ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?
ನಮ್ಮ ಪ್ರಾರ್ಥನೆಗಳನ್ನ ದೇವರು ಕೇಳ್ತಾನಾ ಇಲ್ವಾ ಅಂತ ಯಾವತ್ತಾದ್ರೂ ಯೋಚ್ಸಿದ್ದೀರಾ? ಈ ತರದ ಯೋಚ್ನೆ ತುಂಬ ಜನರಿಗೆ ಬರುತ್ತೆ. ಯಾಕಂದ್ರೆ ಸಮಸ್ಯೆಗಳ ಬಗ್ಗೆ ದೇವರ ಹತ್ರ ಎಷ್ಟು ಸಲ ಪ್ರಾರ್ಥಿಸಿದ್ರೂ ಆ ಸಮಸ್ಯೆಗಳು ಇದ್ದ ಹಾಗೇ ಇದೆ, ಬಗೆಹರಿದಿಲ್ಲ ಅಂತ ಅವರಿಗೆ ಅನಿಸುತ್ತೆ. ಇದರ ಅರ್ಥ ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಂಡ್ರು ಕೇಳಿಸಿಕೊಳ್ಳದ ಹಾಗೆ ಇರ್ತಾನೆ ಅಂತನಾ? ಇಲ್ಲ. ಯಾಕಂದ್ರೆ ನಾವು ಸರಿಯಾದ ರೀತೀಲಿ ಪ್ರಾರ್ಥಿಸಿದ್ರೆ ದೇವರು ಅದನ್ನ ಖಂಡಿತ ಕೇಳ್ತಾನೆ. ಇದ್ರ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ ನೋಡೋಣ.
ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ತಾನೆ.
‘ಪ್ರಾರ್ಥನೆಯನ್ನು ಕೇಳುವವನೇ, ಜನರೆಲ್ಲರು ನಿನ್ನ ಬಳಿಗೆ ಬರುವರು.’—ಕೀರ್ತನೆ 65:2.
ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ಳಲ್ಲ ಅಂತ ತುಂಬ ಜನರಿಗೆ ಅನಿಸೋದಾದ್ರು ಅವರು ಪ್ರಾರ್ಥಿಸ್ತಾರೆ. ಯಾಕಂದ್ರೆ ಪ್ರಾರ್ಥಿಸಿದ್ರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತ ಅಂದುಕೊಳ್ತಾರೆ. ಆದ್ರೆ ಜನ ಅನ್ಕೊಳ್ಳೋ ತರ ಪ್ರಾರ್ಥನೆ ನಮ್ಮ ಮನಸ್ಸಿಗೆ ನೆಮ್ಮದಿ ನೀಡೋ ಒಂದು ಚಿಕಿತ್ಸೆ ಮಾತ್ರ ಅಲ್ಲ. ನಿಜ ಹೇಳಬೇಕಂದ್ರೆ ‘ಯೆಹೋವನಿಗೆa ಪ್ರಾರ್ಥಿಸುವವರು, ಯಥಾರ್ಥವಾಗಿ ಪ್ರಾರ್ಥಿಸುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ’ ಅಂತ ಪವಿತ್ರ ಗ್ರಂಥ ಹೇಳುತ್ತೆ.—ಕೀರ್ತನೆ 145:18, 19.
ಯೆಹೋವ ದೇವರು ತನ್ನನ್ನು ಭಯಭಕ್ತಿಯಿಂದ ಆರಾಧಿಸುವವರ ಪ್ರಾರ್ಥನೆಗಳನ್ನ ಕೇಳೇ ಕೇಳ್ತಾನೆ ಅಂತ ಖಂಡಿತವಾಗಿ ಹೇಳಬಹುದು. ‘ನೀವು ನನಗೆ ಮೊರೆಯಿಡುವಿರಿ, ನನಗೆ ಪ್ರಾರ್ಥಿಸುವಿರಿ, ನಾನು ಕಿವಿಗೊಡುವೆನು’ ಅಂತ ಸ್ವತಃ ದೇವರೇ ಹೇಳ್ತಾನೆ.—ಯೆರೆಮೀಯ 29:12.
ದೇವರು ನಾವು ಆತನಿಗೆ ಪ್ರಾರ್ಥಿಸಬೇಕು ಅಂತ ಇಷ್ಟಪಡ್ತಾನೆ.
“ಪಟ್ಟುಹಿಡಿದು ಪ್ರಾರ್ಥಿಸಿರಿ.”—ರೋಮನ್ನರಿಗೆ 12:12.
ನಾವು ಪ್ರಾರ್ಥಿಸುತ್ತಾ ಇರಬೇಕು, ಅದರಲ್ಲೂ ಪ್ರತಿಯೊಂದು ಸನ್ನಿವೇಶದಲ್ಲೂ ಪ್ರಾರ್ಥಿಸಬೇಕು ಅಂತ ಪವಿತ್ರ ಗ್ರಂಥ ನಮ್ಮನ್ನ ಪ್ರೋತ್ಸಾಹಿಸುತ್ತೆ. ನಾವು ಆತನಿಗೆ ಪ್ರಾರ್ಥಿಸಬೇಕು ಅಂತ ಯೆಹೋವ ದೇವರು ಇಷ್ಟಪಡ್ತಾನೆ ಅನ್ನೋದು ಇದ್ರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ.—ಮತ್ತಾಯ 26:41; ಎಫೆಸ 6:18.
