತ್ತದೆ” ಅಂತ ಯಾಕೋಬ 1:15 ಹೇಳುತ್ತೆ. ಸರಳವಾಗಿ ಹೇಳಬೇಕೆಂದರೆ, ಒಬ್ಬ ಗರ್ಭಿಣಿ ಸ್ತ್ರೀ ಮಗುವನ್ನು ಹೆರುವುದು ಹೇಗೆ ಅನಿವಾರ್ಯವೋ ಹಾಗೆಯೇ, ನಾವು ನಮಗಿರುವ ತಪ್ಪಾದ ಆಸೆ ಬಗ್ಗೆನೇ ಯಾವಾಗಲೂ ಯೋಚಿಸುತ್ತಾ ಇದ್ದರೆ, ಪಾಪ ಮಾಡುವುದು ಸಹ ಅನಿವಾರ್ಯ. ಹೀಗಿದ್ದರೂ, ನಾವು ತಪ್ಪಾದ ಆಸೆಗಳಿಗೆ ದಾಸರಾಗುವುದರಿಂದ ತಪ್ಪಿಸಿಕೊಳ್ಳಬಹುದು. ಆ ಆಸೆಗಳನ್ನು ಮೆಟ್ಟಿನಿಲ್ಲಲು ಸಾಧ್ಯ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯಾಕೋಬ 1:17) ಪ್ರತಿಯೊಂದು ಒಳ್ಳೆಯ ದಾನವೂ ಪ್ರತಿಯೊಂದು ಪರಿಪೂರ್ಣ ವರವೂ ಮೇಲಣಿಂದ ಬರುತ್ತದೆ; ಏಕೆಂದರೆ ಅದು ದಿವ್ಯ ಬೆಳಕುಗಳ ತಂದೆಯಾಗಿರುವಾತನಿಂದ ಇಳಿದುಬರುತ್ತದೆ ಮತ್ತು ಆತನಲ್ಲಿ ನೆರಳಿನ ಓಲಿನಷ್ಟೂ ವ್ಯತ್ಯಾಸ ಸೂಚನೆ ಇಲ್ಲ.
it-2 ಪುಟ 253-254
ಬೆಳಕು
ಯೆಹೋವನು ‘ದಿವ್ಯ ಬೆಳಕುಗಳ ತಂದೆಯಾಗಿದ್ದಾನೆ.’ (ಯಾಕೋ 1:17) ದೇವರು, ‘ಹಗಲಿನಲ್ಲಿ ಸೂರ್ಯನನ್ನು, ರಾತ್ರಿಯಲ್ಲಿ ಚಂದ್ರನಕ್ಷತ್ರಗಳ ಕಟ್ಟಳೆಗಳನ್ನು ಪ್ರಕಾಶಕ್ಕಾಗಿ ನೇಮಿಸುವಾತನು’ ಮಾತ್ರವಲ್ಲ, ಆಧ್ಯಾತ್ಮಿಕ ಬೆಳಕಿನ ಮೂಲನೂ ಆಗಿದ್ದಾನೆ. (ಯೆರೆ 31:35; 2 ಕೊರಿಂ 4:6) ದೇವರ ವಾಕ್ಯವನ್ನು, ನ್ಯಾಯ ವಿಧಿಗಳನ್ನು ಮತ್ತು ನಿಯಮಗಳನ್ನು ಪಾಲಿಸಿದರೆ, ಅವು ಬೆಳಕಿನಂತೆ ನಮ್ಮನ್ನು ಮಾರ್ಗದರ್ಶಿಸುತ್ತೆ. (ಕೀರ್ತ 119:105; ಜ್ಞಾನೋ 6:23; ಯೆಶಾ 51:4) ಕೀರ್ತನೆಗಾರನು ಸಹ “ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ” ಅಂತ ಹೇಳಿದ. (ಕೀರ್ತ 36:9; ಕೀರ್ತ 27:1ನ್ನು ಹೋಲಿಸಿ.) ಯಾವ ರೀತಿ ಸೂರ್ಯನ ಬೆಳಕು ಮುಂಜಾನೆಯಿಂದ ‘ಮಧ್ಯಾಹ್ನದ ವರೆಗೆ ಹೆಚ್ಚುತ್ತಾ ಬರುತ್ತದೋ’ ನೀತಿವಂತರ ಮಾರ್ಗವು ಸಹ ಹಾಗೇ ಇದೆ. ಅಂದರೆ ಬೈಬಲ್ ಬಗ್ಗೆ ಅವರಿಗಿರುವ ತಿಳುವಳಿಕೆ ಹೆಚ್ಚುತ್ತಾ ಹೋಗುತ್ತೆ. (ಜ್ಞಾನೋ 4:18) ಯೆಹೋವನು