ದೇವರ ಸಂಸ್ಥೆಯ ಭಾಗವಾಗಿ ಸುರಕ್ಷಿತರಾಗಿರಿ
“ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.”—ಜ್ಞಾನೋಕ್ತಿ 18:10.
1. ಯೇಸುವಿನ ಪ್ರಾರ್ಥನೆಗನುಸಾರ, ಕ್ರೈಸ್ತರು ಯಾವ ಕಷ್ಟಕರ ಪರಿಸ್ಥಿತಿಯಲ್ಲಿದ್ದಾರೆ?
ಯೇಸು ತನ್ನ ಮರಣದ ಸ್ವಲ್ಪ ಸಮಯದ ಮುಂಚೆ, ತನ್ನ ಹಿಂಬಾಲಕರ ಪರವಾಗಿ ಸ್ವರ್ಗೀಯ ತಂದೆಗೆ ಪ್ರಾರ್ಥಿಸಿದನು. ಪ್ರೀತಿಪೂರ್ವಕ ಕಾಳಜಿಯಿಂದ ಅವನು ಹೇಳಿದ್ದು: “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.” (ಯೋಹಾನ 17:14, 15) ಕ್ರೈಸ್ತರಿಗೆ ಈ ಲೋಕವು ಒಂದು ಅಪಾಯಕರವಾದ ಸ್ಥಳವಾಗಿರುವುದೆಂದು ಯೇಸುವಿಗೆ ಗೊತ್ತಿತ್ತು. ಅವರ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಮತ್ತು ಅವರನ್ನು ಹಿಂಸಿಸುವ ಮೂಲಕ, ಲೋಕವು ತನ್ನ ದ್ವೇಷವನ್ನು ಅವರ ಮೇಲೆ ವ್ಯಕ್ತಪಡಿಸುವುದು. (ಮತ್ತಾಯ 5:11, 12; 10:16, 17) ಅದು ಕೆಟ್ಟ ಪ್ರಭಾವದ ಮೂಲವೂ ಆಗಿರುವುದು.—2 ತಿಮೊಥೆಯ 4:10; 1 ಯೋಹಾನ 2:15, 16.
2. ಕ್ರೈಸ್ತರು ಆತ್ಮಿಕ ಸುರಕ್ಷೆಯ ಸ್ಥಳವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
2 ಕ್ರೈಸ್ತರನ್ನು ದ್ವೇಷಿಸುವ ಲೋಕವು, ದೇವರಿಂದ ವಿಮುಖಗೊಂಡವರಿಂದಲೂ ಸೈತಾನನ ನಿಯಂತ್ರಣದಲ್ಲಿರುವವರಿಂದಲೂ ರಚಿತವಾಗಿದೆ ಎಂದು ಅಪೊಸ್ತಲ ಯೋಹಾನನು ಹೇಳಿದನು. (1 ಯೋಹಾನ 5:19) ಈ ಲೋಕವು ಕ್ರೈಸ್ತ ಸಭೆಗಿಂತ ಬಹಳ ದೊಡ್ಡದಾಗಿದೆ, ಮತ್ತು ಸ್ವತಃ ಸೈತಾನನು ಬೇರೆ ಯಾವ ಮಾನವನಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದಾನೆ. ಆದಕಾರಣ, ಲೋಕದ ದ್ವೇಷವು ಕ್ರೈಸ್ತರಿಗೆ ನಿಜವಾದ ಬೆದರಿಕೆಯಾಗಿದೆ. ಹೀಗಿರುವಾಗ, ಯೇಸುವಿನ ಹಿಂಬಾಲಕರು ಆತ್ಮಿಕ ಸುರಕ್ಷತೆಯನ್ನು ಎಲ್ಲಿ ಕಂಡುಕೊಳ್ಳಬಲ್ಲರು? ಡಿಸೆಂಬರ್ 1, 1922ರ ದ ವಾಚ್ಟವರ್ ಪತ್ರಿಕೆಯಲ್ಲಿದ್ದ ಒಂದು ಹೇಳಿಕೆಯು, ಉತ್ತರವನ್ನು ನೀಡಿತು: “ಈಗ ನಾವು ಕೆಟ್ಟ ಸಮಯದಲ್ಲಿದ್ದೇವೆ. ಸೈತಾನನ ಸಂಸ್ಥೆ ಮತ್ತು ದೇವರ ಸಂಸ್ಥೆಯ ನಡುವೆ ಹೋರಾಟವು ನಡೆಯುತ್ತಾ ಇದೆ. ಅದೊಂದು ಉಗ್ರ ಹೋರಾಟವಾಗಿದೆ.” ಈ ಹೋರಾಟದಲ್ಲಿ, ದೇವರ ಸಂಸ್ಥೆಯು ಆತ್ಮಿಕ ಸುರಕ್ಷತೆಯ ಒಂದು ಸ್ಥಳವಾಗಿದೆ. “ಸಂಸ್ಥೆ” ಎಂಬ ಪದವು ಬೈಬಲಿನಲ್ಲಿ ಇಲ್ಲ, ಮತ್ತು 1920ರ ಸಮಯದಲ್ಲಿ, “ದೇವರ ಸಂಸ್ಥೆ” ಎಂಬುದು ಒಂದು ಹೊಸ ಅಭಿವ್ಯಕ್ತಿಯಾಗಿತ್ತು. ಹಾಗಾದರೆ, ಈ ಸಂಸ್ಥೆಯು ಏನಾಗಿದೆ? ಮತ್ತು ನಾವು ಅದರಲ್ಲಿ ಸುರಕ್ಷೆಯನ್ನು ಹೇಗೆ ಕಂಡುಕೊಳ್ಳಬಹುದು?
ಯೆಹೋವನ ಸಂಸ್ಥೆ
3, 4. (ಎ) ಒಂದು ಡಿಕ್ಷನೆರಿ ಮತ್ತು ದ ವಾಚ್ಟವರ್ ಪತ್ರಿಕೆಗನುಸಾರ, ಸಂಸ್ಥೆ ಎಂದರೇನು? (ಬಿ) ಯಾವ ಅರ್ಥದಲ್ಲಿ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಒಕ್ಕೂಟವನ್ನು ಒಂದು ಸಂಸ್ಥೆಯೆಂದು ಕರೆಯಸಾಧ್ಯವಿದೆ?
3 ಕನ್ಸೈಸ್ ಆಕ್ಸ್ಫರ್ಡ್ ಡಿಕ್ಷನೆರಿಗನುಸಾರ, ಸಂಸ್ಥೆಯು “ಒಂದು ವ್ಯವಸ್ಥಾಪಿತ ಮಂಡಲಿ” ಆಗಿದೆ. ಇದನ್ನು ಮನಸ್ಸಿನಲ್ಲಿಡುತ್ತಾ, ಅಪೊಸ್ತಲರು ಪ್ರಥಮ ಶತಮಾನದ ಕ್ರೈಸ್ತರನ್ನು, ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯ ಮೇಲ್ವಿಚಾರಣೆಯ ಕೆಳಗೆ ಸ್ಥಳಿಕ ಸಭೆಗಳಾಗಿ ವ್ಯವಸ್ಥಿತಗೊಳಿಸಿದರು. ಆದುದರಿಂದ, ಆ “ಸಹೋದರರ ಒಕ್ಕೂಟ”ವನ್ನು ಒಂದು ಸಂಸ್ಥೆಯಾಗಿ ಸೂಚಿಸಿ ಮಾತಾಡುವುದು ಯೋಗ್ಯವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. (1 ಪೇತ್ರ 2:17, NW) ಇಂದು ಯೆಹೋವನ ಸಾಕ್ಷಿಗಳಿಗೆ ತದ್ರೀತಿಯ ಸಂಸ್ಥಾಪನಾ ವ್ಯವಸ್ಥೆಯಿದೆ. ಪ್ರಥಮ ಶತಮಾನದ ಮಂಡಲಿಯ ಏಕತೆಯು, “ಸಭಾಪಾಲಕರು ಮತ್ತು ಬೋಧಕ”ರಂತಹ “ಮನುಷ್ಯರಲ್ಲಿನ ವರದಾನ”ಗಳಿಂದ ಬಲಪಡಿಸಲ್ಪಟ್ಟಿತು. ಇವರಲ್ಲಿ ಕೆಲವರು, ಸಭೆಯಿಂದ ಸಭೆಗೆ ಸಂಚರಿಸಿದರು ಮತ್ತು ಇತರರು ಸ್ಥಳಿಕ ಸಭೆಗಳಲ್ಲಿ ಹಿರಿಯರಾಗಿದ್ದರು. (ಎಫೆಸ 4:8, 11, 12, NW; ಅ. ಕೃತ್ಯಗಳು 20:28) ತದ್ರೀತಿಯ “ವರದಾನಗಳು” ಇಂದು ಯೆಹೋವನ ಸಾಕ್ಷಿಗಳ ಏಕತೆಯನ್ನು ಬಲಪಡಿಸುತ್ತವೆ.
