ಹಿರಿಯರೇ, ನೀತಿಯಿಂದ ನ್ಯಾಯತೀರಿಸಿರಿ
“ನೀವು ಸಕ್ವುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು; . . . ನೀವು ನ್ಯಾಯದ [ನೀತಿಯ, NW] ಪ್ರಕಾರವೇ ತೀರ್ಪುಮಾಡಬೇಕು.”—ಧರ್ಮೋಪದೇಶಕಾಂಡ 1:16.
1. ನ್ಯಾಯತೀರ್ಪಿನ ವಿಷಯದಲ್ಲಿ, ಯಾವ ಅಧಿಕಾರ ವಹಿಸಿಕೊಡುವಿಕೆಯು ನಡೆಯಿತು, ಮತ್ತು ಇದು ಮಾನವ ನ್ಯಾಯಾಧಿಪತಿಗಳಿಗೆ ಏನನ್ನು ಸೂಚಿಸುತ್ತದೆ?
ಸರ್ವೋಚ್ಛ ನ್ಯಾಯಾಧಿಪತಿಯೋಪಾದಿ, ಯೆಹೋವನು ನ್ಯಾಯನಿರ್ಣಾಯಕ ಅಧಿಕಾರವನ್ನು ತನ್ನ ಪುತ್ರನಿಗೆ ವಹಿಸಿಕೊಟ್ಟಿದ್ದಾನೆ. (ಯೋಹಾನ 5:27) ಇದಕ್ಕೆ ಪ್ರತಿಯಾಗಿ, ಕ್ರೈಸ್ತ ಸಭೆಯ ಶಿರಸ್ಸಿನೋಪಾದಿ, ಕ್ರಿಸ್ತನು ಕೆಲವೊಮ್ಮೆ ನ್ಯಾಯಾಧಿಪತಿಗಳಾಗಿ ಸೇವೆ ಸಲ್ಲಿಸುವ ಹಿರಿಯರುಗಳನ್ನು ನೇಮಿಸಲು ನಂಬಿಗಸ್ತನೂ, ವಿವೇಕಿಯೂ ಆದ ಆಳನ್ನು ಮತ್ತು ಅದರ ಆಡಳಿತ ಮಂಡಳಿಯನ್ನು ಉಪಯೋಗಿಸುತ್ತಾನೆ. (ಮತ್ತಾಯ 24:45-47; 1 ಕೊರಿಂಥ 5:12, 13; ತೀತ 1:5, 9) ಪ್ರತಿನಿಧಿ ನ್ಯಾಯಾಧಿಪತಿಗಳೋಪಾದಿ, ಇವರು ಸ್ವರ್ಗೀಯ ನ್ಯಾಯಾಧೀಶರುಗಳಾದ ಯೆಹೋವ ಮತ್ತು ಕ್ರಿಸ್ತ ಯೇಸುವಿನ ಮಾದರಿಯನ್ನು ನಿಕಟವಾಗಿ ಅನುಕರಿಸುವ ಹಂಗಿನಲ್ಲಿರುತ್ತಾರೆ.
ಕ್ರಿಸ್ತನು—ಒಬ್ಬ ಆದರ್ಶಪ್ರಾಯ ನ್ಯಾಯಾಧಿಪತಿ
2, 3. (ಎ) ನ್ಯಾಯಾಧಿಪತಿಯೋಪಾದಿ ಕ್ರಿಸ್ತನ ಗುಣಗಳನ್ನು ಮೇಸ್ಸೀಯತ್ವದ ಯಾವ ಪ್ರವಾದನೆಯು ಪ್ರಕಟಿಸುತ್ತದೆ? (ಬಿ) ನಿರ್ದಿಷ್ಟವಾಗಿ ಗಮನನೀಡಬೇಕಾದ ವಿಚಾರಗಳು ಯಾವುವು?
2 ನ್ಯಾಯಾಧಿಪತಿಯೋಪಾದಿ ಕ್ರಿಸ್ತನ ಕುರಿತು ಪ್ರವಾದನಾ ರೀತಿಯಲ್ಲಿ ಹೀಗೆ ಬರೆಯಲಾಗಿದೆ: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು.”—ಯೆಶಾಯ 11:2-4.
3 “ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ” ಕ್ರಿಸ್ತನಿಗೆ ಶಕ್ಯವನ್ನಾಗಿ ಮಾಡುವ ಗುಣಗಳನ್ನು ಆ ಪ್ರವಾದನೆಯಲ್ಲಿ ಗಮನಿಸಿರಿ. (ಅ. ಕೃತ್ಯಗಳು 17:31) ಯೆಹೋವನ ಆತ್ಮ, ದೈವಿಕ ವಿವೇಕ, ತಿಳಿವಳಿಕೆ, ಬುದ್ಧಿವಾದ, ಮತ್ತು ಜ್ಞಾನಕ್ಕನುಸಾರವಾಗಿ ಅವನು ನ್ಯಾಯತೀರ್ಪು ಮಾಡುವನು. ಯೆಹೋವನ ಭಯದಲ್ಲಿ ಅವನು ನ್ಯಾಯತೀರ್ಪು ಮಾಡುತ್ತಾನೆಂಬುದನ್ನೂ ಕೂಡ ಗಮನಿಸಿರಿ. ಹೀಗೆ, “ಕ್ರಿಸ್ತನ ನ್ಯಾಯಾಸನವು” ಪ್ರಾತಿನಿಧಿಕವಾಗಿ “ದೇವರ ನ್ಯಾಯಾಸನ” ಆಗಿರುತ್ತದೆ. (2 ಕೊರಿಂಥ 5:10; ರೋಮಾಪುರ 14:10) ದೇವರು ನ್ಯಾಯತೀರ್ಪು ಮಾಡುವ ರೀತಿಯಲ್ಲಿಯೇ ವಿಷಯಗಳ ನ್ಯಾಯ ತೀರಿಸಲು ಅವನು ಜಾಗರೂಕನಾಗಿರುತ್ತಾನೆ. (ಯೋಹಾನ 8:16) ಕಣ್ಣಿಗೆ ಕಾಣುವಂತಹ ರೀತಿಯಲ್ಲಿ ಯಾ ಗಾಳಿವರ್ತಮಾನದ ಆಧಾರದಲ್ಲಿ ಅವನು ಸುಮ್ಮನೆ ನ್ಯಾಯತೀರಿಸುವದಿಲ್ಲ. ದೀನರ ಮತ್ತು ಕನಿಷ್ಠರ ಪರವಾಗಿ ನೀತಿಯಿಂದ ಅವನು ತೀರ್ಪುಮಾಡುತ್ತಾನೆ. ಎಂಥ ಆಶ್ಚರ್ಯಕರ ನ್ಯಾಯಾಧಿಪತಿ! ಇಂದು ನ್ಯಾಯನಿರ್ಣಾಯಕ ಸ್ಥಾನದಲ್ಲಿ ಕ್ರಿಯೆಗೈಯಲು ಕರೆಯಲ್ಪಡುವ ಅಪರಿಪೂರ್ಣ ಮಾನವರಿಗೆ ಎಂಥ ಒಂದು ಆಶ್ಚರ್ಯದ ಉದಾಹರಣೆ!
ಐಹಿಕ ನ್ಯಾಯಾಧಿಪತಿಗಳು
4. (ಎ) ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯ ಸಮಯದಲ್ಲಿ 1,44,000 ಮಂದಿಯ ನಿಯಮಿತ ಕಾರ್ಯಗಳಲ್ಲಿ ಒಂದು ಯಾವುದು? (ಬಿ) ಭೂಮಿಯ ಮೇಲೆ ಇರುವಾಗ ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವರು ನ್ಯಾಯಾಧಿಪತಿಗಳಾಗಿ ನೇಮಿಸಲ್ಪಡುವರು ಎಂದು ಯಾವ ಪ್ರವಾದನೆ ತೋರಿಸುತ್ತದೆ?
4 ಹನ್ನೆರಡು ಅಪೊಸ್ತಲರುಗಳಿಂದ ಆರಂಭಿಸಿ ತುಲನಾತ್ಮಕವಾಗಿ ಅಲ್ಪಸಂಖ್ಯಾತರಾದ ಅಭಿಷಿಕ್ತ ಕ್ರೈಸ್ತರು ಸಾವಿರ ವರ್ಷ ಸಮಯದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಜೊತೆ ನ್ಯಾಯಾಧಿಪತಿಗಳಾಗಿ ಇರುವರು ಎಂದು ಶಾಸ್ತ್ರವಚನಗಳು ಸೂಚಿಸುತ್ತವೆ. (ಲೂಕ 22:28-30; 1 ಕೊರಿಂಥ 6:2; ಪ್ರಕಟನೆ 20:4) ಆತ್ಮಿಕ ಇಸ್ರಾಯೇಲ್ಯರ ಅಭಿಷಿಕ್ತ ಸದಸ್ಯರುಗಳಲ್ಲಿ ಭೂಮಿಯಲ್ಲಿ ಉಳಿದಿರುವವರು ಸ್ವತಃ ನ್ಯಾಯತೀರ್ಪಿಗೆ ಒಳಗಾದರು ಮತ್ತು 1918-19 ರಲ್ಲಿ ಪುನಃ ಸ್ಥಾಪಿಸಲ್ಪಟ್ಟರು. (ಮಲಾಕಿಯ 3:2-4) ಆತ್ಮಿಕ ಇಸ್ರಾಯೇಲ್ಯರ ಈ ಪುನಃ ಸ್ಥಾಪನೆಯ ಕುರಿತು, ಇದು ಪ್ರವಾದಿಸಲ್ಪಟ್ಟಿತ್ತು: “ಪೂರ್ವದಲ್ಲಿ ನಿನಗಿದ್ದಂಥ ನ್ಯಾಯಾಧಿಪತಿಗಳನ್ನೂ ಮಂತ್ರಾಲೋಚಕರನ್ನೂ ಪುನಃ ಒದಗಿಸಿಕೊಡುವೆನು.” (ಯೆಶಾಯ 1:26) ಹೀಗೆ, ಮಾಂಸಿಕ ಇಸ್ರಾಯೇಲ್ಯರ “ಪೂರ್ವದಲ್ಲಿ” ಅವನು ಮಾಡಿದಂತೆಯೇ, ಯೆಹೋವನು ಪುನಃ ಸ್ಥಾಪಿತ ಉಳಿಕೆಯವರಿಗೆ ನೀತಿಯ ನ್ಯಾಯಾಧಿಪತಿಗಳನ್ನೂ, ಮಂತ್ರಾಲೋಚಕರನ್ನೂ ಕೊಟ್ಟಿದ್ದಾನೆ.
