ಅಧ್ಯಯನ ಲೇಖನ 8
ಬುದ್ಧಿವಂತರಾಗಿರಿ, ಎಚ್ಚರವಾಗಿರಿ!
“ಬುದ್ಧಿವಂತರಾಗಿ, ಎಚ್ಚರವಾಗಿರಿ.”—1 ಪೇತ್ರ 5:8.
ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!
ಈ ಲೇಖನದಲ್ಲಿ ಏನಿದೆ?a
1. (ಎ) ಲೋಕದ ಅಂತ್ಯ ಯಾವಾಗ ಆಗುತ್ತೆ ಅನ್ನೋದ್ರ ಬಗ್ಗೆ ಯೇಸು ಏನ್ ಹೇಳಿದನು? (ಬಿ) ಅದಕ್ಕೆ ತನ್ನ ಶಿಷ್ಯರು ಹೇಗಿರ್ಬೇಕು ಅಂತ ಹೇಳಿದ್ದಾನೆ?
ಯೇಸು ಸಾಯೋಕೆ ಸ್ವಲ್ಪ ದಿನಗಳ ಮುಂಚೆ 4 ಶಿಷ್ಯರು ಆತನ ಹತ್ರ ಬಂದ್ರು. ಅವರು “ಈ ಲೋಕದ ಅಂತ್ಯಕ್ಕೆ ಸೂಚನೆ ಏನು?” ಅಂತ ಆತನ ಹತ್ರ ಕೇಳಿದ್ರು. (ಮತ್ತಾ. 24:3) ಶಿಷ್ಯರು ‘ಈ ಲೋಕದ ಅಂತ್ಯ’ ಅಂತ ಹೇಳ್ದಾಗ ಅವ್ರ ಮನಸ್ಸಲ್ಲಿ ಏನಿತ್ತು? ಯೆರೂಸಲೇಮ್ ಮತ್ತು ಅದ್ರ ದೇವಾಲಯ ಯಾವಾಗ ನಾಶ ಆಗುತ್ತೆ ಅನ್ನೋ ಪ್ರಶ್ನೆ ಅವ್ರ ಮನಸ್ಸಲ್ಲಿ ಇದ್ದಿರ್ಬೇಕು. ಆಗ ಯೇಸು ಅವ್ರಿಗೆ ಏನ್ ಉತ್ರ ಕೊಟ್ಟನು? ಆತನು ಯೆರೂಸಲೇಮ್ ನಾಶ ಆಗೋದ್ರ ಬಗ್ಗೆ ಮಾತ್ರ ಅಲ್ಲ, ಈಗ ನಾವು ಜೀವಿಸ್ತಿರೋ ಲೋಕ ಅಂದ್ರೆ ‘ಇಡೀ ಲೋಕ ಅಂತ್ಯ’ ಆಗೋದ್ರ ಬಗ್ಗೆ ಅವ್ರಿಗೆ ಹೇಳಿದನು. ಆದ್ರೆ ನಾಶ ಆಗೋ “ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ, ತಂದೆಗೆ ಮಾತ್ರ ಗೊತ್ತು” ಅಂತ ಹೇಳಿದನು. ಅದಕ್ಕೆ ಯೇಸು ತನ್ನೆಲ್ಲಾ ಶಿಷ್ಯರಿಗೆ “ಯಾವಾಗ್ಲೂ ಎಚ್ಚರವಾಗಿರಿ” ಅಂತ ಹೇಳಿದ್ದಾನೆ.—ಮಾರ್ಕ 13:32-37.
2. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಯಾಕೆ ಎಚ್ಚರವಾಗಿ ಇರ್ಬೇಕಿತ್ತು?
2 ಒಂದನೇ ಶತಮಾನದಲ್ಲಿದ್ದ ಯೆಹೂದಿ ಕ್ರೈಸ್ತರು ಎಚ್ಚರವಾಗಿ ಇರ್ಬೇಕಿತ್ತು. ಆಗ ಮಾತ್ರ ತಮ್ಮ ಜೀವ ಕಾಪಾಡ್ಕೊಳ್ಳೋಕೆ ಆಗ್ತಿತ್ತು. ಯೆರೂಸಲೇಮ್ ನಾಶ ಆಗೋ ಮುಂಚೆ ಏನಾಗುತ್ತೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದ್ದನು. ಆತನು “ಯೆರೂಸಲೇಮ್ ಪಟ್ಟಣಕ್ಕೆ ಶತ್ರು ಸೈನ್ಯ ಮುತ್ತಿಗೆ ಹಾಕಿದಾಗ ಅದ್ರ ನಾಶನ ಹತ್ರ ಆಯ್ತು ಅಂತ ತಿಳ್ಕೊಳ್ಳಿ” ಅಂದನು. ಆಗ ಅಲ್ಲಿ ಇರೋರು “ಬೆಟ್ಟಗಳಿಗೆ ಓಡಿಹೋಗಬೇಕು” ಅಂತ ಹೇಳಿದ್ದನು. (ಲೂಕ 21:20, 21) ಯೇಸು ಹೇಳಿದ ಹಾಗೆ ರೋಮನ್ನರು ಯೆರೂಸಲೇಮಿಗೆ ಮುತ್ತಿಗೆ ಹಾಕಿದ್ರು. ಅದನ್ನ ಕೆಲವು ಯೆಹೂದ್ಯರು ಗಮನಿಸಿ ಯೆರೂಸಲೇಮನ್ನ ಬಿಟ್ಟು ಓಡಿಹೋದ್ರು. ಇದ್ರಿಂದ ತಮ್ಮ ಜೀವ ಉಳಿಸ್ಕೊಂಡ್ರು.
