ನಂಬಿಕೆಯು ನಮ್ಮನ್ನು ಕ್ರಿಯೆಗೆ ಪ್ರಚೋದಿಸುತ್ತದೆ!
“ಅವನ [ಅಬ್ರಹಾಮನ] ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬದು ಕಾಣಬರುತ್ತದಲ್ಲಾ.”—ಯಾಕೋಬ 2:22.
1, 2. ನಮಗೆ ನಂಬಿಕೆಯಿರುವಲ್ಲಿ ನಾವು ಹೇಗೆ ವರ್ತಿಸುವೆವು?
ಅನೇಕರು ತಮಗೆ ದೇವರಲ್ಲಿ ನಂಬಿಕೆಯಿದೆಯೆಂದು ಹೇಳುತ್ತಾರೆ. ಆದರೂ, ಬರಿಯ ಹೊರತೋರಿಕೆಯ ನಂಬಿಕೆಯು, ಒಂದು ಶವದಂತೆ ಜೀವರಹಿತವಾಗಿದೆ. “ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು” ಎಂಬುದಾಗಿ ಶಿಷ್ಯನಾದ ಯಾಕೋಬನು ಬರೆದನು. ದೇವಭಯವುಳ್ಳ ಅಬ್ರಹಾಮನಿಗೆ, “ಕ್ರಿಯೆಗಳೊಂದಿಗೆ ಪ್ರವರ್ತಿಸಿ”ದ ನಂಬಿಕೆಯಿತ್ತೆಂದೂ ಅವನು ಹೇಳಿದನು. (ಯಾಕೋಬ 2:17, 22) ಇಂತಹ ಮಾತುಗಳು ನಮಗೆ ಯಾವ ಅರ್ಥದಲ್ಲಿವೆ?
2 ನಮಗೆ ನಿಜವಾದ ನಂಬಿಕೆಯಿರುವಲ್ಲಿ, ಕ್ರೈಸ್ತ ಕೂಟಗಳಲ್ಲಿ ಕೇಳಿಸಿಕೊಳ್ಳುವುದಷ್ಟನ್ನೇ ನಾವು ನಂಬಲಾರೆವು. ನಾವು ಯೆಹೋವನ ಸಕ್ರಿಯ ಸಾಕ್ಷಿಗಳಾಗಿರುವುದರಿಂದ, ನಂಬಿಕೆಯ ಪುರಾವೆಯನ್ನು ಕೊಡುವೆವು. ಹೌದು, ನಂಬಿಕೆಯು, ಜೀವಿತದಲ್ಲಿ ದೇವರ ವಾಕ್ಯವನ್ನು ಅನ್ವಯಿಸಿಕೊಳ್ಳುವಂತೆ ನಮ್ಮನ್ನು ಪ್ರೇರಿಸುವುದು ಮತ್ತು ನಮ್ಮನ್ನು ಕ್ರಿಯೆಗೆ ಪ್ರಚೋದಿಸುವುದು.
ಪಕ್ಷಪಾತವು ನಂಬಿಕೆಗೆ ಅಸಂಗತವಾಗಿದೆ
3, 4. ನಾವು ಇತರರೊಂದಿಗೆ ವರ್ತಿಸುವ ರೀತಿಯನ್ನು ನಂಬಿಕೆಯು ಹೇಗೆ ಪ್ರಭಾವಿಸಬೇಕು?
3 ನಮಗೆ ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ಯಥಾರ್ಥವಾದ ನಂಬಿಕೆಯಿರುವುದಾದರೆ, ನಾವು ಪಕ್ಷಪಾತವನ್ನು ತೋರಿಸೆವು. (ಯಾಕೋಬ 2:1-4) ಯಾಕೋಬನು ಯಾರಿಗೆ ಪತ್ರ ಬರೆದನೊ ಅವರಲ್ಲಿ ಕೆಲವರು, ಸತ್ಯ ಕ್ರೈಸ್ತರಿಂದ ಕೇಳಿಕೊಳ್ಳಲ್ಪಡುವ ನಿಷ್ಪಕ್ಷಪಾತವನ್ನು ಪ್ರದರ್ಶಿಸುತ್ತಿರಲಿಲ್ಲ. (ರೋಮಾಪುರ 2:11) ಆದಕಾರಣ, ಯಾಕೋಬನು ಕೇಳುವುದು: “ಪ್ರಭಾವವುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿ”ದ್ದೀರೊ? ಒಬ್ಬ ಶ್ರೀಮಂತ ಅವಿಶ್ವಾಸಿಯು ಚಿನ್ನದ ಉಂಗುರಗಳನ್ನೂ ಶೋಭಾಯಮಾನವಾದ ವಸ್ತ್ರಗಳನ್ನೂ, “ಒಬ್ಬ ಬಡಮನುಷ್ಯನು ಹೀನವಾದ ಬಟ್ಟೆ”ಯನ್ನೂ ಹಾಕಿಕೊಂಡು ಕೂಟವೊಂದಕ್ಕೆ ಬರುವುದಾದರೆ, ಇಬ್ಬರನ್ನೂ ಮರ್ಯಾದೆಯಿಂದ ಸ್ವಾಗತಿಸಬೇಕಾಗಿತ್ತಾದರೂ, ಶ್ರೀಮಂತರಿಗೇ ವಿಶೇಷವಾದ ಗಮನವನ್ನು ಕೊಡಲಾಗುತ್ತಿತ್ತು. ಅವರಿಗೆ “ಸುಖಾಸನ”ಗಳು ಕೊಡಲ್ಪಟ್ಟಾಗ, ಬಡ ಅವಿಶ್ವಾಸಿಗಳಾದರೋ ನಿಂತುಕೊಳ್ಳುವಂತೆ ಇಲ್ಲವೆ ಬೇರೆಯವರ ಕಾಲಿನ ಹತ್ತಿರ, ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಲ್ಪಟ್ಟರು.
4 ಯೆಹೋವನು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವನ್ನು, ಧನಿಕರಿಗೂ ಬಡವರಿಗೂ ಸಮಾನವಾಗಿ ಒದಗಿಸಿದನು. (2 ಕೊರಿಂಥ 5:14) ಆದುದರಿಂದ, ನಾವು ಧನಿಕರಿಗೆ ದಾಕ್ಷಿಣ್ಯ ತೋರಿಸುವಲ್ಲಿ, ‘ತಾನು ಬಡತನದಲ್ಲಿ ಸೇರುವದರಿಂದ ನಾವು ಐಶ್ವರ್ಯವಂತರಾಗಬೇಕೆಂದು ನಮಗೋಸ್ಕರ ಬಡವನಾದ’ ಕ್ರಿಸ್ತನ ನಂಬಿಕೆಯಿಂದ ದೂರ ಸರಿಯುತ್ತಿರುವೆವು. (2 ಕೊರಿಂಥ 8:9) ಮನುಷ್ಯರನ್ನು ಘನಪಡಿಸುವ ತಪ್ಪಾದ ಹೇತುವಿನಿಂದ, ನಾವೆಂದಿಗೂ ಅಂತಹ ವಿಧದಲ್ಲಿ ಜನರ ಯೋಗ್ಯತೆಯನ್ನು ನಿರ್ಧರಿಸದಿರೋಣ. ದೇವರು ಪಕ್ಷಪಾತಿಯಲ್ಲ, ಆದರೆ ನಾವು ಪಕ್ಷಪಾತವನ್ನು ತೋರಿಸಿದ್ದಲ್ಲಿ, “ದುಷ್ಟ ನಿರ್ಣಯಗಳನ್ನು ಮಾಡು”ತ್ತಿರುವೆವು. (ಯೋಬ 34:19, NW) ದೇವರನ್ನು ಮೆಚ್ಚಿಸುವ ಬಯಕೆಯೊಂದಿಗೆ, ನಿಶ್ಚಯವಾಗಿಯೂ ನಾವು ಪಕ್ಷಪಾತವನ್ನು ತೋರಿಸುವ, ಇಲ್ಲವೆ ‘ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವ’ ಶೋಧನೆಗೆ ಒಳಗಾಗಲಾರೆವು.—ಯೂದ 4, 16.
