ರಾಜೋಚಿತ ಆದರ್ಶವನ್ನು ಅನುಸರಿಸಿರಿ
“ಅವನು . . . ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು. . . . ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.”—ಧರ್ಮೋಪದೇಶಕಾಂಡ 17:18, 19.
1. ಕ್ರೈಸ್ತನೊಬ್ಬನು ಯಾರಂತೆ ಆಗಲು ಬಯಸಬಹುದು?
ನೀವು ಒಬ್ಬ ಅರಸ ಇಲ್ಲವೆ ರಾಣಿಯಾಗಿದ್ದೀರೆಂದು ಭಾವಿಸಿಕೊಳ್ಳಲಿಕ್ಕಿಲ್ಲ. ಯಾವ ನಂಬಿಗಸ್ತ ಕ್ರೈಸ್ತನು ಮತ್ತು ಬೈಬಲ್ ವಿದ್ಯಾರ್ಥಿಯು, ತಾನು ನಂಬಿಗಸ್ತ ಅರಸರಾಗಿದ್ದ ದಾವೀದ, ಯೋಷೀಯ, ಹಿಜ್ಕೀಯ ಮತ್ತು ಯೆಹೋಷಾಫಾಟರಂತೆ ರಾಜೋಚಿತ ಅಧಿಕಾರದಿಂದ ವರ್ತಿಸುತ್ತಿದ್ದೇನೆಂದು ಎಣಿಸಿಕೊಳ್ಳುವನು? ಆದರೂ, ನೀವು ಅವರಂತೆ ಒಂದು ವಿಶೇಷ ವಿಧದಲ್ಲಿ ವರ್ತಿಸಬಲ್ಲಿರಿ ಮತ್ತು ವರ್ತಿಸತಕ್ಕದ್ದು. ಯಾವ ವಿಧವದು? ಮತ್ತು ಆ ವಿಧದಲ್ಲಿ ಅವರಂತಿರಲು ನೀವು ಏಕೆ ಬಯಸಬೇಕು?
2, 3. ಮಾನವ ಅರಸನ ಸಂಬಂಧದಲ್ಲಿ ಯೆಹೋವನು ಏನನ್ನು ಮುನ್ನೋಡಿದನು, ಮತ್ತು ಅಂತಹ ಅರಸನು ಏನು ಮಾಡಬೇಕಾಗಿತ್ತು?
2 ದೇವರು ಇಸ್ರಾಯೇಲ್ಯರಿಗೆ ಮಾನವ ಅರಸರನ್ನು ಕೊಡಲು ಒಪ್ಪುವುದಕ್ಕೆ ಬಹಳಷ್ಟು ಸಮಯದ ಹಿಂದೆ, ಅಂದರೆ ಮೋಶೆಯ ದಿನಗಳಲ್ಲೇ, ತನ್ನ ಜನರಲ್ಲಿ ತಮಗೊಬ್ಬ ಅರಸನು ಬೇಕೆಂಬ ಬಯಕೆ ಬರುವುದೆಂಬದನ್ನು ಆತನು ಮುನ್ನೋಡಿದನು. ಆದಕಾರಣ, ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಅದರ ಕುರಿತು ಅಗತ್ಯವಿರುವ ಸೂಚನೆಗಳನ್ನು ಸೇರಿಸುವಂತೆ ಆತನು ಮೋಶೆಯನ್ನು ಪ್ರೇರಿಸಿದನು. ಇವು ರಾಜೋಚಿತ ಸೂಚನೆಗಳಾಗಿದ್ದವು, ಅರಸನಿಗೆ ಕೊಡಲ್ಪಟ್ಟ ನಿರ್ದೇಶನಗಳಾಗಿದ್ದವು.
3 ದೇವರು ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಸೇರಿ . . . ಅದರಲ್ಲಿ ವಾಸವಾಗಿರುವಾಗ—ಸುತ್ತಲಿರುವ ಎಲ್ಲಾ ಜನಾಂಗಗಳಂತೆ ನಾವೂ ಅರಸನನ್ನು ನೇಮಿಸಿಕೊಳ್ಳೋಣ ಎಂದು ಹೇಳಿಕೊಳ್ಳುವ ಪಕ್ಷಕ್ಕೆ ನೀವು ಅಗತ್ಯವಾಗಿ ನಿಮ್ಮ ದೇವರಾದ ಯೆಹೋವನು ಆದುಕೊಂಡವನನ್ನೇ ನೇಮಿಸಿಕೊಳ್ಳಬೇಕು. . . . ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು. . . . ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು; ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.”—ಧರ್ಮೋಪದೇಶಕಾಂಡ 17:14-19.
4. ಅರಸರಿಗೆ ಕೊಡಲ್ಪಟ್ಟ ದೇವರ ನಿರ್ದೇಶನಗಳಲ್ಲಿ ಏನೆಲ್ಲ ಒಳಗೂಡಿತ್ತು?
4 ಹೌದು, ಯೆಹೋವನು ತನ್ನ ಆರಾಧಕರಿಗಾಗಿ ಆರಿಸಿಕೊಳ್ಳುವ ಅರಸನು, ನೀವು ನಿಮ್ಮ ಬೈಬಲಿನಲ್ಲಿ ಕಂಡುಕೊಳ್ಳಬಹುದಾದ ಬರಹಗಳ ವೈಯಕ್ತಿಕ ಪ್ರತಿಯನ್ನು ಮಾಡಿಕೊಳ್ಳಬೇಕಾಗಿತ್ತು. ಬಳಿಕ ಅರಸನು ಆ ಪ್ರತಿಯಿಂದ ದಿನಾಲೂ, ಪುನಃ ಪುನಃ ಓದಬೇಕಾಗಿತ್ತು. ಆದರೆ ಇದು ಜ್ಞಾಪಕಶಕ್ತಿಯನ್ನು ವರ್ಧಿಸುವ ಒಂದು ರೂಢಿಯಾಗಿರಲಿಲ್ಲ. ಅದು ಅಧ್ಯಯನವಾಗಿತ್ತು, ಮತ್ತು ಅದಕ್ಕೆ ಪ್ರಯೋಜನಕರವಾದ ಒಂದು ಗುರಿಯಿತ್ತು. ಯೆಹೋವನ ಒಪ್ಪಿಗೆಯಿದ್ದ ಅರಸನು ಸರಿಯಾದ ಹೃದ್ಭಾವವನ್ನು ಬೆಳೆಸಿಕೊಂಡು, ಅದನ್ನು ಕಾಪಾಡಿಕೊಳ್ಳುವಂತೆ ಇಂತಹ ಅಧ್ಯಯನವನ್ನು ಮಾಡುತ್ತಾ ಹೋಗುವ ಅಗತ್ಯವಿತ್ತು. ಮತ್ತು ಅವನು ಯಶಸ್ವಿಯನ್ನು ಪಡೆದವನೂ ವಿವೇಚನಾಶಕ್ತಿಯುಳ್ಳವನೂ ಆದಂಥ ಒಬ್ಬ ಅರಸನಾಗಿರಲಿಕ್ಕಾಗಿಯೂ ಆ ಪ್ರೇರಿತ ಬರಹಗಳನ್ನು ಅಧ್ಯಯನ ಮಾಡುವ ಅಗತ್ಯವಿತ್ತು.—2 ಅರಸುಗಳು 22:8-13; ಜ್ಞಾನೋಕ್ತಿ 1:1-4.
ಅರಸನಂತೆ ಕಲಿಯಿರಿ
5. ನಕಲುಪ್ರತಿ ಮಾಡಿ ಓದಲು ಅರಸ ದಾವೀದನಿಗೆ ಬೈಬಲಿನ ಯಾವ ಭಾಗಗಳು ಲಭ್ಯವಿದ್ದವು, ಮತ್ತು ಅದರ ಕುರಿತು ಅವನ ಅನಿಸಿಕೆ ಏನಾಗಿತ್ತು?
