ಯೆಹೋವನು ನನ್ನ ಸಹಾಯಕನು
“ಯೆಹೋವನು ನನ್ನ ಸಹಾಯಕನು, ಭಯಪಡೆನು; ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲಿವು.”—ಇಬ್ರಿಯರಿಗೆ 13:6.
1, 2. (ಎ)ಕೀರ್ತನೆಗಾರನು ಮತ್ತು ಅಪೊಸ್ತಲ ಪೌಲರಿಬ್ಬರೂ ಯೆಹೋವನಲ್ಲಿ ಯಾವ ಭರವಸೆಯನ್ನು ವ್ಯಕ್ತಪಡಿಸಿದ್ದರು? (ಬಿ)ಯಾವ ಪ್ರಶ್ನೆಗಳು ಏಳುತ್ತವೆ?
ಯೆಹೋವ ದೇವರು ಎಂದೂ ತಪ್ಪದೆ ಸಹಾಯಕ್ಕೆ ಮೂಲನು. ಕೀರ್ತನೆಗಾರನಿಗೆ ಇದು ಅನುಭವದಿಂದ ತಿಳಿದಿತ್ತು. ಮತ್ತು “ಯೆಹೋವನು ನನಗಿದ್ದಾನೆ, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು?” ಎಂದು ಹೇಳಶಕ್ತನಾದನು. (ಕೀರ್ತನೆ 118:6) ತದ್ರೀತಿಯ ಬಾವೂದ್ರೇಕಗಳು ಅಪೊಸ್ತಲ ಪೌಲನಿಂದ ಹಿಬ್ರೂ ಕ್ರೈಸ್ತರಿಗೆ ಬರೆದ ದೈವಪ್ರೇರಿತ ಪತ್ರಿಕೆಯಲ್ಲೂ ವ್ಯಕ್ತಪಡಿಸಲ್ಪಟ್ಟಿದೆ.
2 ಗ್ರೀಕ್ ಸೆಪ್ತುವಜಿಂಟ್ನಿಂದ ಕೀರ್ತನೆಗಾರನ ಮಾತುಗಳನ್ನು ಪ್ರತ್ಯಕ್ಷವಾಗಿ ಉದ್ಗರಿಸುತ್ತಾ ಪೌಲನು ಜತೆ ಹಿಬ್ರೂ ಆರಾಧಕರಿಗೆ ಅಂದದ್ದು:“ಆದ್ದರಿಂದ ಯೆಹೋವನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲಿವು.” (ಇಬ್ರಿ. 13:6) ಅಪೊಸ್ತಲನು ಈ ರೀತಿ ಬರೆದದ್ದೇಕೆ? ಮತ್ತು ಅದರ ಪೂರ್ವಾಪರ ವಚನಗಳಿಂದ ನಾವೇನನ್ನು ಕಲಿಯಬಹುದು?
ಯೆಹೋವನ ಸಹಾಯದ ಅಗತ್ಯದಲ್ಲಿ
3. (ಎ)ಯಾವ ಪರಿಸ್ಥಿತಿಗಳ ಕೆಳಗೆ ಯೆಹೋವನು ಪೌಲನ ಸಹಾಯಕನಾಗಿ ರುಜುವಾದನು? (ಬಿ)ಯೆಹೋವನು ಸಹಾಯಕನಾಗುವ ವಿಶೇಷ ಅಗತ್ಯವು ಹಿಬ್ರೂ ಕ್ರೈಸ್ತರಿಗಿತ್ತೇಕೆ?
3 ಯೆಹೋವನು ತನ್ನ ಸಹಾಯಕನೆಂಬ ರುಜುವಾತನ್ನು ಪಡೆದಿದ್ದ ಸ್ವಾರ್ಥ-ತ್ಯಾಗಿ ಸಾಕ್ಷಿಯು ಪೌಲನಾಗಿದ್ದನು. ಅನೇಕ ಕಷ್ಟಗಳ ಎದುರಲ್ಲಿ ದೇವರು ಆ ಅಪೊಸ್ತಲನಿಗೆ ಸಹಾಯ ಮಾಡಿದ್ದನು. ಪೌಲನು ಸೆರೆಮನೆಗೆ ಹಾಕಲ್ಪಟ್ಟಿದ್ದನು. ಹೊಡೆಯಲ್ಪಟ್ಟಿದ್ದನು. ಕಲ್ಲಿಸೆಯಲ್ಪಟ್ಟಿದ್ದನು. ಕ್ರೈಸ್ತ ಶುಶ್ರೂಷಕನಾಗಿ ಸಂಚಾರ ಮಾಡಿದಾಗ ಹಡಗು ಒಡೆತಕ್ಕೆ ಹಾಗೂ ಬೇರೆ ಅನೇಕ ಗಂಡಾಂತರಗಳಿಗೆ ಅವನು ಗುರಿಯಾಗಿದ್ದನು. ಪ್ರಯಾಸ, ನಿದ್ದೆಗೆಡುವಿಕೆ, ಹಸಿವು, ಬಾಯಾರಿಕೆ, ನಗ್ನತೆಯನ್ನೂ ಅವನು ಚೆನ್ನಾಗಿ ತಿಳಿದವನಾಗಿದ್ದನು.“ಇನ್ನೂ ಬೇರೆ ಸಂಗತಿಗಳಲ್ಲದೆ ಎಲ್ಲಾ ಸಭೆಗಳ ವಿಷಯವಾದ ಚಿಂತೆಯು ದಿನ ದಿನ ನನ್ನನ್ನು ಪೀಡಿಸುತ್ತದೆ.” ಎಂದವನು ಹೇಳಿದ್ದಾನೆ.(2 ಕೊರಿಂ. 11:24-29)ಪೌಲನಲ್ಲಿ ರೀತಿಯ ಚಿಂತೆಯು ಹಿಬ್ರೂ ಕ್ರೈಸ್ತರ ಕಡೆಗಿತ್ತು. ಯೆರೂಸಲೇಮಿನ ಅಂತ್ಯವು ಬೇಗನೇ ಬರಲಿತ್ತು ಮತ್ತು ಯೂದಾಯದಲ್ಲಿದ್ದ ಅಪೊಸ್ತಲನ ಸಹೋದರ ಮತ್ತು ಸಹೋದರಿಯರು ನಂಬಿಕೆಯ ಮಹಾ ಪರೀಕ್ಷೆಗಳನ್ನು ಎದುರಿಸಲಿಕ್ಕಿದ್ದರು. (ದಾನೀಯೇಲ 9:24-27; ಲೂಕ 21:5-24) ಹೀಗೆ ಯೆಹೋವನು ತಮ್ಮ ಸಹಾಯಕನಾಗಿರುವ ಅಗತ್ಯವು ಅವರಿಗಿತ್ತು.
4. ಇಬ್ರಿಯರಿಗೆ ಬರೆದ ಪತ್ರಿಗೆಯಲ್ಲಿಲ್ಲಾ ಯಾವ ಮೂಲಭೂತ ಉಪದೇಶವನ್ನು ನೀಡಲಾಗಿದೆ?