5. (ಎ) ಆತ್ಮಿಕ ಇಸ್ರಾಯೇಲ್ಯರ ಪುನಃ ಸ್ಥಾಪನೆಯ ನಂತರ “ನ್ಯಾಯಾಧಿಪತಿಯಾಗಿ ಇಡಲ್ಪಟ್ಟವರು” ಯಾರು, ಮತ್ತು ಅವರು ಪ್ರಕಟನೆಯ ಪುಸ್ತಕದಲ್ಲಿ ಹೇಗೆ ಚಿತ್ರಿಸಲ್ಪಟ್ಟಿರುತ್ತಾರೆ? (ಬಿ) ನ್ಯಾಯನಿರ್ಣಾಯಕ ಕಾರ್ಯದಲ್ಲಿ ಅಭಿಷಿಕ್ತ ಮೇಲ್ವಿಚಾರಕರಿಗೆ ಯಾರಿಂದ ಸಹಾಯ ನೀಡಲ್ಪಟ್ಟಿದೆ, ಮತ್ತು ಉತ್ತಮ ನ್ಯಾಯಾಧಿಪತಿಗಳಾಗಲು ಅವರಿಗೆ ಹೇಗೆ ತರಬೇತಿಯನ್ನೀಯಲಾಗಿದೆ?
5 ಪ್ರಾರಂಭದಲ್ಲಿ, “ನ್ಯಾಯಾಧಿಪತಿಗಳಾಗಿ ಇಡಲ್ಪಟ್ಟ” ‘ವಿವೇಕಿ ಪುರುಷರು’ ಎಲ್ಲರೂ ಅಭಿಷಿಕ್ತ ಹಿರೀಪುರುಷರು ಯಾ ಹಿರಿಯರು ಆಗಿದ್ದರು. (1 ಕೊರಿಂಥ 6:4, 5) ಯೇಸುವಿನ ಬಲಗೈಯಲ್ಲಿರುವ ಅಂದರೆ ಅವನ ಹತೋಟಿ ಮತ್ತು ಮಾರ್ಗದರ್ಶನೆಯ ಕೆಳಗಿರುವವರೋಪಾದಿ ಪ್ರಕಟನೆ ಪುಸ್ತಕದಲ್ಲಿ ನಂಬಿಗಸ್ತ, ಗೌರವಾನಿತ್ವ ಅಭಿಷಿಕ್ತ ಮೇಲ್ವಿಚಾರಕರು ವರ್ಣಿಸಲ್ಪಟ್ಟಿದ್ದಾರೆ. (ಪ್ರಕಟನೆ 1:16, 20; 2:1) ಅಭಿಷಿಕ್ತರು 1935 ರಿಂದ “ಮಹಾ ಸಂಕಟ” ದಿಂದ ಪಾರಾಗಿ, ಪ್ರಮೋದವನದ ಭೂಮಿಯಲ್ಲಿ ಸದಾ ಕಾಲ ಜೀವಿಸುವ ನಿರೀಕ್ಷೆಯಿರುವ, ವರ್ಧಿಸುತ್ತಾ ಇರುವ “ಮಹಾ ಸಮೂಹದಿಂದ” ನಿಷ್ಠೆಯ ಬೆಂಬಲವನ್ನು ಪಡೆಯುತ್ತಾ ಇದ್ದಾರೆ. (ಪ್ರಕಟನೆ 7:9, 10, 14-17) “ಯಜ್ಞದ ಕುರಿಯಾದಾತನ ವಿವಾಹಕಾಲವು” ಸಮೀಪಿಸುತ್ತಾ ಬರುವಂತೆ, ಭೂವ್ಯಾಪಕವಾಗಿ ಇರುವ ಯೆಹೋವನ ಸಾಕ್ಷಿಗಳ 66,000 ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಹಿರಿಯರುಗಳಾಗಿ ಮತ್ತು ನ್ಯಾಯಾಧಿಪತಿಗಳಾಗಿ ಸೇವಿಸಲು ಅಭಿಷಿಕ್ತ ಆಡಳಿತ ಮಂಡಳಿಯು ಅಧಿಕಾಧಿಕ ಮಂದಿಯನ್ನು ಇವರೊಳಗಿಂದ ನೇಮಿಸುತ್ತಾ ಇದೆ.a (ಪ್ರಕಟನೆ 19:7-9) ವಿಶೇಷ ಶಾಲೆಗಳ ಮೂಲಕ “ನೂತನ ಭೂಮಂಡಲ” ಸಮಾಜದಲ್ಲಿ ಜವಾಬ್ದಾರಿಕೆಯನ್ನು ನಿರ್ವಹಿಸಲು ಅವರನ್ನು ತರಬೇತುಗೊಳಿಸಲಾಗುತ್ತದೆ. (2 ಪೇತ್ರ 3:13) ಅನೇಕ ದೇಶಗಳಲ್ಲಿ 1991 ರ ಅಂತ್ಯಭಾಗದಲ್ಲಿ ನಡಿಸಲ್ಪಟ್ಟ ರಾಜ್ಯ ಶುಶ್ರೂಷಾ ಶಾಲೆಯು, ನ್ಯಾಯನಿರ್ಣಾಯಕ ಮೊಕದ್ದಮೆಗಳನ್ನು ಯೋಗ್ಯವಾಗಿ ನಿರ್ವಹಣ ಮಾಡುವುದರ ಮೇಲೆ ಒತ್ತರವನ್ನು ಹಾಕಿತು. ನ್ಯಾಯಾಧಿಪತಿಗಳಾಗಿ ಸೇವಿಸುವ ಹಿರಿಯರು, ಯಾರ ನ್ಯಾಯತೀರ್ಪುಗಳು ಸತ್ಯವೂ, ನೀತಿಯವುಗಳೂ ಆಗಿವೆಯೋ, ಆ ಯೆಹೋವ ಮತ್ತು ಕ್ರಿಸ್ತ ಯೇಸುವನ್ನು ಅನುಕರಿಸಲು ಕರ್ತವ್ಯಬದ್ಧರಾಗಿರುತ್ತಾರೆ.—ಯೋಹಾನ 5:30; 8:16; ಪ್ರಕಟನೆ 19:1, 2.
‘ಭಯದಿಂದ ಸ್ವತಃ ತಮ್ಮನ್ನು ನಡಿಸಿಕೊಳ್ಳುವ’ ನ್ಯಾಯಾಧಿಪತಿಗಳು
6. ನ್ಯಾಯನಿರ್ಣಾಯಕ ಕಮಿಟಿಗಳಲ್ಲಿ ಸೇವೆ ಸಲ್ಲಿಸುವ ಹಿರಿಯರು ‘ಭಯದಿಂದ ಸ್ವತಃ ತಮ್ಮನ್ನು ನಡಿಸಿಕೊಳ್ಳ’ ತಕ್ಕದ್ದು ಯಾಕೆ?
