ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳಿರಿ
“ಕೊನೆಯ ದಿನಗಳಲ್ಲಿ ಕುಚೋದ್ಯಗಾರರು ಬರುವರು.”—2 ಪೇತ್ರ 3:3, NW.
1. ಆಧುನಿಕ ದಿನದ ಕ್ರೈಸ್ತನೊಬ್ಬನಿಗೆ ಯಾವ ತುರ್ತುಪ್ರಜ್ಞೆಯಿತ್ತು?
ಅರುವತ್ತಾರಕ್ಕೂ ಹೆಚ್ಚು ವರ್ಷಕಾಲ ಪೂರ್ಣ ಸಮಯದ ಶುಶ್ರೂಷಕನಾಗಿದ್ದ ಒಬ್ಬನು ಬರೆದುದು: “ನಾನು ಸದಾ ತೀಕ್ಷ್ಣವಾದ ತುರ್ತು ಪ್ರಜ್ಞೆಯುಳ್ಳವನಾಗಿದ್ದೇನೆ. ನನ್ನ ಯೋಚನೆಯಲ್ಲಿ, ಅರ್ಮಗೆದೋನ್ ಯಾವಾಗಲೂ ನಾಳಿದ್ದು. (ಪ್ರಕಟನೆ 16:14, 16) ನನ್ನ ತಂದೆಯಂತೆ, ಮತ್ತು ನನ್ನ ಅಜ್ಜನಂತೆ, ನಾನು ನನ್ನ ಜೀವಿತವನ್ನು, ಅಪೊಸ್ತಲನು [ಪೇತ್ರನು] ಪ್ರೋತ್ಸಾಹಿಸಿದಂತೆ, ‘ಯೆಹೋವನ ದಿನದ ಸಾನ್ನಿಧ್ಯವನ್ನು ಮನಸ್ಸಿಗೆ ನಿಕಟವಾಗಿಟ್ಟುಕೊಂಡು’ ಜೀವಿಸಿದ್ದೇನೆ. ನಾನು ಯಾವಾಗಲೂ ವಾಗ್ದತ್ತ ನೂತನ ಲೋಕವನ್ನು, ‘ನೋಡದಿದ್ದರೂ ವಾಸ್ತವವಾಗಿ’ ಇರುವಂತೆ ವೀಕ್ಷಿಸಿದ್ದೇನೆ.”—2 ಪೇತ್ರ 3:11, 12; ಇಬ್ರಿಯ 11:1; ಯೆಶಾಯ 11:6-9; ಪ್ರಕಟನೆ 21:3, 4.
2. ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದೆಂದರೇನು?
2 ಯೆಹೋವನ ದಿನದ ಸಂಬಂಧದಲ್ಲಿ “ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದು” ಎಂಬ ಅಭಿವ್ಯಕ್ತಿಯ ಅರ್ಥವು, ನಾವು ಅದನ್ನು ನಮ್ಮ ಮನಸ್ಸುಗಳಿಂದ ತೆಗೆದು ಬಿಡುವುದಿಲ್ಲ ಎಂದಾಗಿದೆ. ಯೆಹೋವನು ತನ್ನ ವಾಗ್ದತ್ತ ನೂತನ ಲೋಕದ ಸ್ಥಾಪನೆಗೆ ಪೂರ್ವಭಾವಿಯಾಗಿ ಈ ವಿಷಯಗಳ ವ್ಯವಸ್ಥೆಯನ್ನು ನಾಶಮಾಡುವ ದಿನವು ಅತಿ ನಿಕಟವೆಂಬುದನ್ನು ನಾವು ಮರೆಯಬಾರದು. ಅದು ನಮಗೆ ಎಷ್ಟು ವಾಸ್ತವವಾಗಿರಬೇಕೆಂದರೆ, ನಾವು ಅದನ್ನು ಸನಿಹದಲ್ಲಿ, ಮುಂದೆಯೇ ಇರುವಂತೆ ಸ್ಪಷ್ಟವಾಗಿ ನೋಡಬೇಕು. ದೇವರ ಪುರಾತನದ ಪ್ರವಾದಿಗಳಿಗೆ ಅದು ಅಷ್ಟು ವಾಸ್ತವವಾಗಿತ್ತು ಮತ್ತು ಅವರು ಅನೇಕ ವೇಳೆ ಅದು ಹತ್ತಿರವಿದೆಯೆಂಬಂತೆ ಮಾತಾಡಿದರು.—ಯೆಶಾಯ 13:6; ಯೋವೇಲ 1:15; 2:1; ಓಬದ್ಯ 15; ಚೆಫನ್ಯ 1:7, 14.
3. ಯೆಹೋವನ ದಿನದ ಕುರಿತ ಪೇತ್ರನ ಸಲಹೆಯನ್ನು ಯಾವುದು ಪ್ರಚೋದಿಸಿದ್ದಿರಬೇಕು?
3 ಯೆಹೋವನ ದಿನವು “ನಾಳಿದ್ದೋ” ಎಂಬಂತೆ ಬರಸಾಧ್ಯವಿದೆಯೆಂದು ವೀಕ್ಷಿಸುವಂತೆ ಪೇತ್ರನು ನಮ್ಮನ್ನು ಪ್ರೋತ್ಸಾಹಿಸಿದ್ದೇಕೆ? ಏಕೆಂದರೆ ಕೆಲವರು, ತಪ್ಪುಗಾರರು ಶಿಕ್ಷಿಸಲ್ಪಡುವ ಕ್ರಿಸ್ತನ ವಾಗ್ದತ್ತ ಸಾನ್ನಿಧ್ಯದ ವಿಚಾರವನ್ನು ಅಪಹಾಸ್ಯ ಮಾಡಲಾರಂಭಿಸಿದ್ದರೆಂದು ಕಂಡುಬರುತ್ತದೆ. (2 ಪೇತ್ರ 3:3, 4) ಆದಕಾರಣ, ನಾವೀಗ ಪರಿಗಣಿಸಲಿರುವ ತನ್ನ ಎರಡನೆಯ ಪತ್ರದ 3ನೆಯ ಅಧ್ಯಾಯದಲ್ಲಿ ಪೇತ್ರನು ಈ ಕುಚೋದ್ಯಗಾರರ ಆರೋಪಗಳಿಗೆ ಉತ್ತರ ಕೊಡುತ್ತಾನೆ.
ಜ್ಞಾಪಿಸಿಕೊಳ್ಳಲು ಹಾರ್ದಿಕ ಕರೆ
4. ನಾವು ಯಾವುದನ್ನು ಜ್ಞಾಪಿಸಿಕೊಳ್ಳುವಂತೆ ಪೇತ್ರನು ಬಯಸುತ್ತಾನೆ?
4 ತನ್ನ ಸಹೋದರರಿಗಾಗಿ ಪೇತ್ರನಲ್ಲಿದ್ದ ಮಮತೆಯು, ಅವನು ಅವರನ್ನು ಪದೇ ಪದೇ, “ಪ್ರಿಯರೇ” ಎಂದು ಕರೆಯುವುದರಲ್ಲಿ ತೋರಿಬರುತ್ತದೆ. ಪೇತ್ರನು ಆರಂಭಿಸುವುದು: “ಪ್ರಿಯರೇ, . . . ನೀವು ಪವಿತ್ರ ಪ್ರವಾದಿಗಳ ಮೂಲಕ ಪೂರ್ವದಲ್ಲಿ ಹೇಳಲ್ಪಟ್ಟ ಮಾತುಗಳನ್ನೂ, ನಿಮ್ಮ ಅಪೊಸ್ತಲರ ಮೂಲಕ ಕೊಡಲ್ಪಟ್ಟ ಕರ್ತನ ಮತ್ತು ರಕ್ಷಕನ ಆಜ್ಞೆಯನ್ನೂ ಜ್ಞಾಪಿಸಿಕೊಳ್ಳುವಂತೆ ನಾನು ಜ್ಞಾಪನದ ಮೂಲಕ ನಿಮ್ಮ ಸ್ಪಷ್ಟವಾದ ಯೋಚನ ಸಾಮರ್ಥ್ಯಗಳನ್ನು ಪ್ರಚೋದಿಸುತ್ತಿದ್ದೇನೆ.”—2 ಪೇತ್ರ 3:1, 2, 8, 14, 17, NW; ಯೂದ 17.
