ಸಂತೃಪ್ತಿಗೆ ಸೂತ್ರಗಳು
ನಾವೆಲ್ಲರೂ ಸಂತೃಪ್ತರಾಗಿರೋಕೆ ಇಷ್ಟಪಡ್ತಿವಿ. ದೊಡ್ಡವರಾಗಿರಲಿ, ಚಿಕ್ಕವರಾಗಿರಲಿ, ಮದುವೆಯಾಗಿರಲಿ ಆಗದೆ ಇರಲಿ ನಮಗೆಲ್ಲರಿಗೂ ಜೀವನದಲ್ಲಿ ಸಂತೋಷ ಸಂತೃಪ್ತಿ ಇರಬೇಕು ಅನ್ನೋದೇ ಆಸೆ. ನಾವು ಹೀಗೆ ಇರಬೇಕಂತನೇ ನಮ್ಮ ಸೃಷ್ಟಿಕರ್ತ ದೇವರು ಬಯಸ್ತಾರೆ. ಅವರು ಕೊಟ್ಟಿರೋ ಕೆಲವು ಸಲಹೆಗಳ ಬಗ್ಗೆ ಈಗ ನೋಡೋಣ.
ಶ್ರಮಪಟ್ಟು ಕೆಲಸ ಮಾಡಿ
ಕೆಲಸ ಮಾಡುವವನು “ಕೈಯಾರೆ ಕಷ್ಟಪಟ್ಟು ನಿಯತ್ತಿಂದ ದುಡೀಲಿ. ಆಗ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡಕ್ಕಾಗುತ್ತೆ.”—ಎಫೆಸ 4:28.
ಕೆಲಸದ ಬಗ್ಗೆ ನಮಗೆ ಒಳ್ಳೇ ಮನೋಭಾವ ಇರಬೇಕು ಅಂತ ದೇವರು ಇಷ್ಟಪಡ್ತಾರೆ. ಯಾಕಂದ್ರೆ ಒಬ್ಬ ವ್ಯಕ್ತಿ ದುಡಿದಾಗ ಅವನು ಖುಷಿಯಾಗಿ ಇರ್ತಾನೆ ಮತ್ತು ಕುಟುಂಬದ ಅಗತ್ಯಗಳನ್ನು ಚೆನ್ನಾಗಿ ನೋಡ್ಕೊಳ್ಳೋಕೆ ಆಗುತ್ತೆ. ಕಷ್ಟದಲ್ಲಿ ಇರುವವರಿಗೆ ಸಹಾಯನೂ ಮಾಡೋಕ್ಕಾಗುತ್ತೆ. ಒಬ್ಬ ಒಳ್ಳೇ ಕೆಲಸಗಾರ ಶ್ರಮಪಟ್ಟು ಕೆಲಸ ಮಾಡುವಾಗ ತನ್ನ ಕೆಲಸ ಉಳಿಸಿಕೊಳ್ತಾನೆ. ಅಷ್ಟೇ ಅಲ್ಲ ತನ್ನ ಯಜಮಾನನನ್ನೂ ಖುಷಿಪಡಿಸ್ತಾನೆ. ಅದಕ್ಕೆ ಪವಿತ್ರ ಗ್ರಂಥದಲ್ಲಿ ಕೆಲಸ “ದೇವರ ಉಡುಗೊರೆ” ಅಂತ ಹೇಳುತ್ತೆ.—ಪ್ರಸಂಗಿ 3:13.
ಪ್ರಾಮಾಣಿಕರಾಗಿರಿ
“ನಮಗೆ ಶುದ್ಧ ಮನಸ್ಸಾಕ್ಷಿ ಇದೆ ಅಂತ ನಾವು ನಂಬ್ತೀವಿ, ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕವಾಗಿ ಇರೋಕೆ ಬಯಸ್ತೀವಿ.”—ಇಬ್ರಿಯ 13:18.
