ಪರೀಕ್ಷೆಗಳಿದ್ದಾಗ್ಯೂ, ನಿಮ್ಮ ನಂಬಿಕೆಗೆ ಅಂಟಿಕೊಳ್ಳಿರಿ!
“ನನ್ನ ಸಹೋದರರೇ, . . . ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.”—ಯಾಕೋಬ 1:2.
1. ಯಾವುದರ ಹೊರತೂ ಯೆಹೋವನ ಜನರು ಆತನನ್ನು ನಂಬಿಕೆಯಿಂದ ಮತ್ತು “ಹರ್ಷಾನಂದ”ದಿಂದ ಸೇವಿಸುತ್ತಾರೆ?
ಯೆಹೋವನ ಜನರು ಆತನಲ್ಲಿ ನಂಬಿಕೆ ಮತ್ತು “ಹರ್ಷಾನಂದ”ದಿಂದ ಆತನ ಸಾಕ್ಷಿಗಳಾಗಿ ಸೇವೆಮಾಡುತ್ತಾರೆ. (ಧರ್ಮೋಪದೇಶಕಾಂಡ 28:47; ಯೆಶಾಯ 43:10) ಅನೇಕ ಪರೀಕ್ಷೆಗಳಿಂದ ಸುತ್ತುವರಿಯಲ್ಪಟ್ಟಿರುವುದಾದರೂ, ಅವರು ಇದನ್ನು ಮಾಡುತ್ತಾರೆ. ಅವರ ಕಷ್ಟದೆಸೆಗಳ ಎದುರಿನಲ್ಲಿಯೂ ಅವರು ಈ ಮಾತುಗಳಿಂದ ಸಾಂತ್ವನವನ್ನು ಪಡೆಯುತ್ತಾರೆ: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.”—ಯಾಕೋಬ 1:2, 3.
2. ಯಾಕೋಬನ ಪತ್ರದ ಲೇಖಕನ ಕುರಿತು ಏನು ತಿಳಿದದೆ?
2 ಆ ಹೇಳಿಕೆ ಸುಮಾರು ಸಾ.ಶ. 62ರಲ್ಲಿ, ಯೇಸು ಕ್ರಿಸ್ತನ ಮಲತಮ್ಮನಾಗಿದ್ದ ಶಿಷ್ಯ ಯಾಕೋಬನಿಂದ ಬರೆಯಲ್ಪಟ್ಟಿತು. (ಮಾರ್ಕ 6:3) ಯಾಕೋಬನು ಯೆರೂಸಲೇಮ್ ಸಭೆಯಲ್ಲಿ ಒಬ್ಬ ಹಿರಿಯನಾಗಿದ್ದನು. ವಾಸ್ತವದಲ್ಲಿ, ಅವನು, ಕೇಫ (ಪೇತ್ರ), ಮತ್ತು ಯೋಹಾನರು “ಸಭಾಸ್ತಂಭಗಳೆಂದು ಹೆಸರು” ಇದ್ದವರಾಗಿದ್ದರು; ಸಭೆಯ ಬಲವತ್ತಾದ, ಸ್ಥಿರವಾಗಿ ನೆಲೆಸಿದ್ದ ಬೆಂಬಲಿಗರಾಗಿದ್ದರು. (ಗಲಾತ್ಯ 2:9) ಸುನ್ನತಿಯ ವಿವಾದವು, ‘ಅಪೊಸ್ತಲರ ಮತ್ತು ಸಭೆಯ ಹಿರಿಯರ’ ಮುಂದೆ ಸುಮಾರು ಸಾ.ಶ. 49ರಲ್ಲಿ ಬಂದಾಗ, ಯಾಕೋಬನು ಶಾಸ್ತ್ರೀಯವಾಗಿ ಸ್ವಸ್ಥವಾಗಿದ್ದ ಪ್ರಸ್ತಾಪವೊಂದನ್ನು ಮಾಡಲಾಗಿ, ಅದು ಒಂದನೆಯ ಶತಮಾನದ ಆ ಆಡಳಿತ ಮಂಡಳಿಯಿಂದ ಅನುಮೋದಿಸಲ್ಪಟ್ಟಿತು.—ಅ. ಕೃತ್ಯಗಳು 15:6-29.
3. ಒಂದನೆಯ ಶತಮಾನದ ಕ್ರೈಸ್ತರನ್ನು ಎದುರಿಸಿದ ಸಮಸ್ಯೆಗಳಲ್ಲಿ ಕೆಲವು ಯಾವುವಾಗಿದ್ದವು, ಮತ್ತು ಯಾಕೋಬನ ಪತ್ರದಿಂದ ನಾವು ಹೇಗೆ ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು?
3 ಚಿಂತಿತ ಆತ್ಮಿಕ ಕುರುಬನೋಪಾದಿ, ಯಾಕೋಬನಿಗೆ ‘ಹಿಂಡುಗಳ ಸ್ಥಿತಿ ಗೊತ್ತಿತ್ತು.’ (ಜ್ಞಾನೋಕ್ತಿ 27:23) ಕ್ರೈಸ್ತರು ಆಗ ಕಠಿನಕರವಾದ ಪರೀಕ್ಷೆಗಳನ್ನು ಎದುರಿಸುತ್ತಿದ್ದರೆಂಬುದನ್ನು ಅವನು ಗ್ರಹಿಸಿದನು. ಕೆಲವರ ಯೋಚನೆಗಳು ಪುನರಳವಡಿಸಲ್ಪಡಬೇಕಾಗಿದ್ದವು, ಏಕೆಂದರೆ ಅವರು ಧನಿಕರಿಗೆ ಪಕ್ಷಪಾತ ತೋರಿಸುತ್ತಿದ್ದರು. ಅನೇಕರಿಗೆ, ಆರಾಧನೆಯು ಬರಿಯ ನಿಯಮಾನುಸರಣೆಯಾಗಿತ್ತು. ಕೆಲವರು ತಮ್ಮ ಸ್ವಚ್ಛಂದ ನಾಲಗೆಗಳಿಂದ ಹಾನಿಮಾಡುತ್ತಿದ್ದರು. ಒಂದು ಲೋಕಾತ್ಮವು ಧ್ವಂಸಕಾರಕ ಪರಿಣಾಮಗಳನ್ನು ಉಂಟುಮಾಡುತ್ತಿತ್ತು, ಮತ್ತು ಅನೇಕರು ತಾಳ್ಮೆಯುಳ್ಳವರಾಗಲಿ, ಪ್ರಾರ್ಥನಾಭಾವದವರಾಗಲಿ ಆಗಿರಲಿಲ್ಲ. ಕಾರ್ಯತಃ, ಆತ್ಮಿಕ ಅಸ್ವಸ್ಥತೆಯು ಕೆಲವು ಕ್ರೈಸ್ತರಿಗೆ ಸೋಂಕಿತ್ತು. ಯಾಕೋಬನ ಪತ್ರವು ಇಂತಹ ವಿಷಯಗಳನ್ನು ಆತ್ಮೋನ್ನತಿಮಾಡುವ ರೀತಿಯಲ್ಲಿ ಸಂಬೋಧಿಸುತ್ತದೆ ಮತ್ತು ಅವನ ಸಲಹೆ, ಸಾ.ಶ. ಒಂದನೆಯ ಶತಮಾನದಲ್ಲಿ ಪ್ರಾಯೋಗಿಕವಾಗಿದ್ದಷ್ಟೇ ಈಗಲೂ ಪ್ರಾಯೋಗಿಕವಾಗಿದೆ. ನಾವು ಈ ಪತ್ರವನ್ನು, ನಮಗೆ ವೈಯಕ್ತಿಕವಾಗಿ ಬರೆಯಲ್ಪಟ್ಟಿರುವಂತೆ ಪರಿಗಣಿಸುವುದಾದರೆ, ಮಹತ್ತಾದ ಪ್ರಯೋಜನವನ್ನು ಪಡೆಯುವೆವು.a
ನಾವು ಪರೀಕ್ಷೆಗಳನ್ನು ಅನುಭವಿಸುವಾಗ
4. ಪರೀಕ್ಷೆಗಳನ್ನು ನಾವು ಹೇಗೆ ವೀಕ್ಷಿಸಬೇಕು?
