ನಿಮ್ಮ ಮಕ್ಕಳು ಏಳಿಗೆ ಹೊಂದುವಂತೆ ಸಹಾಯಮಾಡಿರಿ
ಮಕ್ಕಳನ್ನು ಬೆಳೆಸುವುದರ ಸಂಬಂಧದಲ್ಲಿ, ಅನೇಕ ಹೆತ್ತವರು—ವಾಸ್ತವದಲ್ಲಿ, ತಮ್ಮ ಸ್ವಂತ ಮನೆಯಲ್ಲಿ ಅವರಿಗೆ ಸುಲಭಲಭ್ಯವಿರುವ—ಉತ್ತರಗಳಿಗಾಗಿ ಎಲ್ಲೆಡೆಯೂ ಹುಡುಕುತ್ತಾರೆ. ಅಗಣಿತ ಕುಟುಂಬಗಳು ಬೈಬಲನ್ನು ಪಡೆದಿವೆಯಾದರೂ, ಮಕ್ಕಳನ್ನು ಬೆಳೆಸುವುದರಲ್ಲಿ ಅದು ಉಪಯೋಗಿಸಲ್ಪಡುವುದರ ಬದಲು ಪುಸ್ತಕಗಳ ಷೆಲ್ಫಿನ ಮೇಲೆ ಧೂಳುಹಿಡಿದು ಕೂತಿರುತ್ತದೆ.
ಬೈಬಲನ್ನು ಕುಟುಂಬ ಜೀವಿತದಲ್ಲಿ ಒಂದು ಕೈಪಿಡಿಯಾಗಿ ಉಪಯೋಗಿಸುವುದರ ಕುರಿತಾಗಿ ಅನೇಕರು ಇಂದು ಅನಿಶ್ಚಿತಮತಿಗಳಾಗಿದ್ದಾರೆ ನಿಶ್ಚಯ. ಅವರು ಅದನ್ನು ಉಪಯೋಗಕ್ಕೆ ಬಾರದ್ದು, ಹಳೇಕಾಲದ್ದು ಅಥವಾ ತೀರ ನಿಷ್ಠುರವಾದದ್ದೆಂದು ತಳ್ಳಿಹಾಕುತ್ತಾರೆ. ಆದರೆ ಬೈಬಲು, ಕುಟುಂಬಗಳಿಗಾಗಿ ಒಂದು ಪ್ರಾಯೋಗಿಕ ಪುಸ್ತಕವಾಗಿದೆ ಎಂಬುದನ್ನು ಒಂದು ಪ್ರಾಮಾಣಿಕ ಪರಿಶೀಲನೆಯು ಹೊರಗೆಡಹುವುದು. ಅದು ಹೇಗೆಂಬುದನ್ನು ನಾವು ನೋಡೋಣ.
ತಕ್ಕ ಪರಿಸರ
ಬೈಬಲು ತಂದೆಗೆ ತನ್ನ ಮಕ್ಕಳನ್ನು ‘[ತನ್ನ] ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ಎಣ್ಣೇಮರದ ಸಸಿಗಳಂತೆ’ ವೀಕ್ಷಿಸಲು ಹೇಳುತ್ತದೆ. (ಕೀರ್ತನೆ 128:3, 4) ಕೋಮಲವಾದ ಪುಟ್ಟ ಸಸಿಗಳನ್ನು ಜಾಗರೂಕತೆಯಿಂದ ಕೃಷಿಮಾಡದೆಹೋದರೆ, ತಕ್ಕ ಪೌಷ್ಟಿಕ, ಮಣ್ಣು, ಹಾಗೂ ಆರ್ದ್ರತೆಯನ್ನು ನೀಡದೆಹೋದರೆ, ಅವು ಫಲಭರಿತ ಮರಗಳಾಗಿ ಬೆಳೆಯುವುದಿಲ್ಲ. ತದ್ರೀತಿಯಲ್ಲಿ, ಮಕ್ಕಳ ಯಶಸ್ವಿಕರ ಬೆಳೆಸುವಿಕೆಯು ಶ್ರಮ ಹಾಗೂ ಆರೈಕೆಯನ್ನು ಕೇಳಿಕೊಳ್ಳುತ್ತದೆ. ಪ್ರೌಢತೆಗೆ ಬೆಳೆಯಲು ಮಕ್ಕಳಿಗೆ ಒಂದು ಸ್ವಸ್ಥಕರ ಪರಿಸರದ ಅಗತ್ಯವಿದೆ.
ಅಂಥ ಒಂದು ಪರಿಸರಕ್ಕೆ ಪ್ರಥಮ ಘಟಕಾಂಶವು—ವಿವಾಹ ಸಂಗಾತಿಗಳ ನಡುವೆ ಹಾಗೂ ಹೆತ್ತವರ ಮತ್ತು ಮಕ್ಕಳ ನಡುವಿನ—ಪ್ರೀತಿಯಾಗಿದೆ. (ಎಫೆಸ 5:33; ತೀತ 2:4) ಅನೇಕ ಕುಟುಂಬ ಸದಸ್ಯರು ಒಬ್ಬರು ಇನ್ನೊಬ್ಬರನ್ನು ಪ್ರೀತಿಸುತ್ತಾರಾದರೂ ಅಂಥ ಪ್ರೀತಿಯನ್ನು ವ್ಯಕ್ತಪಡಿಸುವ ಅಗತ್ಯವನ್ನು ಕಾಣುವುದಿಲ್ಲ. ಆದರೂ, ಈ ವಿಷಯವನ್ನು ಪರಿಗಣಿಸಿರಿ: ನೀವೆಂದೂ ವಿಳಾಸವನ್ನು ಸಹ ಬರೆಯದ, ಸ್ಟ್ಯಾಂಪು ಹಚ್ಚದ, ಅಥವಾ ಕಳುಹಿಸಿಯೇ ಇರದ ಪತ್ರಗಳನ್ನು ನೀವು ನಿಮ್ಮ ಮಿತ್ರನೊಬ್ಬನಿಗೆ ಬರೆದಿರುವಲ್ಲಿ, ಅವನೊಂದಿಗೆ ಸಂವಾದಿಸಿದ್ದೀರಿ ಎಂದು ಯುಕ್ತವಾಗಿ ಹೇಳಸಾಧ್ಯವಿದೆಯೋ? ತದ್ರೀತಿಯಲ್ಲಿ, ನಿಜ ಪ್ರೀತಿಯು ಹೃದಯವನ್ನು ಉಲ್ಲಾಸಗೊಳಿಸುವ ಒಂದು ಭಾವನೆಗಿಂತಲೂ ತುಂಬ ಹೆಚ್ಚಿನ ವಿಷಯವಾಗಿದೆ ಎಂಬುದನ್ನು ಬೈಬಲು ತೋರಿಸುತ್ತದೆ. ಅದು ಸ್ವತಃ ನುಡಿಗಳ ಮುಖಾಂತರವೂ ಕ್ರಿಯೆಗಳ ಮುಖಾಂತರವೂ ವ್ಯಕ್ತಪಡಿಸಿಕೊಳ್ಳುತ್ತದೆ. (ಯೋಹಾನ 14:15 ಹಾಗೂ 1 ಯೋಹಾನ 5:3ನ್ನು ಹೋಲಿಸಿರಿ.) ದೇವರು ಮಾದರಿಯನ್ನು ಇಡುತ್ತಾ, ಈ ನುಡಿಗಳಲ್ಲಿ ತನ್ನ ಮಗನಿಗಾಗಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.”—ಮತ್ತಾಯ 3:17.
