ಯೆಹೋವನು ಮೆಚ್ಚುವ ಯಜ್ಞಗಳನ್ನು ಅರ್ಪಿಸಿರಿ
“ಆದ್ದರಿಂದ ಆತನ (ಯೇಸು ಕ್ರಿಸ್ತನ) ಮೂಲಕವಾಗಿಯೇ ದೇವರಿಗೆ ಸೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ; ಆತನ ನಾಮದ ಬಹಿರಂಗ ಘೋಷಣೆ ಮಾಡುವ ತುಟೀಫಲವೇ ಆ ಯಜ್ಞವು.”—ಇಬ್ರಿಯರಿಗೆ 13:15,
1. ಪಾಪಿಗಳಾದ ಇಸ್ರಾಯೇಲ್ಯರು ಏನನ್ನು ಮಾಡುವಂತೆ ಯೆಹೋವನು ಪ್ರೇರೇಪಿಸಿದನು?
ಯಾರು ಯೆಹೋವನಿಗೆ ಸ್ವೀಕರಣೀಯವಾದ ಯಜ್ಞಗಳನ್ನು ಅರ್ಪಿಸುತ್ತಾರೋ ಅವರಿಗೆ ಆತನು ಸಹಾಯಕನಾಗಿದ್ದಾನೆ. ಆದ್ದರಿಂದ ಯಾರು ಒಮ್ಮೆ ಪಶುಯಜ್ಞಗಳನ್ನು ಅರ್ಪಿಸುತ್ತಿದ್ದಾರೋ ಆ ಇಸ್ರಾಯೇಲ್ಯರ ಮೇಲೆ ಆತನ ಅನುಗ್ರಹವು ನೆಲೆಸಿತ್ತು. ಆದರೆ ಅವರು ಪದೇ ಪದೇ ಪಾಪಮಾಡುತ್ತಾ ಹೋದಾಗ ಏನು ಸಂಭವಿಸಿತು? ಪ್ರವಾದಿಯಾದ ಹೋಶೆಯನ ಮೂಲಕ ಅವರನ್ನು ಪ್ರೇರೇಪಿಸಿದ್ದು:“ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನನ್ನು ಸೇರಿಕೋ; ನಿನ್ನ ಅಪರಾಧದಿಂದಲೇ ನೀನು ಮುಗ್ಗರಿಸಿಬಿದ್ದಿ. [ಪಶ್ಚಾತ್ತಾಪದ] ಮಾತುಗಳನ್ನು ತೆಗೆದುಕೊಂಡು ಯೆಹೋವನ ಬಳಿಗೆ ಹಿಂದಿರುಗಿ ಆತನಿಗೆ ಹೇಳಿರಿ— ‘ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ ನಮ್ಮಲ್ಲಿನ ಒಳ್ಳೆಯದನ್ನು ಅಂಗೀಕರಿಸು; ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು.’ ”—ಹೋಶೇಯ 14:1,2.
2. “ತುಟಿಗಳ ಎಳೆಯ ಹೋರಿಗಳು” ಎಂದರೇನು, ಮತ್ತು ಅಪೊಸ್ತಲ ಪೌಲನು ಹೇಗೆ ಹೋಶೆಯನ ಪ್ರವಾದನೆಗೆ ನಿರ್ದೇಶಿಸಿ ಬರೆದನು?
2 ಹೀಗೆ ದೇವರ ಪ್ರಾಚೀನ ಜನರು ಯೆಹೋವ ದೇವರಿಗೆ ಅವರ ತುಟಿಗಳ ಎಳೇ ಹೋರಿಗಳನ್ನು ಸಮರ್ಪಿಸುವಂತೆ ಪ್ರೇರೇಪಿಸಲ್ಪಟ್ಟಿದ್ದರೆಂಬುದು ಸ್ಪಷ್ಟವಾಗುತ್ತದೆ. ಅವೇನಾಗಿದ್ದವು? ಪ್ರಾಮಾಣಿಕವಾದ ಸ್ತುತಿ ಯಜ್ಞಗಳೇ ಅವಾಗಿದ್ದವು! ಆ ಪ್ರವಾದನೆಗೆ ನಿರ್ದೇಶಿಸುತ್ತಾ ಅಪೊಸ್ತಲ ಪೌಲನು “ದೇವರಿಗೆ ಸ್ತೋತ್ರ ಯಜ್ಞವನ್ನು ಅರ್ಪಿಸಿರಿ. ಆತನ ನಾಮದ ಬಹಿರಂಗ ಘೋಷಣೆ ಮಾಡುವ ತುಟೀ ಫಲವೇ ಆ ಯಜ್ಞವು” ಎಬುದಾಗಿ ಇಬ್ರಿಯ ಕ್ರೈಸ್ತರನ್ನು ಪ್ರೇರೇಪಿಸಿದನು. (ಇಬ್ರಿಯ 13:15) ಇಂದು ಅಂತಹ ಯಜ್ಞಗಳನ್ನು ಅರ್ಪಿಸುವಂತೆ ಯೆಹೋವನ ಸಾಕ್ಷಿಗಳಿಗೆ ಸಹಾಯ ಮಾಡುವದು?
“ಅವರ ನಂಬಿಕೆಯನ್ನು ಅನುಸರಿಸಿರಿ”
3. ಇಬ್ರಿಯ 13:7 ರಲ್ಲಿ ಅಪೊಸ್ತಲ ಪೌಲನು ಹೇಳಿದ ಮಾತುಗಳ ಸಾರವೇನು? ಯಾವ ಪ್ರಶ್ನೆಗಳೇಳುತ್ತವೆ?
3 ಇಬ್ರಿಯರಿಗೆ ಪೌಲನು ಕೊಟ್ಟ ಸೂಚನೆಯನ್ನು ಅನ್ವಯಿಸುವ ಮೂಲಕ ನಾವು ನಮ್ಮ ಮಹಾ ಸಹಾಯಕನಾದ ಯೆಹೋವ ದೇವರಿಗೆ ಸ್ವೀಕರಣೀಯವಾದ ಯಜ್ಞಗಳನ್ನು ಅರ್ಪಿಸ ಶಕ್ತರಾಗಿವೆವು. ಈ ಸೂಚನೆಯಲ್ಲಿ ಅಪೊಸ್ತಲ ಪೌಲನು ಬರೆದದ್ದು:“ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡಕೊಂಡರೆಂದು ಆಲೋಚಿಸಿ ಅವರ ನಂಬಿಕೆಯನ್ನು ಅನುಸರಿಸಿರಿ.” (ಇಬ್ರಿಯ 13:7)“ನಿಮ್ಮ ನಾಯಕರನ್ನು” ಅಥವಾ “ಆಡಳಿತ ಮಾಡುವವರನ್ನು ಜ್ಞಾಪಿಸಿಕೊಳ್ಳಿರಿ” ಎಂದು ಪೌಲನು ಹೇಳಿದಾಗ ಯಾರಿಗೆ ನಿರ್ದೇಶಿಸಿದ್ದಾನೆ?—ನ್ಯೂ ವರ್ಲ್ಡ್ ಟ್ರಾನ್ಸಲೇಶನ್ ರೆಫರನ್ಸ್ ಬೈಬಲ್, ಪಾದಟಿಪ್ಪಣಿ.
4. (ಎ) ಗ್ರೀಕ್ ಶಾಸ್ತ್ರವಚನಕ್ಕನುಸಾರ ಯಾರು “ನಾಯಕರಾಗಿರುತ್ತಾರೋ” ಅವರೇನು ಮಾಡುತ್ತಾರೆ? (ಬಿ) ಯೆಹೋವನ ಸಾಕ್ಷಿಗಳ ನಡುವೆ “ನಾಯಕರಾಗಿರುವವರು” ಯಾರು?
