ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮಾರ್ಚ್ 1-7
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 7-8
“ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ”
it-1-E ಪುಟ 497 ಪ್ಯಾರ 3
ಸಭೆ
ಇಸ್ರಾಯೇಲ್ನಲ್ಲಿ ಕೆಲವೊಮ್ಮೆ ಪ್ರತಿನಿಧಿಗಳು ಜನ್ರ ಪರವಾಗಿ ಕೆಲ್ಸ ಮಾಡ್ತಿದ್ರು. (ಎಜ್ರ 10:14) ಪವಿತ್ರ ಡೇರೆಯನ್ನ ಜೋಡಿಸಿದ ಮೇಲೆ ಇಸ್ರಾಯೇಲಿನ “ಕುಲಗಳ ಮುಖ್ಯಸ್ಥರು” ಅರ್ಪಣೆಗಳನ್ನ ತಂದ್ರು. (ಅರ 7:1-11) ನೆಹೆಮೀಯನ ಕಾಲದಲ್ಲಿ ಒಂದು ಒಪ್ಪಂದ ಮಾಡಿಕೊಳ್ವಾಗ ಜನ್ರ ಪರವಾಗಿ ಪುರೋಹಿತರು, ಲೇವಿಯರು ಮತ್ತು “ಇಸ್ರಾಯೇಲಿನ ಮುಖ್ಯಸ್ಥರು” ‘ಸಹಿ ಮಾಡಿ ಆ ಒಪ್ಪಂದವನ್ನ ಪಕ್ಕಾ ಮಾಡ್ತಿದ್ರು.’ (ನೆಹೆ 9:38–10:27) ಇಸ್ರಾಯೇಲ್ಯರು ಕಾಡಲ್ಲಿದ್ದಾಗ 250 ಪ್ರಧಾನರು ಅಂದ್ರೆ “ಇಸ್ರಾಯೇಲ್ಯರಿಂದ ಆಯ್ಕೆಯಾದ ಗಣ್ಯ ಪುರುಷರು” ಕೋರಹ, ದಾತಾನ್, ಅಬೀರಾಮ್ ಮತ್ತು ಓನ ಜೊತೆ ಸೇರ್ಕೊಂಡು ಮೋಶೆ ಮತ್ತು ಆರೋನನ ವಿರುದ್ಧ ತಿರುಗಿಬಿದ್ರು. (ಅರ 16:1-3) ಇಸ್ರಾಯೇಲ್ “ಜನ್ರನ್ನ ನೋಡ್ಕೊಳ್ಳೋ ಭಾರನ” ಮೋಶೆ ಒಬ್ಬನಿಗೇ ಹೊರೋಕೆ ಆಗದಿದ್ದಾಗ ದೇವ್ರು ಹೇಳಿದಂತೆ ಅವನು ಇಸ್ರಾಯೇಲ್ಯರ ಹಿರಿಯರಲ್ಲಿ 70 ಜನ್ರನ್ನ ತನ್ನ ಸಹಾಯಕ್ಕೋಸ್ಕರ ಆರಿಸ್ಕೊಂಡ. (ಅರ 11:16, 17, 24, 25) ಯಾಜಕಕಾಂಡ 4:15 ‘ಸಮೂಹದ ಹಿರಿಯರ’ ಬಗ್ಗೆ ಹೇಳುತ್ತೆ. ಇಸ್ರಾಯೇಲ್ ಜನ್ರನ್ನು ಪ್ರತಿನಿಧಿಸ್ತಿದ್ದ ಇವ್ರು ಬಹುಶಃ ಅಲ್ಲಿನ ಮುಖ್ಯಸ್ಥರು, ಹಿರಿಯರು, ನ್ಯಾಯಾಧೀಶರು ಮತ್ತು ಅಧಿಕಾರಿಗಳು ಆಗಿದ್ದಿರಬೇಕು.—ಅರ 1:4, 16; ಯೆಹೋ 23:2; 24:1.
it-2-E ಪುಟ 796 ಪ್ಯಾರ 1
ರೂಬೇನ್
ಇಸ್ರಾಯೇಲ್ಯರ ಪಾಳೆಯದಲ್ಲಿ ದೇವದರ್ಶನ ಡೇರೆಯ ದಕ್ಷಿಣಕ್ಕೆ ರೂಬೇನ್ ಕುಲದವ್ರು ಡೇರೆ ಹಾಕೊಂಡಿದ್ರು. ಈ ಕುಲದ ಒಂದು ಪಕ್ಕದಲ್ಲಿ ಸಿಮೆಯೋನ್ ಕುಲದವ್ರು ಇನ್ನೊಂದು ಪಕ್ಕದಲ್ಲಿ ಗಾದ್ ಕುಲದವ್ರು ಡೇರೆ ಹಾಕೊಂಡಿದ್ರು. ಇಸ್ರಾಯೇಲ್ಯರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗ್ವಾಗ ಮೂರು-ಮೂರು ಕುಲಗಳ ದಳವಾಗಿ ಹೋಗ್ತಿದ್ರು. ರೂಬೇನ್, ಸಿಮೆಯೋನ್, ಗಾದ್ ಕುಲಗಳು ಒಂದು ದಳವಾಗಿತ್ತು. ಇದ್ರಲ್ಲಿ ರೂಬೇನ್ ಕುಲ ಮುಂದೆ ಇರ್ತಿತ್ತು. ಈ ದಳದ ಮುಂದೆ ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್ ಕುಲಗಳ ದಳ ಇರ್ತಿತ್ತು. (ಅರ 2:10-16; 10:14-20) ಪವಿತ್ರ ಡೇರೆಯ ಉದ್ಘಾಟನೆ ಮಾಡಿದ ದಿನ ಇದೇ ಕ್ರಮದಲ್ಲಿ ಕುಲಗಳು ತಮ್ಮ ಅರ್ಪಣೆಗಳನ್ನ ಅರ್ಪಿಸಿದವು.—ಅರ 7:1, 2,10-47.
ಕಾವಲಿನಬುರುಜು04 8/1 ಪುಟ 25 ಪ್ಯಾರ 1
ಅರಣ್ಯಕಾಂಡ ಪುಸ್ತಕದ ಮುಖ್ಯಾಂಶಗಳು
8:25, 26. ಸಮರ್ಥ ವ್ಯಕ್ತಿಗಳು ಲೇವಿಯರ ಸ್ಥಾನಗಳನ್ನು ತುಂಬಸಾಧ್ಯವಾಗುವಂತೆ, ಮತ್ತು ವೃದ್ಧ ಲೇವಿಯರ ವಯಸ್ಸಿಗೆ ಪರಿಗಣನೆಯನ್ನು ತೋರಿಸುತ್ತಾ, ಕಡ್ಡಾಯ ಸೇವೆಯಿಂದ ಇಂಥವರಿಗೆ ನಿವೃತ್ತಿಯನ್ನು ನೀಡುವಂತೆ ಆಜ್ಞೆಯು ಕೊಡಲ್ಪಟ್ಟಿತ್ತು. ಆದರೂ, ಅವರು ಇತರ ಲೇವಿಯರಿಗೆ ಸಹಾಯವನ್ನು ಮಾಡಲು ತಾವಾಗಿಯೇ ಮುಂದೆಬರಸಾಧ್ಯವಿತ್ತು. ಇಂದು ಒಬ್ಬ ರಾಜ್ಯ ಘೋಷಕನಾಗಿರುವುದರಿಂದ ಯಾವುದೇ ರೀತಿಯ ನಿವೃತ್ತಿಯು ದೊರಕುವುದಿಲ್ಲವಾದರೂ, ಈ ನಿಯಮದ ಹಿಂದಿರುವ ಮೂಲತತ್ತ್ವವು ಒಂದು ಅಮೂಲ್ಯವಾದ ಪಾಠವನ್ನು ಕಲಿಸುತ್ತದೆ. ವಯಸ್ಸಾದ ಕಾರಣ ಕ್ರೈಸ್ತನೊಬ್ಬನು ನಿರ್ದಿಷ್ಟ ಕರ್ತವ್ಯಗಳನ್ನು ಪೂರೈಸಲು ಅಸಮರ್ಥನಾಗಿರುವಲ್ಲಿ, ತಾನು ನಿರ್ವಹಿಸಲು ಸಾಧ್ಯವಿರುವಂಥ ರೀತಿಯ ಸೇವಾ ಕ್ಷೇತ್ರದಲ್ಲಿ ಅವನು ಒಳಗೂಡಬಹುದು.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 835
ಮೊದಲ ಮಗ, ಮೊದಲು ಹುಟ್ಟಿದ ಮರಿಗಳು
ಇಸ್ರಾಯೇಲಿನಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಚೊಚ್ಚಲ ಮಗ ಅಂದ್ರೆ ಮೊದಲನೇ ಮಗ ಮುಂದೆ ಕುಟುಂಬಕ್ಕೆ ಮುಖ್ಯಸ್ಥನಾಗ್ತಿದ್ದ. ಹೀಗೆ ಪ್ರತಿಯೊಂದು ಕುಟುಂಬದ ಮೊದಲನೇ ಗಂಡು ಮಕ್ಕಳು ಇಡೀ ಇಸ್ರಾಯೇಲ್ ಜನಾಂಗವನ್ನ ಪ್ರತಿನಿಧಿಸ್ತಿದ್ರು. ಇಡೀ ಇಸ್ರಾಯೇಲ್ ಜನಾಂಗವನ್ನೇ ಯೆಹೋವ “ನನ್ನ ಮೊದಲನೇ ಮಗ” ಅಂತ ಕರೆದಿದ್ದಾನೆ. ಆತನು ಅಬ್ರಹಾಮನೊಟ್ಟಿಗೆ ಮಾಡ್ಕೊಂಡ ಒಪ್ಪಂದದಿಂದಾಗಿ ಇಸ್ರಾಯೇಲ್ ಜನಾಂಗವೇ ಆತನ “ಮೊದಲನೇ ಮಗ” ಆಯ್ತು. (ವಿಮೋ 4:22) ಈಜಿಪ್ಟಿನ ಎಲ್ಲಾ ಮೊದಲ ಗಂಡು ಮಕ್ಕಳು, ಎಲ್ಲಾ ಮೊದಲ ಗಂಡು ಮರಿಗಳು ಸತ್ತಾಗ ಯೆಹೋವ ಇಸ್ರಾಯೇಲಿನ ಮೊದಲ ಗಂಡುಮಕ್ಕಳನ್ನ, ಮೊದಲ ಗಂಡು ಮರಿಗಳನ್ನ ಕಾಪಾಡಿದನು. ಅದಕ್ಕೇ ಯೆಹೋವ “ಇಸ್ರಾಯೇಲ್ಯರಿಗೆ ಹುಟ್ಟೋ ಮೊದಲನೇ ಗಂಡುಮಕ್ಕಳು, ಅವರ ಪ್ರಾಣಿಗಳಿಗೆ ಹುಟ್ಟೋ ಮೊದಲನೇ ಗಂಡುಮರಿಗಳು ನನಗೆ ಸೇರಿದ್ದು” ಅಂತ ಹೇಳಿದನು. (ವಿಮೋ 13:2) ಹೀಗೆ ಇಸ್ರಾಯೇಲ್ಯರ ಎಲ್ಲಾ ಮೊದಲ ಗಂಡು ಮಕ್ಕಳು ಯೆಹೋವನ ಸೇವೆಗೆ ಮೀಸಲಾಗಿದ್ರು.
ಮಾರ್ಚ್ 8-14
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 9-10
“ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?”
it-1-E ಪುಟ 398 ಪ್ಯಾರ 3
ಪಾಳೆಯ
ಇಸ್ರಾಯೇಲ್ಯರ ಪಾಳೆಯ ತುಂಬ ದೊಡ್ಡದಿತ್ತು. ಆದ್ರೂ ಅವ್ರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗ್ವಾಗ ತುಂಬ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಹೋಗ್ತಿದ್ರು. (ಅರಣ್ಯಕಾಂಡ 33 ನೇ ಅಧ್ಯಾಯದಲ್ಲಿ ಮೋಶೆ ಹೇಳಿರೋ ಪ್ರಕಾರ ಸುಮಾರು 40 ಕಡೆ ಇಸ್ರಾಯೇಲ್ಯರು ಪಾಳೆಯ ಹಾಕೊಂಡಿದ್ರು) ದೇವದರ್ಶನದ ಡೇರೆ ಮೇಲೆ ಮೋಡ ಇರೋ ತನಕ ಇಸ್ರಾಯೇಲ್ಯರು ಪಾಳೆಯ ಹಾಕೊಂಡು ಇರ್ತಿದ್ರು. ಆ ಮೋಡ ಮೇಲೆ ಎದ್ದಾಗ ಇಸ್ರಾಯೇಲ್ಯರು ಕೂಡ ಅಲ್ಲಿಂದ ಹೊರಡ್ತಿದ್ರು. “ಯೆಹೋವ ಅಪ್ಪಣೆ ಕೊಟ್ಟಾಗ್ಲೇ ಇಸ್ರಾಯೇಲ್ಯರು ತಮ್ಮ ಡೇರೆ ಹಾಕೊಳ್ತಾ ಇದ್ರು. ಯೆಹೋವ ಅಪ್ಪಣೆ ಕೊಟ್ಟಾಗ್ಲೇ ಅವರು ಮುಂದೆ ಹೋಗ್ತಿದ್ರು.” (ಅರ 9:15-23) ಯೆಹೋವನ ಈ ಅಪ್ಪಣೆಗಳನ್ನ ಇಡೀ ಪಾಳೆಯಕ್ಕೆ ತಿಳಿಸೋಕೆ ಬೆಳ್ಳಿಯಿಂದ ಮಾಡಿದ ಎರಡು ತುತ್ತೂರಿಗಳನ್ನ ಊದಬೇಕಿತ್ತು. (ಅರ 10:2, 5, 6) ತುತ್ತೂರಿಯನ್ನ ಏರಿಳಿತದ ಧ್ವನಿಯಲ್ಲಿ ಊದಿದಾಗ ಇಸ್ರಾಯೇಲ್ಯರಿಗೆ ಡೇರೆಯನ್ನ ಕಿತ್ತು ಬೇರೆ ಕಡೆ ಹೋಗಬೇಕಂತ ಗೊತ್ತಾಗ್ತಿತ್ತು. ಮೊದಲನೇ ಸಲ ಅವ್ರು ‘ಎರಡನೇ ವರ್ಷದ [ಅಂದ್ರೆ, ಕ್ರಿ.ಪೂ. 1512] ಎರಡನೇ ತಿಂಗಳ 20 ನೇ ದಿನದಂದು’ ಡೇರೆ ಕಿತ್ತು ಬೇರೆ ಕಡೆ ಹೋದ್ರು. ಮೊದ್ಲಿಗೆ ಮಂಜೂಷವನ್ನು ತಗೊಂಡು ಹೋಗಬೇಕಿತ್ತು. ಅದ್ರ ಹಿಂದೆ ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್ ಕುಲಗಳ ದಳ ಹೋಗ್ತಿತ್ತು. ಇದ್ರಲ್ಲಿ ಯೆಹೂದ ಕುಲ ಮುಂದೆ ಇರ್ತಿತ್ತು. ಆ ದಳದ ಹಿಂದೆ ಗೇರ್ಷೋನ್ಯರು ಮತ್ತು ಮೆರಾರೀಯರು ಪವಿತ್ರ ಡೇರೆಯ ಭಾಗಗಳನ್ನ ಹೊತ್ಕೊಂಡು ಹೋಗ್ತಿದ್ರು. ಅವ್ರ ಹಿಂದೆ ರೂಬೇನ್, ಸಿಮೆಯೋನ್, ಗಾದ್ ಕುಲಗಳ ದಳ ಹೋಗ್ತಿತ್ತು. ಇದ್ರಲ್ಲಿ ರೂಬೇನ್ ಕುಲ ಮುಂದೆ ಇರ್ತಿತ್ತು. ಈ ದಳದ ಹಿಂದೆ ಕೆಹಾತ್ಯರು ಆರಾಧನಾ ಸ್ಥಳದ ಸಾಮಾಗ್ರಿಗಳನ್ನು ಹೊತ್ಕೊಂಡು ಹೋಗ್ತಿದ್ರು. ಇವ್ರ ಹಿಂದೆ ಎಫ್ರಾಯೀಮ್, ಮನಸ್ಸೆ ಮತ್ತು ಬೆನ್ಯಾಮೀನ್ ಕುಲಗಳ ದಳ ಹೋಗ್ತಿತ್ತು. ಇದ್ರಲ್ಲಿ ಎಫ್ರಾಯೀಮ್ ಕುಲ ಮುಂದೆ ಇರ್ತಿತ್ತು. ಕೊನೆಯಲ್ಲಿ ದಾನ್, ಅಶೇರ್ ಮತ್ತು ನಫ್ತಾಲಿ ಕುಲಗಳ ದಳ ಹೋಗ್ತಿತ್ತು. ಇದ್ರಲ್ಲಿ ದಾನ್ ಕುಲ ಮುಂದೆ ಇರ್ತಿತ್ತು. ಈ ದಳದಲ್ಲಿ ಮತ್ತು ಎಲ್ಲರಿಗಿಂತ ಮುಂದೆ ಇದ್ದ ದಳದಲ್ಲಿ ಜನ್ರ ಸಂಖ್ಯೆ ಜಾಸ್ತಿ ಇತ್ತು ಮತ್ತು ಅವ್ರೆಲ್ರೂ ತುಂಬ ಶಕ್ತಿಶಾಲಿಗಳಾಗಿದ್ರು.—ಅರ 10:11-28.
