ಸುಳ್ಳು ಬೋಧಕರ ಕುರಿತು ಎಚ್ಚರಿಕೆ!
“ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು.”—2 ಪೇತ್ರ 2:1.
1. ಯೂದನು ಯಾವುದರ ಕುರಿತು ಬರೆಯಲು ಉದ್ದೇಶಿಸಿದ್ದನು, ಆದರೆ ಅವನು ತನ್ನ ವಿಷಯವನ್ನು ಬದಲಾಯಿಸಿದ್ದೇಕೆ?
ಎಷ್ಟೊಂದು ಬೆರಗುಗೊಳಿಸುವ ಸಂಗತಿ! ಒಂದನೆಯ ಶತಮಾನದ ಕ್ರೈಸ್ತ ಸಭೆಯಲ್ಲಿ ಸುಳ್ಳು ಬೋಧಕರು! (ಮತ್ತಾಯ 7:15; ಅ. ಕೃತ್ಯಗಳು 20:29, 30) ಯೇಸುವಿನ ಮಲಸೋದರನಾದ ಯೂದನಿಗೆ ಈ ವಿಕಸನದ ಕುರಿತಾದ ಅರಿವಿತ್ತು. ಅವನು ತನ್ನ ಜೊತೆ ವಿಶ್ವಾಸಿಗಳಿಗೆ, “ನಾವು ಏಕಾಭಿಪ್ರಾಯದಿಂದಿರುವ ರಕ್ಷಣೆಯ ಕುರಿತು” ಬರೆಯಲು ಉದ್ದೇಶಿಸಿದ್ದರೂ ಅವನು ವಿವರಿಸಿದ್ದು: “ನಂಬಿಕೆಗಾಗಿ ಕಠಿನ ಹೋರಾಟವನ್ನು ಮಾಡುವಂತೆ ನಿಮಗೆ ಬುದ್ಧಿಹೇಳುತ್ತ ಬರೆಯುವುದು ಆವಶ್ಯಕವೆಂದು ನನಗೆ ತೋರಿತು.” ಯೂದನು ತನ್ನ ಮುಖ್ಯ ವಿಷಯವನ್ನು ಏಕೆ ಬದಲಾಯಿಸಿದನು? ಏಕೆಂದರೆ, “ನಮ್ಮ ದೇವರ ಅಪಾತ್ರ ದಯೆಯನ್ನು ಸಡಿಲು ನಡತೆಗೆ ನೆಪವಾಗಿ ಮಾಡುವ . . . ಕೆಲವು ಜನರು [ಸಭೆಯೊಳಗೆ] ನುಸುಳಿಬಂದಿದ್ದಾರೆ.”—ಯೂದ 3, 4, NW.
2. ಪೇತ್ರನ 2ನೆಯ ಪತ್ರ, 2ನೆಯ ಅಧ್ಯಾಯ ಮತ್ತು ಯೂದನ ಪತ್ರ ಅಷ್ಟು ಹೋಲಿಕೆಯುಳ್ಳವುಗಳೇಕೆ?
2 ಪೇತ್ರನು ತನ್ನ ಎರಡನೆಯ ಪತ್ರವನ್ನು ಬರೆದ ಸ್ವಲ್ಪದರಲ್ಲೇ ಯೂದನು ತನ್ನ ಪತ್ರವನ್ನು ಬರೆದನೆಂದು ವ್ಯಕ್ತವಾಗುತ್ತದೆ. ಯೂದನಿಗೆ ಪೇತ್ರನ ಪತ್ರದ ಪರಿಚಯವಿದ್ದುದು ನಿಸ್ಸಂದೇಹ. ಅವನು ಅನೇಕ ಹೋಲಿಕೆಯಿರುವ ವಿಚಾರಗಳನ್ನು ತನ್ನ ಸ್ವಂತ ಶಕ್ತಿಯುತವಾದ ಬುದ್ಧಿವಾದದ ಪತ್ರದಲ್ಲಿ ವ್ಯಕ್ತಪಡಿಸಿದ್ದು ನಿಶ್ಚಯ. ಆದಕಾರಣ, ನಾವು 2ನೆಯ ಪೇತ್ರ 2ನೆಯ ಅಧ್ಯಾಯವನ್ನು ಪರೀಕ್ಷಿಸುವಾಗ, ಅದು ಯೂದನ ಪತ್ರಕ್ಕೆ ಎಷ್ಟು ಹೋಲಿಕೆಯುಳ್ಳದ್ದಾಗಿದೆ ಎಂದು ಗಮನಿಸುವೆವು.
ಸುಳ್ಳು ಬೋಧನೆಗಳ ದುಷ್ಪರಿಣಾಮಗಳು
3. ಹಿಂದೆ ಸಂಭವಿಸಿದ ಯಾವುದು ಪುನಃ ಸಂಭವಿಸುವುದೆಂದು ಪೇತ್ರನು ಹೇಳುತ್ತಾನೆ?
3 ಪ್ರವಾದನೆಗೆ ಗಮನಕೊಡಲು ತನ್ನ ಸಹೋದರರನ್ನು ಉತ್ತೇಜಿಸಿದ ಮೇಲೆ, ಪೇತ್ರನು ಹೇಳುವುದು: “ಆದಾಗಿಯೂ, [ಪುರಾತನ ಇಸ್ರಾಯೇಲಿನಲ್ಲಿ] ಕೂಡ ಸುಳ್ಳು ಪ್ರವಾದಿಗಳು ಇದ್ದ ಹಾಗೆಯೆ ನಿಮ್ಮ ಮಧ್ಯೆಯೂ ಇರುವರು” (NW). (2 ಪೇತ್ರ 1:14–2:1) ಪುರಾತನ ಕಾಲಗಳ ದೇವಜನರು ನಿಜ ಪ್ರವಾದನೆಯನ್ನು ಪಡೆದರೂ ಸುಳ್ಳು ಪ್ರವಾದಿಗಳ ಭ್ರಷ್ಟ ಬೋಧನೆಗಳೊಂದಿಗೂ ಅವರು ಹೋರಾಡಬೇಕಾಗಿತ್ತು. (ಯೆರೆಮೀಯ 6:13, 14; 28:1-3, 15) ಯೆರೆಮೀಯನು ಬರೆದುದು: “ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಮೋಸದಲ್ಲಿ” ನಡೆಯುತ್ತಾರೆ.—ಯೆರೆಮೀಯ 23:14.
4. ಸುಳ್ಳು ಬೋಧಕರು ಏಕೆ ನಾಶಾರ್ಹರಾಗಿದ್ದಾರೆ?
4 ಸುಳ್ಳು ಬೋಧಕರು ಕ್ರೈಸ್ತ ಸಭೆಯಲ್ಲಿ ಮಾಡಲಿದ್ದ ವಿಷಯಗಳನ್ನು ವರ್ಣಿಸುತ್ತ ಪೇತ್ರನು ಹೇಳುವುದು: “ಈ ವ್ಯಕ್ತಿಗಳೇ ಗುಪ್ತವಾಗಿ ನಾಶಕಾರಕ ಪಂಥಗಳನ್ನು ಒಳತಂದು, ತಮ್ಮನ್ನು ಕೊಂಡುಕೊಂಡ ಧಣಿ [ಯೇಸು ಕ್ರಿಸ್ತ]ಯನ್ನು ಸಹ ನಿರಾಕರಿಸಿ, ತಮ್ಮ ಮೇಲೆ ತ್ವರಿತವಾದ ನಾಶನವನ್ನು ಬರಮಾಡಿಕೊಳ್ಳುವರು.” (2 ಪೇತ್ರ 2:1, NW; ಯೂದ 4) ಪ್ರಥಮ ಶತಮಾನದ ಇಂತಹ ಪಂಥಾಭಿಮಾನದ ಅಂತಿಮ ಪರಿಣಾಮವು ನಮಗೆ ಇಂದು ಕ್ರೈಸ್ತ ಪ್ರಪಂಚವೆಂದು ಜ್ಞಾತವಾಗಿರುವ ವಿಷಯವೇ. ಸುಳ್ಳು ಬೋಧಕರು ನಾಶನಕ್ಕೆ ಏಕೆ ಹೆಚ್ಚು ಅರ್ಹರೆಂಬುದನ್ನು ಪೇತ್ರನು ತೋರಿಸುತ್ತಾನೆ: “ಅನೇಕರು ಅವರ ಸಡಿಲು ನಡತೆಯ ವರ್ತನೆಗಳನ್ನು ಅನುಸರಿಸುವರು ಮತ್ತು ಈ ಕಾರಣಗಳಿಂದ ಸತ್ಯಮಾರ್ಗವು ನಿಂದಿಸಲ್ಪಡುವುದು.”—2 ಪೇತ್ರ 2:2, NW.