4 ಹಿಬ್ರೂ ಕ್ರೈಸ್ತರಿಗೆ ಬರೆದ ತನ್ನ ಪತ್ರಿಕೆಯ ಆರಂಭದಲ್ಲಿ, ದೇವಕುಮಾರನಾದ ಯೇಸು ಕ್ರಿಸ್ತನಿಗೆ ಕಿವಿಗೊಟ್ಟರೆ ಮಾತ್ರವೇ ದೈವಿಕ ಸಹಾಯವನ್ನು ಅವರು ಅನುಭವಿಸುವರೆಂಬುದಾಗಿ ಪೌಲನು ತೋರಿಸಿದ್ದನು. (ಇಬ್ರಿಯ 1:1, 2) ಈ ವಿಷಯವು ಆ ಪತ್ರದಲ್ಲಿ ವಿಕಾಸಿಸಲ್ಪಟ್ಟಿತ್ತು. ಉದಾಹರಣೆಗಾಗಿ, ಈ ಸೂಚನೆಗೆ ಆಧಾರದಲ್ಲಿ ಅಪೊಸ್ತಲನು ತನ್ನ ವಾಚಕರಿಗೆ ಹೇಗೆ ಇಸ್ರಾಯೇಲ್ಯರು ತಮ್ಮ ಅವಿಧೇಯತೆಗಾಗಿ ಅರಣ್ಯದಲ್ಲಿ ಶಿಕ್ಷಿಸಲ್ಪಟ್ಟರೆಂಬ ಜ್ಞಾಪಕವನ್ನು ಕೊಡುತ್ತಾನೆ. ಹೀಗೆ ಯೇಸುವಿನ ಮೂಲಕವಾಗಿ ದೇವರು ಅವರಿಗೆ ಏನು ಹೇಳಿರುವನೋ ಅದನ್ನು ತಿರಸ್ಕರಿಸಿದ್ದಾದರೆ ಮತ್ತು ಕ್ರಿಸ್ತನ ಯಜ್ಞದಿಂದಾಗಿ ರದ್ದಾದ ಮೋಶೆಯ ನಿಯಮಕ್ಕೆ ಅಂಟಿಕೊಂಡು ಧರ್ಮಭೃಷ್ಟರಾದರೆ ಹಿಬ್ರೂ ಕ್ರೈಸ್ತರೂ ಶಿಕ್ಷೆಯಿಂದ ಪಾರಾಗಿ ಉಳಿಯುವಂತಿರಲಿಲ್ಲ!—ಇಬ್ರಿಯ 12:24-27.
ಸಹೋದರ ಪ್ರೀತಿ ಕ್ರಿಯೆಯಲ್ಲಿ
5. (ಎ)ಬೇರೆ ಯಾವ ಸೂಚನೆಯನ್ನು ಇಬ್ರಿಯರಿಗೆ ಬರೆದ ಪತ್ರಿಕೆಯು ಒದಗಿಸುತ್ತದೆ? (ಬಿ)ಪ್ರೀತಿಯ ಕುರಿತಾಗಿ ಪೌಲನು ಹೇಳಿದ್ದೇನು?
5 ಇಬ್ರಿಯರಿಗೆ ಬರೆದ ಪತ್ರವು ಸ್ವರ್ಗೀಯ ರಾಜ್ಯದ ಭಾವೀ ವಾರಸುದಾರರಿಗೆ ತಮ್ಮ ಮಾದರಿ ಯೇಸು ಕ್ರಿಸ್ತನನ್ನು ಅವರು ಹೇಗೆ ಹಿಂಬಾಲಿಸಬೇಕೆಂಬುದನ್ನು ತಿಳಿಸಿತು. ಮತ್ತು “ಪವಿತ್ರ ಸೇವೆಯನ್ನು ಭಕ್ತಿಯಿಂದಲೂ ಭಯದಿಂದಲೂ ಸಲ್ಲಿಸಿ” ಯೆಹೋವವನ್ನು ತಮ್ಮ ಸಹಾಯಕನಾಗಿ ಹೊಂದುವಂತೆ ಸೂಚನೆಯನ್ನು ಕೊಟ್ಟಿತು. (ಇಬ್ರಿಯ 12:1-4, 28,29) ಜತೆ ವಿಶ್ವಾಸಿಗಳು ಕ್ರಮವಾಗಿ ಕೂಡಿಬರುವಂತೆಯೂ, “ಒಬ್ಬರನ್ನೊಬ್ಬರು ಪ್ರೀತಿ ಮತ್ತು ಸತ್ಕಾರ್ಯಗಳಿಗೆ ಪ್ರೇರೇಪಿಸುವಂತೆಯೂ” ಪೌಲನು ಪ್ರೇರೇಪಣೆಯಿತ್ತನು. (ಇಬ್ರಿ. 12:24,25) ಅನಂತರ ಅವನು ಸೂಚಿಸಿದ್ದು: “ನಿಮ್ಮ ಸಹೋದರ ಪ್ರೀತಿಯು ನೆಲೆಯಾಗಿರಲಿ.”—ಇಬ್ರಿಯ 13:1.
6. ಪ್ರೀತಿಯ ಕುರಿತಾಗಿ “ಒಂದು ಹೊಸ ಆಜ್ಞೆಯನ್ನು” ಯೇಸು ಕೊಟ್ಟದ್ದು ಯಾವ ಅರ್ಥದಲ್ಲಿ?
6 ಯೇಸು ತನ್ನ ಹಿಂಬಾಲಕರಿಂದ ಅಂತಹ ಪ್ರೀತಿಯನ್ನು ಕೇಳಿದ್ದನು. ಯಾಕೆಂದರೆ ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾ. 13:34,35) ಅದು ಒಂದು ಹೊಸ ಆಜ್ಞೆಯಾಗಿತ್ತು. ಹೇಗೆಂದರೆ ಮೋಶೆಯ ನಿಯಮವಾದ “ನಿನ್ನ ನೆರೆಯವನನ್ನು ನಿನ್ನೆಂತೆಯೇ ಪ್ರೀತಿಸಬೇಕು” ಎಂಬಾಜ್ಞೆಗಿಂತ ಅದು ಹೆಚ್ಚಿನದನ್ನು ಕೇಳಿಕೊಂಡಿತ್ತು. (ಯಾಜಕಕಾಂಡ 19:18) ಆ “ಹೊಸ ಆಜ್ಞೆಯು” ಒಬ್ಬ ವ್ಯಕ್ತಿಯನ್ನು ತನ್ನ ನೆರೆಯವನನ್ನು ತನ್ನ ಹಾಗೆಯೇ ಪ್ರೀತಿಸುವದಕ್ಕಿಂತ ಹೆಚ್ಚಿನದನ್ನು ಅವಶ್ಯಕ ಪಡಿಸಿತು. ಅದು ಒಬ್ಬನ ಪ್ರಾಣವನ್ನು ಮತ್ತೊಬ್ಬನಿಗಾಗಿ ಕೊಡುವಂತಹ ಆತ್ಮತ್ಯಾಗದ ಪ್ರೀತಿಯನ್ನು ಆದರ್ಶವಾಗಿ ತೋರಿಸಿತು. ಈ ಪರಿಚಯದ ಗುರುತನ್ನು ಸೂಚಿಸುತ್ತಾ, ಕ್ರೈಸ್ತರ ವಿಷಯದಲ್ಲಿ ಲೌಕಿಕ ಜನರು ಹೀಗೆನ್ನುತ್ತಿದ್ದಾರೆಂದು ಟೆರ್ಟುಲ್ಲಿಯನನು ಉದ್ಧರಿಸಿ ಬರೆದದ್ದು: “ನೋಡಿ, ಅವರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಾರೆ. . . . ಒಬ್ಬರಿಗೊಬ್ಬರು ಅವರು ಪ್ರಾಣ ಕೊಡಲೂ ಸಿದ್ಧರು.”—ಎಪೋಲಜಿ, ಅಧ್ಯಾಯ XXXIX,7.
