ತಾಳ್ಮೆಯಿಂದ ಕಾಯಿರಿ
ತೋಳವಿಲ್ಲದಿದ್ದಾಗ “ತೋಳ!” ಎಂದು ಪುನಃ ಪುನಃ ಕಿರುಚಿದ ಕುರುಬನು, ತರುವಾಯ ಸಹಾಯಕ್ಕಾಗಿದ್ದ ತನ್ನ ಕೂಗು ನಿರ್ಲಕ್ಷಿಸಲ್ಪಟ್ಟದ್ದನ್ನು ಕಂಡುಕೊಂಡನು. ತದ್ರೀತಿಯಲ್ಲಿ ಇಂದು, ಯೆಹೋವನ ದಿನದ ಸನ್ನಿಹಿತವನ್ನು ಅನೇಕರು ಕಡೆಗಣಿಸುತ್ತಾರೆ, ಏಕೆಂದರೆ ಸುಳ್ಳು ಎಚ್ಚರಿಕೆಗಳಾಗಿ ಪರಿಣಮಿಸಿರುವಂತಹ ಅಸಂಖ್ಯಾತ ಎಚ್ಚರಿಕೆಗಳನ್ನು ಅವರು ಕೇಳಿಸಿಕೊಂಡಿದ್ದಾರೆ. ಯಾವ ಎಚ್ಚರಿಕೆಯು ಯಥಾರ್ಥವಾದದ್ದಾಗಿದೆ ಮತ್ತು ಯಾವ ಎಚ್ಚರಿಕೆಗೆ ಲಕ್ಷ್ಯಕೊಡಬೇಕು ಎಂಬುದನ್ನು ವಿವೇಚಿಸಲು ಅನೇಕರು ತಪ್ಪಿಹೋಗುತ್ತಾರೆಂಬ ವಾಸ್ತವಾಂಶವನ್ನೇ, ದೇವರ ದೊಡ್ಡ ಶತ್ರುವೂ “ಪ್ರಕಾಶರೂಪವುಳ್ಳ” ಸುಳ್ಳು “ದೇವದೂತ”ನೂ ಆಗಿರುವ ಸೈತಾನನು ದುರುಪಯೋಗಿಸುತ್ತಾನೆ.—2 ಕೊರಿಂಥ 11:14.
ಸ್ವಸಂತೃಪ್ತಿಯ ಮನೋಭಾವವು, ತುಂಬ ವರ್ಷಗಳಿಂದ ಯೆಹೋವನ ಸೇವೆಮಾಡಿರುವವರಿಗೂ ಅಪಾಯಕರವಾಗಿರಸಾಧ್ಯವಿದೆ. ಏಕೆ? ಪ್ರಥಮ ಶತಮಾನದಲ್ಲಿ ಅಪೊಸ್ತಲ ಪೇತ್ರನಿಂದ ಕೊಡಲ್ಪಟ್ಟ ಎಚ್ಚರಿಕೆಯನ್ನು ಪರಿಗಣಿಸಿರಿ.