5. ‘ನಂಬಿಕೆಯಲ್ಲಿ ಐಶ್ವರ್ಯವಂತ’ರಾಗಿರುವಂತೆ ದೇವರು ಯಾರನ್ನು ಆರಿಸಿಕೊಂಡಿದ್ದಾನೆ, ಮತ್ತು ಪ್ರಾಪಂಚಿಕರಾಗಿ ಧನಿಕರಾಗಿರುವವರು ಅನೇಕ ವೇಳೆ ಹೇಗೆ ವರ್ತಿಸುತ್ತಾರೆ?
5 ನಿಜವಾದ ಧನಿಕರನ್ನು ಯಾಕೋಬನು ಗುರುತಿಸುತ್ತಾನೆ ಮತ್ತು ನಿಷ್ಪಕ್ಷಪಾತವಾಗಿ ಸಕಲರಿಗೂ ಪ್ರೀತಿಯು ತೋರಿಸಲ್ಪಡಬೇಕೆಂದು ಪ್ರೇರೇಪಿಸುತ್ತಾನೆ. (ಯಾಕೋಬ 2:5-9) ‘ದೇವರು ಬಡವರನ್ನು, ಅವರು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ರಾಜ್ಯಕ್ಕೆ ಬಾಧ್ಯರಾಗಿಯೂ ಇರುವಂತೆ ಆದುಕೊಂಡಿದ್ದಾನೆ.’ ಇದು ಹೀಗೇಕೆಂದರೆ, ಬಡವರು ಅನೇಕ ವೇಳೆ ಸುವಾರ್ತೆಗೆ ಹೆಚ್ಚಾಗಿ ಸ್ಪಂದಿಸುವವರಾಗಿರುತ್ತಾರೆ. (1 ಕೊರಿಂಥ 1:26-29) ಒಂದು ವರ್ಗದೋಪಾದಿ, ಭೌತಿಕವಾಗಿ ಧನಿಕರಾಗಿರುವವರು, ಸಾಲಗಳು, ಕೂಲಿಗಳು, ಮತ್ತು ಶಾಸನಬದ್ಧ ಕ್ರಿಯೆಗಳ ಸಂಬಂಧದಲ್ಲಿ ಇತರರನ್ನು ಪೀಡಿಸುತ್ತಾರೆ. ಅವರು ಕ್ರಿಸ್ತನ ಕುರಿತು ಅನಿಷ್ಟವಾಗಿ ಮಾತಾಡುತ್ತಾರೆ ಮತ್ತು ನಾವು ಅವನ ಹೆಸರನ್ನು ಧರಿಸಿಕೊಂಡಿರುವ ಕಾರಣ ನಮ್ಮನ್ನು ಹಿಂಸಿಸುತ್ತಾರೆ. ಆದರೆ, ನೆರೆಯವರ ಪ್ರೀತಿ, ಅಂದರೆ, ಧನಿಕರು ಹಾಗೂ ಬಡವರನ್ನು ಸಮಾನವಾಗಿ ಪ್ರೀತಿಸುವುದನ್ನು ಕೇಳಿಕೊಳ್ಳುವ “ರಾಜಾಜ್ಞೆ”ಗೆ ವಿಧೇಯರಾಗುವುದು ನಮ್ಮ ದೃಢಸಂಕಲ್ಪವಾಗಿರಲಿ. (ಯಾಜಕಕಾಂಡ 19:18; ಮತ್ತಾಯ 22:37-40) ದೇವರು ಇದನ್ನು ಅಪೇಕ್ಷಿಸುವುದರಿಂದ, ಪಕ್ಷಪಾತವನ್ನು ತೋರಿಸುವುದು “ಪಾಪಮಾಡು”ವುದಾಗಿದೆ.
‘ಕರುಣೆಯು ನ್ಯಾಯತೀರ್ಪಿನ ವಿಷಯವಾಗಿ ಹಿಗ್ಗುತ್ತದೆ’
6. ನಾವು ಇತರರೊಂದಿಗೆ ಕರುಣೆಯಿಂದ ವ್ಯವಹರಿಸದಿದ್ದರೆ, ನಾವು ಹೇಗೆ ನಿಯಮೋಲ್ಲಂಘನೆ ಮಾಡುವವರಾಗಿರುವೆವು?
6 ನಾವು ದಯಾಹೀನವಾಗಿ ಪಕ್ಷಪಾತವನ್ನು ತೋರಿಸುವಲ್ಲಿ, ನಿಯಮೋಲ್ಲಂಘಿಸುವವರಾಗಿರುತ್ತೇವೆ. (ಯಾಕೋಬ 2:10-13) ಈ ಸಂಬಂಧದಲ್ಲಿ ಒಂದು ತಪ್ಪಾದ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ನಾವು ದೇವರ ಎಲ್ಲ ನಿಯಮಗಳ ವಿರುದ್ಧ ಅಪರಾಧಿಗಳಾಗಿ ಪರಿಣಮಿಸುತ್ತೇವೆ. ವ್ಯಭಿಚಾರಮಾಡದಿದ್ದರೂ ಕಳ್ಳತನ ಮಾಡಿದ ಇಸ್ರಾಯೇಲ್ಯರು, ಮೋಶೆಯ ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರಾದರು. ಕ್ರೈಸ್ತರೋಪಾದಿ, ನಾವು ‘ಬಿಡುಗಡೆಯಾದವರಿಗೆ ಇರುವ ಧರ್ಮಪ್ರಮಾಣ’ದಿಂದ—ಆತ್ಮಿಕ ಇಸ್ರಾಯೇಲ್ಯರು ಹೊಸ ಒಡಂಬಡಿಕೆಯಿಂದ, ಅದರ ನಿಯಮವನ್ನು ಅವರ ಹೃದಯಗಳಲ್ಲಿಟ್ಟುಕೊಳ್ಳುವುದರ ಮೂಲಕ—ನ್ಯಾಯವಿಚಾರಿಸಲ್ಪಡುತ್ತೇವೆ.—ಯೆರೆಮೀಯ 31:31-33.
7. ಪಕ್ಷಪಾತವನ್ನು ತೋರಿಸುತ್ತ ಇರುವವರು ದೇವರಿಂದ ಕರುಣೆಯನ್ನು ಏಕೆ ಅಪೇಕ್ಷಿಸಲಾರರು?
7 ನಮ್ಮಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡ ಮೇಲೆ ಪಕ್ಷಪಾತವನ್ನು ತೋರಿಸುವುದರಲ್ಲಿ ಪಟ್ಟುಹಿಡಿಯುವುದಾದರೆ, ನಾವು ಅಪಾಯದಲ್ಲಿದ್ದೇವೆ. ಪ್ರೀತಿ ಕರುಣೆಗಳಿಲ್ಲದವರಿಗೆ ಕರುಣೆಯಿಲ್ಲದೆ ತೀರ್ಪಾಗುವುದು. (ಮತ್ತಾಯ 7:1, 2) “ಕರುಣೆಯು ನ್ಯಾಯತೀರ್ಪನ್ನು ಗೆದ್ದು ಹಿಗ್ಗುತ್ತದೆ” ಎಂದು ಯಾಕೋಬನು ಹೇಳುತ್ತಾನೆ. ನಾವು ನಮ್ಮ ಸಕಲ ವ್ಯವಹಾರಗಳಲ್ಲಿ ಕರುಣೆ ತೋರಿಸುವ ಮೂಲಕ ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನವನ್ನು ಅಂಗೀಕರಿಸುವಲ್ಲಿ, ನ್ಯಾಯವಿಚಾರಿಸಲ್ಪಡುವಾಗ ನಾವು ಖಂಡಿಸಲ್ಪಡೆವು. ಬದಲಿಗೆ, ನಾವು ಕರುಣೆಯನ್ನು ಪಡೆದು, ಹೀಗೆ ಕಟ್ಟುನಿಟ್ಟಾದ ನ್ಯಾಯ ಅಥವಾ ಪ್ರತಿಕೂಲ ನ್ಯಾಯತೀರ್ಪಿನ ಮೇಲೆ ವಿಜಯಿಗಳಾಗುವೆವು.
