ಸ್ವರ್ಗೀಯ ಪೌರತ್ವವಿರುವ ಕ್ರೈಸ್ತ ಸಾಕ್ಷಿಗಳು
“ನಮಗಾದರೋ, ನಮ್ಮ ಪೌರತ್ವವು ಸ್ವರ್ಗಗಳಲ್ಲಿದೆ.”—ಫಿಲಿಪ್ಪಿ 3:20, NW.
1. ಕೆಲವು ಮಾನವರ ವಿಷಯದಲ್ಲಿ ಯೆಹೋವನಿಗೆ ಯಾವ ಅದ್ಭತಕರವಾದ ಉದ್ದೇಶವಿದೆ?
ಮಾನವರಾಗಿ ಹುಟ್ಟಿರುವ ವ್ಯಕ್ತಿಗಳು ಸ್ವರ್ಗದಲ್ಲಿ—ದೇವದೂತರ ಮೇಲೆಯೂ—ಅರಸರು ಮತ್ತು ಯಾಜಕರಾಗಿ ಆಳುವರು. (1 ಕೊರಿಂಥ 6:2, 3; ಪ್ರಕಟನೆ 20:6) ಎಷ್ಟು ಬೆರಗುಗೊಳಿಸುವ ಸತ್ಯವಿದು! ಆದರೂ, ಯೆಹೋವನು ಅದನ್ನು ಉದ್ದೇಶಿಸಿದನು, ಮತ್ತು ಆತನು ಅದನ್ನು ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನ ಮೂಲಕ ಆಗಿಸುತ್ತಾನೆ. ನಮ್ಮ ಸೃಷ್ಟಿಕರ್ತನು ಇಂತಹ ಒಂದು ವಿಷಯವನ್ನು ಮಾಡುವುದೇಕೆ? ಮತ್ತು ಇದರ ಜ್ಞಾನವು ಇಂದು ಕ್ರೈಸ್ತನೊಬ್ಬನನ್ನು ಹೇಗೆ ಪ್ರಭಾವಿಸಬೇಕು? ಬೈಬಲು ಈ ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತದೆಂದು ನಾವು ನೋಡೋಣ.
2. ದೀಕ್ಷಾಸ್ನಾಪಕ ಯೋಹಾನನು, ಯೇಸು ಮಾಡುವನೆಂಬ ಯಾವ ಹೊಸ ವಿಷಯವನ್ನು ಪ್ರಕಟಿಸಿದನು, ಮತ್ತು ಈ ಹೊಸ ವಿಷಯವು ಯಾವುದಕ್ಕೆ ಸಂಬಂಧಿಸಿತ್ತು?
2 ದೀಕ್ಷಾಸ್ನಾಪಕ ಯೋಹಾನನು ಯೇಸುವಿಗೆ ದಾರಿಯನ್ನು ಸಿದ್ಧಮಾಡುತ್ತಿದ್ದಾಗ, ಯೇಸುವು ಹೊಸತಾದ ಯಾವುದನ್ನೊ ಮಾಡುವನೆಂದು ಪ್ರಕಟಿಸಿದನು. ದಾಖಲೆಯು ಹೇಳುವುದು: “ಅವನು [ಯೋಹಾನನು]—ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಬಾರನ್ನು ಬೊಗ್ಗಿಕೊಂಡು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ. ನಾನು ನಿಮಗೆ ನೀರಿನ ಸ್ನಾನಮಾಡಿಸಿದೆನು; ಆತನಾದರೋ ನಿಮಗೆ ಪವಿತ್ರಾತ್ಮದ ಸ್ನಾನಮಾಡಿಸುವನು ಎಂದು ಸಾರಿಹೇಳಿದನು.” (ಮಾರ್ಕ. 1:7, 8) ಆ ಸಮಯಕ್ಕೆ ಮುಂಚಿತವಾಗಿ ಯಾವನಿಗೂ ಪವಿತ್ರಾತ್ಮದಿಂದ ದೀಕ್ಷಾಸ್ನಾನವಾದದ್ದಿಲ್ಲ. ಪವಿತ್ರಾತ್ಮವು ಒಳಗೂಡಿದ್ದ ಒಂದು ಹೊಸ ಏರ್ಪಾಡು ಇದಾಗಿತ್ತು. ಮತ್ತು ಮಾನವರನ್ನು ಸ್ವರ್ಗೀಯ ಆಳಿಕೆಗೆ ತಯಾರಿಸುವ, ಯೆಹೋವನ ಇನ್ನೇನು ಪ್ರಕಟವಾಗಲಿಕ್ಕಿದ್ದ ಉದ್ದೇಶಕ್ಕೆ ಇದು ಸಂಬಂಧಪಟ್ಟದ್ದಾಗಿತ್ತು.
“ಹೊಸದಾಗಿ ಹುಟ್ಟು”
3. ಸ್ವರ್ಗದ ರಾಜ್ಯದ ಕುರಿತ ಯಾವ ಹೊಸ ವಿಷಯಗಳನ್ನು ಯೇಸುವು ನಿಕೊದೇಮನಿಗೆ ವಿವರಿಸಿದನು?
3 ಒಬ್ಬ ಪ್ರಮುಖ ಫರಿಸಾಯನೊಂದಿಗೆ ನಡೆದ ಗುಪ್ತವಾದೊಂದು ಕೂಟದಲ್ಲಿ, ಯೇಸು ಈ ದೈವಿಕ ಉದ್ದೇಶದ ಕುರಿತು ಹೆಚ್ಚನ್ನು ತಿಳಿಸಿದನು. ನಿಕೊದೇಮನೆಂಬ ಆ ಫರಿಸಾಯನು ರಾತ್ರಿವೇಳೆಯಲ್ಲಿ ಯೇಸುವಿನ ಬಳಿ ಬಂದಾಗ ಯೇಸು ಅವನಿಗೆ ಹೇಳಿದ್ದು: “ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು.” (ಯೋಹಾನ 3:3) ಒಬ್ಬ ಫರಿಸಾಯನಾಗಿದ್ದ ನಿಕೊದೇಮನು ಹೀಬ್ರು ಶಾಸ್ತ್ರಗಳನ್ನು ಅಧ್ಯಯನ ಮಾಡಿದಿರ್ದಬೇಕಾದುದರಿಂದ ದೇವರ ರಾಜ್ಯದ ಭವ್ಯ ಸತ್ಯದ ಕುರಿತು ತುಸು ತಿಳಿದಿದ್ದನು. ದಾನಿಯೇಲನ ಪುಸ್ತಕವು, ರಾಜ್ಯವು “ಮನುಷ್ಯಕುಮಾರನಂತಿರುವ” ಒಬ್ಬನಿಗೆ ಮತ್ತು “ಪರಾತ್ಪರನ ಭಕ್ತಜನರಿಗೆ” ಕೊಡಲ್ಪಡುವುದೆಂದು ಪ್ರವಾದಿಸಿತ್ತು. (ದಾನಿಯೇಲ 7:13, 14, 27) ಆ ರಾಜ್ಯವು ಇತರ ಎಲ್ಲಾ ರಾಜ್ಯಗಳನ್ನು, “ಭಂಗಪಡಿಸಿ ನಿರ್ನಾಮಮಾಡಿ” ಶಾಶ್ವತವಾಗಿ ನಿಲಲ್ಲಿಕ್ಕಿತ್ತು. (ದಾನಿಯೇಲ 2:44) ಈ ಪ್ರವಾದನೆಗಳು ಯೆಹೂದಿ ಜನಾಂಗದ ಸಂಬಂಧದಲ್ಲಿ ನೆರವೇರುವವೆಂದು ನಿಕೊದೇಮನು ಯೋಚಿಸಿದುದ್ದು ಸಂಭವನೀಯ; ಆದರೆ ರಾಜ್ಯವನ್ನು ನೋಡಲು ಒಬ್ಬನು ಮತ್ತೆ ಹುಟ್ಟಬೇಕೆಂದು ಯೇಸು ಹೇಳಿದನು. ನಿಕೊದೇಮನಿಗೆ ಅರ್ಥವಾಗದರ್ದಿಂದ ಯೇಸುವು ಮುಂದುವರಿಸಿ ಹೇಳಿದ್ದು: “ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು.”—ಯೋಹಾನ 3:5.