4 ಪರೀಕ್ಷೆಗಳನ್ನು ಹೇಗೆ ವೀಕ್ಷಿಸಬೇಕೆಂದು ಯಾಕೋಬನು ನಮಗೆ ತೋರಿಸುತ್ತಾನೆ. (ಯಾಕೋಬ 1:1-4) ದೇವರ ಪುತ್ರನೊಂದಿಗಿದ್ದ ಕುಟುಂಬ ಸಂಬಂಧವನ್ನು ತಿಳಿಸದೆ, ಅವನು ದೈನ್ಯದಿಂದ ತನ್ನನ್ನು, “ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸ”ನೆಂದು ಕರೆದುಕೊಳ್ಳುತ್ತಾನೆ. ಯಾಕೋಬನು, ಆರಂಭದಲ್ಲಿ ಹಿಂಸೆಯ ಕಾರಣದಿಂದ “ಚದರಿರುವ” ಆತ್ಮಿಕ ಇಸ್ರಾಯೇಲಿನ “ಹನ್ನೆರಡು ಕುಲದವರಿಗೆ” ಬರೆಯುತ್ತಾನೆ. (ಅ. ಕೃತ್ಯಗಳು 8:1; 11:19; ಗಲಾತ್ಯ 6:16; 1 ಪೇತ್ರ 1:1) ಕ್ರೈಸ್ತರೋಪಾದಿ, ನಾವು ಸಹ ಹಿಂಸಿಸಲ್ಪಡುತ್ತೇವೆ ಮತ್ತು “ನಾನಾವಿಧವಾದ ಕಷ್ಟಗಳಲ್ಲಿ” ಬೀಳುತ್ತೇವೆ. ಆದರೆ ತಾಳಿಕೊಳ್ಳಲ್ಪಟ್ಟ ಪರೀಕ್ಷೆಗಳು ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆಂದು ನಾವು ನೆನಸಿಕೊಳ್ಳುವಲ್ಲಿ, ಅವು ನಮ್ಮ ಮೇಲೆ ಬರುವಾಗ, ನಾವು ಅವನ್ನು “ಕೇವಲ ಆನಂದಕರ”ವಾಗಿ ಪರಿಗಣಿಸುವೆವು. ಪರೀಕ್ಷೆಗಳ ಸಮಯದಲ್ಲಿ ನಾವು ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ, ಇದು ನಮಗೆ ಬಾಳಿಕೆ ಬರುವ ಸಂತೋಷವನ್ನು ತರುವುದು.
5. ನಮ್ಮ ಪರೀಕ್ಷೆಗಳಲ್ಲಿ ಯಾವುದು ಒಳಗೊಂಡಿರಬಹುದು, ಮತ್ತು ನಾವು ಅವನ್ನು ಯಶಸ್ವಿಯಾಗಿ ತಾಳಿಕೊಂಡಾಗ ಏನು ಸಂಭವಿಸುತ್ತದೆ?
5 ನಮ್ಮ ಪರೀಕ್ಷೆಗಳಲ್ಲಿ ಮಾನವಕುಲಕ್ಕೆ ಸಾಮಾನ್ಯವಾದ ದುಃಸ್ಥಿತಿಗಳು ಸೇರಿವೆ. ದೃಷ್ಟಾಂತಕ್ಕೆ, ಕೆಟ್ಟ ದೇಹಸ್ಥಿತಿಯು ನಮ್ಮನ್ನು ಪೀಡಿಸಬಹುದು. ದೇವರು ಈಗ ಅದ್ಭುತಕರವಾದ ಗುಣಪಡಿಸುವಿಕೆಗಳನ್ನು ಮಾಡುತ್ತಿಲ್ಲ, ಆದರೆ ಕಾಯಿಲೆಯನ್ನು ನಿಭಾಯಿಸಲು ಬೇಕಾದ ವಿವೇಕ ಮತ್ತು ಸ್ಥೈರ್ಯಗಳಿಗಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಆತನು ಉತ್ತರಿಸುತ್ತಾನೆ. (ಕೀರ್ತನೆ 41:1-3) ಯೆಹೋವನ ಹಿಂಸಿಸಲ್ಪಟ್ಟ ಸಾಕ್ಷಿಗಳೋಪಾದಿ, ನಾವು ನೀತಿಯ ನಿಮಿತ್ತವೂ ಬಾಧೆಪಡುತ್ತೇವೆ. (2 ತಿಮೊಥೆಯ 3:12; 1 ಪೇತ್ರ 3:14) ನಾವು ಅಂತಹ ಪರೀಕ್ಷೆಗಳನ್ನು ಯಶಸ್ವಿಯಾಗಿ ತಾಳಿಕೊಳ್ಳುವಾಗ, ನಮ್ಮ ನಂಬಿಕೆಯು ರುಜುಪಡಿಸಲ್ಪಟ್ಟು, “ಪರಿಶೋಧಿತ ಗುಣಮಟ್ಟ”ದಲ್ಲಿ ಒಂದಾಗಿ ಪರಿಣಮಿಸುತ್ತದೆ. ಮತ್ತು ನಮ್ಮ ನಂಬಿಕೆಯು ಜಯಹೊಂದುವಾಗ, ಇದು “ತಾಳ್ಮೆಯನ್ನು ಫಲಿಸುತ್ತದೆ.” ಪರೀಕ್ಷೆಗಳಿಂದಾಗಿ ಬಲಗೊಂಡ ನಂಬಿಕೆಯು ಭಾವೀ ಪರೀಕ್ಷೆಗಳನ್ನು ತಾಳಿಕೊಳ್ಳಲು ನಮಗೆ ಸಹಾಯ ನೀಡುವುದು.
6. “ತಾಳ್ಮೆಯು ತನ್ನ ಕೆಲಸವನ್ನು ಪೂರ್ತಿ”ಗೊಳಿಸುವುದು ಹೇಗೆ, ಮತ್ತು ನಾವು ಪರೀಕ್ಷೆಯ ಕೆಳಗಿರುವಾಗ ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆ?
6 “ಆದರೆ ತಾಳ್ಮೆಯು ತನ್ನ ಕೆಲಸವನ್ನು ಪೂರ್ತಿಗೊಳಿಸಲಿ,” ಎನ್ನುತ್ತಾನೆ ಯಾಕೋಬನು. ಒಂದು ಪರೀಕ್ಷೆಯನ್ನು, ಅದು ಅಶಾಸ್ತ್ರೀಯ ವಿಧಗಳಲ್ಲಿ ಬೇಗನೆ ಮುಗಿಸಲು ಪ್ರಯತ್ನಿಸದೆ, ಮುಂದುವರಿಯುವಂತೆ ಬಿಡುವಲ್ಲಿ, ತಾಳ್ಮೆಯು ನಮ್ಮನ್ನು ನಂಬಿಕೆಯ ಕೊರತೆಯಿಲ್ಲದ ಕ್ರೈಸ್ತರನ್ನಾಗಿ ಪೂರ್ತಿಗೊಳಿಸುವ “ಕೆಲಸ”ವನ್ನು ಮಾಡುವುದು. ನಿಜ, ಒಂದು ಪರೀಕ್ಷೆಯು ಯಾವುದಾದರೂ ಬಲಹೀನತೆಯನ್ನು ಹೊರಗೆಡಹುವಲ್ಲಿ, ಅದನ್ನು ಜಯಿಸುವರೆ ಯೆಹೋವನ ಸಹಾಯವನ್ನು ನಾವು ಹುಡುಕಬೇಕು. ಪರೀಕ್ಷೆಯು ಲೈಂಗಿಕ ದುರಾಚಾರದಲ್ಲಿ ಭಾಗವಹಿಸಲು ಇರುವ ದುಷ್ಪ್ರೇರಣೆಯಾಗಿರುವುದಾದರೆ ಆಗೇನು? ನಾವು ಆ ಸಮಸ್ಯೆಯ ಕುರಿತು ಪ್ರಾರ್ಥಿಸೋಣ ಮತ್ತು ಬಳಿಕ ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ವರ್ತಿಸೋಣ. ನಾವು ನಮ್ಮ ಕೆಲಸದ ಸ್ಥಳವನ್ನು ಬದಲಾಯಿಸಬೇಕಾದೀತು ಅಥವಾ ದೇವರ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಇತರ ಕ್ರಮಗಳನ್ನು ಕೈಕೊಳ್ಳಬೇಕಾದೀತು.—ಆದಿಕಾಂಡ 39:7-9; 1 ಕೊರಿಂಥ 10:13.
ವಿವೇಕಕ್ಕಾಗಿ ಹುಡುಕಾಟ
7. ಪರೀಕ್ಷೆಗಳನ್ನು ನಿಭಾಯಿಸಲು ನಮಗೆ ಹೇಗೆ ಸಹಾಯ ದೊರೆಯಬಹುದು?
