ಪಾರಾಗುವಿಕೆಗಾಗಿ ಶುದ್ಧ ಧರ್ಮವನ್ನು ಆಚರಿಸುವುದು
“ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ದೃಷ್ಟಿಯಲ್ಲಿ ಶುದ್ಧವೂ, ನೈಜವೂ ಆಗಿರುವ ಧರ್ಮ.”—ಯಾಕೋಬ 1:27, ಫಿಲಿಪ್ಸ್.
1. ಧರ್ಮ ಎಂಬದರ ಅರ್ಥವು ಹೇಗೆ ವಿವರಿಸಲ್ಪಟ್ಟಿದೆ, ಮತ್ತು ಸುಳ್ಳು ಮತ್ತು ಸತ್ಯ ದರ್ಮದ ನಡುವಣ ವ್ಯತ್ಯಾಸವನ್ನು ನಿರ್ಧರಿಸುವ ನ್ಯಾಯಸಮ್ಮತ ಹಕ್ಕು ಯಾರಿಗಿದೆ?
ಧರ್ಮವು, “ನಿರ್ಮಾಣಿಕನೂ ವಿಶ್ವದ ಪ್ರಭುವೂ ಆಗಿರುವಾತನೆಂದು ಅಂಗೀಕರಿಸಲ್ಪಡುವ ಒಂದು ಅಲೌಕಿಕ ಶಕ್ತಿಯಲ್ಲಿ ಮಾನವನಿಗಿರುವ ನಂಬಿಕೆ ಮತ್ತು ಪೂಜ್ಯತೆಯ ವ್ಯಕ್ತಪಡಿಸುವಿಕೆಯಾಗಿ” ಅರ್ಥ ವಿವರಿಸಲ್ಪಡುತ್ತದೆ. ಹೀಗಿರುವಲ್ಲಿ, ಸತ್ಯಧರ್ಮ ಮತ್ತು ಸುಳ್ಳು ಧರ್ಮದ ನಡುವಣ ವ್ಯತ್ಯಾಸವನ್ನು ನಿರ್ಧರಿಸಲು ನ್ಯಾಯಸಮ್ಮತವಾದ ಹಕ್ಕು ನಿಜವಾಗಿ ಯಾರಿಗಿದೆ? ನಿಶ್ಚಯವಾಗಿಯೂ ಯಾರಲ್ಲಿ ನಂಬಿಕೆ ಮತ್ತು ಪೂಜ್ಯತೆ ಇಡಲಾಗುತ್ತದೊ ಆ ನಿರ್ಮಾಣಿಕನಿಗೆ ಆ ಹಕ್ಕಿರಬೇಕು. ಸತ್ಯ ಮತ್ತು ಸುಳ್ಳು ಧರ್ಮದ ಬಗ್ಗೆ ತನ್ನ ನಿಲುವನ್ನು ಯೆಹೋವನು ತನ್ನ ವಾಕ್ಯದಲ್ಲಿ ಸ್ಪಷ್ಟವಾಗಿಗಿ ನಮೂದಿಸಿದ್ದಾನೆ.
ಬೈಬಲಲ್ಲಿ “ಧರ್ಮ” ಎಂಬ ಶಬ್ದ
2. “ಭಕ್ತಿ” ಮತ್ತು “ಧರ್ಮ”ವಾಗಿ ಭಾಷಾಂತರಗೊಂಡ ಮೂಲ ಗ್ರೀಕ್ ಪದವನ್ನು ಶಬ್ದಕೋಶಗಳು ಹೇಗೆ ವಿವರಿಸುತ್ತವೆ, ಮತ್ತು ಯಾವ ರೀತಿಯ ಭಕ್ತಿಗಳಿಗೆ ಅದನ್ನು ಅನ್ವಯಿಸ ಸಾಧ್ಯವಿದೆ?
2 ಇಲ್ಲಿ “ಭಕ್ತಿ” [ಆರಾಧನಾ ರೂಪ] ಅಥವಾ “ಧರ್ಮ”ವಾಗಿ ಭಾಷಾಂತರಗೊಂಡ ಗ್ರೀಕ್ ಪದವು ಥ್ರೆ-ಸ್ಕಿ’ಯಾ. ಎ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದಿ ನ್ಯೂ ಟೆಸ್ಟಮೆಂಟ್ ಈ ಶಬ್ದವನ್ನು “ದೇವರ ಭಕ್ತಿ, ಧರ್ಮ, ವಿಶೇಷವಾಗಿ ಅದು ಧಾರ್ಮಿಕ ಸೇವೆ ಅಥವಾ ಪಂಥ ದಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುವಾಗ” ಎಂಬದಾಗಿ ಅರ್ಥವಿವರಣೆ ನೀಡುತ್ತದೆ. ದಿ ಥಿಯೊಲಾಜಿಕಲ್ ಡಿಕ್ಷೆನೆರಿ ಆಫ್ ದಿ ನ್ಯೂ ಟೆಸ್ಟಮೆಂಟ್ ಅಧಿಕ ವಿವರಗಳನ್ನು ಕೊಡುತ್ತಾ, ಅಂದದ್ದು: “ಆ ಶಬ್ದವುತ್ಪತ್ತಿಯು ವಾದಾಸ್ಪದ; . . . ಆಧುನಿಕ ಪಂಡಿತರು ಅದನ್ನು ಥೆರಾಪ- (‘ಸೇವೆಗಾಗಿ’) ಶಬ್ದದೊಂದಿಗೆ ಜತೆಗೂಡಿಸಲು ಇಷ್ಟಪಡುತ್ತಾರೆ. . . . ಅರ್ಥ ಭಿನ್ನತೆಯನ್ನು ಸಹಾ ಗಮನಿಸಬಹುದು. ಒಳ್ಳೇ ಅರ್ಥದಲ್ಲಿ ‘ಧಾರ್ಮಿಕ ಹುರುಪು’ . . . ‘ದೇವ ಭಕ್ತಿ,’ ‘ಧರ್ಮ.’ . . . ಆದರೆ ಕೆಟ್ಟ ಅರ್ಥವೂ ಇದೆ, ಅಂದರೆ, ‘ಧಾರ್ಮಿಕ ಅತಿರೇಕತೆ,’ ‘ಮಿಥ್ಯಾಭಕ್ತಿ.’ ಹೀಗೆ ಥ್ರೆ-ಸ್ಕಿ’ಯಾ ಶಬ್ದವನ್ನು ಒಳ್ಳೆಯ ಅಥವಾ ಕೆಟ್ಟ “ಧರ್ಮ” ಇಲ್ಲವೆ “ಭಕ್ತಿ”ಯಾಗಿ ಭಾಷಾಂತರಿಸ ಸಾಧ್ಯವಿದೆ.
3. “ಭಕ್ತಿ”ಯಾಗಿ ತರ್ಜುಮೆಯಾದ ಶಬ್ದವನ್ನು ಅಪೊಸ್ತಲ ಪೌಲನು ಹೇಗೆ ಉಪಯೋಗಿಸಿದನು, ಮತ್ತು ಕೊಲೊಸ್ಸೆಯ 2:18ರಲ್ಲಿ ಯಾವ ರಸಕರವಾದ ಹೇಳಿಕೆ ಮಾಡಲ್ಪಟ್ಟಿದೆ?
