ಪಾಠ 56
ಸಭೆಯಲ್ಲಿರುವ ಎಲ್ಲರ ಜೊತೆ ಒಗ್ಗಟ್ಟಿನಿಂದ ಇರಿ
ನಾವು ಸಹೋದರ ಸಹೋದರಿಯರ ಜೊತೆ ಇರುವಾಗ ದಾವೀದನಿಗೆ ಅನಿಸಿದಂತೆ ನಮಗೂ ಅನಿಸುತ್ತೆ. “ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದು ಎಷ್ಟೋ ಒಳ್ಳೇದು, ಎಷ್ಟೋ ಮನೋಹರ!” ಅಂತ ದಾವೀದ ಹೇಳಿದ. (ಕೀರ್ತನೆ 133:1) ಈ ಐಕ್ಯತೆ ಇದ್ದಕ್ಕಿದ್ದ ಹಾಗೆ ಬರಲಿಲ್ಲ, ಇದಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ.
1. ದೇವಜನರ ಮಧ್ಯೆ ಯಾವ ವಿಶೇಷತೆ ಇದೆ?
ನೆನಸಿ, ನೀವು ಬೇರೆ ದೇಶಕ್ಕೆ ಹೋಗಿದ್ದೀರ. ಅಲ್ಲಿರುವ ಕೂಟಕ್ಕೆ ಹಾಜರಾಗಿದ್ದೀರ. ಅಲ್ಲಿನ ಭಾಷೆ ನಿಮಗೆ ಅರ್ಥ ಆಗದೇ ಹೋದರೂ ನಿಮಗೆ ‘ಹೊಸ ಜಾಗಕ್ಕೆ ಬಂದಿದ್ದೇನೆ’ ಅಂತ ಅನಿಸಲ್ಲ, ಯಾಕೆ? ಯಾಕಂದ್ರೆ ನಾವು ಭೂಮಿಯ ಯಾವುದೇ ಕಡೆ ಹೋದರೂ ನಾವೆಲ್ಲರೂ ಒಂದೇ ರೀತಿಯ ಪ್ರಕಾಶನಗಳಿಂದ ಬೈಬಲನ್ನ ಕಲಿಯುತ್ತೇವೆ ಮತ್ತು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಅಷ್ಟೇ ಅಲ್ಲ, ನಾವು ಎಲ್ಲೇ ಇರಲಿ ‘ಯೆಹೋವ ಅನ್ನೋ ಹೆಸ್ರನ್ನ ಹೊಗಳುತ್ತೇವೆ’ ಮತ್ತು ‘ಒಟ್ಟಾಗಿ ಆತನನ್ನ ಆರಾಧಿಸುತ್ತೇವೆ.’—ಚೆಫನ್ಯ 3:9 ಪಾದಟಿಪ್ಪಣಿ.
2. ಒಗ್ಗಟ್ಟನ್ನ ಹೆಚ್ಚು ಮಾಡಕ್ಕೆ ನೀವೇನು ಮಾಡಬಹುದು?
“ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ.” (1 ಪೇತ್ರ 1:22) ಈ ಸಲಹೆಯನ್ನ ನಾವು ಹೇಗೆ ಪಾಲಿಸಬಹುದು? ನಾವು ಬೇರೆಯವರಲ್ಲಿರುವ ಕುಂದುಕೊರತೆಗಳನ್ನ ನೋಡುವ ಬದಲು ಅವರಲ್ಲಿರುವ ಒಳ್ಳೇ ಗುಣಗಳನ್ನ ನೋಡಬೇಕು. ನಮ್ಮ ತರದ ಜನರ ಜೊತೆ, ನಮಗೆ ಯಾರು ಇಷ್ಟ ಆಗುತ್ತಾರೋ ಅವರ ಜೊತೆ ಮಾತ್ರ ಸಹವಾಸ ಮಾಡದೆ ಬೇರೆಬೇರೆ ತರದ, ಹಿನ್ನೆಲೆಯ ಸಹೋದರ ಸಹೋದರಿಯರ ಜೊತೆನೂ ಬೆರೆಯಬೇಕು. ನಮ್ಮ ಮನಸ್ಸಿನಲ್ಲಿ ಯಾರ ಬಗ್ಗೆನಾದರೂ ತಪ್ಪಾದ ಅಭಿಪ್ರಾಯ ಇದ್ದರೆ, ಅದನ್ನ ನಾವು ಬೇರು ಸಮೇತ ಕಿತ್ತು ಎಸೆಯಬೇಕು.—1 ಪೇತ್ರ 2:17 ಓದಿ.a
3. ಸಹೋದರ ಸಹೋದರಿಯರು ಯಾರಾದ್ರೂ ನಿಮ್ಮ ಮನಸ್ಸನ್ನ ನೋಯಿಸಿದ್ರೆ ಏನು ಮಾಡ್ತೀರಾ?
ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಅನ್ನೋದು ನಿಜ. ಆದರೆ ನಾವು ಅಪರಿಪೂರ್ಣರು ಅನ್ನೋದನ್ನ ಮರೆಯಬಾರದು. ಕೆಲವೊಮ್ಮೆ ನಾವು ಬೇರೆಯವರಿಗೆ ಬೇಜಾರು ಮಾಡಬಹುದು ಅಥವಾ ಅವರ ಮನಸ್ಸಿಗೆ ನೋವಾಗುವ ತರ ನಡೆದುಕೊಳ್ಳಬಹುದು. ಅದಕ್ಕೆ ಬೈಬಲ್ ನಮಗೆ ಹೀಗೆ ಹೇಳುತ್ತೆ: “ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ. ಯೆಹೋವ ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.” (ಕೊಲೊಸ್ಸೆ 3:13 ಓದಿ.) ನಾವು ಲೆಕ್ಕ ಇಲ್ಲದಷ್ಟು ಸಲ ಯೆಹೋವನ ಮನಸ್ಸನ್ನ ನೋಯಿಸಿರುತ್ತೇವೆ. ಆದರೂ ಆತನು ಅದನ್ನೆಲ್ಲಾ ಕ್ಷಮಿಸಿದ್ದಾನೆ. ಹಾಗಾಗಿ ನಾವೂ ನಮ್ಮ ಸಹೋದರರನ್ನ ಕ್ಷಮಿಸಬೇಕು ಅಂತ ಆತನು ಬಯಸುತ್ತಾನೆ. ಒಂದುವೇಳೆ ನೀವು ಯಾರಿಗಾದ್ರೂ ಬೇಜಾರಾಗುವ ತರ ನಡೆದುಕೊಂಡಿದ್ದರೆ ಕೂಡಲೇ ಅವರ ಹತ್ತಿರ ಹೋಗಿ ಸಮಾಧಾನ ಮಾಡಿಕೊಳ್ಳಿ.—ಮತ್ತಾಯ 5:23, 24 ಓದಿ.b
ಹೆಚ್ಚನ್ನ ತಿಳಿಯೋಣ
ಸಭೆಯಲ್ಲಿ ಶಾಂತಿ ಮತ್ತು ಐಕ್ಯತೆಯನ್ನ ಕಾಪಾಡಿಕೊಳ್ಳಲು ನೀವು ಏನೆಲ್ಲಾ ಮಾಡಬಹುದು ಅಂತ ನೋಡಿ.
4. ಭೇದಭಾವ ಮಾಡಬೇಡಿ
ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಬೇಕು ಅಂತ ನಮಗೆ ಗೊತ್ತು. ಆದರೂ ಬೇರೆಬೇರೆ ಹಿನ್ನೆಲೆಯಿಂದ ಬಂದವರ ಜೊತೆ ಬೆರೆಯಲಿಕ್ಕೆ ನಮಗೆ ಕಷ್ಟ ಅಂತ ಅನಿಸಬಹುದು. ಅಂಥ ಸಮಯದಲ್ಲಿ ನಾವೇನು ಮಾಡಬೇಕು? ಅಪೊಸ್ತಲರ ಕಾರ್ಯ 10:34, 35 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವ ದೇವರು ಬೇರೆಬೇರೆ ಹಿನ್ನೆಲೆಯಿಂದ ಬಂದ ಜನರನ್ನ ಸೇರಿಸಿಕೊಳ್ಳುತ್ತಾನೆ. ಹಾಗಾದ್ರೆ ಬೇರೆಬೇರೆ ಹಿನ್ನೆಲೆಯಿಂದ ಬಂದ ಜನರನ್ನ ನೀವು ಹೇಗೆ ನೋಡಬೇಕು?
ನಿಮ್ಮ ಸುತ್ತಮುತ್ತ ಇರುವ ಜನರು ಹೇಗೆಲ್ಲಾ ಭೇದಭಾವ ಮಾಡುತ್ತಾರೆ? ಅವರ ತರ ಮಾಡದೇ ಇರಕ್ಕೆ ನೀವೇನು ಮಾಡುತ್ತೀರಾ?