5. ಯೆಹೋವನ ದಿನದ ಕುರಿತಾಗಿ ಕೆಲವು ಪ್ರವಾದಿಗಳೇನು ಹೇಳಿದರು?
5 “ಪವಿತ್ರ ಪ್ರವಾದಿಗಳ ಮೂಲಕ ಪೂರ್ವದಲ್ಲಿ ಹೇಳಲ್ಪಟ್ಟ” ಯಾವ “ಮಾತುಗಳನ್ನು” ಜ್ಞಾಪಿಸಿಕೊಳ್ಳುವಂತೆ ಪೇತ್ರನು ವಾಚಕರನ್ನು ಪ್ರೇರಿಸುತ್ತಾನೆ? ರಾಜ್ಯಾಧಿಕಾರದಲ್ಲಿ ಕ್ರಿಸ್ತನ ಸಾನ್ನಿಧ್ಯ ಕುರಿತಾದ ಹಾಗೂ ಭಕ್ತಿಹೀನರ ತೀರ್ಪಿನ ಕುರಿತಾದ ಮಾತುಗಳನ್ನೇ. ಪೇತ್ರನು ಈ ಹಿಂದೆ ಈ ಮಾತುಗಳಿಗೆ ಗಮನ ಸೆಳೆದಿದ್ದನು. (2 ಪೇತ್ರ 1:16-19; 2:3-10) ದುಷ್ಕರ್ಮಿಗಳಿಗೆ ದೇವರ ಪ್ರತಿಕೂಲ ತೀರ್ಪಿನ ಕುರಿತು ಎಚ್ಚರಿಸಿದ ಪ್ರಥಮ ದಾಖಲಿತ ಪ್ರವಾದಿಯಾದ ಹನೋಕನನ್ನು ಯೂದನು ಸೂಚಿಸಿ ಹೇಳಿದನು. (ಯೂದ 14, 15) ಹನೋಕನನ್ನು ಬೇರೆ ಪ್ರವಾದಿಗಳು ಹಿಂಬಾಲಿಸಿದರು, ಮತ್ತು ಅವರು ಏನು ಬರೆದರೊ ಅದನ್ನು ನಾವು ಮರೆಯಬೇಕೆಂದು ಪೇತ್ರನು ಬಯಸುವುದಿಲ್ಲ.—ಯೆಶಾಯ 66:15, 16; ಚೆಫನ್ಯ 1:15-18; ಜೆಕರ್ಯ 14:6-9.
6. ಕ್ರಿಸ್ತನ ಮತ್ತು ಅವರ ಅಪೊಸ್ತಲರ ಯಾವ ಮಾತುಗಳು ಯೆಹೋವನ ದಿನದ ಕುರಿತು ನಮಗೆ ಜ್ಞಾನವನ್ನು ಒದಗಿಸುತ್ತವೆ?
6 ಅದಕ್ಕೆ ಕೂಡಿಸಿ, “ಕರ್ತನ ಮತ್ತು ರಕ್ಷಕನ ಆಜ್ಞೆಯನ್ನು” ಜ್ಞಾಪಿಸಿಕೊಳ್ಳುವಂತೆ ಪೇತ್ರನು ತನ್ನ ಓದುಗರಿಗೆ ಹೇಳುತ್ತಾನೆ. ಯೇಸುವಿನ ಆಜ್ಞೆಯಲ್ಲಿ ಈ ಬುದ್ಧಿವಾದ ಸೇರಿದೆ: “ನಿಮ್ಮ ಹೃದಯಗಳು ಎಂದಿಗೂ ಜಗ್ಗಿಸಲ್ಪಡದಿರುವಂತೆ . . . ಮತ್ತು ಆ ದಿನವು ಪಾಶದಂತೆ ಥಟ್ಟನೆ ನಿಮ್ಮ ಮೇಲೆ ಬರದಂತೆ ನೀವು ನಿಮ್ಮ ವಿಷಯದಲ್ಲಿ ಜಾಗ್ರತೆ ವಹಿಸಿರಿ.” “ನೋಡುತ್ತಾ ಇರಿ, ಎಚ್ಚರವಾಗಿರಿ, ಏಕೆಂದರೆ ನಿಯಮಿತ ಕಾಲವು ಯಾವಾಗೆಂದು ನಿಮಗೆ ತಿಳಿದಿಲ್ಲ.” (ಲೂಕ 21:34-36, NW; ಮಾರ್ಕ 13:33, NW) ಅಪೊಸ್ತಲರ ಮಾತುಗಳಿಗೆ ಕಿವಿಗೊಡಲು ಸಹ ಪೇತ್ರನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಉದಾಹರಣೆಗೆ, ಅಪೊಸ್ತಲ ಪೌಲನು ಬರೆದುದು: “ಯೆಹೋವನ ದಿನವು ರಾತ್ರಿಯಲ್ಲಿ ಕಳ್ಳನ ಹಾಗೆಯೇ ಬರುತ್ತದೆ. ಆದುದರಿಂದ, ಮಿಕ್ಕವರು ಮಾಡುವಂತೆ ನಾವು ನಿದ್ರಿಸದಿರೋಣ, ಬದಲಿಗೆ ನಾವು ಎಚ್ಚರವಾಗಿದ್ದು ನಮ್ಮ ಸ್ವಸ್ಥಬುದ್ಧಿಯನ್ನು ಇಟ್ಟುಕೊಂಡಿರೋಣ.”—1 ಥೆಸಲೊನೀಕ 5:2, 6, NW.
ಕುಚೋದ್ಯಗಾರರ ಬಯಕೆಗಳು
7, 8. (ಎ) ದೇವರ ಎಚ್ಚರಿಕೆಯ ಸಂದೇಶಗಳನ್ನು ಗೇಲಿಮಾಡುವ ಜನರು ಯಾವ ವಿಧದವರು? (ಬಿ) ಕುಚೋದ್ಯಗಾರರು ಏನೆಂದು ವಾದಿಸುತ್ತಾರೆ?
7 ಹಿಂದೆ ಗಮನಿಸಿದಂತೆ, ಪೇತ್ರನ ಬುದ್ಧಿವಾದಕ್ಕೆ ಕಾರಣವು, ಕೆಲವರು ಅಂತಹ ಎಚ್ಚರಿಕೆಗಳನ್ನು ಅಪಹಾಸ್ಯ ಮಾಡಲಾರಂಭಿಸಿದ್ದೇ. ಆದಿ ಕಾಲದ ಇಸ್ರಾಯೇಲ್ಯರು ಯೆಹೋವನ ಪ್ರವಾದಿಗಳನ್ನು ಗೇಲಿಮಾಡಿದ್ದಂತೆಯೇ ಇದಿತ್ತು. (2 ಪೂರ್ವಕಾಲವೃತ್ತಾಂತ 36:16) ಪೇತ್ರನು ವಿವರಿಸುವುದು: “ಏಕೆಂದರೆ, ಕೊನೆಯ ದಿವಸಗಳಲ್ಲಿ ತಮ್ಮ ಸ್ವಂತ ಬಯಕೆಗಳಿಗನುಸಾರ ಮುಂದೆಸಾಗುವ ಕುಚೋದ್ಯಗಾರರು ತಮ್ಮ ಕುಚೋದ್ಯಗಳೊಂದಿಗೆ ಬರುವರೆಂದು ನಿಮಗೆ ಮೊದಲೇ ಗೊತ್ತಿದೆ.” (2 ಪೇತ್ರ 3:3, NW) ಈ ಕುಚೋದ್ಯಗಾರರ ಬಯಕೆಗಳು “ಭಕ್ತಿಹೀನ ವಿಷಯಗಳಿಗಾಗಿ” ಎಂದು ಯೂದನು ಹೇಳುತ್ತಾನೆ. ಅವನು ಅವರನ್ನು “ಆತ್ಮಿಕತೆಯಿಲ್ಲದಿರುವ ಪಾಶವೀ ಪುರುಷರು” ಎಂದು ಕರೆಯುತ್ತಾನೆ.—ಯೂದ 17-19, NW.