ಸರಿಯಾಗಿ ಆಲೋಚಿಸಿರಿ
ಪೇತ್ರನ ಎರಡನೆಯ ಪ್ರೇರಿತ ಪತ್ರವು, ಆದಿ ಕ್ರೈಸ್ತರಿಗೆ ಒಂದು ಜ್ಞಾಪನವಾಗಿತ್ತು, ಮತ್ತು ಅದು ನಮಗೂ ಜ್ಞಾಪನವಾಗಿದೆ. ಅವನು ಬರೆಯುವುದು: “ಪ್ರಿಯರೇ, ನಾನು ನಿಮಗೆ ಈಗ ಎರಡನೆಯ ಪತ್ರವನ್ನು ಬರೆಯುತ್ತಿದ್ದೇನೆ, ಇದರಲ್ಲಿ, ನನ್ನ ಮೊದಲನೆಯ ಪತ್ರದಲ್ಲಿ ಬರೆದಿದ್ದಂತೆಯೇ, ಈಗ ಒಂದು ಜ್ಞಾಪನದೋಪಾದಿ ನಾನು ನಿಮ್ಮ ಸರಿಯಾದ ಆಲೋಚನಾ ಸಾಮರ್ಥ್ಯಗಳನ್ನು ಜಾಗೃತಗೊಳಿಸುತ್ತಿದ್ದೇನೆ.” (2 ಪೇತ್ರ 3:1, NW) ಈ ಚಿಂತೆಯನ್ನು ತೋರಿಸಲು ಪೇತ್ರನಿಗೆ ಯಾವ ಆಧಾರವಿದೆ? ಯಾರ ಕುಚೋದ್ಯವು, ದೇವರ ಸೇವಕರು ಜೀವಿಸುತ್ತಿರುವ ಸಮಯದ ತುರ್ತುಪ್ರಜ್ಞೆಯ ಅಗತ್ಯವನ್ನು ಶಿಥಿಲಗೊಳಿಸುತ್ತದೋ ಅಂತಹ ಕುಚೋದ್ಯಗಾರರ ಸಮಕ್ಷಮವನ್ನು ಪೇತ್ರನು ಒತ್ತಿಹೇಳುತ್ತಾನೆ. ಅಪಹಾಸ್ಯಮಾಡುವವರಿಂದ ಮೋಸಕ್ಕೆ ಒಳಗಾಗುವ ವಿಷಯದಲ್ಲಿ ಎಚ್ಚರಿಕೆಯುಳ್ಳವರಾಗಿರಲು ಇದೇ ಸಮಯವಾಗಿದೆ. ಹೀಗೆ ಪೇತ್ರನು ತನ್ನ ಓದುಗರಿಗೆ, “ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳ”ನ್ನು “ಜ್ಞಾಪಕಮಾಡಿ”ಕೊಳ್ಳುವಂತೆ ಪ್ರಚೋದಿಸುತ್ತಾನೆ. (2 ಪೇತ್ರ 3:2; ಅ. ಕೃತ್ಯಗಳು 3:22, 23) ಆ ಪ್ರವಾದಿಗಳು ಏನು ಹೇಳಿದ್ದರು?
ಅನೇಕ ಸಂದರ್ಭಗಳಲ್ಲಿ, ದೇವರ ನಂಬಿಗಸ್ತ ಸೇವಕರು, ದೈವಿಕ ನ್ಯಾಯತೀರ್ಪುಗಳು ಹೇಗೆ ದುಷ್ಟತನಕ್ಕೆ ಅಂತ್ಯವನ್ನು ತಂದವು ಎಂಬ ವಿಷಯದ ಕಡೆಗೆ ಗಮನವನ್ನು ಸೆಳೆದಿದ್ದರು. ನೋಹನ ದಿನದ ಜಲಪ್ರಳಯದ ಕುರಿತು ಪೇತ್ರನು ತನ್ನ ಓದುಗರಿಗೆ ಜ್ಞಾಪಕ ಹುಟ್ಟಿಸುತ್ತಾನೆ. ಭೂಮಿಯು ಕೆಟ್ಟತನದಿಂದ ತುಂಬಿಕೊಂಡಿದ್ದಾಗ, ಹಸ್ತಕ್ಷೇಪಮಾಡಲಿಕ್ಕಾಗಿ ದೇವರು ಆ ಜಲಪ್ರಳಯವನ್ನು ಒಂದು ಮಾಧ್ಯಮವಾಗಿ ಉಪಯೋಗಿಸಿದನು. ಆ ಧಾರಾಕಾರವಾದ ಪ್ರಳಯವು, ಆ ಸಮಯದ ಲೋಕವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿತು. ಆದರೆ ದೇವರು ನೋಹನನ್ನೂ ಅವನ ಕುಟುಂಬವನ್ನೂ, ಜೊತೆಗೆ “ಪ್ರತಿಜಾತಿಯ” ಪ್ರತಿನಿಧಿ ಸ್ವರೂಪದ ಜೀವಂತ ಜೀವಿಗಳನ್ನೂ ನಾವೆಯೊಂದರಲ್ಲಿ ಸಂರಕ್ಷಿಸಿದನು. ಬೈಬಲ್ ಸಂಬಂಧಿತವಾದ ಈ ದಾಖಲೆಗೆ, ಸಾರ್ವತ್ರಿಕ ಪುರಾಣಕಥೆಗಳು ಸಾಕ್ಷ್ಯ ನೀಡುತ್ತವೆ.a—ಆದಿಕಾಂಡ 6:19; 2 ಪೇತ್ರ 3:5, 6.