3. ಈ ಲೇಖನದಲ್ಲಿ ನಾವೇನು ಕಲಿತೀವಿ?
3 ನಾವು ಜೀವಿಸ್ತಾ ಇರೋ ಈ ಕೆಟ್ಟ ಲೋಕ ನಾಶ ಆಗೋ ಸಮಯ ಹತ್ರ ಆಗ್ತಾ ಇದೆ. ಹಾಗಾಗಿ ನಾವು ತುಂಬ ಎಚ್ಚರವಾಗಿ ಇರ್ಬೇಕು, ಬುದ್ಧಿವಂತರಾಗಿ ನಡ್ಕೊಬೇಕು. ನಮ್ಮ ಸುತ್ತ ನಡಿತಿರೋ ಘಟನೆಗಳನ್ನ ನೋಡ್ದಾಗ ಯಾವ ವಿಷ್ಯದಲ್ಲಿ ಎಚ್ಚರವಾಗಿ ಇರ್ಬೇಕು? ಹೇಗೆ ಹುಷಾರಾಗಿ ಇರ್ಬೇಕು? ನಮ್ಮ ಸಮಯನ ಹೇಗೆ ಚೆನ್ನಾಗಿ ಉಪಯೋಗಿಸ್ಕೊಬೇಕು? ಈ ಪ್ರಶ್ನೆಗಳಿಗೆ ನಾವೀಗ ಉತ್ರ ನೋಡೋಣ.
ಲೋಕದ ಘಟನೆಗಳನ್ನ—ನೋಡ್ವಾಗ ಎಚ್ಚರವಾಗಿರಿ!
4. ಲೋಕದಲ್ಲಿ ನಡಿತಿರೋ ಘಟನೆಗಳು ಭವಿಷ್ಯವಾಣಿಯ ನೆರವೇರಿಕೆನಾ ಅಂತ ತಿಳ್ಕೊಳ್ಳೋಕೆ ಯಾಕೆ ಆಸೆಪಡ್ತೀವಿ?
4 ಲೋಕದಲ್ಲಿ ನಡಿತಿರೋ ಒಂದೊಂದು ಘಟನೆಯನ್ನೂ ನೋಡ್ವಾಗ ಇದು ಬೈಬಲ್ ಭವಿಷ್ಯವಾಣಿಯ ನೆರವೇರಿಕೆನಾ? ಅಂತ ತಿಳ್ಕೊಳ್ಳೋಕೆ ನಾವು ಆಸೆಪಡ್ತೀವಿ. ಯಾಕಂದ್ರೆ ಈ ಸೈತಾನನ ಲೋಕದ ಅಂತ್ಯ, ಹತ್ರ ಆಗ್ತಿರುವಾಗ ಏನೆಲ್ಲಾ ನಡಿಯುತ್ತೆ ಅಂತ ಯೇಸು ಹೇಳಿದ್ದನು. (ಮತ್ತಾ. 24:3-14) ಅಪೊಸ್ತಲ ಪೇತ್ರ ಕೂಡ, ಬೈಬಲ್ನಲ್ಲಿರೋ ಭವಿಷ್ಯವಾಣಿಗಳು ನಿಜ ಆಗೋದನ್ನ ನೋಡ್ವಾಗ ನಿಮ್ಮ ನಂಬಿಕೆ ಜಾಸ್ತಿ ಆಗುತ್ತೆ ಅಂತ ಹೇಳ್ದ. (2 ಪೇತ್ರ 1:19-21) ಅಷ್ಟೇ ಅಲ್ಲ, ಪ್ರಕಟನೆ ಪುಸ್ತಕದ ಆರಂಭದ ವಚನಗಳಲ್ಲಿ ಏನಿದೆ ಅಂತ ನೋಡಿ. “ಈ ಮಾತುಗಳನ್ನ ಯೇಸು ಹೇಳಿದನು. ಇದನ್ನ ಯೇಸುಗೆ ಹೇಳಿದ್ದು ದೇವರು. ಮುಂದೆ ಏನಾಗುತ್ತೆ ಅಂತ ತನ್ನ ದಾಸರಿಗೆ ಗೊತ್ತಾಗೋಕೆ ಈ ವಿಷ್ಯಗಳನ್ನ ಹೇಳಿದನು” ಅಂತ ಅಲ್ಲಿದೆ. (ಪ್ರಕ. 1:1) ಹಾಗಾಗಿ ನಾವು ಲೋಕದ ಘಟನೆಗಳನ್ನ ಗಮನಿಸ್ತಾ ಇರ್ತೀವಿ. ಇದು ಬೈಬಲ್ ಭವಿಷ್ಯವಾಣಿಯ ನೆರವೇರಿಕೆನಾ ಅಂತ ತಿಳ್ಕೊಳ್ಳೋಕೆ ಪ್ರಯತ್ನ ಮಾಡ್ತೀವಿ. ಅಂಥ ಘಟನೆಗಳ ಬಗ್ಗೆ ಬೇರೆಯವರ ಹತ್ರ ಮಾತಾಡೋಕೆ ನಾವು ಕಾಯ್ತಾ ಇರ್ತೀವಿ.