ನಂಬಿಕೆಯು ಸತ್ಕಾರ್ಯಗಳನ್ನು ಉತ್ಪಾದಿಸುತ್ತದೆ
8. ನಂಬಿಕೆಯಿದೆಯೆಂದು ಹೇಳುವುದಾದರೂ, ಕ್ರಿಯೆಗಳ ಕೊರತೆಯಿರುವ ವ್ಯಕ್ತಿಯ ಪರಿಸ್ಥಿತಿಯೇನು?
8 ನಮ್ಮನ್ನು ಪ್ರೀತಿ ಮತ್ತು ಕರುಣೆಯುಳ್ಳವರಾಗಿ ಮಾಡುವುದಲ್ಲದೆ, ನಂಬಿಕೆಯು ಬೇರೆ ಸತ್ಕಾರ್ಯಗಳನ್ನೂ ಉತ್ಪಾದಿಸುತ್ತದೆ. (ಯಾಕೋಬ 2:14-26) ಹೌದು, ಕ್ರಿಯೆಗಳಿಲ್ಲದ ಹೊರತೋರಿಕೆಯ ನಂಬಿಕೆಯು ನಮ್ಮನ್ನು ರಕ್ಷಿಸಲಾರದು. ನಾವು ಧರ್ಮಶಾಸ್ತ್ರದ ಕ್ರಿಯೆಗಳ ಮೂಲಕ ದೇವರ ಮುಂದೆ ನೀತಿಯ ನಿಲುವನ್ನು ಸಂಪಾದಿಸಲಾರೆವೆಂಬುದು ನಿಜ. (ರೋಮಾಪುರ 4:2-5) ಯಾಕೋಬನು ಮಾತಾಡುತ್ತಿರುವುದು, ನಿಯಮಾವಳಿಯಿಂದ ಪ್ರಚೋದಿತವಾದ ಕ್ರಿಯೆಗಳ ವಿಷಯವಲ್ಲ, ಬದಲಾಗಿ ನಂಬಿಕೆ ಮತ್ತು ಪ್ರೀತಿಯಿಂದ ಪ್ರಚೋದಿತವಾದ ಕ್ರಿಯೆಗಳ ವಿಷಯವಾಗಿಯೇ. ನಾವು ಅಂತಹ ಗುಣಗಳಿಂದ ಪ್ರೇರಿಸಲ್ಪಡುವುದಾದರೆ, ನಿರ್ಗತಿಕ ಜೊತೆ ಆರಾಧಕನೊಬ್ಬನಿಗೆ ಬರಿಯ ಶುಭವನ್ನು ಕೋರೆವು. ಹೊದಿಕೆಯಿಲ್ಲದ ಅಥವಾ ಹಸಿದಿರುವ ಸಹೋದರ ಇಲ್ಲವೆ ಸಹೋದರಿಗೆ ನಾವು ಭೌತಿಕ ಸಹಾಯವನ್ನು ನೀಡುವೆವು. ಯಾಕೋಬನು ಕೇಳುವುದು: ‘ನೀವು ನಿರ್ಗತಿಕ ಸಹೋದರನೊಬ್ಬನಿಗೆ, “ಸಮಾಧಾನದಿಂದ ಹೋಗಿರಿ, ಬೆಂಕಿ ಕಾಯಿಸಿಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ” ಎಂದು ಹೇಳಿ, ಆವಶ್ಯಕತೆಗಳನ್ನು ಒದಗಿಸದಿರುವಲ್ಲಿ ಏನು ಪ್ರಯೋಜನ?’ ಏನೂ ಪ್ರಯೋಜನವಿಲ್ಲ. (ಯೋಬ 31:16-22) ಅಂತಹ “ನಂಬಿಕೆಯು” ನಿರ್ಜೀವವಾದದ್ದಾಗಿದೆ!
9. ನಮ್ಮಲ್ಲಿ ನಂಬಿಕೆಯಿದೆಯೆಂಬುದನ್ನು ಯಾವುದು ತೋರಿಸುತ್ತದೆ?
9 ನಾವು ದೇವಜನರೊಂದಿಗೆ ಸ್ವಲ್ಪಮಟ್ಟಿಗೆ ಒಡನಾಟಮಾಡುತ್ತಿರಬಹುದಾದರೂ, ಪೂರ್ಣಹೃದಯದ ಕ್ರಿಯೆಗಳು ಮಾತ್ರ ನಂಬಿಕೆಯಿದೆಯೆಂಬ ನಮ್ಮ ವಾದವನ್ನು ಬೆಂಬಲಿಸಬಲ್ಲವು. ನಾವು ತ್ರಯೈಕ್ಯ ಬೋಧನೆಯನ್ನು ನಿರಾಕರಿಸಿ, ಒಬ್ಬನೇ ಸತ್ಯ ದೇವರಿದ್ದಾನೆಂದು ನಂಬಿರುವುದಾದರೆ ಅದು ಒಳ್ಳೆಯದೇ. ಆದರೂ ಬರಿಯ ವಿಶ್ವಾಸ ನಂಬಿಕೆಯಾಗಿರುವುದಿಲ್ಲ. “ದೆವ್ವಗಳು . . . ನಂಬಿ,” ಅವುಗಳಿಗೆ ನಾಶನವು ಕಾಯುತ್ತಿರುವುದರಿಂದ ಹೆದರಿ “ನಡುಗುತ್ತವೆ.” ನಮಗೆ ನಿಜವಾಗಿಯೂ ನಂಬಿಕೆಯಿರುವುದಾದರೆ, ಸುವಾರ್ತೆಯನ್ನು ಸಾರುವ ಮತ್ತು ನಿರ್ಗತಿಕ ಜೊತೆ ವಿಶ್ವಾಸಿಗಳಿಗೆ ಅನ್ನ ಮತ್ತು ಬಟ್ಟೆಯನ್ನು ಒದಗಿಸುವಂತಹ ಕಾರ್ಯಗಳನ್ನು ಉತ್ಪಾದಿಸುವಂತೆ ಅದು ನಮ್ಮನ್ನು ಪ್ರೇರಿಸುವುದು. ಯಾಕೋಬನು ಕೇಳುವುದು: “ಅಪ್ರಯೋಜಕನೇ [ದೇವರ ನಿಷ್ಕೃಷ್ಟ ಜ್ಞಾನದಿಂದ ತುಂಬಿರದವನು], ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾಗಿದೆ [“ನಿಷ್ಕ್ರಿಯವಾಗಿದೆ,” NW] ಎಂಬದಕ್ಕೆ ದೃಷ್ಟಾಂತ ಬೇಕೋ?” ಹೌದು, ನಂಬಿಕೆಯು ಕ್ರಿಯೆಯನ್ನು ಕೇಳಿಕೊಳ್ಳುತ್ತದೆ.
10. “ನಂಬುವವರೆಲ್ಲರಿಗೂ . . . ಮೂಲ ತಂದೆ” ಎಂದು ಅಬ್ರಹಾಮನನ್ನು ಏಕೆ ಕರೆಯಲಾಗುತ್ತದೆ?
