ನಾಲಗೆಯನ್ನು ನಿಯಂತ್ರಿಸುವ ಮೂಲಕ ಪ್ರೀತಿಗೌರವ ತೋರಿಸಿರಿ
“ನಿಮ್ಮಲ್ಲಿ ಪ್ರತಿ ಪುರುಷನೂ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.”—ಎಫೆಸ 5:33, NIBV.
ನಿಮಗೆ ಒಂದು ಗಿಫ್ಟ್ ಪ್ಯಾಕೆಟ್ ಸಿಕ್ಕಿದೆಯೆಂದು ನೆನಸಿರಿ. ಅದರ ಮೇಲೆ ‘ಜೋಪಾನ’ ಎಂಬ ಬರವಣಿಗೆ ಇದೆ. ಆ ಗಿಫ್ಟ್ ಪ್ಯಾಕೆಟ್ ಅನ್ನು ನೀವು ಹೇಗೆ ಇಟ್ಟುಕೊಳ್ಳುವಿರಿ? ಅದಕ್ಕೆ ಏನೂ ಹಾನಿಯಾಗದಂತೆ ನೀವು ಖಂಡಿತವಾಗಿ ತುಂಬ ಮುಂಜಾಗ್ರತೆ ವಹಿಸುವಿರಿ. ವಿವಾಹವೆಂಬ ಗಿಫ್ಟ್ ಇಲ್ಲವೆ ಉಡುಗೊರೆಯ ಕುರಿತಾಗಿ ಏನು?
2 ಒರ್ಫಾ ಹಾಗೂ ರೂತಳೆಂಬ ಯುವ ಸ್ತ್ರೀಯರಿಗೆ, ಇಸ್ರಾಯೇಲ್ಯ ವಿಧವೆಯಾದ ನವೊಮಿ ಹೇಳಿದ್ದು: “ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು [“ಉಡುಗೊರೆಯನ್ನು,” NW] ಅನುಗ್ರಹಿಸಲಿ.” (ರೂತಳು 1:3-9) ಒಬ್ಬ ಒಳ್ಳೇ ಪತ್ನಿ ಬಗ್ಗೆ ಬೈಬಲ್ ಹೇಳುವುದು: “ಮನೆಮಾರೂ ಆಸ್ತಿಪಾಸ್ತಿಯೂ ಪಿತೃಗಳಿಂದ ದೊರಕುವವು; ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.” (ಜ್ಞಾನೋಕ್ತಿ 19:14) ನೀವು ವಿವಾಹಿತರಾಗಿರುವಲ್ಲಿ, ನಿಮ್ಮ ಸಂಗಾತಿಯನ್ನು ದೇವರಿಂದ ಬಂದ ಉಡುಗೊರೆಯಾಗಿ ದೃಷ್ಟಿಸಬೇಕು. ದೇವರು ನಿಮಗೆ ಕೊಟ್ಟಿರುವ ಈ ಉಡುಗೊರೆಯನ್ನು ನೀವು ಹೇಗೆ ನೋಡಿಕೊಳ್ಳುತ್ತಿದ್ದೀರಿ?
3 ಪ್ರಥಮ ಶತಮಾನದ ಕ್ರೈಸ್ತರಿಗೆ ಬರೆಯುತ್ತಾ ಅಪೊಸ್ತಲ ಪೌಲನು ಹೇಳಿದ್ದು: “ನಿಮ್ಮಲ್ಲಿ ಪ್ರತಿ ಪುರುಷನೂ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.” (ಎಫೆಸ 5:33, NIBV) ಈ ಹಿತೋಪದೇಶವನ್ನು ಗಂಡಹೆಂಡತಿಯರು ತಮ್ಮ ಮಾತುಗಳ ವಿಷಯದಲ್ಲಿ ಹೇಗೆ ಪಾಲಿಸಬಹುದೆಂಬುದನ್ನು ಪರಿಗಣಿಸಿರಿ.
‘ಸುಮ್ಮನಿರಲಾರದ ಕೆಡುಕಿನ’ ಬಗ್ಗೆ ಎಚ್ಚರ!
4 ಬೈಬಲಿನ ಒಬ್ಬ ಲೇಖಕನಾದ ಯಾಕೋಬನು ಹೇಳುವುದೇನೆಂದರೆ, ನಾಲಗೆಯು “ಸುಮ್ಮನಿರಲಾರದ ಕೆಡುಕಾಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ.” (ಯಾಕೋಬ 3:8) ಸುಮ್ಮನಿರಲಾರದ ನಾಲಗೆಯು ವಿನಾಶಕಾರಿಯಾಗಿದೆ ಎಂಬ ಪ್ರಮುಖ ಸತ್ಯದ ಬಗ್ಗೆ ಯಾಕೋಬನಿಗೆ ತಿಳಿದಿತ್ತು. ಆಲೋಚಿಸದೇ ಆಡಲ್ಪಟ್ಟ ಮಾತುಗಳನ್ನು ‘ಕತ್ತಿಯ ತಿವಿತಗಳಿಗೆ’ ಹೋಲಿಸುವ ಬೈಬಲ್ ಜ್ಞಾನೋಕ್ತಿಯ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿತ್ತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದೇ ಜ್ಞಾನೋಕ್ತಿಯು, “ಮತಿವಂತರ ಮಾತೇ ಮದ್ದು” ಎಂದು ಸಹ ಹೇಳುತ್ತದೆ. (ಜ್ಞಾನೋಕ್ತಿ 12:18) ವಾಸ್ತವದಲ್ಲಿ ಮಾತುಗಳು ಬೀರುವ ಪರಿಣಾಮವು ತುಂಬ ಪ್ರಬಲವಾಗಿರಬಲ್ಲದು. ಅವು ಘಾಸಿಯೂ ಮಾಡಬಲ್ಲವು, ವಾಸಿಯೂ ಮಾಡಬಲ್ಲವು. ನಿಮ್ಮ ಮಾತುಗಳು ನಿಮ್ಮ ವಿವಾಹ ಸಂಗಾತಿಯ ಮೇಲೆ ಯಾವ ಪರಿಣಾಮಬೀರುತ್ತಿವೆ? ನೀವು ಅವರಿಗೆ ಈ ಪ್ರಶ್ನೆ ಕೇಳುವಲ್ಲಿ ಅವರ ಉತ್ತರವೇನಾಗಿರಬಹುದು?