5 ಹಾಗಾದರೆ ದಾವೀದನು ಇಸ್ರಾಯೇಲಿನ ಅರಸನಾದಾಗ ಅವನಿಂದ ಏನು ಅಪೇಕ್ಷಿಸಲ್ಪಟ್ಟಿತ್ತೆಂದು ನೀವು ನೆನಸುತ್ತೀರಿ? ಅವನು ಪಂಚಕ ಪುಸ್ತಕಗಳ (ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ) ಪ್ರತಿಯನ್ನು ಮಾಡಿಕೊಳ್ಳಬೇಕಾಗಿತ್ತು. ತನ್ನ ಸ್ವಂತ ಕಣ್ಣುಗಳು ಮತ್ತು ಕೈಗಳನ್ನು ಉಪಯೋಗಿಸಿ ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆಯುವುದು ದಾವೀದನ ಹೃದಮನಗಳಲ್ಲಿ ಎಷ್ಟು ಆಳವಾದ ಪ್ರಭಾವವನ್ನು ಬೀರಿರಬೇಕೆಂಬುದನ್ನು ಯೋಚಿಸಿರಿ. ಮೋಶೆಯು ಯೋಬ ಪುಸ್ತಕ ಹಾಗೂ ಕೀರ್ತನೆಗಳು 90 ಮತ್ತು 91ನ್ನೂ ಬರೆದಿದ್ದಿರಬೇಕು. ದಾವೀದನು ಅವುಗಳ ನಕಲುಪ್ರತಿಗಳನ್ನೂ ಮಾಡಿದ್ದನೊ? ಪ್ರಾಯಶಃ ಮಾಡಿದ್ದನು. ಅಲ್ಲದೆ, ಯೆಹೋಶುವ, ನ್ಯಾಯಸ್ಥಾಪಕರು ಮತ್ತು ರೂತಳು—ಈ ಪುಸ್ತಕಗಳೂ ಅವನಿಗೆ ಪ್ರಾಯಶಃ ಲಭ್ಯವಿದ್ದವು. ಹೀಗೆ, ದಾವೀದನಿಗೆ ಓದಿ ಅದರಲ್ಲಿ ಮಗ್ನನಾಗಲು ಬೈಬಲಿನ ಒಂದು ಗಣನೀಯ ಭಾಗವು ಲಭ್ಯವಿತ್ತೆಂದು ನೀವು ನೋಡುವಿರಿ. ಮತ್ತು ಅವನು ಹಾಗೆ ಮಾಡಿದನೆಂದು ನಂಬಲು ಸಕಾರಣವಿದೆ. ಇದಕ್ಕಾಗಿ, ಈಗ ಕೀರ್ತನೆ 19:7-11ರಲ್ಲಿ ಕಂಡುಬರುವ ದೇವರ ಧರ್ಮಶಾಸ್ತ್ರದ ವಿಷಯದಲ್ಲಿ ಅವನ ಹೇಳಿಕೆಗಳನ್ನು ಗಮನಿಸಿರಿ.
6. ಯೇಸುವಿಗೆ ಸಹ ತನ್ನ ಪಿತೃವಾದ ದಾವೀದನಂತೆ ಶಾಸ್ತ್ರಗಳಲ್ಲಿ ಆಸಕ್ತಿಯಿತ್ತೆಂದು ನಮಗೆ ಹೇಗೆ ಖಾತ್ರಿಯಿದೆ?
6 ದಾವೀದನ ಮಗನಾದ ಯೇಸು—ಮಹಾ ದಾವೀದನು—ಇದೇ ಮಾದರಿಯನ್ನು ಅನುಸರಿಸಿದನು. ಪ್ರತಿ ವಾರ ಸ್ಥಳಿಕ ಸಭಾಮಂದಿರಕ್ಕೆ ಹೋಗುವುದು ಯೇಸುವಿನ ವಾಡಿಕೆಯಾಗಿತ್ತು. ಅಲ್ಲಿ ಶಾಸ್ತ್ರವಾಚನವನ್ನೂ ವ್ಯಾಖ್ಯಾನವನ್ನೂ ಅವನು ಕೇಳಿಸಿಕೊಂಡನು. ಅದಕ್ಕಿಂತಲೂ ಹೆಚ್ಚಾಗಿ, ಆಗಾಗ ಯೇಸು ತಾನೇ ದೇವರ ವಾಕ್ಯವನ್ನು ಗಟ್ಟಿಯಾಗಿ ಓದಿ, ಅದರ ಅನ್ವಯವನ್ನು ವಿವರಿಸಿದನು. (ಲೂಕ 4:16-21) ಅವನಿಗೆ ಶಾಸ್ತ್ರವಚನಗಳ ಬಗ್ಗೆ ಇದ್ದ ಪರಿಚಯವನ್ನು ನೀವು ಸುಲಭವಾಗಿ ವಿವೇಚಿಸಿ ತಿಳಿಯಬಲ್ಲಿರಿ. ಸುವಾರ್ತೆಯ ಪುಸ್ತಕಗಳಲ್ಲಿರುವ ವೃತ್ತಾಂತಗಳನ್ನು ನೀವು ಕೇವಲ ಓದಿದರೆ ಸಾಕು. ಅಲ್ಲಿ ಅವನು ಎಷ್ಟು ಸಾರಿ, ‘ಹೀಗೆ ಬರೆದದೆ’ ಎಂದು ಹೇಳಿರುವುದನ್ನು ಇಲ್ಲವೆ ಶಾಸ್ತ್ರದ ವಿಶಿಷ್ಟ ಭಾಗಗಳಿಗೆ ಬೇರೆ ವಿಧಗಳಲ್ಲಿ ಸೂಚಿಸಿದ್ದಾನೆಂಬದನ್ನು ನೀವು ಗಮನಿಸುವಿರಿ. ಉದಾಹರಣೆಗೆ, ಮತ್ತಾಯನು ಬರೆದಿರುವ ಪರ್ವತ ಪ್ರಸಂಗದಲ್ಲಿಯೇ ಯೇಸು ಹೀಬ್ರು ಶಾಸ್ತ್ರದಿಂದ 21 ಬಾರಿ ಉದ್ಧರಿಸಿದನು.—ಮತ್ತಾಯ 4:4-10; 7:29; 11:10; 21:13; 26:24, 31; ಯೋಹಾನ 6:31, 45; 8:17.
7. ಯಾವ ರೀತಿಯಲ್ಲಿ ಯೇಸು ಧಾರ್ಮಿಕ ಮುಖಂಡರಿಗಿಂತ ಭಿನ್ನನಾಗಿದ್ದನು?
7 ಕೀರ್ತನೆ 1:1-3ರಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ಯೇಸು ಅನುಸರಿಸಿದನು: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. . . . ಅವನ ಕಾರ್ಯವೆಲ್ಲವೂ ಸಫಲವಾಗುವದು.” ಇದು ಅವನ ಕಾಲದ ಧಾರ್ಮಿಕ ಮುಖಂಡರಿಗೆ ಎಷ್ಟು ವ್ಯತಿರಿಕ್ತವಾಗಿತ್ತು! ಅವರು “ಮೋಶೆಯ ಪೀಠದಲ್ಲಿ ಕೂತುಕೊಂಡಿದ್ದರೂ” “ಯೆಹೋವನ ಧರ್ಮಶಾಸ್ತ್ರ”ವನ್ನು ಅಸಡ್ಡೆ ಮಾಡುತ್ತಿದ್ದರು.—ಮತ್ತಾಯ 23:2-4.
8. ಯೆಹೂದಿ ಧಾರ್ಮಿಕ ಮುಖಂಡರು ಬೈಬಲನ್ನು ಓದಿ ಅಧ್ಯಯನ ಮಾಡುವುದು ವ್ಯರ್ಥವಾಗಿತ್ತೇಕೆ?
