ನಿಜ ಸ್ವಾತಂತ್ರ್ಯ ಸಿಗುವ ವಿಧ
“ಮಗನು [ಯೇಸು] ನಿಮ್ಮನ್ನು ಬಿಡುಗಡೆಮಾಡಿದರೆ ನಿಮಗೆ ನಿಜವಾಗಿಯೂ ಬಿಡುಗಡೆಯಾಗುವುದು.”—ಯೋಹಾ. 8:36.
1, 2. (ಎ) ಸ್ವಾತಂತ್ರ್ಯಕ್ಕೋಸ್ಕರ ಜನ ಏನೆಲ್ಲಾ ಮಾಡುತ್ತಾರೆ? (ಬಿ) ಇದರ ಪರಿಣಾಮ ಏನು?
ಇಂದು ಲೋಕದಲ್ಲಿ ಜನರು ತುಂಬ ಕಡೆ ಸಮಾನತೆ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಿದ್ದಾರೆ. ಕೆಲವರು ಅನ್ಯಾಯ, ಪೂರ್ವಗ್ರಹ, ಬಡತನದಿಂದ ಬಿಡುಗಡೆ ಬೇಕು ಎಂದು ಕೂಗುತ್ತಿದ್ದಾರೆ. ಇನ್ನು ಕೆಲವರು ತಮಗನಿಸಿದ್ದನ್ನು ಹೇಳಬೇಕು, ತಮಗೇನಿಷ್ಟಾನೋ ಅದನ್ನು ಆರಿಸಿಕೊಳ್ಳಬೇಕು, ತಮ್ಮಿಷ್ಟದಂತೆ ಬಾಳಬೇಕು ಎಂದು ಹೋರಾಡುತ್ತಿದ್ದಾರೆ. ಒಟ್ಟಿನಲ್ಲಿ ಜನರು ಸ್ವತಂತ್ರ ಹಕ್ಕಿಯಂತಿರಲು ಬಯಸುತ್ತಾರೆ.
2 ಇದಕ್ಕಾಗಿ ಜನರು ಪ್ರತಿಭಟನೆಗಳನ್ನು ಮತ್ತು ಚಳವಳಿಗಳನ್ನು ಮಾಡುತ್ತಾರೆ. ಆದರೆ ಇದರಿಂದ ಅವರು ಬಯಸಿದ್ದು ಸಿಗುತ್ತದಾ? ಇಲ್ಲ. ಸಾಮಾನ್ಯವಾಗಿ ಇಂಥ ಹೋರಾಟಗಳಿಂದ ಹೆಚ್ಚು ನೋವು ತಿನ್ನಬೇಕಾದ ಪರಿಸ್ಥಿತಿ ಬರುತ್ತದೆ, ಕೆಲವರು ಜೀವವನ್ನೂ ಕಳಕೊಂಡುಬಿಡುತ್ತಾರೆ. ರಾಜ ಸೊಲೊಮೋನ ಪ್ರಸಂಗಿ 8:9ರಲ್ಲಿ ಹೇಳಿರುವ ಮಾತು ಸತ್ಯ: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಹಾನಿಯನ್ನು ಉಂಟುಮಾಡಿದ್ದಾನೆ.’
3. ನಿಜ ಸಂತೋಷ, ಸಂತೃಪ್ತಿ ಸಿಗಬೇಕಾದರೆ ನಾವೇನು ಮಾಡಬೇಕು?
3 ನಿಜ ಸಂತೋಷ, ಸಂತೃಪ್ತಿ ಸಿಗಬೇಕಾದರೆ ಏನು ಮಾಡಬೇಕು ಎಂದು ಬೈಬಲ್ ಹೇಳುತ್ತದೆ. ಕ್ರಿಸ್ತನ ಶಿಷ್ಯನಾಗಿದ್ದ ಯಾಕೋಬನು ಹೇಳಿದ್ದು: “ವಿಮೋಚನೆಗೆ [ಅಥವಾ ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡಿ, ಅದರಲ್ಲಿ ಪಟ್ಟುಹಿಡಿಯುವವನು . . . ಸಂತೋಷಿತನಾಗಿರುವನು.” (ಯಾಕೋ. 1:25) ಈ ಪರಿಪೂರ್ಣ ನಿಯಮ ಯೆಹೋವನಿಂದ ಬರುತ್ತದೆ. ನಾವು ಸಂಪೂರ್ಣವಾಗಿ ಸಂತೋಷವಾಗಿರಲು ಮತ್ತು ಸಂತೃಪ್ತಿಯಿಂದಿರಲು ಏನು ಬೇಕೆಂದು ಆತನಿಗೆ ಚೆನ್ನಾಗಿ ತಿಳಿದಿದೆ. ಆದಾಮಹವ್ವರಿಗೆ ದೇವರು ನಿಜ ಸ್ವಾತಂತ್ರ್ಯ ಕೊಟ್ಟಿದ್ದನು ಮತ್ತು ಅವರು ಸಂತೋಷವಾಗಿರಲು ಏನು ಬೇಕೋ ಅದನ್ನೆಲ್ಲಾ ಕೊಟ್ಟಿದ್ದನು.