5. ನಾವು ಏನ್ ಮಾಡ್ಬಾರ್ದು? ಬದಲಿಗೆ ಏನ್ ಮಾಡ್ಬೇಕು? (ಚಿತ್ರಗಳನ್ನೂ ನೋಡಿ.)
5 ಬೈಬಲ್ ಭವಿಷ್ಯವಾಣಿಗಳ ಬಗ್ಗೆ ಬೇರೆಯವರ ಹತ್ರ ಮಾತಾಡ್ವಾಗ ನಾವು ಊಹಿಸ್ಕೊಂಡಿರೋ ವಿಷ್ಯಗಳನ್ನ ಹೇಳ್ಬಾರ್ದು. ಯಾಕೆ? ಯಾಕಂದ್ರೆ ಸಭೆಲಿರೋ ಒಗ್ಗಟ್ಟು ಹಾಳಾಗಿಬಿಡುತ್ತೆ. ಉದಾಹರಣೆಗೆ, ದೊಡ್ಡದೊಡ್ಡ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿಗಳು ನಾವು ಯುದ್ಧಗಳನ್ನ ನಿಲ್ಲಿಸಿಬಿಡ್ತೀವಿ, ಶಾಂತಿ ತರ್ತೀವಿ, ನೀವೆಲ್ರೂ ನೆಮ್ಮದಿಯಿಂದ ಇರ್ತೀರ ಅಂತ ಹೇಳ್ಬೋದು. ಆಗ ನಮಗೆ ಸಾಮಾನ್ಯವಾಗಿ 1 ಥೆಸಲೊನೀಕ 5:3 ನೆನಪಿಗೆ ಬರುತ್ತೆ. ಇದು ಆ ಭವಿಷ್ಯವಾಣಿಯ ನೆರವೇರಿಕೆನೇ ಇರ್ಬೋದು ಅಂತ ನಮಗೆ ನಾವೇ ಊಹಿಸ್ಕೊಬಾರ್ದು. ಬದಲಿಗೆ ಯೆಹೋವನ ಸಂಘಟನೆ ಈ ಭವಿಷ್ಯವಾಣಿ ಬಗ್ಗೆ ಇತ್ತೀಚೆಗೆ ಹೇಳಿರೋ ಮಾಹಿತಿನ ನಾವು ಚೆನ್ನಾಗಿ ತಿಳ್ಕೊಬೇಕು. ಆ ವಿಷ್ಯಗಳನ್ನ ಮಾತಾಡ್ಬೇಕೇ ಹೊರತು ನಮಗೆ ಅನಿಸಿದ್ದನ್ನೆಲ್ಲ ಮಾತಾಡ್ಬಾರ್ದು. ಆಗ ಮಾತ್ರ ಸಭೆಲಿ ಎಲ್ರೂ ಒಗ್ಗಟ್ಟಾಗಿ ಇರ್ತೀವಿ. ನಮ್ಮೆಲ್ರ “ಮನಸ್ಸು, ಯೋಚಿಸೋ ರೀತಿ ಒಂದೇ ತರ” ಇರುತ್ತೆ.—1 ಕೊರಿಂ. 1:10; 4:6.
6. ಎರಡನೇ ಪೇತ್ರ 3:11-13ರಲ್ಲಿ ಹೇಳೋ ತರ ನಾವೇನು ಮಾಡ್ಬೇಕು?
6 ಎರಡನೇ ಪೇತ್ರ 3:11-13 ಓದಿ. ಬೈಬಲ್ ಭವಿಷ್ಯವಾಣಿಗಳು ಹೇಗೆ ನಿಜ ಆಗ್ತಿದೆ ಅನ್ನೋದನ್ನ ಯೋಚ್ನೆ ಮಾಡ್ವಾಗ ನಾವು ಹುಷಾರಾಗಿ ಇರ್ಬೇಕು ಅಂತ ಅಪೊಸ್ತಲ ಪೇತ್ರನ ಮಾತುಗಳಿಂದ ಗೊತ್ತಾಗುತ್ತೆ. “ಯೆಹೋವನ ದಿನ ಬರುತ್ತೆ ಅನ್ನೋದನ್ನ ಮನಸ್ಸಲ್ಲಿಟ್ಟು ಕಾಯ್ತಾ ಇರಿ” ಅಂತ ಅವನು ಹೇಳ್ದ. ಇದ್ರ ಅರ್ಥ ಆ “ದಿನ ಮತ್ತು ಸಮಯ” ಯಾವಾಗ ಬರುತ್ತೆ, ಹರ್ಮಗೆದೋನ್ ಯುದ್ಧ ಯಾವಾಗ ನಡಿಯುತ್ತೆ ಅಂತ ನಾವು ಲೆಕ್ಕ ಹಾಕೊಂಡು ಕಾಯ್ತಾ ಇರ್ಬೇಕು ಅಂತನಾ? ಇಲ್ಲ, ಬದಲಿಗೆ ನಮಗಿರೋ ಸಮಯನ ನಾವು ಚೆನ್ನಾಗಿ ಉಪಯೋಗಿಸ್ಕೊಬೇಕು. “ಪವಿತ್ರರಾಗಿ ನಡ್ಕೊಬೇಕು, ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ ಮಾಡ್ಬೇಕು.” (ಮತ್ತಾ. 24:36; ಲೂಕ 12:40) ನಮ್ಮ ಮಾತು ಮತ್ತು ನಡತೆ ಯೆಹೋವನಿಗೆ ಇಷ್ಟ ಆಗೋ ತರ ಇರ್ಬೇಕು. ಆತನನ್ನ ಪ್ರೀತಿಸ್ತೀವಿ ಅಂತ ತೋರಿಸ್ಬೇಕು. ಅದಕ್ಕೆ ನಾವು ಹುಷಾರಾಗಿ ಇರ್ಬೇಕು. ಹೇಗೆ ಅಂತ ಈಗ ನೋಡೋಣ.