8 “ಅದನ್ನು ಕೆಡಿಸುವ ಆಸೆಯಿಂದ ದೈಹಿಕವಾದುದನ್ನು ಬೆನ್ನಟ್ಟುವವರು” (NW) ಎಂದು ಪೇತ್ರನು ಹೇಳಿದ ಸುಳ್ಳು ಬೋಧಕರು ಆತ್ಮಿಕತೆಯಿಲ್ಲದಿರುವ ಈ ಕುಚೋದ್ಯಗಾರರ ಮಧ್ಯೆ ಪ್ರಾಯಶಃ ಇದ್ದಾರೆ. (2 ಪೇತ್ರ 2:1, 10, 14) ಅವರು ಗೇಲಿಮಾಡುತ್ತ ನಂಬಿಗಸ್ತ ಕ್ರೈಸ್ತರನ್ನು ಕೇಳುವುದು: “ಅವನ ವಾಗ್ದತ್ತ ಸಾನ್ನಿಧ್ಯವೆಲ್ಲಿ? ನಮ್ಮ ಪಿತೃಗಳು ಮರಣದಲ್ಲಿ ನಿದ್ರಿಸಿದಂದಿನಿಂದ ಸಕಲ ವಿಷಯಗಳು ಸೃಷ್ಟಿಯ ಆದಿಯಿಂದ ಇದ್ದ ಹಾಗೆಯೇ ಮುಂದುವರಿಯುತ್ತ ಇವೆ.”—2 ಪೇತ್ರ 3:4, NW.
9. (ಎ) ದೇವರ ವಾಕ್ಯದಲ್ಲಿ ಹರಡಿರುವ ತುರ್ತುಪ್ರಜ್ಞೆಯನ್ನು ಕುಚೋದ್ಯಗಾರರು ಕೆಡವಲು ಪ್ರಯತ್ನಿಸುವುದೇಕೆ? (ಬಿ) ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದು ನಮಗೆ ಸಂರಕ್ಷಣೆಯಾಗಿದೆಯೇಕೆ?
9 ಈ ಕುಚೋದ್ಯವೇಕೆ? ಕ್ರಿಸ್ತನ ಸಾನ್ನಿಧ್ಯವು ಎಂದಿಗೂ ಸಂಭವಿಸದು, ದೇವರು ಮಾನವ ವಿಚಾರಗಳಲ್ಲಿ ಎಂದೂ ಹಸ್ತಕ್ಷೇಪ ಮಾಡಿರುವುದೂ ಇಲ್ಲ, ಮಾಡಲಿರುವುದೂ ಇಲ್ಲ ಎಂಬುದನ್ನು ಏಕೆ ಸೂಚಿಸಬೇಕು? ದೇವರ ವಾಕ್ಯದಲ್ಲಿ ಹರಡಿರುವ ಈ ತುರ್ತು ಪ್ರಜ್ಞೆಯನ್ನು ಕೊರೆದುಬಿಡುವ ಮೂಲಕ, ಈ ಪಾಶವೀ ಕುಚೋದ್ಯಗಾರರು ಇತರರನ್ನು ಆತ್ಮಿಕ ಔದಾಸೀನ್ಯದ ಒಂದು ಸ್ಥಿತಿಗೆ ಬರಿಸಿ, ಅವರು ಸ್ವಾರ್ಥದ ಕೆಡಿಸುವಿಕೆಯ ಸುಲಭಾಹುತಿಗಳಾಗುವಂತೆ ಮಾಡುತ್ತಾರೆ. ಆತ್ಮಿಕವಾಗಿ ಎಚ್ಚರವಾಗಿರುವಂತೆ ನಮಗೆ ಎಷ್ಟು ಪ್ರಬಲವಾದ ಪ್ರೋತ್ಸಾಹನೆ! ನಾವು ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿರಿಸಿ, ಆತನ ಕಣ್ಣುಗಳು ಸದಾ ನಮ್ಮ ಮೇಲಿದೆ ಎಂಬುದನ್ನು ಜ್ಞಾಪಿಸಿಕೊಳ್ಳುವಂತಾಗಲಿ! ಹೀಗೆ ನಾವು ಯೆಹೋವನನ್ನು ಹುರುಪಿನಿಂದ ಸೇವಿಸುವಂತೆ ಮತ್ತು ನಮ್ಮ ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವಂತೆ ಪ್ರೇರಿಸಲ್ಪಡುವೆವು.—ಕೀರ್ತನೆ 11:4; ಯೆಶಾಯ 29:15; ಯೆಹೆಜ್ಕೇಲ 8:12; 12:27; ಚೆಫನ್ಯ 1:12.
ಸ್ವಚ್ಫಂದ ಮತ್ತು ತಿರಸ್ಕರಣೀಯ
10. ಕುಚೋದ್ಯಗಾರರು ತಪ್ಪೆಂದು ಪೇತ್ರನು ಹೇಗೆ ರುಜುಮಾಡುತ್ತಾನೆ?
10 ಅಂತಹ ಕುಚೋದ್ಯಗಾರರು ಒಂದು ಮಹತ್ತ್ವದ ನಿಜತ್ವವನ್ನು ಅಲಕ್ಷಿಸುತ್ತಾರೆ. ಅವರು ಬೇಕೆಂದು ಅದನ್ನು ಅಲಕ್ಷಿಸಿ, ಇತರರು ಅದನ್ನು ಮರೆತುಬಿಡುವಂತೆ ಪ್ರಯತ್ನಿಸುತ್ತಾರೆ. ಏಕೆ? ಜನರನ್ನು ಹೆಚ್ಚು ಸುಲಭವಾಗಿ ವಂಚಿಸಲಿಕ್ಕಾಗಿಯೇ. ಪೇತ್ರನು ಬರೆಯುವುದು: “ಏಕೆಂದರೆ, ಅವರ ಅಪೇಕ್ಷೆಗನುಸಾರ ಈ ನಿಜತ್ವವು ಅವರ ಗಮನಕ್ಕೆ ಬಾರದಿರುತ್ತದೆ.” ಯಾವ ನಿಜತ್ವವದು? “ಅದೇನಂದರೆ ದೇವರ ವಾಕ್ಯದ ಮೂಲಕ ನೀರಿನಿಂದ ಹೊರಗೆ ಮತ್ತು ನೀರಿನ ಮಧ್ಯೆ ಅಚ್ಚುಕಟ್ಟಾಗಿ ನಿಂತಿದ್ದ ಪುರಾತನದಿಂದಿದ್ದ ಆಕಾಶಮಂಡಲವೂ ಒಂದು ಭೂಮಿಯೂ ಇದ್ದವು; ಮತ್ತು ಅವುಗಳ ಮುಖಾಂತರ ಆ ಕಾಲದ ಲೋಕವು ನೀರಿನಿಂದ ಜಲಮಯಗೊಂಡಾಗ ನಾಶನವನ್ನು ಅನುಭವಿಸಿತು.” (2 ಪೇತ್ರ 3:5, 6, NW) ಹೌದು, ನೋಹನ ದಿನದ ಜಲಪ್ರಳಯದಲ್ಲಿ ಯೆಹೋವನು ಭೂಮಿಯ ದುಷ್ಟತನವನ್ನು ಖಂಡಿತವಾಗಿ ತೆಗೆದುಹಾಕಿದನು. ಈ ನಿಜತ್ವಕ್ಕೆ ಯೇಸುವೂ ಪ್ರಾಧಾನ್ಯಕೊಟ್ಟು ಮಾತಾಡಿದನು. (ಮತ್ತಾಯ 24:37-39; ಲೂಕ 17:26, 27; 2 ಪೇತ್ರ 2:5) ಹೀಗೆ, ಕುಚೋದ್ಯಗಾರರು ಹೇಳುವುದಕ್ಕೆ ವ್ಯತಿರಿಕ್ತವಾಗಿ, ಸಕಲ ವಿಷಯಗಳು “ಸೃಷ್ಟಿಯ ಆದಿಯಿಂದ ಇದ್ದ ಹಾಗೆಯೇ” ಮುಂದುವರಿಯುತ್ತ ಇರುವುದಿಲ್ಲ.