ಶ್ಲಾಘನೆ
ಹೆತ್ತವರು ಅಂಥ ಪ್ರೀತಿಯನ್ನು ತಮ್ಮ ಮಕ್ಕಳಿಗೆ ಹೇಗೆ ತೋರಿಸಬಲ್ಲರು? ಆರಂಭಿಸಲು, ಒಳ್ಳೆಯದನ್ನು ಹುಡುಕಿರಿ. ಮಕ್ಕಳಲ್ಲಿ ತಪ್ಪನ್ನು ಕಂಡುಹಿಡಿಯುವುದು ಬಲು ಸುಲಭ. ಪ್ರತಿದಿನ, ಅವರ ಅಪ್ರೌಢತೆ, ಅನನುಭವ, ಹಾಗೂ ಸ್ವಾರ್ಥತೆಯು ಅಗಣಿತ ವಿಧಗಳಲ್ಲಿ ಎದ್ದುಕಾಣುವುದು. (ಜ್ಞಾನೋಕ್ತಿ 22:15) ಆದರೆ ಅವರು ಪ್ರತಿದಿನವೂ ಅನೇಕ ಒಳ್ಳೆಯ ವಿಷಯಗಳನ್ನು ಮಾಡುವರು. ನೀವು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸುವಿರಿ? ದೇವರು ನಮ್ಮ ತಪ್ಪುಗಳ ಮೇಲೆ ಗಮನವಿಡುವುದಿಲ್ಲ ಬದಲಿಗೆ ನಾವು ಮಾಡುವ ಒಳ್ಳೆಯ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾನೆ. (ಕೀರ್ತನೆ 130:3; ಇಬ್ರಿಯ 6:10) ನಾವು ನಮ್ಮ ಮಕ್ಕಳೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸಬೇಕು.
ಒಬ್ಬ ಯುವ ವ್ಯಕ್ತಿಯು ಹೇಳುವುದು: “ಜೀವನವಿಡೀ ನಾನು ಮನೆಯಲ್ಲಿ ಕಳೆದ ಸಮಯದಲ್ಲಿ—ಮನೆಯಲ್ಲಿಯೇ ಆಗಲಿ ಶಾಲೆಯಲ್ಲಿ ಆಗಲಿ ಪಡೆದ ಸಾಧನೆಗಳಿಗೆ—ಎಂದೂ ಯಾವುದೇ ರೀತಿಯ ಶ್ಲಾಘನೆಯನ್ನು ಪಡೆದುಕೊಂಡದ್ದು ನನಗೆ ಜ್ಞಾಪಕವಿಲ್ಲ.” ಹೆತ್ತವರೇ, ನಿಮ್ಮ ಮಕ್ಕಳಲ್ಲಿರುವ ಈ ಪ್ರಾಮುಖ್ಯ ಅಗತ್ಯವನ್ನು ಅಲಕ್ಷಿಸದಿರಿ! ಎಲ್ಲ ಮಕ್ಕಳೂ ಅವರು ಮಾಡುವ ಒಳ್ಳೆಯ ವಿಷಯಗಳಿಗಾಗಿ ಕ್ರಮವಾಗಿ ಶ್ಲಾಘಿಸಲ್ಪಡಬೇಕು. ತಾವು ಮಾಡುವಂಥ ಯಾವುದೇ ವಿಷಯವು ಎಂದೂ ಸಾಕಷ್ಟು ಒಳ್ಳೆಯದಾಗಿರುವುದಿಲ್ಲ ಎಂಬುದನ್ನು ಮನದಟ್ಟುಮಾಡುತ್ತಾ, ಅವರು ‘ಮನಗುಂದಿದವರಾಗಿ’ ಬೆಳೆಯುವ ಗಂಡಾಂತರವನ್ನು ಅದು ಕಡಿಮೆಮಾಡುವುದು.—ಕೊಲೊಸ್ಸೆ 3:21.
ಸಂಸರ್ಗ
ನಿಮ್ಮ ಮಕ್ಕಳಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತೊಂದು ಒಳ್ಳೆಯ ವಿಧವು, ಯಾಕೋಬ 1:19ರಲ್ಲಿರುವ ಸಲಹೆಯನ್ನು ಅನುಸರಿಸುವುದೇ ಆಗಿದೆ: “ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.” ನೀವು ನಿಮ್ಮ ಮಕ್ಕಳ ಮನಸ್ಸಿನಲ್ಲಿರುವುದನ್ನು ಹೊರಸೆಳೆದು ಅವರಿಗೆ ಹೇಳಲಿಕ್ಕಿರುವ ವಿಷಯವನ್ನು ನಿಜವಾಗಿಯೂ ಆಲಿಸುತ್ತೀರೋ? ನಿಮ್ಮ ಮಕ್ಕಳು ಮಾತನ್ನು ಮುಗಿಸುವುದಕ್ಕೂ ಮುಂಚೆ ನೀವು ಅವರಿಗೆ ಭಾಷಣಬಿಗಿಯುವಿರಿ ಅಥವಾ ಅವರಿಗೆ ನಿಜವಾಗಿ ಹೇಗನಿಸುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳುವಾಗ ಕೋಪಗೊಳ್ಳುವಿರಿ ಎಂಬುದು ಅವರಿಗೆ ಗೊತ್ತಿರುವಲ್ಲಿ, ಆಗ ಅವರು ತಮ್ಮ ಭಾವನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬಹುದು. ಆದರೆ ನೀವು ನಿಜವಾಗಿಯೂ ಆಲಿಸುವಿರೆಂಬುದನ್ನು ಅವರು ತಿಳಿದಿರುವಲ್ಲಿ, ಅವರು ನಿಮಗೆ ವಿಷಯವನ್ನು ಹೇಳುವ ಹೆಚ್ಚು ಸಂಭವನೀಯತೆಯಿರುವುದು.—ಜ್ಞಾನೋಕ್ತಿ 20:5ನ್ನು ಹೋಲಿಸಿರಿ.
