ಕೆಟ್ಟ ವಿಷಯವನ್ನು ಏಕೆ ವರದಿಸಬೇಕು?
“ಒಂದು ವಿಷಯವನ್ನು ಬಹಿರಂಗಗೊಳಿಸುವವನು, ಜನರ ಶತ್ರುವಾಗಿ ಪರಿಣಮಿಸುತ್ತಾನೆ” ಎಂದು ಪಶ್ಚಿಮ ಆಫ್ರಿಕದಲ್ಲಿ ಕೆಲವರು ಹೇಳುತ್ತಾರೆ. ತನ್ನ ತಂಗಿಯೊಂದಿಗೆ ಅಗಮ್ಯಗಮನ ನಡೆಸಿದ್ದ ಕಾರಣವಾಗಿ ತನ್ನ ಅಣ್ಣನನ್ನು ನಿಂದಿಸಿದ ಓಲೂಗೆ ಅದು ತಾನೇ ಸಂಭವಿಸಿತು. “ನೀನೊಬ್ಬ ಸುಳ್ಳುಗಾರ!” ಎಂದು ಅವನ ಅಣ್ಣನು ಅಬ್ಬರಿಸಿದನು. ತದನಂತರ ಅವನು ಓಲೂವಿಗೆ ಕುತ್ಸಿತ ಭಾವದಿಂದ ಹೊಡೆದು, ಅವನನ್ನು ಮನೆಯಿಂದ ಹೊರಗೆಹಾಕಿ, ಓಲೂವಿನ ಬಟ್ಟೆಗಳನ್ನೆಲ್ಲ ಸುಟ್ಟುಬಿಟ್ಟನು. ಗ್ರಾಮಸ್ಥರು ಅವನ ಅಣ್ಣನಿಗೇ ಬೆಂಬಲಕೊಟ್ಟರು. ಇನ್ನೆಂದಿಗೂ ಆ ಗ್ರಾಮದಲ್ಲಿ ಅವನಿಗೆ ಸುಖಾಗಮನ ದೊರೆಯದಿದ್ದುದರಿಂದ, ಓಲೂ ಆ ಗ್ರಾಮವನ್ನು ತೊರೆಯಬೇಕಾಗಿತ್ತು. ಆ ಹುಡುಗಿಯು ಗರ್ಭವತಿಯಾಗಿದ್ದಾಳೆಂಬುದು ಕಂಡುಬಂದಾಗ ಮಾತ್ರವೇ ಜನರು ಓಲೂ ಸತ್ಯವನ್ನು ಹೇಳಿದ್ದನೆಂಬುದನ್ನು ಅರ್ಥಮಾಡಿಕೊಂಡರು. ಆ ಅಣ್ಣನು ತಪ್ಪನ್ನು ಒಪ್ಪಿಕೊಂಡನು, ಮತ್ತು ಓಲೂವಿಗೆ ಪುನಃ ಅನುಗ್ರಹ ದೊರೆಯಿತು. ವಿಷಯಗಳು ತೀರ ಭಿನ್ನವಾಗಿ ಪರಿಣಮಿಸಸಾಧ್ಯವಿತ್ತು. ಓಲೂವು ಕೊಲ್ಲಲ್ಪಡುವ ಸಾಧ್ಯತೆಯೂ ಇತ್ತು.
ಸ್ಪಷ್ಟವಾಗಿಯೇ, ಯೆಹೋವನಿಗಾಗಿ ಪ್ರೀತಿಯಿಲ್ಲದವರು, ತಮ್ಮ ತಪ್ಪು ಬೆಳಕಿಗೆ ತರಲ್ಪಡುವುದನ್ನು ಗಣ್ಯಮಾಡದಿರಬಹುದು. ತಪ್ಪು ಮನಗಾಣಿಸುವಿಕೆಯನ್ನು ವಿರೋಧಿಸಿ, ಅದನ್ನು ಕೊಡುವ ಯಾರ ಮೇಲೇ ಆಗಲಿ ಅಸಮಾಧಾನಪಡುವುದು, ಪಾಪಪೂರ್ಣ ಮಾನವ ಪ್ರವೃತ್ತಿಯಾಗಿದೆ. (ಯೋಹಾನ 7:7ನ್ನು ಹೋಲಿಸಿರಿ.) ಇತರರ ತಪ್ಪುಗಳನ್ನು ಬಯಲುಗೊಳಿಸುವ—ಅವರನ್ನು ಸರಿಪಡಿಸುವ ಅಧಿಕಾರವುಳ್ಳವರ ಬಳಿ—ವಿಷಯಕ್ಕೆ ಬರುವಾಗ, ಅನೇಕರು ಕಲ್ಲುಗಳಷ್ಟು ಮೌನರಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.
ತಪ್ಪು ಮನಗಾಣಿಸುವಿಕೆಯ ಮೌಲ್ಯವನ್ನು ಗಣ್ಯಮಾಡುವುದು
ಯೆಹೋವನ ಜನರ ನಡುವೆಯಾದರೋ, ತಪ್ಪು ಮನಗಾಣಿಸುವಿಕೆಯ ಕಡೆಗೆ ಒಂದು ವಿಭಿನ್ನ ಮನೋಭಾವವಿದೆ. ದೈವಭಕ್ತಿಯುಳ್ಳ ಸ್ತ್ರೀಪುರುಷರು, ಕ್ರೈಸ್ತ ಸಭೆಯೊಳಗೆ ತಪ್ಪುಗೈಯುವವರಿಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಮಾಡಿರುವ ಏರ್ಪಾಡನ್ನು ಬಹಳವಾಗಿ ಗಣ್ಯಮಾಡುತ್ತಾರೆ. ಅಂತಹ ಶಿಸ್ತನ್ನು ಅವರು ಆತನ ಪ್ರೀತಿಪರ ದಯೆಯ ಒಂದು ಅಭಿವ್ಯಕ್ತಿಯಾಗಿ ಗ್ರಹಿಸುತ್ತಾರೆ.—ಇಬ್ರಿಯ 12:6-11.