ದೇವರ ಮಾರ್ಗದರ್ಶನದ ಪುರಾವೆಯನ್ನು ನೀವು ಗ್ರಹಿಸುತ್ತೀರೋ?
ದೇವರ ಮಾರ್ಗದರ್ಶನವನ್ನು ನಾವು ಗಣ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು? “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ” ಎಂದನು ಅಪೊಸ್ತಲ ಪೌಲನು. (ಇಬ್ರಿ. 13:17) ಇದು ಯಾವಾಗಲೂ ಅಷ್ಟು ಸುಲಭವಲ್ಲ. ದೃಷ್ಟಾಂತಕ್ಕೆ, ನೀವು ಮೋಶೆ ಕಾಲದ ಇಸ್ರಾಯೇಲ್ಯರಲ್ಲಿ ಒಬ್ಬರಾಗಿದ್ದೀರೆಂದು ನೆನಸಿ. ನೀವು ಸ್ವಲ್ಪ ಸಮಯ ನಡೆದುಕೊಂಡು ಹೋದ ಬಳಿಕ ಸ್ತಂಭವು ಒಂದು ಕಡೆ ನಿಲ್ಲುತ್ತದೆ. ಅದು ಅಲ್ಲಿ ಎಷ್ಟು ಸಮಯ ನಿಲ್ಲುತ್ತದೆ? ಒಂದು ದಿನ? ಒಂದು ವಾರ? ಕೆಲವು ತಿಂಗಳು? ಅದ್ಯಾವುದೂ ನಿಮಗೆ ಗೊತ್ತಿಲ್ಲ. ‘ನನ್ನ ಗಂಟುಮೂಟೆ ಬಿಚ್ಚಿ ಎಲ್ಲ ವಸ್ತುಗಳನ್ನು ಹೊರಗೆ ತೆಗೆದಿಡಬೇಕೋ ಬೇಡವೋ?’ ಎಂಬ ಯೋಚನೆ ಈಗ ಆರಂಭವಾಗುತ್ತದೆ. ಮೊದಲು ಅಗತ್ಯದ ವಸ್ತುಗಳನ್ನು ಮಾತ್ರ ನೀವು ಹೊರಗೆ ತೆಗೆದಿಡುತ್ತೀರಿ. ಕೆಲವು ದಿನಗಳ ನಂತರ ವಸ್ತುಗಳಿಗಾಗಿ ಹುಡುಕುವ ಜಂಜಾಟದಿಂದ ಬೇಸತ್ತು ಗಂಟುಮೂಟೆಯಲ್ಲಿರುವ ಎಲ್ಲವನ್ನು ತೆಗೆದು ಹೊರಗಿಡುತ್ತೀರಿ. ಇನ್ನೇನು ಎಲ್ಲ ವಸ್ತುಗಳನ್ನು ತೆಗೆದಿಟ್ಟಾಯಿತು ಎನ್ನುವಷ್ಟರಲ್ಲಿ ಆ ಸ್ತಂಭ ಗುಡಾರದಿಂದ ಮೇಲಕ್ಕೆ ಏಳಲಾರಂಭಿಸುತ್ತದೆ. ಈಗ ನೀವು ಪುನಃ ಗಂಟುಮೂಟೆ ಕಟ್ಟಬೇಕಾಗುತ್ತದೆ. ಇದು ಅಷ್ಟು ಸುಲಭವೂ ಅಲ್ಲ ಅನುಕೂಲಕರವೂ ಅಲ್ಲ. ಹೀಗಿದ್ದರೂ ಇಸ್ರಾಯೇಲ್ಯರು ‘[“ಕೂಡಲೆ,” NW] ಮುಂದಕ್ಕೆ ಪ್ರಯಾಣಮಾಡಬೇಕಿತ್ತು.’—ಅರ. 9:17-22.
ಹಾಗಾದರೆ, ದೈವಿಕ ಮಾರ್ಗದರ್ಶನ ಸಿಗುವಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ನಾವು “ಕೂಡಲೆ” ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇವೋ? ಅಥವಾ ಯಥಾಪ್ರಕಾರ ಮುಂದುವರಿಯುತ್ತೇವೋ? ಮನೆ ಬೈಬಲ್ ಅಧ್ಯಯನ ನಡೆಸುವುದು, ಪರಭಾಷೆ ಮಾತಾಡುವವರಿಗೆ ಸಾರುವುದು, ಕ್ರಮವಾಗಿ ಕುಟುಂಬ ಆರಾಧನೆಯಲ್ಲಿ ಪಾಲ್ಗೊಳ್ಳುವುದು, ಹಾಸ್ಪಿಟಲ್ ಲಿಏಸಾನ್ ಕಮಿಟಿಗಳೊಂದಿಗೆ ಸಹಕರಿಸುವುದು ಮತ್ತು ಅಧಿವೇಶನಗಳಲ್ಲಿ ಸಭ್ಯವಾಗಿ ನಡೆದುಕೊಳ್ಳುವುದರ ಬಗ್ಗೆ ಸಮಯಕ್ಕೆ ಸರಿಯಾಗಿ ಕೊಡಲ್ಪಡುವ ನಿರ್ದೇಶನಗಳು ನಮಗೆ ತಿಳಿದಿವೆಯೋ? ನಾವು ಸಲಹೆಗಳನ್ನು ಅನ್ವಯಿಸಿಕೊಳ್ಳುವ ಮೂಲಕವೂ ದೇವರ ಮಾರ್ಗದರ್ಶನವನ್ನು ಮಾನ್ಯಮಾಡುತ್ತೇವೆಂದು ತೋರಿಸುತ್ತೇವೆ. ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾಗಿರುವಾಗ ನಾವು ನಮ್ಮ ಸ್ವಂತ ವಿವೇಕದ ಮೇಲೆ ಆತುಕೊಳ್ಳದೆ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೂ ಆತನ ಸಂಘಟನೆಯ ಕಡೆಗೂ ನೋಡುತ್ತೇವೆ. ಪ್ರಚಂಡ ಬಿರುಗಾಳಿ ಬಂದೆರಗುವಾಗ ಒಂದು ಮಗು ಸಂರಕ್ಷಣೆಗಾಗಿ ಹೇಗೆ ಹೆತ್ತವರ ಬಳಿ ಹೋಗುತ್ತದೋ ಹಾಗೆಯೇ ಈ ಲೋಕದಲ್ಲಿ ನಮಗೆ ಬಿರುಗಾಳಿಯಂಥ ಸಮಸ್ಯೆಗಳು ಎದುರಾಗುವಾಗ ನಾವು ಸಂರಕ್ಷಣೆಗಾಗಿ ಯೆಹೋವನ ಸಂಘಟನೆಯ ಕಡೆಗೆ ನೋಡುತ್ತೇವೆ.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 199 ಪ್ಯಾರ 3
ಒಟ್ಟು ಸೇರಿಬರೋದು
ಯಾಕೆ ಮುಖ್ಯವಾಗಿತ್ತು? ಆರಾಧನೆ ಮಾಡೋಕೆ ಎಲ್ರೂ ಆಗಾಗ ಒಟ್ಟು ಸೇರಿ ಬರಬೇಕಂತ ಯೆಹೋವ ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟಿದ್ದನು. ಇದು ತುಂಬ ಮುಖ್ಯವಾಗಿತ್ತು ಅನ್ನೋದು ಪಸ್ಕ ಹಬ್ಬದ ಬಗ್ಗೆ ದೇವ್ರು ಕೊಟ್ಟ ನಿಯಮದಿಂದ ಗೊತ್ತಾಗುತ್ತೆ. ಒಬ್ಬ ಶುದ್ಧನಾಗಿದ್ರೂ ಪ್ರಯಾಣ ಮಾಡ್ತಾ ಇಲ್ಲದಿದ್ರೂ ಪಸ್ಕ ಹಬ್ಬವನ್ನ ಅಸಡ್ಡೆ ಮಾಡಿ ಆಚರಿಸದೇ ಇದ್ರೆ ಅವನನ್ನ ಸಾಯಿಸಬೇಕಿತ್ತು. (ಅರ 9:9-14) ರಾಜ ಹಿಜ್ಕೀಯ ಯೆಹೂದ ಮತ್ತು ಇಸ್ರಾಯೇಲಿನ ಜನ್ರನ್ನ ಯೆರೂಸಲೇಮಿನಲ್ಲಿ ನಡೆದ ಪಸ್ಕ ಹಬ್ಬದ ಆಚರಣೆಗೆ ಕರೆದಾಗ ಹೀಗೆ ಹೇಳಿದ್ದನು: “ಇಸ್ರಾಯೇಲ್ ಜನ್ರೇ . . . ಯೆಹೋವನ ಕಡೆ ವಾಪಸ್ ಬನ್ನಿ. . . . ನೀವು ನಿಮ್ಮ ಪೂರ್ವಜರ ತರ ಹಠಮಾರಿಗಳು ಆಗಬೇಡಿ. ಯೆಹೋವನಿಗೆ ಅಧೀನರಾಗಿ. ಆತನು ಶಾಶ್ವತವಾಗಿ ಪವಿತ್ರಗೊಳಿಸಿರೋ ಆತನ ಆರಾಧನಾ ಸ್ಥಳಕ್ಕೆ ಬಂದು ನಿಮ್ಮ ದೇವರಾದ ಯೆಹೋವನನ್ನ ಆರಾಧಿಸಿ. ಆಗ ಆತನ ಕೋಪ ನಿಮ್ಮಿಂದ ದೂರ ಆಗುತ್ತೆ. . . . ನಿಮ್ಮ ದೇವರಾದ ಯೆಹೋವ ಕರುಣಾಮಯಿ, ಕನಿಕರ ತೋರಿಸುವವನು ಆಗಿದ್ದಾನೆ. ನೀವು ಆತನ ಹತ್ರ ವಾಪಸ್ ಬಂದ್ರೆ ಆತನು ನಿಮ್ಮನ್ನ ತಿರಸ್ಕರಿಸಲ್ಲ.” (2 ಪೂರ್ವ 30:6-9) ಬೇಕುಬೇಕಂತ ಪಸ್ಕ ಹಬ್ಬಕ್ಕೆ ಹಾಜರಾಗದೇ ಇರೋದು ದೇವರನ್ನೇ ತಿರಸ್ಕರಿಸಿದಂತೆ ಇರ್ತಿತ್ತು. ಇವತ್ತು ಕ್ರೈಸ್ತರು ಪಸ್ಕದಂಥ ಹಬ್ಬಗಳನ್ನ ಆಚರಿಸಲ್ಲ. ಆದ್ರೂ ದೇವಜನ್ರು ತಪ್ಪದೇ ಕೂಟಗಳಿಗೆ ಹಾಜರಾಗಬೇಕು ಅಂತ ಪೌಲ ಈ ಮಾತುಗಳನ್ನ ಹೇಳಿ ಉತ್ತೇಜಿಸಿದ್ದಾನೆ: “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ. ಸ್ವಲ್ಪ ಜನ ಸಭೆಗೆ ಬರೋದನ್ನ ಬಿಟ್ಟುಬಿಟ್ಟಿದ್ದಾರೆ. ಅದು ಅವ್ರಿಗೆ ರೂಢಿ ಆಗಿಬಿಟ್ಟಿದೆ. ಆದ್ರೆ ನಾವು ಹಾಗೆ ಮಾಡದೆ ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ. ದೇವರ ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ ಮಾಡೋಣ.”—ಇಬ್ರಿ 10:24, 25.
ಮಾರ್ಚ್ 15-21
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 11-12
“ದೂರುವ ಗುಣ ಯಾಕೆ ಒಳ್ಳೇದಲ್ಲ?”
ಕಾವಲಿನಬುರುಜು01 6/15 ಪುಟ 17 ಪ್ಯಾರ 20
ವಾಕ್ಯವನ್ನು ಕೇಳಿ ಅದನ್ನು ಮರೆಯುವವರಾಗಬೇಡಿ
20 ಕ್ರೈಸ್ತರಲ್ಲಿ ಅಧಿಕಾಂಶ ಮಂದಿ ಲೈಂಗಿಕ ಅನೈತಿಕತೆಯ ಮುಂದೆ ಎಂದೂ ಬಾಗುವುದಿಲ್ಲ. ಆದರೆ, ನಮಗೆ ಗುಣುಗುಟ್ಟುತ್ತಾ ಇರುವ ಅಭ್ಯಾಸವಾಗದಂತೆಯೂ ಜಾಗ್ರತೆವಹಿಸುವುದು ಅಗತ್ಯ. ಯಾಕೆಂದರೆ ಇದು ಕೂಡ ದೇವರ ಅಸಮ್ಮತಿಯನ್ನು ಬರಮಾಡುವುದು. ಪೌಲನು ನಮಗೆ ಬುದ್ಧಿಹೇಳುವುದು: “ಅವರಲ್ಲಿ [ಇಸ್ರಾಯೇಲ್ಯರಲ್ಲಿ] ಕೆಲವರು ಕರ್ತನನ್ನು [“ಯೆಹೋವನನ್ನು,” NW] ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ ನಾವು ಪರೀಕ್ಷಿಸದೆ ಇರೋಣ. ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ.” (1 ಕೊರಿಂಥ 10:9, 10) ಅದ್ಭುತಕರವಾಗಿ ಒದಗಿಸಲಾದ ಮನ್ನದ ಕುರಿತಾಗಿ ದೂರುತ್ತಾ, ಇಸ್ರಾಯೇಲ್ಯರು ಮೋಶೆ ಆರೋನರ ವಿರುದ್ಧ ಮತ್ತು ಸ್ವತಃ ದೇವರ ವಿರುದ್ಧ ಗುಣುಗುಟ್ಟಿದರು. (ಅರಣ್ಯಕಾಂಡ 16:41; 21:5) ಅವರು ವ್ಯಭಿಚಾರವನ್ನು ಮಾಡಿದಾಗ ಯೆಹೋವನಿಗೆ ಉಂಟಾದ ಕೋಪಕ್ಕಿಂತಲೂ, ಈಗ ಅವರು ಗುಣುಗುಟ್ಟಿದಾಗ ಆತನ ಕೋಪವು ಕಡಿಮೆಯಾಗಿತ್ತೊ? ಗುಣುಗುಟ್ಟಿದವರಲ್ಲಿ ಅನೇಕರು ಸರ್ಪಗಳಿಂದ ಕೊಲ್ಲಲ್ಪಟ್ಟರೆಂದು ಬೈಬಲ್ ವೃತ್ತಾಂತ ತೋರಿಸುತ್ತದೆ. (ಅರಣ್ಯಕಾಂಡ 21:6) ಹಿಂದಿನ ಸಂದರ್ಭವೊಂದರಲ್ಲಿ, 14,700ಕ್ಕಿಂತಲೂ ಹೆಚ್ಚು ಮಂದಿ ದಂಗೆಕೋರ ಗುಣುಗುಟ್ಟುವವರು ನಾಶಗೊಳಿಸಲ್ಪಟ್ಟರೆಂದು ಬೈಬಲ್ ವೃತ್ತಾಂತವು ತೋರಿಸುತ್ತದೆ. (ಅರಣ್ಯಕಾಂಡ 16:49) ಆದುದರಿಂದ, ಯೆಹೋವನ ಒದಗಿಸುವಿಕೆಗಳನ್ನು ಅಗೌರವದಿಂದ ಕಾಣುವ ಮೂಲಕ ನಾವು ಆತನ ತಾಳ್ಮೆಯನ್ನು ಪರೀಕ್ಷಿಸದಿರೋಣ.