7. ಸಾ.ಶ. 33ರ ಪಂಚಾಶತ್ತಮದ ಅನಂತರ ಸಹೋದರ ಪ್ರೀತಿಯು ಹೇಗೆ ಪ್ರತ್ಯಕ್ಷವಾಯಿತು?
7 ಸಹೋದರರ ಪ್ರೀತಿಯು ಯೇಸುವಿನ ಶಿಷ್ಯರಲ್ಲಿ ಸಾ.ಶ. 33ರ ಪಂಚಾಶತ್ತಮದ ಅನಂತರ ಪ್ರತ್ಯಕ್ಷವಾಗಿ ತೋರಿಬಂದಿತ್ತು. ದೂರ ದೂರದಿಂದ ಬಂದ ಹೊಸತಾಗಿ ದೀಕ್ಷಾಸ್ನಾನ ಪಡೆದ ಅನೇಕ ವಿಶ್ವಾಸಿಗಳು ಸ್ವಲ್ಪ ಹೆಚ್ಚು ಸಮಯ ಉಳುಕೊಳ್ಳುವಂತೆ ಮತ್ತು ಕ್ರಿಸ್ತನ ಮೂಲಕವಾದ ರಕ್ಷಣೆಗಾಗಿ ದೇವರ ಒದಗಿಸುವಿಕೆಯ ಕುರಿತು ಹೆಚ್ಚನ್ನು ಕಲಿಯುವಂತೆ, “ನಂಬಿದವರೆಲ್ಲರು ಒಗ್ಗಟ್ಟಾಗಿದ್ದು ತಮ್ಮದೆಲ್ಲವನ್ನೂ ಹುದುವಾಗಿ ಅನುಭೋಗಿಸುತ್ತಾ ತಮ್ಮತಮ್ಮ ಚರ ಸ್ಥಿರ ಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರ ಅಗತ್ಯವಿದ್ದ ಹಾಗೆ ಹಂಚಿಕೊಡುತ್ತಾ ಇದ್ದರು.”—ಅಪೊಸ್ತಲರ ಕೃತ್ಯ 2:43-47; 4:32-37.
8. ಸಹೋದರ ಪ್ರೀತಿಯು ಇಂದು ಯೆಹೋವನ ಸಾಕ್ಷಿಗಳಲ್ಲಿ ಇದೆ ಎಂಬುದಕ್ಕೆ ಯಾವ ರುಜುವಾತಿದೆ?
8 ಅಂತಹ ಸಹೋದರ ಪ್ರೀತಿಯು ನಮ್ಮ ಕಾಲದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಅಸ್ತಿತ್ವದಲ್ಲಿದೆ. ಉದಾಹರಣೆಗಾಗಿ 2ನೇ ಲೋಕಯುದ್ಧದ ನಂತರ ಎರಡೂವರೆ ವರ್ಷದ ಒಂದು ಪರಿಹಾರ ಚಟುವಟಿಕೆಯನ್ನು ನಿರ್ವಹಿಸಲು ಅಂತಹ ಪ್ರೀತಿಯೇ ದೇವಜನರನ್ನು ಪ್ರೀತಿಸಿತ್ತು. ಕೆನಡಾ, ಸ್ವೀಡನ್, ಸ್ವಿಜರ್ಲೆಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಬೇರೆ ದೇಶಗಳ ಸಾಕ್ಷಿಗಳು ಯುದ್ಧ ಜರ್ಜರಿತ ದೇಶಗಳಾದ ಅಸ್ಟ್ರಿಯ, ಬೆಲ್ಜಿಯಂ, ಬುಲ್ಗೇರಿಯ, ಚೈನಾ, ಜೆಕೆಸ್ಲವೇಕಿಯ, ಡೆನ್ಮಾರ್ಕ್, ಇಂಗ್ಲೆಂಡ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಇಟಲಿ, ನದರ್ಲೆಂಡ್, ನಾರ್ವೆ, ಫಿಲಿಫಿನ್ಸ್, ಪೋಲೆಂಡ್ ಮತ್ತು ರುಮೇನಿಯಾದ ತಮ್ಮ ಜತೆ ವಿಶ್ವಾಸಿಗಳಿಗಾಗಿ ಬಟ್ಟೆಯನ್ನು ಮತ್ತು ಆಹಾರ ಖರೀದಿಸಲು ಹಣವನ್ನು ದಾನವಾಗಿ ಕೊಟ್ಟರು. ಇದು ಕೇವಲ ಒಂದು ಉದಾಹರಣೆ. ಇತ್ತೀಚಿನ ಸಮಯದಲ್ಲೂ ದೇವರ ಸೇವಕರು ಪೆರು ಮತ್ತು ಮೆಕ್ಸಿಕೋದ ಭೂಕಂಪ ಪೀಡಿತ ಜತೆ ಕ್ರೈಸ್ತರಿಗೆ, ಜಮೈಕದ ಬಿರುಗಾಳಿ ಪೀಡಿತರಿಗೆ ಮತ್ತು ತದ್ರೀತಿ ಬೇರೆ ವಿಧಗಳಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಸಹೋದರ ಪ್ರೀತಿಯು ನೆಲೆಯಾಗಿರುವಂತೆ ನೋಡಿದ್ದಾರೆ.
ಅತಿಥಿ ಸತ್ಕಾರ ಮಾಡಿರಿ
9. (ಎ) ಇಬ್ರಿಯ 13:2 ರಲ್ಲಿ ಯಾವ ದೈವಿಕ ಗುಣವು ತಿಳಿಸಲ್ಪಟ್ಟಿದೆ? (ಬಿ)ಕೆಲವರು ತಿಳಿಯದೇ “ದೇವದೂತರನ್ನು ಸತ್ಕರಿಸಿದ್ದು” ಹೇಗೆ?
9 ‘ಪವಿತ್ರ ಸೇವೆಯನ್ನು ಭಕ್ತಿಯಿಂದಲೂ, ಭಯದಿಂದಲೂ ಸಲ್ಲಿಸುವ’ ಮತ್ತು ಯೆಹೋವನನ್ನು ತಮ್ಮ ಸಹಾಯಕನನ್ನಾಗಿ ಮಾಡಿರುವ ಕ್ರಿಸ್ತನ ಹಿಂಬಾಲಕರಿಂದ ತೋರಿಸಲ್ಪಡಬೇಕಾದ ಇನ್ನೊಂದು ಗುಣವನ್ನು ಪೌಲನು ಮುಂದೆ ತಿಳಿಸುತ್ತಾನೆ. ಅವನು ಪ್ರೇರೇಪಿಸಿದ್ದು:“ಅತಿಥಿ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೇ ದೇವದೂತರನ್ನೂ ಸತ್ಕರಿಸಿದ್ದಾರೆ.” (ಇಬ್ರಿ. 13:2) ತಿಳಿಯದೇ “ದೇವದೂತರನ್ನು ಸತ್ಕರಿಸಿದವರು” ಅವರ್ಯಾರು? ಒಳ್ಳೇದು. ಮೂಲಪಿತೃನಾದ ಅಬ್ರಾಹಾಮನು ಮೂರು ಮಂದಿ ದೇವದೂತರ ಅತಿಥ್ಯವನ್ನು ಮಾಡಿದ್ದನು. (ಆದಿಕಾಂಡ 18:1-22) ಅವರಲ್ಲಿಬ್ಬರು ಸಾಗ ಹೋಗಲು ಅವನ ಸೋದರಳಿಯ ಲೋಟನು ಅಪರಿಚಿತರಾದ ಅವರನ್ನೇ ಸೋದೋಮಿನ ತನ್ನ ಮನೆಯೊಳಗೆ ಸೇರಿಸಿಕೊಂಡನು. ಆದರೆ ಅವರು ಮಲಗುವ ಮುಂಚಿತವಾಗಿಯೇ ಲೋಟನ ಮನೆಯನ್ನು ಹುಡುಕರು ಮುದುಕರು ಸಹಿತವಾಗಿ ಒಂದು ದೊಂಬಿಯು ಸುತ್ತು ಹಾಕಿತು. ಲೋಟನು ತನ್ನ ಅತಿಥಿಗಳನ್ನು ಅನೈತಿಕ ಉದ್ದೇಶಕ್ಕಾಗಿ ತಮಗೆ ಬಿಟ್ಟುಕೊಡಬೇಕೆಂದು ಅವರು ತಗಾದೆ ಮಾಡಿದರು: ಆದರೆ ಲೋಟನು ಖಂಡಿತವಾಗಿ ನಿರಾಕರಿಸಿದನು. ಲೋಟನಿಗೆ ಮೊದಲು ಅದು ತಿಳಿಯದೇ ಇದ್ದರೂ ಅವನು ದೇವದೂತರನ್ನು ಸತ್ಕರಿಸಿದ್ದನು: ಅದೇ ದೇವದೂತರು ಅನಂತರ ಅವನನ್ನೂ ಅವನ ಕುಮಾರ್ತೆಯರನ್ನೂ ಯೆಹೋವನು ಸೋದೋಮ್ ಗಮೋರಗಳ ಮೇಲೆ ಆಕಾಶದಿಂದ ಅಗ್ನಿ ಗಂಧಕಗಳನ್ನು ಸುರಿಸಿದಾಗ ಮರಣವನ್ನು ಪಾರಾಗುವಂತೆ ಸಹಾಯ ಮಾಡಿದರು.—ಆದಿಕಾಂಡ 19:1-26.
