ನೀವು ದೇವರ ಚಿತ್ತವನ್ನು ಮಾಡುತ್ತಿದ್ದೀರೋ?
ಅವರ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ, ಯೆಹೋವನ ಸಾಕ್ಷಿಗಳಲ್ಲಿಬ್ಬರು ಇಪಿಸ್ಕೊಪಲ್ ಚರ್ಚಿನ ಒಬ್ಬ ಪಾದ್ರಿಯನ್ನು ಭೇಟಿಯಾದರು. ಅವನು ಸುಮಾರು 60 ವರ್ಷ ವಯಸ್ಸಿನ, ಗಡ್ಡವಿರುವ, ಹಿತಕರವಾದ ಮನುಷ್ಯನಂತೆ ತೋರುತ್ತಿದ್ದು, ಅವನ ಚರ್ಚಿನ ಹೆಸರು ಅಚ್ಚೊತ್ತಲ್ಪಟ್ಟ ಒಂದು T-ಷರ್ಟನ್ನು ಧರಿಸಿದ್ದನು. ಒಂದೇ ಉಸಿರಿನಲ್ಲಿ, ಅವನಂದದ್ದು: “ನೀವು ವಾಕ್ಯವನ್ನು ಹಬ್ಬಿಸುವುದರಲ್ಲಿ ತೋರಿಸುವಷ್ಟು ಹುರುಪನ್ನು ನಮ್ಮ ಚರ್ಚಿನ ಸದಸ್ಯರು ತೋರಿಸುವಂತೆ ನಾನು ಹಾರೈಸುತ್ತೇನೆ, ಆದರೆ ನನ್ನ ಮನೆಗೆ ಇನ್ನು ಮೇಲೆ ನೀವು ಭೇಟಿ ಮಾಡಬಾರದು ಎಂದು ನಾನು ನಿಮ್ಮನ್ನು ಕೇಳಬೇಕಾಗಿದೆ.”
ಹೌದು, ಯೆಹೋವನ ಸಾಕ್ಷಿಗಳ ಕೆಲಸವನ್ನು ಮೆಚ್ಚುವ ಮತ್ತು ಅವರ ಹುರುಪು ಮತ್ತು ಉತ್ಸಾಹಕ್ಕಾಗಿ ಅವರನ್ನು ಪ್ರಶಂಸಿಸುವ ಜನರು ಅನೇಕರಿದ್ದಾರೆ. ಆದರೂ, ಸಾಕ್ಷಿಗಳು ಏನು ಮಾಡುತ್ತಾರೋ ಅದರಲ್ಲಿ ಅವರು ಎಳ್ಳಷ್ಟೂ ಆಸಕ್ತರಾಗಿರುವುದಿಲ್ಲ ಯಾ ಅವರು ತಾವಾಗಿಯೇ ಆ ಕೆಲಸ ಮಾಡುವುದನ್ನು ಪರಿಗಣಿಸುವುದಿಲ್ಲ. ಇದು ವಿರೋಧಾತ್ಮಕ ವಸ್ತುಸ್ಥಿತಿಯೆಂದು ತೋರುತ್ತದಾದರೂ, ಹೊಸತೇನೂ ಅಲ್ಲ. ಯೇಸುವಿನ ದಿನಗಳಲ್ಲಿ ಆತನಿಂದ ಇದು ಗಮನಿಸಲ್ಪಟ್ಟಿತ್ತು, ಮತ್ತು ಒಂದು ವಿಚಾರ-ಪ್ರಚೋದಕ ಸಾಮ್ಯದ ಮೂಲಕ ಈ ವಿಷಯವನ್ನು ಅವನು ಶಕ್ತಿಯುತವಾಗಿ ಒತ್ತಿಹೇಳಿದನು.
“ಆದರೆ ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು—ಮಗನೇ, ಹೋಗಿ ಈ ಹೊತ್ತು ದ್ರಾಕ್ಷೇತೋಟದಲ್ಲಿ ಕೆಲಸಮಾಡು ಅಂದಾಗ ಅವನು—ಹೋಗುತ್ತೇನಪೈ ಅಂದಾಗ್ಯೂ ಹೋಗಲೇ ಇಲ್ಲ. ಆ ಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು—ನಾನು ಹೋಗುವದಿಲ್ಲವೆಂದು ಹೇಳಿದಾಗ್ಯೂ ತರುವಾಯ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು. ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು?”—ಮತ್ತಾಯ 21:28-31, NW.