“ಹುಷಾರಾಗಿರಿ” ಅಂದ್ರೆ ಏನು?
7. ಹುಷಾರಾಗಿ ಇರೋ ವ್ಯಕ್ತಿ ಹೇಗೆ ನಡ್ಕೊಳ್ತಾನೆ? (ಲೂಕ 21:34)
7 ಯೇಸು ತನ್ನ ಶಿಷ್ಯರಿಗೆ ಲೋಕದಲ್ಲಿ ನಡಿತಿರೋ ವಿಷ್ಯಗಳನ್ನ ಗಮನಿಸ್ಬೇಕು ಅಂತ ಹೇಳಿದ್ರ ಬಗ್ಗೆ ಇಲ್ಲಿ ತನಕ ನೋಡಿದ್ವಿ. ಇನ್ನೊಂದು ವಿಷ್ಯ ಮಾಡ್ಬೇಕು ಅಂತನೂ ಆತನು ಹೇಳಿದ್ದಾನೆ. ಅದು ಲೂಕ 21:34ರಲ್ಲಿ ಇದೆ. (ಓದಿ.) ಅಲ್ಲಿ ಯೇಸು, “ಹುಷಾರಾಗಿರಿ” ಅಂತ ಹೇಳಿದ್ದಾನೆ. ಹುಷಾರಾಗಿ ಇರೋ ಒಬ್ಬ ವ್ಯಕ್ತಿ ತನಗೆ ಯೆಹೋವನ ಜೊತೆ ಇರೋ ಸಂಬಂಧನ ಹಾಳು ಮಾಡೋ ಯಾವ ಕೆಲಸನೂ ಮಾಡಲ್ಲ. ಅಂಥ ಅಪಾಯ ಇದೆ ಅಂತ ಗೊತ್ತಾದ್ರೆ ಅದ್ರ ಹತ್ರನೂ ಹೋಗಲ್ಲ. ಹೀಗೆ ಯಾವಾಗ್ಲೂ ಯೆಹೋವನಿಗೆ ಇಷ್ಟ ಆಗೋ ತರಾನೇ ನಡ್ಕೊಳ್ತಾನೆ.—ಜ್ಞಾನೋ. 22:3; ಯೂದ 20, 21.
8. ಅಪೊಸ್ತಲ ಪೌಲ ಎಫೆಸದಲ್ಲಿದ್ದ ಕ್ರೈಸ್ತರಿಗೆ ಏನಂತ ಹೇಳ್ದ?
8 ಅಪೊಸ್ತಲ ಪೌಲ ಎಫೆಸದಲ್ಲಿದ್ದ ಕ್ರೈಸ್ತರಿಗೆ ಹುಷಾರಾಗಿ ಇರೋಕೆ ಏನ್ ಮಾಡ್ಬೇಕು ಅಂತ ಹೇಳ್ದ. “ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ” ಅಂದ. (ಎಫೆ. 5:15, 16) ಯಾಕೆ? ಯೆಹೋವನ ಜೊತೆ ಇರೋ ಸಂಬಂಧನ ಹಾಳು ಮಾಡೋಕೆ ಸೈತಾನ ಹಗಲೂ-ರಾತ್ರಿ ಕಾಯ್ತಾ ಇದ್ದಾನೆ. ಅದಕ್ಕೇ ಬೈಬಲ್, “ಯೆಹೋವನ ಇಷ್ಟ ಏನಂತ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇರಿ” ಅಂತ ಹೇಳುತ್ತೆ. ಇದನ್ನ ಮಾಡ್ತಾ ಇದ್ರೆ ನಾವು ಸೈತಾನನಿಗೆ ಬಲಿಯಾಗಲ್ಲ.—ಎಫೆ. 5:17.
9. ಯೆಹೋವನ ಇಷ್ಟ ಏನು ಅಂತ ತಿಳ್ಕೊಳ್ಳೋಕೆ ನಾವೇನು ಮಾಡ್ಬೇಕು?
