“ವಾಕ್ಯದ ಪ್ರಕಾರ ಮಾಡುವ” ಹರ್ಷಭರಿತರು
“ಮನಸ್ಸಿನೊಳಗೆ ಬೇರೂರಿರುವ ವಾಕ್ಯಕ್ಕೆ ನಮ್ರತೆಯಿಂದ ಎಡೆಗೊಡಿರಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸುವದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ. ವಾಕ್ಯದ ಪ್ರಕಾರ ನಡೆ [“ಮಾಡು,” NW]ಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ.”—ಯಾಕೋಬ 1:21, 22.
1. 1996ರಕ್ಕಾಗಿರುವ ನಮ್ಮ ವರ್ಷವಚನವು ಹೇಗೆ ಎಣಿಸಲ್ಪಡಬೇಕು?
“ವಾಕ್ಯದ ಪ್ರಕಾರ ಮಾಡುವವರಾಗಿರಿ.” ಸರಳವಾದ ಈ ಹೇಳಿಕೆಯಲ್ಲಿ ಶಕ್ತಿಶಾಲಿಯಾದ ಸಂದೇಶವೊಂದಿದೆ. ಅದನ್ನು “ಯಾಕೋಬನು ಬರೆದ ಪತ್ರಿಕೆ”ಯಿಂದ ತೆಗೆಯಲಾಗಿದೆ, ಮತ್ತು 1996ರ ಆದ್ಯಂತ, ಅದು ಯೆಹೋವನ ಸಾಕ್ಷಿಗಳ ವರ್ಷವಚನವಾಗಿ ರಾಜ್ಯ ಸಭಾಗೃಹಗಳಲ್ಲಿ ಪ್ರದರ್ಶಿಸಲ್ಪಡುವುದು.
2, 3. ತನ್ನ ಹೆಸರನ್ನು ಹೊಂದಿರುವ ಪತ್ರವನ್ನು ಯಾಕೋಬನು ಬರೆಯಬೇಕಾದದ್ದು ಏಕೆ ಸೂಕ್ತವಾಗಿತ್ತು?
2 ಕರ್ತನಾದ ಯೇಸುವಿನ ಮಲತಮ್ಮನಾದ ಯಾಕೋಬನು, ಆದಿ ಕ್ರೈಸ್ತ ಸಭೆಯಲ್ಲಿ ಪ್ರಖ್ಯಾತನಾಗಿದ್ದನು. ಯೇಸುವಿನ ಪುನರುತ್ಥಾನದ ತರುವಾಯ ಒಂದು ಸಂದರ್ಭದಲ್ಲಿ, ನಮ್ಮ ಕರ್ತನು ವೈಯಕ್ತಿಕವಾಗಿ ಯಾಕೋಬನಿಗೆ ಮತ್ತು ತದನಂತರ ಎಲ್ಲ ಅಪೊಸ್ತಲರಿಗೆ ಕಾಣಿಸಿಕೊಂಡನು. (1 ಕೊರಿಂಥ 15:7) ಅನಂತರ, ಅಪೊಸ್ತಲ ಪೇತ್ರನು ಅದ್ಭುತಕರವಾಗಿ ಸೆರೆಮನೆಯಿಂದ ಬಿಡುಗಡೆಗೊಳಿಸಲ್ಪಟ್ಟಾಗ, ನೆರೆದುಬಂದಿದ್ದ ಒಂದು ಕ್ರೈಸ್ತ ಗುಂಪಿಗೆ ಅವನು ಹೇಳಿದ್ದು: “ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರರೆಲ್ಲರಿಗೂ ತಿಳಿಸಿ”ರಿ. (ಅ. ಕೃತ್ಯಗಳು 12:17) ಸ್ವತಃ ಒಬ್ಬ ಅಪೊಸ್ತಲನಾಗಿರದಿದ್ದರೂ, ಮತಾಂತರಗೊಂಡ ಅನ್ಯಜನಾಂಗದವರು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಅಪೊಸ್ತಲರು ಮತ್ತು ಹಿರಿಯರು, ಯೆರೂಸಲೇಮಿನಲ್ಲಿ ನಡೆದ ಆಡಳಿತ ಮಂಡಲಿಯ ಕೂಟದಲ್ಲಿ ನಿರ್ಧರಿಸಿದಾಗ, ಯಾಕೋಬನು ಅಧ್ಯಕ್ಷತೆ ವಹಿಸಿದನೆಂದು ತೋರುತ್ತದೆ. ಯಾಕೋಬನು ವಿಷಯಗಳನ್ನು ಸಾರಾಂಶಿಸಿದನು, ಮತ್ತು ಪವಿತ್ರಾತ್ಮನ ಮೂಲಕ ದೃಢೀಕರಿಸಲ್ಪಟ್ಟ ನಿರ್ಣಯವನ್ನು ಎಲ್ಲ ಸಭೆಗಳಿಗೆ ಕಳುಹಿಸಲಾಯಿತು.—ಅ. ಕೃತ್ಯಗಳು 15:1-29.
3 ಸ್ಪಷ್ಟವಾಗಿಗಿ, ಯಾಕೋಬನ ಪ್ರೌಢ ವಿವೇಚನೆಯು ಅಧಿಕ ಮಹತ್ವವುಳ್ಳದ್ದಾಗಿತ್ತು. ಹಾಗಿದ್ದರೂ, ಸ್ವತಃ ತಾನು ಕೇವಲ “ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸ”ನಾಗಿದ್ದೆನೆಂದು ಅವನು ದೈನ್ಯವಾಗಿ ಅಂಗೀಕರಿಸಿದನು. (ಯಾಕೋಬ 1:1) ಅವನ ಪ್ರೇರಿತ ಪತ್ರವು ಇಂದಿನ ಕ್ರೈಸ್ತರಿಗಾಗಿ ಸ್ವಸ್ಥವಾದ ಸಲಹೆ ಮತ್ತು ಉತ್ತೇಜನದ ಒಂದು ಸಂಪತ್ತನ್ನು ಹೊಂದಿದೆ. ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ’ ಸಾರಲ್ಪಟ್ಟಿದ್ದ ತರುವಾಯ, ಸೇನಾಪತಿ ಸೆಸಿಯ್ಟಸ್ ಗ್ಯಾಲಸ್ನ ಮೂಲಕ ಯೆರೂಸಲೇಮಿನ ಮೇಲೆ ಆರಂಭಿಕ ರೋಮನ್ ಆಕ್ರಮಣದ ಸುಮಾರು ನಾಲ್ಕು ವರ್ಷಗಳ ಮುಂಚೆ ಅದು ಸಂಪೂರ್ಣಗೊಂಡಿತು. (ಕೊಲೊಸ್ಸೆ 1:23) ಅವು ಕಠಿನ ಸಮಯಗಳಾಗಿದ್ದವು, ಮತ್ತು ಯೆಹೋವನ ನ್ಯಾಯದಂಡನೆಯು ಯೆಹೂದಿ ರಾಷ್ಟ್ರದ ಮೇಲೆ ವಿಧಿಸಲ್ಪಡಲಿತ್ತೆಂದು ಆತನ ಸೇವಕರು ಸಂಪೂರ್ಣವಾಗಿ ಅರಿತಿದ್ದರು.
