ನಂಬಿಕೆ ನಮ್ಮನ್ನು ತಾಳ್ಮೆಯುಳ್ಳವರು ಮತ್ತು ಪ್ರಾರ್ಥನಾಪರರಾಗಿ ಮಾಡುತ್ತದೆ
“ತಾಳ್ಮೆಯನ್ನು ಅಭ್ಯಾಸಿಸಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಏಕೆಂದರೆ ಕರ್ತನ ಸಾನ್ನಿಧ್ಯವು ಸಮೀಪವಾಗಿದೆ.”—ಯಾಕೋಬ 5:8, NW.
1.ಯಾಕೋಬ 5:7, 8ರ ಮೇಲೆ ನಾವು ಏಕೆ ಪುನರಾಲೋಚನೆ ಮಾಡಬೇಕು?
ಯೇಸು ಕ್ರಿಸ್ತನ ದೀರ್ಘ ನಿರೀಕ್ಷಿತ “ಸಾನ್ನಿಧ್ಯ”ವು ಈಗೊಂದು ವಾಸ್ತವಾಂಶ. (ಮತ್ತಾಯ 24:3-14, NW) ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಳ್ಳುವ ಸಕಲರಿಗೂ, ಶಿಷ್ಯ ಯಾಕೋಬನ ಈ ಮಾತುಗಳನ್ನು ಪುನರಾಲೋಚಿಸಲು, ಹಿಂದೆಂದಿಗಿಂತಲೂ ಹೆಚ್ಚು ಕಾರಣವಿದೆ: “ಸಹೋದರರೇ, ಕರ್ತನ ಸಾನ್ನಿಧ್ಯದ ತನಕ . . . ತಾಳ್ಮೆಯನ್ನು ಅಭ್ಯಾಸಿಸಿರಿ. ನೋಡಿ! ವ್ಯವಸಾಯಗಾರನು ಭೂಮಿಯ ಅಮೂಲ್ಯ ಫಲಕ್ಕಾಗಿ ಕಾಯುತ್ತಿದ್ದು, ಮುಂಗಾರು ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯನ್ನು ಅಭ್ಯಾಸಿಸುತ್ತಿರುತ್ತಾನೆ. ನೀವೂ ತಾಳ್ಮೆಯನ್ನು ಅಭ್ಯಾಸಿಸಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಏಕೆಂದರೆ ಕರ್ತನ ಸಾನ್ನಿಧ್ಯವು ಸಮೀಪವಾಗಿದೆ.”—ಯಾಕೋಬ 5:7, 8, NW.
2.ಯಾಕೋಬನು ಯಾರಿಗೆ ಬರೆದನೊ ಅವರು ಎದುರಿಸಿದ ಕೆಲವು ಸಮಸ್ಯೆಗಳಾವುವು?
2 ಯಾಕೋಬನು ಯಾರಿಗೆ ತನ್ನ ಪ್ರೇರಿತ ಪತ್ರವನ್ನು ಬರೆದನೊ ಅವರು ತಾಳ್ಮೆಯನ್ನು ಅಭ್ಯಾಸಿಸಿ, ವಿವಿಧ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿತ್ತು. ಅನೇಕರು, ದೇವರಲ್ಲಿ ನಂಬಿಕೆಯಿದೆಯೆಂದು ಹೇಳಿಕೊಳ್ಳುವವರಿಂದ ಅಪೇಕ್ಷಿತ ವಿಷಯಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದರು. ಉದಾಹರಣೆಗೆ, ಕೆಲವು ಹೃದಯಗಳಲ್ಲಿ ವಿಕಾಸಗೊಂಡಿದ್ದ ಕೆಲವು ಆಸೆಗಳ ವಿಷಯದಲ್ಲಿ ಏನನ್ನೊ ಮಾಡಬೇಕಾಗಿತ್ತು. ಆ ಆದಿ ಕ್ರೈಸ್ತರ ಮಧ್ಯೆ ಪ್ರಶಾಂತತೆ ಪುನಸ್ಸ್ಥಾಪಿಸಲ್ಪಡಬೇಕಾಗಿತ್ತು. ತಾಳ್ಮೆಯುಳ್ಳವರೂ ಪ್ರಾರ್ಥನಾಪರರೂ ಆಗಿರುವುದರ ವಿಷಯದಲ್ಲಿ ಸಲಹೆಯೂ ಅವರಿಗೆ ಬೇಕಾಗಿತ್ತು. ಯಾಕೋಬನು ಅವರಿಗೆ ಹೇಳಿದ್ದನ್ನು ನಾವು ಪರಿಗಣಿಸುವಾಗ, ಅವನ ಮಾತುಗಳನ್ನು ನಾವು ನಮ್ಮ ಜೀವಿತಗಳಲ್ಲಿ ಹೇಗೆ ಅನ್ವಯಿಸಿಕೊಳ್ಳಬಲ್ಲೆವೆಂಬುದನ್ನು ನೋಡೋಣ.
ದುರಾಶೆಗಳು ನಾಶಕಾರಕ
3.ಸಭಾ ಕಲಹದ ಕಾರಣಗಳು ಯಾವುವಾಗಿದ್ದವು, ಮತ್ತು ಇದರಿಂದ ನಾವೇನನ್ನು ಕಲಿಯಬಲ್ಲೆವು?
3 ಕೆಲವು ಹೊರತೋರಿಕೆಯ ಕ್ರೈಸ್ತರ ಮಧ್ಯೆ ಶಾಂತಿಯ ಕೊರತೆಯಿತ್ತು ಮತ್ತು ದುರಾಶೆಗಳು ಈ ಸ್ಥಿತಿಗತಿಯ ಮೂಲಕಾರಣವಾಗಿದ್ದವು. (ಯಾಕೋಬ 4:1-3) ಜಗಳಗಂಟಿತನ ಒಡಕನ್ನುಂಟುಮಾಡುತ್ತಿತ್ತು ಮತ್ತು ಕೆಲವರು ತಮ್ಮ ಸಹೋದರರನ್ನು ಪ್ರೀತಿರಹಿತವಾಗಿ ಖಂಡಿಸುತ್ತಿದ್ದರು. ಇಂದ್ರಿಯಸುಖದ ಕಡುಬಯಕೆಗಳು ಅವರ ಇಂದ್ರಿಯಗಳಲ್ಲಿ ಹೋರಾಟವನ್ನು ಮುಂದುವರಿಸುತ್ತಿದ್ದುದರಿಂದಲೇ ಇದು ನಡೆಯುತ್ತಿತ್ತು. ನಾವು ಸಭೆಯ ಶಾಂತಿಗೆ ಯಾವ ಒಡಕನ್ನೂ ಉಂಟುಮಾಡದಿರುವಂತೆ, ಪ್ರಶಸ್ತಿ, ಅಧಿಕಾರ ಮತ್ತು ಸ್ವತ್ತುಗಳಿಗಾಗಿರುವ ಮಾಂಸಿಕ ಕಡುಬಯಕೆಗಳನ್ನು ತಡೆಯಲು ಸಹಾಯಕ್ಕಾಗಿ ಸ್ವತಃ ಪ್ರಾರ್ಥಿಸಬೇಕಾಗಬಹುದು. (ರೋಮಾಪುರ 7:21-25; 1 ಪೇತ್ರ 2:11) ಒಂದನೆಯ ಶತಮಾನದ ಕೆಲವು ಮಂದಿ ಕ್ರೈಸ್ತರ ಮಧ್ಯೆ, ದುರಾಶೆಯು ದ್ವೇಷವುಳ್ಳ, ಹಂತಕ ಮನೋಭಾವದ ವರೆಗೂ ವಿಕಾಸಗೊಂಡಿತ್ತು. ದೇವರು ಅವರ ದುರಾಶೆಗಳನ್ನು ನೆರವೇರಿಸದೆ ಇದ್ದುದರಿಂದ, ಅವರು ತಮ್ಮ ಗುರಿಗಳನ್ನು ಸಾಧಿಸುವ ಪ್ರಯತ್ನದಲ್ಲಿ ಜಗಳವಾಡುತ್ತ ಇದ್ದರು. ನಮಗೆ ತದ್ರೀತಿಯ ದುರಾಶೆಗಳಿರುವಲ್ಲಿ, ನಮ್ಮ ಪವಿತ್ರ ದೇವರು ಅಂತಹ ಪ್ರಾರ್ಥನೆಗಳಿಗೆ ಉತ್ತರಕೊಡುವುದಿಲ್ಲವಾದ ಕಾರಣ, ನಾವು ಕೇಳಿಕೊಂಡರೂ ಪಡೆಯಲಾರೆವು.—ಪ್ರಲಾಪಗಳು 3:44; 3 ಯೋಹಾನ 9, 10.
