ವೃದ್ಧ ಹೆತ್ತವರನ್ನು ಸನ್ಮಾನಿಸುವುದರ ಪ್ರತಿಫಲಗಳು
ದೇವರ ನಿಜ ಆರಾಧಕರು, ತಮ್ಮ ವೃದ್ಧ ಹೆತ್ತವರನ್ನು ಗೌರವಿಸುತ್ತಾರೆ. ಅವರನ್ನು ಸನ್ಮಾನಿಸುತ್ತಾರೆ ಹಾಗೂ ಅವರ ಆರೈಕೆಮಾಡುತ್ತಾರೆ. ಏಕೆಂದರೆ ವೃದ್ಧ ಹೆತ್ತವರು ಅವರನ್ನು ಪ್ರೀತಿಸುತ್ತಾರೆ. ಇದು ಅವರ ಆರಾಧನೆಯ ಒಂದು ಭಾಗವಾಗಿದೆ. ಬೈಬಲು ಹೇಳುವುದು: “ಮೊದಲಾಗಿ [ಮಕ್ಕಳು ಅಥವಾ ಮೊಮ್ಮಕ್ಕಳು] ತಮ್ಮ ಸ್ವಂತ ಮನೆವಾರ್ತೆಗಳಲ್ಲಿ ದೈವಿಕ ಭಕ್ತಿಯನ್ನು ಅಭ್ಯಾಸಿಸಲು ಹಾಗೂ ತಮ್ಮ ಹೆತ್ತವರಿಗೂ ಅಜ್ಜಅಜ್ಜಿಯರಿಗೂ ಸಲ್ಲತಕ್ಕ ಪರಿಹಾರವನ್ನು ಸಲ್ಲಿಸುತ್ತಾ ಇರುವುದನ್ನು ಕಲಿತುಕೊಳ್ಳಲಿ, ಏಕೆಂದರೆ ಇದು ದೇವರ ದೃಷ್ಟಿಯಲ್ಲಿ ಸ್ವೀಕಾರಯೋಗ್ಯವಾಗಿದೆ.” (1 ತಿಮೊಥೆಯ 5:4, NW) ನಾವು ಎಳೆಯರಾಗಿರಲಿ ವೃದ್ಧರಾಗಿರಲಿ, ನಾವು ನಮ್ಮ ಹೆತ್ತವರಿಗೂ ಅಜ್ಜಅಜ್ಜಿಯರಿಗೂ “ಸಲ್ಲತಕ್ಕ ಪರಿಹಾರವನ್ನು” ಸಲ್ಲಿಸುವುದು ತಕ್ಕದ್ದಾಗಿದೆ. ಈ ರೀತಿಯಲ್ಲಿ ಅವರ ಪ್ರೀತಿ, ಅವರ ಕಷ್ಟದ ಕೆಲಸ, ಹಾಗೂ ಅನೇಕ ವರ್ಷಗಳಿಂದ ಅವರು ತೋರಿಸಿರುವ ಆರೈಕೆಗಾಗಿ ನಾವು ಗಣ್ಯತೆಯನ್ನು ತೋರಿಸುತ್ತೇವೆ. ಅಷ್ಟೇಕೆ, ನಮ್ಮ ಅಸ್ತಿತ್ವಕ್ಕಾಗಿಯೇ ನಾವು ನಮ್ಮ ಹೆತ್ತವರಿಗೆ ಋಣಿಗಳಾಗಿದ್ದೇವೆ!
ಹೆತ್ತವರಿಗೂ ಅಜ್ಜಅಜ್ಜಿಯರಿಗೂ ಸಲ್ಲತಕ್ಕ ಪರಿಹಾರವನ್ನು ಸಲ್ಲಿಸುವುದು, “ದೇವರ ದೃಷ್ಟಿಯಲ್ಲಿ ಸ್ವೀಕಾರಯೋಗ್ಯ”ವಾದದ್ದಾಗಿದೆ ಎಂಬುದನ್ನು ಗಮನಿಸಿರಿ. ಇದು ನಮ್ಮ “ದೈವಿಕ ಭಕ್ತಿ”ಗೆ ಸಂಬಂಧಿಸಿದೆ. ಹೀಗೆ, ದೇವರಿಗೆ ಮೆಚ್ಚಿಕೆಯಾಗಿರುವುದನ್ನು ನಾವು ಮಾಡುತ್ತಿದ್ದೇವೆ ಎಂಬುದನ್ನು ತಿಳಿದವರಾಗಿದ್ದು, ಈ ಸಲಹೆಯನ್ನು ಕೈಕೊಂಡು ನಡೆಯುವ ಮೂಲಕ, ನಮಗೆ ಪ್ರತಿಫಲವು ದೊರೆಯುತ್ತದೆ. ಅದು ನಮಗೆ ಆನಂದವನ್ನು ತರುತ್ತದೆ.