ನಿಜವಾದ ಸ್ವಾತಂತ್ರ್ಯವಿದ್ದ ಸಮಯ
4. ಆದಾಮಹವ್ವರಿಗೆ ಯಾವ ರೀತಿಯ ಸ್ವಾತಂತ್ರ್ಯ ಇತ್ತು? (ಲೇಖನದ ಆರಂಭದ ಚಿತ್ರ ನೋಡಿ.)
4 ಆದಿಕಾಂಡ 1 ಮತ್ತು 2ನೇ ಅಧ್ಯಾಯಗಳನ್ನು ಓದುವಾಗ ಆದಾಮಹವ್ವರಿಗೆ ಎಂಥ ಸ್ವಾತಂತ್ರ್ಯ ಇತ್ತೆಂದು ನಮಗೆ ಗೊತ್ತಾಗುತ್ತದೆ. ಅಂಥ ಸ್ವಾತಂತ್ರ್ಯದ ಬಗ್ಗೆ ಈಗಿರುವ ಜನರು ಕನಸು ಮಾತ್ರ ಕಾಣಬಹುದು. ಏದೆನಿನಲ್ಲಿ ಆದಾಮಹವ್ವರಿಗೆ ಯಾವುದರ ಕೊರತೆಯೂ ಇರಲಿಲ್ಲ. ಅವರಿಗೆ ಯಾವುದರ ಕುರಿತು ಹೆದರಿಕೆಯೂ ಇರಲಿಲ್ಲ. ಅವರಿಗೆ ಅನ್ಯಾಯ ಮಾಡುವವರು ಯಾರೂ ಇರಲಿಲ್ಲ. ಅವರು ಊಟ, ಉದ್ಯೋಗ, ಆರೋಗ್ಯ ಅಥವಾ ಸಾವಿನ ಬಗ್ಗೆ ಚಿಂತಿಸುವ ಆವಶ್ಯಕತೆ ಇರಲಿಲ್ಲ. (ಆದಿ. 1:27-29; 2:8, 9, 15) ಹಾಗಾದರೆ ದೇವರು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದನಾ? ನೋಡೋಣ.
5. ಯಾವ ಸನ್ನಿವೇಶ ಇರುವುದಾದರೆ ಜನರಿಗೆ ಸ್ವಾತಂತ್ರ್ಯ ಇದೆ ಎಂದು ಹೇಳಬಹುದು?
5 ತಮಗೆ ಏನು ಬೇಕೋ ಅದನ್ನು ಮಾಡುವುದೇ ನಿಜವಾದ ಸ್ವಾತಂತ್ರ್ಯ ಎಂದು ಅನೇಕರು ನೆನಸುತ್ತಾರೆ. ಅದರಿಂದಾಗುವ ಪರಿಣಾಮಗಳ ಬಗ್ಗೆ ಅವರು ಯೋಚನೆ ಮಾಡುವುದಿಲ್ಲ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದೇನೆಂದರೆ, ಸ್ವಾತಂತ್ರ್ಯ ಅಂದರೆ “ಆಯ್ಕೆಗಳನ್ನು ಮಾಡಿ, ಅವುಗಳನ್ನು ಕಾರ್ಯರೂಪಕ್ಕೆ ಹಾಕುವ ಸಾಮರ್ಥ್ಯ.” ಆದರೆ ಅನ್ಯಾಯವಾದ, ಅನಾವಶ್ಯಕವಾದ ಅಥವಾ ವಿಪರೀತವಾದ ವಿಧಗಳಲ್ಲಿ ಸರ್ಕಾರವು ಜನರನ್ನು ನಿರ್ಬಂಧಿಸದೆ ಇದ್ದಾಗ ಅವರಿಗೆ ಸ್ವಾತಂತ್ರ್ಯ ಇರುತ್ತದೆ ಎಂದು ಸಹ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಹಾಗಾದರೆ ಎಲ್ಲರಿಗೂ ಸ್ವಾತಂತ್ರ್ಯ ಇರಬೇಕಾದರೆ ಕೆಲವೊಂದು ನಿರ್ಬಂಧಗಳು, ಮಿತಿಗಳು ಇರಬೇಕೆಂದು ಇದರಿಂದ ಗೊತ್ತಾಗುತ್ತದೆ. ಆದರೆ ಒಂದು ನಿರ್ಬಂಧ ಅಥವಾ ಮಿತಿ ನ್ಯಾಯವಾಗಿದೆ, ಆವಶ್ಯಕವಾಗಿದೆ, ವಿಪರೀತವಾಗಿಲ್ಲ ಎಂದು ತೀರ್ಮಾನಿಸುವ ಹಕ್ಕು ಯಾರಿಗಿದೆ?
6. (ಎ) ಸಂಪೂರ್ಣ ಸ್ವಾತಂತ್ರ್ಯ ಯೆಹೋವನಿಗೆ ಮಾತ್ರ ಇದೆ ಯಾಕೆ? (ಬಿ) ಯಾವ ರೀತಿಯ ಸ್ವಾತಂತ್ರ್ಯವನ್ನು ಮಾನವರು ಆನಂದಿಸಬಹುದು ಮತ್ತು ಯಾಕೆ?