7 ಒಂದು ಪರೀಕ್ಷೆಯನ್ನು ನಿಭಾಯಿಸುವ ವಿಧ ನಮಗೆ ತಿಳಿಯದಿರುವಲ್ಲಿ ಏನು ಮಾಡಬೇಕೆಂಬುದನ್ನು ಯಾಕೋಬನು ನಮಗೆ ತೋರಿಸುತ್ತಾನೆ. (ಯಾಕೋಬ 1:5-8) ವಿವೇಕದ ಕೊರತೆಯಿರುವುದಕ್ಕಾಗಿ ಮತ್ತು ಅದಕ್ಕಾಗಿ ನಂಬಿಕೆಯಿಂದ ಪ್ರಾರ್ಥಿಸುವುದಕ್ಕಾಗಿ ಯೆಹೋವನು ನಮ್ಮನ್ನು ನಿಂದಿಸನು. ಒಂದು ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ವೀಕ್ಷಿಸುವಂತೆ ಮತ್ತು ತಾಳಿಕೊಳ್ಳುವಂತೆ ಆತನು ನಮಗೆ ಸಹಾಯಮಾಡುವನು. ಜೊತೆ ವಿಶ್ವಾಸಿಗಳ ಮೂಲಕ ಅಥವಾ ವೈಯಕ್ತಿಕ ಬೈಬಲ್ ಅಧ್ಯಯನದ ಸಮಯದಲ್ಲಿ ಶಾಸ್ತ್ರವಚನಗಳು ನಮ್ಮ ಗಮನಕ್ಕೆ ತರಲ್ಪಡಬಹುದು. ದೈವಿಕ ಮಾರ್ಗದರ್ಶನದ ಮೂಲಕ ನಿರ್ವಹಿಸಲ್ಪಟ್ಟ ಸಂಭವಗಳು, ನಾವು ಏನು ಮಾಡಬೇಕೆಂಬುದನ್ನು ಮನಗಾಣಲು ನಮ್ಮನ್ನು ಶಕ್ತರನ್ನಾಗಿ ಮಾಡಬಹುದು. ನಾವು ದೇವರಾತ್ಮದಿಂದ ನಡೆಸಲ್ಪಡಬಹುದು. (ಲೂಕ 11:13) ಇಂತಹ ಪ್ರಯೋಜನಗಳನ್ನು ಅನುಭವಿಸಬೇಕಾದರೆ, ನಾವು ದೇವರಿಗೆ ಮತ್ತು ಆತನ ಜನರಿಗೆ ಒತ್ತಾಗಿ ಅಂಟಿಕೊಂಡಿರಬೇಕೆಂಬುದು ಸ್ವಾಭಾವಿಕ.—ಜ್ಞಾನೋಕ್ತಿ 18:1.
8. ಸಂದೇಹಿಯೊಬ್ಬನು ಯೆಹೋವನಿಂದ ಏನನ್ನೂ ಪಡೆದುಕೊಳ್ಳುವುದಿಲ್ಲವೇಕೆ?
8 ನಾವು “ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳು”ವುದಾದರೆ, ಪರೀಕ್ಷೆಗಳನ್ನು ನಿಭಾಯಿಸಲು ಬೇಕಾದ ವಿವೇಕವನ್ನು ಯೆಹೋವನು ನಮಗೆ ದಯಪಾಲಿಸುವನು. ಒಬ್ಬ ಸಂದೇಹಿಯು, “ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ,” ಮುಂತಿಳಿಸಲಾಗದ ರೀತಿಯಲ್ಲಿ “ಅಲೆಯುತ್ತಿರುವನು.” ನಾವು ಆ ರೀತಿಯಲ್ಲಿ ಆತ್ಮಿಕವಾಗಿ ಅಸ್ಥಿರರಾಗಿರುವಲ್ಲಿ, ‘ಯೆಹೋವನಿಂದ ಏನನ್ನಾದರೂ ಪಡೆಯುವೆವೆಂದು ಭಾವಿಸಬಾರದು.’ ನಾವು ಪ್ರಾರ್ಥನೆಯಲ್ಲಾಗಲಿ, ಇತರ ವಿಧಗಳಲ್ಲಾಗಲಿ “ಎರಡು ಮನಸ್ಸು” ಉಳ್ಳವರೂ “ಚಂಚಲ”ರೂ ಆಗಿರದಿರೋಣ. ಬದಲಿಗೆ, ವಿವೇಕದ ಮೂಲನಾಗಿರುವ ಯೆಹೋವನಲ್ಲಿ ನಂಬಿಕೆಯುಳ್ಳವರಾಗಿರೋಣ.—ಜ್ಞಾನೋಕ್ತಿ 3:5, 6.
ಧನಿಕರೂ ಬಡವರೂ ಉಲ್ಲಾಸಪಡಬಲ್ಲರು
9. ಯೆಹೋವನ ಆರಾಧಕರೋಪಾದಿ ನಮಗೆ ಉಲ್ಲಾಸಪಡಲು ಕಾರಣವೇಕಿದೆ?
9 ನಮ್ಮ ಪರೀಕ್ಷೆಗಳಲ್ಲಿ ಬಡತನವು ಒಂದಾಗಿರುವುದಾದರೂ, ಧನಿಕ ಕ್ರೈಸ್ತರು ಮತ್ತು ಬಡ ಕ್ರೈಸ್ತರಿಬ್ಬರೂ ಉಲ್ಲಾಸಪಡಬಲ್ಲರೆಂಬುದನ್ನು ನಾವು ಮನಸ್ಸಿನಲ್ಲಿಡೋಣ. (ಯಾಕೋಬ 1:9-11) ಯೇಸುವಿನ ಹಿಂಬಾಲಕರಾಗುವುದಕ್ಕೆ ಮೊದಲು, ಅಭಿಷಿಕ್ತರಲ್ಲಿ ಹೆಚ್ಚಿನವರಿಗೆ ಪ್ರಾಪಂಚಿಕವಾಗಿ ಕೊಂಚವೇ ಇದ್ದು, ಲೋಕದಿಂದ ಅವರು ಕಡೆಗಣಿಸಲ್ಪಡುತ್ತಿದ್ದರು. (1 ಕೊರಿಂಥ 1:26) ಆದರೆ ರಾಜ್ಯದ ಬಾಧ್ಯಸ್ಥರಾಗಿರುವ ಸ್ಥಾನವೆಂಬ “ಉತ್ತಮಸ್ಥಿತಿ”ಗಾಗಿ ಅವರು ಉಲ್ಲಾಸಿಸಸಾಧ್ಯವಿತ್ತು. (ರೋಮಾಪುರ 8:16, 17) ವಿಪರ್ಯಯವಾಗಿ, ಒಂದೊಮ್ಮೆ ಸನ್ಮಾನಿಸಲ್ಪಟ್ಟಿದ್ದ ಧನಿಕ ಜನರು, ಲೋಕದಿಂದ ಉಪೇಕ್ಷಿಸಲ್ಪಡುವುದರಿಂದ, ಕ್ರಿಸ್ತನ ಹಿಂಬಾಲಕರಾಗಿ “ಹೀನಸ್ಥಿತಿ”ಯನ್ನು ಅನುಭವಿಸುತ್ತಾರೆ. (ಯೋಹಾನ 7:47-52; 12:42, 43) ಆದರೂ, ಯೆಹೋವನ ಸೇವಕರೋಪಾದಿ, ನಾವೆಲ್ಲರೂ ಹರ್ಷಿಸಬಲ್ಲೆವು, ಏಕೆಂದರೆ ನಾವು ಅನುಭವಿಸುತ್ತಿರುವ ಆತ್ಮಿಕ ಸಂಪತ್ತಿಗೆ ಹೋಲಿಸುವಾಗ, ಲೌಕಿಕ ಧನ ಮತ್ತು ಉನ್ನತ ಸ್ಥಾನಗಳು ಏನೂ ಬೆಲೆಯಿಲ್ಲದವುಗಳಾಗಿವೆ. ಮತ್ತು ನಮ್ಮ ಮಧ್ಯೆ ಸಾಮಾಜಿಕ ಸ್ಥಾನಮಾನದ ಕುರಿತ ಜಂಬಕ್ಕೆ ಎಡೆಯಿಲ್ಲದಿರುವುದಕ್ಕೆ ನಾವೆಷ್ಟು ಕೃತಜ್ಞರು!—ಜ್ಞಾನೋಕ್ತಿ 10:22; ಅ. ಕೃತ್ಯಗಳು 10:34, 35.