ರಾಜ ದಾವೀದನ ಜೀವಿತದಲ್ಲಿನ ಒಂದು ಘಟನೆಯಿಂದ ಇದನ್ನು ದೃಷ್ಟಾಂತಿಸಬಹುದು. ಅವನು ತನ್ನ ಯುವಪ್ರಾಯದಿಂದಲೂ ಒಬ್ಬ ನೀತಿವಂತ ಮನುಷ್ಯನಾಗಿದ್ದರೂ, ಅವನು ಗಂಭೀರವಾದ ಒಂದು ತಪ್ಪುಗೈಯುವಿಕೆಗೆ ಬಲಿಬಿದ್ದಂತಹ ಒಂದು ಸಮಯ ಒದಗಿಬಂತು. ಮೊದಲಾಗಿ ಅವನು ವ್ಯಭಿಚಾರಗೈದನು. ತದನಂತರ ತನ್ನ ತಪ್ಪನ್ನು ಮುಚ್ಚಿಬಿಡುವ ಪ್ರಯತ್ನದಲ್ಲಿ ಅವನು ಆ ಸ್ತ್ರೀಯ ಗಂಡನನ್ನು ಕೊಲ್ಲಿಸುವ ಏರ್ಪಾಡುಮಾಡಿದನು. ಆದರೆ ಯೆಹೋವನು ದಾವೀದನ ಪಾಪವನ್ನು ಪ್ರವಾದಿಯಾದ ನಾತಾನನಿಗೆ ಪ್ರಕಟಪಡಿಸಿದನು; ಅವನು ಈ ವಿಷಯದ ಕುರಿತಾಗಿ ದಾವೀದನನ್ನು ಧೈರ್ಯದಿಂದ ಎದುರಿಸಿದನು. ಪ್ರಬಲವಾದ ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾ, ಒಬ್ಬ ಐಶ್ವರ್ಯವಂತನ ಬಳಿ ಅನೇಕ ಕುರಿಗಳಿದ್ದರೂ, ಅವನು ತನ್ನ ಸ್ನೇಹಿತನಿಗೋಸ್ಕರ ಅಡಿಗೆಮಾಡಿಸಲಿಕ್ಕಾಗಿ, ಬಡವನೊಬ್ಬನ ಮುದ್ದಿನ ಸಾಕುಪ್ರಾಣಿಯಾದ ಒಂದೇ ಒಂದು ಕುರಿಮರಿಯನ್ನು ತೆಗೆದುಕೊಂಡು ಅದನ್ನು ವಧಿಸಿದ್ದಕ್ಕಾಗಿ ಅವನಿಗೆ ಏನು ಮಾಡಬೇಕೆಂದು ನಾತಾನನು ದಾವೀದನನ್ನು ಕೇಳಿದನು. ಈ ಹಿಂದೆ ಒಬ್ಬ ಕುರುಬನಾಗಿದ್ದ ದಾವೀದನು, ಧರ್ಮಕ್ರೋಧದಿಂದಲೂ ಕೋಪದಿಂದಲೂ ಕೆರಳಿದನು. ಅವನು ಹೇಳಿದ್ದು: “ಆ ಮನುಷ್ಯನು ಸಾಯಲೇ ಬೇಕು.” ತದನಂತರ ನಾತಾನನು “ಆ ಮನುಷ್ಯನು ನೀನೇ” ಎಂದು ಹೇಳುವ ಮೂಲಕ, ಆ ದೃಷ್ಟಾಂತವನ್ನು ದಾವೀದನಿಗೆ ಅನ್ವಯಿಸಿದನು.—2 ಸಮುವೇಲ 12:1-7.
ದಾವೀದನು ನಾತಾನನ ಮೇಲೆ ಕೋಪಗೊಳ್ಳಲಿಲ್ಲ; ಇಲ್ಲವೆ ತನ್ನ ಪರವಾಗಿ ವಾದಿಸಲೂ ಇಲ್ಲ, ಪ್ರತ್ಯಾರೋಪಗಳನ್ನು ಅವಲಂಬಿಸಲೂ ಇಲ್ಲ. ಬದಲಾಗಿ, ನಾತಾನನ ಖಂಡನೆಯು ಅವನ ಮನಸ್ಸಾಕ್ಷಿಯನ್ನು ಅಗಾಧವಾಗಿ ಪ್ರಚೋದಿಸಿತು. ಹೃದಯವಿದ್ರಾವಕನಾಗಿ ದಾವೀದನು ಒಪ್ಪಿಕೊಂಡದ್ದು: “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.”—2 ಸಮುವೇಲ 12:13.
ನಾತಾನನು ದಾವೀದನಿಗೆ ಪಾಪದ ತಪ್ಪನ್ನು ದೈವಿಕವಾಗಿ ಮನಗಾಣಿಸಿ, ಅದನ್ನು ಬಹಿರಂಗಗೊಳಿಸಿದ್ದು, ಒಳ್ಳೆಯ ಫಲಿತಾಂಶಗಳನ್ನು ತಂದಿತು. ತನ್ನ ತಪ್ಪಿನ ಪರಿಣಾಮಗಳಿಂದ ದಾವೀದನು ರಕ್ಷಿಸಲ್ಪಡದಿದ್ದರೂ, ಅವನು ಪಶ್ಚಾತ್ತಾಪಪಟ್ಟು, ಯೆಹೋವನೊಂದಿಗಿನ ಮನಸ್ತಾಪವನ್ನು ಪರಿಹರಿಸಿ, ರಾಜಿಮಾಡಿಕೊಂಡನು. ಅಂತಹ ತಪ್ಪು ಮನಗಾಣಿಸುವಿಕೆಯ ಕುರಿತು ದಾವೀದನಿಗೆ ಹೇಗನಿಸಿತು? ಅವನು ಬರೆದುದು: “ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗುಪಕಾರ; ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ; ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.”—ಕೀರ್ತನೆ 141:5.