ಇತರರಿಗೆ ಕೊಡುವುದರಲ್ಲಿ ಆನಂದವಿದೆ; ವಿಶೇಷವಾಗಿ ನಮಗೆ ಉದಾರವಾಗಿ ಕೊಟ್ಟಿರುವವರಿಗೆ ನಾವು ಕೊಡುವಾಗ. (ಅ. ಕೃತ್ಯಗಳು 20:35) ಆದುದರಿಂದ, “ನಿನ್ನ ತಂದೆತಾಯಿಗಳಿಗೆ ಉಲ್ಲಾಸಗೊಳ್ಳಲು ಕಾರಣವನ್ನು ಕೊಡು, ನಿನ್ನನ್ನು ಹೆತ್ತವಳು ಆನಂದಪಡಲಿ” ಎಂಬ ಬೈಬಲಿನ ಈ ಮೂಲತತ್ವಕ್ಕೆ ಅನುಸಾರವಾಗಿ ಕ್ರಿಯೆಗೈಯುವುದರಲ್ಲಿ ಎಂತಹ ಒಂದು ಪ್ರತಿಫಲವಿದೆ!—ಜ್ಞಾನೋಕ್ತಿ 23:25, ದ ನ್ಯೂ ಇಂಗ್ಲಿಷ್ ಬೈಬಲ್.
ನಮ್ಮ ಹೆತ್ತವರಿಗೂ ಅಜ್ಜಅಜ್ಜಿಯರಿಗೂ ನಾವು ಹೇಗೆ ಸಲ್ಲತಕ್ಕ ಪರಿಹಾರವನ್ನು ಸಲ್ಲಿಸಸಾಧ್ಯವಿದೆ? ಮೂರು ವಿಧಗಳಲ್ಲಿ ಕೊಡಸಾಧ್ಯವಿದೆ: ಪ್ರಾಪಂಚಿಕವಾಗಿ, ಭಾವನಾತ್ಮಕವಾಗಿ, ಹಾಗೂ ಆತ್ಮಿಕವಾಗಿ. ಪ್ರತಿಯೊಂದೂ ಅದರದ್ದೇ ಆದ ಪ್ರತಿಫಲಗಳನ್ನು ತರುತ್ತದೆ.
ಪ್ರಾಪಂಚಿಕವಾಗಿ ಕೊಡುವುದು
ಆಪ್ತ ಕುಟುಂಬ ಸದಸ್ಯರಿಗೆ ಪ್ರಾಪಂಚಿಕವಾಗಿ ಒದಗಿಸುವುದು ಪ್ರಾಮುಖ್ಯವಾದದ್ದಾಗಿದೆ ಎಂಬ ವಿಚಾರವು ದೇವರನ್ನು ಸೇವಿಸುವವರಿಗೆ ಗೊತ್ತಿದೆ. ಅಪೊಸ್ತಲ ಪೌಲನು ಬುದ್ಧಿವಾದ ನೀಡಿದ್ದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.