4 ಪೌಲನು ನಾಯಕರಾಗಿ ಇರುವವರನ್ನು ಅಥವಾ “ಆಡಳಿತ ಮಾಡುವವರನ್ನು” ಸೂಚಿಸಿದ್ದಾನೆ. (7, 17, 24ನೇ ವಚನ) “ಗವರ್ನ್” ಎಂಬ ಇಂಗ್ಲೀಷ್ ಪದವು “ಹಡಗ ನಡೆಸು, ಮಾರ್ಗದರ್ಶಿಸು, ಆಳು” ಎಂಬರ್ಥಗಳನ್ನು ಕೊಡುವ ಗ್ರೀಕ್ ಶಬ್ದ “ಕೈ-ಬರ-ನಾವೂ” ದ ಲ್ಯಾಟೀನ್ ರೂಪವು. ಕ್ರೈಸ್ತ ಹಿರಿಯರು ತಮ್ಮ “ಮಾರ್ಗದರ್ಶಿಸುವ ಸಾಮರ್ಥಗಳನ್ನು” (ಗ್ರೀಕ್, ಕೈ-ಬರ್-ನೆ-ಸೈಸ್) ಉಪಯೋಗಿಸುವ ಮೂಲಕ ಸ್ಥಳಿಕ ಸಭೆಗಳಲ್ಲಿ ನಾಯಕತ್ವ ಮತ್ತು ಮಾರ್ಗದರ್ಶನೆಯನ್ನು ಒದಗಿಸುತ್ತಾರೆ. (1ಕೊರಿಂಥ 12:28) ಆದರೆ ಎಲ್ಲಾ ಸಭೆಗಳಿಗೆ ಮಾರ್ಗದರ್ಶನ ಮತ್ತು ಸೂಚನೆ ಕೊಡಲು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಇತರ ಹಿರಿಯರು ಒಂದು ಮಂಡಲಿಯಾಗಿ ಕಾರ್ಯ ನಡಿಸಿದರು. (ಅಪೊಸ್ತಲರ ಕೃತ್ಯ 15:1,2, 27-29) ಆದ್ದರಿಂದ, ಇಂದು ಭೂಲೋಕದಲ್ಲಿಲ್ಲೂ ಇರುವ ಯೆಹೋವನ ಸಾಕ್ಷಿಗಳಿಗೆ ಆತ್ಮಿಕ ಮೇಲ್ವಿಚಾರವನ್ನು ಹಿರಿಯರ ಒಂದು ಆಡಳಿತ ಮಂಡಲಿಯು ಒದಗಿಸುತ್ತದೆ.
5. ಸಭಾ ಹಿರಿಯರಿಗಾಗಿ ಮತ್ತು ಆಡಳಿತ ಮಂಡಳಿಯ ಸದಸ್ಯರಿಗಾಗಿ ಏಕೆ ಮತ್ತು ಹೇಗೆ ನಾವು ಪ್ರಾರ್ಥಿಸಬೇಕು?
5 ಸ್ಥಳಿಕ ಹಿರಿಯರು ಮತ್ತು ಆಡಳಿತಾ ಮಂಡಳಿಯ ಸದಸ್ಯರು ನಾಯಕತ್ವವನ್ನು ವಹಿಸುತ್ತಾರೆ. ಆದ್ದರಿಂದ, ನಾವವರನ್ನು ಗೌರವಿಸಬೇಕು ಮತ್ತು ಸಭೆಯ ಆಡಳಿತವನ್ನು ಮಾಡಲು ಬೇಕಾದ ವಿವೇಕವನ್ನು ದೇವರು ಅವರಿಗೆ ಕೊಡುವಂತೆ ಪ್ರಾರ್ಥಿಸಬೇಕು. (ಎಫೆಸ 1:15-17 ಹೋಲಿಸಿ) “ನಿಮಗೆ ದೇವರ ವಾಕ್ಯವನ್ನು ತಿಳಿಸಿದ” ಯಾವನೇ ವ್ಯಕ್ತಿಯನ್ನು ಜ್ಞಾಪಕಮಾಡುವದೆಷ್ಟು ಉಚಿತವಾಗಿದೆ. ತಿಮೊಥಿಯು ಅವನ ತಾಯಿ ಮತ್ತು ಅಜ್ಜಿಯಿಂದ ಮಾತ್ರವಲ್ಲ, ಪೌಲ ಮತ್ತು ಇತರರಿಂದಲೂ ಅನಂತರ ಕಲಿಸಲ್ಪಟ್ಟನು. (2 ತಿಮೋಥಿ 1:5,6; 3:14) ಹೀಗೆ ನಾಯಕತ್ವ ವಹಿಸಿದ ಅವರು ಯಾವ ರೀತಿಯಲ್ಲಿ ನಡಕೊಂಡರೆಂದು ಆಲೋಚಿಸಿ ಅವರ ನಂಬಿಕೆಯನ್ನು ಅನುಸರಿಸಲು ತಿಮೊಥಿಯು ಶಕ್ತನಾದನು.
6. ಯಾರ ನಂಬಿಕೆಯನ್ನು ನಾವು ಅನುಸರಿಸಬೇಕು, ಆದರೆ ನಾವು ಹಿಂಬಾಲಿಸುವುದು ಯಾರನ್ನು?
6 ಹೇಬಲ, ನೋಹ, ಅಬ್ರಹಾಮ, ಸಾರ, ರಾಹಬ್ ಮತ್ತು ಮೋಶೆಯಂತಹ ಜನರು ನಂಬಿಕೆಯನ್ನು ತೋರಿಸಿದ್ದರು. (ಇಬ್ರಿಯ 11:1-40) ಹಿಗೆ ನಾವು ನಂಬಿಕೆಯನ್ನು ಅನುಮಾನವಿಲ್ಲದೆ ಅನುಸರಿಸಶಕ್ತರು. ಯಾಕೆಂದರೆ ಅವರು ಯೆಹೋವನಿಗೆ ನಿಷ್ಠಾವಂತರಾಗಿ ಸತ್ತರು. ಆದರೂ ಈಗ ನಮ್ಮಲ್ಲಿ ನಾಯಕತ್ವ ವಹಿಸುತ್ತಿರುವ ನಿಷ್ಠಾವಂತ ಪುರುಷರ “ನಂಬಿಕೆಯನ್ನು” ನಾವು ಅನುಸರಿಸ ಸಾಧ್ಯವಿದೆ. ನಾವು ಅಸಂಪೂರ್ಣ ಮಾನವರನ್ನು ಅನುಸರಿಸುವುದಿಲ್ಲ ನಿಶ್ಚಯ. ಯಾಕೆಂದರೆ ನಾವು ದೃಷ್ಟಿಯಿಡುವುದು ಕ್ರಿಸ್ತನಲ್ಲಿಯೇ. ಬೈಬಲ್ ಭಾಷಾಂತರಗಾರ ಎಡ್ಗರ್ ಜೆ. ಗುಡ್ಸ್ಪೀಡ್ ಹೇಳಿದ್ದು: “ಪುರಾತನ ವೀರರು ವಿಶ್ವಾಸಿ ಜನರ ಆದರ್ಶಗಳಲ್ಲ ಯಾಕೆದರೆ, ಕ್ರಿಸ್ತನಲ್ಲಿ ಅದಕ್ಕಿಂತ ಉತ್ತಮ ಮಾದರಿ ಅವರಿಗಿದೆ. . . ಕ್ರೈಸ್ತ ಓಟಗಾರನು ತನ್ನ ದೃಷ್ಟಿಯನ್ನು ಕ್ರಿಸ್ತನಲ್ಲೀ ಕೇಂದ್ರೀಕರಿಸಬೇಕು.” ಹೌದು, “ಕ್ರಿಸ್ತನು ನಿಮಗೋಸ್ಕರ ಬಾಧೆ ಅನುಭವಿಸಿ ತನ್ನ ಹೆಜ್ಜೆಜಾಡಿನಲ್ಲಿ ನಡೆಯಬೇಕೆಂದು ನಿಮಗೆ ಮಾದರಿಯನ್ನು ತೋರಿಸಿಹೋದನು.”—1ಪೇತ್ರ 2:21; ಇಬ್ರಿಯ 12:1-3)
7. ಯೇಸು ಕ್ರಿಸ್ತನಿಗೋಸ್ಕರ ಬಾಧೆಪಡುವ ಕಡೆಗೆ ನಮ್ಮ ಮನೋಭಾವವನ್ನು ಇಬ್ರಿಯ 13:8 ಹೇಗೆ ಪ್ರಭಾವಿಸಬೇಕು?