9 ಯೆಹೋವನ ಜೊತೆ ನಮಗಿರೋ ಸಂಬಂಧನ ಹಾಳು ಮಾಡೋ ಕೆಲವು ಅಪಾಯಗಳ ಬಗ್ಗೆ ಬೈಬಲ್ ಹೇಳುತ್ತೆ. ಆದ್ರೆ ಇನ್ನು ಕೆಲವು ಅಪಾಯಗಳ ಬಗ್ಗೆ ಬೈಬಲಲ್ಲಿ ನೇರವಾಗಿ ಹೇಳಿಲ್ಲ. ಅಂಥ ಸನ್ನಿವೇಶಗಳು ಬಂದಾಗ ನಾವು ಏನ್ ಮಾಡ್ಬೇಕು, ಏನ್ ಮಾಡ್ಬಾರ್ದು ಅಂತ ನಾವೇ ನಿರ್ಧಾರ ಮಾಡ್ಬೇಕಾಗುತ್ತೆ. ಹಾಗಾಗಿ “ಯೆಹೋವನ ಇಷ್ಟ ಏನಂತ” ನಾವು ತಿಳ್ಕೊಬೇಕು. ಅದಕ್ಕೆ ನಾವು ದಿನಾಲೂ ಬೈಬಲ್ ಓದ್ಬೇಕು. ಆಮೇಲೆ ಓದಿದ ವಿಷ್ಯದ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡ್ಬೇಕು. ಆಗ ನಮಗೆ ಯೆಹೋವನ ಇಷ್ಟ ಏನು ಅಂತ ಗೊತ್ತಾಗುತ್ತೆ. ಜೊತೆಗೆ, ‘ಕ್ರಿಸ್ತನ ಮನಸ್ಸನ್ನೂ ತಿಳ್ಕೊಳ್ತೀವಿ.’ ಆಗ ನಾವು ಒಂದೊಂದು ಸಲನೂ ಏನ್ ಮಾಡ್ಬೇಕು, ಏನ್ ಮಾಡ್ಬಾರ್ದು ಅಂತ ಬೈಬಲಲ್ಲಿ ನಿಯಮ ಹುಡುಕೋಕೆ ಹೋಗಲ್ಲ. ‘ಬುದ್ಧಿ ಇರುವವ್ರ ತರ ನಡ್ಕೊಳ್ತೀವಿ.’ (1 ಕೊರಿಂ. 2:14-16) ಕೆಲವು ಅಪಾಯಗಳು ಸ್ಪಷ್ಟವಾಗಿ ಕಾಣುತ್ತೆ. ಆದ್ರೆ ಇನ್ನು ಕೆಲವು ಅಪಾಯಗಳು ಕಾಣಲ್ಲ. ಆ ಅಪಾಯಗಳೇನು ಅಂತ ನೋಡೋಣ.
10. ನಮಗೆ ಬರೋ ಕೆಲವು ಅಪಾಯಗಳು ಯಾವುವು?
10 ಚೆಲ್ಲಾಟ ಆಡೋದು, ಕಂಠಪೂರ್ತಿ ಕುಡಿಯೋದು, ಹೊಟ್ಟೆ ಬಿರಿಯೋಷ್ಟು ತಿನ್ನೋದು, ಬೇರೆಯವ್ರಿಗೆ ಬೇಜಾರಾಗೋ ತರ ಮಾತಾಡೋದು, ಹಿಂಸೆ ತುಂಬಿರೋ ಚಲನಚಿತ್ರಗಳನ್ನ ನೋಡೋದು, ಅಶ್ಲೀಲ ಚಿತ್ರಗಳನ್ನ ನೋಡೋದು, ಇವು ನಮಗೆ ಬರೋ ಕೆಲವು ಅಪಾಯಗಳು. (ಕೀರ್ತ. 101:3) ಈ ಅಪಾಯಗಳಲ್ಲಿ ನಾವು ಸಿಕ್ಕಿಹಾಕೊಬೇಕು ಅಂತ ನಮ್ಮ ವಿರೋಧಿ ಆಗಿರೋ ಸೈತಾನ ಕಾಯ್ತಾ ಇರ್ತಾನೆ. (1 ಪೇತ್ರ 5:8) ಯೆಹೋವನ ಜೊತೆ ನಮಗಿರೋ ಸಂಬಂಧನ ಹಾಳು ಮಾಡ್ಬೇಕು ಅನ್ನೋದೇ ಅವನ ಉದ್ದೇಶ. ದ್ವೇಷ, ಹೊಟ್ಟೆಕಿಚ್ಚು, ಕೋಪ, ದುರಾಸೆ, ಮೋಸ, ಅಹಂಕಾರ ಅನ್ನೋ ವಿಷದ ಬೀಜಗಳನ್ನ ನಮ್ಮ ಮನಸ್ಸಲ್ಲಿ ಬಿತ್ತೋಕೆ ಸೈತಾನ ಪ್ರಯತ್ನ ಮಾಡ್ತಾನೆ. ಅದಕ್ಕೆ ನಾವು ಹುಷಾರಾಗಿ ಇರ್ಬೇಕು. (ಗಲಾ. 5:19-21) ಇಂಥ ಕೆಟ್ಟಗುಣಗಳು ನಮ್ಮಲ್ಲಿ ಇದ್ರೆ ‘ಇದ್ರಿಂದ ನನಗೇನೂ ಅಪಾಯ ಇಲ್ಲ’ ಅಂತ ಅಂದ್ಕೊಬಾರ್ದು. ಈ ಗುಣಗಳನ್ನ ತಕ್ಷಣ ಕಿತ್ತು ಬಿಸಾಕ್ಬೇಕು. ಇಲ್ಲಾಂದ್ರೆ ಅದು ಬೆಳೆದು ಹೆಮ್ಮರವಾಗಿ ನಮ್ಮ ಜೀವವನ್ನೇ ತೆಗೆದುಬಿಡುತ್ತೆ.—ಯಾಕೋ. 1:14, 15.