ಟೂಂಜೀ ಮತ್ತು ಜಾಯ್ ಪಶ್ಚಿಮ ಆಫ್ರಿಕದಲ್ಲಿ ವಾಸಿಸುತ್ತಾರೆ. ಅವರಿಗೆ ಹಣಕಾಸಿನ ಮುಗ್ಗಟ್ಟು ಇದೆಯಾದರೂ, ಅವರು ಜಾಯ್ಯ ವೃದ್ಧ ಹೆತ್ತವರನ್ನು ತಮ್ಮಲ್ಲಿಗೆ ಬಂದಿರುವಂತೆ ಆಮಂತ್ರಿಸಿದರು. ಜಾಯ್ ತಂದೆ ಅಸ್ವಸ್ಥರಾಗಿದ್ದರು ಮತ್ತು ಕಾಲಕ್ರಮೇಣ ಮೃತಪಟ್ಟರು. ಟೂಂಜೀ ಜ್ಞಾಪಿಸಿಕೊಳ್ಳುವುದು: “ಮಾವನವರು ಮೃತಪಟ್ಟಾಗ, ಅತ್ತೆಯವರು ನನ್ನ ಹೆಂಡತಿಯನ್ನು ತಬ್ಬಿಕೊಂಡು ಹೇಳಿದ್ದು: ‘ಮಾನವ ಹಿತದೃಷ್ಟಿಯಿಂದ ಸಾಧ್ಯವಿದ್ದದ್ದೆಲ್ಲವನ್ನೂ ನೀನು ಮಾಡಿದಿ. ಯಾವುದೇ ವಿಧದಲ್ಲಿ ನಿನ್ನ ತಂದೆಯ ಮರಣಕ್ಕಾಗಿ ನೀನು ದೋಷಿಯೆಂಬ ಅನಿಸಿಕೆ ನಿನಗಾಗಬಾರದು.’ ಮಾವನವರು ಇಲ್ಲವೆಂದು ನಾವು ವಿಷಾದಿಸುತ್ತೇವಾದರೂ, ಅವರಿಗಾಗಿ ನಾವು ಅತ್ಯುತ್ತಮವಾದ ಔಷಧಗಳನ್ನು ಕೊಂಡುತಂದೆವು ಮತ್ತು ಅವರು ನಮಗೆ ಬೇಕಾಗಿದ್ದಾರೆ ಮತ್ತು ಅವರ ಅಗತ್ಯ ನಮಗಿದೆ ಎಂದು ಅವರು ಯಾವಾಗಲೂ ಭಾವಿಸುವಂತೆ ಮಾಡಲು ನಾವು ಪ್ರಯತ್ನಿಸಿದೆವು; ನಮ್ಮ ದೇವದತ್ತ ಜವಾಬ್ದಾರಿಯನ್ನು ಪೂರೈಸಲು ನಾವು ನಮ್ಮಿಂದಾದುದೆಲ್ಲವನ್ನೂ ಮಾಡಿದೆವು. ಆ ಸಂತೃಪ್ತಿ ನಮಗಿದೆ.”
ಪ್ರತಿಯೊಬ್ಬರೂ ಇತರರಿಗೆ ಪ್ರಾಪಂಚಿಕವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿರುವುದಿಲ್ಲ ಎಂಬುದು ನಿಶ್ಚಯ. ನೈಜೀರಿಯದಲ್ಲಿ ವಾಸಿಸುತ್ತಿರುವ ಒಬ್ಬ ಮನುಷ್ಯನು ಹೀಗೆ ಹೇಳಿದನು: “ಒಬ್ಬ ಮನುಷ್ಯನು ತನ್ನನ್ನೇ ಪೋಷಿಸಿಕೊಳ್ಳಲು ಅಸಮರ್ಥನಾಗಿರುವಲ್ಲಿ, ಅವನು ಇನ್ನೊಬ್ಬ ವ್ಯಕ್ತಿಯನ್ನು ಹೇಗೆ ಪೋಷಿಸಬಲ್ಲನು?” ಅನೇಕ ದೇಶಗಳಲ್ಲಿ, ಮುಂಬರುವ ವರ್ಷಗಳಲ್ಲಿ ಸನ್ನಿವೇಶವು ಇನ್ನೂ ಹೆಚ್ಚು ಕೆಟ್ಟದ್ದಾಗಬಹುದು. ವಿಶ್ವಸಂಸ್ಥೆಯ ಮುನ್ಅಂದಾಜಿಗನುಸಾರ, ಬೇಗನೆ ಆಫ್ರಿಕದ ಉಪ-ಸಹಾರದ ಜನಸಂಖ್ಯೆಯಲ್ಲಿ ಅರ್ಧ ಮಂದಿ, ಸಂಪೂರ್ಣ ಬಡತನದಲ್ಲಿ ಜೀವಿಸಲಿರುವರು.