10. ಪ್ರಾಪಂಚಿಕ ಐಶ್ವರ್ಯವನ್ನು ಕ್ರೈಸ್ತನೊಬ್ಬನು ಹೇಗೆ ವೀಕ್ಷಿಸಬೇಕು?
10 ನಮ್ಮ ಜೀವವು ಧನ ಮತ್ತು ಲೌಕಿಕ ಸಾಧನೆಯ ಮೇಲೆ ಆಧಾರಿಸುವುದಿಲ್ಲವೆಂಬುದನ್ನು ನೋಡುವಂತೆ ಯಾಕೋಬನು ನಮಗೆ ಸಹಾಯಮಾಡುತ್ತಾನೆ. ಒಂದು ಪುಷ್ಪದ ಸೌಂದರ್ಯವು, ಸೂರ್ಯನ “ಉಷ್ಣವಾದ ಗಾಳಿ”ಯಲ್ಲಿ ಆ ಹೂವು ಬಾಡಿಹೋಗುವುದನ್ನು ತಡೆಯಲು ಅಸಾಧ್ಯವಾಗಿರುವಂತೆಯೇ, ಧನಿಕನ ಐಶ್ವರ್ಯವು ಅವನ ಆಯುಷ್ಯವನ್ನು ಲಂಬಿಸಲಾರದು. (ಕೀರ್ತನೆ 49:6-9; ಮತ್ತಾಯ 6:27) ತನ್ನ “ವ್ಯವಹಾರಗಳಲ್ಲಿ,” ಪ್ರಾಯಶಃ ತನ್ನ ವ್ಯಾಪಾರವನ್ನು ಬೆನ್ನಟ್ಟುತ್ತಿರುವಾಗಲೆ ಅವನು ಸಾಯಬಹುದು. ಆದಕಾರಣ, ಪ್ರಮುಖ ವಿಷಯವು, “ದೇವರ ವಿಷಯಗಳಲ್ಲಿ ಐಶ್ವರ್ಯವಂತ”ರಾಗಿದ್ದು, ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ನಮಗೆ ಸಾಧ್ಯವಿರುವುದನ್ನೆಲ್ಲ ಮಾಡುವುದೇ.—ಲೂಕ 12:13-21; ಮತ್ತಾಯ 6:33; 1 ತಿಮೊಥೆಯ 6:17-19.
ಪರೀಕ್ಷೆಗಳನ್ನು ತಾಳಿಕೊಳ್ಳುತ್ತಿರುವವರು ಸಂತುಷ್ಟರು
11. ಪರೀಕ್ಷೆಗಳೆದುರಲ್ಲಿ ನಂಬಿಕೆಗೆ ಅಂಟಿಕೊಳ್ಳುವವರಿಗಿರುವ ಪ್ರತೀಕ್ಷೆಗಳೇನು?
11 ಧನಿಕರಾಗಲಿ, ಬಡವರಾಗಲಿ, ನಾವು ನಮ್ಮ ಪರೀಕ್ಷೆಗಳನ್ನು ತಾಳಿಕೊಳ್ಳುವಲ್ಲಿ ಮಾತ್ರ ಸಂತೋಷಪಡುವೆವು. (ಯಾಕೋಬ 1:12-15) ನಮ್ಮ ನಂಬಿಕೆ ಅಖಂಡವಾಗಿದ್ದು, ನಾವು ಅಂತಹ ಪರೀಕ್ಷೆಗಳನ್ನು ತಾಳಿಕೊಳ್ಳುವಲ್ಲಿ, ನಾವು ಸಂತೋಷವುಳ್ಳವರೆಂದು ಹೇಳಸಾಧ್ಯವಿದೆ, ಏಕೆಂದರೆ ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡುವುದರಲ್ಲಿ ಹರ್ಷವಿದೆ. ಮರಣದ ಪರ್ಯಂತ ನಂಬಿಕೆಗೆ ಅಂಟಿಕೊಳ್ಳುವ ಮೂಲಕ, ಆತ್ಮಜನಿತ ಕ್ರೈಸ್ತರು “ಜೀವವೆಂಬ ಜಯಮಾಲೆ”ಯನ್ನು, ಸ್ವರ್ಗದಲ್ಲಿ ಅಮರತ್ವವನ್ನು ಪಡೆಯುವರು. (ಪ್ರಕಟನೆ 2:10; 1 ಕೊರಿಂಥ 15:50) ನಮಗೆ ಭೂನಿರೀಕ್ಷೆಯಿದ್ದು, ನಾವು ದೇವರಲ್ಲಿ ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವಲ್ಲಿ, ನಾವು ಪ್ರಮೋದವನವಾದ ಭೂಮಿಯ ಮೇಲೆ ಸಾರ್ವಕಾಲಿಕ ಜೀವನವನ್ನು ಮುನ್ನೋಡಬಲ್ಲೆವು. (ಲೂಕ 23:43; ರೋಮಾಪುರ 6:23) ತನ್ನಲ್ಲಿ ನಂಬಿಕೆಯಿಡುವ ಸರ್ವರಿಗೆ ಯೆಹೋವನು ಎಷ್ಟು ಒಳ್ಳೆಯವನಾಗಿದ್ದಾನೆ!
12. ಕೆಟ್ಟದ್ದನ್ನು ಅನುಭವಿಸುತ್ತಿರುವಾಗ, “ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತು” ಎಂದು ನಾವು ಏಕೆ ಹೇಳಬಾರದು?
12 ಯೆಹೋವನು ತಾನೇ ನಮ್ಮನ್ನು ಕಷ್ಟಗಳಿಂದ ಪರೀಕ್ಷಿಸುವುದು ಸಾಧ್ಯವೊ? ಇಲ್ಲ, “ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತು” ಎಂದು ನಾವು ಹೇಳಬಾರದು. ಪಾಪವನ್ನು ಮಾಡುವಂತೆ ಯೆಹೋವನು ನಮ್ಮನ್ನು ಪ್ರೇರಿಸಲು ಪ್ರಯತ್ನಿಸುತ್ತಿಲ್ಲ, ಬದಲಿಗೆ ನಾವು ನಂಬಿಕೆಯಲ್ಲಿ ಸ್ಥಿರವಾಗಿ ಉಳಿಯುವಲ್ಲಿ, ನಮಗೆ ಸಹಾಯ ಮಾಡಿ, ಪರೀಕ್ಷೆಗಳನ್ನು ತಾಳಿಕೊಳ್ಳಲು ಅಗತ್ಯವಾದ ಬಲವನ್ನು ಆತನು ನಮಗೆ ಕೊಡುತ್ತಾನೆಂಬುದು ಖಂಡಿತ. (ಫಿಲಿಪ್ಪಿ 4:13) ದೇವರು ಪರಿಶುದ್ಧನಾಗಿರುವುದರಿಂದ, ತಪ್ಪುಮಾಡುವಿಕೆಗಿರುವ ನಮ್ಮ ನಿರೋಧವನ್ನು ಬಲಹೀನಗೊಳಿಸುವ ಪರಿಸ್ಥಿತಿಗಳಲ್ಲಿ ಆತನು ನಮ್ಮನ್ನಿಡುವುದಿಲ್ಲ. ನಾವು ನಮ್ಮನ್ನು ಅಪವಿತ್ರ ಸನ್ನಿವೇಶಗಳಲ್ಲಿ ಸಿಕ್ಕಿಸಿಕೊಂಡು ಯಾವುದಾದರೂ ಪಾಪವನ್ನು ಮಾಡುವುದಾದರೆ, ನಾವು ಆತನ ಮೇಲೆ ದೂರುಹೊರಿಸಬಾರದು. ಏಕೆಂದರೆ “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” ಒಂದು ಪರೀಕ್ಷೆಯು ನಮ್ಮನ್ನು ಶಿಸ್ತುಗೊಳಿಸುವಂತೆ ಯೆಹೋವನು ಅನುಮತಿಸಬಹುದಾದರೂ, ಆತನು ದುರುದ್ದೇಶದಿಂದ ನಮ್ಮನ್ನು ಪರೀಕ್ಷಿಸುವುದಿಲ್ಲ. (ಇಬ್ರಿಯ 12:7-11) ಕೆಟ್ಟದ್ದನ್ನು ಮಾಡುವಂತೆ ಸೈತಾನನು ನಮ್ಮನ್ನು ಪ್ರೇರೇಪಿಸಬಹುದಾದರೂ, ದೇವರು ಆ ಕೆಡುಕನಿಂದ ನಮ್ಮನ್ನು ರಕ್ಷಿಸಬಲ್ಲನು.—ಮತ್ತಾಯ 6:13.