3 ಈ ಶಬ್ದ ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿ ಬರುವುದು ಕೇವಲ ನಾಲ್ಕು ಸಾರಿ ಮಾತ್ರ. ಸುಳ್ಳು ಧರ್ಮವನ್ನು ಹೆಸರಿಸಲು ಅಪೊಸ್ತಲ ಪೌಲನು ಅದನ್ನು ಎರಡು ಸಾರಿ ಉಪಯೋಗಿಸಿದ್ದಾನೆ. ಅಪೊಸ್ತಲರ ಕೃತ್ಯಗಳು 24:5ರಲ್ಲಿ, ಅವನು ಕ್ರೈಸ್ತನಾಗುವ ಮುಂಚೆ, “ನಮ್ಮ ಭಕ್ತಿಯಲ್ಲಿ [ಧರ್ಮ, ಫಿಲಿಪ್ಸ್ ] ದಲ್ಲಿ ಬಹು ಖಂಡಿತವಾದ ಮತವನ್ನನುಸರಿಸಿ ಫರಿಸಾಯನಾಗಿ ನಡಕೊಂಡೆನು” ಎಂದು ಹೇಳಿರುವುದು ದಾಖಲೆಯಾಗಿದೆ. ಕೊಲೊಸ್ಸೆಯವರಿಗೆ ಬರೆದ ಅವನ ಪತ್ರದಲ್ಲಿ, ಅವನು ಎಚ್ಚರಿಸಿದ್ದು: “ಅತಿವಿನಯದಲ್ಲಿಯೂ ದೇವದೂತರ ಪೂಜೆ (ಭಕ್ತಿ, NW)ಯಲ್ಲಿಯೂ ಆಸಕ್ತರಾಗಿದ್ದಾರೆ. . .. ಇಂಥವರು ನಿಮಗೆ ದೊರಕಿರುವ ಬಿರುದನ್ನು ಅಪಹರಿಸುವುದಕ್ಕೆ ಅವಕಾಶ ಕೊಡಬೇಡಿರಿ.” (ಕೊಲೊಸ್ಸೆಯ 2:18) ಅಂಥ ದೇವದೂತ ಪೂಜೆಯು ಆ ಕಾಲದಲ್ಲಿ ಪ್ರಿಗ್ಯದಲ್ಲಿ ನೆಲೆಸಿತ್ತೆಂದು ತೋರುತ್ತದೆ, ಆದರೆ ಅದು ಒಂದು ಸುಳ್ಳು ಧರ್ಮ ಪದ್ಧತಿಯಾಗಿತ್ತು.a ರಸಕರವಾಗಿಯೆ, ಕೆಲವು ಬೈಬಲ್ ಭಾಷಾಂತರಗಳು ಥ್ರೆ-ಸ್ಕಿ’ಯಾವನ್ನು “ಧರ್ಮ”ವಾಗಿ ತರ್ಜುಮೆ ಮಾಡಿದ್ದಾರಾದರೂ, ಕೊಲೊಸ್ಸೆಯ 2:18ರಲ್ಲಿ ಹೆಚ್ಚಿನವರು “ಪೂಜೆ (ಭಕ್ತಿ)” ಶಬ್ದವನ್ನು ಉಪಯೋಗಿಸಿದ್ದಾರೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಥ್ರೆ-ಸ್ಕಿ’ಯಾವನ್ನು ಹೊಂದಿಕೆಯಾಗಿ “ಭಕ್ತಿ” [Form of Worship] ಎಂದೇ ಭಾಷಾಂತರಿಸಿದೆ, ರೆಫರೆನ್ಸ್ ಬೈಬಲ್ನ ಒಂದು ಪಾದಟಿಪ್ಪಣಿಯು, ಲ್ಯಾಟಿನ್ ಭಾಷಾಂತರಗಳಲ್ಲಿ ಬದಲಿ ತರ್ಜುಮೆಯಾಗಿ “ಧರ್ಮ” ಶಬ್ದವು ಬಳಸಲ್ಪಟ್ಟಿದೆ ಎಂದು ಪದೇ ಪದೇ ತಿಳಿಸುತ್ತದೆ.
ದೇವರ ದೃಷ್ಟಿಯಲ್ಲಿ “ಶುದ್ಧವೂ ನಿರ್ಮಲವೂ”
4, 5. (ಎ) ಶಿಷ್ಯ ಯಾಕೋಬನಿಗನುಸಾರ, ಧರ್ಮದ ವಿಷಯವಾಗಿ ಯಾರ ನೋಟವು ಅತ್ಯಂತ ಮಹತ್ವದ್ದು? (ಬಿ) ಒಬ್ಬನ ಭಕ್ತಿಯನ್ನು ಯಾವುದು ನಿಷ್ಪ್ರಯೋಜಕವಾಗಿ ಮಾಡ ಸಾಧ್ಯವಿದೆ, ಮತ್ತು “ನಿಷ್ಪಯ್ರೋಜಕ” ಎಂದು ತರ್ಜುಮೆಯಾದ ಶಬ್ದದ ಅರ್ಥವೇನು?
4 ಥ್ರೆ-ಸ್ಕಿ’ಯಾ ಇದರ ಇನ್ನೆರಡು ಸಂಭವಗಳು ಶಿಷ್ಯ ಯಾಕೋಬನಿಂದ ಬರೆಯಲ್ಪಟ್ಟ ಪತ್ರಿಕೆಯಲ್ಲಿ ಬರುತ್ತವೆ, ಆತನು ಒಂದನೆಯ ಶತಕದ ಕ್ರೈಸ್ತ ಸಭೆಯ ಆಡಳಿತ ಮಂಡಲಿಯ ಒಬ್ಬ ಸದಸ್ಯನಾಗಿದ್ದನು. ಅವನು ಬರೆದದ್ದು: “ಸದ್ಭಕ್ತ [“ಧಾರ್ಮಿಕ” ಫಿಲಿಪ್ಸ್] ನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ [“ಧರ್ಮ,” ಫಿಲಿಪ್ಸ್] ನಿಷ್ಪ್ರಯೋಜನವಾಗಿದೆ. ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆದ ಭಕ್ತಿ [“ಧರ್ಮ,” ಫಿಲಿಪ್ಸ್]”—ಯಾಕೋಬ 1:26, 27.
5 ಹೌದು, ಯೆಹೋವನ ಅನುಗ್ರಹವನ್ನು ಗಳಿಸಬೇಕಾದರೆ ಮತ್ತು ಆತನು ವಾಗ್ದಾನಿಸಿರುವ ಹೊಸ ಲೋಕದೊಳಗೆ ಪಾರಾಗಬೇಕಾದರೆ ಧರ್ಮದ ವಿಷಯವಾಗಿ ಯೆಹೋವನ ನೋಟವೇನೆಂದು ತಿಳಿಯುವದು ಅತ್ಯಾವಶ್ಯಕವು. (2 ಪೇತ್ರ 3:13) ಒಬ್ಬ ವ್ಯಕ್ತಿಯು ತನ್ನನ್ನು ನಿಜವಾಗಿಯೂ ಧಾರ್ಮಿಕ ವ್ಯಕ್ತಿಯೆಂದು ಪರಿಗಣಿಸಿಬಹುದು, ಆದರೂ ಅವನ ಭಕ್ತಿಯು ನಿಷ್ಪ್ರಯೋಜಕವಾಗ ಸಾಧ್ಯವಿದೆಂದು ಯಾಕೋಬನು ಹೇಳುತ್ತಾನೆ. ಇಲ್ಲಿ “ನಿಷ್ಪ್ರಯೋಜನ”ವೆಂದು ತರ್ಜುಮೆಯಾದ ಗ್ರೀಕ್ ಪದದ ಅರ್ಥವು “ವ್ಯರ್ಥ, ಶೂನ್ಯ, ನಿಷ್ಫಲ, ಕೆಲಸಕ್ಕೆ ಬಾರದ, ಸತ್ವರಹಿತ ಮತ್ತು ಸತ್ಯರಹಿತ” ಎಂಬರ್ಥವನ್ನೂ ಕೊಡುತ್ತದೆ. ಒಬ್ಬನು ತಾನು ಕ್ರೈಸ್ತನೆಂದು ವಾದಿಸಿದರೂ ತನ್ನ ನಾಲಗೆಯನ್ನು ಹತೋಟಿಯಲ್ಲಿಟ್ಟು, ಅದನ್ನು ದೇವರ ಸ್ತುತಿಗಾಗಿ ಮತ್ತು ತನ್ನ ಜೊತೆ ಕ್ರೈಸ್ತರ ಭಕ್ತಿವೃದ್ಧಿಗಾಗಿ ಬಳಸದೆ ಹೋದರೆ ವಿಷಯವು ಹಾಗಾಗ ಸಾಧ್ಯವಿದೆ. ಅವನು “ತನ್ನ ಸ್ವಂತ ಹೃದಯಕ್ಕೆ ಮೋಸಮಾಡುವವನೂ” “ದೇವರ ದೃಷ್ಟಿಯಲ್ಲಿ ಶುದ್ಧವೂ ನೈಜವೂ ಆದ ಧರ್ಮವನ್ನು” (ಫಿಲಿಪ್ಸ್) ಆಚರಿಸದವನೂ ಆಗಿರುವನು. ಅತಿ ಮಹತ್ವವಾದದ್ದು ಯೆಹೋವನ ದೃಷ್ಟಿಕೋನವೇ.