6 ಯಾವುದೇ ನಿರ್ಬಂಧವಿಲ್ಲದ, ಸಂಪೂರ್ಣವಾದ ಸ್ವಾತಂತ್ರ್ಯ ಇರುವುದು ಯೆಹೋವ ದೇವರಿಗೆ ಮಾತ್ರ. ಯಾಕೆ? ಯಾಕೆಂದರೆ ಆತನೇ ಎಲ್ಲವನ್ನೂ ಸೃಷ್ಟಿಸಿದಾತನು ಮತ್ತು ಇಡೀ ವಿಶ್ವದ ಪರಮಾಧಿಕಾರಿ. (1 ತಿಮೊ. 1:17; ಪ್ರಕ. 4:11) 1 ಪೂರ್ವಕಾಲವೃತ್ತಾಂತ 29:11, 12ರಲ್ಲಿ ರಾಜ ದಾವೀದನು ಯೆಹೋವನ ಉನ್ನತ ಸ್ಥಾನವನ್ನು ಸುಂದರವಾಗಿ ವರ್ಣಿಸಿದ್ದಾನೆ. (ಓದಿ.) ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲಾ ಜೀವಿಗಳ ಸ್ವಾತಂತ್ರ್ಯಕ್ಕೆ ಮಿತಿ ಇದೆ. ಯಾವ ನಿರ್ಬಂಧಗಳು ನ್ಯಾಯವಾಗಿವೆ, ಆವಶ್ಯಕವಾಗಿವೆ ಮತ್ತು ವಿಪರೀತವಾಗಿಲ್ಲ ಎಂದು ತೀರ್ಮಾನಿಸುವ ಹಕ್ಕು ಯೆಹೋವ ದೇವರಿಗಿದೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕೆಂದು ಆತನು ಬಯಸುತ್ತಾನೆ. ಯೆಹೋವನು ಮಾನವನನ್ನು ಸೃಷ್ಟಿಸಿದ ಸಮಯದಿಂದಲೇ ಅವನಿಗೆ ಮಿತಿಗಳನ್ನು ಇಟ್ಟಿದ್ದಾನೆ.
7. ನಮಗೆ ಸಂತೋಷ ತರುವ ಯಾವ ವಿಷಯಗಳನ್ನು ಯಾವಾಗಲೂ ಮಾಡುತ್ತೇವೆ?
7 ಆದಾಮಹವ್ವರಿಗೆ ತುಂಬ ಸ್ವಾತಂತ್ರ್ಯ ಇದ್ದರೂ ಅವರ ಸ್ವಾತಂತ್ರ್ಯಕ್ಕೆ ಕೆಲವು ಮಿತಿಗಳು ಇದ್ದವು. ಅಂಥ ಕೆಲವು ಮಿತಿಗಳು ಸ್ವಾಭಾವಿಕವಾಗಿ ಮಾಡುವ ವಿಷಯಗಳಾಗಿದ್ದವು. ಉದಾಹರಣೆಗೆ, ಅವರು ಜೀವಂತ ಇರಬೇಕಾದರೆ ಉಸಿರಾಡಬೇಕಿತ್ತು, ಊಟ ಮಾಡಬೇಕಿತ್ತು ಮತ್ತು ನಿದ್ದೆ ಮಾಡಬೇಕಿತ್ತು. ಇದರಿಂದ ಅವರು ಸ್ವಾತಂತ್ರ್ಯ ಕಳಕೊಂಡರು ಅಂತನಾ? ಇಲ್ಲ. ಇಂಥ ವಿಷಯಗಳಿಂದ ಅವರಿಗೆ ಸಂತೋಷ, ಸಂತೃಪ್ತಿ ಸಿಗುವಂತೆ ಯೆಹೋವನು ಮಾಡಿದ್ದನು. (ಕೀರ್ತ. 104:14, 15; ಪ್ರಸಂ. 3:12, 13) ನಾವೆಲ್ಲರೂ ಶುದ್ಧ ಗಾಳಿ ಸೇವಿಸುವಾಗ, ನಮಗಿಷ್ಟವಾದ ಆಹಾರವನ್ನು ತಿನ್ನುವಾಗ, ರಾತ್ರಿ ಒಳ್ಳೇ ನಿದ್ದೆ ಮಾಡಿದಾಗ ಸಂತೋಷಪಡುತ್ತೇವೆ. ‘ಅಯ್ಯೋ ಇದನ್ನೆಲ್ಲಾ ಮಾಡಬೇಕಲ್ಲಾ’ ಎಂದು ಯಾವತ್ತೂ ಚಿಂತಿಸುವುದಿಲ್ಲ. ಆದಾಮಹವ್ವರಿಗೂ ಹೀಗೆ ಅನಿಸಿರಲಿಕ್ಕಿಲ್ಲ.
8. (ಎ) ದೇವರು ಆದಾಮಹವ್ವರಿಗೆ ನಿರ್ದಿಷ್ಟವಾದ ಯಾವ ಆಜ್ಞೆಯನ್ನು ಕೊಟ್ಟಿದ್ದನು? (ಬಿ) ಇದನ್ನು ಯಾವ ಉದ್ದೇಶಕ್ಕಾಗಿ ಕೊಟ್ಟನು?