ತೀರ ಬಡತನದ ಆರ್ಥಿಕ ಪರಿಸ್ಥಿತಿಗಳಲ್ಲಿ ನೀವು ನಿಮ್ಮನ್ನು ಕಂಡುಕೊಳ್ಳುವಲ್ಲಿ, ನಿರ್ಗತಿಕ ವಿಧವೆಯ ಕುರಿತಾದ ಒಂದು ಕಥೆಯಿಂದ ನೀವು ಸಾಂತ್ವನವನ್ನು ಪಡೆದುಕೊಳ್ಳಬಹುದು. ಯೇಸು ಭೂಮಿಯಲ್ಲಿದ್ದಾಗ, ಆ ವಿಧವೆಯು ದೇವಾಲಯದ ಬೊಕ್ಕಸಕ್ಕೆ ಒಂದು ಸಣ್ಣ ಕಾಣಿಕೆಯನ್ನು ನೀಡಿದ್ದನ್ನು ಅವನು ಗಮನಿಸಿದನು. ಅವಳು ಕೇವಲ “[“ತೀರ ಕಡಿಮೆ ಮೌಲ್ಯದ,” NW] ಎರಡು ಕಾಸುಗಳನ್ನು” ಕೊಟ್ಟಳು. ಆದರೂ, ಅವಳ ಪರಿಸ್ಥಿತಿಯನ್ನು ತಿಳಿದವನಾಗಿದ್ದು ಯೇಸು ಹೇಳಿದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು.”—ಲೂಕ 21:1-4.
ತದ್ರೀತಿಯಲ್ಲಿ, ನಮ್ಮ ಹೆತ್ತವರನ್ನು ಅಥವಾ ಅಜ್ಜಅಜ್ಜಿಯರನ್ನು ಪ್ರಾಪಂಚಿಕವಾಗಿ ನೋಡಿಕೊಳ್ಳುವುದರಲ್ಲಿ ನಾವು ನಮ್ಮಿಂದಾದುದೆಲ್ಲವನ್ನೂ ಮಾಡುವಲ್ಲಿ, ಅದು ಎಷ್ಟೇ ಚಿಕ್ಕದಾಗಿರಬಹುದಾದರೂ, ಯೆಹೋವನು ಅದನ್ನು ಗಮನಿಸಿ, ಗಣ್ಯಮಾಡುತ್ತಾನೆ. ನಾವು ಮಾಡಲು ಶಕ್ತರಾಗಿರುವುದಕ್ಕಿಂತಲೂ ಹೆಚ್ಚಿನದ್ದೇನನ್ನೂ ಆತನು ನಮ್ಮಿಂದ ನಿರೀಕ್ಷಿಸುವುದಿಲ್ಲ. ಪ್ರಾಯಶಃ ನಮ್ಮ ಹೆತ್ತವರು ಅಥವಾ ಅಜ್ಜಅಜ್ಜಿಯರು ಸಹ ತದ್ರೀತಿಯೇ ಭಾವಿಸುವರು.
ಭಾವನಾತ್ಮಕವಾಗಿ ಕೊಡುವುದು
ನಮ್ಮ ಹೆತ್ತವರಿಗೆ ಹಾಗೂ ಅಜ್ಜಅಜ್ಜಿಯರಿಗೆ ಒದಗಿಸುವುದರಲ್ಲಿ, ಕೇವಲ ಅವರ ಪ್ರಾಪಂಚಿಕ ಆವಶ್ಯಕತೆಗಳನ್ನು ಪೂರೈಸುವುದಕ್ಕಿಂತಲೂ ಹೆಚ್ಚಿನದ್ದು ಸೇರಿದೆ. ನಮಗೆಲ್ಲರಿಗೂ ಭಾವನಾತ್ಮಕ ಆವಶ್ಯಕತೆಗಳಿವೆ. ವೃದ್ಧರನ್ನು ಒಳಗೊಂಡು ಪ್ರತಿಯೊಬ್ಬರಿಗೂ ಪ್ರೀತಿಸಲ್ಪಡುವ, ನಮ್ಮ ಅಗತ್ಯವಿದೆ ಮತ್ತು ತಾವು ಬೇಕಾಗಿದ್ದೇವೆ ಎಂದೆಣಿಸಲ್ಪಡುವ, ಹಾಗೂ ಕುಟುಂಬದ ಗಣ್ಯ ಸದಸ್ಯರೆಂದೆಣಿಸಲ್ಪಡುವ ಅಪೇಕ್ಷೆಯಿದೆ.