ಕಾವಲಿನಬುರುಜು06 8/1 ಪುಟ 8 ಪ್ಯಾರ 7
‘ಗುಣುಗುಟ್ಟದಿರಿ’
7 ಇಸ್ರಾಯೇಲ್ಯರ ಮನೋಭಾವವು ಎಷ್ಟೊಂದು ಬದಲಾಗಿತ್ತು! ಐಗುಪ್ತದಿಂದ ವಿಮೋಚಿಸಲ್ಪಟ್ಟು, ಕೆಂಪು ಸಮುದ್ರವನ್ನು ದಾಟಿದಾಗ ಅವರಿಗಿದ್ದ ಕೃತಜ್ಞತಾಭಾವದಿಂದ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಲು ಅವರು ಪ್ರಚೋದಿಸಲ್ಪಟ್ಟಿದ್ದರು. (ವಿಮೋಚನಕಾಂಡ 15:1-21) ಆದರೆ ಅರಣ್ಯದ ಅನಾನುಕೂಲತೆಗಳು ಎದುರಾದಾಗ ಮತ್ತು ಅವರು ಕಾನಾನ್ಯರಿಂದ ಭಯಭೀತರಾದಾಗ, ಈ ದೇವಜನರಿಗಿದ್ದ ಕೃತಜ್ಞತಾಭಾವದ ಸ್ಥಾನದಲ್ಲಿ ಅತೃಪ್ತ ಮನೋಭಾವವು ತುಂಬಿಕೊಂಡಿತ್ತು. ಅವರಿಗೆ ಸಿಕ್ಕಿದ ಸ್ವಾತಂತ್ರ್ಯಕ್ಕಾಗಿ ದೇವರಿಗೆ ಉಪಕಾರಸಲ್ಲಿಸುವ ಬದಲಿಗೆ, ಅವರ ಎಣಿಕೆಯಲ್ಲಿ ಅಭಾವವೆಂದು ತೋರುತ್ತಿದ್ದ ವಿಷಯಗಳಿಗಾಗಿ ಅವರು ಆತನನ್ನು ದೂರಿದರು. ಹೀಗೆ ಅವರ ಗುಣುಗುಟ್ಟುವಿಕೆಯು, ಯೆಹೋವನ ಏರ್ಪಾಡುಗಳಿಗಾಗಿ ಯೋಗ್ಯ ಕೃತಜ್ಞತಾಭಾವದ ಕೊರತೆಯ ಅಭಿವ್ಯಕ್ತಿಯಾಗಿತ್ತು. ಆದುದರಿಂದ ಯೆಹೋವನು, “ನನಗೆ ವಿರೋಧವಾಗಿ ಗುಣುಗುಟ್ಟುವ ಈ ದುಷ್ಟಸಮೂಹದವರನ್ನು ನಾನು ಎಷ್ಟು ದಿನ ಸಹಿಸಲಿ”? ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ.—ಅರಣ್ಯಕಾಂಡ 14:27; 21:5.
it-2-E ಪುಟ 719 ಪ್ಯಾರ 4
ಜಗಳ
ಗೊಣಗೋದು. ನಾವು ಬೇರೆಯವ್ರ ಬಗ್ಗೆ ಗೊಣಗಿದ್ರೆ ಅದ್ರಿಂದ ಅವ್ರಿಗೆ ತುಂಬ ನೋವಾಗುತ್ತೆ, ಧೈರ್ಯ ಕಳಕೊಂಡು ಬಿಡ್ತಾರೆ. ಇಸ್ರಾಯೇಲ್ಯರು ಈಜಿಪ್ಟಿಂದ ಬಂದ ಸ್ವಲ್ಪದರಲ್ಲೇ ಯೆಹೋವನ ವಿರುದ್ಧ ಗೊಣಗಿದ್ರು. ಯೆಹೋವ ಅವ್ರಿಗೆ ನಾಯಕರಾಗಿ ನೇಮಿಸಿದ್ದ ಮೋಶೆ, ಆರೋನರಲ್ಲಿ ತಪ್ಪು ಕಂಡುಹಿಡಿದು ಅವ್ರ ಬಗ್ಗೆನೂ ಗೊಣಗಿದ್ರು. (ವಿಮೋ 16:2, 7) ಇಸ್ರಾಯೇಲ್ಯರು ಎಷ್ಟು ಗೊಣಗ್ತಾ ಇದ್ರು ಅಂದ್ರೆ ಅದ್ರಿಂದ ಮೋಶೆಗೆ ಸಾಕಾಗಿ ಹೋಯ್ತು, ಸತ್ತುಹೋಗಬೇಕು ಅಂತ ಅನಿಸ್ತು. (ಅರ 11:13-15) ಗೊಣಗುವವ್ರು ತಮ್ಮ ಗುಂಡಿಯನ್ನ ತಾವೇ ತೋಡಿಕೊಳ್ತಾರೆ. ಮೋಶೆ ವಿರುದ್ಧ ಗೊಣಗಿದ್ದನ್ನ ಸ್ವತಃ ತನ್ನ ನಾಯಕತ್ವದ ವಿರುದ್ಧನೇ ಜನ್ರು ಗೊಣಗಿದ್ರು ಅಂತ ಯೆಹೋವ ನೆನಸಿದನು. (ಅರ 14:26-30) ಈ ರೀತಿ ಗೊಣಗಿ ತುಂಬ ಜನ ತಮ್ಮ ಪ್ರಾಣನೇ ಕಳಕೊಂಡ್ರು.
ಆಧ್ಯಾತ್ಮಿಕ ಮುತ್ತುಗಳು
it-2-E ಪುಟ 309
ಮನ್ನ
ಹೇಗಿತ್ತು? ಮನ್ನ ಬೆಳ್ಳಗಿತ್ತು. ಕೊತ್ತಂಬರಿ ಬೀಜದ ತರ ಇತ್ತು. ಸುಗಂಧ ಅಂಟಿನ ತರ ಕಾಣ್ತಿತ್ತು. ಮುಟ್ಟೋಕೆ ಮೇಣದ ತರ, ಪಾರದರ್ಶಕವಾಗಿತ್ತು. ನೋಡೋಕೆ ಮುತ್ತಿನ ತರ ಇತ್ತು. “ಅದ್ರ ರುಚಿ ಜೇನುತುಪ್ಪ ಹಾಕಿದ ತೆಳ್ಳಗಿನ ರೊಟ್ಟಿ ತರ” ಅಥ್ವಾ “ಎಣ್ಣೆ ಬೆರೆಸಿ ಮಾಡಿದ ತೆಳುವಾದ ಸಿಹಿ ರೊಟ್ಟಿ ತರ ಇತ್ತು.” “ಅದನ್ನ ಬೀಸೋ ಕಲ್ಲಲ್ಲಿ ಅರಿತಿದ್ರು ಅಥವಾ ಒರಳಲ್ಲಿ ಕುಟ್ತಿದ್ರು. ಆಮೇಲೆ ಪಾತ್ರೆಯಲ್ಲಿ ಹಾಕಿ ಬೇಯಿಸ್ತಿದ್ರು ಅಥವಾ ದುಂಡಗಿನ ರೊಟ್ಟಿಗಳನ್ನ ಮಾಡ್ತಿದ್ರು.”—ವಿಮೋ 16:23, 31; ಅರ 11:7, 8.
ಮಾರ್ಚ್ 22-28
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 13-14
“ನಂಬಿಕೆ ನಮ್ಮಲ್ಲಿ ಧೈರ್ಯ ತುಂಬುತ್ತೆ”
ಕಾವಲಿನಬುರುಜು06 10/1 ಪುಟ 18 ಪ್ಯಾರ 5-6
ನಂಬಿಕೆ ಮತ್ತು ದೇವಭಯದ ಮೂಲಕ ಧೈರ್ಯದಿಂದಿರುವುದು
5 ಆದರೆ ಯೆಹೋಶುವ ಮತ್ತು ಕಾಲೇಬ್ ಎಂಬ ಇಬ್ಬರು ಗೂಢಚಾರರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಕಾತುರದಿಂದಿದ್ದರು. “ನಾವು [ಕಾನಾನ್ಯರನ್ನು] ನುಂಗಿ ಪುಷ್ಟಿಯಾಗುವೆವು ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟನು; ನಮ್ಮ ಕಡೆ ಯೆಹೋವನು ಇದ್ದಾನೆ: ಅವರಿಗೆ ಭಯಪಡಬೇಡಿರಿ” ಎಂದರವರು. (ಅರಣ್ಯಕಾಂಡ 14:9) ಯೆಹೋಶುವ ಮತ್ತು ಕಾಲೇಬರಿಗಿದ್ದ ಆಶಾವಾದವು ಹುಚ್ಚುತನವಾಗಿತ್ತೋ? ಖಂಡಿತ ಇಲ್ಲ! ಏಕೆಂದರೆ ಜನಾಂಗದ ಇತರರೊಂದಿಗೆ ಅವರು, ಯೆಹೋವನು ಮಹಾ ಐಗುಪ್ತವನ್ನೂ ಅದರ ದೇವತೆಗಳನ್ನೂ ಹತ್ತು ಬಾಧೆಗಳ ಮೂಲಕ ಅವಮಾನಪಡಿಸಿದ್ದನ್ನು ಕಣ್ಣಾರೆ ನೋಡಿದ್ದರು. ಆ ಬಳಿಕ, ಯೆಹೋವನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿದ್ದನ್ನು ಸಹ ಅವರು ನೋಡಿದ್ದರು. (ಕೀರ್ತನೆ 136:15) ಆದುದರಿಂದ, ಆ ಹತ್ತು ಮಂದಿ ಗೂಢಚಾರರು ಮತ್ತು ಅವರಿಂದ ಪ್ರಭಾವಿತರಾದವರು ತೋರಿಸಿದ ಭಯವು ಅಕ್ಷಮ್ಯವಾಗಿತ್ತು ಎಂಬುದು ಸ್ಪಷ್ಟ. ಯೆಹೋವನು ತೀವ್ರ ವೇದನೆಗೊಂಡು, “ನಾನು ನಡಿಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ” ಎಂದು ಹೇಳುತ್ತಾ ತನ್ನ ದುಃಖವನ್ನು ವ್ಯಕ್ತಪಡಿಸಿದನು.—ಅರಣ್ಯಕಾಂಡ 14:11.
6 ಯೆಹೋವನು ಈ ಸಮಸ್ಯೆಯ ಮೂಲಕಾರಣವನ್ನು ಪತ್ತೆಹಚ್ಚಿದನು. ಜನರು ಹೇಡಿತನವನ್ನು ತೋರಿಸಿದ್ದು ಅವರಲ್ಲಿ ನಂಬಿಕೆಯ ಕೊರತೆ ಇದದ್ದರಿಂದಲೇ. ಹೌದು, ನಂಬಿಕೆಗೂ ಧೈರ್ಯಕ್ಕೂ ಎಷ್ಟು ಆಪ್ತ ಸಂಬಂಧವಿದೆಯೆಂದರೆ, ಕ್ರೈಸ್ತ ಸಭೆ ಮತ್ತು ಅದರ ಆಧ್ಯಾತ್ಮಿಕ ಯುದ್ಧದ ಕುರಿತು ಅಪೊಸ್ತಲ ಯೋಹಾನನು ಹೀಗೆ ಬರೆಯಶಕ್ತನಾದನು: “ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.” (1 ಯೋಹಾನ 5:4) ಇಂದು, ಯೆಹೋಶುವ ಮತ್ತು ಕಾಲೇಬರಿಗಿದ್ದಂಥದ್ದೇ ರೀತಿಯ ನಂಬಿಕೆಯ ಪರಿಣಾಮವಾಗಿ, ಯುವಕರೂ ವೃದ್ಧರೂ ಬಲವುಳ್ಳವರೂ ಬಲಹೀನರೂ ಸೇರಿರುವ ಅರವತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳಿಂದ ರಾಜ್ಯದ ಸುವಾರ್ತೆಯು ಲೋಕವ್ಯಾಪಕವಾಗಿ ಸಾರಲ್ಪಡುತ್ತಿದೆ. ಈ ಬಲಾಢ್ಯವಾದ ಧೀರ ಸೈನ್ಯವನ್ನು ಯಾವ ಶತ್ರುವೂ ಮೌನವಾಗಿಸಲು ಶಕ್ತನಾಗಿರುವುದಿಲ್ಲ.—ರೋಮಾಪುರ 8:31.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 740
ಇಸ್ರಾಯೇಲ್ಯರಿಗೆ ದೇವರು ಕೊಟ್ಟ ದೇಶ
ದೇವರು ಇಸ್ರಾಯೇಲ್ಯರಿಗೆ ಕೊಟ್ಟ ದೇಶ ಸಮೃದ್ಧವಾಗಿತ್ತು. ಆ ದೇಶ ಹೇಗಿದೆ ಅಂತ ನೋಡ್ಕೊಂಡು ಬರೋಕೆ ಮೊದ್ಲಿಗೆ ಮೋಶೆ ಕೆಲವು ಗೂಢಚಾರರನ್ನ ಕಳಿಸಿದ. ಅಲ್ಲಿಂದ ಕೆಲವು ಬೆಳೆಗಳನ್ನ ತಗೊಂಡು ಬರೋಕೂ ಹೇಳಿದ. ಆ ಗೂಢಚಾರರು ಬರುವಾಗ ಅಂಜೂರ, ದಾಳಿಂಬೆ, ದ್ರಾಕ್ಷಿ ಹಣ್ಣಿನ ಗೊಂಚಲುಗಳನ್ನ ತಂದ್ರು. ಅದನ್ನ ಇಬ್ರು ಗಂಡಸ್ರು ಕೋಲಲ್ಲಿ ನೇತು ಹಾಕೊಂಡು ಬರಬೇಕಾಯ್ತು. ಅಷ್ಟು ದೊಡ್ಡದೊಡ್ಡದಾಗಿತ್ತು! ಆ ದೇಶ ನೋಡ್ಕೊಂಡು ಬಂದ ಮೇಲೆ ನಂಬಿಕೆ ಕೊರತೆಯಿಂದ ಗೂಢಚಾರರು ಭಯಪಟ್ರೂ “ಅದು ನಿಜವಾಗ್ಲೂ ಹಾಲೂ ಜೇನೂ ಹರಿಯೋ ದೇಶ” ಅಂತ ಹೇಳಿದ್ರು.—ಅರ 13:23, 27.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು15 9/15 ಪುಟ 14-16 ಪ್ಯಾರ 8-12
“ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”
8 ದೇವರ ವಾಗ್ದಾನಗಳು ನನಗೆ ಹಿಂದೆ ಎಷ್ಟು ನಿಜವಾಗಿದ್ದವೊ ಈಗಲೂ ಅಷ್ಟೇ ನಿಜವಾಗಿವೆಯಾ? ಉದಾಹರಣೆಗೆ, ದೇವರು ಸೈತಾನನ ಲೋಕವನ್ನು ನಾಶಮಾಡುವುದಾಗಿ ಮಾತುಕೊಟ್ಟಿದ್ದಾನೆ. ಹಾಗಿದ್ದರೂ ಈ ಲೋಕವು ನೀಡುವ ಬೇರೆಬೇರೆ ವಿಧದ ಮನೋರಂಜನೆಯಿಂದ ಅಪಕರ್ಷಿತರಾಗುತ್ತಿದ್ದೇವಾ? ಹಾಗಿದ್ದರೆ ಅಂತ್ಯವು ನಿಜವಾಗಿ ಹತ್ತಿರವಿದೆಯಾ ಎಂಬ ಸಂಶಯ ನಮ್ಮಲ್ಲಿ ಹುಟ್ಟಬಹುದು. (ಹಬ. 2:3) ಇನ್ನೊಂದು ಉದಾಹರಣೆ ನೋಡಿ. ಯೆಹೋವನು ನಮಗಾಗಿ ವಿಮೋಚನಾ ಮೌಲ್ಯ ಕೊಟ್ಟಿದ್ದಾನೆ. ನಮ್ಮ ತಪ್ಪುಗಳನ್ನು ಕ್ಷಮಿಸುವನೆಂದು ಮಾತುಕೊಟ್ಟಿದ್ದಾನೆ. ಆದರೆ ನಮ್ಮ ಹಿಂದಿನ ತಪ್ಪುಗಳ ಬಗ್ಗೆಯೇ ಯೋಚಿಸುತ್ತಾ ಇದ್ದರೆ, ಯೆಹೋವನು ನಮ್ಮನ್ನು ನಿಜವಾಗಿ ಕ್ಷಮಿಸಿದ್ದಾನಾ ಎಂಬ ಸಂಶಯ ನಮಗೆ ಬರಬಹುದು. (ಅ. ಕಾ. 3:19) ಆಗ ದೇವರ ಸೇವೆಯಲ್ಲಿ ಸಿಗುವಂಥ ಆನಂದವನ್ನು ಕಳಕೊಳ್ಳುತ್ತೇವೆ ಮತ್ತು ಸಾರುವುದನ್ನು ನಿಲ್ಲಿಸುತ್ತೇವೆ.
9 ಹಿಂದಿನಂತೆಯೇ ನಾನು ಈಗಲೂ ಯೆಹೋವನಿಗೆ ನನ್ನಿಂದಾದ ಎಲ್ಲವನ್ನೂ ಕೊಡುತ್ತಿದ್ದೇನಾ? ನಾವು ಯೆಹೋವನಿಗಾಗಿ ಶ್ರಮಪಟ್ಟು ದುಡಿಯುವಾಗ ಭವಿಷ್ಯಕ್ಕಾಗಿರುವ ನಿರೀಕ್ಷೆಗೆ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ. ಆದರೆ ನಮ್ಮ ಸ್ವಂತ ಆಸೆ, ಕೆಲಸಕಾರ್ಯಗಳಿಗೇ ಹೆಚ್ಚು ಗಮನಕೊಡಲು ಆರಂಭಿಸಿದ್ದೇವಾ? ಉದಾಹರಣೆಗೆ, ನಾವು ಆರಿಸಿರುವ ಉದ್ಯೋಗದಿಂದ ಒಳ್ಳೇ ಸಂಬಳ ಸಿಗುತ್ತಿರಬಹುದು ಆದರೆ ಯೆಹೋವನ ಸೇವೆ ಮಾಡಲು ಹೆಚ್ಚು ಸಮಯ ಸಿಗುತ್ತಿರಲಿಕ್ಕಿಲ್ಲ. ಇದರಿಂದ ನಮ್ಮ ನಂಬಿಕೆ ಬಲಹೀನವಾಗಬಹುದು. ನಾವು “ಆಲಸಿ”ಗಳಾಗಬಹುದು ಅಂದರೆ ಯೆಹೋವನಿಗಾಗಿ ನಾವು ನಿಜವಾಗಿ ಎಷ್ಟನ್ನು ಮಾಡಸಾಧ್ಯವಿದೆಯೊ ಅದಕ್ಕಿಂತ ಕಡಿಮೆ ಮಾಡುತ್ತಿರಬಹುದು.—ಇಬ್ರಿ. 6:10-12.