4 ನವೆಂಬರ್ 1, 1922ರ ದ ವಾಚ್ಟವರ್ ಪತ್ರಿಕೆಯು, “ಸಂಸ್ಥೆ” ಎಂಬ ಪದದ ಕುರಿತು ಹೀಗೆ ಹೇಳಿತು: “ಒಂದು ಸಂಸ್ಥೆಯು, ನಿಯೋಜಿತ ಉದ್ದೇಶವೊಂದನ್ನು ಪೂರೈಸಲಿಕ್ಕಾಗಿರುವ ವ್ಯಕ್ತಿಗಳ ಒಂದು ಒಕ್ಕೂಟವಾಗಿದೆ.” ದ ವಾಚ್ಟವರ್ ಪತ್ರಿಕೆಯು ಹೀಗೊಂದು ವಿವರಣೆಯನ್ನು ನೀಡಿತು. ಯೆಹೋವನ ಸಾಕ್ಷಿಗಳನ್ನು ಒಂದು ಸಂಸ್ಥೆಯೆಂದು ಕರೆಯುವುದು, ಅವರನ್ನು, “ಪಂಥ ಎಂಬ ಪದವನ್ನು ಜನರು ಸಾಮಾನ್ಯವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ ಒಂದು ಪಂಥವನ್ನಾಗಿ ಮಾಡದೆ, ಬೈಬಲ್ ವಿದ್ಯಾರ್ಥಿಗಳು [ಯೆಹೋವನ ಸಾಕ್ಷಿಗಳು] ದೇವರ ಉದ್ದೇಶಗಳನ್ನು ನೆರವೇರಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕರ್ತನು ಎಲ್ಲವನ್ನೂ ಮಾಡುವ ವಿಧದಲ್ಲಿ, ಅಂದರೆ ಕ್ರಮಬದ್ಧವಾಗಿ ಅದನ್ನು ಮಾಡುತ್ತಿದ್ದಾರೆಂಬುದನ್ನು ಮಾತ್ರ ಅರ್ಥೈಸುತ್ತದೆ.” (1 ಕೊರಿಂಥ 14:33) ತನ್ನ ದಿನದ ಕ್ರೈಸ್ತರು, ತದ್ರೀತಿಯಲ್ಲಿ ಕ್ರಮಬದ್ಧವಾಗಿ ನಡೆದರೆಂದು ಅಪೊಸ್ತಲ ಪೌಲನು ತೋರಿಸಿದನು. ಅವನು ಅಭಿಷಿಕ್ತ ಕ್ರೈಸ್ತ ಸಾಹಚರ್ಯವನ್ನು ಮಾನವ ದೇಹಕ್ಕೆ ಹೋಲಿಸಿದನು. ಮಾನವ ದೇಹದಲ್ಲಿ ಅನೇಕ ಅಂಗಗಳಿದ್ದು, ದೇಹವು ಸರಿಯಾಗಿ ಕಾರ್ಯನಡಿಸಸಾಧ್ಯವಾಗುವಂತೆ, ಪ್ರತಿಯೊಂದು ಅಂಗವು ಅದರ ನೇಮಿತ ಪಾತ್ರವನ್ನು ನೆರವೇರಿಸುತ್ತದೆ. (1 ಕೊರಿಂಥ 12:12-26) ಇದು ಒಂದು ಸಂಸ್ಥೆಯ ಅತ್ಯುತ್ತಮ ದೃಷ್ಟಾಂತವಾಗಿದೆ! ಕ್ರೈಸ್ತರು ಏಕೆ ವ್ಯವಸ್ಥಾಪಿಸಲ್ಪಟ್ಟಿದ್ದರು? “ದೇವರ ಉದ್ದೇಶಗಳನ್ನು” ನೆರವೇರಿಸಲು, ಅಂದರೆ ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿಯೇ.
5. ದೇವರ ದೃಶ್ಯ ಸಂಸ್ಥೆಯು ಏನಾಗಿದೆ?
5 ಸತ್ಯ ಕ್ರೈಸ್ತರು ಐಕ್ಯಗೊಳಿಸಲ್ಪಟ್ಟು, ಒಂದು “ರಾಷ್ಟ”ದೊಳಗೆ ಒಂದು “ಜನಾಂಗ”ದೋಪಾದಿ ಸೇರಿಸಲ್ಪಡುವರೆಂದು ಬೈಬಲು ಮುಂತಿಳಿಸಿತು. ಅಲ್ಲಿ ಅವರು “ಲೋಕದೊಳಗೆ ಹೊಳೆಯುವ ಜ್ಯೋತಿರ್ಮಂಡಲಗಳಂತೆ” ಇರುವರು. (ಯೆಶಾಯ 66:8; ಫಿಲಿಪ್ಪಿ 2:15, 16) ಈ ವ್ಯವಸ್ಥಾಪಿತ “ಜನಾಂಗ”ದ ಸಂಖ್ಯೆಯು ಈಗ 55 ಲಕ್ಷಕ್ಕಿಂತಲೂ ಹೆಚ್ಚಾಗಿದೆ. (ಯೆಶಾಯ 60:8-10, 22) ಆದರೂ, ಅದು ದೇವರ ಸಂಸ್ಥೆಯ ಸಂಪೂರ್ಣ ವ್ಯಾಪ್ತಿಯಾಗಿರುವುದಿಲ್ಲ. ದೇವದೂತರೂ ಅದರಲ್ಲಿ ಒಳಗೂಡಿದ್ದಾರೆ.
6. ದೇವರ ಸಂಸ್ಥೆಯು ಅತಿ ವಿಶಾಲಾರ್ಥದಲ್ಲಿ ಯಾರನ್ನು ಒಳಗೊಳ್ಳುತ್ತದೆ?