5 ಮನನೋಯಿಸುವಂಥ ಮಾತುಗಳು ನಿಧಾನವಾಗಿ ನಿಮ್ಮ ವಿವಾಹಜೀವನದೊಳಗೆ ನುಸುಳಿ, ಈಗ ಅದರ ಒಂದು ಭಾಗವಾಗಿಬಿಟ್ಟಿರುವಲ್ಲಿ, ಈ ಸನ್ನಿವೇಶವನ್ನು ನೀವು ಬದಲಾಯಿಸಬಹುದು. ಆದರೆ ಇದಕ್ಕಾಗಿ ನಿಮ್ಮಿಂದ ಪ್ರಯತ್ನ ಆವಶ್ಯಕ. ಏಕೆ? ಒಂದು ಕಾರಣವೇನೆಂದರೆ, ನೀವು ಅಪರಿಪೂರ್ಣತೆಯೊಂದಿಗೆ ಸೆಣಸಾಡಬೇಕಾಗಿದೆ. ಬಾಧ್ಯತೆಯಾಗಿ ಬಂದಿರುವ ಪಾಪವು, ನಾವು ಪರಸ್ಪರರ ಕುರಿತು ಯೋಚಿಸುವ ಮತ್ತು ಪರಸ್ಪರರೊಂದಿಗೆ ಮಾತಾಡುವ ರೀತಿಯ ಮೇಲೆ ನಕಾರಾತ್ಮಕ ಪ್ರಭಾವಬೀರುತ್ತದೆ. “ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ” ಎಂದು ಯಾಕೋಬನು ಬರೆದನು.—ಯಾಕೋಬ 3:2.
6 ಮಾನವ ಅಪರಿಪೂರ್ಣತೆಯಲ್ಲದೆ ಒಬ್ಬ ವ್ಯಕ್ತಿ ಬೆಳೆದುಬಂದಿರುವ ಕುಟುಂಬ ವಾತಾವರಣ ಸಹ ನಾಲಗೆಯ ದುರ್ಬಳಕೆಯಲ್ಲಿ ಒಂದು ಪಾತ್ರವಹಿಸುತ್ತದೆ. ಹೆತ್ತವರು “ಸಮಾಧಾನವಾಗದವರೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ” ಆಗಿದ್ದ ಮನೆತನಗಳಲ್ಲಿ ಕೆಲವರು ಬೆಳೆದುಬಂದಿದ್ದಾರೆ. (2 ತಿಮೊಥೆಯ 3:1-3) ಅಂಥ ಪರಿಸರದಲ್ಲಿ ಬೆಳೆದಿರುವ ಮಕ್ಕಳು ದೊಡ್ಡವರಾದಾಗ ಅನೇಕವೇಳೆ ಅದೇ ಗುಣಗಳನ್ನು ಪ್ರದರ್ಶಿಸುತ್ತಾರೆ. ಹಾನಿಕರ ಮಾತುಗಳನ್ನು ಉಪಯೋಗಿಸುತ್ತಿರುವುದಕ್ಕಾಗಿ ಅಪರಿಪೂರ್ಣತೆಯಾಗಲಿ, ಲೋಪಭರಿತ ಪಾಲನೆಯಾಗಲಿ ಒಂದು ನೆಪವಲ್ಲ ನಿಶ್ಚಯ. ಆದರೆ ಈ ಅಂಶಗಳ ಬಗ್ಗೆ ನಮಗಿರುವ ಅರಿವು, ಹಾನಿಕರ ಮಾತುಗಳನ್ನಾಡದಂತೆ ನಾಲಗೆಯನ್ನು ಅಂಕೆಯಲ್ಲಿಡುವುದು ಕೆಲವರಿಗೆ ಏಕೆ ತುಂಬ ಕಷ್ಟವಾಗುತ್ತದೆಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ.
‘ನಿಂದೆಯನ್ನು ವಿಸರ್ಜಿಸಿ’
7 ವಿವಾಹ ಸಂಗಾತಿಗಳು ಮನನೋಯಿಸುವಂಥ ಮಾತುಗಳನ್ನು ಯಾವುದೇ ಕಾರಣಕ್ಕಾಗಿ ಆಡಿದರೂ ಅದು, ಅವರಿಗೆ ತಮ್ಮ ಸಂಗಾತಿಯ ಕಡೆಗೆ ಪ್ರೀತಿಗೌರವದ ಕೊರತೆಯಿದೆ ಎಂಬುದನ್ನು ಸೂಚಿಸಸಾಧ್ಯವಿದೆ. ಕ್ರೈಸ್ತರು ‘ಎಲ್ಲಾ ತರದ ನಿಂದೆಯನ್ನು ವಿಸರ್ಜಿಸಬೇಕು’ ಎಂಬ ಬುದ್ಧಿವಾದವನ್ನು ಕೊಡಲು ಪೇತ್ರನಿಗೆ ಸಕಾರಣವಿತ್ತು. (1 ಪೇತ್ರ 2:1) “ನಿಂದೆ” ಎಂದು ಭಾಷಾಂತರಿಸಲಾಗಿರುವ ಮೂಲ ಗ್ರೀಕ್ ಪದದ ಅರ್ಥ, “ಅವಮಾನಿಸುವ ಭಾಷೆ” ಎಂದಾಗಿದೆ. ಅದು, ‘ಜನರೆಡೆಗೆ ಬಿರುಸಾದ ಮಾತುಗಳನ್ನೆಸೆಯುವುದು’ ಎಂಬ ವಿಚಾರವನ್ನು ಮನಸ್ಸಿಗೆ ತರುತ್ತದೆ. ಇದು, ಸುಮ್ಮನಿರಲಾರದ ಒಂದು ನಾಲಗೆಯ ಪರಿಣಾಮಗಳನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತದೆ!