5. ಸುಳ್ಳು ಬೋಧಕರು ಯಾವುದಕ್ಕೆ ಹೊಣೆಗಾರರಾಗಿದ್ದರು?
5 ಇದನ್ನು ಯೋಚಿಸಿ! ಸುಳ್ಳು ಬೋಧಕರ ಪ್ರಭಾವದಿಂದಾಗಿ, ಸಭೆಯಲ್ಲಿರುವ ಅನೇಕರು ಸಡಿಲು ನಡತೆಯಲ್ಲಿ ಒಳಗೊಳ್ಳುವರು. “ಸಡಿಲು ನಡತೆ” ಎಂಬುದಾಗಿ ಭಾಷಾಂತರವಾಗಿರುವ ಗ್ರೀಕ್ ಪದವು, ವಿಷಯಲಂಪಟತೆ, ನಿಗ್ರಹದ ಕೊರತೆ, ಅಶ್ಲೀಲತೆ, ಸ್ವೇಚ್ಫಾಚಾರ, ನಾಚಿಕೆಗೆಟ್ಟ ನಡತೆ—ಇವನ್ನು ಸೂಚಿಸುತ್ತದೆ. ಕ್ರೈಸ್ತರು, “ಭೋಗಾಪೇಕ್ಷೆಯ ಮೂಲಕ ಈ ಲೋಕದಲ್ಲಿರುವ ಭ್ರಷ್ಟತೆಯಿಂದ ಪಲಾಯನ” ಮಾಡಿದ್ದರೆಂಬುದನ್ನು ಪೇತ್ರನು ಈ ಹಿಂದೆ ಹೇಳಿದನು. (2 ಪೇತ್ರ 1:4, NW) ಆದರೆ ಕೆಲವರು ಆ ಭ್ರಷ್ಟತೆಗೆ ಹಿಂದಿರುಗಲಿದ್ದರು ಮತ್ತು ಇದಕ್ಕೆ ಬಹ್ವಂಶ ಜವಾಬ್ದಾರರು ಸಭೆಗಳಲ್ಲಿರುವ ಸುಳ್ಳು ಬೋಧಕರೇ! ಹೀಗೆ ಸತ್ಯಮಾರ್ಗವು ಅಪಖ್ಯಾತಿಯನ್ನು ಅನುಭವಿಸಲಿತ್ತು. ಎಂತಹ ಶೋಚನೀಯ ಸ್ಥಿತಿ! ಇದು, ಇಂದು ಎಲ್ಲ ಯೆಹೋವನ ಸಾಕ್ಷಿಗಳು ಒತ್ತಾದ ಗಮನವನ್ನು ಕೊಡಬೇಕಾದ ವಿಷಯವೆಂಬುದು ನಿಶ್ಚಯ. ನಮ್ಮ ನಡತೆಯ ಕಾರಣ ನಾವು ಯೆಹೋವ ದೇವರಿಗೂ ಆತನ ಜನರಿಗೂ ಒಂದೋ ಸ್ತುತಿಯನ್ನು ಇಲ್ಲವೆ ನಿಂದೆಯನ್ನು ತರಬಲ್ಲವೆಂಬುದನ್ನು ನಾವು ಎಂದಿಗೂ ಮರೆಯಬಾರದು.—ಜ್ಞಾನೋಕ್ತಿ 27:11; ರೋಮಾಪುರ 2:24.
ಸುಳ್ಳು ಬೋಧನೆಗಳನ್ನು ಒಳತರುವುದು
6. ಸುಳ್ಳು ಬೋಧಕರನ್ನು ಏನು ಪ್ರೇರಿಸುತ್ತದೆ, ಮತ್ತು ಅವರು ತಾವು ಬಯಸಿದ್ದನ್ನು ಪಡೆದುಕೊಳ್ಳಲು ಹೇಗೆ ಪ್ರಯತ್ನಿಸುತ್ತಾರೆ?
6 ಸುಳ್ಳು ಬೋಧಕರು ತಮ್ಮ ಭ್ರಷ್ಟ ಯೋಚನೆಗಳನ್ನು ಒಳತರುವ ವಿಧವನ್ನು ನಾವು ವಿವೇಕದಿಂದ ಗಮನಕ್ಕೆ ತೆಗೆದುಕೊಳ್ಳುತ್ತೇವೆ. ಅವರು ಗುಪ್ತವಾಗಿ, ಅಥವಾ ಎದ್ದು ಕಾಣದ ಅಥವಾ ಕಪಟೋಪಾಯದ ರೀತಿಯಲ್ಲಿ ಇದನ್ನು ಮಾಡುತ್ತಾರೆಂದು ಪೇತ್ರನು ಮೊದಲಾಗಿ ಹೇಳುತ್ತಾನೆ. ಅವನು ಕೂಡಿಸುವುದು: “ಅವರು ಆಸೆಬಡುಕತನದಿಂದ ನಿಮ್ಮನ್ನು ನಕಲಿ ಮಾತುಗಳಿಂದ ಶೋಷಿಸುವರು” (NW). ಸ್ವಾರ್ಥದ ಆಸೆ ಸುಳ್ಳು ಬೋಧಕರನ್ನು ಪ್ರಚೋದಿಸುತ್ತದೆ. ಇದು ದ ಜೆರೂಸಲೆಮ್ ಬೈಬಲ್ನ ಭಾಷಾಂತರದಲ್ಲಿ ಒತ್ತಿಹೇಳಲ್ಪಡುತ್ತದೆ: “ಅವರು ಆತುರದಿಂದ ನಿಮ್ಮನ್ನು ತಮಗಾಗಿ ವಂಚನೆಯ ಮಾತುಗಳಿಂದ ಕೊಂಡುಕೊಳ್ಳಲು ಬಯಸುವರು.” ತದ್ರೀತಿ, ಜೇಮ್ಸ್ ಮಫಟ್ರ ಭಾಷಾಂತರ ಇಲ್ಲಿ ಹೇಳುವುದು: “ತಮ್ಮ ಅತ್ಯಾಶೆಯಿಂದ ಅವರು ಯುಕ್ತಿಯ ವಾದಗಳಿಂದ ನಿಮ್ಮನ್ನು ಶೋಷಿಸುವರು.” (2 ಪೇತ್ರ 2:1, 3) ಸುಳ್ಳು ಬೋಧಕರ ವಾಗಾಡಂಬರಗಳು ಆತ್ಮಿಕವಾಗಿ ಎಚ್ಚರವಾಗಿರದವನಿಗೆ ಹೊರಗಿನಿಂದ ನ್ಯಾಯಸಮ್ಮತವಾಗಿ ತೋರಬಹುದಾದರೂ ಅವರ ಮಾತುಗಳು ಜನರನ್ನು “ಕೊಂಡುಕೊಳ್ಳಲು,” ವಂಚಕರ ಸ್ವಾರ್ಥೋದ್ದೇಶಗಳನ್ನು ಮಾಡುವಂತೆ ಅವರನ್ನು ಪ್ರೇರಿಸಲು ಜಾಗರೂಕತೆಯಿಂದ ವಿನ್ಯಾಸಿಸಲ್ಪಡುತ್ತವೆ.
7. ಒಂದನೆಯ ಶತಮಾನದಲ್ಲಿ ಯಾವ ತತ್ತ್ವಜ್ಞಾನ ಜನಪ್ರಿಯವಾಯಿತು?