6 ದೇವದೂತರು, ದೇವರ ಮಾನವ ಸೇವಕರೊಂದಿಗೆ ಜೊತೆಯಾಗಿ ಕೆಲಸಮಾಡಿದ ಅನೇಕ ವಿದ್ಯಮಾನಗಳಿವೆ. (ಆದಿಕಾಂಡ 28:12; ದಾನಿಯೇಲ 10:12-14; 12:1; ಇಬ್ರಿಯ 1:13, 14; ಪ್ರಕಟನೆ 14:14-16) ಸೂಕ್ತವಾಗಿಯೇ, ಮೇ 15, 1925ರ ದ ವಾಚ್ಟವರ್ ಪತ್ರಿಕೆಯು ಹೇಳಿದ್ದು: “ಎಲ್ಲ ಪವಿತ್ರ ದೇವದೂತರು ದೇವರ ಸಂಸ್ಥೆಯ ಭಾಗವಾಗಿದ್ದಾರೆ.” ಅದಕ್ಕೆ ಕೂಡಿಸಿ, ಅದು ಹೇಳಿದ್ದು: “ದೇವರ ಸಂಸ್ಥೆಯ ಶಿರಸ್ಸೋಪಾದಿ, ಎಲ್ಲ ಶಕ್ತಿ ಮತ್ತು ಅಧಿಕಾರವನ್ನು ಹೊಂದಿರುವವನಾಗಿ, ಕರ್ತನಾದ ಯೇಸು ಕ್ರಿಸ್ತನು ಇದ್ದಾನೆ.” (ಮತ್ತಾಯ 28:18) ಆದುದರಿಂದ, ಅತಿ ವಿಶಾಲಾರ್ಥದಲ್ಲಿ ದೇವರ ಸಂಸ್ಥೆಯು, ಆತನ ಚಿತ್ತವನ್ನು ಮಾಡಲು, ಒಟ್ಟಿಗೆ ಕೆಲಸಮಾಡುವ, ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲರನ್ನು ಒಳಗೂಡಿದೆ. (ರೇಖಾಚೌಕವನ್ನು ನೋಡಿರಿ.) ದೇವರ ಸಂಸ್ಥೆಯ ಭಾಗವಾಗಿರುವುದು ಎಂತಹ ಒಂದು ಅದ್ಭುತಕರ ಸುಯೋಗವಾಗಿದೆ! ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲ ಸೃಷ್ಟಿಜೀವಿಗಳು, ಒಟ್ಟಾಗಿ ಯೆಹೋವ ದೇವರನ್ನು ಸ್ತುತಿಸಲು ವ್ಯವಸ್ಥಿತಗೊಳಿಸಲ್ಪಡುವ ಸಮಯಕ್ಕಾಗಿ ಎದುರುನೋಡುವುದು ಎಂತಹ ಆನಂದವಾಗಿರುವುದು! (ಪ್ರಕಟನೆ 5:13, 14) ಆದರೆ, ಇಂದು ದೇವರ ಸಂಸ್ಥೆಯು ಯಾವ ರೀತಿಯ ಸುರಕ್ಷೆಯನ್ನು ಒದಗಿಸುತ್ತದೆ?
ದೇವರ ಸಂಸ್ಥೆಯಲ್ಲಿ ಸಂರಕ್ಷಿಸಲ್ಪಡುವುದು—ಹೇಗೆ?
7. ಯಾವ ವಿಧದಲ್ಲಿ ದೇವರ ಸಂಸ್ಥೆಯು ನಮ್ಮನ್ನು ರಕ್ಷಿಸುತ್ತದೆ?
7 ದೇವರ ಸಂಸ್ಥೆಯು ನಮ್ಮನ್ನು ಸೈತಾನನಿಂದ ಮತ್ತು ಅವನ ಕುಟಿಲತಂತ್ರಗಳಿಂದ ರಕ್ಷಿಸಲು ಸಹಾಯಮಾಡಸಾಧ್ಯವಿದೆ. (ಎಫೆಸ 6:11) ಸೈತಾನನು ಯೆಹೋವನ ಆರಾಧಕರ ಮೇಲೆ ಒತ್ತಡ ತರುವುದು, ಹಿಂಸಿಸುವುದು ಮತ್ತು ಶೋಧನೆಗೆ ಒಳಪಡಿಸುವುದು, ಕೇವಲ ಒಂದೇ ಒಂದು ಉದ್ದೇಶದಿಂದ: ಅದೇನೆಂದರೆ, ‘ಅವರು ನಡೆಯಬೇಕಾದ ದಾರಿ’ಯಿಂದ ಅವರನ್ನು ಹಾದಿತಪ್ಪಿಸಲಿಕ್ಕಾಗಿಯೇ. (ಯೆಶಾಯ 48:17; ಹೋಲಿಸಿ ಮತ್ತಾಯ 4:1-11.) ಈ ವಿಷಯಗಳ ವ್ಯವಸ್ಥೆಯಲ್ಲಿ, ನಾವು ಆ ದಾಳಿಗಳಿಂದ ಎಂದಿಗೂ ಸಂಪೂರ್ಣವಾಗಿ ತಪ್ಪಿಸಿಕೊಳ್ಳಸಾಧ್ಯವಿಲ್ಲ. ಆದರೆ, ದೇವರು ಮತ್ತು ಆತನ ಸಂಸ್ಥೆಯೊಂದಿಗಿನ ನಮ್ಮ ನಿಕಟ ಸಂಬಂಧವು, ನಮ್ಮನ್ನು ಬಲಪಡಿಸಿ ಸಂರಕ್ಷಿಸುತ್ತದೆ, ಮತ್ತು ಹೀಗೆ “ದಾರಿ”ಯಲ್ಲಿ ಉಳಿಯುವಂತೆ ಸಹಾಯಮಾಡುತ್ತದೆ. ಇದರಿಂದಾಗಿ, ನಮ್ಮ ನಿರೀಕ್ಷೆಯನ್ನು ಪಡೆದುಕೊಳ್ಳುವ ವಿಷಯದಲ್ಲಿ ನಾವು ವಿಫಲರಾಗುವುದಿಲ್ಲ.
8. ಯೆಹೋವನ ಅದೃಶ್ಯ ಸಂಸ್ಥೆಯು ತನ್ನ ಭೂಸೇವಕರನ್ನು ಹೇಗೆ ಬೆಂಬಲಿಸುತ್ತದೆ?
8 ದೇವರ ಸಂಸ್ಥೆಯು ಈ ಸಂರಕ್ಷಣೆಯನ್ನು ಹೇಗೆ ಒದಗಿಸುತ್ತದೆ? ಮೊದಲಾಗಿ, ನಮಗೆ ಯೆಹೋವನ ದೂತರ ನಿಶ್ಚಿತ ಬೆಂಬಲವಿದೆ. ಯೇಸು ತೀವ್ರವಾದ ಒತ್ತಡದ ಕೆಳಗಿದ್ದಾಗ, ಅವನೊಬ್ಬ ದೇವದೂತನಿಂದ ಸಾಂತ್ವನ ಪಡೆದುಕೊಂಡನು. (ಲೂಕ 22:43) ಪೇತ್ರನು ಮರಣದ ಬೆದರಿಕೆಯನ್ನು ಎದುರಿಸಿದಾಗ, ಅವನು ಅದ್ಭುತಕರವಾದ ರೀತಿಯಲ್ಲಿ ಒಬ್ಬ ದೇವದೂತನಿಂದ ರಕ್ಷಿಸಲ್ಪಟ್ಟನು. (ಅ. ಕೃತ್ಯಗಳು 12:6-11) ಆ ರೀತಿಯ ಅದ್ಭುತಗಳು ಇಂದು ನಡೆಯದಿದ್ದರೂ, ತಮ್ಮ ಸಾರುವ ಚಟುವಟಿಕೆಯಲ್ಲಿ ಯೆಹೋವನ ಜನರಿಗೆ ದೇವದೂತರ ಬೆಂಬಲವು ವಾಗ್ದಾನಿಸಲ್ಪಟ್ಟಿದೆ. (ಪ್ರಕಟನೆ 14:6, 7) ಕಷ್ಟಕರ ಸನ್ನಿವೇಶಗಳನ್ನು ಎದುರಿಸುವಾಗ, ಅವರು ಅನೇಕ ವೇಳೆ ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಬಲವನ್ನು ಪಡೆದುಕೊಳ್ಳುತ್ತಾರೆ. (2 ಕೊರಿಂಥ 4:7) ಅಲ್ಲದೆ, “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ” ಎಂಬ ಅರಿವು ಅವರಿಗಿದೆ.—ಕೀರ್ತನೆ 34:7.
9, 10. “ಯೆಹೋವನ ನಾಮವು ಬಲವಾದ ಬುರುಜು” ಎಂದು ಹೇಗೆ ಹೇಳಸಾಧ್ಯವಿದೆ, ಮತ್ತು ಈ ತತ್ವವು ಪೂರ್ಣವಾಗಿ ದೇವರ ಸಂಸ್ಥೆಗೆ ಹೇಗೆ ಅನ್ವಯಿಸುತ್ತದೆ?