4. ಪವಿತ್ರಾತ್ಮದಿಂದ ಹುಟ್ಟಿದವರ ವಿಷಯದಲ್ಲಿ, ಯೆಹೋವನೊಂದಿಗೆ ಅವರಿಗಿರುವ ಸಂಬಂಧವು ಹೇಗೆ ಬದಲಾಗುವುದು?
4 ದೀಕ್ಷಾಸ್ನಾಪಕ ಯೋಹಾನನು ಪವಿತ್ರಾತ್ಮದ ದೀಕ್ಷಾಸ್ನಾನದ ಕುರಿತು ಮಾತಾಡಿದ್ದನು. ಈಗ ಯೇಸು, ಒಬ್ಬ ವ್ಯಕ್ತಿಯು ದೇವರ ರಾಜ್ಯವನ್ನು ಪ್ರವೇಶಿಸಬೇಕಾದರೆ ಪವಿತ್ರಾತ್ಮದಿಂದ ಹುಟ್ಟ ಬೇಕು ಎಂದು ಕೂಡಿಸುತ್ತಾನೆ. ಈ ಅನನ್ಯವಾದ ಜನನದ ಮೂಲಕ, ಅಪೂರ್ಣರಾದ ಪುರುಷರು ಮತ್ತು ಸ್ತ್ರೀಯರು ಯೆಹೋವ ದೇವರೊಂದಿಗೆ ಒಂದು ಅತಿ ವಿಶೇಷ ಸಂಬಂಧವನ್ನು ಪ್ರವೇಶಿಸುತ್ತಾರೆ. ಅವರು ಆತನ ದತ್ತು ಮಕ್ಕಳಾಗುತ್ತಾರೆ. ನಾವು ಓದುವುದು: “ಯಾರಾರು ಆತನನ್ನು [ಯೇಸುವನ್ನು] ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರಕೊಟ್ಟನು. ಇವರು ರಕ್ತಸಂಬಂಧದಿಂದಾಗಲಿ ಕಾಮದಿಂದಾಗಲಿ ಪುರುಷಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.”—ಯೋಹಾನ 1:12, 13; ರೋಮಾಪುರ 8:15.
ದೇವರ ಮಕ್ಕಳು
5. ನಂಬಿಗಸ್ತ ಶಿಷ್ಯರು ಯಾವಾಗ ಪವಿತ್ರಾತ್ಮದಿಂದ ದೀಕ್ಷಾಸ್ನಾನ ಹೊಂದಿದರು, ಮತ್ತು ಅದೇ ಸಮಯದಲ್ಲಿ, ಪವಿತ್ರಾತ್ಮದ ಯಾವ ಸಂಬಂಧಿತ ಕಾರ್ಯ ನಡೆಸುವಿಕೆಗಳು ಸಂಭವಿಸಿದವು?
5 ಯೇಸುವು ನಿಕೊದೇಮನೊಂದಿಗೆ ಮಾತಾಡಿದಾಗ, ಪವಿತ್ರಾತ್ಮವು ಯೇಸುವಿನ ಮೇಲೆ ಆಗಲೆ ಬಂದಿತ್ತು. ಅದು ಅವನನ್ನು ದೇವರ ರಾಜ್ಯದಲ್ಲಿ ಭಾವೀ ರಾಜತ್ವಕ್ಕಾಗಿ ಅಭಿಷೇಕಿಸಿತ್ತು ಮತ್ತು ದೇವರು ಯೇಸುವನ್ನು ತನ್ನ ಪುತ್ರನೆಂದು ಬಹಿರಂಗವಾಗಿ ಸ್ವೀಕರಿಸಿದ್ದನು. (ಮತ್ತಾಯ 3:16, 17) ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೋವನು ಇನ್ನೂ ಅನೇಕ ಆತ್ಮಿಕ ಮಕ್ಕಳನ್ನು ಪಡೆದನು. ಯೆರೂಸಲೇಮಿನ ಮೇಲ್ಕೇಣೆಯಲ್ಲಿ ಒಟ್ಟುಗೂಡಿದ್ದ ನಂಬಿಗಸ್ತ ಶಿಷ್ಯರು ಪವಿತ್ರಾತ್ಮದ ದೀಕ್ಷಾಸ್ನಾನ ಹೊಂದಿದರು. ಅದೇ ಸಮಯದಲ್ಲಿ, ಅವರು ದೇವರ ಆತ್ಮಿಕ ಪುತ್ರರಾಗಲು ಪವಿತ್ರಾತ್ಮದಿಂದ ಪುನಃ ಹುಟ್ಟಿದರು. (ಅ. ಕೃತ್ಯಗಳು 2:2-4, 38; ರೋಮಾಪುರ 8:15) ಅಲ್ಲದೆ, ಭಾವೀ ಸ್ವರ್ಗೀಯ ಬಾಧ್ಯತೆಯ ವೀಕ್ಷಣದಲ್ಲಿ ಅವರಿಗೆ ಪವಿತ್ರಾತ್ಮದಿಂದ ಅಭಿಷೇಕವಾಯಿತು, ಮತ್ತು ಆ ಸ್ವರ್ಗೀಯ ನಿರೀಕ್ಷೆಯ ನಿಶ್ಚಯತೆಯ ಮುನ್ಸೂಚನೆಯಾಗಿ ಅವರಿಗೆ ಪವಿತ್ರಾತ್ಮದಿಂದ ಆದ್ಯ ರೀತಿಯಲ್ಲಿ ಮುದ್ರೆ ಒತಲ್ತಾಯಿತು.—2 ಕೊರಿಂಥ 1:21, 22.
6. ಸ್ವರ್ಗೀಯ ರಾಜ್ಯದ ಸಂಬಂಧದಲ್ಲಿ ಯೆಹೋವನ ಉದ್ದೇಶವೇನು, ಮತ್ತು ಇದರಲ್ಲಿ ಮಾನವರಿಗೆ ಒಂದು ಭಾಗವಿರಬೇಕಾದದ್ದು ಏಕೆ ಯೋಗ್ಯ?