7 ಒಂದನೆಯ ಶತಮಾನದ ಸುಳ್ಳು ಬೋಧಕರು ಆಗ ಪ್ರಸಕ್ತವಾಗಿದ್ದ ಲೌಕಿಕ ಯೋಚನೆಗಳಿಂದ ಪ್ರಭಾವಿತರಾಗಿದ್ದರೆಂಬುದು ನಿಸ್ಸಂಶಯ. ಹೆಚ್ಚುಕಡಮೆ, ಪೇತ್ರನು ಪತ್ರ ಬರೆದ ಸಮಯದಲ್ಲಿ ಅಧ್ಯಾತ್ಮ ರಹಸ್ಯಜ್ಞಾನವಾದ (ನಾಸ್ಟಿಕ್ ವಾದ) ಎಂದು ಕರೆಯಲ್ಪಟ್ಟ ಒಂದು ತತ್ತ್ವಜ್ಞಾನವು ಜನಪ್ರಿಯವಾಗುತ್ತಿತ್ತು. ಈ ನಾಸ್ಟಿಕರು ಭೌತ ದ್ರವ್ಯವೆಲ್ಲ ಕೆಟ್ಟದೆಂದೂ ಆತ್ಮ ಸಂಬಂಧವಾಗಿರುವುದು ಮಾತ್ರ ಒಳ್ಳೆಯದೆಂದೂ ನಂಬಿದರು. ಹೀಗೆ, ಅವರಲ್ಲಿ ಕೆಲವರು, ಭೌತಿಕ ದೇಹದಲ್ಲಿ ಮನುಷ್ಯನು ಏನು ಮಾಡಿದರೂ ಚಿಂತಿಲ್ಲವೆಂದು ಹೇಳಿದರು. ತಕ್ಕ ಕಾಲದಲ್ಲಿ, ಮನುಷ್ಯನಿಗೆ ಈ ಶರೀರವಿರುವುದಿಲ್ಲವೆಂದು ಅವರು ವಾದಿಸಿದರು. ಆದುದರಿಂದ, ಶಾರೀರಿಕ—ಲೈಂಗಿಕ ಸೇರಿ—ಪಾಪಗಳು ಪ್ರಾಮುಖ್ಯವಲ್ಲವೆಂದು ಅವರು ತೀರ್ಮಾನಿಸಿದರು. ಕ್ರೈಸ್ತತ್ವವನ್ನು ಪಾಲಿಸುವವರೆಂದು ಹೇಳಿಕೊಂಡ ಕೆಲವರನ್ನು ಇಂಥ ವೀಕ್ಷಣಗಳು ಪ್ರಭಾವಿಸಿದವೆಂದು ವ್ಯಕ್ತವಾಗುತ್ತದೆ.
8, 9. (ಎ) ಕೆಲವು ಮಂದಿ ಆದಿಕ್ರೈಸ್ತರನ್ನು ಯಾವ ತಿರುಚಿದ್ದ ತರ್ಕವು ಬಾಧಿಸಿತು? (ಬಿ) ಯೂದನಿಗನುಸಾರ, ಸಭೆಗಳಲ್ಲಿದ್ದ ಕೆಲವರು ಏನು ಮಾಡುತ್ತಿದ್ದರು?
8 “ಚರ್ಚಿನಲ್ಲಿ ಕೃಪಾ ತತ್ತ್ವಕ್ಕೆ” ಅಥವಾ “ಅಪಾತ್ರ ದಯೆಗೆ” “ಅಪಾರ್ಥವನ್ನು ಕೊಟ್ಟವರಿದ್ದರು,” ಎಂದು ಒಬ್ಬ ಬೈಬಲ್ ವಿದ್ವಾಂಸನು ಗಮನಿಸುತ್ತಾನೆ. (ಎಫೆಸ 1:5-7) ಅವನಿಗನುಸಾರ, ಕೆಲವರ ವಾದವು ಈ ವಿಧದಲ್ಲಿತ್ತು: “ದೇವರ [ಅಪಾತ್ರ ದಯೆ] ಪ್ರತಿಯೊಂದು ಪಾಪವನ್ನು ಆವರಿಸುವಷ್ಟು ವಿಶಾಲವಾಗಿದೆಯೆಂದು ನೀವು ಹೇಳುತ್ತೀರೊ? . . . ಹಾಗಿದ್ದರೆ ನಾವು ಪಾಪ ಮಾಡುತ್ತ ಹೋಗೋಣ, ಏಕೆಂದರೆ ದೇವರ [ಅಪಾತ್ರ ದಯೆ] ಪ್ರತಿಯೊಂದು ಪಾಪವನ್ನೂ ಅಳಿಸಿಬಿಡಬಲ್ಲದು. ವಾಸ್ತವವೇನಂದರೆ, ನಾವು ಎಷ್ಟು ಹೆಚ್ಚು ಪಾಪಮಾಡುತ್ತೇವೊ ಅಷ್ಟು ಹೆಚ್ಚು, ದೇವರ [ಅಪಾತ್ರ ಕೃಪೆಗೆ] ಕಾರ್ಯನಡೆಸುವ ಅವಕಾಶ ದೊರೆಯುತ್ತದೆ.” ಇದಕ್ಕಿಂತ ಹೆಚ್ಚು ಅಪಾರ್ಥವಿರುವ ತರ್ಕವನ್ನು ಎಂದಾದರೂ ಕೇಳಿದ್ದೀರೊ?
9 ದೇವರ ಕರುಣೆಯ ಕುರಿತ ದುರಾಲೋಚನೆಯನ್ನು ಅಪೊಸ್ತಲ ಪೌಲನು ಹೀಗೆ ಕೇಳಿದಾಗ ಪ್ರತಿಭಟಿಸಿದನು: “ದೇವರ ಕೃಪೆಯು [“ಅಪಾತ್ರ ದಯೆ,” NW] ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ?” ಅವನು ಮತ್ತೂ ಕೇಳಿದ್ದು: “ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪಾ [“ಅಪಾತ್ರ ದಯೆ,” NW]ಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ?” ಪ್ರತಿಯೊಂದು ಪ್ರಶ್ನೆಗೂ ಪೌಲನು, “ಎಂದಿಗೂ ಮಾಡಬಾರದು” ಎಂದು ಶಕ್ತಿಯುತವಾಗಿ ಉತ್ತರಿಸಿದನು. (ರೋಮಾಪುರ 6:1, 2, 15) ಯೂದನು ಅವಲೋಕಿಸುವಂತೆ, ಕೆಲವರು “ನಮ್ಮ ದೇವರ ಅಪಾತ್ರ ದಯೆಯನ್ನು ಸಡಿಲು ನಡತೆಗೆ ನೆಪವಾಗಿ” ಮಾಡುತ್ತಿದ್ದರೆಂಬುದು ಸ್ಪಷ್ಟ. ಆದರೂ, ಇಂತಹವರಿಗೆ ‘ನಾಶನವು ನಿದ್ರೆಮಾಡುತ್ತಿಲ್ಲ’ (NW) ಎಂದು ಪೇತ್ರನು ಗಮನಿಸುತ್ತಾನೆ.—ಯೂದ 4; 2 ಪೇತ್ರ 2:3.
ಎಚ್ಚರಿಕೆಯ ದೃಷ್ಟಾಂತಗಳು
10, 11. ಪೇತ್ರನು ಯಾವ ಮೂರು ಎಚ್ಚರಿಕೆಯ ದೃಷ್ಟಾಂತಗಳನ್ನು ಒದಗಿಸುತ್ತಾನೆ?