ನಮ್ಮ ದಿನದಲ್ಲಿಯೂ, ಯೆಹೋವನ ಸೇವಕರು—ಅನೇಕ ವರ್ಷಗಳಿಂದ ನಂಬಿಗಸ್ತರಾಗಿರುವವರು ಸಹ—ಗಂಭೀರವಾದ ತಪ್ಪುಕೃತ್ಯಗಳಲ್ಲಿ ಒಳಗೂಡಿದವರಾಗಿ ಪರಿಣಮಿಸಸಾಧ್ಯವಿದೆ. ಹಿರಿಯರು ಸಹಾಯ ಮಾಡಬಲ್ಲರೆಂಬುದನ್ನು ಗ್ರಹಿಸುತ್ತಾ, ಸಹಾಯಕ್ಕಾಗಿ ಅವರನ್ನು ಸಮೀಪಿಸಲು ಅನೇಕರು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ. (ಯಾಕೋಬ 5:13-16) ಆದರೆ ರಾಜ ದಾವೀದನು ಮಾಡಿದಂತೆ, ಕೆಲವೊಮ್ಮೆ ತಪ್ಪಿತಸ್ಥನೊಬ್ಬನು ತನ್ನ ಪಾಪವನ್ನು ಮುಚ್ಚಿಬಿಡಲು ಪ್ರಯತ್ನಿಸಬಹುದು. ಸಭೆಯಲ್ಲಿ ಗಂಭೀರವಾದ ತಪ್ಪುಕೃತ್ಯದ ಕುರಿತು ನಮಗೆ ತಿಳಿದುಬರುವುದಾದರೆ ನಾವೇನು ಮಾಡಬೇಕು?
ಅದು ಯಾರ ಜವಾಬ್ದಾರಿ?
ಗಂಭೀರವಾದ ತಪ್ಪುಕೃತ್ಯದ ಕುರಿತಾಗಿ ಹಿರಿಯರು ತಿಳಿದುಕೊಳ್ಳುವಾಗ, ಅಗತ್ಯವಿರುವ ಸಹಾಯ ಹಾಗೂ ತಿದ್ದುಪಾಟನ್ನು ನೀಡಲಿಕ್ಕಾಗಿ, ಒಳಗೂಡಿರುವ ವ್ಯಕ್ತಿಯನ್ನು ಅವರು ಸಮೀಪಿಸುತ್ತಾರೆ. ಕ್ರೈಸ್ತ ಸಭೆಯ ಒಳಗೆ ಅಂತಹ ತಪ್ಪಿತಸ್ಥರನ್ನು ನ್ಯಾಯತೀರಿಸುವುದು ಹಿರಿಯರ ಜವಾಬ್ದಾರಿಯಾಗಿದೆ. ಅದರ ಆತ್ಮಿಕ ಸ್ಥಿತಿಗತಿಯ ಮೇಲೆ ನಿಕಟವಾದ ಗಮನವನ್ನಿಡುತ್ತಾ, ಅಸಮಂಜಸವಾದ ಅಥವಾ ತಪ್ಪಾದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿರುವ ಯಾರಿಗೇ ಆಗಲಿ ಅವರು ಸಹಾಯ ಮಾಡಿ, ಬುದ್ಧಿವಾದವನ್ನು ನೀಡುತ್ತಾರೆ.—1 ಕೊರಿಂಥ 5:12, 13; 2 ತಿಮೊಥೆಯ 4:2; 1 ಪೇತ್ರ 5:1, 2.
ನೀವು ಒಬ್ಬ ಹಿರಿಯರಾಗಿರದೆ, ಇನ್ನೊಬ್ಬ ಕ್ರೈಸ್ತನ ವಿಷಯದಲ್ಲಿ ಗಂಭೀರವಾದ ಯಾವುದೋ ತಪ್ಪುಕೃತ್ಯದ ಕುರಿತು ನಿಮಗೆ ತಿಳಿದುಬರುವಲ್ಲಿ ಆಗೇನು? ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಮಾರ್ಗದರ್ಶನಗಳು ಕಂಡುಬರುತ್ತವೆ. ಧರ್ಮಶಾಸ್ತ್ರವು ಹೇಳಿದ್ದೇನೆಂದರೆ, ವ್ಯಕ್ತಿಯೊಬ್ಬನು ಧರ್ಮಭ್ರಷ್ಟ ಕೃತ್ಯಗಳು, ರಾಜದ್ರೋಹ, ಕೊಲೆ ಅಥವಾ ಇನ್ನಿತರ ಕೆಲವು ಗಂಭೀರವಾದ ಪಾತಕಗಳನ್ನು ಕಣ್ಣಾರೆ ಕಂಡಿರುವಲ್ಲಿ, ಅದನ್ನು ವರದಿಸಿ, ತನಗೆ ತಿಳಿದಿದ್ದ ವಿಷಯಗಳಿಗೆ ಸಾಕ್ಷ್ಯನೀಡುವುದು ಅವನ ಜವಾಬ್ದಾರಿಯಾಗಿತ್ತು. ಯಾಜಕಕಾಂಡ 5:1 (NW) ಹೇಳುವುದು: “ಬಹಿರಂಗ ಅಭಿಶಾಪವನ್ನು ಕೇಳಿ ಮತ್ತು ಸಾಕ್ಷಿಯಾಗಿ ಅಥವಾ ನೋಡಿ ಅಥವಾ ಅದರ ಕುರಿತು ತಿಳಿದವನಾಗಿದ್ದು ಒಂದು ಪ್ರಾಣವು ಪಾಪಮಾಡುವುದಾದರೆ, ಅವನು ಅದನ್ನು ವರದಿಮಾಡದಿರುವಲ್ಲಿ, ಅವನು ತನ್ನ ದೋಷಕ್ಕಾಗಿ ಉತ್ತರ ಕೊಡಬೇಕು.”—ಹೋಲಿಸಿರಿ ಧರ್ಮೋಪದೇಶಕಾಂಡ 13:6-8; ಎಸ್ತೇರಳು 6:2; ಜ್ಞಾನೋಕ್ತಿ 29:24.
ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಅಧೀನದಲ್ಲಿಲ್ಲದಿದ್ದರೂ, ಇಂದು ಅವರು ಅದರ ಹಿಂದಿನ ಮೂಲತತ್ವಗಳಿಂದ ಮಾರ್ಗದರ್ಶಿಸಲ್ಪಡಸಾಧ್ಯವಿದೆ. (ಕೀರ್ತನೆ 19:7, 8) ಆದುದರಿಂದ ಜೊತೆ ಕ್ರೈಸ್ತನೊಬ್ಬನ ಗಂಭೀರವಾದ ತಪ್ಪುಕೃತ್ಯದ ಕುರಿತಾಗಿ ನೀವು ತಿಳಿದುಕೊಳ್ಳುವಲ್ಲಿ, ನೀವೇನು ಮಾಡತಕ್ಕದ್ದು?