10 ದೇವಭಕ್ತಿಯ ಮೂಲಪಿತನಾದ ಅಬ್ರಹಾಮನ ನಂಬಿಕೆಯು ಅವನನ್ನು ಕ್ರಿಯೆಗೆ ಪ್ರೇರಿಸಿತು. “ನಂಬುವವರೆಲ್ಲರಿಗೂ . . . ಮೂಲ ತಂದೆ”ಯಾಗಿರುವ ಅವನು, “ಇಸಾಕನೆಂಬ ತನ್ನ ಮಗನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ.” (ರೋಮಾಪುರ 4:11, 12; ಆದಿಕಾಂಡ 22:1-14) ದೇವರು ಇಸಾಕನನ್ನು ಪುನರುತ್ಥಾನಗೊಳಿಸಿ, ಅವನ ಮೂಲಕ ಒಂದು ಸಂತತಿಯು ಬರುವುದೆಂಬ ದೇವರ ವಾಗ್ದಾನದಲ್ಲಿ ಅಬ್ರಹಾಮನಿಗೆ ನಂಬಿಕೆಯಿಲ್ಲದಿರುತ್ತಿದ್ದರೆ ಏನಾಗುತ್ತಿತ್ತು? ಹಾಗಿರುತ್ತಿದ್ದರೆ, ಅಬ್ರಹಾಮನು ಎಂದಿಗೂ ತನ್ನ ಮಗನನ್ನು ಅರ್ಪಿಸಲು ಪ್ರಯತ್ನಿಸುತ್ತಿರಲಿಲ್ಲ. (ಇಬ್ರಿಯ 11:19) ಅಬ್ರಹಾಮನ “ನಂಬಿಕೆಯು . . . ಸಿದ್ಧಿಗೆ ಬಂತೆಂಬದು” ಅಥವಾ ಪೂರ್ಣಗೊಳಿಸಲ್ಪಟ್ಟದ್ದು ಅವನ ವಿಧೇಯ ಕಾರ್ಯಗಳಿಂದಲೇ. “ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬ ಶಾಸ್ತ್ರದ [ಆದಿಕಾಂಡ 15:6] ಮಾತು ಹೀಗೆ ನೆರವೇರಿತು.” ಇಸಾಕನನ್ನು ಅರ್ಪಿಸಲು ಪ್ರಯತ್ನಿಸುವುದರಲ್ಲಿನ ಅಬ್ರಹಾಮನ ಕ್ರಿಯೆಗಳು, ಅಬ್ರಹಾಮನು ನೀತಿವಂತನೆಂಬ ದೇವರ ಮೊದಲಿನ ಹೇಳಿಕೆಯನ್ನು ದೃಢೀಕರಿಸಿದವು. ನಂಬಿಕೆಯ ಕ್ರಿಯೆಗಳ ಮೂಲಕ ಅವನು ದೇವರ ಕಡೆಗೆ ತನಗಿದ್ದ ಪ್ರೀತಿಯನ್ನು ತೋರಿಸಿ, “ದೇವರ [“ಯೆಹೋವನ,” NW] ಸ್ನೇಹಿತ”ನೆಂದು ಕರೆಯಲ್ಪಟ್ಟನು.
11. ರಾಹಾಬಳ ಸಂಬಂಧದಲ್ಲಿ ನಂಬಿಕೆಯ ಯಾವ ಪುರಾವೆ ನಮಗಿದೆ?
11 “ಮನುಷ್ಯನು ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆಯೇ ಹೊರತು ಬರೀ ನಂಬಿಕೆಯಿಂದಲ್ಲ,” ಎಂಬುದನ್ನು ಅಬ್ರಹಾಮನು ರುಜುಪಡಿಸಿದನು. ಯೆರಿಕೋವಿನಲ್ಲಿ ವೇಶ್ಯೆಯಾಗಿದ್ದ ರಾಹಾಬಳ ವಿಷಯದಲ್ಲೂ ಅದು ಸತ್ಯವಾಗಿತ್ತು. ಆಕೆ “[ಇಸ್ರಾಯೇಲ್ಯ] ಗೂಢಚಾರರನ್ನು,” ಅವರು ತಮ್ಮ ಕಾನಾನ್ಯ ವೈರಿಗಳಿಂದ ತಪ್ಪಿಸಿಕೊಳ್ಳುವಂತೆ, “ತನ್ನ ಮನೆಯಲ್ಲಿ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದರಲ್ಲಿ ಕ್ರಿಯೆಗಳಿಂದಲೇ ನೀತಿವಂತಳೆಂಬ ನಿರ್ಣಯವನ್ನು ಹೊಂದಿದಳಲ್ಲವೇ.” ಇಸ್ರಾಯೇಲ್ಯ ಗೂಢಚಾರರನ್ನು ಸಂಧಿಸುವುದಕ್ಕೆ ಮೊದಲೇ, ಅವಳು ಯೆಹೋವನನ್ನು ಸತ್ಯ ದೇವರೋಪಾದಿ ಅಂಗೀಕರಿಸಿದಳು, ಮತ್ತು ತರುವಾಯದ ಅವಳ ಮಾತುಗಳು ಹಾಗೂ ವೇಶ್ಯಾವಾಟಿಕೆಯ ತ್ಯಜನವು, ಅವಳ ನಂಬಿಕೆಯ ಪುರಾವೆಯನ್ನು ಕೊಟ್ಟಿತು. (ಯೆಹೋಶುವ 2:9-11; ಇಬ್ರಿಯ 11:31) ಕ್ರಿಯೆಗಳ ಮೂಲಕ ತೋರಿಸಲ್ಪಟ್ಟ ನಂಬಿಕೆಯ ಈ ದ್ವಿತೀಯ ದೃಷ್ಟಾಂತದ ಬಳಿಕ, ಯಾಕೋಬನು ಹೇಳುವುದು: “ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.” ಒಬ್ಬ ವ್ಯಕ್ತಿ ಸತ್ತಾಗ, ಜೀವಂತಗೊಳಿಸುವ ಶಕ್ತಿ ಅಥವಾ “ಆತ್ಮ” ಅವನಲ್ಲಿರುವುದಿಲ್ಲ, ಮತ್ತು ಅವನು ಏನನ್ನೂ ಸಾಧಿಸುವುದಿಲ್ಲ. ಬರಿಯ ಹೊರತೋರಿಕೆಯ ನಂಬಿಕೆಯೂ ಮೃತದೇಹದಷ್ಟೇ ನಿರ್ಜೀವವೂ ನಿರರ್ಥಕವೂ ಆಗಿದೆ. ಆದರೆ ನಮ್ಮಲ್ಲಿ ನಿಜ ನಂಬಿಕೆಯಿರುವಲ್ಲಿ, ಅದು ನಮ್ಮನ್ನು ದೇವಭಕ್ತಿಯ ಕ್ರಿಯೆಗಳಿಗೆ ಪ್ರೇರಿಸುವುದು.
ಆ ನಾಲಗೆಯನ್ನು ನಿಯಂತ್ರಿಸಿರಿ!
12. ಸಭೆಯ ಹಿರಿಯರಿಂದ ಏನು ಮಾಡಲ್ಪಡಬೇಕು?
12 ಮಾತಾಡುವುದು ಮತ್ತು ಬೋಧಿಸುವುದು ಸಹ ನಮ್ಮ ನಂಬಿಕೆಗೆ ಸಾಕ್ಷ್ಯವನ್ನು ಒದಗಿಸಬಲ್ಲದು, ಆದರೆ ನಿಗ್ರಹ ಅಗತ್ಯ. (ಯಾಕೋಬ 3:1-4) ಸಭೆಯಲ್ಲಿ ಬೋಧಕರೋಪಾದಿ, ಹಿರಿಯರಿಗೆ ಭಾರಿ ಜವಾಬ್ದಾರಿಯೂ ಮಹಾ ಉತ್ತರವಾದಿತ್ವವೂ ಇದೆ. ಆದುದರಿಂದ, ಅವರು ತಮ್ಮ ಪ್ರಚೋದನೆಗಳನ್ನೂ ಅರ್ಹತೆಗಳನ್ನೂ ನಮ್ರತೆಯಿಂದ ಪರೀಕ್ಷಿಸಿಕೊಳ್ಳಬೇಕು. ಜ್ಞಾನ ಮತ್ತು ಸಾಮರ್ಥ್ಯಗಳಲ್ಲದೆ, ಈ ಪುರುಷರಲ್ಲಿ ದೇವರಿಗಾಗಿ ಮತ್ತು ಜೊತೆವಿಶ್ವಾಸಿಗಳಿಗಾಗಿ ಆಳವಾದ ಪ್ರೀತಿಯಿರಬೇಕು. (ರೋಮಾಪುರ 12:3, 16; 1 ಕೊರಿಂಥ 13:3, 4) ಹಿರಿಯರು ತಮ್ಮ ಸಲಹೆಯನ್ನು ಶಾಸ್ತ್ರಗಳ ಮೇಲೆ ಆಧಾರಿಸಬೇಕು. ಹಿರಿಯನೊಬ್ಬನು ತನ್ನ ಬೋಧನೆಯಲ್ಲಿ ತಪ್ಪುಮಾಡುವಲ್ಲಿ ಮತ್ತು ಇದರ ಪರಿಣಾಮವಾಗಿ ಇತರರಿಗೆ ಸಮಸ್ಯೆಗಳುಂಟಾಗುವಲ್ಲಿ, ದೇವರು ಕ್ರಿಸ್ತನ ಮೂಲಕ ಅವನಿಗೆ ಪ್ರತಿಕೂಲವಾಗಿ ನ್ಯಾಯತೀರ್ಪುಮಾಡುವನು. ಆದಕಾರಣ ಹಿರಿಯರು ನಮ್ರರೂ ವ್ಯಾಸಂಗನಿಷ್ಠರೂ ಆಗಿದ್ದು, ದೇವರ ವಾಕ್ಯಕ್ಕೆ ನಂಬಿಕೆಯಿಂದ ಅಂಟಿಕೊಳ್ಳಬೇಕು.