ಕೆನ್ಯದಲ್ಲಿ ವಾಸಿಸುವ ಮೇರಿ, ಮೂರು ವರ್ಷಗಳ ವರೆಗೆ ತನ್ನ ವೃದ್ಧ ಅತ್ತೆಯ ಆರೈಕೆ ಮಾಡಿದ್ದಾಳೆ. ಮೇರಿ ಹೇಳುವುದು: “ಅವರ ಪ್ರಾಪಂಚಿಕ ಆವಶ್ಯಕತೆಗಳನ್ನು ಒದಗಿಸುವುದಲ್ಲದೆ, ನಾವು ಯಾವಾಗಲೂ ಅವರೊಂದಿಗೆ ಮಾತಾಡುತ್ತೇವೆ. ತಾಯಿಯವರು ಮನೆಯಲ್ಲಿ ಹೆಚ್ಚು ಕೆಲಸವನ್ನು ಮಾಡಲು ಶಕ್ತರಾಗಿಲ್ಲವಾದರೂ, ನಾವು ಮಾತಾಡುತ್ತೇವೆ ಮತ್ತು ನಾವು ಆಪ್ತ ಮಿತ್ರರಾಗಿದ್ದೇವೆ. ಕೆಲವೊಮ್ಮೆ ನಾವು ದೇವರ ಕುರಿತಾಗಿ, ಕೆಲವೊಮ್ಮೆ ನಾವು ಈ ಮುಂಚೆ ವಾಸಿಸುತ್ತಿದ್ದ ಸ್ಥಳದಲ್ಲಿದ್ದ ಜನರ ಕುರಿತಾಗಿ ಮಾತಾಡುತ್ತೇವೆ. ಅವರು 90 ವರ್ಷ ಪ್ರಾಯದವರಾಗಿರುವುದಾದರೂ, ಅವರ ಜ್ಞಾಪಕಶಕ್ತಿಯು ತುಂಬ ಚೆನ್ನಾಗಿದೆ. 1914ಕಕ್ಕೆ ಮುಂಚಿನ ದಿನಗಳಲ್ಲಿ, ಅವರು ಚಿಕ್ಕ ಹುಡುಗಿಯಾಗಿದ್ದಾಗಿನ ಜೀವನವನ್ನು ಜ್ಞಾಪಿಸಿಕೊಂಡು, ಅದರ ಕುರಿತಾಗಿ ಮಾತಾಡುತ್ತಾರೆ.”
ಮೇರಿ ಮುಂದುವರಿಸುವುದು: “ಒಬ್ಬ ವೃದ್ಧ ವ್ಯಕ್ತಿಯನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವೇನಲ್ಲ, ಆದರೂ ಅವರು ನಮ್ಮೊಂದಿಗಿರುವುದು ನಮಗೆ ಬಹಳಷ್ಟು ಪ್ರತಿಫಲಗಳನ್ನು ತಂದಿದೆ. ಕುಟುಂಬದಲ್ಲಿ ನಮಗೆ ಶಾಂತಿ ಹಾಗೂ ಹೊಂದಿಕೆಯಿದೆ. ನನ್ನನ್ನು ಅವರಿಗೆ ನೀಡಿಕೊಂಡಿರುವುದು, ಕುಟುಂಬದಲ್ಲಿರುವ ಇತರರಿಗೆ ತಮ್ಮನ್ನು ನೀಡಿಕೊಳ್ಳುವ ಮನೋಭಾವವನ್ನು ಪ್ರಚೋದಿಸಿದೆ. ನನ್ನ ಗಂಡನಿಗೆ ನನ್ನ ಬಗ್ಗೆ ತುಂಬ ಗೌರವವಿದೆ. ಮತ್ತು ಯಾರಾದರೂ ನನಗೆ ಕಟುವಾಗಿ ಮಾತಾಡುವುದನ್ನು ತಾಯಿಯವರು ಕೇಳಿಸಿಕೊಂಡರೆ, ಅವರು ಕೂಡಲೆ ನನ್ನ ಪರವಾಗಿ ಮಾತಾಡುತ್ತಾರೆ. ಅವರು ಇರುವಾಗ ಯಾರೊಬ್ಬರೂ ನನಗೆ ಚುಚ್ಚುಮಾತನ್ನು ಹೇಳಸಾಧ್ಯವಿಲ್ಲ!”