8 ಯೆಹೋವ ದೇವರು ಆದಾಮಹವ್ವರಿಗೆ ಒಂದು ನಿರ್ದಿಷ್ಟ ಆಜ್ಞೆ ಕೊಟ್ಟಿದ್ದನು. ಅವರು ಮಕ್ಕಳನ್ನು ಪಡೆದು ಭೂಮಿಯನ್ನು ತುಂಬಿಕೊಂಡು ಅದನ್ನು ನೋಡಿಕೊಳ್ಳಬೇಕಿತ್ತು. (ಆದಿ. 1:28) ಈ ಆಜ್ಞೆಯಿಂದಾಗಿ ಅವರು ತಮ್ಮ ಸ್ವಾತಂತ್ರ್ಯ ಕಳಕೊಂಡರಾ? ಖಂಡಿತ ಇಲ್ಲ. ಇದರಿಂದ ಅವರು ಇಡೀ ಭೂಮಿಯನ್ನು ಪರದೈಸಾಗಿ ಮಾಡಬಹುದಿತ್ತು. ಈ ಪರದೈಸದಲ್ಲಿ ಅವರೂ ಅವರಿಗೆ ಹುಟ್ಟುವ ಪರಿಪೂರ್ಣ ಮಕ್ಕಳೂ ಸದಾಕಾಲ ಸಂತೋಷವಾಗಿ ಬಾಳಬಹುದಿತ್ತು. ಇದು ದೇವರ ಉದ್ದೇಶವಾಗಿತ್ತು. (ಯೆಶಾ. 45:18) ಹಾಗಂತ ಇಂದು ಯಾರಾದರೂ ಮದುವೆ ಮಾಡಿಕೊಳ್ಳದೆ ಇದ್ದರೆ ಅಥವಾ ಮಕ್ಕಳು ಮಾಡಿಕೊಳ್ಳದೆ ಇದ್ದರೆ ಅವರು ದೇವರಿಗೆ ಅವಿಧೇಯತೆ ತೋರಿಸುತ್ತಿದ್ದಾರೆ ಎಂದರ್ಥವಲ್ಲ. ಸಮಸ್ಯೆ ಬರುತ್ತದೆ ಎಂದು ಗೊತ್ತಿದ್ದರೂ ಜನರು ಈಗಲೂ ಮದುವೆ ಮಾಡಿಕೊಂಡು, ಮಕ್ಕಳು ಮಾಡಿಕೊಳ್ಳುತ್ತಾರೆ. (1 ಕೊರಿಂ. 7:36-38) ಯಾಕೆ? ಯಾಕೆಂದರೆ ಅವರು ಜೀವನದಲ್ಲಿ ಸಂತೋಷ, ಸಂತೃಪ್ತಿ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. (ಕೀರ್ತ. 127:3) ಆದಾಮಹವ್ವರು ದೇವರಿಗೆ ವಿಧೇಯತೆ ತೋರಿಸಿದ್ದರೆ ಅವರೂ ಅವರ ಮಕ್ಕಳೂ ಸುಖವಾಗಿ ಸದಾಕಾಲ ಬಾಳುತ್ತಿದ್ದರು.
ನಿಜವಾದ ಸ್ವಾತಂತ್ರ್ಯ ಕಳೆದುಹೋದ ವಿಧ
9. ಆದಿಕಾಂಡ 2:17ರಲ್ಲಿರುವ ದೇವರ ಆಜ್ಞೆ ಯಾಕೆ ಅನ್ಯಾಯವಾದ, ಅನಾವಶ್ಯಕವಾದ, ವಿಪರೀತವಾದ ಆಜ್ಞೆಯಾಗಿರಲಿಲ್ಲ?
9 ಯೆಹೋವ ದೇವರು ಆದಾಮಹವ್ವರಿಗೆ ಇನ್ನೊಂದು ಆಜ್ಞೆಯನ್ನೂ ಕೊಟ್ಟನು. ಈ ಆಜ್ಞೆಯನ್ನು ಪಾಲಿಸದೆ ಹೋದರೆ ಏನಾಗುತ್ತದೆ ಎಂದು ಸಹ ಸ್ಪಷ್ಟವಾಗಿ ಹೇಳಿದ್ದನು. “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ” ಎಂದಿದ್ದನು. (ಆದಿ. 2:17) ಈ ಆಜ್ಞೆ ಅನ್ಯಾಯವಾಗಿತ್ತಾ, ಅನಾವಶ್ಯಕವಾಗಿತ್ತಾ, ವಿಪರೀತವಾಗಿತ್ತಾ? ಇದು ಆದಾಮಹವ್ವರ ಸ್ವಾತಂತ್ರ್ಯವನ್ನು ಕಸಿದುಕೊಂಡುಬಿಟ್ಟಿತಾ? ಇಲ್ಲವೇ ಇಲ್ಲ. ದೇವರು ಈ ಆಜ್ಞೆಯನ್ನು ಕೊಟ್ಟದ್ದರಲ್ಲಿ ಅರ್ಥ ಇದೆ, ತುಂಬ ವಿವೇಕ ಇದೆ ಎಂದು ಅನೇಕ ಬೈಬಲ್ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಏನು ಗೊತ್ತಾಗುತ್ತದೆಂದು ಒಬ್ಬ ವಿದ್ವಾಂಸರು ಹೇಳಿದ್ದು: ‘ಮನುಷ್ಯರಿಗೆ ಯಾವುದು ಒಳ್ಳೇದು, ಯಾವುದು ಒಳ್ಳೇದಲ್ಲ ಅನ್ನುವುದು ದೇವರಿಗೆ ಮಾತ್ರ ಗೊತ್ತಿದೆ. “ಒಳ್ಳೇದನ್ನು” ಆನಂದಿಸಬೇಕಾದರೆ ಮಾನವರು ದೇವರಲ್ಲಿ ನಂಬಿಕೆ ಇಟ್ಟು ಆತನ ಮಾತನ್ನು ಕೇಳಬೇಕು. ಕೇಳದಿದ್ದರೆ ಯಾವುದು ಸರಿ, ಯಾವುದು ತಪ್ಪು ಎಂದು ಸ್ವತಃ ಅವರೇ ತೀರ್ಮಾನ ಮಾಡಬೇಕಾಗುತ್ತದೆ.’ ಇದು ಮಾನವರಿಗೆ ತುಂಬ ಕಷ್ಟವಾದ ವಿಷಯ.