4. ಆದಿ ಕ್ರೈಸ್ತರಿಗೆ ದೇವರ ವಾಕ್ಯದಲ್ಲಿ ಮಹತ್ತರವಾದ ಭರವಸೆ ಇತ್ತೆಂಬುದನ್ನು ಯಾವುದು ಸೂಚಿಸುತ್ತದೆ?
4 ಆ ಕ್ರೈಸ್ತರಲ್ಲಿ ಈಗಾಗಲೇ ಸಂಪೂರ್ಣ ಹೀಬ್ರು ಶಾಸ್ತ್ರಗಳು ಮತ್ತು ಗ್ರೀಕ್ ಶಾಸ್ತ್ರಗಳಲ್ಲಿ ಹೆಚ್ಚಿನವು ಇದ್ದವು. ಆದಿಯ ಬರಹಗಳಿಗೆ ಮಾಡಲ್ಪಟ್ಟಿರುವ ತಮ್ಮ ಅನೇಕ ಉದ್ಧರಣೆಗಳಿಂದ ಸೂಚಿಸಲ್ಪಟ್ಟಿರುವಂತೆ, ಕ್ರೈಸ್ತ ಬೈಬಲ್ ಬರಹಗಾರರಿಗೆ ಸ್ಪಷ್ಟವಾಗಿಗಿ ದೇವರ ವಾಕ್ಯದಲ್ಲಿ ಮಹತ್ತರವಾದ ಭರವಸೆಯಿತ್ತು. ತದ್ರೀತಿಯಲ್ಲಿ ನಾವು ಇಂದು ದೇವರ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಸಿಸುವ ಮತ್ತು ಅದನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸುವ ಅಗತ್ಯವಿದೆ. ತಾಳಿಕೊಳ್ಳುವ ಸಲುವಾಗಿ, ಪವಿತ್ರ ಶಾಸ್ತ್ರಗಳು ಒದಗಿಸುವ ಆತ್ಮಿಕ ಬಲ ಮತ್ತು ಧೈರ್ಯದ ಅಗತ್ಯ ನಮಗಿದೆ.—ಕೀರ್ತನೆ 119:97; 1 ತಿಮೊಥೆಯ 4:13.
5. ಇಂದು ನಮಗೆ ವಿಶೇಷವಾದ ಮಾರ್ಗದರ್ಶನವು ಏಕೆ ಬೇಕಾಗಿದೆ, ಮತ್ತು ನಾವು ಅದನ್ನು ಎಲ್ಲಿ ಕಂಡುಕೊಳ್ಳುವೆವು?
5 ಇಂದು ಮಾನವಕುಲವು, ‘ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗದ, ಇನ್ನೂ ಮೇಲೆಯೂ ಆಗದಿರುವ ಮಹಾ ಸಂಕಟದ’ ಅಂಚಿನಲ್ಲಿ ನಿಂತಿದೆ. (ಮತ್ತಾಯ 24:21) ದೈವಿಕ ಮಾರ್ಗದರ್ಶನವನ್ನು ಪಡೆಯುವುದರ ಮೇಲೆ ನಮ್ಮ ಬದುಕಿ ಉಳಿಯುವಿಕೆಯು ಅವಲಂಬಿಸಿದೆ. ನಾವು ಇದನ್ನು ಹೇಗೆ ಕಂಡುಕೊಳ್ಳಬಹುದು? ನಮ್ಮ ಹೃದಯಗಳನ್ನು ದೇವರ ಆತ್ಮ ಪ್ರೇರಿತ ವಾಕ್ಯದ ಬೋಧನೆಗಳಿಗೆ ತೆರೆಯುವ ಮೂಲಕವೇ. ಹಿಂದಿನ ಸಮಯಗಳಲ್ಲಿನ ಯೆಹೋವನ ನಿಷ್ಠಾವಂತ ಸೇವಕರಂತೆ, ಇದು ನಮ್ಮನ್ನು “ವಾಕ್ಯದ ಪ್ರಕಾರ ಮಾಡು”ವವರಾಗಲು ಮುನ್ನಡೆಸುವುದು. ನಾವು ದೇವರ ವಾಕ್ಯವನ್ನು ಶ್ರದ್ಧೆಯಿಂದ ಓದಿ, ಅಭ್ಯಸಿಸಬೇಕು ಮತ್ತು ಅದನ್ನು ಯೆಹೋವನ ಸುತ್ತಿಗಾಗಿ ಉಪಯೋಗಿಸಬೇಕು.—2 ತಿಮೊಥೆಯ 2:15; 3:16, 17.
ಹರ್ಷದಿಂದ ತಾಳಿಕೊಳ್ಳುವುದು
6. ಪರೀಕ್ಷೆಗಳನ್ನು ಎದುರಿಸುವುದರಲ್ಲಿ ನಾವು ಆನಂದವನ್ನು ಏಕೆ ಕಂಡುಕೊಳ್ಳತಕ್ಕದ್ದು?
6 ತನ್ನ ಪತ್ರವನ್ನು ಆರಂಭಿಸುವುದರಲ್ಲಿ, ಯಾಕೋಬನು ದೇವರ ಆತ್ಮದ ಎರಡನೆಯ ಫಲವಾದ ಆನಂದವನ್ನು ಉಲ್ಲೇಖಿಸುತ್ತಾನೆ. ಅವನು ಬರೆಯುವುದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:2-4; ಗಲಾತ್ಯ 5:22, 23) ಅನೇಕ ಪರೀಕ್ಷೆಗಳನ್ನು ಎದುರಿಸುವುದು “ಆನಂದಕರ”ವೆಂದು ಹೇಗೆ ಹೇಳಲ್ಪಡಬಹುದು? ಒಳ್ಳೆಯದು, ಯೇಸು ಸಹ ತನ್ನ ಪರ್ವತ ಪ್ರಸಂಗದಲ್ಲಿ ಹೇಳಿದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು.” (ಮತ್ತಾಯ 5:11, 12) ನಿತ್ಯಜೀವದ ಗುರಿಯ ಕಡೆಗೆ ನಾವು ಮುನ್ನಡೆದಂತೆ, ನಮ್ಮ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವನ್ನು ನೋಡುವುದರಲ್ಲಿ ಆನಂದಕರ ಸಂತೃಪ್ತಿಯಿದೆ.—ಯೋಹಾನ 17:3; 2 ತಿಮೊಥೆಯ 4:7, 8; ಇಬ್ರಿಯ 11:8-10, 26, 35.
7. (ಎ) ತಾಳಿಕೊಳ್ಳುವಂತೆ ನಾವು ಹೇಗೆ ಸಹಾಯಿಸಲ್ಪಡಬಹುದು? (ಬಿ) ಯೋಬನಂತೆ ನಾವು ಹೇಗೆ ಬಹುಮಾನಿಸಲ್ಪಡಬಹುದು?