10. ಅತಿಥಿ ಸತ್ಕಾರ ಮಾಡುವ ಕ್ರೈಸ್ತರು ಯಾವ ಆಶೀರ್ವಾದಗಳನ್ನು ಅನುಭವಿಸುತ್ತಾರೆ?
10 ಅತಿಥಿ ಸತ್ಕಾರ ಮಾಡುವ ಕ್ರೈಸ್ತರು ಅನೇಕ ಆಶೀರ್ವಾದಗಳಲ್ಲಿ ಆನಂದಿಸುತ್ತಾರೆ. ಅವರ ಅತಿಥಿಗಳಿಂದ ಹೇಳಲ್ಪಡಟ್ಟ ಬಲವರ್ಧಕ ಅನುಭವಗಳನ್ನು ಅವರು ಕೇಳುತ್ತಾರೆ ಮತ್ತು ಅವರ ಆತ್ಮಿಕವಾಗಿ ಪ್ರಯೋಜನಕಾರಿ ಸಹವಾಸದಿಂದ ಲಾಭ ಹೊಂದುತ್ತಾರೆ. ಗಾಯನು ಸಹ ವಿಶ್ವಾಸಿಗಳನ್ನು “ಮತ್ತು ಅಪರಿಚಿತರನ್ನು” ಅತಿಥಿ ಸತ್ಕಾರ ಸಹಿತವಾಗಿ ಸ್ವೀಕರಿಸಿದ್ದಕ್ಕಾಗಿ ಶಿಫಾರಿಸಲ್ಪಟ್ಟಿದ್ದಾನೆ. ಇಂದೂ ಕೂಡ, ಯೆಹೋವನ ಜನರು ಸಂಚರಣೆ ಮೇಲ್ವೀಚಾರಕನನ್ನು ಉಪಚರಿಸಿದಂತೆಯೇ. (3 ಯೋಹಾನ 1, 5-8) ಹಿರಿಯನಾಗಿ ನೇಮಕ ಹೊಂದಲು ಬೇಕಾದ ಒಂದು ಗುಣ ಅತಿಥಿ ಸತ್ಕಾರ ಮಾಡುವದೇ. (1 ತಿಮೊಥಿ 3:2, ತೀತ 1:7,8) ಅವನ ಅಭಿಷಿಕ್ತ “ಸಹೋದರರಿಗೆ” ಅತಿಥಿ ಸತ್ಕಾರದಿಂದ ಒಳ್ಳೆಯದನ್ನು ಮಾಡಿದ ಕುರಿಗಳಂಥ ವ್ಯಕ್ತಿಗಳಿಗೆ ರಾಜ್ಯಾದಾಶೀರ್ವಾದಗಳನ್ನು ಯೇಸುವು ವಾಗ್ದಾನಿಸಿದ್ದಾನೆಂದು ಗಮನಾರ್ಹವು.—ಮತ್ತಾಯ 25:34-40.
ಹಿಂಸಿಸಲ್ಪಡುವವರನ್ನು ನೆನಪಿಡಿಸಿರಿ
11. ಇಬ್ರಿಯ 13:13ರ ಸೂಚನೆಯು ಯಾಕೆ ತಕ್ಕದ್ದಾಗಿದೆ?
11 ಯಾರು ಯೆಹೋವನ ಸಹಾಯವನ್ನು ಪಡೆಯಲು ಅಪೇಕ್ಷಿಸುತ್ತಾರೋ ಮತ್ತು “ಪವಿತ್ರ ಸೇವೆಯನ್ನು ಭಕ್ತಿಯಿಂದಲೂ ಭಯದಿಂದಲೂ ಸಲ್ಲಿಸುತ್ತಾರೋ” ಅವರು ತಮ್ಮ ಜತೆ ವಿಶ್ವಾಸಿಗಳ ಕಷ್ಟಾನುಭವಗಳನ್ನು ಮರೆಯಬಾರದು. ಹಿಂಸಿಸಲ್ಪಟ್ಟ ಕ್ರೈಸ್ತರಿಂದ ಸಹಿಸಲ್ಪಡುವ ಕಷ್ಟಗಳನ್ನು ಪೌಲನು ತಿಳಿದುಕೊಂಡಿದ್ದನು. ಇದಕ್ಕೆ ಮುಂಚೆ ಒಮ್ಮೆ ಹಿಂಸೆಯಿಂದಾಗಿ ಶಿಷ್ಯರು ಚದರಿಸಲ್ಪಟ್ಟಿದ್ದರು ಮತ್ತು ಅವನ ಜತೆಕೆಲಸಗಾರ ತಿಮೊಥಿಯು ಆವಾಗಲೇ ಸೆರೆಯಿಂದ ಬಿಡುಗಡೆ ಹೊಂದಿದ್ದನು. (ಇಬ್ರಿ. 13:23; ಅಪೊಸ್ತಲರ ಕೃತ್ಯ 11:19-21) ಕ್ರೈಸ್ತ ಮಿಶೆನರಿಗಳು ಸಹಾ ಹೊಸ ಸಭೆಗಳನ್ನು ರಚಿಸುವದಕ್ಕಾಗಿ ಅಥವಾ ಇರುವ ಸಭೆಗಳನ್ನು ಆತ್ಮಿಕ ರೀತಿಯಲ್ಲಿ ಬಲಪಡಿಸಲಿಕ್ಕಾಗಿ ಸಂಚಾರ ಕೈಕೊಳ್ಳುತ್ತಾ ಇದ್ದರು. ಆಗ ಸಂಚಾರಗೈಯುತ್ತಿದ್ದ ಸಹೋದರ ಮತ್ತು ಸಹೋದರಿಯದಲ್ಲಿ ಹೆಚ್ಚಿನವರು ಅನ್ಯರಾಗಿದ್ದರಿಂದ, ಕೆಲವು ಹಿಬ್ರೂ ಕ್ರೈಸ್ತರು ಅವರ ಕುರಿತಾಗಿ ಸಾಕಷ್ಟು ಚಿಂತಿಸದೇ ಇದ್ದಿರಬಹುದು. ಹೀಗಿರಲಾಗಿ ತಕ್ಕದ್ದಾಗಿಯೇ ಸೂಚನೆ ನೀಡಲ್ಪಟ್ಟಿದ್ದು: “ಸೆರೆಯವರ ಸಂಗಡ ನೀವೂ ಜೊತೆ ಸೆರೆಯವರೆಂದು ಭಾವಿಸಿಕೊಂಡು ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ನಿಮಗೂ ಅನ್ಯಾಯ ಸಂಭವಿಸೀತೆಂದು ತಿಳಿದು ಅನ್ಯಾಯ ಅನುಭವಿಸುವವರನ್ನು ನೆನಸಿರಿ. ಯಾಕಂದರೆ ನೀವು ಸಹಾ ಇನ್ನೂ ದೇಹದಲ್ಲೀ ಇದ್ದೀರಿ”—ಇಬ್ರಿ. 13:3.