8 ಆದರೆ ಕೆಲವರು ಶಾಸ್ತ್ರವಚನದ ಒಂದು ಭಾಗದಿಂದ ಸ್ವಲ್ಪ ಗಲಿಬಿಲಿಗೊಂಡಾರು. ಯೇಸು ಬೈಬಲ್ ಅಧ್ಯಯನವನ್ನು ನಿರುತ್ತೇಜಿಸುತ್ತಿದ್ದಾನೊ ಎಂಬಂಥ ಅರ್ಥವನ್ನು ಇದು ಕೊಟ್ಟೀತು. ಯೋಹಾನ 5:39, 40ರಲ್ಲಿ ಯೇಸು ತನ್ನ ದಿನಗಳಲ್ಲಿದ್ದ ಕೆಲವರಿಗೆ ಹೀಗೆ ಹೇಳುವುದನ್ನು ನಾವು ಓದುತ್ತೇವೆ: “ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. ಆದರೂ ಜೀವ ಹೊಂದುವದಕ್ಕಾಗಿ ನನ್ನ ಬಳಿಗೆ ಬರುವದಕ್ಕೆ ನಿಮಗೆ ಮನಸ್ಸಿಲ್ಲ.” ಆ ಹೇಳಿಕೆಯಿಂದ ಯೇಸು ತನ್ನ ಯೆಹೂದಿ ಕೇಳುಗರು ಶಾಸ್ತ್ರದ ಅಧ್ಯಯನ ಮಾಡುವುದನ್ನು ನಿರುತ್ತೇಜಿಸಲಿಲ್ಲ. ಬದಲಿಗೆ ಅವನು ಅವರ ಕಪಟತನವನ್ನೂ ಅಸಾಮಂಜಸ್ಯವನ್ನೂ ಬಯಲಿಗೆಳೆದನು. ಶಾಸ್ತ್ರವು ತಮ್ಮನ್ನು ನಿತ್ಯಜೀವಕ್ಕೆ ನಡೆಸಶಕ್ತವಾಗಿತ್ತೆಂದು ಅವರಿಗೆ ತಿಳಿದಿದ್ದರೂ, ಅವರು ವಿಚಾರಿಸುತ್ತಿದ್ದ ಅದೇ ಶಾಸ್ತ್ರವು ಅವರನ್ನು ಮೆಸ್ಸೀಯನಾದ ಯೇಸುವಿನ ಬಳಿಗೂ ನಡೆಸಬೇಕಾಗಿತ್ತು. ಆದರೂ ಅವನನ್ನು ಅಂಗೀಕರಿಸಲು ಅವರು ನಿರಾಕರಿಸಿದರು. ಆದಕಾರಣ, ಅವರ ಅಧ್ಯಯನವು ಲಾಭದಾಯಕವಾಗಿರಲಿಲ್ಲ, ಏಕೆಂದರೆ ಅವರು ಯಥಾರ್ಥತೆಯನ್ನು ತೋರಿಸುತ್ತಿರಲಿಲ್ಲ, ಅವರು ಕಲಿಸಲ್ಪಡುವ ಮನೋಭಾವವುಳ್ಳವರಾಗಿರಲಿಲ್ಲ.—ಧರ್ಮೋಪದೇಶಕಾಂಡ 18:15; ಲೂಕ 11:52; ಯೋಹಾನ 7:47, 48.
9. ಅಪೊಸ್ತಲರೂ ಆದಿ ಪ್ರವಾದಿಗಳೂ ಯಾವ ಉತ್ತಮ ಮಾದರಿಯನ್ನಿಟ್ಟರು?
9 ಆದರೆ ಅಪೊಸ್ತಲರೂ ಸೇರಿ, ಯೇಸುವಿನ ಶಿಷ್ಯರ ಸ್ಥಿತಿಗತಿ ಎಷ್ಟು ಭಿನ್ನವಾಗಿತ್ತು! “ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ” ಶಕ್ತವಾಗಿದ್ದ “ಪರಿಶುದ್ಧ ಗ್ರಂಥಗಳ”ನ್ನು ಅವರು ಅಧ್ಯಯನ ಮಾಡಿದರು. (2 ತಿಮೊಥೆಯ 3:15) ಈ ವಿಷಯದಲ್ಲಿ ಅವರು, “ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆಮಾಡಿದ” ಹಿಂದಿನ ಪ್ರವಾದಿಗಳಂತಿದ್ದರು. ಆ ಪ್ರವಾದಿಗಳು ಆ ಪರಿಶೋಧನೆಯನ್ನು ಕೆಲವು ತಿಂಗಳುಗಳೊ ಒಂದು ವರ್ಷವೊ ಮಾಡುವ ಅಲ್ಪ, ತೀವ್ರವಾದ ಅಧ್ಯಯನ ಅವಧಿಯಾಗಿ ಪರಿಗಣಿಸಲಿಲ್ಲ. ಅವರು ವಿಶೇಷವಾಗಿ ಕ್ರಿಸ್ತನ ವಿಷಯದಲ್ಲಿ ಮತ್ತು ಮಾನವಕುಲವನ್ನು ರಕ್ಷಿಸಲು ಅವನು ವಹಿಸಿದ ಪಾತ್ರದಲ್ಲಿ ಯಾವ ಮಹಿಮೆಗಳು ಒಳಗೊಂಡಿದ್ದವು ಎಂಬ ವಿಷಯದಲ್ಲಿ ‘ಪರಿಶೋಧನೆಮಾಡುತ್ತ ಹೋದರು’ ಎಂದು ಪೇತ್ರನು ಹೇಳುತ್ತಾನೆ. ಪೇತ್ರನು ತನ್ನ ಪ್ರಥಮ ಪತ್ರದಲ್ಲಿ ಹತ್ತು ಬೈಬಲ್ ಪುಸ್ತಕಗಳಿಂದ 34 ಬಾರಿ ಉದ್ಧರಿಸಿ ಬರೆದನು.—1 ಪೇತ್ರ 1:10, 11.
10. ನಮ್ಮಲ್ಲಿ ಪ್ರತಿಯೊಬ್ಬನು ಬೈಬಲ್ ಅಧ್ಯಯನದಲ್ಲಿ ಏಕೆ ಆಸಕ್ತನಾಗಿರಬೇಕು?
10 ಹಾಗಾದರೆ ಪ್ರಾಚೀನ ಇಸ್ರಾಯೇಲಿನಲ್ಲಿ ದೇವರ ವಾಕ್ಯದ ಜಾಗರೂಕತೆಯ ಅಧ್ಯಯನವು ಅರಸರಿಗಾಗಿ ಒಂದು ರಾಜೋಚಿತ ನೇಮಕವಾಗಿತ್ತು. ಯೇಸು ಇದೇ ಆದರ್ಶವನ್ನು ಅನುಸರಿಸಿದನು. ಮತ್ತು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ರಾಜರಾಗಿ ಆಳುವವರಿಗೆ ಅದರ ಅಧ್ಯಯನ ಮಾಡುವುದು ಒಂದು ಜವಾಬ್ದಾರಿಯಾಗಿತ್ತು. (ಲೂಕ 22:28-30; ರೋಮಾಪುರ 8:17; 2 ತಿಮೊಥೆಯ 2:12; ಪ್ರಕಟನೆ 5:10; 20:6) ರಾಜ್ಯದಾಳಿಕೆಯ ಕೆಳಗೆ ಭೂಮಿಯ ಮೇಲೆ ಆಶೀರ್ವಾದಗಳನ್ನು ಇಂದು ಮುನ್ನೋಡುತ್ತಿರುವ ಎಲ್ಲರಿಗೆ ಈ ರಾಜೋಚಿತ ಆದರ್ಶವು ಅಷ್ಟೇ ಅಗತ್ಯವುಳ್ಳದ್ದಾಗಿದೆ.—ಮತ್ತಾಯ 25:34, 46.
ಅರಸರಿಗೂ ನಿಮಗೂ ಇರುವ ಹೊಣೆಗಾರಿಕೆ
11. (ಎ) ಅಧ್ಯಯನದ ಸಂಬಂಧದಲ್ಲಿ ಕ್ರೈಸ್ತರಿಗೆ ಯಾವ ಅಪಾಯವಿದೆ? (ಬಿ) ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಉತ್ತಮ?