ಆದರೂ, ತಪ್ಪಾಗಿವೆ ಎಂದು ನಿಮಗೆ ತಿಳಿದಿರುವ ಭಾವನೆಗಳನ್ನು ಅವರು ಹೊರಗೆಡಹುವುದಾದರೆ ಆಗೇನು? ಕುಪಿತ ಪ್ರತಿಕ್ರಿಯೆಯನ್ನು ತೋರಿಸುವ, ಒಂದು ಭಾಷಣವನ್ನು ಬಿಗಿಯುವ ಇಲ್ಲವೇ ಶಿಸ್ತುಗೊಳಿಸುವ ಸಮಯವು ಇದಾಗಿದೆಯೋ? ಕೆಲವು ಬಾಲಿಶ ಭಾವಸ್ಫೋಟಗಳು “ಮಾತಾಡುವದರಲ್ಲಿ ನಿಧಾನವಾಗಿಯೂ . . . ಕೋಪಿಸುವದರಲ್ಲಿಯೂ ನಿಧಾನವಾಗಿ”ರುವುದನ್ನು ಕಷ್ಟಕರವಾಗಿ ಮಾಡಸಾಧ್ಯವಿದೆಯೆಂಬುದು ಒಪ್ಪತಕ್ಕ ವಿಷಯವೇ. ಆದರೆ ತನ್ನ ಮಕ್ಕಳೊಂದಿಗಿರುವ ದೇವರ ಮಾದರಿಯನ್ನು ಪುನಃ ಪರಿಗಣಿಸಿರಿ. ತನ್ನ ಮಕ್ಕಳು ತಮಗೆ ನಿಜವಾಗಿಯೂ ಹೇಗನಿಸುತ್ತದೆಂಬುದನ್ನು ತನಗೆ ಹೇಳಲು ಹೆದರುವಂತೆ, ವಿಕಾರವಾದ ಭಯದ ವಾತಾವರಣವನ್ನು ಆತನು ಸೃಷ್ಟಿಸುತ್ತಾನೋ? ಇಲ್ಲ! ಕೀರ್ತನೆ 62:8 ಹೇಳುವುದು: “ಜನರೇ, ಯಾವಾಗಲೂ ಆತನನ್ನೇ [ದೇವರು] ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ; ದೇವರು ನಮ್ಮ ಆಶ್ರಯವು.”
ಆದುದರಿಂದ ಸೊದೋಮ್ ಗೊಮೋರದ ಪಟ್ಟಣಗಳನ್ನು ನಾಶಮಾಡುವ ದೇವರ ನಿರ್ಧಾರದ ಕುರಿತಾಗಿ ಅಬ್ರಹಾಮನು ಚಿಂತಿತನಾಗಿದ್ದಾಗ, ಅವನು ತನ್ನ ಸ್ವರ್ಗೀಯ ತಂದೆಗೆ ಹೀಗೆ ಹೇಳಲು ಹಿಂದುಮುಂದು ನೋಡಲಿಲ್ಲ: “ಈ ರೀತಿಯಲ್ಲಿ ನೀನು ನಡೆದುಕೊಳ್ಳುತ್ತಿರುವುದು ಅಚಿಂತ್ಯದ ವಿಷಯವಾಗಿದೆ . . . ಸಮಸ್ತ ಭೂಮಿಯ ನ್ಯಾಯಾಧೀಶನು ಸರಿಯಾದದ್ದನ್ನು ನಡಿಸುವುದಿಲ್ಲವೋ?” (NW) ಯೆಹೋವನು ಅಬ್ರಹಾಮನನ್ನು ಗದರಿಸಲಿಲ್ಲ; ಆತನು ಅವನ ಮಾತನ್ನು ಆಲಿಸಿದನು ಹಾಗೂ ಅವನ ಭಯವನ್ನು ಶಮನಗೊಳಿಸಿದನು. (ಆದಿಕಾಂಡ 18:20-33) ತನ್ನ ಮಕ್ಕಳು ಶುದ್ಧ ಅಸಮರ್ಥನೆಯೂ ಅಸಾಮಂಜಸ್ಯವೂ ಆಗಿರುವ ಭಾವನೆಗಳನ್ನು ತೋಡಿಕೊಳ್ಳುವಾಗಲೂ ದೇವರು ಅಸಾಧಾರಣವಾದ ರೀತಿಯಲ್ಲಿ ಸಹನಶೀಲನೂ ಸೌಮ್ಯಭಾವದವನೂ ಆಗಿದ್ದಾನೆ.—ಯೋನ 3:10–4:11.
ಅದೇ ರೀತಿಯಲ್ಲಿ, ಮಕ್ಕಳು ತಮ್ಮ ಅತಿ ಅಂತರಂಗದ ಭಾವನೆಗಳನ್ನೂ—ಇವು ಎಷ್ಟೇ ಕ್ಷೋಭೆಗೊಳಿಸುವಂಥದ್ದಾಗಿ ಇರಬಹುದಾದರೂ—ಹೊರಗೆಡಹಲು ಸುರಕ್ಷಿತವೆಂದು ನೆನಸುವ ಒಂದು ಪರಿಸರವನ್ನು ಹೆತ್ತವರು ಸೃಷ್ಟಿಸುವ ಅಗತ್ಯವಿದೆ. ಆದುದರಿಂದ ನಿಮ್ಮ ಮಗುವು ಬಲವಾಗಿ ಕೆರಳಿಸುವ ಭಾವಸ್ಫೋಟವನ್ನು ಮಾಡುವುದಾದರೆ, ಆಲಿಸಿರಿ. ಗದರಿಸುವುದಕ್ಕೆ ಬದಲಾಗಿ, ಮಗುವಿನ ಭಾವನೆಗಳನ್ನು ಒಪ್ಪಿಕೊಳ್ಳಿರಿ ಹಾಗೂ ಕಾರಣಗಳನ್ನು ಹೊರಸೆಳೆಯಿರಿ. ಉದಾಹರಣೆಗೆ ನೀವು ಹೀಗೆ ಹೇಳಬಹುದು: ‘ನೀನು ಇಂಥಿಂಥವರ ಮೇಲೆ ಕೋಪಗೊಂಡಿರುವಂತೆ ತೋರುತ್ತದೆ. ಏನು ಸಂಭವಿಸಿತೆಂದು ನನಗೆ ಹೇಳಲು ನಿನಗೆ ಇಷ್ಟವಿದೆಯೋ?’
ಕೋಪವನ್ನು ನಿರ್ವಹಿಸುವುದು
ಖಂಡಿತವಾಗಿಯೂ, ಯಾವ ಹೆತ್ತವನೂ ಯೆಹೋವನಷ್ಟು ತಾಳ್ಮೆಯುಳ್ಳವನಾಗಿರುವುದಿಲ್ಲ. ಮತ್ತು ಮಕ್ಕಳು ತಮ್ಮ ಹೆತ್ತವರ ತಾಳ್ಮೆಯ ಮಿತಿಯನ್ನು ನಿಶ್ಚಯವಾಗಿ ಪರೀಕ್ಷಿಸಬಲ್ಲರು. ಆಗಿಂದಾಗ್ಗೆ, ನಿಮ್ಮ ಮಕ್ಕಳ ಮೇಲೆ ನಿಮಗೆ ಕೋಪವು ಉಂಟಾಗುವಲ್ಲಿ, ಇದು ನಿಮ್ಮನ್ನು ಒಬ್ಬ ಅಪೂರ್ಣ ಹೆತ್ತವರನ್ನಾಗಿ ಮಾಡುತ್ತದೆ ಎಂಬುದಾಗಿ ಚಿಂತಿಸಬೇಡಿ. ಕೆಲವೊಮ್ಮೆ ಕೋಪಗೊಳ್ಳುವುದರಲ್ಲಿ ನೀವು ಸರಿಯಾಗಿರುವಿರಿ. ದೇವರು ಸ್ವತಃ ತನ್ನ ಮಕ್ಕಳೊಂದಿಗೆ—ಆತನಿಗೆ ಅತಿ ಪ್ರಿಯರಾದ ಕೆಲವರೊಂದಿಗೆ ಕೂಡ—ನ್ಯಾಯವಾಗಿಯೇ ಕೋಪಗೊಳ್ಳುತ್ತಾನೆ. (ವಿಮೋಚನಕಾಂಡ 4:14; ಧರ್ಮೋಪದೇಶಕಾಂಡ 34:10) ಆದರೂ ಆತನ ವಾಕ್ಯವು ನಮ್ಮ ಕೋಪವನ್ನು ನಾವು ನಿಗ್ರಹಿಸಿಕೊಳ್ಳುವಂತೆ ನಮಗೆ ಕಲಿಸುತ್ತದೆ.—ಎಫೆಸ 4:26.