ಉತ್ತರವು ಸ್ವತಸ್ಸಿದ್ಧ. ಯೇಸುವನ್ನು ಆಲಿಸಿದಂತಹ ಜನರ ಗುಂಪಿನಂತೆ, ನಾವು ಉತ್ತರಿಸುವೆವು, “ಎರಡನೆಯವನು.” ಆದರೆ ಸ್ವತಸ್ಸಿದವ್ಧನ್ನು ಮೀರಿ, ತಂದೆಯು ಏನನ್ನು ಬಯಸಿದ್ದನೋ ಅದನ್ನು ಮಾಡುವುದು ಪ್ರಾಮುಖ್ಯ ಎಂಬುದರ ಕಡೆಗೆ ಯೇಸುವು ನಮ್ಮ ಗಮನವನ್ನು ಸಾಮ್ಯದ ಮೂಲಕ ಸೆಳೆಯುತ್ತಾನೆ. ಎರಡನೆಯ ಮಗನು ಹೋಗಲು ತಾನು ಬಯಸುವುದಿಲ್ಲವೆಂದು ಹೇಳಿದರೂ, ಅವನು ಹೇಗಾದರೂ ಹೋದನು ಮತ್ತು ಅದಕ್ಕಾಗಿ ಪ್ರಶಂಸಿಸಲ್ಪಟ್ಟನು. ಯೋಗ್ಯ ತೆರನಾದ ಕೆಲಸವನ್ನು ಮಾಡುವುದು ಸಮಪ್ರಮಾಣದಲ್ಲಿ ಪ್ರಾಮುಖ್ಯವಾಗಿದೆ. ಎರಡನೆಯ ಮಗನು ತಂದೆಯ ದ್ರಾಕ್ಷೇತೋಟದಲ್ಲಿ ಕೆಲಸಮಾಡುವುದರ ಮೂಲಕ ಕಾರ್ಯಗೈದನು; ಅವನು ಹೊರಗೆ ಹೋಗಿ ತನ್ನ ಸ್ವಂತ ದ್ರಾಕ್ಷೇತೋಟದಲ್ಲಿ ಕೆಲಸಮಾಡಲಿಲ್ಲ.
ನಮಗೋಸ್ಕರ ಇದರಲ್ಲಿ ಏನರ್ಥವಿದೆ? ಇಂದು ಆರಾಧಕರಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ? ಅವನ ತಂದೆಯ ಚಿತ್ತವನ್ನು ಮಾಡಲು ಸಹಾಯ ಮಾಡುವಂತಹ ಏನನ್ನು ನಾವು ಯೇಸುವಿನ ಜೀವಿತದಿಂದ ಕಲಿಯಬಲ್ಲೆವು? ಇವುಗಳು ಪ್ರಾಮುಖ್ಯವಾದ ಪ್ರಶ್ನೆಗಳು, ಮತ್ತು ಸರಿಯಾದ ಉತ್ತರಗಳನ್ನು ನಾವು ಕಂಡುಕೊಳ್ಳುವುದು ನಮ್ಮ ನಿರಂತರ ಒಳಿತಿನ ಅರ್ಥದಲ್ಲಿರುತ್ತದೆ, ಯಾಕಂದರೆ “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17; ಎಫೆಸ 5:17.
“ದೇವರ ಚಿತ್ತ” ವೇನಾಗಿದೆ?