11 ಪ್ರತಿಯೊಬ್ಬ ಸತ್ಕ್ರೈಸ್ತನು ಅಥವಾ ಸತ್ಕ್ರೈಸ್ತಳು ತನ್ನ ಬೈಬಲನ್ನು ಸ್ವತಃ ಪರೀಕ್ಷಿಸಿಕೊಳ್ಳಬೇಕೆಂದು ನಾವು ಒತ್ತುಕೊಟ್ಟು ಮತ್ತು ಪ್ರಾಮಾಣಿಕತೆಯಿಂದ ಹೇಳಬಲ್ಲೆವು. ಇದು ಯೆಹೋವನ ಸಾಕ್ಷಿಗಳೊಂದಿಗೆ ನೀವು ಪ್ರಥಮವಾಗಿ ಬೈಬಲ್ ಅಧ್ಯಯನ ನಡೆಸುವಾಗ ಮಾತ್ರ ಅಗತ್ಯವಿರುವ ಸಂಗತಿಯಲ್ಲ. ಸ್ವಲ್ಪ ಸಮಯಾನಂತರ ತಮ್ಮ ವೈಯಕ್ತಿಕ ಅಧ್ಯಯನವನ್ನು ಅಸಡ್ಡೆ ಮಾಡಿದ, ಅಪೊಸ್ತಲ ಪೌಲನ ದಿನಗಳಲ್ಲಿದ್ದ ಕೆಲವರಂತೆ ನಾವು ಪರಿಣಮಿಸದಂತೆ ನಮ್ಮಲ್ಲಿ ಪ್ರತಿಯೊಬ್ಬನು ನಿರ್ಧರಿಸಬೇಕು. ಅವರು “ದೈವೋಕ್ತಿಗಳ ಮೂಲಪಾಠಗಳನ್ನು” ಅಂದರೆ “ಕ್ರಿಸ್ತನ ವಿಷಯವಾದ ಪ್ರಥಮಬೋಧನೆ”ಯಂಥ ವಿಷಯಗಳನ್ನು ಕಲಿತರು. ಆದರೂ ಅವರು ಅಧ್ಯಯನ ಮಾಡುತ್ತ ಮುಂದುವರಿಯದಿದ್ದ ಕಾರಣ “ಪೂರ್ಣವಾದ ತಿಳುವಳಿಕೆಗೆ” ಸಾಗಲಿಲ್ಲ. (ಇಬ್ರಿಯ 5:12-6:3) ಆದಕಾರಣ ನಾವು ಹೀಗೆ ಕೇಳಿಕೊಳ್ಳಬಲ್ಲೆವು: ‘ನಾನು ಕ್ರೈಸ್ತ ಸಭೆಯೊಂದಿಗೆ ಇತ್ತೀಚೆಗೆ ಸಹವಾಸಮಾಡುತ್ತಿರಲಿ, ಇಲ್ಲವೆ ಅನೇಕ ದಶಕಗಳಿಂದ ಸಹವಾಸಮಾಡುತ್ತಿರಲಿ, ದೇವರ ವಾಕ್ಯದ ವೈಯಕ್ತಿಕ ಅಧ್ಯಯನದ ಕುರಿತು ನನಗೆ ಹೇಗನಿಸುತ್ತದೆ? ತನ್ನ ದಿನಗಳ ಕ್ರೈಸ್ತರು “ದೇವಜ್ಞಾನದಿಂದ ಅಭಿವೃದ್ಧಿ”ಯಾಗುತ್ತಿರಬೇಕೆಂದು ಪೌಲನು ಪ್ರಾರ್ಥಿಸಿದನು. ನನಗೂ ಅದೇ ಅಪೇಕ್ಷೆಯಿದೆಯೊ?’—ಕೊಲೊಸ್ಸೆ 1:9, 10.
12. ದೇವರ ವಾಕ್ಯಕ್ಕಾಗಿ ಸತತವಾದ ಒಲವನ್ನು ಹೊಂದಿರುವುದು ಪ್ರಾಮುಖ್ಯವೇಕೆ?
12 ನಿಮಗೆ ಉತ್ತಮ ಅಧ್ಯಯನ ರೂಢಿಗಳಿರಬೇಕಾದರೆ, ದೇವರ ವಾಕ್ಯಕ್ಕಾಗಿ ಒಲವನ್ನು ಬೆಳೆಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ದೇವರ ವಾಕ್ಯದ ಕುರಿತು ಕ್ರಮವಾದ, ಉದ್ದೇಶಪೂರ್ವಕವಾದ ಚಿಂತನೆಯು ನೀವು ಅದರಲ್ಲಿ ಸಂತೋಷಿಸಲಾರಂಭಿಸುವ ಮಾರ್ಗವಾಗಿದೆಯೆಂದು ಕೀರ್ತನೆ 119:14-16 ತಿಳಿಸುತ್ತದೆ. ನೀವು ಎಷ್ಟೇ ದೀರ್ಘಕಾಲದಿಂದ ಕ್ರೈಸ್ತರಾಗಿರಲಿ ಈ ಮಾತು ಸತ್ಯ. ಇದನ್ನು ಒತ್ತಿಹೇಳುವ ತಿಮೊಥೆಯನ ಮಾದರಿಯನ್ನು ಜ್ಞಾಪಿಸಿಕೊಳ್ಳಿರಿ. ಈ ಕ್ರೈಸ್ತ ಹಿರಿಯನು ಆಗಲೇ, “ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ” ಸೇವೆಮಾಡುತ್ತಿದ್ದರೂ, “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನು” ಆಗಲು ಪ್ರಯಾಸಪಡಬೇಕೆಂದು ಪೌಲನು ಅವನನ್ನು ಪ್ರೋತ್ಸಾಹಿಸಿದನು. (2 ತಿಮೊಥೆಯ 2:3, 15; 1 ತಿಮೊಥೆಯ 4:15) ಹೀಗೆ “ಪ್ರಯಾಸಪಡು”ವುದರಲ್ಲಿ ಕ್ರಮದ ಅಧ್ಯಯನ ರೂಢಿಗಳು ಸೇರಿವೆಯೆಂಬುದು ಸ್ಪಷ್ಟ.
13. (ಎ) ಬೈಬಲ್ ಅಧ್ಯಯನಕ್ಕೆ ಹೆಚ್ಚು ಸಮಯವನ್ನು ಹೇಗೆ ಮಾಡಿಕೊಳ್ಳಬಹುದು? (ಬಿ) ಅಧ್ಯಯನಕ್ಕಾಗಿ ಸಮಯವನ್ನು ಮಾಡಿಕೊಳ್ಳಲು ನೀವು ಯಾವ ಹೊಂದಾಣಿಕೆಗಳನ್ನು ಮಾಡಶಕ್ತರು?