8 ಅವಮಾನಿಸುವ ಭಾಷೆಯು ತುಂಬ ಗಂಭೀರವಾದದ್ದಾಗಿ ತೋರಲಿಕ್ಕಿಲ್ಲ. ಆದರೆ ಅಂಥ ಭಾಷೆಯನ್ನು ಒಬ್ಬ ಗಂಡ ಅಥವಾ ಹೆಂಡತಿ ಉಪಯೋಗಿಸುವಾಗ ಏನಾಗುತ್ತದೆಂಬುದನ್ನು ಸ್ವಲ್ಪ ಪರಿಗಣಿಸಿರಿ. ಒಬ್ಬ ವ್ಯಕ್ತಿ ತನ್ನ ಸಂಗಾತಿಯನ್ನು ‘ಮೂರ್ಖ/ಳು,’ ‘ಸೋಮಾರಿ’ ಅಥವಾ ‘ಸ್ವಾರ್ಥಿ’ ಎಂದು ಕರೆಯುವುದರಿಂದ, ಆ ಸಂಗಾತಿಯ ಇಡೀ ಸ್ವಭಾವಕ್ಕೆ ಒಂದೇ ಮಾತಿನ ಹಣೆಪಟ್ಟಿಯನ್ನು, ಅದೂ ತುಂಬ ತುಚ್ಛವಾದ ಹಣೆಪಟ್ಟಿಯನ್ನು ಕಟ್ಟುತ್ತಿದ್ದಾರೆಂಬುದನ್ನು ಸೂಚಿಸುತ್ತದೆ. ಇದು ಖಂಡಿತವಾಗಿಯೂ ಕ್ರೂರವಾದ ಸಂಗತಿಯಾಗಿದೆ. ಸಂಗಾತಿಯ ದೋಷಗಳನ್ನು ಎತ್ತಿಹಿಡಿಯುವಂಥ, ಬಣ್ಣಕಟ್ಟಲಾಗಿರುವ ಹೇಳಿಕೆಗಳ ಕುರಿತಾಗಿ ಏನು? ‘ನೀನು ಯಾವಾಗ ನೋಡಿದ್ರೂ ತಡಮಾಡುತ್ತೀ’ ಇಲ್ಲವೆ ‘ಒಂದು ಸಲವಾದರೂ ನನ್ನ ಮಾತು ಕೇಳಿದ್ದೀರಾ?’ ಎಂಬಂಥ ಹೇಳಿಕೆಗಳು ಅತಿಶಯಮಾಡಿ ಹೇಳಲ್ಪಟ್ಟಿರುವ ಮಾತುಗಳಲ್ಲವೆ? ಇಂಥ ಹೇಳಿಕೆಗಳು ತನ್ನನ್ನು ಸಮರ್ಥಿಸುವಂಥ ಉತ್ತರವನ್ನು ಕೊಡುವಂತೆ ಸಂಗಾತಿಯನ್ನು ಕೆರಳಿಸುವುದು ಖಂಡಿತ ಮತ್ತು ಇದು, ವಾಗ್ವಾದಕ್ಕೆ ನಡೆಸುವುದು.—ಯಾಕೋಬ 3:5.
9 ಅವಮಾನಿಸುವ ಮಾತುಗಳು ತುಂಬಿರುವ ಸಂಭಾಷಣೆಯು ವಿವಾಹದಲ್ಲಿ ವಿರಸವನ್ನುಂಟುಮಾಡಬಲ್ಲದು ಮತ್ತು ಇದು ಗಂಭೀರ ಫಲಿತಾಂಶಗಳನ್ನೂ ತರಬಲ್ಲದು. ಜ್ಞಾನೋಕ್ತಿ 25:24 ಹೇಳುವುದು: “ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವದಕ್ಕಿಂತಲೂ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದೇ ಲೇಸು.” ಜಗಳಮಾಡುವ ಗಂಡನ ಬಗ್ಗೆಯೂ ಇದನ್ನು ಹೇಳಬಹುದು. ಸಂಗಾತಿಯ ಕೊಂಕುನುಡಿಗಳು ಸಮಯದಾಟಿದಂತೆ ವಿವಾಹ ಸಂಬಂಧವನ್ನು ಸವೆಯಿಸಿ, ಅವರಿಗೆ/ಳಿಗೆ ‘ನನ್ನ ಮೇಲೆ ಪ್ರೀತಿ ಇಲ್ಲ’ ಇಲ್ಲವೆ ‘ನಾನು ಪ್ರೀತಿಗೆ ಯೋಗ್ಯನಲ್ಲ/ಳಲ್ಲ’ ಎಂಬ ಭಾವನೆಯನ್ನು ಗಂಡನಲ್ಲಿ ಇಲ್ಲವೆ ಹೆಂಡತಿಯಲ್ಲಿ ಉಂಟುಮಾಡಬಹುದು. ನಾಲಗೆಯನ್ನು ಅಂಕೆಯಲ್ಲಿಡುವುದು ಪ್ರಾಮುಖ್ಯವೆಂಬುದು ಸ್ಪಷ್ಟ. ಆದರೆ ಇದನ್ನು ಮಾಡುವುದು ಹೇಗೆ?