4.ಯಾಕೋಬನು ಕೆಲವರನ್ನು ‘ವ್ಯಭಿಚಾರಿಣಿಯರು’ ಎಂದು ಏಕೆ ಕರೆಯುತ್ತಾನೆ, ಮತ್ತು ಅವನ ಹೇಳಿಕೆ ನಮ್ಮನ್ನು ಹೇಗೆ ಪ್ರಭಾವಿಸಬೇಕು?
4 ಪ್ರಪಂಚಾಸಕ್ತಿ, ಅಸೂಯೆ ಮತ್ತು ದುರಹಂಕಾರವು ಕೆಲವು ಆದಿ ಕ್ರೈಸ್ತರ ಮಧ್ಯೆ ಅಸ್ತಿತ್ವದಲ್ಲಿತ್ತು. (ಯಾಕೋಬ 4:4-6) ಯಾಕೋಬನು ಕೆಲವರನ್ನು ‘ವ್ಯಭಿಚಾರಿಣಿಯರು’ (NW) ಎಂದು ಕರೆಯುತ್ತಾನೆ. ಏಕೆಂದರೆ ಅವರು ಲೋಕದ ಸ್ನೇಹಿತರಾಗಿದ್ದುದರಿಂದ ಆತ್ಮಿಕ ವ್ಯಭಿಚಾರದ ವಿಷಯದಲ್ಲಿ ದೋಷಿಗಳಾಗಿದ್ದರು. (ಯೆಹೆಜ್ಕೇಲ 16:15-19, 25-45) ನಾವು ಮನೋಭಾವದಲ್ಲಿ, ನುಡಿಯಲ್ಲಿ ಮತ್ತು ಕ್ರಿಯೆಗಳಲ್ಲಿ ಲೌಕಿಕರಾಗಿರಲು ಖಂಡಿತವಾಗಿಯೂ ಬಯಸುವುದಿಲ್ಲ, ಏಕೆಂದರೆ ಅದು ನಮ್ಮನ್ನು ದೇವರ ವೈರಿಗಳನ್ನಾಗಿ ಮಾಡುತ್ತದೆ. ‘ಒಂದು ಅಸೂಯಾ ಪ್ರವೃತ್ತಿಯು’ (NW), ಪಾಪಪೂರ್ಣ ಮಾನವರಲ್ಲಿರುವ ದುಷ್ಪ್ರವೃತ್ತಿಯ ಅಥವಾ “ಆತ್ಮ”ದ ಭಾಗವಾಗಿದೆಯೆಂದು ಆತನ ವಾಕ್ಯವು ನಮಗೆ ತೋರಿಸುತ್ತದೆ. (ಆದಿಕಾಂಡ 8:21; ಅರಣ್ಯಕಾಂಡ 16:1-3; ಕೀರ್ತನೆ 106:16, 17; ಪ್ರಸಂಗಿ 4:4) ಆದುದರಿಂದ ಅಸೂಯೆ, ದುರಹಂಕಾರ ಅಥವಾ ಇನ್ನಿತರ ದುಷ್ಪ್ರವೃತ್ತಿಯ ವಿರುದ್ಧ ಹೋರಾಡಬೇಕೆಂದು ನಮಗೆ ಕಂಡುಬರುವುದಾದರೆ, ನಾವು ಪವಿತ್ರಾತ್ಮದ ಮೂಲಕ ದೇವರ ಸಹಾಯವನ್ನು ಕೇಳಿಕೊಳ್ಳೋಣ. ದೇವರ ಅಪಾತ್ರ ದಯೆಯಿಂದ ಒದಗಿಸಲ್ಪಟ್ಟಿದ್ದು, ಆ ಬಲವು ‘ಅಸೂಯಾ ಪ್ರವೃತ್ತಿ’ಗಿಂತ ದೊಡ್ಡದಾಗಿದೆ. ಮತ್ತು ಯೆಹೋವನು ದುರಹಂಕಾರಿಗಳನ್ನು ವಿರೋಧಿಸುವಾಗ, ನಾವು ಪಾಪ ಪ್ರವೃತ್ತಿಗಳ ವಿರುದ್ಧ ಹೋರಾಡುವಲ್ಲಿ, ಆತನು ನಮಗೆ ಅಪಾತ್ರ ದಯೆಯನ್ನು ಕೊಡುವನು.
5.ದೇವರ ಅಪಾತ್ರ ದಯೆಯನ್ನು ಅನುಭವಿಸಲು ನಾವು ಯಾವ ಆವಶ್ಯಕತೆಗಳನ್ನು ಮುಟ್ಟಬೇಕು?
5 ದೇವರ ಅಪಾತ್ರ ದಯೆಯನ್ನು ನಾವು ಹೇಗೆ ಪಡೆಯಬಲ್ಲೆವು? (ಯಾಕೋಬ 4:7-10) ಯೆಹೋವನಿಂದ ಅಪಾತ್ರ ದಯೆಯನ್ನು ಅನುಭವಿಸಲು, ನಾವು ಆತನಿಗೆ ವಿಧೇಯರಾಗಿ, ಆತನ ಒದಗಿಸುವಿಕೆಗಳನ್ನು ಅಂಗೀಕರಿಸಿ, ಆತನು ಅಪೇಕ್ಷಿಸುವ ಯಾವುದೇ ವಿಷಯಗಳಿಗೆ ಅಧೀನರಾಗಿರಬೇಕು. (ರೋಮಾಪುರ 8:28) ನಾವು ಪಿಶಾಚನನ್ನು ಸಹ “ಎದುರಿಸ”ಬೇಕು ಅಥವಾ ಅವನಿಗೆ ‘ಎದುರಾಗಿ ನಿಲ್ಲಬೇಕು.’ ಯೆಹೋವನ ವಿಶ್ವ ಪರಮಾಧಿಕಾರದ ಬೆಂಬಲಿಗರಾಗಿ ನಾವು ದೃಢವಾಗಿ ನಿಲ್ಲುವಲ್ಲಿ, ಅವನು ನಮ್ಮಿಂದ ‘ಓಡಿಹೋಗುವನು.’ ನಮಗೆ ಯಾವುದೂ ಖಾಯಂ ಹಾನಿಯನ್ನು ಮಾಡದಿರುವಂತೆ, ಲೋಕದ ದುಷ್ಟ ಸಾಧನಗಳನ್ನು ನಿರೋಧಿಸುವ ಯೇಸುವಿನ ಸಹಾಯ ನಮಗಿದೆ. ಮತ್ತು ಇದನ್ನು ಎಂದಿಗೂ ಮರೆಯಬೇಡಿ: ಪ್ರಾರ್ಥನೆ, ವಿಧೇಯತೆ ಮತ್ತು ನಂಬಿಕೆಯ ಮೂಲಕ ನಾವು ದೇವರ ಸಮೀಪಕ್ಕೆ ಬರುತ್ತೇವೆ ಮತ್ತು ಆತನು ನಮಗೆ ನಿಕಟವಾಗಿ ಪರಿಣಮಿಸುತ್ತಾನೆ.—2 ಪೂರ್ವಕಾಲವೃತ್ತಾಂತ 15:2.
6.ಯಾಕೋಬನು ಕೆಲವು ಮಂದಿ ಕ್ರೈಸ್ತರನ್ನು “ಪಾಪಿಗಳು” ಎಂದು ಏಕೆ ಕರೆಯುತ್ತಾನೆ?