11. ಆದಿ ಕ್ರೈಸ್ತರ ಯಾವ ಸಮಯಕ್ಕೆ ಮುಂಚಿನ ನಿರೀಕ್ಷಣೆಗಳು ಕೆಲವರು ಅವರನ್ನು ಗೇಲಿಮಾಡುವುದಕ್ಕೆ ನಡೆಸಿದವು?
11 ಇನ್ನೂ ನೆರವೇರಿದ್ದಿರದ ನಿರೀಕ್ಷೆಗಳು ನಂಬಿಗಸ್ತ ಕ್ರೈಸ್ತರಲ್ಲಿ ಇದ್ದುದರಿಂದ ಕುಚೋದ್ಯಗಾರರು ಇವರಿಗೆ ಅಪಹಾಸ್ಯಮಾಡಲು ಕಾರಣವಿತ್ತು. ಯೇಸು ಸಾಯುವುದಕ್ಕೆ ತುಸು ಮೊದಲು, ಅವನ ಶಿಷ್ಯರು “ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು . . . ಭಾವಿಸಿ”ದರು. ಆಮೇಲೆ, ಅವನ ಪುನರುತ್ಥಾನದ ಬಳಿಕ ರಾಜ್ಯವು ಆ ಕೂಡಲೆ ಸ್ಥಾಪಿಸಲ್ಪಡುವುದೊ ಎಂದು ಅವರು ಕೇಳಿದರು. ಅಲ್ಲದೆ, ಪೇತ್ರನು ತನ್ನ ಎರಡನೆಯ ಪತ್ರವನ್ನು ಬರೆಯುವುದಕ್ಕೆ ಸುಮಾರು ಹತ್ತು ವರ್ಷಗಳಿಗೆ ಮೊದಲು, “ಯೆಹೋವನ ದಿನವು ಇಲ್ಲಿದೆ ಎಂಬ ಅರ್ಥದಲ್ಲಿ” ಅಪೊಸ್ತಲ ಪೌಲನಿಂದ ಅಥವಾ ಅವನ ಸಂಗಾತಿಗಳಿಂದ ಬಂದ “ಬಾಯಿಮಾತಿನ ಸಮಾಚಾರ”ದಿಂದಲೊ “ಪತ್ರ”ದಿಂದಲೊ ಕೆಲವರು “ಉದ್ರೇಕಿತ”ರಾಗಿದ್ದರು. (ಲೂಕ 19:11; 2 ಥೆಸಲೊನೀಕ 2:2; ಅ. ಕೃತ್ಯಗಳು 1:6) ಆದರೂ ಯೇಸುವಿನ ಶಿಷ್ಯರ ಇಂತಹ ನಿರೀಕ್ಷಣೆಗಳು ಸುಳ್ಳಾಗಿರಲಿಲ್ಲ, ಕೇವಲ ಸಮಯಕ್ಕೆ ಮುನ್ನವಾಗಿದ್ದವು. ಯೆಹೋವನ ದಿನವು ಬರಲಿತ್ತು!
ದೇವರ ವಾಕ್ಯ ಭರವಸಾರ್ಹ
12. “ಯೆಹೋವನ ದಿನ”ದ ಕುರಿತ ತನ್ನ ಪ್ರವಾದನೆಗಳಲ್ಲಿ ದೇವರ ವಾಕ್ಯವು ಹೇಗೆ ಭರವಸಾರ್ಹವಾಗಿ ಪರಿಣಮಿಸಿದೆ?
12 ಹಿಂದೆ ಗಮನಿಸಿದಂತೆ, ಯೆಹೋವನ ಸೇಡಿನ ದಿನವು ಹತ್ತಿರವಿದೆಯೆಂದು ಕ್ರೈಸ್ತಪೂರ್ವ ಪ್ರವಾದಿಗಳು ಅನೇಕ ವೇಳೆ ಎಚ್ಚರಿಸಿದರು. ಯೆಹೋವನು ತನ್ನ ಮೊಂಡರಾದ ಜನರ ಮೇಲೆ ಸಾ.ಶ.ಪೂ. 607ರಲ್ಲಿ ಸೇಡು ತೀರಿಸಿದಾಗ ಒಂದು ಸಣ್ಣ ಪ್ರಮಾಣದ “ಯೆಹೋವನ ದಿನವು” ಬಂತು. (ಚೆಫನ್ಯ 1:14-18) ಬಳಿಕ, ಬಾಬೆಲ್ ಮತ್ತು ಐಗುಪ್ತಗಳನ್ನೊಳಗೊಂಡ ಇತರ ಜನಾಂಗಗಳು ಇಂತಹ “ಯೆಹೋವನ ದಿನ”ವನ್ನು ಅನುಭವಿಸಿದವು. (ಯೆಶಾಯ 13:6-9; ಯೆರೆಮೀಯ 46:1-10; ಓಬದ್ಯ 15) ಪ್ರಥಮ ಶತಮಾನದ ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯವನ್ನೂ ಮುಂತಿಳಿಸಲಾಗಿತ್ತು ಮತ್ತು ರೋಮನ್ ಸೈನ್ಯಗಳು ಯೂದಾಯವನ್ನು ಸಾ.ಶ. 70ರಲ್ಲಿ ಧ್ವಂಸಮಾಡಿದಾಗ ಅದು ಸಂಭವಿಸಿತು. (ಲೂಕ 19:41-44; 1 ಪೇತ್ರ 4:7) ಆದರೆ ಪೇತ್ರನು ಭಾವೀ “ಯೆಹೋವನ ದಿನ”ವೊಂದಕ್ಕೆ, ಗಾತ್ರದಲ್ಲಿ ಭೌಗೋಲಿಕ ಜಲಪ್ರಳಯವನ್ನೂ ಸಣ್ಣದಾಗಿ ತೋರುವಂತೆ ಮಾಡುವ ದಿನವೊಂದನ್ನು ಸೂಚಿಸುತ್ತಾನೆ.
13. ಯಾವ ಐತಿಹಾಸಿಕ ದೃಷ್ಟಾಂತವು ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಖಾತರಿಯನ್ನು ಪ್ರದರ್ಶಿಸುತ್ತದೆ?
