ಅವರು ಯೆಹೋವನ ಚಿತ್ತವನ್ನು ಮಾಡಿದರು
ಹೆತ್ತವರ ನಂಬಿಕೆಯು ಬಹುಮಾನಿಸಲ್ಪಟ್ಟದ್ದು
ಇಸ್ರಾಯೇಲ್ಯರಿಗೆ, ಒಂದು ಗಂಡು ಮಗುವಿನ ಜನನವು ಮಹಾ ಹರ್ಷಕ್ಕೆ ಕಾರಣವಾಗಿತ್ತು. ಇದರ ಅರ್ಥ, ವಂಶಾವಳಿಯು ಮುಂದುವರಿಯುವುದು ಮತ್ತು ಭೂಮಿಯ ಬಾಧ್ಯತೆಯು ಕುಟುಂಬದಲ್ಲಿಯೇ ಉಳಿಯುವುದು. ಆದರೆ ಸಾ.ಶ.ಪೂ. 1593ನೆಯ ವರುಷದ ಸುಮಾರಿಗೆ, ಒಬ್ಬ ಮಗನನ್ನು ಹೆರುವುದು ಇಬ್ರಿಯರಿಗೆ ಆಶೀರ್ವಾದಕ್ಕಿಂತಲೂ ಹೆಚ್ಚಾಗಿ ಶಾಪದಂತೆ ಕಂಡಿದ್ದಿರಬಹುದು. ಏಕೆ? ಏಕೆಂದರೆ ಐಗುಪ್ತದ ಫರೋಹನು, ತನ್ನ ಹತೋಟಿಯ ಕೆಳಗಿದ್ದ ಕ್ಷೇತ್ರದಲ್ಲಿ ತ್ವರಿತವಾಗಿ ವೃದ್ಧಿಯಾಗುತ್ತಿರುವ ಯೆಹೂದಿ ಜನಸಂಖ್ಯೆಯ ಕುರಿತಾಗಿ ಭಯಪಟ್ಟು, ಅವರ ಎಲ್ಲಾ ನವಜನಿತ ಗಂಡು ಮಕ್ಕಳನ್ನು ಕೊಂದುಹಾಕಬೇಕೆಂದು ಆಜ್ಞಾಪಿಸಿದ್ದನು.—ವಿಮೋಚನಕಾಂಡ 1:12, 15-22.
ಜನಾಂಗ ಹತ್ಯೆಯನ್ನು ಮಾಡುವ ಈ ಅತಿ ಘೋರವಾದ ಪ್ರಯತ್ನದ ಸಮಯದಲ್ಲಿಯೇ, ಇಬ್ರಿಯ ದಂಪತಿಗಳಾದ ಅಮ್ರಾಮ್ ಹಾಗೂ ಯೋಕೆಬೆದ್, ಒಂದು ಸುಂದರವಾದ ಗಂಡು ಮಗುವಿಗೆ ಹೆತ್ತವರಾದರು. ಅವರು ಫರೋಹನ ಆಜ್ಞೆಯನ್ನು ಜ್ಞಾಪಿಸಿಕೊಂಡಾಗ, ಅವರ ಸಂತೋಷವು ಹೇಗೆ ಭಯದಿಂದ ಮರೆಮಾಚಲ್ಪಟ್ಟಿರಬಹುದು ಎಂಬುದನ್ನು ಊಹಿಸಿಕೊಳ್ಳುವುದು ಸುಲಭ. ಆದರೂ, ಅಮ್ರಾಮ್ ಹಾಗೂ ಯೋಕೆಬೆದ್ ತಮ್ಮ ಗಂಡು ಮಗುವನ್ನು ನೋಡಿದಾಗ, ಫಲಿತಾಂಶಗಳು ಏನೇ ಆಗಿರಲಿ, ಅವನನ್ನು ತೊರೆಯಬಾರದೆಂದು ಅವರು ದೃಢವಾಗಿ ನಿರ್ಧರಿಸಿದರು.—ವಿಮೋಚನಕಾಂಡ 2:1, 2; 6:20.
