-
‘ದೇವರನ್ನು ಮೆಚ್ಚಿಸಿದವನು’ಕಾವಲಿನಬುರುಜು (ಸಾರ್ವಜನಿಕ)—2017 | ನಂ. 1
-
-
“ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು”
ಹನೋಕನು ಹೇಗೆ ಮೃತಪಟ್ಟನು? ಅವನ ಜೀವನಕ್ಕಿಂತ ಮರಣ ಹೆಚ್ಚು ನಿಗೂಢ ಮತ್ತು ಕುತೂಹಲಕರ. ಬೈಬಲಿನ ಆದಿಕಾಂಡ ಪುಸ್ತಕದಲ್ಲಿ, “ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆಹೋದನು” ಎನ್ನಲಾಗಿದೆ. (ಆದಿಕಾಂಡ 5:24) ದೇವರು ಹನೋಕನನ್ನು ಕರೆದುಕೊಂಡದ್ದಾದರೂ ಹೇಗೆ? ಸಮಯಾನಂತರ, ಅಪೊಸ್ತಲ ಪೌಲನು ಹೀಗೆ ವಿವರಿಸಿದನು: “ನಂಬಿಕೆಯಿಂದಲೇ ಹನೋಕನು ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು; ದೇವರು ಅವನನ್ನು ಸ್ಥಳಾಂತರಿಸಿದ್ದರಿಂದ ಅವನು ಎಲ್ಲಿಯೂ ಸಿಗಲಿಲ್ಲ. ಏಕೆಂದರೆ ಅವನು ಸ್ಥಳಾಂತರಿಸಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.” (ಇಬ್ರಿಯ 11:5) “ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು” ಎಂಬ ಪೌಲನ ಮಾತಿನ ಅರ್ಥವೇನು? ದೇವರು ಹನೋಕನನ್ನು ಸ್ವರ್ಗಕ್ಕೆ ಕರೆದುಕೊಂಡನು ಎಂದು ಕೆಲವು ಬೈಬಲ್ ಭಾಷಾಂತರಗಳು ತಿಳಿಸುತ್ತವೆ. ಹಾಗಾಗಲು ಸಾಧ್ಯವಿಲ್ಲ. ಯಾಕೆಂದರೆ, ಮೊಟ್ಟಮೊದಲ ಬಾರಿಗೆ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದವನು ಯೇಸುವೇ ಆಗಿದ್ದಾನೆ ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ.—ಯೋಹಾನ 3:13.
ಹಾಗಾದರೆ, ಹನೋಕನು ‘ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟದ್ದು’ ಹೇಗೆ? ಯೆಹೋವನು ನಿಧಾನವಾಗಿ ಹನೋಕನಿಗೆ ಸಾವಿನ ನೋವು ತಿಳಿಯದಂತೆ ಸಾವನ್ನಪ್ಪುವಂತೆ ಮಾಡಿರಬೇಕು. ಆದರೆ ಅದಕ್ಕೂ ಮುಂಚೆ ಅವನು “ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.” ಹೇಗೆ? ಅವನು