13 ಆ ಬರಲಿರುವ ನಾಶನವನ್ನು ಪೇತ್ರನು ತನ್ನ ವರ್ಣನೆಯಲ್ಲಿ ಹೀಗೆ ಪರಿಚಯಮಾಡಿಸುತ್ತಾನೆ: “ಆದರೆ ಅದೇ ವಾಕ್ಯದ ಮೂಲಕ.” ಅವನು ಆಗ ತಾನೆ, “ದೇವರ ವಾಕ್ಯದ ಮೂಲಕ” ಜಲಪ್ರಳಯಪೂರ್ವದ ಲೋಕವು “ನೀರಿನಿಂದ ಹೊರಗೆ ಮತ್ತು ನೀರಿನ ಮಧ್ಯೆ” ನಿಂತಿತ್ತೆಂದು ಹೇಳಿದ್ದನು. ಬೈಬಲ್ನ ಸೃಷ್ಟಿ ವೃತ್ತಾಂತದಲ್ಲಿ ವರ್ಣಿಸಿರುವ ಈ ಪರಿಸ್ಥಿತಿಯು, ದೇವರ ನಿರ್ದೇಶನ ಅಥವಾ ವಾಕ್ಯದ ಮೇರೆಗೆ ಜಲಸಮೂಹವು ಕೆಳಗೆ ಸುರಿದು ಜಲಪ್ರಳಯವು ಬರುವಂತೆ ಸಾಧ್ಯಮಾಡಿತು. ಪೇತ್ರನು ಮುಂದುವರಿಸುವುದು: “ಅದೇ [ದೇವರ] ವಾಕ್ಯದ ಮೂಲಕ ಈಗ ಇರುವ ಆಕಾಶಮಂಡಲವೂ ಭೂಮಿಯೂ ಬೆಂಕಿಗಾಗಿ ಕೂಡಿಡಲ್ಪಟ್ಟಿದ್ದು, ನ್ಯಾಯತೀರ್ಪಿನ ದಿನಕ್ಕೆ ಮತ್ತು ಭಕ್ತಿಹೀನ ಜನರ ನಾಶನಕ್ಕಾಗಿ ಕಾದಿರಿಸಲ್ಪಡುತ್ತಿವೆ. (2 ಪೇತ್ರ 3:5-7, NW; ಆದಿಕಾಂಡ 1:6-8) ಹಾಗಾಗುತ್ತದೆಂಬುದಕ್ಕೆ ನಮಗೆ ಯೆಹೋವನ ಭರವಸಾರ್ಹ ವಾಕ್ಯವಿದೆ! ಆತನು ತನ್ನ ಮಹಾ ದಿನದ ಅಗ್ನಿಮಯ ಕೋಪದಲ್ಲಿ “ಆಕಾಶಮಂಡಲ ಮತ್ತು ಭೂಮಿಗೆ”—ವಿಷಯಗಳ ಈ ವ್ಯವಸ್ಥೆಗೆ ಅಂತ್ಯವನ್ನು ತರುವನು! (ಚೆಫನ್ಯ 3:8) ಆದರೆ ಯಾವಾಗ?
ಅಂತ್ಯ ಬರಲಿಕ್ಕಾಗಿ ತೀವ್ರಾಭಿಲಾಷೆ
14. ನಾವೀಗ “ಕೊನೆಯ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂಬುದರ ಕುರಿತು ನಾವೇಕೆ ಭರವಸೆಯಿಂದಿರಬಲ್ಲೆವು?
14 ಅಂತ್ಯವು ಯಾವಾಗ ಬರುವುದೆಂದು ಯೇಸುವಿನ ಶಿಷ್ಯರು ಬಯಸಿದುದರಿಂದ ಅವರು ಅವನನ್ನು ಪ್ರಶ್ನಿಸಿದ್ದು: “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆಯೇನು?” ಯೆಹೂದಿ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುವುದೆಂದು ಅವರು ಕೇಳುತ್ತಿದ್ದುದು ಸಂಭವನೀಯವಾದರೂ ಯೇಸುವಿನ ಉತ್ತರವು ಪ್ರಧಾನವಾಗಿ ಈಗಿರುವ ಆಕಾಶಮಂಡಲ ಮತ್ತು ಭೂಮಿಯು ಯಾವಾಗ ನಾಶನವನ್ನು ಅನುಭವಿಸುವುದೆಂಬುದರ ಮೇಲೆ ಕೇಂದ್ರೀಕರಿಸಿತು. ಯೇಸು ಮಹಾ ಯುದ್ಧಗಳು, ಆಹಾರದ ಕೊರತೆಗಳು, ಭೂಕಂಪಗಳು, ರೋಗ ಮತ್ತು ಪಾತಕಗಳಂತಹ ವಿಷಯಗಳನ್ನು ಮುಂತಿಳಿಸಿದನು. (ಮತ್ತಾಯ 24:3-14; ಲೂಕ 21:5-36) ಯೇಸು “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಗೆ ಕೊಟ್ಟ ಹಾಗೂ “ಕಡೇ ದಿವಸ”ಗಳನ್ನು ಗುರುತಿಸುವ ವಿಷಯಗಳೆಂದು ಅಪೊಸ್ತಲ ಪೌಲನು ತಿಳಿಸಿದ ಸೂಚನೆಯನ್ನು ನಾವು 1914ನೆಯ ವರ್ಷದಿಂದ ನೋಡಿದ್ದೇವೆ. (2 ತಿಮೊಥೆಯ 3:1-5) ನಿಜವಾಗಿಯೂ, ಈ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ನಾವು ಜೀವಿಸುತ್ತೇವೆಂಬುದಕ್ಕೆ ಇರುವ ಸಾಕ್ಷ್ಯವೊ ಹೇರಳವಾಗಿದೆ!
15. ಯೇಸುವಿನ ಮುನ್ನೆಚ್ಚರಿಕೆಯ ಹೊರತೂ ಕ್ರೈಸ್ತರು ಯಾವ ಪ್ರವೃತ್ತಿಯುಳ್ಳವರಾಗಿದ್ದರು?
15 ಯೆಹೋವನ ದಿನವು ಯಾವಾಗ ಬರುವುದೆಂಬುದನ್ನು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳು ಆತುರದಿಂದಿದ್ದರು. ಅವರ ಆತುರದ ಕಾರಣ ಅವರು ಕೆಲವೊಮ್ಮೆ ಅದು ಯಾವಾಗ ಬರಬಹುದೆಂದು ಅಂದಾಜುಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಾಗೆ ಮಾಡುವ ಮೂಲಕ, ಯೇಸುವಿನ ಆದಿಶಿಷ್ಯರಂತೆ ಅವರೂ ತಮ್ಮ ಯಜಮಾನನ, “ಆ ಕಾಲವು ಯಾವಾಗ ಬರುವದೋ . . . ಗೊತ್ತಿಲ್ಲ” ಎಂಬ ಎಚ್ಚರಿಕೆಗೆ ಕಿವಿಗೊಡಲು ತಪ್ಪಿದ್ದಾರೆ. (ಮಾರ್ಕ 13:32, 33) ಕುಚೋದ್ಯಗಾರರು ನಂಬಿಗಸ್ತ ಕ್ರೈಸ್ತರಿಗೆ, ಅವರ ಸಮಯಕ್ಕೆ ಮುಂಚಿನ ನಿರೀಕ್ಷಣೆಗಳಿಗಾಗಿ ಗೇಲಿಮಾಡಿದ್ದಾರೆ. (2 ಪೇತ್ರ 3:3, 4) ಆದರೂ, ಯೆಹೋವನ ದಿನವು, ಆತನ ಕಾಲಪಟ್ಟಿಗನುಸಾರ ಬರುವುದು ಎಂದು ಪೇತ್ರನು ದೃಢಪಡಿಸುತ್ತಾನೆ.