13. ನಾವು ದುರಾಶೆಯನ್ನು ತಳ್ಳಿಹಾಕದಿರುವಲ್ಲಿ ಏನು ಸಂಭವಿಸಬಲ್ಲದು?
13 ಒಂದು ನಿರ್ದಿಷ್ಟ ಸನ್ನಿವೇಶವು, ಪಾಪಕ್ಕೆ ಪ್ರೇರಿಸಸಾಧ್ಯವಿರುವ ದುರಾಶೆಯನ್ನು ಹುಟ್ಟಿಸಬಹುದಾದ ಕಾರಣ, ನಾವು ಪ್ರಾರ್ಥನಾಪೂರ್ಣರಾಗಿರುವುದು ಆವಶ್ಯಕ. ಯಾಕೋಬನು ಹೇಳುವುದು: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ.” ನಾವು ಪಾಪಕರವಾದ ಬಯಕೆಯ ಮೇಲೆ ನಮ್ಮ ಹೃದಯವನ್ನು ಕೇಂದ್ರೀಕರಿಸಿರುವಲ್ಲಿ, ನಮ್ಮ ಪಾಪಕ್ಕಾಗಿ ನಾವು ದೇವರನ್ನು ದೂರಸಾಧ್ಯವಿಲ್ಲ. ಒಂದು ದುರಾಶೆಯನ್ನು ನಾವು ತ್ಯಜಿಸದಿರುವಲ್ಲಿ, ಅದು ‘ಬಸುರಾಗುತ್ತದೆ,’ ಹೃದಯದಲ್ಲಿ ಪೋಷಿಸಲ್ಪಟ್ಟು, “ಪಾಪವನ್ನು ಹೆರುತ್ತದೆ.” ಪಾಪವು ಪೂರ್ಣಗೊಂಡು “ಮರಣವನ್ನು ಹಡೆಯುತ್ತದೆ.” ನಾವು ನಮ್ಮ ಹೃದಯಗಳನ್ನು ಕಾದುಕೊಂಡು, ಪಾಪಕರ ಪ್ರವೃತ್ತಿಗಳನ್ನು ತಡೆಯಬೇಕೆಂಬುದು ಸುವ್ಯಕ್ತ. (ಜ್ಞಾನೋಕ್ತಿ 4:23) ಪಾಪವು ಇನ್ನೇನು ಅವನನ್ನು ಜಯಿಸಲಿಕ್ಕಿದೆಯೆಂದು ಕಾಯಿನನಿಗೆ ಎಚ್ಚರಿಕೆ ನೀಡಲ್ಪಟ್ಟರೂ ಅವನು ನಿರೋಧಿಸಲಿಲ್ಲ. (ಆದಿಕಾಂಡ 4:4-8) ಹಾಗಾದರೆ, ನಾವೊಂದು ಅಶಾಸ್ತ್ರೀಯ ಮಾರ್ಗವನ್ನು ಬೆನ್ನಟ್ಟಲು ಆರಂಭಿಸುತ್ತಿರುವುದಾದರೆ ಆಗೇನು? ನಾವು ದೇವರಿಗೆ ವಿರುದ್ಧವಾಗಿ ಪಾಪಮಾಡದಿರುವಂತೆ ಕ್ರೈಸ್ತ ಹಿರಿಯರು ನಮ್ಮನ್ನು ಪುನರಳವಡಿಸಲು ಪ್ರಯತ್ನಿಸುವಲ್ಲಿ, ನಾವು ಕೃತಜ್ಞರಾಗಿರಬೇಕೆಂಬುದು ನಿಶ್ಚಯ.—ಗಲಾತ್ಯ 6:1.
ದೇವರು—ಒಳ್ಳೆಯ ಸಂಗತಿಗಳ ಮೂಲನು
14. ದೇವರ ಕೊಡುಗೆಗಳು “ಕುಂದಿಲ್ಲದ”ವು ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ?
14 ಯೆಹೋವನು ಪರೀಕ್ಷೆಗಳಿಗಲ್ಲ, ಸತ್ಯ ಸಂಗತಿಗಳಿಗೆ ಮೂಲನೆಂಬುದನ್ನು ನಾವು ಜ್ಞಾಪಕದಲ್ಲಿಡಬೇಕು. (ಯಾಕೋಬ 1:16-18) ಯಾಕೋಬನು ಜೊತೆ ವಿಶ್ವಾಸಿಗಳನ್ನು “ಪ್ರಿಯ ಸಹೋದರರೇ” ಎಂದು ಸಂಬೋಧಿಸಿ, ದೇವರು ‘ಸಕಲ ಒಳ್ಳೇ ದಾನಗಳ ಮತ್ತು ಕುಂದಿಲ್ಲದ ಸಕಲ ವರಗಳ’ ದಾತನೆಂದು ತೋರಿಸುತ್ತಾನೆ. ಯೆಹೋವನ ಆತ್ಮಿಕ ಮತ್ತು ಪ್ರಾಪಂಚಿಕ ಕೊಡುಗೆಗಳು, “ಕುಂದಿಲ್ಲದ” ವರಗಳು ಅಥವಾ ಪೂರ್ಣವಾದವುಗಳು—ಯಾವ ನ್ಯೂನತೆಯೂ ಇಲ್ಲದವುಗಳಾಗಿವೆ. ಅವು “ಮೇಲಣಿಂದ” ಅಂದರೆ ಸ್ವರ್ಗದಲ್ಲಿರುವ ದೇವರ ನಿವಾಸಸ್ಥಾನದಿಂದ ಬರುತ್ತವೆ. (1 ಅರಸುಗಳು 8:39) ಯೆಹೋವನು “ಸಕಲವಿಧವಾದ ಬೆಳಕಿಗೂ”—ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು—“ಮೂಲಕಾರಣನು [“ತಂದೆ,” NW].” ಆತನು ನಮಗೆ ಆತ್ಮಿಕ ಬೆಳಕು ಮತ್ತು ಸತ್ಯವನ್ನೂ ಕೊಡುತ್ತಾನೆ. (ಕೀರ್ತನೆ 43:3; ಯೆರೆಮೀಯ 31:35; 2 ಕೊರಿಂಥ 4:6) ಸೂರ್ಯನು ಚಲಿಸುವಾಗ ನೆರಳುಗಳಲ್ಲಿ ಬದಲಾವಣೆಗಳನ್ನು ಮಾಡುವುದಕ್ಕೆ ಮತ್ತು ನಡು ಮಧ್ಯಾಹ್ನದಲ್ಲಿ ಮಾತ್ರ ಉಚ್ಚ ಬಿಂದುವಿನಲ್ಲಿರುವುದಕ್ಕೆ ಅಸದೃಶವಾಗಿ, ಒಳ್ಳೆಯದನ್ನು ಒದಗಿಸುವುದರಲ್ಲಿ ದೇವರು ಯಾವಾಗಲೂ ಉಚ್ಚಬಿಂದುವಿನಲ್ಲೇ ಇರುತ್ತಾನೆ. ತನ್ನ ವಾಕ್ಯ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನ ಮೂಲಕ ಒದಗಿಸಲ್ಪಡುವ ಆತನ ಆತ್ಮಿಕ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ನಾವು ಪಡೆದುಕೊಳ್ಳುವಲ್ಲಿ, ಪರೀಕ್ಷೆಗಳನ್ನು ಎದುರಿಸಲು ಆತನು ನಮ್ಮನ್ನು ಸಜ್ಜುಗೊಳಿಸುವುದು ನಿಶ್ಚಯ.—ಮತ್ತಾಯ 24:45.
15. ಯೆಹೋವನ ಅತ್ಯುತ್ತಮ ಕೊಡುಗೆಗಳಲ್ಲಿ ಒಂದು ಯಾವುದು?