6 ಯೆಹೋವನ ಭಯದಿಂದ ಮತ್ತು ಅವನ ಆತ್ಮದ ಸಹಾಯದಿಂದ ಕ್ರಿಸ್ತನು ಸ್ವತಃ ನ್ಯಾಯತೀರ್ಪು ಮಾಡುವುದಾದರೆ, ಅಪರಿಪೂರ್ಣ ಹಿರಿಯರು ಎಷ್ಟೊಂದು ಹೆಚ್ಚಾಗಿ ಹಾಗೆಯೇ ಮಾಡಬೇಕಾಗಿದೆ! ನ್ಯಾಯನಿರ್ಣಾಯಕ ಕಮಿಟಿಯಲ್ಲಿ ಸೇವೆ ಸಲ್ಲಿಸಲು ನೇಮಿಸಲ್ಪಟ್ಟಾಗ, “ಪಕ್ಷಪಾತವಿಲ್ಲದೆ ತೀರ್ಪುಮಾಡುವ ತಂದೆಯು” ನೀತಿಯಿಂದ ನ್ಯಾಯತೀರ್ಪು ಮಾಡಲು ಸಹಾಯ ಕೊಡುವಂತೆ ಕೋರುತ್ತಾ, ಅವರು ‘ಭಯದಿಂದ ಸ್ವತಃ ತಮ್ಮನ್ನು ನಡಿಸಿಕೊಳ್ಳುವ’ ಜರೂರಿ ಇದೆ. (1 ಪೇತ್ರ 1:17) ಅವರು ಮನುಷ್ಯರ ಜೀವಗಳೊಂದಿಗೆ, ಅವರ “ಆತ್ಮಗಳೊಂದಿಗೆ” ವ್ಯವಹರಿಸುತ್ತಾರೆಂದೂ, “ಲೆಕ್ಕವೊಂದನ್ನು ಒಪ್ಪಿಸಬೇಕಾದ” ವರೆಂದೂ ನೆನಪಿಸತಕ್ಕದ್ದು. (ಇಬ್ರಿಯ 13:17) ಇದರ ನೋಟದಲ್ಲಿ, ಅವರು ಮಾಡಬಹುದಾದ ಯಾವುದೆ ತಪ್ಪಿಸಸಾಧ್ಯವಿದ್ದ ನ್ಯಾಯನಿರ್ಣಾಯಕ ತಪ್ಪುಗಳಿಗೆ ಕೂಡ ಯೆಹೋವನ ಮುಂದೆ ಖಂಡಿತವಾಗಿಯೂ ಲೆಕ್ಕತೆರುವವರಾಗಿದ್ದಾರೆ. ಇಬ್ರಿಯ 13:17 ರ ಅವರ ಟಿಪ್ಪಣಿಯಲ್ಲಿ, ಜೆ. ಏಚ್. ಏ. ಎಬ್ರಾರ್ಡ್ ಬರೆದದ್ದು: “ಅವನ ಪರಾಮರಿಕೆಗೆ ಕೊಡಲ್ಪಟ್ಟ ಆತ್ಮಗಳ ಮೇಲೆ ನಿಗಾ ಇಡುವದು ಕುರುಬನ ಕರ್ತವ್ಯವಾಗಿರುತ್ತದೆ, ಮತ್ತು ಅವನ ತಪ್ಪಿನಿಂದಾಗಿ ನಷ್ಟಗೊಂಡವುಗಳ ಸಹಿತವಾಗಿ, ಅವುಗಳೆಲ್ಲವುಗಳಿಗಾಗಿ ಅವನು ಲೆಕ್ಕ ಒಪ್ಪಿಸಬೇಕಾಗಿದೆ. ಇದೊಂದು ಗಂಭೀರವಾದ ವಚನವಾಗಿರುತ್ತದೆ. ಈ ಘನಗಂಭೀರವಾದ [ದಿಗಿಲುಹುಟ್ಟಿಸುವ] ಜವಾಬ್ದಾರಿ ಹುದ್ದೆಯನ್ನು ಅವನು ಸ್ವ ಇಚ್ಛೆಯಿಂದ ತಕ್ಕೊಂಡಿರುತ್ತಾನೆಂದು ವಾಕ್ಯದ ಪ್ರತಿಯೊಬ್ಬ ಶುಶ್ರೂಷಕನು ತಿಳಿದಿರಲಿ.”—ಹೋಲಿಸಿರಿ ಯೋಹಾನ 17:12; ಯಾಕೋಬ 3:1.
7. (ಎ) ಆಧುನಿಕ ದಿನದ ನ್ಯಾಯಾಧಿಪತಿಗಳು ಏನನ್ನು ನೆನಪಿನಲ್ಲಡಬೇಕು, ಮತ್ತು ಅವರ ಧ್ಯೇಯವೇನಾಗಿರತಕ್ಕದ್ದು? (ಬಿ) ಮತ್ತಾಯ 18:18-20 ರಿಂದ ಹಿರಿಯರು ಯಾವ ಪಾಠಗಳನ್ನು ಪಡೆಯಬೇಕು?
7 ಪ್ರತಿಯೊಂದು ಮೊಕದ್ದಮೆಯಲ್ಲಿ ನಿಜವಾದ ನ್ಯಾಯತೀರ್ಪುಗಾರರು ಯೆಹೋವನು ಮತ್ತು ಕ್ರಿಸ್ತ ಯೇಸು ಎಂದು ನ್ಯಾಯನಿರ್ಣಾಯಕ ಸ್ಥಾನದಲ್ಲಿ ಕಾರ್ಯನಿರ್ವಹಿಸುವ ಹಿರಿಯರು ನೆನಪಿನಲ್ಲಿಡತಕ್ಕದ್ದು. ಇಸ್ರಾಯೇಲಿನ ನ್ಯಾಯಾಧಿಪತಿಗಳಿಗೆ ಹೇಳಿದ್ದನ್ನು ಪುನಃ ನೆನಪಿಗೆ ತನ್ನಿರಿ: “ನೀವು ನ್ಯಾಯತೀರಿಸುವದು ಮನುಷ್ಯರಿಗೋಸ್ಕರವಲ್ಲ, ಯೆಹೋವನಿಗೋಸ್ಕರವೇ. ನ್ಯಾಯವಿಚಾರಣೆ ನಡೆಯುವಾಗ ಆತನು ನಿಮ್ಮ ಮಧ್ಯದಲ್ಲಿರುತ್ತಾನೆ. ಹೀಗಿರುವಲ್ಲಿ ನಿಮಗೆ ಯೆಹೋವನ ಭಯವು ಇರಲಿ. . . . ಹೀಗೆ ಮಾಡುವದಾದರೆ ನೀವು ನಿರ್ದೋಷಿಗಳಾಗಿರುವಿರಿ.” (2 ಪೂರ್ವಕಾಲವೃತ್ತಾಂತ 19:6-10) ಪೂಜ್ಯನೀಯ ಭಯದಿಂದ, ಮೊಕದ್ದಮೆಯೊಂದನ್ನು ಹಿರಿಯರು ನ್ಯಾಯವಿಚಾರಿಸುವಾಗ, ಯೆಹೋವನು ನಿಜವಾಗಿಯೂ ‘ನ್ಯಾಯವಿಚಾರಣೆಯಲ್ಲಿ ಅವರ ಮಧ್ಯದಲ್ಲಿರುತ್ತಾನೆ’ ಎಂದು ಖಂಡಿತಪಡಿಸಲು ಅವರಿಂದಾಗುವಷ್ಟನ್ನು ಮಾಡತಕ್ಕದ್ದು. ಯೆಹೋವನು ಮತ್ತು ಕ್ರಿಸ್ತನು ವಿಷಯವನ್ನು ಪರಿಗಣಿಸುವ ವಿಧಾನವು ಅವರ ತೀರ್ಮಾನದಲ್ಲಿ ಪ್ರತಿಬಿಂಬಿಸಲ್ಪಡತಕ್ಕದ್ದು. ಭೂಮಿಯಲ್ಲಿ ಸಾಂಕೇತಿಕವಾಗಿ ಅವರೇನನ್ನು ‘ಕಟ್ಟುತ್ತಾರೋ’ (ಅಪರಾಧವನ್ನು ಕಂಡುಕೊಳ್ಳುವದು) ಯಾ ‘ಬಿಚ್ಚಿರುತ್ತಾರೋ’ (ನಿರಪರಾಧವನ್ನು ಕಂಡುಕೊಳ್ಳುವದು), ಪ್ರೇರಿತ ದೇವರ ವಾಕ್ಯದಲ್ಲಿ ಪ್ರಕಟಿಸಲ್ಪಟ್ಟಂತೆ, ಅದು ಈಗಾಗಲೇ ಪರಲೋಕದಲ್ಲಿ ಕಟ್ಟಲ್ಪಟ್ಟಿರುವದು ಯಾ ಬಿಚ್ಚಲ್ಪಟ್ಟಿರುವದು ಆಗಿರಬೇಕು. ಯೇಸುವಿನ ಹೆಸರಿನಲ್ಲಿ ಅವರು ಯೆಹೋವನಿಗೆ ಪ್ರಾರ್ಥಿಸುವದಾದರೆ, ಅವರಿಗೆ ಸಹಾಯ ಮಾಡಲು ಯೇಸುವು “ಅವರ ನಡುವೆ” ಇರುವನು. (ಮತ್ತಾಯ 18:18-20, NW ಪಾದಟಿಪ್ಪಣಿ; ದ ವಾಚ್ಟವರ್, ಫೆಬ್ರವರಿ 15, 1988, ಪುಟ 9) ನ್ಯಾಯನಿರ್ಣಾಯಕ ವಿಚಾರಣೆಯಲ್ಲಿನ ವಾತಾವರಣವು, ಕ್ರಿಸ್ತನು ಅವರ ನಡುವೆ ನಿಜವಾಗಿಯೂ ಇದ್ದಾನೆ ಎಂದು ತೋರಿಸತಕ್ಕದ್ದು.