7 ದೇವರ ಕುಮಾರನ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ ಪೌಲನು ಮತ್ತೂ ಹೇಳಿದ್ದು:“ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.” (ಇಬ್ರಿ. 13:8)ಸ್ತೇಫನ ಮತ್ತು ಯಾಕೋಬರಂತಹ ನಂಬಿಗಸ್ತ ಸಾಕ್ಷಿಗಳು ಯೇಸುವಿನ ನಿಶ್ಚಲ ಮಾದರಿಯನ್ನು ಅನುಸರಿಸಿ ನಿಶ್ಚಲವಾದ ಸಮಗ್ರತೆಯನ್ನು ತೋರಿಸಿದ್ದಾರೆ. (ಅಪೊಸ್ತಲರ ಕೃತ್ಯ 7:1-60, 12:1,2) ಕ್ರಿಸ್ತನ ಹಿಂಬಾಲಕರೋಪಾದಿ ಅವರು ಸಾಯಲು ಸಿದ್ಧರಾಗಿದ್ದರಿಂದ ಅವರ ನಂಬಿಕೆಯು ನಮ್ಮ ಅನುಕರಣೆಗೆ ಅರ್ಹವಾಗಿರುತ್ತದೆ. ವರ್ತಮಾನ, ಭೂತ ಮತ್ತು ಭವಿಷತ್ಕಾಲಗಳಲ್ಲಿಯೂ ದೇವಜನರು ಶಿಷ್ಯರೋಪಾದಿ ಹುತಾತ್ಮತೆಯನ್ನು ಅನುಭವಿಸುವದರಿಂದ ದೂರ ಸರಿಯಲಾರರು.
ಸುಳ್ಳು ಬೋಧನೆಗಳನ್ನು ವಿಸರ್ಜಿಸಿರಿ
8. ಇಬ್ರಿಯ 13:9ರ ಪೌಲನ ಮಾತುಗಳ ತಾತ್ಪರ್ಯವನ್ನು ನೀವು ಹೇಗೆ ತಿಳಿಸುವಿರಿ?
8 ಯೇಸುವಿನ ವ್ಯಕ್ತಿತ್ವದ ಮತ್ತು ಬೋಧನೆಗಳಲ್ಲಿದ್ದ ನಿಶ್ಚಲತ್ವವು ನಮ್ಮನ್ನು ಆತನು ಮತ್ತು ಆತನ ಅಪೊಸ್ತಲರು ಕಲಿಸಿದ ವಿಷಯಗಳಲ್ಲಿ ಅಂಟಿಕೊಂಡಿರುವಂತೆ ಮಾಡಬೇಕು. ಇಬ್ರಿಯರಿಗೆ ಹೇಳಲ್ಪಟ್ಟದ್ದು:“ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ದೇವರ ಕೃಪೆಯನ್ನು ಆತುಕೊಂಡು ಮನಸ್ಸನ್ನು ದೃಢಮಾಡಿಕೊಳ್ಳುವದು ಉತ್ತಮವೇ; ಭೋಜನ ಪದಾರ್ಥಗಳನ್ನು ವಿಶೇಷಿಸುವದರಿಂದ ಅದು ಆಗುವದಿಲ್ಲ; ಹಾಗೆ ನಡೆದವರು ಏನೂ ಪ್ರಯೋಜನ ಹೊಂದಲಿಲ್ಲ.” ಇಬ್ರಿಯ 13:9.
9. ಇಬ್ರಿಯ ಕ್ರೈಸ್ತರಿಗೆ ಬರೆದ ತನ್ನ ಪತ್ರಿಕೆಯಲ್ಲಿ ಯಾವ ಶ್ರೇಷ್ಟ ವಿಷಯಗಳ ಕಡೆಗೆ ಪೌಲನು ಕೈತೋರಿಸಿದ್ದಾನೆ?
9 ಸೀನಾಯ ಬೆಟ್ಟದಲ್ಲಿ ನಿಯಮವು ಕೊಡಲ್ಪಟ್ಟ ಕೌತುಕದ ದೃಶ್ಯ ಮತ್ತು ದಾವೀದನ ಶಾಶ್ವತ ರಾಜತ್ವವೇ ಮುಂತಾದ ವಿಷಯಗಳ ಕಡೆಗೆ ಯೆಹೂದ್ಯರು ಕೈತೋರಿಸಿದ್ದರು. ಆದರೆ ನಿಯಮದೊಡಂಬಡಿಕೆಯ ಸ್ಥಾಪನೆಯು ಭಯಚಕಿತ ಸಂಗತಿಯಾಗಿದ್ದರೂ, ಹೊಸ ಒಡಂಬಡಿಕೆಯ ಪ್ರತಿಷ್ಟಾಪನೆಯು ಸಮಯದಲ್ಲಿ ಯೆಹೋವನ ಚಿಹ್ನೆಗಳು, ಅದ್ಭುತಗಳು, ಮಹತ್ಕಾರ್ಯಗಳು ಮತ್ತು ಪವಿತ್ರಾತ್ಮದ ಸುರಿಸುವಿಕೆಯೇ ಮುಂತಾದವುಗಳಿಂದ ಅತ್ಯಂತ ಪ್ರಬಲವಾದ ಸಾಕ್ಷಿಯನ್ನು ಕೊಟ್ಟನೆಂದು ಪೌಲನು ಇಬ್ರಿಯ ಕ್ರೈಸ್ತರಿಗೆ ತೋರಿಸಿದ್ದಾನೆ. (ಅಪೊಸ್ತಲರ ಕೃತ್ಯ 2:1-4; ಇಬ್ರಿಯ 2:2-4) ಕ್ರಿಸ್ತನ ಸ್ವರ್ಗೀಯ ರಾಜ್ಯವು ಎಂದೂ ಕದಲಲಾರದು. ಹೇಗೆ ಸಾ.ಶ.607ರಲ್ಲಿ ದಾವೀದನ ಕುಲದ ಅರಸರ ಐಹಿಕ ರಾಜ್ಯಪದವು ಕದಲಲಿಲ್ಲವೂ ಹಾಗೆಯೇ. (ಇಬ್ರಿಯ 1:8,9; 12:28) ಅದಲ್ಲದೆ, ಯೆಹೋವನು ಅಭಿಷಿಕ್ತ ಉಳಿಕೆಯವರನ್ನು ಸೀನಾಯ ಬೆಟ್ಟದಲ್ಲಿನ ವಿಸ್ಮಯಕರ ಪ್ರದರ್ಶನೆಗಿಂತ ಎಷ್ಟೋ ಹೆಚ್ಚು ಭಯಚಕಿತವಾದ ಒಂದು ವಿಷಯದ ಎದುರಲ್ಲಿ ಒಟ್ಟುಗೂಡಿಸುತ್ತಾನೆ. ಯಾಕೆದರೆ ಅವರು ಸ್ವರ್ಗೀಯ ಚೀಯೋನ್ ಬೆಟ್ಟಕ್ಕೆದುರಾಗಿ ನಿಂತಿರುವರು.—ಇಬ್ರಿಯ 12:18-27.