15 ದೇವರ ಅತ್ಯುತ್ತಮ ವರಗಳಲ್ಲಿ ಒಂದು ಯಾವುದಾಗಿದೆ? ಸುವಾರ್ತೆ ಅಥವಾ “ಸತ್ಯವಾಕ್ಯ”ದೊಂದಿಗೆ ಸೇರಿ ಕೆಲಸಮಾಡುತ್ತ, ಪವಿತ್ರಾತ್ಮದ ಮೂಲಕ ಆತ್ಮಿಕ ಪುತ್ರರನ್ನು ಹುಟ್ಟಿಸುವುದೇ. ಆತ್ಮಿಕ ಜನನವನ್ನು ಅನುಭವಿಸುವವರು “ನಿರ್ದಿಷ್ಟ ಪ್ರಥಮ ಫಲಗಳು” (NW), ಮಾನವಕುಲದೊಳಗಿಂದ ಸ್ವರ್ಗೀಯ “ರಾಜ್ಯವೂ ಯಾಜಕರೂ” ಆಗಿರಲಿಕ್ಕಾಗಿ ಆಯ್ದುಕೊಂಡವರು ಆಗಿದ್ದಾರೆ. (ಪ್ರಕಟನೆ 5:10; ಎಫೆಸ 1:13, 14) ಯೇಸು ಪುನರುತ್ಥಾನಹೊಂದಿದ ತಾರೀಖಾದ ನೈಸಾನ್ 16ರಂದು ಅರ್ಪಿಸಿದ, ಜವೆಕಾಳಿನ ಸಿವುಡಿನ ಪ್ರಥಮ ಫಲಗಳ ಕುರಿತು ಮತ್ತು ಪವಿತ್ರಾತ್ಮವು ಸುರಿಸಲ್ಪಟ್ಟ ಪಂಚಾಶತ್ತಮ ದಿನದಲ್ಲಿ ಎರಡು ಗೋದಿ ರೊಟ್ಟಿಗಳ ಅರ್ಪಣೆಯ ಕುರಿತು ಯಾಕೋಬನು ಯೋಚಿಸುತ್ತಿದ್ದಿರಬಹುದು. (ಯಾಜಕಕಾಂಡ 23:4-11; 15-17) ಹಾಗಿರುವಲ್ಲಿ, ಯೇಸು ಪ್ರಥಮ ಫಲದ ಸಿವುಡೂ, ಅವನ ಜೊತೆಬಾಧ್ಯಸ್ಥರು ‘ನಿರ್ದಿಷ್ಟ ಪ್ರಥಮ ಫಲಗಳೂ’ ಆಗಿರುವರು. ಆದರೆ ನಮಗೆ ಭೂನಿರೀಕ್ಷೆಯಿರುವಲ್ಲಿ ಆಗೇನು? ನಮ್ಮ ಭೂನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ರಾಜ್ಯದಾಳಿಕೆಯಲ್ಲಿ ನಿತ್ಯಜೀವವನ್ನು ಸಾಧ್ಯಮಾಡಿರುವ “ಎಲ್ಲಾ ಒಳ್ಳೇ ದಾನಗಳ” ದಾತನಲ್ಲಿ ನಮ್ಮ ನಂಬಿಕೆಗೆ ಅಂಟಿಕೊಳ್ಳುವಂತೆ ನಮಗೆ ಸಹಾಯಮಾಡುವುದು.
‘ವಾಕ್ಯದ ಪ್ರಕಾರ ಮಾಡುವವನು’ ಆಗಿರು
16. ನಾವು ಏಕೆ ‘ಕೇಳುವುದರಲ್ಲಿ ತ್ಪರೆಪಡುವವರೂ, ಆದರೆ ಮಾತಾಡುವ ಮತ್ತು ಕೋಪದ ವಿಷಯದಲ್ಲಿ ನಿಧಾನಿಗಳೂ’ ಆಗಿರಬೇಕು?
16 ನಾವು ಈಗಲೇ ನಮ್ಮ ನಂಬಿಕೆಯ ಪರೀಕ್ಷೆಗಳನ್ನು ಅನುಭವಿಸುತ್ತಿರಲಿ, ಇಲ್ಲದಿರಲಿ, ನಾವು “ವಾಕ್ಯದ ಪ್ರಕಾರ ಮಾಡುವವರು” (NW) ಆಗಿರಬೇಕು. (ಯಾಕೋಬ 1:19-25) ನಾವು ದೇವರ ವಾಕ್ಯಕ್ಕೆ “ಕಿವಿಗೊಡುವದರಲ್ಲಿ ತೀವ್ರವಾಗಿಯೂ” ಇದ್ದು, ಅದರ ವಿಧೇಯ ಕ್ರಿಯಾಕಾರಿಗಳಾಗಿರಬೇಕು. (ಯೋಹಾನ 8:47) ಇನ್ನೊಂದು ಪಕ್ಕದಲ್ಲಿ, ನಾವು ನಮ್ಮ ಮಾತುಗಳನ್ನು ಜಾಗರೂಕತೆಯಿಂದ ತೂಗಿನೋಡುತ್ತ, “ಮಾತನಾಡುವದರಲ್ಲಿ ನಿಧಾನವಾಗಿ” ಇರೋಣ. (ಜ್ಞಾನೋಕ್ತಿ 15:28; 16:23) ನಮ್ಮ ಪರೀಕ್ಷೆಗಳ ಮೂಲನು ದೇವರೆಂದು ಹೇಳುವುದರಲ್ಲಿ ನಾವು ತ್ವರೆಪಡುವವರಾಗಿರಬಾರದೆಂದು ಯಾಕೋಬನು ನಮ್ಮನ್ನು ಪ್ರೋತ್ಸಾಹಿಸುತ್ತಿರಬಹುದು. “ಕೋಪಿಸುವದರಲ್ಲಿಯೂ ನಿಧಾನವಾಗಿರಲಿ; ಮನುಷ್ಯನ ಕೋಪವು ದೇವರಿಗೆ ಮೆಚ್ಚಿಕೆಯಾಗಿರುವ ನೀತಿಗೆ ಅನುಕೂಲವಾಗುವದಿಲ್ಲ” ಎಂದೂ ನಮಗೆ ಬುದ್ಧಿ ಹೇಳಲಾಗಿದೆ. ಯಾವನಾದರೂ ಹೇಳುವ ವಿಷಯಗಳಿಂದಾಗಿ ನಾವು ಕೋಪಗೊಳ್ಳುವುದಾದರೆ, ಪ್ರತೀಕಾರಕ ಉತ್ತರವನ್ನು ಕೊಡುವುದನ್ನು ತಪ್ಪಿಸಲು, ನಾವು ‘ದುಡುಕದಿರೋಣ.’ (ಎಫೆಸ 4:26, 27) ನಮಗೆ ಸಮಸ್ಯೆಗಳನ್ನು ಉಂಟುಮಾಡಬಹುದಾದ ಮತ್ತು ಇತರರಿಗೆ ಪರೀಕ್ಷೆಯಾಗಬಹುದಾದ ಕೋಪದ ಮನೋಭಾವವು, ನಮ್ಮ ನೀತಿವಂತ ದೇವರಲ್ಲಿ ನಂಬಿಕೆಯು ನಮ್ಮಿಂದ ಅಪೇಕ್ಷಿಸುವುದನ್ನು ಉತ್ಪಾದಿಸಸಾಧ್ಯವಿಲ್ಲ. ಅಲ್ಲದೆ, ನಾವು “ಬುದ್ಧಿವಂತ”ರಾಗಿರುವುದಾದರೆ, “ದೀರ್ಘಶಾಂತ”ರಾಗಿರುವೆವು ಮತ್ತು ನಮ್ಮ ಸಹೋದರ ಸಹೋದರಿಯರು ನಮ್ಮ ಕಡೆಗೆ ಆಕರ್ಷಿತರಾಗುವರು.—ಜ್ಞಾನೋಕ್ತಿ 14:29.
17. ಹೃದಯ ಮತ್ತು ಮನಸ್ಸಿನಿಂದ ಕೆಟ್ಟದ್ದನ್ನು ತೆಗೆದುಬಿಡುವುದರಿಂದ ಏನು ಸಾಧಿಸಲ್ಪಡುತ್ತದೆ?