ದೇವರು ನಾವು ಆತನಿಗೆ ಪ್ರಾರ್ಥಿಸಬೇಕು ಅಂತ ಯಾಕೆ ಬಯಸ್ತಾನೆ? ಈ ಉದಾಹರಣೆ ನೋಡಿ: ಒಂದು ಮಗು “ಅಪ್ಪ ಅಪ್ಪ ನಂಗೆ ಪ್ಲೀಸ್ ಸಹಾಯ ಮಾಡು” ಅಂತ ಕೇಳಿದ್ರೆ ಯಾವ ತಂದೆಗೆ ತಾನೇ ಇಷ್ಟ ಆಗಲ್ಲ ಹೇಳಿ? ಮಗುಗೆ ಏನು ಬೇಕು ಅಂತ ತಂದೆಗೆ ಚೆನ್ನಾಗಿ ಗೊತ್ತಿದ್ರೂ ಮಗು ಬಾಯಿಂದ ಆ ಮಾತುಗಳನ್ನ ಕೇಳ್ದಾಗ ತಂದೆಗೆ ತುಂಬ ಖುಷಿಯಾಗುತ್ತೆ. ಹೀಗೆ ಮಾತಾಡೋ ಮೂಲಕ ಮಗು ಅಪ್ಪನ ಮೇಲೆ ತನಗೆಷ್ಟು ಭರವಸೆ ಇದೆ ಮತ್ತು ಪ್ರೀತಿಯಿದೆ ಅಂತ ತೋರಿಸುತ್ತೆ. ಇದೇ ತರ ಪ್ರತಿ ಸಲ ಪ್ರಾರ್ಥಿಸಿದಾಗಲೂ ದೇವರ ಮೇಲೆ ನಮಗೆ ಎಷ್ಟು ಭರವಸೆ ಇದೆ ಮತ್ತು ಎಷ್ಟು ಪ್ರೀತಿ ಇದೆ ಅಂತ ತೋರಿಸಿಕೊಡ್ತೀವಿ.—ಜ್ಞಾನೋಕ್ತಿ 15:8; ಯಾಕೋಬ 4:8.
ದೇವರು ನಮ್ಮ ಬಗ್ಗೆ ಚಿಂತಿಸುತ್ತಾನೆ.
“ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.
ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ ಮತ್ತು ನಮ್ಮ ಬಗ್ಗೆ ಚಿಂತಿಸ್ತಾನೆ. ನಮಗೆ ಯಾವೆಲ್ಲಾ ಸಮಸ್ಯೆಗಳು ಚಿಂತೆಗಳು ಇದೆ ಅಂತ ದೇವರಿಗೆ ಚೆನ್ನಾಗಿ ಗೊತ್ತು ಮತ್ತು ನಮಗೆ ಸಹಾಯ ಮಾಡಬೇಕು ಅಂತ ಬಯಸ್ತಾನೆ. ಹಾಗಾಗಿನೇ ನಾವು ಆತನಿಗೆ ಪ್ರಾರ್ಥಿಸಬೇಕು ಅಂತ ಇಷ್ಟಪಡ್ತಾನೆ.
ರಾಜ ದಾವೀದ ಸಹಾಯ ಬೇಕಂತ ಯೆಹೋವ ದೇವರ ಹತ್ರ ತನ್ನ ಜೀವ್ನದ ಉದ್ದಕ್ಕೂ ಪ್ರಾರ್ಥಿಸಿದ. ತನ್ನ ಯೋಚ್ನೆಗಳನ್ನ ಭಾವನೆಗಳನ್ನ ದೇವರ ಹತ್ರ ಹೇಳ್ಕೊಂಡ. (ಕೀರ್ತನೆ 23:1-6) ದೇವರಿಗೆ ದಾವೀದನ ಮೇಲೆ ತುಂಬ ಪ್ರೀತಿ ಇತ್ತು ಮತ್ತು ದಾವೀದ ಪ್ರಾರ್ಥಿಸುವಾಗೆಲ್ಲಾ ಅದನ್ನ ಕಿವಿಗೊಟ್ಟು ಕೇಳಿಸಿಕೊಳ್ತಿದ್ದ. (ಅಪೊಸ್ತಲರ ಕಾರ್ಯ 13:22) ಅದೇ ತರ ನಮ್ಮ ಪ್ರಾರ್ಥನೆಗಳನ್ನೂ ದೇವರು ಕೇಳಿಸಿಕೊಳ್ತಾನೆ. ಯಾಕಂದ್ರೆ ಆತನು ನಮ್ಮ ಬಗ್ಗೆ ಚಿಂತಿಸ್ತಾನೆ.