ಪೇತ್ರನು ಆ ದೈವಿಕ ಹಸ್ತಕ್ಷೇಪವನ್ನು, ಕೆಲವು ಜನರ ‘ಲಕ್ಷ್ಯಕ್ಕೆ ತಪ್ಪಿಹೋದ ಸಂಗತಿ’ ಎಂದು ಕರೆಯುತ್ತಾನೆ. ಆ ಬಳಿಕ ಇನ್ನಿತರರು ಆ ದಿನದ ಕುಚೋದ್ಯಗಾರರಿಂದ ಸ್ವಸಂತೃಪ್ತಿಗೆ ನಡೆಸಲ್ಪಟ್ಟರು. ನಾವಾದರೋ, ಈಗಾಗಲೇ ಯೆಹೋವನು ಮಾಡಿರುವ ವಿಷಯಗಳನ್ನು ಮರೆತುಬಿಡಬಾರದು. ಪೇತ್ರನು ನಮಗೆ ಹೇಳುವುದು: “ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.” (2 ಪೇತ್ರ 3:7) ಹೌದು, ದೈವಿಕ ಹಸ್ತಕ್ಷೇಪವು ಪುನಃ ಸಂಭವಿಸಲಿಕ್ಕಿದೆ.
ದೇವರು ನಿಧಾನಿಯಲ್ಲ
ಈಗಾಗಲೇ ಸಹಸ್ರಾರು ವರ್ಷಗಳು ಗತಿಸಿಹೋಗಿವೆ. ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲು ದೇವರು ಏಕೆ ಇಷ್ಟು ದೀರ್ಘ ಸಮಯದ ವರೆಗೆ ಕಾದಿದ್ದಾನೆ? ಪುನಃ ಪೇತ್ರನು ಇನ್ನೊಂದು ಸಂಗತಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾನೆ. ಅವನು ಹೇಳುವುದು: “ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ಮರೆಯಬೇಡಿರಿ.” (2 ಪೇತ್ರ 3:8) ಕಾಲದ ಕುರಿತಾದ ಯೆಹೋವನ ದೃಷ್ಟಿಕೋನವು ನಮ್ಮ ದೃಷ್ಟಿಕೋನಕ್ಕಿಂತ ಭಿನ್ನವಾಗಿದೆ. ನಿತ್ಯನಾದ ದೇವರಿಗೆ, ಆದಾಮನ ಸೃಷ್ಟಿಯಿಂದ ಹಿಡಿದು ಇಂದಿನ ವರೆಗಿನ ಕಾಲಾವಧಿಯು, ಒಂದು ವಾರಕ್ಕೂ ಸರಿಸಮವಾಗುವುದಿಲ್ಲ. ಆದರೆ ಕಾಲದ ಕುರಿತು ನಮಗೆ ಯಾವುದೇ ದೃಷ್ಟಿಕೋನವಿರಲಿ, ಕಳೆದುಹೋಗುತ್ತಿರುವ ಪ್ರತಿ ಸಹಸ್ರ ವರ್ಷಗಳು ಹಾಗೂ ಪ್ರತಿ ದಿನವು ನಮ್ಮನ್ನು, ಯೆಹೋವನ ಉದ್ದೇಶಗಳ ಪೂರೈಕೆಯ ಕಡೆಗೆ ಹೆಚ್ಚೆಚ್ಚು ಹತ್ತಿರಕ್ಕೆ ಕೊಂಡೊಯ್ಯುತ್ತದೆ.