ಪೂರ್ಣ ಸಮಯದ ಕುರುಬರು
8. ಯೆಹೋವ ಮತ್ತು ಯೇಸು ಕ್ರಿಸ್ತನಿಂದ ಉದಾಹರಿಸಲ್ಪಟ್ಟಂತೆ, ಹಿಂಡಿನ ಕಡೆಗೆ ಹಿರಿಯರ ಮುಖ್ಯ ಜವಾಬ್ದಾರಿ ಏನಾಗಿದೆ? (ಯೆಶಾಯ 40:10, 11; ಯೋಹಾನ 10:11, 27-29)
8 ಹಿರಿಯರು ಪೂರ್ಣ ಸಮಯ ನ್ಯಾಯತೀರಿಸುವದಿಲ್ಲ. ಅವರು ಪೂರ್ಣ ಸಮಯದ ಕುರುಬರಾಗಿ ಇರುತ್ತಾರೆ. ಅವರು ವಾಸಿಮಾಡುವವರು, ದಂಡಿಸುವವರಲ್ಲ. (ಯಾಕೋಬ 5:13-16) ಮೇಲ್ವಿಚಾರಕ (ಎ-ಪಿ’ಸ್ಕೊ-ಪೊಸ್ ) ಎಂಬದರ ಗ್ರೀಕ್ ಶಬ್ದದ ಹಿಂದಿರುವ ಮೂಲ ಕಲ್ಪನೆಯು ಸಂರಕ್ಷಣಾತ್ಮಕ ಪರಾಮರಿಕೆ ಎಂದಾಗಿದೆ. ತಿಯಾಲೊಜಿಕಲ್ ಡಿಕ್ಷನರಿ ಆಫ್ ದಿ ನ್ಯೂ ಟೆಸ್ಟಮೆಂಟ್ ಹೇಳುವದು: “[1 ಪೇತ್ರ 2:25 ರಲ್ಲಿ] ಕುರುಬ ಪದಕ್ಕೆ ಸಂಪೂರಕವಾಗಿ, [ಎ-ಪಿ’ಸ್ಕೊ-ಪೊಸ್ ] ಪದವನ್ನು ಇಡುವದಾದರೆ, ಅದು ಉಸ್ತುವಾರಿ ಯಾ ಕಾವಲಿಡುವ ಕುರುಬರ ಕೆಲಸವನ್ನು ಸೂಚಿಸುತ್ತದೆ.” ಹೌದು, ಕುರಿಗಳ ಉಸ್ತುವಾರಿ ನೋಡಿಕೊಳ್ಳುವದು ಮತ್ತು ಕಾವಲಿಡುವದು, ಮಂದೆಯ ಒಳಗೆ ಅವರನ್ನು ಇಡುವದು ಅವರ ಪ್ರಾಥಮಿಕ ಜವಾಬ್ದಾರಿಯಾಗಿದೆ.
9, 10. (ಎ) ಹಿರಿಯರ ಪ್ರಥಮ ಕರ್ತವ್ಯದ ಕುರಿತು ಪೌಲನು ಹೇಗೆ ಒತ್ತರ ಹಾಕಿದನು, ಆದುದರಿಂದ ಯಾವ ಪ್ರಶ್ನೆಯನ್ನು ಕೂಡ ಹಾಕಬಹುದು? (ಬಿ) ಅ.ಕೃತ್ಯಗಳು 20:28 ರ ಪೌಲನ ಮಾತುಗಳು ಏನನ್ನು ಸೂಚಿಸುತ್ತವೆ, ಆದುದರಿಂದ ಅನೇಕ ನ್ಯಾಯನಿರ್ಣಾಯಕ ಮೊಕದ್ದಮೆಗಳನ್ನು ಹಿರಿಯರು ಕಡಿಮೆಗೊಳಿಸಲು ಹೇಗೆ ಪ್ರಯತ್ನಿಸಬಹುದು?
9 ಎಫೆಸದ ಸಭೆಯ ಹಿರಿಯರಿಗೆ ಮಾತಾಡುತ್ತಾ, ಎಲ್ಲಿ ಒತ್ತರ ಸಮರ್ಪಕವೋ ಅಲ್ಲಿ ಅದನ್ನು ಹಾಕುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ದೇವರು ಸ್ವರಕ್ತದಿಂದ (ತನ್ನ ಮಗನ ರಕ್ತದಿಂದ, NW ) ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃತ್ಯಗಳು 20:28) ಪೌಲನು ಕುರಿಪಾಲನೆಯನ್ನು ಒತ್ತಿಹೇಳುತ್ತಾನೆ, ದಂಡಿಸುವದನ್ನಲ್ಲ. ಹಿಂಬಾಲಿಸಿ ಬರುವ ಪ್ರಶ್ನೆಗಳನ್ನು ಕೆಲವು ಹಿರಿಯರು ಮನನಮಾಡುವದರಿಂದ ಒಳಿತನ್ನು ಮಾಡಬಹುದು: ‘ಕುರಿಪಾಲನೆಯಲ್ಲಿ ಹೆಚ್ಚು ಸಮಯ ಮತ್ತು ಪ್ರಯತ್ನಗಳನ್ನು ನಾವು ವಿನಿಯೋಗಿಸುವಲ್ಲಿ, ತನಿಖೆ ನಡಿಸಲು ಮತ್ತು ನ್ಯಾಯನಿರ್ಣಾಯಕ ಮೊಕದ್ದಮೆಗಳನ್ನು ನಿರ್ವಹಿಸಲು ಬೇಕಾದ ಬಹಳಷ್ಟು ಸಮಯ ಮತ್ತು ಪ್ರಯತ್ನವನ್ನು ನಾವು ಉಳಿಸಲು ಸಾಧ್ಯವಿದೆಯೇ?’
10 ಪೌಲನು “ಕ್ರೂರವಾದ ತೋಳಗಳ” ವಿರುದ್ಧ ಎಚ್ಚರಿಕೆಯನ್ನಿತ್ತಿದ್ದಾನೆಂಬುದು ನಿಜ. ಆದರೆ ‘ಹಿಂಡನ್ನು ಕನಿಕರದಿಂದ ಉಪಚರಿಸದೆ ಇದ್ದುದಕ್ಕಾಗಿ’ ಅವರನ್ನು ಅವನು ನಿಂದಿಸಲಿಲ್ಲವೇ? (ಅ.ಕೃತ್ಯಗಳು 20:29) ಮತ್ತು ಈ “ತೋಳಗಳನ್ನು” ನಂಬಿಗಸ್ತ ಮೇಲ್ವಿಚಾರಕರು ಹೊರಗೆ ಹಾಕಬೇಕೆಂದು ಅವನು ಸೂಚಿಸಿರುವದಾದರೂ, ಹಿಂಡಿನ ಇತರ ಸದಸ್ಯರನ್ನು ಹಿರಿಯರು “ಕನಿಕರದಿಂದ” ಉಪಚರಿಸಬೇಕೆಂದು ಅವನ ಮಾತುಗಳು ತೋರಿಸುವದಿಲ್ಲವೇ? ಕುರಿಯೊಂದು ಆತ್ಮಿಕವಾಗಿ ಅಬಲವಾದರೆ ಮತ್ತು ದೇವರನ್ನು ಸೇವಿಸುವದನ್ನು ನಿಲ್ಲಿಸಿದರೆ, ಅವನಿಗೆ ಯಾ ಅವಳಿಗೆ ಬೇಕಾದದ್ದು ಏನು—ಹೊಡೆಯುವಿಕೆ ಯಾ ವಾಸಿಮಾಡುವಿಕೆಯೆ, ಶಿಕ್ಷೆಕೊಡುವದು ಯಾ ಪಾಲನೆ ಮಾಡುವಿಕೆಯೆ? (ಯಾಕೋಬ 5:14, 15) ಆದಕಾರಣ, ಕುರಿಪಾಲನೆಯ ಕೆಲಸಕ್ಕಾಗಿ ಹಿರಿಯರಿಗೆ ಕ್ರಮವಾಗಿ ಸಮಯದ ಕಾರ್ಯತಖ್ತೆಯು ಇರತಕ್ಕದ್ದು. ಪಾಪಕ್ಕೆ ವಶವಾದ ಕ್ರೈಸ್ತರು ಒಳಗೂಡಿರುವ ಸಮಯ ವ್ಯಯಿಸುವ ನ್ಯಾಯನಿರ್ಣಾಯಕ ಮೊಕದ್ದಮೆಗಳಲ್ಲಿ, ಕೊಂಚವೆ ಸಮಯವನ್ನು ವೆಚ್ಚಮಾಡುವ ಆನಂದಿತ ಫಲಿತಾಂಶವನ್ನು ಇದು ತರಬಹುದು. ಖಂಡಿತವಾಗಿಯೂ, ಹಿರಿಯರ ಮೊದಲ ಚಿಂತೆಯು ಪರಿಹಾರದ ಮತ್ತು ಚೇತೋಹಾರಿಯ ಉಗಮವೊಂದನ್ನು ಒದಗಿಸುವಂಥದ್ದಾಗಿರತಕ್ಕದ್ದು, ಹೀಗೆ ಇದು ಯೆಹೋವನ ಜನರಲ್ಲಿ ಶಾಂತಿ, ಪ್ರಶಾಂತತೆ ಮತ್ತು ಭದ್ರತೆಯನ್ನು ಪ್ರವರ್ಧಿಸುವದು.—ಯೆಶಾಯ 32:1, 2.
ಉಪಕಾರಿ ಕುರುಬರು ಮತ್ತು ನ್ಯಾಯಾಧಿಪತಿಗಳಾಗಿ ಸೇವೆ ಮಾಡುವುದು
11. ನ್ಯಾಯನಿರ್ಣಾಯಕ ಕಮಿಟಿಗಳಲ್ಲಿ ಸೇವೆ ಸಲ್ಲಿಸುವ ಹಿರಿಯರಿಗೆ ನಿಷ್ಪಕ್ಷಪಾತತನ ಮತ್ತು “ಮೇಲಣಿಂದ ಬರುವ ಜ್ಞಾನದ” ಅವಶ್ಯವಿದೆ ಯಾಕೆ?