6. (ಎ) ಯಾಕೋಬನ ಪತ್ರಿಕೆಯ ಮುಖ್ಯ ವಿಷಯವು ಏನಾಗಿದೆ? (ಬಿ) ಶುದ್ಧ ಧರ್ಮದ ಯಾವ ಆವಶ್ಯಕತೆಯನ್ನು ಯಾಕೋಬನು ಒತ್ತಿಹೇಳಿದನು, ಮತ್ತು ಈ ವಿಷಯವಾಗಿ ಆಧುನಿಕ ದಿನದ ಆಡಳಿತ ಮಂಡಲಿಯು ಏನು ಹೇಳಿದೆ?
6 ಶುದ್ಧಾರಾಧನೆಯ ಸಂಬಂಧದಲ್ಲಿ ಯೆಹೋವನು ಕೇಳಿಕೊಳ್ಳುವ ಎಲ್ಲಾ ವಿಷಯಗಳನ್ನು ಯಾಕೋಬನು ನಮೂದಿಸುವುದಿಲ್ಲ. ಅವನ ಪತ್ರಿಕೆಯ ಸಾಮಾನ್ಯ ಮುಖ್ಯವಿಷಯವಾದ, ಕ್ರಿಯೆಗಳಿಂದ ರುಜುವಾಗುವ ನಂಬಿಕೆ ಮತ್ತು ಸೈತಾನನ ಲೋಕದೊಂದಿಗೆ ಸ್ನೇಹವಿಡದೆ ಇರುವ ಅಗತ್ಯಕ್ಕೆ ಹೊಂದಿಕೆಯಲ್ಲಿ, ಅವನು ಕೇವಲ ಎರಡು ಆವಶ್ಯಕತೆಗಳನ್ನು ಎತ್ತಿಹೇಳುತ್ತಾನೆ. “ಸಂಕಟದಲ್ಲಿ ಬಿದ್ದ ಅನಾಥರನ್ನೂ ವಿಧವೆಯರನ್ನೂ ಪರಾಮರಿಸುವುದು” ಅದರಲ್ಲಿ ಒಂದು. ಇದು ನಿಜ ಕ್ರೈಸ್ತ ಪ್ರೀತಿಯಲ್ಲಿ ಒಳಗೂಡಿದೆ. ಯೆಹೋವನು ಯಾವಾಗಲೂ ಅನಾಥರಿಗೆ ಮತ್ತು ವಿಧವೆಯರಿಗಾಗಿ ಪ್ರೀತಿಯುಳ್ಳ ಗಮನವನ್ನು ತೋರಿಸಿದ್ದಾನೆ. (ಧರ್ಮೋಪದೇಶಕಾಂಡ 10:17, 18; ಮಲಾಕಿಯ 3:5) ಒಂದನೆಯ ಶತಮಾನದ ಕ್ರೈಸ್ತ ಸಭೆಯ ಆಡಳಿತ ಮಂಡಲಿಯ ಆರಂಭದ ಕ್ರಿಯೆಗಳಲ್ಲಿ ಒಂದು ಕ್ರೈಸ್ತ ವಿಧವೆಯರ ಪರವಾಗಿ ಇತ್ತು. (ಅಪೊಸ್ತಲರ ಕೃತ್ಯಗಳು 6:1-6) ವರುಷಗಳಿಂದ ತಮ್ಮನ್ನು ನಂಬಿಗಸ್ತರೆಂದು ರುಜುಪಡಿಸಿದ್ದ ಮತ್ತು ಸಹಾಯ ಮಾಡಲು ಕುಟುಂಬದವರಾರೂ ಇಲ್ಲದಿದ್ದ ದಿಕ್ಕಿಲ್ಲದ ವೃದ್ಧ ವಿಧವೆಯರಿಗೆ ಪ್ರೀತಿಯುಳ್ಳ ಪರಾಮರಿಕೆಯನ್ನು ಒದಗಿಸಲು ಅಪೊಸ್ತಲ ಪೌಲನು ವಿವರವಾದ ಸೂಚನೆಗಳನ್ನು ಕೊಟ್ಟಿದ್ದನು. (1 ತಿಮೊಥಿ 5:3-16) ತದ್ರೀತಿ ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಆಡಳಿತ ಮಂಡಲಿಯು ಸಹಾ “ಬಡವರ ಪರಾಮರಿಕೆಗಾಗಿ” ವಿಶಿಷ್ಟ ಸೂಚನೆಗಳನ್ನು ಕೊಡುತ್ತಾ, ಅಂದದ್ದು: “ಸತ್ಯಾರಾಧನೆಯಲ್ಲಿ ಲೌಕಿಕ ಸಹಾಯದ ಅಗತ್ಯವಿರಬಹುದಾದ ನಂಬಿಗಸ್ತ ಮತ್ತು ನಿಷ್ಠಾವಂತರ ಪರಾಮರಿಕೆಯೂ ಸೇರಿರುತ್ತದೆ.” (ಆರ್ಗನೈಸ್ಟ್ ಟು ಅಕಾಂಪ್ಲಿಶ್ ಅವರ್ ಮಿನಿಷ್ಟ್ರಿ, ಪುಟ 122-3 ನೋಡಿ.) ಈ ವಿಷಯದಲ್ಲಿ ದುರ್ಲಕ್ಷ್ಯ ತೋರಿಸುವ ಹಿರಿಯ ಮಂಡಲಿಗಳು ಅಥವಾ ವೈಯಕ್ತಿಕ ಕ್ರೈಸ್ತರು, ತಂದೆಯಾದ ದೇವರ ದೃಷ್ಟಿಯಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿಯ ಒಂದು ಮಹತ್ವದ ಭಾಗವನ್ನು ಬಿಟ್ಟುಬಿಡುವವರಾಗಿರುವರು.
“ಪ್ರಪಂಚದ ದೋಷವು ಹತ್ತದಂತೆ”
7, 8. (ಎ) ಸತ್ಯ ಧರ್ಮದ ಯಾವ ಎರಡನೆಯ ಆವಶ್ಯಕತೆಯನ್ನು ಯಾಕೋಬನು ತಿಳಿಸಿದ್ದಾನೆ? (ಬಿ) ವೈದಿಕರು ಮತ್ತು ಪುರೋಹಿತರು ಈ ಆವಶ್ಯಕತೆಯನ್ನು ಮುಟ್ಟುತ್ತಾರೋ? (ಸಿ) ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಏನು ಹೇಳ ಸಾಧ್ಯವಿದೆ?