‘ನಾಲಗೆಗೆ ಕಡಿವಾಣಹಾಕಿರಿ’
10 “ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು” ಎಂದು ಯಾಕೋಬ 3:8 ತಿಳಿಸುತ್ತದೆ. ಹಾಗಿದ್ದರೂ, ಕುದುರೆಸವಾರನೊಬ್ಬನು ಕುದುರೆಯನ್ನು ನಿಯಂತ್ರಿಸಲಿಕ್ಕಾಗಿ ಅದಕ್ಕೆ ಕಡಿವಾಣಹಾಕುವಂತೆಯೇ, ನಮ್ಮ ನಾಲಗೆಗೆ ಕಡಿವಾಣಹಾಕಲು ನಾವು ನಮ್ಮಿಂದಾದಷ್ಟು ಉತ್ತಮ ಪ್ರಯತ್ನಮಾಡಬೇಕು. “ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನವಾಗಿದೆ.” (ಯಾಕೋಬ 1:26; 3:2, 3) ಈ ಮಾತುಗಳು, ನೀವು ನಿಮ್ಮ ನಾಲಗೆಯನ್ನು ಹೇಗೆ ಬಳಸುತ್ತೀರೆಂಬುದು ಒಂದು ಗಂಭೀರ ವಿಷಯವಾಗಿದೆಯೆಂದು ತೋರಿಸುತ್ತವೆ. ಅದು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಾಧಿಸುತ್ತದೆ ಮಾತ್ರವಲ್ಲ, ಯೆಹೋವ ದೇವರೊಂದಿಗಿನ ನಿಮ್ಮ ಸಂಬಂಧವನ್ನೂ ಬಾಧಿಸುತ್ತದೆ.—1 ಪೇತ್ರ 3:7.
11 ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡುತ್ತೀರೆಂಬುದಕ್ಕೆ ಗಮನಕೊಡುವುದು ವಿವೇಕದ ಸಂಗತಿ. ಒತ್ತಡಭರಿತ ಸನ್ನಿವೇಶವು ಉದ್ಭವಿಸುವಲ್ಲಿ, ಟೆನ್ಷನ್ ಕಡಿಮೆಮಾಡಲು ಪ್ರಯತ್ನಿಸಿರಿ. ಇಸಾಕ ಮತ್ತು ಅವನ ಪತ್ನಿ ರೆಬೆಕ್ಕಳ ಜೀವನದಲ್ಲಿ ಎದ್ದಂಥ ಒಂದು ಸನ್ನಿವೇಶವನ್ನು ಪರಿಗಣಿಸಿರಿ. ಇದನ್ನು ಆದಿಕಾಂಡ 27:46–28:4ರಲ್ಲಿ ದಾಖಲಿಸಲಾಗಿದೆ. “ರೆಬೆಕ್ಕಳು ಇಸಾಕನಿಗೆ—ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು ಎಂದು ಹೇಳಿದಳು.” ಈ ಮಾತಿಗೆ ಇಸಾಕನು ಒರಟಾಗಿ ಪ್ರತಿಕ್ರಿಯಿಸಿದನೆಂಬ ಯಾವ ಸೂಚನೆಯೂ ಇಲ್ಲ. ಅದಕ್ಕೆ ಬದಲಾಗಿ, ಇಸಾಕನು ರೆಬೆಕ್ಕಳನ್ನು ಸಂಕಟಕ್ಕೀಡುಮಾಡದೇ ಇರಬಹುದಾದ ಸ್ವಭಾವವುಳ್ಳ ದೇವಭಕ್ತ ಸ್ತ್ರೀಯನ್ನು ತಮ್ಮ ಮಗನಾದ ಯಾಕೋಬನಿಗೆ ಹೆಂಡತಿಯಾಗಿ ಹುಡುಕುವಂತೆ ಕಳುಹಿಸಿಕೊಟ್ಟನು. ಗಂಡಹೆಂಡತಿಯರ ನಡುವೆ ಒಂದು ಭಿನ್ನಾಭಿಪ್ರಾಯವೇಳುತ್ತದೆಂದು ನೆನಸಿರಿ. ಆಗ ಜಾಣ್ಮೆಯಿಂದ, “ನೀನು” ಎಂಬ ಪದದ ಬದಲಿಗೆ “ನಾನು” ಎಂಬ ಪದವನ್ನು ಬಳಸಿದರೆ ಒಂದು ಚಿಕ್ಕ ಭಿನ್ನಾಭಿಪ್ರಾಯವು ಬೆಳೆದು ಬಿರುಸಾದ ವಾಗ್ವಾದವಾಗುವುದನ್ನು ತಡೆಯಬಲ್ಲದು. ಉದಾಹರಣೆಗೆ, “ನೀನು ನನ್ನೊಟ್ಟಿಗೆ ಸಮಯವನ್ನೇ ಕಳೆಯುವುದಿಲ್ಲ” ಎಂದು ಹೇಳುವ ಬದಲು “ನಾವಿಬ್ಬರು ಹೆಚ್ಚು ಸಮಯ ಒಟ್ಟಿಗೆ ಕಳೆಯಬೇಕೆಂದು ನಾನು ತುಂಬ ಆಸೆಪಡ್ತೇನೆ” ಎಂದು ಹೇಳಬಾರದೇಕೆ? ಹೀಗೆ ಗಮನವನ್ನು ಕೇವಲ ವ್ಯಕ್ತಿಯ ಮೇಲಲ್ಲ ಬದಲಾಗಿ ಸಮಸ್ಯೆಯ ಮೇಲೆ ಕೇಂದ್ರೀಕರಿಸಿರಿ. ಯಾರು ಸರಿ ಯಾರು ತಪ್ಪು ಎಂಬುದನ್ನು ಕಂಡುಹಿಡಿಯುವ ಪ್ರವೃತ್ತಿಯನ್ನು ಪ್ರತಿರೋಧಿಸಿರಿ. “ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳೋಣ” ಎಂದು ರೋಮಾಪುರ 14:19 ಹೇಳುತ್ತದೆ.