10 ಕ್ಷಮಿಸಲು ನನಗೆ ಕಷ್ಟವಾಗುತ್ತದಾ? ಬೇರೆಯವರಿಂದ ನಮಗೆ ತುಂಬ ನೋವಾದಾಗ ಅವರ ಮೇಲೆ ಕೋಪ ಮಾಡಿಕೊಳ್ಳುತ್ತೇವಾ? ಅವರೊಟ್ಟಿಗೆ ಮಾತಾಡುವುದನ್ನೇ ನಿಲ್ಲಿಸಿಬಿಡುತ್ತೇವಾ? ಹಾಗೆ ಮಾಡುತ್ತಿರುವಲ್ಲಿ ನಾವು ನಮ್ಮ ಸ್ವಂತ ಭಾವನೆಗಳಿಗೇ ಹೆಚ್ಚು ಗಮನ ಕೊಡುತ್ತಿದ್ದೇವೆ ಎಂದರ್ಥ. ಆದರೆ ನಾವು ಬೇರೆಯವರನ್ನು ಕ್ಷಮಿಸುವಾಗ ಯೆಹೋವನ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸುತ್ತೇವೆ. ಹೇಗೆ? ನಾವು ಯೆಹೋವನ ವಿರುದ್ಧ ಪಾಪ ಮಾಡುವಾಗ ಆತನ ಸಾಲಗಾರರಾಗುವಂತೆಯೇ ಯಾರಾದರೂ ನಮ್ಮ ವಿರುದ್ಧ ಪಾಪ ಮಾಡಿದಾಗ ಅವರು ನಮ್ಮ ಸಾಲಗಾರರಾಗುತ್ತಾರೆ. (ಲೂಕ 11:4, ಪಾದಟಿಪ್ಪಣಿ) ಆದರೆ ನಾವು ಅವರನ್ನು ಕ್ಷಮಿಸುವಾಗ ಅವರಿಂದ ಆ ಸಾಲವನ್ನು ವಾಪಸ್ಸು ಪಡೆಯುವುದಿಲ್ಲ. ಅದಕ್ಕಿಂತ ಯೆಹೋವನ ಮೆಚ್ಚಿಕೆ ಪಡೆಯುವುದು ಹೆಚ್ಚು ಪ್ರಾಮುಖ್ಯವೆಂದು ಭರವಸೆಯಿಡುತ್ತೇವೆ. ಬೇರೆಯವರನ್ನು ಕ್ಷಮಿಸಲು ನಂಬಿಕೆಯ ಅಗತ್ಯವಿದೆ ಎಂದು ಯೇಸುವಿನ ಶಿಷ್ಯರು ಕಲಿತರು. ತಮ್ಮ ವಿರುದ್ಧ ಅನೇಕ ಸಲ ಪಾಪ ಮಾಡಿದವರನ್ನು ಕ್ಷಮಿಸಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ ಅವರು “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ಅವನಿಗೆ ಬೇಡಿಕೊಂಡರು.—ಲೂಕ 17:1-5.
11 ನನಗೆ ಯಾರಾದರೂ ಬುದ್ಧಿವಾದ ಕೊಡುವಾಗ ಸಿಟ್ಟುಮಾಡುತ್ತೇನಾ? ಕೊಡಲಾದ ಬುದ್ಧಿವಾದದಿಂದ ಏನು ಕಲಿಯಬಹುದೆಂದು ನೋಡಿ. ಅದನ್ನು ಬಿಟ್ಟು, ಬುದ್ಧಿವಾದ ಕೊಟ್ಟವರಲ್ಲೇ ತಪ್ಪುಗಳನ್ನು, ಬಲಹೀನತೆಗಳನ್ನು ಹುಡುಕಬೇಡಿ. (ಜ್ಞಾನೋ. 19:20) ಯೆಹೋವನಂತೆ ಯೋಚಿಸಲು ಕಲಿಯಲಿಕ್ಕಾಗಿ ನಿಮಗೆ ಸಿಕ್ಕಿರುವ ಅವಕಾಶ ಕೈಜಾರಿ ಹೋಗದಂತೆ ನೋಡಿಕೊಳ್ಳಿ!
12 ಸಭೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿರುವವರ ಬಗ್ಗೆ ಗುಣುಗುಟ್ಟುತ್ತಾ ಇರುತ್ತೇನಾ? ಹತ್ತು ಮಂದಿ ಗೂಢಚಾರರು ತಂದ ಕೆಟ್ಟ ವರದಿಗೆ ಇಸ್ರಾಯೇಲ್ಯರು ಹೆಚ್ಚು ಗಮನಕೊಟ್ಟದ್ದರಿಂದ ಅವರು ಮೋಶೆ ಆರೋನರ ವಿರುದ್ಧ ಗುಣುಗುಟ್ಟಲು ಶುರುಮಾಡಿದರು. ಆಗ ಯೆಹೋವನು “ಈ ಜನರು . . . ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ” ಎಂದು ಮೋಶೆಗೆ ಕೇಳಿದನು. (ಅರ. 14:2-4, 11) ಯೆಹೋವನು ನೇಮಿಸಿದ್ದ ಮೋಶೆ ಆರೋನರ ವಿರುದ್ಧ ಇಸ್ರಾಯೇಲ್ಯರು ಮಾತಾಡಿದ್ದರಿಂದ ಅವರು ದೇವರಲ್ಲಿ ಭರವಸೆ ಇಟ್ಟಿಲ್ಲವೆಂದು ತೋರಿಸಿದರು. ಇಂದು ಸಹ ನಾವು ಯೆಹೋವನು ತನ್ನ ಜನರನ್ನು ನಡೆಸಲು ನೇಮಿಸಿರುವವರ ಬಗ್ಗೆ ಗೊಣಗುತ್ತಾ ಇದ್ದರೆ ದೇವರಲ್ಲಿ ನಮ್ಮ ನಂಬಿಕೆ ಬಲಹೀನವಾಗಿದೆ ಎಂದು ತೋರಿಸುತ್ತೇವೆ.
ಮಾರ್ಚ್ 29–ಏಪ್ರಿಲ್ 4
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 15-16
“ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ”
ಕಾವಲಿನಬುರುಜು11 9/15 ಪುಟ 27 ಪ್ಯಾರ 12
ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?
12 ಆದರೆ ವಾಗ್ದತ್ತ ದೇಶದೆಡೆಗೆ ಸಾಗುತ್ತಿದ್ದಾಗ, ಇಸ್ರಾಯೇಲ್ಯರನ್ನು ಯೆಹೋವನು ನಡೆಸುತ್ತಿದ್ದ ವಿಧ ಯಾಕೋ ಸರಿಯಿಲ್ಲವೆಂದು ಕೋರಹ ಯೋಚಿಸಿದನು. 250 ಮಂದಿ ಮುಖಂಡರ ಗುಂಪು ಕಟ್ಟಿಕೊಂಡು ಅವನು ಬದಲಾವಣೆ ತರಲು ಪ್ರಯತ್ನಿಸಿದನು. ಯೆಹೋವನ ಅನುಗ್ರಹ ತಮ್ಮ ಮೇಲಿದೆ, ಆತನು ಅವರನ್ನು ತನ್ನವರೆಂದು ಹೇಳುತ್ತಾನೆ ಎಂಬ ಊಹೆ ಅವರಿಗೆ ಇದ್ದಿರಬೇಕು. ಹಾಗಾಗಿ ಮೋಶೆ ಆರೋನರ ಬಳಿ ಬಂದು, “ನಿಮ್ಮಿಂದ ಸಾಕಾಯಿತು; ಈ ಸಮೂಹದವರಲ್ಲಿ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ; ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನಲ್ಲವೇ” ಎಂದು ಕೇಳಿದರು. (ಅರ. 16:1-3) ಎಂಥ ಅಹಂಭಾವದ ವರ್ತನೆ, ಅತಿಯಾದ ಆತ್ಮವಿಶ್ವಾಸ! “ತನ್ನವರು ಯಾರಾರೆಂಬದನ್ನು ಯೆಹೋವನು ನಾಳೆ ತಿಳಿಸುವನು” ಎಂದು ಮೋಶೆ ಅವರಿಗೆ ಹೇಳಿದನು. (ಅರಣ್ಯಕಾಂಡ 16:5 ಓದಿ.) ಮಾರಣೆದಿನ ಕೊನೆಗೊಳ್ಳುವಷ್ಟರಲ್ಲಿ ಕೋರಹ ಹಾಗೂ ಅವನ ಪಕ್ಷವಹಿಸಿದ ಎಲ್ಲರೂ ಸತ್ತಿದ್ದರು.—ಅರ. 16:31-35.
ಕಾವಲಿನಬುರುಜು11 9/15 ಪುಟ 27 ಪ್ಯಾರ 11
ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?
11 ಯೆಹೋವನ ಏರ್ಪಾಡಿಗೆ ಹಾಗೂ ನಿರ್ಣಯಗಳಿಗೆ ಗೌರವ ತೋರಿಸಿದ ವಿಧದಲ್ಲಿ ಮೋಶೆಗೂ ಕೋರಹನಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅವರ ವರ್ತನೆಗನುಸಾರ ಯೆಹೋವನು ಪ್ರತಿಕ್ರಿಯಿಸಿದನು. ಕೋರಹನನ್ನು ತೆಗೆದುಕೊಳ್ಳಿ. ಅವನು ಕೆಹಾತ್ಯ ಲೇವ್ಯನಾಗಿದ್ದನು. ಅನೇಕ ಸುಯೋಗಗಳಲ್ಲಿ ಆನಂದಿಸಿದ್ದನು. ಉದಾಹರಣೆಗೆ, ಇಸ್ರಾಯೇಲ್ ಜನಾಂಗವನ್ನು ಕೆಂಪು ಸಮುದ್ರದ ಮೂಲಕ ಬಿಡುಗಡೆ ಮಾಡಿದ್ದನ್ನು ಅವನು ಕಣ್ಣಾರೆ ಕಂಡಿರಬಹುದು. ಸೀನಾಯಿಬೆಟ್ಟದಲ್ಲಿ ಇಸ್ರಾಯೇಲ್ಯರು ಪ್ರತಿಭಟನೆಗಿಳಿದಾಗ ಯೆಹೋವನು ನೀಡಿದ ನ್ಯಾಯತೀರ್ಪನ್ನು ಅವನು ಬೆಂಬಲಿಸಿರಬಹುದು. ಒಡಂಬಡಿಕೆಯ ಮಂಜೂಷವನ್ನು ಹೊತ್ತೊಯ್ಯುವ ಕಾರ್ಯದಲ್ಲಿ ಭಾಗಿಯಾಗಿರಬಹುದು. (ವಿಮೋ. 32:26-29; ಅರ. 3:30, 31) ಅನೇಕ ವರ್ಷ ನಿಷ್ಠೆಯಿಂದ ಯೆಹೋವನಿಗೆ ಸೇವೆಸಲ್ಲಿಸಿದ್ದ ಆತನನ್ನು ಇಸ್ರಾಯೇಲ್ಯರು ಗೌರವದಿಂದ ಕಾಣುತ್ತಿದ್ದರು ಎನ್ನುವುದರಲ್ಲಿ ಸಂದೇಹವಿಲ್ಲ.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು98 9/1 ಪುಟ 20 ಪ್ಯಾರ 1-2
ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡಲು ನಿಶ್ಚಯಿಸಿಕೊಳ್ಳಿರಿ!
ಯೆಹೋವನು ಆ ಮೊಕದ್ದಮೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡನು. “ತರುವಾಯ ಯೆಹೋವನು—ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು” ಎಂದು “ಮೋಶೆಗೆ ಆಜ್ಞಾಪಿಸಿದನು” ಎಂಬುದಾಗಿ ಬೈಬಲು ಹೇಳುತ್ತದೆ. (ಅರಣ್ಯಕಾಂಡ 15:35) ಆ ಮನುಷ್ಯನು ಏನು ಮಾಡಿದನೋ ಅದನ್ನು, ಯೆಹೋವನು ಅಷ್ಟೊಂದು ಗಂಭೀರವಾಗಿ ಏಕೆ ತೆಗೆದುಕೊಂಡನು?
ಕಟ್ಟಿಗೆಕೂಡಿಸಲು ಮತ್ತು ಆಹಾರ, ಬಟ್ಟೆ ಮತ್ತು ವಸತಿಯ ಸಂಬಂಧದಲ್ಲಿ ಬೇಕಾದ ಅಗತ್ಯಗಳನ್ನು ನೋಡಿಕೊಳ್ಳಲು ಜನರಿಗೆ ಆರು ದಿವಸಗಳಿದ್ದವು. ಏಳನೆಯ ದಿನವು ಆತ್ಮಿಕ ಅಗತ್ಯಗಳಿಗೆ ಮೀಸಲಾಗಿಡಲ್ಪಡಬೇಕಿತ್ತು. ಕಟ್ಟಿಗೆಯನ್ನು ಒಟ್ಟುಗೂಡಿಸುವುದು ತಪ್ಪಾಗಿರಲಿಲ್ಲ, ಆದರೂ ಯೆಹೋವನ ಆರಾಧನೆಗೆ ಮೀಸಲಾಗಿಡಲ್ಪಟ್ಟ ಸಮಯವನ್ನು ಬೇರೆ ಕೆಲಸಗಳಿಗೆ ಉಪಯೋಗಿಸುವುದು ತಪ್ಪಾಗಿತ್ತು. ಕ್ರೈಸ್ತರು ಮೋಶೆಯ ನಿಯಮದ ಕೆಳಗೆ ಇಲ್ಲದಿರುವುದಾದರೂ, ಇಂದು ನಮ್ಮ ಆದ್ಯತೆಗಳನ್ನು ತಕ್ಕ ಸ್ಥಾನದಲ್ಲಿಡುವುದರ ವಿಷಯದಲ್ಲಿ, ಈ ಘಟನೆಯು ನಮಗೆ ಪಾಠವೊಂದನ್ನು ಕಲಿಸುವುದಿಲ್ಲವೋ?—ಫಿಲಿಪ್ಪಿ 1:10.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು15 5/15 ಪುಟ 15 ಪ್ಯಾರ 5-6
“ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”
5 ಒಂದು ಶಬ್ದಕೋಶಕ್ಕನುಸಾರ ಹೆಮ್ಮೆ ಎನ್ನುವುದು ಸ್ವತಃ ನಮ್ಮ ಬಗ್ಗೆ ನಮಗೇ ಇರುವ ಆತ್ಮವಿಶ್ವಾಸ ಹಾಗೂ ಗೌರವ. ಅದು “ನೀವು ಅಥವಾ ನಿಮ್ಮ ಆಪ್ತರು ಮಾಡಿರುವ ಒಳ್ಳೇ ಕೆಲಸದ ಬಗ್ಗೆ ಇಲ್ಲವೆ ನಿಮ್ಮ ಬಳಿಯೊ ಅವರ ಬಳಿಯೊ ಇರುವ ಒಳ್ಳೇ ವಿಷಯದ ಬಗ್ಗೆಗಿನ ತೃಪ್ತಿ” ಸಹ ಆಗಿರುತ್ತದೆ. ಈ ರೀತಿಯ ಭಾವನೆಯಲ್ಲಿ ತಪ್ಪೇನಿಲ್ಲ. ಅಪೊಸ್ತಲ ಪೌಲನೇ ಥೆಸಲೊನೀಕದಲ್ಲಿದ್ದ ಸಹೋದರರಿಗೆ ಹೀಗಂದನು: “ನೀವು ಸಹಿಸಿಕೊಳ್ಳುತ್ತಿರುವ ಎಲ್ಲ ಹಿಂಸೆಗಳು ಮತ್ತು ಸಂಕಟಗಳ ನಡುವೆಯೂ ನಿಮಗಿರುವ ತಾಳ್ಮೆ ಹಾಗೂ ನಂಬಿಕೆಯ ಕಾರಣದಿಂದ ನಾವು ದೇವರ ಸಭೆಗಳ ಮಧ್ಯೆ ನಿಮ್ಮ ನಿಮಿತ್ತ ಹೆಚ್ಚಳಪಡುತ್ತೇವೆ” ಅಥವಾ ಹೆಮ್ಮೆಪಡುತ್ತೇವೆ. (2 ಥೆಸ. 1:4) ಹೀಗೆ ಬೇರೆಯವರು ಮಾಡಿರುವ ಒಳ್ಳೇ ಕೆಲಸದ ಬಗ್ಗೆ ಮತ್ತು ಸ್ವತಃ ನಮ್ಮ ಬಗ್ಗೆಯೇ ಸ್ವಲ್ಪ ಹೆಮ್ಮೆಪಡುವುದು ಒಳ್ಳೇದೇ. ನಮ್ಮ ಕುಟುಂಬ, ಸಂಸ್ಕೃತಿ, ಬೆಳೆದು ಬಂದ ಸ್ಥಳ ಇವುಗಳ ಬಗ್ಗೆ ಹೇಳಿಕೊಳ್ಳಲು ನಾಚಿಕೆಪಡಬೇಕಾಗಿಲ್ಲ.—ಅ. ಕಾ. 21:39.