7 ಸತ್ಯಧರ್ಮಕ್ಕಾಗಿ ಯಾಕೋಬನಿಂದ ತಿಳಿಸಲ್ಪಟ್ಟ ಎರಡನೆಯ ಆವಶ್ಯಕತೆಯು ಒಬ್ಬನು ತನಗೆ “ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ” ಆಗಿದೆ. ಯೇಸು ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ.” ಇದಕ್ಕೆ ಹೊಂದಿಕೆಯಲ್ಲಿ ಅವನ ನಿಜ ಹಿಂಬಾಲಕರೂ “ಲೋಕದ ಭಾಗವಾಗಿರುವದಿಲ್ಲ.” (ಯೋಹಾನ 15:19; 18:36) ಈ ಲೋಕದ ಯಾವದಾದರೂ ಧರ್ಮದ ವೈದಿಕರ ಅಥವಾ ಪುರೋಹಿತರ ಕುರಿತು ಹೀಗೆ ಹೇಳ ಸಾಧ್ಯವಿದೆಯೇ? ಅವರು ಸಂಯುಕ್ತ ರಾಷ್ಟ್ರ ಸಂಘವನ್ನು ಅಂಗೀಕರಿಸುತ್ತಾರೆ. ವಿಶಸ್ವಂಸ್ಥೆ-ಮಂಡಿತ “ಅಂತರಾಷ್ಟ್ರೀಯ ಶಾಂತಿ ವರ್ಷ”ದ ಯಶಸ್ಸಿಗಾಗಿ ತಮ್ಮ ಪ್ರಾರ್ಥನೆಗಳನ್ನು ಏಕೀಭವಿಸುವಂತೆ ಅಕ್ಟೋಬರ 1986ರಲ್ಲಿ ಇಟೆಲಿಯ ಎಸ್ಸಿಸ್ಸಿಯಲ್ಲಿ ಒಟ್ಟು ಸೇರುವಂತೆ ಪೋಪರು ಕೊಟ್ಟ ಆಮಂತ್ರಣವನ್ನು ಅನೇಕ ಧರ್ಮ ಮುಖಂಡರು ಸ್ವೀಕರಿಸಿದ್ದರು. ಆದರೆ ಅವರ ಪ್ರಯತ್ನಗಳು ವೈಫಲ್ಯಗೊಂಡವೆಂದು ಆ ವರ್ಷದಲ್ಲಿ ಮತ್ತು ಅಂದಿನಿಂದ ದಾಟಿರುವ ವರ್ಷಗಳಲ್ಲಿ ಯುದ್ಧಗಳಲ್ಲಿ ಕೊಲ್ಲಲ್ಪಟ್ಟ ಲಕ್ಷಾಂತರ ಜನರಿಂದ ನಾವು ತೀರ್ಮಾನಿಸಬಹುದು. ಆಳುವ ರಾಜಕೀಯ ಪಕ್ಷದೊಂದಿಗೆ ವೈದಿಕರು ಹೆಚ್ಚಾಗಿ ಸಲಿಗೆಯಿಂದಿರುತ್ತಾರೆ, ಅದೇ ಸಮಯದಲ್ಲಿ ವಿರೋಧಿ ಪಕ್ಷದೊಂದಿಗೂ ಮೋಸದಿಂದ ಗುಪ್ತ ವ್ಯವಹಾರಗಳನ್ನು ನಡಿಸುತ್ತಾರೆ, ಹೀಗೆ ಯಾರೇ ಆಳಲಿ ಅವರು ಅವರನ್ನು “ಸ್ನೇಹಿತ”ರಾಗಿ ಪರಿಗಣಿಸಲಿಕ್ಕಾಗಿಯೇ.—ಯಾಕೋಬ 4:4.
8 ಯೆಹೋವನ ಸಾಕ್ಷಿಗಳು ಕ್ರೈಸ್ತರೋಪಾದಿ ರಾಜಕೀಯ ಕಾರ್ಯದಲ್ಲಿ ಮತ್ತು ಲೋಕದ ಹೋರಾಟಗಳಲ್ಲಿ ತಾಟಸ್ಥ್ಯ ವಹಿಸುವುದಕ್ಕೆ ಕೀರ್ತಿಯನ್ನು ಪಡೆದಿರುತ್ತಾರೆ. ಅವರು ಈ ಸ್ಥಾನವನ್ನು ಎಲ್ಲಾ ಭೂಖಂಡಗಳಲ್ಲಿ ಮತ್ತು ಎಲ್ಲಾ ರಾಷ್ಟ್ರಗಳಲ್ಲಿ ಕಾಪಾಡಿಕೊಂಡಿರುತ್ತಾರೆ ಎಂಬದನ್ನು ಭೂಲೋಕದ ಎಲ್ಲಾ ಭಾಗಗಳ ಪ್ರೆಸ್ಸ್ ವರದಿಗಳು ಮತ್ತು ಆಧುನಿಕ ಚಾರಿತ್ರಿಕ ದಾಖಲೆಗಳು ದೃಢೀಕರಿಸುತ್ತವೆ. ಅವರು ನಿಜವಾಗಿಯೂ “ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರು”ವವರು. “ದೇವರ ದೃಷ್ಟಿಯಲ್ಲಿ ಶುದ್ಧವೂ ನೈಜವೂ ಆಗಿರುವ ಧರ್ಮವು” ಅವರದ್ದೇ ಆಗಿದೆ.—ಯಾಕೋಬ 1:27, ಫಿಲಿಪ್ಸ್.
ಸತ್ಯ ಧರ್ಮದ ಇತರ ಗುರುತುಗಳು
9. ಸತ್ಯ ಧರ್ಮದ ಮೂರನೆಯ ಆವಶ್ಯಕತೆಯೇನು, ಮತ್ತು ಏಕೆ?
9 ಧರ್ಮವು, “ನಿರ್ಮಾಣಿಕನೂ ವಿಶ್ವದ ಪ್ರಭುವೂ ಆಗಿ ಅಂಗೀಕರಿಸಲ್ಪಡುವ ಒಬ್ಬ ಅಲೌಕಿಕ ಶಕ್ತಿಯಲ್ಲಿ ನಂಬಿಕೆ ಮತ್ತು ಪೂಜ್ಯತೆಯನ್ನು ವ್ಯಕ್ತಪಡಿಸುವಿಕೆ” ಎಂದಾಗಿದ್ದರೆ ನಿಶ್ಚಯವಾಗಿಯೂ ಸತ್ಯ ಧರ್ಮವು ಒಬ್ಬನೇ ಸತ್ಯ ದೇವರಾದ ಯೆಹೋವನಿಗೆ ಆರಾಧನೆ ಸಲ್ಲಿಸಬೇಕು. ಒಂದು ನಿಗೂಢ ತ್ರಯೈಕ್ಯ ದೇವರೊಬ್ಬನಲ್ಲಿ, ತಂದೆಯು ತನ್ನ ಸರ್ವಶಕತ್ತೆಯನ್ನು, ಮಹಿಮೆಯನ್ನು ಮತ್ತು ಶಾಶ್ವತತೆಯನ್ನು ಬೇರೆ ಇಬ್ಬರೊಂದಿಗೆ ಹಂಚಿಕೊಳ್ಳುತ್ತಾನೆ ಎಂಬ ವಿಧರ್ಮಿ ಕಲ್ಪನೆಗಳನ್ನು ಕಲಿಸುವ ಮೂಲಕ ದೇವರ ಕುರಿತಾದ ಜನರ ತಿಳುವಳಿಕೆಯನ್ನು ಮಂದಗೊಳಿಸಬಾರದು. (ಧರ್ಮೋಪದೇಶಕಾಂಡ 6:4; 1 ಕೊರಿಂಥ 8:6) ಯೆಹೋವ ಎಂಬ ಆ ದೇವರ ಅಸದೃಶ್ಯ ನಾಮವನ್ನು ಅದು ಪ್ರಸಿದ್ಧಪಡಿಸಲೂ ಬೇಕು, ಗೌರವಿಸಲೂ ಬೇಕು ಮತ್ತು ಸಂಘಟಿತ ಜನರೋಪಾದಿ ದೇವರ ನಾಮವನ್ನು ಧರಿಸಿಕೊಳ್ಳಲೂ ಬೇಕು. (ಕೀರ್ತನೆ 83:18; ಅಪೊಸ್ತಲರ ಕೃತ್ಯಗಳು 15:14) ಇದರಲ್ಲಿ ಆ ಅವಲಂಬಿಗಳು ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸಬೇಕು. (ಯೋಹಾನ 17:6) ಯೆಹೋವನ ಕ್ರೈಸ್ತ ಸಾಕ್ಷಿಗಳಲ್ಲದೆ ಈ ಆವಶ್ಯಕತೆಗಳನ್ನು ಮುಟ್ಟುವವರು ಬೇರೆ ಯಾರು?
10. ದೇವರ ಹೊಸ ಲೋಕಕ್ಕೆ ಪಾರಾಗುವಿಕೆಯನ್ನು ನೀಡುವ ಒಂದು ಧರ್ಮವು ಏನನ್ನು ಮಾಡಲೇಬೇಕು ಮತು ಏಕೆ?