“ಆತುರ ಪಟ್ಟರೆ ಕೆಲಸ ಬೇಗ ಆಗಲಾರದು” ಎಂಬ ಗಾದೆಮಾತು, ಒಂದು ಘಟನೆಗಾಗಿ ಕೇವಲ ಕಾಯುತ್ತಿರುವುದು, ಅದರ ಸಂಭವವನ್ನು ವಿಳಂಬಿಸುವಂತೆ ತೋರುತ್ತದೆ ಎಂಬುದನ್ನು ಅರ್ಥೈಸುತ್ತದೆ. ಹಾಗಿದ್ದರೂ, “ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ, ಅದನ್ನು ಮನಸ್ಸಿನಲ್ಲಿ ನಿಕಟವಾಗಿಡುತ್ತಾ” ಇರುವಂತೆ ಪೇತ್ರನು ಶಿಫಾರಸ್ಸು ಮಾಡುತ್ತಾನೆ. (2 ಪೇತ್ರ 3:12, NW) ದೈವಿಕ ಹಸ್ತಕ್ಷೇಪದ ಸನ್ನಿಹಿತದ ಕುರಿತು ನಮ್ಮನ್ನು ಎಚ್ಚರವಾಗಿರಿಸಲಿಕ್ಕಾಗಿರುವ ಒಂದು ಮಾನಸಿಕ ಮನೋಭಾವವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?
ಮಾತಿಗಿಂತಲೂ ಕ್ರಿಯೆಗಳು ಹೆಚ್ಚನ್ನು ತಿಳಿಸುತ್ತವೆ
ಪೇತ್ರನು, ಕೃತ್ಯಗಳು ಹಾಗೂ ಕ್ರಿಯೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾನೆ. ಅವನು “ನಡವಳಿಕೆಯ ಪವಿತ್ರ ಕೃತ್ಯಗಳು” ಹಾಗೂ “ದಿವ್ಯ ಭಕ್ತಿಯ ಕ್ರಿಯೆಗಳ” ಕಡೆಗೆ ನಿರ್ದೇಶಿಸುತ್ತಾನೆ. (2 ಪೇತ್ರ 3:11, NW) ಇವುಗಳಲ್ಲಿ ಏನು ಒಳಗೂಡಿದೆ?
ದೇವರ ನಿಜ ಸೇವಕನು, ದೇವರಿಗೆ ಪ್ರಸನ್ನತೆಯನ್ನು ಉಂಟುಮಾಡುವಂತಹ ರೀತಿಯಲ್ಲಿ ಕ್ರಿಯೆಗೈಯುತ್ತಾನೆ. ಅಂತಹ ಒಬ್ಬ ಸತ್ಯಾರಾಧಕನ ನಂಬಿಕೆಯು, ಅವನ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುತ್ತದೆ. ಇದು ಅವನನ್ನು, ದೇವರಲ್ಲಿ ಹಾಗೂ ಆತನ ವಾಗ್ದಾನಗಳಲ್ಲಿನ ನಂಬಿಕೆಯ ಕುರಿತಾಗಿ ಕೇವಲ ಮಾತಾಡುವ ಜನರಿಂದ ಪ್ರತ್ಯೇಕಿಸುತ್ತದೆ. ಯೆಹೋವನ ಸಾಕ್ಷಿಗಳ ಸಾರ್ವಜನಿಕ ಶುಶ್ರೂಷೆಯು, ಅವರನ್ನು ಭಿನ್ನರಾಗಿ ಪ್ರತ್ಯೇಕಿಸುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೇವರ ವಾಗ್ದಾನಗಳ ಕಡೆಗೆ ಗಮನವನ್ನು ಸೆಳೆಯಲಿಕ್ಕಾಗಿ ಅವರು ನಿಮ್ಮ ಮನೆಗಳಿಗೆ ಭೇಟಿ ನೀಡುತ್ತಾರೆ. ಆದರೆ ಜನರನ್ನು ಸಂಧಿಸುವ ಸ್ಥಳಗಳಲ್ಲೆಲ್ಲ ಸಹ ಅವರು ತಮ್ಮ ನಿರೀಕ್ಷೆಗಳು ಹಾಗೂ ನಂಬಿಕೆಗಳ ವಿಷಯದಲ್ಲಿ ಸಾಕ್ಷಿಯನ್ನು ಕೊಡುತ್ತಾರೆ.