ಯೆಹೋವನ ವೀಕ್ಷಣ ಅಗತ್ಯ
16. ನಾವು ವಿವೇಕದಿಂದ ಯಾವ ಬುದ್ಧಿವಾದಕ್ಕೆ ಕಿವಿಗೊಡುತ್ತೇವೆ?
16 ನಮಗೆ ಪೇತ್ರನು ಈಗ ನೆನಪಿಸುವಂತೆ, ಸಮಯದ ಕುರಿತ ಯೆಹೋವನ ವೀಕ್ಷಣ ನಮಗೆ ಅಗತ್ಯವಿದೆ: “ಆದರೂ, ಪ್ರಿಯರೇ, ಇದೊಂದು ನಿಜತ್ವವು ನಿಮ್ಮ ಗಮನಕ್ಕೆ ತಪ್ಪಿಹೋಗದಿರಲಿ, ಏನೆಂದರೆ, ಯೆಹೋವನಿಗೆ ಒಂದು ದಿನವು ಒಂದು ಸಾವಿರ ವರ್ಷಗಳಂತೆಯೂ ಒಂದು ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ.” ಇದಕ್ಕೆ ಹೋಲಿಸುವಾಗ, 70 ಅಥವಾ 80 ವರ್ಷಗಳ ನಮ್ಮ ಜೀವಮಾನವು ಅದೆಷ್ಟು ಅಲ್ಪಕಾಲದ್ದಾಗಿದೆ! (2 ಪೇತ್ರ 3:8, NW; ಕೀರ್ತನೆ 90:4, 10) ಆದುದರಿಂದ, ದೇವರ ವಾಗ್ದಾನಗಳ ನೆರವೇರಿಕೆ ವಿಳಂಬಿಸುತ್ತದೆಂದು ತೋರಿಬರುವಲ್ಲಿ, ನಾವು ದೇವರ ಪ್ರವಾದಿಯ ಈ ಬುದ್ಧಿವಾದವನ್ನು ಅಂಗೀಕರಿಸುವುದು ಅಗತ್ಯ: “[ನೇಮಿತ ಕಾಲವು] ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು” (ಓರೆಅಕ್ಷರಗಳು ನಮ್ಮವು).—ಹಬಕ್ಕೂಕ 2:3.
17. ಕೊನೆಯ ದಿವಸಗಳು ಅನೇಕರ ನಿರೀಕ್ಷೆಗಿಂತ ದೀರ್ಘಕಾಲ ಮುಂದುವರಿದಿವೆಯಾದರೂ, ನಾವು ಯಾವುದರ ಕುರಿತು ಭರವಸೆಯಿಂದಿರಬಲ್ಲೆವು?
17 ಈ ವ್ಯವಸ್ಥೆಯ ಕೊನೆಯ ದಿನಗಳು ಅನೇಕರ ನಿರೀಕ್ಷಣೆಗಿಂತ ಹೆಚ್ಚು ದೀರ್ಘಕಾಲ ಮುಂದುವರಿದಿರುವುದೇಕೆ? ಪೇತ್ರನು ಮುಂದೆ ತಿಳಿಸುವಂತೆ, ಒಂದು ಉತ್ತಮ ಕಾರಣಕ್ಕಾಗಿ: “ಯೆಹೋವನು ತನ್ನ ವಾಗ್ದಾನದ ಸಂಬಂಧದಲ್ಲಿ, ಕೆಲವು ಜನರು ನಿಧಾನತೆಯ ಕುರಿತು ಅಭಿಪ್ರಯಿಸುವಂತೆ ನಿಧಾನಿಸುತ್ತಿಲ್ಲ. ಆದರೆ ಆತನು, ಯಾವನೂ ನಾಶವಾಗಲು ಬಯಸದೆ, ಸಕಲರೂ ಪಶ್ಚಾತ್ತಾಪವನ್ನು ಪಡೆಯಬೇಕೆಂದು ಬಯಸಿ ನಿಮ್ಮೊಡನೆ ತಾಳ್ಮೆಯಿಂದಿದ್ದಾನೆ.” (2 ಪೇತ್ರ 3:9, NW) ಸರ್ವ ಮಾನವಕುಲದ ಸುಹಿತಗಳನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಆತನಿಗೆ ಚಿಂತೆಯಿರುವುದು ಜನರ ಜೀವಗಳಲ್ಲಿ. ಆತನು ಹೇಳುವಂತೆ: “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ.” (ಯೆಹೆಜ್ಕೇಲ 33:11) ಆದಕಾರಣ ಅಂತ್ಯವು ನಮ್ಮ ಸರ್ವ ವಿವೇಕದ ಸೃಷ್ಟಿಕರ್ತನ ಉದ್ದೇಶವನ್ನು ನೆರವೇರಿಸುವರೆ ತಕ್ಕ ಕಾಲದಲ್ಲಿ ಬರುವುದೆಂದು ನಾವು ಭರವಸೆಯಿಂದಿರಬಲ್ಲೆವು!
ಯಾವುದು ಗತಿಸಿಹೋಗುವುದು?
18, 19. (ಎ) ಯೆಹೋವನು ವಿಷಯಗಳ ಈ ವ್ಯವಸ್ಥೆಯನ್ನು ನಾಶಮಾಡಲು ನಿಶ್ಚಯಮಾಡಿರುವುದೇಕೆ? (ಬಿ) ಪೇತ್ರನು ಈ ವ್ಯವಸ್ಥೆಯ ಅಂತ್ಯವನ್ನು ಹೇಗೆ ವರ್ಣಿಸುತ್ತಾನೆ, ಮತ್ತು ವಾಸ್ತವವಾಗಿ ಏನು ನಾಶವಾಗುವುದು?
18 ಯೆಹೋವನು ತನ್ನನ್ನು ಸೇವಿಸುವವರನ್ನು ನಿಜವಾಗಿಯೂ ಪ್ರೀತಿಸುವುದರಿಂದ, ಅವರಿಗೆ ವ್ಯಥೆಯನ್ನುಂಟುಮಾಡುವ ಸರ್ವರನ್ನು ನಿರ್ಮೂಲಗೊಳಿಸುವನು. (ಕೀರ್ತನೆ 37:9-11, 29) ಈ ನಾಶನವು ಅನಿರೀಕ್ಷಿತವಾದ ಒಂದು ಸಮಯದಲ್ಲಿ ಬರುವುದೆಂದು, ಪೌಲನು ಮೊದಲು ಗಮನಿಸಿದಂತೆಯೇ ಪೇತ್ರನು ಗಮನಿಸುತ್ತ ಬರೆಯುವುದು: “ಯೆಹೋವನ ದಿನವು ಕಳ್ಳನಂತೆ ಬರುವುದು. ಅದರಲ್ಲಿ ಆಕಾಶಮಂಡಲವು ಹಿಸ್ಸೆನ್ನುವ ಸದ್ದಿನಿಂದ ಗತಿಸಿಹೋಗುವುದು, ಆದರೆ ಮೂಲಾಂಶಗಳು ತೀಕ್ಷ್ಣವಾಗಿ ಬಿಸಿಯಾಗಿದ್ದು ಕರಗಿ ಹೋಗುವುವು, ಮತ್ತು ಭೂಮಿಯೂ ಅದರಲ್ಲಿರುವ ಕೆಲಸಗಳೂ ಶೋಧಿಸಲ್ಪಡುವುವು.” (2 ಪೇತ್ರ 3:10; 1 ಥೆಸಲೊನೀಕ 5:2) ಜಲಪ್ರಳಯದಲ್ಲಿ ಅಕ್ಷರಾರ್ಥದ ಆಕಾಶಮಂಡಲವೂ ಭೂಮಿಯೂ ನಾಶವಾಗಲಿಲ್ಲ. ಅವು ಯೆಹೋವನ ದಿನದಲ್ಲಿಯೂ ನಾಶವಾಗುವುದಿಲ್ಲ. ಹಾಗಾದರೆ, ಯಾವುದು “ಗತಿಸಿಹೋಗುವುದು” ಅಥವಾ ನಾಶವಾಗುವುದು?