ಸಾಯುವುದಕ್ಕೂ ಸ್ವಲ್ಪ ಮುಂಚೆ, ದೇವರು ಅವನಿಗೆ ದರ್ಶನವನ್ನು ತೋರಿಸಿರಬಹುದು. ಸುಂದರ ತೋಟದಂತಿರುವ ಭೂಮಿಯನ್ನು ನೋಡಿರಬಹುದು. ದೇವರು ತನ್ನನ್ನು ಮೆಚ್ಚಿದ್ದಾನೆಂಬ ಗುರುತಾಗಿರುವ ಅದನ್ನು ನೋಡುತ್ತಲೇ ಅವನು ಸಾವನ್ನಪ್ಪಿರಬಹುದು. ಅಪೊಸ್ತಲ ಪೌಲನು ಹನೋಕ ಮತ್ತಿತರ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಹೀಗೆ ಬರೆದನು: ಅವರು “ನಂಬಿಕೆಯುಳ್ಳವರಾಗಿ ಮೃತರಾದರು.” (ಇಬ್ರಿಯ 11:13) ನಂತರ, ಹನೋಕನ ವೈರಿಗಳು ಅವನ ಶವಕ್ಕಾಗಿ ಹುಡುಕಿರಬೇಕು, ಆದರೆ ಅದು ಅವರಿಗೆ “ಎಲ್ಲಿಯೂ ಸಿಗಲಿಲ್ಲ.” ಜನರು ಅದಕ್ಕೆ ಅಗೌರವ ತೋರಿಸದಂತೆ ಅಥವಾ ಅದರ ಮೂಲಕ ಸುಳ್ಳಾರಾಧನೆಯನ್ನು ಆರಂಭಿಸದಂತೆ ತಡೆಯುವ ಉದ್ದೇಶದಿಂದ ಯೆಹೋವನೇ ಅದನ್ನು ಸಮಾಧಿ ಮಾಡಿರಬಹುದು.b
ಮೇಲೆ ಕೊಡಲಾದ ವಿವರಣೆಯನ್ನು ಮನಸ್ಸಿನಲ್ಲಿಟ್ಟು, ಈಗ ನಾವು ಹನೋಕ ಹೇಗೆ ಕೊನೆಯುಸಿರೆಳೆದಿರಬಹುದು ಎಂದು ನೋಡೋಣ. ಅದನ್ನು ನಿಮ್ಮ ಮನಃಪಟಲದಲ್ಲಿ ಚಿತ್ರಿಸಿಕೊಳ್ಳಲು ಪ್ರಯತ್ನಿಸಿ. ಆ ಕೊನೆಯ ಗಳಿಗೆಯಲ್ಲಿ ಹೀಗೆ ನಡೆದಿರಬಹುದು. ಹನೋಕನು ಓಡುತ್ತಾ ಓಡುತ್ತಾ ತುಂಬ ದಣಿದಿದ್ದನು. ತೀರ್ಪಿನ ಸಂದೇಶವನ್ನು ಕೇಳಿ ಕೋಪಗೊಂಡ ವಿರೋಧಿಗಳು ಅವನನ್ನು ಬೆನ್ನಟ್ಟುತ್ತಿದ್ದರು. ಹನೋಕನಿಗೆ ಬಚ್ಚಿಟ್ಟುಕೊಳ್ಳಲು ಒಂದು ಸ್ಥಳ ಸಿಗುತ್ತದೆ. ಅಲ್ಲಿ ಹೋಗಿ ಸ್ವಲ್ಪ ಸುಧಾರಿಸಿಕೊಳ್ಳುತ್ತಾನೆ. ಆದರೆ ಹೆಚ್ಚು ಸಮಯ ಜನರ ಕಣ್ಣು ತಪ್ಪಿಸಿ ಇರಲು ಸಾಧ್ಯವಿಲ್ಲ ಎಂದು ಅವನಿಗೆ ಗೊತ್ತಿತ್ತು. ಕ್ರೂರ ಸಾವು ಅವನನ್ನು ಯಾವಾಗ ನುಂಗಲಿ ಎಂದು ಹೊಂಚಿಕೊಂಡಿತ್ತು. ಹೀಗೆ ಏದುಸಿರು ಬಿಡುತ್ತಿದ್ದಾಗ ಅವನು ದೇವರಿಗೆ ಪ್ರಾರ್ಥಿಸಿದನು. ಆಗ ಮನಸ್ಸು ನಿರಾಳವಾಗಿ ಮನಶ್ಶಾಂತಿ ಸಿಕ್ಕಿತು. ತಾನು ಇನ್ನೆಲ್ಲೋ ಇದ್ದೇನೆ ಎಂಬಂತೆ ತೋರುವ ದರ್ಶನವು ಅವನಿಗೆ ಕಾಣಿಸಿತು. ಇದು ಪ್ರಸ್ತುತವನ್ನೇ ಮರೆಯುವಂತೆ ಮಾಡಿತು.