6 ರಾಜ್ಯದೊಳಗೆ ಪ್ರವೇಶಿಸಲು ಅಂದರೆ, ಅವರ ಮರಣ ಮತ್ತು ಪುನರುತ್ಥಾನದ ಬಳಿಕ, ಮಾನವರ ಮತ್ತು ದೇವದೂತರ ಮೇಲೆ ಆಳುವ ಸ್ವರ್ಗೀಯ ರಾಜ್ಯ ಸಂಸ್ಥೆಯ ಭಾಗವಾಗಲು ದೇವರಿಂದ ಆರಿಸಲ್ಪಟ್ಟ ಪ್ರಥಮ ಅಪೂರ್ಣ ಮಾನವರು ಇವರಾಗಿದ್ದರು. ಈ ರಾಜ್ಯದ ಮುಖೇನ ಸಕಲ ಸೃಷ್ಟಿಯ ಮುಂದೆ, ತನ್ನ ಮಹಾ ನಾಮವು ಪವಿತ್ರೀಕರಿಸಲ್ಪಡುವುದು ಮತ್ತು ತನ್ನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವುದೆಂದು ಯೆಹೋವನು ಉದ್ದೇಶಿಸುತ್ತಾನೆ. (ಮತ್ತಾಯ 6:9, 10; ಯೋಹಾನ 12:28) ಮಾನವರಿಗೆ ಆ ರಾಜ್ಯದಲ್ಲಿ ಒಂದು ಪಾಲಿರುವುದು ಅದೆಷ್ಟು ಯೋಗ್ಯ! ಹಿಂದೆ ಏದೆನ್ ಉದ್ಯಾನವನದಲ್ಲಿ ಯೆಹೋವನ ಪರಮಾಧಿಕಾರದ ವಿರುದ್ಧ ತನ್ನ ಪ್ರಥಮ ಪಂಥಾಹ್ವಾನವನ್ನು ಎತ್ತಿದಾಗ, ಸೈತಾನನು ಮಾನವರನ್ನು ಉಪಯೋಗಿಸಿದನು, ಮತ್ತು ಈಗ, ಆ ಪಂಥಾಹ್ವಾನವನ್ನು ಉತ್ತರಿಸುವುದರಲ್ಲಿ ಮಾನವರು ಒಳಗೂಡಿರುವಂತೆ ಯೆಹೋವನು ಉದ್ದೇಶಿಸುತ್ತಾನೆ. (ಆದಿಕಾಂಡ 3:1-6; ಯೋಹಾನ 8:44) ಆ ರಾಜ್ಯದಲ್ಲಿ ಆಳಲಿಕ್ಕಾಗಿ ಆರಿಸಲ್ಪಟ್ಟಿರುವ ವ್ಯಕ್ತಿಗಳಿಗೆ ಅಪೊಸ್ತಲ ಪೇತ್ರನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದರ್ದಲ್ಲಿ ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ ನಮ್ಮನ್ನು ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿರುವದು.”—1 ಪೇತ್ರ 1:3, 4.
7. ಪವಿತ್ರಾತ್ಮದ ದೀಕ್ಷಾಸ್ನಾನವಾಗುವವರು ಯೇಸುವಿನೊಂದಿಗೆ ಯಾವ ಅಪೂರ್ವ ಸಂಬಂಧವನ್ನು ಅನುಭವಿಸುತ್ತಾರೆ?
7 ದೇವರ ದತ್ತ ಪುತ್ರರೋಪಾದಿ, ಆಯಲ್ಪಟ್ಟ ಈ ಕ್ರೈಸ್ತರು ಯೇಸು ಕ್ರಿಸ್ತನ ಸಹೋದರರಾಗಿ ಪರಿಣಮಿಸಿದರು. (ರೋಮಾಪುರ 8:16, 17; 9:4, 26; ಇಬ್ರಿಯ 2:11) ಯೇಸುವು ಅಬ್ರಹಾಮನಿಗೆ ಕೊಟ್ಟ ವಾಗ್ದಾನದ ಸಂತಾನವಾಗಿ ಪರಿಣಮಿಸಿದ್ದರಿಂದ, ಈ ಆತ್ಮಾಭಿಷಿಕ್ತ ಕ್ರೈಸ್ತರು, ಯಾವುದು ನಂಬುವ ಮಾನವ ಕುಲಕ್ಕೆ ಒಂದು ಆಶೀರ್ವಾದವನ್ನು ಅನುಗ್ರಹಿಸುತ್ತದೊ, ಆ ಸಂತಾನದ ಪಾಲುದಾರ ಅಥವಾ ಸಹಾಯಕ ಭಾಗವಾಗುತ್ತಾರೆ. (ಆದಿಕಾಂಡ 22:17, 18; ಗಲಾತ್ಯ 3:16, 26, 29) ಯಾವ ಆಶೀರ್ವಾದವದು? ಪಾಪದಿಂದ ವಿಮೋಚಿತರಾಗಿ, ದೇವರೊಂದಿಗೆ ರಾಜಿಯಾಗಿ, ಆತನನ್ನು ಈಗಲೂ ಸದಾಕಾಲಕ್ಕೂ ಸೇವಿಸುವ ಸದವಕಾಶವೇ. (ಮತ್ತಾಯ 4:23; 20:28; ಯೋಹಾನ 3:16, 36; 1 ಯೋಹಾನ 2:1, 2) ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರು, ತಮ್ಮ ಆತ್ಮಿಕ ಸಹೋದರನಾದ ಯೇಸು ಕ್ರಿಸ್ತನಿಗೂ ತಮ್ಮ ದತ್ತು ತಂದೆಯಾದ ಯೆಹೋವ ದೇವರಿಗೂ ಸಾಕ್ಷಿ ನೀಡುತ್ತ ಸಹೃದಯಿಗಳನ್ನು ಈ ಆಶೀರ್ವಾದಕ್ಕೆ ನಡಿಸುತ್ತಾರೆ.—ಅ. ಕೃತ್ಯಗಳು 1:8; ಇಬ್ರಿಯ 13:15.
8. ದೇವರ ಆತ್ಮಜಾತ ಪುತ್ರರ ‘ಪ್ರತ್ಯಕ್ಷತೆ’ ಎಂದರೇನು?
8 ಈ ಆತ್ಮಜಾತ ದೇವಪುತ್ರರ ‘ಪ್ರತ್ಯಕ್ಷತೆ’ಯ ಕುರಿತು ಬೈಬಲು ಮಾತಾಡುತ್ತದೆ. (ರೋಮಾಪುರ 8:19) ಪಾಲುದಾರ ಅರಸರಂತೆ ಯೇಸುವಿನೊಂದಿಗೆ ರಾಜ್ಯವನ್ನು ಪ್ರವೇಶಿಸಿ, ಸೈತಾನನ ಲೋಕ ವಿಷಯಗಳ ವ್ಯವಸ್ಥೆಯನ್ನು ನಾಶಗೊಳಿಸುವುದರಲ್ಲಿ ಅವರು ಪಾಲಿಗರಾಗುವರು. ಆ ಬಳಿಕ, ಒಂದು ಸಾವಿರ ವರುಷಗಳಲ್ಲಿ, ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ಮಾನವ ಸಂತತಿಗೆ ಪ್ರವಹಿಸುವಂತೆ ಸಹಾಯಮಾಡಿ, ಹೀಗೆ ಆದಾಮನು ಕಳೆದುಕೊಂಡ ಪರಿಪೂರ್ಣತೆಗೆ ಮಾನವ ಕುಲವನ್ನು ಎತ್ತುವರು. (2 ಥೆಸಲೊನೀಕ 1:8-10; ಪ್ರಕಟನೆ 2:26, 27; 20:6; 22:1, 2) ಅವರ ಪ್ರತ್ಯಕ್ಷತೆಯಲ್ಲಿ ಇದೆಲ್ಲ ಸೇರಿದೆ. ನಂಬುವ ಮಾನವ ಸೃಷ್ಟಿಯು ತವಕದಿಂದ ಇದನ್ನು ಕಾಯುತ್ತದೆ.