10 ಉದ್ದೇಶಪೂರ್ವಕವಾಗಿ ತಪ್ಪುಮಾಡುವವರ ವಿರುದ್ಧ ದೇವರು ಕ್ರಮ ಕೈಕೊಳ್ಳುವನೆಂಬುದನ್ನು ಒತ್ತಿಹೇಳಲು, ಪೇತ್ರನು ಶಾಸ್ತ್ರಗಳಿಂದ ಎಚ್ಚರಿಕೆಯ ಮೂರು ದೃಷ್ಟಾಂತಗಳನ್ನು ಒದಗಿಸುತ್ತಾನೆ. ಮೊದಲನೆಯದಾಗಿ, ಅವನು ಬರೆಯುವುದು: “ಪಾಪಮಾಡಿದ ದೇವದೂತರನ್ನು ಶಿಕ್ಷಿಸುವುದನ್ನು ದೇವರು ತಡೆಹಿಡಿಯಲಿಲ್ಲ.” ಇವರು “ತಮ್ಮ ಮೂಲಸ್ಥಾನವನ್ನು ಇಟ್ಟುಕೊಳ್ಳದೆ” ಸ್ವರ್ಗದ “ತಮ್ಮ ಯೋಗ್ಯ ನಿವಾಸ ಸ್ಥಾನಗಳನ್ನು ತೊರೆದರು,” ಎಂದು ಯೂದನು ಹೇಳುತ್ತಾನೆ. ಜಲಪ್ರಳಯಕ್ಕೆ ಮುನ್ನ ಅವರು ಭೂಮಿಗೆ ಬಂದು, ಮನುಷ್ಯಪುತ್ರಿಯರೊಂದಿಗೆ ಲೈಂಗಿಕ ಸಂಬಂಧಗಳನ್ನು ಅನುಭವಿಸಲು ಮಾಂಸಿಕ ಶರೀರಗಳನ್ನು ಧರಿಸಿಕೊಂಡರು. ಅವರ ಅಯೋಗ್ಯವಾದ ಅಸ್ವಾಭಾವಿಕ ನಡತೆಗೆ ಶಿಕ್ಷೆಯಾಗಿ, ಅವರನ್ನು “ಟಾರ್ಟರಸ್”ಗೆ ದೊಬ್ಬಲಾಯಿತು, ಅಥವಾ, ಯೂದನ ವೃತ್ತಾಂತವು ಹೇಳುವಂತೆ, ಅವರನ್ನು “ನಿತ್ಯ ಬೇಡಿಗಳಿಂದ ಗಾಢವಾದ ಕತ್ತಲೆಯಲ್ಲಿ ಮಹಾದಿನದ ತೀರ್ಪಿಗಾಗಿ ಕಾದಿರಿಸಲಾಗಿದೆ.”—2 ಪೇತ್ರ 2:4, NW; ಯೂದ 6, NW; ಆದಿಕಾಂಡ 6:1-3.
11 ಮುಂದೆ, ಪೇತ್ರನು ನೋಹನ ದಿನದ ಜನರನ್ನು ಸೂಚಿಸಿ ಮಾತಾಡುತ್ತಾನೆ. (ಆದಿಕಾಂಡ 7:17-24) ನೋಹನ ಕಾಲದಲ್ಲಿ ದೇವರು, “ಭಕ್ತಿಹೀನ ಜನರ ಲೋಕದ ಮೇಲೆ ಜಲಪ್ರಳಯವನ್ನು ತಂದಾಗ . . . ಒಂದು ಪುರಾತನ ಲೋಕಕ್ಕೆ ಶಿಕ್ಷೆ ವಿಧಿಸುವುದನ್ನು ತಡೆಹಿಡಿಯ”ಲಿಲ್ಲ ಎಂದು ಅವನು ಹೇಳುತ್ತಾನೆ. ದೇವರು “ಸೋದೋಮ್ ಮತ್ತು ಗೊಮೋರ ನಗರಗಳನ್ನು ಬೂದಿಯಾಗಿಸುವ ಮೂಲಕ” “ಭಕ್ತಿಹೀನ ವ್ಯಕ್ತಿಗಳಿಗೆ ಬರಲಿರುವ ವಿಷಯಗಳ ಸಂಬಂಧದಲ್ಲಿ ಒಂದು ನಮೂನೆಯನ್ನು” ಇಟ್ಟನು, ಎಂದು ಪೇತ್ರನು ಕೊನೆಯದಾಗಿ ಬರೆಯುತ್ತಾನೆ. ಯೂದನು ಹೆಚ್ಚಿಗೆಯ ಮಾಹಿತಿಯನ್ನು ಕೊಡುತ್ತ, ಆ ವ್ಯಕ್ತಿಗಳು “ವಿಪರೀತವಾಗಿ ಹಾದರವನ್ನು ಮಾಡುತ್ತ, ಅಸ್ವಾಭಾವಿಕವಾದ ಉಪಯೋಗಕ್ಕಾಗಿ ದೈಹಿಕವಾದುದನ್ನು ಬೆನ್ನಟ್ಟಿದರು.” (2 ಪೇತ್ರ 2:5, 6, NW; ಯೂದ 7, NW) ಪುರುಷರು ಸ್ತ್ರೀಯರೊಂದಿಗೆ ನಿಷಿದ್ಧ ಲೈಂಗಿಕ ಸಂಬಂಧವಿದ್ದವರಾಗಿದ್ದುದು ಮಾತ್ರವಲ್ಲ, ಬೇರೆ ಪುರುಷರ ದೇಹಗಳಿಗೂ—ಪಶುಗಳ ದೇಹಗಳಿಗೂ ಇದ್ದಿರಬಹುದು—ಕಾಮಾಸಕ್ತಿಯನ್ನು ತೋರಿಸಿದರು.—ಆದಿಕಾಂಡ 19:4, 5; ಯಾಜಕಕಾಂಡ 18:22-25.
12. ಪೇತ್ರನಿಗನುಸಾರ, ನೀತಿಯ ನಡತೆಗೆ ಹೇಗೆ ಪ್ರತಿಫಲ ದೊರೆಯುತ್ತದೆ?
12 ಆದರೂ, ಅದೇ ಸಮಯದಲ್ಲಿ, ಯೆಹೋವನು ತನ್ನನ್ನು ನಂಬಿಗಸ್ತಿಕೆಯಿಂದ ಸೇವಿಸುವವರಿಗೆ ಪ್ರತಿಫಲವನ್ನು ಕೊಡುತ್ತಾನೆಂದೂ ಪೇತ್ರನು ಗಮನಿಸುತ್ತಾನೆ. ಉದಾಹರಣೆಗೆ, ದೇವರು ಜಲಪ್ರಳಯವನ್ನು ತಂದಾಗ, ಹೇಗೆ “ನೀತಿಯನ್ನು ಸಾರುವವನಾಗಿದ್ದ ನೋಹನನ್ನು ಇತರ ಏಳು ಮಂದಿಯೊಂದಿಗೆ ಸುರಕ್ಷಿತವಾಗಿ ಉಳಿಸಿದನು” ಎಂಬುದನ್ನು ಹೇಳುತ್ತಾನೆ. ಸೋದೋಮಿನ ಸಮಯದಲ್ಲಿ “ನೀತಿವಂತನಾದ ಲೋಟ”ನನ್ನು ಯೆಹೋವನು ವಿಮೋಚಿಸಿದ್ದರ ಕುರಿತು ಸಹ ಹೇಳುತ್ತ, ಮುಗಿಸುವುದು: “ದಿವ್ಯ ಭಕ್ತಿಯ ಜನರನ್ನು ಪರೀಕ್ಷೆಯಿಂದ ವಿಮೋಚಿಸುವುದು ಹೇಗೆಂದೂ, ಆದರೆ ಅನೀತಿವಂತರಾದ ಜನರು ಛೇದಿಸಲ್ಪಡಲಿಕ್ಕಾಗಿ, ನ್ಯಾಯತೀರ್ಪಿನ ದಿನಕ್ಕಾಗಿ ಕಾದಿರಿಸುವುದು ಹೇಗೆಂದೂ ಯೆಹೋವನಿಗೆ ಗೊತ್ತು.”—2 ಪೇತ್ರ 2:5, 7-9, NW.
ಶಿಕ್ಷಾರ್ಹವಾದ ಕೃತ್ಯಗಳು
13. ವಿಶೇಷವಾಗಿ, ಯಾರನ್ನು ತೀರ್ಪಿಗಾಗಿ ಕಾದಿರಿಸಲಾಗುತ್ತದೆ, ಮತ್ತು ಅವರು ಯಾವ ಸ್ವಪ್ನಗಳಲ್ಲಿ ಲೋಲುಪರಾಗುತ್ತಾರೆಂದು ವ್ಯಕ್ತವಾಗುತ್ತದೆ?