“ಚಿತ್ತ” (“will”) ಎಂಬ ನಾಮಪದವು ಕಾಂಪ್ರಿಹೆನ್ಸಿವ್ ಕನ್ಕಾರ್ಡನ್ಸ್ ಆಫ್ ದಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಷ ಆಫ್ ದಿ ಹೋಲಿ ಸ್ಕ್ರಿಪ್ಚರ್ಸ್ ನಲ್ಲಿ 80 ಕ್ಕಿಂತಲೂ ಹೆಚ್ಚು ಬಾರಿ ಪಟ್ಟಿಮಾಡಲ್ಪಟ್ಟಿದೆ. ಇವುಗಳಲ್ಲಿ ಸುಮಾರು 60 ಬಾರಿ, (ಯಾ ಸುಮಾರು 75 ಪ್ರತಿಶತದಷ್ಟು ಬಾರಿ) ಈ ಸೂಚನೆಯು ದೇವರ ಚಿತ್ತಕ್ಕೆ ಇರುತ್ತದೆ. “ದೇವರ ಚಿತ್ತ” (will of God), “ನನ್ನ ತಂದೆಯ ಚಿತ್ತ” ಮತ್ತು “ದೇವರ ಚಿತ್ತ” (God’s will) ಎಂಬಂತಹ ಅಭಿವ್ಯಕ್ತಿಗಳು 20 ಕ್ಕಿಂತಲೂ ಹೆಚ್ಚು ಬಾರಿ ಸಂಭವಿಸುತ್ತವೆ. ನಮಗೆ ದೈವಿಕ ಚಿತ್ತವು ಆದ್ಯತೆಯ ಪ್ರಾಮುಖ್ಯತೆಯದ್ದಾಗಿರತಕ್ಕದ್ದು ಎಂದು ನಾವಿದರಿಂದ ನೋಡಬಲ್ಲೆವು. ದೇವರ ಚಿತ್ತವನ್ನು ಮಾಡುವುದು ನಮ್ಮ ಜೀವಿತಗಳಲ್ಲಿ ಮುಖ್ಯ ಆಸ್ಥೆಯದ್ದಾಗಿರತಕ್ಕದ್ದು.
ಇಂಗ್ಲಿಷಿನಲ್ಲಿ “ವಿಲ್” ನಾಮಪದದ ಅರ್ಥವು ‘ಇಷ್ಟ, ಇಚ್ಛೆ, ನಿರ್ಧಾರ, ಬಯಸಿದ್ದ ಒಂದು ವಸ್ತು, ವಿಶೇಷವಾಗಿ ಒಂದು ಆಯ್ಕೆ ಯಾ ಅಧಿಕಾರದಲ್ಲಿರುವವನ ಯಾ ಶಕಿಯ್ತಿರುವವನ ದೃಢಸಂಕಲ್ಪ’ ಎಂದಾಗಿದೆ. ಹಾಗಾದರೆ, ಶೇಷ್ಠ ಅಧಿಕಾರಿಯಾದ ಯೆಹೋವನಿಗೆ ಒಂದು ಚಿತ್ತ, ಒಂದು ಇಚ್ಛೆ ಯಾ ನಿರ್ಧಾರ ಇದೆ. ಅದೇನು? ಆಂಶಿಕವಾಗಿ ಶಾಸ್ತ್ರಗ್ರಂಥವು ನಮಗೆ ಹೇಳುವುದು, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ನಿಷ್ಕೃಷ್ಟ [NW] ಜ್ಞಾನಕ್ಕೆ ಸೇರಬೇಕೆಂಬದು ಆತನ [ದೇವರ] ಚಿತ್ತವಾಗಿದೆ.” (1 ತಿಮೊಥೆಯ 2:4) ಇತರರಿಗೆ ಈ ನಿಷ್ಕೃಷ್ಟ ಜ್ಞಾನವನ್ನು ತರಲು ಯೇಸು ಕ್ರಿಸ್ತನು ಮತ್ತು ಆರಂಭದ ಕ್ರೈಸ್ತರು ಪೂರ್ಣಾತ್ಮದಿಂದ ಕೆಲಸಮಾಡಿದರು.—ಮತ್ತಾಯ 9:35; ಅ. ಕೃತ್ಯಗಳು 5:42; ಫಿಲಿಪ್ಪಿ 2:19, 22.