10. ಇಚ್ಛಾಸ್ವಾತಂತ್ರ್ಯಕ್ಕೂ ಮತ್ತು ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಹಕ್ಕಿಗೂ ಇರುವ ವ್ಯತ್ಯಾಸವೇನು?
10 ಆದಾಮನು ದೇವರ ಕೈಗೊಂಬೆಯಾಗಿದ್ದನು ಎಂದು ಕೆಲವರು ನೆನಸಬಹುದು. ಆದರೆ ದೇವರು ಅವನಿಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದನು. ಈ ಇಚ್ಛಾಸ್ವಾತಂತ್ರ್ಯ ಅಥವಾ ಏನು ಮಾಡಬೇಕೆಂದು ಆಯ್ಕೆ ಮಾಡುವ ಹಕ್ಕಿಗೂ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಹಕ್ಕಿಗೂ ವ್ಯತ್ಯಾಸ ಇದೆ. ದೇವರ ಮಾತನ್ನು ಕೇಳಬೇಕಾ, ಕೇಳಬಾರದಾ ಎಂದು ತೀರ್ಮಾನಿಸುವ ಸ್ವಾತಂತ್ರ್ಯ ಆದಾಮಹವ್ವರಿಗಿತ್ತು. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಹಕ್ಕು ಯೆಹೋವನಿಗೆ ಮಾತ್ರ ಇದೆ. ಈ ವಿಷಯವನ್ನು ಆದಾಮಹವ್ವರು ‘ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷವನ್ನು’ ನೋಡಿ ಅರ್ಥಮಾಡಿಕೊಳ್ಳಬೇಕಿತ್ತು. (ಆದಿ. 2:9) ನಾವು ಮಾಡುವ ಆಯ್ಕೆಗಳ ಪರಿಣಾಮ ಏನಾಗುತ್ತದೆ ಅಥವಾ ಯಾವಾಗಲೂ ಒಳ್ಳೇದೇ ಆಗುತ್ತದೆ ಎಂದು ಪ್ರತಿ ಸಾರಿ ಹೇಳಲು ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದಲೇ ಜನರು ಒಳ್ಳೇ ಉದ್ದೇಶ ಇಟ್ಟುಕೊಂಡು ಮಾಡುವ ಆಯ್ಕೆಗಳ ಪರಿಣಾಮ ಕೂಡ ಅನೇಕ ಸಲ ದುಃಖ, ನೋವು, ಸಂಕಟವನ್ನು ತರುತ್ತದೆ. (ಜ್ಞಾನೋ. 14:12) ಹೌದು, ಮಾನವರಿಗೆ ಇತಿಮಿತಿಗಳಿವೆ. ಏದೆನಿನಲ್ಲಿದ್ದ ವೃಕ್ಷದ ಹಣ್ಣನ್ನು ತಿನ್ನಬಾರದೆಂಬ ಆಜ್ಞೆಯನ್ನು ಕೊಡುವ ಮೂಲಕ ನಿಜ ಸ್ವಾತಂತ್ರ್ಯ ಬೇಕಾದರೆ ಆದಾಮಹವ್ವ ತನ್ನ ಮಾತನ್ನು ಕೇಳಬೇಕೆಂದು ಯೆಹೋವನು ಕಲಿಸಿದನು. ಅವರಿಬ್ಬರು ದೇವರ ಮಾತನ್ನು ಕೇಳಿದರಾ?
11, 12. (ಎ) ಆದಾಮಹವ್ವ ಮಾಡಿದ ಆಯ್ಕೆ ಹೇಗೆ ಅನಾಹುತಕ್ಕೆ ನಡಿಸಿತು? (ಬಿ) ಇದಕ್ಕೊಂದು ಉದಾಹರಣೆ ಕೊಡಿ.