6 ದೇವರಲ್ಲಿ ನಂಬಿಕೆಯಿದೆಯೆಂದು ಹೇಳಿಕೊಳ್ಳುವ ಕೆಲವರಿಗೆ ಯಾಕೋಬನು “ಪಾಪಿಗಳೇ” ಎಂಬ ಪದವನ್ನು ಬಳಸುವುದೇಕೆ? ಏಕೆಂದರೆ ಅವರು “ಯುದ್ಧಗಳು” ಮತ್ತು ಹಂತಕ ದ್ವೇಷದ ವಿಷಯದಲ್ಲಿ ಅಪರಾಧಿಗಳಾಗಿದ್ದರು. ಇವು ಕ್ರೈಸ್ತರಿಗೆ ಅನಂಗೀಕೃತವಾದ ಮನೋಭಾವಗಳು. (ತೀತ 3:3) ದುಷ್ಕಾರ್ಯಗಳಿಂದ ತುಂಬಿರುವ ಅವರ “ಕೈಗಳನ್ನು” ತೊಳೆದುಕೊಳ್ಳುವ ಅಗತ್ಯ ಅವರಿಗಿತ್ತು. ಪ್ರೇರಣೆಯ ಪೀಠವಾದ “ಹೃದಯಗಳನ್ನು” ಸಹ ಅವರು ಶುದ್ಧಗೊಳಿಸಿಕೊಳ್ಳಬೇಕಾಗಿತ್ತು. (ಮತ್ತಾಯ 15:18, 19) ಆ “ಎರಡು ಮನಸ್ಸುಳ್ಳವರು” ದೇವರೊಂದಿಗಿನ ಸ್ನೇಹ ಮತ್ತು ಲೋಕದ ಸ್ನೇಹದ ಮಧ್ಯೆ ಅಸ್ಥಿರರಾಗಿದ್ದರು. ಅವರ ಕೆಟ್ಟ ಮಾದರಿಯಿಂದ ಎಚ್ಚರಿಸಲ್ಪಟ್ಟವರಾಗಿ, ಅಂತಹ ವಿಷಯಗಳು ನಮ್ಮ ನಂಬಿಕೆಯನ್ನು ಕೆಡಿಸದಂತೆ, ನಾವು ಎಡೆಬಿಡದೆ ಎಚ್ಚರವಾಗಿರೋಣ.—ರೋಮಾಪುರ 7:18-20.
7.ಯಾಕೋಬನು ಕೆಲವರಿಗೆ, ಅವರು ‘ದುಃಖಿಸಿ, ಗೋಳಾಡ’ಬೇಕೆಂದು ಹೇಳುವುದೇಕೆ?
7 “ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ” ಎಂದು ಯಾಕೋಬನು ತನ್ನ ಓದುಗರಿಗೆ ಹೇಳುತ್ತಾನೆ. ಅವರು ದೇವಭಕ್ತಿಯ ದುಃಖವನ್ನು ಪ್ರದರ್ಶಿಸುವಲ್ಲಿ, ಅದು ಪಶ್ಚಾತ್ತಾಪದ ಸಾಕ್ಷ್ಯವಾಗಿರುವುದು. (2 ಕೊರಿಂಥ 7:10, 11) ಇಂದು, ತಮಗೆ ನಂಬಿಕೆಯಿದೆಯೆಂದು ಹೇಳಿಕೊಳ್ಳುವ ಕೆಲವರು ಲೋಕದೊಂದಿಗೆ ಸ್ನೇಹವನ್ನು ಹುಡುಕುತ್ತಿದ್ದಾರೆ. ನಮ್ಮಲ್ಲಿ ಯಾರಾದರೂ ಅಂತಹ ಮಾರ್ಗವನ್ನು ಬೆನ್ನಟ್ಟುತ್ತಿರುವುದಾದರೆ, ನಮ್ಮ ಬಲಹೀನ ಆತ್ಮಿಕ ಸ್ಥಿತಿಯ ಕುರಿತು ನಾವು ದುಃಖಿಸಿ, ವಿಷಯಗಳನ್ನು ಸರಿಪಡಿಸುವಂತೆ ಶೀಘ್ರ ಕ್ರಮಗಳನ್ನು ಕೈಕೊಳ್ಳಬಾರದೊ? ಬೇಕಾಗಿರುವ ಹೊಂದಾಣಿಕೆಗಳನ್ನು ಮಾಡಿ, ದೇವರ ಕ್ಷಮೆಯನ್ನು ಪಡೆಯುವುದು, ಶುದ್ಧ ಮನಸ್ಸಾಕ್ಷಿ ಮತ್ತು ನಿತ್ಯಜೀವದ ಹರ್ಷಕರ ಪ್ರತೀಕ್ಷೆಯ ಕಾರಣ ಅತ್ಯಾನಂದದ ಅನಿಸಿಕೆಯನ್ನು ಉಂಟುಮಾಡುವುದು.—ಕೀರ್ತನೆ 51:10-17; 1 ಯೋಹಾನ 2:15-17.
ಒಬ್ಬರಿಗೊಬ್ಬರು ತೀರ್ಪುಮಾಡಬೇಡಿರಿ
8, 9.ನಾವು ಏಕೆ ಒಬ್ಬರ ವಿರುದ್ಧ ಇನ್ನೊಬ್ಬರು ಮಾತನಾಡಬಾರದು ಅಥವಾ ತೀರ್ಪುಮಾಡಬಾರದು?
8 ಜೊತೆ ವಿಶ್ವಾಸಿಯ ವಿರುದ್ಧ ಮಾತನಾಡುವುದು ಪಾಪಕರ. (ಯಾಕೋಬ 4:11, 12) ಹೀಗಿದ್ದರೂ, ಕೆಲವರು ಜೊತೆ ಕ್ರೈಸ್ತರನ್ನು, ಪ್ರಾಯಶಃ ತಮ್ಮ ಸ್ವಂತ ಸ್ವನೀತಿವಂತ ಮನೋಭಾವದ ಫಲಿತಾಂಶವಾಗಿ ಇಲ್ಲವೆ ಇತರರನ್ನು ಕೀಳುಮಾಡಿ ತಮ್ಮನ್ನು ಅಟ್ಟಕ್ಕೇರಿಸಿಕೊಳ್ಳುವ ಮೂಲಕ ಟೀಕಿಸುತ್ತಾರೆ. (ಕೀರ್ತನೆ 50:20; ಜ್ಞಾನೋಕ್ತಿ 3:29) “ನಿಂದಿಸು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, ದ್ವೇಷವನ್ನು ಸೂಚಿಸಿ, ಅತಿಶಯಿಸಲ್ಪಟ್ಟ ಅಥವಾ ಸುಳ್ಳು ಅಪವಾದದ ಸೂಚ್ಯಾರ್ಥವನ್ನು ಕೊಡುತ್ತದೆ. ಇದು ಒಬ್ಬ ಸಹೋದರನ ಮೇಲೆ ಪ್ರತಿಕೂಲವಾಗಿ ತೀರ್ಪುಮಾಡುವುದಕ್ಕೆ ಸಮನಾಗುತ್ತದೆ. ಇದು ‘ನಿಂದಿಸಿ ಧರ್ಮಶಾಸ್ತ್ರಕ್ಕೆ ತೀರ್ಪುಮಾಡಿದಂತೆ’ ಆಗುವುದು ಹೇಗೆ? ಶಾಸ್ತ್ರಿಗಳೂ ಫರಿಸಾಯರೂ ಚಾಕಚಕ್ಯತೆಯಿಂದ ‘ದೇವರಾಜ್ಞೆಯನ್ನು ಬಿಟ್ಟು,’ ತಮ್ಮ ಸ್ವಂತ ಮಟ್ಟಗಳಿಂದ ತೀರ್ಪುಮಾಡಿದರು. (ಮಾರ್ಕ 7:1-13) ಅದೇ ರೀತಿ, ಯೆಹೋವನು ಖಂಡಿಸದ ಒಬ್ಬ ಸಹೋದರನನ್ನು ನಾವು ಖಂಡಿಸುವಲ್ಲಿ, ‘ದೇವರ ನಿಯಮಕ್ಕೆ ತೀರ್ಪುಮಾಡಿ,’ ಅದು ಅಸಮರ್ಪಕವೆಂದು ಪಾಪಭರಿತವಾಗಿ ಸೂಚಿಸಿದಂತಾಗುವುದಿಲ್ಲವೆ? ಮತ್ತು ನಮ್ಮ ಸಹೋದರನನ್ನು ಅನ್ಯಾಯವಾಗಿ ಟೀಕಿಸುವ ಮೂಲಕ ಪ್ರೀತಿಯ ನಿಯಮವನ್ನು ನಾವು ಪೂರ್ಣಗೊಳಿಸುವವರಾಗಿರುವುದಿಲ್ಲ.—ರೋಮಾಪುರ 13:8-10.