10. ಇಬ್ರಿಯ 13:9ಕ್ಕನುಸಾರ, ಹೃದಯಕ್ಕೆ ದೃಢತೆಯು ಸಿಗುವದು ಯಾತರಿಂದ?
10 ಆದ್ದರಿಂದ ಯೆಹೂದಿ ಮತದವರ “ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕದಂತೆ” ದೂರವಿರುವ ಅಗತ್ಯವು ಇಬ್ರಿಯ ಕ್ರೈಸ್ತರಿಗಿತ್ತು. (ಗಲಾತ್ಯ 5:1-6) ಸತ್ಯದಲ್ಲಿ ದೃಢರಾಗಿ ನಿಲ್ಲುವದಕ್ಕೆ ಅಂತಹ ಬೋಧನೆಗಳು ಬೇಡ, ಬದಲಾಗಿ “ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸ”ಸಾಧ್ಯವಿತ್ತು. ಕೆಲವರು ಭೋಜನಗಳು ಮತ್ತು ಅರ್ಪಣೆಗಳ ಕುರಿತಾಗಿ ವಾದಿಸಿದ್ದರೆಂಬುದು ವ್ಯಕ್ತ, ಯಾಕೆಂದರೆ ಹೃದಯದ ದೃಢತೆಯು “ಭೋಜನ ಪದಾರ್ಥಗಳಿಂದ ಆಗುವುದಿಲ್ಲ, ಜನ ಪದಾರ್ಥಗಳನ್ನು ವಿಶೇಷಿಸಿ ನಡೆದವರು ಏನೂ ಪ್ರಯೋಜನ ದೊರಕುವದು ದೇವ ಭಕ್ತಿ ಮತ್ತು ವಿಮೋಚನೆಗಾಗಿ ಗಣ್ಯತೆಯಿಂದಲೇ ಹೊರತು ನಿರ್ದಿಷ್ಟ ಆಹಾರ ಪದಾರ್ಥಗಳ ಭಕ್ಷಣೆ ಮತ್ತು ವಿಶಿಷ್ಟ ದಿನಗಳ ಆಚರಣೆಗೆ ಅತಿರೇಕ ಲಕ್ಷಕೊಡುವದರಿಂದಲ್ಲ. (ರೋಮಾಯ 14:5-9 ಅದಲ್ಲದೆ, ಯಾಜಕತ್ವದ ಅರ್ಪಣೆಗಳನ್ನು ಕ್ರಿಸ್ತನ ಯಜ್ಞವು ನಿಷ್ಫಲವಾಗಿ ಮಾಡಿತ್ತು.—ಇಬ್ರಿಯ 9:9-14; 10:5-10)
ದೇವರು ಮೆಚ್ಚುವ ಯಜ್ಞಗಳು
11. (ಎ) ಇಬ್ರಿಯ 13:10,11ರ ಪೌಲನ ಮಾತುಗಳ ತಾತ್ಪರ್ಯವೇನು? (ಬಿ)ಯಾವ ಸಾಂಕೇತಿಕ ಯಜ್ಞವೇದಿ ಕ್ರೈಸ್ತರಿಗಿದೆ?
11 ಲೇವ್ಯರಾದ ಯಾಜಕರು ಯಜ್ಞಾರ್ಪಣೆಯ ಪಶುಗಳ ಮಾಂಸವನ್ನು ತಿನ್ನುತ್ತಿದ್ದರು. ಆದರೆ ಪೌಲನು ಬರೆದದ್ದು: “ನಮಗೊಂದು ಯಜ್ಞವೇದಿ ಉಂಟು, ಈ ವೇದಿಯ ಪದಾರ್ಥಗಳನ್ನು ತಿನ್ನುವದಕ್ಕೆ ಯೆಹೂದ್ಯರ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ. ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರಸ್ಥಾನದೊಳಗೆ ಹೋಗಲು ಆ ಪಶುಗಳ ದೇಹಗಳು ಪಾಳೆಯದ ಆಚೆ (ಪ್ರಾಯಶ್ಚಿತ್ತದ ದಿನದಲ್ಲಿ) ಸುಡಲ್ಪಡುತ್ತವಲ್ಲಾ.” (ಇಬ್ರಿ. 13:10,11; ಯಾಜಕಕಾಂಡ 16:27; 1ಕೊರಿಂಥ 9:13) ಕ್ರೈಸ್ತರಿಗೆ ಒಂದು ಸಾಂಕೇತಿಕ ಯಜ್ಞವೇದಿಯಿದೆ. ಅದಾವುದೆಂದರೆ ಪಾಪಕ್ಕೆ ಪ್ರಾಯಶ್ಚಿತ್ತವಾದ ಮತ್ತು ಯೆಹೋವನ ಕ್ಷಮೆಯನ್ನೂ ನಿತ್ಯಜೀವದ ರಕ್ಷಣೆಯನ್ನೂ ತರುವ ಕ್ರಿಸ್ತನ ಬಲಿಯ ಆಧಾರದಲ್ಲಿ ದೇವರನ್ನು ಗೋಚರಿಸುವಂಥಾದ್ದೇ.
12. ಇಬ್ರಿಯ 13:12-14ರಲ್ಲಿ ಅಭಿಷಿಕ್ತ ಕ್ರೈಸ್ತರು ಏನು ಮಾಡುವಂತೆ ಪ್ರೇರೇಪಿಸಲ್ಪಟ್ಟರು?
12 ಪೌಲನು ಪ್ರಾಯಶ್ಚಿತ್ತದಿನಕ್ಕೆ ಸಾರೂಪ್ಯತೆಯನ್ನು ಒತ್ತಿಹೇಳುವದಲ್ಲ ಆದರೂ ಅವನು ಮತ್ತೂ ಅಂದದ್ದು: “ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಪಟ್ಟಣದ (ಯೆರೂಸಲೇಮಿನ) ಹೊರಗೆ ಸತ್ತನು.” ಅಲ್ಲಿ ಕ್ರಿಸ್ತನು ಮರಣಪಟ್ಟನು ಮತ್ತು ಪೂರ್ಣ ಪರಿಣಾಮಕಾರಿಯಾದ ಪಾಪ ಪರಿಹಾರಕ ಯಜ್ಞವನ್ನು ಒದಗಿಸಿಕೊಟ್ಟನು. ಜತೆ ಅಭಿಷಿಕ್ತ ಕ್ರೈಸ್ತರನ್ನು ಪೌಲನು ಪ್ರೇರೇಪಿಸಿದ್ದು,“ಆದುದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ ಪಾಳೆಯದ ಆಚೆ (ಕ್ರಿಸ್ತನ) ಬಳಿಗೆ ಹೊರಟುಹೋಗೋಣ. ಯಾಕಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ; ಇನ್ನು ಮುಂದೆ ಆಗುವ ಪಟ್ಟಣವನ್ನು ಹಾರೈಸುತ್ತಾ ಇದ್ದೇವೆ.”(ಇಬ್ರಿಯ 13:13,14; ಯಾಜಕಕಾಂಡ 16:10) ಯೇಸು ನಿಂದಿಸಲ್ಪಟ್ಟ ಪ್ರಕಾರವೇ ನಾವು ಸಹಾ ನಿಂದೆಗೊಳಗಾದರೂ ಯೆಹೋವನ ಸಾಕ್ಷಿಗಳೋಪಾಗಿ ಸ್ಥಿರವಾಗಿ ನಿಲ್ಲುವೆವು. ನಾವು “ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ” ನೂತನ ಲೋಕದ ಕಡೆಗೆ ದೃಷ್ಟಿಯಿಡುವವರಾಗಿ “ಈಗಿನ ಲೋಕ ವ್ಯವಸ್ಥೆಯ ಮಧ್ಯೆ ಸ್ವಸ್ಥಚಿತ್ತರೂ, ನೀತಿವಂತರೂ, ಭಕ್ತಿಯುಳ್ಳವರೂ ಆಗಿ ಜೀವಿಸಬಯಸುತ್ತೇವೆ.” (ತೀತ 2:11-14; 2ಪೇತ್ರ 3:13; 1ಯೋಹಾನ 2:15-17) ಮತ್ತು ನಮ್ಮೊಂದಿಗಿರುವ ಅಭಿಷಿಕ್ತಜನರು ಆ ಪರಲೋಕ ರಾಜ್ಯದ “ಪಟ್ಟಣ”ಕ್ಕಾಗಿ ಸದಾ ಹುಡುಕುವವರಾಗಿ ಇರುವರು.—ಇಬ್ರಿಯ 12:22.