17 “ಎಲ್ಲಾ ನೀಚತನ”ದಿಂದ—ದೇವರಿಗೆ ಅಸಹ್ಯವನ್ನುಂಟುಮಾಡುವ ಮತ್ತು ಕ್ರೋಧವನ್ನು ವರ್ಧಿಸುವ ಎಲ್ಲದರಿಂದ—ನಾವು ಮುಕ್ತರಾಗಿರಬೇಕಾಗಿರುವುದು ನಿಶ್ಚಯ. ಅಲ್ಲದೆ, ನಾವು ‘ಆ ಅತ್ಯಾಧಿಕ್ಯವಾಗಿರುವ ವಿಷಯವನ್ನು, ದುಷ್ಟತನವನ್ನು ತೆಗೆದುಹಾಕಬೇಕು.’ ನಾವೆಲ್ಲರೂ ನಮ್ಮ ಜೀವನದಿಂದ ಯಾವುದೇ ಮಾಂಸಿಕ ಅಥವಾ ಆತ್ಮದ ಅಶುದ್ಧತೆಯನ್ನು ನೀಗಿಸಬೇಕು. (2 ಕೊರಿಂಥ 7:1; 1 ಪೇತ್ರ 1:14-16; 1 ಯೋಹಾನ 1:9) ಹೃದಯ ಮತ್ತು ಮನಸ್ಸಿನಿಂದ ಕೆಟ್ಟತನದ ತೆಗೆದುಹಾಕುವಿಕೆಯು, “ವಾಕ್ಯದ ಬೇರೂರುವಿಕೆಯನ್ನು ಸೌಮ್ಯಭಾವದಿಂದ ಅಂಗೀಕರಿಸುವಂತೆ” (NW) ನಮಗೆ ಸಹಾಯಮಾಡಿತು. (ಅ. ಕೃತ್ಯಗಳು 17:11, 12) ನಾವು ಕ್ರೈಸ್ತರಾಗಿ ಎಷ್ಟೇ ದೀರ್ಘಕಾಲವಾಗಿರಲಿ, ಹೆಚ್ಚು ಶಾಸ್ತ್ರೀಯ ಸತ್ಯವು ನಮ್ಮಲ್ಲಿ ಬೇರೂರುವಂತೆ ನಾವು ಬಿಡುತ್ತಿರಬೇಕು. ಏಕೆ? ಏಕೆಂದರೆ ದೇವರ ಆತ್ಮದ ಮೂಲಕ, ಬೇರೂರಿದ ವಾಕ್ಯವು ರಕ್ಷಣೆಯನ್ನು ಸಾಧಿಸುವ “ನೂತನ ಸ್ವಭಾವವನ್ನು” ಉಂಟುಮಾಡುತ್ತದೆ.—ಎಫೆಸ 4:20-24.
18. ವಾಕ್ಯದ ಕೇಳುಗನು ಮಾತ್ರ ಆಗಿರುವ ಒಬ್ಬನು, ವಾಕ್ಯದ ಪ್ರಕಾರ ಮಾಡುವವನೂ ಆಗಿರುವ ಒಬ್ಬನಿಗಿಂತ ಭಿನ್ನನು ಹೇಗೆ?
18 ಆ ವಾಕ್ಯವು ನಮ್ಮ ಮಾರ್ಗದರ್ಶಿಯೆಂದು ನಾವು ಹೇಗೆ ತೋರಿಸುತ್ತೇವೆ? “ಅದನ್ನು ಕೇಳುವವರು ಮಾತ್ರವೇ” ಆಗಿರದೆ, “ವಾಕ್ಯದ ಪ್ರಕಾರ ಮಾಡುವ” ವಿಧೇಯ ಜನರಾಗಿರುವ ಮೂಲಕವೇ. (ಲೂಕ 11:28) “ಮಾಡುವವರಿಗೆ” ಕ್ರೈಸ್ತ ಶುಶ್ರೂಷೆಯಲ್ಲಿ ಹುರುಪಿನ ಚಟುವಟಿಕೆ ಮತ್ತು ದೇವಜನರ ಕೂಟಗಳಲ್ಲಿ ಕ್ರಮದ ಭಾಗವಹಿಸುವಿಕೆಯಂತಹ ಕೆಲಸಗಳನ್ನು ಉಂಟುಮಾಡುವ ನಂಬಿಕೆಯಿದೆ. (ರೋಮಾಪುರ 10:14, 15; ಇಬ್ರಿಯ 10:24, 25) ವಾಕ್ಯದ ಬರಿಯ ಕೇಳುಗನು, “ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು.” ಅವನು ಅದನ್ನು ಒಮ್ಮೆ ನೋಡಿ, ಹೊರಟುಹೋಗಿ, ತನ್ನ ತೋರಿಕೆಯನ್ನು ಸರಿಪಡಿಸಿಕೊಳ್ಳಲು ಯಾವುದು ಅಗತ್ಯವಿದ್ದೀತೊ ಅದನ್ನು ಮರೆತುಬಿಡುತ್ತಾನೆ. “ವಾಕ್ಯದ ಪ್ರಕಾರ ಮಾಡುವ”ವರಂತೆ, ನಾವು ದೇವರು ನಮ್ಮಿಂದ ಅಪೇಕ್ಷಿಸುವ ಸಕಲವನ್ನೂ ಆವರಿಸುವ “ಸರ್ವೋತ್ತಮ ಧರ್ಮಪ್ರಮಾಣವನ್ನು” ಜಾಗರೂಕತೆಯಿಂದ ಅಭ್ಯಸಿಸಿ, ಅದಕ್ಕೆ ವಿಧೇಯರಾಗುತ್ತೇವೆ. ಹೀಗೆ ನಾವು ಅನುಭವಿಸುವ ಸ್ವಾತಂತ್ರ್ಯವು, ಪಾಪ ಮತ್ತು ಮರಣದ ದಾಸ್ಯಕ್ಕೆ ತೀರ ವಿರುದ್ಧವಾಗಿದೆ, ಏಕೆಂದರೆ ಇದು ಜೀವಕ್ಕೆ ನಡೆಸುತ್ತದೆ. ಆದಕಾರಣ, ನಾವು ‘ಸರ್ವೋತ್ತಮ ಧರ್ಮಪ್ರಮಾಣಕ್ಕೆ ಲಕ್ಷ್ಯಕೊಟ್ಟು,’ ಸತತವಾಗಿ ಅದನ್ನು ಪರಿಶೋಧಿಸುತ್ತ, ವಿಧೇಯರಾಗುತ್ತ ಇರೋಣ. ಯೋಚಿಸಿ! ‘ಮರೆತು ಬಿಡುವಂತಹ ಕೇಳುಗರಲ್ಲ, ಕೆಲಸವನ್ನು ಮಾಡುವವರಾಗಿ’ ಇರುವುದರಿಂದ, ದೇವರ ಪ್ರಸನ್ನತೆಯಿಂದ ಪರಿಣಮಿಸುವ ಹರ್ಷ ನಮಗಿದೆ.—ಕೀರ್ತನೆ 19:7-11.
ಬಾಹ್ಯಾಚಾರದ ಭಕ್ತರಿಗಿಂತ ಎಷ್ಟೋ ಹೆಚ್ಚು
19, 20. (ಎ) ಯಾಕೋಬ 1:26, 27ಕ್ಕನುಸಾರ, ಶುದ್ಧಾರಾಧನೆಯು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆ? (ಬಿ) ನಿರ್ಮಲವಾದ ಆರಾಧನೆಯ ಕೆಲವು ಉದಾಹರಣೆಗಳಾವುವು?
19 ನಾವು ದೈವಿಕ ಅನುಗ್ರಹವನ್ನು ಅನುಭವಿಸಬೇಕಾದರೆ, ಸತ್ಯಾರಾಧನೆಯು ಬರಿಯ ಬಾಹ್ಯೋಪಚಾರವಲ್ಲವೆಂಬುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳುವುದು ಅಗತ್ಯ. (ಯಾಕೋಬ 1:26, 27) ನಾವು ಯೆಹೋವನ ಅಂಗೀಕಾರಯೋಗ್ಯರಾದ ‘ಔಪಚಾರಿಕ ಭಕ್ತ’ರೆಂದು (NW) ನಾವು ನೆನಸಬಹುದು, ಆದರೆ ನಿಜವಾಗಿಯೂ ಲೆಕ್ಕಕ್ಕೆ ಬರುವುದು, ನಮ್ಮಲ್ಲಿ ಪ್ರತಿಯೊಬ್ಬನ ಕುರಿತ ಆತನ ಎಣಿಕೆಯೇ. (1 ಕೊರಿಂಥ 4:4) ಒಂದು ಗಂಭೀರವಾದ ದೋಷವು, ‘ನಾಲಗೆಗೆ ಕಡಿವಾಣ’ ಹಾಕಲು ತಪ್ಪುವುದಾಗಿರಬಹುದು. ನಾವು ಇತರರ ವಿಷಯದಲ್ಲಿ ಚಾಡಿಹೇಳಿ, ಸುಳ್ಳುಹೇಳಿ, ಅಥವಾ ಇತರ ರೀತಿಗಳಲ್ಲಿ ನಾಲಗೆಯನ್ನು ದುರುಪಯೋಗಿಸಿದರೂ ದೇವರು ನಮ್ಮ ಆರಾಧನೆಯನ್ನು ಮೆಚ್ಚುತ್ತಾನೆಂದು ನೆನಸುವುದಾದರೆ, ನಾವು ನಮ್ಮನ್ನು ವಂಚಿಸಿಕೊಳ್ಳುತ್ತಿರುವೆವು. (ಯಾಜಕಕಾಂಡ 19:16; ಎಫೆಸ 4:25) ನಮ್ಮ “ಭಕ್ತಿ” ಯಾವುದೇ ಕಾರಣಕ್ಕಾದರೂ ‘ನಿಷ್ಪ್ರಯೋಜಕ’ ಮತ್ತು ದೇವರಿಗೆ ಅಸ್ವೀಕರಣೀಯವಾಗಿರಲು ನಾವು ಬಯಸುವುದಿಲ್ಲವೆಂಬುದು ನಿಶ್ಚಯ.