ಹೇಗೆ? ಕೆಲವೊಮ್ಮೆ ಕೆಲವು ಕ್ಷಣಗಳಿಗಾಗಿ ವಿಷಯವನ್ನು ಬದಲಾಯಿಸುವುದು ಸಹಾಯಮಾಡುತ್ತದೆ. ಹೀಗೆ ನಿಮ್ಮ ಕೋಪಕ್ಕೆ ತಣ್ಣಗಾಗುವ ಒಂದು ಅವಕಾಶವಿರುತ್ತದೆ. (ಜ್ಞಾನೋಕ್ತಿ 17:14) ಮತ್ತು ಜ್ಞಾಪಕವಿರಲಿ, ಇದು ಒಂದು ಮಗು! ವಯಸ್ಕ ನಡವಳಿಕೆ ಅಥವಾ ಪ್ರೌಢ ಆಲೋಚನೆಯನ್ನು ನಿರೀಕ್ಷಿಸಬೇಡಿ. (1 ಕೊರಿಂಥ 13:11) ನಿಮ್ಮ ಮಗುವು ಏಕೆ ಈ ರೀತಿಯಲ್ಲಿ ನಡೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಕೋಪವನ್ನು ಮೃದುಗೊಳಿಸಬಹುದು. (ಜ್ಞಾನೋಕ್ತಿ 19:11) ಕೆಟ್ಟದಾದ ಯಾವುದೋ ಸಂಗತಿಯನ್ನು ಮಾಡುವುದು ಹಾಗೂ ಕೆಟ್ಟವನಾಗಿರುವುದರ ನಡುವಿನ ಮಹತ್ತರ ವ್ಯತ್ಯಾಸವನ್ನು ಎಂದೂ ಮರೆಯದಿರಿ. ಕೆಟ್ಟವನು ಎಂದು ಒಂದು ಮಗುವಿನ ಮೇಲೆ ಚೀರಾಡುವುದು, ‘ಒಳ್ಳೆಯವನಾಗಿರಲು ಏಕೆ ಪ್ರಯತ್ನಿಸಲೂಬೇಕು?’ ಎಂದು ಮಗು ಸೋಜಿಗಪಡಲು ಕಾರಣವನ್ನುಂಟುಮಾಡಬಹುದು. ಆದರೆ ಒಂದು ಮಗುವನ್ನು ಪ್ರೀತಿಪರವಾಗಿ ತಿದ್ದುವುದು ಮುಂದಿನ ಸಲ ಅಭಿವೃದ್ಧಿಯನ್ನು ಮಾಡಲು ಮಗುವಿಗೆ ಸಹಾಯಮಾಡುವುದು.
ವ್ಯವಸ್ಥೆಯನ್ನೂ ಗೌರವವನ್ನೂ ಕಾಪಾಡಿಕೊಳ್ಳುವುದು
ವ್ಯವಸ್ಥೆ ಹಾಗೂ ಗೌರವದ ಒಂದು ಪ್ರಜ್ಞೆಯನ್ನು ಮಕ್ಕಳಿಗೆ ಕಲಿಸುವುದು ಹೆತ್ತವರು ಎದುರಿಸುವ ಮಹತ್ತರ ಪಂಥಾಹ್ವಾನಗಳಲ್ಲಿ ಒಂದಾಗಿದೆ. ಇಂದಿನ ಸ್ವೇಚ್ಛಾಚಾರದ ಲೋಕದಲ್ಲಿ, ತಮ್ಮ ಮಕ್ಕಳನ್ನು ನಿರ್ಬಂಧಪಡಿಸುವುದು ಕೂಡ ಸರಿಯಾದದ್ದಾಗಿದೆಯೋ ಎಂದು ಅನೇಕರು ಸೋಜಿಗಪಡುತ್ತಾರೆ. ಬೈಬಲು ಉತ್ತರಿಸುವುದು: “ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು; ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” (ಜ್ಞಾನೋಕ್ತಿ 29:15) “ಬೆತ್ತ” ಎಂಬ ಪದವು ಒಂದು ರೀತಿಯ ಮಕ್ಕಳ ದುರುಪಯೋಗಕ್ಕೆ ಸೂಚಿಸುತ್ತದೆಂದು ನೆನಸುತ್ತಾ ಕೆಲವರು ಅದರಿಂದ ಹಿಮ್ಮೆಟ್ಟುತ್ತಾರೆ. ಆದರೆ ಅದು ಹಾಗೆ ಸೂಚಿಸುವುದಿಲ್ಲ. “ಬೆತ್ತ” ಎಂಬ ಪದಕ್ಕಾಗಿರುವ ಹೀಬ್ರೂ ಪದವು, ಕುರುಬನು ತನ್ನ ಕುರಿಗಳನ್ನು ಮಾರ್ಗದರ್ಶಿಸಲು—ಹಲ್ಲೆಮಾಡುವುದಕ್ಕಲ್ಲ—ಉಪಯೋಗಿಸುವಂಥ ಒಂದು ಕೋಲಿಗೆ ಸೂಚಿಸಿತು.a ಆದುದರಿಂದ ಬೆತ್ತ ಶಿಸ್ತನ್ನು ಪ್ರತಿನಿಧಿಸುತ್ತದೆ.