11 ತಪ್ಪಾದ ಹೆಜ್ಜೆಯನ್ನು ಕ್ರೈಸ್ತನೊಬ್ಬನು ತಕ್ಕೊಳ್ಳುವ ಮೊದಲೇ ಹೆಚ್ಚು ತೀವ್ರವಾದ ಕುರಿಪಾಲನೆಯು, ಯೆಹೋವನ ಜನರಲ್ಲಿ ನ್ಯಾಯನಿರ್ಣಾಯಕ ಮೊಕದ್ದಮೆಗಳ ಸಂಖ್ಯೆಯನ್ನು ಬಹಳಷ್ಟು ಕಡಿಮೆಮಾಡಬಹುದು. (ಹೋಲಿಸಿರಿ ಗಲಾತ್ಯ 6:1.) ಆದಾಗ್ಯೂ, ಮಾನವ ಪಾಪ ಮತ್ತು ಅಪರಿಪೂರ್ಣತೆಯ ಕಾರಣ, ಕ್ರೈಸ್ತ ಮೇಲ್ವಿಚಾರಕರು ಆಗಿಂದಾಗ್ಗೆ ತಪ್ಪುಕೃತ್ಯಗಳ ಮೊಕದ್ದಮೆಗಳನ್ನು ವ್ಯವಹರಿಸಬೇಕಾಗುತ್ತದೆ. ಯಾವ ಸೂತ್ರಗಳು ಅವರನ್ನು ಮಾರ್ಗದರ್ಶಿಸತಕ್ಕದ್ದು? ಮೋಶೆಯ ಇಲ್ಲವೇ ಆರಂಭದ ಕ್ರೈಸ್ತರ ಸಮಯದಿಂದ ಅವುಗಳೇನೂ ಮಾರ್ಪಟ್ಟಿಲ್ಲ. ಇಸ್ರಾಯೇಲಿನ ನ್ಯಾಯಾಧಿಪತಿಗಳಿಗೆ ಮೋಶೆಯು ಸಂಬೋಧಿಸಿದ ಮಾತುಗಳು ಇಂದೂ ಕೂಡ ನ್ಯಾಯಸಮ್ಮತವಾಗಿವೆ: “ನೀವು ಸಕ್ವುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು; . . . ನೀವು ನ್ಯಾಯದ ಪ್ರಕಾರವೇ ತೀರ್ಪು ಮಾಡಬೇಕು. ನ್ಯಾಯವಿಚಾರಿಸುವಾಗ ಮುಖದಾಕ್ಷಿಣ್ಯಮಾಡದೆ . . . ಸಮನಾಗಿ ತಿಳಿಯಬೇಕು [ಪಕ್ಷಪಾತಮಾಡಬಾರದು, NW ].” (ಧರ್ಮೋಪದೇಶಕಾಂಡ 1:16, 17) ನಿಷ್ಪಕ್ಷಪಾತವು “ಮೇಲಣಿಂದ ಬರುವ ಜ್ಞಾನ [ವಿವೇಕ, NW ]” ದ ಒಂದು ಗುಣಲಕ್ಷಣವಾಗಿದೆ, ನ್ಯಾಯನಿರ್ಣಾಯಕ ಕಮಿಟಿಗಳಲ್ಲಿ ಸೇವೆ ಸಲ್ಲಿಸುವ ಹಿರಿಯರಿಗೆ ವಿವೇಕವು ಅತ್ಯಾವಶ್ಯಕವಾಗಿದೆ. (ಯಾಕೋಬ 3:17; ಜ್ಞಾನೋಕ್ತಿ 24:23) ಅಂಥ ವಿವೇಕವು ಬಲಹೀನತೆ ಮತ್ತು ದುಷ್ಟತನದ ನಡುವಣ ಭಿನ್ನತೆಯನ್ನು ವಿವೇಚಿಸಲು ಅವರಿಗೆ ಸಹಾಯ ಮಾಡುವದು.
12. ಯಾವ ಅರ್ಥದಲ್ಲಿ ನ್ಯಾಯಾಧಿಪತಿಗಳು ನೀತಿವಂತರೂ ಮಾತ್ರವಲ್ಲ, ಒಳ್ಳೆಯ ಮನುಷ್ಯರೂ ಆಗಿರುವ ಅಗತ್ಯವಿದೆ?
12 ಒಳ್ಳೇದು ಮತ್ತು ಕೆಟ್ಟದ್ದರ ಯೆಹೋವನ ಮಟ್ಟಕ್ಕೆ ಸಹಮತದಲ್ಲಿ ಹಿರಿಯರು “ನೀತಿಯಿಂದ ನ್ಯಾಯತೀರ್ಪು ಮಾಡಬೇಕು.” (ಕೀರ್ತನೆ 19:9) ಆದರೂ, ನೀತಿಯ ಪುರುಷರಾಗಿರಲು ಅವರು ಪ್ರಯತ್ನಿಸುತ್ತಿರುವಾಗ, ರೋಮಾಪುರ 5:7, 8 ರಲ್ಲಿ ಪೌಲನು ಮಾಡಿರುವ ಭಿನ್ನತೆಯ ಅರ್ಥದಲ್ಲಿ, ಅವರು ಒಳ್ಳೆಯ ಪುರುಷರೂ ಆಗಿರಲು ಪ್ರಯತ್ನಿಸತಕ್ಕದ್ದು. ಈ ವಚನಗಳ ಮೇಲೆ ಟಿಪ್ಪಣಿಮಾಡುತ್ತಾ, ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಕೃತಿಯ “ನೀತಿ” ಯ ಮೇಲಿನ ಲೇಖನವು ಹೇಳುವದು: “ಗ್ರೀಕ್ ಪದದ ಬಳಕೆಯು ತೋರಿಸುವದೇನಂದರೆ ಒಬ್ಬ ವ್ಯಕ್ತಿಯು ಒಳ್ಳೆಯತನಕ್ಕಾಗಿ ಗಮನಾರ್ಹನಾಗುತ್ತಾನೆ, ಯಾ ಪ್ರತ್ಯೇಕವಾಗಿ ತೋರುತ್ತಾನೆ, ಅವನು ಧರ್ಮಬುದ್ಧಿಯವನು (ಒಳಿತನ್ನು ಮಾಡಲು ಮನಃಪ್ರವೃತ್ತಿ ಹೊಂದಿದವನು ಯಾ ಇತರರಿಗೆ ಪ್ರಯೋಜನವನ್ನು ತರುವವನು) ಮತ್ತು ಉಪಕಾರಿ (ಅಂಥ ಒಳ್ಳೆಯತನವನ್ನು ಸಚೇತಕವಾಗಿ ವ್ಯಕ್ತಪಡಿಸುವವನು) ಆಗಿರುತ್ತಾನೆ. ನ್ಯಾಯವು ಏನನ್ನು ಅಪೇಕ್ಷಿಸುತ್ತದೋ ಅಷ್ಟನ್ನೇ ಮಾಡುವದರಲ್ಲಿ ಅವನು ಚಿಂತಾಗ್ರಸ್ತನಾಗಿರುವದಿಲ್ಲ, ಆದರೆ ಅದಕ್ಕಿಂತಲೂ ಮುಂದಕ್ಕೆ ಹೋಗಿ, ಇತರರಿಗಾಗಿ ಸಮಗ್ರ ಪರಿಗಣನೆ ಹೊಂದಿದವನಾಗಿ ಮತ್ತು ಅವರಿಗೆ ಪ್ರಯೋಜನ ಮತ್ತು ಸಹಾಯವಾಗುವ ಆಶೆಯಿಂದ ಪ್ರಚೋದಿಸಲ್ಪಡುತ್ತಾನೆ.” (ಸಂಪುಟ 2, ಪುಟ 809) ಕೇವಲ ನೀತಿಯುಕರ್ತು ಮಾತ್ರವಲ್ಲದೆ ಒಳ್ಳೇತನವೂ ಉಳ್ಳ ಹಿರಿಯರು ತಪ್ಪಿತಸ್ಥರನ್ನು ದಯಾಭರಿತ ಪರಿಗಣನೆಯಿಂದ ಉಪಚರಿಸುವರು. (ರೋಮಾಪುರ 2:4) ಅವರು ಕರುಣೆ ಮತ್ತು ಕನಿಕರವನ್ನು ತೋರಿಸಲು ಬಯಸಬೇಕು. ಪಶ್ಚಾತ್ತಾಪ ಪಡುವ ಆವಶ್ಯಕತೆಯನ್ನು ಕಾಣುವಂತೆ ತಪ್ಪಿತಸ್ಥನಿಗೆ ಸಹಾಯವಾಗಲು ಅವರು ಏನನ್ನು ಮಾಡಸಾಧ್ಯವಿದೆಯೋ ಅದನ್ನು, ಮೊದಲು ಅವರ ಪ್ರಯತ್ನಗಳಿಗೆ ಅವನು ಪ್ರತಿವರ್ತಿಸುವದಿಲ್ಲವೆಂದು ಭಾಸವಾದರೂ ಕೂಡ, ಮಾಡಬೇಕು.