19 ಮಾನವಕುಲದ ಮೇಲೆ “ಆಕಾಶಮಂಡಲ”ದಂತೆ ಅಧಿಕಾರ ನಡೆಸಿರುವ ಮಾನವ ಸರಕಾರಗಳು ಅಂತ್ಯಗೊಳ್ಳುವುವು; ಅದೇ ರೀತಿ “ಭೂಮಿ” ಅಥವಾ ಮಾನವ ಭಕ್ತಿಹೀನ ಸಮಾಜವು ಸಹ. “ಹಿಸ್ಸೆನ್ನುವ ಸದ್ದು” ಪ್ರಾಯಶಃ ಆಕಾಶಮಂಡಲದ ಶೀಘ್ರ ದಾಟಿಹೋಗುವಿಕೆಯನ್ನು ಸೂಚಿಸುತ್ತದೆ. ಇಂದಿನ ಇಳಿಗತಿಯ ಮಾನವ ಸಮಾಜವನ್ನು ಒಳಗೊಂಡಿರುವ “ಮೂಲಾಂಶಗಳು” “ಕರಗಿ ಹೋಗುವುವು” ಅಥವಾ ನಾಶವಾಗುವುವು. “ಭೂಮಿಯೂ ಅದರಲ್ಲಿರುವ ಕೆಲಸಗಳೂ ಶೋಧಿಸಲ್ಪಡುವುವು.” ಯೆಹೋವನು ಇಡೀ ಲೋಕ ವ್ಯವಸ್ಥೆಯನ್ನು ಅದಕ್ಕೆ ಅರ್ಹವಾದ ಅಂತ್ಯಕ್ಕೆ ತರುವಾಗ, ಆತನು ಜನರ ದುರ್ಮಾರ್ಗಗಳನ್ನು ಪೂರ್ತಿಯಾಗಿ ಬಯಲುಪಡಿಸುವನು.
ನಿಮ್ಮ ನಿರೀಕ್ಷೆಯ ಮೇಲೆ ಕೇಂದ್ರೀಕರಿಸಿರಿ
20. ಮುಂದಿರುವ ಘಟನೆಗಳ ಕುರಿತ ನಮ್ಮ ಜ್ಞಾನವು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕು?
20 ಈ ಕೌತುಕ ಹುಟ್ಟಿಸುವ ಸಂಭವಗಳು ಸನ್ನಿಹಿತವಾಗಿರುವುದರಿಂದ, ನಾವು “ನಡತೆಯ ಪವಿತ್ರ ಕ್ರಿಯೆಗಳಲ್ಲಿ ಮತ್ತು ದಿವ್ಯ ಭಕ್ತಿಯ ಕೃತ್ಯಗಳಲ್ಲಿ” ಒಳಗೊಂಡಿದ್ದು, “ಯೆಹೋವನ ದಿನದ ಸಾನ್ನಿಧ್ಯವನ್ನು ಕಾಯುತ್ತ, ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುತ್ತ” ಇರಬೇಕೆಂದು ಪೇತ್ರನು ಹೇಳುತ್ತಾನೆ. ಅದರ ವಿಷಯದಲ್ಲಿ ಸಂದೇಹವಿರಲು ಸಾಧ್ಯವೇ ಇಲ್ಲ! “ಆಕಾಶಮಂಡಲವು ಅಗ್ನಿಮಯವಾಗಿರುವುದರಿಂದ ಕರಗಿಹೋಗುವುದು ಮತ್ತು ಮೂಲಾಂಶಗಳು ತೀಕ್ಷ್ಣವಾಗಿ ಬಿಸಿಯಾಗಿರುವುದರಿಂದ ನೀರಾಗುವುವು!” (2 ಪೇತ್ರ 3:11, 12, NW) ಈ ಕೌತುಕ ಹುಟ್ಟಿಸುವ ಘಟನೆಗಳು ನಾಳೆ ಆರಂಭಗೊಳ್ಳವುದು ಸಾಧ್ಯ ಎಂಬ ನಿಜತ್ವವು ನಾವು ಮಾಡುವ ಅಥವಾ ಮಾಡಲು ಯೋಜಿಸುವ ಸಂಗತಿಗಳೆಲ್ಲವುಗಳನ್ನು ಪ್ರಭಾವಿಸಬೇಕು.
21. ಇಂದಿನ ಆಕಾಶಮಂಡಲ ಮತ್ತು ಭೂಮಿಯ ಸ್ಥಳದಲ್ಲಿ ಯಾವುದು ಸ್ಥಾನಭರ್ತಿಯಾಗುವುದು?
21 ಪೇತ್ರನು ಈಗ ಈ ಹಳೆಯ ವ್ಯವಸ್ಥೆಯನ್ನು ಯಾವುದು ಭರ್ತಿಮಾಡುವುದೆಂದು ನಮಗೆ ತಿಳಿಸುತ್ತ ಹೇಳುವುದು: “ಆದರೆ ನಾವು ಆತನ ವಾಗ್ದಾನಾನುಸಾರ ಕಾಯುತ್ತಿರುವ ನೂತನ ಆಕಾಶಮಂಡಲವೂ ನೂತನ ಭೂಮಿಯೂ ಇವೆ; ಇವುಗಳಲ್ಲಿ ನೀತಿಯು ವಾಸಿಸಲಿರುವುದು.” (2 ಪೇತ್ರ 3:13, NW; ಯೆಶಾಯ 65:17) ಹಾ, ಎಂತಹ ಮಹಾ ನೆಮ್ಮದಿ! ಕ್ರಿಸ್ತನೂ ಅವನ 1,44,000 ಮಂದಿ ಜೊತೆಪ್ರಭುಗಳೂ “ನೂತನ” ಸರಕಾರೀ “ಆಕಾಶಮಂಡಲ”ವಾಗುವರು ಮತ್ತು ಈ ಲೋಕದ ಅಂತ್ಯವನ್ನು ಪಾರಾಗುವವರು “ನೂತನ ಭೂಮಿ”ಯನ್ನು ರಚಿಸುತ್ತಾರೆ.—1 ಯೋಹಾನ 2:17; ಪ್ರಕಟನೆ 5:9, 10; 14:1, 3.
ತುರ್ತುಪ್ರಜ್ಞೆ ಮತ್ತು ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳಿರಿ
22. (ಎ) ಯಾವುದೇ ಆತ್ಮಿಕ ದೋಷ ಅಥವಾ ನ್ಯೂನತೆಯನ್ನು ತಪ್ಪಿಸಲು ನಮಗೆ ಏನು ಸಹಾಯಮಾಡುವುದು? (ಬಿ) ಪೇತ್ರನು ಯಾವ ಅಪಾಯದ ಕುರಿತು ಎಚ್ಚರಿಸುತ್ತಾನೆ?