12.ಹಿಂಸಿಸಲ್ಪಡುವ ಜತೆ ವಿಶ್ವಾಸಿಗಳನ್ನು ನೆನಪಿಸುವದಕ್ಕೆ ಕೊಡಲಾದ ಸೂಚನೆಯನ್ನು ನಾವು ಹೇಗೆ ಅನ್ವಯಿಸಬಹುದು?
12 ಇಬ್ರಿಯರು “ಸೆರೆಯಲ್ಲಿದ್ದರಿಗಾಗಿ ದುಃಖವನ್ನು ವ್ಯಕ್ತಪಡಿಸಿದ್ದರು.” ಆದರೆ ಅವರು ಯೆಹೂದ್ಯರಾಗಲಿ ಅಥವಾ ಅನ್ಯರಾಗಿರಲಿ. ಅಂತಹ ನಂಬಿಗಸ್ತ ಜತೆ ವಿಶ್ವಾಸಿಗಳನ್ನು ಅವರು ಮರೆಯಬಾರದಿತ್ತು. (ಇಬ್ರಿಯ 10:34) ಆದರೆ ನಮ್ಮ ವಿಷಯದಲ್ಲೀನು? ಹಿಂಸಿಸಲ್ಪಡುತ್ತಿರುವ ಕ್ರೈಸ್ತರನ್ನು ನಾವು ನೆನಪಿಸುತ್ತೇವೆಂದು ಹೇಗೆ ತೋರಿಸಬಲ್ಲಿವು? ಎಲ್ಲಿ ರಾಜ್ಯ ಸಾರುವಿಕೆ ನಿಶೇಧಿಸಲ್ಪಟ್ಟಿದೆಯೋ ಆ ದೇಶಗಳಲ್ಲಿ ತಮ್ಮ ನಂಬಿಕೆಗಾಗಿ ಸೆರೆಯಲ್ಲಿರುವ ಜತೆ ವಿಶ್ವಾಸಿಗಳಿಗೆ ನೆರವಾಗುವ ಪ್ರಯತ್ನದಲ್ಲಿ ಪತ್ರದ ಮೂಲಕ ಸರಕಾರಿ ಅಧಿಕಾರಿಗಳಿಗೆ ನಾವು ಅಪ್ಪೀಲು ಮಾಡುವದು ಕೆಲವು ಸಾರಿ ಯಥೋಚಿತವು. ವಿಶೇಷವಾಗಿ ನಾವವರನ್ನು ಪ್ರಾರ್ಥನೆಯಲ್ಲಿ ಸಾಧ್ಯವಿದ್ದರೆ ಕೆಲವರ ಹೆಸರನ್ನು ಹೇಳಿಯಾದರೂ ನೆನಪು ಮಾಡತಕ್ಕದ್ದು. ಅವರ ಹಿಂಸೆಯು ನಮ್ಮನ್ನು ಆಳವಾಗಿ ಪ್ರಭಾವಿಸುತ್ತದೆ ಮತ್ತು ಯೆಹೋವನು ಅವರ ಪರವಾಗಿ ನಾವು ಮಾಡುವ ಆಸಕ್ತ ಪ್ರಾರ್ಥನೆಯನ್ನು ಲಾಲಿಸುತ್ತಾನೆ. (ಕೀರ್ತನೆ 65:2; ಎಫೆಸ 6:17-20) ಅದೇ ಸೆರೆಮನೆಯಲ್ಲಿ ನಾವಿಲ್ಲದಿದ್ದರೂ, ನಾವವರೊಂದಿಗೆ ಬೇಡಿಗಳನ್ನು ಹಾಕಿಕೊಂಡವರಂತೆ ಇದ್ದು ಅವರಿಗೆ ಸಹಾಯವನ್ನು ಮತ್ತು ಉತ್ತೇಜನವನ್ನು ನೀಡಶಕ್ತರಾಗಿದ್ದೇವೆ. ಆತ್ಮದಿಂದ ಹುಟ್ಟಿದ ಕ್ರೈಸ್ತರು ನಿಶ್ಚಯವಾಗಿಯೂ ಹಿಂಸಿಸಲ್ಪಡುತ್ತಿರುವ ಅಭಿಷಿಕ್ತ ಜನರಿಗೆ ಸಹಾನುಭೂತಿ ತೋರಿಸುವರು. (1 ಕೊರಿಂಥ 12:19-26 ಹೋಲಿಸಿ) ಅದೇ ರೀತಿಯ ಚಿಂತೆಯನ್ನು ಅವರು ಹಿಂಸಿಸಲ್ಪಡುತ್ತಿರುವ ತಮ್ಮ ಐಹಿಕ ನಿರೀಕ್ಷೆಯುಳ್ಳ ಸಂಗಡಿಗರಲ್ಲೂ ತೋರಿಸುತ್ತಾರೆ; ಇವರು ಸಹಾ ಹಿಂಸಕರ ಕೈಯಿಂದ ಅನೇಕ ರೀತಿಯ ಅನ್ಯಾಯಗಳನ್ನು ಅನುಭವಿಸುತ್ತಿದ್ದಾರೆ. ಅಂತಹ ಭಾತೃ ಭಾವವು ಯಥೋಚಿತವು. ಯಾಕೆಂದರೆ ನಾವೆಲ್ಲರೂ ಇನ್ನೂ ಮಾನವ ದೇಹಿಗಳು ಮತ್ತು ಯೆಹೋವನ ಆರಾಧಕರೋಪಾದಿ ಕಷ್ಟ ಮತ್ತು ಹಿಂಸೆಯು ನಮಗೊದಗುವ ಸಂಭವ ಉಂಟು.—1 ಪೇತ್ರ 5:6-11.
ವಿವಾಹವು ಮಾನ್ಯವಾಗಿರಬೇಕು.
13. ಇಬ್ರಿಯ 13:4 ರಲ್ಲಿ ಅಪೊಸ್ತಲ ಪೌಲನು ಹೇಳಿದ ಮಾತುಗಳ ತಾತ್ಪರ್ಯವೇನು?