11 ದುಃಖಕರವಾಗಿ ಆದಾಮ ಮತ್ತು ಹವ್ವ ದೇವರ ಮಾತನ್ನು ಕೇಳಲಿಲ್ಲ. ಹವ್ವಳು ಸೈತಾನನ ಮಾತನ್ನು ಕೇಳುವ ಆಯ್ಕೆ ಮಾಡಿದಳು. ಅವನು ಅವಳಿಗೆ ಈ ಮಾತು ಕೊಟ್ಟನು: “ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” (ಆದಿ. 3:5) ಸೈತಾನ ಹೇಳಿದಂತೆ ಆದಾಮಹವ್ವರಿಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಿತಾ? ಇಲ್ಲ. ಯೆಹೋವನ ಮಾತನ್ನು ಮೀರಿದ್ದರಿಂದ ಎಲ್ಲಾ ಹಾಳಾಗಿ ಹೋಯಿತು. (ಆದಿ. 3:16-19) ಯಾಕೆ? ಯಾಕೆಂದರೆ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಸ್ವಾತಂತ್ರ್ಯವನ್ನು ಯೆಹೋವನು ಮಾನವರಿಗೆ ಕೊಟ್ಟಿರಲಿಲ್ಲ.—ಜ್ಞಾನೋಕ್ತಿ 20:24;a ಯೆರೆಮೀಯ 10:23 ಓದಿ.
12 ಇದನ್ನು ಅರ್ಥಮಾಡಿಕೊಳ್ಳಲು ಒಬ್ಬ ವಿಮಾನ ಚಾಲಕನ ಉದಾಹರಣೆ ನೋಡಿ. ಅವನು ವಿಮಾನವನ್ನು ಸುರಕ್ಷಿತವಾಗಿ ಚಲಾಯಿಸಿ ಹೋಗಬೇಕಾದ ಸ್ಥಳಕ್ಕೆ ತಲಪಬೇಕಾದರೆ ಅವನಿಗೆ ಕೊಡಲಾಗಿರುವ ಮಾರ್ಗದಲ್ಲೇ ವಿಮಾನವನ್ನು ಚಲಾಯಿಸಬೇಕು. ವಿಮಾನದಲ್ಲಿರುವ ಉಪಕರಣಗಳ ಸಹಾಯದಿಂದ ಅವನು ಇದನ್ನು ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ನಿಯಂತ್ರಣ ಕೇಂದ್ರದಿಂದ ಸಿಗುವ ನಿರ್ದೇಶನಗಳನ್ನೂ ಪಾಲಿಸಬೇಕು. ಆದರೆ ವಿಮಾನ ಚಾಲಕನು ಯಾವ ನಿರ್ದೇಶನವನ್ನೂ ಪಾಲಿಸದೆ ತನಗಿಷ್ಟವಾದ ಕಡೆ ವಿಮಾನವನ್ನು ಚಲಾಯಿಸುವುದಾದರೆ ಗಂಡಾಂತರವನ್ನು ಕೈಬೀಸಿ ಕರೆದಂತೆ. ಆದಾಮಹವ್ವ ಸಹ ಇದೇ ಸನ್ನಿವೇಶವನ್ನು ಎದುರಿಸಿದರು. ಅವರು ತಮಗಿಷ್ಟ ಬಂದ ಹಾಗೆ ಮಾಡಲು ತೀರ್ಮಾನಿಸಿದರು. ದೇವರ ಮಾರ್ಗದರ್ಶನವನ್ನು ತಿರಸ್ಕರಿಸಿದರು. ಫಲಿತಾಂಶ? ಅನಾಹುತ! ಅವರ ತೀರ್ಮಾನದಿಂದಾಗಿ ಪಾಪ ಮತ್ತು ಮರಣ ಅವರಿಗೆ ಮಾತ್ರವಲ್ಲ, ಅವರ ಮಕ್ಕಳಿಗೂ ಬಂತು. (ರೋಮ. 5:12) ಯಾವುದು ಸರಿ, ಯಾವುದು ತಪ್ಪು ಎಂದು ಸ್ವತಃ ತೀರ್ಮಾನಿಸುವ ಆಯ್ಕೆ ಮಾಡಿದ್ದರಿಂದ ಅವರಿಗೆ ಹೆಚ್ಚು ಸ್ವಾತಂತ್ರ್ಯ ಸಿಗಲಿಲ್ಲ. ಬದಲಿಗೆ ಯೆಹೋವನು ಅವರಿಗೆ ಕೊಟ್ಟಿದ್ದ ನಿಜ ಸ್ವಾತಂತ್ರ್ಯವನ್ನೂ ಅವರು ಕಳಕೊಂಡರು.
ನಿಜವಾದ ಸ್ವಾತಂತ್ರ್ಯ ಸಿಗುವ ವಿಧ
13, 14. ನಾವು ನಿಜ ಸ್ವಾತಂತ್ರ್ಯವನ್ನು ಹೇಗೆ ಪಡೆಯಬಹುದು?