13. ದೇವರು ಮೆಚ್ಚುವ ಯಜ್ಞಗಳಲ್ಲಿ ಕೇವಲ ಯಾವುದು ಮಾತ್ರವೇ ಒಳಗೂಡಿಲ್ಲ?
13 ಆ ಮೇಲೆ ಪೌಲನು ದೇವರು ಮೆಚ್ಚುವ ಯಜ್ಞಗಳ ಕುರಿತು ತಿಳಿಸುತ್ತಾ ಬರೆದದ್ದು:“ಆದದರಿಂದ ಆತನ (ಕ್ರಿಸ್ತನ) ಮೂಲಕವಾಗಿ ದೇವರಿಗೆ ಸ್ತೋತ್ರ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನ ನಾಮದ ಬಹಿರಂಗ ಘೋಷಣೆ ಮಾಡುವ ತುಟಿಫಲವೇ ಆ ಯಜ್ಞವು. ಇದಲ್ಲದೆ ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” (ಇಬ್ರಿ. 13:15,16) ಕ್ರಿಸ್ತೀಯ ಯಜ್ಞಗಳಲ್ಲಿ ಮಾನವ ಹಿತಸಾಧನೆ ಮಾತ್ರವೇ ಒಳಗೂಡಿಲ್ಲ. ಸರ್ವಸಾಮಾನ್ಯವಾಗಿ ಜನರೆಲ್ಲರೂ ಅದನ್ನು ಮಾಡುತ್ತಾರೆ. ಉದಾಹರಣೆಗೆ, 1988ರ ಕೊನೆಯಲ್ಲಿ ಸೋವಿಯಟ್ ಆರ್ಮೇನಿಯಲ್ಲಾದ ಭೂಕಂಪ ಪೀಡಿತರಿಗೆ ಸಹಾಯ ಬೇಕಾದಾಗ ಅನೇಕ ರಾಷ್ಟ್ರಗಳ ಜನರು ಅದನ್ನು ಮಾಡಿದ್ದರು.
14. ದೇವರಿಗೆ ಸ್ವೀಕರಣೀಯವಾದ ಯಜ್ಞವರ್ಪಿಸುವಿಕೆಯು ಯಾವ ಕಾರ್ಯವನ್ನು ಒತ್ತಿಹೇಳುತ್ತದೆ?
14 ಯೆಹೋವ ದೇವರಿಗೆ “ಭಕ್ತಿಯಿಂದಲೂ ಭಯದಿಂದಲೂ” ನಾವು ಸಲ್ಲಿಸುವ ಪವಿತ್ರಸೇವೆಯು ಯೇಸು ತೋರಿಸಿದಂತಹ ನಿಸ್ವಾರ್ಥ ಪ್ರೀತಿಯ ಮೇಲೆ ಆಧರಿಸಿದೆ. (ಇಬ್ರಿಯ 12:28; ಯೋಹಾನ 13:34; 15:13) ಈ ಸೇವೆಯು ನಮ್ಮ ಸಾರುವ ಕಾರ್ಯವನ್ನು ಒತ್ತಿಹೇಳುತ್ತದೆ. ಯಾಕಂದರೆ ಮಹಾ ಯಾಜಕ ಕ್ರಿಸ್ತನ ಮೂಲಕವಾಗಿ “ನಾವು ದೇವರಿಗೆ ಸ್ತೋತ್ರ ಯಜ್ಞವನ್ನು, ಆತನ ನಾಮದ ಬಹಿರಂಗ ಘೋಷಣೆಯೆಂಬ ತುಟೀಫಲವನ್ನು ಅರ್ಪಿಸುತ್ತೇವೆ.”(ಹೋಶೆಯ 14:2 ರೋಮಾಯ 10:10-15; ಇಬ್ರಿಯ 7:26) “ಪರೋಪಕಾರವನ್ನೂ ಧರ್ಮಮಾಡುವದನ್ನೂ ನಾವು ಮರೆಯುವುದಿಲ್ಲ” ನಿಶ್ಚಯ; “ನಂಬಿಕೆಯಲ್ಲಿ ನಮಗೆ ಸಂಬಂಧಿಕರಾಗಿರು”ವವರಿಗೆ ಮಾತ್ರವಲ್ಲದೆ ಬೇರೆಯವರಿಗೂ ನಾವದನ್ನು ಮಾಡುತ್ತೇವೆ. (ಗಲಾತ್ಯ 6:10) ವಿಶೇಷವಾಗಿ ನಮ್ಮ ಜತೆ ಕ್ರೈಸ್ತರು ವಿಪತ್ತನ್ನು ಅನುಭವಿಸುವಾಗ ಅಥವಾ ಕೊರತೆ ಯಾ ಕಷ್ಟದಲ್ಲಿರುವಾಗ ನಾವು ಐಹಿಕವಾದ ಹಾಗೂ ಆತ್ಮಿಕವಾದ ಸಹಾಯವನ್ನು ಪ್ರೀತಿಯಿಂದ ಒದಗಿಸುತ್ತೇವೆ. ಏಕೆ? ಏಕೆಂದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ತಮ್ಮ ನಿರೀಕ್ಷೆಯ ಬಹಿರಂಗವಾದ ಅರಿಕೆಯನ್ನು ಅವರು ನಿಶ್ಚಂಚಲರಾಗಿ ಮಾಡಲು ಶಕ್ತರಾಗುವಂತೆ ನಾವು ಬಯಸುತ್ತೇವೆ. “ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.”—ಇಬ್ರಿಯ 10:23-25; ಯಾಕೋಬ 1:27.
ಅಧೀನರಾಗಿರ್ರಿ
15. (ಎ) ಇಬ್ರಿಯ 13:17ರ ಸೂಚನೆಯ ತಾತ್ಪರ್ಯವನ್ನು ನೀವು ಹೇಗೆ ಹೇಳುವಿರಿ? (ಬಿ) ಯಾರು ನಾಯಕತ್ವವನ್ನು ವಹಿಸುತ್ತಾರೋ ಅವರಿಗೆ ಏಕೆ ಮಾನ ಕೊಡಬೇಕು?