9 ಯೆಹೋವನ ದೃಶ್ಯ ಸಂಸ್ಥೆಯು ಸಹ ಒಂದು ಸಂರಕ್ಷಣೆಯಾಗಿದೆ. ಹೇಗೆ? ಜ್ಞಾನೋಕ್ತಿ 18:10ರಲ್ಲಿ ನಾವು ಓದುವುದು: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” ದೇವರ ನಾಮವನ್ನು ಮಂತ್ರದಂತೆ ಪಠಿಸುತ್ತಾ ಇರುವುದು ಸಂರಕ್ಷಣೆಯನ್ನು ಒದಗಿಸುತ್ತದೆ ಎಂಬುದನ್ನು ಇದು ಸೂಚಿಸುವುದಿಲ್ಲ. ಬದಲಿಗೆ, ದೇವರ ನಾಮದಲ್ಲಿ ಆಶ್ರಯವನ್ನು ಪಡೆದುಕೊಳ್ಳುವುದೆಂದರೆ, ಸ್ವತಃ ಯೆಹೋವನಲ್ಲೇ ನಾವು ಭರವಸೆ ಇಡುತ್ತೇವೆಂಬುದನ್ನು ಸೂಚಿಸುತ್ತದೆ. (ಕೀರ್ತನೆ 20:1; 122:4) ಅದು ಆತನ ಪರಮಾಧಿಕಾರವನ್ನು ಸಮರ್ಥಿಸುವುದನ್ನು, ಆತನ ನಿಯಮಗಳು ಹಾಗೂ ತತ್ವಗಳನ್ನು ಎತ್ತಿಹಿಡಿಯುವುದನ್ನು, ಮತ್ತು ಆತನ ವಾಗ್ದಾನಗಳಲ್ಲಿ ನಂಬಿಕೆಯುಳ್ಳವರಾಗಿರುವುದನ್ನು ಅರ್ಥೈಸುತ್ತದೆ. (ಕೀರ್ತನೆ 8:1-9; ಯೆಶಾಯ 50:10; ಇಬ್ರಿಯ 11:6) ಅದು ಯೆಹೋವನಿಗೆ ಅನನ್ಯ ಭಕ್ತಿಯನ್ನು ತೋರಿಸುವುದನ್ನು ಒಳಗೊಳ್ಳುತ್ತದೆ. ಯೆಹೋವನನ್ನು ಈ ರೀತಿಯಲ್ಲಿ ಆರಾಧಿಸುವವರು ಮಾತ್ರ, ಕೀರ್ತನೆಗಾರನೊಂದಿಗೆ ಹೀಗೆ ಹೇಳಸಾಧ್ಯವಿದೆ: “[ಯೆಹೋವನಲ್ಲಿ] ನಮ್ಮ ಹೃದಯವು ಸಂತೋಷಿಸುವದು; ಆತನ ಪರಿಶುದ್ಧನಾಮದಲ್ಲಿ ಭರವಸವಿಟ್ಟಿದ್ದೇವೆ.”—ಕೀರ್ತನೆ 33:21; 124:8.
10 ಈಗ ದೇವರ ದೃಶ್ಯ ಸಂಸ್ಥೆಯಲ್ಲಿರುವ ಎಲ್ಲರೂ ಮೀಕನೊಂದಿಗೆ ಹೀಗೆ ಹೇಳುತ್ತಾರೆ: “ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಈ ಆಧುನಿಕ ದಿನದ ಸಂಸ್ಥೆಯು, “ದೇವರ ಇಸ್ರಾಯೇಲ್”ನೊಂದಿಗೆ ಒಂದುಗೂಡಿಸಲ್ಪಟ್ಟಿದೆ. ಇದನ್ನು ಬೈಬಲಿನಲ್ಲಿ “ತನ್ನ ಹೆಸರಿಗಾಗಿ . . . ಒಂದು ಪ್ರಜೆ” ಎಂಬುದಾಗಿ ಕರೆಯಲಾಗಿದೆ. (ಗಲಾತ್ಯ 6:16; ಅ. ಕೃತ್ಯಗಳು 15:14; ಯೆಶಾಯ 43:6, 7; 1 ಪೇತ್ರ 2:17) ಆದಕಾರಣ, ಯೆಹೋವನ ಸಂಸ್ಥೆಯ ಭಾಗವಾಗಿರುವುದು, ದೇವರ ನಾಮದಲ್ಲಿ ಸಂರಕ್ಷಣೆಯನ್ನು ಹುಡುಕುವ ಮತ್ತು ಕಂಡುಕೊಳ್ಳುವ, ಒಂದು ಜನರ ಭಾಗವಾಗಿರುವುದನ್ನು ಅರ್ಥೈಸುತ್ತದೆ.
11. ಯೆಹೋವನ ಸಂಸ್ಥೆಯ ಭಾಗವಾಗಿರುವವರಿಗೆ, ಯಾವ ನಿರ್ದಿಷ್ಟ ವಿಧಗಳಲ್ಲಿ ಅದು ಸಂರಕ್ಷಣೆಯನ್ನು ಒದಗಿಸುತ್ತದೆ?
11 ಇದರೊಂದಿಗೆ, ದೇವರ ದೃಶ್ಯ ಸಂಸ್ಥೆಯು, ನಂಬಿಕೆಯಿಂದ ಬಂಧಿಸಲ್ಪಟ್ಟ ಜನರ ಸಮುದಾಯವಾಗಿದ್ದು, ಒಬ್ಬರು ಮತ್ತೊಬ್ಬರ ಭಕ್ತಿವೃದ್ಧಿಮಾಡಲು ಮತ್ತು ಉತ್ತೇಜಿಸಲು, ಇದು ಜೊತೆ ವಿಶ್ವಾಸಿಗಳ ಒಂದು ಕೂಟವಾಗಿದೆ. (ಜ್ಞಾನೋಕ್ತಿ 13:20; ರೋಮಾಪುರ 1:12) ಇದು, ಕ್ರೈಸ್ತ ಕುರುಬರು ಕುರಿಗಳಂತಹವರನ್ನು ಪರಾಮರಿಕೆ ಮಾಡುವ, ರೋಗಗ್ರಸ್ತರನ್ನು ಮತ್ತು ಖಿನ್ನರನ್ನು ಉತ್ತೇಜಿಸುವ, ಹಾಗೂ ಬಿದ್ದುಹೋಗಿರುವವರನ್ನು ಪುನಸ್ಥಾಪಿಸಲು ಪ್ರಯತ್ನಿಸುವ ಒಂದು ಸ್ಥಳವಾಗಿದೆ. (ಯೆಶಾಯ 32:1, 2; 1 ಪೇತ್ರ 5:2-4) ಈ ಸಂಸ್ಥೆಯ ಮೂಲಕ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು “ಹೊತ್ತುಹೊತ್ತಿಗೆ” ಆಹಾರವನ್ನು ಒದಗಿಸುತ್ತದೆ. (ಮತ್ತಾಯ 24:45) ಅಭಿಷಿಕ್ತ ಕ್ರೈಸ್ತರಿಂದ ರಚಿತವಾಗಿರುವ ಆ “ಆಳು” ವರ್ಗವು, ಆತ್ಮಿಕ ಸುವಿಷಯಗಳಲ್ಲಿ ಅತ್ಯುತ್ತಮವಾದುದನ್ನೇ, ಅಂದರೆ, ನಿತ್ಯ ಜೀವಕ್ಕೆ ನಡೆಸಬಲ್ಲ ಯಥಾರ್ಥವಾದ, ಬೈಬಲ್ ಆಧಾರಿತ ಜ್ಞಾನವನ್ನೇ ಒದಗಿಸುತ್ತದೆ. (ಯೋಹಾನ 17:3) ಈ “ಆಳು” ವರ್ಗದಿಂದ ಬರುವ ಮಾರ್ಗದರ್ಶನದ ಫಲವಾಗಿ, ಕ್ರೈಸ್ತರು ಉಚ್ಚ ಮಟ್ಟದ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳಲು ಮತ್ತು ಅವರ ಸುತ್ತಲಿರುವ ಅಪಾಯಕರ ಪರಿಸರದಲ್ಲಿ “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿ”ರಲು ಅವರಿಗೆ ಸಹಾಯವು ನೀಡಲ್ಪಡುತ್ತದೆ. (ಮತ್ತಾಯ 10:16) ಮತ್ತು ಸದಾ “ಕರ್ತನ ಕೆಲಸದಲ್ಲಿ ಮಾಡಲು ಯಥೇಷ್ಟವಾಗಿರುವಂತೆ” ಅವರಿಗೆ ನೆರವು ನೀಡಲ್ಪಡುತ್ತದೆ, ಇದು ತಾನೇ ಒಂದು ಶಕ್ತಿಶಾಲಿ ಸಂರಕ್ಷಣೆಯಾಗಿದೆ.—1 ಕೊರಿಂಥ 15:58, NW.