9. ಅಭಿಷಿಕ್ತ ಕ್ರೈಸ್ತರ ಜಗದ್ವ್ಯಾಪಕ ಸಮುದಾಯವನ್ನು ಬೈಬಲು ಹೇಗೆ ಸೂಚಿಸುತ್ತದೆ?
9 ಅಭಿಷಿಕ್ತ ಕ್ರೈಸ್ತರ ಜಗದ್ವ್ಯಾಪಕ ಸಮುದಾಯವು, “ಪರಲೋಕದಲ್ಲಿ ಹೆಸರು ಬರಸಿಕೊಂಡಿರುವ ಚೊಚ್ಚಲಮಕ್ಕಳ [“ಚೊಚ್ಚಲಿನ,” NW] ಸಭೆ” ಯಾಗಿದೆ. (ಇಬ್ರಿಯ 12:23) ಯೇಸುವಿನ ಪ್ರಾಯಶ್ಚಿತ್ತ ಯಜ್ಞದಿಂದ ಪ್ರಯೋಜನ ಪಡೆಯುವವರಲ್ಲಿ ಇವರೇ ಪ್ರಥಮರು. ಇವರು “ಕ್ರಿಸ್ತನ ದೇಹ,” ಕೂಡ ಆಗಿದ್ದಾರೆ. ಇದು ಅವರೊಳಗಿರುವ ಪರಸ್ಪರ ಮತ್ತು ಕ್ರಿಸ್ತನೊಂದಿಗಿರುವ ಆಪ್ತ ಸಂಬಂಧವನ್ನು ತೋರಿಸುತ್ತದೆ. (1 ಕೊರಿಂಥ 12:27) ಪೌಲನು ಬರೆದುದು: “ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿರುವದೋ, ಹಾಗೆಯೇ ಕ್ರಿಸ್ತನು. ಯೆಹೂದ್ಯರಾಗಲಿ ಗ್ರೀಕರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗುವದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು; ಒಂದೇ ಆತ್ಮ ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿತು.”—1 ಕೊರಿಂಥ 12:12, 13; ರೋಮಾಪುರ 12:5; ಎಫೆಸ 1:22, 23; 3:6.
“ದೇವರ ಇಸ್ರಾಯೇಲ್ಯರು”
10, 11. ಒಂದನೆಯ ಶತಮಾನದಲ್ಲಿ, ಒಂದು ಹೊಸ ಇಸ್ರಾಯೇಲು ಏಕೆ ಬೇಕಾಗಿತ್ತು, ಮತ್ತು ಈ ಹೊಸ ಜನಾಂಗದಲ್ಲಿ ಯಾರು ಸೇರಿದ್ದರು?
10 ಯೇಸುವು ವಾಗ್ದತ್ತ ಮೆಸ್ಸೀಯನಾಗಿ ಬರುವುದಕ್ಕೆ ಮೊದಲಿನ 1,500ಕ್ಕೂ ಹೆಚ್ಚಿನ ವರುಷಗಳಲ್ಲಿ, ಮಾಂಸಿಕ ಇಸ್ರಾಯೇಲ್ ಜನಾಂಗವು ಯೆಹೋವನ ವಿಶೇಷ ಜನತೆಯಾಗಿತ್ತು. ಸಂತತವಾದ ಮರುಜ್ಞಾಪನಗಳ ಹೊರತೂ, ಮೊತ್ತದಲ್ಲಿ ಆ ಜನಾಂಗವು ಅಪನಂಬಿಗಸ್ತವಾಗಿ ಪರಿಣಮಿಸಿತು. ಯೇಸು ತೋರಿಬಂದಾಗ. ಆ ಜನಾಂಗವು ಅವನನ್ನು ನಿರಾಕರಿಸಿತು. (ಯೋಹಾನ 1:11) ಆದಕಾರಣ, ಯೇಸುವು ಯೆಹೂದಿ ಧಾರ್ಮಿಕ ಮುಖಂಡರಿಗೆ ಹೇಳಿದ್ದು: “ಆದದರಿಂದ ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” (ಮತ್ತಾಯ 21:43) ಆ “[ರಾಜ್ಯದ] ಫಲಗಳನ್ನು ಕೊಡುವ ಜನ” ವನ್ನು ಗುರುತಿಸುವುದು ರಕ್ಷಣೆಗೆ ಅತ್ಯಾವಶ್ಯಕ.
11 ಆ ಹೊಸ ಜನಾಂಗವು ಸಾ.ಶ. 33 ರಲ್ಲಿ ಜನಿಸಿದ ಅಭಿಷಿಕ್ತ ಕ್ರೈಸ್ತ ಸಭೆಯೇ. ಅದರ ಪ್ರಥಮ ಸದಸ್ಯರು, ಯೇಸುವನ್ನು ತಮ್ಮ ಸ್ವರ್ಗೀಯ ಅರಸನಾಗಿ ಅಂಗೀಕರಿಸಿದ ಅವನ ಯೆಹೂದಿ ಶಿಷ್ಯರು. (ಅ. ಕೃತ್ಯಗಳು 2:5, 32-36) ಆದರೂ, ಅವರು ದೇವರ ಹೊಸ ಜನಾಂಗದ ಸದಸ್ಯರಾಗಿದ್ದರು. ಇದು ಅವರ ಯೆಹೂದಿ ಹುಟ್ಟಿನ ಆಧಾರದ ಮೇಲಲ್ಲ, ಯೇಸುವಿನಲ್ಲಿ ನಂಬಿಕೆಯ ಆಧಾರದ ಮೇಲೆಯೇ. ಹೀಗೆ, ದೇವರ ಈ ಹೊಸ ಇಸ್ರಾಯೇಲ್ ಅಪೂರ್ವವಾದುದಾಗಿತ್ತು—ಒಂದು ಆತ್ಮಿಕ ಜನಾಂಗವಾಗಿತ್ತು. ಯೆಹೂದ್ಯರಲ್ಲಿ ಅಧಿಕಾಂಶ ಯೇಸುವನ್ನು ಅಂಗೀಕರಿಸಲು ನಿರಾಕರಿಸಿದಾಗ, ಆ ಹೊಸ ಜನಾಂಗದ ಭಾಗವಾಗುವ ಆಮಂತ್ರಣವು ಸಮಾರ್ಯದವರಿಗೆ ಮತ್ತು ಆಮೇಲೆ ಅನ್ಯರಿಗೆ ನೀಡಲ್ಪಟ್ಟಿತು. ಆ ಹೊಸ ಜನಾಂಗವನ್ನು “ದೇವರ ಇಸ್ರಾಯೇಲ್ಯರು” ಎಂದು ಕರೆಯಲಾಯಿತು.—ಗಲಾತ್ಯ 6:16.