9 ನಾವಿದನ್ನು ನೆನಪಿನಲ್ಲಿಡೋಣ: “ನ್ಯಾಯವನ್ನು ವಿಧಿಸಿದ ನ್ಯಾಯಾಧಿಪತಿ ಒಬ್ಬನೇ.” ಆತನು ಯೆಹೋವನು. ಆತನ ‘ಧರ್ಮಶಾಸ್ತ್ರ ಪರಿಪೂರ್ಣವಾದದ್ದು,’ ಲೋಪವಿಲ್ಲದ್ದು. (ಕೀರ್ತನೆ 19:7; ಯೆಶಾಯ 33:22) ರಕ್ಷಣಾ ಮಟ್ಟಗಳನ್ನು ಮತ್ತು ನಿಯಮಗಳನ್ನು ಸ್ಥಾಪಿಸಲು ಹಕ್ಕಿರುವುದು ದೇವರೊಬ್ಬನಿಗೇ. (ಲೂಕ 12:5) ಆದುದರಿಂದ ಯಾಕೋಬನು ಪ್ರಶ್ನಿಸುವುದು: “ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು?” ಇತರರಿಗೆ ತೀರ್ಪುಮಾಡಿ, ಅವರನ್ನು ಖಂಡಿಸುವ ವಿಶೇಷ ಹಕ್ಕು ನಮ್ಮದಲ್ಲ. (ಮತ್ತಾಯ 7:1-5; ರೋಮಾಪುರ 14:4, 10) ದೇವರ ಪರಮಾಧಿಕಾರ ಮತ್ತು ನಿಷ್ಪಕ್ಷಪಾತ ಹಾಗೂ ನಮ್ಮ ಸ್ವಂತ ಪಾಪಪೂರ್ಣತೆಯ ಕುರಿತ ಪುನರಾಲೋಚನೆಯು, ಸ್ವನೀತಿಯಿಂದ ಇತರರ ಮೇಲೆ ತೀರ್ಪುಮಾಡುವುದರಿಂದ ತಡೆಯಲು ನಮಗೆ ಸಹಾಯಮಾಡಬೇಕು.
ಜಂಬಕೊಚ್ಚಿಕೊಳ್ಳುವ ಆತ್ಮವಿಶ್ವಾಸವನ್ನು ವಿಸರ್ಜಿಸಿರಿ
10.ನಮ್ಮ ದೈನಂದಿನ ಜೀವಿತಗಳಲ್ಲಿ ನಾವು ಯೆಹೋವನನ್ನು ಏಕೆ ಪರಿಗಣನೆಗೆ ತೆಗೆದುಕೊಳ್ಳಬೇಕು?
10 ನಾವು ಯಾವಾಗಲೂ ಯೆಹೋವನನ್ನೂ ಆತನ ಧರ್ಮಶಾಸ್ತ್ರವನ್ನೂ ಪರಿಗಣಿಸಬೇಕು. (ಯಾಕೋಬ 4:13-17) ದೇವರನ್ನು ಅಲಕ್ಷ್ಯಮಾಡುತ್ತ, ಆತ್ಮವಿಶ್ವಾಸಿಗಳು ಹೇಳುವುದು: ‘ಇಂದೊ ನಾಳೆಯೊ ನಾವು ಒಂದು ನಗರಕ್ಕೆ ಹೋಗಿ, ಅಲ್ಲಿ ಒಂದು ವರ್ಷವನ್ನು ಕಳೆದು, ವ್ಯಾಪಾರಮಾಡಿ, ಲಾಭ ಗಳಿಸುವೆವು.’ ಆದರೆ ನಾವು, ‘ನಮಗಾಗಿ ನಿಧಿಯನ್ನು ಕೂಡಿಟ್ಟು, ದೇವರ ಕಡೆಗೆ ಐಶ್ವರ್ಯವಂತರಾಗಿರದಿರುವಲ್ಲಿ,’ ನಮ್ಮ ಜೀವ ನಾಳೆ ಅಂತ್ಯಗೊಳ್ಳಬಹುದು ಮತ್ತು ನಮಗೆ ಯೆಹೋವನನ್ನು ಸೇವಿಸುವ ಸಂದರ್ಭವಿಲ್ಲದೆ ಹೋದೀತು. (ಲೂಕ 12:16-21) ಯಾಕೋಬನು ಹೇಳುವಂತೆ, ನಾವು “ಸ್ವಲ್ಪಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣಿಸದೆ ಹೋಗುವ” ಬೆಳಗ್ಗಿನ ಹಬೆಯಂತೆ ಇದ್ದೇವೆ. (1 ಪೂರ್ವಕಾಲವೃತ್ತಾಂತ 29:15) ಯೆಹೋವನಲ್ಲಿ ನಂಬಿಕೆಯನ್ನಿಡುವ ಮೂಲಕ ಮಾತ್ರ, ನಾವು ಬಾಳುವ ಆನಂದ ಮತ್ತು ನಿತ್ಯಜೀವವನ್ನು ನಿರೀಕ್ಷಿಸಬಲ್ಲೆವು.
11. “ಯೆಹೋವನ ಚಿತ್ತವಾದರೆ” ಎಂದು ಹೇಳುವುದರ ಅರ್ಥವೇನು?
11 ಜಂಬದಿಂದ ದೇವರನ್ನು ಅಸಡ್ಡೆಮಾಡುವ ಬದಲಿಗೆ, ನಾವು ಈ ಸ್ಥಾನವನ್ನು ಆಯ್ದುಕೊಳ್ಳಬೇಕು: “ದೇವರ [“ಯೆಹೋವನ,” NW] ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು.” “ಯೆಹೋವನ ಚಿತ್ತವಾದರೆ” ಎಂದು ಹೇಳುವುದು, ನಾವು ದೇವರ ಚಿತ್ತಾನುಸಾರ ವರ್ತಿಸಲು ಪ್ರಯತ್ನಿಸುತ್ತಿದ್ದೇವೆಂಬುದನ್ನು ಸೂಚಿಸುತ್ತದೆ. ನಮ್ಮ ಕುಟುಂಬವನ್ನು ಬೆಂಬಲಿಸಲಿಕ್ಕಾಗಿ ನಾವು ವ್ಯಾಪಾರವನ್ನು ಮಾಡಬೇಕಾದೀತು, ಅಥವಾ ರಾಜ್ಯ ಕೆಲಸದಲ್ಲಿ ಪ್ರಯಾಣಮಾಡಬೇಕಾದೀತು, ಇನ್ನುಮುಂತಾದವುಗಳನ್ನು ಮಾಡಬೇಕಾದೀತು. ಆದರೆ ನಾವು ಜಂಬಕೊಚ್ಚಿಕೊಳ್ಳದಿರೋಣ. “ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ.” ಏಕೆಂದರೆ ದೇವರ ಮೇಲಿನ ಅವಲಂಬನೆಯನ್ನು ಅದು ಅಲಕ್ಷ್ಯಮಾಡುತ್ತದೆ.—ಕೀರ್ತನೆ 37:5; ಜ್ಞಾನೋಕ್ತಿ 21:4; ಯೆರೆಮೀಯ 9:23, 24.
12. ಯಾಕೋಬ 4:17ರ ಮಾತುಗಳು ಏನನ್ನು ಅರ್ಥೈಸುತ್ತವೆ?
12 ಆತ್ಮವಿಶ್ವಾಸ ಮತ್ತು ಜಂಬಕೊಚ್ಚಿಕೊಳ್ಳುವಿಕೆಯ ಕುರಿತ ತನ್ನ ಹೇಳಿಕೆಗಳನ್ನು ಸಮಾಪ್ತಿಗೊಳಿಸಲಿಕ್ಕಾಗಿ, ಯಾಕೋಬನು ಹೀಗೆ ಹೇಳುತ್ತಾನೆಂದು ವಿದಿತವಾಗುತ್ತದೆ: “ಒಳ್ಳೆಯದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ.” ಪ್ರತಿಯೊಬ್ಬ ಕ್ರೈಸ್ತನು ದೇವರ ಮೇಲಿನ ತನ್ನ ಅವಲಂಬನೆಯನ್ನು ನಮ್ರತೆಯಿಂದ ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಳ್ಳದಿರುವವನು “ಪಾಪಕ್ಕೊಳಗಾಗಿದ್ದಾನೆ.” ದೇವರಲ್ಲಿರುವ ನಂಬಿಕೆಯು ನಮ್ಮಿಂದ ಅಪೇಕ್ಷಿಸುವ ಯಾವುದನ್ನೇ ಮಾಡಲು ನಾವು ತಪ್ಪುವುದಕ್ಕೂ ಇದೇ ಮೂಲತತ್ತ್ವವು ಅನ್ವಯಿಸುತ್ತದೆಂಬುದು ನಿಶ್ಚಯ.—ಲೂಕ 12:47, 48.