13 ಕ್ರಿಸ್ತನ ಮಾದರಿಯನ್ನು ಅನುಸರಿಸುವದು ಮತ್ತು ‘ಪವಿತ್ರ ಸೇವೆಯನ್ನು ಯೆಹೋವನಿಗೆ ಸಲ್ಲಿಸುವದು’ ಇತರಿಗಾಗಿ ನಮ್ಮಲ್ಲಿರುವ ಚಿಂತೆಯನ್ನು ಅನೇಕ ವಿಧಗಳಲ್ಲಿ ಪ್ರಭಾವಿಸಬೇಕು. “ನೀವೂ ಸಹಾ ಇನ್ನೂ ದೇಹದಲ್ಲೀ ಇದ್ದೀರಿ” ಎಂದು ಹೇಳಿಯಾದ ಮೇಲೆ ಅಪೊಸ್ತಲ ಪೌಲನು ಒಂದು ದೈಹಿಕವಾದ ಅಥವಾ ಶಾರೀರಿಕ ಸಂಬಂಧವನ್ನು, ಇತರರಿಗೆ ಯೋಗ್ಯ ಆದರವನ್ನು ತೋರಿಸಲಾಗುವ ಒಂದು ವೈಶಿಷ್ಟ್ಯವನ್ನು ತಿಳಿಸುತ್ತಾನೆ. (ಇಬ್ರಿಯ 13:3) ಹಿಬ್ರೂ ಕ್ರೈಸ್ತರಿಗೆ ಅವನು ಈ ಉಪದೇಶವನ್ನು ಕೊಟ್ಟನು. “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು. ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿ. 13:4) ಈ ಸೂಚನೆಯು ಅದೇಷ್ಟು ಯುಕ್ತವಾಗಿತ್ತು. ಯಾಕೆಂದರೆ ರೋಮನ್ ಸಾಮ್ರಾಜ್ಯದಲ್ಲಿ ಲೈಂಗಿಕ ಅನೈತಿಕತೆಯು ಬಹಳವಾಗಿ ಹಬ್ಬಿತ್ತು! ಇಂದು ಲೋಕದಲ್ಲಿರುವ ತುಚ್ಛ ನೈತಿಕ ಮಟ್ಟಗಳ ನೋಟದಲ್ಲಿ ಮತ್ತು ಲೈಂಗಿಕ ಅನೈತಿಕತೆಯಿಂದಾಗಿ ಪ್ರತಿ ವರ್ಷ ಸಾವಿರಾರು ಮಂದಿ ಸಭೆಯಿಂದ ಬಹಿಷ್ಕೃತರಾಗುವ ನಿಜತ್ವದಲ್ಲಿ ಇಂದಿನ ಕ್ರೈಸ್ತರು ಸಹಾ ಈ ಮಾತುಗಳಿಗೆ ಕಿವಿಗೊಡುವ ಅಗತ್ಯವಿದೆ.
14. ವಿವಾಹವು ಮಾನ್ಯವಾದದ್ದೆಂದು ನೀವು ಹೇಳುವುದೇಕೆ?
14 ವಿವಾಹವನ್ನು ಅತ್ಯಂತ ಮಾನ್ಯವಾಗಿ ಎಣಿಸಿದ್ದ ಜನರಲ್ಲಿ ಪೌಲನ ಕಾಲದ ಎಸ್ಸಿನಿಯರು ಸೇರಿದ್ದರು. ಅವರು ಸಾಮಾನ್ಯವಾಗಿ ಅವಿವಾಹಿತರು: ಇಂದಿನ ಕೆಲವು ಧರ್ಮಗುರುಗಳಂತೆ ಬ್ರಹ್ಮಚರ್ಯೆಯು ದಾಂಪತ್ಯಕ್ಕಿಂತ ಪರಿಶುದ್ಧವಾದದ್ದು ಎಂಬ ತಪ್ಪು ಗ್ರಹಿಕೆಯುಳ್ಳವರು. ಆದರೆ ಪೌಲನು ಇಬ್ರಿಯ ಕ್ರೈಸ್ತರಿಗೆ ಏನು ಹೇಳಿದನೋ ಅದರಿಂದ ಸ್ಪಷ್ಟವಾಗಿ ಮದುವೆಯು ಮಾನ್ಯವಾದದ್ದೆಂದು ಅವನು ತೋರಿಸಿದ್ದಾನೆ. ನವೂಮಿಯು ತನ್ನ ವಿಧವೆ ಸೊಸೆಯಂದಿರಾದ ರೂತ್ ಮತ್ತು ಒರ್ಫಾರಿಗೆ ಮದುವೆಯನ್ನು ಹಾರೈಸಿದಾಗ ಅದರ ಕಡೆಗೆ ಉಚ್ಛ ಆದರವನ್ನು ತೋರಿಸಿದ್ದಳು: “ನೀವಿಬ್ಬರು ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು ಅನುಗ್ರಹಿಸಲಿ” (ರೂತಳು 1:9) ಬೇರೆ ಕಡೆಯಲ್ಲಿ ಪೌಲನು ತಾನೇ ತಿಳಿಸಿದ್ದೇನೆಂದರೆ “ಮುಂದಣ ದಿನಗಳಲ್ಲಿ ಕೆಲವರು ಮದುವೆಯಾಗಬಾರದೆಂತ ಹೇಳಿ ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರು” ಎಂಬುದಾಗಿ.—1 ತಿಮೊಥಿ 4:1-5.
15. ಇಬ್ರಿಯ 13:4 ರಲ್ಲಿ ಯಾರನ್ನು ಜಾರರು ಮತ್ತು ವ್ಯಭಿಚಾರಿಗಳಾಗಿ ನಿರ್ದೇಶಿಸಲಾಗಿದೆ ಮತ್ತು ದೇವರು ಅವರಿಗೆ ತೀರ್ಪನ್ನು ಮಾಡುವದು ಹೇಗೆ?
15 ಒಮ್ಮೆ ನಿಯಮಾಧೀನರಾಗಿದ್ದು ಈಗ ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟ ಇಬ್ರಿಯರಿಗೆ “ವ್ಯಭಿಚಾರ ಮಾಡಬಾರದು” ಎಂಬಾಜ್ಞೆಯ ಪರಿಚಯವಿತ್ತು. (ವಿಮೋಚನಾಕಾಂಡ 20:14) ಆದರೂ ಅವರು ಒಂದು ಅನೈತಿಕ ಲೋಕದಲ್ಲಿರುವದರಿಂದ ಈ ಎಚ್ಚರಿಕೆಯ ಅಗತ್ಯವಿತ್ತು. “ಗಂಡ ಹೆಂಡಿರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯ ತೀರಿಸುವನೆಂದು ತಿಳುಕೊಳ್ಳಿರಿ.” ಜಾರರಲ್ಲಿ ಲೈಂಗಿಕ ಸಂಭೋಗವನ್ನು ನಡಿಸುವ ಅವಿವಾಹಿತ ವ್ಯಕ್ತಿಗಳು ಸೇರಿರುತ್ತಾರೆ. ವ್ಯಭಿಚಾರಿಗಳು ಮುಖ್ಯವಾಗಿ ಯಾರೆಂದರೆ, ತಮ್ಮ ವಿವಾಹದ ಜತೆಯಲ್ಲದವರೊಂದಿಗೆ ಸಂಗಮ ಮಾಡಿ ತಮ್ಮ ಸ್ವಂತ ದಾಂಪತ್ಯ ಸಂಬಂಧವನ್ನು ಕಲಂಕಿಸುವವರೇ. ಪಶ್ಚಾತ್ತಾಪ ಪಡದ ಜಾರರು ಮತ್ತು ವ್ಯಭಿಚಾರಿಗಳು ದೇವರ ಪ್ರತಿಕೂಲ ತೀರ್ಪಿಗೆ ಅರ್ಹರಾಗಿರುವದರಿಂದ, ಸ್ವರ್ಗೀಯ ಹೊಸ ಯೆರೂಸಲೇಮಿಗೆ ಅವರು ಬಾಧ್ಯರಾಗುವದೂ ಇಲ್ಲ ಅಥವಾ ರಾಜ್ಯಾಡಳಿತೆಯ ಕೆಳಗೆ ಭೂಮಿಯಲ್ಲಿ ಅನಂತ ಜೀವನವನ್ನು ಅನುಭವಿಸುವದೂ ಇಲ್ಲ. (ಪ್ರಕಟನೆ 21:1,2,8: 1ಕೊರಿಂಥ 6:9,10) ವಿವಾಹ ಸಂಬಂಧವನ್ನು ಕಲಂಕಿಸಬಾರದೆಂಬ ಈ ಎಚ್ಚರಿಕೆಯು ಮದುವೆಯೊಳಗೆ ಯೋಗ್ಯ ಶಾರೀರಿಕ ಸಂಬಂಧದಲ್ಲಿ ಯಾವುದೇ ಅಶುದ್ಧತೆ ಇರದಾಗ್ಯೂ ಕಲಂಕಿತ ಲೈಂಗಿಕ ಪದ್ಧತಿಗಳಿಂದ ದೂರವಿರುವಂತೆ ವಿವಾಹಿತ ಕ್ರೈಸ್ತರನ್ನು ಎಚ್ಚರಿಸುತ್ತದೆ.—ವಾಚ್ಟವ-ಮಾರ್ಚ್ 15, 1983, ಪುಟ 27-31 ನೋಡಿ.