6 ಆದರೆ ಇನ್ನೊಂದು ವಿಧದ ಹೆಮ್ಮೆಯೂ ಇದೆ. ಇದು ಸಂಬಂಧಗಳಲ್ಲಿ ಹುಳಿಹಿಂಡುತ್ತದೆ. ಅದರಲ್ಲೂ ಯೆಹೋವನೊಟ್ಟಿಗಿನ ನಮ್ಮ ಸ್ನೇಹವನ್ನು ಕೆಡಿಸುತ್ತದೆ. ಈ ಹೆಮ್ಮೆ ನಮ್ಮಲ್ಲಿದ್ದರೆ, ಬೇರೆಯವರು ನಮಗೆ ಬುದ್ಧಿವಾದದ ಮಾತುಗಳನ್ನು ಹೇಳುವಾಗ ಸಿಟ್ಟುಮಾಡಿಕೊಳ್ಳುತ್ತೇವೆ. ಆ ಬುದ್ಧಿವಾದವನ್ನು ದೀನತೆಯಿಂದ ಸ್ವೀಕರಿಸುವ ಬದಲು ಅದನ್ನು ತಳ್ಳಿಬಿಡುತ್ತೇವೆ. (ಕೀರ್ತ. 141:5) ಈ ರೀತಿಯ ಹೆಮ್ಮೆಯನ್ನು ‘ವಿಪರೀತವಾದ ಸ್ವಾಭಿಮಾನ’ ಅಥವಾ “ತಾವು ಇತರರಿಗಿಂತ ಮೇಲು ಎಂದು ಹೆಚ್ಚಾಗಿ ಕಾರಣವಿಲ್ಲದೆ ನೆನಸುವ ಜನರು ತೋರಿಸುವ ಅಹಂಕಾರ” ಎಂದು ವರ್ಣಿಸಲಾಗಿದೆ. ಇಂಥ ಒಣಹೆಮ್ಮೆಯನ್ನು ಯೆಹೋವನು ದ್ವೇಷಿಸುತ್ತಾನೆ. (ಕೀರ್ತ. 101:5; ಜ್ಞಾನೋ. 6:16, 17) ಆದರೆ ಮಾನವರು ತಮ್ಮ ಬಗ್ಗೆಯೇ ಜಂಬ ಕೊಚ್ಚಿಕೊಳ್ಳುವ ಮೂಲಕ ಹೆಮ್ಮೆ ತೋರಿಸುವಾಗ ಸೈತಾನನಿಗೆ ತುಂಬ ಖುಷಿ. ಏಕೆಂದರೆ ಹೀಗೆ ಅವರು ಅವನ ಅಹಂಕಾರವನ್ನು ಅನುಕರಿಸುತ್ತಿದ್ದಾರೆ. ನಿಮ್ರೋದ, ಫರೋಹ, ಅಬ್ಷಾಲೋಮ ತಮ್ಮ ಬಗ್ಗೆ ಕೊಚ್ಚಿಕೊಂಡಾಗ ಸೈತಾನನಿಗೆಷ್ಟು ಆನಂದ ಆಗಿರಬೇಕೆಂದು ಸ್ವಲ್ಪ ಊಹಿಸಿ! (ಆದಿ. 10:8, 9; ವಿಮೋ. 5:1, 2; 2 ಸಮು. 15:4-6) ಕಾಯಿನನು ದೇವರೊಟ್ಟಿಗಿನ ಸಂಬಂಧವನ್ನು ಕಳೆದುಕೊಳ್ಳಲು ಕಾರಣ ಹೆಮ್ಮೆಯೇ. ಯೆಹೋವನೇ ಅವನಿಗೆ ಬುದ್ಧಿಮಾತನ್ನು ಹೇಳಿದರೂ ಅದಕ್ಕೆ ಕಿವಿಗೊಡಲಿಲ್ಲ. ಅಷ್ಟು ಅಹಂಕಾರ ಅವನಿಗೆ! ಹಠದಿಂದ ದೇವರ ಎಚ್ಚರಿಕೆಯನ್ನು ಅಲಕ್ಷಿಸಿದ. ಯಾವುದೇ ಅಂಜಿಕೆಯಿಲ್ಲದೆ ಯೆಹೋವನ ವಿರುದ್ಧ ಪಾಪವನ್ನೂ ಮಾಡಿದ.—ಆದಿ. 4:6-8.
ಏಪ್ರಿಲ್ 5-11
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 17-19
“ನಿನಗೆ ಸಿಗೋ . . . ಆಸ್ತಿ ನಾನೇ”
ಕಾವಲಿನಬುರುಜು11 9/15 ಪುಟ 13 ಪ್ಯಾರ 9
ಯೆಹೋವನೇ ನಿಮ್ಮ ಪಾಲೆಂದು ತೋರಿಸುತ್ತೀರೋ?
9 ಲೇವಿಯ ಕುಲದವರ ಕುರಿತು ಯೋಚಿಸಿ. ವಾಗ್ದತ್ತ ದೇಶದಲ್ಲಿ ಯಾವುದೇ ಭೂಸ್ವಾಸ್ತ್ಯ ಅವರಿಗೆ ಸಿಗಲಿಲ್ಲ. ಅವರ ಕೆಲಸವೇ ಇಡೀ ಜನಾಂಗವನ್ನು ಸತ್ಯಾರಾಧನೆಯೆಡೆಗೆ ನಡೆಸುವುದಾಗಿತ್ತು. ಹಾಗಾಗಿ ಅವರು ಪೋಷಣೆಗಾಗಿ ಯೆಹೋವನ ಮೇಲೆ ಭರವಸೆ ಇಡಬೇಕಾಗಿತ್ತು. ಯೆಹೋವನೇ ಅವರ ಪಾಲು ಆಗಿದ್ದನು. (ಅರ. 18:20) ಲೇವಿಯರಂತೆ ಹಾಗೂ ಯಾಜಕರಂತೆ ನಾವಿಂದು ದೇವಾಲಯದಲ್ಲಿ ಸೇವೆ ಮಾಡುತ್ತಿಲ್ಲ ನಿಜ. ಹಾಗಿದ್ದರೂ ಅವರ ಹುರುಪು ಭರವಸೆಯನ್ನು ನಾವು ಬೆಳೆಸಿಕೊಳ್ಳಬಹುದು. ಕಡೇ ದಿವಸಗಳ ಅಂತಿಮ ಕ್ಷಣಗಳು ಧಾವಿಸಿ ಬರುತ್ತಿರುವ ಈ ಸಮಯದಲ್ಲಿ ಲೋಕದ ಭಾಗವಾಗಿಲ್ಲದ ನಮ್ಮನ್ನು ದೇವರು ಪೋಷಿಸಿ ಕಾಪಾಡುವನೆಂದು ನಂಬುವುದು ಅತೀ ಪ್ರಾಮುಖ್ಯ.—ಪ್ರಕ. 13:17.
ಕಾವಲಿನಬುರುಜು11 9/15 ಪುಟ 7-8 ಪ್ಯಾರ 4
ಯೆಹೋವನು ನನ್ನ ಪಾಲು
4 ಯಾಜಕ ಸೇವೆಗೆ ಮೀಸಲಾಗಿದ್ದ ಲೇವಿಯರಿಗೆ ಹೇಗೆ ಯೆಹೋವನೇ ಪಾಲು ಆಗಿದ್ದನು? ಆತನು ಅವರಿಗೆ ದೇಶದಲ್ಲಿ ಪಾಲು ಕೊಡುವ ಬದಲು ಅದಕ್ಕಿಂತಲೂ ಮಹತ್ತಾದ ಒಂದು ಅಮೂಲ್ಯ ಕೆಲಸವನ್ನು ಕೊಟ್ಟನು. ಬೈಬಲ್ ಹೇಳುವಂತೆ “ಯೆಹೋವನ ಯಾಜಕ ಸೇವೆಯೇ ಅವರ ಸ್ವಾಸ್ತ್ಯ” ಆಗಿತ್ತು. (ಯೆಹೋ. 18:7) ಈ ಯಾಜಕ ಸೇವೆ ಅವರನ್ನು ನಿರ್ಗತಿಕರನ್ನಾಗಿ ಮಾಡಲಿಲ್ಲವೆಂದು ಅರಣ್ಯಕಾಂಡ 18:20 ರ ಪೂರ್ವಾಪರ ವಚನಗಳು ತೋರಿಸುತ್ತವೆ. (ಅರಣ್ಯಕಾಂಡ 18:19, 21, 24 ಓದಿ.) ಆ ವಚನಗಳು ತಿಳಿಸುವಂತೆ, “ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವದಕ್ಕಾಗಿ ಇಸ್ರಾಯೇಲ್ಯರಿಂದ [ಸಕಲಪದಾರ್ಥಗಳ] ಹತ್ತನೆಯ ಪಾಲನ್ನು” ಲೇವಿಯರು ಪಡೆದುಕೊಳ್ಳುತ್ತಿದ್ದರು. ಇಸ್ರಾಯೇಲ್ಯರ ಬೆಳೆಯಲ್ಲಿ ಹಾಗೂ ಅವರ ಸಾಕುಪ್ರಾಣಿಗಳ ಮರಿಗಳಲ್ಲಿ ಹತ್ತರಲ್ಲೊಂದು ಭಾಗ ಲೇವಿಯರಿಗೆ ಸಿಗುತ್ತಿತ್ತು. ಅದೇ ರೀತಿ ಲೇವಿಯರು ತಮಗೆ ದೊರೆತದ್ದರಲ್ಲಿ ಹತ್ತನೆಯ ಒಂದು ಪಾಲನ್ನು ತಮ್ಮಲ್ಲಿ ಯಾಜಕ ಸೇವೆಮಾಡುವವರಿಗೆ ಕೊಡಬೇಕಿತ್ತು. ಅದು “ಉತ್ತಮಭಾಗ” ಆಗಿರಬೇಕಿತ್ತು. (ಅರ. 18:25-29) ಅಷ್ಟೇ ಅಲ್ಲ, ಇಸ್ರಾಯೇಲ್ಯರು ಕಾಣಿಕೆಯಾಗಿ ತರುತ್ತಿದ್ದ “ದೇವರ ವಸ್ತುಗಳೆಲ್ಲಾ” ಯಾಜಕರಿಗೆ ಸೇರುತ್ತಿದ್ದವು. ಆದ್ದರಿಂದ ಯೆಹೋವನು ಖಂಡಿತ ತಮ್ಮನ್ನು ಪೋಷಿಸುವನೆಂದು ಯಾಜಕ ವರ್ಗದವರು ಭರವಸೆಯಿಂದ ಇರಸಾಧ್ಯವಿತ್ತು.
ಆಧ್ಯಾತ್ಮಿಕ ಮುತ್ತುಗಳು
ಎಚ್ಚರ!02-E 6/8 ಪುಟ 14 ಪ್ಯಾರ 2
ಉಪ್ಪಿಗಿಂತ ರುಚಿ ಬೇರೆ ಇಲ್ಲ
ಕದಲದೆ ಸ್ಥಿರವಾಗಿ ಇರೋದನ್ನ ಮತ್ತು ಶಾಶ್ವತವಾಗಿ ಇರೋದನ್ನ ಕೂಡ ಉಪ್ಪು ಸೂಚಿಸ್ತಿತ್ತು. ಅದಕ್ಕೆ ಬೈಬಲ್, ಯಾವತ್ತೂ ಬದಲಾಗದ ಒಪ್ಪಂದವನ್ನ “ಉಪ್ಪಿನ ಒಪ್ಪಂದ” ಅಂತ ಹೇಳಿದೆ. ಈ ಒಪ್ಪಂದ ಮಾಡ್ಕೊಳ್ಳುವಾಗ ಎರಡೂ ಕಡೆಯವರು ಕೂತು ಊಟ ಮಾಡ್ತಿದ್ರು, ಉಪ್ಪನ್ನೂ ತಿಂತಾ ಇದ್ರು. ಇದರರ್ಥ ಅವ್ರು ಯಾವತ್ತೂ ಒಪ್ಪಂದ ಮುರಿಯಲ್ಲ ಅನ್ನೋದಾಗಿತ್ತು. (ಅರಣ್ಯಕಾಂಡ 18:19) ನಿಯಮ ಪುಸ್ತಕದ ಪ್ರಕಾರ ಯಜ್ಞವೇದಿ ಮೇಲೆ ಪ್ರಾಣಿಬಲಿ ಕೊಡ್ವಾಗ ಉಪ್ಪನ್ನೂ ಸೇರಿಸಿಕೊಳ್ಳಬೇಕಿತ್ತು. ಉಪ್ಪಿಗೆ ವಸ್ತುವನ್ನ ಕೆಡದಿರೋ ಹಾಗೆ ನೋಡ್ಕೊಳ್ಳೋ ಗುಣ ಇದೆ ಅನ್ನೋದನ್ನ ಇದು ಸೂಚಿಸ್ತಿತ್ತು.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು18.01 ಪುಟ 18 ಪ್ಯಾರ 4-6
ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ?
4 ನಮಗೆ ಯೆಹೋವನ ಮೇಲೆ ಪ್ರೀತಿ ಮತ್ತು ಕೃತಜ್ಞತಾಭಾವ ಇರುವುದರಿಂದ ಕಾಣಿಕೆ ಕೊಡುತ್ತೇವೆ. ಆತನು ನಮಗೋಸ್ಕರ ಏನೆಲ್ಲಾ ಮಾಡಿದ್ದಾನೋ ಅದರ ಬಗ್ಗೆ ಯೋಚಿಸುವಾಗ ನಮ್ಮ ಹೃದಯಾಳದಿಂದ ಕಾಣಿಕೆ ಕೊಡಲು ಪ್ರೇರಣೆ ಸಿಗುತ್ತದೆ. ರಾಜ ದಾವೀದನು ಆಲಯವನ್ನು ಕಟ್ಟಲು ಏನು ಅಗತ್ಯ ಎಂದು ವಿವರಿಸುವ ಸಮಯದಲ್ಲಿ ಆತನಿಗೂ ಹೀಗೇ ಅನಿಸಿತ್ತು. ನಮ್ಮ ಹತ್ತಿರ ಇರುವುದೆಲ್ಲವನ್ನೂ ಕೊಟ್ಟವನು ಯೆಹೋವನು ಮತ್ತು ನಾವು ಆತನಿಗೆ ಏನೇ ಕೊಟ್ಟರೂ ಅದೆಲ್ಲವೂ ಆತನು ನಮಗೆ ಈಗಾಗಲೇ ಕೊಟ್ಟಿರುವುದೇ ಎಂದು ದಾವೀದ ಹೇಳಿದನು.—1 ಪೂರ್ವಕಾಲವೃತ್ತಾಂತ 29:11-14 ಓದಿ.
5 ಯೆಹೋವನಿಗೆ ಕಾಣಿಕೆ ಕೊಡುವುದು ನಮ್ಮ ಆರಾಧನೆಯ ಭಾಗವೂ ಆಗಿದೆ. ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ ಸ್ವರ್ಗದಲ್ಲಿರುವ ಯೆಹೋವನ ಸೇವಕರು ಹೀಗೆ ಹೇಳುವುದನ್ನು ಕೇಳಿಸಿಕೊಂಡನು: “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.” (ಪ್ರಕ. 4:11) ಹೌದು ಯೆಹೋವನು ನಮ್ಮ ಎಲ್ಲ ಮಹಿಮೆ, ಗೌರವವನ್ನು ಪಡೆಯಲು ಅರ್ಹನಾಗಿದ್ದಾನೆ. ಆದ್ದರಿಂದ ಆತನಿಗೆ ಅತ್ಯುತ್ತಮವಾದದ್ದನ್ನು ಕೊಡಬೇಕು. ಇಸ್ರಾಯೇಲ್ಯರು ವರ್ಷಕ್ಕೆ ಮೂರು ಹಬ್ಬಗಳನ್ನು ಮಾಡುವಂತೆ ಮೋಶೆಯ ಮೂಲಕ ಯೆಹೋವನು ಹೇಳಿದನು. ಆ ಹಬ್ಬಗಳ ಸಮಯದಲ್ಲಿ ಜನರು ಯೆಹೋವನಿಗೆ ಕಾಣಿಕೆ ಕೊಡಬೇಕಿತ್ತು. ಅದು ಅವರ ಆರಾಧನೆಯ ಭಾಗವಾಗಿತ್ತು. “ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಕೂಡದು” ಎಂದು ಜನರಿಗೆ ಹೇಳಲಾಗಿತ್ತು. (ಧರ್ಮೋ. 16:16) ಇಂದು ಕೂಡ ನಾವು ನಿಸ್ವಾರ್ಥಭಾವದಿಂದ ಕಾಣಿಕೆ ಕೊಡುವಾಗ ಯೆಹೋವನ ಸಂಘಟನೆಯ ಕೆಲಸವನ್ನು ಮಾನ್ಯಮಾಡುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ.