ಬೈಬಲಿನಲ್ಲಿ, ಶಿಸ್ತುಕೊಡುವುದು ಪ್ರಾಥಮಿಕವಾಗಿ ಕಲಿಸುವುದನ್ನು ಅರ್ಥೈಸುತ್ತದೆ. ಆದುದರಿಂದಲೇ, ಜ್ಞಾನೋಕ್ತಿಗಳ ಪುಸ್ತಕವು ಸುಮಾರು ನಾಲ್ಕು ಬಾರಿ, ‘ಶಿಸ್ತಿಗೆ ಕಿವಿಗೊಡು’ (NW) ಎಂದು ಹೇಳುತ್ತದೆ. (ಜ್ಞಾನೋಕ್ತಿ 1:8; 4:1; 8:33; 19:27) ಸರಿಯಾದದ್ದನ್ನು ಮಾಡುವುದು ಪ್ರತಿಫಲವನ್ನೂ ತಪ್ಪಾದದ್ದನ್ನು ಮಾಡುವುದು ಕೆಟ್ಟ ಪರಿಣಾಮಗಳನ್ನೂ ತರುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳುವ ಅಗತ್ಯವಿದೆ. ಶ್ಲಾಘನೆಯಂಥ ಪ್ರತಿಫಲಗಳು ಸುನಡವಳಿಕೆಯನ್ನು ಬಲಪಡಿಸಬಹುದಾಗಿರುವಂತೆಯೇ, ಶಿಕ್ಷೆಯು ತಪ್ಪಾದ ನಡವಳಿಕೆಗಾಗಿರುವ ಛೀಮಾರಿಯನ್ನು ಬಲಗೊಳಿಸಲು ಸಹಾಯಮಾಡಬಹುದು. (ಧರ್ಮೋಪದೇಶಕಾಂಡ 11:26-28ನ್ನು ಹೋಲಿಸಿರಿ.) ಶಿಕ್ಷೆಯ ಸಂಬಂಧದಲ್ಲಿ ಹೆತ್ತವರು ದೇವರ ಮಾದರಿಯನ್ನು ಅನುಕರಿಸುವುದು ಒಳ್ಳೆಯದು, ಏಕೆಂದರೆ ಆತನು ತನ್ನ ಜನರಿಗೆ ತಾನು “ತಕ್ಕ ಪ್ರಮಾಣದಲ್ಲಿ” (NW) ಅವರನ್ನು ಶಿಕ್ಷಿಸುವೆನೆಂದು ಹೇಳಿದ್ದಾನೆ. (ಯೆರೆಮೀಯ 46:28) ಕೆಲವು ಮಕ್ಕಳಿಗೆ ಅವರನ್ನು ದಾರಿಗೆ ತರುವುದರಲ್ಲಿ ಕೇವಲ ಕೆಲವು ಗಡುಸಿನ ಪದಗಳು ಸಾಕು. ಇತರರಿಗೆ ದೃಢವಾದ ಕ್ರಮಗಳ ಅಗತ್ಯವಿದೆ. ಆದರೆ “ತಕ್ಕ ಪ್ರಮಾಣದಲ್ಲಿ” ಶಿಕ್ಷೆನೀಡುವುದು ಒಂದು ಮಗುವಿಗೆ ಭಾವನಾತ್ಮಕವಾಗಿ ಅಥವಾ ಶಾರೀರಿಕವಾಗಿ ನಿಜವಾದ ಹಾನಿಯನ್ನು ಮಾಡಬಹುದಾದ ಯಾವುದೇ ವಿಷಯವನ್ನು ಎಂದೂ ಒಳಗೊಳ್ಳದು.
ಸಮತೋಲನದ ಶಿಸ್ತು, ಎಲ್ಲೆಗಳ ಹಾಗೂ ಮಿತಿಗಳ ಕುರಿತಾಗಿ ಮಕ್ಕಳಿಗೆ ಕಲಿಸುವುದನ್ನು ಒಳಗೂಡಬೇಕು. ಇವುಗಳಲ್ಲಿ ಅನೇಕ ವಿಷಯಗಳು ದೇವರ ವಾಕ್ಯದಲ್ಲಿ ಸ್ಫುಟವಾಗಿ ಅರ್ಥನಿರೂಪಿಸಲ್ಪಟ್ಟಿವೆ. ವೈಯಕ್ತಿಕ ಸ್ವತ್ತಿನ ಸುತ್ತಲಿರುವ ಗಡಿರೇಖೆಗಳಿಗಾಗಿ ಗೌರವವನ್ನು ಬೈಬಲು ಕಲಿಸುತ್ತದೆ. (ಧರ್ಮೋಪದೇಶಕಾಂಡ 19:14) ಹಿಂಸೆಯನ್ನು ಇಷ್ಟಪಡುವ ಅಥವಾ ಮತ್ತೊಬ್ಬರನ್ನು ಉದ್ದೇಶಪೂರ್ವಕವಾಗಿ ಹಾನಿಮಾಡುವುದನ್ನು ತಪ್ಪೆಂದು ನಿರೂಪಿಸುತ್ತಾ, ಅದು ಶಾರೀರಿಕ ಎಲ್ಲೆಗಳನ್ನು ಸ್ಥಾಪಿಸುತ್ತದೆ. (ಕೀರ್ತನೆ 11:5; ಮತ್ತಾಯ 7:12) ಅದು ಅಗಮ್ಯಗಮನವನ್ನು ಖಂಡಿಸುತ್ತಾ, ಲೈಂಗಿಕ ಎಲ್ಲೆಗಳನ್ನು ಸ್ಥಾಪಿಸುತ್ತದೆ. (ಯಾಜಕಕಾಂಡ 18:6-18) ಅದು ಯಾರೊ ಒಬ್ಬರನ್ನು ತುಚ್ಛ ಹೆಸರುಗಳಿಂದ ಕರೆಯುವುದು ಅಥವಾ ಮೌಖಿಕ ಬೈಯ್ಗಳ ಬೇರೆ ವಿಧಗಳನ್ನು ಉಪಯೋಗಿಸುವುದರಿಂದ ನಮ್ಮನ್ನು ನಿಷೇಧಿಸುತ್ತಾ, ವೈಯಕ್ತಿಕ ಹಾಗೂ ಭಾವನಾತ್ಮಕ ಎಲ್ಲಿಗಳಿಗೂ ಮಾನ್ಯತೆಯನ್ನು ಕೊಡುತ್ತದೆ. (ಮತ್ತಾಯ 5:22) ಮಾತಿನ ಮೂಲಕವೂ ಮಾದರಿಯ ಮೂಲಕವೂ, ಈ ಇತಿಮಿತಿಗಳ ಹಾಗೂ ಎಲ್ಲೆಗಳ ಕುರಿತಾಗಿ ಮಕ್ಕಳಿಗೆ ಕಲಿಸುವುದು ಒಂದು ಸ್ವಸ್ಥಕರ ಕುಟುಂಬ ಪರಿಸರವನ್ನು ಸೃಷ್ಟಿಸುವುದಕ್ಕೆ ಅಗತ್ಯವಾದದ್ದಾಗಿದೆ.