ತನ್ನ ನಂಬಿಕೆಯನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ತನ್ನನ್ನು ಕಾರ್ಯತತ್ಪರನನ್ನಾಗಿ ಇರಿಸಿಕೊಳ್ಳುವ ಸಾಕ್ಷಿಯ ನಂಬಿಕೆಗಳು, ಬಲವಾಗುತ್ತವೆ ಹಾಗೂ ದೃಢವಾಗುತ್ತವೆ. ಅಭಿವ್ಯಕ್ತಿಯು, ಮನಸ್ಸಿನ ಮೇಲೆ ಆಗುವ ಪ್ರಭಾವವನ್ನು ಹೆಚ್ಚು ಅಗಾಧಗೊಳಿಸುತ್ತದೆ ಮತ್ತು ಅದೇ ಸಮಯದಲ್ಲಿ ಆಂತರಿಕ ಸಂತೋಷವನ್ನೂ ಸಂತೃಪ್ತಿಯನ್ನೂ ತರುತ್ತದೆ. ನಾವು ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುವಾಗ, ಯೆಹೋವನನ್ನೂ ಪ್ರಸನ್ನಗೊಳಿಸುತ್ತಿದ್ದೇವೆ. ಪೇತ್ರನ ಜೊತೆ ಅಪೊಸ್ತಲನಾದ ಪೌಲನು ಹೇಳುವಂತೆ, ‘ನಾವು [“ಮಾಡಿದ ಕೆಲಸವನ್ನೂ,” NW] ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನ್ಯಾಯಸ್ಥನಲ್ಲ’ ಎಂಬುದು ನಮಗೆ ಗೊತ್ತಿದೆ.—ಇಬ್ರಿಯ 6:10; ರೋಮಾಪುರ 10:9, 10.
ಈ ಪ್ರಸ್ತುತ ದುಷ್ಟ ವ್ಯವಸ್ಥೆಯ ಅಂತಿಮ ದಿನಗಳಲ್ಲಿ ರಾಜ್ಯದ ಸುವಾರ್ತೆಯನ್ನು ವ್ಯಾಪಕವಾಗಿ ಸಾರುವುದರಲ್ಲಿನ ಈ ಕಾರ್ಯಮಗ್ನತೆಯ ಫಲಿತಾಂಶವೇನಾಗಿದೆ? ಯೆಹೋವನೊಂದಿಗೆ ಹೇಗೆ ಒಂದು ನಿಕಟವಾದ ಸಂಬಂಧದೊಳಕ್ಕೆ ಬರುವುದು, ಆತನ ಅಪಾತ್ರ ದಯೆಯಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುವುದು ಮತ್ತು ಒಂದು ಪ್ರಮೋದವನ ಭೂಮಿಯಲ್ಲಿ ನಿತ್ಯ ಜೀವದ ಪ್ರತೀಕ್ಷೆಯಲ್ಲಿ ಹೇಗೆ ನಿಜ ಸಂತೋಷವನ್ನು ಕಂಡುಕೊಳ್ಳುವುದು ಎಂಬುದನ್ನು, ಪ್ರಾಮಾಣಿಕ ಹೃದಯವುಳ್ಳ ನೂರಾರುಸಾವಿರ ಮಂದಿ ಕಲಿಯುತ್ತಿದ್ದಾರೆ.
ಪೂರ್ವಭಾವಿ ಜ್ಞಾನ
ಯೆಹೋವ ದೇವರು ತನ್ನ ಕ್ಲುಪ್ತ ಸಮಯದಲ್ಲಿ ಹಸ್ತಕ್ಷೇಪಮಾಡುವನು ಎಂಬುದನ್ನು ನಾವು ಬೈಬಲಿನಿಂದ ತಿಳಿದುಕೊಂಡಿದ್ದೇವಾದರೂ, ಪೇತ್ರನು ಕೊಡುವ ಇನ್ನೂ ಹೆಚ್ಚಿನ ಎಚ್ಚರಿಕೆಗೆ ನಾವು ಲಕ್ಷ್ಯಕೊಡುವ ಅಗತ್ಯವಿದೆ. “ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ [“ಪೂರ್ವಭಾವಿ ಜ್ಞಾನವಿರುವುದರಿಂದ,” NW] ಅಧರ್ಮಿಗಳ ಭ್ರಾಂತಿಯ ಸೆಳವಿಗೆ ಸಿಕ್ಕಿಕೊಂಡು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಟರಾಗದಂತೆ ಎಚ್ಚರಿಕೆಯಾಗಿರಿ.”—2 ಪೇತ್ರ 3:17.