2 ಕೊರಿಂಥ 6:11-13 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಬೇರೆಬೇರೆ ಹಿನ್ನೆಲೆಯಿಂದ ಬಂದ ಸಹೋದರ ಸಹೋದರಿಯರನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳೋಕೆ ನೀವೇನು ಮಾಡುತ್ತೀರಾ?
5. ಮನಸಾರೆ ಕ್ಷಮಿಸಿ ಮತ್ತು ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳಿ
ಯೆಹೋವ ದೇವರು ನಮ್ಮನ್ನ ಕ್ಷಮಿಸಬೇಕು ಅಂತೇನಿಲ್ಲ. ಆದರೂ ಆತನು ನಮ್ಮನ್ನ ಉದಾರವಾಗಿ, ಮನಸಾರೆ ಕ್ಷಮಿಸುತ್ತಾನೆ. ಕೀರ್ತನೆ 86:5 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಕ್ಷಮಿಸುವ ವಿಷಯದಲ್ಲಿ ಯೆಹೋವ ದೇವರಿಗೆ ಎಷ್ಟು ದೊಡ್ಡ ಮನಸ್ಸಿದೆ?
ಆತನು ತೋರಿಸಿದ ಕ್ಷಮೆಗೆ ನೀವು ಯಾಕೆ ಕೃತಜ್ಞತೆ ತೋರಿಸಬೇಕು ಅಂತಿದ್ದೀರಾ?
ಯಾವೆಲ್ಲಾ ಸನ್ನಿವೇಶಗಳಲ್ಲಿ ಬೇರೆಯವರ ಜೊತೆ ಬೆರೆಯಲು ನಿಮಗೆ ಕಷ್ಟ ಆಗುತ್ತೆ?
ನಾವು ಯೆಹೋವನನ್ನು ಅನುಕರಿಸುತ್ತಾ ಸಹೋದರ ಸಹೋದರಿಯರ ಜೊತೆ ಐಕ್ಯರಾಗಿ ಇರೋದು ಹೇಗೆ ಅಂತ ತಿಳಿದುಕೊಳ್ಳಿ. ಜ್ಞಾನೋಕ್ತಿ 19:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯಾರಾದ್ರೂ ನಿಮ್ಮ ಮನಸ್ಸಿಗೆ ನೋವಾಗುವ ತರ ಅಥವಾ ಕೋಪ ಬರೋ ತರ ನಡೆದುಕೊಂಡರೆ ಅಂಥ ಸನ್ನಿವೇಶವನ್ನ ಶಾಂತಿಯಿಂದ ಹೇಗೆ ಬಗೆಹರಿಸುತ್ತೀರಾ?
ಕೆಲವೊಮ್ಮೆ ನಾವು ಬೇರೆಯವರ ಮನಸ್ಸಿಗೆ ನೋವಾಗುವ ತರ ನಡೆದುಕೊಳ್ಳುತ್ತೇವೆ. ಆಗ ನಾವೇನು ಮಾಡಬೇಕು? ವಿಡಿಯೋ ನೋಡಿ ನಂತರ ಪ್ರಶ್ನೆಯನ್ನ ಚರ್ಚಿಸಿ.
ವಿಡಿಯೋದಲ್ಲಿದ್ದ ಸಹೋದರಿ ಸಮಾಧಾನ ಮಾಡಿಕೊಳ್ಳೋಕೆ ಏನು ಮಾಡಿದ್ರು?
6. ಸಹೋದರ ಸಹೋದರಿಯರಲ್ಲಿ ಇರುವ ಒಳ್ಳೇ ಗುಣಗಳನ್ನೇ ನೋಡಿ
ನಾವು ಸಹೋದರ ಸಹೋದರಿಯರನ್ನ ಹೆಚ್ಚು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಅವರಲ್ಲಿರುವ ಒಳ್ಳೇ ಗುಣಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಅಷ್ಟೇ ಅಲ್ಲ, ಅವರಲ್ಲಿರುವ ಕುಂದುಕೊರತೆಗಳೂ ಗೊತ್ತಾಗುತ್ತೆ. ಆದರೆ ಅವರಲ್ಲಿರುವ ಒಳ್ಳೇತನವನ್ನೇ ನೋಡಕ್ಕೆ ಯಾವುದು ಸಹಾಯ ಮಾಡುತ್ತೆ? ವಿಡಿಯೋ ನೋಡಿ ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ಸಹೋದರ ಸಹೋದರಿಯರಲ್ಲಿರುವ ಒಳ್ಳೇ ಗುಣಗಳನ್ನ ನೋಡಲು ನಮಗೆ ಯಾವುದು ಸಹಾಯ ಮಾಡುತ್ತೆ?