7 ಯೇಸು ತಾನೇ, “ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ” ತಾಳಿಕೊಂಡನು. (ಇಬ್ರಿಯ 12:1, 2) ಯೇಸುವಿನ ಧೈರ್ಯವಂತ ಮಾದರಿಯನ್ನು ತೀವ್ರಾಭಿಲಾಷೆಯಿಂದ ಅವಲೋಕಿಸುತ್ತ, ನಾವು ಸಹ ತಾಳಿಕೊಳ್ಳಬಲ್ಲೆವು! ಯಾಕೋಬನು ತನ್ನ ಪತ್ರದ ಕೊನೆಯಲ್ಲಿ ಉಲ್ಲೀಖಿಸುವಂತೆ, ಯೆಹೋವನು ಸಮಗ್ರತೆಯನ್ನು ಕಾಪಾಡಿಕೊಳ್ಳುವವರಿಗೆ ಹೇರಳವಾಗಿ ಪ್ರತಿಫಲ ನೀಡುತ್ತಾನೆ. “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ,” ಎಂದು ಯಾಕೋಬನು ಹೇಳುತ್ತಾನೆ. “ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ಯೋಬನು ಒಳ್ಳೆಯ ದೇಹಸ್ಥಿತಿಗೆ ಮತ್ತು ಪ್ರಿಯರೊಂದಿಗೆ ಒಂದು ಸಂಪೂರ್ಣವಾದ, ಸಂತುಷ್ಟ ಜೀವಿತದ ಆನಂದಿಸುವಿಕೆಗೆ ಪುನಸ್ಸಾಪ್ಥಿಸಲ್ಪಟ್ಟಾಗ, ಅವನ ಸಮಗ್ರತೆಯು ಹೇಗೆ ಬಹುಮಾನಿಸಲ್ಪಟ್ಟಿತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಸಮಗ್ರತೆಯಲ್ಲಿ ತಾಳ್ಮೆಯು, ಯೆಹೋವನನ್ನು ಈಗ ಸೇವಿಸುವುದರ ಆನಂದಕ್ಕೆ ಒಂದು ಪರಾಕಾಷ್ಠೆಯಾಗಿ ದೇವರ ಹೊಸ ಲೋಕದ ವಾಗ್ದಾನಿತ ಪ್ರಮೋದವನದಲ್ಲಿ ತದ್ರೀತಿಯ ಹರ್ಷವನ್ನು ನಿಮಗೆ ತರಬಲ್ಲದು.
ವಿವೇಕವನ್ನು ಅರಸುವುದು
8. ಸತ್ಯವಾದ, ಪ್ರಾಯೋಗಿಕ ವಿವೇಕವನ್ನು ನಾವು ಹೇಗೆ ಕಂಡುಕೊಳ್ಳಬಹುದು, ಮತ್ತು ಇದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?
8 ಅದರ ಪ್ರಾಯೋಗಿಕ ಅನ್ವಯದೊಂದಿಗೆ ದೇವರ ವಾಕ್ಯದ ನಮ್ಮ ಶ್ರದ್ಧೆಯುಳ್ಳ ಅಭ್ಯಾಸವು, ಸೈತಾನನ ನಶಿಸಿಹೋಗುತ್ತಿರುವ ವ್ಯವಸ್ಥೆಯ ಭ್ರಷ್ಟತೆಯ ನಡುವೆ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತಾ, ದಿವ್ಯ ವಿವೇಕದಲ್ಲಿ ಫಲಿಸುವುದು. ಅಂತಹ ವಿವೇಕವನ್ನು ಕಂಡುಕೊಳ್ಳುವುದರ ಬಗ್ಗೆ ನಾವು ಹೇಗೆ ಆಶ್ವಾಸನೆಯುಳ್ಳವರಾಗಿರಬಹುದು? ಯಾಕೋಬನು ನಮಗೆ ಹೇಳುವುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು.” (ಯಾಕೋಬ 1:5, 6) ಯೆಹೋವನು ನಮ್ಮ ಬಿನ್ನಹಗಳನ್ನು ಕೇಳುವನು ಮತ್ತು ಅವುಗಳನ್ನು ತಕ್ಕ ಸಮಯದಲ್ಲಿ ಮತ್ತು ವಿಧದಲ್ಲಿ ಉತ್ತರಿಸುವನೆಂಬ ಅಚಲ ಭರವಸೆಯೊಂದಿಗೆ ನಾವು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸತಕ್ಕದ್ದು.
9. ದಿವ್ಯ ವಿವೇಕ ಮತ್ತು ಅದರ ಅನ್ವಯವನ್ನು ಯಾಕೋಬನು ಹೇಗೆ ವರ್ಣಿಸುತ್ತಾನೆ?
9 ದಿವ್ಯ ವಿವೇಕವು ಯೆಹೋವನಿಂದ ಬಂದ ಒಂದು ಕೊಡುಗೆಯಾಗಿದೆ. ಅಂತಹ ಕೊಡುಗೆಗಳನ್ನು ವರ್ಣಿಸುತ್ತಾ, ಯಾಕೋಬನು ಹೇಳುವುದು: “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತವ್ವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ.” ಅನಂತರ ತನ್ನ ಪತ್ರದಲ್ಲಿ, ಸತ್ಯವಾದ ವಿವೇಕವನ್ನು ಸಂಪಾದಿಸುವುದರ ಫಲಿತಾಂಶವನ್ನು ಯಾಕೋಬನು ವಿವರಿಸುತ್ತಾನೆ. ಅವನು ಹೇಳುವುದು: “ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಲಕ್ಷಣವಾಗಿರುವ ಶಾಂತಗುಣದಿಂದ ಅದರ ಫಲವನ್ನು ತೋರಿಸಲಿ. . . . ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ ಕಪಟವೂ ಇಲ್ಲ.”—ಯಾಕೋಬ 1:17; 3:13-17.
10. ಸುಳ್ಳು ಧರ್ಮವು ಸತ್ಯ ಧರ್ಮದೊಂದಿಗೆ ವೈದೃಶ್ಯದಲ್ಲಿರುವುದು ಹೇಗೆ?
10 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದಲ್ಲಿ, ಕ್ರೈಸ್ತಪ್ರಪಂಚದಲಾಗ್ಲಲಿ ಅಥವಾ ಇತರ ದೇಶಗಳಲ್ಲಾಗಲಿ, ಕೆಲವು ಸ್ತೋತ್ರಗೀತೆಗಳನ್ನು ಹಾಡುವುದು, ಪುನರಾವೃತ್ತಿಸುವ ಪ್ರಾರ್ಥನೆಗಳನ್ನು ಆಲಿಸುವುದು ಮತ್ತು ಬಹುಶಃ ಒಂದು ಭಾಷಣವನ್ನು ಕೇಳುವುದು ಅನೇಕ ವೇಳೆ ಆರಾಧಕರಿಗೆ ರೂಢಿಯಾಗಿರುತ್ತದೆ. ಹೆಚ್ಚಿನ ಧರ್ಮಗಳು ಭವಿಷ್ಯಕ್ಕಾಗಿ ಯಾವುದೇ ಉಜ್ವಲ ಪ್ರತೀಕ್ಷೆಯನ್ನು ನೋಡದಿರುವ ಕಾರಣ, ನಿರೀಕ್ಷೆಯ ಸಂದೇಶವನ್ನು ಘೋಷಿಸುವುದರ ವಿಷಯದಲ್ಲಿ ಯಾವ ಉತ್ತೇಜನವೂ ಕೊಡಲ್ಪಡುವುದಿಲ್ಲ. ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಮಹಿಮಾಭರಿತ ನಿರೀಕ್ಷೆಯು, ಎಂದೂ ಉಲ್ಲೇಖಿಸಲ್ಪಡುವುದಿಲ್ಲ, ಅಥವಾ ಅದು ಸಂಪೂರ್ಣವಾಗಿ ಅಪಾರ್ಥಮಾಡಿಕೊಳ್ಳಲ್ಪಟ್ಟಿದೆ. ಕ್ರೈಸ್ತಪ್ರಪಂಚದ ಅನುಯಾಯಿಗಳ ಕುರಿತು ಯೆಹೋವನು ಪ್ರವಾದನಾತ್ಮಕವಾಗಿ ಹೇಳುವುದು: “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟಿದ್ದಾರೆ, ತಮಗೋಸ್ಕರ ತೊಟ್ಟಿಗಳನ್ನು, ನೀರು ನಿಲ್ಲದ ಬಿರಿದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ.” (ಯೆರೆಮೀಯ 2:13) ಅವರಲ್ಲಿ ಸತ್ಯದ ನೀರುಗಳಿಲ್ಲ. ಸ್ವರ್ಗೀಯ ವಿವೇಕದ ಕೊರತೆಯಿದೆ.