12, 13. ಆ ಹೊಸ ಇಸ್ರಾಯೇಲು ಯೆಹೂದಿ ಮತದ ಕೇವಲ ಒಂದು ಪಂಥವಾಗಿರಲಿಲ್ಲ ಎಂಬುದು ಹೇಗೆ ಸ್ಪಷ್ಟವಾಗಿಯಿತು?
12 ಪೂರ್ವಕಾಲದ ಇಸ್ರಾಯೇಲಿನಲ್ಲಿ, ಯೆಹೂದ್ಯೇತರರು ಮತಾಂತರ ಹೊಂದಿ ಯೆಹೂದ್ಯರಾದಾಗ, ಅವರು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಬೇಕಾಗಿತ್ತು. ಮತ್ತು ಗಂಡುಗಳು ಸುನ್ನತಿ ಮಾಡಿಸಿಕೊಂಡು ಇದನ್ನು ಸೂಚಿಸಬೇಕಾಗಿತ್ತು. (ವಿಮೋಚನಕಾಂಡ 12:48, 49) ಕೆಲವು ಯೆಹೂದಿ ಕ್ರೈಸ್ತರು, ಇದು ದೇವರ ಇಸ್ರಾಯೇಲಿನಲ್ಲಿರುವ ಯೆಹೂದ್ಯೇತರರಿಗೂ ಅನ್ವಯಿಸಬೇಕೆಂದು ಅಭಿಪ್ರಯಿಸಿದರು. ಆದರೂ, ಯೆಹೋವನ ಮನಸ್ಸಿನಲ್ಲಿ ಯಾವುದೋ ಭಿನ್ನವಾದ ವಿಷಯವೊಂದಿತ್ತು. ಅಪೊಸ್ತಲ ಪೇತ್ರನು ಯೆಹೂದ್ಯೇತರನಾಗಿದ್ದ ಕೊರ್ನೇಲ್ಯನ ಮನೆಗೆ ಹೋಗುವಂತೆ ಪವಿತ್ರಾತ್ಮವು ನಿರ್ದೇಶಿಸಿತು. ಕೊರ್ನೇಲ್ಯನೂ ಅವನ ಕುಟುಂಬವೂ ಪೇತ್ರನ ಸಾರುವಿಕೆಗೆ ಪ್ರತಿವರ್ತಿಸಿದಾಗ, ಅವರು—ನೀರಿನ ದೀಕ್ಷಾಸ್ನಾನಕ್ಕೆ ಮೊದಲೇ—ಪವಿತ್ರಾತ್ಮವನ್ನು ಪಡೆದರು. ಯೆಹೋವನು ಈ ಯೆಹೂದ್ಯೇತರರನ್ನು, ಅವರು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಬೇಕೆಂದು ಕೇಳಿಕೊಳ್ಳದೆನೇ, ದೇವರ ಇಸ್ರಾಯೇಲಿನ ಸದಸ್ಯರಾಗಿ ಅಂಗೀಕರಿಸಿದ್ದನೆಂದು ಇದು ಸ್ಪಷ್ಟವಾಗಿಗಿ ತೋರಿಸಿತು.—ಅ. ಕೃತ್ಯಗಳು 10:21-48.
13 ಇದನ್ನು ಒಪ್ಪಿಕೊಳ್ಳುವುದು ಕೆಲವು ವಿಶ್ವಾಸಿಗಳಿಗೆ ಕಷ್ಟಕರವಾಗಿ ಕಂಡುಬಂತು, ಮತ್ತು ಬೇಗನೆ, ಈ ಪೂರ್ತಿ ವಿಷಯವನ್ನು ಯೆರೂಸಲೇಮಿನ ಅಪೊಸ್ತಲರೂ ಹಿರಿಯರೂ ಚರ್ಚಿಸಬೇಕಾಗಿ ಬಂತು. ಆ ವಿಧಿ ವಿಹಿತ ಮಂಡಲಿಯು, ಯೆಹೂದ್ಯೇತರ ವಿಶ್ವಾಸಿಗಳ ಮೇಲೆ ಪವಿತ್ರಾತ್ಮವು ಹೇಗೆ ಕ್ರಿಯಾಶಕ್ತವಾಗಿತ್ತೆಂಬುದನ್ನು ವಿವರಿಸುವ ಸಾಕ್ಷ್ಯವನ್ನು ಕೇಳಿತು. ಇದು ಪ್ರೇರಿತ ಪ್ರವಾದನೆಯ ನೆರವೇರಿಕೆಯೆಂಬುದಾಗಿ ಬೈಬಲ್ ಸಂಶೋಧನೆಯು ತೋರಿಸಿತು. (ಯೆಶಾಯ 55:5; ಆಮೋಸ 9:11, 12) ಒಂದು ಸರಿಯಾದ ನಿರ್ಣಯವನ್ನು ತಲಪಲಾಯಿತು: ಯೆಹೂದ್ಯೇತರ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಬೇಕೆಂದಿರಲಿಲ್ಲ. (ಅ. ಕೃತ್ಯಗಳು 15:1, 6-29) ಹೀಗೆ, ಆತ್ಮಿಕ ಇಸ್ರಾಯೇಲು ನಿಜವಾಗಿಯೂ ಒಂದು ಹೊಸ ಜನಾಂಗವಾಗಿತ್ತೇ ಹೊರತು ಯೆಹೂದ್ಯ ಮತದ ಕೇವಲ ಒಂದು ಪಂಥವಾಗಿರಲಿಲ್ಲ.
14. ಯಾಕೋಬನು ಕ್ರೈಸ್ತ ಸಭೆಯನ್ನು, “ಚದರಿರುವ ಹನ್ನೆರಡು ಕುಲದವರು” ಎಂದು ಕರೆದುದರಲ್ಲಿ ಅಪ್ರತ್ಯಕ್ಷವಾಗಿ ಏನು ಸೂಚಿಸಲ್ಪಡುತ್ತದೆ?
14 ಇದಕ್ಕೆ ಹೊಂದಿಕೆಯಾಗಿ, ಒಂದನೆಯ ಶತಮಾನದ ಅಭಿಷಿಕ್ತ ಕ್ರೈಸ್ತರಿಗೆ ಬರೆಯುವಾಗ, ಶಿಷ್ಯ ಯಾಕೋಬನು ತನ್ನ ಪತ್ರವನ್ನು, “ಚದರಿರುವ ಹನ್ನೆರಡು ಕುಲದವರಿಗೆ” ಸಂಬೋಧಿಸಿದನು. (ಯಾಕೋಬ 1:1; ಪ್ರಕಟನೆ 7:3-8) ಆ ಹೊಸ ಇಸ್ರಾಯೇಲಿನ ಪೌರರು ನಿರ್ದಿಷ್ಟ ಕುಲಗಳಿಗೆ ನೇಮಿಸಲ್ಪಟ್ಟಿರಲಿಲ್ಲವೆಂಬುದು ನಿಶ್ಚಯ. ಮಾಂಸಿಕ ಇಸ್ರಾಯೇಲಿನಲ್ಲಿದ್ದಂತೆ ಆತ್ಮಿಕ ಇಸ್ರಾಯೇಲಿನಲ್ಲಿ 12 ಪ್ರತ್ಯೇಕ ಕುಲಗಳ ವಿಭಾಗವಿರಲಿಲ್ಲ. ಆದರೂ, ಯಾಕೋಬನ ಪ್ರೇರಿತ ಅಭಿವ್ಯಕ್ತಿಯು, ಯೆಹೋವನ ದೃಷ್ಟಿಯಲ್ಲಿ ದೇವರ ಇಸ್ರಾಯೇಲು ಸಹಜ ಇಸ್ರಾಯೇಲಿನ 12 ಕುಲಗಳನ್ನು ತೆಗೆದು ಪೂರ್ತಿಯಾಗಿ ಸ್ಥಾನಭರ್ತಿಮಾಡಿದೆಯೆಂದು ಸೂಚಿಸುತ್ತದೆ. ಸಹಜವಾಗಿ ಹುಟ್ಟಿದ ಒಬ್ಬ ಇಸ್ರಾಯೇಲ್ಯನು ಆ ಹೊಸ ಜನಾಂಗದ ಭಾಗವಾದರೆ, ಅವನ ಮಾಂಸಿಕ ವಂಶಕ್ಕೆ—ಅವನು ಯೆಹೂದ ಅಥವಾ ಲೇವಿ ಕುಲದವನಾಗಿದ್ದರೂ—ಯಾವ ವೈಶಿಷ್ಟ್ಯವೂ ಇರಲಿಲ್ಲ.—ಗಲಾತ್ಯ 3:28; ಫಿಲಿಪ್ಪಿ 3:5, 6.