10 ಅಪೊಸ್ತಲ ಪೇತ್ರನು ಹೇಳಿದ್ದು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವುದಿಲ್ಲ. ಆ ಹೆಸರಿನಿಂದಲೇ [ಯೇಸು ಕ್ರಿಸ್ತನು] ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅಪೊಸ್ತಲರ ಕೃತ್ಯಗಳು 4:8-12) ಆದ್ದರಿಂದ, ದೇವರ ಹೊಸ ಲೋಕಕ್ಕೆ ಪಾರಾಗುವಿಕೆಯನ್ನು ನೀಡುವ ಒಂದು ಶುದ್ಧ ಧರ್ಮವು, ಕ್ರಿಸ್ತನಲ್ಲಿ ನಂಬಿಕೆಯನ್ನು ಮತ್ತು ವಿಮೋಚನಾ ಯಜ್ಞದ ಮೂಲ್ಯತೆಯನ್ನು ಪ್ರೇರೇಪಿಸಲೇಬೇಕು. (ಯೋಹಾನ 3:16, 36; 17:3; ಎಫೆಸ 1:7) ಅಷ್ಟಲ್ಲದೆ, ಕ್ರಿಸ್ತನು ಯೆಹೋವನ ಆಳುವ ರಾಜನು ಮತ್ತು ಅಭಿಷಿಕ್ತ ಮಹಾ ಯಾಜಕನಾಗಿದ್ದಾನೆಂದು ತಿಳಿದು ಆತನಿಗೆ ಅಧೀನರಾಗುವಂತೆ ಅದು ಸತ್ಯಾರಾಧಕರಿಗೆ ಸಹಾಯ ಮಾಡಬೇಕು.—ಕೀರ್ತನೆ 2:6-8; ಫಿಲಿಪ್ಪಿಯ 2:9-11; ಇಬ್ರಿಯ 4:14, 15.
11. ಯಾವುದರ ಮೇಲೆ ಸತ್ಯ ಧರ್ಮವು ಆಧರಿಸಿದೆ ಮತ್ತು ಈ ವಿಷಯದಲ್ಲಿ ಯೆಹೋವನ ಸಾಕ್ಷಿಗಳ ಸ್ಥಾನವೇನು?
11 ಶುದ್ಧ ಧರ್ಮವು ಒಬ್ಬನೇ ಸತ್ಯ ದೇವರ ಪ್ರಕಟಿತ ಚಿತ್ತದ ಮೇಲೆ ಆಧರಿಸಿರಬೇಕು, ಮಾನವ ನಿರ್ಮಿತ ಸಂಪ್ರದಾಯಗಳ ಯಾ ತತ್ವಜ್ಞಾನಗಳ ಮೇಲಲ್ಲ. ಬೈಬಲ್ ಇಲ್ಲದಿರುತ್ತಿದ್ದರೆ, ನಾವು ಯೆಹೋವನ ಮತ್ತು ಆತನ ಆಶ್ಚರ್ಯಕರ ಉದ್ದೇಶಗಳ ಕುರಿತಾಗಲಿ, ಕ್ರಿಸ್ತನ ಮತ್ತು ಆತನ ವಿಮೋಚನಾ ಯಜ್ಞದ ಕುರಿತಾಗಲಿ ಏನನ್ನೂ ತಿಳಿಯುತ್ತಿರಲಿಲ್ಲ. ಯೆಹೋವನ ಸಾಕ್ಷಿಗಳು ಜನರಲ್ಲಿ ಬೈಬಲಿನೆಡೆಗೆ ನಿಶ್ಚಂಚಲವಾದ ಆತ್ಮ-ವಿಶ್ವಾಸವನ್ನು ಬೇರೂರಿಸುತ್ತಾರೆ. ಅವರು ತಮ್ಮ ದಿನನಿತ್ಯದ ಜೀವಿತದ ಮೂಲಕವಾಗಿಯೂ ತಾವು ಅಪೊಸ್ತಲ ಪೌಲನ ಹೇಳಿಕೆಯೊಂದಿಗೆ ಸಹಮತದಲ್ಲಿದ್ದಾರೆಂದು ರುಜುಪಡಿಸುತ್ತಾರೆ: “ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ . . . ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥಿ 3:16, 17.
ಸತ್ಯ ಧರ್ಮ—ಒಂದು ಜೀವಿತ ರೀತಿ
12. ಭಕ್ತಿಯು ಸತ್ಯವಾಗಬೇಕಾದರೆ ನಂಬಿಕೆಯು ಮಾತ್ರವಲ್ಲದೆ ಬೇರೇನು ಆವಶ್ಯಕವು, ಮತ್ತು ಯಾವ ಸಂಬಂಧದಲ್ಲಿ ಸತ್ಯ ಧರ್ಮವು ಒಂದು ಜೀವನ ರೀತಿಯಾಗಿದೆ?
12 ಯೇಸು ಘೋಷಿಸಿದ್ದು: “ದೇವರು ಆತ್ಮ ಸ್ವರೂಪನು, ಆತನನ್ನು ಆರಾಧಿಸುವವರು ಆತ್ಮದಿಂದ ಮತ್ತು ಸತ್ಯದಿಂದ ಆರಾಧಿಸಬೇಕು.” (ಯೋಹಾನ 4:24) ಆದ್ದರಿಂದ, ಸತ್ಯ ಧರ್ಮ ಯಾ ಭಕ್ತಿಯು ಒಂದು ಸಂಸ್ಕಾರಿಕ ವಿಧಿಯಲ್ಲ, ದೈವಭಕ್ತಿಯ ಒಂದು ಹೊರ ತೋರಿಕೆಯಲ್ಲ. ಶುದ್ಧ ಭಕ್ತಿಯು ಆತ್ಮಿಕವಾದದ್ದು, ನಂಬಿಕೆಯ ಮೇಲೆ ಆಧರಿತವಾದದ್ದು. (ಇಬ್ರಿಯ 11:6) ಆ ನಂಬಿಕೆಯಾದರೋ ಕ್ರಿಯೆಗಳಿಂದ ತೋರಿಸಲ್ಪಡಲೇ ಬೇಕು. (ಯಾಕೋಬ 2:17) ಸತ್ಯ ಧರ್ಮವು ಜನಪ್ರಿಯ ಒಲವುಗಳನ್ನು ತಿರಸ್ಕರಿಸುತ್ತದೆ. ನೈತಿಕತೆ ಮತ್ತು ಶುದ್ಧ ಮಾತುಗಳ ಬೈಬಲ್ ಮಟ್ಟವನ್ನು ಅದು ಪರಿಪಾಲಿಸುತ್ತದೆ. (1 ಕೊರಿಂಥ 6:9, 10; ಎಫೆಸ 5:3-5) ಅದರ ಅವಲಂಬಿಗಳು ತಮ್ಮ ಕುಟುಂಬ ಜೀವನದಲ್ಲಿ, ಲೌಕಿಕ ಕೆಲಸದಲ್ಲಿ, ಶಾಲೆಯಲ್ಲಿ ಮತ್ತು ತಮ್ಮ ಮನೋರಂಜನೆಗಳಲ್ಲಿ ಸಹಾ ದೇವರಾತ್ಮದ ಫಲವನ್ನು ಫಲಿಸುವುದಕ್ಕೆ ಪ್ರಾಮಾಣಿಕತೆಯಿಂದ ಪ್ರಯತ್ನಿಸುತ್ತಾರೆ. (ಗಲಾತ್ಯ 5:22, 23) ಅಪೊಸ್ತಲ ಪೌಲನ ಈ ಸೂಚನೆಯನ್ನು ಎಂದೂ ಮರೆಯದಿರಲು ಯೆಹೋವನ ಸಾಕ್ಷಿಗಳು ಪ್ರಯತ್ನಿಸುತ್ತಾರೆ: “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ಅವರ ಧರ್ಮವು ಕೇವಲ ಬಹಿರಾಚರಣೆಯದ್ದಲ್ಲ; ಅದು ಅವರ ಜೀವನ ರೀತಿಯೇ ಆಗಿದೆ.