ಕುಟುಂಬದಲ್ಲಿ ವ್ಯವಸ್ಥೆ ಹಾಗೂ ಗೌರವವನ್ನು ಕಾಪಾಡಿಕೊಳ್ಳಲಿಕ್ಕಾಗಿ ಇರುವ ಮತ್ತೊಂದು ಕೀಲಿಕೈ, ಕುಟುಂಬ ಪಾತ್ರಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇದೆ. ಇಂದು ಅನೇಕ ಕುಟುಂಬಗಳಲ್ಲಿ, ಅಂಥ ಪಾತ್ರಗಳು ಅಸ್ಪಷ್ಟವಾಗಿವೆ ಅಥವಾ ಗೊಂದಲಕ್ಕೀಡಾಗಿವೆ. ಕೆಲವು ಕುಟುಂಬಗಳಲ್ಲಿ, ಹೆತ್ತವರಲ್ಲಿ ಒಬ್ಬರು ಹೊರೆಯಾದ ಸಮಸ್ಯೆಗಳನ್ನು—ಮಗುವು ನಿರ್ವಹಿಸಲು ಸಿದ್ಧಗೊಂಡಿರದ ಸಮಸ್ಯೆಗಳನ್ನು—ಮಗುವಿನಲ್ಲಿ ತೋಡಿಕೊಳ್ಳುವರು. ಇತರ ಕುಟುಂಬಗಳಲ್ಲಿ, ಮಕ್ಕಳು ಪುಟ್ಟ ನಿರಂಕುಶಾಧಿಕಾರಿಗಳಾಗಿರಲು ಅನುಮತಿಸಲ್ಪಡುತ್ತಾರೆ. ಇವರು ಇಡೀ ಕುಟುಂಬಕ್ಕಾಗಿ ನಿರ್ಣಯಗಳನ್ನು ಮಾಡುತ್ತಾರೆ. ಅಂಥ ಒಂದು ವಿಷಯವು ತಪ್ಪೂ ಹಾನಿಕಾರಕವೂ ಆಗಿದೆ. ಹೆತ್ತವರು ತಮ್ಮ ಎಳೆಯ ಮಕ್ಕಳ ಅಗತ್ಯಗಳಿಗಾಗಿ—ಶಾರೀರಿಕ, ಭಾವನಾತ್ಮಕ ಅಥವಾ ಆತ್ಮಿಕವಾದದ್ದೇ ಆಗಿರಲಿ—ಒದಗಿಸಲು ಹಂಗುಳ್ಳವರಾಗಿದ್ದಾರೆ, ತದ್ವಿರುದ್ಧವಾಗಿ ಅಲ್ಲ. (2 ಕೊರಿಂಥ 12:14; 1 ತಿಮೊಥೆಯ 5:8) ಪುಟ್ಟ ಮಕ್ಕಳಿಗೆ ತೀರ ಹೊರೆಯಾಗಿರದಂತೆ, ತನ್ನ ಇಡೀ ಕುಟುಂಬ ಹಾಗೂ ಜೊತೆಗಿದ್ದವರ ವೇಗದ ಗತಿಗೆ ಸರಿಹೊಂದಿಸಿಕೊಂಡ ಯಾಕೋಬನ ಉದಾಹರಣೆಯನ್ನು ಪರಿಗಣಿಸಿರಿ. ಅವನು ಅವರ ಇತಿಮಿತಿಗಳನ್ನು ಅರ್ಥಮಾಡಿಕೊಂಡು, ಅದಕ್ಕನುಸಾರ ಕ್ರಿಯೆಗೈದನು.—ಆದಿಕಾಂಡ 33:13, 14.
ಆತ್ಮಿಕ ಅಗತ್ಯಗಳ ಆರೈಕೆಮಾಡುವುದು
ಒಂದು ಸ್ವಸ್ಥಕರ ಕುಟುಂಬ ಪರಿಸರಕ್ಕೆ, ಆತ್ಮಿಕತೆಗಿಂತಲೂ ಹೆಚ್ಚಿನ ಯಾವುದೇ ಪ್ರಮುಖ ವಿಷಯವಿರುವುದಿಲ್ಲ. (ಮತ್ತಾಯ 5:3) ಮಕ್ಕಳಿಗೆ ಆತ್ಮಿಕತೆಗಾಗಿ ಅತ್ಯಧಿಕ ಸಾಮರ್ಥ್ಯವಿದೆ. ಅವರಿಗೆ ತುಂಬ ಪ್ರಶ್ನೆಗಳಿರುತ್ತವೆ: ನಾವು ಏಕೆ ಅಸ್ತಿತ್ವದಲ್ಲಿದ್ದೇವೆ? ಭೂಮಿ ಹಾಗೂ ಅದರ ಮೇಲಿರುವ ಪ್ರಾಣಿಗಳು, ಮರಗಳು, ಸಾಗರಗಳನ್ನು ಯಾರು ಮಾಡಿದರು? ಜನರು ಏಕೆ ಸಾಯುತ್ತಾರೆ? ಆ ನಂತರ ಏನು ಸಂಭವಿಸುತ್ತದೆ? ಒಳ್ಳೆಯ ಜನರಿಗೆ ಕೆಟ್ಟ ವಿಷಯಗಳು ಏಕೆ ಸಂಭವಿಸುತ್ತವೆ? ಪಟ್ಟಿಯು ಅಂತ್ಯರಹಿತವಾದದ್ದಾಗಿ ತೋರುತ್ತದೆ. ಅನೇಕ ವೇಳೆ ಅಂಥ ವಿಷಯಗಳ ಕುರಿತಾಗಿ ಯೋಚಿಸಲು ಇಷ್ಟಪಡದೇ ಇರುವವರು ಹೆತ್ತವರಾಗಿರುತ್ತಾರೆ.b
ತಮ್ಮ ಮಕ್ಕಳಿಗೆ ಆತ್ಮಿಕ ತರಬೇತನ್ನು ಕೊಡುವುದರಲ್ಲಿ ಸಮಯವನ್ನು ಕಳೆಯುವಂತೆ ಬೈಬಲು ಹೆತ್ತವರನ್ನು ಪ್ರೋತ್ಸಾಹಿಸುತ್ತದೆ. ಅದು ಅಂಥ ತರಬೇತಿಯನ್ನು ಹೆತ್ತವರ ಹಾಗೂ ಮಕ್ಕಳ ನಡುವಿನ ನಿರಂತರ ವಾತ್ಸಲ್ಯಮಯ ಮಾತುಗಳ ಸಂಭಾಷಣೆಯನ್ನಾಗಿ ವರ್ಣಿಸುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ದೇವರು ಮತ್ತು ಆತನ ವಾಕ್ಯದ ಕುರಿತಾಗಿ ಅವರು ಒಟ್ಟಾಗಿ ಅಡ್ಡಾಡುತ್ತಿರುವಾಗ, ಮನೆಯಲ್ಲಿ ಒಟ್ಟಾಗಿ ಕುಳಿತುಕೊಂಡಿರುವಾಗ, ಮಲಗುವ ಸಮಯದಲ್ಲಿ—ಸಾಧ್ಯವಿರುವಲ್ಲೆಲ್ಲ—ಕಲಿಸಬಹುದು.—ಧರ್ಮೋಪದೇಶಕಾಂಡ 6:6, 7; ಎಫೆಸ 6:4.