ಒಂದು ಹೊಸ ಒಡಂಬಡಿಕೆ
15, 16. (ಎ) ದೇವರ ಇಸ್ರಾಯೇಲಿನ ಯೆಹೂದ್ಯೇತರ ಸದಸ್ಯರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? (ಬಿ) ಯಾವ ಶಾಸನಬದ್ಧ ಆಧಾರದ ಮೇರೆಗೆ ಹೊಸ ಇಸ್ರಾಯೇಲು ಸ್ಥಾಪಿಸಲ್ಪಟ್ಟಿತು?
15 ಯೆಹೋವನ ದೃಷ್ಟಿಯಲ್ಲಿ, ಈ ಹೊಸ ಜನಾಂಗದ ಇಸ್ರಾಯೇಲ್ಯೇತರ ಸದಸ್ಯರು ಪೂರ್ತಿ ಹಕ್ಕಿರುವ ಆತ್ಮಿಕ ಯೆಹೂದ್ಯರು! ಅಪೊಸ್ತಲ ಪೌಲನು ವಿವರಿಸಿದ್ದು: “ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ. ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥಾ ಸುನ್ನತಿಯಿದ್ದವನಿಗೆ ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ.” (ರೋಮಾಪುರ 2:28, 29) ದೇವರ ಇಸ್ರಾಯೇಲಿನ ಭಾಗವಾಗಲು ಕೊಡಲ್ಪಟ್ಟ ಆಮಂತ್ರಣಕ್ಕೆ ಅನೇಕ ಯೆಹೂದ್ಯೇತರರು ಓಗೊಟ್ಟರು, ಮತ್ತು ಈ ಬೆಳವಣಿಗೆಯು ಬೈಬಲ್ ಪ್ರವಾದನೆಯನ್ನು ನೆರವೇರಿಸಿತು. ಉದಾಹರಣೆಗೆ, ಹೋಶೇಯ ಪ್ರವಾದಿ ಬರೆದುದು: “ನಾನು ಕರುಣೆ ತೋರಿಸಲ್ಪಡದಿದವ್ದಳಿಗೆ ಕರುಣೆ ತೋರಿಸುವೆನು, ಮತ್ತು ನಾನು ನನ್ನ ಜನರಲ್ಲದವರಿಗೆ, ‘ನೀವು ನನ್ನ ಜನರು,’ ಎಂದು ಹೇಳುವೆನು; ಅವರಂತೂ, ‘ನೀನು ನನ್ನ ದೇವರು,’ ಎಂದು ಹೇಳುವರು.”—ಹೋಶೇಯ 2:23, NW; ರೋಮಾಪುರ 11:25, 26.
16 ಆ ಆತ್ಮಿಕ ಇಸ್ರಾಯೇಲ್ಯರು ಧರ್ಮಶಾಸ್ತ್ರದ ಒಡಂಬಡಿಕೆಗೆ ಅಧೀನರಲ್ಲದಿದ್ದರೆ, ಅವರು ಯಾವ ಆಧಾರದ ಮೇರೆಗೆ ಆ ಹೊಸ ಜನಾಂಗದ ಭಾಗವಾಗಿದ್ದರು? ಯೆಹೋವನು ಯೇಸುವಿನ ಮೂಲಕ ಈ ಆತ್ಮಿಕ ಜನಾಂಗದೊಂದಿಗೆ ಒಂದು ಹೊಸ ಒಡಂಬಡಿಕೆಯನ್ನು ಮಾಡಿದನು. (ಇಬ್ರಿಯ 9:15) ಯೇಸುವು ತನ್ನ ಮರಣದ ಸ್ಮಾರಕವನ್ನು ಸಾ.ಶ. 33ರ ನೈಸಾನ್ 14 ರಂದು ಆರಂಭಿಸಿದಾಗ, ಅವನು 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಹಂಚಿ, ದ್ರಾಕ್ಷಾಮದ್ಯವು, “ಒಡಂಬಡಿಕೆಯ ರಕ್ತ” ವನ್ನು ಸೂಚಿಸಿತೆಂದು ಹೇಳಿದನು. (ಮತ್ತಾಯ 26:28; ಯೆರೆಮೀಯ 31:31-34) ಲೂಕನ ವೃತ್ತಾಂತದಲ್ಲಿ ಹೇಳಿರುವಂತೆ, ದ್ರಾಕ್ಷಾಮದ್ಯದ ಪಾತ್ರೆಯು “ಹೊಸ ಒಡಂಬಡಿಕೆ” ಯನ್ನು ಸೂಚಿಸಿತೆಂದು ಯೇಸು ಹೇಳಿದನು. (ಲೂಕ 22:20) ಯೇಸುವಿನ ಮಾತುಗಳ ನೆರವೇರಿಕೆಯಾಗಿ, ಪಂಚಾಶತ್ತಮದಲ್ಲಿ ಪವಿತ್ರಾತ್ಮವು ಸುರಿಸಲ್ಪಟ್ಟಾಗ ಮತ್ತು ದೇವರ ಇಸ್ರಾಯೇಲು ಜನಿಸಿದಾಗ, ಆ ರಾಜ್ಯವು ಮಾಂಸಿಕ ಇಸ್ರಾಯೇಲಿನಿಂದ ತೆಗೆಯಲ್ಪಟ್ಟು ಆ ಹೊಸತಾದ ಆತ್ಮಿಕ ಇಸ್ರಾಯೇಲಿಗೆ ಕೊಡಲ್ಪಟ್ಟಿತು. ಮಾಂಸಿಕ ಇಸ್ರಾಯೇಲಿನ ಸ್ಥಾನದಲ್ಲಿ, ತನ್ನ ಸಾಕ್ಷಿಗಳಿಂದ ರಚಿತವಾದ ಈ ಹೊಸ ಜನಾಂಗವು ಈಗ ಯೆಹೋವನ ಸೇವಕನಾಯಿತು.—ಯೆಶಾಯ 43:10, 11.