13 ದೇವರ ತೀರ್ಪಿಗೆ ವಿಶೇಷವಾಗಿ ಕಾದಿರಿಸಲ್ಪಟ್ಟವರನ್ನು ಪೇತ್ರನು ಗುರುತಿಸುತ್ತಾನೆ: “ಕೆಡಿಸುವ ಆಸೆಯಿಂದ ದೈಹಿಕವಾದುದನ್ನು ಬೆನ್ನಟ್ಟುವವರು ಮತ್ತು ಪ್ರಭುತ್ವವನ್ನು ತಿರಸ್ಕಾರದಿಂದ ನೋಡುವವರು.” ಪೇತ್ರನು ಈ ಕೆಳಗಿನಂತೆ ಹೇಳುವಾಗ, ನಾವು ಅವನ ಯುಕ್ತ ಕೋಪವನ್ನು ಹೆಚ್ಚುಕಡಮೆ ಭಾವಿಸಿಕೊಳ್ಳಸಾಧ್ಯವಿದೆ: “ನಿರ್ಭೀತರೂ ಹಠಮಾರಿಗಳೂ ಆದ ಅವರು ಮಹಿಮಾನ್ವಿತರನ್ನು ನೋಡಿ ಕಂಪಿಸದೆ, ದೂಷಿಸಿ ಮಾತಾಡುತ್ತಾರೆ.” ಯೂದನು ಬರೆಯುವುದು: “ಈ ಜನರು ಸ್ವಪ್ನಗಳಲ್ಲಿ ಆಸಕ್ತರಾಗಿದ್ದು, ಶರೀರಗಳನ್ನು ಕೆಡಿಸಿ, . . . ಮಹಿಮಾನ್ವಿತರನ್ನು ದೂಷಿಸಿ ಮಾತಾಡುತ್ತಾರೆ.” (2 ಪೇತ್ರ 2:10, NW; ಯೂದ 8, NW) ಅವರ ಸ್ವಪ್ನಗಳಲ್ಲಿ, ಅವರ ಅನೈತಿಕವಾದ ಲೈಂಗಿಕ ತೃಪ್ತಿಪಡಿಸುವಿಕೆಯ ಬೆನ್ನಟ್ಟುವಿಕೆಯನ್ನು ಪ್ರೋತ್ಸಾಹಿಸುವ ಅಶುದ್ಧವಾದ ಲೈಂಗಿಕ ಮನಶ್ಚಿತ್ರಗಳು ಒಳಗೊಂಡಿರಬಹುದು. ಆದರೆ ಅವರು “ಪ್ರಭುತ್ವವನ್ನು ತಿರಸ್ಕಾರದಿಂದ ನೋಡಿ” “ಮಹಿಮಾನ್ವಿತರನ್ನು ದೂಷಿಸಿ ಮಾತಾಡುವುದು” ಯಾವ ಅರ್ಥದಲ್ಲಿ?
14. ಸುಳ್ಳು ಬೋಧಕರು “ಪ್ರಭುತ್ವವನ್ನು ತಿರಸ್ಕಾರದಿಂದ” ನೋಡುವುದೂ “ಮಹಿಮಾನ್ವಿತರನ್ನು ದೂಷಿಸಿ” ಮಾತಾಡುವುದೂ ಯಾವ ಅರ್ಥದಲ್ಲಿ?
14 ಅವರು ದೈವಿಕವಾಗಿ ನಿಯಮಿತ ಅಧಿಕಾರವನ್ನು ತುಚ್ಫವಾಗಿ ನೋಡುವ ಅರ್ಥದಲ್ಲಿ ಹಾಗೆ ಮಾಡುತ್ತಾರೆ. ಕ್ರೈಸ್ತ ಹಿರಿಯರು ಮಹಿಮಾನ್ವಿತರಾದ ಯೆಹೋವ ದೇವರನ್ನೂ ಆತನ ಪುತ್ರನನ್ನೂ ಪ್ರತಿನಿಧೀಕರಿಸುತ್ತಾರೆ ಮತ್ತು ತತ್ಪರಿಣಾಮವಾಗಿ, ಅವರಿಗೆ ಸ್ವಲ್ಪ ಮಟ್ಟಿಗಿನ ಮಹಿಮೆಯು ಅನುಗ್ರಹಿಸಲ್ಪಡುತ್ತದೆ. ನಿಜ, ಪೇತ್ರನು ತಾನೇ ಮಾಡಿದಂತೆ ಅವರೂ ತಪ್ಪುಗಳನ್ನು ಮಾಡುತ್ತಾರೆ, ಆದರೆ ಸಭೆಯ ಸದಸ್ಯರು ಅಂತಹ ಮಹಿಮಾನ್ವಿತರಿಗೆ ಅಧೀನರಾಗಿರುವಂತೆ ಶಾಸ್ತ್ರಗಳು ಅವರನ್ನು ಪ್ರೋತ್ಸಾಹಿಸುತ್ತವೆ. (ಇಬ್ರಿಯ 13:17) ಅವರ ನ್ಯೂನತೆಗಳು ಅವರನ್ನು ದೂಷಿಸಿ ಮಾತಾಡಲು ಕಾರಣವನ್ನು ಕೊಡುವುದಿಲ್ಲ. ದೇವದೂತರು “[ಸುಳ್ಳು ಬೋಧಕರ ವಿರುದ್ಧ] ದೂಷಣೆಯ ಮಾತುಗಳಲ್ಲಿ ಆಪಾದನೆಯನ್ನು ತರುವುದಿಲ್ಲ” ಎಂದು ಪೇತ್ರನು ಹೇಳುತ್ತಾನೆ. ಆಪಾದನೆಗೆ ಅವರು ಪೂರ್ತಿಯಾಗಿ ಅರ್ಹರಾಗಿದ್ದರೂ ಅವರು ಹಾಗೆ ಮಾಡುವುದಿಲ್ಲ. ಪೇತ್ರನು ಮುಂದುವರಿಸುವುದು: “ಆದರೆ ಈ ಪುರುಷರು, ಹಿಡಿಯಲ್ಪಟ್ಟು ಕೊಲ್ಲಲ್ಪಡಲು ಸ್ವಾಭಾವಿಕವಾಗಿ ಹುಟ್ಟಿರುವ ವಿವೇಚನೆಯಿಲ್ಲದ ಮೃಗಗಳಂತೆ, ಅವರಿಗೆ ಅರಿವಿಲ್ಲದ ಮತ್ತು ದೂಷಣಾತ್ಮಕವಾಗಿ ಮಾತಾಡುವ ವಿಷಯಗಳಲ್ಲಿ, ನಾಶನವನ್ನೂ ಅನುಭವಿಸುವರು” (NW).—2 ಪೇತ್ರ 2:10-13.
“ನಿಮ್ಮ ಸಂಗಡ . . . ಔತಣಮಾಡುತ್ತಿರುವಾಗ”
15. ಸುಳ್ಳು ಬೋಧಕರ ವಿಧಾನಗಳಾವುವು, ಮತ್ತು ತಮ್ಮ ಕೆಡಿಸುವಿಕೆಗಳನ್ನು ಅವರು ಎಲ್ಲಿ ಬೆನ್ನಟ್ಟುತ್ತಾರೆ?
15 ಈ ಭ್ರಷ್ಟ ಪುರುಷರು, “ಹಗಲಿನ ಭೋಗಾಸಕ್ತಿಯ ಜೀವನವನ್ನು ಸುಖಾನುಭವವೆಂದು ಎಣಿಸಿ”ದರೂ, ಅವರು “ಕಲೆಗಳೂ ಕುಂದುಗಳೂ” ಆಗಿರುವುದಾದರೂ, ಅವರು ವಕ್ರಮಾರ್ಗಿಗಳೂ ಆಗಿದ್ದಾರೆ. ಪೇತ್ರನು ಈ ಹಿಂದೆ ಗಮನಿಸಿದಂತೆ, ಅವರು “ಗುಪ್ತವಾಗಿ,” “ನಕಲಿ ಮಾತುಗಳನ್ನು” ಉಪಯೋಗಿಸಿ ಕೆಲಸ ಮಾಡುತ್ತಾರೆ. (2 ಪೇತ್ರ 2:1, 3, 13, NW) ಹೀಗೆ ಅವರು ಬಾಹ್ಯವಾಗಿ, ಹಿರಿಯರು ದೇವರ ನೈತಿಕ ಮಟ್ಟಗಳನ್ನು ಎತ್ತಿಹಿಡಿಯಲು ಮಾಡುವ ಪ್ರಯತ್ನಗಳಿಗೆ ಸವಾಲೊಡ್ಡಲಿಕ್ಕಿಲ್ಲ ಇಲ್ಲವೆ ತಮ್ಮ ಸ್ವಂತ ಲೈಂಗಿಕ ತೃಪ್ತಿಯನ್ನು ಬೆನ್ನಟ್ಟಲಿಕ್ಕಿಲ್ಲ. ಬದಲಾಗಿ, ಅವರು “ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ, ತಮ್ಮ ವಂಚನೆಯ ಬೋಧನೆಗಳಲ್ಲಿ ನಿಯಂತ್ರಣವಿಲ್ಲದ ಹರ್ಷದಲ್ಲಿ” ಆಸಕ್ತರಾಗಿರುತ್ತಾರೆ. ಮತ್ತು ಯೂದನು ಬರೆಯುವುದು: “ಇವರು ನಿಮ್ಮ ಪ್ರೇಮಭೋಜನಗಳಲ್ಲಿ ನೀರಿನ ಕೆಳಗೆ ಅಡಗಿರುವ ಬಂಡೆಗಳು.” (ಯೂದ 12, NW) ಹೌದು, ನೀರಿನ ಕೆಳಗಿರುವ ಚೂಪುಚೂಪಾಗಿರುವ ಬಂಡೆಗಳು ಒಂದು ದೋಣಿಯ ಅಡಿಯನ್ನು ಸೀಳಿ, ಬೇಹುಷಾರಿನ ನಾವಿಕರು ಮುಳುಗಿ ಸಾಯುವಂತೆ ಮಾಡಬಹುದಾಗಿರುವಂತೆಯೇ, ಸುಳ್ಳು ಬೋಧಕರು “ಪ್ರೇಮ ಭೋಜನಗಳ” ಸಮಯದಲ್ಲಿ ಕಪಟಾಚಾರದಿಂದ, ತಮಗೆ ಯಾರ ಮೇಲೆ ಪ್ರೀತಿಯಿದೆಯೆಂದು ನಟಿಸಿದರೊ ಅಂತಹ ಅಜಾಗರೂಕ ವ್ಯಕ್ತಿಗಳನ್ನು ಭ್ರಷ್ಟಗೊಳಿಸುತ್ತಿದ್ದರು.