ಇಂದು ದೇವರ ಚಿತ್ತವನ್ನು ಯಾರು ಮಾಡುತ್ತಿದ್ದಾರೆ? ಯೇಸುವಿನ ಸಾಮ್ಯದಲ್ಲಿದ್ದಂತೆ, ಹೋಗಿ ತನ್ನ ತಂದೆಯ ಚಿತ್ತವನ್ನು ಮಾಡಿದ ಕಿರಿಯ ಮಗನ ಹಾಗೆ ಯೇಸು ಕ್ರಿಸ್ತನ ಹಿಂಬಾಲಕರೆಂದು ಕರೆಯಲ್ಪಡುವ ಸುಮಾರು 200 ಕೋಟಿಯಷ್ಟು ಜನರಲ್ಲಿ ಎಷ್ಟು ಮಂದಿ ಇದ್ದಾರೆ? ಉತ್ತರವನ್ನು ಕಂಡುಕೊಳ್ಳುವುದು ಕಷ್ಟವೇನೂ ಅಲ್ಲ. ಯೇಸು ಕ್ರಿಸ್ತನ ಹೆಜ್ಜೆಜಾಡಿನ ನಿಜ ಹಿಂಬಾಲಕರು, ಅವರು ಮಾಡುವರು ಎಂದವನು ಹೇಳಿದ ಕೆಲಸವನ್ನು ಮಾಡುತ್ತಾ ಇರುವರು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಲೋಕಾದ್ಯಂತ ಇರುವ ಸುಮಾರು 45 ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಕ್ರಿಯವಾಗಿ ಸಾರುತ್ತಾ ಮತ್ತು ಇತರರಿಗೆ ಕಲಿಸುತ್ತಾ ಇದ್ದು, ಶಾಂತಿ ಮತ್ತು ಭದ್ರತೆಯ ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿ ರಾಜ್ಯದೆಡೆಗೆ ನಿರ್ದೇಶಿಸುತ್ತಾರೆ. ದೇವರ ಚಿತ್ತವನ್ನು ಮಾಡುವುದರಲ್ಲಿ ನಿಮಗೆ ಪೂರ್ಣ ಪಾಲು ಇದೆಯೇ? ಯೇಸು ಮಾಡಿದಂತೆಯೇ ರಾಜ್ಯದ ಸುವಾರ್ತೆಯನ್ನು ನೀವು ಸಾರುತ್ತಾ ಇದ್ದೀರೋ?—ಅ. ಕೃತ್ಯಗಳು 10:42; ಇಬ್ರಿಯ 10:7.
ದೇವರ ಚಿತ್ತವನ್ನು ಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುವುದು
ದೇವರ ಚಿತ್ತವೇನು ಎಂದು ಕಲಿಯುವುದರಲ್ಲಿ ಆನಂದವು ಇರುವಾಗ, ದೇವರ ಚಿತ್ತವನ್ನು ಇತರರಿಗೆ ಕಲಿಸುವುದರಲ್ಲಿ ಹೆಚ್ಚಿನ ಆನಂದವು ಇದೆ. ತನ್ನ ತಂದೆಯ ಕುರಿತು ಜನರಿಗೆ ಕಲಿಸುವುದರಲ್ಲಿ ಯೇಸು ಆನಂದವನ್ನು ಕಂಡುಕೊಂಡನು. ಅದು ಅವನಿಗೆ ಆಹಾರದೋಪಾದಿ ಇತ್ತು. (ಯೋಹಾನ 4:34) ಯೇಸು ಮಾಡಿದಂತೆಯೇ ನಾವು ಮಾಡಿದರೆ, ಅಂದರೆ, ತನ್ನ ತಂದೆಯಿಂದ ಅವನು ಪಡೆದಂತಹ ವಿಷಯಗಳನ್ನು, ಅವನು ಕಲಿಸಿದಂತಹದ್ದನ್ನು ಸಾರುವುದಾದರೆ ಮತ್ತು ಕಲಿಸುವುದಾದರೆ ನಾವು ಕೂಡ ನಿಜ ಸಂತೋಷದಲ್ಲಿ ಆನಂದಿಸಬಹುದು. (ಮತ್ತಾಯ 28:19, 20) ಯೇಸು ವಾಗ್ದಾನಿಸಿದಂತೆ, “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.”—ಯೋಹಾನ 13:17.