ಧನಿಕರ ಕುರಿತು ಎಚ್ಚರಿಕೆ
13. ತಮ್ಮ ಐಶ್ವರ್ಯವನ್ನು ದುರುಪಯೋಗಿಸುವವರ ವಿಷಯದಲ್ಲಿ ಯಾಕೋಬನು ಏನು ಹೇಳುತ್ತಾನೆ?
13 ಕೆಲವು ಮಂದಿ ಆದಿ ಕ್ರೈಸ್ತರು ಪ್ರಾಪಂಚಿಕರಾಗಿದ್ದುದರಿಂದಲೊ, ಧನಿಕರನ್ನು ಮೆಚ್ಚುತ್ತಿದ್ದುದರಿಂದಲೊ, ಯಾಕೋಬನು ಕೆಲವು ಮಂದಿ ಧನಿಕರ ಕುರಿತು ಬಲವಾದ ಹೇಳಿಕೆಗಳನ್ನು ನೀಡುತ್ತಾನೆ. (ಯಾಕೋಬ 5:1-6) ತಮ್ಮ ಧನವನ್ನು ತಪ್ಪಾದ ರೀತಿಯಲ್ಲಿ ಬಳಸುವ ಲೌಕಿಕ ವ್ಯಕ್ತಿಗಳು, ದೇವರು ಅವರ ಕೃತ್ಯಗಳಿಗನುಸಾರ ಪ್ರತಿಫಲವನ್ನು ಕೊಡುವಾಗ, ‘ತಮ್ಮ ದುರ್ದೆಶೆಗಳಿಗಾಗಿ ಕಣ್ಣೀರಿಟ್ಟು ಗೋಳಾಡಲಿದ್ದರು.’ ಆ ದಿನಗಳಲ್ಲಿ, ಅನೇಕರ ಐಶ್ವರ್ಯವು, ಮುಖ್ಯವಾಗಿ ಬಟ್ಟೆಗಳು, ಧಾನ್ಯ ಮತ್ತು ದ್ರಾಕ್ಷಾಮದ್ಯ ಮುಂತಾದವುಗಳನ್ನು ಒಳಗೊಂಡಿತ್ತು. (ಯೋವೇಲ 2:19; ಮತ್ತಾಯ 11:8) ಇದರಲ್ಲಿ ಕೆಲವು ಕೆಟ್ಟುಹೋಗಬಹುದು ಅಥವಾ “ನುಸಿಹಿಡಿ”ಯಬಹುದು. ಆದರೆ ಯಾಕೋಬನು ಇಲ್ಲಿ ಐಶ್ವರ್ಯದ ನಿಷ್ಪ್ರಯೋಜಕತೆಯನ್ನು ಒತ್ತಿಹೇಳುತ್ತಾನೆಯೇ ಹೊರತು ಅದರ ನಶ್ವರತೆಯನ್ನಲ್ಲ. ಚಿನ್ನ ಮತ್ತು ಬೆಳ್ಳಿಗೆ ತುಕ್ಕುಹಿಡಿಯುವುದಿಲ್ಲವಾದರೂ, ನಾವು ಅವನ್ನು ಶೇಖರಿಸಿಡುವಲ್ಲಿ, ಅವು ತುಕ್ಕುಹಿಡಿದ ವಸ್ತುಗಳಷ್ಟೇ ನಿಷ್ಪ್ರಯೋಜಕವಾಗಿರುವವು. “ತುಕ್ಕುಹಿಡಿ” ಎಂಬುದು ಪ್ರಾಪಂಚಿಕ ಐಶ್ವರ್ಯವನ್ನು ಸದುಪಯೋಗಕ್ಕೆ ಹಾಕಿರುವುದಿಲ್ಲವೆಂಬುದನ್ನು ಸೂಚಿಸುತ್ತದೆ. ಆದುದರಿಂದ, ಪ್ರಾಪಂಚಿಕ ಸ್ವತ್ತುಗಳಲ್ಲಿ ಭರವಸೆಯಿಡುವವರು, ದೇವರ ಕೋಪವು ಅವರ ಮೇಲೆ ಬರುವಾಗ, “ಬೆಂಕಿಯಂತೆ” ಇರುವುದನ್ನು ‘ಅಂತ್ಯ ದಿವಸಗಳಲ್ಲಿ ಕೂಡಿಸಿ ಇಟ್ಟುಕೊಂಡಿದ್ದಾರೆ’ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಡಬೇಕು. ನಾವು “ಅಂತ್ಯಕಾಲ”ದಲ್ಲಿ ಜೀವಿಸುತ್ತಿರುವುದರಿಂದ, ಇಂತಹ ಮಾತುಗಳು ನಮಗೆ ವಿಶೇಷ ಅರ್ಥದಲ್ಲಿವೆ.—ದಾನಿಯೇಲ 12:4; ರೋಮಾಪುರ 2:5.
14. ಧನಿಕರು ಅನೇಕ ವೇಳೆ ಹೇಗೆ ವರ್ತಿಸುತ್ತಾರೆ, ಮತ್ತು ಅದರ ವಿಷಯದಲ್ಲಿ ನಾವೇನು ಮಾಡಬೇಕು?
14 ಧನಿಕರು ಅನೇಕ ವೇಳೆ ತಮ್ಮ ಕಟಾವುಗಾರರನ್ನು ವಂಚಿಸುವುದರಿಂದ, ಅವರು ತಡೆದಿಟ್ಟ ಕೂಲಿ ಸೇಡಿಗಾಗಿ ‘ಕೂಗಿಕೊಳ್ಳುತ್ತದೆ.’ (ಆದಿಕಾಂಡ 4:9, 10ನ್ನು ಹೋಲಿಸಿ.) ಪ್ರಾಪಂಚಿಕರಾದ ಧನಿಕರು “ಅತಿಭೋಗಿಗಳಾಗಿ ಬದುಕಿ”ದ್ದಾರೆ. ಇಂದ್ರಿಯಸುಖಗಳಲ್ಲಿ ಅತಿಭೋಗಿಗಳಾಗಿರುವುದರಿಂದ ಅವರು ಕೊಬ್ಬಿದ, ಪ್ರತ್ಯುತ್ತರಿಸದ ಹೃದಯಗಳನ್ನು ಬೆಳೆಸಿಕೊಂಡು, ತಮ್ಮ ವಧೆಗಾಗಿ ನಿಗದಿಪಡಿಸಲ್ಪಟ್ಟ “ದಿವಸ” ಬರುವಾಗಲೂ ಹಾಗೆಯೇ ಮಾಡುತ್ತ ಇರುವರು. ಅವರು ‘ನೀತಿವಂತನನ್ನು ಖಂಡಿಸಿ ಕೊಂದುಹಾಕುತ್ತಾರೆ.’ ಯಾಕೋಬನು ಪ್ರಶ್ನಿಸುವುದು: “ಅವನು ನಿಮ್ಮನ್ನು ಪ್ರತಿಭಟಿಸುವದಿಲ್ಲವೊ?” (NW). ಆದರೆ ಇನ್ನೊಂದು ಭಾಷಾಂತರವು ಹೀಗೆನ್ನುತ್ತದೆ: “ನೀತಿವಂತನು ನಿಮ್ಮನ್ನು ಪ್ರತಿಭಟಿಸುವುದಿಲ್ಲ.” ಹೇಗಿದ್ದರೂ, ನಾವು ಧನಿಕರಿಗೆ ಪಕ್ಷಪಾತವುಳ್ಳವರಾಗಿರಬಾರದು. ನಾವು ಜೀವಿತದಲ್ಲಿ ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಡಬೇಕು.—ಮತ್ತಾಯ 6:25-33.
ನಂಬಿಕೆಯು ತಾಳ್ಮೆಯನ್ನು ಪ್ರಯೋಗಿಸಲು ನಮಗೆ ಸಹಾಯಮಾಡುತ್ತದೆ
15, 16. ತಾಳ್ಮೆಯನ್ನು ಅಭ್ಯಾಸಿಸುವುದು ಅಷ್ಟು ಪ್ರಾಮುಖ್ಯವೇಕೆ?