ನಂಬಿಕೆಯಿಂದ ಕ್ರಿಯೆಗೈಯುವುದು
ಅಮ್ರಾಮ್ ಹಾಗೂ ಯೋಕೆಬೆದ್ ಮೂರು ತಿಂಗಳು ತಮ್ಮ ಮಗುವನ್ನು ಬಚ್ಚಿಟ್ಟರು. (ವಿಮೋಚನಕಾಂಡ 2:2) ಆದರೆ, ಇಬ್ರಿಯರು ಮತ್ತು ಐಗುಪ್ತ್ಯರು ಅತಿ ಸಮೀಪದಲ್ಲಿಯೇ ಜೀವಿಸಿದ ಕಾರಣ ಇದು ಅಪಾಯಕರವಾಗಿತ್ತು. ಫರೋಹನ ಆಜ್ಞೆಯನ್ನು ಮುರಿಯಲು ಯಾರಾದರೂ ಪ್ರಯತ್ನಿಸುವುದು ಕಂಡುಬಂದರೆ, ಮರಣದಂಡನೆಯು ವಿಧಿಸಲ್ಪಡುತ್ತಿತ್ತು ಮತ್ತು ಮಗುವು ಕೂಡ ಸಾಯಲಿತ್ತು. ಹಾಗಾದರೆ, ತಮ್ಮನ್ನೂ ತಮ್ಮ ಮಗನನ್ನೂ ಜೀವಂತವಾಗಿರಿಸಲು ಈ ಸದ್ಭಕ್ತ ಹೆತ್ತವರು ಏನು ಮಾಡಸಾಧ್ಯವಿತ್ತು?
ಯೋಕೆಬೆದಳು ಕೆಲವು ಪಪೈರಸ್ ಚಿಗುರುಗಳನ್ನು ಒಟ್ಟುಗೂಡಿಸಿದಳು. ಪಪೈರಸ್, ಬಿದಿರಿನಂತೆ ಗಟ್ಟಿಯಾಗಿದ್ದು, ಬಗ್ಗಿಸಲಾಗುವಂತಹದ್ದಾಗಿದೆ ಮತ್ತು ಬೆರಳಿನಷ್ಟು ದಪ್ಪವಾಗಿರುವ ಮೂರು ಬದಿಯ ದಂಟುಳ್ಳದ್ದಾಗಿದೆ. ಅದು ಆರು ಮೀಟರುಗಳಷ್ಟು ಎತ್ತರಕ್ಕೆ ಬೆಳೆಯಬಹುದು. ಐಗುಪ್ತ್ಯರು ಈ ಗಿಡವನ್ನು, ಕಾಗದ, ಚಾಪೆಗಳು, ಹಡಗಿನ ಹಾಯಿಗಳು, ಚಪ್ಪಲಿಗಳು, ಹಾಗೂ ಹಗುರವಾದ ದೋಣಿಗಳನ್ನು ಮಾಡಲು ಉಪಯೋಗಿಸಿದರು.
ಯೋಕೆಬೆದಳು, ಪಪೈರಸ್ ದಂಟುಗಳಿಂದ, ತನ್ನ ಮಗುವನ್ನು ಹಿಡಿಸುವಷ್ಟು ಗಾತ್ರದ ಒಂದು ಪೆಟ್ಟಿಗೆಯನ್ನು ಮಾಡಿದಳು. ಆಮೇಲೆ ಅವಳು ಆ ಪೆಟ್ಟಿಗೆಯನ್ನು ಒಂದಾಗಿರಿಸಲು ಹಾಗೂ ನೀರು ಅದರೊಳಗೆ ಹೋಗದಂತೆ ಮಾಡಲು, ಅದಕ್ಕೆ ಜೇಡಿಮಣ್ಣನ್ನೂ ರಾಳವನ್ನೂ ಹಚ್ಚಿದಳು. ಅನಂತರ, ಯೋಕೆಬೆದಳು ತನ್ನ ಮಗುವನ್ನು ಆ ಪೆಟ್ಟಿಗೆಯ ಒಳಗೆ ಇಟ್ಟು, ಅದನ್ನು ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನ ಮಧ್ಯದಲ್ಲಿಟ್ಟಳು.—ವಿಮೋಚನಕಾಂಡ 2:3.