11. ನಾವು ಯಾವ ಅಪಾಯದಿಂದ ದೂರ ಇರ್ಬೇಕು ಮತ್ತು ಯಾಕೆ?
11 ಕೆಟ್ಟವರ ಜೊತೆ ಸಹವಾಸ ಮಾಡೋದ್ರಿಂದನೂ ನಮಗೆ ಅಪಾಯ ಇದೆ. ನಮಗೆ ಈ ತರ ಒಂದು ಸನ್ನಿವೇಶ ಬರ್ಬೋದು. ನಮ್ಮ ಜೊತೆ ಕೆಲಸ ಮಾಡೋರು ಯೆಹೋವನ ಸಾಕ್ಷಿಗಳು ಒಳ್ಳೆಯವರು ಅನ್ನೋ ಅಭಿಪ್ರಾಯ ಬೆಳೆಸ್ಕೊಬೇಕು ಅಂತ ನಾವು ಆಸೆಪಡೋದು ಸಹಜನೇ. ಹಾಗಾಗಿ ಕೆಲಸದ ಜಾಗದಲ್ಲಿ ಅವ್ರ ಹತ್ರ ನಾವು ಮಾತಾಡ್ತೀವಿ. ಅವರು ಊಟಕ್ಕೆ ಕರೆದಾಗ ಜೊತೆಯಾಗಿ ಕೂತು ಊಟ ಮಾಡ್ತೀವಿ. ಆಮೇಲೆ ಅದು ರೂಢಿ ಆಗಿಬಿಡುತ್ತೆ. ಅಂಥ ಸಮಯದಲ್ಲಿ ಅವರು ಕೆಟ್ಟ ವಿಷ್ಯಗಳ ಬಗ್ಗೆ ಮಾತಾಡ್ತಾರೆ ಅಂತ ಅಂದ್ಕೊಳ್ಳಿ. ನಮಗೆ ಅದು ಮೊದಮೊದ್ಲು ಇಷ್ಟ ಆಗಲ್ಲ. ಆಮೇಲೆ ಹೋಗ್ತಾ-ಹೋಗ್ತಾ ಅದ್ರಲ್ಲಿ ಏನು ತಪ್ಪಿಲ್ಲ ಅಂತ ಅನಿಸಿಬಿಡುತ್ತೆ. ಆಮೇಲೆ ಅವರು ಒಂದಿನ ಪಾರ್ಟಿ ಮಾಡೋಕೆ ನಮ್ಮನ್ನ ಕರಿತಾರೆ ಅಂತ ನೆನಸಿ. ನಾವು ಹೋಗದಿದ್ರೆ ಅವರು ಬೇಜಾರ್ ಮಾಡ್ಕೊಳ್ತಾರೆ ಅಂತ ಅಂದ್ಕೊಂಡು ಪಾರ್ಟಿಗೂ ಹೋಗ್ತೀವಿ. ಸ್ವಲ್ಪ ಯೋಚ್ನೆ ಮಾಡಿ ನೋಡಿ. ನಾವು ಹೀಗೆ ಅವ್ರ ಜೊತೆ ಸಮಯ ಕಳೀತಾ ಕಳೀತಾ ಏನಾಗುತ್ತೆ? ನಾವೂ ಅವ್ರ ತರಾನೇ ಯೋಚ್ನೆ ಮಾಡ್ತೀವಿ, ಅವ್ರ ತರಾನೇ ನಡ್ಕೊಳ್ತೀವಿ. ನಾವು ಯಾರ ಜೊತೆ ಹೆಚ್ಚು ಸಮಯ ಕಳಿತೀವೋ ಅವ್ರ ತರಾನೇ ಆಗಿಬಿಡ್ತೀವಿ. (1 ಕೊರಿಂ. 15:33) ಅದಕ್ಕೆ ನಾವು ಯೇಸು ಹೇಳಿದ ತರ ಹುಷಾರಾಗಿ ಇರ್ಬೇಕು. ಯೆಹೋವನ ಆರಾಧನೆ ಮಾಡದಿರೋ ಜನ್ರ ಜೊತೆ ಅನಾವಶ್ಯಕವಾಗಿ ಸಮಯ ಕಳೆದ್ರೆ ನಮಗೇ ಅಪಾಯ. (2 ಕೊರಿಂ. 6:15) ಇಂಥ ಅಪಾಯದಿಂದ ದೂರ ಇರೋದೇ ಒಳ್ಳೇದು.
ಸಮಯನ ಚೆನ್ನಾಗಿ ಉಪಯೋಗಿಸ್ಕೊಳ್ಳಿ
12. ಯೇಸುವಿನ ಶಿಷ್ಯರು ಲೋಕ ಅಂತ್ಯ ಆಗೋಕೆ ಕಾಯ್ತಾ ಇದ್ದಾಗ ಏನ್ ಮಾಡ್ತಿದ್ರು?