13. ಸತ್ಯಾರಾಧನೆಯಲ್ಲಿ ಏನೆಲ್ಲಾ ಒಳಗೂಡಿದೆ, ಮತ್ತು ಯೆಹೋವನ ಸಾಕ್ಷಿಗಳು ನಿಜವಾಗಿ ಧಾರ್ಮಿಕ ಜನರೆಂದು ಏಕೆ ಹೇಳ ಸಾಧ್ಯವಿದೆ?
13 ಸತ್ಯ ಧರ್ಮದಲ್ಲಿ ಆತ್ಮಿಕ ಚಟುವಟಿಕೆಗಳು ಕೂಡಿರುತ್ತವೆ ನಿಶ್ಚಯ. ಇವುಗಳಲ್ಲಿ ವೈಯಕ್ತಿಕ ಮತ್ತು ಕುಟುಂಬ ಪ್ರಾರ್ಥನೆಗಳು, ದೇವರ ವಾಕ್ಯದ ಮತ್ತು ಬೈಬಲ್ ಅಧ್ಯಯನ ಸಹಾಯಕಗಳ ಕ್ರಮದ ಅಭ್ಯಾಸ ಮತ್ತು ನಿಜ ಕ್ರೈಸ್ತ ಸಭಾ ಕೂಟಗಳ ಹಾಜರಿಯು ಸೇರಿರುತ್ತದೆ. ಈ ಕೂಟಗಳು ಯೆಹೋವನಿಗೆ ಸ್ತುತಿಗಾನ ಹಾಡುವಿಕೆ ಮತ್ತು ಸಂಗೀತದಿಂದ ಆರಂಭಿಸುತ್ತವೆ ಮತ್ತು ಕೊನೆಗೊಳ್ಳುತ್ತವೆ. (ಮತ್ತಾಯ 26:30; ಎಫೆಸ 5:19) ಉಪನ್ಯಾಸಗಳ ಮೂಲಕ ಭಕ್ತಿವರ್ಧಕವಾದ ಆತ್ಮಿಕ ವಿಷಯಗಳು ಪರೀಕ್ಷಿಸಲ್ಪಡುತ್ತವೆ ಮತ್ತು ಮುದ್ರಿತ ಸಮಾಚಾರಗಳ ಪ್ರಶ್ನೋತ್ತರ ಚರ್ಚೆಗಳು ಎಲ್ಲರಿಗೂ ಉಪಲಬವ್ದಿವೆ. ಅಂಥ ಕೂಟಗಳು ಸಾಮಾನ್ಯವಾಗಿ ನೀಟಾದ, ಆದರೆ ಅಲಂಕಾರಮಯವಲ್ಲದ ರಾಜ್ಯ ಸಭಾಗೃಹಗಳಲ್ಲಿ ನಡೆಯುತ್ತವೆ, ಅವುಗಳು ಸಂಪೂರ್ಣವಾಗಿ ಧಾರ್ಮಿಕ ಉದ್ದೇಶಗಳಿಗಾಗಿಯೇ ಉಪಯೋಗಿಸಲ್ಪಡುತ್ತವೆ: ಕ್ರಮದ ಕೂಟಗಳು, ಮದುವೆಗಳು, ಸ್ಮಾರಕ ಕಾರ್ಯಕ್ರಮಗಳೇ ಮುಂತಾದವುಗಳಿಗಾಗಿ. ಯೆಹೋವನ ಸಾಕ್ಷಿಗಳು ತಮ್ಮ ರಾಜ್ಯ ಸಭಾಗೃಹಗಳನ್ನು ಮತ್ತು ದೊಡ್ಡ ಸಮ್ಮೇಲನ ಹೋಲ್ಗಳನ್ನು ಯೆಹೋವನ ಭಕ್ತಿಗಾಗಿ ಪ್ರತಿಷ್ಠಿಸಲ್ಪಟ್ಟ ಸ್ಥಳಗಳಾಗಿ ಗೌರವಿಸುತ್ತಾರೆ. ಕ್ರೈಸ್ತ ಪ್ರಪಂಚದ ಅನೇಕ ಚರ್ಚುಗಳಂತೆ ರಾಜ್ಯ ಸಭಾಗೃಹಗಳು ಸಾಮಾಜಿಕ ಕ್ಲಬ್ಗಳಲ್ಲ.
14. ಹಿಬ್ರೂ ಭಾಷೆಯನ್ನಾಡುವ ಜನರಿಗೆ ಭಕ್ತಿಯು ಯಾವ ಅರ್ಥದಲ್ಲಿತ್ತು, ಮತ್ತು ಯಾವ ಚಟುವಟಿಕೆಯು ಇಂದು ಯೆಹೋವನ ಸಾಕ್ಷಿಗಳನ್ನು ಪ್ರತ್ಯೇಕಪಡಿಸುತ್ತದೆ?
14 “ಭಕ್ತಿ” ಅಥವಾ “ಧರ್ಮ” ಎಂಬದಾಗಿ ತರ್ಜುಮೆಯಾದ ಗ್ರೀಕ್ ಪದವನ್ನು ಪಂಡಿತರು ಕ್ರಿಯಾಪದವಾದ “ಸೇವೆಗಾಗಿ” ಎಂಬ ಶಬ್ದದೊಂದಿಗೆ ಜತೆಗೂಡಿಸುತ್ತಾರೆಂದು ನಾವು ಆರಂಭದಲ್ಲಿ ನೋಡಿದೆವು. ರಸಕರವಾಗಿ, ಹಿಬ್ರೂ ಸಮಾನಪದ ’ಅವೊ-ಧಾಹ್’ವನ್ನು “ಸೇವೆ” ಅಥವಾ “ಭಕ್ತಿ”ಯಾಗಿ ಭಾಷಾಂತರ ಮಾಡಬಹುದು. (ವಿಮೋಚನಕಾಂಡ 3:12 ಮತ್ತು 10:26ರ ಮೇಲಣ ಪಾದಟಿಪ್ಪಣಿಯನ್ನು ಹೋಲಿಸಿರಿ.) ಇಬ್ರಿಯರಿಗೆ, ಭಕ್ತಿಯೆಂದರೆ ಸೇವೆ ಆಗಿತ್ತು. ಮತ್ತು ಇಂದು ನಿಜ ಕ್ರೈಸ್ತರಿಗೆ ಭಕ್ತಿಯು ಅದೇ ಅರ್ಥದಲ್ಲಿದೆ. ಸತ್ಯಧರ್ಮದ ಒಂದು ಅತಿ ಮಹತ್ವದ, ಪ್ರತ್ಯೇಕಿಸುವ ಗುರುತು ಯಾವುದೆಂದರೆ ಅದನ್ನು ಆಚರಿಸುವವರೆಲ್ಲರು “ದೇವರ ರಾಜ್ಯದ ಸುವಾರ್ತೆಯನ್ನು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರುವ ದೈವಿಕ ಸೇವೆಯಲ್ಲಿ ಪಾಲಿಗರಾಗುವದೇ. (ಮತ್ತಾಯ 24:14; ಅಪೊಸ್ತಲರ ಕೃತ್ಯಗಳು 1:8; 5:42) ದೇವರ ರಾಜ್ಯವೇ ಮಾನವ ಕುಲದ ಏಕಮಾತ್ರ ನಿರೀಕ್ಷೆಯೆಂಬ ಬಹಿರಂಗ ಸಾಕ್ಷಿನೀಡುವಿಕೆಗಾಗಿ ಜಗದ್ವ್ಯಾಪಕವಾಗಿ ಪ್ರಸಿದ್ಧವಾದ ಧರ್ಮವು ಅದ್ಯಾವುದು?
ಒಂದು ಸಕಾರಾತ್ಮಕ, ಏಕೀಭವಿಸುವ ಬಲ
15. ಸತ್ಯ ಧರ್ಮದ ಒಂದು ಮಹತ್ತಾದ ಗುಣಲಕ್ಷಣ ಯಾವುದು?