“ಹೊಸ ಯೆರೂಸಲೇಮ್”
17, 18. ಪ್ರಕಟನೆ ಪುಸ್ತಕದಲ್ಲಿ, ಅಭಿಷಿಕ್ತ ಕ್ರೈಸ್ತರಿಗಾಗಿ ಕಾದಿರುವ ಮಹಿಮೆಯ ಯಾವ ವರ್ಣನೆಗಳನ್ನು ಕೊಡಲಾಗಿದೆ?
17 ಸ್ವರ್ಗೀಯ ಪ್ರೇರಣಾಮಂತ್ರಣದಲ್ಲಿ ಭಾಗಿಗಳಾಗುವ ಸುಯೋಗವುಳ್ಳವರಿಗೆ ಎಂತಹ ಮಹಿಮೆಯು ಕಾದಿದೆ! ಮತ್ತು ಅವರಿಗಾಗಿ ಕಾಯುತ್ತಿರುವ ಅದ್ಭುತಗಳ ಕುರಿತು ಕಲಿಯುವುದು ಅದೆಷ್ಟು ಪರಮಾನಂದಕರ! ಪ್ರಕಟನೆ ಪುಸ್ತಕವು ಅವರ ಸ್ವರ್ಗೀಯ ಬಾಧ್ಯತೆಯ ಕುರಿತು ನಮಗೆ ರೋಮಾಂಚಕ ಕ್ಷಣದರ್ಶನಗಳನ್ನು ಕೊಡುತ್ತದೆ. ದೃಷ್ಟಾಂತಕ್ಕೆ, ಪ್ರಕಟನೆ 4:4 ರಲ್ಲಿ ನಾವು ಓದುವುದು: “ಇದಲ್ಲದೆ [ಯೆಹೋವನ] ಸಿಂಹಾಸನದ ಸುತ್ತಲು ಇಪ್ಪತ್ತುನಾಲ್ಕು ಸಿಂಹಾಸನಗಳಿದ್ದವು; ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ತುನಾಲ್ಕು ಮಂದಿ ಹಿರಿಯರು ಕೂತಿದ್ದರು; ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.” ಈ 24 ಮಂದಿ ಹಿರಿಯರು, ಪುನರುತ್ಥಾನ ಹೊಂದಿ ಯೆಹೋವನು ಅವರಿಗೆ ವಾಗ್ದಾನಿಸಿದ ಸ್ವರ್ಗೀಯ ಸ್ಥಾನವನ್ನು ಈಗ ವಹಿಸುತ್ತಿರುವ ಅಭಿಷಿಕ್ತ ಕ್ರೈಸ್ತರು. ಅವರ ಕಿರೀಟಗಳೂ ಸಿಂಹಾಸನಗಳೂ ನಮಗೆ ಅವರ ರಾಜತ್ವವನ್ನು ಜ್ಞಾಪಕ ಹುಟ್ಟಿಸುತ್ತವೆ. ಯೆಹೋವನ ಸಿಂಹಾಸನದ ಸುತ್ತಲೂ ಸೇವಿಸುವ ಅವರ ಬೆರಗುಬಡಿಸುವ ಉನ್ನತ ಸುಯೋಗದ ಕುರಿತೂ ಯೋಚಿಸಿರಿ!
18 ಪ್ರಕಟನೆ 14:1 ರಲ್ಲಿ ನಾವು ಅವರ ಇನ್ನೊಂದು ಕ್ಷಣದರ್ಶನವನ್ನು ಕಾಣುತ್ತೇವೆ: “ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.” ಇಲ್ಲಿ ನಾವು ಈ ಅಭಿಷಿಕ್ತರ ಪರಿಮಿತ ಸಂಖ್ಯೆ—1,44,000—ಯನ್ನು ನೋಡುತ್ತೇವೆ. ಅವರ ರಾಜಯೋಗ್ಯ ಸ್ಥಾನವು, ಯೆಹೋವನ ಸಿಂಹಾಸನಾರೂಢ ಅರಸನೂ “ಕುರಿ” (“ಕುರಿಮರಿ,” NW)ಯೂ ಆದ ಯೇಸುವಿನೊಂದಿಗೆ ಅವರು ನಿಂತಿರುವುದರಿಂದ ಗ್ರಹಿಸಲ್ಪಡುತ್ತದೆ. ಮತ್ತು ಅವರು ಸ್ವರ್ಗೀಯ ಚೀಯೋನ್ ಪರ್ವತದಲ್ಲಿದ್ದಾರೆ. ಭೂಮಿಯ ಚೀಯೋನ್ ಪರ್ವತವು ಇಸ್ರಾಯೇಲಿನ ರಾಜನಗರವಾದ ಯೆರೂಸಲೇಮಿನ ನಿವೇಶನವಾಗಿತ್ತು. ಸ್ವರ್ಗೀಯ ಚೀಯೋನ್ ಪರ್ವತವು, ಯಾರು ಸ್ವರ್ಗೀಯ ಯೆರೂಸಲೇಮಿನಲ್ಲಿ ಸೇರಿರುತ್ತಾರೊ ಆ ಯೇಸು ಮತ್ತು ಅವನ ಜೊತೆ ಬಾಧ್ಯಸ್ಥರ ಘನತೆಯ ಸ್ಥಾನವನ್ನು ಪ್ರತಿನಿಧೀಕರಿಸುತ್ತದೆ.—2 ಪೂರ್ವಕಾಲವೃತ್ತಾಂತ 5:2; ಕೀರ್ತನೆ 2:6.
19, 20. (ಎ) ಅಭಿಷಿಕ್ತ ಕ್ರೈಸ್ತರು ಯಾವ ಸ್ವರ್ಗೀಯ ಸಂಸ್ಥೆಯ ಒಂದು ಭಾಗವಾಗಿರುವರು? (ಬಿ) ಸ್ವರ್ಗದಲ್ಲಿ ಪೌರತ್ವವಿರುವವರನ್ನು ಯೆಹೋವನು ಯಾವ ಸಮಯಾವಧಿಯಲ್ಲಿ ಆರಿಸಿದನು?