ವಿಷಯವನ್ನು ನಿರ್ವಹಿಸುವುದು
ಮೊತ್ತಮೊದಲಾಗಿ, ಗಂಭೀರವಾದ ತಪ್ಪುಕೃತ್ಯವು ನಿಜವಾಗಿಯೂ ಸಂಭವಿಸಿದೆಯೆಂಬುದನ್ನು ನಂಬಲು ಸಮಂಜಸವಾದ ಕಾರಣವಿರುವುದು ಪ್ರಾಮುಖ್ಯವಾದದ್ದಾಗಿದೆ. “ಯಾವುದೇ ಆಧಾರಗಳಿಲ್ಲದೆ ನಿನ್ನ ಜೊತೆಯವನ ವಿರುದ್ಧವಾಗಿ ಒಬ್ಬ ಸಾಕ್ಷಿಯಾಗದಿರು” ಎಂದು ಜ್ಞಾನಿಯು ಹೇಳುತ್ತಾನೆ. “ಹಾಗಾದಲ್ಲಿ ನೀನು ನಿನ್ನ ತುಟಿಗಳಿಂದಲೇ ಮೂರ್ಖನಾಗಬೇಕಾಗುತ್ತದೆ.”—ಜ್ಞಾನೋಕ್ತಿ 24:28, NW.
ನೇರವಾಗಿ ಹಿರಿಯರ ಬಳಿಗೆ ಹೋಗಲು ನೀವು ನಿರ್ಧರಿಸಬಹುದು. ಹಾಗೆ ಮಾಡುವುದೇನೂ ತಪ್ಪಾಗಿರುವುದಿಲ್ಲ. ಆದರೂ, ಸಾಮಾನ್ಯವಾಗಿ ಅತ್ಯಂತ ಪ್ರೀತಿಪೂರ್ಣ ವಿಧವು, ಒಳಗೂಡಿರುವ ವ್ಯಕ್ತಿಯನ್ನು ಸಮೀಪಿಸುವುದೇ ಆಗಿದೆ. ವಾಸ್ತವಾಂಶಗಳು ಪ್ರಾಯಶಃ ಕಂಡುಬರುವ ಹಾಗೆಯೇ ಇರಲಿಕ್ಕಿಲ್ಲ. ಅಥವಾ ಆ ಸನ್ನಿವೇಶವು ಈಗಾಗಲೇ ಹಿರಿಯರಿಂದ ನಿರ್ವಹಿಸಲ್ಪಡುತ್ತಿರಬಹುದು. ಶಾಂತಚಿತ್ತರಾಗಿ ವಿಷಯವನ್ನು ಆ ವ್ಯಕ್ತಿಯೊಂದಿಗೆ ಚರ್ಚಿಸಿರಿ. ಗಂಭೀರವಾದ ಒಂದು ತಪ್ಪು ಮಾಡಲ್ಪಟ್ಟಿದೆಯೆಂಬುದನ್ನು ನಂಬಲು ಕಾರಣವು ಇರುವಲ್ಲಿ, ಸಹಾಯಕ್ಕಾಗಿ ಹಿರಿಯರನ್ನು ಸಮೀಪಿಸುವಂತೆ ಅವನನ್ನು ಅಥವಾ ಅವಳನ್ನು ಉತ್ತೇಜಿಸಿರಿ, ಮತ್ತು ಹಾಗೆ ಮಾಡುವುದರ ವಿವೇಕವನ್ನು ವಿವರಿಸಿರಿ. ಆ ವಿಷಯದ ಕುರಿತು ಇತರರೊಂದಿಗೆ ಮಾತಾಡಬೇಡಿರಿ, ಏಕೆಂದರೆ ಅದು ಹರಟೆಯಾಗಿರುವುದು.
ಸಾಕಷ್ಟು ಸಮಯಾವಧಿಯೊಳಗೆ ಆ ವ್ಯಕ್ತಿಯು ಹಿರಿಯರ ಬಳಿ ವರದಿಸದಿರುವಲ್ಲಿ, ಆಗ ನೀವು ಹಿರಿಯರಿಗೆ ತಿಳಿಸಬೇಕು. ಆಗ ಒಬ್ಬರು ಅಥವಾ ಇಬ್ಬರು ಹಿರಿಯರು ಆಪಾದಿತನೊಂದಿಗೆ ಆ ವಿಷಯವನ್ನು ಚರ್ಚಿಸುವರು. ತಪ್ಪು ಮಾಡಲ್ಪಟ್ಟಿದೆಯೋ ಎಂಬುದನ್ನು ನೋಡಲಿಕ್ಕಾಗಿ, ಹಿರಿಯರು “ಚೆನ್ನಾಗಿ ವಿಚಾರಿಸಿ ತಿಳಿದು”ಕೊಳ್ಳುವ ಅಗತ್ಯವಿದೆ. ತಪ್ಪು ಮಾಡಲ್ಪಟ್ಟಿರುವಲ್ಲಿ, ಅವರು ಆ ವ್ಯಾಜ್ಯವನ್ನು ಶಾಸ್ತ್ರೀಯ ಮಾರ್ಗದರ್ಶನಗಳಿಗನುಸಾರ ನಿರ್ವಹಿಸುವರು.—ಧರ್ಮೋಪದೇಶಕಾಂಡ 13:12-14.
ಕಡಿಮೆಪಕ್ಷ ಇಬ್ಬರು ಸಾಕ್ಷಿಗಳು, ತಪ್ಪುಕೃತ್ಯದ ಆರೋಪವನ್ನು ಸ್ಥಾಪಿಸುವ ಅಗತ್ಯವಿದೆ. (ಯೋಹಾನ 8:17; ಇಬ್ರಿಯ 10:28) ಆ ವ್ಯಕ್ತಿಯು ಆರೋಪವನ್ನು ಅಲ್ಲಗಳೆದು, ನಿಮ್ಮ ಸಾಕ್ಷ್ಯವು ಏಕಮಾತ್ರ ಸಾಕ್ಷ್ಯವಾಗಿರುವಲ್ಲಿ, ಆ ವಿಷಯವನ್ನು ಯೆಹೋವನ ಹಸ್ತಗಳಲ್ಲಿ ಬಿಡಲಾಗುವುದು. (1 ತಿಮೊಥೆಯ 5:19, 24, 25) ಎಲ್ಲ ವಿಷಯಗಳು ಯೆಹೋವನಿಗೆ “ಮುಚ್ಚುಮರೆಯಿಲ್ಲದಾಗಿಯೂ ಬೈಲಾದದ್ದಾಗಿಯೂ” ಇವೆ, ಮತ್ತು ಆ ವ್ಯಕ್ತಿಯು ದೋಷಿಯಾಗಿರುವಲ್ಲಿ, ಕಾಲಕ್ರಮೇಣ ಅವನ ಪಾಪಗಳೇ ಅವನನ್ನು “ಹಿಡಿಯು”ವವು (NW) ಎಂಬ ಜ್ಞಾನದಲ್ಲಿ ಇದನ್ನು ಮಾಡಲಾಗುತ್ತದೆ.—ಇಬ್ರಿಯ 4:13; ಅರಣ್ಯಕಾಂಡ 32:23.