13. ನಾವು ಮಾತಿನಲ್ಲಿ ಎಡವುತ್ತೇವೆ ಏಕೆ?
13 ಅಪರಿಪೂರ್ಣತೆಯ ಕಾರಣದಿಂದ, ಉತ್ಕೃಷ್ಟ ರೀತಿಯ ಬೋಧಕರೂ—ವಾಸ್ತವವಾಗಿ, ನಾವೆಲ್ಲರೂ—“ಅನೇಕ ವಿಷಯಗಳಲ್ಲಿ [“ಅನೇಕ ಬಾರಿ,” NW] . . . ತಪ್ಪುವದುಂಟು.” ಮಾತಿನಲ್ಲಿ ತಪ್ಪುವುದು, ಅನೇಕಾವರ್ತಿ ಸಂಭವಿಸುವ ಮತ್ತು ಹಾನಿಯುಂಟುಮಾಡುವ ಸಾಧ್ಯತೆಯಿರುವ ನ್ಯೂನತೆಗಳಲ್ಲಿ ಒಂದಾಗಿದೆ. ಯಾಕೋಬನು ಹೇಳುವುದು: “ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ [“ಪರಿಪೂರ್ಣನೂ,” NW] ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” ಯೇಸು ಕ್ರಿಸ್ತನಿಗೆ ಅಸದೃಶವಾಗಿ, ನಮಗೆ ನಾಲಗೆಯ ಪರಿಪೂರ್ಣ ನಿಯಂತ್ರಣವಿಲ್ಲ. ನಮಗೆ ನಿಯಂತ್ರಣವು ಇರುವುದಾದರೆ, ನಮ್ಮ ದೇಹದ ಇತರ ಅಂಗಗಳನ್ನೂ ನಾವು ಹತೋಟಿಯಲ್ಲಿಟ್ಟುಕೊಳ್ಳಸಾಧ್ಯವಿದೆ. ಎಷ್ಟೆಂದರೂ, ಕಡಿವಾಣಗಳು ಮತ್ತು ಕಚ್ಚುಗಂಬಿಗಳು ಕುದುರೆಗಳನ್ನು ನಾವು ನಡಿಸಿದಲ್ಲಿಗೆ ಹೋಗುವಂತೆ ಮಾಡುತ್ತವೆ ಮತ್ತು ಒಂದು ಚಿಕ್ಕ ಚುಕ್ಕಾಣಿಯ ಮೂಲಕ ಬಲವಾದ ಗಾಳಿಯಿಂದ ಓಡಿಸಲ್ಪಡುವ ಒಂದು ದೊಡ್ಡ ದೋಣಿಯನ್ನೂ ಚುಕ್ಕಾಣಿಗನ ಅಪೇಕ್ಷೆಯಂತೆ ತಿರುಗಿಸಸಾಧ್ಯವಿದೆ.
14. ನಾಲಗೆಯನ್ನು ನಿಯಂತ್ರಿಸುವರೆ ಪ್ರಯತ್ನದ ಆವಶ್ಯಕತೆಯನ್ನು ಯಾಕೋಬನು ಹೇಗೆ ಒತ್ತಿಹೇಳುತ್ತಾನೆ?
14 ನಾಲಗೆಯನ್ನು ನಿಯಂತ್ರಿಸಲು ನಿಜ ಪ್ರಯತ್ನವು ಅಗತ್ಯವೆಂಬುದನ್ನು ನಾವೆಲ್ಲರೂ ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಲೇಬೇಕು. (ಯಾಕೋಬ 3:5-12) ಕುದುರೆಯೊಂದಕ್ಕೆ ಹೋಲಿಸುವಾಗ, ಕಡಿವಾಣವು ಚಿಕ್ಕದಾಗಿದೆ; ಹಾಗೆಯೇ ಹಡಗಿಗೆ ಹೋಲಿಸುವಾಗ ಚುಕ್ಕಾಣಿಯು ಚಿಕ್ಕದಾಗಿದೆ. ಮತ್ತು ಮಾನವ ದೇಹಕ್ಕೆ ಹೋಲಿಸುವಾಗ, ನಾಲಗೆ ಚಿಕ್ಕದಾದರೂ, “ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ.” ಜಂಬಕೊಚ್ಚಿಕೊಳ್ಳುವುದು ದೇವರನ್ನು ಅಸಂತೋಷಗೊಳಿಸುತ್ತದೆಂದು ಶಾಸ್ತ್ರಗಳು ಸ್ಪಷ್ಟಪಡಿಸುವುದರಿಂದ, ಅದರಿಂದ ದೂರವಿರಲು ನಾವು ಆತನ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ. (ಕೀರ್ತನೆ 12:3, 4; 1 ಕೊರಿಂಥ 4:7) ರೇಗಿಸಲ್ಪಟ್ಟಾಗ, ಕಾಡಿಗೆ ಬೆಂಕಿ ಹಚ್ಚಲು ಒಂದು ಕಿಡಿ ಸಾಕೆಂಬುದನ್ನು ನಾವು ನೆನಪಿನಲ್ಲಿಡುತ್ತ, ನಮ್ಮ ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳೋಣ. ಯಾಕೋಬನು ಸೂಚಿಸುವಂತೆ, “ನಾಲಿಗೆಯೂ ಕಿಚ್ಚೇ,” ಅದು ಮಹಾ ಹಾನಿಯನ್ನುಂಟುಮಾಡುವ ಸಾಮರ್ಥ್ಯವುಳ್ಳದ್ದು. (ಜ್ಞಾನೋಕ್ತಿ 18:21) ಅಷ್ಟೇಕೆ, ಅಂಕೆ ತಪ್ಪಿದ ನಾಲಗೆ “ಅಧರ್ಮಲೋಕರೂಪ” ಆಗಿದೆ! ಈ ಭಕ್ತಿಹೀನ ಲೋಕದ ಪ್ರತಿಯೊಂದು ಕೆಟ್ಟ ಲಕ್ಷಣವು ಅನಿಯಂತ್ರಿತ ನಾಲಗೆಯೊಂದಿಗೆ ಜೊತೆಗೂಡಿದೆ. ಚಾಡಿಮಾತು ಮತ್ತು ಸುಳ್ಳು ಬೋಧನೆಯಂತಹ ಹಾನಿಕಾರಕ ವಿಷಯಗಳಿಗೆ ಅದು ಹೊಣೆಯುಳ್ಳದ್ದಾಗಿದೆ. (ಯಾಜಕಕಾಂಡ 19:16; 2 ಪೇತ್ರ 2:1) ನೀವೇನು ಭಾವಿಸುತ್ತೀರಿ? ನಮ್ಮ ನಾಲಗೆಯನ್ನು ನಿಯಂತ್ರಿಸಿಕೊಳ್ಳುವರೆ ಕಠಿನ ಶ್ರಮವನ್ನು ತೆಗೆದುಕೊಳ್ಳುವಂತೆ ನಮ್ಮ ನಂಬಿಕೆ ನಮ್ಮನ್ನು ಪ್ರೇರಿಸಬಾರದೊ?
15. ಅನಿಯಂತ್ರಿತ ನಾಲಗೆಯಿಂದ ಯಾವ ಹಾನಿಯಾಗಬಹುದು?