ಆತ್ಮಿಕವಾಗಿ ಕೊಡುವುದು
ಪ್ರಾಪಂಚಿಕವಾಗಿ ಹಾಗೂ ಭಾವನಾತ್ಮಕವಾಗಿ ನೀಡಿಕೊಳ್ಳುವುದು, ಕೊಡುವಾತನಿಗೆ ಪ್ರತಿಫಲಗಳನ್ನು ತರುವಂತೆಯೇ, ಆತ್ಮಿಕ ವಿಷಯಗಳೂ ಪ್ರತಿಫಲಗಳನ್ನು ತರುತ್ತವೆ. ಅಪೊಸ್ತಲ ಪೌಲನು ರೋಮ್ನಲ್ಲಿದ್ದ ಕ್ರೈಸ್ತ ಸಭೆಗೆ ಬರೆದುದು: “ನನ್ನ ಮುಖಾಂತರವಾಗಿ ನಿಮಗೆ ಪಾರಮಾರ್ಥಿಕ ವರವೇನಾದರೂ ದೊರಕಿ ನೀವು ದೃಢವಾಗುವದಕ್ಕೋಸ್ಕರ ಅಂದರೆ ನಾನು ನಿಮ್ಮ ನಂಬಿಕೆಯಿಂದ ನೀವು ನನ್ನ ನಂಬಿಕೆಯಿಂದ ಸಹಾಯಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.”—ರೋಮಾಪುರ 1:11, 12.
ಅದೇ ರೀತಿಯಲ್ಲಿ, ದೇವರನ್ನು ಸೇವಿಸುವ ವೃದ್ಧರಿಗೆ ಆತ್ಮಿಕವಾಗಿ ಕೊಡುವ ವಿಷಯದಲ್ಲಿ, ಆ ಉತ್ತೇಜನವು ಅನೇಕವೇಳೆ ಪರಸ್ಪರವಾಗಿದೆ. ನೈಜೀರಿಯದಲ್ಲಿ ವಾಸಿಸುವ ಓಸಾಂಡೂ ಹೇಳುವುದು: “ನನ್ನ ಅಜ್ಜಅಜ್ಜಿಯರ ಕುರಿತು ನನಗೆ ತುಂಬ ಆಸಕ್ತಿದಾಯಕವಾಗಿರುವ ವಿಷಯವು ಯಾವುದೆಂದರೆ, ನಾನು ಗತ ಸಮಯದ ನಸುನೋಟವನ್ನು ಪಡೆದುಕೊಳ್ಳುವಂತೆ ಅವರು ನನಗೆ ಸಂದರ್ಭವನ್ನು ಕೊಡುತ್ತಾರೆ. ತಮ್ಮ ಕಣ್ಣುಗಳಲ್ಲಿ ಕಳೆಸೂಸುತ್ತಾ ನನ್ನ ಅಜ್ಜನವರು, 1950ಗಳು ಹಾಗೂ 1960ಗಳಲ್ಲಿ ಒಬ್ಬ ಪೂರ್ಣ ಸಮಯದ ಶುಶ್ರೂಷಕರೋಪಾದಿ ತಾವು ಕೆಲಸಮಾಡಿದ ಟೆರಿಟೊರಿಗಳ ಕುರಿತು ಹೇಳುತ್ತಾರೆ. ಪ್ರಸ್ತುತ ಸಮಯದ ಸಭಾ ರಚನೆಯನ್ನು, ತಾವು ಒಬ್ಬ ಸಾಕ್ಷಿಯಾಗಿ ಪರಿಣಮಿಸಿದಾಗ ಇದ್ದ ಸಭಾ ರಚನೆಯೊಂದಿಗೆ ಅವರು ಹೋಲಿಸುತ್ತಾರೆ. ಈ ಅನುಭವಗಳು ಒಬ್ಬ ಪಯನೀಯರನೋಪಾದಿ ನನ್ನ ಸೇವೆಯಲ್ಲಿ ನನಗೆ ಸಹಾಯ ಮಾಡುತ್ತವೆ.”