ಯಾರು ದೇವರ ಸಂಸ್ಥೆಯ ಭಾಗವಾಗಿದ್ದಾರೆ?
12. ಯಾರು ದೇವರ ಸ್ವರ್ಗೀಯ ಸಂಸ್ಥೆಯ ಭಾಗವಾಗಿ ಗುರುತಿಸಲ್ಪಟ್ಟಿದ್ದಾರೆ?
12 ಈ ಸಂರಕ್ಷಣೆಯು ದೇವರ ಸಂಸ್ಥೆಯ ಭಾಗವಾಗಿರುವವರಿಗೆ ಮಾತ್ರ ಲಭ್ಯವಿರುವುದರಿಂದ, ಇದರಲ್ಲಿ ಯಾರು ಒಳಗೂಡಿದ್ದಾರೆ? ಸ್ವರ್ಗೀಯ ಸಂಸ್ಥೆಯ ಸಂಬಂಧದಲ್ಲಿ, ಈ ಪ್ರಶ್ನೆಗೆ ಉತ್ತರವೇನೆಂಬುದರಲ್ಲಿ ಯಾವ ಸಂಶಯವೂ ಇರುವುದಿಲ್ಲ. ಸೈತಾನನು ಮತ್ತು ಅವನ ದೂತರು ಈಗ ಸ್ವರ್ಗದಲ್ಲಿ ಇಲ್ಲ. ಆದರೆ, ಮತ್ತೊಂದು ಕಡೆಯಲ್ಲಿ, “ಉತ್ಸವಸಂಘದಲ್ಲಿ” ಕೂಡಿರುವ ನಂಬಿಗಸ್ತ ದೇವದೂತರು ಇನ್ನೂ ಅಲ್ಲಿದ್ದಾರೆ. ಕಡೇ ದಿವಸಗಳಲ್ಲಿ “ಕುರಿಮರಿ”ಯು, ಕೆರೂಬಿಯರು (“ನಾಲ್ಕು ಜೀವಿಗಳು”), ಮತ್ತು “ಬಹು ಮಂದಿ ದೇವದೂತ”ರು ದೇವರ ಸಿಂಹಾಸನದ ಸಮೀಪದಲ್ಲಿರುವುದನ್ನು ಅಪೊಸ್ತಲ ಯೋಹಾನನು ಕಂಡನು. ಅವರೊಂದಿಗೆ 24 ಹಿರಿಯರು ಇರುವರು. ಇವರು, ಈಗಾಗಲೇ ತಮ್ಮ ಮಹಿಮಾಭರಿತ ಸ್ವರ್ಗೀಯ ಬಾಧ್ಯತೆಯೊಳಗೆ ಪ್ರವೇಶಿಸಿರುವ ಅಭಿಷಿಕ್ತ ಕ್ರೈಸ್ತರನ್ನು ಪ್ರತಿನಿಧಿಸುತ್ತಾರೆ. (ಇಬ್ರಿಯ 12:22, 23; ಪ್ರಕಟನೆ 5:6, 11; 12:7-12) ಇವರೆಲ್ಲರು ದೇವರ ಸಂಸ್ಥೆಯ ಭಾಗವೆಂಬುದು ಸ್ಪಷ್ಟ. ಆದರೆ ಮಾನವರ ಸಂಬಂಧದಲ್ಲಿ, ವಿಷಯಗಳು ಇಷ್ಟು ಸ್ಪಷ್ಟವಾಗಿರುವುದಿಲ್ಲ.
13. ದೇವರ ಸಂಸ್ಥೆಯ ಭಾಗವಾಗಿರುವವರನ್ನು ಮತ್ತು ಭಾಗವಾಗಿರದಿರುವವರನ್ನು ಯೇಸು ಹೇಗೆ ಗುರುತಿಸಿದನು?
13 ಯೇಸುವನ್ನು ತಾವು ಹಿಂಬಾಲಿಸುತ್ತಿರುವುದಾಗಿ ಪ್ರತಿಪಾದಿಸುವ ಕೆಲವರ ಕುರಿತು ಅವನು ಹೇಳಿದ್ದು: “ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” (ಮತ್ತಾಯ 7:22, 23) ಒಬ್ಬನು ಧರ್ಮವನ್ನು ಮೀರಿನಡೆಯುವವನಾಗಿದ್ದರೆ, ಅವನು ಏನೇ ಹೇಳಿಕೊಳ್ಳಲಿ ಇಲ್ಲವೆ, ಎಲ್ಲಾದರೂ ಆರಾಧಿಸಲಿ, ಅವನು ಖಂಡಿತವಾಗಿಯೂ ದೇವರ ಸಂಸ್ಥೆಯ ಭಾಗವಾಗಿರುವುದಿಲ್ಲ. ದೇವರ ಸಂಸ್ಥೆಯ ಭಾಗವಾಗಿರುವವನನ್ನು ಹೇಗೆ ಗುರುತಿಸುವುದು ಎಂದು ಯೇಸು ತೋರಿಸಿಕೊಟ್ಟನು. ಅವನು ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.”—ಮತ್ತಾಯ 7:21.
14. ದೇವರ ಸಂಸ್ಥೆಯ ಭಾಗವಾಗಿರುವವರು ಮಾಡಲೇಬೇಕಾದ ದೇವರ ಚಿತ್ತದ ಅಂಶಗಳು ಯಾವುವು?