11, 12. (ಎ) ದೈವಿಕ ವಿವೇಕವು ನಮ್ಮನ್ನು ಹೇಗೆ ಪ್ರಚೋದಿಸತಕ್ಕದ್ದು? (ಬಿ) ಯಾವ ವಿಷಯದ ಕುರಿತು ದೈವಿಕ ವಿವೇಕವು ನಮ್ಮನ್ನು ಎಚ್ಚರಿಸುತ್ತದೆ?
11 ಇಂದು ಯೆಹೋವನ ಸಾಕ್ಷಿಗಳ ಮಧ್ಯದಲ್ಲಿ ಇದು ಎಷ್ಟು ಭಿನ್ನವಾಗಿದೆ! ದೈವದತ್ತ ಪ್ರೇರಕಶಕ್ತಿಯೊಂದಿಗೆ ಅವರು ಆತನ ಬರಲಿರುವ ರಾಜ್ಯದ ಸುವಾರ್ತೆಯಿಂದ ಭೂಮಿಯನ್ನು ಪ್ರವಹಿಸುತ್ತಿದ್ದಾರೆ. ಅವರು ಮಾತಾಡುವ ವಿವೇಕವು ದೇವರ ವಾಕ್ಯದ ಮೇಲೆ ದೃಢವಾಗಿ ಆಧರಿಸಿದೆ. (ಹೋಲಿಸಿ ಜ್ಞಾನೋಕ್ತಿ 1:20; ಯೆಶಾಯ 40:29-31.) ನಿಶ್ಚಯವಾಗಿಯೂ, ಅವರು ನಮ್ಮ ದೇವರ ಮತ್ತು ಸೃಷ್ಟಿಕರ್ತನ ಮಹತ್ತರವಾದ ಉದ್ದೇಶಗಳನ್ನು ಘೋಷಿಸುವುದರಲ್ಲಿ, ಸತ್ಯವಾದ ಜ್ಞಾನ ಮತ್ತು ತಿಳಿವಳಿಕೆಯ ಪ್ರಾಯೋಗಿಕ ಉಪಯೋಗವನ್ನು ಮಾಡುತ್ತಾರೆ. ಸಭೆಯಲ್ಲಿರುವವರೆಲ್ಲರು “ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ [ದೇವರ] ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು” ಇರಬೇಕೆಂಬುದು ನಮ್ಮ ಅಪೇಕ್ಷೆಯಾಗಿರತಕ್ಕದ್ದು. (ಕೊಲೊಸ್ಸೆ 1:9) ಈ ಆಧಾರದೊಂದಿಗೆ, ಯುವ ಜನರು ಮತ್ತು ವೃದ್ಧರು—ಉಭಯರೂ—ಸದಾ “ವಾಕ್ಯದ ಪ್ರಕಾರ ಮಾಡು”ವವರಾಗಲು ಪ್ರಚೋದಿಸಲ್ಪಡುವರು.
12 “ಮೇಲಣಿಂದ ಬರುವ ಜ್ಞಾನವು,” ದೈವಿಕ ಅಸಮ್ಮತಿಯಲ್ಲಿ ಫಲಿಸಬಹುದಾದ ಪಾಪಗಳ ಕುರಿತು ನಮ್ಮನ್ನು ಎಚ್ಚರಿಸುತ್ತದೆ. “ನನ್ನ ಪ್ರಿಯ ಸಹೋದರರೇ, ಇದನ್ನು ಬಲ್ಲವರಾಗಿರಿ,” ಎಂದು ಯಾಕೋಬನು ಹೇಳುತ್ತಾನೆ. “ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ; ಮನುಷ್ಯನ ಕೋಪವು ದೇವರಿಗೆ ಮೆಚ್ಚಿಕೆಯಾಗಿರುವ ನೀತಿಗೆ ಅನುಕೂಲವಾಗುವದಿಲ್ಲ.” ಹೌದು, ನಾವು ದೈವಿಕ ಸಲಹೆಯನ್ನು ಕೇಳಲು ಮತ್ತು ಅದನ್ನು ಅನ್ವಯಿಸಲು, ತೀವ್ರವಾಗಿಯೂ ಆತುರರಾಗಿಯೂ ಇರಬೇಕು. ಹಾಗಿದ್ದರೂ, ಆ “ಚಿಕ್ಕ ಅಂಗ”ವಾದ ನಾಲಿಗೆಯ ದುರುಪಯೋಗದ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು. ಜಂಬಕೊಚ್ಚಿಕೊಳ್ಳುವ, ಬುದ್ಧಿಹೀನ ಗೊಡ್ಡುಹರಟೆಯ, ಅಥವಾ ಸ್ವಾಭಿಪ್ರಾಯದ ಛಲವುಳ್ಳ ಮಾತಿನ ಮುಖಾಂತರ, ನಾಲಿಗೆಯು ಸಾಂಕೇತಿಕವಾಗಿ ಒಂದು “ದೊಡ್ಡ ಕಾಡನ್ನು” ಉರಿಸಬಲ್ಲದು. ಆದುದರಿಂದ ನಾವು ನಮ್ಮೆಲ್ಲ ಸಾಹಚರ್ಯಗಳಲ್ಲಿ ಮನೋಹರತೆಯನ್ನು ಮತ್ತು ಆತ್ಮನಿಯಂತ್ರಣವನ್ನು ಬೆಳೆಸಬೇಕಾಗಿದೆ.—ಯಾಕೋಬ 1:19, 20, NW; 3:5.
13. ‘ವಾಕ್ಯದ ನೆಡುವಿಕೆಯನ್ನು’ ನಾವು ಸ್ವೀಕರಿಸುವಂತಹದ್ದು ಏಕೆ ಪ್ರಾಮುಖ್ಯವಾಗಿದೆ?