ಅಂಥ ಒಂದು ಆತ್ಮಿಕ ಕಾರ್ಯಕ್ರಮವನ್ನು ಶಿಫಾರಸ್ಸು ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಬೈಬಲು ಮಾಡುತ್ತದೆ. ಅದು ನಿಮಗೆ ಅಗತ್ಯವಿರುವ ವಿಷಯಗಳನ್ನೂ ಒದಗಿಸುತ್ತದೆ. ಎಷ್ಟೆಂದರೂ ಮೇಲೆ ತಿಳಿಸಲ್ಪಟ್ಟಿರುವ ಮಕ್ಕಳ ಪ್ರಶ್ನೆಗಳನ್ನು ನೀವು ಹೇಗೆ ಉತ್ತರಿಸುವಿರಿ? ಬೈಬಲು ಆ ಉತ್ತರಗಳನ್ನು ಒಳಗೊಂಡಿದೆ. ಅವು ಸ್ಫುಟವಾಗಿವೆ, ಅವು ಕಣ್ಸೆಳೆಯುವಂಥದ್ದಾಗಿವೆ ಹಾಗೂ ಅವು ಈ ನಿರಾಶಾಹೀನ ಲೋಕದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಕೊಡುತ್ತವೆ. ಅದಕ್ಕಿಂತಲೂ ಉತ್ತಮವಾಗಿ, ಬೈಬಲಿನ ವಿವೇಕದ ಗ್ರಹಿಕೆಯು, ಇಂದಿನ ಗೊಂದಲಮಯ ಸಮಯಗಳಲ್ಲಿ ನಿಮ್ಮ ಮಕ್ಕಳಿಗೆ ಅತ್ಯಂತ ಖಚಿತವಾದ ಮಾರ್ಗದರ್ಶನ, ದೃಢವಾದ ಚುಕ್ಕಾಣಿಯನ್ನು ನೀಡಸಾಧ್ಯವಿದೆ. ಅದನ್ನು ಅವರಿಗೆ ನೀಡಿರಿ, ಆಗ ಅವರು ಈಗಲೂ ಭವಿಷ್ಯತ್ತಿನಲ್ಲೂ ನಿಜವಾಗಿಯೂ ಏಳಿಗೆ ಹೊಂದುವರು.
[ಅಧ್ಯಯನ ಪ್ರಶ್ನೆಗಳು]
a 1992, ಸೆಪ್ಟೆಂಬರ್ 8, ಅವೇಕ್! ಪತ್ರಿಕೆಯ ಪುಟಗಳು 26-7ನ್ನು ನೋಡಿರಿ.
b ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕವು ಕುಟುಂಬ ಅಭ್ಯಾಸಕ್ಕಾಗಿ ರಚಿಸಲ್ಪಟ್ಟಿದೆ ಹಾಗೂ ವಿವಾಹ ಮತ್ತು ಮಕ್ಕಳ ಬೆಳಸುವಿಕೆಯ ಬಗ್ಗೆ ಬೈಬಲಿನಿಂದ ಹೆಚ್ಚಿನ ಪ್ರಾಯೋಗಿಕ ಮಾರ್ಗದರ್ಶನವನ್ನು ಒಳಗೊಂಡಿದೆ. ಇದು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.
[ಪುಟ 22 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಮ್ಮ ಮಗುವಿಗೆ ಕ್ರಮವಾಗಿ ನಿರ್ದಿಷ್ಟ ಶ್ಲಾಘನೆಯನ್ನು ನೀಡಲು ಯಾವುದಾದರೂ ಮಾರ್ಗವನ್ನು ಹುಡುಕಿರಿ
[ಪುಟ 0 ರಲ್ಲಿರುವ ಚೌಕ/ಚಿತ್ರಗಳು]
ಏಳಿಗೆ ಹೊಂದಲಿಕ್ಕಾಗಿ ಮಕ್ಕಳಿಗೆ ಸಹಾಯಮಾಡುವ ವಿಧ
• ಅವರು ಪ್ರೀತಿಸಲ್ಪಟ್ಟವರೂ ಬೇಕಾದವರೂ ಆಗಿದ್ದಾರೆಂದು ಅನಿಸುವ ಒಂದು ಸುರಕ್ಷಿತ ಪರಿಸರವನ್ನು ಒದಗಿಸಿರಿ
• ಅವರನ್ನು ಕ್ರಮವಾಗಿ ಶ್ಲಾಘಿಸಿರಿ. ನಿರ್ದಿಷ್ಟರಾಗಿರ್ರಿ
• ಒಬ್ಬ ಒಳ್ಳೆಯ ಕೇಳುಗರಾಗಿರ್ರಿ
• ಕೋಪವು ಕೆರಳುವಾಗ ವಿಷಯವನ್ನು ಬೇರೆ ಕಡೆಗೆ ತಿರುಗಿಸಿಬಿಡಿರಿ
• ಸ್ಫುಟವೂ, ಸುಸಂಗತವೂ ಆದ ಎಲ್ಲೆಗಳನ್ನು ಹಾಗೂ ಮಿತಿಗಳನ್ನು ಸ್ಥಾಪಿಸಿರಿ
• ಪ್ರತಿಯೊಬ್ಬ ಮಗುವಿನ ಅಗತ್ಯಗಳಿಗೆ ಶಿಸ್ತನ್ನು ಹೊಂದಿಸಿಕೊಳ್ಳಿರಿ
• ಸಮಂಜಸವಾಗಿರುವುದಕ್ಕಿಂತ ಹೆಚ್ಚಿನದ್ದನ್ನು ನಿಮ್ಮ ಮಗುವಿನಿಂದ ನಿರೀಕ್ಷಿಸದಿರಿ
• ದೇವರ ವಾಕ್ಯದ ಕ್ರಮವಾದ ಅಭ್ಯಾಸದ ಮೂಲಕ ಆತ್ಮಿಕ ಅಗತ್ಯಗಳಿಗಾಗಿ ಕಾಳಜಿವಹಿಸಿರಿ
[ಪುಟ 21 ರಲ್ಲಿರುವ ಚೌಕ]
ಸಮಯಕ್ಕೆ ಬಹಳ ಮುಂಚಿನ ಮಾಹಿತಿ
ಬೈಬಲ್ ನೀತಿಬೋಧೆಗಳು, ಪುರಾತನ ಇಸ್ರಾಯೇಲಿನ ಜನರಿಗೆ ಸುತ್ತುಮುತ್ತಲಿನ ರಾಷ್ಟ್ರಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದ್ದ ಕುಟುಂಬ ಜೀವಿತದ ಮಟ್ಟವನ್ನು ಆನಂದಿಸಲು ಪುರಾತನ ಇಸ್ರಾಯೇಲಿನ ಜನರಿಗೆ ಸಹಾಯಮಾಡಿದವು. ಇತಿಹಾಸಕಾರನಾದ ಆ್ಯಲ್ಫ್ರೆಡ್ ಎಡರ್ಷೀಮ್ ಹೇಳಿಕೆಯನ್ನು ನೀಡುವುದು: “ಇಸ್ರಾಯೇಲಿನ ಹೊರಗಿದ್ದ ಜನರ ವಿಷಯದಲ್ಲಿ ಹೇಳುವಲ್ಲಿ, ಕುಟುಂಬ ಜೀವನ ಅಥವಾ ಕುಟುಂಬದ ಕುರಿತಾಗಿಯೂ—ನಾವು ಈ ಶಬ್ದಗಳನ್ನು ಅರ್ಥಮಾಡಿಕೊಳ್ಳುವಂತೆ—ಯಾವುದೇ ಔಚಿತ್ಯದಿಂದ ಮಾತಾಡಸಾಧ್ಯವೇ ಇದ್ದಿರಲಿಲ್ಲ.” ಉದಾಹರಣೆಗೆ, ಪುರಾತನ ರೋಮನ್ನರ ಮಧ್ಯೆ ನಿಯಮವು ಕುಟುಂಬದಲ್ಲಿ ಸಂಪೂರ್ಣ ಅಧಿಕಾರವನ್ನು ತಂದೆಗೆ ನೀಡಿತು. ಅವನು ತನ್ನ ಮಕ್ಕಳನ್ನು ದಾಸ್ವತಕ್ಕೆ ಮಾರಸಾಧ್ಯವಿತ್ತು, ಅವರನ್ನು ಕೂಲಿಗಳಾಗಿ ಕೆಲಸಮಾಡಿಸಸಾಧ್ಯವಿತ್ತು, ಅಥವಾ ವಿನಾಯಿತಿಯಿಲ್ಲದೆ ಅವರನ್ನು ಕೊಲ್ಲಲೂಸಾಧ್ಯವಿತ್ತು.