ಆದರೆ ಆ ವ್ಯಕ್ತಿಯು ಆರೋಪವನ್ನು ಅಲ್ಲಗಳೆಯುತ್ತಾನೆ ಹಾಗೂ ಅವನ ವಿರುದ್ಧವಾದ ಏಕಮಾತ್ರ ಸಾಕ್ಷಿ ನೀವಾಗಿದ್ದೀರೆಂದು ಭಾವಿಸಿ. ಈಗ ಮಿಥ್ಯಾಪವಾದದ ಪ್ರತಿದೋಷಾರೋಪಣೆಗೆ ನೀವು ಹೊಣೆಯಾಗುತ್ತೀರೊ? ಇಲ್ಲ—ಆ ವಿಷಯದಲ್ಲಿ ಒಳಗೂಡಿರದವರಿಗೆ ನೀವು ಹರಟೆಮಾತಾಡಿಲ್ಲದಿದ್ದರೆ ನೀವು ಅದಕ್ಕೆ ಹೊಣೆಯಾಗುವುದಿಲ್ಲ. ಒಂದು ಸಭೆಯನ್ನು ಬಾಧಿಸುತ್ತಿರುವ ಪರಿಸ್ಥಿತಿಗಳ ಕುರಿತಾಗಿ, ವಿಷಯಗಳ ಮೇಲ್ವಿಚಾರಣೆಮಾಡಿ, ಅವುಗಳನ್ನು ತಿದ್ದುವ ಅಧಿಕಾರವೂ ಜವಾಬ್ದಾರಿಯೂ ಇರುವವರಿಗೆ ವರದಿಮಾಡುವುದು ಮಿಥ್ಯಾಪವಾದವಾಗಿರುವುದಿಲ್ಲ. ವಾಸ್ತವವಾಗಿ, ಅದು ಯಾವಾಗಲೂ ಯಾವುದು ಸರಿಯಾದದ್ದಾಗಿದೆಯೋ ಯಾವುದು ನಿಷ್ಠೆಯದ್ದಾಗಿದೆಯೋ ಅದನ್ನು ಮಾಡುವ ನಮ್ಮ ಬಯಕೆಗನುಸಾರವಾಗಿದೆ.—ಲೂಕ 1:74, 75ನ್ನು ಹೋಲಿಸಿರಿ.
ಸಭೆಯಲ್ಲಿ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದು
ತಪ್ಪುಕೃತ್ಯವನ್ನು ವರದಿಸುವುದಕ್ಕಾಗಿರುವ ಒಂದು ಕಾರಣವು ಯಾವುದೆಂದರೆ, ಅದು ಸಭೆಯ ಶುದ್ಧತೆಯನ್ನು ಕಾಪಾಡುವ ಕಾರ್ಯಮಾಡುತ್ತದೆ. ಯೆಹೋವನು ಪರಿಶುದ್ಧನೂ ಪವಿತ್ರನೂ ಆದ ಒಬ್ಬ ದೇವರಾಗಿದ್ದಾನೆ. ತನ್ನನ್ನು ಆರಾಧಿಸುವವರೆಲ್ಲರೂ ಆತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿರುವಂತೆ ಆತನು ಕೇಳಿಕೊಳ್ಳುತ್ತಾನೆ. ಆತನ ಪ್ರೇರಿತ ವಾಕ್ಯವು ಬುದ್ಧಿವಾದ ನೀಡುವುದು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯುವವರಾಗಿರದೆ ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆಯಲ್ಲಾ.” (1 ಪೇತ್ರ 1:14-16) ಅಶುದ್ಧತೆ ಅಥವಾ ತಪ್ಪುಕೃತ್ಯವನ್ನು ರೂಢಿಯಾಗಿ ಮಾಡುವ ವ್ಯಕ್ತಿಗಳನ್ನು ತಿದ್ದಲು ಅಥವಾ ಅವರನ್ನು ತೆಗೆದುಹಾಕಲು ಕ್ರಿಯೆ ಕೈಕೊಳ್ಳದಿರುವಲ್ಲಿ, ಅಂತಹವರು ಇಡೀ ಸಭೆಯ ಮೇಲೆ ಕಳಂಕವನ್ನೂ ಯೆಹೋವನ ಅಪ್ರಸನ್ನತೆಯನ್ನೂ ತರಬಲ್ಲರು.—ಯೆಹೋಶುವ 7ನೆಯ ಅಧ್ಯಾಯವನ್ನು ಹೋಲಿಸಿರಿ.
ಕೊರಿಂಥದಲ್ಲಿದ್ದ ಕ್ರೈಸ್ತ ಸಭೆಗೆ ಅಪೊಸ್ತಲ ಪೌಲನು ಬರೆದ ಪತ್ರಗಳು, ತಪ್ಪುಕೃತ್ಯದ ವರದಿಸುವಿಕೆಯು, ಅಲ್ಲಿನ ದೇವಜನರ ಶುದ್ಧಗೊಳಿಸುವಿಕೆಯ ವಿಷಯದಲ್ಲಿ ಹೇಗೆ ಕಾರ್ಯನಡಿಸಿತೆಂಬುದನ್ನು ತೋರಿಸುತ್ತವೆ. ತನ್ನ ಮೊದಲನೆಯ ಪತ್ರದಲ್ಲಿ ಪೌಲನು ಬರೆದುದು: “ನಿಮ್ಮಲ್ಲಿ ಜಾರತ್ವವುಂಟೆಂದು ಜನರು ಸಾಧಾರಣವಾಗಿ ಹೇಳುತ್ತಾರೆ. ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ; ಅಂಥ ಜಾರತ್ವವು ಅನ್ಯಜನರಲ್ಲಿಯೂ ಇಲ್ಲ.”—1 ಕೊರಿಂಥ 5:1.