15 ಲೋಕದ ಧನಿಕ ಶೋಷಕರ ವಿಷಯದಲ್ಲಿ ಹೇಳಿಕೆಯನ್ನು ನೀಡಿದ ಬಳಿಕ, ತಾಳ್ಮೆಯನ್ನು ಅಭ್ಯಾಸಿಸುವಂತೆ ಶೋಷಿತ ಕ್ರೈಸ್ತರನ್ನು ಯಾಕೋಬನು ಪ್ರೋತ್ಸಾಹಿಸುತ್ತಾನೆ. (ಯಾಕೋಬ 5:7, 8) ವಿಶ್ವಾಸಿಗಳು ತಮ್ಮ ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವಲ್ಲಿ, ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವರ ಶೋಷಕರ ಮೇಲೆ ನ್ಯಾಯತೀರ್ಪು ಬರುವಾಗ, ಅವರಿಗೂ ಪ್ರತಿಫಲ ದೊರೆಯುವುದು. (ಮತ್ತಾಯ 24:37-41) ಆ ಆದಿ ಕ್ರೈಸ್ತರು, ಅವನು ಯಾವ ಸಮಯದಲ್ಲಿ ನೆಡಸಾಧ್ಯವಿತ್ತೋ ಆ ಶರತ್ಕಾಲದ ಮುಂಗಾರು ಮಳೆಗಾಗಿ ಮತ್ತು ವಸಂತಕಾಲದಲ್ಲಿ ಫಲಕ್ಕಾಗಿ ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾಯುತ್ತಿರುವ ಬೇಸಾಯಗಾರನಂತಿರಬೇಕಾಗಿತ್ತು. (ಯೋವೇಲ 2:23) ವಿಶೇಷವಾಗಿ, “ಕರ್ತನಾದ” ಯೇಸು ಕ್ರಿಸ್ತನ “ಸಾನ್ನಿಧ್ಯ” ಇಲ್ಲಿರುವಾಗ, ನಾವೂ ತಾಳ್ಮೆಯನ್ನು ಅಭ್ಯಾಸಿಸಿ ನಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಬೇಕು!
16 ನಾವು ಏಕೆ ತಾಳಿಕೊಳ್ಳಬೇಕು? (ಯಾಕೋಬ 5:9-12) ಜೊತೆ ವಿಶ್ವಾಸಿಗಳು ನಮ್ಮನ್ನು ಕೆರಳಿಸುವಾಗ, ನರಳದಂತೆ ಅಥವಾ ನಿಟ್ಟುಸಿರುಬಿಡದಂತೆ ತಾಳ್ಮೆಯು ನಮಗೆ ಸಹಾಯಮಾಡುತ್ತದೆ. ನಾವು ಕೆಟ್ಟ ಮನೋಭಾವದಿಂದ “ಒಬ್ಬರ ಮೇಲೊಬ್ಬರು ಗುಣುಗುಟ್ಟು”ವುದಾದರೆ, ನ್ಯಾಯಾಧಿಪತಿಯಾದ ಯೇಸು ಕ್ರಿಸ್ತನಿಂದ ಖಂಡಿಸಲ್ಪಡುವೆವು. (ಯೋಹಾನ 5:22) ಈಗ ಅವನ “ಸಾನ್ನಿಧ್ಯ” ಆರಂಭವಾಗಿರುವುದರಿಂದ ಮತ್ತು ಅವನು “ಬಾಗಲಿನ ಹತ್ತರದಲ್ಲೇ” ನಿಂತುಕೊಂಡಿರುವುದರಿಂದ, ನಾವು ನಂಬಿಕೆಯ ಅನೇಕ ಪರೀಕ್ಷೆಗಳನ್ನು ಎದುರಿಸುವ ನಮ್ಮ ಸಹೋದರರೊಂದಿಗೆ ತಾಳ್ಮೆಯಿಂದಿರುತ್ತ, ಶಾಂತಿಯನ್ನು ವರ್ಧಿಸೋಣ. ಯೋಬನು ತನ್ನ ಪರೀಕ್ಷೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡದ್ದರಿಂದ ದೇವರು ಅವನಿಗೆ ಪ್ರತಿಫಲವನ್ನು ಕೊಟ್ಟನೆಂಬುದನ್ನು ಜ್ಞಾಪಿಸಿಕೊಳ್ಳುವಾಗ, ನಮ್ಮ ಸ್ವಂತ ನಂಬಿಕೆ ಬಲಗೊಳ್ಳುತ್ತದೆ. (ಯೋಬ 42:10-17) ನಾವು ನಂಬಿಕೆ ಮತ್ತು ತಾಳ್ಮೆಯನ್ನು ಅಭ್ಯಾಸಿಸುವಲ್ಲಿ, “ಕರ್ತನು [“ಯೆಹೋವನು,” NW] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು” ನಾವು ಅವಲೋಕಿಸುವೆವು.—ಮೀಕ 7:18, 19.
17. “ಆಣೆ ಇಡಲೇ ಬೇಡಿರಿ” ಎಂದು ಯಾಕೋಬನು ಹೇಳುವುದೇಕೆ?
17 ನಾವು ತಾಳಿಕೊಳ್ಳದಿರುವಲ್ಲಿ, ಒತ್ತಡದ ಸಮಯದಲ್ಲಿ ನಾಲಗೆಯನ್ನು ದುರುಪಯೋಗಿಸಬಹುದು. ಉದಾಹರಣೆಗೆ, ನಾವು ಮುಂದಾಲೋಚನೆಯಿಲ್ಲದೆ ಆಣೆಯಿಟ್ಟೇವು. ಹುಡುಗಾಟಿಕೆಯಿಂದ ಆಣೆಯಿಡುವುದರ ವಿರುದ್ಧ ಎಚ್ಚರಿಸುತ್ತ, “ಆಣೆ ಇಡಲೇ ಬೇಡಿರಿ” ಎನ್ನುತ್ತಾನೆ ಯಾಕೋಬನು. ಹೇಳಿಕೆಗಳನ್ನು ಸತತವಾಗಿ ಆಣೆಗಳಿಂದ ಸಮರ್ಥಿಸುವುದು, ಕಪಟಾಚರಣೆಯದ್ದಾಗಿಯೂ ತೋರಿಬರುತ್ತದೆ. ಆದಕಾರಣ, ನಾವು ಸತ್ಯವನ್ನೇ ಆಡಬೇಕು; ನಮ್ಮ ಹೌದು ಹೌದಾಗಿರುವಂತೆ, ಅಲ್ಲ ಅಲ್ಲವಾಗಿರುವಂತೆ ಬಿಡಬೇಕು. (ಮತ್ತಾಯ 5:33-37) ಕೋರ್ಟಿನಲ್ಲಿ ಸತ್ಯವನ್ನು ಹೇಳುತ್ತೇನೆಂದು ಪ್ರಮಾಣಮಾಡುವುದು ತಪ್ಪೆಂದು ಇಲ್ಲಿ ಯಾಕೋಬನು ಹೇಳುತ್ತಿಲ್ಲವೆಂಬುದು ನಿಶ್ಚಯ.
ನಂಬಿಕೆ ಮತ್ತು ನಮ್ಮ ಪ್ರಾರ್ಥನೆಗಳು
18. ಯಾವ ಪರಿಸ್ಥಿತಿಗಳಲ್ಲಿ ನಾವು ‘ಪ್ರಾರ್ಥಿಸಿ,’ ‘ಕೀರ್ತನೆ ಹಾಡ’ಬೇಕು?