13 ಬೈಬಲ್ ಅಧ್ಯಯನಕ್ಕೆ ಕ್ರಮವಾಗಿ ಸಮಯವನ್ನು ಬದಿಗಿರಿಸುವುದು, ಉತ್ತಮ ಅಧ್ಯಯನ ರೂಢಿಗಳನ್ನು ಹೊಂದುವುದರ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಈ ವಿಷಯದಲ್ಲಿ ನಿಮ್ಮ ಪ್ರಯತ್ನ ಹೇಗಿದೆ? ನಿಮ್ಮ ಪ್ರಾಮಾಣಿಕ ಉತ್ತರ ಏನೇ ಆಗಿರಲಿ, ವೈಯಕ್ತಿಕ ಅಧ್ಯಯನದಲ್ಲಿ ಹೆಚ್ಚು ಸಮಯವನ್ನು ಕಳೆಯುವುದರಿಂದ ನಿಮಗೆ ಪ್ರಯೋಜನವಾಗುವುದೆಂದು ನೀವು ಎಣಿಸುತ್ತೀರೊ? ‘ನಾನು ಹೇಗಪ್ಪಾ ಸಮಯ ಮಾಡಬಲ್ಲೆ?’ ಎಂದು ನೀವು ಕುತೂಹಲಪಡಬಹುದು. ಕೆಲವರು ಬೆಳಗ್ಗೆ ತುಸು ಬೇಗ ಏಳುವುದರಿಂದ ತಮ್ಮ ಪರಿಣಾಮಕಾರಿ ಬೈಬಲ್ ಅಧ್ಯಯನ ಸಮಯವನ್ನು ಹೆಚ್ಚಿಸಿದ್ದಾರೆ. ಅವರು 15 ನಿಮಿಷ ಬೈಬಲನ್ನು ಓದಬಹುದು ಅಥವಾ ಸ್ವಂತ ಅಧ್ಯಯನದ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಇನ್ನೊಂದು ಸಾಧ್ಯತೆಯಾಗಿ, ನಿಮ್ಮ ಸಾಪ್ತಾಹಿಕ ವೇಳಾಪಟ್ಟಿಯಲ್ಲಿ ತುಸು ಹೊಂದಾಣಿಕೆಯನ್ನು ಮಾಡಬಲ್ಲಿರೊ? ಉದಾಹರಣೆಗೆ, ನೀವು ಹೆಚ್ಚಿನ ದಿನಗಳಂದು ವಾರ್ತಾಪತ್ರವನ್ನು ಓದುವ ಇಲ್ಲವೆ ಟಿವಿಯಲ್ಲಿ ಸಂಜೆಯ ವಾರ್ತೆಗಳನ್ನು ಕೇಳಿಸಿಕೊಳ್ಳುವ ರೂಢಿಯುಳ್ಳವರಾಗಿರುವಲ್ಲಿ, ವಾರದಲ್ಲಿ ಒಂದು ದಿನ ಅದನ್ನು ಬಿಟ್ಟುಬಿಡಬಹುದೊ? ಆ ದಿನದ ಆ ಸಮಯವನ್ನು ನೀವು ಹೆಚ್ಚಿನ ಬೈಬಲ್ ಅಧ್ಯಯನಕ್ಕಾಗಿ ಉಪಯೋಗಿಸಬಲ್ಲಿರಿ. ನೀವು ಒಂದು ದಿನ ವಾರ್ತೆಯನ್ನು ಕೇಳಿಸಿಕೊಳ್ಳುವುದನ್ನು ಬಿಟ್ಟುಬಿಟ್ಟು, ಆ ಹೆಚ್ಚುಕಡಮೆ 30 ನಿಮಿಷಗಳನ್ನು ವೈಯಕ್ತಿಕ ಅಧ್ಯಯನಕ್ಕೆ ಉಪಯೋಗಿಸುವಲ್ಲಿ, ವರುಷಕ್ಕೆ 25 ತಾಸುಗಳಷ್ಟು ಅಧ್ಯಯನ ಸಮಯವು ನಿಮ್ಮದಾಗುವುದು. ಆ 25 ತಾಸುಗಳ ಬೈಬಲ್ ವಾಚನ ಇಲ್ಲವೆ ಅಧ್ಯಯನದಿಂದ ದೊರೆಯುವ ಪ್ರಯೋಜನದ ಕುರಿತು ತುಸು ಯೋಚಿಸಿ! ಇನ್ನೊಂದು ಉಪಾಯವು ಇಲ್ಲಿದೆ: ಮುಂದಿನ ವಾರ, ಪ್ರತಿ ದಿನಾಂತ್ಯದಲ್ಲಿ ನಿಮ್ಮ ದಿನದ ಚಟುವಟಿಕೆಗಳನ್ನು ವಿಶ್ಲೇಷಿಸಿರಿ. ಅದರಲ್ಲಿ, ಹೆಚ್ಚು ಬೈಬಲ್ ವಾಚನ ಅಥವಾ ಅಧ್ಯಯನವನ್ನು ಮಾಡಲಿಕ್ಕಾಗಿ ಬಿಟ್ಟುಬಿಡಬಹುದಾದ ಅಥವಾ ಕಡಿಮೆಮಾಡಬಹುದಾದ ಯಾವುದೇ ಕೆಲಸಗಳಿವೆಯೊ ಎಂದು ನೋಡಿರಿ.—ಎಫೆಸ 5:15, 16.
14, 15. (ಎ) ವೈಯಕ್ತಿಕ ಅಧ್ಯಯನದ ಸಂಬಂಧದಲ್ಲಿ ಗುರಿಗಳು ಏಕೆ ಪ್ರಾಮುಖ್ಯ? (ಬಿ) ಬೈಬಲ್ ವಾಚನದ ಸಂಬಂಧದಲ್ಲಿ ಯಾವ ಗುರಿಗಳನ್ನಿಡಲು ಸಾಧ್ಯವಿದೆ?
14 ನಿಮಗೆ ಅಧ್ಯಯನವನ್ನು ಹೆಚ್ಚು ಸುಲಭವಾಗಿ, ಹೆಚ್ಚು ಆಕರ್ಷಕವಾಗಿ ಯಾವುದು ಮಾಡೀತು? ಗುರಿಗಳೇ. ಹಾಗಾದರೆ, ನೀವು ಯಾವ ಪ್ರಾಯೋಗಿಕ ಅಧ್ಯಯನ ಗುರಿಗಳನ್ನು ಇಡಬಲ್ಲಿರಿ? ಅನೇಕರಿಗೆ, ಪ್ರಶಂಸಾರ್ಹವಾದ ಪ್ರಥಮ ಗುರಿಯು ಬೈಬಲನ್ನು ಪೂರ್ತಿಯಾಗಿ ಓದುವುದೇ ಆಗಿರುತ್ತದೆ. ಪ್ರಾಯಶಃ, ಇದುವರೆಗೆ ಆಗಾಗ ಬೈಬಲಿನ ಕೆಲವು ಭಾಗಗಳನ್ನು ನೀವು ಓದಿದ್ದು, ಅದರಿಂದ ಪ್ರಯೋಜನ ಪಡೆದಿರಬಹುದು. ಆದರೆ ಈಗ, ನಿಮ್ಮ ಬೈಬಲನ್ನು ಪೂರ್ತಿಯಾಗಿ ಓದುವ ದೃಢನಿಶ್ಚಯವನ್ನು ನೀವು ಮಾಡಬಹುದೊ? ಬೈಬಲನ್ನು ಪೂರ್ತಿಯಾಗಿ ಓದಿ ಮುಗಿಸುವ ಸಂಬಂಧದಲ್ಲಿ ನಿಮ್ಮ ಪ್ರಾಥಮಿಕ ಗುರಿಯು, ನಾಲ್ಕು ಸುವಾರ್ತಾ ಪುಸ್ತಕಗಳನ್ನು ಓದುವುದಾಗಿರಬಹುದು. ಇದಾದ ನಂತರ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಉಳಿದ ಭಾಗವನ್ನು ಓದಿ ಮುಗಿಸುವುದರಂಥ ಎರಡನೆಯ ಗುರಿಯನ್ನು ಇಡಬಹುದು. ಇದರಿಂದ ಫಲಿಸುವ ತೃಪ್ತಿ ಮತ್ತು ಪ್ರಯೋಜನವನ್ನು ನೀವು ಪಡೆದ ಬಳಿಕ, ನಿಮ್ಮ ಮುಂದಿನ ಗುರಿಯು ಮೋಶೆಯ ಪುಸ್ತಕಗಳನ್ನು ಮತ್ತು ಎಸ್ತೇರಳು ಪುಸ್ತಕದ ವರೆಗಿನ ಐತಿಹಾಸಿಕ ಪುಸ್ತಕಗಳನ್ನು ಪ್ರಗತಿಪರವಾಗಿ ಓದುವುದಾಗಿರಬಹುದು. ಇದನ್ನು ನೀವು ಸಾಧಿಸಿದ ನಂತರ, ಬೈಬಲಿನ ಮಿಕ್ಕ ಭಾಗವನ್ನು ಸಹ ಓದಿ ಮುಗಿಸುವ ವಾಸ್ತವಿಕತೆಯನ್ನು ನೀವು ಮನಗಾಣುವಿರಿ. ಕ್ರೈಸ್ತಳಾದಾಗ 65 ವರ್ಷ ವಯಸ್ಸಿನವಳಾಗಿದ್ದ ಒಬ್ಬ ಸ್ತ್ರೀ ತನ್ನ ಬೈಬಲಿನ ಒಳಾವರಣದಲ್ಲಿ ಆಕೆ ಓದಲಾರಂಭಿಸಿದ ತಾರೀಖನ್ನೂ ಬಳಿಕ ಆಕೆ ಓದಿ ಮುಗಿಸಿದ ತಾರೀಖನ್ನೂ ಬರೆದಳು. ಈಗ ಆಕೆಯ ಬೈಬಲಿನಲ್ಲಿ ಐದು ಜೊತೆ ತಾರೀಖುಗಳಿವೆ! (ಧರ್ಮೋಪದೇಶಕಾಂಡ 32:45-47) ಮತ್ತು ಕಂಪ್ಯೂಟರ್ ಪರದೆಯಿಂದಲೊ ಪ್ರಿಂಟ್ಔಟ್ನಿಂದಲೊ ಓದುವ ಬದಲಿಗೆ ಆಕೆಯ ಕೈಯಲ್ಲಿ ಬೈಬಲ್ ಇತ್ತು.