19 ಇದಕ್ಕೆ ಹೊಂದಿಕೆಯಾಗಿ, ಸ್ವರ್ಗೀಯ ಮಹಿಮೆಯಲ್ಲಿರುವ ಅಭಿಷಿಕ್ತರನ್ನು “ಹೊಸ ಯೆರೂಸಲೇಮ್” ಎಂದೂ ಕರೆಯಲಾಗುತ್ತದೆ. (ಪ್ರಕಟನೆ 21:2) ಭೂಮಿಯ ಯೆರೂಸಲೇಮು, “ದೊಡ್ಡ ಅರಸನ ಪಟ್ಟಣ” ವಾಗಿಯೂ ದೇವಾಲಯದ ನಿವೇಶನವಾಗಿಯೂ ಇತ್ತು. (ಮತ್ತಾಯ 5:35) ಸ್ವರ್ಗೀಯ ಹೊಸ ಯೆರೂಸಲೇಮು ರಾಜವೈಭವದ ರಾಜ್ಯ ಸಂಸ್ಥೆಯಾಗಿದೆ. ಇದರ ಮೂಲಕ ಮಹಾ ಪರಮಾಧಿಕಾರಿಯಾದ ಯೆಹೋವನು ಮತ್ತು ಆತನ ನಿಯಮಿತ ಅರಸನಾದ ಯೇಸು ಈಗ ಆಳುತ್ತಾರೆ, ಮತ್ತು ಮಾನವ ಕುಲದ ವಾಸಿಯಾಗುವಿಕೆಗಾಗಿ ಯೆಹೋವನ ಸಿಂಹಾಸನದಿಂದ ಪುಷ್ಕಳಾಶೀರ್ವಾದಗಳು ಬರುವಾಗ ಅದರಲ್ಲಿ ಯಾಜಕೀಯ ಸೇವೆಯು ನಡೆಸಲ್ಪಡುತ್ತದೆ. (ಪ್ರಕಟನೆ 21:10, 11; 22:1-5) ಇನ್ನೊಂದು ದರ್ಶನದಲ್ಲಿ, ನಂಬಿಗಸ್ತರಾದ, ಪುನರುತಿತ್ಥ, ಅಭಿಷಿಕ್ತ ಕ್ರೈಸ್ತರು, ‘ಕುರಿಯಾದಾತನು ವಿವಾಹವಾಗುವ ಕನ್ಯೆ,’ (“ಕುರಿಮರಿಯಾದಾತನ ಪತ್ನಿ,” NW) ಎಂದು ಸೂಚಿಸಲ್ಪಡುವುದನ್ನು ಯೋಹಾನನು ಕೇಳುತ್ತಾನೆ. ಅವರು ಯೇಸುವಿನೊಂದಿಗೆ ಅನುಭವಿಸುವ ಆಪತ್ತೆ ಮತ್ತು ಅವನಿಗೆ ಅವರು ತೋರಿಸುವ ಇಚ್ಛಾಪೂರ್ವಕವಾದ ಅಧೀನತೆಯ ಎಂತಹ ಹೃದಯೋಲ್ಲಾಸಕರವಾದ ಚಿತ್ರವನ್ನು ಇದು ಚಿತ್ರಿಸುತ್ತದೆ! ಅವರಲ್ಲಿ ಕೊನೆಯವನು ಕಟ್ಟಕಡೆಗೆ ತನ್ನ ಸ್ವರ್ಗೀಯ ಪ್ರತಿಫಲವನ್ನು ಪಡೆಯುವಾಗ ಸ್ವರ್ಗದಲ್ಲಿ ಆಗಲಿರುವ ಆನಂದವನ್ನು ಕಲ್ಪಿಸಿಕೊಳ್ಳಿರಿ. ಈಗ ಕೊನೆಗೆ, “ಕುರಿಯಾದಾತನ ವಿವಾಹವು” ನಡೆಯಸಾಧ್ಯವಿದೆ! ಆಗ ಆ ರಾಜವೈಭವದ ಸ್ವರ್ಗೀಯ ಸಂಸ್ಥೆಯು ಪೂರ್ಣಗೊಂಡಿರುವುದು.—ಪ್ರಕಟನೆ 19:6-8.
20 ಹೌದು, ಯಾರಿಗೆ ಅಪೊಸ್ತಲ ಪೌಲನು, “ನಮಗಾದರೊ, ನಮ್ಮ ಪೌರತ್ವವು ಸ್ವರ್ಗಗಳಲ್ಲಿದೆ,” ಎಂದು ಹೇಳಿದನೊ ಅವರಿಗೆ ಅದ್ಭುತಕರವಾದ ಆಶೀರ್ವಾದಗಳು ಕಾದಿವೆ. (ಫಿಲಿಪ್ಪಿ 3:20, NW) ಸುಮಾರು ಎರಡು ಸಾವಿರ ವರುಷಗಳಿಂದ, ಯೆಹೋವನು ತನ್ನ ಆತ್ಮಿಕ ಮಕ್ಕಳನ್ನು ಆರಿಸುತ್ತಾ ಅವರನ್ನು ಸ್ವರ್ಗೀಯ ಬಾಧ್ಯತೆಗಾಗಿ ಸಿದಮ್ಧಾಡುತ್ತಿದ್ದಾನೆ. ಸಕಲ ಸಾಕ್ಷ್ಯಗಳಿಗನುಸಾರ, ಆರಿಸುವ ಮತ್ತು ಸಿದ್ಧಮಾಡುವ ಈ ಕೆಲಸವು ಇನ್ನೇನು ಮುಗಿದದೆ. ಆದರೆ, ಪ್ರಕಟನೆ 7 ನೆಯ ಅಧ್ಯಾಯದಲ್ಲಿ ದಾಖಲೆಯಾಗಿದ್ದು, ಯೋಹಾನನಿಗೆ ಅವನ ದರ್ಶನದಲ್ಲಿ ತಿಳಿಸಿರುವಂತೆ, ಇನ್ನೂ ಹೆಚ್ಚು ಸಂಗತಿಗಳು ಅನುಸರಿಸಿ ಬರಲಿದ್ದವು. ಆದಕಾರಣ ಈಗ, ಕ್ರೈಸ್ತರ ಇನ್ನೊಂದು ಗುಂಪು ನಮ್ಮ ಗಮನವನ್ನು ಕೇಳಿಕೊಳ್ಳುತ್ತದೆ, ಮತ್ತು ಮುಂದಿನ ಲೇಖನದಲ್ಲಿ ಈ ಗುಂಪನ್ನು ನಾವು ಪರಿಗಣಿಸುವೆವು.
ನಿಮಗೆ ಜ್ಞಾಪಕವಿದೆಯೆ?
▫ ಸ್ವರ್ಗೀಯ ಬಾಧ್ಯತೆಯುಳ್ಳವರ ಮೇಲೆ ಆತ್ಮದ ವಿಭಿನ್ನ ಕಾರ್ಯಾಚರಣೆಗಳು ಯಾವುವು?
▫ ಅಭಿಷಿಕ್ತರು ಯೆಹೋವನೊಂದಿಗೆ ಯಾವ ಆಪ್ತ ಸಂಬಂಧವನ್ನು ಅನುಭವಿಸುತ್ತಾರೆ? ಯೇಸುವಿನೊಂದಿಗೆ?
▫ ಬೈಬಲಿನಲ್ಲಿ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಹೇಗೆ ವರ್ಣಿಸಲಾಗುತ್ತದೆ?
▫ ದೇವರ ಇಸ್ರಾಯೇಲು ಯಾವ ಶಾಸನಸಮ್ಮತ ಆಧಾರದ ಮೇರೆಗೆ ಸ್ಥಾಪಿಸಲ್ಪಟ್ಟಿತು?
▫ ಅಭಿಷಿಕ್ತ ಕ್ರೈಸ್ತರಿಗಾಗಿ ಯಾವ ಸ್ವರ್ಗೀಯ ಸುಯೋಗಗಳು ಕಾದಿವೆ?
[ಪುಟ 10 ರಲ್ಲಿರುವ ಚಿತ್ರಗಳು]
ಬಹುಮಟ್ಟಿಗೆ ಎರಡು ಸಾವಿರ ವರ್ಷಗಳ ಅವಧಿಯಲ್ಲಿ ಯೆಹೋವನು ಸ್ವರ್ಗೀಯ ರಾಜ್ಯದಲ್ಲಿ ಆಳುವವರನ್ನು ಆರಿಸಿದನು