ಉದಾಹರಿಸಲು: ಇತ್ತೀಚೆಗೆ ಪೂರ್ಣ ಸಮಯದ ಪಯನೀಯರ್ ಶುಶ್ರೂಷೆಯಲ್ಲಿ ಪುನಃ ಸೇರ್ಪಡೆಗೊಂಡ ತಾಯಿಯೊಬ್ಬಳು ಹೇಳಿದ್ದು: “ವಿವಿಧ ಬೈಬಲ್ ಸತ್ಯಗಳು ಹೃದಯವನ್ನು ತಾಕಿದಾಗ ಬೈಬಲ್ ವಿದ್ಯಾರ್ಥಿಯೊಬ್ಬನ ಮುಖವು ಪ್ರಕಾಶಿಸುವುದನ್ನು ಕಾಣುವುದು ಎಷ್ಟು ರೋಮಾಂಚಕರ! ಒಬ್ಬ ನಿರ್ದಿಷ್ಟ ವಿದ್ಯಾರ್ಥಿಯು ಅಧ್ಯಯನ ಮಾಡುವ ಮೊದಲು ಎಲ್ಲಾ ಶಾಸ್ತ್ರ ವಚನಗಳನ್ನು ಬರೆದಿಡುವುದು ಮತ್ತು ತದನಂತರ ಪರಾಮರ್ಶೆಯ ಪ್ರಶ್ನೆಗಳನ್ನು ಅವಳು ಉತ್ತರಿಸಲು ಶಕ್ತಳಾಗುವಂತೆ ಅಧ್ಯಯನದ ಸಮಯದಲ್ಲಿ ಟಿಪ್ಪಣಿ ಬರೆದುಕೊಳ್ಳುವದನ್ನು ನೋಡುವುದು ನನಗೆ ಅತಿ ಆನಂದವನ್ನು ತರುತ್ತದೆ.” ಅವಳ ಬೈಬಲ್ ವಿದ್ಯಾರ್ಥಿಗಳಲ್ಲಿ ಇನ್ನೊಬ್ಬಳಿಗೆ ಅವಳ ಹದಿಹರಯದಲ್ಲಿ ಸತ್ಯದ ಸ್ವಲ್ಪ ಸಂಪರ್ಕವುಂಟಾಗಿತ್ತು. ಈಗ ಅವಳು ಮದುವೆಯಾಗಿದ್ದಳು, ಮತ್ತು ತನ್ನ ವೈಯಕ್ತಿಕ ಸಮಸ್ಯೆಗಳ ಕುರಿತು ಚಿಂತಿತಳಾಗಿದ್ದು, ಅವಳು ಸಾಕ್ಷಿಗಳನ್ನು ಕಂಡುಕೊಳ್ಳಲು ಕಾತರಪಟ್ಟಿದ್ದಳು. ಪಯನೀಯರ್ ಸಹೋದರಿಯು ಅವಳನ್ನು ಕಂಡುಕೊಂಡಾಗ, ಅವಳ ಆನಂದವು ಎಂತಹದ್ದಾಗಿತ್ತು! ಅವಳ ಬೈಬಲ್ ಅಧ್ಯಯನವನ್ನು ಪುನಃ ಆರಂಭಿಸುವುದರಲ್ಲಿ ಈ ಯುವ ಸ್ತ್ರೀಯು ಉತ್ಸಾಹಿತಳಾಗಿದ್ದಳು.
ದೇವರ ಚಿತ್ತವನ್ನು ಮಾಡುವುದರಲ್ಲಿ ಆನಂದವನ್ನು ಕಾಪಾಡಿಕೊಳ್ಳುವುದು
ಪ್ರಾಚೀನ ಇಸ್ರಾಯೇಲಿನ ಅರಸ ದಾವೀದನು ತನ್ನ ಜೀವಮಾನದಲ್ಲೆಲ್ಲಾ ದೇವರ ಚಿತ್ತವನ್ನು ಮಾಡಲು ಹುಡುಕಿದ್ದ ಒಬ್ಬನಾಗಿದ್ದನು. ಅನೇಕ ಸಂಕಟಗಳು ಮತ್ತು ಒತ್ತಡಗಳು ಅವನ ವಿರುದ್ಧ ತರಲ್ಪಟ್ಟಾಗ್ಯೂ, ಹೀಗೆಂದು ಹೇಳಲು ಅವನು ಪ್ರೇರಿಸಲ್ಪಟ್ಟನು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” (ಕೀರ್ತನೆ 40:8) ಯೆಹೋವನ ಚಿತ್ತವನ್ನು ಮಾಡುವುದು ದಾವೀದನ ಆತ್ಮದಲ್ಲೇ, ಅವನ ವ್ಯಕ್ತಿತ್ವದಲ್ಲೇ ಇತ್ತು. ಅದು ಯೆಹೋವನನ್ನು ಸೇವಿಸುವುದರಲ್ಲಿ ಅವನ ಬಾಡದ ಆನಂದದ ರಹಸ್ಯವಾಗಿತ್ತು. ದೇವರ ಚಿತ್ತವನ್ನು ಮಾಡುವುದು ದಾವೀದನಿಗೆ ಸಂಕಟಮಯವಾಗಿರಲಿಲ್ಲ. ಬದಲಾಗಿ, ಅವನ ಹೃದಯದಿಂದ ಹೊರಸೂಸಿದ ಆನಂದವಾಗಿತ್ತು. ಕೆಲವೊಮ್ಮೆ ಅವನು ಪಾಪ ಮಾಡಿ, ನ್ಯೂನತೆಯವನಾದರೂ ಕೂಡ, ಅವನ ಜೀವಮಾನದಲ್ಲೆಲ್ಲಾ ಅವನು ತನ್ನ ದೇವರಾದ ಯೆಹೋವನ ಚಿತ್ತವನ್ನು ಅತ್ಯುತ್ತಮವಾಗಿ ಮಾಡಲು ಹೋರಾಡಿದನು.