ಮಗುವು ಕಂಡುಕೊಳ್ಳಲ್ಪಡುತ್ತದೆ
ಯೋಕೆಬೆದಳ ಮಗಳಾದ ಮಿರ್ಯಾಮಳು, ಮುಂದೆ ಏನಾಗುವುದೆಂದು ನೋಡಲು ಹತ್ತಿರದಲ್ಲೇ ನಿಂತುಕೊಂಡಳು. ಆಗ ಫರೋಹನ ಕುಮಾರ್ತೆಯು ಸ್ನಾನಕ್ಕಾಗಿ ನೈಲ್ ನದಿಗೆ ಬಂದಳು.a ಬಹುಶಃ, ನೈಲ್ ನದಿಯ ಈ ಭಾಗಕ್ಕೆ ರಾಜಕುಮಾರಿ ಆಗಾಗ್ಗೆ ಬರುತ್ತಾಳೆ ಎಂದು ಯೋಕೆಬೆದಳಿಗೆ ತಿಳಿದಿತ್ತು ಮತ್ತು ಉದ್ದೇಶಪೂರ್ವಕವಾಗಿಯೇ ಸುಲಭವಾಗಿ ಕಂಡುಕೊಳ್ಳಲ್ಪಡುವ ಸ್ಥಳದಲ್ಲಿ ಆ ಪೆಟ್ಟಿಗೆಯನ್ನು ಬಿಟ್ಟುಹೋದಳು. ಹೇಗಿದ್ದರೂ, ಫರೋಹನ ಕುಮಾರ್ತೆಯು ಜಂಬುಹುಲ್ಲಿನ ಮಧ್ಯದಲ್ಲಿದ್ದ ಪೆಟ್ಟಿಗೆಯನ್ನು ಬೇಗನೆ ಗಮನಿಸಿದಳು, ಮತ್ತು ದಾಸಿಯರಲ್ಲಿ ಒಬ್ಬರನ್ನು ಕರೆದು ಅದನ್ನು ತರುವಂತೆ ಹೇಳಿದಳು. ಅದರೊಳಗಿದ್ದ ಅಳುವ ಮಗುವನ್ನು ಅವಳು ಕಂಡಾಗ, ಅವಳ ಕನಿಕರವು ಕೆರಳಿಸಲ್ಪಟ್ಟಿತು. ಇದು ಒಂದು ಇಬ್ರಿಯ ಮಗು ಎಂದು ಅವಳು ಗ್ರಹಿಸಿದಳು. ಆದರೂ, ಇಂತಹ ಸುಂದರವಾದ ಮಗು ಕೊಲ್ಲಲ್ಪಡುವಂತೆ ಅವಳು ಹೇಗೆ ತಾನೇ ಬಿಡಸಾಧ್ಯವಿತ್ತು? ಮಾನವ ದಯೆಯ ಹೊರತಾಗಿ, ಸ್ವರ್ಗಕ್ಕೆ ಪ್ರವೇಶಾವಕಾಶವು ಒಬ್ಬನ ಜೀವನಾವಧಿಯಲ್ಲಿನ ದಯಾಮಯ ಕೃತ್ಯಗಳ ದಾಖಲೆಯ ಮೇಲೆ ಆಧಾರಿತವಾಗಿದೆ ಎಂಬ, ಐಗುಪ್ತ್ಯದ ಜನಪ್ರಿಯ ನಂಬಿಕೆಯಿಂದ ಫರೋಹನ ಕುಮಾರ್ತೆಯು ಪ್ರಭಾವಿತಳಾಗಿದ್ದಿರಬಹುದು.b—ವಿಮೋಚನಕಾಂಡ 2:5, 6.
ದೂರದಿಂದ ನೋಡುತ್ತಿದ್ದ ಮಿರ್ಯಾಮಳು, ಫರೋಹನ ಕುಮಾರ್ತೆಯನ್ನು ಸಮೀಪಿಸಿದಳು. “ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಲೋ,” ಎಂದು ಅವಳು ಕೇಳಿದಳು. ರಾಜಕುಮಾರಿಯು ಉತ್ತರಿಸಿದ್ದು: “ಹಾಗೇ ಮಾಡು.” ಮಿರ್ಯಾಮಳು ತನ್ನ ತಾಯಿಯ ಬಳಿ ಓಡಿಹೋದಳು. ಸ್ವಲ್ಪ ಹೊತ್ತಿನಲ್ಲಿಯೇ ಯೋಕೆಬೆದಳು ಫರೋಹನ ಕುಮಾರ್ತೆಯ ಎದುರಿನಲ್ಲಿದ್ದಳು. “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಸಾಕಮ್ಮಾ; ನಾನೇ ನಿನಗೆ ಸಂಬಳವನ್ನು ಕೊಡುವೆನು” ಎಂದು ರಾಜಕುಮಾರಿಯು ಅವಳಿಗೆ ಹೇಳಿದಳು. ಈ ಸಮಯದೊಳಗೆ ಯೋಕೆಬೆದಳೇ ಆ ಮಗುವಿನ ತಾಯಿ ಎಂಬುದಾಗಿ ಫರೋಹನ ಕುಮಾರ್ತೆಯು ಗ್ರಹಿಸಿದ್ದಿರಬಹುದು.—ವಿಮೋಚನಕಾಂಡ 2:7-9.