14 ಹೀಗೆ, ದೇವರ ಸಂಸ್ಥೆಯ ಕೇಂದ್ರಭಾಗವು “ಪರಲೋಕರಾಜ್ಯ”ವಾಗಿದ್ದು, ಆ ಸಂಸ್ಥೆಯ ಭಾಗವಾಗಿರಲು ಒಬ್ಬನು ದೇವರ ಚಿತ್ತವನ್ನು ಮಾಡುತ್ತಾ ಇರಬೇಕು. ಹಾಗಾದರೆ, ಆತನ ಚಿತ್ತವೇನಾಗಿದೆ? “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು [ದೇವರ] ಚಿತ್ತವಾಗಿದೆ” ಎಂದು ಪೌಲನು ಹೇಳಿದಾಗ, ಆ ಚಿತ್ತದ ಒಂದು ಮುಖ್ಯಾಂಶವನ್ನು ಗುರುತಿಸಿದನು. (1 ತಿಮೊಥೆಯ 2:4) ವ್ಯಕ್ತಿಯೊಬ್ಬನು ಬೈಬಲಿನಿಂದ ಯಥಾರ್ಥ ಜ್ಞಾನವನ್ನು ಪಡೆದುಕೊಳ್ಳಲು, ತನ್ನ ಜೀವಿತದಲ್ಲಿ ಅದನ್ನು ಅನ್ವಯಿಸಿಕೊಳ್ಳಲು, ಮತ್ತು ‘ಎಲ್ಲ ರೀತಿಯ ಜನರಿಗೆ’ ಅದನ್ನು ಹರಡಿಸಲು ನಿಜವಾಗಿಯೂ ಪ್ರಯತ್ನಿಸುವುದಾದರೆ, ಅವನು ದೇವರ ಚಿತ್ತವನ್ನು ಮಾಡುತ್ತಿದ್ದಾನೆ. (ಮತ್ತಾಯ 28:19, 20; ರೋಮಾಪುರ 10:13-15) ಯೆಹೋವನ ಕುರಿಗಳು ಪೋಷಿಸಲ್ಪಟ್ಟು, ಪರಾಮರಿಸಲ್ಪಡಬೇಕು ಎಂಬುದೂ ದೇವರ ಚಿತ್ತವಾಗಿದೆ. (ಯೋಹಾನ 21:15-17) ಇದರಲ್ಲಿ ಕ್ರೈಸ್ತ ಕೂಟಗಳು ಒಂದು ಅತ್ಯಾವಶ್ಯಕ ಪಾತ್ರವನ್ನು ವಹಿಸುತ್ತವೆ. ಅಂತಹ ಕೂಟಗಳಿಗೆ ಹಾಜರಾಗಲು ಒಬ್ಬನಲ್ಲಿ ಸಮಯವಿದ್ದರೂ ಅದನ್ನು ಕಡೆಗಣಿಸುವುದಾದರೆ, ಅವನು ದೇವರ ಸಂಸ್ಥೆಯಲ್ಲಿ ತನಗಿರುವ ಸ್ಥಾನಕ್ಕಾಗಿ ಗಣ್ಯತೆಯ ಕೊರತೆಯನ್ನು ಪ್ರದರ್ಶಿಸುತ್ತಾನೆ.—ಇಬ್ರಿಯ 10:23-25.
ಲೋಕದೊಂದಿಗಿನ ಸ್ನೇಹ
15. ತನ್ನ ದಿನದ ಸಭೆಗಳಿಗೆ ಯಾಕೋಬನು ಯಾವ ಎಚ್ಚರಿಕೆಯನ್ನು ಕೊಟ್ಟನು?
15 ಯೇಸುವಿನ ಮರಣದ ನಂತರ ಸುಮಾರು 30 ವರ್ಷಗಳ ಬಳಿಕ, ಅವನ ಮಲತಮ್ಮನಾದ ಯಾಕೋಬನು, ದೇವರ ಸಂಸ್ಥೆಯಲ್ಲಿ ಒಬ್ಬನ ಸ್ಥಾನವನ್ನು ಗಂಡಾಂತರಕ್ಕೆ ಗುರಿಮಾಡಸಾಧ್ಯವಿರುವ ಕೆಲವು ಅಂಶಗಳನ್ನು ಗುರುತಿಸಿದನು. ಅವನು ಬರೆದುದು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ದೇವರ ವೈರಿಯು ನಿಶ್ಚಯವಾಗಿಯೂ, ಆತನ ಸಂಸ್ಥೆಯ ಭಾಗವಾಗಿರಲು ಸಾಧ್ಯವಿಲ್ಲ. ಹಾಗಾದರೆ, ಲೋಕದೊಂದಿಗಿನ ಸ್ನೇಹದ ಕುರಿತಾಗಿ ಏನು? ಅದು ಒಬ್ಬನ ತಾಟಸ್ಥ್ಯವನ್ನು ರಾಜಿಮಾಡಿಕೊಳ್ಳುವ ಮತ್ತು ಕೆಟ್ಟ ಸಹವಾಸಿಗಳೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಂತಹ ಇಲ್ಲವೆ ಬೆರೆಯುವಂತಹ ವಿಭಿನ್ನ ವಿಷಯಗಳನ್ನು ಒಳಗೂಡುವುದೆಂದು ವಿವರಿಸಲಾಗಿದೆ. ಇದರೊಂದಿಗೆ, ಯಾಕೋಬನು ಯಾವುದೊ ಒಂದು ನಿರ್ದಿಷ್ಟವಾದ ವಿಷಯದ ಕುರಿತು, ಅಂದರೆ, ಅಯೋಗ್ಯವಾದ ನಡತೆಗೆ ದಾರಿಮಾಡಿಕೊಡುವ ತಪ್ಪಾದ ಮಾನಸಿಕ ಪ್ರವೃತ್ತಿಗಳ ಕುರಿತು ಮಾತಾಡುತ್ತಿದ್ದನು.
16. ಲೋಕದೊಂದಿಗಿನ ಸ್ನೇಹವು ದೇವರೊಂದಿಗೆ ವೈರತ್ವವೆಂಬ ಯಾಕೋಬನ ಎಚ್ಚರಿಕೆಯ ಪೂರ್ವಾಪರವು ಏನಾಗಿತ್ತು?
16 ಯಾಕೋಬ 4:1-3ರಲ್ಲಿ ನಾವು ಓದುವುದು: “ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಹುಟ್ಟುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ಭೋಗಾಶೆಗಳಿಂದಲೇ ಅಲ್ಲವೇ. ನೀವು ಆಶಿಸಿದರೂ ಹೊಂದದೆ ಇದ್ದೀರಿ. ನೀವು ಕೊಲೆಗಾರರಾಗುವಷ್ಟು ಹೊಟ್ಟೆಕಿಚ್ಚು ಪಟ್ಟಾದರೂ ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಯುದ್ಧಮಾಡುತ್ತೀರಿ. ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ. ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸಬೇಕೆಂಬ ದುರಭಿಪ್ರಾಯಪಟ್ಟು ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ.” ಯಾಕೋಬನು ಈ ಮಾತುಗಳನ್ನು ಬರೆದ ನಂತರವೇ, ಲೋಕದೊಂದಿಗಿನ ಸ್ನೇಹದ ಕುರಿತು ಎಚ್ಚರಿಕೆ ನೀಡಿದನು.
17. ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ, ಯಾವ ರೀತಿಯ “ಯುದ್ಧಗಳು” ಮತ್ತು “ಕಾದಾಟಗಳು” ಇದ್ದವು?
17 ಯಾಕೋಬನು ಮರಣಹೊಂದಿ, ಶತಮಾನಗಳು ಗತಿಸಿದ ಬಳಿಕ, ಸುಳ್ಳು ಕ್ರೈಸ್ತರು ಅಕ್ಷರಾರ್ಥವಾಗಿ ಯುದ್ಧಮಾಡಿ, ಒಬ್ಬರನ್ನೊಬ್ಬರು ಕೊಂದುಹಾಕಿದರು. ಆದರೆ, ಯಾಕೋಬನು ಭಾವಿ ಸ್ವರ್ಗೀಯ ‘ಯಾಜಕರೂ ರಾಜರೂ’ ಆಗಿರುವ “ದೇವರ ಇಸ್ರಾಯೇಲ್”ನ ಪ್ರಥಮ ಶತಮಾನದ ಸದಸ್ಯರಿಗೆ ಬರೆಯುತ್ತಿದ್ದನು. (ಪ್ರಕಟನೆ 20:6) ಇವರು ಒಬ್ಬರನ್ನೊಬ್ಬರು ಕೊಲೆಮಾಡಲಿಲ್ಲ ಅಥವಾ ಅಕ್ಷರಾರ್ಥ ಯುದ್ಧಗಳಲ್ಲಿ ಒಬ್ಬರನ್ನೊಬ್ಬರು ಕೊಲ್ಲಲಿಲ್ಲ. ಆದುದರಿಂದ ಯಾಕೋಬನು ಕ್ರೈಸ್ತರೊಳಗೆ ಇಂತಹ ವಿಷಯಗಳ ಕುರಿತು ಏಕೆ ಮಾತಾಡಿದನು? ಏಕೆಂದರೆ, ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನನ್ನು ಅಪೊಸ್ತಲ ಯೋಹಾನನು ಕೊಲೆಗಾರನೆಂದು ಕರೆದನು. ಮತ್ತು ಪೌಲನು ಸಭೆಗಳಲ್ಲಿರುವ ವ್ಯಕ್ತಿತ್ವದ ಘರ್ಷಣೆಗಳು ಮತ್ತು ವೈಷಮ್ಯಗಳನ್ನು, ‘ಜಗಳಗಳು’ ಮತ್ತು ‘ವಾಗ್ವಾದಗಳು’ ಎಂಬುದಾಗಿ ಸೂಚಿಸಿ ಮಾತಾಡಿದನು. (ತೀತ 3:9; 2 ತಿಮೊಥೆಯ 2:14; 1 ಯೋಹಾನ 3:15-17) ಇದೇ ವಿಷಯಕ್ಕೆ ಸಮಾನವಾಗಿ, ಜೊತೆ ಕ್ರೈಸ್ತರಿಗೆ ಪ್ರೀತಿಯನ್ನು ತೋರಿಸುವುದರಲ್ಲಿ ತಪ್ಪಿಹೋಗುವ ವಿಷಯವೇ ಯಾಕೋಬನ ಮನಸ್ಸಿನಲ್ಲಿತ್ತೆಂಬುದು ಸ್ಪಷ್ಟ. ಲೋಕದಲ್ಲಿರುವವರು ಒಬ್ಬರು ಮತ್ತೊಬ್ಬರೊಂದಿಗೆ ಅನೇಕ ವೇಳೆ ವ್ಯವಹರಿಸುವ ವಿಧದಲ್ಲೇ ಕ್ರೈಸ್ತರು ತಮ್ಮ ತಮ್ಮೊಳಗೆ ವ್ಯವಹರಿಸುತ್ತಿದ್ದರು.