ದೈವಿಕ ಹಸ್ತಕ್ಷೇಪವು ತಡವಾದಂತೆ ತೋರುವುದರಿಂದ, ದೃಢವಾದ ನಂಬಿಕೆಯ ಕೊರತೆಯಿರುವ ಕೆಲವರು, ನಿರುತ್ಸಾಹಗೊಂಡವರಾಗುವ ಸಾಧ್ಯತೆಯಿತ್ತೆಂಬುದು ಯೆಹೋವನಿಗೆ ಖಂಡಿತವಾಗಿಯೂ ಮುಂಚೆಯೇ ತಿಳಿದಿತ್ತು. ದೈವಭಕ್ತಿಯಿಲ್ಲದ ಜನರ ಪ್ರಭಾವವು ತನ್ನ ನಿಜ ಸೇವಕರನ್ನು ಭ್ರಷ್ಟಗೊಳಿಸಸಾಧ್ಯವಿದೆ, ಅಥವಾ ಕಡಿಮೆಪಕ್ಷ ದೇವರ ನಾಮದ ಪವಿತ್ರೀಕರಣವು ಸಮೀಪವಾಗಿದೆ ಎಂಬ ಅವರ ನಂಬಿಕೆಯನ್ನು ಶಿಥಿಲಗೊಳಿಸಸಾಧ್ಯವಿದೆ ಎಂಬುದು ಸಹ ಆತನಿಗೆ ಗೊತ್ತಿತ್ತು. ಈ ಅಂತಿಮ ದಿನಗಳಲ್ಲಿ ದೃಢನಿಷ್ಠೆಯಿಂದ ಬಿದ್ದುಹೋಗುವುದು ಎಷ್ಟು ದುರಂತಮಯವಾಗಿರುವುದು!
ಯೆಹೋವನು ಏನು ಮಾಡುವನು ಎಂಬ ವಿಷಯದಲ್ಲಿ ಸಂಶಯಗಳಿಗೆ ಅಥವಾ ಅನಿಶ್ಚಿತತೆಗೆ ಎಡೆಗೊಡುವುದಕ್ಕೆ ಇದು ಸಮಯವಾಗಿರುವುದಿಲ್ಲ. (ಇಬ್ರಿಯ 12:1) ಬದಲಾಗಿ, ಯೆಹೋವನ ತಾಳ್ಮೆಯು ಏನನ್ನು ತಂದಿದೆ—ಅಂತಾರಾಷ್ಟ್ರೀಯ ಮಹಾ ಸಮೂಹದ ಭಾಗವಾಗಿರುವವರಿಗೆ ಹಾಗೂ ಬರಲಿರುವ ಮಹಾ ಸಂಕಟದಿಂದ ಪಾರಾಗಲಿಕ್ಕಾಗಿ ಎದುರುನೋಡುತ್ತಿರುವವರಿಗೆ, ರಕ್ಷಣೆಯ ಪ್ರತೀಕ್ಷೆ—ಎಂಬುದರ ಕುರಿತಾದ ಗಣ್ಯತೆಯಲ್ಲಿ ಬೆಳೆಯಲು ಇದು ಸಮಯವಾಗಿದೆ. (ಪ್ರಕಟನೆ 7:9, 14) ಪೇತ್ರನು ಬುದ್ಧಿ ಹೇಳುವುದು: “ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ. ಆತನಿಗೆ ಈಗಲೂ ಸದಾಕಾಲವೂ ಸ್ತೋತ್ರ.”—2 ಪೇತ್ರ 3:18.