“ದ್ವೇಷ ಕೋಪ ಕ್ರೋಧ”ವನ್ನು ದೂರಮಾಡಿರಿ
12 ನಾಲಗೆಯನ್ನು ಅಂಕೆಯಲ್ಲಿಡುವುದರಲ್ಲಿ, ನಾವೇನು ಹೇಳುತ್ತೇವೊ ಅದರ ಬಗ್ಗೆ ಎಚ್ಚರಿಕೆವಹಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ನಮ್ಮ ಮಾತುಗಳು ಕೇವಲ ಬಾಯಿಯಿಂದಲ್ಲ ಬದಲಾಗಿ ನಮ್ಮ ಹೃದಯದಿಂದ ಉದ್ಭವಿಸುವವುಗಳಾಗಿವೆ. ಯೇಸು ಹೇಳಿದ್ದು: “ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಲೂಕ 6:45) ಆದುದರಿಂದ, ನಿಮ್ಮ ನಾಲಗೆಯನ್ನು ನಿಯಂತ್ರಿಸಲಿಕ್ಕಾಗಿ ನೀವು ದಾವೀದನಂತೆಯೇ ಹೀಗೆ ಪ್ರಾರ್ಥಿಸಬೇಕಾದೀತು: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.”—ಕೀರ್ತನೆ 51:10.
13 ಮನನೋಯಿಸುವಂಥ ಮಾತುಗಳನ್ನು ಮಾತ್ರವಲ್ಲದೆ ಅದಕ್ಕೆ ಕಾರಣವಾಗಿರುವ ಭಾವನೆಗಳನ್ನೂ ದೂರವಿಡುವಂತೆ ಪೌಲನು ಎಫೆಸದವರನ್ನು ಪ್ರೇರಿಸಿದನು. ಅವನು ಬರೆದುದು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.” (ಎಫೆಸ 4:31) ಪೌಲನು “ಕಲಹ ದೂಷಣೆ”ಗಳ ಬಗ್ಗೆ ಹೇಳುವ ಮುಂಚೆ “ದ್ವೇಷ ಕೋಪ ಕ್ರೋಧ”ಗಳ ಬಗ್ಗೆ ಹೇಳಿದನೆಂಬುದನ್ನು ಗಮನಿಸಿರಿ. ಒಳಗೊಳಗೆಯೇ ಕುದಿಯುತ್ತಿರುವ ಕ್ರೋಧವು ಸ್ಫೋಟಿಸಿ ಮನನೋಯಿಸುವಂಥ ಮಾತುಗಳಲ್ಲಿ ಹೊರಚೆಲ್ಲುವ ಅಪಾಯವಿದೆ. ಆದುದರಿಂದ ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಹೃದಯದಲ್ಲಿ ನಾನು ಕಹಿಭಾವನೆ ಮತ್ತು ಕ್ರೋಧವನ್ನು ಪೋಷಿಸುತ್ತಿದ್ದೇನೊ? ನಾನು “ಕ್ರೋಧಶೀಲನೊ?”’ (ಜ್ಞಾನೋಕ್ತಿ 29:22) ಹೌದಾದರೆ, ಇಂಥ ಪ್ರವೃತ್ತಿಗಳನ್ನು ಜಯಿಸುವಂತೆ ಮತ್ತು ನಿಮ್ಮ ಕೋಪವು ಸ್ಫೋಟಿಸದಂತೆ ಸ್ವನಿಯಂತ್ರಣವನ್ನು ತೋರಿಸಲು ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ. ಕೀರ್ತನೆ 4:4 ಹೇಳುವುದು: “ಕೋಪಮಾಡಬೇಕಾದರೂ ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” (BSI reference edition ಪಾದಟಿಪ್ಪಣಿ) ಕೋಪವು ಹೆಚ್ಚಾಗುತ್ತಾ ಇದ್ದು, ನಿಮ್ಮ ಸ್ವನಿಯಂತ್ರಣವನ್ನು ಕಳೆದುಕೊಳ್ಳುವೀರೆಂದು ನಿಮಗೆ ಭಯವಿರುವಲ್ಲಿ, ಜ್ಞಾನೋಕ್ತಿ 17:14ರ (NW) ಈ ಹಿತೋಪದೇಶವನ್ನು ಪಾಲಿಸಿರಿ: “ಜಗಳವು ಆರಂಭವಾಗುವ ಮುಂಚೆ ಅಲ್ಲಿಂದ ಹೊರಡಿರಿ.” ಆ ಸನ್ನಿವೇಶದಿಂದ ಕ್ಷಣಮಾತ್ರಕ್ಕೆ ದೂರಹೋಗಿ, ಅಪಾಯವು ಸರಿದುಹೋಗುವಂತೆ ಕಾಯಿರಿ.
14 ಕೋಪಕ್ರೋಧಗಳನ್ನು ಹಿಡಿತದಲ್ಲಿಡುವುದು ಸುಲಭವಲ್ಲ. ವಿಶೇಷವಾಗಿ ಅದು ಪೌಲನು ಹೇಳಿದಂಥ ರೀತಿಯ ‘ದ್ವೇಷ’ದಿಂದ ಹುಟ್ಟುವಾಗಲಂತೂ ನಿಜ. ಇದಕ್ಕಾಗಿ ಪೌಲನು ಉಪಯೋಗಿಸಿದ ಗ್ರೀಕ್ ಪದವನ್ನು, “ಮನಸ್ತಾಪವನ್ನು ಪರಿಹರಿಸಲು ನಿರಾಕರಿಸುವಂಥ ಅಸಮಾಧಾನಭರಿತ ಮನೋವೃತ್ತಿ” ಮತ್ತು ‘ತಪ್ಪುಗಳ ಲೆಕ್ಕವನ್ನಿಡುವ ವೈರಭಾವ’ ಎಂದು ಅರ್ಥನಿರೂಪಿಸಲಾಗಿದೆ. ಕೆಲವೊಮ್ಮೆ ವೈರಭಾವವು ಗಂಡಹೆಂಡತಿಯರ ಮಧ್ಯೆ ಗೋಡೆಯಂತಿರುತ್ತದೆ ಮತ್ತು ಆ ಭಾವವು ದೀರ್ಘ ಸಮಯದ ವರೆಗೆ ಮುಂದುವರಿಯಬಹುದು. ಸಮಸ್ಯೆಯೊಂದು ಪೂರ್ಣರೀತಿಯಲ್ಲಿ ಬಗೆಹರಿಸಲ್ಪಡದೆ ಇರುವಾಗ ತಿರಸ್ಕಾರಭಾವವು ಹುಟ್ಟಬಹುದು. ಆದರೆ, ಹಿಂದೆ ಮಾಡಲ್ಪಟ್ಟಿರುವ ತಪ್ಪುಗಳಿಗಾಗಿ ಮನಸ್ಸಲ್ಲೇ ಅಸಮಾಧಾನವನ್ನಿಟ್ಟುಕೊಳ್ಳುವುದು ವ್ಯರ್ಥ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಆದುದರಿಂದ ತಪ್ಪನ್ನು ಕ್ಷಮಿಸಿದ ನಂತರ ಅದನ್ನು ಮರೆತುಬಿಡುವುದೇ ಉತ್ತಮ. ಪ್ರೀತಿಯು “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.”—1 ಕೊರಿಂಥ 13:4, 5.