12 ಯೇಸುವಿನ ಶಿಷ್ಯರು ಅಂತ್ಯ ಬರುತ್ತೆ ಅಂತ ಕಾಯ್ತಾ ಕೈ ಕಟ್ಕೊಂಡು ಸುಮ್ನೆ ಕೂತಿರ್ಲಿಲ್ಲ. ಯಾಕಂದ್ರೆ ಯೇಸು ಅವ್ರಿಗೆ ಒಂದು ಕೆಲ್ಸ ಕೊಟ್ಟಿದ್ದನು. ಆತನು ಅವ್ರಿಗೆ “ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ” ಸಿಹಿಸುದ್ದಿ ಸಾರಿ ಅಂತ ಹೇಳಿದ್ದನು. (ಅ. ಕಾ. 1:6-8) ಇದು ಚಿಕ್ಕ ಕೆಲ್ಸ ಆಗಿರಲಿಲ್ಲ. ಶಿಷ್ಯರು ಈ ಕೆಲ್ಸ ಮಾಡೋಕೆ ತುಂಬ ಪ್ರಯತ್ನ ಹಾಕಿದ್ರು. ಹೀಗೆ ತಮ್ಮ ಸಮಯನ ಚೆನ್ನಾಗಿ ಉಪಯೋಗಿಸ್ಕೊಂಡ್ರು.
13. ಈಗಿರೋ ಸಮಯನ ನಾವ್ಯಾಕೆ ಚೆನ್ನಾಗಿ ಉಪಯೋಗಿಸ್ಕೊಬೇಕು? (ಕೊಲೊಸ್ಸೆ 4:5)
13 ಕೊಲೊಸ್ಸೆ 4:5 ಓದಿ. “ಅನಿರೀಕ್ಷಿತ ಘಟನೆಗಳು” ಯಾರ ಜೀವನದಲ್ಲಿ ಬೇಕಾದ್ರೂ ನಡಿಬೋದು. (ಪ್ರಸಂ. 9:11) ದಿಢೀರಂತ ನಾವು ಪ್ರಾಣ ಕಳ್ಕೊಬೋದು. ಅದಕ್ಕೆ ನಾವು ಈಗಿರೋ ಸಮಯನ ಚೆನ್ನಾಗಿ ಉಪಯೋಗಿಸ್ಕೊಬೇಕು. ಇದ್ರಿಂದ ನಾವು ಹುಷಾರಾಗಿದ್ದೀವಿ ಅಂತ ತೋರಿಸೋಕೆ ಆಗುತ್ತೆ.
14-15. ಈಗ ನಮಗಿರೋ ಸಮಯದಲ್ಲಿ ನಾವೇನ್ ಮಾಡ್ಬೇಕು? (ಇಬ್ರಿಯ 6:11, 12) (ಚಿತ್ರನೂ ನೋಡಿ.)
14 ನಾವು ಯೆಹೋವನ ಸೇವೆ ಮಾಡೋಕೆ, ಆತನ ಜೊತೆ ಇರೋ ನಮ್ಮ ಸ್ನೇಹನ ಇನ್ನೂ ಗಟ್ಟಿ ಮಾಡ್ಕೊಳ್ಳೋಕೆ ನಮ್ಮ ಸಮಯನ ಉಪಯೋಗಿಸ್ಕೊಬೇಕು. (ಯೋಹಾ. 14:21) ಅದಕ್ಕೆ “ಸ್ಥಿರವಾಗಿರಿ, ಕದಲಬೇಡಿ . . . ಯಾವಾಗ್ಲೂ ಒಡೆಯನ ಕೆಲಸವನ್ನ ಹೆಚ್ಚೆಚ್ಚು ಮಾಡಿ” ಅಂತ ಬೈಬಲ್ ಹೇಳುತ್ತೆ. (1 ಕೊರಿಂ. 15:58) ಹೀಗೆ ಮಾಡ್ತಾ ಇದ್ರೆ, ನಾವು ತೀರಿಹೋದ್ರೂ ಸರಿ ಅಥವಾ ಈ ಲೋಕಕ್ಕೆ ಅಂತ್ಯ ಬಂದ್ರೂ ಸರಿ ‘ಯೆಹೋವನ ಸೇವೆ ಮಾಡದೆ ನನ್ನ ಸಮಯನ ಹಾಳು ಮಾಡ್ಕೊಂಡ್ನಲ್ಲಾ’ ಅಂತ ನಾವು ಯಾವತ್ತೂ ವ್ಯಥೆ ಪಡಲ್ಲ.—ಮತ್ತಾ. 24:13; ರೋಮ. 14:8.