“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ರಾಜ್ಯ ಸಾರುವಿಕೆಯಲ್ಲಿ ಕಾರ್ಯಮಗ್ನರಾಗಿರುವುದು ಮತ್ತು ಆರಾಧನೆಗಾಗಿ ಹಾಗೂ ದೇವರ ವಾಕ್ಯದ ಅಭ್ಯಾಸಕ್ಕಾಗಿ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು, ನಮಗೆ ಸಂರಕ್ಷಣೆಯನ್ನು ಒದಗಿಸುತ್ತದೆ. ಹೀಗೆ, ಇಂದಿನ ದುಷ್ಟ ವ್ಯವಸ್ಥೆಯಲ್ಲಿ ಕ್ಷಯಿಸಿಹೋಗುತ್ತಿರುವ ಪರಿಸ್ಥಿತಿಗಳ ಕುರಿತು ಅತಿಯಾಗಿ ಚಿಂತಿತರಾಗಲು ನಮಗೆ ಸಮಯವೇ ಇರುವುದಿಲ್ಲ. ನಿಜ ಕ್ರೈಸ್ತರ ಜೀವಿತದಲ್ಲಿ, ಭಯಗಳು ಹಾಗೂ ಚಿಂತೆಗಳು ಹೆಚ್ಚು ಪ್ರಧಾನವಾಗಿರಬಾರದು. (1 ಕೊರಿಂಥ 15:58) ನಾವು ಯೆಹೋವನನ್ನು ಸೇವಿಸುವುದರಲ್ಲಿ ಹೆಚ್ಚು ಕಾರ್ಯಮಗ್ನರಾಗಿದ್ದಷ್ಟು ಹೆಚ್ಚು ಬೇಗನೆ ಸಮಯವು ಗತಿಸುತ್ತದೆ.
ಪೇತ್ರನ ಸಮಕಾಲೀನನೂ ಯೇಸುವಿನ ಮಲತಮ್ಮನೂ ಆಗಿದ್ದ ಯೂದನು ನಮಗೆ ಬುದ್ಧಿವಾದ ಹೇಳುವುದು: “ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 20, 21) ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವಿಕೆಯ ಮೂಲಕ ಬೆಳೆಸಲ್ಪಡುವ ಒಂದು ಸಕಾರಾತ್ಮಕವಾದ ಮನೋಭಾವದ ಪ್ರಮುಖತೆಯನ್ನು ಗಮನಿಸಿರಿ. (1 ಥೆಸಲೊನೀಕ 5:17) ತದನಂತರ ಯೂದನು ಕೂಡಿಸುವುದು: “ಸಂದೇಹಪಡುವ ಕೆಲವರಿಗೆ ಕರುಣೆಯನ್ನು ತೋರಿಸಿರಿ; ಅವರನ್ನು ಬೆಂಕಿಯ ಬಾಯೊಳಗಿಂದ ಎಳಕೊಂಡು ರಕ್ಷಿಸಿರಿ. ಕೆಲವರನ್ನು ಭಯಯುಕ್ತರಾಗಿ ಕರುಣಿಸಿರಿ; ಹೊಲಸು ನಡತೆಯಿಂದ ಮೈಲಿಗೆಯಾದ ಅವರ ಅಂಗಿಯನ್ನೂ ಅಸಹ್ಯಿಸಿರಿ.” (ಯೂದ 22, 23) ಕಷ್ಟಕರವಾದ ಈ ಸಮಯಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಬಲಪಡಿಸುವುದು ಎಷ್ಟು ಅತ್ಯಾವಶ್ಯಕ! ಮತ್ತು ಈ ವಿಸ್ತರಿಸಲ್ಪಟ್ಟ “ರಕ್ಷಣೆಯ ದಿನ”ವನ್ನು, ಈಗ ನೈತಿಕವಾಗಿ ಭ್ರಷ್ಟಗೊಂಡಿರುವ ಇಂದಿನ ಲೋಕದಲ್ಲಿ ತುಂಬ ಪ್ರಚಲಿತವಾಗಿರುವ “ನಾಚಿಕೆಗೆಟ್ಟ ಕೃತ್ಯ”ಕ್ಕೆ ಒಂದು ವಿನಾಯಿತಿಯೋಪಾದಿ ಉಪಯೋಗಿಸುತ್ತಾ, ಶೋಧನೆಗೆ ವಶವಾಗದಿರಲು ಇದು ಎಷ್ಟು ಪ್ರಾಮುಖ್ಯವಾದದ್ದಾಗಿದೆ!—ಯೂದ 4; 2 ಕೊರಿಂಥ 6:1, 2.