ನ್ಯಾಯವಿಚಾರಣೆಯಲ್ಲಿ ಯೋಗ್ಯ ಮನೋಭಾವ
13. (ಎ) ನ್ಯಾಯಾಧಿಪತಿಯಾಗಿ ಒಬ್ಬ ಹಿರಿಯನು ಕ್ರಿಯೆಗೈಯುವಾಗ, ಅವನು ಏನಾಗಿರುವದು ನಿಂತುಹೋಗುವದಿಲ್ಲ? (ಬಿ) ನ್ಯಾಯವಿಚಾರಣೆಯಲ್ಲಿ ಕೂಡ ಪೌಲನ ಯಾವ ಬುದ್ಧಿವಾದ ಅನ್ವಯಿಸಲ್ಪಡುತ್ತದೆ?
13 ವಿದ್ಯಮಾನವೊಂದು ನ್ಯಾಯವಿಚಾರಣೆಯನ್ನು ಆವಶ್ಯಕಮಾಡುವಾಗ, ತಾವಿನ್ನೂ ಕುರುಬರಾಗಿರುತ್ತೇವೆಂದೂ, “ಒಳ್ಳೆಯ ಕುರುಬನ” ಕೆಳಗೆ ಯೆಹೋವನ ಕುರಿಗಳೊಂದಿಗೆ ವ್ಯವಹರಿಸುತ್ತಿದ್ದೇವೆಂದೂ ಮೇಲ್ವಿಚಾರಕರು ಮರೆಯಬಾರದು. (ಯೋಹಾನ 10:11) ಕಷ್ಟಗಳಲ್ಲಿರುವಾಗ ಕುರಿಗಳಿಗೆ ಕೊಡಲ್ಪಡುವ ಕ್ರಮಾನುಗತವಾದ ಸಹಾಯಕ್ಕಾಗಿ ಪೌಲನು ಕೊಟ್ಟ ಬುದ್ಧಿವಾದವು ನ್ಯಾಯವಿಚಾರಣೆಗಳಲ್ಲೂ ಅಷ್ಟೇ ಸಮಾನಬಲದಿಂದ ಅನ್ವಯಿಸಲ್ಪಡುತ್ತದೆ. ಅವನು ಬರೆದದ್ದು: “ಸಹೋದರರೇ ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು. ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.”—ಗಲಾತ್ಯ 6:1, 2.b
14. ನ್ಯಾಯ ವಿಚಾರಣೆಗಳನ್ನು ಮೇಲ್ವಿಚಾರಕರು ಹೇಗೆ ದೃಷ್ಟಿಸಬೇಕು, ಮತ್ತು ತಪ್ಪಿತಸ್ಥನ ಕಡೆಗೆ ಅವರ ಮನೋಭಾವ ಏನಾಗಿರಬೇಕು?
14 ತಾವು ದಂಡನೆಯನ್ನು ನೀಡುವ ಕೂಟದ ಮೇಲ್ಮಟ್ಟದ ನ್ಯಾಯಾಧಿಪತಿಗಳಾಗಿದ್ದೇವೆಂದು ತಮ್ಮನ್ನು ಸ್ವತಃ ಎಣಿಸಿಕೊಳ್ಳುವ ಬದಲಾಗಿ, ನ್ಯಾಯನಿರ್ಣಾಯಕ ಕಮಿಟಿಯಲ್ಲಿ ಸೇವೆ ಸಲ್ಲಿಸುವ ಹಿರಿಯರು, ವಿಚಾರಣೆಯು ಅವರ ಕುರಿಪಾಲನಾ ಕೆಲಸದ ಇನ್ನೊಂದು ವಿಭಾಗವೆಂದು ದೃಷ್ಟಿಸತಕ್ಕದ್ದು. ಯೆಹೋವನ ಕುರಿಯೊಂದು ತೊಂದರೆಯಲ್ಲಿದೆ. ಅವನನ್ನು ಯಾ ಅವಳನ್ನು ರಕ್ಷಿಸಲು ಅವರೇನು ಮಾಡಶಕ್ತರು? ಹಿಂಡಿನಿಂದ ಬಹಳಷ್ಟು ದೂರ ದಾರಿತಪ್ಪಿಹೋದ ಈ ಕುರಿಗೆ ಸಹಾಯ ಮಾಡಲು ಸಮಯ ಮೀರಿಹೋಗಿರುತ್ತದೋ? ನಾವು ಹಾಗೆ ನಿರೀಕ್ಷಿಸೆವು. ಎಲ್ಲಿ ಯೋಗ್ಯವೂ ಅಲ್ಲಿ ಕರುಣೆಯನ್ನು ತೋರಿಸುವದರ ಕುರಿತಾಗಿ ಹಿರಿಯರು ಒಂದು ಸಕಾರಾತ್ಮಕ ನೋಟವನ್ನು ಇಡತಕ್ಕದ್ದು. ಒಂದು ಗಂಭೀರವಾದ ಪಾಪವು ಮಾಡಲ್ಪಟ್ಟಾಗ ಯೆಹೋವನ ಮಟ್ಟಗಳನ್ನು ಕೆಳಕ್ಕೆ ಇಳಿಸಬೇಕೆಂದು ಹೇಳುವದಲ್ಲ. ಆದರೆ ಕಾಠಿಣ್ಯವನ್ನು ಕಡಿಮೆಗೊಳಿಸುವ ಯಾವುದೇ ಪರಿಸ್ಥಿತಿಯ ಅರಿವು ಅವರಿಗಿರುವದಾದರೆ, ಸಾಧ್ಯವಿದ್ದಲ್ಲಿ ಕರುಣೆಯನ್ನು ತೋರಿಸಲು ಸಹಾಯ ಮಾಡಬೇಕು. (ಕೀರ್ತನೆ 103:8-10; 130:3) ದುಃಖಕರವಾಗಿ ಹೇಳಬೇಕಾಗಿರುವುದೇನಂದರೆ, ಕೆಲವು ತಪ್ಪಿತಸ್ಥರು ಅವರ ಮನೋಭಾವದಲ್ಲಿ ಎಷ್ಟೊಂದು ಹಠಮಾರಿಗಳಾಗಿರುತ್ತಾರೆಂದರೆ, ಹಿರಿಯರು ಧೃಡತೆಯನ್ನು— ಆದರೆ ಎಂದಿಗೂ ಕ್ರೂರತನವನ್ನಲ್ಲ—ತೋರಿಸುವ ಹಂಗಿನಲ್ಲಿರುತ್ತಾರೆ.—1 ಕೊರಿಂಥ 5:13.
ನ್ಯಾಯವಿಚಾರಣೆಯ ಉದ್ದೇಶ
15. ವ್ಯಕ್ತಿಗಳ ನಡುವೆ ಗಂಭೀರವಾದ ಸಮಸ್ಯೆಯೊಂದು ಎದ್ದಲ್ಲಿ, ಮೊದಲಾಗಿ ಏನನ್ನು ಗೊತ್ತುಮಾಡಿಕೊಳ್ಳಬೇಕು?
15 ವ್ಯಕ್ತಿಗಳ ನಡುವೆ ಗಂಭೀರವಾದ ಸಮಸ್ಯೆಯೊಂದು ಏಳುವಾಗ, ಮತ್ತಾಯ 5:23, 24 ಯಾ ಮತ್ತಾಯ 18:15 ರ ಆತ್ಮದಲ್ಲಿ, ಒಳಗೂಡಿರುವವರು ಸಂಗತಿಗಳನ್ನು ಖಾಸಗಿಯಾಗಿ ಬಗೆಹರಿಸಲು ಪ್ರಯತ್ನಿಸಿದ್ದಾರೋ ಎಂದು ವಿವೇಕಿಗಳಾದ ಹಿರಿಯರು ಮೊದಲಾಗಿ ಗೊತ್ತುಮಾಡಿಕೊಳ್ಳಬೇಕು. ಇದು ಯಶಸ್ವಿಯಾಗದಿದ್ದಲ್ಲಿ, ಒಬ್ಬರು ಯಾ ಇಬ್ಬರು ಹಿರಿಯರ ಬುದ್ಧಿವಾದವು ಪ್ರಾಯಶಃ ಸಾಕಾಗಬಹುದು. ಬಹಿಷ್ಕಾರಕ್ಕೆ ನಡಿಸಬಹುದಾದ ಒಂದು ಗಂಭೀರ ಪಾಪವನ್ನು ಗೈದಲ್ಲಿ ಮಾತ್ರವೇ ನ್ಯಾಯನಿರ್ಣಾಯಕ ಕ್ರಿಯೆಯು ಆವಶ್ಯಕವಾಗಿದೆ. (ಮತ್ತಾಯ 18:17; 1 ಕೊರಿಂಥ 5:11) ನ್ಯಾಯನಿರ್ಣಾಯಕ ಕಮಿಟಿಯನ್ನು ರಚಿಸುವದರಲ್ಲಿ ಒಂದು ಯೋಗ್ಯವಾದ ಶಾಸ್ತ್ರೀಯ ಆಧಾರವಿರಬೇಕು. (ದ ವಾಚ್ಟವರ್, ಸಪ್ಟಂಬರ 15, 1989, ಪುಟ 18 ನೋಡಿರಿ.) ಮತ್ತು ಒಂದು ರಚಿಸಲ್ಪಟ್ಟಾಗ, ನಿರ್ದಿಷ್ಟ ಮೊಕದ್ದಮೆಗೆ ಅತ್ಯುತ್ತಮ ಅರ್ಹತೆಯುಳ್ಳ ಹಿರಿಯರನ್ನು ಆರಿಸಬೇಕು.