15 ಆದರೆ ನೀವು ಬೆಳೆದುಬಂದಿರುವ ಕುಟುಂಬದಲ್ಲಿ ಒರಟು ಭಾಷೆಯು ಸಾಮಾನ್ಯವಾಗಿದ್ದು, ಅದು ನಿಮ್ಮ ರೂಢಿಯಾಗಿಬಿಟ್ಟಿರುವಲ್ಲಿ ಆಗೇನು? ಈ ವಿಷಯದಲ್ಲಿ ನೀವು ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ಯಾವುದೊ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬಾರದೆಂದು ನೀವು ಈಗಾಗಲೇ ಮಿತಿಗಳನ್ನು ಇಟ್ಟಿರುತ್ತೀರಿ. ನಿಮ್ಮ ಮಾತಿನ ವಿಷಯದಲ್ಲಿ ನೀವೆಲ್ಲಿ ಮಿತಿಯನ್ನಿಡುವಿರಿ? ನಿಮ್ಮ ಮಾತುಗಳು ಬಯ್ಗುಳಗಳಾಗುವ ಮುಂಚೆ ನಿಲ್ಲಿಸಿಬಿಡುವಿರೊ? ಎಫೆಸ 4:29ರಲ್ಲಿರುವ ಈ ಮಿತಿಯನ್ನು ನೀವಿಡಬಹುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು.” ಹಾಗೆ ಮಾಡಲು, ‘ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಳ್ಳುವುದು’ ಆವಶ್ಯಕ. ‘ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.’—ಕೊಲೊಸ್ಸೆ 3:9, 10.
“ಆಪ್ತ ಮಾತುಕತೆ” ಅತ್ಯಗತ್ಯ
16 ಗಂಡ ಇಲ್ಲವೆ ಹೆಂಡತಿ, ‘ಮೌನ ಉಪಚಾರ’ ಎಂದು ಕರೆಯಲಾಗುವ ವರ್ತನೆಗೆ ಮೊರೆ ಹೋಗುವಲ್ಲಿ ಅದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಬದಲಾಗಿ ಹಾನಿಯಾಗಬಲ್ಲದು. ಈ ‘ಮೌನ ಉಪಚಾರವು’ ಯಾವಾಗಲೂ, ಸಂಗಾತಿಗೆ ಬುದ್ಧಿಕಲಿಸಲಿಕ್ಕಾಗಿಯೇ ಆಗಿರಲಿಕ್ಕಿಲ್ಲ ಬದಲಾಗಿ ಅದು ಹತಾಶೆಯಿಂದಾಗಿ ಇಲ್ಲವೆ ನಿರಾಶೆಯಿಂದಾಗಿಯೂ ಆಗಿರಬಹುದು. ಆದರೆ ಪರಸ್ಪರ ಮಾತಾಡದೆ ಇರುವುದರಿಂದ ಕೇವಲ ಟೆನ್ಷನ್ ಹೆಚ್ಚಾಗುತ್ತದೆ ವಿನಃ ಸಮಸ್ಯೆಯೇನೂ ಪರಿಹಾರವಾಗುವುದಿಲ್ಲ. ಒಬ್ಬ ಪತ್ನಿ ಹೇಳಿದಂತೆ: “ಕೊನೆಗೆ ನಾವು ಪುನಃ ಮಾತಾಡಲಾರಂಭಿಸಿದರೂ, ಸಮಸ್ಯೆಯ ಬಗ್ಗೆ ಚರ್ಚಿಸಿ ಅದನ್ನು ಬಗೆಹರಿಸುವುದೇ ಇಲ್ಲ.”
17 ವಿವಾಹದಲ್ಲಿ ಉದ್ವಿಗ್ನ ಸ್ಥಿತಿಯು ಮುಂದುವರಿಯುತ್ತಿರುವಾಗ, ಇದಕ್ಕೆ ಯಾವುದೇ ಶಾರ್ಟ್ಕಟ್ ಇಲ್ಲ. ಜ್ಞಾನೋಕ್ತಿ 15:22 ಹೇಳುವುದು: “ಯೋಚನೆ ಹೇಳುವವರಿಲ್ಲದೆ [“ಆಪ್ತ ಮಾತುಕತೆಯಿಲ್ಲದೆ,” NW] ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.” ನೀವು ನಿಮ್ಮ ಸಂಗಾತಿಯೊಂದಿಗೆ ಕುಳಿತುಕೊಂಡು ಆ ವಿಷಯದ ಬಗ್ಗೆ ಚರ್ಚಿಸಬೇಕು. ನಿಮ್ಮ ಸಂಗಾತಿ ಮಾತಾಡುವಾಗ ನಿಮ್ಮ ಹೃದಮನಗಳನ್ನು ತೆರೆದಿಟ್ಟು ಕಿವಿಗೊಡಿರಿ. ನಿಮಗಿದನ್ನು ಮಾಡುವುದು ಅಸಾಧ್ಯವೆಂದು ತೋರುವಲ್ಲಿ, ಕ್ರೈಸ್ತ ಸಭೆಯಲ್ಲಿರುವ ಹಿರಿಯರ ಸಹಾಯವನ್ನೇಕೆ ಪಡೆದುಕೊಳ್ಳಬಾರದು? ಅವರಿಗೆ ಶಾಸ್ತ್ರವಚನಗಳ ಜ್ಞಾನವಿದೆ, ಮತ್ತು ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ಅನುಭವವೂ ಇದೆ. ಅವರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ” ಹಾಗೆಯೂ ಇದ್ದಾರೆ.—ಯೆಶಾಯ 32:2.