ಪೇತ್ರ, ಪೌಲ, ಹಾಗೂ ಯೂದರ ಪ್ರೀತಿಪರ ಸಲಹೆಗೆ ಲಕ್ಷ್ಯ ನೀಡುವುದರ ಮೂಲಕ, ಮತ್ತು ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿರುವ ಹಾಗೂ ಕ್ರಿಯಾಶೀಲರಾಗಿರುವ ಮೂಲಕ, ಯೆಹೋವನ ಹಸ್ತಕ್ಷೇಪಕ್ಕಾಗಿ ನೀವು ತಾಳ್ಮೆಯಿಂದ ಕಾಯಸಾಧ್ಯವಿದೆ. ಆದರೆ ನೀವು ಕಾಯುವಿರೊ?
ನಿತ್ಯಜೀವದ ಕುರಿತಾದ ಸೃಷ್ಟಿಕರ್ತನ ವಾಗ್ದಾನದಲ್ಲಿನ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವ ಸಹಾಯಕ್ಕಾಗಿ, ನಿಮ್ಮ ಸ್ಥಳದಲ್ಲಿರುವ ಸಾಕ್ಷಿಗಳನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಸಮೀಪಿಸುತ್ತಿರುವ ಮಹಾ ಸಂಕಟದಲ್ಲಿ ಮುಕ್ತಾಯಗೊಳಿಸಲ್ಪಡಲಿರುವ, ಇನ್ನೆಂದಿಗೂ ಪುನರಾವರ್ತಿಸಲ್ಪಡದ ಈ ಭೌಗೋಲಿಕ ಕೆಲಸದಲ್ಲಿ ಪಾಲ್ಗೊಳ್ಳಲಿಕ್ಕಾಗಿ ಅರ್ಹರಾಗಲು ಏನು ಅಗತ್ಯವಿದೆ ಎಂಬುದನ್ನು ಕಲಿಯಿರಿ. (ಮಾರ್ಕ 13:10) ಆಗ, ಯೆಹೋವನು ವಾಗ್ದಾನಿಸುವ ನೀತಿಯ ನೂತನ ಲೋಕದಲ್ಲಿ ಜೀವಿಸುವ ಪ್ರತೀಕ್ಷೆಯು ನಿಮಗಿರುವುದು. (2 ಪೇತ್ರ 3:13) ಅವನ ಜ್ಞಾಪನಗಳಿಗೆ ಕಿವಿಗೊಡಿರಿ! ತಾಳ್ಮೆಯಿಂದ ಕಾಯಿರಿ! ಕಾರ್ಯಮಗ್ನರಾಗಿರಿ!
[ಪಾದಟಿಪ್ಪಣಿ]
a ದಯವಿಟ್ಟು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ, ಬೈಬಲು—ದೇವರ ವಾಕ್ಯವೊ ಅಥವಾ ಮನುಷ್ಯನದ್ದೊ? (ಇಂಗ್ಲಿಷ್) ಎಂಬ ಪುಸ್ತಕದ 116ನೆಯ ಪುಟವನ್ನು ನೋಡಿರಿ.
[ಪುಟ 7 ರಲ್ಲಿರುವ ಚಿತ್ರ]
ಪ್ರಮೋದವನದ ಕುರಿತಾದ ದೇವರ ವಾಗ್ದಾನಗಳ ಕುರಿತಾಗಿ ಈಗಲೇ ಕಲಿತುಕೊಳ್ಳಿರಿ
[ಪುಟ 5 ರಲ್ಲಿರುವ ಚಿತ್ರ ಕೃಪೆ]
ತೋಳ: Animals/Jim Harter/Dover Publications, Inc.; ಯುವ ಕುರುಬನು: Children: A Pictorial Archive from Nineteenth-Century Sources/Grafton/Dover Publications, Inc.