6 ನಾವು ಉದಾರವಾಗಿ ಕೊಡುವುದರಿಂದ ನಮಗೆ ಒಳ್ಳೇದಾಗುತ್ತದೆ. ನಾವು ಪಡೆದುಕೊಳ್ಳುವುದು ಮಾತ್ರವಲ್ಲ ಕೊಡಲೂ ಸಿದ್ಧರಿರಬೇಕು. (ಜ್ಞಾನೋಕ್ತಿ 29:21 ಓದಿ.) ಒಂದು ಚಿಕ್ಕ ಮಗು ತನ್ನ ಹೆತ್ತವರು ಆಗಾಗ ಕೊಟ್ಟ ಸ್ವಲ್ಪ ಹಣವನ್ನು ಕೂಡಿಸಿಟ್ಟು ಒಂದು ಉಡುಗೊರೆಯನ್ನು ಖರೀದಿಸಿ ಅವರಿಗೆ ಕೊಡುವುದನ್ನು ಊಹಿಸಿಕೊಳ್ಳಿ. ಆ ಹೆತ್ತವರಿಗೆ ಎಷ್ಟು ಖುಷಿಯಾಗುತ್ತದೆ! ಅಥವಾ ಇದನ್ನು ಚಿತ್ರಿಸಿಕೊಳ್ಳಿ. ತನ್ನ ತಂದೆತಾಯಿ ಜೊತೆ ಇರುವ ಒಬ್ಬ ಯುವ ಪಯನೀಯರನು, ಮನೆಯ ಬಾಡಿಗೆ ಕಟ್ಟಲು ಅಥವಾ ಅಡಿಗೆ ಸಾಮಾನು ತರಲು ಸಹಾಯವಾಗಲಿ ಎಂದು ಸ್ವಲ್ಪ ಹಣ ಕೊಡುತ್ತಾನೆ. ತಮ್ಮ ಮಗ ಇದನ್ನು ಮಾಡಬೇಕು ಎಂದು ಆ ಹೆತ್ತವರು ಬಯಸಿರಲಿಕ್ಕಿಲ್ಲ. ಆದರೂ ಆ ಸಹಾಯವನ್ನು ಅವರು ಸ್ವೀಕರಿಸುತ್ತಾರೆ. ಯಾಕೆ? ಹೆತ್ತವರು ಅವನಿಗಾಗಿ ಏನೆಲ್ಲಾ ಮಾಡುತ್ತಿದ್ದಾರೋ ಅದಕ್ಕೆ ಅವನು ಈ ರೀತಿ ಕೃತಜ್ಞತೆ ತೋರಿಸುತ್ತಿದ್ದಾನೆ ಎಂದು ಅವರಿಗೆ ಗೊತ್ತು. ಅದೇ ರೀತಿ ನಮ್ಮ ಹತ್ತಿರ ಏನಿದೆಯೋ ಅದರಿಂದ ಯೆಹೋವನಿಗೆ ಕಾಣಿಕೆ ಕೊಡುವುದು ನಮಗೆ ಒಳ್ಳೇದು ಎಂದು ಆತನಿಗೆ ಗೊತ್ತು.
ಏಪ್ರಿಲ್ 12-18
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 20-21
“ಒತ್ತಡದಲ್ಲೂ ದೀನತೆ ತೋರಿಸಿ”
ಕಾವಲಿನಬುರುಜು19.02 ಪುಟ 12-13 ಪ್ಯಾರ 19
ದೀನರನ್ನು ಕಂಡರೆ ದೇವರಿಗೆ ಇಷ್ಟ
19 ದೀನರಾಗಿದ್ದರೆ ನಾವು ಹೆಚ್ಚು ತಪ್ಪು ಮಾಡಲ್ಲ. ಪುನಃ ಮೋಶೆಯ ಬಗ್ಗೆ ಯೋಚಿಸಿ. ಆತನು ಎಷ್ಟೋ ವರ್ಷ ದೀನನಾಗಿದ್ದನು. ಇದು ಯೆಹೋವನಿಗೆ ತುಂಬ ಇಷ್ಟವಾಯಿತು. ಆದರೆ 40 ವರ್ಷ ಅರಣ್ಯದಲ್ಲಿ ಅಲೆದಾಡಿದ ಮೇಲೆ ಮೋಶೆ ದೀನತೆ ತೋರಿಸಲು ತಪ್ಪಿಹೋದನು. ಆತನ ಅಕ್ಕ ಆಗಷ್ಟೇ ತೀರಿಕೊಂಡಿದ್ದಳು ಮತ್ತು ಅವಳನ್ನು ಕಾದೇಶಿನಲ್ಲಿ ಮಣ್ಣುಮಾಡಲಾಗಿತ್ತು. ಮೋಶೆ ಮಗುವಾಗಿದ್ದಾಗ ಆತನ ಜೀವವನ್ನು ಕಾಪಾಡಿದ್ದು ಈ ಅಕ್ಕನೇ ಆಗಿರಬೇಕು. ಈಗ ಇಸ್ರಾಯೇಲ್ಯರು ಮತ್ತೊಮ್ಮೆ ಗೊಣಗಲು ಆರಂಭಿಸಿದರು. ತಮ್ಮನ್ನು ಒಳ್ಳೇದಾಗಿ ನೋಡಿಕೊಳ್ಳುತ್ತಿಲ್ಲ, ನೀರಿಲ್ಲ ಎಂದು ಹೇಳಿ ಮೋಶೆಯ ಜೊತೆ ಜಗಳಕ್ಕಿಳಿದರು. ಯೆಹೋವನು ಮೋಶೆಯ ಮೂಲಕ ನಡಿಸಿದ್ದ ಎಲ್ಲಾ ಅದ್ಭುತಗಳನ್ನು ಈ ಜನ ನೋಡಿದ್ದರು. ಇಷ್ಟು ವರ್ಷ ಮೋಶೆ ಒಬ್ಬ ಒಳ್ಳೇ ನಾಯಕನಾಗಿ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದರೂ ಜನ ದೂರಿದರು. ನೀರಿಲ್ಲದ್ದಕ್ಕೆ ಮೋಶೆಯೇ ಕಾರಣ ಅನ್ನುವ ರೀತಿ ಆತನ ಮೇಲೆ ಕೋಪಗೊಂಡರು.—ಅರ. 20:1-5, 9-11.
ಕಾವಲಿನಬುರುಜು19.02 ಪುಟ 13 ಪ್ಯಾರ 20-21
ದೀನರನ್ನು ಕಂಡರೆ ದೇವರಿಗೆ ಇಷ್ಟ
20 ಮೋಶೆಗೆ ಇದನ್ನು ತಡಿಯಕ್ಕಾಗಲಿಲ್ಲ. ಆತನಿಗೆ ತುಂಬ ಕೋಪ ಬಂತು. ಬಂಡೆಯ ಹತ್ತಿರ ಮಾತಾಡುವಂತೆ ಯೆಹೋವನು ಹೇಳಿದ್ದರೂ ಮೋಶೆ ಜನರ ಹತ್ತಿರ ಸಿಟ್ಟಿನಿಂದ ಮಾತಾಡಿದ ಮತ್ತು ತಾನೇ ಒಂದು ಅದ್ಭುತ ಮಾಡುವ ತರ ಮಾತಾಡಿದ. ಬಂಡೆಯನ್ನು ಎರಡು ಸಾರಿ ಬಡಿದಾಗ ತುಂಬ ನೀರು ಬಂತು. ಅಹಂ ಮತ್ತು ಕೋಪ ಸೇರಿ ಈ ಗಂಭೀರ ತಪ್ಪಿಗೆ ನಡೆಸಿಬಿಟ್ಟಿತು. (ಕೀರ್ತ. 106:32, 33) ಮೋಶೆ ಸ್ವಲ್ಪ ಸಮಯಕ್ಕೆ ದೀನತೆ ಕಳೆದುಕೊಂಡದ್ದರಿಂದ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶ ಆತನಿಗೆ ಸಿಗಲಿಲ್ಲ.—ಅರ. 20:12.
21 ಈ ಘಟನೆಯಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ಒಂದು, ನಾವು ಸದಾ ದೀನರಾಗಿರಲು ಪ್ರಯತ್ನ ಹಾಕುತ್ತಾ ಇರಬೇಕು. ಒಂದು ಕ್ಷಣಕ್ಕಾದರೂ ದೀನತೆ ತೋರಿಸದೆ ಹೋದರೆ ಅಹಂ ಬಂದುಬಿಡುತ್ತದೆ ಮತ್ತು ನಾವು ಒರಟಾಗಿ ಏನಾದರೂ ಹೇಳಿಬಿಡಬಹುದು ಅಥವಾ ಮಾಡಿಬಿಡಬಹುದು. ಎರಡು, ಒತ್ತಡ ನಮ್ಮನ್ನು ದುರ್ಬಲ ಮಾಡಿಬಿಡುತ್ತದೆ. ಆದ್ದರಿಂದ ಒತ್ತಡದಲ್ಲಿದ್ದಾಗಲೂ ದೀನರಾಗಿರಲು ನಾವು ಶ್ರಮಿಸಬೇಕು.
ಕಾವಲಿನಬುರುಜು10 1/1 ಪುಟ 27 ಪ್ಯಾರ 5
ನ್ಯಾಯಕ್ಕಾಗಿ ಸ್ಥಿರನಿಲ್ಲುವ ನ್ಯಾಯಾಧೀಶ
ಮೊದಲಾಗಿ, ಜನರು ದ್ರೋಹಿಗಳೆಂದು ತೀರ್ಪು ಮಾಡುವುದಂತೂ ಬಿಡಿ, ಅವರೊಂದಿಗೆ ಮಾತಾಡುವಂತೆಯೂ ದೇವರು ಮೋಶೆಗೆ ಹೇಳಿರಲಿಲ್ಲ. ಎರಡನೆಯದಾಗಿ, ಮೋಶೆಆರೋನರು ದೇವರಿಗೆ ಮಹಿಮೆಕೊಡಲು ತಪ್ಪಿಹೋದರು. ‘ನೀವು ನನ್ನ ಗೌರವವನ್ನು ಕಾಪಾಡದೆಹೋದಿರಿ’ ಎಂದು ದೇವರು ಹೇಳಿದನು. (ವಚನ 12) ‘ನಾವು ನೀರನ್ನು ಬರಮಾಡುವೆವು’ ಎಂದು ಮೋಶೆ ಹೇಳಿದಾಗ ಅದ್ಭುತಕರವಾಗಿ ನೀರನ್ನು ಒದಗಿಸುವಾತನು ದೇವರಲ್ಲ, ತಾವೇ ಎಂಬಂತೆ ಮಾತಾಡಿದನು. ಮೂರನೆಯದಾಗಿ, ಈ ದಂಡನೆಯು ದೇವರು ಹಿಂದೆ ಕೊಟ್ಟಂಥ ತೀರ್ಪುಗಳಿಗೆ ಹೊಂದಿಕೆಯಲ್ಲಿತ್ತು. ಆತನಿಗೆ ದ್ರೋಹಿಗಳಾದ ಹಿಂದಿನ ತಲೆಮಾರಿನವರು ಕಾನಾನ್ ದೇಶವನ್ನು ಪ್ರವೇಶಿಸಬಾರದೆಂದು ದೇವರು ತೀರ್ಪನ್ನಿತ್ತಿದ್ದನು. ಮೋಶೆಆರೋನರಿಗೂ ಅದೇ ತೀರ್ಪು ಕೊಟ್ಟನು. (ಅರಣ್ಯಕಾಂಡ 14:22, 23) ನಾಲ್ಕನೆಯದಾಗಿ, ಮೋಶೆಆರೋನರು ಇಸ್ರಾಯೇಲಿನ ನಾಯಕರಾಗಿದ್ದರು. ಹೆಚ್ಚಿನ ಜವಾಬ್ದಾರಿಯುಳ್ಳವರು ದೇವರಿಗೆ ಹೆಚ್ಚಿನ ಲೆಕ್ಕವನ್ನು ಒಪ್ಪಿಸಬೇಕು.—ಲೂಕ 12:48.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು14 6/15 ಪುಟ 26 ಪ್ಯಾರ 12
ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ನಿಮಗೂ ಇದೆಯೇ?
12 ಈ ಎಲ್ಲ ಸನ್ನಿವೇಶಗಳಲ್ಲಿ ಯೆಹೋವನು ಆರೋನನನ್ನು ತಕ್ಷಣ ಶಿಕ್ಷಿಸಬಹುದಿತ್ತು. ಆದರೆ ಆರೋನ ಕೆಟ್ಟ ವ್ಯಕ್ತಿಯಲ್ಲ ಅಥವಾ ನಡೆದಂಥ ತಪ್ಪಿಗೆ ಮುಖ್ಯವಾಗಿ ಅವನು ಕಾರಣನಲ್ಲ ಎಂದು ಯೆಹೋವನಿಗೆ ತಿಳಿದಿತ್ತು. ಆರೋನನು ಪರಿಸ್ಥಿತಿಯ ಸುಳಿಯಲ್ಲಿ ಸಿಕ್ಕಿಬಿದ್ದೊ, ಬೇರೆಯವರ ಪ್ರಭಾವಕ್ಕೆ ಒಳಗಾಗಿಯೊ ಆ ತಪ್ಪುಗಳನ್ನು ಮಾಡಿದನೆಂದು ತೋರುತ್ತದೆ. ಆದರೆ ಅವನ ತಪ್ಪನ್ನು ಅವನಿಗೆ ಹೇಳಿದಾಗ ಕೂಡಲೇ ಒಪ್ಪಿದನು ಮತ್ತು ಯೆಹೋವನ ತೀರ್ಪುಗಳನ್ನು ಬೆಂಬಲಿಸಿದನು. (ವಿಮೋ. 32:26; ಅರ. 12:11; 20:23-27) ಯೆಹೋವನು ಆರೋನನ ನಂಬಿಕೆ ಹಾಗೂ ಪಶ್ಚಾತ್ತಾಪ ತುಂಬಿದ ಮನೋಭಾವಕ್ಕೆ ಹೆಚ್ಚು ಗಮನಕೊಟ್ಟನು. ಶತಮಾನಗಳ ನಂತರವೂ ಆರೋನ ಮತ್ತವನ ವಂಶಜರನ್ನು ಯೆಹೋವನ ಭಕ್ತರೆಂದು ನೆನಪಿಸಿಕೊಳ್ಳಲಾಯಿತು.—ಕೀರ್ತ. 115:10-12; 135:19, 20.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕೋಪವನ್ನು ನಿಯಂತ್ರಣದಲ್ಲಿಡುವುದು ಹೇಗೆ?
ಇದಕ್ಕೇನು ಪರಿಹಾರ
ಗುರಿ ಇಡಿ. “ನಾನಿರೋದೇ ಹೀಗೆ” ಅಂತ ಹೇಳುವ ಬದಲು ಕೋಪವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಮೊದಲು ಕನಿಷ್ಠ ಪಕ್ಷ ಆರು ತಿಂಗಳಾದರೂ ನಿಯಂತ್ರಣದಲ್ಲಿಡುವ ಗುರಿ ಇಡಿ. ನಿಮಗೆ ಕೋಪ ಬಂದ ಪ್ರತಿ ಬಾರಿ (1) ಯಾಕೆ ಕೋಪ ಬಂತು? (2) ಅದನ್ನು ನಿಯಂತ್ರಣದಲ್ಲಿಡಲು ನೀವೇನು ಮಾಡಿದಿರಿ? (3) ಇನ್ನೂ ಏನು ಮಾಡಬಹುದಿತ್ತು? ಮತ್ತು ಯಾಕೆ? ಅಂತ ಬರೆದಿಡಿ. ಏನು ಮಾಡಬಹುದಿತ್ತು ಅಂತ ಬರೆದಿಟ್ಟಿದ್ದೀರೋ ಅದನ್ನು ಮುಂದಿನ ಬಾರಿ ಮಾಡಿ. ಕಿವಿಮಾತು: ನೀವು ಮಾಡಿರುವ ಪ್ರಗತಿಯನ್ನೂ, ತಾಳ್ಮೆ ತೋರಿಸಿದ್ದಕ್ಕಾಗಿ ನಿಮಗೆ ಹೇಗೆ ಅನಿಸಿತು ಅನ್ನುವುದನ್ನೂ ಬರೆದಿಡಿ.—ಬೈಬಲ್ ತತ್ವ: ಕೊಲೊಸ್ಸೆ 3:8.
ಮಾತಾಡುವ ಮುಂಚೆ ಯೋಚಿಸಿ. ಯಾರಾದರೂ ನಿಮಗೆ ಕೋಪ ಬರುವ ಥರ ಮಾಡಿದರೆ ತಕ್ಷಣ ನಿಮ್ಮ ಮನಸ್ಸಿಗೆ ಬಂದದ್ದನ್ನು ಹೇಳಿಬಿಡಬೇಡಿ. ಸ್ವಲ್ಪ ತಾಳ್ಮೆಯಿಂದಿದ್ದು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಳ್ಳಿ. “ದೀರ್ಘವಾಗಿ ಉಸಿರೆಳೆಯುವಾಗ ನಾನು ಏನು ಮಾತಾಡಬೇಕಂತ ಯೋಚಿಸುತ್ತೇನೆ, ಹೀಗೆ ಯೋಚಿಸಿ ಮಾತಾಡುವುದರಿಂದ ಆಮೇಲೆ ನನಗೆ ಬೇಜಾರಾಗುವುದಿಲ್ಲ” ಎಂದು 15 ವರ್ಷದ ಎರಿಕ್ ಹೇಳುತ್ತಾನೆ.—ಬೈಬಲ್ ತತ್ವ: ಜ್ಞಾನೋಕ್ತಿ 21:23.
ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳದೆ ಕೆಲವೊಮ್ಮೆ ನೀವು ಕೋಪ ಮಾಡಿಕೊ0ಡಿರಬಹುದು. ಆದ್ದರಿಂದ ಕೇವಲ ನಿಮ್ಮ ಬಗ್ಗೆಯೇ ಯೋಚಿಸದೆ ಇತರರಿಗೆ ಹೇಗನಿಸುತ್ತದೆ ಅಂತ ಯೋಚಿಸಿ. “ಜನ ಎಷ್ಟೇ ಕಟುವಾಗಿ ಪ್ರತಿಕ್ರಿಯಿಸಿ, ಕೋಪ ಬರುವ ಹಾಗೆ ಮಾತಾಡಿದರೂ ಅವರು ಆ ರೀತಿ ಮಾಡಲು ಕಾರಣವೇನು ಅಂತ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀನಿ” ಎನ್ನುತ್ತಾರೆ ಜೆಸಿಕಾ ಎಂಬ ಮಹಿಳೆ.—ಬೈಬಲ್ ತತ್ವ: ಜ್ಞಾನೋಕ್ತಿ 19:11.
ಪರಿಸ್ಥಿತಿ ನಿಯಂತ್ರಣ ತಪ್ಪುವಂತಿದ್ದರೆ ಅಲ್ಲಿಂದ ಹೊರಟು ಬಿಡಿ. ‘ಸಿಟ್ಟೇರುವುದಕ್ಕೆ ಮುಂಚೆ ವಾದವನ್ನು ನಿಲ್ಲಿಸು’ ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 17:14) ಇಲ್ಲಿ ಹೇಳುವಂತೆ ಕೈ ಮೀರಿ ಹೋಗುವ ಸಂದರ್ಭ ಎದುರಾದಾಗ ಅಲ್ಲಿಂದ ಹೊರಟು ಹೋಗುವುದೇ ಒಳ್ಳೆಯದು. ಅದರ ಬಗ್ಗೆಯೇ ಯೋಚಿಸಿ ಇನ್ನಷ್ಟು ಕೋಪಿಸಿಕೊಳ್ಳುವ ಬದಲು ಬೇರೆ ಕೆಲಸದಲ್ಲಿ ಮಗ್ನರಾಗಿ. “ಒತ್ತಡ ಮತ್ತು ಕೋಪದಿಂದ ಹೊರಬಂದು ಸಮಾಧಾನದಿಂದ ಇರಲು ವ್ಯಾಯಾಮ ನನಗೆ ಸಹಾಯ ಮಾಡುತ್ತದೆ” ಎನ್ನುತ್ತಾಳೆ ದೀಪಾ.
ನಡೆದದ್ದನ್ನು ಮರೆತುಬಿಡಿ. “ನೀವು ಕೋಪಗೊಂಡರೂ ಪಾಪಮಾಡಬೇಡಿರಿ” ಎಂದು ಬೈಬಲ್ ಹೇಳುತ್ತದೆ. (ಎಫೆಸ 4:26) ಇದರರ್ಥ ಕೋಪ ಬರುವುದು ಸಾಮಾನ್ಯ. ಆದರೆ ಕೋಪ ಬಂದಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ ಅನ್ನುವುದು ಮುಖ್ಯ. ಅಂಥ ಸಂದರ್ಭದಲ್ಲಿ “ಮೌನವಾಗಿರಿ, ಹೃದಯದಲ್ಲೇ . . . ಆಲೋಚಿಸಿಕೊಳ್ಳಿರಿ” ಎಂದು ಬೈಬಲ್ ಪ್ರೋತ್ಸಾಹಿಸುತ್ತದೆ. (ಕೀರ್ತನೆ 4:4) “ಇತರರು ಏನಾದರೂ ಹೇಳಿದರೆ ಅಥವಾ ಮಾಡಿದರೆ ನೀವು ಕೋಪದಿಂದ ಪ್ರತಿಕ್ರಿಯಿಸಬೇಡಿ. ಹಾಗೆ ಮಾಡಿದರೆ ನೀವು ಅವರ ಕೈಗೊಂಬೆಯಾಗಿ ಬಿಡುತ್ತೀರಿ. ಆದ್ದರಿಂದ ಕೋಪ ಮಾಡಿಕೊಳ್ಳದೆ ನಡೆದದ್ದನ್ನು ಮರೆತುಬಿಟ್ಟು ನೀವೊಬ್ಬ ಪ್ರೌಢ ವ್ಯಕ್ತಿ ಅಂತ ತೋರಿಸಿಕೊಡಿ” ಎಂದು ರೋಶನ್ ಎಂಬ ಯುವಕ ಹೇಳುತ್ತಾನೆ. ಹೀಗೆ ಮಾಡಿದರೆ ಕೋಪಕ್ಕೆ ನಿಮ್ಮ ಮೇಲಲ್ಲ, ನಿಮಗೆ ಕೋಪದ ಮೇಲೆ ನಿಯಂತ್ರಣ ಇರುತ್ತದೆ.
ಏಪ್ರಿಲ್ 19-25
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 22-24
“ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು”
“ಯೇಸುವಿನ ವಿಷಯವಾದ ಸುವಾರ್ತೆಯ” ಘೋಷಣೆ
5 ಒಂದನೇ ಶತಮಾನದಲ್ಲಾದಂತೆ ಇಂದು ಸಹ ದೇವಜನರ ಮೇಲೆ ಬಂದಿರುವ ಹಿಂಸೆಯಿಂದಾಗಿ ಸಾರುವ ಕೆಲಸ ನಿಂತುಹೋಗಿಲ್ಲ. ಆಗಾಗ ಕ್ರೈಸ್ತರನ್ನು ಬಲವಂತದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಂದರೆ ಜೈಲಿಗೆ ಅಥವಾ ಇನ್ನೊಂದು ದೇಶಕ್ಕೆ ಕಳುಹಿಸಲಾಗಿದೆ. ಇದರಿಂದ ರಾಜ್ಯ ಸಂದೇಶಕ್ಕೆ ತಡೆಯಾಗುವ ಬದಲು ಅದನ್ನು ಒಂದು ಹೊಸ ಜಾಗಕ್ಕೆ ತಲಪಿಸಲು ಸಹಾಯವಾಗಿದೆ! ಉದಾಹರಣೆಗೆ ಎರಡನೇ ಲೋಕ ಯುದ್ಧದ ಸಮಯದಲ್ಲಿ ನಾಜಿ ಸೆರೆಶಿಬಿರಗಳಲ್ಲಿದ್ದ ಯೆಹೋವನ ಸಾಕ್ಷಿಗಳು ಅಲ್ಲಿದ್ದ ಬೇರೆಯವರಿಗೆ ಸಾಕ್ಷಿಕೊಡಲು ಸಾಧ್ಯವಾಯಿತು. ಆ ಶಿಬಿರಗಳಲ್ಲಿ ಸಾಕ್ಷಿಗಳನ್ನು ಭೇಟಿಯಾದ ಒಬ್ಬ ಯೆಹೂದಿ ವ್ಯಕ್ತಿ ಹೀಗಂದನು: “ಯೆಹೋವನ ಸಾಕ್ಷಿಗಳಾಗಿದ್ದ ಸೆರೆವಾಸಿಗಳ ಮನೋಬಲ ನೋಡಿ ಅವರ ನಂಬಿಕೆ ಶಾಸ್ತ್ರಗ್ರಂಥದ ಮೇಲೆ ಆಧಾರಿತವಾಗಿದೆ ಎಂದು ನನಗೆ ಮನವರಿಕೆ ಆಯಿತು. ಆಮೇಲೆ ನಾನೂ ಒಬ್ಬ ಸಾಕ್ಷಿಯಾದೆ.”
it-2-E ಪುಟ 291
ಹುಚ್ಚುತನ
ಯೆಹೋವನನ್ನ ಎದುರು ಹಾಕೊಳ್ಳೋ ಹುಚ್ಚುತನ. ಪ್ರವಾದಿ ಬಿಳಾಮ ಮೋವಾಬ್ಯರ ಅರಸನಾದ ಬಾಲಾಕನಿಂದ ಹಣ ಸಿಗುತ್ತೆ ಅಂತ ದುರಾಸೆಯಿಂದ ಇಸ್ರಾಯೇಲ್ಯರ ವಿರುದ್ಧ ಭವಿಷ್ಯವಾಣಿ ನುಡಿಯೋಕೆ ಹೊರಟ. ಇದು ಅವನ ಮೂರ್ಖತನವಾಗಿತ್ತು. ಯೆಹೋವ ಮಧ್ಯ ಬಂದು ಅವನ ಕೆಲಸವೆಲ್ಲ ಮಣ್ಣು ಮುಕ್ಕೋ ತರ ಮಾಡಿದನು. “ಒಂದು ಮೂಕ ಪ್ರಾಣಿ ಮನುಷ್ಯರ ತರ ಮಾತಾಡಿ ಆ ಪ್ರವಾದಿ ತಪ್ಪುದಾರಿಗೆ ಹೋಗೋದನ್ನ ತಡೀತು” ಅಂತ ಅಪೊಸ್ತಲ ಪೇತ್ರ ಹೇಳಿದ. ಬಿಳಾಮನ ಹುಚ್ಚುತನಕ್ಕೆ ಪೇತ್ರ ಪರಫ್ರೋನಿಯ ಅನ್ನೋ ಗ್ರೀಕ್ ಪದವನ್ನ ಬಳಸಿದ್ದಾನೆ. ಈ ಪದಕ್ಕೆ ‘ಬುದ್ಧಿ ನೆಟ್ಟಗಿಲ್ಲ’ ಅನ್ನೋ ಅರ್ಥ ಇದೆ.—2ಪೇತ್ರ 2:15, 16; ಅರ 22:26-31.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು04 8/1 ಪುಟ 27 ಪ್ಯಾರ 2
ಅರಣ್ಯಕಾಂಡ ಪುಸ್ತಕದ ಮುಖ್ಯಾಂಶಗಳು
22:20-22—ಯೆಹೋವನು ಬಿಳಾಮನ ವಿರುದ್ಧ ಕೋಪಗೊಂಡದ್ದೇಕೆ? ಪ್ರವಾದಿಯಾದ ಬಿಳಾಮನು ಇಸ್ರಾಯೇಲ್ಯರನ್ನು ಶಪಿಸಬಾರದು ಎಂದು ಯೆಹೋವನು ಅವನಿಗೆ ಹೇಳಿದ್ದನು. (ಅರಣ್ಯಕಾಂಡ 22:12) ಆದರೂ, ಆ ಪ್ರವಾದಿಯು ಇಸ್ರಾಯೇಲ್ಯರನ್ನು ಶಪಿಸುವ ಉದ್ದೇಶದಿಂದ ಬಾಲಾಕನ ಜನರೊಂದಿಗೆ ಹೋದನು. ಬಿಳಾಮನು ಮೋವಾಬ್ಯರ ಅರಸನನ್ನು ಮೆಚ್ಚಿಸಲು ಹಾಗೂ ಅವನಿಂದ ಬಹುಮಾನವನ್ನು ಪಡೆದುಕೊಳ್ಳಲು ಬಯಸಿದನು. (2 ಪೇತ್ರ 2:15, 16; ಯೂದ 11) ಇಸ್ರಾಯೇಲ್ಯರನ್ನು ಶಪಿಸುವುದಕ್ಕೆ ಬದಲಾಗಿ ಅವರನ್ನು ಆಶೀರ್ವದಿಸುವಂತೆ ಬಿಳಾಮನು ಒತ್ತಾಯಿಸಲ್ಪಟ್ಟಾಗಲೂ, ಇಸ್ರಾಯೇಲ್ಯ ಪುರುಷರನ್ನು ಸೆಳೆಯಲಿಕ್ಕಾಗಿ ಬಾಳನ ಆರಾಧಕರಾಗಿದ್ದ ಸ್ತ್ರೀಯರನ್ನು ಉಪಯೋಗಿಸುವಂತೆ ಸೂಚಿಸುವ ಮೂಲಕ ಅವನು ಅರಸನ ಅನುಗ್ರಹವನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು. (ಅರಣ್ಯಕಾಂಡ 31:15, 16) ಹೀಗೆ, ಬಿಳಾಮನ ವಿರುದ್ಧ ಯೆಹೋವನು ಕೋಪಗೊಳ್ಳಲು ಪ್ರವಾದಿಯ ನಿರ್ಲಜ್ಜೆಯ ಲೋಭವೇ ಕಾರಣವಾಗಿತ್ತು.
ಏಪ್ರಿಲ್ 26–ಮೇ 2
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 25-26
“ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?”
“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”
ಮೀನುಗಾರನು ಮೀನು ಹಿಡಿಯಲಿಕ್ಕಾಗಿ ತನ್ನ ಅಚ್ಚುಮೆಚ್ಚಿನ ಸ್ಥಳಕ್ಕೆ ಹೋಗುತ್ತಾನೆ. ಅವನು ಒಂದು ನಿರ್ದಿಷ್ಟ ರೀತಿಯ ಮೀನನ್ನು ಹಿಡಿಯಲು ಬಯಸುತ್ತಾನೆ. ಅವನು ಒಂದು ಸೆಳೆವಸ್ತುವನ್ನು ಆರಿಸಿಕೊಂಡು ಅದನ್ನು ಗಾಳಕ್ಕೆ ಸಿಕ್ಕಿಸಿ ದಾರವನ್ನು ನೀರಿಗೆ ಎಸೆಯುತ್ತಾನೆ. ಕೆಲವೇ ಕ್ಷಣಗಳಲ್ಲಿ ದಾರವು ಬಿಗಿಯಾಗುತ್ತದೆ, ಕೋಲು ಬಾಗುತ್ತದೆ ಮತ್ತು ಅವನು ದಾರವನ್ನು ಹಿಂದಕ್ಕೆಳೆಯುವ ಮೂಲಕ ತಾನು ಹಿಡಿದ ಮೀನನ್ನು ಮೇಲಕ್ಕೆತ್ತುತ್ತಾನೆ. ತಾನು ಸರಿಯಾದ ಸೆಳೆವಸ್ತುವನ್ನು ಆರಿಸಿಕೊಂಡದ್ದಕ್ಕಾಗಿ ಅವನು ನಸುನಗೆ ಬೀರುತ್ತಾನೆ.
2 ಸಾ.ಶ.ಪೂ. 1473 ರಲ್ಲಿ ಬಿಳಾಮನೆಂಬ ಒಬ್ಬ ವ್ಯಕ್ತಿಯು ಒಂದು ಗಾಳವನ್ನು ಆರಿಸಿಕೊಳ್ಳುವ ವಿಷಯದಲ್ಲಿ ಆಲೋಚಿಸಿದನು. ಆದರೆ ಅವನ ಉದ್ದೇಶಿತ ಬಲಿಪಶುಗಳು ವಾಗ್ದತ್ತ ದೇಶದ ಗಡಿಯ ಬಳಿ ಮೋವಾಬ್ಯರ ಬೈಲಿನಲ್ಲಿ ಪಾಳೆಯ ಹೂಡಿದ್ದ ದೇವಜನರಾಗಿದ್ದರು. ಬಿಳಾಮನು ತಾನು ಯೆಹೋವನ ಪ್ರವಾದಿ ಎಂದು ಹೇಳಿಕೊಳ್ಳುತ್ತಿದ್ದನಾದರೂ ವಾಸ್ತವದಲ್ಲಿ ಅವನು ಇಸ್ರಾಯೇಲ್ಯರನ್ನು ಶಪಿಸಲು ಹಣಕ್ಕೆ ಗೊತ್ತುಮಾಡಲ್ಪಟ್ಟಿದ್ದ ದುರಾಶೆಭರಿತ ಮನುಷ್ಯನಾಗಿದ್ದನು. ಆದರೆ ಯೆಹೋವನ ಹಸ್ತಕ್ಷೇಪದಿಂದ ಬಿಳಾಮನಿಗೆ ಇಸ್ರಾಯೇಲ್ಯರನ್ನು ಆಶೀರ್ವದಿಸಲು ಮಾತ್ರ ಸಾಧ್ಯವಾಯಿತು. ಹೇಗಾದರೂ ಮಾಡಿ ತನ್ನ ಬಹುಮಾನವನ್ನು ಪಡೆಯಲಿಕ್ಕಾಗಿ, ಒಂದುವೇಳೆ ಇಸ್ರಾಯೇಲ್ಯರು ಘೋರ ಪಾಪವನ್ನು ಮಾಡುವಂತೆ ಪ್ರಲೋಭಿಸಲ್ಪಡುವಲ್ಲಿ ಪ್ರಾಯಶಃ ದೇವರೇ ತನ್ನ ಜನರನ್ನು ಶಪಿಸುವಂತೆ ತಾನು ಮಾಡಸಾಧ್ಯವಿದೆ ಎಂದು ಬಿಳಾಮನು ಮನಸ್ಸಿನಲ್ಲೇ ತರ್ಕಿಸಿದನು. ಈ ಗುರಿಯನ್ನು ಮನಸ್ಸಿನಲ್ಲಿಟ್ಟವನಾಗಿ ಬಿಳಾಮನು ಗಾಳ ಹಾಕಿದನು. ಮೋವಾಬಿನ ವ್ಯಾಮೋಹಕ ಯುವತಿಯರೇ ಆ ಗಾಳದ ಸೆಳೆವಸ್ತುಗಳಾಗಿದ್ದರು.—ಅರಣ್ಯಕಾಂಡ 22:1-7; 31:15, 16; ಪ್ರಕಟನೆ 2:14.