20 ಶುದ್ಧಾರಾಧನೆಯ ಪ್ರತಿಯೊಂದು ಅಂಶವನ್ನು ಯಾಕೋಬನು ಉದ್ಧರಿಸುವುದಿಲ್ಲವಾದರೂ, ‘ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ [“ಅನಾಥರನ್ನು,” NW] ವಿಧವೆಯರನ್ನೂ ಪರಾಮರಿಸುವುದು’ ಇದರಲ್ಲಿ ಸೇರಿರುತ್ತದೆಂದು ಅವನು ಹೇಳುತ್ತಾನೆ. (ಗಲಾತ್ಯ 2:10; 6:10; 1 ಯೋಹಾನ 3:18) ವಿಧವೆಯರಿಗೆ ಒದಗಿಸುವುದರಲ್ಲಿ ಕ್ರೈಸ್ತ ಸಭೆಯು ವಿಶೇಷವಾದ ಆಸಕ್ತಿಯನ್ನು ತೋರಿಸುತ್ತದೆ. (ಅ. ಕೃತ್ಯಗಳು 6:1-6; 1 ತಿಮೊಥೆಯ 5:8-10) ವಿಧವೆಯರ ಮತ್ತು ಅನಾಥರ ಸಂರಕ್ಷಕನು ದೇವರಾಗಿರುವುದರಿಂದ, ಅವರಿಗೆ ಆತ್ಮಿಕವಾಗಿ ಮತ್ತು ಪ್ರಾಪಂಚಿಕವಾಗಿ ಸಹಾಯಮಾಡಲು ನಮಗೆ ಸಾಧ್ಯವಿರುವುದನ್ನು ಮಾಡುವ ಮೂಲಕ, ನಾವು ಆತನೊಂದಿಗೆ ಸಹಕರಿಸೋಣ. (ಧರ್ಮೋಪದೇಶಕಾಂಡ 10:17, 18) ಶುದ್ಧಾರಾಧನೆಯೆಂದರೆ, “ಪ್ರಪಂಚದ” ಅಂದರೆ ಸೈತಾನನ ಅಧಿಕಾರದಲ್ಲಿರುವ ಅನೀತಿಭರಿತ ಮಾನವ ಸಮಾಜದ “ದೋಷವು ಹತ್ತದಂತೆ ನೋಡಿಕೊಂಡಿರು”ವುದೂ ಆಗಿದೆ. (ಯೋಹಾನ 17:16; 1 ಯೋಹಾನ 5:19) ಆದುದರಿಂದ, ಯೆಹೋವನನ್ನು ಮಹಿಮೆಪಡಿಸುವಂತೆ ಮತ್ತು ಆತನ ಸೇವೆಯಲ್ಲಿ ಉಪಯುಕ್ತರಾಗಿರುವಂತೆ, ನಾವು ಲೋಕದ ದೈವಹೀನ ನಡತೆಗಳಿಂದ ಸ್ವತಂತ್ರರಾಗಿರೋಣ.—2 ತಿಮೊಥೆಯ 2:20-22.
21. ಯಾಕೋಬನ ಪತ್ರದ ಸಂಬಂಧದಲ್ಲಿ, ಯಾವ ಹೆಚ್ಚಿನ ಪ್ರಶ್ನೆಗಳು ನಮ್ಮ ಪರಿಗಣನೆಗೆ ಅರ್ಹವಾಗಿವೆ?
21 ನಾವು ಈ ವರೆಗೆ ಪರಿಗಣಿಸಿರುವ ಯಾಕೋಬನ ಸಲಹೆಯು, ಪರೀಕ್ಷೆಗಳನ್ನು ತಾಳಿಕೊಂಡು ನಮ್ಮ ನಂಬಿಕೆಗೆ ಅಂಟಿಕೊಳ್ಳುವಂತೆ ನಮಗೆ ಸಹಾಯಮಾಡಬೇಕು. ಸುವರಗಳ ಪ್ರೀತಿಯ ದಾತನಿಗೆ ಅದು ನಮ್ಮ ಕೃತಜ್ಞತೆಯನ್ನು ವರ್ಧಿಸಬೇಕು. ಮತ್ತು ಯಾಕೋಬನ ಮಾತುಗಳು ನಾವು ಸತ್ಯಾರಾಧನೆಯನ್ನು ಆಚರಿಸುವಂತೆ ಸಹಾಯಮಾಡುತ್ತವೆ. ಇನ್ನಾವುದನ್ನು ಅವನು ನಮ್ಮ ಗಮನಕ್ಕೆ ತರುತ್ತಾನೆ? ನಮಗೆ ಯೆಹೋವನಲ್ಲಿ ನಿಜ ನಂಬಿಕೆಯಿದೆಯೆಂಬುದನ್ನು ರುಜುಪಡಿಸಲು ಇನ್ನಾವ ಹೆಜ್ಜೆಗಳನ್ನು ನಾವು ತೆಗೆದುಕೊಳ್ಳಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
a ಈ ಲೇಖನ ಮತ್ತು ಇದನ್ನನುಸರಿಸಿ ಬರುವ ಇನ್ನೆರಡು ಲೇಖನಗಳನ್ನು ವ್ಯಕ್ತಿಪರವಾಗಿ ಅಥವಾ ಕುಟುಂಬವಾಗಿ ಅಭ್ಯಾಸಮಾಡುವಾಗ, ಯಾಕೋಬನ ನಂಬಿಕೆವರ್ಧಕ ಪತ್ರದ ಪ್ರತಿಯೊಂದು ಉದ್ಧರಿತ ಭಾಗವನ್ನು ಓದುವುದನ್ನು ವಿಶೇಷವಾಗಿ ಪ್ರಯೋಜನಕರವಾದದ್ದಾಗಿ ನೀವು ಕಂಡುಕೊಳ್ಳುವಿರಿ.
ನೀವು ಹೇಗೆ ಉತ್ತರಿಸುವಿರಿ?
◻ ಪರೀಕ್ಷೆಗಳನ್ನು ತಾಳಿಕೊಳ್ಳಲು ಯಾವುದು ನಮಗೆ ಸಹಾಯಮಾಡುವುದು?
◻ ಪರೀಕ್ಷೆಗಳ ಹೊರತೂ ಕ್ರೈಸ್ತರು ಏಕೆ ಉಲ್ಲಾಸಪಡಬಲ್ಲರು?
◻ ನಾವು ಹೇಗೆ ವಾಕ್ಯದ ಪ್ರಕಾರ ಮಾಡುವವರಾಗಿರಬಲ್ಲೆವು?
◻ ಶುದ್ಧಾರಾಧನೆಯಲ್ಲಿ ಏನು ಒಳಗೊಂಡಿದೆ?
[ಪುಟ 9 ರಲ್ಲಿರುವ ಚಿತ್ರ]
ಪರೀಕ್ಷೆಯ ಕೆಳಗಿರುವಾಗ, ಪ್ರಾರ್ಥನೆಗಳಿಗೆ ಉತ್ತರಕೊಡಲು ಯೆಹೋವನಿಗಿರುವ ಶಕ್ತಿಯಲ್ಲಿ ನಂಬಿಕೆಯಿಡಿರಿ
[ಪುಟ 10 ರಲ್ಲಿರುವ ಚಿತ್ರ]
“ವಾಕ್ಯದ ಪ್ರಕಾರ ಮಾಡುವವರು” ಲೋಕವ್ಯಾಪಕವಾಗಿ ದೇವರ ರಾಜ್ಯವನ್ನು ಘೋಷಿಸುತ್ತಿದ್ದಾರೆ