13 ಯಾವುದೇ ನಿರ್ಬಂಧಗಳಿಲ್ಲದ ಸ್ವಾತಂತ್ರ್ಯ ಸಿಕ್ಕಿದರೆ ಚೆನ್ನಾಗಿರುತ್ತದೆ ಎಂದು ಕೆಲವರು ನೆನಸುತ್ತಾರೆ. ಆದರೆ ಇದು ನಿಜಕ್ಕೂ ಚೆನ್ನಾಗಿರುತ್ತದಾ? ಸ್ವಾತಂತ್ರ್ಯದಿಂದ ತುಂಬ ಪ್ರಯೋಜನ ಸಿಗುತ್ತದಾದರೂ ಯಾವುದೇ ನಿರ್ಬಂಧಗಳು ಇಲ್ಲದಿದ್ದರೆ ಈ ಲೋಕ ಹೇಗಿರುತ್ತದೆಂದು ಸ್ವಲ್ಪ ಯೋಚಿಸಿ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದೇನೆಂದರೆ, ಪ್ರತಿ ಸಮಾಜದ ನೀತಿ-ನಿಯಮಗಳು ಜಟಿಲವಾಗಿವೆ. ಯಾಕೆಂದರೆ ಅವು ಜನರನ್ನು ಸಂರಕ್ಷಿಸಬೇಕು, ಅದೇ ಸಮಯದಲ್ಲಿ ಅವರ ಸ್ವಾತಂತ್ರ್ಯವನ್ನೂ ನಿರ್ಬಂಧಿಸಬೇಕು. ಇದು ಯಾವಾಗಲೂ ಸುಲಭವಲ್ಲ. ಇದರಿಂದಾಗಿಯೇ ಲೆಕ್ಕವಿಲ್ಲದಷ್ಟು ನಿಯಮಗಳಿವೆ ಮತ್ತು ಅವನ್ನು ವಿವರಿಸಿ ಅನ್ವಯಿಸಲು ವಕೀಲರ ಮತ್ತು ನ್ಯಾಯಾಧೀಶರ ದಂಡೇ ಇದೆ.
14 ನಮಗೆ ನಿಜವಾದ ಸ್ವಾತಂತ್ರ್ಯ ಹೇಗೆ ಸಿಗುತ್ತದೆ ಎಂದು ಯೇಸು ಕ್ರಿಸ್ತನು ವಿವರಿಸಿದನು. “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ ನಿಜವಾಗಿಯೂ ನನ್ನ ಶಿಷ್ಯರಾಗಿರುವಿರಿ; ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು” ಎಂದು ಆತನು ಹೇಳಿದನು. (ಯೋಹಾ. 8:31, 32) ನಮಗೆ ನಿಜ ಸ್ವಾತಂತ್ರ್ಯ ಬೇಕಿದ್ದರೆ ಎರಡು ವಿಷಯಗಳನ್ನು ಮಾಡಬೇಕು. ಮೊದಲನೇದು, ನಾವು ಯೇಸು ಕಲಿಸಿದ ಸತ್ಯವನ್ನು ಸ್ವೀಕರಿಸಬೇಕು. ಎರಡನೇದು, ನಾವು ಆತನ ಶಿಷ್ಯರಾಗಬೇಕು. ಈ ವಿಷಯಗಳು ನಿಜ ಸ್ವಾತಂತ್ರ್ಯ ಕೊಡುತ್ತವೆ. ಆದರೆ ಯಾವುದರಿಂದ ಸ್ವಾತಂತ್ರ್ಯ ಕೊಡುತ್ತವೆ? “ಪಾಪಮಾಡುವ ಪ್ರತಿಯೊಬ್ಬನು ಪಾಪಕ್ಕೆ ದಾಸನಾಗಿದ್ದಾನೆ” ಎಂದು ಯೇಸು ಹೇಳಿದನು. ಆದರೆ “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಮಗೆ ನಿಜವಾಗಿಯೂ ಬಿಡುಗಡೆಯಾಗುವುದು” ಎಂದನು.—ಯೋಹಾ. 8:34, 36.
15. ಯೇಸು ಕೊಡುವ ಸ್ವಾತಂತ್ರ್ಯ ನಮಗೆ ಹೇಗೆ ‘ನಿಜವಾದ ಬಿಡುಗಡೆ’ ಆಗಿರುತ್ತದೆ?
15 ಯೇಸು ತನ್ನ ಶಿಷ್ಯರಿಗೆ ಕೊಡುತ್ತೇನೆಂದು ಮಾತು ಕೊಟ್ಟಿರುವ ಸ್ವಾತಂತ್ರ್ಯ ಇಂದು ಹೆಚ್ಚಿನ ಜನರು ಬಯಸುವಂಥ ಸ್ವಾತಂತ್ರ್ಯಕ್ಕಿಂತ ಎಷ್ಟೋ ಮೇಲಾದದ್ದು. ಆತನು ಹೇಳಿದ್ದು: “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಮಗೆ ನಿಜವಾಗಿಯೂ ಬಿಡುಗಡೆಯಾಗುವುದು.” ಪಾಪದ ದಾಸತ್ವದಿಂದ ಬಿಡುಗಡೆ ಆಗುವುದರ ಕುರಿತು ಆತನು ಮಾತಾಡುತ್ತಿದ್ದನು. ಇದು ಮಾನವನಿಗೆ ತುಂಬ ಕಷ್ಟಕೊಟ್ಟಿರುವ ದಾಸತ್ವವಾಗಿದೆ. ನಾವು ಯಾವ ವಿಧದಲ್ಲಿ ಪಾಪಕ್ಕೆ ದಾಸರಾಗಿದ್ದೇವೆ? ಪಾಪದಿಂದಾಗಿ ನಾವು ಕೆಟ್ಟ ವಿಷಯಗಳನ್ನು ಮಾಡುತ್ತೇವೆ. ಅಷ್ಟೇ ಅಲ್ಲ, ಒಂದು ವಿಷಯ ಸರಿ ಅಂತ ಗೊತ್ತಿದ್ದರೂ ಅದನ್ನು ಮಾಡುವುದರಿಂದ ಪಾಪ ನಮ್ಮನ್ನು ತಡೆಯುತ್ತದೆ. ಇದರ ಪರಿಣಾಮವಾಗಿ ಜೀವನದಲ್ಲಿ ಜಿಗುಪ್ಸೆ, ನೋವು, ಸಂಕಟ, ಕೊನೆಗೆ ಸಾವು ಬರುತ್ತದೆ. (ರೋಮ. 6:23) ಪಾಪಕ್ಕೆ ದಾಸನಾಗಿರುವುದೆಂದರೆ ಏನೆಂದು ಅಪೊಸ್ತಲ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (ರೋಮನ್ನರಿಗೆ 7:21-25 ಓದಿ.) ಪಾಪವನ್ನು ಸಂಪೂರ್ಣವಾಗಿ ತೆಗೆದುಹಾಕುವಾಗ ಮಾತ್ರ ಆದಾಮಹವ್ವರು ಕಳಕೊಂಡ ನಿಜ ಸ್ವಾತಂತ್ರ್ಯ ನಮಗೆ ಸಿಗುತ್ತದೆ.