15 ಸ್ವೀಕರಣೀಯವಾದ ಯಜ್ಞಗಳನ್ನು ಅರ್ಪಿಸಬೇಕಾದರೋ ದೇವರ ಸಂಸ್ಥೆಯೊಂದಿಗೆ ನಾವು ಪೂರ್ಣವಾಗಿ ಸಹಕರಿಸಲೇಬೇಕು. ಅಧಿಕಾರದ ವಿಷಯವಾಗಿ ಜಿಗುಪ್ಸೆ ಹುಟ್ಟಿಸದೇ ಪೌಲನು ಬರೆದದ್ದು:“ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನ ಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿಯ 13:17) ಸಭೆಯಲ್ಲಿ ನಾಯಕತ್ವವನ್ನು ವಹಿಸುವ ನೇಮಿತ ಹಿರಿಯರನ್ನು ನಾವು ಮಾನ್ಯಮಾಡುಬೇಕು ಯಾಕೆಂದರೆ ನಮ್ಮ ಸಹಕಾರದ ಕೊರತೆಯ ಕಾರಣ ಅವರು ವ್ಯಸನದ ನಿಟ್ಟುಸಿರನ್ನು ಬಿಡುವಂತೆ ನಾವು ಬಿಡಬಾರದು. ನಾವು ಅಧೀನರಾಗಲು ತಪ್ಪುವುದಾದರೆ ಅದು ಮೇಲ್ವೀಚಾರಕರಿಗೆ ಒಂದು ಹೊರೆಯಾಗಿ ರುಜುವಾಗುವದು ಮತ್ತು ನಮ್ಮ ಆತ್ಮಿಕ ಹಾನಿಯನ್ನು ತರುವದು. ಸಹಕಾರದ ಭಾವವು ಹಿರಿಯರಿಗೆ ಸಹಾಯ ನೀಡುವದನ್ನು ಸುಲಭವಾಗಿ ಮಾಡುವದು ಮತ್ತು ರಾಜ್ಯ ಸಾರುವಿಕೆಯ ಕೆಲಸದ ಪ್ರಗತಿಗೆ ಮತ್ತು ಸಭೆಯ ಐಕ್ಯತೆಗೆ ಸಹಾಯವಾಗುವದು.—ಕೀರ್ತನೆ 133:1-3.
16. ನಮ್ಮ ನಡುವೆ ನಾಯಕತ್ವ ವಹಿಸುವವರಿಗೆ ಅಧೀನರಾಗುವದೇಕೆ ಯಥೋಚಿತವು?
16 ಯಾರು ನಾಯಕತ್ವವನ್ನು ವಹಿಸುತ್ತಾರೋ ಅವರಿಗೆ ಅಧೀನರಾಗಿರುವದು ಅದೆಷ್ಟು ಯಥೋಚಿತವು: ಅವರು ಕೂಟಗಳಲ್ಲಿ ನಮಗೆ ಕಲಿಸುತ್ತಾರೆ ಮತ್ತು ನಮ್ಮ ಶುಶ್ರೂಷೆಯಲ್ಲಿ ನೆರವಾಗುತ್ತಾರೆ. ಕುರುಬರೋಪಾದಿ ಅವರು ತಮ್ಮ ಕ್ಷೇಮಾಭಿವೃದ್ಧಿಯನ್ನು ಬಯಸುತ್ತಾರೆ. (1 ಪೇತ್ರ 5:2, 3) ದೇವರೊಂದಿಗೆ ಮತ್ತು ಸಭೆಯೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳಲು ಅವರು ನೆರವಾಗುತ್ತಾರೆ. (ಅಪೊಸ್ತಲರ ಕೃತ್ಯ 20:28-30) ಅವರ ಸುಜ್ಞ ಮತ್ತು ಪ್ರೀತಿಯ ಮೇಲ್ವೀಚಾರಕಕ್ಕೆ ಅಧೀನರಾಗುವ ಮೂಲಕ ನಾವು ಸರ್ವಶ್ರೇಷ್ಟ ಮೇಲ್ವೀಚಾರಕನಾದ ಯೆಹೋವ ದೇವರಿಗೆ ಮತ್ತು ಆತನ ಪ್ರತಿನಿಧಿ ಮೇಲ್ವೀಚಾರಕ ಯೇಸುಕ್ರಿಸ್ತನಿಗೆ ಗೌರವವನ್ನು ತೋರಿಸುವವರಾಗುವೆವು.—1 ಪೇತ್ರ 2:25; ಪ್ರಕಟನೆ 1:1; 2:1-3,22.
ಪ್ರಾರ್ಥಿಸುತ್ತಾ ಇರ್ರಿ
17. ಯಾವ ಪ್ರಾರ್ಥನೆಗಳಿಗಾಗಿ ಪೌಲನು ವಿನಂತಿಸಿದನು, ಮತ್ತು ಅದಕ್ಕಾಗಿ ವಿನಂತಿಸುವ ಯೋಗ್ಯ ಹಕ್ಕು ಅವನಿಗಿತ್ತೇಕೆ?
17 ಪೌಲನು ಮತ್ತು ಅವರ ಸಂಗಡಿಗರು ಇಬ್ರಿಯರಿಂದ ಪ್ರತ್ಯೇಕವಾಗಿದ್ದರಿಂದ, ಪ್ರಾಯಶಃ ಹಿಂಸೆಯ ಕಾರಣ ಪೌಲನು ಹೀಗಂದಿರಬಹುದು:“ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮಲ್ಲಿ ಪ್ರಾಮಾಣಿಕ ಮನಸ್ಸಾಕ್ಷಿಯದೆಂಬ ಭರವಸೆ ನಮಗಿದೆ. ಇದನ್ನು ಮಾಡುವಂತೆ ಬಹುವಿಶೇಷವಾಗಿ ಬೇಡಿಕೊಳ್ಳುತ್ತೇನೆ, ಯಾಕಂದರೆ ನಿಮ್ಮ ಪ್ರಾರ್ಥನೆಗಳ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.” (ಇಬ್ರಿಯ 13:18, 19) ಪೌಲನು ಒಂದು ವೇಳೆ ಕುಟಿಲ ವ್ಯಕ್ತಿಯಾಗಿದ್ದು ಬರೆಯುಳ್ಳ ಮನಸ್ಸಾಕ್ಷಿಯವನಾಗಿದ್ದರೆ ತಾನು ಅವರ ಬಳಿಗೆ ತಿರಿಗಿ ಬರುವಂತೆ ಇಬ್ರಿಯರು ಪ್ರಾರ್ಥಿಸಬೇಕೆಂದು ಕೇಳಲು ಯಾವ ಹಕ್ಕಿತ್ತು? (ಜ್ಞಾನೋಕ್ತಿ 1:32; 1 ತಿಮೊಥಿ 4:1,2) ಅವನೊಬ್ಬ ಪ್ರಾಮಾಣಿಕ ಶುಶ್ರೂಕನೆಂಬುದು ನಿಶ್ಚಯ: ಒಳ್ಳೇ ಮನಸ್ಸಾಕ್ಷಿಯಿಂದಲೇ ಅವನು ಯೆಹೂದಿ ಮತಸ್ಥರನ್ನು ಎದುರಿಸಿದ್ದನು. (ಅಪೊಸ್ತಲರ ಕೃತ್ಯ 20:17-27) ಇಬ್ರಿಯರು ಆತನಿಗಾಗಿ ಪ್ರಾರ್ಥಿಸಿದ್ದಲ್ಲಿ ಒಂದುವೇಳೆ ಶೀಘ್ರದಲ್ಲೀ ಅವರ ಬಳಿಗೆ ತಿರಿಗಿ ಬರಲು ಸಾಧ್ಯವದೆಂಬ ಭರವಸವೂ ಪೌಲನಿಗಿತ್ತು.