13 “ಆದಕಾರಣ,” ಯಾಕೋಬನು ಬರೆಯುವುದು, “ಎಲ್ಲಾ ನೀಚತನವನ್ನೂ ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ವಾಕ್ಯಕ್ಕೆ ನಮ್ರತೆಯಿಂದ ಎಡೆಗೊಡಿರಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸುವದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.” (ಯಾಕೋಬ 1:21) ಈ ಅತ್ಯಾಶೆಯ ಲೋಕವು, ತನ್ನ ಆಡಂಬರದ, ಪ್ರಾಪಂಚಿಕ, ನಾನು ಮೊದಲೆಂಬ ಜೀವನ ಶೈಲಿ ಮತ್ತು ಕೆಳದರ್ಜೆಯ ನೈತಿಕ ನಡತೆಯೊಂದಿಗೆ ಗತಿಸಿಹೋಗಲಿದೆ. “ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ಹಾಗಾದರೆ, ನಾವು ‘ವಾಕ್ಯದ ನೆಡುವಿಕೆಯನ್ನು’ ಸ್ವೀಕರಿಸುವುದು ಎಷ್ಟು ಪ್ರಾಮುಖ್ಯವಾಗಿದೆ! ದೇವರ ವಾಕ್ಯದ ಮೂಲಕ ಒದಗಿಸಲ್ಪಡುವ ವಿವೇಕವು, ನಶಿಸಿಹೋಗುತ್ತಿರುವ ಈ ಲೋಕದ ಕೆಟ್ಟತನಕ್ಕೆ ತೀರ ವ್ಯತಿರಿಕ್ತವಾಗಿದೆ. ಆ ಕೆಟ್ಟತನದಲ್ಲಿ ಕಿಂಚಿತ್ತೂ ನಮಗೆ ಬೇಡ. (1 ಪೇತ್ರ 2:1, 2) ನಮ್ಮ ಹೃದಯಗಳಲ್ಲಿ ಸತ್ಯದ ಪ್ರೀತಿಯು ಮತ್ತು ಬಲವಾದ ನಂಬಿಕೆಯು ನೆಡಲ್ಪಡಬೇಕಾದ ಅಗತ್ಯ ನಮಗಿದೆ, ಇದರಿಂದ ನಾವು ಯೆಹೋವನ ನೀತಿಯ ಮಾರ್ಗಗಳಿಂದ ಎಂದಿಗೂ ದಾರಿ ತಪ್ಪದಿರಲು ನಿಶ್ಚಿತರಾಗಿರುವೆವು. ಆದರೆ ದೇವರ ವಾಕ್ಯಕ್ಕೆ ಕಿವಿಗೊಡುವುದು ಮಾತ್ರ ಸಾಕೊ?
“ವಾಕ್ಯದ ಪ್ರಕಾರ ಮಾಡು”ವವರಾಗುವುದು
14. ನಾವು ವಾಕ್ಯವನ್ನು “ಕೇಳುವವರು” ಮತ್ತು “ಮಾಡುವವರು”—ಉಭಯರೂ—ಆಗಸಾಧ್ಯವಿದೆ ಹೇಗೆ?
14 ಯಾಕೋಬ 1:22ರಲ್ಲಿ ನಾವು ಓದುವುದು: “ವಾಕ್ಯದ ಪ್ರಕಾರ ಮಾಡುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ.” “ವಾಕ್ಯದ ಪ್ರಕಾರ ಮಾಡುವವರಾಗಿರಿ”! ಈ ಮುಖ್ಯವಿಷಯವು ಖಂಡಿತವಾಗಿಯೂ ಯಾಕೋಬನ ಪತ್ರದಲ್ಲಿ ಅತ್ಯುಜಲ್ವಪಡಿಸಲ್ಪಟ್ಟಿದೆ. ನಾವು ಆಲಿಸಬೇಕು, ನಂತರ “ಹಾಗೆಯೇ” ಮಾಡಬೇಕು! (ಆದಿಕಾಂಡ 6:22, NW) ಆಗಿಂದಾಗ್ಗೆ ಒಂದು ಪ್ರಸಂಗವನ್ನು ಕೇಳುವುದು ಅಥವಾ ಯಾವುದೊ ಔಪಚಾರಿಕ ಆರಾಧನೆಯಲ್ಲಿ ಭಾಗವಹಿಸುವುದು ಸಾಕೆಂದು ಅನೇಕ ಜನರು ಇಂದು ಪ್ರತಿಪಾದಿಸುತ್ತಾರೆ, ಆದರೆ ಅದಕ್ಕಿಂತ ಹೆಚ್ಚಿನದನ್ನು ಅವರು ಮಾಡುವುದಿಲ್ಲ. ತಮ್ಮ ಮಟ್ಟಗಳಿಗನುಸಾರ ಒಂದು ‘ಒಳ್ಳೆಯ ಜೀವನ’ವನ್ನು ತಾವು ಜೀವಿಸುವಷ್ಟು ಕಾಲ ಅದು ಸಾಕಾಗಿರುವುದೆಂದು ಅವರು ನೆನಸಬಹುದು. ಆದರೂ ಯೇಸು ಕ್ರಿಸ್ತನು ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24) ದೇವರ ಚಿತ್ತವನ್ನು ಮಾಡುವ ಯೇಸುವಿನ ನಮೂನೆಯನ್ನು ಅನುಸರಿಸುವುದರಲ್ಲಿ, ಆತ್ಮ ತ್ಯಾಗದ ಕ್ರಿಯೆ ಮತ್ತು ತಾಳ್ಮೆಯು ಸತ್ಯ ಕ್ರೈಸ್ತರಿಂದ ಸ್ಪಷ್ಟವಾಗಿಗಿ ಕೇಳಿಕೊಳ್ಳಲ್ಪಡುತ್ತವೆ. ಅವರಿಗೆ ದೇವರ ಚಿತ್ತವು, ಪ್ರಥಮ ಶತಮಾನದಲ್ಲಿ ಪುನರುತಿತ್ಥ ಯೇಸು ಆಜ್ಞಾಪಿಸಿದಂತೆಯೇ ಇಂದು ಸಹ ಇದೆ: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾಯ 28:19) ಈ ವಿಷಯದಲ್ಲಿ ನೀವು ಹೇಗೆ ಕಾರ್ಯನಡಿಸುತ್ತಿದ್ದೀರಿ?
15. (ಎ) “ವಾಕ್ಯದ ಪ್ರಕಾರ ಮಾಡು”ವವರೋಪಾದಿ ನಾವು ಹೇಗೆ ಸಂತೋಷಿತರಾಗಬಹುದೆಂಬುದನ್ನು ತೋರಿಸುತ್ತಾ, ಯಾವ ದೃಷ್ಟಾಂತವನ್ನು ಯಾಕೋಬನು ಕೊಡುತ್ತಾನೆ? (ಬಿ) ಬರಿಯ ಔಪಚಾರಿಕವಾದ ಆರಾಧನೆಯು ಏಕೆ ಸಾಕಾಗದು?