ಈ ಹೋರಾಟದಲ್ಲಿ ಗೆಲ್ಲಬಲ್ಲಿರಿ!
18 ನಮ್ಮ ನಾಲಗೆಗೆ ಕಡಿವಾಣಹಾಕುವುದು ಒಂದು ಹೋರಾಟವಾಗಿದೆ. ಇದು ನಮ್ಮ ಕೃತ್ಯಗಳನ್ನು ನಿಯಂತ್ರಿಸುವ ವಿಷಯದಲ್ಲೂ ಸತ್ಯವಾಗಿದೆ. ಅಪೊಸ್ತಲ ಪೌಲನು ತಾನು ಎದುರಿಸುತ್ತಿದ್ದ ಪಂಥಾಹ್ವಾನವನ್ನು ವರ್ಣಿಸುತ್ತಾ ಬರೆದುದು: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ. ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.” ನಮ್ಮ “ಅಂಗಗಳಲ್ಲಿರುವ ಪಾಪದ ನಿಯಮ”ದಿಂದಾಗಿ ನಾವು ನಮ್ಮ ನಾಲಗೆ ಮತ್ತು ದೇಹದ ಇತರ ಅಂಗಗಳನ್ನು ದುರುಪಯೋಗಿಸುವ ಪ್ರವೃತ್ತಿಯನ್ನು ಹೊಂದಿರುತ್ತೇವೆ. (ರೋಮಾಪುರ 7:18-23) ಹೀಗಿದ್ದರೂ ಈ ಹೋರಾಟವನ್ನು ಜಯಿಸಲೇಬೇಕು ಮತ್ತು ಅದನ್ನು ದೇವರ ಸಹಾಯದಿಂದ ಖಂಡಿತವಾಗಿಯೂ ಮಾಡಬಲ್ಲೆವು.
19 ಪ್ರೀತಿಗೌರವ ತುಂಬಿರುವ ಒಂದು ಸಂಬಂಧದಲ್ಲಿ ಆಲೋಚಿಸದೇ ಆಡಲ್ಪಟ್ಟ, ಕಠೋರ ಮಾತುಗಳಿಗೆ ಎಡೆಯಿರುವುದಿಲ್ಲ. ಈ ವಿಷಯದಲ್ಲಿ ಯೇಸು ಕ್ರಿಸ್ತನಿಟ್ಟ ಮಾದರಿಯ ಕುರಿತು ಯೋಚಿಸಿರಿ. ಯೇಸು ತನ್ನ ಶಿಷ್ಯರೊಂದಿಗೆ ಮಾತಾಡುವಾಗ ಅವಮಾನಿಸುವಂಥ ಮಾತುಗಳನ್ನು ಎಂದೂ ಬಳಸಲಿಲ್ಲ. ಭೂಮಿಯ ಮೇಲೆ ತನ್ನ ಕೊನೆ ರಾತ್ರಿಯಂದು ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದಮಾಡುತ್ತಿದ್ದಾಗಲೂ ದೇವಕುಮಾರನು ಅವರನ್ನು ಬಯ್ಯಲಿಲ್ಲ. (ಲೂಕ 22:24-27) “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ” ಎಂದು ಬೈಬಲ್ ಹಿತೋಪದೇಶ ನೀಡುತ್ತದೆ.—ಎಫೆಸ 5:25.
20 ಆದರೆ ಹೆಂಡತಿಯ ಕುರಿತೇನು? “ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ [“ಗಾಢವಾದ ಗೌರವಕೊಟ್ಟು,” NW] ನಡೆದುಕೊಳ್ಳಬೇಕು.” (ಎಫೆಸ 5:33) ತನ್ನ ಗಂಡನನ್ನು ಗೌರವಿಸುವ ಹೆಂಡತಿಯು, ನಿಂದಾತ್ಮಕ ಮಾತುಗಳನ್ನು ಬಳಸುತ್ತಾ ಚೀರಾಡುವಳೊ? ಪೌಲನು ಬರೆದುದು: “ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಕ್ರಿಸ್ತನು ತನ್ನ ತಲೆಗೆ ಅಧೀನನಾಗಿರುವಂತೆಯೇ ಹೆಂಡತಿಯರು ತಮ್ಮ ತಲೆಗೆ ಅಧೀನರಾಗಿರಬೇಕು. (ಕೊಲೊಸ್ಸೆ 3:18) ಯಾವ ಮಾನವನೂ ಯೇಸುವನ್ನು ಪರಿಪೂರ್ಣ ರೀತಿಯಲ್ಲಿ ಅನುಕರಿಸಲಾರನೆಂಬುದು ನಿಜವಾದರೂ, ಗಂಡಹೆಂಡತಿಯರು ‘ಅವನ ಹೆಜ್ಜೆಜಾಡಿನಲ್ಲಿ ನಡೆಯಲು’ ಪ್ರಯತ್ನಿಸಿದರೆ ಅದು ಅವರಿಗೆ ನಾಲಗೆಯ ದುರುಪಯೋಗದ ವಿರುದ್ಧದ ಹೋರಾಟದಲ್ಲಿ ಗೆಲ್ಲುವಂತೆ ಸಹಾಯಮಾಡುವುದು.—1 ಪೇತ್ರ 2:21. (w06 9/15)
ನೀವೇನು ಕಲಿತಿರಿ?