16. ನ್ಯಾಯವಿಚಾರಣೆಗಳ ಮೂಲಕ ಹಿರಿಯರು ಏನನ್ನು ಸಾಧಿಸಲು ಪ್ರಯತ್ನಿಸುತ್ತಾರೆ?
16 ನ್ಯಾಯವಿಚಾರಣೆಗಳ ಮೂಲಕ ಹಿರಿಯರು ಏನನ್ನು ಸಾಧಿಸಲು ಪ್ರಯತ್ನಿಸುತ್ತಾರೆ? ಮೊದಲು, ಸತ್ಯವು ತಿಳಿಯದೆ ಇರುವುದಾದರೆ, ನೀತಿಯಿಂದ ನ್ಯಾಯತೀರ್ಪು ಮಾಡುವದು ಅಸಾಧ್ಯವೇ ಸರಿ. ಇಸ್ರಾಯೇಲಿನಲ್ಲಿದ್ದಂತೆಯೇ, ಗಂಭೀರವಾದ ಸಂಗತಿಗಳನ್ನು ‘ಸಂಪೂರ್ಣವಾಗಿ ಪರಿಶೋಧಿಸ’ ತಕ್ಕದ್ದು. (ಧರ್ಮೋಪದೇಶಕಾಂಡ 13:14; 17:4) ಆದುದರಿಂದ, ಮೊಕದ್ದಮೆಯ ನಿಜಾಂಶಗಳನ್ನು ಕಂಡುಹಿಡಿಯುವದೇ ನ್ಯಾಯವಿಚಾರಣೆಯೊಂದರ ಒಂದು ಧ್ಯೇಯವಾಗಿದೆ. ಆದರೆ ಇದನ್ನು ಪ್ರೀತಿಯಿಂದ ಮಾಡಸಾಧ್ಯವಿದೆ ಮತ್ತು ಮಾಡತಕ್ಕದ್ದು. (1 ಕೊರಿಂಥ 13:4, 6, 7) ಒಮ್ಮೆ ನಿಜಾಂಶಗಳು ತಿಳಿದಾದ ಮೇಲೆ, ಸಭೆಯನ್ನು ಸಂರಕ್ಷಿಸಲು ಮತ್ತು ಅದರೊಳಗೆ ಯೆಹೋವನ ಉನ್ನತ ಮಟ್ಟಗಳನ್ನು ಕಾಪಾಡಲು ಮತ್ತು ಅವನ ಆತ್ಮವು ಸ್ವತಂತ್ರವಾಗಿ ಹರಿಯಲು ಏನು ಆವಶ್ಯಕವೂ ಅದನ್ನು ಹಿರಿಯರು ಮಾಡುವರು. (1 ಕೊರಿಂಥ 5:7, 8) ಆದಾಗ್ಯೂ, ನ್ಯಾಯವಿಚಾರಣೆಯ ಒಂದು ಉದ್ದೇಶವು, ಒಂದು ವೇಳೆ ಸಾಧ್ಯವಾಗುವಲ್ಲಿ, ಅಪಾಯಕ್ಕೊಡ್ಡಲ್ಪಟ್ಟ ಪಾಪಿಯನ್ನು ರಕ್ಷಿಸುವದೇ ಆಗಿದೆ.—ಹೋಲಿಸಿರಿ ಲೂಕ 15:8-10.
17. (ಎ) ವಿಚಾರಣೆಯ ಸಮಯದಲ್ಲಿ ಆಪಾದಿತನನ್ನು ಹೇಗೆ ಉಪಚರಿಸಬೇಕು, ಮತ್ತು ಯಾವ ಉದ್ದೇಶದೊಂದಿಗೆ? (ಬಿ) ನ್ಯಾಯನಿರ್ಣಾಯಕ ಕಮಿಟಿಯ ಸದಸ್ಯರುಗಳ ವತಿಯಿಂದ ಇದು ಏನನ್ನು ಅಪೇಕ್ಷಿಸುತ್ತದೆ?
17 ಆಪಾದಿತನನ್ನು ದೇವರ ಕುರಿಯೋಪಾದಿ ಉಪಚರಿಸುವದಕ್ಕಿಂತ ಬೇರೆ ಯಾವುದೇ ರೀತಿಯಲ್ಲಿ ಎಂದಿಗೂ ಉಪಚರಿಸಕೂಡದು. ಅವನನ್ನು ಯಾ ಅವಳನ್ನು ಕೋಮಲತೆಯಿಂದ ಸತ್ಕರಿಸಬೇಕು. ಪಾಪವೊಂದು (ಯಾ ಪಾಪಗಳು) ಮಾಡಲ್ಪಟ್ಟಲ್ಲಿ, ನೀತಿಯ ನ್ಯಾಯಾಧಿಪತಿಗಳ ಉದ್ದೇಶವೇನಂದರೆ ಪಾಪಿಯು ಸರಿಪಡಿಸಿಕೊಳ್ಳಲು, ಅವನ ಮಾರ್ಗದ ದೋಷವನ್ನು ತಿಳಿದುಕೊಳ್ಳಲು, ಪಶ್ಚಾತ್ತಾಪ ಪಡಲು, ಮತ್ತು ಈ ರೀತಿಯಲ್ಲಿ “ಪಿಶಾಚನ ಉರ್ಲಿ” ನಿಂದ ಸೆಳೆಯುವದಾಗಿದೆ. ಇದಕ್ಕೆ “ಕಲಿಸುವ ಕೌಶಲ್ಯ (NW ),” ಮತ್ತು “ನಿಧಾನವಾಗಿ ತಿದ್ದುವ” ಅವಶ್ಯಕತೆಯಿದೆ. (2 ತಿಮೊಥೆಯ 2:24-26; 4:2) ಒಂದು ವೇಳೆ ಪಾಪಿಯು ತಾನು ಪಾಪಗೈದಿದ್ದೇನೆ ಎಂದು ಅಂಗೀಕರಿಸುವದಾದರೆ, ನಿಜವಾಗಿಯೂ ಹೃದಯದಲ್ಲಿ ಅಲುಗುನೆಟ್ಟಂತವನಾದರೆ, ಮತ್ತು ಕ್ಷಮೆಗಾಗಿ ಯೆಹೋವನನ್ನು ಬೇಡುವದಾದರೆ, ಆಗೇನು? (ಹೋಲಿಸಿರಿ ಅ.ಕೃತ್ಯಗಳು 2:37.) ಅವನು ಯಥಾರ್ಥವಾಗಿ ಸಹಾಯವನ್ನು ಬಯಸುವವನೆಂದು ಕಮಿಟಿಗೆ ಮನವರಿಕೆಯಾದಲ್ಲಿ, ಸಾಮಾನ್ಯವಾಗಿ ಅವನನ್ನು ಬಹಿಷ್ಕರಿಸುವ ಅಗತ್ಯವೇನೂ ಅಲ್ಲಿರುವದಿಲ್ಲ.—ದ ವಾಚ್ಟವರ್, ಜನವರಿ 1, 1983, ಪುಟ 31, ಪ್ಯಾರಗ್ರಾಫ್ 1 ನೋಡಿರಿ.
18. (ಎ) ನ್ಯಾಯನಿರ್ಣಾಯಕ ಕಮಿಟಿಯು ತಪ್ಪಿತಸ್ಥನನ್ನು ಬಹಿಷ್ಕರಿಸುವಲ್ಲಿ ಯಾವಾಗ ಸ್ಥಿರತೆಯನ್ನು ತೋರಿಸಬೇಕು? (ಬಿ) ಎದೆಬಿರಿಯುವ ಯಾವ ಸನ್ನಿವೇಶದ ನೋಟದಲ್ಲಿ, ದಾರಿತಪ್ಪಿಹೋದ ಕುರಿಗಳ ಪರವಾಗಿ ಹಿರಿಯರು ತಾವಾಗಿಯೇ ತಮ್ಮನ್ನು ದುಡಿಸಿಕೊಳ್ಳಬೇಕು?