15 ನಾವು ದೇವರ ವಾಕ್ಯದೊಳಗೆ ಇಣಿಕಿ ನೋಡುತ್ತಾ ಇರುವುದಾದರೆ, ನಾವು ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆಂದು ನಮಗೆ ಪ್ರತಿಬಿಂಬಿಸುವುದರಲ್ಲಿ ಅದು ಒಂದು ಕನ್ನಡಿಯ ಹಾಗೆ ಇರಬಲ್ಲದು. ಯಾಕೋಬನು ಹೇಳುವುದು: “ಆದರೆ ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ಮಾಡುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.” (ಯಾಕೋಬ 1:23-25) ಹೌದು, ಅವನು ಸಂತೋಷದಿಂದ ‘ವಾಕ್ಯದ ಪ್ರಕಾರ ಮಾಡು’ವವನಾಗುವನು. ಅಷ್ಟೇ ಅಲ್ಲದೆ ನಮ್ಮ ಕ್ರೈಸ್ತ ಜೀವಿತಗಳ ಪ್ರತಿಯೊಂದು ವಿವರದಲ್ಲಿ “ಮಾಡು”ವವರಾಗಿರುವುದು ಪ್ರಾಮುಖ್ಯವಾಗಿದೆ. ಬರಿಯ ಔಪಚಾರಿಕ ಆರಾಧನೆಯು ಸಾಕೆಂದು ಯೋಚಿಸುತ್ತ ನಾವು ಎಂದಿಗೂ ಆತ್ಮವಂಚನೆಮಾಡಿಕೊಳ್ಳಬಾರದು. ಹುರುಪುಳ್ಳ ಕ್ರೈಸ್ತರು ಸಹ ಅಲಕ್ಷಿಸಿರಬಹುದಾದ ಸತ್ಯಾರಾಧನೆಯ ಕೆಲವು ಅಂಶಗಳನ್ನು ಆಚರಿಸುವಂತೆ ಯಾಕೋಬನು ಸಲಹೆ ನೀಡುತ್ತಾನೆ. ಅವನು ಬರೆಯುವುದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.”—ಯಾಕೋಬ 1:27.
16. ಯಾವ ವಿಧಗಳಲ್ಲಿ ಅಬ್ರಹಾಮನು ‘ಯೆಹೋವನ ಸ್ನೇಹಿತ’ನಾದನು, ಮತ್ತು ನಾವು ಆತನ ಸ್ನೇಹವನ್ನು ಹೇಗೆ ಗಳಿಸಬಹುದು?
16 ‘ದೇವರಲ್ಲಿ ನನಗೆ ನಂಬಿಕೆಯಿದೆ’ ಎಂದು ಮಾತ್ರ ಹೇಳಿ, ವಿಷಯಗಳನ್ನು ಅಲ್ಲಿಗೆ ಬಿಡುವುದು ಸಾಕಾಗದು. ಯಾಕೋಬ 2:19 ಗಮನಿಸುವಂತೆ: “ದೇವರು ಒಬ್ಬನೇ ಎಂದು ನೀನು ನಂಬುವವನು. ಹಾಗೆ ನಂಬುವದು ಒಳ್ಳೇದು. ದೆವ್ವಗಳು ಕೂಡ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.” “ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು,” ಎಂಬುದನ್ನು ಯಾಕೋಬನು ಒತ್ತಿಹೇಳುತ್ತಾನೆ, ಮತ್ತು ಅಬ್ರಹಾಮನನ್ನು ಸೂಚಿಸುತ್ತ ಹೇಳುವುದು: “ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬದು ಕಾಣಬರುತ್ತದಲ್ಲಾ.” (ಯಾಕೋಬ 2:17, 20-22) ಅಬ್ರಹಾಮನ ಕ್ರಿಯೆಗಳಲ್ಲಿ, ತನ್ನ ರಕ್ತಸಂಬಂಧಿಗಳಿಗೆ ಪರಿಹಾರವನ್ನು ಒದಗಿಸುವುದು, ಅತಿಥಿಸತ್ಕಾರವನ್ನು ತೋರಿಸುವುದು, ಇಸಾಕನನ್ನು ಅರ್ಪಿಸಲು ಸಿದ್ಧಮಾಡುವುದು, ಮತ್ತು “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು,” ಭವಿಷ್ಯತ್ತಿನ ಮೆಸ್ಸೀಯ ಸಂಬಂಧಿತ ರಾಜ್ಯದ ದೇವರ ವಾಗ್ದಾನದಲ್ಲಿ ಅಚಲ ನಂಬಿಕೆಯನ್ನು ‘ಬಹಿರಂಗವಾಗಿ ಪ್ರಕಟಿಸುವುದು’ ಒಳಗೊಂಡಿದ್ದವು. (ಆದಿಕಾಂಡ 14:16; 18:1-5; 22:1-18; ಇಬ್ರಿಯ 11:8-10, 13, 14; 13:2) ಸೂಕ್ತವಾಗಿಯೇ, ಅಬ್ರಹಾಮನು “ದೇವರ ಸ್ನೇಹಿತ”ನೆಂದು ಕರೆಯಲ್ಪಟ್ಟನು. (ಯಾಕೋಬ 2:23) ಆತನ ಬರಲಿರುವ ನೀತಿಯ ರಾಜ್ಯದಲ್ಲಿ ನಮ್ಮ ನಂಬಿಕೆ ಮತ್ತು ನಿರೀಕ್ಷೆಯನ್ನು ನಾವು ಸಕ್ರಿಯವಾಗಿ ಘೋಷಿಸುವಾಗ, ನಾವು ಕೂಡ ‘ಯೆಹೋವನ ಸ್ನೇಹಿತ’ರೆಂದು ಎಣಿಸಲ್ಪಡಬಹುದು.
17. (ಎ) ರಾಹಾಬಳು ಏಕೆ ‘ನೀತಿವಂತೆ ಎಂದು ಘೋಷಿಸಲ್ಪಟ್ಟಳು,’ ಮತ್ತು ಆಕೆ ಬಹುಮಾನಿಸಲ್ಪಟ್ಟದ್ದು ಹೇಗೆ? (ಬಿ) ‘ವಾಕ್ಯದ ಪ್ರಕಾರ ಮಾಡಿದವರ’ ಯಾವ ದೀರ್ಘವಾದ ಪಟ್ಟಿಯನ್ನು ಬೈಬಲು ಒದಗಿಸುತ್ತದೆ? (ಸಿ) ಯೋಬನು ಹೇಗೆ ಬಹುಮಾನಿಸಲ್ಪಟ್ಟನು, ಮತ್ತು ಏಕೆ?