ನಾವು ಪ್ರಾಮಾಣಿಕರಾಗಿದ್ದರೆ ನಮಗೆ ನಮ್ಮ ಮೇಲೆನೇ ಗೌರವ ಇರುತ್ತೆ, ಸಮಾಧಾನ ನೆಮ್ಮದಿ ಇರುತ್ತೆ, ರಾತ್ರಿಯಲ್ಲಿ ಒಳ್ಳೇ ನಿದ್ದೆ ಮಾಡ್ತಿವಿ. ಬೇರೆಯವರು ನಮ್ಮನ್ನ ನಂಬ್ತಾರೆ, ಗೌರವಿಸ್ತಾರೆ. ಆದ್ರೆ ಒಬ್ಬ ವ್ಯಕ್ತಿ ಪ್ರಾಮಾಣಿಕನಾಗಿ ಇಲ್ಲದೆ ಇದ್ರೆ ಅವನಿಗೆ ನೆಮ್ಮದಿನೂ ಇರಲ್ಲ ಖುಷಿನೂ ಇರಲ್ಲ. ಅವನು ಮಾಡೋ ತಪ್ಪಿಂದ ಅವನ ಮನಸ್ಸಾಕ್ಷಿ ಯಾವಾಗಲೂ ಚುಚ್ಚುತ್ತಾ ಇರುತ್ತೆ. ಅಷ್ಟೇ ಅಲ್ಲ, ‘ಒಂದಲ್ಲ ಒಂದಿನ ಸಿಕ್ಕಿಬೀಳ್ತಿನಿ’ ಅನ್ನೋ ಭಯದಲ್ಲೇ ಕಾಲ ಕಳಿತಾನೆ.
ದುಡ್ಡಿಗೆ ದಾಸರಾಗಬೇಡಿ
“ಹಣದಾಸೆ ಇಲ್ಲದೆ ಜೀವನ ಮಾಡಿ. ಇರೋದ್ರಲ್ಲೇ ತೃಪ್ತಿಪಡಿ.”—ಇಬ್ರಿಯ 13:5.
ಜೀವನ ಮಾಡೋಕೆ ನಮಗೆ ಹಣ ಬೇಕು. ಆದ್ರೆ “ಹಣದಾಸೆ” ನಮ್ಮನ್ನ ಹಾಳುಮಾಡುತ್ತೆ. ಹಣದಾಸೆ ಇರುವವನು ತನ್ನ ಸಮಯ, ಶಕ್ತಿಯನ್ನೆಲ್ಲ ಹಣ ಮಾಡೋದ್ರಲ್ಲೇ ಕಳೆಯುತ್ತಾನೆ. ಆಗ ಅವನಿಗೆ ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯೋಕೆ ಆಗಲ್ಲ. ಅಷ್ಟೇ ಅಲ್ಲ ಅವನ ಆರೋಗ್ಯನೂ ಹಾಳಾಗುತ್ತೆ. (1 ತಿಮೊತಿ 6:9, 10) ಹಣದಾಸೆ ಇರೋ ವ್ಯಕ್ತಿಗೆ ಪ್ರಾಮಾಣಿಕನಾಗಿ ಇರೋಕೆ ಕಷ್ಟ ಆಗುತ್ತೆ. ಅದಕ್ಕೆ ಒಬ್ಬ ವಿವೇಕಿ ಹೇಳಿದ್ದು: “ನಂಬಿಗಸ್ತ ವ್ಯಕ್ತಿಗೆ ತುಂಬ ಆಶೀರ್ವಾದ ಸಿಗುತ್ತೆ, ಆದ್ರೆ ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ.”—ಜ್ಞಾನೋಕ್ತಿ 28:20.
ದೇವರು ಕೊಡೋ ಶಿಕ್ಷಣ ಪಡೆಯಿರಿ
“ವಿವೇಕವನ್ನ, ಯೋಚ್ನೆ ಮಾಡೋ ಶಕ್ತಿಯನ್ನ ಕಾಪಾಡ್ಕೊ.”—ಜ್ಞಾನೋಕ್ತಿ 3:21.
ಉತ್ತಮ ಶಿಕ್ಷಣ ಒಳ್ಳೇ ಅಪ್ಪಅಮ್ಮ ಆಗೋಕೆ, ಜವಾಬ್ದಾರಿ ಇರೋ ವ್ಯಕ್ತಿ ಆಗೋಕೆ ಸಹಾಯಮಾಡುತ್ತೆ. ಆದ್ರೆ ಇದ್ರಿಂದ ನಾವು ಯಾವುದೇ ತೊಂದರೆ ಇಲ್ಲದೆ ಯಾವಾಗ್ಲೂ ಸಂತೋಷವಾಗಿ ಇರಬಹುದು ಅನ್ನೋದು ಸುಳ್ಳು. ನಾವು ಮಾಡೋ ಎಲ್ಲ ವಿಷಯದಲ್ಲೂ ಯಶಸ್ಸು ಸಿಗಬೇಕಂದ್ರೆ ದೇವರು ಕೊಡೋ ಶಿಕ್ಷಣವನ್ನು ಪಡಿಬೇಕು. ದೇವರು ಹೇಳೋ ಮಾತನ್ನು ಕೇಳಿದ್ರೆ “ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ” ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 1:1-3.