ಅಪೊಸ್ತಲನು ಈ ವರದಿಯನ್ನು ಯಾರಿಂದ ಪಡೆದುಕೊಂಡನು ಎಂಬುದನ್ನು ಬೈಬಲು ನಮಗೆ ಹೇಳುವುದಿಲ್ಲ. ಕೊರಿಂಥದಿಂದ ಪೌಲನು ಉಳಿದುಕೊಂಡಿದ್ದ ಎಫೆಸದ ವರೆಗೆ ಸಂಚರಿಸಿದ್ದ, ಸ್ತೆಫನ, ಫೊರ್ತುನಾತ, ಮತು ಅಖಾಯಿಕರಿಂದ ಪೌಲನು ಈ ಸನ್ನಿವೇಶದ ಕುರಿತು ತಿಳಿದುಕೊಂಡಿದ್ದಿರಬಹುದು. ಕೊರಿಂಥದಲ್ಲಿನ ಕ್ರೈಸ್ತ ಸಭೆಯಿಂದ ಒಂದು ವಿಚಾರಣಾ ಪತ್ರವನ್ನೂ ಪೌಲನು ಪಡೆದುಕೊಂಡಿದ್ದನು. ಅದರ ಮೂಲವು ಯಾವುದೇ ಆಗಿರಲಿ, ಸನ್ನಿವೇಶವು ವಿಶ್ವಾಸಾರ್ಹ ಸಾಕ್ಷಿಗಳಿಂದ ಪೌಲನಿಗೆ ವರದಿಸಲ್ಪಟ್ಟಾದ ಅನಂತರ, ಆ ವಿಷಯದ ಕುರಿತು ನಿರ್ದೇಶನವನ್ನು ಕೊಡಲು ಅವನು ಶಕ್ತನಾಗಿದ್ದನು. “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದು”ಹಾಕಿರಿ ಎಂದು ಅವನು ಬರೆದನು. ಆ ಮನುಷ್ಯನನ್ನು ಸಭೆಯಿಂದ ಹೊರಹಾಕಲಾಯಿತು.—1 ಕೊರಿಂಥ 5:13; 16:17, 18.
ಪೌಲನ ಉಪದೇಶವು ಒಳ್ಳೆಯ ಫಲಿತಾಂಶಗಳನ್ನು ತಂದಿತೊ? ನಿಜವಾಗಿಯೂ ಒಳ್ಳೆಯ ಫಲಿತಾಂಶಗಳನ್ನು ತಂದಿತು! ತಪ್ಪಿತಸ್ಥನು ತನ್ನ ಕೃತ್ಯಗಳನ್ನು ಗ್ರಹಿಸಿಕೊಂಡನೆಂಬುದು ಸುವ್ಯಕ್ತ. ಕೊರಿಂಥದವರಿಗೆ ಬರೆದ ತನ್ನ ಎರಡನೆಯ ಪತ್ರದಲ್ಲಿ, ಪಶ್ಚಾತ್ತಾಪಪಟ್ಟ ಆ ವ್ಯಕ್ತಿಯನ್ನು ಸಭೆಯು ‘ಮನ್ನಿಸಿ, ಸಂತೈಸು’ವಂತೆ ಪೌಲನು ಪ್ರಚೋದಿಸಿದನು. (2 ಕೊರಿಂಥ 2:6-8) ಹೀಗೆ ತಪ್ಪುಕೃತ್ಯದ ವರದಿಸುವಿಕೆಯು, ಸಭೆಯನ್ನು ಶುದ್ಧಗೊಳಿಸಿ, ದೇವರೊಂದಿಗಿನ ತನ್ನ ಸಂಬಂಧವನ್ನು ಯಾರು ಹಾಳುಮಾಡಿಕೊಂಡಿದ್ದನೋ ಆ ವ್ಯಕ್ತಿಗೆ ದೇವರ ಅನುಗ್ರಹವನ್ನು ಪುನಃ ದೊರಕಿಸಿಕೊಡುವುದರಲ್ಲಿ ಫಲಿಸಿದ ಕೃತ್ಯಕ್ಕೆ ನಡಿಸಿತು.
ಕೊರಿಂಥದಲ್ಲಿದ್ದ ಕ್ರೈಸ್ತ ಸಭೆಗೆ ಪೌಲನು ಬರೆದ ಮೊದಲ ಪತ್ರದಲ್ಲಿ ನಾವು ಇನ್ನೊಂದು ಉದಾಹರಣೆಯನ್ನು ಕಂಡುಕೊಳ್ಳುತ್ತೇವೆ. ಈ ಬಾರಿ ಅಪೊಸ್ತಲನು ಈ ವಿಷಯವನ್ನು ವರದಿಸಿದ ಸಾಕ್ಷಿಗಳ ಹೆಸರನ್ನು ತಿಳಿಯಪಡಿಸುತ್ತಾನೆ. ಅವನು ಬರೆದುದು: “ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು [“ಭಿನ್ನಾಭಿಪ್ರಾಯಗಳುಂಟೆಂದು,” NW] ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು.” (1 ಕೊರಿಂಥ 1:11) ಈ ಭಿನ್ನಾಭಿಪ್ರಾಯವು, ಮನುಷ್ಯರಿಗೆ ಅನುಚಿತವಾದ ಘನತೆಯನ್ನು ಕೊಡುತ್ತಿರುವುದರೊಂದಿಗೆ, ಸಭೆಯ ಐಕ್ಯವನ್ನು ನಾಶಮಾಡುವ ಬೆದರಿಕೆಯನ್ನೊಡ್ಡುವ ಪಂಥಾಭಿಮಾನದ ಮನೋಭಾವವನ್ನೂ ಉಂಟುಮಾಡಿತ್ತೆಂಬುದು ಪೌಲನಿಗೆ ಗೊತ್ತಿತ್ತು. ಆದುದರಿಂದಲೇ, ಅಲ್ಲಿನ ತನ್ನ ಜೊತೆವಿಶ್ವಾಸಿಗಳ ಆತ್ಮಿಕ ಹಿತಕ್ಷೇಮಕ್ಕಾಗಿರುವ ಆಳವಾದ ಗಣ್ಯತೆಯಿಂದ, ಪೌಲನು ತ್ವರಿತಗತಿಯಲ್ಲಿ ಕಾರ್ಯನಡಿಸಿ, ತಿದ್ದುಪಾಟಿನ ಸಲಹೆಯನ್ನು ಸಭೆಗೆ ಬರೆದನು.