17 “ವಾಕ್ಯದ ಪ್ರಕಾರ ಮಾಡು”ವವರು ನಿಶ್ಚಯವಾಗಿ ‘ಕ್ರಿಯೆಗಳಿಂದ ನೀತಿವಂತರೆಂದು ನಿರ್ಣಯಿಸಲ್ಪಡುತ್ತಾರೇ ಹೊರತು ಬರೀ ನಂಬಿಕೆಯಿಂದಲ್ಲ.’ (ಯಾಕೋಬ 2:24) ಯೆಹೋವನ ಅದ್ಭುತಕಾರ್ಯಗಳ ಕುರಿತು ತಾನು ಕೇಳಿದ್ದ “ವಾಕ್ಯ”ದಲ್ಲಿನ ತನ್ನ ನಂಬಿಕೆಗೆ ಕ್ರಿಯೆಗಳನ್ನು ಕೂಡಿಸಿದವಳೊಬ್ಬಳು ರಾಹಾಬಳಾಗಿದ್ದಳು. ಇಸ್ರಾಯೇಲ್ಯ ಗೂಢಚಾರರನ್ನು ಅಡಗಿಸಿಟ್ಟು, ತಪ್ಪಿಸಿಕೊಳ್ಳುವಂತೆ ಆಕೆ ಅವರಿಗೆ ಸಹಾಯ ಮಾಡಿದಳು, ಮತ್ತು ನಂತರ ಸಂರಕ್ಷಣೆಗಾಗಿ ತನ್ನ ತಂದೆಯ ಮನೆವಾರ್ತೆಯನ್ನು ಒಟ್ಟುಗೂಡಿಸಿದಳು. ಕ್ರಿಯೆಗಳಿಂದ ಬೆಂಬಲಿಸಲ್ಪಟ್ಟ ಆಕೆಯ ನಂಬಿಕೆಯು, ತಾನು ಮೆಸ್ಸೀಯನ ಪೂರ್ವಜಳಾಗುವುದಕ್ಕೆ ನಡೆಸಿತೆಂಬುದನ್ನು ತಿಳಿಯಲು ಪುನರುತ್ಥಾನದಲ್ಲಿ ಆಕೆ ಎಷ್ಟು ಹರ್ಷಿಸುವಳು! (ಯೆಹೋಶುವ 2:11; 6:25; ಮತ್ತಾಯ 1:5) ತಮ್ಮ ನಂಬಿಕೆಯನ್ನು ಪ್ರದರ್ಶಿಸುವುದರಲ್ಲಿ ‘ಮಾಡುವವರಾದ’ ಇತರರ ಒಂದು ದೀರ್ಘವಾದ ಪಟ್ಟಿಯನ್ನು ಇಬ್ರಿಯ 11ನೆಯ ಅಧ್ಯಾಯವು ಒದಗಿಸುತ್ತದೆ, ಮತ್ತು ಅವರು ಹೇರಳವಾಗಿ ಬಹುಮಾನಿಸಲ್ಪಡುವರು. ಉಗ್ರವಾದ ಪರೀಕ್ಷೆಯ ಸಮಯದಲ್ಲಿ ಹೀಗೆಂದು ಹೇಳಿದ ಯೋಬನನ್ನೂ ನಾವು ಮರೆಯಬಾರದು: “ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ.” ನಾವು ಈಗಾಗಲೇ ಗಮನಿಸಿರುವಂತೆ, ಅವನ ನಂಬಿಕೆ ಮತ್ತು ಕ್ರಿಯೆಗಳು ಮಹತ್ತರವಾದ ಬಹುಮಾನದಲ್ಲಿ ಫಲಿಸಿದವು. (ಯೋಬ 1:21; 31:6; 42:10; ಯಾಕೋಬ 5:11) ತದ್ರೀತಿಯಲ್ಲಿ, “ವಾಕ್ಯದ ಪ್ರಕಾರ ಮಾಡು”ವವರೋಪಾದಿ ಇಂದು ನಮ್ಮ ತಾಳ್ಮೆಯು, ಯೆಹೋವನ ಅನುಗ್ರಹದ ಮುಗುಳುನಗೆಯನ್ನು ತರುವುದು.
18, 19. ದೀರ್ಘ ಸಮಯದಿಂದ ಹಿಂಸಿಸಲ್ಪಟ್ಟ ಸಹೋದರರು ಹೇಗೆ “ವಾಕ್ಯದ ಪ್ರಕಾರ ಮಾಡು”ವವರಾದರು, ಮತ್ತು ಅವರ ಚಟುವಟಿಕೆಯು ಯಾವ ಆಶೀರ್ವಾದವನ್ನು ತಂದಿದೆ?
18 ಅನೇಕ ವರ್ಷಗಳಿಂದ ಹೆಚ್ಚನ್ನು ತಾಳಿಕೊಂಡಿರುವವರಲ್ಲಿ, ಪೂರ್ವ ಯೂರೋಪ್ನ ನಮ್ಮ ಸಹೋದರರು ಸೇರಿದ್ದಾರೆ. ಈಗ ಅನೇಕ ನಿರ್ಬಂಧಗಳು ತೆಗೆಯಲ್ಪಟ್ಟಿರುವುದರಿಂದ, ಇವರು ತಮ್ಮ ಹೊಸ ಪರಿಸರದಲ್ಲಿ ನಿಜವಾಗಿಯೂ “ವಾಕ್ಯದ ಪ್ರಕಾರ ಮಾಡು”ವವರಾಗಿ ಪರಿಣಮಿಸಿದ್ದಾರೆ. ಮಿಷನೆರಿಗಳು ಮತ್ತು ನೆರೆಹೊರೆಯ ದೇಶಗಳಿಂದ ಬಂದ ಪಯನೀಯರರು, ಕಲಿಸುವುದರಲ್ಲಿ ಮತ್ತು ಸಂಘಟಿಸುವುದರಲ್ಲಿ ನೆರವು ನೀಡಲು ಅಲ್ಲಿಗೆ ಹೋಗಿದ್ದಾರೆ. ಫಿನ್ಲೆಂಡ್ ಬ್ರಾಂಚ್ ಮತ್ತು ವಾಚ್ ಟವರ್ ಸೊಸೈಟಿಯ ಇತರ ಹತ್ತಿರದ ಬ್ರಾಂಚ್ಗಳು, ನಿರ್ಮಾಣ ವಿಧಾನಗಳಲ್ಲಿ ನಿಪುಣರಾದ ಕಾರ್ಮಿಕರನ್ನು ಕಳುಹಿಸಿವೆ, ಮತ್ತು ಉದಾರವಾದ ಲೋಕವ್ಯಾಪಕ ಸಹೋದರತ್ವವು ಹೊಸ ಬ್ರಾಂಚ್ ಆಫೀಸುಗಳ ಮತ್ತು ರಾಜ್ಯ ಸಭಾಗ್ರಹಗಳ ನಿರ್ಮಾಣಕ್ಕೆ ಹಣಕಾಸನ್ನು ಒದಗಿಸಿದೆ.—ಹೋಲಿಸಿ 2 ಕೊರಿಂಥ 8:14, 15.
19 ದೀರ್ಘ ಸಮಯದಿಂದ ಹಿಂಸಿಸಲ್ಪಟ್ಟ ಆ ಸಹೋದರರು, ಕ್ಷೇತ್ರದಲ್ಲಿ ಎಷ್ಟು ಹುರುಪಿನಿಂದ ಪ್ರತಿಕ್ರಿಯಿಸಿದ್ದಾರೆ! ಹಾಗೆ ಹೇಳುವುದಾದರೆ, “ಅನುಕೂಲವಿಲ್ಲದ ಕಾಲದ” ಸಮಯದಲ್ಲಿ ಲಭ್ಯವಿದ್ದಲ್ಲದ ಅವಕಾಶಗಳ ಬೆನ್ನು ಹಿಡಿಯುತ್ತಾರೊ ಎಂಬಂತೆ, ಅವರು ‘ಕಷ್ಟಪಡುತ್ತಾರೆ ಮತ್ತು ತಮ್ಮನ್ನು ಪ್ರಯಾಸಪಡಿಸಿಕೊಳ್ಳುತ್ತಾರೆ.’ (1 ತಿಮೊಥೆಯ 4:10; 2 ತಿಮೊಥೆಯ 4:2) ಉದಾಹರಣೆಗೆ, ಎಲ್ಲಿ ನಿರೋಧವು ಬಹಳ ಕ್ರೂರವಾಗಿತ್ತೊ, ಆ ಆ್ಯಲ್ಬೇನಿಯದಲ್ಲಿ ಕಳೆದ ಎಪ್ರಿಲ್ನಲ್ಲಿ, “ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ?” ಎಂಬ ಶೀರ್ಷಿಕೆಯುಳ್ಳ ರಾಜ್ಯ ವಾರ್ತೆಯ ಇಡೀ ಸಂಗ್ರಹವು, ಕೇವಲ ಮೂರು ದಿನಗಳಲ್ಲಿ ವಿತರಿಸಲ್ಪಟ್ಟಿತು. ಇದು 3,491 ವ್ಯಕ್ತಿಗಳು—ಅವರ 538 ಸಕ್ರಿಯ ಪ್ರಚಾರಕರಿಗಿಂತ ಎಷ್ಟೊ ಹೆಚ್ಚು—ಹಾಜರಾದ ಯೇಸುವಿನ ಮರಣದ ಸ್ಮಾರಕಕ್ಕೆ ಒಂದು ಸೊಗಸಾದ ಅನುಸರಣೆಯಾಗಿತ್ತು.