ಕೆಲವು ಸಂದರ್ಭಗಳಲ್ಲಿ, ನಮ್ಮ ಆನಂದವು ಕುಂದಿಹೋಗಬಹುದು. ನಾವು ಆಯಾಸಗೊಳ್ಳಬಹುದು ಯಾ ಮನಗುಂದಿದವರಾಗಬಹುದು. ಪ್ರಾಯಶಃ ನಮ್ಮ ಗತಕಾಲವು ನಮ್ಮನ್ನು ಕಾಡಿಸಬಹುದು, ಬಹುಹಿಂದೆ ಗತಕಾಲದಲ್ಲಿ ನಾವು ಮಾಡಿದ ಯಾವುದೋ ತಪ್ಪಾದ ಕೃತ್ಯವೊಂದು ನಮ್ಮ ಮನಸ್ಸಾಕ್ಷಿಯನ್ನು ಕೊರೆಯಬಹುದು. ದೇವರ ವಾಕ್ಯದ ಹೆಚ್ಚಿನ ಸಮಗ್ರ ಅಧ್ಯಯನದ ಮೂಲಕ ಅಂತಹ ಭಾವನೆಗಳನ್ನು ನಾವು ಆಗಾಗ್ಗೆ ಜಯಿಸಬಲ್ಲೆವು. ದಾವೀದನು ಮಾಡಿದಂತೆ, ನಮ್ಮ “ಅಂತರಂಗದಲ್ಲಿ” ದೇವರ ನಿಯಮವು ಕೆತ್ತಲ್ಪಡುವಂತೆ ನಾವು ಗುರಿಯನ್ನಿಡಬಲ್ಲೆವು. ಪೂರ್ಣಾತ್ಮದಿಂದ ಅಂದರೆ ನಮ್ಮ ಸಾಮರ್ಥ್ಯದಲ್ಲಿ ಅತ್ಯುತ್ತಮವಾಗಿ ದೇವರ ಚಿತ್ತವನ್ನು ಮಾಡಲು ನಾವು ಪ್ರಯತ್ನಿಸುವುದಾದರೆ, ಅದಕ್ಕೆ ತಕ್ಕಂತೆಯೇ ಅವನು ನಮ್ಮನ್ನು ಆಶೀರ್ವದಿಸುವನು, ಯಾಕಂದರೆ ಅವನು ನಂಬಿಗಸ್ತನಾಗಿದ್ದಾನೆ.—ಎಫೆಸ 6:6; ಇಬ್ರಿಯ 6:10-12; 1 ಪೇತ್ರ 4:19.