ಯೆಹೂದಿಯರು ತಮ್ಮ ಮಕ್ಕಳನ್ನು ಕೋಮಲವಾದ ರೀತಿಯಲ್ಲಿ ಉಪಚರಿಸುವುದರಲ್ಲಿ ವಿಚಿತ್ರಸ್ವಭಾವದವರು ಆಗಿದ್ದರೆಂದು ಕೆಲವು ರೋಮನ್ನರು ನೆನಸಿದರು. ವಾಸ್ತವದಲ್ಲಿ, ಪ್ರಥಮ ಶತಮಾನದ ರೋಮನ್ ಇತಿಹಾಸಕಾರನಾದ ಟ್ಯಾಸಿಟಸನು ಯೆಹೂದಿಯರ ಪದ್ಧತಿಗಳು “ಒಮ್ಮೆಲೆ ಕೆಟ್ಟದ್ದೂ ಅಸಹ್ಯವಾದದ್ದೂ” ಆಗಿದ್ದವು ಎಂದು ಹೇಳುತ್ತಾ ಅವರ ವಿರುದ್ಧವಾಗಿ ಒಂದು ದ್ವೇಷಭರಿತ ಉದ್ಧೃತಭಾಗವನ್ನು ಬರೆದನು. ಆದರೂ, ಅವನು ಅಂಗೀಕರಿಸಿದ್ದು: “ಯಾವುದೇ ನವಜಾತ ಶಿಶುವನ್ನು ಕೊಲ್ಲುವುದು ಅವರ ನಡುವೆ ಒಂದು ಪಾತಕವಾಗಿದೆ.”
ಬೈಬಲು ಉನ್ನತವಾದ ಮಟ್ಟವನ್ನು ಒದಗಿಸಿತು. ಅದು ಯೆಹೂದಿಯರಿಗೆ, ಮಕ್ಕಳು ಅಮೂಲ್ಯರಾಗಿದ್ದರೆಂದು—ವಾಸ್ತವವಾಗಿ ದೇವರಿಂದಲೇ ಬರುವ ಸ್ವಾಸ್ಥ್ಯದೋಪಾದಿ ವೀಕ್ಷಿಸಲ್ಪಡಬೇಕು—ಹಾಗೂ ಅದಕ್ಕನುಸಾರವಾಗಿ ಉಪಚರಿಸಲ್ಪಡಬೇಕೆಂದು ಕಲಿಸಿತು. (ಕೀರ್ತನೆ 127:3) ವ್ಯಕ್ತವಾಗಿಯೇ, ಅನೇಕ ಯೆಹೂದ್ಯರು ಅಂಥ ಸಲಹೆಗನುಸಾರವಾಗಿ ನಡೆದುಕೊಂಡರು. ಈ ಸಂಬಂಧದಲ್ಲಿ ಅವರ ಭಾಷೆಯೂ ವಿಷಯವನ್ನು ಹೊರಪಡಿಸುತ್ತಿತ್ತು. ಪುತ್ರ ಹಾಗೂ ಪುತ್ರಿ ಎಂಬ ಪದಗಳನ್ನು ಹೊರತುಪಡಿಸಿ, ಪುರಾತನ ಹೀಬ್ರೂ ಭಾಷೆಯು ಮಕ್ಕಳಿಗಾಗಿ ಒಂಬತ್ತು ಪದಗಳನ್ನು ಹೊಂದಿದ್ದು, ಪ್ರತಿಯೊಂದೂ ಜೀವಿತದ ವಿಭಿನ್ನ ಹಂತಕ್ಕೆ ಅನ್ವಯಿಸುತ್ತಿತ್ತು ಎಂಬುದಾಗಿ ಎಡರ್ಷೀಮ್ ಗಮನಿಸಿದನು. ಉದಾಹರಣೆಗೆ, ಇನ್ನೂ ಮೊಲೆಹಾಲನ್ನು ಕುಡಿಯುತ್ತಿದ್ದ ಮಗುವಿಗಾಗಿ ಒಂದು ಪದ ಹಾಗೂ ಮೊಲೆಹಾಲು ಬಿಡಿಸಲ್ಪಟ್ಟಿದ್ದ ಮಗುವಿಗಾಗಿ ಮತ್ತೊಂದು ಪದವಿತ್ತು. ಸ್ವಲ್ಪ ದೊಡ್ಡ ಮಕ್ಕಳಿಗಾಗಿ, ಇವರು ಸ್ಥಿರಸಂಕಲ್ಪರೂ ಬಲಿಷ್ಠರೂ ಆಗಿ ಪರಿಣಮಿಸುತ್ತಿದ್ದರೆಂಬುದಕ್ಕೆ ಸೂಚಿಸುತ್ತಿದ್ದ ಒಂದು ಪದವಿತ್ತು. ಮತ್ತು ಪ್ರೌಢ ಯುವಕರಿಗಾಗಿ ಅಕ್ಷರಾರ್ಥಕವಾಗಿ ‘ಸ್ವತಃ ಸ್ವತಂತ್ರರನ್ನಾಗಿ ಮಾಡಿಕೊಳ್ಳುವುದನ್ನು’ ಅರ್ಥೈಸಿದ ಒಂದು ಪದವಿತ್ತು. ಎಡರ್ಷೀಮ್ ಹೇಳಿಕೆಯನ್ನು ನೀಡುವುದು: “ಆಶ್ವಾಸನೀಯವಾಗಿ, ಮಗುವಿನ ಅಸ್ವಿತ್ವದ ಬೆಳವಣಿಗೆಯ ಪ್ರತಿಯೊಂದು ಹಂತಕ್ಕೆ ಒಂದು ಚಿತ್ರಾತ್ಮಕ ಹೆಸರನ್ನು ಕೊಡಲಿಕ್ಕಾಗಿ ಅದರ ಜೀವಿತವನ್ನು ತೀರ ಗಮನಕೊಟ್ಟು ವೀಕ್ಷಿಸಿದವರು, ತಮ್ಮ ಮಕ್ಕಳನ್ನು ಅತ್ಯಂತ ವಾತ್ಸಲ್ಯಪೂರಿತವಾಗಿ ಹಚ್ಚಿಕೊಂಡಿದ್ದಿರಬೇಕು.”