20. ಇತ್ತೀಚಿನ ಸ್ಮಾರಕ ಹಾಜರಿಗಳು ಏನನ್ನು ಸೂಚಿಸುತ್ತವೆ, ಮತ್ತು ಅನೇಕರು ಹೇಗೆ ಸಹಾಯಿಸಲ್ಪಡಬಹುದು?
20 ಇತ್ತೀಚಿನ ವರ್ಷಗಳಲ್ಲಿ, 1,00,00,000ಕ್ಕೂ ಹೆಚ್ಚಾಗಿರುವ ಸ್ಮಾರಕ ಹಾಜರಿಗಳಿಗೆ ಇತರ ದೇಶಗಳು ಸಹ ಮಹತ್ವದ ಕಾಣಿಕೆಯನ್ನು ಮಾಡಿವೆ. ಅನೇಕ ಸ್ಥಳಗಳಲ್ಲಿ ಹೊಸಬರು, ಸ್ಮಾರಕಕ್ಕೆ ಹಾಜರಾಗುವ ಮತ್ತು ಅವಲೋಕಿಸುವ ಮೂಲಕ ತಮ್ಮ ನಂಬಿಕೆಯನ್ನು ಬಲಪಡಿಸಿಕೊಂಡು, ‘ವಾಕ್ಯದ ಪ್ರಕಾರ ಮಾಡುವವರಾಗು’ತ್ತಿದ್ದಾರೆ. ಆ ಸುಯೋಗಕ್ಕಾಗಿ ಅರ್ಹರಾಗುವಂತೆ ಹೆಚ್ಚಿನ ಹೊಸ ಸಹವಾಸಿಗಳನ್ನು ನಾವು ಉತ್ತೇಜಿಸಸಾಧ್ಯವಿದೆಯೊ?
21. ನಮ್ಮ ವರ್ಷವಚನಕ್ಕನುಸಾರ, ಯಾವ ಮಾರ್ಗವನ್ನು ನಾವು ಬೆನ್ನಟ್ಟುತಕ್ಕದ್ದು, ಮತ್ತು ಯಾವ ಗುರಿಯಿಂದ?
21 ಪ್ರಥಮ ಶತಮಾನದಲ್ಲಿನ ಮತ್ತು ಆ ಸಮಯದಿಂದ ಹಿಡಿದು ಇನ್ನೂ ಹೆಚ್ಚಿನ ಹುರುಪುಳ್ಳ ಕ್ರೈಸ್ತರಂತೆ, ನಿತ್ಯಜೀವದ—ಅದು ಸ್ವರ್ಗೀಯ ರಾಜ್ಯದಲ್ಲಾಗಿರಲಿ ಅಥವಾ ಅದರ ಭೌಮಿಕ ಪರಿಸರದಲ್ಲಾಗಿರಲಿ—‘ಗುರಿಯನ್ನು ಬೆನ್ನಟ್ಟು’ವುದರಲ್ಲಿ ನಮ್ಮನ್ನು ಪ್ರಯಾಸಪಡಿಸಿಕೊಳ್ಳಲು ನಾವು ನಿಶ್ಚಿತರಾಗಿರೋಣ. (ಫಿಲಿಪ್ಪಿ 3:12-14) ಆ ಗುರಿಯನ್ನು ಸಾಧಿಸಲು ನಾವು ಮಾಡುವ ಪ್ರತಿಯೊಂದು ಪ್ರಯತ್ನಕ್ಕೆ ಅದು ಯೋಗ್ಯವಾಗಿದೆ. ಕೇವಲ ಕೇಳುಗರಾಗಿರುವುದಕ್ಕೆ ಮರುಕೊಳಿಸುವ ಸಮಯ ಇದಾಗಿರುವುದಿಲ್ಲ, ಬದಲಿಗೆ ‘ಬಲಿಷ್ಠರಾಗಿರಲು ಮತ್ತು ಕೆಲಸಮಾಡಲು’ ಇರುವ ಎಲ್ಲ ಸಮಯಗಳ ಸಮಯವಾಗಿದೆ. (ಹಗ್ಗಾಯ 2:4; ಇಬ್ರಿಯ 6:11, 12) ನಾವು ‘ವಾಕ್ಯದ ನೆಡುವಿಕೆಯನ್ನು ಸ್ವೀಕರಿಸಿ’ರುವುದರಿಂದ, ಈಗ ಮತ್ತು ಭಾವೀ ನಿತ್ಯತೆಯಲ್ಲಿ ‘ವಾಕ್ಯದ ಹರ್ಷಭರಿತ ಮಾಡಾಳುಗಳು’ ಆಗಿರುವಂತಾಗಲಿ.
ನೀವು ಹೇಗೆ ಉತ್ತರಿಸುವಿರಿ?
◻ ನಾವು ಹೇಗೆ ಆನಂದದಿಂದ ತಾಳಿಕೊಳ್ಳಬಹುದು?
◻ “ಮೇಲಣಿಂದ ಬರುವ ಜ್ಞಾನವು” ಏನಾಗಿದೆ ಮತ್ತು ನಾವು ಅದನ್ನು ಹೇಗೆ ಬೆನ್ನಟ್ಟಬಹುದು?
◻ ನಾವು ‘ವಾಕ್ಯದ ಪ್ರಕಾರ ಮಾಡುವವರಾಗಿದ್ದು, ಅದನ್ನು ಕೇಳುವವರಾಗಿ ಮಾತ್ರ’ ಇರಬಾರದೇಕೆ?
◻ “ವಾಕ್ಯದ ಪ್ರಕಾರ ಮಾಡು”ವವರಾಗಿರುವಂತೆ ಯಾವ ವರದಿಗಳು ನಮ್ಮನ್ನು ಪ್ರಚೋದಿಸತಕ್ಕದ್ದು?
[ಪುಟ 17 ರಲ್ಲಿರುವ ಚಿತ್ರ]
ದೈವಿಕ ಬೋಧನೆಗೆ ನಾವು ಸಹ ನಮ್ಮ ಹೃದಯಗಳನ್ನು ತೆರೆಯುವಂತಾಗಲಿ
[ಪುಟ 18 ರಲ್ಲಿರುವ ಚಿತ್ರ]
ಪ್ರಿಯರೊಂದಿಗೆ ಒಂದು ಸಂಪೂರ್ಣವಾದ, ಸಂತುಷ್ಟ ಜೀವಿತಕ್ಕೆ ಅವನು ಪುನಸ್ಸಾಪ್ಥಿಸಲ್ಪಡುವ ಮೂಲಕ, ಯೋಬನ ಸಮಗ್ರತೆಯು ಬಹುಮಾನಿಸಲ್ಪಟ್ಟಿತು