18 ನಮ್ಮ ಮಾತನ್ನು ನಾವು ನಿಯಂತ್ರಿಸಬೇಕಾದರೆ, ತಾಳ್ಮೆಯನ್ನು ಅಭ್ಯಾಸಿಸುತ್ತ, ದೇವರಲ್ಲಿ ಹಿತಕರವಾದ ನಂಬಿಕೆಯನ್ನು ಕಾಪಾಡಿಕೊಳ್ಳಲು, ನಮ್ಮ ಜೀವಿತದಲ್ಲಿ ಪ್ರಾರ್ಥನೆಯು ದೊಡ್ಡ ಪಾತ್ರವನ್ನು ವಹಿಸತಕ್ಕದ್ದು. (ಯಾಕೋಬ 5:13-20) ವಿಶೇಷವಾಗಿ ಪರೀಕ್ಷೆಗೊಳಗಾಗಿರುವಾಗ ನಾವು “ಪ್ರಾರ್ಥಿಸ”ಬೇಕು. ನಾವು ಹರ್ಷಚಿತ್ತರಾಗಿರುವಲ್ಲಿ, ತನ್ನ ಮರಣದ ಸಂಸ್ಮರಣೆಯನ್ನು ಸ್ಥಾಪಿಸಿದ ಬಳಿಕ, ಯೇಸು ಮತ್ತು ಅವನ ಅಪೊಸ್ತಲರು ಹಾಡಿದಂತೆ, ನಾವು ‘ಕೀರ್ತನೆ ಹಾಡೋಣ.’ (ಮಾರ್ಕ 14:26, NW ಪಾದಟಿಪ್ಪಣಿ) ಕೆಲವೊಮ್ಮೆ, ನಾವು ದೇವರಿಗೆ ಎಷ್ಟು ಕೃತಜ್ಞರಾಗಿರಬಹುದೆಂದರೆ, ಹೃದಯದಲ್ಲಿಯೂ ನಾವು ಸ್ತುತಿಗಳನ್ನು ಹಾಡುತ್ತೇವೆ. (1 ಕೊರಿಂಥ 14:15; ಎಫೆಸ 5:19) ಮತ್ತು ಕ್ರೈಸ್ತ ಕೂಟಗಳಲ್ಲಿ ಹಾಡಿನಿಂದ ಯೆಹೋವನನ್ನು ಕೊಂಡಾಡುವುದು ಎಷ್ಟೊಂದು ಆನಂದದಾಯಕ!
19. ನಾವು ಆತ್ಮಿಕವಾಗಿ ಅಸ್ವಸ್ಥರಾಗಿರುವಲ್ಲಿ ಏನು ಮಾಡಬೇಕು, ಮತ್ತು ಅಂತಹ ಹೆಜ್ಜೆಯನ್ನು ಏಕೆ ತೆಗೆದುಕೊಳ್ಳಬೇಕು?
19 ನಾವು ಪ್ರಾಯಶಃ ತಪ್ಪು ನಡತೆಯ ಕಾರಣ ಅಥವಾ ಯೆಹೋವನ ಮೇಜಿನಿಂದ ಕ್ರಮವಾಗಿ ಉಣ್ಣಲು ತಪ್ಪಿರುವ ಕಾರಣ ಆತ್ಮಿಕವಾಗಿ ಅಸ್ವಸ್ಥರಾಗಿರುವಲ್ಲಿ, ಹಾಡುವ ಅನಿಸಿಕೆ ನಮಗಾಗದಿರಬಹುದು. ನಾವು ಅಂತಹ ಸ್ಥಿತಿಯಲ್ಲಿರುವಲ್ಲಿ, ಹಿರಿಯರು ನಮಗೋಸ್ಕರ ‘ಪ್ರಾರ್ಥಿಸುವಂತೆ’ ದೈನ್ಯದಿಂದ ಅವರಿಗಾಗಿ ಕರೆ ಕಳುಹಿಸೋಣ. (ಜ್ಞಾನೋಕ್ತಿ 15:29) ಅವರು ‘ಯೆಹೋವನ ಹೆಸರಿನಲ್ಲಿ ನಮಗೆ ಎಣ್ಣೆಯನ್ನು ಹಚ್ಚುವರು’ ಕೂಡ. ಗಾಯದ ಮೇಲೆ ಹಚ್ಚುವ ಉಪಶಮನ ಮಾಡುವ ಎಣ್ಣೆಯಂತೆ, ಅವರ ದುಃಖಶಾಮಕ ಮಾತುಗಳು ಮತ್ತು ಶಾಸ್ತ್ರೀಯ ಸಲಹೆಯು, ಖಿನ್ನತೆ, ಸಂಶಯ, ಭಯಗಳನ್ನು ಕಡಮೆಮಾಡಲು ಸಹಾಯಮಾಡುವುದು. ನಮ್ಮ ಸ್ವಂತ ನಂಬಿಕೆಯಿಂದ ಬೆಂಬಲ ನೀಡಲ್ಪಡುವಲ್ಲಿ, ‘ನಂಬಿಕೆಯ ಪ್ರಾರ್ಥನೆ ನಮ್ಮನ್ನು ಸ್ವಸ್ಥಗೊಳಿಸುವುದು.’ ನಮ್ಮ ಆತ್ಮಿಕ ಅನಾರೋಗ್ಯವು ಗಂಭೀರವಾದ ಪಾಪದಿಂದ ಬಂದಿದೆಯೆಂದು ಹಿರಿಯರು ಕಂಡುಹಿಡಿಯುವಲ್ಲಿ, ಅವರು ನಮ್ಮ ತಪ್ಪನ್ನು ದಯೆಯಿಂದ ಸ್ಪಷ್ಟಗೊಳಿಸಿ, ನಮಗೆ ಸಹಾಯ ನೀಡಲು ಪ್ರಯತ್ನಿಸುವರು. (ಕೀರ್ತನೆ 141:5) ಮತ್ತು ನಾವು ಪಶ್ಚಾತ್ತಾಪಪಡುವಲ್ಲಿ, ದೇವರು ಅವರ ಪ್ರಾರ್ಥನೆಗಳನ್ನು ಕೇಳಿ ನಮ್ಮನ್ನು ಕ್ಷಮಿಸುವನೆಂಬ ನಂಬಿಕೆ ನಮಗಿರಸಾಧ್ಯವಿದೆ.
20. ನಾವು ನಮ್ಮ ಪಾಪಗಳನ್ನು ಅರಿಕೆಮಾಡಿ, ಒಬ್ಬರಿಗೋಸ್ಕರ ಒಬ್ಬರು ಏಕೆ ಪ್ರಾರ್ಥಿಸಬೇಕು?
20 ‘ನಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿಕೊಳ್ಳುವುದು,’ ಇನ್ನು ಮುಂದೆ ಪಾಪಮಾಡುವುದರ ವಿರುದ್ಧ ಒಂದು ನಿರೋಧದಂತೆ ಕೆಲಸಮಾಡಬೇಕು. ಅದು ಪರಸ್ಪರ ಅನುಕಂಪವನ್ನು, “ಒಬ್ಬರಿಗೋಸ್ಕರ ಒಬ್ಬರು” ಪ್ರಾರ್ಥಿಸುವಂತೆ ಪ್ರೇರಿಸುವ ಗುಣವನ್ನು ಬೆಳೆಸಬೇಕು. ಇದು ಪ್ರಯೋಜನಕರವಾಗಿರುವುದೆಂಬ ನಂಬಿಕೆ ನಮಗಿರಸಾಧ್ಯವಿದೆ, ಏಕೆಂದರೆ ‘ಒಬ್ಬ ನೀತಿವಂತನ’—ನಂಬಿಕೆಯನ್ನಿಡುತ್ತಿರುವ ಮತ್ತು ದೇವರಿಂದ ಪ್ರಾಮಾಣಿಕನೆಂದು ವೀಕ್ಷಿಸಲ್ಪಡುತ್ತಿರುವ ಒಬ್ಬನ—ಪ್ರಾರ್ಥನೆಯು ಯೆಹೋವನೊಂದಿಗೆ ಹೆಚ್ಚನ್ನು ಸಾಧಿಸುತ್ತದೆ. (1 ಪೇತ್ರ 3:12) ಪ್ರವಾದಿ ಎಲೀಯನಲ್ಲಿ ನಮ್ಮಂತಹ ಬಲಹೀನತೆಗಳಿದ್ದವು, ಆದರೆ ಅವನ ಪ್ರಾರ್ಥನೆಗಳು ಪರಿಣಾಮಕಾರಿಯಾಗಿದ್ದವು. ಅವನು ಪ್ರಾರ್ಥಿಸಿದಾಗ ಮೂರೂವರೆ ವರ್ಷಕಾಲ ಮಳೆಬೀಳಲಿಲ್ಲ. ಅವನು ಪುನಃ ಪ್ರಾರ್ಥಿಸಿದಾಗ, ಮಳೆಯು ನಿಶ್ಚಯವಾಗಿ ಬಿತ್ತು.—1 ಅರಸುಗಳು 17:1; 18:1, 42-45; ಲೂಕ 4:25.