16. (ಎ) “ಪ್ರೇಮ ಭೋಜನಗಳು” ಏನಾಗಿದ್ದವು, ಮತ್ತು ಸದೃಶವಾಗಿರುವ ಯಾವ ಹಿನ್ನೆಲೆಗಳಲ್ಲಿ ಅನೈತಿಕರು ಇಂದು ಕಾರ್ಯನಡೆಸಬಹುದು? (ಬಿ) ಸುಳ್ಳು ಬೋಧಕರು ತಮ್ಮ ಗಮನಗಳನ್ನು ಯಾರ ಮೇಲೆ ಕೇಂದ್ರೀಕರಿಸುತ್ತಾರೆ, ಮತ್ತು ಇಂತಹ ವ್ಯಕ್ತಿಗಳು ಏನು ಮಾಡಬೇಕು?
16 ಈ “ಪ್ರೇಮ ಭೋಜನಗಳು,” ಪ್ರಥಮ ಶತಮಾನದ ಕ್ರೈಸ್ತರು ಆಹಾರ ಮತ್ತು ಸಹವಾಸವನ್ನು ಅನುಭವಿಸಲು ಕೂಡಿಬಂದಾಗಿನ ಸಾಮಾಜಿಕ ಸಂದರ್ಭಗಳಾಗಿದ್ದವೆಂಬುದು ವ್ಯಕ್ತ. ಯೆಹೋವನ ಸಾಕ್ಷಿಗಳು ಇಂದು ಸಹ ಕೆಲವು ಸಲ ಸಾಮಾಜಿಕವಾಗಿ, ಪ್ರಾಯಶಃ ವಿವಾಹ ಸತ್ಕಾರ ಕೂಟಗಳು, ಪಿಕ್ನಿಕ್ಗಳು ಅಥವಾ ಒಂದು ಸಂಧ್ಯಾ ಒಡನಾಟದಲ್ಲಿ ಕೂಡಿಬರುತ್ತಾರೆ. ಭ್ರಷ್ಟರು ಇಂತಹ ಸಂದರ್ಭಗಳನ್ನು ತಮ್ಮ ಆಹುತಿಗಳನ್ನು ದುಷ್ಪ್ರೇರಣೆಗೊಳಪಡಿಸುವಂತೆ ಹೇಗೆ ಉಪಯೋಗಿಸಸಾಧ್ಯವಿದೆ? ಪೇತ್ರನು ಬರೆಯುವುದು: “ಅವರು ವ್ಯಭಿಚಾರ ತುಂಬಿದ ಕಣ್ಣುಗಳುಳ್ಳವರಾಗಿದ್ದು . . . ಚಪಲಚಿತ್ತರನ್ನು ಕೆಡಿಸುತ್ತಾರೆ.” ಅವರು ತಮ್ಮ “ದುರಾಶೆ ಶಿಕ್ಷಿತ ಹೃದಯವನ್ನು” ಸತ್ಯವನ್ನು ಪೂರ್ತಿಯಾಗಿ ತಮ್ಮದಾಗಿ ಮಾಡಿಕೊಳ್ಳದಿರುವ ಆತ್ಮಿಕವಾಗಿ ಚಪಲಚಿತ್ತರಾಗಿರುವವರ ಮೇಲೆ ಕೇಂದ್ರೀಕರಿಸುತ್ತಾರೆ. ಆದಕಾರಣ ಪೇತ್ರನ ದಿನದಲ್ಲಿ ಏನು ಸಂಭವಿಸಿತೊ ಅದರಿಂದ ಮುನ್ನೆಚ್ಚರಿಕೆ ಪಡೆದುಕೊಳ್ಳಿರಿ! ಕಲುಷಿತವಾದ ಒಲಿಸಿಕೊಳ್ಳುವ ಪ್ರಯತ್ನವನ್ನು ಪ್ರತಿಭಟಿಸಿ, ಇಂತಹ ಅನೈತಿಕ ಸ್ನೇಹ ಪ್ರಯತ್ನಗಳನ್ನು ಮಾಡುವವನ ಮೋಹಕ ಗುಣ ಅಥವಾ ಶಾರೀರಿಕ ಆಕರ್ಷಣೆಯಿಂದ ಮೋಸಹೋಗಬೇಡಿರಿ!—2 ಪೇತ್ರ 2:14, NW.
“ಬಿಳಾಮನ ಮಾರ್ಗ”
17. “ಬಿಳಾಮನ ಮಾರ್ಗ” ಏನಾಗಿತ್ತು, ಮತ್ತು ಅದು 24,000 ಮಂದಿ ಇಸ್ರಾಯೇಲ್ಯರನ್ನು ಹೇಗೆ ಬಾಧಿಸಿತು?
17 ಈ “ಶಾಪಗ್ರಸ್ತರು” ಕೆಲವು ಸಮಯದಿಂದ ಸತ್ಯವನ್ನು ತಿಳಿದವರಾಗಿದ್ದಾರೆ. ಅವರು ಸಭೆಯಲ್ಲಿ ಇನ್ನೂ ಕ್ರಿಯಾಶೀಲರಾಗಿ ಕಂಡುಬರಬಹುದು. ಆದರೆ ಪೇತ್ರನು ಹೇಳುವುದು: “ನೆಟ್ಟಗಿರುವ ಮಾರ್ಗವನ್ನು ಬಿಟ್ಟಿರುವ ಕಾರಣ ಅವರು ತಪ್ಪುದಾರಿಗೆಳೆಯಲ್ಪಟ್ಟಿದ್ದಾರೆ. ಅವರು ತಪ್ಪುಕೃತ್ಯದ ಪ್ರತಿಫಲವನ್ನು ಪ್ರೀತಿಸಿದ ಬೆಯೋರನ ಮಗನಾದ ಬಿಳಾಮನನ್ನು ಅನುಸರಿಸಿದ್ದಾರೆ.” (2 ಪೇತ್ರ 2:14, 15, NW) ಪ್ರವಾದಿ ಬಿಳಾಮನ ಮಾರ್ಗವು, ತನ್ನ ಸ್ವಂತ ಲಾಭಕ್ಕಾಗಿ ಅನೈತಿಕ ರೀತಿಯಲ್ಲಿ ಕೆಡಿಸುವ ಮಾರ್ಗದ ಸಲಹೆಯನ್ನು ನೀಡಿದ್ದಾಗಿತ್ತು. ಇಸ್ರಾಯೇಲ್ಯರು ಜಾರತ್ವ ಮಾಡುವಂತೆ ಪ್ರೇರಿಸಲ್ಪಡುವಲ್ಲಿ ದೇವರು ಅವರನ್ನು ಶಪಿಸುವನೆಂದು ಅವನು ಮೋವಾಬ್ಯ ರಾಜನಾದ ಬಾಲಾಕನಿಗೆ ಹೇಳಿದನು. ಇದರ ಪರಿಣಾಮವಾಗಿ, ದೇವಜನರಲ್ಲಿ ಅನೇಕರು ಮೋವಾಬ್ಯ ಸ್ತ್ರೀಯರಿಂದ ದುಷ್ಪ್ರೇರಣೆಗೊಳಗಾದರು ಮತ್ತು ಅವರ ಅನೈತಿಕ ನಡತೆಗಾಗಿ 24,000 ಮಂದಿ ಕೊಲ್ಲಲ್ಪಟ್ಟರು.—ಅರಣ್ಯಕಾಂಡ 25:1-9; 31:15, 16; ಪ್ರಕಟನೆ 2:14.