“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”
4 ಈ ಅನಾಹುತಕ್ಕೆ ಯಾವುದು ದಾರಿಮಾಡಿಕೊಟ್ಟಿತು? ತಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ್ದ, ಅರಣ್ಯದಲ್ಲಿ ತಮಗೆ ಉಣಿಸಿದ್ದ ಮತ್ತು ವಾಗ್ದತ್ತ ದೇಶಕ್ಕೆ ತಮ್ಮನ್ನು ಸುರಕ್ಷಿತವಾಗಿ ನಡಿಸಿದ್ದ ದೇವರಾದ ಯೆಹೋವನಿಂದಲೇ ದೂರಹೋಗುವ ಮೂಲಕ ಜನರಲ್ಲಿ ಅನೇಕರು ಕೆಟ್ಟ ಹೃದಯವನ್ನು ಬೆಳೆಸಿಕೊಂಡಿದ್ದರು. (ಇಬ್ರಿಯ 3:12) ಈ ವಿಷಯದ ಕುರಿತು ಆಲೋಚಿಸುತ್ತಾ ಅಪೊಸ್ತಲ ಪೌಲನು, “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವದ ರೂಢಿಯನ್ನು ಮಾಡದಿರೋಣ” ಎಂದು ಬರೆದನು.—1 ಕೊರಿಂಥ 10:8.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 359 ಪ್ಯಾರ 1-2
ಗಡಿರೇಖೆ
ಇಸ್ರಾಯೇಲ್ ಕುಲಗಳಿಗೆ ಜಮೀನನ್ನ ಹಂಚೋಕೆ ಎರಡು ವಿಷ್ಯಗಳನ್ನ ಮಾಡಿದ್ರು. ಒಂದು, ಚೀಟಿ ಹಾಕಿದ್ರು. ಇನ್ನೊಂದು, ಆ ಕುಲದ ಗಾತ್ರವನ್ನ ನೋಡಿದ್ರು. ಚೀಟಿ ಹಾಕಿದ್ರಿಂದ ಇಸ್ರಾಯೇಲಿನ ಪ್ರತಿಯೊಂದು ಕುಲಕ್ಕೂ ಎಲ್ಲೆಲ್ಲಿ ಜಮೀನು ಕೊಡಬೇಕು ಅಂತ ಗೊತ್ತು ಮಾಡೋಕೆ ಸುಲಭ ಆಯ್ತು. ಉದಾಹರಣೆಗೆ ಕಾನಾನ್ ದೇಶದ ಉತ್ತರದಲ್ಲಾ, ದಕ್ಷಿಣದಲ್ಲಾ, ಪೂರ್ವದಲ್ಲಾ, ಪಶ್ಚಿಮದಲ್ಲಾ, ಕರಾವಳಿ ಪ್ರದೇಶದಲ್ಲಾ, ಗುಡ್ಡಗಾಡು ಪ್ರದೇಶದಲ್ಲಾ ಹೀಗೆ ಎಲ್ಲಿ ಕೊಡಬೇಕು ಅಂತ ನಿರ್ಧರಿಸೋಕೆ ಸುಲಭ ಆಯ್ತು. ಚೀಟಿ ಹಾಕಿದ್ರಿಂದ ಇಸ್ರಾಯೇಲ್ಯರಿಗೆ ಯೆಹೋವನೇ ಈ ಏರ್ಪಾಡು ಮಾಡಿದ್ದು ಅಂತ ತಿಳ್ಕೊಳ್ಳೋಕೆ ಸಾಧ್ಯವಾಯ್ತು. ಇದ್ರಿಂದಾಗಿ ಜನ ಒಬ್ರಿಗೊಬ್ರು ಹೊಟ್ಟೆಕಿಚ್ಚು ಪಡ್ಲಿಲ್ಲ, ಜಗಳ ಆಡ್ಲಿಲ್ಲ. (ಜ್ಞಾನೋ 16:33) ಈ ಏರ್ಪಾಡಿಂದ ಯೆಹೋವ ದೇವರು ಇನ್ನೊಂದು ವಿಷ್ಯವನ್ನ ಕೂಡ ನೆರವೇರಿಸಿದನು. ಯಾಕೋಬ ತೀರಿಹೋಗುವಾಗ ಅವನು ಹೇಳಿದ ಭವಿಷ್ಯವಾಣಿ ತರಾನೇ ಪ್ರತಿಯೊಂದು ಕುಲಕ್ಕೂ ಜಮೀನು ಸಿಗೋ ತರ ಯೆಹೋವ ನೋಡ್ಕೊಂಡನು.—ಆದಿ 49:1-33.
ಚೀಟಿ ಹಾಕಿ ಪ್ರತಿಯೊಂದು ಕುಲಕ್ಕೂ ಯಾವ ಪ್ರದೇಶದಲ್ಲಿ ಜಮೀನು ಸಿಗಬೇಕು ಅಂತ ನಿರ್ಧರಿಸಿದ ಮೇಲೆ ಪ್ರತಿಯೊಂದು ಕುಲಕ್ಕೂ ಎಷ್ಟೆಷ್ಟು ಜಮೀನು ಸಿಗಬೇಕು ಅಂತ ನಿರ್ಧರಿಸಿದ್ರು. “ನೀವು ಚೀಟು ಹಾಕಿ ದೇಶವನ್ನ ಪ್ರತಿಯೊಂದು ಕುಲಕ್ಕೆ, ಕುಟುಂಬಕ್ಕೆ ಹಂಚಿಕೊಡಬೇಕು. ಜಾಸ್ತಿ ಜನ ಇರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ ಇರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡಬೇಕು. ಚೀಟು ಹಾಕಿದಾಗ ಯಾವ ಕುಟುಂಬಕ್ಕೆ ಯಾವ ಜಮೀನು ಬರುತ್ತೋ ಅದೇ ಜಮೀನನ್ನ ಕೊಡಬೇಕು.” (ಅರ 33:54) ಯಾವ ಪ್ರದೇಶದಲ್ಲಿ ಯಾವ ಕುಲಕ್ಕೆ ಜಮೀನು ಸಿಗಬೇಕು ಅಂತ ಚೀಟಿ ಬಿತ್ತೋ ಅದೇ ರೀತಿ ಆ ಕುಲಕ್ಕೆ ಜಮೀನು ಸಿಕ್ತು. ಆದ್ರೆ ಎಷ್ಟು ಜಮೀನು ಸಿಗಬೇಕು ಅಂತ ಆ ಕುಲದ ಗಾತ್ರ ನೋಡಿ ನಿರ್ಧಾರ ಮಾಡಿದ್ರು. ಹಾಗಾಗಿ ಯೆಹೂದ ಕುಲದವ್ರಿಗೆ ಜಾಸ್ತಿ ಪಾಲು ಸಿಕ್ಕಿದ್ರಿಂದ ಸಿಮೆಯೋನ್ ಕುಲದವ್ರ ಜೊತೆ ಅದನ್ನ ಹಂಚ್ಕೊಂಡ್ರು.—ಯೆಹೋ 19:9.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ವಾಚಕರಿಂದ ಪ್ರಶ್ನೆಗಳು
ಅರಣ್ಯಕಾಂಡ 25ನೆಯ ಅಧ್ಯಾಯದ 9ನೆಯ ವಚನವು, ಒಂದೇ ದಿನದಲ್ಲಿ 24,000 ಮಂದಿ ಇಸ್ರಾಯೇಲ್ಯರು ಸತ್ತರು ಎಂದು ಹೇಳುವಾಗ, 1 ಕೊರಿಂಥ 10ನೆಯ ಅಧ್ಯಾಯದ 8ನೆಯ ವಚನವು 23,000 ಮಂದಿ ಸತ್ತರು ಎಂದು ಏಕೆ ಹೇಳುತ್ತದೆ?
ಈ ಎರಡು ವಚನಗಳಲ್ಲಿ ಕೊಡಲ್ಪಟ್ಟಿರುವ ಸಂಖ್ಯೆಗಳಲ್ಲಿ ಇರುವ ಭಿನ್ನತೆಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಒಂದು ಅತಿ ಸರಳವಾದ ವಿವರಣೆ ಯಾವುದೆಂದರೆ, 23,000 ಮತ್ತು 24,000ದ ನಡುವಣ ಯಾವುದೋ ಸಂಖ್ಯೆಯು ನಿಜವಾದ ಸಂಖ್ಯೆಯಾಗಿರಸಾಧ್ಯವಿದೆ. ಹೀಗೆ, ಈ ಮಧ್ಯದ ಸಂಖ್ಯೆಯನ್ನೇ ಆ ಎರಡೂ ಸಂಖ್ಯೆಗಳಿಗೆ ಹೊಂದಿಸಿಕೊಂಡು ಅದನ್ನು ಪೂರ್ಣ ಸಂಖ್ಯೆಯಾಗುವಂತೆ ಇದು ಅನುಮತಿಸುತ್ತದೆ.
ಇನ್ನೊಂದು ಸಾಧ್ಯತೆಯನ್ನು ಪರಿಗಣಿಸಿರಿ. ಅಪೊಸ್ತಲ ಪೌಲನು, ಶಿಟ್ಟೀಮಿನಲ್ಲಿ ಇಸ್ರಾಯೇಲ್ಯರು ಮಾಡಿದ ಕೃತ್ಯದ ವೃತ್ತಾಂತವನ್ನು, ಕಾಮುಕ ಜೀವನ ರೀತಿಗೆ ಕುಪ್ರಸಿದ್ಧ ನಗರವಾಗಿದ್ದ ಪುರಾತನ ಕೊರಿಂಥದಲ್ಲಿನ ಕ್ರೈಸ್ತರಿಗೆ ಒಂದು ಎಚ್ಚರಿಕೆಯ ಉದಾಹರಣೆಯಾಗಿ ಉಲ್ಲೇಖಿಸಿದನು. ಅವನು ಬರೆದುದು: “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.” ಜಾರತ್ವವನ್ನು ಮಾಡಿದ ಕಾರಣ ಯೆಹೋವನಿಂದ ಹತಮಾಡಲ್ಪಟ್ಟವರನ್ನು ಪ್ರತ್ಯೇಕವಾಗಿ ಸೂಚಿಸುತ್ತಾ ಪೌಲನು ಆ ಸಂಖ್ಯೆ 23,000 ಆಗಿತ್ತೆಂದು ಹೇಳಿದನು.—1 ಕೊರಿಂಥ 10:8.
ಆದರೂ, ಅರಣ್ಯಕಾಂಡ 25ನೆಯ ಅಧ್ಯಾಯವು ‘ಇಸ್ರಾಯೇಲ್ಯರು ಪೆಗೋರದ ಬಾಳನೊಂದಿಗೆ ಸೇರಿದರು. ಆದದರಿಂದ ಅವರ ಮೇಲೆ ಯೆಹೋವನು ಕೋಪಗೊಂಡನು’ (NW) ಎಂದು ಹೇಳುತ್ತದೆ. ತದನಂತರ ಯೆಹೋವನು ಮೋಶೆಗೆ ‘ಜನರ ಮುಖಂಡರೆಲ್ಲರನ್ನು’ ಹಿಡಿಸಿ ಮರಣದಂಡನೆಯನ್ನು ವಿಧಿಸುವಂತೆ ಅಪ್ಪಣೆ ನೀಡಿದನು. ಇದಕ್ಕೆ ಪ್ರತಿಯಾಗಿ ಮೋಶೆಯು ಈ ಅಪ್ಪಣೆಯನ್ನು ಪೂರೈಸುವ ಜವಾಬ್ದಾರಿಯನ್ನು ನ್ಯಾಯಾಧಿಪತಿಗಳಿಗೆ ಒಪ್ಪಿಸಿದನು. ಕಟ್ಟಕಡೆಗೆ, ಒಬ್ಬ ಮಿದ್ಯಾನ್ ಸ್ತ್ರೀಯನ್ನು ಪಾಳೆಯಕ್ಕೆ ಕರೆತಂದಿದ್ದ ಇಸ್ರಾಯೇಲ್ಯನನ್ನು ಕೊಲ್ಲಲಿಕ್ಕಾಗಿ ಫೀನೆಹಾಸನು ತ್ವರಿತಗತಿಯಿಂದ ಕ್ರಿಯೆಗೈದಾಗ, ‘ವ್ಯಾಧಿಯು ನಿಂತುಹೋಯಿತು.’ ಆ ವೃತ್ತಾಂತವು ಈ ಹೇಳಿಕೆಯೊಂದಿಗೆ ಕೊನೆಗೊಳ್ಳುತ್ತದೆ: “ಆ ವ್ಯಾಧಿಯಿಂದ ಇಪ್ಪತ್ತನಾಲ್ಕು ಸಾವಿರ ಮಂದಿ ಸತ್ತರು.”—ಅರಣ್ಯಕಾಂಡ 25:1-9.
ಅರಣ್ಯಕಾಂಡ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಸಂಖ್ಯೆಯಲ್ಲಿ, ನ್ಯಾಯಾಧಿಪತಿಗಳಿಂದ ವಧಿಸಲ್ಪಟ್ಟ ‘ಜನರ ಮುಖಂಡರೂ’ ಯೆಹೋವನಿಂದ ನೇರವಾಗಿ ಹತರಾದವರೂ ಸೇರಿದ್ದರು ಎಂಬುದು ಸುವ್ಯಕ್ತ. ನ್ಯಾಯಾಧಿಪತಿಗಳಿಂದ ವಧಿಸಲ್ಪಟ್ಟವರಲ್ಲಿ ಸುಮಾರು ಒಂದು ಸಾವಿರದಷ್ಟು ಮುಖಂಡರು ಸೇರಿದ್ದು, ಇದರಿಂದಾಗಿಯೇ ಈ ಸಂಖ್ಯೆಯು 24,000ವಾಗಿ ಪರಿಣಮಿಸಿರುವ ಸಾಧ್ಯತೆಯಿದೆ. ಈ ಮುಖಂಡರು ಅಥವಾ ನಾಯಕರು ಜಾರತ್ವವನ್ನು ನಡೆಸಿದರೋ, ಉತ್ಸವ ಸಮಾರಂಭಗಳಲ್ಲಿ ಭಾಗವಹಿಸಿದರೋ ಅಥವಾ ಅಂಥ ಕೃತ್ಯಕ್ಕೆ ಒಪ್ಪಿಗೆ ನೀಡಿದರೋ ಇಲ್ಲವೋ, ಅವರೆಲ್ಲರೂ ‘ಪೆಗೋರದ ಬಾಳನೊಂದಿಗೆ ಸೇರಿದ’ ದೋಷಾಪರಾಧಕ್ಕೆ ಒಳಗಾಗಿದ್ದರು.
ಒಂದು ಬೈಬಲ್ ಪರಾಮರ್ಶೆ ಕೃತಿಯು, ‘ಸೇರಿಕೊಳ್ಳುವುದು’ ಎಂಬ ಪದದ ಕುರಿತು, ಇದು “ಸ್ವತಃ ಒಬ್ಬನು ಇನ್ನೊಬ್ಬ ವ್ಯಕ್ತಿಯೊಂದಿಗೆ ಬಂಧಿಸಿಕೊಳ್ಳುವುದನ್ನು” ಅರ್ಥೈಸಸಾಧ್ಯವಿದೆ ಎಂದು ವಿವರಿಸುತ್ತದೆ. ಇಸ್ರಾಯೇಲ್ಯರು ಯೆಹೋವನಿಗೆ ಸಮರ್ಪಿತರಾಗಿದ್ದ ಜನರಾಗಿದ್ದರಾದರೂ, ಅವರು ‘ಪೆಗೋರದ ಬಾಳನಿಗೆ ಸೇರಿಕೊಂಡಾಗ’ ದೇವರೊಂದಿಗಿನ ಸಮರ್ಪಿತ ಸಂಬಂಧವನ್ನು ಕಡಿದುಕೊಂಡರು. ಸುಮಾರು 700 ವರ್ಷಗಳ ಬಳಿಕ, ಪ್ರವಾದಿಯಾದ ಹೋಶೇಯನ ಮೂಲಕ ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದು: “ಅವರು ಬಾಳ್ಪೆಗೋರಿಗೆ ಬಂದು ಬಾಳ್ದೇವತೆಯ ಭಕ್ತರಾಗಿ ದೀಕ್ಷೆಗೊಂಡು ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು.” (ಹೋಶೇಯ 9:10) ಹೀಗೆ ಮಾಡಿದವರೆಲ್ಲರೂ ದೇವರ ಪ್ರತಿಕೂಲ ನ್ಯಾಯತೀರ್ಪಿಗೆ ಅರ್ಹರಾಗಿದ್ದರು. ಹೀಗೆ, ಮೋಶೆಯು ಇಸ್ರಾಯೇಲ್ ಜನರಿಗೆ ನೆನಪು ಹುಟ್ಟಿಸಿದ್ದು: “ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ನೋಡೇ ಇದ್ದೀರಷ್ಟೇ; ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶ ಮಾಡಿದನಲ್ಲಾ.”—ಧರ್ಮೋಪದೇಶಕಾಂಡ 4:3.