16. ನಮಗೆ ನಿಜವಾದ ಬಿಡುಗಡೆ ಹೇಗೆ ಸಿಗುತ್ತದೆ?
16 “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ” ಎಂದು ಯೇಸು ಹೇಳಿದ ಮಾತಿನಿಂದ ನಮಗೇನು ಗೊತ್ತಾಗುತ್ತದೆ ಅಂದರೆ, ಯೇಸು ನಮ್ಮನ್ನು ಬಿಡುಗಡೆ ಮಾಡಬೇಕಾದರೆ ನಾವು ಕೆಲವು ಮಿತಿ-ಮೇರೆಯೊಳಗೇ ಜೀವಿಸಬೇಕು. ಸಮರ್ಪಿತ ಕ್ರೈಸ್ತರಾಗಿ ನಾವು ನಮ್ಮನ್ನೇ ನಿರಾಕರಿಸಿದ್ದೇವೆ ಮತ್ತು ಯೇಸು ತನ್ನ ಶಿಷ್ಯರಿಗೆ ಇಟ್ಟಿರುವ ಮಿತಿಗಳನ್ನು ಪಾಲಿಸುವ ಆಯ್ಕೆ ಮಾಡಿದ್ದೇವೆ. (ಮತ್ತಾ. 16:24) ನಾವು ಅದರಂತೆ ಜೀವಿಸಿದರೆ ಯೇಸು ಮಾತು ಕೊಟ್ಟ ಹಾಗೆ, ಭವಿಷ್ಯದಲ್ಲಿ ವಿಮೋಚನಾ ಮೌಲ್ಯದ ಎಲ್ಲ ಪ್ರಯೋಜನಗಳನ್ನು ಪಡೆಯುವಾಗ ನಮಗೆ ನಿಜವಾದ ಬಿಡುಗಡೆ ಸಿಗುತ್ತದೆ.
17. (ಎ) ಜೀವನದಲ್ಲಿ ನಿಜವಾದ ಸಂತೋಷ, ಸಂತೃಪ್ತಿ ಬೇಕಾದರೆ ನಾವೇನು ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?
17 ಜೀವನದಲ್ಲಿ ನಿಜವಾದ ಸಂತೋಷ, ಸಂತೃಪ್ತಿ ಬೇಕಾದರೆ ನಾವು ಯೇಸುವಿನ ಶಿಷ್ಯರಂತೆ ಆತನ ಬೋಧನೆಗಳನ್ನು ಪಾಲಿಸಬೇಕು. ಇದನ್ನು ಮಾಡುವಾಗ ಪಾಪ ಮತ್ತು ಮರಣದ ದಾಸತ್ವದಿಂದ ಸಂಪೂರ್ಣವಾಗಿ ಬಿಡುಗಡೆಯಾಗುವ ಬಹುಮಾನ ಸಿಗುತ್ತದೆ. (ರೋಮನ್ನರಿಗೆ 8:1, 2, 20, 21 ಓದಿ.) ನಮಗೆ ಈಗ ಸಿಕ್ಕಿರುವ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವುದು ಹೇಗೆಂದು ಮುಂದಿನ ಲೇಖನದಲ್ಲಿ ಕಲಿಯೋಣ. ಆಗ ನಾವು ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನಿಗೆ ಘನಮಾನವನ್ನು ಸದಾಕಾಲ ಸಲ್ಲಿಸುವೆವು.
a ಜ್ಞಾನೋಕ್ತಿ 20:24 ಮತ್ತು ಪಾದಟಿಪ್ಪಣಿ (NW): “ಯೆಹೋವನು ಮನುಷ್ಯನ ಹೆಜ್ಜೆಯನ್ನು ಮಾರ್ಗದರ್ಶಿಸುತ್ತಾನೆ. ಇಲ್ಲವಾದರೆ ಯಾವ ಕಡೆ ಹೋಗುವುದೆಂದು ಮಾನವನಿಗೆ ಹೇಗೆ ಗೊತ್ತಾಗುತ್ತದೆ?”