18. ಬಿಳಾಮನು ಎಷ್ಟು ಪಟ್ಟುಹಿಡಿದು ನಡೆಯುವವನಾಗಿದ್ದನು, ಮತ್ತು ಪರಿಣಾಮವು ಸುಳ್ಳು ಬೋಧಕರಿಗೆ ಏನನ್ನು ಸೂಚಿಸುತ್ತದೆ?
18 ತನ್ನ ಕತ್ತೆ ಮಾತಾಡಿದಾಗ ಬಿಳಾಮನು ತಡೆಯಲ್ಪಟ್ಟನೆಂದು ಪೇತ್ರನು ಗಮನಿಸುತ್ತಾನೆ. ಆದರೂ ಬಿಳಾಮನು “ತಪ್ಪುಕೃತ್ಯಕ್ಕಾಗಿ ಪ್ರತಿಫಲವನ್ನು” ಎಷ್ಟು ಪ್ರೀತಿಸಿದನೆಂದರೆ ಹಾಗೆ ಸಂಭವಿಸಿದಾಗಲೂ ಅವನು ತನ್ನ “ಹುಚ್ಚುಮಾರ್ಗ”ವನ್ನು ಬಿಡಲಿಲ್ಲ. (2 ಪೇತ್ರ 2:15, 16, NW) ಎಂತಹ ದುಷ್ಟತನ! ಅನೈತಿಕ ಕೃತ್ಯವನ್ನು ಮಾಡಲು ಪ್ರೇರಿಸುವ ಮೂಲಕ ದೇವಜನರನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುವ ಬಿಳಾಮನಂತಹ ಯಾವನಿಗೂ ಅಯ್ಯೋ! ಬಿಳಾಮನು ತನ್ನ ಕೆಟ್ಟತನಕ್ಕಾಗಿ ಸತ್ತನು. ಇದು ಅವನ ಮಾರ್ಗವನ್ನು ಅನುಸರಿಸುವವರಿಗೆ ಏನು ಸಂಭವಿಸಲಿದೆಯೊ ಅದರ ಪೂರ್ವ ಪ್ರದರ್ಶನವಾಗಿದೆ.—ಅರಣ್ಯಕಾಂಡ 31:8.
ಅವರ ಪೈಶಾಚಿಕ ಕೆಡಿಸುವಿಕೆಗಳು
19, 20. (ಎ) ಬಿಳಾಮಸದೃಶರನ್ನು ಯಾವುದಕ್ಕೆ ಹೋಲಿಸಲಾಗಿದೆ, ಮತ್ತು ಏಕೆ? (ಬಿ) ಅವರು ಯಾರನ್ನು ಮರುಳುಗೊಳಿಸುತ್ತಾರೆ, ಮತ್ತು ಹೇಗೆ? (ಸಿ) ಅವರ ಕೆಡಿಸೋಣಗಳು ಪೈಶಾಚಿಕವೆಂದು ನಾವೇಕೆ ಹೇಳಬಲ್ಲೆವು, ಮತ್ತು ನಾವು ನಮ್ಮನ್ನು ಮತ್ತು ಇತರರನ್ನು ಅವರಿಂದ ಹೇಗೆ ಕಾಪಾಡಬಲ್ಲೆವು?
19 ಬಿಳಾಮಸದೃಶರನ್ನು ವರ್ಣಿಸುತ್ತ ಪೇತ್ರನು ಬರೆಯುವುದು: “ಇವರು ನೀರಿಲ್ಲದ ಒರತೆಗಳು [ಅಥವಾ, ಬಾವಿಗಳು] ಮತ್ತು ಬಿರುಸಾದ ಚಂಡಮಾರುತದಿಂದ ಅಟ್ಟಲ್ಪಡುವ ಇಬ್ಬನಿಗಳು [ಅಥವಾ, ಮೋಡಗಳು].” ಮರುಭೂಮಿಯಲ್ಲಿ ಬಾಯಾರಿದ ಪ್ರಯಾಣಿಕನಿಗೆ, ಒಣಗಿದ ಬಾವಿಯು ಮರಣವನ್ನು ಅರ್ಥೈಸಬಹುದು. ಆದುದರಿಂದ ಇಂತಹ ಸಂಗತಿಗಳನ್ನು ಹೋಲುವವರಿಗೆ ‘ಕಾರ್ಗತ್ತಲೆಯು ಕಾದಿರಿಸಲ್ಪಟ್ಟಿರುವುದು’ ಆಶ್ಚರ್ಯವಲ್ಲ! ಪೇತ್ರನು ಮುಂದುವರಿಸುವುದು: “ಏಕೆಂದರೆ ಅವರು ಪ್ರಯೋಜನವಿಲ್ಲದ ವಾಗಾಡಂಬರದ ಮಾತುಗಳನ್ನಾಡಿ, ಶರೀರದಾಶೆ ಮತ್ತು ಸಡಿಲು ಚಾಳಿಗಳ ಮೂಲಕ, ತಪ್ಪಾಗಿ ವರ್ತಿಸುವ ಜನರಿಂದ ಆಗ ತಾನೇ ಓಡಿಹೋಗುತ್ತಿರುವವರನ್ನು ಮರುಳುಮಾಡುತ್ತಾರೆ.” ಅವರು “ತಾವೇ ಭ್ರಷ್ಟತೆಯ ದಾಸರಾಗಿರುವಾಗ” ಅನನುಭವಿಗಳಿಗೆ “ಸ್ವಾತಂತ್ರ್ಯವನ್ನು ವಾಗ್ದಾನಮಾಡುತ್ತ” ಅವರನ್ನು ಕೆಡಿಸುತ್ತಾರೆಂದು ಪೇತ್ರನು ಹೇಳುತ್ತಾನೆ.—2 ಪೇತ್ರ 2:17-19, NW; ಗಲಾತ್ಯ 5:13.
20 ಇಂತಹ ಭ್ರಷ್ಟ ಬೋಧಕರ ಕೆಡಿಸುವಿಕೆಗಳು ಪೈಶಾಚಿಕವಾಗಿವೆ. ಅವರು ಉದಾಹರಣೆಗೆ, ‘ನಾವು ಬಲಹೀನರೆಂದೂ ಕಾಮಾಧೀನರೆಂದೂ ದೇವರಿಗೆ ಗೊತ್ತಿದೆ. ಆದಕಾರಣ ನಾವು ಲೋಲುಪರಾಗಿ ಲೈಂಗಿಕ ಬಯಕೆಗಳನ್ನು ತಣಿಸುವಲ್ಲಿ ದೇವರು ಕರುಣೆ ತೋರಿಸುವನು. ನಾವು ಪಾಪಗಳನ್ನು ಅರಿಕೆ ಮಾಡುವಲ್ಲಿ, ನಾವು ಸತ್ಯಕ್ಕೆ ಮೊದಲು ಬಂದಾಗ ಹೇಗಿತ್ತೊ ಹಾಗೆಯೇ ನಮ್ಮನ್ನು ಕ್ಷಮಿಸುವನು,’ ಎಂದು ಹೇಳಬಹುದು. ಅವಳು ಅಪಾಯದ ಭಯವಿಲ್ಲದೆ ಪಾಪಮಾಡಸಾಧ್ಯವಿದೆಯೆಂದು ವಾಗ್ದಾನಿಸುತ್ತಾ, ಪಿಶಾಚನೂ ಹವ್ವಳೊಂದಿಗೆ ಸುಮಾರಾಗಿ ಅದಕ್ಕೆ ಹೋಲಿಕೆಯಾಗಿರುವ ಪ್ರಸ್ತಾವನೆಯನ್ನು ಮಾಡಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಹವ್ವಳ ವಿದ್ಯಮಾನದಲ್ಲಿ, ದೇವರ ವಿರುದ್ಧ ಪಾಪವು ಆಕೆಗೆ ಜ್ಞಾನೋದಯ ಮತ್ತು ಸ್ವಾತಂತ್ರ್ಯವನ್ನು ನೀಡುವುದೆಂದು ಅವನು ವಾದಿಸಿದನು. (ಆದಿಕಾಂಡ 3:4, 5) ಸಭೆಯೊಂದಿಗೆ ಸಹವಾಸ ಮಾಡುವ ಇಂತಹ ಭ್ರಷ್ಟ ವ್ಯಕ್ತಿಯನ್ನು ನಾವು ಸಂಧಿಸುವಲ್ಲಿ, ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿ ವಹಿಸುವವರಿಗೆ ಆ ವ್ಯಕ್ತಿಯ ಕುರಿತು ವರದಿಮಾಡಿ, ನಮ್ಮನ್ನೂ ಇತರರನ್ನೂ ಕಾಪಾಡುವ ಹಂಗು ನಮಗಿದೆ.—ಯಾಜಕಕಾಂಡ 5:1.