18. ಇತರರು ನಮಗಾಗಿ ಪ್ರಾರ್ಥಿಸುವಂತೆ ನಾವು ಅಪೇಕ್ಷಿಸುವದಾದರೆ, ನಾವು ನಮ್ಮ ಕುರಿತು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
18 ಕ್ರೈಸ್ತರು ಒಬ್ಬರೊಬ್ಬರಿಗಾಗಿ ಪ್ರಾರ್ಥಿಸುವದು, ಹೆಸರು ಹೇಳಿ ಪ್ರಾರ್ಥಿಸುವದೂ ಯೋಗ್ಯವೆಂಬುದು ಇಬ್ರಿಯರಿಗೆ ಪ್ರಾರ್ಥಿಸುವಂತೆ ಪೌಲನು ಮಾಡಿದ ವಿನಂತಿಯಿಂದ ಸ್ಪಷ್ಟವಾಗುತ್ತದೆ. (ಎಫೆಸ 6:17-20) ಇತರರು ನಮಗಾಗಿ ಪ್ರಾರ್ಥಿಸುವಂತೆ ಅಪೇಕ್ಷಿಸುವದಾದರೆ, ಅಪೊಸ್ತಲನಂತೆ ನಾವು ಸಹಾ “ಪ್ರಾಮಾಣಿಕ ಮನಸ್ಸಾಕ್ಷಿಯುಳ್ಳವರಾಗಿದ್ದು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ” ನಡೆದುಕೊಳ್ಳಬೇಡವೇ? ನೀವು ನಿಮ್ಮೆಲ್ಲಾ ವ್ಯವಹಾರಗಳಲ್ಲಿ ಪ್ರಾಮಾಣಿಕರಾಗಿದ್ದೀರೋ? ಪ್ರಾರ್ಥನೆಯ ಬಗ್ಗೆ ಪೌಲನಿಗಿದ್ದಂತಹ ಅದೇ ಆತ್ಮ ವಿಶ್ವಾಸವು ನಿಮಗೂ ಇದೆಯೋ?—1ಯೋಹಾನ 5:14,15.
ಕೊನೇ ಮಾತುಗಳು ಮತ್ತು ಬುದ್ಧಿವಾದ
19. (ಎ) ಇಬ್ರಿಯರಿಗಾಗಿ ಪೌಲನ ಪ್ರಾರ್ಥನಾಪೂರ್ವಕ ಹಾರೈಕೆ ಏನಾಗಿತ್ತು? (ಬಿ)ಹೊಸ ಒಡಂಬಡಿಕೆಯ ಒಂದು ಶಾಶ್ವತವಾದ ಒಡಂಬಡಿಕೆಯಾಗಿದೆಯೇಕೆ?
19 ಇಬ್ರಿಯರನ್ನು ಪ್ರಾರ್ಥನೆಗಳಿಗಾಗಿ ವಿನಂತಿಸಿದಾಗ ಮೇಲೆ ಪೌಲನು ಒಂದು ಪ್ರಾರ್ಥನಾಪೂರ್ವಕ ಹಾರೈಕೆಯನ್ನು ವ್ಯಕ್ತಪಡಿಸುತ್ತಾನೆ: “ಶಾಶ್ವತವಾದ ಒಡಂಬಡಿಕೆಯನ್ನು ನಿಶ್ಚಯಪಡಿಸುವದಕ್ಕಾಗಿ ತನ್ನ ರಕ್ತವನ್ನು ಸುರಿಸಿಕೊಂಡು ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ ಶಾಂತಿದಾಯಕನಾದ ದೇವರು, ನೀವು ತನ್ನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಯನ್ನು ನಿಮಗೆ ಅನುಗ್ರಹಿಸಲಿ. ಆತನು ಯೇಸು ಕ್ರಿಸ್ತನ ಮೂಲಕ ತನಗೆ ಸಮರ್ಪಕವಾದದ್ದನ್ನು ನಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.” (ಇಬ್ರಿಯ 13:20, 21) ಒಂದು ಶಾಂತಿಭರಿತವಾದ ಭೂಮಿಯನ್ನು ತರುವ ನೋಟದಲ್ಲಿ, “ಶಾಂತಿದಾಯಕನಾದ ದೇವರು” ಕ್ರಿಸ್ತನನ್ನು ಪರಲೋಕದ ಅಮರ ಜೀವನಕ್ಕೆ ಪುನರುತ್ಥಾನ ಮಾಡಿದನು ಮತ್ತು ಅಲ್ಲಿ ಯೇಸುವು ಹೊಸ ಒಡಂಬಡಿಕೆಯನ್ನು ಜಾರಿಗೆ ತಂದ ತನ್ನ ಸುರಿದ ರಕ್ತದ ಬೆಲೆಯನ್ನು ನೀಡಿಕೊಂಡನು. (ಯೆಶಾಯ 9:6,7; ಲೂಕ 22:20) ಅದೊಂದು ಶಾಶ್ವತ ಒಡಂಬಡಿಕೆಯಾಗಿದೆ. ಏಕೆಂದರೆ ಆ ಹೊಸ ಒಡಂಬಡಿಕೆಯೊಳಗಿರುವ ಮತ್ತು ಪರಲೋಕದಲ್ಲಿ ಕ್ರಿಸ್ತನೊಂದಿಗೆ ಆಳುವ 1,44,000 ಆತ್ಮಿಕ ದೇವಪುತ್ರರ ಸೇವೆಯಿಂದಾಗಿ ಭೂಮಿಯಲ್ಲಿರುವ ಜನರು ಶಾಶ್ವತವಾದ ಪ್ರಯೋಜನಗಳನ್ನು ಪಡೆಯುವ ಕಾರಣದಿಂದಲೇ. (ಪ್ರಕಟನೆ 14:1-4; 20:4-6) ಯಾರಿಗೆ ನಾವು ಘನವನ್ನು ಸಲ್ಲಿಸುತ್ತೇವೂ ಆ ದೇವರು ಕ್ರಿಸ್ತನ ಮೂಲಕವಾಗಿ ‘ತನ್ನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ಅನುಗ್ರಹಿಸಿ ತನಗೆ ಸಮರ್ಪಕವಾದದ್ದನ್ನು ನಡಿಸುತ್ತಾನೆ.’
20. ಇಬ್ರಿಯ ಕ್ರೈಸ್ತರಿಗೆ ಪೌಲನ ಕೊನೆಯ ಬುದ್ಧಿವಾದ ತಾತ್ಪರ್ಯ ಮತ್ತು ವಿವರಣೆಯನ್ನು ಹೇಗೆ ಕೊಡುವಿರಿ?
20 ಇಬ್ರಿಯರು ತನ್ನ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸುವರೆಂಬದರ ಕುರಿತು ಅನಿಶ್ಚಿತನಾಗಿ ಪೌಲನು ಅಂದದ್ದು: “ಸಹೋದರರೇ, ಈ ಎಚ್ಚರಿಕೆಯ ಮಾತುಗಳನ್ನು (ಯೆಹೂದಿ ಮತಸ್ಥರಿಗಲ್ಲ, ದೇವಕುಮಾರನಿಗೆ ಕಿವಿಗೊಡುವಂತೆ) ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನಿಮಗೆ (ಅದರಲ್ಲಿರುವ ಮಹತ್ವವನ್ನು ಗಮನಿಸುವಲ್ಲಿ) ಸಂಕ್ಷೇಪವಾಗಿ ಬರೆದಿದ್ದೇನೆ. ನಮ್ಮ ಸಹೋದರನಾದ ತಿಮೊಥೆಯನಿಗೆ (ಸೆರೆಯಿಂದ) ಬಿಡುಗಡೆಯಾಯಿತೆಂಬದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನೂ ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.” ಪ್ರಾಯಶಃ ರೋಮಿನಿಂದ ಬರೆಯುತ್ತಾ ತಾನು ತಿಮೊಥಿಯೊಂದಿಗೆ ಯೆರೂಸಲೇಮಿನಲ್ಲಿ ಇಬ್ರಿಯರನ್ನು ಭೇಟಿಯಾಗುವಂತೆ ಅಪೊಸ್ತಲನು ನಿರೀಕ್ಷಿಸಿದ್ದಿರಬೇಗಕು. ಆ ಮೇಲೆ ಪೌಲನಂದದ್ದು: “ನಿಮ್ಮ ಸಭಾನಾಯಕರೆಲ್ಲರಿಗೂ (ಪರಿಶ್ರಮಪಡುವ ಹಿರಿಯರಿಗೆ) ದೇವಜನರೆಲ್ಲರಿಗೂ (ಸ್ವರ್ಗೀಯ ನಿರೀಕ್ಷೆಯಿರುವವರಿಗೆ) ವಂದನೆಹೇಳಿರಿ. ಇಟೆಲಿ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ. (ದೇವರ) ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.” (ಇಬ್ರಿಯ 13:22-25)
ಬಾಳುವ ಬೆಲೆಯುಳ್ಳ ಪತ್ರಿಕೆ
21. ಯಾವ ಮುಖ್ಯ ವಿಷಯಗಳನ್ನು ತಿಳುಕೊಳ್ಳಲು ಇಬ್ರಿಯರಿಗೆ ಬರೆದ ಪತ್ರಿಕೆ ನಮಗೆ ಸಹಾಯ ಮಾಡುತ್ತದೆ?