ಈಗಿರುವ ವಿಷಯಗಳಲ್ಲಿ ಸಂತೃಪ್ತಿಯು
16, 17. ಇಬ್ರಿಯ 13:5 ರಲ್ಲಿ ಏನನ್ನು ಹೇಳಲಾಗಿದೆ ಮತ್ತು ಇಬ್ರಿಯರಿಗೆ ಈ ಸೂಚನೆಯು ಅಗತ್ಯವಿದ್ದೇಕೆ?
16 ನಾವು ನಮ್ಮ ಮಾದರಿಯಾದಂತನನ್ನು ಅನುಸರಿಸುವುದಾದರೆ ಮತ್ತು ಯೆಹೋವನು ನಮ್ಮ ಸಹಾಯಕನೆಂಬ ಭರವಸದಿಂದ ಆತನಿಗೆ “ಪವಿತ್ರ ಸೇವೆಯನ್ನು ದೇವಭಕ್ತಿಯಿಂದಲೂ ಭಯದಿಂದಲೂ ಸಲ್ಲಿಸುವುದಾದರೆ” ನಾವು ಸಂತೃಪ್ತಿಯನ್ನು ಕಂಡುಕೊಳ್ಳುವೆವು. ಪ್ರಾಪಂಚಿಕ ಬೆನ್ನಟ್ಟುವಿಕೆಗಳಲ್ಲಿ ಆಳವಾಗಿ ಒಳಗೂಡುವದು ಒಂದು ಶೋಧನೆಯಾಗಿದೆ. ಆದರೆ ಕ್ರೈಸ್ತರು ಅದಕ್ಕೆ ಬಲಿಬೀಳಬಾರದು. ಇಬ್ರಿಯರಿಗೆ ಹೇಳಲ್ಪಟ್ಟದ್ದು:“ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.” (ಇಬ್ರಿ. 13:5) ಇಬ್ರಿಯರಿಗೆ ಈ ಸೂಚನೆಯು ಯಾಕೆ ಬೇಕಿತ್ತು?
17 ಪ್ರಾಯಶಃ ಇಬ್ರಿಯರು ಹಣದ ವಿಷಯವಾಗಿ ಅತಿರೇಕ ಚಿಂತೆಯನ್ನು ತೋರಿಸಿದ್ದಿರಬಹುದು. ಯಾಕೆಂದರೆ ಕೈಸರ ಕ್ಲಾಡಿಯಸನ ಆಳಿಕೆಯಲ್ಲಿ (ಸಾ.ಶ.41-54) ಸಂಭವಿಸಿದ್ದ “ದೊಡ್ಡ ಕ್ಷಾಮ”ವು ನೆನಪಿಗೆ ಬಂದಿರಬೇಕು. ಆ ಕ್ಷಾಮವು ಎಷ್ಟು ಕೆಟ್ಟದ್ದಾಗಿತೆಂದರೆ ಬೇರೆ ಕಡೆಗಳಲ್ಲಿದ್ದ ಕ್ರೈಸ್ತರು ಯೂದಾಯದ ತಮ್ಮ ಸಹೋದರರಿಗಾಗಿ ಪರಿಹಾರ ನಿಧಿಗಳನ್ನು ಕಳುಹಿಸಿದ್ದರು. (ಅಪೊಸ್ತಲರ ಕೃತ್ಯ 11:28,29) ಯೆಹೂದಿ ಇತಿಹಾಸಕಾರ ಜೋಸೀಫಗನುಸಾರ ಆ ಕ್ಷಾಮವು ಮೂರು ವರ್ಷಕ್ಕಿಂತ ಹೆಚ್ಚು ಸಮಯ ನೆಲೆಸಿತ್ತೆಂದೂ, ಯೂದಾಯ ಮತ್ತು ಯೆರೂಸಲೇಮಲ್ಲಿ ಕಡು ಬಡತನವುಂಟಾಗಿತ್ತೆಂದೂ ತಿಳಿದುಬರುತ್ತದೆ.—ಎಂಟಿಕ್ವಿಟೀಸ್ ಆಫ್ ದಿ ಜ್ಯೂಸ್ XX,2. 5:5,2.
18. ಇಬ್ರಿಯ 13:5 ರ ಸೂಚನೆಯು ನಮಗೆ ಯಾವ ಪಾಠವನ್ನು ಒದಗಿಸುತ್ತದೆ?
18 ಇಲ್ಲಿ ನಮಗೊಂದು ಪಾಠವಿದೆಯೇ? ಹೌದು, ನಾವೆಷ್ಟು ಬಡವರಾಗಿರಲಿ, ಹಣವನ್ನು ಪ್ರೀತಿಸುವವರಾಗಲಿ ಅದರ ಕುರಿತಾಗಿ ಅತಿರೇಕ ಚಿಂತಿಸುವವರಾಗಲಿ ಆಗಿರಬಾರದು. ಪ್ರಾಪಂಚಿಕ ಸುರಕ್ಷೆಯ ಕುರಿತು ಅತಿಯಾಗಿ ಚಿಂತಿಸುವವರಾಗುವ ಬದಲಿಗೆ, ಪರರ ವಸ್ತುಗಳನ್ನು ಆಶಿಸುವವರಾಗುವಷ್ಟರ ಮಟ್ಟಿಗೂ ಚಿಂತೆಮಾಡುವ ಬದಲಿಗೆ ನಾವು “ನಮಗಿರುವವುಗಳಲ್ಲಿ ತೃಪ್ತರಾಗಿರ”ಬೇಕು. ಯೇಸುವಂದದ್ದು “ಹೀಗಿರಲಾಗಿ, ಮೊದಲು ದೇವರ ರಾಜ್ಯವನ್ನೂ ಮತ್ತು (ದೇವರ) ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವು ನಿಮಗೆ ದೊರಕುವವು.”(ಮತ್ತಾಯ 6:25-34) “ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗುವ” ಕಡೆಗೆ ನಮ್ಮನ್ನು ಕೇಂದ್ರೀಕರಿಸಬೇಕೆಂದೂ ಆತನು ಹೇಳಿದ್ದಾನೆ. ಯಾಕೆಂದರೆ “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ.”(ಲೂಕ 12:13-21) ಹಣದಾಸೆಯು ನಮ್ಮ ಆತ್ಮಿಕತೆಗೆ ಹಾನಿಕರವಾಗಿದ್ದರೆ, ಪೌಲನು ಇಬ್ರಿಯರಿಗೆ ಕೊಟ್ಟ ಸೂಚನೆಯನ್ನು ನಾವು ಪಾಲಿಸುವವರಾಗೋಣ ಮತ್ತು “ಸಂತುಷ್ಟಿ ಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ” ಎಂಬುದನ್ನೂ ನೆನಪಿನಲ್ಲಿಡುವ.—1 ತಿಮೊಥಿ 6:6-8.