15 ಬೈಬಲನ್ನು ಓದಿ ಮುಗಿಸುವ ಗುರಿಯನ್ನು ಆಗಲೇ ಮುಟ್ಟಿರುವ ಕೆಲವರು, ತಮ್ಮ ಮುಂದುವರಿಯುತ್ತಿರುವ ಅಧ್ಯಯನವು ಹೆಚ್ಚೆಚ್ಚು ಉತ್ಪನ್ನಕಾರಕವೂ ಪ್ರತಿಫಲದಾಯಕವೂ ಆಗುವಂತೆ ಬೇರೆ ಕ್ರಮಗಳನ್ನು ಕೈಕೊಳ್ಳುತ್ತಾರೆ. ಪ್ರತಿಯೊಂದು ಬೈಬಲ್ ಪುಸ್ತಕವನ್ನು ಅನುಕ್ರಮವಾಗಿ ಓದತೊಡಗುವ ಮೊದಲು, ಆಯ್ದು ತೆಗೆದಿರುವ ಅಧ್ಯಯನ ಭಾಗವನ್ನು ಇದರಲ್ಲಿ ಸೇರಿಸಿಕೊಳ್ಳುವುದು ಒಂದು ಕ್ರಮವಾಗಿದೆ. “ಎಲ್ಲ ಶಾಸ್ತ್ರವು ದೇವಪ್ರೇರಿತವಾಗಿದೆ ಮತ್ತು ಉಪಯುಕ್ತಕರವಾಗಿದೆ” (ಇಂಗ್ಲಿಷ್) ಮತ್ತು ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕಗಳಲ್ಲಿ, ಪ್ರತಿ ಪುಸ್ತಕದ ಐತಿಹಾಸಿಕ ಹಿನ್ನೆಲೆ, ಶೈಲಿ ಮತ್ತು ಪಡೆಯಸಾಧ್ಯವಿರುವ ಪ್ರಯೋಜನಗಳ ಸಂಬಂಧದಲ್ಲಿ ಅತ್ಯುತ್ತಮ ಮಾಹಿತಿಯನ್ನು ಒಬ್ಬನು ಕಂಡುಕೊಳ್ಳಬಲ್ಲನು.a
16. ಬೈಬಲ್ ಅಧ್ಯಯನದ ವಿಷಯದಲ್ಲಿ ಯಾವ ಮಾದರಿಯನ್ನು ಅನುಸರಿಸುವುದರಿಂದ ನಾವು ದೂರವಿರಬೇಕು?
16 ನಿಮ್ಮ ಅಧ್ಯಯನದ ಸಮಯದಲ್ಲಿ, ಬೈಬಲ್ ವಿದ್ವಾಂಸರೆನಿಸಿಕೊಳ್ಳುವ ಅನೇಕರು ಆಯ್ದುಕೊಳ್ಳುವ ದೃಷ್ಟಿಕೋನದಿಂದ ದೂರವಿರಿ. ಅವರು ಬೈಬಲ್ ಮಾನವ ಮೂಲದ್ದೊ ಎಂಬಂತೆ ವಚನಗಳನ್ನು ವಿಶ್ಲೇಷಿಸುವುದರ ಮೇಲೆ ವಿಪರೀತವಾಗಿ ಗಮನವನ್ನು ಕೇಂದ್ರೀಕರಿಸುತ್ತಾರೆ. ಅವರಲ್ಲಿ ಕೆಲವರು ಪ್ರತಿ ಪುಸ್ತಕಕ್ಕೆ ಒಂದೊಂದು ವಾಚಕ ವೃಂದವನ್ನು ನಿಯಮಿಸುತ್ತಾರೆ, ಇಲ್ಲವೆ ಪ್ರತಿ ಪುಸ್ತಕದ ಮಾನವ ಲೇಖಕನ ಮನಸ್ಸಿನಲ್ಲಿದ್ದ ಗುರಿ ಮತ್ತು ದೃಷ್ಟಿಕೋನವನ್ನು ಊಹಿಸಲು ಪ್ರಯತ್ನಿಸುತ್ತಾರೆ. ಇಂತಹ ಮಾನವ ತರ್ಕದ ಪರಿಣಾಮವು ಬೈಬಲ್ ಪುಸ್ತಕಗಳನ್ನು ಕೇವಲ ಐತಿಹಾಸಿಕವೆಂದು ಪರಿಗಣಿಸುವುದಾಗುತ್ತದೆ ಅಥವಾ ಬೈಬಲ್ ಪುಸ್ತಕಗಳು ಧರ್ಮದ ಕಡೆಗೆ ನಡೆಸುವ ವಿಕಾಸಾತ್ಮಕ ಮಾರ್ಗಗಳನ್ನು ಪ್ರತಿಬಿಂಬಿಸುತ್ತವೆ ಎಂದು ವೀಕ್ಷಿಸುವುದಾಗುತ್ತದೆ. ಬೇರೆ ವಿದ್ವಾಂಸರು, ಬೈಬಲ್ ಸಾಹಿತ್ಯದ ಭಾಷಾಶಾಸ್ತ್ರದಂತಹ ಪದ ಅಧ್ಯಯನಗಳಲ್ಲಿ ಮಗ್ನರಾಗುತ್ತಾರೆ. ಅವರು ದೇವರ ಸಂದೇಶದ ಪ್ರಮುಖತೆಗಿಂತ ಹೆಚ್ಚಾಗಿ ಪದಗಳ ಮೂಲಗಳನ್ನು ಅಧ್ಯಯನ ಮಾಡುವುದರಲ್ಲಿ ಮತ್ತು ಅವುಗಳ ಹೀಬ್ರು ಮತ್ತು ಗ್ರೀಕ್ ಅರ್ಥವನ್ನು ಕೊಡುವುದರಲ್ಲಿ ತಲ್ಲೀನರಾಗಿಬಿಡುತ್ತಾರೆ. ಇಂತಹ ದೃಷ್ಟಿಕೋನಗಳು ಒಬ್ಬನಿಗೆ ಆಳವಾದ ಮತ್ತು ಪ್ರಚೋದಕವಾದ ನಂಬಿಕೆಯನ್ನು ಕೊಡಬಹುದೆಂದು ನೀವು ಎಣಿಸುತ್ತೀರೊ?—1 ಥೆಸಲೊನೀಕ 2:13.
17. ಬೈಬಲನ್ನು ಸಕಲರಿಗೆ ಸಂದೇಶವುಳ್ಳ ಒಂದು ಗ್ರಂಥವಾಗಿ ನಾವು ಏಕೆ ವೀಕ್ಷಿಸಬೇಕು?