ಇಂದು, ಭೂಮಿಯಾದ್ಯಂತ ಇರುವ ಸಭೆಗಳಲ್ಲಿನ ಅಧಿಕಾಂಶ ಸಹೋದರಸಹೋದರಿಯರು, ವೈಯಕ್ತಿಕವಾಗಿ ದೇವರ ಮುಂದೆ ಮೆಚ್ಚುಗೆಯ ನಿಲುವನ್ನು ಕಾಪಾಡಿಕೊಳ್ಳುವ ಮೂಲಕ, ಸಭೆಯ ಆತ್ಮಿಕ ಶುದ್ಧತೆಯನ್ನು ಸಂರಕ್ಷಿಸಲು ಕಷ್ಟುಪಟ್ಟು ಶ್ರಮಿಸುತ್ತಾರೆ. ಹಾಗೆ ಮಾಡಲು ಕೆಲವರು ಕಷ್ಟಾನುಭವಿಸುತ್ತಾರೆ; ಇತರರು ಸಮಗ್ರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಮರಣಪಟ್ಟಿದ್ದಾರೆ ಕೂಡ. ಖಂಡಿತವಾಗಿಯೂ, ತಪ್ಪುಕೃತ್ಯವನ್ನು ಮನ್ನಿಸುವುದು ಅಥವಾ ಮುಚ್ಚಿಬಿಡುವುದು, ಈ ಪ್ರಯತ್ನಗಳಿಗೆ ಗಣ್ಯತೆಯ ಕೊರತೆಯನ್ನು ತೋರಿಸುವುದು.
ತಪ್ಪಿತಸ್ಥರಿಗಾಗಿ ಸಹಾಯ
ಗಂಭೀರವಾದ ಪಾಪಕ್ಕೆ ಬಲಿಬಿದ್ದಿರುವ ಕೆಲವರು, ಸಭಾ ಹಿರಿಯರನ್ನು ಸಮೀಪಿಸಲು ಏಕೆ ಹಿಂಜರಿಯುತ್ತಾರೆ? ಅನೇಕವೇಳೆ ಹಿರಿಯರ ಬಳಿಗೆ ಹೋಗುವುದರಿಂದ ದೊರಕುವ ಪ್ರಯೋಜನಗಳ ಅರಿವು ಅವರಿಗೆ ಇಲ್ಲದಿರುವ ಕಾರಣದಿಂದಲೇ. ತಾವು ತಪ್ಪನ್ನು ನಿವೇದಿಸಿಕೊಳ್ಳುವುದಾದರೆ, ತಮ್ಮ ಪಾಪವು ಇಡೀ ಸಭೆಯ ಮುಂದೆ ಬಯಲುಪಡಿಸಲ್ಪಡುವುದೆಂದು ಕೆಲವರು ತಪ್ಪಾಗಿ ನಂಬುತ್ತಾರೆ. ಇತರರು ತಮ್ಮ ದುರ್ಮಾರ್ಗದ ಗಂಭೀರತೆಗೆ ತಮ್ಮನ್ನು ಮೋಸಪಡಿಸಿಕೊಳ್ಳುತ್ತಾರೆ. ಹಿರಿಯರ ಸಹಾಯವಿಲ್ಲದೆ ತಾವೇ ತಮ್ಮನ್ನು ಸರಿಹೊಂದಿಸಿಕೊಳ್ಳಲು ಸಾಧ್ಯವಿದೆಯೆಂದು ಇನ್ನಿತರರು ಆಲೋಚಿಸುತ್ತಾರೆ.
ಆದರೆ ಅಂತಹ ತಪ್ಪಿತಸ್ಥರಿಗೆ ಸಭಾ ಹಿರಿಯರಿಂದ ಪ್ರೀತಿಪರ ಸಹಾಯದ ಅಗತ್ಯವಿದೆ. ಯಾಕೋಬನು ಬರೆದುದು: “ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ [“ಯೆಹೋವನ,” NW] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು [“ಯೆಹೋವನು,” NW] ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು.”—ಯಾಕೋಬ 5:14, 15.
ತಪ್ಪಿತಸ್ಥರು ತಮ್ಮ ಆತ್ಮಿಕತೆಯನ್ನು ಪುನಃ ಪಡೆದುಕೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ ಎಂತಹ ಒಂದು ಅದ್ಭುತಕರ ಒದಗಿಸುವಿಕೆ! ದೇವರ ವಾಕ್ಯದಿಂದ ಶಮನಗೊಳಿಸುವ ಸಲಹೆಯನ್ನು ಅನ್ವಯಿಸುವ ಮೂಲಕ ಹಾಗೂ ಅವರ ಪರವಾಗಿ ಪ್ರಾರ್ಥಿಸುವ ಮೂಲಕ, ತಮ್ಮ ದೋಷಯುಕ್ತ ಮಾರ್ಗಗಳಿಂದ ಪುನಃ ಚೇತರಿಸಿಕೊಳ್ಳುವಂತೆ ಹಿರಿಯರು, ಆತ್ಮಿಕವಾಗಿ ಅಸ್ವಸ್ಥರಾಗಿರುವವರಿಗೆ ಸಹಾಯ ಮಾಡಬಲ್ಲರು. ಹೀಗೆ, ಖಂಡನಾರ್ಹರೆಂದು ಭಾವಿಸುವ ಬದಲಿಗೆ, ಪ್ರೀತಿಪರ ಹಿರಿಯರನ್ನು ಅವರು ಭೇಟಿಮಾಡುವಾಗ, ಅನೇಕವೇಳೆ ಪಶ್ಚಾತ್ತಾಪಿಗಳಿಗೆ ಚೈತನ್ಯಗೊಂಡ ಹಾಗೂ ಉಪಶಮನ ಪಡೆದ ಅನಿಸಿಕೆಯಾಗುತ್ತದೆ. ಪಶ್ಚಿಮ ಆಫ್ರಿಕದ ಒಬ್ಬ ಯುವ ವ್ಯಕ್ತಿಯು ಜಾರತ್ವಮಾಡಿ, ಕೆಲವು ತಿಂಗಳುಗಳ ವರೆಗೆ ತನ್ನ ಪಾಪವನ್ನು ಮುಚ್ಚಿಬಿಟ್ಟಿದ್ದನು. ಅವನ ಪಾಪವು ಬೆಳಕಿಗೆ ಬಂದ ಬಳಿಕ, ಅವನು ಹಿರಿಯರಿಗೆ ಹೇಳಿದ್ದು: “ಆ ಹುಡುಗಿಯೊಂದಿಗಿನ ನನ್ನ ಒಳಗೂಡುವಿಕೆಯ ಕುರಿತು ಯಾರಾದರೊಬ್ಬರು ನನ್ನನ್ನು ಪ್ರಶ್ನಿಸುತ್ತಿದ್ದಲ್ಲಿ ಒಳ್ಳೇದಿರುತ್ತಿತ್ತು! ನನ್ನ ಪಾಪವನ್ನು ನಿವೇದಿಸಿಕೊಳ್ಳುವುದು ಮನಸ್ಸಿಗೆ ಎಂತಹ ಒಂದು ನೆಮ್ಮದಿಯಾಗಿರುತ್ತದೆ.”—ಕೀರ್ತನೆ 32:3-5ನ್ನು ಹೋಲಿಸಿರಿ.