15 ಅನಿಯಂತ್ರಿತ ನಾಲಗೆಯು ನಮ್ಮನ್ನು ಪೂರ್ತಿಯಾಗಿ ‘ಅವಮಾನಗೊಳಿಸುತ್ತದೆ.’ ಉದಾಹರಣೆಗೆ, ನಾವು ಪದೇ ಪದೇ ಸುಳ್ಳುಹೇಳುವಾಗ ಸಿಕ್ಕಿಬೀಳುವುದಾದರೆ, ನಾವು ಸುಳ್ಳುಗಾರರೆಂದು ಪ್ರಖ್ಯಾತರಾಗುವೆವು. ಆದರೂ ಸ್ವಚ್ಛಂದವಾದ ನಾಲಗೆಯೊಂದು “ಪ್ರಪಂಚವೆಂಬ ಚಕ್ರಕ್ಕೆ [“ನೈಸರ್ಗಿಕ ಜೀವನಚಕ್ರಕ್ಕೆ,” NW] ಬೆಂಕಿ” ಹಚ್ಚುವುದು ಹೇಗೆ? ಜೀವನವನ್ನು ವಿಷಮ ಚಕ್ರವಾಗಿ ಮಾಡುವ ಮೂಲಕವೇ. ಒಂದೇ ಒಂದು ಅನಿಯಂತ್ರಿತ ನಾಲಗೆ ಇಡೀ ಸಭೆಯನ್ನು ಪಲ್ಲಟಗೊಳಿಸಬಲ್ಲದು. ಯಾಕೋಬನು “ನರಕ [“ಗೆಹೆನ,” NW]”ದ ಕುರಿತು, ಹಿನ್ನೋಮ್ ಕಣಿವೆಯ ಕುರಿತು ತಿಳಿಸುತ್ತಾನೆ. ಒಂದೊಮ್ಮೆ ಶಿಶುಯಜ್ಞಕ್ಕಾಗಿ ಉಪಯೋಗಿಸಲಾಗುತ್ತಿದ್ದ ಇದು, ಯೆರೂಸಲೇಮಿನ ಕಸವನ್ನು ಬೆಂಕಿಯಿಂದ ಸುಟ್ಟು ತೊಲಗಿಸುವ ಕಸದ ತಿಪ್ಪೆಯಾಯಿತು. (ಯೆರೆಮೀಯ 7:31) ಹೀಗೆ, ಗೆಹೆನ ನಿರ್ಮೂಲನದ ಸಂಕೇತವಾಗಿದೆ. ಒಂದು ಅರ್ಥದಲ್ಲಿ, ಗೆಹೆನ ತನ್ನ ವಿನಾಶಕ ಶಕ್ತಿಯನ್ನು ಹತೋಟಿಯಲ್ಲಿಡಲಾಗದ ನಾಲಗೆಗೆ ಬಿಟ್ಟುಕೊಟ್ಟಂತಿದೆ. ನಾವು ನಮ್ಮ ನಾಲಗೆಗೆ ಕಡಿವಾಣ ಹಾಕದಿದ್ದರೆ, ನಾವು ಆರಂಭಿಸಿದ ಜ್ವಾಲೆಗೆ ನಾವೇ ಆಹುತಿಯಾಗಬಹುದು. (ಮತ್ತಾಯ 5:22) ಯಾರನ್ನಾದರೂ ದೂಷಿಸುವುದಕ್ಕಾಗಿ ನಾವು ಸಭೆಯಿಂದ ಬಹಿಷ್ಕರಿಸಲ್ಪಡಲೂಬಹುದು.—1 ಕೊರಿಂಥ 5:11-13.
16. ಅನಿಯಂತ್ರಿತ ನಾಲಗೆಯು ಮಾಡಸಾಧ್ಯವಿರುವ ಹಾನಿಯ ವೀಕ್ಷಣದಲ್ಲಿ, ನಾವೇನು ಮಾಡಬೇಕು?
16 ದೇವರ ವಾಕ್ಯದ ವಾಚನದಿಂದ ನಿಮಗೆ ತಿಳಿದಿರುವಂತೆ, ಪ್ರಾಣಿಸೃಷ್ಟಿ ಮನುಷ್ಯನ ಅಧೀನತೆಯಲ್ಲಿರಬೇಕೆಂದು ಯೆಹೋವನು ಆಜ್ಞೆ ವಿಧಿಸಿದನು. (ಆದಿಕಾಂಡ 1:28) ಮತ್ತು ಎಲ್ಲ ವಿಧಗಳ ಪ್ರಾಣಿಗಳು ಪಳಗಿಸಲ್ಪಟ್ಟಿವೆ. ಉದಾಹರಣೆಗೆ, ತರಬೇತುಗೊಳಿಸಿದ ಶ್ಯೇನ ಪಕ್ಷಿಗಳನ್ನು ಬೇಟೆಯಲ್ಲಿ ಉಪಯೋಗಿಸಲಾಗಿದೆ. ಯಾಕೋಬನು ಹೇಳಿರುವ ‘ಕ್ರಿಮಿಗಳಲ್ಲಿ’ [“ಹರಿದಾಡುವ ಜೀವಿಗಳಲ್ಲಿ,” NW], ಹಾವಾಡಿಗರು ನಿಯಂತ್ರಿಸುವ ಸರ್ಪಗಳು ಸೇರಿರಬಹುದು. (ಕೀರ್ತನೆ 58:4, 5) ಮನುಷ್ಯನು ತಿಮಿಂಗಿಲಗಳನ್ನೂ ನಿಯಂತ್ರಿಸಬಲ್ಲನು, ಆದರೆ ಪಾಪಪೂರ್ಣ ಮಾನವರಾಗಿರುವುದರಿಂದ ನಾವು ನಾಲಗೆಯನ್ನು ಪೂರ್ತಿಯಾಗಿ ಪಳಗಿಸಲಾರೆವು. ಆದರೂ ನಾವು ನಿಂದಿಸುವ, ಚುಚ್ಚುವ ಅಥವಾ ಮಿಥ್ಯಾಪವಾದ ಹೊರಿಸುವ ಹೇಳಿಕೆಗಳನ್ನು ನುಡಿಯುವುದರಿಂದ ದೂರವಿರಬೇಕು. ಸ್ವಚ್ಛಂದವಾದ ನಾಲಗೆಯು, ಮರಣಕರವಾದ ವಿಷತುಂಬಿದ ಒಂದು ಉಪಕರಣವಾಗಿರಸಾಧ್ಯವಿದೆ. (ರೋಮಾಪುರ 3:13) ವಿಷಾದನೀಯವಾಗಿ, ಸುಳ್ಳು ಬೋಧಕರ ನಾಲಗೆಗಳು ಕೆಲವು ಮಂದಿ ಆದಿ ಕ್ರೈಸ್ತರನ್ನು ದೇವರಿಂದ ವಿಮುಖಗೊಳಿಸಿದವು. ಆದುದರಿಂದ ಅಪಾಯಕಾರಿಯಾದ ಧರ್ಮಭ್ರಷ್ಟ ಅಭಿವ್ಯಕ್ತಿಗಳು—ಹೇಳಲ್ಪಟ್ಟ ಅಥವಾ ಲಿಖಿತ ಅಭಿವ್ಯಕ್ತಿಗಳು—ನಮ್ಮನ್ನೆಂದಿಗೂ ಜಯಿಸುವಂತೆ ಬಿಡದಿರೋಣ.—1 ತಿಮೊಥೆಯ 1:18-20; 2 ಪೇತ್ರ 2:1-3.
17, 18. ಯಾಕೋಬ 3:9-12ರಲ್ಲಿ ಯಾವ ಅಸಾಮರಸ್ಯವು ತೋರಿಸಲ್ಪಡುತ್ತದೆ, ಮತ್ತು ನಾವು ಈ ಸಂಬಂಧದಲ್ಲಿ ಏನು ಮಾಡಬೇಕು?