18. ಕ್ರೈಸ್ತರೊಳಗೆ ಪ್ರೀತಿಪೂರ್ಣವಲ್ಲದ ಕ್ರಿಯೆಗಳಿಗೆ ಮತ್ತು ಅನಿಸಿಕೆಗಳಿಗೆ ಯಾವುದು ನಡಿಸಬಲ್ಲದು?
18 ಅಂತಹ ವಿಷಯಗಳು ಕ್ರೈಸ್ತ ಸಭೆಗಳಲ್ಲಿ ಏಕೆ ಸಂಭವಿಸಿದವು? ಅತ್ಯಾಶೆ ಮತ್ತು ‘ಭೋಗಾಸಕ್ತಿ’ಗಳಂತಹ ತಪ್ಪಾದ ಪ್ರವೃತ್ತಿಗಳಿಂದಲೇ ಇವು ಸಂಭವಿಸಿದವು. ಅಹಂಕಾರ, ಹೊಟ್ಟೆಕಿಚ್ಚು, ಮತ್ತು ಮಹತ್ವಾಕಾಂಕ್ಷೆಯು ಸಹ, ಸಭೆಯಲ್ಲಿರುವ ಪ್ರೀತಿಪೂರ್ಣ ಕ್ರೈಸ್ತ ಸಾಹಚರ್ಯವನ್ನು ಛಿದ್ರಗೊಳಿಸಬಲ್ಲದು. (ಯಾಕೋಬ 3:6, 14) ಇಂತಹ ಪ್ರವೃತ್ತಿಗಳು ಒಬ್ಬನನ್ನು ಲೋಕದ ಸ್ನೇಹಿತನನ್ನಾಗಿ, ಮತ್ತು ಹೀಗೆ ದೇವರ ವೈರಿಯನ್ನಾಗಿ ಮಾಡುತ್ತವೆ. ಇಂತಹ ಪ್ರವೃತ್ತಿಗಳಿಗೆ ಎಡೆಕೊಡುವ ಯಾರೂ ದೇವರ ಸಂಸ್ಥೆಯ ಭಾಗವಾಗಿ ಪರಿಗಣಿಸಲ್ಪಡುವಂತೆ ನಿರೀಕ್ಷಿಸಸಾಧ್ಯವಿಲ್ಲ.
19. (ಎ) ಕ್ರೈಸ್ತನೊಬ್ಬನು ತನ್ನ ಹೃದಯದಲ್ಲಿ ತಪ್ಪಾದ ಆಲೋಚನೆಯು ಬೇರೂರುತ್ತಿದೆ ಎಂಬುದನ್ನು ಕಂಡುಕೊಳ್ಳುವಲ್ಲಿ, ಪ್ರಥಮವಾಗಿ ದೂಷಣೆಗೆ ಯಾರು ಅರ್ಹರು? (ಬಿ) ಕ್ರೈಸ್ತನೊಬ್ಬನು ತಪ್ಪಾದ ಆಲೋಚನೆಯನ್ನು ಹೇಗೆ ಜಯಿಸಬಲ್ಲನು?
19 ತಪ್ಪಾದ ಆಲೋಚನೆಯು ನಮ್ಮ ಹೃದಯದಲ್ಲಿ ಬೇರೂರುತ್ತಿರುವುದು ನಮಗೆ ತಿಳಿದುಬರುವುದಾದರೆ, ನಾವು ಯಾರನ್ನು ದೂಷಿಸಸಾಧ್ಯವಿದೆ? ಸೈತಾನನನ್ನೊ? ಒಂದಿಷ್ಟು ಮಟ್ಟಿಗೆ ಹೌದು. ಅವನು ಈ ಲೋಕದ “ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿ”ಯಾಗಿದ್ದಾನೆ. ಮತ್ತು ಈ ಲೋಕದಲ್ಲಿ ಅಂತಹ ಪ್ರವೃತ್ತಿಗಳು ವ್ಯಾಪಕವಾಗಿ ಹರಡಿಕೊಂಡಿವೆ. (ಎಫೆಸ 2:1, 2; ತೀತ 2:12) ಸಾಮಾನ್ಯವಾಗಿ, ತಪ್ಪಾದ ಆಲೋಚನೆಯ ಬೇರುಗಳು, ನಮ್ಮ ಅಪರಿಪೂರ್ಣ ಶರೀರದಲ್ಲಿ ನೆಲೆಸಿರುತ್ತವೆ. ಲೋಕದೊಂದಿಗಿನ ಸ್ನೇಹದ ಕುರಿತು ಎಚ್ಚರನೀಡಿದ ಬಳಿಕ, ಯಾಕೋಬನು ಬರೆದುದು: “ನಮ್ಮಲ್ಲಿ ಇರುವ ಮನೋವೃತ್ತಿಯು, ಹೊಟ್ಟೆಕಿಚ್ಚು ಪಡುವ ಸ್ವಾಭಾವಿಕ ಪ್ರವೃತ್ತಿಯಿಂದ ನಮಗೋಸ್ಕರ ಹಂಬಲಿಸುತ್ತದೆ ಎಂಬ ಶಾಸ್ತ್ರೋಕ್ತಿ ಬರೀ ಮಾತೆಂದು ಭಾವಿಸುತ್ತೀರೋ?” (ಯಾಕೋಬ 4:5, NW) ತಪ್ಪುಮಾಡುವ ಸ್ವಾಭಾವಿಕ ಪ್ರವೃತ್ತಿಯು ನಮ್ಮೆಲ್ಲರಲ್ಲಿಯೂ ಇದೆ. (ಆದಿಕಾಂಡ 8:21; ರೋಮಾಪುರ 7:18-20) ಆದರೆ ನಾವು ನಮ್ಮ ಬಲಹೀನತೆಗಳನ್ನು ಒಪ್ಪಿಕೊಂಡು, ಅವುಗಳನ್ನು ಜಯಿಸಲು ಯೆಹೋವನ ಸಹಾಯದ ಮೇಲೆ ಅವಲಂಬಿಸುವುದಾದರೆ, ನಾವು ಆ ಪ್ರವೃತ್ತಿಯ ವಿರುದ್ಧ ಹೋರಾಡಸಾಧ್ಯವಿದೆ. ಯಾಕೋಬನು ಹೇಳುವುದು: “[ದೇವರು] ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು [ಹೊಟ್ಟೆಕಿಚ್ಚು ಪಡುವ ಸ್ವಾಭಾವಿಕ ಒಲವಿಗಿಂತ ಹೆಚ್ಚಿನದ್ದನ್ನು] ಇಡುತ್ತಾನೆ.” (ಯಾಕೋಬ 4:6) ದೇವರ ಪವಿತ್ರಾತ್ಮ ಮತ್ತು ನಂಬಿಗಸ್ತ ಕ್ರೈಸ್ತ ಸಹೋದರರ ಸಹಾಯದ ಫಲವಾಗಿ, ಮತ್ತು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯದಿಂದಾಗಿ, ಶಾರೀರಿಕ ಬಲಹೀನತೆಗಳು ನಂಬಿಗಸ್ತ ಕ್ರೈಸ್ತರ ಮೇಲೆ ಜಯವನ್ನು ಪಡೆಯುವುದಿಲ್ಲ. (ರೋಮಾಪುರ 7:24, 25) ಅವರು ಲೋಕದ ಸ್ನೇಹಿತರಾಗಿರದೆ, ದೇವರ ಸ್ನೇಹಿತರಾಗಿದ್ದು, ದೇವರ ಸಂಸ್ಥೆಯಲ್ಲಿ ಸುರಕ್ಷಿತರಾಗಿದ್ದಾರೆ.