ಆಸಕ್ತಕರವಾಗಿಯೇ, ಇಬ್ರಿಯ 10:5-7 ರಲ್ಲಿ ಅಪೊಸ್ತಲ ಪೌಲನು ಕೀರ್ತನೆ 40:6-8ರ ದಾವೀದನ ಮಾತುಗಳನ್ನು ಉಲ್ಲೇಖಿಸಿದನು ಮತ್ತು ಅವುಗಳನ್ನು ಯೇಸು ಕ್ರಿಸ್ತನಿಗೆ ಅನ್ವಯಿಸಿದನು. ಹಾಗೆ ಮಾಡುವುದರಲ್ಲಿ, ಯೇಸು ಅವನ ತಂದೆಗೆ ಎಷ್ಟು ನಿಕಟವಾಗಿದ್ದನು ಎಂದು ಪೌಲನು ನಿರ್ದೇಶಿಸಿದ್ದಾನೆ. “ಚಿತ್ತ” ಕ್ಕಾಗಿರುವ ಹೀಬ್ರು ಪದವು ‘ಇಷ್ಟ, ಆಶೆ, ಮೆಚ್ಚಿಕೆ, ಯಾ ಸಂತೋಷ’ ಎಂಬ ವಿಚಾರವನ್ನು ಹೊಂದಿರುತ್ತದೆ. ಆದುದರಿಂದ, ಕ್ರಿಸ್ತನ ಕುರಿತಾಗಿ ಕೀರ್ತನೆ 40:8ನ್ನು “ನನ್ನ ದೇವರೇ, ನಿನ್ನ ಚಿತ್ತವನ್ನು ಮಾಡುವುದರಲ್ಲಿ ನಾನು ಸಂತೋಷಪಟ್ಟೆನು”a ಎಂದು ಓದಬಹುದು. ತನ್ನ ತಂದೆಗೆ ಯಾವುದು ಮೆಚ್ಚಿಕೆಯಾಗುತ್ತದೋ ಅದನ್ನು ಮಾಡಲು ಯೇಸು ಬಯಸಿದ್ದನು. ಅವನಿಂದ ಕೇಳಲ್ಪಟ್ಟದ್ದಕ್ಕಿಂತಲೂ ಹೆಚ್ಚನ್ನು ಮಾಡಲು ಯೇಸು ಮುಂದರಿದನು. ಅವನ ತಂದೆಯ ಹೃದಯಕ್ಕೆ ಆಪ್ತವಾಗಿರುವುದನ್ನು ಅವನು ಮಾಡಿದನು, ಮತ್ತು ಅದನ್ನು ಮಾಡುವುದರಲ್ಲಿ ಅವನು ಸಂತೋಷಿಸಿದನು.
ದೇವರ ಚಿತ್ತವೇನು ಮತ್ತು ದೇವರ ಆಶೀರ್ವಾದವನ್ನು ಗಳಿಸಲು ಅವರು ಏನನ್ನು ಮಾಡತಕ್ಕದ್ದು ಎಂದು ಇತರರಿಗೆ ಉಪದೇಶಿಸುವುದರ ಸುತ್ತಲೂ ಯೇಸುವಿನ ಇಡೀ ಜೀವಿತವು ಸುತ್ತುವರಿದಿತ್ತು. ಅವನೊಬ್ಬ ಪೂರ್ಣ ಸಮಯ ಸಾರುವವನೂ, ಕಲಿಸುವವನೂ ಆಗಿದ್ದನು ಮತ್ತು ಆ ಕೆಲಸವನ್ನು ಮಾಡುವುದರಲ್ಲಿ ಅವನು ಮಹಾ ಆನಂದವನ್ನು ಕಂಡುಕೊಂಡನು. ಆದಕಾರಣ ಯೆಹೋವನ ಕೆಲಸವನ್ನು ನಾವು ಹೆಚ್ಚೆಚ್ಚು ಮಾಡಿದಷ್ಟಕ್ಕೆ, ನಾವು ಹೆಚ್ಚು ಆನಂದವನ್ನು ಪಡೆಯಲಿರುವೆವು ಎಂಬುದು ಸಮಂಜಸವಾಗಿದೆ. ನಿಮ್ಮ ಆನಂದವು ಕೂಡ ವೃದ್ಧಿಯಾಗುವಂತೆ ಸಾರುವ ಕಾರ್ಯದಲ್ಲಿ ನೀವು ಸಹ ಪೂರ್ಣ ಸಮಯ ಸೇವೆ ಸಲ್ಲಿಸಶಕ್ತರೋ?