15 ಸುಳ್ಳು ಧರ್ಮವು ವಿಭಜನೆ ಮಾಡುತ್ತದೆ. ಅದು ದ್ವೇಷ ಮತ್ತು ರಕ್ತಾಪರಾಧವನ್ನು ನಡಿಸಿದೆ, ಇನ್ನೂ ನಡಿಸುತ್ತಾ ಇದೆ. ಇದಕ್ಕೆ ಪ್ರತಿ ವಿರುದ್ಧದಲ್ಲಿ ಸತ್ಯ ಧರ್ಮವಾದರೊ ಐಕ್ಯಮತ್ಯವನ್ನು ತರುತ್ತದೆ. ಯೇಸು ಅಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಯೆಹೋವನ ಸಾಕ್ಷಿಗಳನ್ನು ಐಕ್ಯಗೊಳಿಸುವ ಆ ಪ್ರೀತಿಯು, ಉಳಿದ ಮಾನವ ಕುಲವನ್ನು ವಿಭಜಿಸುವ ರಾಷ್ಟ್ರೀಯ, ಸಾಮಾಜಿಕ, ಆರ್ಥಿಕ ಮತ್ತು ಜಾತೀಯ ಮೇರೆಗಳನ್ನು ಮೀರಿಹೋಗುತ್ತದೆ. ಸಾಕ್ಷಿಗಳು “ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕ್ಯಮತ್ಯದಿಂದ ಹೋರಾಡುವವರಾಗಿದ್ದಾರೆ.”—ಫಿಲಿಪ್ಪಿಯ 1:27.
16. (ಎ) ಯಾವ “ಸುವಾರ್ತೆ”ಯನ್ನು ಯೆಹೋವನ ಸಾಕ್ಷಿಗಳು ಸಾರುತ್ತಾರೆ? (ಬಿ) ಯೆಹೋವನ ಜನರ ನಡುವೆ ಯಾವ ಪ್ರವಾದನೆಗಳು ನೆರವೇರಿಕೆ ಪಡೆಯುತ್ತಾ ಇವೆ, ಮತ್ತು ಯಾವ ಆಶೀರ್ವಾದಗಳು ಹಿಂಬಾಲಿಸಿವೆ?
16 ದೇವರ ಮಾರ್ಪಾಟಾಗದ ಉದ್ದೇಶವು ಶೀಘ್ರದಲ್ಲಿ ಪೂರೈಸಲ್ಪಡುವದೆಂದೇ ಅವರು ಸಾರುವ “ಸುವಾರ್ತೆ”ಯಾಗಿದೆ. ಆತನ ಚಿತ್ತವು “ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ” ನೆರವೇರಲಿಕ್ಕದೆ. (ಮತ್ತಾಯ 6:10) ಯೆಹೋವನ ಮಹಿಮಾಭರಿತ ಹೆಸರು ಪವಿತ್ರೀಕರಿಸಲ್ಪಡುವದು, ಮತ್ತು ಭೂಮಿಯು ಪರದೈಸವಾಗಿ ಮಾರ್ಪಡುವುದು ಮತ್ತು ಅಲ್ಲಿ ಸತ್ಯಾರಾಧಕರು ಸದಾಕಾಲ ಜೀವಿಸುವರು. (ಕೀರ್ತನೆ 37:29) ಅಕ್ಷರಶಃ ಲಕ್ಷಾಂತರ ಜನರು ಎಲ್ಲಾ ದೇಶಗಳಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಜೊತೆಗೂಡುತ್ತಾ, ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಹೀಗನ್ನುತ್ತಿದ್ದಾರೆ: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದಿದ್ದೆ.” (ಜೆಕರ್ಯ 8:23) ಯೆಹೋವನು ತನ್ನ ಜನರನ್ನು ಆಶೀರ್ವದಿಸುತ್ತಿದ್ದಾನೆ. “ಚಿಕ್ಕವನು” ನಿಜವಾಗಿಯೂ ಒಂದು “ಬಲವಾದ ಜನಾಂಗ”ವಾಗಿದ್ದಾನೆ, ಪ್ರತಿಯೊಂದು ರೀತಿಯಲ್ಲಿ—ವಿಚಾರದಲ್ಲಿ, ಕಾರ್ಯದಲ್ಲಿ ಮತ್ತು ಭಕ್ತಿಯಲ್ಲಿ ಪೂರ್ಣವಾಗಿ ಐಕ್ಯವಾಗಿರುವ ಒಂದು ಜಗದ್ವ್ಯಾಪಕ ಸಭೆಯು ಅದಾಗಿದೆ. (ಯೆಶಾಯ 60:22) ಸುಳ್ಳು ಧರ್ಮವೆಂದೂ ಪೂರೈಸಲು ಶಕವ್ತಾಗದ ಒಂದು ಸಂಗತಿಯಿದು.
ಶುದ್ಧ ಧರ್ಮದ ವಿಜಯ
17. ಮಹಾ ಬಾಬೆಲಿಗೆ ಏನು ಕಾದಿರಿಸಲ್ಪಟ್ಟಿದೆ, ಮತ್ತು ಅದು ಹೇಗೆ ನಿರ್ವಹಿಸಲ್ಪಡುವದು?
17 “ಬಾಬೆಲೆಂಬ ಮಹಾ ನಗರಿ” ಎಂಬ ಸಾಂಕೇತಿಕ ಹೆಸರುಳ್ಳ ಸುಳ್ಳುಧರ್ಮದ ಲೋಕ ಸಾಮ್ರಾಜ್ಯದ ನಾಶನವನ್ನು ದೇವರ ವಾಕ್ಯವು ಮುಂತಿಳಿಸಿದೆ. ಬೈಬಲು “ಅರಸುಗಳನ್ನು” ಅಥವಾ ಲೋಕದ ರಾಜಕೀಯ ಅಧಿಪತಿಗಳನ್ನು ಮೃಗದ ಕೊಂಬುಗಳಿಂದಲೂ ಸಾಂಕೇತಿಕವಾಗಿ ಪ್ರತಿನಿಧಿಸಿದೆ. ದೇವರು ಈ ಅಧಿಪತಿಗಳ ಹೃದಯಗಳಲ್ಲಿ ಪಿಶಾಚನಾದ ಸೈತಾನನ ಈ ವೇಶ್ಯಾಸದೃಶ್ಯ ವ್ಯವಸ್ಥಾಪನೆಯನ್ನು ಉರುಳಿಸಿಹಾಕುವ ಮತ್ತು ಪೂರ್ಣವಾಗಿ ನಾಶಗೊಳಿಸುವ ಹೇತುವನ್ನು ಹಾಕುವನೆಂದೂ ದೇವರ ವಾಕ್ಯವು ನಮಗೆ ತಿಳಿಸುತ್ತದೆ.—ಪ್ರಕಟನೆ 17:1, 2, 5, 6, 12, 13, 15-18.b
18. ಮಹಾ ಬಾಬೆಲನ್ನು ನಾಶಮಾಡಲಿಕ್ಕೆ ಯಾವ ಮಹತ್ವದ ಕಾರಣವನ್ನು ಬೈಬಲ್ ಕೊಡುತ್ತದೆ, ಮತ್ತು ಭೀಕರ ಮಾರ್ಗದಲ್ಲಿ ಸುಳ್ಳು ಧರ್ಮವು ಯಾವಾಗ ಪ್ರಾರಂಭಿಸಿತ್ತು?