20. ದೇವರ ಸಂಸ್ಥೆಯ ಭಾಗವಾಗಿರುವವರು ಯಾವ ಸಮೃದ್ಧ ಆಶೀರ್ವಾದಗಳಲ್ಲಿ ಆನಂದಿಸುತ್ತಾರೆ?
20 ಬೈಬಲು ಹೀಗೆ ವಾಗ್ದಾನಿಸುತ್ತದೆ: “ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.” (ಕೀರ್ತನೆ 29:11) ನಾವು ನಿಜವಾಗಿಯೂ ಯೆಹೋವನ ದೃಶ್ಯ ಸಂಸ್ಥೆಯ, ಆಧುನಿಕ ದಿನದ “ಜನಾಂಗ”ದ ಭಾಗವಾಗಿರುವುದಾದರೆ, ಆತನು ತನ್ನ ಜನರಿಗೆ ನೀಡುವ ಬಲದಲ್ಲಿ ಪಾಲ್ಗೊಂಡು, ಅವರಿಗೆ ದಯಪಾಲಿಸುವ ಶಾಂತಿಯಲ್ಲಿ ನಾವು ಆನಂದಿಸುವೆವು. ಸೈತಾನನ ಲೋಕವು ಯೆಹೋವನ ದೃಶ್ಯ ಸಂಸ್ಥೆಗಿಂತ ತುಂಬ ದೊಡ್ಡದಾಗಿದೆ ಮತ್ತು ಸೈತಾನನು ನಮಗಿಂತ ತುಂಬ ಬಲಶಾಲಿಯಾಗಿದ್ದಾನೆಂಬುದು ನಿಜ. ಆದರೆ ಯೆಹೋವನು ಸರ್ವಶಕ್ತನು. ಆತನ ಸಕ್ರಿಯ ಶಕ್ತಿಯು ಜಯಿಸಲಸಾಧ್ಯವಾದದ್ದಾಗಿದೆ. ದೇವರಿಗೆ ಸೇವೆಸಲ್ಲಿಸುವುದರಲ್ಲಿ ಆತನ ಶಕ್ತಿಶಾಲಿ ದೂತರೂ ನಮ್ಮೊಂದಿಗೆ ಐಕ್ಯರಾಗಿದ್ದಾರೆ. ಹೀಗೆ, ನಾವು ಎದುರಿಸುವ ದ್ವೇಷದ ಎದುರಿನಲ್ಲೂ, ನಾವು ದೃಢರಾಗಿ ನಿಲ್ಲಬಲ್ಲೆವು. ಯೇಸುವಿನಂತೆ, ನಾವು ಲೋಕವನ್ನು ಜಯಿಸಬಲ್ಲೆವು.—ಯೋಹಾನ 16:33; 1 ಯೋಹಾನ 4:4.
ನೀವು ವಿವರಿಸಬಲ್ಲಿರೊ?
◻ ದೇವರ ದೃಶ್ಯ ಸಂಸ್ಥೆಯು ಏನಾಗಿದೆ?
◻ ಯಾವ ವಿಧಗಳಲ್ಲಿ ದೇವರ ಸಂಸ್ಥೆಯು ಸಂರಕ್ಷಣೆಯನ್ನು ಒದಗಿಸುತ್ತದೆ?
◻ ದೇವರ ಸಂಸ್ಥೆಯ ಭಾಗವಾಗಿರುವವರು ಯಾರು?
◻ ಲೋಕದ ಸ್ನೇಹಿತರಾಗಿರುವುದರಿಂದ ನಾವು ಹೇಗೆ ದೂರವಿರಸಾಧ್ಯವಿದೆ?
[ಪುಟ 9 ರಲ್ಲಿರುವ ಚೌಕ]
ದೇವರ ಸಂಸ್ಥೆಯು ಏನಾಗಿದೆ?
ಯೆಹೋವನ ಸಾಕ್ಷಿಗಳ ಸಾಹಿತ್ಯದಲ್ಲಿ, “ದೇವರ ಸಂಸ್ಥೆ” ಎಂಬ ಅಭಿವ್ಯಕ್ತಿಯು ಮೂರು ವಿಧಗಳಲ್ಲಿ ಬಳಸಲ್ಪಟ್ಟಿದೆ.
1 ನಂಬಿಗಸ್ತ ಆತ್ಮ ಜೀವಿಗಳಿಂದ ರಚಿಸಲ್ಪಟ್ಟ ಯೆಹೋವನ ಸ್ವರ್ಗೀಯ, ಅದೃಶ್ಯ ಸಂಸ್ಥೆ. ಇದನ್ನು ಬೈಬಲಿನಲ್ಲಿ “ಮೇಲಣ ಯೆರೂಸಲೇಮ್” ಎಂಬುದಾಗಿ ಕರೆಯಲಾಗಿದೆ.—ಗಲಾತ್ಯ 4:26.
2 ಯೆಹೋವನ ಮಾನವ, ದೃಶ್ಯ ಸಂಸ್ಥೆ. ಇಂದು ಇದರಲ್ಲಿ ಅಭಿಷಿಕ್ತ ಉಳಿಕೆಯವರು, ಅವರೊಂದಿಗೆ ಮಹಾ ಸಮೂಹದವರು ಸೇರಿಕೊಂಡಿರುತ್ತಾರೆ.
3 ಯೆಹೋವನ ವಿಶ್ವ ಸಂಸ್ಥೆ. ಅದರಲ್ಲಿ, ಯೆಹೋವನ ಸ್ವರ್ಗೀಯ ಸಂಸ್ಥೆಯೊಂದಿಗೆ, ಭೂಮಿಯಿಂದ ತೆಗೆದುಕೊಳ್ಳಲ್ಪಟ್ಟ, ಆತ್ಮಿಕ ನಿರೀಕ್ಷೆಯಿರುವ ಅಭಿಷಿಕ್ತ ದತ್ತುಪುತ್ರರು ಸೇರಿರುತ್ತಾರೆ. ಸಕಾಲದಲ್ಲಿ, ಅದು ಭೂಮಿಯ ಮೇಲಿರುವ ಪರಿಪೂರ್ಣರಾದ ಮಾನವರನ್ನೂ ಒಳಗೊಳ್ಳುವುದು.
[ಪುಟ 10 ರಲ್ಲಿರುವ ಚಿತ್ರ]
ಅತ್ಯುತ್ತಮವಾದ ಆತ್ಮಿಕ ಆಹಾರವು ಯೆಹೋವನ ಸಂಸ್ಥೆಯ ಮೂಲಕ ನೀಡಲ್ಪಡುತ್ತದೆ