21 ಪ್ರಾಯಶಃ ಪವಿತ್ರ ಶಾಸ್ತ್ರದ ಬೇರೆ ಯಾವುದೇ ಪುಸ್ತಕಕ್ಕಿಂತ ಇಬ್ರಿಯರಿಗೆ ಬರೆದ ಪತ್ರಿಕೆಯು ಧರ್ಮಶಾಸ್ತ್ರದ ನಿಯಮಗಳ ಕೆಳಗೆ ಅರ್ಪಿಸಲ್ಪಡುತ್ತಿದ್ದ ಯಜ್ಞಗಳ ಮಹತ್ವಾರ್ಥವನ್ನು ತಿಳಿಯಲು ಹೆಚ್ಚು ಸಹಾಯನೀಡುತ್ತದೆ. ಪಾಪಿಗಳಾದ ಮಾನವಕುಲಕ್ಕೆ ಬೇಕಾದ ವಿಮೋಚನೆಯನ್ನು ಒದಗಿಸುವಂತಾದ್ದು ಯೇಸು ಕ್ರಿಸ್ತನ ಯಜ್ಞ ಮಾತ್ರವೇ ಎಂಬುದನ್ನು ಈ ಪತ್ರಿಕೆಯು ಸ್ಪಷ್ಟವಾಗಿ ತೋರಿಸುತ್ತದೆ. ನಾವು ದೇವರ ಕುಮಾರನಿಗೆ ಕಿವಿಗೊಡಬೇಕೆಂಬದೇ ಆ ಪತ್ರಿಕೆಯಲ್ಲಿ ಕಂಡುಬರುವ ಗಮನಾರ್ಹ ಸಂದೇಶವಾಗಿದೆ.
22. ಇಬ್ರಿಯರಿಗೆ ಬರೆದ ಪತ್ರಿಕೆಗಾಗಿ ನಾವು ಕೃತಜ್ಞರಾಗಿರಬೇಕಾದ ಕಲವು ಕಾರಣಗಳು ಯಾವುವು?
22 ಅದಲ್ಲದೆ, ನಾವು ಹಿಂದಿನ ಎರಡು ಲೇಖನಗಳಲ್ಲಿ ನೋಡಿದ ಪ್ರಕಾರ, ಈ ದೈವಪ್ರೇರಿತ ಇಬ್ರಿಯರಿಗೆ ಬರೆದ ಪತ್ರಿಕೆಗೆ ನಾವು ಕೃತಜ್ಞರಾಗಿರಬೇಕಾದ ಬೇರೆ ಕಾರಣಗಳೂ ನಮಗಿವೆ. ನಾವು ನಮ್ಮ ಶುಶ್ರೂಷೆಯಲ್ಲಿ ಸೋತುಹೋಗದಂತೆ ಅದು ನಮಗೆ ಸಹಾಯ ಮಾಡುತ್ತದೆ, ನಮ್ಮಲ್ಲಿ ಧೈರ್ಯವನ್ನು ತುಂಬಿಸುತ್ತದೆ. ಯಾಕಂದರೆ ಯೆಹೋವನು ನಮ್ಮ ಸಹಾಯಕನೆಂದು ನಮಗೆ ಗೊತ್ತದೆ. ಅಷ್ಟು ಮಾತ್ರವಲ್ಲದೆ, ನಮ್ಮ ತುಟಿಗಳನ್ನು ಮತ್ತು ನಮ್ಮೆಲ್ಲಾ ಸಾಮರ್ಥ್ಯಗಳನ್ನು ಪವಿತ್ರ ಸೇವೆಯಲ್ಲಿ ಹಗಲಿರುಳು ನಿಸ್ವಾರ್ಥದಿಂದ ಉಪಯೋಗಿಸುವಂತೆಯೂ ಮತ್ತು ಸ್ತುತಿ ಪಾತ್ರನೂ ಪ್ರೀತಿಸ್ವರೂಪಿಯೂ ಆದ ಯೆಹೋವ ದೇವರಿಗೆ ಹೃದಯ ಪೂರ್ವಕವಾದ ಯಜ್ಞಗಳನ್ನು ಅರ್ಪಿಸುವಂತೆಯೂ ಅದು ನಮ್ಮನ್ನು ಉತ್ತೇಜಿಸುತ್ತದೆ.
ನಿಮ್ಮ ಪ್ರತಿಕ್ರಿಯೆಯೇನು?
▫ ಇಬ್ರಿಯರಿಗೆ ಬರೆದ ಪತ್ರಿಕೆಯು ಅವರಿಗೆ ಸುಳ್ಳು ಬೋಧನೆಗಳನ್ನು ವಿಸರ್ಜಿಸುವಂತೆ ಹೇಗೆ ಸಹಾಯ ಮಾಡಿತು?
▫ ದೇವರು ಮೆಚ್ಚುವ ಯಜ್ಞಗಳು ಯಾವ ಮಹತ್ವದ ಕಾರ್ಯದ ಮೇಲೆ ಕೇಂದ್ರೀಕರಿಸಿದೆ?
▫ ‘ನಾಯಕರಾಗಿರುವವರು’ ಯಾರು ಮತ್ತು ಅವರಿಗೇಕೆ ಅಧೀನರಾಗಿರಬೇಕು?
▫ ಇಬ್ರಿಯರಿಗೆ ಬರೆದ ಪತ್ರಿಕೆಯು ಪ್ರಾರ್ಥನೆಯನ್ನು ಒತ್ತಿಹೇಳುವದು ಹೇಗೆ?
▫ ಇಬ್ರಿಯರಿಗೆ ಬರೆದ ಪತ್ರಿಕೆಯು ಬಾಳುವ ಬೆಲೆಯುಳ್ಳದ್ದೆಂದು ನಾವೇಕೆ ಹೇಳಸಾಧ್ಯವಿದೆ?
[ಪುಟ 23 ರಲ್ಲಿರುವ ಚಿತ್ರಗಳು]
ದೇವರು ಮೆಚ್ಚುವ ಯಜ್ಞಗಳಲ್ಲಿ ಬಹಿರಂಗ ಶುಶ್ರೂಷೆಯಲ್ಲಿ ಪಾಲಿಗರಾಗುವುದು ಮತ್ತು ಜತೆ ಕ್ರೈಸ್ತರಿಗೆ ಸಹಾಯಕಾರಿ ಸೂಚನೆ ಕೊಡುವದು ಸೇರಿರುತ್ತದೆ.