18 ಮಹಾ ಬಾಬೆಲು ನಾಶಕ್ಕೆ ಅರ್ಹವಾಗಿರುವುದು ಏಕೆ? ಬೈಬಲ್ ಉತ್ತರಿಸುವುದು: “ಪ್ರವಾದಿಗಳ ರಕ್ತವೂ ದೇವಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿ ಸಿಕ್ಕಿತು.” (ಪ್ರಕಟನೆ 18:24) ಸುಳ್ಳು ಧರ್ಮದ ಮೇಲೆ ಹೊರಿಸಲ್ಪಟ್ಟ ಈ ರಕ್ತಾಪರಾಧ ದೋಷವು ಬಾಬೆಲಿನ ಸ್ಧಾಪನೆಗಿಂತಲೂ ಹಿಂದಿತ್ತು ಎಂದು ತೋರಿಸುತ್ತಾ, ಮಹಾ ಬಾಬೆಲಿಗೆ ತನ್ನನ್ನು ಜೊತೆಗೂಡಿಸಿದ್ದ ಯೆಹೂದಿ ಧರ್ಮದ ಮುಖಂಡರುಗಳನ್ನು ಖಂಡಿಸುವಾಗ ಯೇಸು ಅಂದದ್ದು: “ಹಾವುಗಳೇ, ಸರ್ಪಜಾತಿಯವರೇ, ಗೆಹೆನ್ನ ತೀರ್ಪಿಗೆ ಹೇಗೆ ತಪ್ಪಿಸಿಕೊಂಡೀರಿ? . . . ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು . . . ಎಲ್ಲಾ ನೀತಿವಂತರ ರಕ್ತದಿಂದುಂಟಾಗುವ ಅಪರಾಧವು ನಿಮ್ಮ ತಲೆಯ ಮೇಲೆ ಬರುವದು.” (ಮತ್ತಾಯ 23:33-35) ಹೌದು, ಏದೆನಿನ ದಂಗೆಯ ಸಮಯದಲ್ಲಿ ಭೂಮಿಯಲ್ಲಿ ಪ್ರಾರಂಭಗೊಂಡ ಸುಳ್ಳು ಧರ್ಮವು ಈ ಘೋರ ರಕ್ತಾಪರಾಧಕ್ಕೆ ಜವಾಬು ಕೊಡಲೇಬೇಕು.
19, 20. ಮಹಾ ಬಾಬೆಲಿನ ಮೇಲೆ ದಂಡನೆಯ ತೀರ್ಪು ನಿರ್ವಹಿಸಲ್ಪಟ್ಟ ಮೇಲೆ ಸತ್ಯಾರಾಧಕರು ಏನು ಮಾಡುವರು? (ಬಿ) ಆಗ ಏನು ಸಂಭವಿಸುವುದು, ಮತ್ತು ಎಲ್ಲಾ ಸತ್ಯಾರಾಧಕರ ಮುಂದೆ ಯಾವ ಪ್ರತೀಕ್ಷೆಯು ತೆರೆಯುವದು?
19 ಮಹಾ ಬಾಬೆಲಿನ ನಾಶನದ ನಂತರ, ಭೂಮಿಯಲ್ಲಿರುವ ಸತ್ಯಾರಾಧಕರು ಆ ಸ್ವರ್ಗೀಯ ಗಾಯನದೊಂದಿಗೆ ತಮ್ಮ ಸರ್ವಗೂಡಿಸುತ್ತಾ ಹೀಗೆಂದು ಹಾಡುವರು: “ಹಲ್ಲೆಲೂಯಾ! [ಜನಾಂಗಗಳೇ, ಯಾಹುವನ್ನು ಸುತ್ತಿಸಿರಿ, NW ] . . ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯ ತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ. . . . ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತದೆ.”—ಪ್ರಕಟನೆ 19:1-3.
20 ಅನಂತರ ಸೈತಾನನ ದೃಶ್ಯ ಸಂಸ್ಥೆಯ ಇತರ ಉಪಾಂಗಗಳು ನಾಶಗೊಳಿಸಲ್ಪಡುವವು. (ಪ್ರಕಟನೆ 19:17-21) ಇದಾದ ನಂತರ, ಎಲ್ಲಾ ಸುಳ್ಳು ಧರ್ಮದ ಸ್ಥಾಪಕನಾದ ಸೈತಾನನು ಮತ್ತು ಅವನ ದುರಾತ್ಮಗಳು ಅಧೋಲೋಕದಲ್ಲಿ ಬಂಧಿಸಲ್ಪಡುವರು. ಯೆಹೋವನ ಸತ್ಯಾರಾಧಕರನ್ನು ಹಿಂಸಿಸಲಿಕ್ಕೆ ಅವರು ಇನ್ನು ಮುಂದೆ ಸ್ವತಂತ್ರರಿಲ್ಲ. (ಪ್ರಕಟನೆ 20:1-3) ಶುದ್ಧ ಧರ್ಮವು ಸುಳ್ಳಿನ ಮೇಲೆ ವಿಜಯವನ್ನು ಪಡೆದಿರುವದು. ಈಗಲೇ ಮಹಾ ಬಾಬೆಲಿನಿಂದ ಹೊರಟು ಬರುವ ಮತ್ತು ದೈವಿಕ ಎಚ್ಚರಿಕೆಗೆ ಕಿವಿಗೊಡುವ ನಂಬಿಗಸ್ತ ಸ್ತ್ರೀ-ಪುರುಷರಿಗೆ ಪಾರಾಗುವಂಥ ಮತ್ತು ದೇವರ ಹೊಸ ಲೋಕವನ್ನು ಪ್ರವೇಶಿಸುವಂಥ ಸಂದರ್ಭ ದೊರಕುವದು. ಅಲ್ಲಿ, ಅವರು ಸತ್ಯ ಧರ್ಮವನ್ನು ಆಚರಿಸಲು ಮತ್ತು ಯೆಹೋವನನ್ನು ಸದಾ ಭಕ್ತಿಪೂರ್ವಕವಾಗಿ ಸೇವಿಸಲು ಶಕ್ತರಾಗುವರು. (w91 12/1)
[ಅಧ್ಯಯನ ಪ್ರಶ್ನೆಗಳು]
a ಕೊಲೊಸ್ಸೆಯ 2:18ರಲ್ಲಿ ತಿಳಿಸಲ್ಪಟ್ಟ ದೇವದೂತರ ಪೂಜೆಯ ಕುರಿತಾದ ವಿವರಕ್ಕಾಗಿ, ಜುಲೈ 15, 1985ರ ದಿ ವಾಚ್ಟವರ್, ಪುಟ 12-13 ನೋಡಿರಿ.
b ಈ ಪ್ರವಾದನೆಯ ಪೂರ್ಣ ವಿವರಣೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಪ್ರಕಾಶಿತ, ರೆವಲೇಶನ್—ಇಟ್ಸ್ ಗ್ರಾಂಡ್ ಕ್ಲೈಮಾಕ್ಸ್ ಎಟ್ ಹ್ಯಾಂಡ್! ಪುಸ್ತಕದ 33-6 ಅಧ್ಯಾಯಗಳನ್ನು ನೋಡಿರಿ.
ನಿಮ್ಮ ಸ್ಮರಣಶಕ್ತಿಯನ್ನು ಪರೀಕ್ಷಿಸಿರಿ
▫ಧರ್ಮದ ವಿಷಯವಾಗಿ ಯಾರ ನೋಟವು ಅತ್ಯಂತ ಮಹತ್ವದ್ದು ಮತ್ತು ಏಕೆ?
▫ ಸತ್ಯ ಧರ್ಮಕ್ಕಾಗಿ ಯಾವ ಎರಡು ಆವಶ್ಯಕತೆಗಳನ್ನು ಯಾಕೋಬನು ಒತ್ತಿಹೇಳಿದ್ದನು?
▫ ಶುದ್ಧಾರಾಧನೆಯ ಬೇರೆ ಆವಶ್ಯಕತೆಗಳು ಯಾವುವು?
▫ ಯಾವ “ಸುವಾರ್ತೆ”ಯನ್ನು ಯೆಹೋವನ ಸಾಕ್ಷಿಗಳು ಸಾರುತ್ತಿದ್ದಾರೆ?
▫ಸತ್ಯ ಧರ್ಮವು ಸುಳ್ಳು ಧರ್ಮವನ್ನು ಜಯಿಸುವುದು ಹೇಗೆ?
[ಪುಟ 17 ರಲ್ಲಿರುವ ಚಿತ್ರ]
ಧರ್ಮ ಮುಖಂಡರು ಇಟೆಲಿಯ ಎಸ್ಸಿಸ್ಸಿಯಲ್ಲಿ ಅಕ್ಟೋಬರ, 1986ರಲ್ಲಿ ಕೂಡಿಬಂದರು
[ಪುಟ 19 ರಲ್ಲಿರುವ ಚಿತ್ರ]
ಸತ್ಯ ಧರ್ಮದಲ್ಲಿ ಆರಾಧನೆಗಾಗಿ ಸಭೆಯಾಗಿ ಕೂಡಿಬರುವುದು ಸೇರಿದೆ