‘ಯೆಹೋವನನ್ನು ಪ್ರೀತಿಸುತ್ತೇನೆ, ಆತನು ನನ್ನ ಮೊರೆಯನ್ನು ಕೇಳ್ತಾನೆ’
ಈ ಮಾತುಗಳನ್ನ ದೇವರ ಸೇವಕರಲ್ಲಿ ಒಬ್ಬ ತುಂಬ ವರ್ಷಗಳ ಹಿಂದೆ ಬರೆದ. ಅವನು ದೇವರನ್ನ ತನ್ನ ಫ್ರೆಂಡ್ ತರ ನೋಡ್ತಿದ್ದ ಮತ್ತು ದೇವರು ತನ್ನ ಪ್ರಾರ್ಥನೆಗಳನ್ನ ಕೇಳೇ ಕೇಳ್ತಾನೆ ಅನ್ನೋ ಪೂರ್ಣ ಭರವಸೆ ಅವನಿಗಿತ್ತು. ಈ ವಿಷಯ ತನ್ನ ಜೀವನದಲ್ಲಿ ಬರೋ ಕಷ್ಟಗಳನ್ನ ಎದುರಿಸೋಕೆ ಅವನಿಗೆ ಸಹಾಯ ಮಾಡ್ತು.—ಕೀರ್ತನೆ 116:1-9.
ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ತಾನೆ ಅನ್ನೋ ಪೂರ್ಣ ಭರವಸೆ ನಮಗಿದ್ರೆ ಆತನಿಗೆ ಪ್ರಾರ್ಥಿಸೋದನ್ನ ನಾವು ನಿಲ್ಲಿಸಲ್ಲ. ಉತ್ತರ ಸ್ಪೇನಿನಲ್ಲಿ ಇರೋ ಪೆಡ್ರೋ ಅನ್ನೋ ವ್ಯಕ್ತಿಯ ಉದಾಹರಣೆ ನೋಡಿ. ಅವನ 19 ವರ್ಷದ ಮಗ ಆಕ್ಸಿಡೆಂಟಲ್ಲಿ ತೀರಿಕೊಂಡ. ಆ ದುಃಖದ ಸಮಯದಲ್ಲಿ ಪೆಡ್ರೋ ತನ್ನ ನೋವನ್ನೆಲ್ಲಾ ದೇವರ ಹತ್ರ ಹೇಳ್ಕೊಂಡ ಮತ್ತು ಸಾಂತ್ವನ ಬೆಂಬಲಕ್ಕಾಗಿ ಪದೇಪದೇ ಪ್ರಾರ್ಥಿಸಿದ. “ಯೆಹೋವನು ನನ್ನ ಪ್ರಾರ್ಥನೆಗೆ ಉತ್ರ ಕೊಟ್ಟ, ಸಹೋದರ ಸಹೋದರಿಯರ ಮೂಲಕ ನಂಗೆ ಮತ್ತು ನನ್ನ ಹೆಂಡ್ತಿಗೆ ಬೇಕಾಗಿದ್ದ ಸಾಂತ್ವನ ಬೆಂಬಲ ಕೊಟ್ಟ” ಅಂತ ಪೆಡ್ರೋ ಹೇಳ್ತಾನೆ.
ಪೆಡ್ರೋ ಹೀಗೆ ಪ್ರಾರ್ಥಿಸಿದ್ರಿಂದ ಅವನ ಮಗ ಜೀವಂತವಾಗಿ ಬರಲಿಲ್ಲ ನಿಜ. ಆದ್ರೆ ಅವನಿಗೆ ಅವನ ಕುಟುಂಬಕ್ಕೆ ಬೇಕಾದ ಬಲ ಸಿಗ್ತು. “ನಂಗೆ ಇದ್ದಿದ್ದ ನೋವನ್ನ ತಾಳಿಕೊಳ್ಳೋಕೆ ಪ್ರಾರ್ಥನೆ ಸಹಾಯ ಮಾಡ್ತು. ನಾನು ಪ್ರಾರ್ಥಿಸಿದಾಗ ಯೆಹೋವನು ಅದನ್ನ ಕೇಳಿಸ್ಕೊಂಡ ಅಂತ ಗೊತ್ತು. ಯಾಕಂದ್ರೆ ಪ್ರಾರ್ಥಿಸಿದ ಮೇಲೆ ನಂಗೆ ಬೇಕಾದ ಮನಃಶಾಂತಿ ನೆಮ್ಮದಿ ಸಿಗ್ತು” ಅಂತ ಪೆಡ್ರೋ ಅವರ ಹೆಂಡ್ತಿ ಮಾರಿಯಾ ಕಾರ್ಮನ್ ಹೇಳ್ತಾರೆ.
ಈ ಉದಾಹರಣೆಗಳು ಯೆಹೋವನು ನಮ್ಮ ಪ್ರಾರ್ಥನೆಗಳನ್ನ ಖಂಡಿತ ಕೇಳಿಸಿಕೊಳ್ತಾನೆ ಅಂತ ತೋರಿಸುತ್ತೆ. ಆದ್ರೆ ದೇವರು ಎಲ್ಲಾ ಪ್ರಾರ್ಥನೆಗಳನ್ನ ಕೇಳಿಸಿಕೊಳ್ಳೋದಿಲ್ಲ. ಯಾಕೆ?
a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.