17 ದೇವರಲ್ಲಿ ನಂಬಿಕೆ ಮತ್ತು ಆತನನ್ನು ಮೆಚ್ಚಿಸುವ ಬಯಕೆಯು, ಧರ್ಮಭ್ರಷ್ಟತೆಯಿಂದ ನಮ್ಮನ್ನು ಸಂರಕ್ಷಿಸಿ, ನಮ್ಮ ನಾಲಗೆಯನ್ನು ಅಸಮಂಜಸವಾಗಿ ಉಪಯೋಗಿಸುವುದರಿಂದ ನಮ್ಮನ್ನು ತಡೆಯಬಲ್ಲದು. ಕೆಲವರ ಅಸಮಾಂಜಸ್ಯವನ್ನು ಸೂಚಿಸುತ್ತ, ‘ನಾಲಗೆಯಿಂದ ನಮ್ಮ ತಂದೆಯಾದ ಯೆಹೋವನನ್ನು ಕೊಂಡಾಡುತ್ತೇವೆ ಮತ್ತು ದೇವರ ಹೋಲಿಕೆಯಲ್ಲಿ ಅಸ್ತಿತ್ವಕ್ಕೆ ಬಂದ ಮನುಷ್ಯರನ್ನು ಶಪಿಸುತ್ತೇವೆ’ ಎಂದು ಯಾಕೋಬನು ಹೇಳುತ್ತಾನೆ. (ಆದಿಕಾಂಡ 1:26) “ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡು”ವುದರಿಂದ ಯೆಹೋವನು ನಮ್ಮ ತಂದೆಯಾಗಿದ್ದಾನೆ. (ಅ. ಕೃತ್ಯಗಳು 17:24, 25) ಆತ್ಮಿಕಾರ್ಥದಲ್ಲಿ ಆತನು ಅಭಿಷಿಕ್ತ ಕ್ರೈಸ್ತರ ತಂದೆಯೂ ಆಗಿದ್ದಾನೆ. ನಮ್ಮನ್ನು ಮೃಗಗಳಿಂದ ಪ್ರತ್ಯೇಕಿಸುವ ಪ್ರೀತಿ, ನ್ಯಾಯ ಮತ್ತು ವಿವೇಕ ಸೇರಿರುವ ಮಾನಸಿಕ ಮತ್ತು ನೈತಿಕ ಗುಣಗಳಿಂದಾಗಿ, ನಾವೆಲ್ಲರೂ “ದೇವರ ಹೋಲಿಕೆಗೆ ಸರಿಯಾಗಿ” ಇದ್ದೇವೆ. ಹಾಗಾದರೆ, ನಮಗೆ ಯೆಹೋವನಲ್ಲಿ ನಂಬಿಕೆಯಿರುವುದಾದರೆ, ನಾವು ಹೇಗೆ ವರ್ತಿಸಬೇಕು?
18 ನಾವು ಮನುಷ್ಯರನ್ನು ಶಪಿಸುವಲ್ಲಿ, ಅದು ನಾವು ಅವರ ಮೇಲೆ ಕೆಟ್ಟದ್ದನ್ನು ಆಹ್ವಾನಿಸುವ ಅಥವಾ ಅದಕ್ಕಾಗಿ ಪ್ರಾರ್ಥಿಸುವ ಅರ್ಥದಲ್ಲಿರುವುದು. ಯಾರ ಮೇಲೇ ಆಗಲಿ ಕೆಟ್ಟದ್ದನ್ನು ಬರಮಾಡಲು ಅಧಿಕಾರವಿದ್ದ ದೈವಿಕವಾಗಿ ಪ್ರೇರಿತರಾದ ಪ್ರವಾದಿಗಳು ನಾವಾಗಿಲ್ಲದಿರುವುದರಿಂದ, ಅಂತಹ ಮಾತು ದ್ವೇಷದ ಸಾಕ್ಷ್ಯವಾಗಿರುವುದು ಮತ್ತು ಅದು ನಮ್ಮ ಆರಾಧನೆಯನ್ನು ವ್ಯರ್ಥವಾಗಿಸುವುದು. “ಸ್ತುತಿ ಶಾಪ” ಇವೆರಡೂ ಒಂದೇ ಬಾಯಿಂದ ಬರುವುದು ಸರಿಯಲ್ಲ. (ಲೂಕ 6:27, 28; ರೋಮಾಪುರ 12:14, 17-21; ಯೂದ 9) ಕೂಟಗಳಲ್ಲಿ ದೇವರಿಗೆ ಸ್ತುತಿ ಹಾಡುವುದೂ, ಆ ಬಳಿಕ ಜೊತೆ ವಿಶ್ವಾಸಿಗಳ ವಿಷಯದಲ್ಲಿ ಕೆಟ್ಟದ್ದನ್ನು ಮಾತಾಡುವುದೂ ಎಷ್ಟೊಂದು ಪಾಪಕರ! ಒಂದೇ ಬುಗ್ಗೆಯಿಂದ ಸಿಹಿ ನೀರೂ ಕಹಿ ನೀರೂ ಉಕ್ಕಿ ಹರಿಯಲಾರದು. “ಅಂಜೂರದ ಮರವು ಎಣ್ಣೇಮರದ ಕಾಯಿ ಬಿಡುವದೊ? ದ್ರಾಕ್ಷೇಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೊ?” ಹಾಗೆಯೇ ಉಪ್ಪು ನೀರು ಸಿಹಿ ನೀರನ್ನು ಉಂಟುಮಾಡದು. ಒಳ್ಳೆಯದನ್ನು ಮಾತಾಡಬೇಕಾಗಿರುವ ನಾವು, ಪಟ್ಟುಹಿಡಿದು ಕಟು ಮಾತುಗಳನ್ನಾಡುವುದಾದರೆ, ಆತ್ಮಿಕವಾಗಿ ಏನೋ ತಪ್ಪಾಗಿರುತ್ತದೆ. ನಾವು ಆ ಚಾಳಿಯನ್ನು ಹಿಡಿದಿರುವುದಾದರೆ, ಅಂತಹ ವಿಧದಲ್ಲಿ ಮಾತಾಡುವುದನ್ನು ನಿಲ್ಲಿಸಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸೋಣ.—ಕೀರ್ತನೆ 39:1.
ಮೇಲಣಿಂದ ಬರುವ ವಿವೇಕದಿಂದ ವರ್ತಿಸಿರಿ
19. ನಾವು ಸ್ವರ್ಗೀಯ ವಿವೇಕದಿಂದ ನಡೆಸಲ್ಪಡುವಲ್ಲಿ, ನಾವು ಇತರರನ್ನು ಹೇಗೆ ಪ್ರಭಾವಿಸಬಹುದು?
19 ನಂಬಿಕೆಯಿರುವವರಿಗೆ ಅರ್ಹವಾಗಿರುವ ವಿಷಯಗಳನ್ನು ಹೇಳಲು ಮತ್ತು ಮಾಡಲು ನಮಗೆಲ್ಲರಿಗೂ ವಿವೇಕ ಅಗತ್ಯ. (ಯಾಕೋಬ 3:13-18) ನಮಗೆ ದೇವರ ಕಡೆಗೆ ಪೂಜ್ಯ ಭಯವಿರುವಲ್ಲಿ, ಆತನು ನಮಗೆ ಸ್ವರ್ಗೀಯ ವಿವೇಕವನ್ನು, ಜ್ಞಾನವನ್ನು ಯುಕ್ತವಾಗಿ ಉಪಯೋಗಿಸುವ ಸಾಮರ್ಥ್ಯವನ್ನು ದಯಪಾಲಿಸುತ್ತಾನೆ. (ಜ್ಞಾನೋಕ್ತಿ 9:10; ಇಬ್ರಿಯ 5:14) “ಜ್ಞಾನ [“ವಿವೇಕ,” NW]ದ ಲಕ್ಷಣವಾಗಿರುವ ಶಾಂತಗುಣ”ವನ್ನು ಹೇಗೆ ತೋರಿಸುವುದೆಂಬುದನ್ನು ಆತನ ವಾಕ್ಯವು ನಮಗೆ ಬೋಧಿಸುತ್ತದೆ. ಮತ್ತು ನಾವು ಶಾಂತರಾಗಿರುವುದರಿಂದ ಸಭಾ ಶಾಂತಿಯನ್ನು ನಾವು ಪ್ರವರ್ಧಿಸುತ್ತೇವೆ. (1 ಕೊರಿಂಥ 8:1, 2) ಜೊತೆ ವಿಶ್ವಾಸಿಗಳ ಮಹಾ ಬೋಧಕರು ತಾವಾಗಿದ್ದೇವೆಂದು ಜಂಬಕೊಚ್ಚಿಕೊಳ್ಳುವ ಯಾರಾದರೂ, ಆತ್ಮ ದುರಭಿಮಾನವನ್ನು ಖಂಡಿಸುವ ‘ಕ್ರೈಸ್ತ ಸತ್ಯಕ್ಕೆ ವಿರೋಧವಾಗಿ ಸುಳ್ಳು’ ಹೇಳುವವರಾಗಿದ್ದಾರೆ. (ಗಲಾತ್ಯ 5:26) ಅವರ “ವಿವೇಕವು ಭೂಸಂಬಂಧವಾದದ್ದು”—ದೇವರಿಂದ ವಿಮುಖರಾಗಿರುವ ಪಾಪಭರಿತ ಮಾನವರ ಲಕ್ಷಣವಾಗಿದೆ. ಶಾರೀರಿಕ ಪ್ರವೃತ್ತಿಗಳ ಉತ್ಪನ್ನವಾಗಿರುವುದರಿಂದ, ಅದು “ಪ್ರಾಕೃತಭಾವವಾದದ್ದು.” ಅದು “ದೆವ್ವಗಳಿಗೆ ಸಂಬಂಧ” ಪಟ್ಟದ್ದೂ ಆಗಿದೆ, ಏಕೆಂದರೆ ದುಷ್ಟಾತ್ಮಗಳು ದುರಹಂಕಾರವುಳ್ಳವುಗಳು. (1 ತಿಮೊಥೆಯ 3:6) ಆದಕಾರಣ ನಾವು, ಚಾಡಿಮಾತು ಮತ್ತು ಪಕ್ಷಪಾತದಂತಹ ‘ನೀಚಕಾರ್ಯಗಳು’ ಹುಲುಸಾಗಿ ಬೆಳೆಯುವ ವಾತಾವರಣವನ್ನು ಸೃಷ್ಟಿಸಲು ಯಾವ ಬೆಂಬಲವನ್ನೂ ಕೊಡದೆ, ವಿವೇಕ ಮತ್ತು ನಮ್ರತೆಯಿಂದ ವರ್ತಿಸೋಣ.