ಯೆಹೋವ ದೇವರು ನಮ್ಮಲ್ಲಿರುವ ಒಳ್ಳೇ ಗುಣಗಳನ್ನೇ ನೋಡುತ್ತಾನೆ. 2 ಪೂರ್ವಕಾಲವೃತ್ತಾಂತ 16:9ಎ ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವ ದೇವರು ನಿಮ್ಮಲ್ಲಿರುವ ಒಳ್ಳೇ ಗುಣಗಳನ್ನೇ ನೋಡುತ್ತಾನೆ ಅಂತ ಗೊತ್ತಾದಾಗ ನಿಮಗೆ ಹೇಗನಿಸುತ್ತೆ?
ಕೆಲವರು ಹೀಗಂತಾರೆ: “ನಾನು ಅವರನ್ನ ಕ್ಷಮಿಸುತ್ತೀನಿ, ಆದರೆ ಅವರು ಮಾಡಿದ್ದನ್ನ ಮಾತ್ರ ಯಾವತ್ತೂ ಮರೆಯಲ್ಲ.”
ನಾವು ಯಾಕೆ ಮನಸಾರೆ ಕ್ಷಮಿಸಬೇಕು?
ನಾವೇನು ಕಲಿತ್ವಿ
ನಾವು ಸಹೋದರ ಸಹೋದರಿಯರನ್ನ ಕ್ಷಮಿಸುವ ಮತ್ತು ಪ್ರೀತಿಸುವ ಮೂಲಕ ಸಭೆಯ ಐಕ್ಯತೆಯನ್ನ ಹೆಚ್ಚಿಸುತ್ತೇವೆ.
ನೆನಪಿದೆಯಾ
ನಾವು ಹೇಗೆ ಭೇದಭಾವ ಮಾಡದೇ ಇರಬಹುದು?
ಸಹೋದರ ಸಹೋದರಿಯರು ಯಾರಾದ್ರೂ ನಿಮ್ಮ ಮನಸ್ಸನ್ನ ನೋಯಿಸಿದ್ರೆ ಏನು ಮಾಡುತ್ತೀರಾ?
ಯೆಹೋವನ ತರ ನೀವೂ ಯಾಕೆ ಬೇರೆಯವರನ್ನ ಕ್ಷಮಿಸಬೇಕು ಅಂದುಕೊಂಡಿದ್ದೀರಾ?
ಇದನ್ನೂ ನೋಡಿ
ಬೇರೆಯವರಲ್ಲಿರುವ ತಪ್ಪುಗಳನ್ನ ನೋಡದೇ ಇರೋಕೆ ಯೇಸು ಕೊಟ್ಟ ಉದಾಹರಣೆ ನಮಗೆ ಹೇಗೆ ಸಹಾಯ ಮಾಡುತ್ತೆ ಅಂತ ನೋಡಿ.
ನಾವು ಯಾವ ತಪ್ಪು ಮಾಡಲಿಲ್ಲ ಅಂತ ಅನಿಸಿದರೂ ನಾವು ಕ್ಷಮೆ ಕೇಳಬೇಕಾ?
“ಕ್ಷಮಾಯಾಚನೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಒಂದು ಕೀಲಿ ಕೈ” (ಕಾವಲಿನಬುರುಜು, ನವೆಂಬರ್ 1, 2002)
ಭೇದಭಾವ ಮಾಡದೆ ಬೇರೆಯವರ ಜೊತೆ ಚೆನ್ನಾಗಿ ನಡ್ಕೊಳ್ಳೋಕೆ ಕೆಲವ್ರಿಗೆ ಯಾವುದು ಸಹಾಯ ಮಾಡ್ತು ಅಂತ ನೋಡಿ.
ಸಹೋದರ ಸಹೋದರಿಯರ ಮಧ್ಯೆ ನಮಗಿರುವ ಸಮಸ್ಯೆ, ಸಭೆಯ ಶಾಂತಿ ಮತ್ತು ನೆಮ್ಮದಿಯನ್ನ ಹಾಳುಮಾಡುವುದಕ್ಕಿಂತ ಮುಂಚೆ ಅದನ್ನ ಸರಿಮಾಡಿಕೊಳ್ಳೋಕೆ ಏನೆಲ್ಲಾ ಮಾಡಬಹುದು ಅಂತ ನೋಡಿ.
“ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ” (ಕಾವಲಿನಬುರುಜು, ಮೇ 2016)