ದೇವರ ಚಿತ್ತವನ್ನು ಮಾಡುವುದರಲ್ಲಿ ನಮ್ಮ ಆನಂದವನ್ನು ಕಾಪಾಡಿಕೊಳ್ಳುವುದರಲ್ಲಿ ಇನ್ನೊಂದು ಹೆಚ್ಚಿನ ಸಹಾಯಕವು, ಭವಿಷ್ಯವನ್ನು ಸ್ಫುಟ ಕೇಂದ್ರವಾಗಿ ಇಟ್ಟುಕೊಳ್ಳುವುದಾಗಿದೆ. ಅದನ್ನು ತಾನೇ ಯೇಸು ಮಾಡಿದ್ದನು. “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿ” ಕೊಂಡನು. ಅವನಿಗೆ, ದೇವರಿಗೆ ಕೊನೇ ತನಕ ನಂಬಿಗಸ್ತನಾಗಿ ರುಜುಪಡಿಸುವುದು ಮತ್ತು ಅನಂತರ ಆತನ ತಂದೆಯ ಬಲಗಡೆಯಲ್ಲಿ ಅರಸುತನದ ಬಹುಮಾನವನ್ನು ಪಡೆಯುವುದು ಆನಂದವಾಗಿತ್ತು.—ಇಬ್ರಿಯ 12:2.
ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವವರಿಗೆ ಬರಲಿರುವ ಭವಿಷ್ಯದ ಆನಂದವನ್ನು ಊಹಿಸಿರಿ. ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸುವವರಿಗೆ ಅದು ಸಂಕಟವನ್ನು ತರುವುದಾದರೂ ಕೂಡ, ಅವರ ಸ್ವಂತ ಸ್ವಾರ್ಥದ ಚಿತ್ತವನ್ನು ಮಾಡುವುದರಲ್ಲಿ ಪಟ್ಟುಹಿಡಿಯುವವರಿಗೆ ಆಗುವ ನಾಶನವನ್ನು ಅವರು ನೋಡಲಿರುವರು. (2 ಥೆಸಲೊನೀಕ 1:7, 8) ದೇವರ ಚಿತ್ತವನ್ನು ಕಲಿಯುವ ಮತ್ತು ಮಾಡುವ ಸಂದರ್ಭದ ದೊರಕುವಿಕೆಯಲ್ಲಿ ಪುನರುತಿತ್ಥ ಪ್ರಿಯರ ಆನಂದವನ್ನು ಯೋಚಿಸಿರಿ. ಯಾ ಭೂಮಿಯನ್ನು ಪ್ರಮೋದವನವಾಗಿ ಪುನಃ ಸ್ಥಾಪಿಸುವುದರ ದೇವರ ಉದ್ದೇಶವನ್ನು ಪರಿಗಣಿಸಿರಿ. ಮತ್ತು ಕೊನೆಯಲ್ಲಿ, ಯೆಹೋವನ ಚಿತ್ತದ ವಿರೋಧಿಯಾದ ಸೈತಾನನ ಸಂಪೂರ್ಣ ನಾಶನದಿಂದಾಗುವ ಬಿಡುಗಡೆಯನ್ನು ಊಹಿಸಿರಿ.
ಹೌದು, ಇಂದು ದೇವರ ಚಿತ್ತವನ್ನು ಮಾಡುವುದು ಈಗ ಬಹಳಷ್ಟು ಆನಂದವನ್ನು ಮತ್ತು ಭವಿಷ್ಯದಲ್ಲಿ ಅಂತ್ಯವಿಲ್ಲದ ಸಂತೋಷವನ್ನು ತರಬಲ್ಲದು. ಸಾರುವ ಕಾರ್ಯದಲ್ಲಿ ನಮಗೆ ದೊರಕುವ ಪ್ರತಿವರ್ತನೆಯು ಏನೇ ಆಗಿರಲಿ, ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಸಂತೋಷವನ್ನು ಪಡೆದ ಯೇಸುವಿನ ಉದಾಹರಣೆಯನ್ನು ನಾವು ಅನುಕರಿಸೋಣ.
[ಅಧ್ಯಯನ ಪ್ರಶ್ನೆಗಳು]
a ಕೀರ್ತನೆ 40:8 [NW]ರ ಪಾದಟಿಪ್ಪಣಿಯನ್ನು ನೋಡಿರಿ.