20. ಸ್ವರ್ಗೀಯ ವಿವೇಕವನ್ನು ನೀವು ಹೇಗೆ ವರ್ಣಿಸುವಿರಿ?
20 “ಮೇಲಣಿಂದ ಬರುವ ಜ್ಞಾನವು [“ವಿವೇಕವು,” NW] ಮೊದಲು ಪರಿಶುದ್ಧವಾದದ್ದು.” ಅದು ನಮ್ಮನ್ನು ನೈತಿಕವಾಗಿಯೂ ಆತ್ಮಿಕವಾಗಿಯೂ ಶುದ್ಧೀಕರಿಸುತ್ತದೆ. (2 ಕೊರಿಂಥ 7:11) ಅದು “ಸಮಾಧಾನಕರ”ವಾದದ್ದಾಗಿದ್ದು, ನಾವು ಶಾಂತಿಯನ್ನು ಬೆನ್ನಟ್ಟುವಂತೆ ಪ್ರೇರಿಸುತ್ತದೆ. (ಇಬ್ರಿಯ 12:14) ಸ್ವರ್ಗೀಯ ವಿವೇಕವು ನಮ್ಮನ್ನು ತತ್ತ್ವಾತ್ಮಕರೂ ವ್ಯವಹರಿಸಲು ಕಠಿನರೂ ಆಗಿರುವಂತೆ ಮಾಡದೆ, ‘ವಿವೇಚನೆಯುಳ್ಳವ’ರನ್ನಾಗಿ ಮಾಡುತ್ತದೆ. (ಫಿಲಿಪ್ಪಿ 4:5) ಮೇಲಣ ವಿವೇಕವು “ಸಂತೋಷವಾಗಿ ಒಪ್ಪಿಕೊಳ್ಳುವಂಥದು [“ವಿಧೇಯತೆಗೆ ಸಿದ್ಧವಾದದ್ದು,” NW]” ಆಗಿದ್ದು, ದೈವಿಕ ಬೋಧನೆಗೆ ವಿಧೇಯತೆಯನ್ನೂ ಯೆಹೋವನ ಸಂಸ್ಥೆಯೊಂದಿಗೆ ಸಹಕಾರವನ್ನೂ ಉತ್ತೇಜಿಸುತ್ತದೆ. (ರೋಮಾಪುರ 6:17) ಮೇಲಣಿಂದ ಬರುವ ವಿವೇಕವು, ನಮ್ಮನ್ನು ಕರುಣೆಯುಳ್ಳವರನ್ನಾಗಿಯೂ ಅನುಕಂಪವುಳ್ಳವರನ್ನಾಗಿಯೂ ಮಾಡುತ್ತದೆ. (ಯೂದ 22, 23) “ಒಳ್ಳೇ ಫಲಗಳಿಂದ ತುಂಬಿ”ರುವುದರಿಂದ, ಅದು ಪರರಿಗೆ ಚಿಂತೆಯನ್ನು ಮತ್ತು ಒಳ್ಳೇತನ, ನೀತಿ ಮತ್ತು ಸತ್ಯಕ್ಕೆ ಹೊಂದಿಕೆಯಾದ ವರ್ತನೆಗಳನ್ನು ಪ್ರೇರಿಸುತ್ತದೆ. (ಎಫೆಸ 5:9) ಮತ್ತು ಶಾಂತಿಕರ್ತರಾಗಿದ್ದು, ನಾವು ಶಾಂತಿಕರ ಪರಿಸ್ಥಿತಿಗಳಲ್ಲಿ ಹುಲುಸಾಗಿ ಬೆಳೆಯುವ “ನೀತಿಯೆಂಬ ಫಲ”ವನ್ನು ಅನುಭವಿಸುತ್ತೇವೆ.
21. ಯಾಕೋಬ 2:1–3:18ಕ್ಕನುಸಾರ, ದೇವರಲ್ಲಿ ನಮಗಿರುವ ನಂಬಿಕೆಯು ನಮ್ಮನ್ನು ಯಾವ ಕ್ರಿಯೆಗಳಿಗೆ ಪ್ರಚೋದಿಸಬೇಕು?
21 ಹಾಗಾದರೆ, ನಂಬಿಕೆ ನಮ್ಮನ್ನು ಕ್ರಿಯೆಗೆ ಪ್ರಚೋದಿಸುತ್ತದೆಂಬುದು ಸ್ಪಷ್ಟ. ಅದು ನಮ್ಮನ್ನು ನಿಷ್ಪಕ್ಷಪಾತಿಗಳಾಗಿ, ಕರುಣಾವಂತರಾಗಿ ಮತ್ತು ಸತ್ಕಾರ್ಯಗಳಲ್ಲಿ ಸಕ್ರಿಯರನ್ನಾಗಿ ಮಾಡುತ್ತದೆ. ನಂಬಿಕೆಯು, ನಾವು ನಾಲಗೆಯನ್ನು ನಿಯಂತ್ರಿಸುವಂತೆ ಮತ್ತು ಸ್ವರ್ಗೀಯ ವಿವೇಕದಿಂದ ವರ್ತಿಸುವಂತೆ ಸಹಾಯಮಾಡುತ್ತದೆ. ಆದರೆ ನಾವು ಈ ಪತ್ರದಿಂದ ಕಲಿಯಸಾಧ್ಯವಿರುವುದು ಅಷ್ಟೇ ಅಲ್ಲ. ಯೆಹೋವನಲ್ಲಿ ನಂಬಿಕೆಯುಳ್ಳವರಿಗೆ ಯೋಗ್ಯವಾದ ರೀತಿಯಲ್ಲಿ ವರ್ತಿಸುವರೆ ನಮಗೆ ಸಹಾಯಮಾಡಬಲ್ಲ ಇನ್ನೂ ಹೆಚ್ಚಿನ ಸಲಹೆ ಯಾಕೋಬನಲ್ಲಿದೆ.
ನೀವು ಹೇಗೆ ಉತ್ತರ ಕೊಡುವಿರಿ?
◻ ಪಕ್ಷಪಾತ ತೋರಿಸುವುದರಲ್ಲಿ ತಪ್ಪೇನು?
◻ ನಂಬಿಕೆ ಮತ್ತು ಕ್ರಿಯೆಗಳಿಗೆ ಹೇಗೆ ಸಂಬಂಧವಿದೆ?
◻ ನಾಲಗೆಯನ್ನು ನಿಯಂತ್ರಿಸುವುದು ಅಷ್ಟು ಪ್ರಾಮುಖ್ಯವೇಕೆ?
◻ ಸ್ವರ್ಗೀಯ ವಿವೇಕವನ್ನು ವರ್ಣಿಸಿರಿ.