ಅವನ ಕಣ್ಣೆದುರಿಗೆ ದೃಶ್ಯಗಳು ಮೂಡಿದವು. ಅವನಿದ್ದ ಲೋಕಕ್ಕೂ ಈ ಲೋಕಕ್ಕೂ ಅಜಗಜಾಂತರವಿತ್ತು. ಅದೆಷ್ಟು ಸುಂದರವಾಗಿತ್ತೆಂದರೆ ಅವನಿಗದು ಏದೆನ್ ತೋಟದಂತೆ ಅನಿಸಿತು. ಆದರೆ ಇಲ್ಲಿ ಮನುಷ್ಯರು ಒಳಬರದಂತೆ ತಡೆಯಲು ಕೆರೂಬಿಯರು ಕಾವಲಿರಲಿಲ್ಲ. ತುಂಬ ಜನರು ಅಲ್ಲಿದ್ದರು. ಎಲ್ಲರಿಗೂ ಒಳ್ಳೇ ಆರೋಗ್ಯ, ಯೌವನದ ಚೈತನ್ಯವಿತ್ತು. ಅಲ್ಲಿ ಶಾಂತಿ ನೆಲೆಸಿತ್ತು. ಹನೋಕನು ನೋಡಿದ್ದ ದ್ವೇಷ ಮತ್ತು ಧಾರ್ಮಿಕ ಹಿಂಸೆಯ ಸುಳಿವೇ ಇರಲಿಲ್ಲ. ಇದರಿಂದ ಹನೋಕನಿಗೆ ಯೆಹೋವನು ತನ್ನನ್ನು ಪ್ರೀತಿಸುತ್ತಾನೆ, ಮೆಚ್ಚಿದ್ದಾನೆ ಎಂಬ ಆಶ್ವಾಸನೆ ಸಿಕ್ಕಿತು. ಇದು ನಾನಿರಬೇಕಾದ ಸ್ಥಳ, ನಾನಲ್ಲೇ ವಾಸವಾಗಿರುತ್ತೇನೆ ಎಂದು ಅವನಿಗನಿಸಿತು. ಹೀಗೆ ಶಾಂತಿಯ ಸಾಗರದಲ್ಲಿ ತೇಲುತ್ತಾ ಆನಂದಿಸುತ್ತಾ ಕಣ್ಣು ಮುಚ್ಚಿದ ಹನೋಕನು ಮತ್ತೆ ಕಣ್ಣು ತೆರೆಯಲೇ ಇಲ್ಲ.
ಹಾಗೆ ಶಾಶ್ವತ ನಿದ್ದೆಗೆ ಜಾರಿದ ಹನೋಕನು ಇಂದಿಗೂ ಹಾಗೇ ಇದ್ದಾನೆ. ಯೆಹೋವ ದೇವರ ಅಪರಿಮಿತವಾದ ಜ್ಞಾಪಕದಲ್ಲಿ ಸುರಕ್ಷಿತವಾಗಿದ್ದಾನೆ. ಸಮಯಾನಂತರ, ಯೇಸು ಮಾತು ಕೊಟ್ಟಂತೆ ದೇವರ ಸ್ಮರಣೆಯಲ್ಲಿರುವವರು ಯೇಸುವಿನ ಸ್ವರವನ್ನು ಕೇಳಿ ಸಮಾಧಿಗಳಿಂದ ಎದ್ದು ಬರುವ ದಿನ ಬೇಗನೆ ಬರಲಿದೆ. ಅವರು ಕಣ್ತೆರೆದಾಗ, ಸುಂದರ ತೋಟದಂತಿರುವ ಶಾಂತಿಯ ಸಾಗರದಂತಿರುವ ಹೊಸ ಲೋಕವನ್ನು ಕಾಣುವರು.—ಯೋಹಾನ 5:28, 29.
-
-
‘ದೇವರನ್ನು ಮೆಚ್ಚಿಸಿದವನು’ಕಾವಲಿನಬುರುಜು (ಸಾರ್ವಜನಿಕ)—2017 | ನಂ. 1
-
-
b ಇದೇ ರೀತಿಯಲ್ಲಿ ದೇವರು, ಮೋಶೆ ಮತ್ತು ಯೇಸುವಿನ ದೇಹ ಸಹ ಜನರ ಕೈಗೆ ಸಿಕ್ಕಿ ದುರುಪಯೋಗವಾಗದಂತೆ ಮಾಡಿದನು.—ಧರ್ಮೋಪದೇಶಕಾಂಡ 34:5, 6; ಲೂಕ 24:3-6; ಯೂದ 9.
-