18 ಇನ್ನೊಂದು ಪಕ್ಕದಲ್ಲಿ, ನ್ಯಾಯನಿರ್ಣಾಯಕ ಕಮಿಟಿಯ ಸದಸ್ಯರು ಮನದ ಕೊರೆತವಿಲ್ಲದ ಧರ್ಮಭ್ರಷ್ಟತೆಯ, ಯೆಹೋವನ ನಿಯಮಗಳ ವಿರುದ್ಧ ಬೇಕುಬೇಕೆಂದೇ ದಂಗೆಯ ಯಾ ನೇರ ದುಷ್ಟತನದ ಒಂದು ಸ್ಪಷ್ಟ ಮೊಕದ್ದಮೆಯನ್ನು ಎದುರಿಸುವದಾದರೆ, ಪಶ್ಚಾತ್ತಾಪವಿಲ್ಲದ ಅಪರಾಧಿಯನ್ನು ಬಹಿಷ್ಕರಿಸುವ ಮೂಲಕ ಸಭೆಯ ಇತರ ಸದಸ್ಯರನ್ನು ಸಂರಕ್ಷಿಸುವ ಕರ್ತವ್ಯ ಅವರದ್ದಾಗಿರುತ್ತದೆ. ತಪ್ಪಿತಸ್ಥನು ದೈವಿಕ ಪಶ್ಚಾತ್ತಾಪದ ಕೊರತೆಯುಳ್ಳವನೆಂದು ವಿದಿತವಾಗುವದಾದರೆ, ಅವನನ್ನು ಪುನಃ ಪುನಃ ಭೇಟಿಯಾಗುವ ಯಾ ಅವನ ಬಾಯಿಯಲ್ಲಿ ಮಾತುಗಳನ್ನು ತುರುಕಿಸುವ, ಪಶ್ಚಾತ್ತಾಪ ಪಡುವಂತೆ ಅವನನ್ನು ಬಲಾತ್ಕರಿಸಲು ಪ್ರಯತ್ನಿಸುವ ಹಂಗೇನೂ ನ್ಯಾಯನಿರ್ಣಾಯಕ ಕಮಿಟಿಗೆ ಇರುವದಿಲ್ಲ.c ಇತ್ತೀಚೆಗಿನ ವರ್ಷಗಳಲ್ಲಿ ಲೋಕವ್ಯಾಪಕವಾಗಿ ಬಹಿಷ್ಕರಿಸಲ್ಪಡುವಿಕೆಗಳು ಒಟ್ಟಂದಾಜಿನಲ್ಲಿ ಪ್ರಚಾರಕರ ಒಂದು ಪ್ರತಿಶತವಾಗಿರುತ್ತದೆ. ಅದರ ಅರ್ಥ ಹಿಂಡಿನ ಸುಮಾರು ಒಂದು ನೂರು ಕುರಿಗಳಲ್ಲಿ ಒಂದು ಕಳೆದುಹೋಗಿದೆ—ಕಡಿಮೆ ಪಕ್ಷ ತಾತ್ಕಾಲಿಕವಾಗಿ. ಮಂದೆಯೊಳಗೆ ಒಬ್ಬ ವ್ಯಕ್ತಿಯನ್ನು ತರಲು ತೆಗೆದುಕೊಳ್ಳಲ್ಪಡುವ ಸಮಯ ಮತ್ತು ಪ್ರಯತ್ನವನ್ನು ಪರಿಗಣಿಸುವದಾದರೆ, ಪ್ರತಿ ವರ್ಷ ಹತ್ತಾರು ಸಾವಿರಾರು ಮಂದಿ ‘ಸೈತಾನನಿಗೆ ಪುನಃ ಒಪ್ಪಿಸಲ್ಪಡುತ್ತಾರೆ’ ಎಂದು ತಿಳಿಯುವದು ಎದೆಬಿರಯುವಂತಹದ್ದಲ್ಲವೇ?—1 ಕೊರಿಂಥ 5:5.
19. ನ್ಯಾಯನಿರ್ಣಾಯಕ ಕಮಿಟಿಯೊಂದರಲ್ಲಿ ಸೇವೆ ಸಲ್ಲಿಸುವ ಹಿರಿಯರು ಯಾವುದನ್ನು ಎಂದಿಗೂ ಮರೆಯಕೂಡದು, ಹಾಗಾದರೆ ಅವರ ಧ್ಯೇಯವೇನಾಗಿರುವುದು?
19 ನ್ಯಾಯನಿರ್ಣಾಯಕ ಮೊಕದ್ದಮೆಯೊಂದನ್ನು ಆರಂಭಿಸುವ ಹಿರಿಯರು ನೆನಪಿನಲ್ಲಿಡಬೇಕೇನಂದರೆ ಸಭೆಯಲ್ಲಿ ಪಾಪದ ಅಧಿಕಾಂಶ ಮೊಕದ್ದಮೆಗಳಲ್ಲಿ ಬಲಹೀನತೆಯು ಒಳಗೂಡಿರುತ್ತದೆಯೇ, ಹೊರತು ದುಷ್ಟತನವಲ್ಲ. ಕಳೆದು ಹೋದ ಕುರಿಯ ಯೇಸುವಿನ ಸಾಮ್ಯವನ್ನು ಅವರು ಎಂದಿಗೂ ಮರೆಯ ಬಾರದು, ಅವನು ಅದನ್ನು ಈ ಮಾತುಗಳಿಂದ ಸಮಾಪ್ತಿಗೊಳಿಸಿದನು: “ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ.” (ಲೂಕ 15:7) ನಿಜವಾಗಿಯೂ “ಯಾವನಾದರೂ ನಾಶವಾಗುವದರಲ್ಲಿ ಆತನು (ಯೆಹೋವನು, NW ) ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವ” ನಾಗಿದ್ದಾನೆ. (2 ಪೇತ್ರ 3:9) ಪಶ್ಚಾತ್ತಾಪ ಪಡುವ ಮತ್ತು ನಿತ್ಯ ಜೀವಕ್ಕೆ ನಡಿಸುವ ಇಕ್ಕಟ್ಟಾದ ದಾರಿಯಲ್ಲಿ ಅವರ ಹೆಜ್ಜೆಗಳನ್ನು ಪುನಃ ಇಡಲು ಆರಂಭಿಸುವ ಅವಶ್ಯವನ್ನು ತಪ್ಪಿತಸ್ಥರು ಕಾಣಲು ಸಹಾಯ ಮಾಡುವದರಿಂದ ಪರಲೋಕದಲ್ಲಿ ಸಂತೋಷವುಂಟಾಗಲು ಕಾರಣರಾಗುವಂತೆ ಅವರ ಅಧಿಕತಮವಾದದ್ದನ್ನು, ಲೋಕವ್ಯಾಪಕವಾಗಿರುವ ನ್ಯಾಯನಿರ್ಣಾಯಕ ಕಮಿಟಿಗಳು ಯೆಹೋವನ ಸಹಾಯದೊಂದಿಗೆ ಮಾಡಲಿ.—ಮತ್ತಾಯ 7:13, 14.
[ಅಧ್ಯಯನ ಪ್ರಶ್ನೆಗಳು]
a ಕ್ರಿಸ್ತನ ಬಲಗೈಯಲ್ಲಿರುವ ಬೇರೆ ಕುರಿಗಳ ಹಿರಿಯರ ಸ್ಥಾನದ ಕುರಿತಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯೋರ್ಕ್, ಸಂಘಟಿತ, ಇವರಿಂದ ಪ್ರಕಾಶಿಸಲ್ಪಟ್ಟ ರೆವಲೇಶನ್—ಇಟ್ಸ್ ಗ್ರ್ಯಾಂಡ್ ಕ್ಲೈಮಾಕ್ಸ್ ಎಟ್ ಹ್ಯಾಂಡ್! ಪುಸ್ತಕದ ಪುಟ 136, ಪಾದಟಿಪ್ಪಣೆ ನೋಡಿರಿ.
ಪುನರ್ವಿಮರ್ಶೆಯ ಪ್ರಶ್ನೆಗಳು
▫ ಮಹಾ ಕುರುಬನ ಮತ್ತು ಒಳ್ಳೇ ಕುರುಬನ ಮಾದರಿಯನ್ನು ಅನುಕರಿಸುತ್ತಾ, ಹಿರಿಯರ ಮುಖ್ಯ ಆಸಕ್ತಿ ಏನಾಗಿರಬೇಕು?
▫ ಯಾವ ರೀತಿಯಲ್ಲಿ ಹಿರಿಯರು ಅನೇಕ ನ್ಯಾಯನಿರ್ಣಾಯಕ ಮೊಕದ್ದಮೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಬಹುದು?
▫ ಯಾವ ಅರ್ಥದಲ್ಲಿ ನ್ಯಾಯಾಧಿಪತಿಗಳು ನೀತಿವಂತರು ಮಾತ್ರವಲ್ಲ, ಒಳ್ಳೆಯವರೂ ಆಗಿರುವ ಅವಶ್ಯವಿದೆ?
▫ ನ್ಯಾಯವಿಚಾರಣೆಯ ಸಮಯದಲ್ಲಿ ತಪ್ಪಿತಸ್ಥನೊಬ್ಬನನ್ನು ಹೇಗೆ ಉಪಚರಿಸಬೇಕು, ಮತ್ತು ಯಾವ ಉದ್ದೇಶದಿಂದ?
▫ ಬಹಿಷ್ಕರಿಸುವದು ಯಾಕೆ ಕೊನೆಯ ಮಾರ್ಗವಾಗಿದೆ?
[ಪುಟ 16 ರಲ್ಲಿರುವ ಚಿತ್ರ]
ಯೋಗ್ಯವಾದ ಕುರಿಪಾಲನೆಯು ಮಾಡಿರುವಲ್ಲಿ, ಅನೇಕ ನ್ಯಾಯನಿರ್ಣಾಯಕ ಮೊಕದ್ದಮೆಗಳನ್ನು ಹೋಗಲಾಡಿಸಬಹುದು
[ಪುಟ 18 ರಲ್ಲಿರುವ ಚಿತ್ರ]
ನ್ಯಾಯವಿಚಾರಣೆಯ ಸಮಯದಲ್ಲೂ ಕೂಡ, ತಪ್ಪಿತಸ್ಥನನ್ನು ಶಾಂತಭಾವದಿಂದ ಸರಿಪಡಿಸಲು ಹಿರಿಯರು ಪ್ರಯತ್ನಿಸತಕ್ಕದ್ದು