ಯೋಕೆಬೆದಳು, ತನ್ನ ಮಗು ಮೊಲೆಹಾಲು ಬಿಡುವ ತನಕ ಅವನನ್ನು ಇಟ್ಟುಕೊಂಡಳು.c ಇದು ಅವಳಿಗೆ, ಸತ್ಯ ದೇವರಾದ ಯೆಹೋವನ ಕುರಿತು ಅವನಿಗೆ ಕಲಿಸಲು ಅನೇಕ ಅಮೂಲ್ಯವಾದ ಸಂದರ್ಭಗಳನ್ನು ಒದಗಿಸಿತು. ಆಮೇಲೆ ಯೋಕೆಬೆದಳು ಮಗುವನ್ನು ಫರೋಹನ ಕುಮಾರ್ತೆಯ ಬಳಿಗೆ ಹಿಂದೆ ಕರೆತಂದಳು. ಅವಳು ಹುಡುಗನಿಗೆ, ಮೋಶೆ, ಅಂದರೆ “ನೀರಿನೊಳಗಿಂದ ರಕ್ಷಿಸಲ್ಪಟ್ಟವನು” ಎಂದು ಹೆಸರಿಟ್ಟಳು.—ವಿಮೋಚನಕಾಂಡ 2:10, NW.
ನಮಗಿರುವ ಪಾಠ
ಅಮ್ರಾಮ್ ಹಾಗೂ ಯೋಕೆಬೆದರು, ಶುದ್ಧ ಆರಾಧನೆಯ ತತ್ತ್ವಗಳನ್ನು ತಮ್ಮ ಮಗನಿಗೆ ಕಲಿಸಲು ತಮಗಿದ್ದ ಅಲ್ಪಾವಧಿಯ ಸಂದರ್ಭದ ಪೂರ್ಣ ಪ್ರಯೋಜನವನ್ನು ಪಡೆದುಕೊಂಡರು. ಇಂದಿನ ಹೆತ್ತವರು ಕೂಡ ಅದನ್ನೇ ಮಾಡಬೇಕು. ನಿಶ್ಚಯವಾಗಿಯೂ, ಅವರು ಹಾಗೆ ಮಾಡುವುದು ಅವಶ್ಯ. ಪಿಶಾಚನಾದ ಸೈತಾನನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಯೆಹೋವನ ಉತ್ತಮ ಸೇವಕರಾಗುವ ಪ್ರತೀಕ್ಷೆಯುಳ್ಳ ಅಮೂಲ್ಯ ಯುವ ಜನರನ್ನು—ಹುಡುಗ ಹುಡುಗಿಯರು—ತನ್ನ ಬಲಿಯಾಗಿ ಮಾಡಿಕೊಳ್ಳಲು ಅವನು ಬಹಳವಾಗಿ ಇಚ್ಛಿಸುತ್ತಾನೆ. ಅವರ ಎಳೆಯ ಪ್ರಾಯವು ಅವನಿಂದ ಯಾವ ಕನಿಕರವನ್ನೂ ಪಡೆಯುವುದಿಲ್ಲ! ಇದರ ವೀಕ್ಷಣೆಯಲ್ಲಿ, ವಿವೇಕಿಗಳಾದ ಹೆತ್ತವರು ತಮ್ಮ ಶಿಶು ಮಕ್ಕಳಿಗೆ ಸತ್ಯ ದೇವರಾದ ಯೆಹೋವನಿಗೆ ಭಯಪಡಲು ತರಬೇತಿ ನೀಡುತ್ತಾರೆ.—ಜ್ಞಾನೋಕ್ತಿ 22:6; 2 ತಿಮೊಥೆಯ 3:14, 15.