ತಿಳಿಸಿದ ಮಾರ್ಗದಲ್ಲಿ ನಡೆಯಬೇಕು ಎಂಬುದರ ಅರ್ಥ ಆತನ ಬೆಳಕಿನಲ್ಲಿ ನಡೆಯಬೇಕು. (ಯೆಶಾ 2:3-5) ಅದರ ಬದಲು ಒಬ್ಬ ವ್ಯಕ್ತಿ ಒಂದು ವಿಷಯವನ್ನು ಕೆಟ್ಟ ರೀತಿಯಲ್ಲಿ ಅಥವಾ ತಪ್ಪಾದ ದೃಷ್ಟಿಕೋನದಿಂದ ನೋಡುವುದಾದರೆ, ಆತನು ಗಾಢವಾದ ಆಧ್ಯಾತ್ಮಿಕ ಕತ್ತಲೆಯಲ್ಲಿ ಇದ್ದಾನೆ. ಇದು, “ನಿನ್ನ ಕಣ್ಣು ಕೆಟ್ಟದ್ದಾಗಿರುವಲ್ಲಿ ನಿನ್ನ ಇಡೀ ದೇಹ ಕತ್ತಲಾಗಿರುವುದು. ವಾಸ್ತವದಲ್ಲಿ ನಿನ್ನಲ್ಲಿರುವ ಬೆಳಕು ಕತ್ತಲೆಯಾಗಿರುವಲ್ಲಿ, ಆ ಕತ್ತಲೆಯು ಎಷ್ಟು ಗಾಢವಾಗಿದೆ” ಎಂದು ಯೇಸು ಹೇಳಿದ ಮಾತಿನಂತಿದೆ.—ಮತ್ತಾ 6:23; ಧರ್ಮೋ 15:9; 28:54-57; ಜ್ಞಾನೋ 28:22 ಮತ್ತು 2ಪೇತ್ರ 2:14 ಹೋಲಿಸಿ.
(ಯಾಕೋಬ 2:8) ನೀವು ಶಾಸ್ತ್ರವಚನಕ್ಕನುಸಾರ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಯೋಗ್ಯ ಆಜ್ಞೆಯನ್ನು ಕೈಕೊಂಡು ನಡೆಯುವುದಾದರೆ ಒಳ್ಳೇದನ್ನೇ ಮಾಡುವವರಾಗಿದ್ದೀರಿ.
it-2 ಪುಟ 222 ಪ್ಯಾರ 4
ಆಜ್ಞೆ
“ರಾಜಯೋಗ್ಯ ಆಜ್ಞೆ.” ಮಾನವ ಸಂಬಂಧಗಳ ಬಗ್ಗೆ ಒಬ್ಬ ರಾಜನು ತನ್ನ ಪ್ರಜೆಗಳಿಗೆ ಕೊಟ್ಟ ಬೇರೆ ಎಲ್ಲಾ ಆಜ್ಞೆಗಳಿಗಿಂತ “ರಾಜಯೋಗ್ಯ ಆಜ್ಞೆ” ತುಂಬಾ ಪ್ರಾಮುಖ್ಯ. (ಯಾಕೋ 2:8) ಧರ್ಮಶಾಸ್ತ್ರದ ಮುಖ್ಯ ಸಾರ ಪ್ರೀತಿ ಆಗಿತ್ತು. ಅಷ್ಟೇ ಅಲ್ಲ, ಇಡೀ ಧರ್ಮಶಾಸ್ತ್ರಕ್ಕೆ ಆಧಾರವಾಗಿದ್ದ ಆಜ್ಞೆಗಳಲ್ಲಿ ಎರಡನೇ ಆಜ್ಞೆ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” (ರಾಜಯೋಗ್ಯ ಆಜ್ಞೆ) ಎಂಬುದಾಗಿತ್ತು. (ಮತ್ತಾ 22:37-40) ಇಂದು ಕ್ರೈಸ್ತರು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿಲ್ಲ. ಆದರೆ, ನಾವೆಲ್ಲರು ಹೊಸ ಒಡಂಬಡಿಕೆಗೆ ಸಂಬಂಧಿಸಿದ ಆಜ್ಞೆಗಳನ್ನು ಪಾಲಿಸಬೇಕು. ಯಾಕೆಂದರೆ ಆ ಆಜ್ಞೆಗಳು ನಮ್ಮ ಅರಸನಾದ ಯೆಹೋವನಿಂದ ಮತ್ತು ಆತನ ಮಗನೂ ಅರಸನೂ ಆಗಿರುವ ಯೇಸು ಕ್ರಿಸ್ತನಿಂದ ಬಂದಿವೆ.