ನಿಷ್ಕೃಷ್ಟ ಜ್ಞಾನದಿಂದ ಕಾಪಾಡಲ್ಪಡುವುದು
21-23. (ಎ) ನಿಷ್ಕೃಷ್ಟ ಜ್ಞಾನವನ್ನು ಅನ್ವಯಿಸಿಕೊಳ್ಳಲು ತಪ್ಪುವುದರ ಪರಿಣಾಮಗಳೇನು? (ಬಿ) ಮುಂದೆ ನಾವು ಆಲೋಚಿಸಲಿರುವ ಯಾವ ಹೆಚ್ಚಿನ ಸಮಸ್ಯೆಯನ್ನು ಪೇತ್ರನು ಚರ್ಚಿಸುತ್ತಾನೆ?
21 ಪೇತ್ರನು ತನ್ನ ಪತ್ರದ ಈ ಭಾಗವನ್ನು, “ಜೀವಕ್ಕೂ ದಿವ್ಯ ಭಕ್ತಿಗೂ” ಮಹತ್ತ್ವದ್ದೆಂದು ತಾನು ಹಿಂದೆ ಹೇಳಿದ್ದ ಜ್ಞಾನವನ್ನು ಅನ್ವಯಿಸಿಕೊಳ್ಳಲು ತಪ್ಪುವುದರ ಪರಿಣಾಮಗಳನ್ನು ವರ್ಣಿಸುತ್ತ ಮುಗಿಸುತ್ತಾನೆ. (2 ಪೇತ್ರ 1:2, 3, 8, NW) ಅವನು ಬರೆಯುವುದು: “ನಿಶ್ಚಯವಾಗಿ, ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನದಿಂದಾಗಿ ಲೋಕದ ಮಲಿನತ್ವಗಳಿಂದ ಪಾರಾದ ಬಳಿಕ ಅವೇ ಸಂಗತಿಗಳಲ್ಲಿ ಅವರು ಪುನಃ ಸಿಕ್ಕಿಕೊಂಡು ಜಯಿಸಲ್ಪಡುವುದಾದರೆ, ಅವರ ಅಂತಿಮ ಪರಿಸ್ಥಿತಿಗಳು ಮೊದಲನೆಯದಕ್ಕಿಂತ ಕೆಡುಕಾಗಿವೆ.” (2 ಪೇತ್ರ 2:20, NW) ಎಷ್ಟು ದುಃಖಕರ! ಪೇತ್ರನ ದಿನಗಳಲ್ಲಿದ್ದ ಅಂತಹ ವ್ಯಕ್ತಿಗಳು, ಕ್ಷಣಿಕವಾದ ಲೈಂಗಿಕ ತೃಪ್ತಿಗಾಗಿ, ಅಮರ ಸ್ವರ್ಗೀಯ ಜೀವನದ ಅಮೂಲ್ಯ ನಿರೀಕ್ಷೆಯನ್ನು ಎಸೆದು ಬಿಟ್ಟಿದ್ದರು.
22 ಆದುದರಿಂದ ಪೇತ್ರನು ಹೇಳುವುದು: “ನೀತಿಮಾರ್ಗವನ್ನು ನಿಷ್ಕೃಷ್ಟವಾಗಿ ತಿಳಿದುಕೊಂಡ ಮೇಲೆ, ಅವರಿಗೆ ಕೊಡಲ್ಪಟ್ಟ ಪವಿತ್ರಾಜ್ಞೆಯಿಂದ ತಿರುಗುವ ಬದಲಾಗಿ, ಅದನ್ನು ನಿಷ್ಕೃಷ್ಟವಾಗಿ ತಿಳಿಯದೆ ಇರುತ್ತಿದ್ದರೆ ಹೆಚ್ಚು ಉತ್ತಮವಾಗುತ್ತಿತ್ತು. ನಿಜವಾದ ಗಾದೆಯ ಮಾತು ಅವರಿಗೆ ಸಂಭವಿಸಿದೆ: ‘ನಾಯಿಯು ತನ್ನ ಸ್ವಂತ ವಾಂತಿಗೆ ಹಿಂದಿರುಗಿದೆ ಮತ್ತು ತೊಳೆದ ಹೆಣ್ಣುಹಂದಿ ಕೆಸರಿನಲ್ಲಿ ಹೊರಳಾಡಲು ಹೋಗಿದೆ.’”—2 ಪೇತ್ರ 2:21, 22, NW; ಜ್ಞಾನೋಕ್ತಿ 26:11.
23 ಇಂದು ಕೆಲವರಿಗೆ ತಟ್ಟುವಂತಹದ್ದೇ ರೀತಿಯಲ್ಲಿ, ಆದಿ ಕ್ರೈಸ್ತರಿಗೆ ಇನ್ನೊಂದು ಸಮಸ್ಯೆಯು ತಟ್ಟಲಾರಂಭವಾಗಿತ್ತೆಂದು ತೋರಿಬರುತ್ತದೆ. ಆಗಲೂ, ಆಗಮಿಸದಿರುವಂತೆ ತೋರುತ್ತಿದ್ದ ಕ್ರಿಸ್ತನ ವಾಗ್ದತ್ತ ಸಾನ್ನಿಧ್ಯದ ವಿಷಯದಲ್ಲಿ ಕೆಲವರು ಆಕ್ಷೇಪಣೆಮಾಡುತ್ತಾ ಇದ್ದರೆಂಬುದು ಸುವ್ಯಕ್ತ. ಈ ವಿಷಯವನ್ನು ಪೇತ್ರನು ಹೇಗೆ ಸಂಬೋಧಿಸುತ್ತಾನೆಂದು ನಾವು ಪರೀಕ್ಷಿಸೋಣ.
ನಿಮಗೆ ಜ್ಞಾಪಕವಿದೆಯೆ?
◻ ಯಾವ ಮೂರು ಎಚ್ಚರಿಕೆಯ ದೃಷ್ಟಾಂತಗಳನ್ನು ಪೇತ್ರನು ಉಲ್ಲೇಖಿಸುತ್ತಾನೆ?
◻ ಸುಳ್ಳು ಬೋಧಕರು “ಪ್ರಭುತ್ವವನ್ನು ತಿರಸ್ಕಾರದಿಂದ” ನೋಡುವುದು ಹೇಗೆ?
◻ ಬಿಳಾಮನ ಮಾರ್ಗವೆಂದರೇನು, ಅದನ್ನು ಅನುಸರಿಸುವವರು ಇತರರನ್ನು ಕೆಡಿಸಲು ಹೇಗೆ ಪ್ರಯತ್ನಿಸಬಹುದು?
◻ ನಿಷ್ಕೃಷ್ಟ ಜ್ಞಾನವನ್ನು ಅನ್ವಯಿಸಿಕೊಳ್ಳಲು ತಪ್ಪುವುದರ ಪರಿಣಾಮಗಳೇನು?
[ಪುಟ 17 ರಲ್ಲಿರುವ ಚಿತ್ರ]
ಬಿಳಾಮನು ಎಚ್ಚರಿಕೆಯ ದೃಷ್ಟಾಂತವಾಗಿದ್ದಾನೆ