ಇಬ್ರಿಯ 11:23ರಲ್ಲಿ, ಅಮ್ರಾಮ್ ಹಾಗೂ ಯೋಕೆಬೆದರು ತಮ್ಮ ಶಿಶುವನ್ನು—ಅದರ ಜೀವಿತದ ಮೊದಲನೆಯ ಮೂರು ತಿಂಗಳುಗಳಲ್ಲಿ—ಬಚ್ಚಿಡಲು ಮಾಡಿದ ಪ್ರಯತ್ನವು, ನಂಬಿಕೆಯ ಒಂದು ಕೃತ್ಯವಾಗಿ ದಾಖಲಾಗಿದೆ. ದೇವಭಯವುಳ್ಳ ಈ ಹೆತ್ತವರಿಬ್ಬರೂ ತಮ್ಮ ಮಗುವನ್ನು ತೊರೆಯಲು ನಿರಾಕರಿಸುವ ಮೂಲಕ, ಯೆಹೋವನ ರಕ್ಷಿಸುವ ಶಕ್ತಿಯಲ್ಲಿ ಭರವಸೆಯನ್ನು ತೋರಿಸಿದರು ಮತ್ತು ಅದಕ್ಕಾಗಿ ಅವರು ಆಶೀರ್ವದಿಸಲ್ಪಟ್ಟರು. ನಮ್ಮ ಮೇಲೆ ಏನೇ ಬರುವಂತೆ ಯೆಹೋವನು ಅನುಮತಿಸಿದರೂ, ಕಟ್ಟಕಡೆಗೆ ಅದು ನಮ್ಮ ಅನಂತ ಒಳಿತು ಮತ್ತು ಸಂತೋಷಕ್ಕಾಗಿ ಕಾರ್ಯನಡಿಸುತ್ತದೆ ಎಂಬ ಭರವಸೆಯೊಂದಿಗೆ, ನಾವು ಕೂಡ ಯೆಹೋವನ ನಿಯಮಗಳಿಗೆ ಹಾಗೂ ತತ್ತ್ವಗಳಿಗೆ ಅನುಸರಣೆಯನ್ನು ತೋರಿಸಬೇಕು.—ರೋಮಾಪುರ 8:28.
[ಅಧ್ಯಯನ ಪ್ರಶ್ನೆಗಳು]
a ಐಗುಪ್ತ್ಯರು ನೈಲ್ ನದಿಯನ್ನು ಫಲವತ್ತತೆಯ ದೇವರೋಪಾದಿ ಆರಾಧಿಸಿದರು. ಅದರ ನೀರಿಗೆ, ಫಲಪ್ರಾಪ್ತಿಯನ್ನೂ ದೀರ್ಘಾಯುಷ್ಯವನ್ನೂ ಕೊಡುವ ಶಕ್ತಿಯಿದೆ ಎಂಬುದಾಗಿ ಅವರು ನಂಬಿದರು.
b ಮರಣದಲ್ಲಿ ಒಬ್ಬ ವ್ಯಕ್ತಿಯ ಆತ್ಮವು, ಒಸಿರಿಸ್ ದೇವರ ಸಾನ್ನಿಧ್ಯದಲ್ಲಿ “ನಾನು ಯಾರನ್ನೂ ನೋಯಿಸಿಲ್ಲ,” “ನಾನು ಮೊಲೆಕೂಸುಗಳ ಬಾಯಿಗಳಿಗೆ ಹೋಗುವ ಹಾಲನ್ನು ತಡೆಯಲಿಲ್ಲ,” ಮತ್ತು “ಹಸಿದವರಿಗೆ ಆಹಾರವನ್ನೂ, ಬಾಯಾರಿದವರಿಗೆ ಕುಡಿಯಲಿಕ್ಕೂ ಕೊಟ್ಟಿದ್ದೇನೆ” ಎಂಬಂತಹ ದೃಢೀಕರಣಗಳನ್ನು ಪಠಿಸುತ್ತಿತ್ತು ಎಂಬುದಾಗಿ ಐಗುಪ್ತ್ಯರು ನಂಬಿದರು.
c ಪುರಾತನ ಕಾಲದಲ್ಲಿ, ಅನೇಕ ಮಕ್ಕಳು ಇಂದು ಸರ್ವಸಾಮಾನ್ಯವಾಗಿರುವ ಸಮಯಕ್ಕಿಂತಲೂ ಹೆಚ್ಚು ಕಾಲ ಮೊಲೆಯುಣಿಸಲ್ಪಟ್ಟರು. ಸಮುವೇಲನು ಮೊಲೆಹಾಲು ಬಿಡುವಾಗ, ಕಡಿಮೆ ಪಕ್ಷ ಮೂರು ವರುಷದವನಾಗಿದ್ದನು, ಮತ್ತು ಇಸಾಕನು ಸುಮಾರು ಐದು ವರುಷದವನಾಗಿದ್ದನು.