ತತ್ವಾಧಾರಿತ ಪ್ರೀತಿಯ ಒಂದು ಕೃತ್ಯ
ದೇವರ ದೀಕ್ಷಾಸ್ನಾನಿತ ಸೇವಕರು “ಮರಣದಿಂದ ಪಾರಾಗಿ ಜೀವದಲ್ಲಿ ಸೇರಿ”ದ್ದಾರೆ. (1 ಯೋಹಾನ 3:14) ಆದರೆ ಅವರು ಗಂಭೀರವಾದ ಪಾಪವನ್ನು ಮಾಡುವಲ್ಲಿ, ಅವರು ಮರಣಮಾರ್ಗಕ್ಕೆ ಹಿಂದಿರುಗಿದ್ದಾರೆ. ಅವರಿಗೆ ಸಹಾಯ ನೀಡಲ್ಪಡದಿರುವಲ್ಲಿ, ಅವರು ಪಶ್ಚಾತ್ತಾಪಪಡಲು ಹಾಗೂ ಸತ್ಯ ದೇವರ ಆರಾಧನೆಗೆ ಹಿಂದಿರುಗಲು ಅಪೇಕ್ಷಿಸದೆ, ತಪ್ಪುಕೃತ್ಯದಲ್ಲಿ ಕಠಿನ ಹೃದಯಿಗಳಾಗಿ ಪರಿಣಮಿಸಬಹುದು.—ಇಬ್ರಿಯ 10:26-29.
ತಪ್ಪುಕೃತ್ಯದ ವರದಿಮಾಡುವಿಕೆಯು, ತಪ್ಪಿತಸ್ಥನಿಗಾಗಿರುವ ನಿಷ್ಕಪಟ ಚಿಂತೆಯ ಒಂದು ಕೃತ್ಯವಾಗಿದೆ. ಯಾಕೋಬನು ಬರೆದುದು: “ನನ್ನ ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯಮಾರ್ಗವನ್ನು ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ—ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು ಅವನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಿರಿ.”—ಯಾಕೋಬ 5:19, 20.
ಹಾಗಾದರೆ, ಕೆಟ್ಟ ವಿಷಯವನ್ನು ಏಕೆ ವರದಿಸಬೇಕು? ಏಕೆಂದರೆ ಅದು ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ನಿಜವಾಗಿಯೂ, ತಪ್ಪುಕೃತ್ಯವನ್ನು ವರದಿಸುವುದು, ದೇವರ ಕಡೆಗೆ, ಸಭೆಯ ಕಡೆಗೆ, ಹಾಗೂ ತಪ್ಪಿತಸ್ಥನ ಕಡೆಗೆ ತೋರಿಸಲ್ಪಡುವ ಕ್ರಿಸ್ತೀಯ ತತ್ವಾಧಾರಿತ ಪ್ರೀತಿಯ ಒಂದು ಕೃತ್ಯವಾಗಿದೆ. ಸಭೆಯ ಪ್ರತಿಯೊಬ್ಬ ಸದಸ್ಯನೂ ದೇವರ ನೀತಿಯ ಮಟ್ಟಗಳನ್ನು ನಿಷ್ಠೆಯಿಂದ ಎತ್ತಿಹಿಡಿಯುವಾಗ, ಇಡೀ ಸಭೆಯನ್ನು ಯೆಹೋವನು ಹೇರಳವಾಗಿ ಆಶೀರ್ವದಿಸುವನು. ಅಪೊಸ್ತಲ ಪೌಲನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ಯಾರೂ ನಿಮ್ಮ ಮೇಲೆ ತಪ್ಪುಹೊರಿಸಲಾಗದಂತೆ ಆತನು [ಯೆಹೋವನು] ನಿಮ್ಮನ್ನು ಕಡೇ ವರೆಗೂ ದೃಢಪಡಿಸುವನು.”—1 ಕೊರಿಂಥ 1:8.
[ಪುಟ 26 ರಲ್ಲಿರುವ ಚಿತ್ರ]
ತಪ್ಪಿತಸ್ಥನಾದ ಸಾಕ್ಷಿಯೊಬ್ಬನನ್ನು ಹಿರಿಯರೊಂದಿಗೆ ಮಾತಾಡುವಂತೆ ಉತ್ತೇಜಿಸುವುದು, ಪ್ರೀತಿಯನ್ನು ತೋರಿಸುತ್ತದೆ
[ಪುಟ 28 ರಲ್ಲಿರುವ ಚಿತ್ರ]
ತಪ್ಪಿತಸ್ಥರು ದೇವರ ಅನುಗ್ರಹವನ್ನು ಪುನಃ ಪಡೆದುಕೊಳ್ಳುವಂತೆ ಹಿರಿಯರು ಸಹಾಯ ಮಾಡುತ್ತಾರೆ