22 ಪೇತ್ರನು ಮುಂದುವರಿಸುವುದು: “ಆದುದರಿಂದ ಪ್ರಿಯರೇ, ನೀವು ಈ ವಿಷಯಗಳನ್ನು ಕಾಯುತ್ತಿರುವುದರಿಂದ, ಆತನಿಂದ ಕೊನೆಯದಾಗಿ ನಿರ್ದೋಷಿಗಳೂ ನ್ಯೂನತೆಯಿಲ್ಲದವರೂ ಶಾಂತಿಯಲ್ಲಿರುವವರೂ ಆಗಿ ಕಂಡುಕೊಳ್ಳಲ್ಪಡುವಂತೆ ನಿಮ್ಮ ಕೈಲಾದುದನ್ನು ಮಾಡಿರಿ. ಇದಲ್ಲದೆ, ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯೆಂಬಂತೆ ಎಣಿಸಿರಿ.” ಅತ್ಯಾತುರದಿಂದ ಕಾಯುತ್ತ, ಯೆಹೋವನ ದಿನದ ಯಾವುದೇ ತೋರ್ಕೆಯ ವಿಳಂಬವನ್ನು ದೈವಿಕ ತಾಳ್ಮೆಯ ಅಭಿವ್ಯಕ್ತಿಯೆಂಬಂತೆ ವೀಕ್ಷಿಸುವುದು, ನಮ್ಮಲ್ಲಿ ಯಾವುದೇ ಆತ್ಮಿಕ ದೋಷ ಇಲ್ಲವೆ ನ್ಯೂನತೆಯನ್ನು ತ್ಯಜಿಸುವಂತೆ ನಮಗೆ ಸಹಾಯಮಾಡುವುದು. ಆದರೂ, ಅಪಾಯವಿದೆ! “ನಮ್ಮ ಪ್ರಿಯ ಸಹೋದರನಾದ ಪೌಲನ ಬರಹಗಳಲ್ಲಿ . . . ಅರ್ಥಮಾಡಿಕೊಳ್ಳಲು ಕಷ್ಟವಾಗುವ ಕೆಲವು ವಿಷಯಗಳಿವೆ. ಇವಕ್ಕೆ ಅಶಿಕ್ಷಿತರೂ ಅಸ್ಥಿರರೂ, ಶಾಸ್ತ್ರಗಳಲ್ಲಿ ಇನ್ನುಳಿದವಕ್ಕೆ ಮಾಡುವಂತೆಯೇ, ಅಪಾರ್ಥವನ್ನು ಕಟ್ಟುತ್ತಾರೆ. ಇದು ಅವರ ಸ್ವಂತ ನಾಶನಕ್ಕಾಗಿರುವುದು.”—2 ಪೇತ್ರ 3:14-16, NW.
23. ಪೇತ್ರನ ಮುಕ್ತಾಯದ ಬುದ್ಧಿವಾದವೇನು?
23 ಸುಳ್ಳು ಬೋಧಕರು ದೇವರ ಅಪಾತ್ರ ದಯೆಯ ಕುರಿತ ಪೌಲನ ಬರಹಗಳನ್ನು, ಸಡಿಲು ನಡತೆಗೆ ನೆಪವಾಗಿ ಬಳಸುತ್ತ, ಅಪಾರ್ಥ ಕಲ್ಪಿಸಿದರೆಂದು ವ್ಯಕ್ತವಾಗುತ್ತದೆ. ತನ್ನ ಬೀಳ್ಕೊಳ್ಳುವ ಬುದ್ಧಿವಾದವನ್ನು ಬರೆಯುವಾಗ ಪ್ರಾಯಶಃ ಪೇತ್ರನ ಮನಸ್ಸಿನಲ್ಲಿ ಇದು ಇದ್ದಿರಬೇಕು: “ಆದುದರಿಂದ ಪ್ರಿಯರೇ, ಈ ಮುಂಜ್ಞಾನವುಳ್ಳವರಾಗಿರುವುದರಿಂದ, ನೀವು ಅವರೊಂದಿಗೆ, ನಿಯಮೋಲ್ಲಂಘಿಸುವ ಜನರ ತಪ್ಪುಗಳ ಮೂಲಕ ತಪ್ಪುದಾರಿಗೆ ಎಳೆಯಲ್ಪಟ್ಟು ನಿಮ್ಮ ಸ್ವಂತ ನಿಶ್ಚಲತೆಯಿಂದ ಬಿದ್ದುಹೋಗದಂತೆ ಎಚ್ಚರವಾಗಿರಿ.” ಬಳಿಕ ಅವನು ತನ್ನ ಪತ್ರವನ್ನು ಹೀಗೆ ಪ್ರೇರಿಸುತ್ತಾ ಮುಕ್ತಾಯಗೊಳಿಸುತ್ತಾನೆ: “ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಅಪಾತ್ರ ದಯೆ ಮತ್ತು ಜ್ಞಾನದಲ್ಲಿ ಬೆಳೆಯುತ್ತ ಹೋಗಿರಿ.”—2 ಪೇತ್ರ 3:17, 18, NW.
24. ಯೆಹೋವನ ಸೇವಕರೆಲ್ಲರು ಯಾವ ಮನೋಭಾವವನ್ನು ಸ್ವೀಕರಿಸಬೇಕು?
24 ಪೇತ್ರನು ತನ್ನ ಸಹೋದರರನ್ನು ಬಲಪಡಿಸಲು ಬಯಸಿದನೆಂಬುದು ಸ್ಪಷ್ಟ. ಈಮೊದಲು ಉಲ್ಲೇಖಿಸಿರುವ ಆ 82 ವರ್ಷ ಪ್ರಾಯದ ನಂಬಿಗಸ್ತ ಸಾಕ್ಷಿಯ, “‘ಯೆಹೋವನ ದಿನದ ಸಾನ್ನಿಧ್ಯವನ್ನು’, ಅಪೊಸ್ತಲನು ಪ್ರೋತ್ಸಾಹಿಸಿದಂತೆ ‘ಮನಸ್ಸಿಗೆ ನಿಕಟವಾಗಿಟ್ಟುಕೊಂಡು’ ಜೀವಿಸಿದ್ದೇನೆ. ನಾನು ಯಾವಾಗಲೂ ವಾಗ್ದತ್ತ ನೂತನ ಲೋಕವನ್ನು ‘ನೋಡದಿದ್ದರೂ ವಾಸ್ತವವಾಗಿ’ ವೀಕ್ಷಿಸಿದ್ದೇನೆ” ಎಂಬ ಮನೋಭಾವವು ಎಲ್ಲರಲ್ಲಿಯೂ ಇರಬೇಕೆಂದು ಅವನು ಬಯಸುತ್ತಾನೆ. ನಾವೆಲ್ಲರೂ ಅದೇ ರೀತಿಯಲ್ಲಿ ನಮ್ಮ ಜೀವನವನ್ನು ನಡೆಸುವಂತಾಗಲಿ.
ಹೇಗೆ ಉತ್ತರಿಸುವಿರಿ?
◻ ಯೆಹೋವನ ದಿನವನ್ನು “ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದು” ಎಂದರೇನು?
◻ ಕುಚೋದ್ಯಗಾರರು ಬೇಕುಬೇಕೆಂದು ಯಾವುದನ್ನು ಅಲಕ್ಷ್ಯಮಾಡುತ್ತಾರೆ, ಮತ್ತು ಏಕೆ?
◻ ಕುಚೋದ್ಯಗಾರರು ನಂಬಿಗಸ್ತ ಕ್ರೈಸ್ತರನ್ನು ಯಾವ ಕಾರಣಕ್ಕಾಗಿ ಗೇಲಿಮಾಡಿದ್ದಾರೆ?
◻ ನಾವು ಯಾವ ವೀಕ್ಷಣವನ್ನು ಕಾಪಾಡಿಕೊಳ್ಳುವುದು ಅಗತ್ಯ?
[ಪುಟ 23 ರಲ್ಲಿರುವ ಚಿತ್ರ]
ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳಿ . . .
[ಪುಟ 24 ರಲ್ಲಿರುವ ಚಿತ್ರ]
. . . ಮತ್ತು ಹಿಂಬಾಲಿಸಿ ಬರುವ ಹೊಸ ಲೋಕವನ್ನು