ಯೆಹೋವನಲ್ಲಿ ಭರವಸವಿಡಿ
19. ದೇವರು ಯೆಹೋಶುವನಿಗೆ ಯಾವ ಆಶ್ವಾಸನೆಯನ್ನಿತ್ತನು ಮತ್ತು ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು?
19 ‘ಪವಿತ್ರ ಸೇವೆಯನ್ನು ದೇವಭಕ್ತಿಯಿಂದಲೂ ಭಯದಿಂದಲೂ ಸಲ್ಲಿಸಲು’ ಪ್ರಯತ್ನಿಸುವ ಯೇಸುವಿನ ಹಿಂಬಾಲಕರಾದ ನಾವು ನಮ್ಮ ಭರವಸವನ್ನು ಹಣದ ಮೇಲಲ್ಲ. ಸ್ವರ್ಗೀಯ ತಂದೆಯಾದ ಯೆಹೋವನ ಮೇಲೆ ಇಡತಕ್ಕದ್ದು. ಆತನ ಸಹಾಯವು ನಮಗೆ ಅತ್ಯಾವಶ್ಯಕ. ನಾವು ಯಾವುದೇ ಸಮಸ್ಯೆಯನ್ನು ಎದುರಿಸಲಿ, ಆತನ ಆಶ್ವಾಸನೆಯನ್ನು ನಾವು ಸದಾ ಮನಸ್ಸಿನಲ್ಲಿಡಬೇಕು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ಇಲ್ಲಿ ಪೌಲನು ಯೆಹೋವನಿಗೆ ದೇವರಂದ ಮಾತುಗಳನ್ನು ಪ್ರಸ್ತಾಪಿಸಿರುತ್ತಾನೆ: “ನಿನ್ನನ್ನು ಬಿಡುವದಿಲ್ಲ, ತೊರೆಯುವದಿಲ್ಲ.” (ಯೆಹೋಶುವ 1:5; ಧರ್ಮೋಪದೇಶಕಾಂಡ 31:6,8 ಹೋಲಿಸಿ) ಯೆಹೋವನು ಯೆಹೋಶುವನ್ನೆಂದೂ ತೊರೆದು ಬಿಡಲಿಲ್ಲ ಮತ್ತು ನಾವಾತನಲ್ಲಿ ಭರವಸವಿಟ್ಟರೆ ನಮ್ಮನ್ನೂ ಕೈಬಿಡಲಾರನು.
20. (ಎ) 1990ರ ವಾರ್ಷಿಕ ವಚನವು ಯಾವುದು? (ಬಿ) ನಾವು ಭಯಪಡದೆ ಏನನ್ನು ಮಾಡುತ್ತಾ ಮುಂದರಿಯಬೇಕು?
20 ದೇವರ ಎಂದೂ ತಪ್ಪದ ಸಹಾಯವು ಮುಂದಣ ತಿಂಗಳುಗಳಲ್ಲಿ ಯೆಹೋವನ ಸಾಕ್ಷಿಗಳ ನಡುವೆ ಒತ್ತಿಹೇಳಲ್ಪಡಲಿದೆ ಯಾಕೆಂದರೆ 1990ರ ಅವರ ವಾರ್ಷಿಕ ವಚನವೇ ಅದಾಗಿದೆ: “ಯೆಹೋವನು ನನ್ನ ಸಹಾಯಕನು ಎಂದು ಧೈರ್ಯವಾಗಿ ಹೇಳಿರಿ.” ಈ ಮಾತುಗಳು ಇಬ್ರಿಯ 13:6ರಲ್ಲಿವೆ ಮತ್ತು ಪೌಲನು ಇದನ್ನು ಕೀರ್ತನೆಗಾರರಿಂದ ಉದ್ಧರಿಸಿ ಇಬ್ರಿಯರಿಗೆ ಅಂದದ್ದು: “ಆದುದರಿಂದ ಯೆಹೋವನು ನನ್ನ ಸಹಾಯಕನು; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲಿವು” (ಕೀರ್ತನೆ 118:6) ಹಿಂಸಿಸಲ್ಪಟ್ಟಾಗ್ಯೂ ನಾವು ಭಯಪಡೆವು ಯಾಕೆಂದರೆ ದೇವರು ಅನುಮತಿಸುವುದಕ್ಕಿಂತ ಹೆಚ್ಚೇನನ್ನೂ ಮನುಷ್ಯರು ನಮಗೆ ಮಾಡಶಕ್ತರಲ್ಲ. (ಕೀರ್ತನೆ 27:1) ಸಮಗ್ರತೆ ಪಾಲಕರೋಪಾದಿ ಒಂದುವೇಳೆ ನಾವು ಸಾಯಬೇಕಾದರೂ, ನಮಗೆ ಪುನರುತ್ಥಾನದ ನಿರೀಕ್ಷೆಯಿದೆ. (ಅಪೊಸ್ತಲರ ಕೃತ್ಯ 24:15) ಆದ್ದರಿಂದ, ಯೆಹೋವನು ನಮ್ಮ ಸಹಾಯಕನು ಎಂಬ ಭರವಸವುಳ್ಳವರಾಗಿ ‘ಪವಿತ್ರಸೇವೆಯನ್ನು ದೇವಭಕ್ತಿಯಿಂದಲೂ ಭಯದಿಂದಲೂ ಸಲ್ಲಿಸುವದರಲ್ಲಿ’ ನಮ್ಮ ಮಾದರಿಯಾದಾತನನ್ನು ಅನುಸರಿಸುತ್ತಾ ಮುಂದರಿಯೋಣ.
ನೀವು ಹೇಗೆ ಪ್ರತಿಕ್ರಿಯಿಸುವಿರಿ
▫ ಇಬ್ರಿಯ ಕ್ರೈಸ್ತರಿಗೆ ವಿಶೇಷವಾಗಿ ಯೆಹೋವನ ಸಹಾಯ ಬೇಕಿತ್ತೇಕೆ?
▫ ತಮ್ಮ ‘ಸಹೋದರ ಪ್ರೀತಿಯ ನೆಲೆಯಾಗಿರು’ ವಂತೆ ಯೆಹೋವನ ಸಾಕ್ಷಿಗಳು ಬಿಡುವದು ಹೇಗೆ?
▫ ಅತಿಥಿ ಸತ್ಕಾರ ಯಾಕೆ ಮಾಡಬೇಕು?
▫ ಬಾಧೆಪಡುವವರಾದ ನಮ್ಮ ಜತೆ ವಿಶ್ವಾಸಿಗಳನ್ನು ನಾವು ನೆನಪಿಸುತ್ತೇವೆಂದು ಹೇಗೆ ತೋರಿಸಬಹುದು?
▫ ಮದುವೆಯನ್ನು ಮಾನ್ಯವಾಗಿಡಬೇಕು ಏಕೆ?