ಕ್ರೈಸ್ತ ಸಭೆಯಲ್ಲಿರುವ ಇತರರು ಸಹ, ವೃದ್ಧರಿಗೆ ಕೊಡುವುದರಲ್ಲಿ ಸಹಾಯ ಮಾಡಬಲ್ಲರು. ಈ ಮುಂಚೆ ಪ್ರಸ್ತಾಪಿಸಿದ ಟೂಂಜೀ, ತನ್ನ ಸಭೆಯಲ್ಲಿ ಏನು ನಡೆಯಿತೆಂಬುದನ್ನು ವಿವರಿಸಿದನು: “ಒಂದು ಬಹಿರಂಗ ಭಾಷಣವನ್ನು ಕೊಡಲಿಕ್ಕಾಗಿ ನೇಮಿಸಲ್ಪಟ್ಟಿದ್ದ ಒಬ್ಬ ಯುವ ಪಯನೀಯರ್ ಸಹೋದರನು, ಅವರಿಬ್ಬರೂ ಒಟ್ಟಿಗೆ ಅದನ್ನು ತಯಾರಿಸಸಾಧ್ಯವಾಗುವಂತೆ ಆ ಭಾಷಣದ ಹೊರಮೇರೆಯನ್ನು ಮಾವನವರ ಬಳಿಗೆ ತಂದನು. ಕಾವಲಿನಬುರುಜು ಅಭ್ಯಾಸ ಚಾಲಕನು ಬಂದು ಮಾವನವರಿಗೆ ಹೇಳಿದ್ದು: ‘ನೀವು ಅನುಭವಸ್ಥರು. ನಾನು ಪ್ರಗತಿಯನ್ನು ಮಾಡುವಂತೆ ಸಹಾಯ ಮಾಡಲು ನೀವೇನು ಹೇಳಬಲ್ಲಿರಿ.’ ಮಾವನವರು ಆ ಹಿರಿಯನಿಗೆ ಸ್ವಲ್ಪ ಪ್ರಾಯೋಗಿಕ ಸಲಹೆಯನ್ನು ಕೊಡಲು ಶಕ್ತರಾಗಿದ್ದರು. ಆ ಸಹೋದರರು ಮಾವನವರ ಹೆಸರನ್ನು ಸಭಾ ಪ್ರಾರ್ಥನೆಗಳಲ್ಲಿ ಅನೇಕ ಬಾರಿ ಉಲ್ಲೇಖಿಸಿದರು. ಇದೆಲ್ಲವೂ ಅವರಲ್ಲಿ, ತನ್ನ ಆವಶ್ಯಕತೆಯಿದೆ ಎಂಬ ಅನಿಸಿಕೆಯನ್ನು ಉಂಟುಮಾಡಿತು.”
ಸುನಡತೆಯು ಜನರನ್ನು ದೇವರ ಕಡೆಗೆ ಸೆಳೆಯುತ್ತದೆ
ಕೆಲವೊಮ್ಮೆ, ನಮ್ಮ ಹೆತ್ತವರು ಹಾಗೂ ಅಜ್ಜಅಜ್ಜಿಯರಿಗೆ ನಾವು ಸನ್ಮಾನ ಹಾಗೂ ಪ್ರೀತಿಯನ್ನು ತೋರಿಸಿದಂತೆ, ನಾವು ಜನರನ್ನು ದೇವರ ಕಡೆಗೆ ಸೆಳೆಯುತ್ತೇವೆ. ಅಪೊಸ್ತಲ ಪೇತ್ರನು ಬರೆದುದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”—1 ಪೇತ್ರ 2:12.
ಪಶ್ಚಿಮ ಆಫ್ರಿಕದಲ್ಲಿರುವ ಒಬ್ಬ ಕ್ರೈಸ್ತ ಹಿರಿಯನಾದ ಆ್ಯಂಡ್ರೂ, ಒಬ್ಬ ಅವಿಶ್ವಾಸಿಯಾಗಿದ್ದ ತನ್ನ ಅಸ್ವಸ್ಥ ತಂದೆಯನ್ನು ನೋಡಿಕೊಳ್ಳಲಿಕ್ಕಾಗಿ, ವಾರಕ್ಕೆ ಎರಡು ಬಾರಿ 95 ಕಿಲೊಮೀಟರ್ಗಳಷ್ಟು ದೂರ ಪ್ರಯಾಣಿಸಿದನು. ಅವನು ವಿವರಿಸುವುದು: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದಾಗ, ನನ್ನ ತಂದೆ ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಅವರು ಅಸ್ವಸ್ಥರಾಗಿದ್ದಾಗ ನಾನು ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದ ರೀತಿಯನ್ನು ಅವರು ಗಮನಿಸಿದಾಗ, ‘ನೀವು ನಿಮ್ಮ ಅಣ್ಣನ ಧರ್ಮಕ್ಕೆ ಸೇರಿಕೊಳ್ಳಬೇಕು!’ ಎಂದು ನನ್ನ ತಮ್ಮಂದಿರಿಗೂ ತಂಗಿಯರಿಗೂ ಹುರಿದುಂಬಿಸುತ್ತಾ ಇದ್ದರು. ಅದು ಅವರನ್ನು ಪ್ರಚೋದಿಸಿತು, ಮತ್ತು ಈಗ ನನ್ನ ತಂದೆಯ ಎಲ್ಲ ಒಂಬತ್ತು ಮಕ್ಕಳು ಯೆಹೋವನ ಸಾಕ್ಷಿಗಳಾಗಿದ್ದಾರೆ.”
ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು ಹಾಗೂ ಅವರ ಆರೈಕೆಮಾಡುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ—ವಿಶೇಷವಾಗಿ ಕಷ್ಟಕರವಾದ ಆರ್ಥಿಕ ಸಮಯಗಳಲ್ಲಿರುವಾಗ. ಆದರೆ ಕ್ರೈಸ್ತರೋಪಾದಿ ಇದನ್ನು ಮಾಡಲು ಹೆಣಗಾಡುವಾಗ, ಅವರು ಅನೇಕ ಪ್ರತಿಫಲಗಳನ್ನು ಪಡೆದುಕೊಳ್ಳುತ್ತಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಸ್ವತಃ “ಎಲ್ಲರಿಗೂ ತಂದೆಯಾಗಿರುವ” ಯೆಹೋವ ದೇವರನ್ನು ತಾವು ಸಂತೋಷಪಡಿಸುತ್ತಿದ್ದೇವೆ ಎಂಬುದನ್ನು ತಿಳಿದಿರುವ ಸಂತೃಪ್ತಿಯೊಂದಿಗೆ, ಅವರು ಕೊಡುವುದರ ಆನಂದವನ್ನು ಅನುಭವಿಸುತ್ತಾರೆ.—ಎಫೆಸ 4:6.
[ಪುಟ 6 ರಲ್ಲಿರುವ ಚೌಕ]
ಪರಾಮರಿಕೆಯನ್ನು ಪಡೆದುಕೊಳ್ಳುವವರಿಗಾಗಿ ಮತ್ತು ಪರಾಮರಿಕೆಮಾಡುವವರಿಗಾಗಿ ದೈವಿಕ ಬುದ್ಧಿವಾದ
ಪ್ರೋತ್ಸಾಹನೀಡುವವರಾಗಿರಿ: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ.”—ರೋಮಾಪುರ 15:2.
ದೃಢಮನಸ್ಸಿನವರಾಗಿರಿ: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.”—ಗಲಾತ್ಯ 6:9.
ದೀನಭಾವದವರಾಗಿರಿ: ‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡಬೇಡಿರಿ, ಆದರೆ ದೀನಭಾವದಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ.’—ಫಿಲಿಪ್ಪಿ 2:3.
ಒಳ್ಳೇದನ್ನು ಮಾಡುವವರಾಗಿರಿ: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” —1 ಕೊರಿಂಥ 10:24.
ಯುಕ್ತಾಯುಕ್ತ ಪರಿಜ್ಞಾನವುಳ್ಳವರಾಗಿರಿ: “ನಿಮ್ಮ ಯುಕ್ತಾಯುಕ್ತ ಪರಿಜ್ಞಾನವು ಎಲ್ಲ ಮನುಷ್ಯರಿಗೆ ಗೊತ್ತಾಗಲಿ.” —ಫಿಲಿಪ್ಪಿ 4:5, NW.
ಸಹಾನುಭೂತಿಯುಳ್ಳವರಾಗಿರಿ: “ಒಬ್ಬರಿಗೊಬ್ಬರು ದಯಾಪರರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ, ಒಬ್ಬರನ್ನೊಬ್ಬರು ಮನಪೂರ್ವಕವಾಗಿ ಕ್ಷಮಿಸುವವರಾಗಿಯೂ ಇರಿ.”—ಎಫೆಸ 4:32, NW.
[ಪುಟ 7 ರಲ್ಲಿರುವ ಚಿತ್ರ]
ಪ್ರಾಯಸ್ಥ ಹಿರಿಯರ ಅನುಭವದಿಂದ ಎಳೆಯ ಹಿರಿಯರು ಪ್ರಯೋಜನ ಪಡೆದುಕೊಳ್ಳಬಲ್ಲರು