17 ಈ ವಿದ್ವಾಂಸರ ತೀರ್ಮಾನಗಳು ಸರಿಯಾಗಿವೆಯೊ? ಬೈಬಲಿನ ಪ್ರತಿಯೊಂದು ಪುಸ್ತಕಕ್ಕೆ ಒಂದೇ ಮುಖ್ಯ ವಿಷಯವಿದೆ ಅಥವಾ ಒಂದೇ ಪ್ರತ್ಯೇಕ ಶ್ರೋತೃವೃಂದಕ್ಕೆ ಉದ್ದೇಶಿಸಲ್ಪಟ್ಟದ್ದಾಗಿದೆ ಎಂಬುದು ನಿಜವೊ? (1 ಕೊರಿಂಥ 1:19-21) ನಿಜತ್ವವೇನಂದರೆ, ದೇವರ ವಾಕ್ಯದ ಪುಸ್ತಕಗಳು ಎಲ್ಲ ವಯಸ್ಸಿನ ಮತ್ತು ಹಿನ್ನೆಲೆಗಳ ಜನರಿಗೆ ಶಾಶ್ವತವಾದ ಮೌಲ್ಯವುಳ್ಳದ್ದಾಗಿವೆ. ಒಂದು ಪುಸ್ತಕವು ಆರಂಭದಲ್ಲಿ ತಿಮೊಥೆಯನಂತೆ ಅಥವಾ ತೀತನಂತೆ, ಒಬ್ಬನನ್ನು ಸಂಬೋಧಿಸಿ ಬರೆಯಲ್ಪಟ್ಟರೂ ಅಥವಾ ಗಲಾತ್ಯದವರಿಗೆ ಅಥವಾ ಫಿಲಿಪ್ಪಿಯವರಿಗೆ ಎಂಬಂತೆ ಒಂದು ಪ್ರತ್ಯೇಕ ಗುಂಪಿನವರಿಗೆ ಬರೆಯಲ್ಪಟ್ಟರೂ, ನಾವೆಲ್ಲರೂ ಅದನ್ನು ಅಧ್ಯಯನ ಮಾಡಬಲ್ಲೆವು ಮತ್ತು ಮಾಡಬೇಕಾಗಿದೆ. ಅವು ನಮ್ಮಲ್ಲಿ ಪ್ರತಿಯೊಬ್ಬನಿಗೆ ಪ್ರಾಮುಖ್ಯವಾಗಿವೆ ಮತ್ತು ಒಂದು ಪುಸ್ತಕವು ಅನೇಕ ವಿಷಯಗಳನ್ನು ಚರ್ಚಿಸಬಹುದು ಮತ್ತು ಅನೇಕ ಶ್ರೋತೃವೃಂದಗಳಿಗೆ ಪ್ರಯೋಜನವನ್ನು ತರಬಹುದು. ಹೌದು, ಬೈಬಲಿನ ಸಂದೇಶವು ಸಾರ್ವತ್ರಿಕವಾಗಿದೆ ಮತ್ತು ಭೂಗೋಲದಾದ್ಯಂಥ ಇರುವ ಜನರ ಭಾಷೆಗಳಲ್ಲಿ ಅದನ್ನು ಏಕೆ ಭಾಷಾಂತರಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಇದು ಸಹಾಯಮಾಡುತ್ತದೆ.—ರೋಮಾಪುರ 15:4.
ನಿಮಗೆ ಮತ್ತು ಇತರರಿಗೆ ಪ್ರಯೋಜನಕರ
18. ನೀವು ದೇವರ ವಾಕ್ಯವನ್ನು ಓದುತ್ತಿರುವಾಗ ಯಾವ ವಿಷಯಗಳ ಕುರಿತು ಚಿಂತಿಸುತ್ತಿರಬೇಕು?
18 ನೀವು ಅಧ್ಯಯನ ಮಾಡುತ್ತಾ ಹೋದಂತೆ, ಬೈಬಲಿನ ತಿಳಿವಳಿಕೆಯನ್ನು ಪಡೆಯುವುದು ಹಾಗೂ ಅದರ ವಿವರಗಳನ್ನು ಸರಿಯಾದ ಪರಸ್ಪರ ಸಂಬಂಧದಲ್ಲಿ ನೋಡುವುದು ತುಂಬ ಪ್ರಯೋಜನಕರವೆಂಬುದನ್ನು ನೀವು ಕಂಡುಕೊಳ್ಳುವಿರಿ. (ಜ್ಞಾನೋಕ್ತಿ 2:3-5; 4:7) ಯೆಹೋವನು ತನ್ನ ವಾಕ್ಯದ ಮೂಲಕ ತಿಳಿಯಪಡಿಸಿರುವ ವಿಷಯಗಳು ಆತನ ಉದ್ದೇಶಗಳಿಗೆ ನಿಕಟವಾಗಿ ಸಂಬಂಧಿಸಿದವುಗಳಾಗಿವೆ. ಆದುದರಿಂದ, ನೀವು ಓದುತ್ತಿರುವಾಗ ನಿಜತ್ವಗಳನ್ನೂ ಸಲಹೆಗಳನ್ನೂ ದೇವರ ಉದ್ದೇಶಕ್ಕೆ ಸಂಬಂಧಿಸಿರಿ. ಒಂದು ಘಟನೆ, ವಿಚಾರ ಅಥವಾ ಪ್ರವಾದನೆಯು ಯೆಹೋವನ ಉದ್ದೇಶಕ್ಕೆ ಹೇಗೆ ಸಂಬಂಧಿಸುತ್ತದೆಂಬುದರ ಕುರಿತು ನೀವು ಮನನಮಾಡಿ ನೋಡಬಹುದು. ನೀವು ಹೀಗೆ ಕೇಳಿಕೊಳ್ಳಿ: ‘ಇದು ಯೆಹೋವನ ಕುರಿತು ನನಗೆ ಏನನ್ನು ತಿಳಿಸುತ್ತದೆ? ದೇವರ ಉದ್ದೇಶವು ಆತನ ರಾಜ್ಯದ ಮೂಲಕ ನೆರವೇರಿಸಲ್ಪಡುತ್ತಿರುವುದಕ್ಕೆ ಇದು ಹೇಗೆ ಸಂಬಂಧಿಸುತ್ತದೆ?’ ನೀವು ಹೀಗೂ ಚಿಂತಿಸಬಹುದು: ‘ನಾನು ಈ ಮಾಹಿತಿಯನ್ನು ಹೇಗೆ ಉಪಯೋಗಿಸಬಲ್ಲೆ? ನಾನು ಶಾಸ್ತ್ರಾಧಾರದಿಂದ ಇತರರಿಗೆ ಬೋಧಿಸುವಾಗ ಮತ್ತು ಬುದ್ಧಿ ಹೇಳುವಾಗ ಇದನ್ನು ಉಪಯೋಗಿಸಬಲ್ಲೆನೊ?’—ಯೆಹೋಶುವ 1:8.
19. ನೀವು ಕಲಿತುಕೊಳ್ಳುವ ಸಂಗತಿಗಳನ್ನು ಇತರರಿಗೆ ತಿಳಿಸುವಾಗ ಯಾರು ಪ್ರಯೋಜನ ಪಡೆಯುತ್ತಾರೆ? ವಿವರಿಸಿ.
19 ಇತರರ ಕುರಿತು ಚಿಂತಿಸುವುದು ಇನ್ನೊಂದು ರೀತಿಯಲ್ಲಿಯೂ ಪ್ರಯೋಜನಕರವಾಗಿರುತ್ತದೆ. ನೀವು ಬೈಬಲನ್ನು ಓದಿ ಅಧ್ಯಯನ ಮಾಡುವಾಗ ಹೊಸ ವಿಷಯಗಳನ್ನು ಕಲಿಯುವಿರಿ ಮತ್ತು ಹೊಸ ಒಳನೋಟಗಳನ್ನು ಗಳಿಸುವಿರಿ. ಇವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಅಥವಾ ಇತರರೊಂದಿಗೆ ಆತ್ಮೋನ್ನತಿ ಮಾಡುವ ಸಂಭಾಷಣೆಗಳಲ್ಲಿ ಒಳಗೂಡಿಸಲು ಪ್ರಯತ್ನಿಸಿರಿ. ನೀವು ಇದನ್ನು ತಕ್ಕ ಸಮಯಗಳಲ್ಲಿಯೂ ವಿನಯಶೀಲತೆಯಿಂದಲೂ ಮಾಡುವಲ್ಲಿ, ಇಂತಹ ಚರ್ಚೆಗಳು ನಿಸ್ಸಂದೇಹವಾಗಿಯೂ ಪ್ರತಿಫಲದಾಯಕವಾಗಿರುವವು. ನೀವು ಏನು ಕಲಿತಿದ್ದೀರೊ ಅದನ್ನು ಅಥವಾ ನಿಮಗೆ ಆಸಕ್ತಿದಾಯಕವಾಗಿದ್ದ ವಿಷಯಗಳನ್ನು ಪ್ರಾಮಾಣಿಕ ಮನಸ್ಸಿನಿಂದಲೂ ಉತ್ಸಾಹದಿಂದಲೂ ಹೇಳುವುದು ಈ ಮಾಹಿತಿಯನ್ನು ಇತರರ ಮನಸ್ಸಿನಲ್ಲಿ ಹೆಚ್ಚು ಗಾಢವಾಗಿ ಅಚ್ಚೊತ್ತಿಸುವುದು. ಅದಕ್ಕಿಂತಲೂ ಹೆಚ್ಚಾಗಿ, ಇದು ನಿಮಗೆ ಸ್ವತಃ ಲಾಭದಾಯಕವಾಗಿರುವುದು. ಹೇಗೆ? ಒಬ್ಬನು ಕಲಿತಿರುವ ಅಥವಾ ಓದಿರುವ ವಿಷಯಗಳನ್ನು ಅವನು, ಅವು ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗಲೇ ಇತರರಿಗೆ ಹೇಳುವಂಥ ರೀತಿಯಲ್ಲಿ ಉಪಯೋಗಿಸಿದರೆ ಅಥವಾ ಪುನರಾವರ್ತಿಸಿದರೆ, ಅವನು ಅದನ್ನು ಹೆಚ್ಚು ದೀರ್ಘಕಾಲ ಜ್ಞಾಪಕದಲ್ಲಿಡುವನೆಂದು ಪರಿಣತರು ಗಮನಿಸಿದ್ದಾರೆ.b
20. ಬೈಬಲನ್ನು ಪುನಃ ಪುನಃ ಓದುವುದು ಲಾಭದಾಯಕವೇಕೆ?