15 ಯೇಸು ತಾನು ಕೊಟ್ಟ ಮಾತನ್ನ ಉಳಿಸ್ಕೊಂಡಿದ್ದಾನೆ. ದೇವರ ಆಳ್ವಿಕೆ ಬಗ್ಗೆ ಭೂಮಿಲಿರೋ ಜನ್ರಿಗೆ ಸಾರೋಕೆ ನಮಗೆ ಸಹಾಯ ಮಾಡ್ತಿದ್ದಾನೆ. ಈ ಕೆಲ್ಸ ಮಾಡೋಕೆ ಬೇಕಾದ ತರಬೇತಿನ ಸಂಘಟನೆ ಮೂಲಕ ಕೊಡ್ತಿದ್ದಾನೆ. ಅಷ್ಟೇ ಅಲ್ಲ, ಸಿಹಿಸುದ್ದಿ ಸಾರೋಕೆ ಬೇಕಾಗಿರೋ ಪುಸ್ತಕ-ಪತ್ರಿಕೆಗಳನ್ನೂ ಕೊಡ್ತಿದ್ದಾನೆ. (ಮತ್ತಾ. 28:18-20) ಈಗ ನಾವೇನ್ ಮಾಡ್ಬೇಕು? ಲೋಕದ ಅಂತ್ಯ ಹತ್ರ ಆಗ್ತಾ ಇರೋದ್ರಿಂದ ಇಲ್ಲಿ ನಡಿತಿರೋ ವಿಷ್ಯಗಳನ್ನ ಚೆನ್ನಾಗಿ ಗಮನಿಸ್ಬೇಕು. ಜನ್ರಿಗೆ ಸಿಹಿಸುದ್ದಿ ಸಾರುತ್ತಾ, ಕಲಿಸ್ತಾ ಬಿಜ಼ಿಯಾಗಿ ಇರ್ಬೇಕು. ಹೀಗೆ ಮಾಡಿದ್ರೆ ‘ನಮ್ಮ ನಿರೀಕ್ಷೆ ನಿಜವಾಗುತ್ತೆ ಅನ್ನೋ ಪೂರ್ಣ ಭರವಸೆ ಕೊನೆ ತನಕ ನಮಗಿರುತ್ತೆ.’—ಇಬ್ರಿಯ 6:11, 12 ಓದಿ.
16. ಯೆಹೋವ ಸೈತಾನನ ಲೋಕನ ನಾಶ ಮಾಡೋ ತನಕ ನಾವೇನ್ ಮಾಡ್ತಾ ಇರ್ಬೇಕು?
16 ಸೈತಾನನ ಲೋಕನ ಯಾವಾಗ ನಾಶ ಮಾಡ್ಬೇಕು ಅಂತ ಈಗಾಗ್ಲೇ ಯೆಹೋವ ದೇವರು ತೀರ್ಮಾನ ಮಾಡಿದ್ದಾನೆ. ಆ ದಿನ ಬಂದಾಗ ಯೆಹೋವ ಹೇಳಿದ ಎಲ್ಲಾ ಭವಿಷ್ಯವಾಣಿಗಳೂ ನಿಜ ಆಗುತ್ತೆ. ‘ಅದಕ್ಕಿನ್ನೂ ಎಷ್ಟು ಸಮಯ ಕಾಯಬೇಕಪ್ಪಾ’ ಅಂತ ನಮಗೆ ಅನಿಸಬಹುದು. ಆದ್ರೆ ಯೆಹೋವನ ದಿನ “ತಡವಾಗಲ್ಲ!” (ಹಬ. 2:3) ಹಾಗಾಗಿ ನಾವು “ಯೆಹೋವನಿಗಾಗಿ ಕಾಯ್ತಾ” ಇರೋಣ. ‘ನಮ್ಮ ರಕ್ಷಕನಾದ ದೇವರಿಗಾಗಿ ತಾಳ್ಮೆಯಿಂದ ಕಾಯ್ತಾ ಇರೋಣ.’—ಮೀಕ 7:7.
ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು
a ಲೋಕದಲ್ಲಿ ನಡಿಯೋ ಘಟನೆಗಳನ್ನ ಗಮನಿಸುವಾಗ ನಾವು ಯಾವ ವಿಷ್ಯದಲ್ಲಿ ಎಚ್ಚರವಾಗಿ ಇರ್ಬೇಕು ಅಂತ ಈಗ ನೋಡೋಣ. ಅಷ್ಟೇ ಅಲ್ಲ, ಆ ಸಮಯದಲ್ಲಿ ನಾವು ಹುಷಾರಾಗಿ ಇರೋದು ಹೇಗೆ ಮತ್ತು ನಮಗಿರೋ ಸಮಯಾನ ಚೆನ್ನಾಗಿ ಉಪಯೋಗಿಸ್ಕೊಳ್ಳೋದು ಹೇಗೆ ಅಂತಾನೂ ನೋಡೋಣ.
b ಚಿತ್ರ ವಿವರಣೆ: (ಮೇಲೆ) ಒಬ್ಬ ದಂಪತಿ ನ್ಯೂಸ್ ನೋಡ್ತಿದ್ದಾರೆ. ನ್ಯೂಸ್ನಲ್ಲಿ ನೋಡಿದ ವಿಷ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನ, ಊಹೆಗಳನ್ನ ಕೂಟ ಮುಗಿದ ಮೇಲೆ ಬೇರೆಯವರ ಹತ್ರ ಹೇಳ್ತಿದ್ದಾರೆ. (ಕೆಳಗೆ) ಒಬ್ಬ ದಂಪತಿ ಆಡಳಿತ ಮಂಡಲಿಯ ಅಪ್ಡೇಟ್ ನೋಡ್ತಿದ್ದಾರೆ. ಇದ್ರಿಂದ ಬೈಬಲಲ್ಲಿರೋ ಭವಿಷ್ಯವಾಣಿನ ಅರ್ಥ ಮಾಡ್ಕೊಳ್ತಿದ್ದಾರೆ. ನಂಬಿಗಸ್ತ ಆಳಿಂದ ಬಂದಿರೋ ಪತ್ರಿಕೆಗಳನ್ನ ಅವರು ಬೇರೆಯವ್ರಿಗೆ ಕೊಡ್ತಿದ್ದಾರೆ.