• ಸುಮ್ಮನಿರಲಾರದ ಒಂದು ನಾಲಗೆ ವಿವಾಹಕ್ಕೆ ಹೇಗೆ ಹಾನಿಮಾಡಬಲ್ಲದು?
• ನಾಲಗೆಗೆ ಕಡಿವಾಣಹಾಕುವುದು ಏಕೆ ಕಷ್ಟಕರ?
• ನಮ್ಮ ನಾಲಗೆಯನ್ನು ನಿಯಂತ್ರಿಸಲು ಯಾವುದು ಸಹಾಯಮಾಡುತ್ತದೆ?
• ವೈವಾಹಿಕ ಒತ್ತಡವನ್ನು ಅನುಭವಿಸುತ್ತಿರುವಾಗ ನೀವೇನು ಮಾಡಬೇಕು?
[ಅಧ್ಯಯನ ಪ್ರಶ್ನೆಗಳು]
1, 2. ಯಾವ ಪ್ರಾಮುಖ್ಯ ಪ್ರಶ್ನೆಯನ್ನು ಎಲ್ಲ ವಿವಾಹಿತರು ಸ್ವತಃ ತಮ್ಮನ್ನೇ ಕೇಳಿಕೊಳ್ಳಬೇಕು, ಮತ್ತು ಏಕೆ?
3. ಗಂಡಹೆಂಡತಿಯರು ಪೌಲನ ಯಾವ ಹಿತೋಪದೇಶವನ್ನು ಪಾಲಿಸುವುದು ಉತ್ತಮ?
4. ನಾಲಗೆಯು ಹೇಗೆ ಒಳಿತನ್ನು ಇಲ್ಲವೆ ಕೆಡುಕನ್ನು ಮಾಡಬಲ್ಲದು?
5, 6. ಕೆಲವರಿಗೆ ತಮ್ಮ ನಾಲಗೆಯನ್ನು ಅಂಕೆಯಲ್ಲಿಡುವುದನ್ನು ಕಷ್ಟಕರವನ್ನಾಗಿ ಮಾಡುವ ಅಂಶಗಳು ಯಾವುವು?
7. ಕ್ರೈಸ್ತರು ‘ಎಲ್ಲಾ ತರದ ನಿಂದೆಯನ್ನು ವಿಸರ್ಜಿಸಬೇಕೆಂದು’ ಪೇತ್ರನು ಕೊಟ್ಟ ಬುದ್ಧಿವಾದದ ಅರ್ಥವೇನಾಗಿತ್ತು?
8, 9. ಅವಮಾನಿಸುವ ಮಾತುಗಳನ್ನು ಬಳಸುವುದರಿಂದ ಏನು ಫಲಿಸಬಲ್ಲದು, ಮತ್ತು ವಿವಾಹ ಸಂಗಾತಿಗಳು ಅದನ್ನು ಬಳಸಬಾರದೇಕೆ?
10. ನಾಲಗೆಯನ್ನು ನಿಯಂತ್ರಿಸುವುದು ಏಕೆ ಪ್ರಾಮುಖ್ಯ?
11. ಭಿನ್ನಾಭಿಪ್ರಾಯವೊಂದು ಬೆಳೆದು ಬಿರುಸಾದ ವಾಗ್ವಾದವಾಗುವುದನ್ನು ಹೇಗೆ ತಡೆಗಟ್ಟಸಾಧ್ಯವಿದೆ?
12. ನಾಲಗೆಯನ್ನು ನಿಯಂತ್ರಿಸಲಿಕ್ಕಾಗಿ ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು, ಮತ್ತು ಏಕೆ?
13. ದ್ವೇಷ, ಕೋಪ ಮತ್ತು ಕ್ರೋಧವು ನಿಂದಾತ್ಮಕ ಮಾತುಗಳನ್ನಾಡಲು ಹೇಗೆ ನಡೆಸಬಲ್ಲದು?
14. ಅಸಮಾಧಾನವು ವಿವಾಹದ ಮೇಲೆ ಹೇಗೆ ಪರಿಣಾಮಬೀರಬಹುದು?
15. ಒರಟು ಮಾತುಗಳನ್ನು ಉಪಯೋಗಿಸುವ ರೂಢಿಯಾಗಿರುವವರಿಗೆ, ತಮ್ಮ ಮಾತಾಡುವ ಶೈಲಿಯನ್ನು ಬದಲಾಯಿಸುವಂತೆ ಯಾವುದು ಸಹಾಯಮಾಡುವುದು?
16. ಮೌನ ಉಪಚಾರವು ವಿವಾಹ ಜೀವನಕ್ಕೆ ಹಾನಿಕರವೇಕೆ?
17. ವೈವಾಹಿಕ ಒತ್ತಡವನ್ನು ಅನುಭವಿಸುತ್ತಿರುವ ಕ್ರೈಸ್ತರು ಏನು ಮಾಡತಕ್ಕದು?
18. ರೋಮಾಪುರ 7:18-23ರಲ್ಲಿ ಯಾವ ಹೋರಾಟವನ್ನು ವರ್ಣಿಸಲಾಗಿದೆ?
19, 20. ಗಂಡಹೆಂಡತಿಯರು ತಮ್ಮ ನಾಲಗೆಗೆ ಕಡಿವಾಣಹಾಕಲು ಯೇಸುವಿನ ಮಾದರಿಯು ಹೇಗೆ ಸಹಾಯಮಾಡುವುದು?
[ಪುಟ 10ರಲ್ಲಿರುವ ಚಿತ್ರ]
ಹಿರಿಯರು ಬೈಬಲಾಧಾರಿತ ಸಹಾಯವನ್ನು ಕೊಡುತ್ತಾರೆ