20 ನೀವು ಪ್ರತಿ ಬಾರಿ ಬೈಬಲಿನ ಒಂದು ಪುಸ್ತಕವನ್ನು ಓದುವಾಗೆಲ್ಲ ಖಂಡಿತವಾಗಿಯೂ ಹೊಸ ಮಾಹಿತಿಯನ್ನು ಕಲಿತುಕೊಳ್ಳುವಿರಿ. ಈ ಮುಂಚೆ ಓದಿದಾಗ ನಿಮ್ಮ ಮನಸ್ಸಿನಲ್ಲಿ ಅಷ್ಟೊಂದು ಅಚ್ಚೊತ್ತದಿದ್ದ ಭಾಗಗಳು ಈಗ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತುವವು. ಈ ಭಾಗಗಳ ಕುರಿತಾದ ನಿಮ್ಮ ತಿಳಿವಳಿಕೆಯು ಹೆಚ್ಚುವುದು. ಇಂತಹ ವಿಷಯಗಳು, ಬೈಬಲಿನ ಪುಸ್ತಕಗಳು ಕೇವಲ ಮಾನವ ಸಾಹಿತ್ಯವಾಗಿರುವ ಬದಲಿಗೆ, ನೀವು ಪುನಃ ಪುನಃ ಅಧ್ಯಯನಮಾಡಿ ಪ್ರಯೋಜನ ಪಡೆಯಲಿಕ್ಕೆ ಯೋಗ್ಯವಾಗಿರುವ ನಿಧಿಗಳಾಗಿವೆಯೆಂಬುದನ್ನು ಒತ್ತಿಹೇಳಬೇಕು. ದಾವೀದನಂತಹ ಒಬ್ಬ ಅರಸನು “ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತ” ಇರಬೇಕಾಗಿತ್ತೆಂಬುದನ್ನು ನೆನಪಿನಲ್ಲಿಡಿರಿ.
21. ದೇವರ ವಾಕ್ಯದ ಅಧ್ಯಯನವನ್ನು ಹೆಚ್ಚಿಸುವಲ್ಲಿ ನೀವು ಯಾವ ಪ್ರತಿಫಲವನ್ನು ನಿರೀಕ್ಷಿಸಬಲ್ಲಿರಿ?
21 ಹೌದು, ಬೈಬಲಿನ ಅರ್ಥವತ್ತಾದ ಅಧ್ಯಯನ ಮಾಡಲು ಸಮಯವನ್ನು ತೆಗೆದುಕೊಳ್ಳುವವರು ಬಹಳವಾಗಿ ಪ್ರಯೋಜನಹೊಂದುತ್ತಾರೆ. ಅವರು ಆತ್ಮಿಕ ರತ್ನಗಳನ್ನೂ ಒಳನೋಟಗಳನ್ನೂ ಗಳಿಸುತ್ತಾರೆ. ದೇವರೊಂದಿಗೆ ಅವರಿಗಿರುವ ಸಂಬಂಧವು ಹೆಚ್ಚು ಬಲವತ್ತಾಗಿಯೂ ನಿಕಟವಾಗಿಯೂ ಬೆಳೆಯುತ್ತದೆ. ಅವರು ತಮ್ಮ ಕುಟುಂಬದ ಸದಸ್ಯರಿಗೆ, ಕ್ರೈಸ್ತ ಸಭೆಯ ಸಹೋದರಸಹೋದರಿಯರಿಗೆ ಮತ್ತು ಇನ್ನೂ ಯೆಹೋವನ ಆರಾಧಕರಾಗಲಿರುವವರಿಗೆ ಹೆಚ್ಚೆಚ್ಚು ಅಮೂಲ್ಯವಾದ ಸ್ವತ್ತಾಗುತ್ತಾರೆ.—ರೋಮಾಪುರ 10:9-14; 1 ತಿಮೊಥೆಯ 4:16.
[ಪಾದಟಿಪ್ಪಣಿಗಳು]
a ಈ ಅಧ್ಯಯನ ಸಹಾಯಕಗಳು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದ್ದು, ಅವು ಅನೇಕ ಭಾಷೆಗಳಲ್ಲಿ ಲಭ್ಯವಿವೆ.
ನಿಮಗೆ ಜ್ಞಾಪಕವಿದೆಯೆ?
• ಇಸ್ರಾಯೇಲಿನ ಅರಸರು ಏನು ಮಾಡುವಂತೆ ಅಪೇಕ್ಷಿಸಲಾಗುತ್ತಿತ್ತು?
• ಬೈಬಲ್ ಅಧ್ಯಯನದ ವಿಷಯದಲ್ಲಿ ಯೇಸು ಮತ್ತು ಅಪೊಸ್ತಲರು ಯಾವ ಮಾದರಿಯನ್ನಿಟ್ಟರು?
• ನಿಮ್ಮ ವೈಯಕ್ತಿಕ ಅಧ್ಯಯನದ ಸಮಯವನ್ನು ಹೆಚ್ಚಿಸಲು ಯಾವ ಹೊಂದಾಣಿಕೆಗಳನ್ನು ನೀವು ಮಾಡಬಲ್ಲಿರಿ?
• ದೇವರ ವಾಕ್ಯದ ಅಧ್ಯಯನವನ್ನು ನೀವು ಯಾವ ಮನೋಭಾವದಿಂದ ಮಾಡಬೇಕು?
[ಪುಟ 15ರಲ್ಲಿರುವ ಚೌಕ]
“ನಮ್ಮ ಕೈಗಳಲ್ಲಿ”
“ಬೈಬಲಿಗೆ ಕನ್ಕಾರ್ಡೆನ್ಸ್ ನಮಗೆ ಅಗತ್ಯವಿರುವಲ್ಲಿ, ಇಂಟರ್ನೆಟ್ನಷ್ಟು ಹೆಚ್ಚು ಉತ್ತಮವಾದ ಉಪಕರಣವು ಬೇರೊಂದಿಲ್ಲ. ಆದರೆ ಬೈಬಲನ್ನು ಓದಿ, ಅಧ್ಯಯನ ಮಾಡಿ, ಅದರ ಕುರಿತು ಯೋಚಿಸಿ, ಚಿಂತನೆ ಮಾಡಬೇಕಾದರೆ ಅದು ನಮ್ಮ ಕೈಗಳಲ್ಲಿ ಇರಬೇಕು. ಏಕೆಂದರೆ ಅದನ್ನು ನಮ್ಮ ಹೃದಮನಗಳಲ್ಲಿ ಸೇರಿಸುವ ಒಂದೇ ದಾರಿ ಅದಾಗಿದೆ.”—ಗರ್ಟ್ರೂಡ್ ಹಿಮಲ್ಫಾರ್ಬ್, ನಿವೃತ್ತ ಗೌರವಾನ್ವಿತ ಪ್ರಾಧ್ಯಾಪಕಿ, ಸಿಟಿ ಯೂನಿವರ್ಸಿಟಿ, ನ್ಯೂ ಯಾರ್ಕ್.