21. ಜೊತೆಕ್ರೈಸ್ತನೊಬ್ಬನು “ಸತ್ಯಮಾರ್ಗದಿಂದ ತಪ್ಪಿ”ಹೋಗುವಲ್ಲಿ ನಾವು ಏನು ಮಾಡಶಕ್ತರಾಗಬಹುದು?
21 ಸಭಾ ಸದಸ್ಯನೊಬ್ಬನು ಸರಿಯಾದ ಬೋಧನೆ ಮತ್ತು ವರ್ತನೆಯಿಂದ ತಿರುಗಿ, “ಸತ್ಯಮಾರ್ಗದಿಂದ ತಪ್ಪಿ”ಹೋಗಿರುವುದಾದರೆ ಆಗೇನು? ಬೈಬಲಿನ ಸಲಹೆ, ಪ್ರಾರ್ಥನೆ ಮತ್ತು ಬೇರೆ ನೆರವಿನಿಂದ ನಾವು ಅವನನ್ನು ಅವನ ತಪ್ಪಿನಿಂದ ಹಿಂದಿರುಗಿಸಲು ಶಕ್ತರಾದೇವು. ನಾವು ಸಫಲಗೊಳ್ಳುವಲ್ಲಿ, ಇದು ಅವನನ್ನು ಕ್ರಿಸ್ತನ ಪ್ರಾಯಶ್ಚಿತ್ತದ ಕೆಳಗಿಟ್ಟು, ಅವನನ್ನು ಆತ್ಮಿಕ ಮರಣದಿಂದ ಮತ್ತು ನಾಶನದ ಶಿಕ್ಷೆಯಿಂದ ರಕ್ಷಿಸುತ್ತದೆ. ದೋಷಿಗೆ ಸಹಾಯಮಾಡುವ ಮೂಲಕ, ನಾವು ಅವನ ಅನೇಕ ಪಾಪಗಳನ್ನು ಮುಚ್ಚಿಬಿಡುವೆವು. ಆ ತಪ್ಪು ಮನಗಾಣಿಸಲ್ಪಟ್ಟ ಪಾಪಿಯು ತನ್ನ ತಪ್ಪಾದ ಮಾರ್ಗದಿಂದ ತಿರುಗಿ, ಪಶ್ಟಾತ್ತಾಪಪಟ್ಟು, ಕ್ಷಮೆಯನ್ನು ಯಾಚಿಸುವಾಗ, ಅವನ ಪಾಪಗಳನ್ನು ಮುಚ್ಚಲು ನಾವು ಶ್ರಮಪಟ್ಟೆವೆಂಬ ವಿಷಯದಲ್ಲಿ ನಾವು ಸಂತೋಷಿಸುವೆವು.—ಕೀರ್ತನೆ 32:1, 2; ಯೂದ 22, 23.
ನಮಗೆಲ್ಲರಿಗೂ ಬೇಕಾಗುವ ವಿಷಯ
22, 23. ಯಾಕೋಬನ ಮಾತುಗಳಿಂದ ನಾವು ಹೇಗೆ ಪ್ರಭಾವಿತರಾಗಬೇಕು?
22 ಯಾಕೋಬನ ಪುಸ್ತಕದಲ್ಲಿ ನಮಗೆಲ್ಲರಿಗೂ ಪ್ರಯೋಜನಕರವಾದ ಸಂಗತಿಗಳಿವೆಯೆಂಬುದು ಸ್ಪಷ್ಟ. ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಅದು ತೋರಿಸಿ, ಪಕ್ಷಪಾತದ ವಿರುದ್ಧ ನಮಗೆ ಸಲಹೆ ನೀಡಿ, ನಾವು ಸತ್ಕಾರ್ಯಗಳಲ್ಲಿ ತೊಡಗುವಂತೆ ಅದು ಪ್ರಚೋದಿಸುತ್ತದೆ. ನಮ್ಮ ನಾಲಗೆಯನ್ನು ನಿಯಂತ್ರಿಸಿಕೊಳ್ಳುವಂತೆ, ಲೌಕಿಕ ಪ್ರಭಾವವನ್ನು ತಡೆಯುವಂತೆ, ಮತ್ತು ಶಾಂತಿಯನ್ನು ವರ್ಧಿಸುವಂತೆ ಯಾಕೋಬನು ನಮ್ಮನ್ನು ಉತ್ತೇಜಿಸುತ್ತಾನೆ. ಅವನ ಮಾತುಗಳು ನಮ್ಮನ್ನು ತಾಳ್ಮೆಯುಳ್ಳವರೂ ಪ್ರಾರ್ಥನಾಪರರೂ ಆಗುವಂತೆ ಮಾಡಬೇಕು.
23 ನಿಜ, ಯಾಕೋಬನ ಪತ್ರವು ಮೊದಲಾಗಿ ಅಭಿಷಿಕ್ತ ಆದಿ ಕ್ರೈಸ್ತರಿಗೆ ಕಳುಹಿಸಲ್ಪಟ್ಟಿತು. ಆದರೂ, ಅದರ ಸಲಹೆಯು ನಾವು ನಮ್ಮ ನಂಬಿಕೆಗೆ ಅಂಟಿಕೊಳ್ಳುವಂತೆ ಸಹಾಯಮಾಡಲು ನಾವೆಲ್ಲರೂ ಬಿಡಬೇಕು. ಯಾಕೋಬನ ಮಾತುಗಳು, ದೇವರ ಸೇವೆಯಲ್ಲಿ ನಿರ್ಧಾರಕ ಕಾರ್ಯಕ್ಕೆ ನಮ್ಮನ್ನು ಪ್ರೇರಿಸುವ ನಂಬಿಕೆಗೆ ಆಸರೆ ಕೊಡಬಲ್ಲವು. ಮತ್ತು ದೈವಿಕವಾಗಿ ಪ್ರೇರಿತವಾದ ಈ ಪತ್ರವು, ನಾವಿಂದು, ‘ಕರ್ತನಾದ’ ಯೇಸು ಕ್ರಿಸ್ತನ “ಸಾನ್ನಿಧ್ಯ”ದ ಸಮಯದಲ್ಲಿ, ಯೆಹೋವನ ತಾಳ್ಮೆಯ, ಪ್ರಾರ್ಥನಾಪರ ಸಾಕ್ಷಿಗಳಾಗುವಂತೆ ಮಾಡುವ ಬಾಳುವ ನಂಬಿಕೆಯನ್ನು ಬೆಳೆಸುತ್ತದೆ.
ನೀವು ಹೇಗೆ ಉತ್ತರ ಕೊಡುವಿರಿ?
◻ ಆದಿ ಕ್ರೈಸ್ತರಲ್ಲಿ ಕೆಲವರು ತಮ್ಮ ಮನೋಭಾವ ಮತ್ತು ನಡತೆಯನ್ನು ಏಕೆ ಬದಲಾಯಿಸಬೇಕಾಗಿತ್ತು?
◻ ಯಾಕೋಬನು ಧನಿಕರಿಗೆ ಯಾವ ಎಚ್ಚರಿಕೆಯನ್ನು ಕೊಡುತ್ತಾನೆ?
◻ ನಾವು ತಾಳ್ಮೆಯನ್ನು ಏಕೆ ಅಭ್ಯಾಸಿಸಬೇಕು?
◻ ನಾವು ಕ್ರಮವಾಗಿ ಏಕೆ ಪ್ರಾರ್ಥಿಸಬೇಕು?
[ಪುಟ 19 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 23 ರಲ್ಲಿರುವ ಚಿತ್ರ]
ಆದಿ ಕ್ರೈಸ್ತರಲ್ಲಿ ಕೆಲವರು, ಜೊತೆ ವಿಶ್ವಾಸಿಗಳೊಂದಿಗೆ ಹೆಚ್ಚು ಸಹನೆಯುಳ್ಳವರಾಗಿರಬೇಕಾಗಿತ್ತು
[ಪುಟ 24 ರಲ್ಲಿರುವ ಚಿತ್ರ]
ಕ್ರೈಸ್ತರು ತಾಳ್ಮೆಯುಳ್ಳವರೂ, ಪ್ರೀತಿ ತೋರಿಸುವವರೂ, ಪ್ರಾರ್ಥನಾಪರರೂ ಆಗಿರಬೇಕು